Thursday 22 December 2016

ಕಥೆ: ನಗುವೆಂಬ ಮುಖವಾಡ


:) @()@ :(


ಕಥೆ: ನಗುವೆಂಬ ಮುಖವಾಡ

ರಾಜು ದಿನವೂ ಊರ ಜನರ ಜೊತೆ ನಗುಮುಖದಿಂದ ಮಾತನಾಡಿಸುತ್ತಾ ತಮಾಷೆ ಮಾಡುತ್ತಾ ಎಲ್ಲರನ್ನೂ ಹೊಟ್ಟೆ ಹುಣ್ಣಾಗಿಸುವಷ್ಟು ಮಾತನಾಡಿಸುತ್ತಿದ್ದ.. ಆ ಊರಿನಲ್ಲಿ ಅವನದೇ ವಯಸ್ಸಿನ ಸ್ನೇಹಿತರು ಇದ್ದರು. ಎಲ್ಲರೂ ಒಂದು ಮರದ ಕೆಳಗೋ, ತೋಟದಲ್ಲೋ, ಬಸ್ ಸ್ಟಾಂಡಿನಲ್ಲೋ ಕುಳಿತು ಗಂಟೆಗಟ್ಟಲೆ ಹರಟೆಹೊಡೆಯುತ್ತಿದ್ದರು. ಅವನು ಒಂದು ದಿನ ಇಲ್ಲವೆಂದರೂ ಬೇಸರವಾಗುತ್ತಿತ್ತು. ಎಲ್ಲರಿಗೂ ಅಚ್ಚುಮೆಚ್ಚಿನ ಹುಡುಗನಾಗಿದ್ದನು. ಸ್ನೇಹಿತನೆಂದರೆ ಹೀಗಿರಬೇಕು ಎಂದು ಎಲ್ಲರೂ ಎನಿಸುತ್ತಿದ್ದರು. ಅವನು ಸಂಜೆಯ ತನಕ ಅಲ್ಲಿಇಲ್ಲಿ ಮಾತನಾಡಿ ಮನೆಗೆ ವಾಪಾಸ್ಸಾಗುತ್ತಿದ್ದ.
ಮನೆಯಲ್ಲಿ ಎಲ್ಲರೂ ಕ್ಷೇಮವೇ? ತಂದೆ ತಾಯಿ ಹೇಗಿದ್ದಾರೆ? ಕೇಳಿದಾಗಲೆಲ್ಲಾ "ಚೆನ್ನಾಗಿದ್ದಾರೆ ಅಂಕಲ್, ಮನೆಯಲ್ಲಿ ಇದ್ದಾರೆ. ಎನ್ನುತ್ತಿದ್ದ. ಇಲ್ಲಾ ಊರಿಗೆ ಹೋಗಿದ್ದಾರೆ ಎನ್ನುತ್ತಿದ್ದ. ಆದರೆ ಒಮ್ಮೆಯೂ ಅವರನ್ನು ಊರಿನವರು ನೋಡಿದ್ದೇ ಇಲ್ಲ. ಅವರು ಹೊರಬರುವುದೇ ಇಲ್ಲವಾ ಎಂದು ಎಲ್ಲರಿಗೂ ಅನುಮಾನ ಬರುತ್ತಿತ್ತು. ಒಮ್ಮೆ ಯಾವುದೋ ಕಾರಣಕ್ಕೆ ರಾಜು ಪರ ಊರಿಗೆ ಹೋಗಬೇಕಾಯಿತು. ಆಗ ಎಲ್ಲರಿಗೂ ಬೇಸರವಾಗುತ್ತಿತ್ತು. ಆದರೂ ಬೀಳ್ಕೊಟ್ಟರು. ನಂತರ ಅವನಿಲ್ಲದ್ದು ನೋಡಿ ಕುತೂಹಲ ತಡೆಯಲಾಗದೇ ಅವನ ಸ್ನೇಹಿತರೇ ತಪ್ಪೆನಿಸಿದರೂ, ರಾಜುವಿನ ಮನೆ ಬೀಗ ಒಡೆದು ಒಳಹೋದರು. ಎಲ್ಲಾ ಕಡೆ ಹುಡುಕಿದರೂ ಹೆತ್ತವರ ಸುಳಿವಿರಲಿಲ್ಲ. ಕೋಣೆಗೆ ಹೋಗಿ ನೋಡಿದರೆ ಅಲ್ಲಿ ತಂದೆ-ತಾಯಿ ಫೋಟೋವಿದ್ದಿತ್ತು. ಜೊತೆಗೊಂದು ಡೈರಿ ಕೂಡ. ಇನ್ನೊಂದು ಕೋಣೆಗೆ ಹೋಗಿ ನೋಡಿದರೆ ಅಲ್ಲೂ ಅಕ್ಕನ ಫೋಟೋ ಮತ್ತು ಒಂದು ಡೈರಿ ಇದ್ದಿತ್ತು. ಪುಟ ತೆಗೆದು ಓದಿದರೆ ಅವನ ದಿನಚರಿಯನ್ನು ಬರೆದಿದ್ದ.. ತಂದೆತಾಯಿ ಜೊತೆ ಮಾತನಾಡುತ್ತಿದ್ದ ಕ್ಯಾಸೆಟ್ ಅಲ್ಲೇ ಸನಿಹವಿತ್ತು. ಇದನ್ನೆಲ್ಲಾ ನೋಡಿ ಸ್ನೇಹಿತರಿಗೆಲ್ಲಾ ತುಂಬಾ ಆಘಾತವಾಯಿತು‌. ಏನಿದೆಲ್ಲಾ? ಅವನ್ಯಾಕೆ ಮುಚ್ಚಿಟ್ಟ ಈ ವಿಷಯವನ್ನು ? ನಮ್ಮನ್ನೆಲ್ಲಾ ನಗಿಸುತ್ತಿದ್ದ ಆ ಪುಟ್ಟ ಮನಸ್ಸಿನೊಳಗೆ ಈ ಪರಿಯ ನೋವಿದೆಯೇ.. ಒಂದೂ ಅರ್ಥವಾಗಲಿಲ್ಲ‌ ಊರಿಗೆ ಊರೇ ಮಾತನಾಡತೊಡಗಿತು.
*
ನಾಲ್ಕು ದಿನ ಬಿಟ್ಟು ರಾಜು ವಾಪಾಸ್ಸಾದ. ಬಸ್ ಸ್ಟ್ಯಾಂಡ್ ಹತ್ತಿರವೇ ಎಲ್ಲಾ ಸ್ನೇಹಿತರು ನಿಂತಿದ್ದರು.‌ ಅವನ ಬರುವಿಕೆಗೇ ಕಾದಿದ್ದರು. ಅವನ ನೋಡುತಲೇ ತಬ್ಬಿಕೊಂಡು ಅಳತೊಡಗಿದರು. ಆಗ ಅವನಿಗೆ ಅ‌ನುಮಾನ ಬಂದಿತು. ವಿಷಯ ತಿಳಿದುಹೋಯಿತಾ ಎಂದು ಪ್ರಶ್ನಿಸಿಕೊಂಡ. ಆಗ ಒಬ್ಬ ಸ್ನೇಹಿತ ಬಿಕ್ಕಿಬಿಕ್ಕಿ ಅಳತೊಡಗಿದ. ಇಬ್ಬರಲ್ಲೂ ಕೊಂಚ ಮೌನ. "ನಾ ನಿನ್ನ ಜೊತೆ ಏನೂ ಕೇಳುವುದಿಲ್ಲ, ಹೇಗೆ ನಡಿಯಿತು ಇದೆಲ್ಲಾ ಯಾವಾಗ ಆದದ್ದು ? ನಿನಗೆ ಇಷ್ಟವಿದ್ದರೆ ತಿಳಿಸು.. ಎಂದುಬಿಟ್ಟ. ಕೊನೆಗೆ ಎಲ್ಲರನ್ನೂ ಮನೆಗೆ ಕರೆದುಕೊಂಡು ಹೋಗಿ ಅವನ ಕತೆ ಹೇಳಿದ.
**
ಅವನಿಗೆ ಒಬ್ಬ ಅಕ್ಕ ಇದ್ದಿದ್ದಳು. ತಂದೆತಾಯಿಯ ಪ್ರೀತಿಯ ಕುಡಿಗಳು. ಯಾವುದಕ್ಕೂ ಕಡಿಮೆ ಇರಲಿಲ್ಲ. ಸ್ಥಿತಿವಂತರೇ.. ಒಮ್ಮೆ ಕಾರಿನಲ್ಲಿ ದೇವಸ್ಥಾನಕ್ಕೆ ಹೋಗಿ ಬರುವಾಗ ರಾತ್ರಿಯಾಗಿತ್ತು. ಗುಡುಗು ಮಿಂಚುಗಳಿಂದ ಕೂಡಿದ ಜೋರಾದ ಮಳೆ ಬರುತಲಿತ್ತು. ಎದುರಿನಿಂದ ವೇಗವಾಗಿ ಬಂದ ಲಾರಿ ಡಿಕ್ಕಿಹೊಡೆದ ಪರಿಣಾಮ ಎಲ್ಲರಿಗೂ ಪೆಟ್ಟಾಯಿತು. ಪ್ರಜ್ಞಾಹೀನರಾಗಿ ಎಲ್ಲರೂ ಬಿದ್ದಿದ್ದರು. ಕೊನೆಗೆ ಎಚ್ಚರವಾಗಿ ನೋಡುವಾಗ ಆಸ್ಪತ್ರೆಯ ಬೆಡ್ಡಿನಲ್ಲಿದ್ದ. ಅಪ್ಪ ಅಮ್ಮ ಎಲ್ಲಿ ಕೇಳಿದರೆ ಅಕ್ಕ ಎದುರಿಗೆ ಬಂದು ಸಮಾಧಾನ ಮಾಡಿದಳು. ಆ ದುರ್ಘಟನೆಯಲ್ಲಿ ಹೆತ್ತವರನ್ನು ಕಳೆದುಕೊಂಡು ಅನಾಥರಾದ ವಿಷಯ ಅರಿವಾಯಿತು.. ನಂತರ ಇಬ್ಬರು ಮಕ್ಕಳೇ ಜೀವನ ನಡೆಸಲು ಶುರುಮಾಡಿದರು. ದೊಡ್ಡಪ್ಪ ಚಿಕ್ಕಪ್ಪನ ಸಹಾಯ ಕೂಡ ಇತ್ತು.‌ ಆದರೆ ಆ ಮನೆ ಬಿಟ್ಟು ಮಾತ್ರ ಅವರು ಬೇರೆಮನೆಗೆ ಹೋಗಲು ಇಚ್ಛಿಸಲಿಲ್ಲ.
*
ಅಕ್ಕನು ಡಿಗ್ರೀ ಓದುತ್ತಿರಬೇಕಾದರೆ ಅವಳಿಗೆ ಒಂದು ಹುಡುಗನ ಪರಿಚಯವಾಯಿತು. ಮೊದಲಿಗೆ ಇದ್ದ ಸ್ನೇಹ ಪ್ರೀತಿಗೆ ತಿರುಗಿತ್ತು. ಅವಳು ಕಷ್ಟವನ್ನೆಲ್ಲಾ ಹಂಚಿಕೊಳ್ಳುತ್ತಿದ್ದಳು. ಅವನು ಸಾಂತ್ವಾನ ಹೇಳುತ್ತಿದ್ದ. ಹಾಗೆ ಖುಷಿಯಾಗಿದ್ದ ಅವಳು ಅವನನ್ನೆ ಮದುವೆಯಾಗಬೇಕೆಂದು ತೀರ್ಮಾನಿಸಿದಳು. ಹಾಗೆ ಅವನಿಗೆ ಸರ್ವಸ್ವವನ್ನೂ ಒಪ್ಪಿಸಿದಳು. ಮೊದಲೆಲ್ಲಾ ಮದುವೆಯಾಗುತ್ತೇನೆ ಎಂದವನು ಈಕೆ ಗರ್ಭಿಣಿ ಎಂದು ತಿಳಿದ ತಕ್ಷಣ ಮಾತಿನ ವರಸೆ ಬದಲಾಯಿಸಿದ. ಅವಳಿಗೆ ಏನು ಮಾಡಬೇಕೆಂದು ತಿಳಿಯದೇ ನೇಣಿಗೆ ಶರಣಾದಳು. ಅಕ್ಕನನ್ನೂ ಕಳೆದುಕೊಂಡ ರಾಜುವಿಗೆ ಆ ಮನೆಯಲ್ಲಿ ಇರಲು ಸಾಧ್ಯವಾಗಲಿಲ್ಲ. ಕತ್ತಲೆ ಕಾಡಲು ಶುರುವಾಯಿತು. ಒಂದಷ್ಟು ಹಣ ಹಿಡಿದುಕೊಂಡು ಓದು ಅರ್ಧಕ್ಕೆ ನಿಲ್ಲಿಸಿ ಆ ಊರನ್ನೇ ಬಿಟ್ಟು ಬಂದಿದ್ದ. ಸಂಬಂಧಿಕರ ಮಾತೂ ಕೇಳಲಿಲ್ಲ‌.
*
ಹ್ಮ.... "ಇಲ್ಲಿಗೆ ಬಂದ ಮೇಲೆ ನಿಮ್ಮ ಸ್ನೇಹ, ಪ್ರೀತಿ ನೋಡಿ ನಾನು ಸೋತುಹೋದೆ. ಅದಕ್ಕೇನೆ ಈ ನಗುವಿನ ಮುಖವಾಡ ಧರಿಸಿದೆ. ನಿಮ್ಮನ್ನೆಲ್ಲಾ ಮಾತನಾಡಿಸಿ ನಗಿಸಿ ಮನೆಗೆ ವಾಪಾಸ್ಸಾಗುವಾಗ ಮತ್ತದೇ ನೋವು ಬೇಸರ ಆವರಿಸುತ್ತದೆ. ಮುಖವಾಡ ಕಳಚಿ ಗೋಡೆಯ ಮೊಳೆಗೆ ನೇತುಹಾಕುತ್ತೇನೆ. ನಾಳೆಗೆ ಬೇಕಲ್ಲ ಎಂದು.." ಎಂದನು... ಇದನ್ನೆಲ್ಲಾ ಕೇಳಿಸಿಕೊಂಡ ಅವನ ಸ್ನೇಹಿತರು ಸಮಾಧಾನ ಮಾಡಿದರು. ಒಂದು ಕೆಲಸ ಕೊಡಿಸಿದರು. ಅವನ ಜೀವನಕ್ಕೆ ದಾರಿ ಮಾಡಿದರು. ತಮ್ಮ ಮನೆ ಮಗನಂತೆ ಎಲ್ಲರ ಪ್ರೀತಿ ಅವನಿಗೆ ದೊರಕಿತು.

ನಮ್ಮಲ್ಲಿನ ನೋವು ದುಃಖವನ್ನ ಎದುರಿಗೆ ತೋರಿಸುವ ಬದಲು ನಾಲ್ಕು ಜನರ ಮುಖದಲ್ಲಿ ನಗುವ ತರಿಸುವವರಾಗೋಣ.

-ಸಿಂಧುಭಾರ್ಗವ್.

No comments:

Post a Comment