Wednesday 28 December 2016

ಲೇಖನ: ಬನ್ನಿ ಒಂದೇ ಬಳ್ಳಿಯ ಸುಮಗಳಾಗೋಣ..



)(@)(@)(@)(


ಲೇಖನ:  ಬನ್ನಿ ಒಂದೇ ಬಳ್ಳಿಯ ಸುಮಗಳಾಗೋಣ..

ನಿನ್ನೆ ಒಂದು ತಮಾಷೆ ನಡೆಯಿತು. ಮುಗ್ಧ ಮಾತು.. ನನ್ನ ಮಗು(೪ವರ್ಷ) ಏನೋ ಮಾತಿಗೆ "ಆ ಸಾಯ್ಬರ ಮನೇಲಿ...." ಅಂದ.
ನನಗೆ ಆಶ್ಚರ್ಯ. ನಮ್ಮ ವಠಾರದಲ್ಲಿ ಮುಸ್ಲಿಮ್ಸ್ ಮನೆ ಇಲ್ಲ. ಯಾರಾ ಅದು? ಕೇಳಿದೆ. ಸಾಯ್ಬರು ಅಲ್ವಾ, ಶೇಟು ಮನೆ ಮೇಲಿನ ಮಹಡಿಯವರು ಅಂದೆ.
"ಹಾನ್ ಅದೇ.. ಅವರ ಮನೇಲಿ ಇಲಿ ಜಾಸ್ತಿ ಆಗಿದೆಯಂತೆ ಅಂದ.. 😜
...
ನಂತರ ನಾನು ಕೇಳಿದೆ,
*ಸಾಯ್ಬ್ರು ಅಂದರೆ ಯಾರು?
** ಗೊತ್ತಿಲ್ಲ.
*ಮುಸ್ಲಿಮ್ಸ್ ಅಂದ್ರೆ ಯಾರು?
**ಗೊತ್ತಿಲ್ಲ.
*ಕಾಸೀಮ್ ಅಂದ್ರೆ ಯಾರು?
** ಅವನಾ? ನಮ್ಮ ಕ್ಲಾಸ್ ಹುಡುಗ. ನನ್ನ ಫ್ರೈಂಡ್ ಅವನು.(ಅವನು ಮುಸ್ಲಿಮ್ ಅನ್ಮೋದು ಇವನಿಗೆ ಗೊತ್ತಿಲ್ಲ) "ಅಮ್ಮ, ಅವರ ಅಪ್ಪಂಗೆ ಈಸ್ಟ್  ಉದ್ದ ಗಡ್ಡ ಇದೆ ಗೊತ್ತಾ...? ಅವರ ಅಮ್ಮ ದಿನ ಸ್ಕೂಲಿಂದ ಕರ್ಕೊಂಡ್ ಹೋಗೋಕೆ ಬರ್ತಾರಲ್ಲ, ಅವರು ಯಾವಾಗಲೂ ಕಪ್ಪು ಚೂಡಿನೇ ಹಾಕೋದು. ಅದು ನೀ ಹಾಕೋ ತರಹ ಅಲ್ಲ ಬೇರೇನೆ.. ಕೆಲವೊಮ್ಮೆ ಎರಡು ಕಣ್ಣು ಮಾತ್ರ ಕಾಣ್ಸುತ್ತೆ.. ಯಾಕಮ್ಮ ಅವರು ಹಾಗೆ ಕಪ್ಪು ಚೂಡಿ ಹಾಕೋದು.?"
*ಅದು ಚೂಡಿ ಅಲ್ವಾ, 'ಬುರ್ಕಾ' ಅಂತಾರೆ. ಅವರಲ್ಲಿ ಹಾಕಬೇಕು. ನಿನ್ನ ಇನ್ನೊಬ್ಬ ಫ್ರೈಂಡ್ ಪೀಯೂಷ್ ಇಲ್ಲವಾ ಅವರ ಅಮ್ಮ ಹೇಗೆ ಸೆರಗು ಮುಚ್ಚಿಕೊಂಡು ಬರ್ತಾರೆ ನೋಡು. ಅವರು ಶೇಟುಗಳು. ಅವರಲ್ಲಿ ಹಾಗೆ. ನಾವು ಈ ರೀತಿ.ನಮ್ಮ ನಮ್ಮ ಪದ್ದತಿ ನಾವು ಫಾಲೋ ಮಾಡ್ಬೇಕು.. ಅಂದೆ.
(ತಪ್ಪು ತಿಳಿಯಬೇಡಿ ಅದು ಮಗುವಿನ ಮುಗ್ಧ ಮಾತುಗಳು)
~~~
ನಿಜವಾಗಲೂ ಪ್ರತಿಯೊಂದು ಮುಗ್ಧ ಮಗುವಿನಲ್ಲಿ ಈ ಜಾತಿ,ಮತ,ಧರ್ಮದ ಯಾವ ಅರ್ಥವೂ ತಿಳಿದಿರುವುದಿಲ್ಲ. ಬೇದಭಾವವೂ ಇರುವುದಿಲ್ಲ. ಹೆತ್ತವರೋ ಇಲ್ಲ ಈ ಹಾಳು ಸಮಾಜವೇ " ಅವರು ಹಾಗೆ,ಇವರು ಹೀಗೆ, ಕೆಟ್ಟವರು-ಒಳ್ಳೆಯವರು, ಜಾಣ-ದಡ್ಡ , ಸ್ಥಿತಿವಂತ-ಬಡವ ಎಂದು ತಲೆಗೆ ತುಂಬಿಸುತ್ತಾ ಹೋಗುತ್ತದೆ. ನೋಡುವ ದೃಷ್ಟಿಕೋನವೇ ಬದಲುಮಾಡುತ್ತದೆ. ತರಗತಿಯಲ್ಲಿ ಕಲಿಯುವಾಗ ಮಕ್ಕಳಿಗೆ ನಾವೆಲ್ಲರೂ ಒಂದೇ ಎಂಬ ಭಾವವಿರುತ್ತದೆ. ಈ ಮಹಾನಗರಿಯಲ್ಲಿ ಸೊಪ್ಪು-ತರಕಾರಿ ಮಾರುವವನ ಮಕ್ಕಳು, ಅಪಾರ್ಟ್ಮೆಂಟ್ ನಲ್ಲಿರುವ ಮಕ್ಕಳು, ಮಾರ್ವಾಡಿಗಳು, ತಮಿಳರು,ತೆಲುಗು ಜನರು ಹಿಂದುಗಳು, ಮುಸ್ಲೀಮರು, ಕ್ರಿಸ್ತಿಯಾನರ ಮಕ್ಕಳು ಹೀಗೆ ವಿವಿಧ ಕಡೆಯಿಂದ ಮಕ್ಕಳು ಒಟ್ಟಾಗಿ ಕುಳಿತು ತರಗತಿ ಕೇಳುತ್ತಾರೆ. ಅದೇ ಹೊರಗಿನ ಪ್ರಪಂಚಕ್ಕೆ ಬಂದಾಗ ಶತ್ರುಗಳಂತೆ ಕಾಣಿಸತೊಡಗುತ್ತದೆ. ಯಾರ್ಯಾರೋ ಮಾಡಿದ ತಪ್ಪಿಗೋ ಇಲ್ಲ ಹಿಂದಿನವರು ಮಾಡಿಕೊಂಡು ಬಂದ ಕಟ್ಟುಪಾಡನ್ನು ಈಗಿನವರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಪೂರ್ವಾಗ್ರಹ ಪೀಡಿತರಂತೆ ವರ್ತಿಸುತ್ತಿದ್ದಾರೆ. ಅದೇ ಮಿತ್ರರು ಶತ್ರುಗಳಾಗಿ ಬದಲಾಗುತ್ತಾರೆ. "ಎಲ್ಲಾ ಧರ್ಮಗಳಿಗಿಂತ ಮನುಷ್ಯ ಧರ್ಮವೇ ಶ್ರೇಷ್ಠ" ಎಂದು ಶ್ರೀಕೃಷ್ಣನೇ ಹೇಳಿದ್ದಾನೆ. ಅಲ್ಲದೇ ಯಾವ ಧರ್ಮವೂ ಹಿಂಸಾಮಾರ್ಗವನ್ನು ಬೆಂಬಲಿಸುವುದಿಲ್ಲ. ಶಾಂತಿ-ಪ್ರೀತಿ ಸ್ನೇಹ- ಸೌಹಾರ್ದತೆಗೆ ಜೀವನೀಡಿ ಎನ್ನುತ್ತಾರೆ. ಮನುಷ್ಯರನ್ನು ಮನುಷ್ಯರಂತೆ ನೋಡಿ. ಅವರು ಹಾಕುವ ಬಟ್ಟೆಯಿಂದ ಅಳೆಯಬೇಡಿ. ಎಲ್ಲರನ್ನೂ ಪ್ರೀತಿಸಿ. ಗೌರವಿಸಿ ಎಂದೇ ಹೇಳುತ್ತಾರೆ. ಇನ್ನಾದರೂ ಬದಲಾಗಲಿ ಸಮಾಜ. ಇನ್ನಾದರೂ ಬದಲಾಗಲಿ ಜನರ ಮನಸ್ಥಿತಿ.

- ಸಿಂಧು ಭಾರ್ಗವ್ 🍁

No comments:

Post a Comment