Wednesday 28 December 2016

ಲೇಖನ: ಬನ್ನಿ ಒಂದೇ ಬಳ್ಳಿಯ ಸುಮಗಳಾಗೋಣ..



)(@)(@)(@)(


ಲೇಖನ:  ಬನ್ನಿ ಒಂದೇ ಬಳ್ಳಿಯ ಸುಮಗಳಾಗೋಣ..

ನಿನ್ನೆ ಒಂದು ತಮಾಷೆ ನಡೆಯಿತು. ಮುಗ್ಧ ಮಾತು.. ನನ್ನ ಮಗು(೪ವರ್ಷ) ಏನೋ ಮಾತಿಗೆ "ಆ ಸಾಯ್ಬರ ಮನೇಲಿ...." ಅಂದ.
ನನಗೆ ಆಶ್ಚರ್ಯ. ನಮ್ಮ ವಠಾರದಲ್ಲಿ ಮುಸ್ಲಿಮ್ಸ್ ಮನೆ ಇಲ್ಲ. ಯಾರಾ ಅದು? ಕೇಳಿದೆ. ಸಾಯ್ಬರು ಅಲ್ವಾ, ಶೇಟು ಮನೆ ಮೇಲಿನ ಮಹಡಿಯವರು ಅಂದೆ.
"ಹಾನ್ ಅದೇ.. ಅವರ ಮನೇಲಿ ಇಲಿ ಜಾಸ್ತಿ ಆಗಿದೆಯಂತೆ ಅಂದ.. 😜
...
ನಂತರ ನಾನು ಕೇಳಿದೆ,
*ಸಾಯ್ಬ್ರು ಅಂದರೆ ಯಾರು?
** ಗೊತ್ತಿಲ್ಲ.
*ಮುಸ್ಲಿಮ್ಸ್ ಅಂದ್ರೆ ಯಾರು?
**ಗೊತ್ತಿಲ್ಲ.
*ಕಾಸೀಮ್ ಅಂದ್ರೆ ಯಾರು?
** ಅವನಾ? ನಮ್ಮ ಕ್ಲಾಸ್ ಹುಡುಗ. ನನ್ನ ಫ್ರೈಂಡ್ ಅವನು.(ಅವನು ಮುಸ್ಲಿಮ್ ಅನ್ಮೋದು ಇವನಿಗೆ ಗೊತ್ತಿಲ್ಲ) "ಅಮ್ಮ, ಅವರ ಅಪ್ಪಂಗೆ ಈಸ್ಟ್  ಉದ್ದ ಗಡ್ಡ ಇದೆ ಗೊತ್ತಾ...? ಅವರ ಅಮ್ಮ ದಿನ ಸ್ಕೂಲಿಂದ ಕರ್ಕೊಂಡ್ ಹೋಗೋಕೆ ಬರ್ತಾರಲ್ಲ, ಅವರು ಯಾವಾಗಲೂ ಕಪ್ಪು ಚೂಡಿನೇ ಹಾಕೋದು. ಅದು ನೀ ಹಾಕೋ ತರಹ ಅಲ್ಲ ಬೇರೇನೆ.. ಕೆಲವೊಮ್ಮೆ ಎರಡು ಕಣ್ಣು ಮಾತ್ರ ಕಾಣ್ಸುತ್ತೆ.. ಯಾಕಮ್ಮ ಅವರು ಹಾಗೆ ಕಪ್ಪು ಚೂಡಿ ಹಾಕೋದು.?"
*ಅದು ಚೂಡಿ ಅಲ್ವಾ, 'ಬುರ್ಕಾ' ಅಂತಾರೆ. ಅವರಲ್ಲಿ ಹಾಕಬೇಕು. ನಿನ್ನ ಇನ್ನೊಬ್ಬ ಫ್ರೈಂಡ್ ಪೀಯೂಷ್ ಇಲ್ಲವಾ ಅವರ ಅಮ್ಮ ಹೇಗೆ ಸೆರಗು ಮುಚ್ಚಿಕೊಂಡು ಬರ್ತಾರೆ ನೋಡು. ಅವರು ಶೇಟುಗಳು. ಅವರಲ್ಲಿ ಹಾಗೆ. ನಾವು ಈ ರೀತಿ.ನಮ್ಮ ನಮ್ಮ ಪದ್ದತಿ ನಾವು ಫಾಲೋ ಮಾಡ್ಬೇಕು.. ಅಂದೆ.
(ತಪ್ಪು ತಿಳಿಯಬೇಡಿ ಅದು ಮಗುವಿನ ಮುಗ್ಧ ಮಾತುಗಳು)
~~~
ನಿಜವಾಗಲೂ ಪ್ರತಿಯೊಂದು ಮುಗ್ಧ ಮಗುವಿನಲ್ಲಿ ಈ ಜಾತಿ,ಮತ,ಧರ್ಮದ ಯಾವ ಅರ್ಥವೂ ತಿಳಿದಿರುವುದಿಲ್ಲ. ಬೇದಭಾವವೂ ಇರುವುದಿಲ್ಲ. ಹೆತ್ತವರೋ ಇಲ್ಲ ಈ ಹಾಳು ಸಮಾಜವೇ " ಅವರು ಹಾಗೆ,ಇವರು ಹೀಗೆ, ಕೆಟ್ಟವರು-ಒಳ್ಳೆಯವರು, ಜಾಣ-ದಡ್ಡ , ಸ್ಥಿತಿವಂತ-ಬಡವ ಎಂದು ತಲೆಗೆ ತುಂಬಿಸುತ್ತಾ ಹೋಗುತ್ತದೆ. ನೋಡುವ ದೃಷ್ಟಿಕೋನವೇ ಬದಲುಮಾಡುತ್ತದೆ. ತರಗತಿಯಲ್ಲಿ ಕಲಿಯುವಾಗ ಮಕ್ಕಳಿಗೆ ನಾವೆಲ್ಲರೂ ಒಂದೇ ಎಂಬ ಭಾವವಿರುತ್ತದೆ. ಈ ಮಹಾನಗರಿಯಲ್ಲಿ ಸೊಪ್ಪು-ತರಕಾರಿ ಮಾರುವವನ ಮಕ್ಕಳು, ಅಪಾರ್ಟ್ಮೆಂಟ್ ನಲ್ಲಿರುವ ಮಕ್ಕಳು, ಮಾರ್ವಾಡಿಗಳು, ತಮಿಳರು,ತೆಲುಗು ಜನರು ಹಿಂದುಗಳು, ಮುಸ್ಲೀಮರು, ಕ್ರಿಸ್ತಿಯಾನರ ಮಕ್ಕಳು ಹೀಗೆ ವಿವಿಧ ಕಡೆಯಿಂದ ಮಕ್ಕಳು ಒಟ್ಟಾಗಿ ಕುಳಿತು ತರಗತಿ ಕೇಳುತ್ತಾರೆ. ಅದೇ ಹೊರಗಿನ ಪ್ರಪಂಚಕ್ಕೆ ಬಂದಾಗ ಶತ್ರುಗಳಂತೆ ಕಾಣಿಸತೊಡಗುತ್ತದೆ. ಯಾರ್ಯಾರೋ ಮಾಡಿದ ತಪ್ಪಿಗೋ ಇಲ್ಲ ಹಿಂದಿನವರು ಮಾಡಿಕೊಂಡು ಬಂದ ಕಟ್ಟುಪಾಡನ್ನು ಈಗಿನವರು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಪೂರ್ವಾಗ್ರಹ ಪೀಡಿತರಂತೆ ವರ್ತಿಸುತ್ತಿದ್ದಾರೆ. ಅದೇ ಮಿತ್ರರು ಶತ್ರುಗಳಾಗಿ ಬದಲಾಗುತ್ತಾರೆ. "ಎಲ್ಲಾ ಧರ್ಮಗಳಿಗಿಂತ ಮನುಷ್ಯ ಧರ್ಮವೇ ಶ್ರೇಷ್ಠ" ಎಂದು ಶ್ರೀಕೃಷ್ಣನೇ ಹೇಳಿದ್ದಾನೆ. ಅಲ್ಲದೇ ಯಾವ ಧರ್ಮವೂ ಹಿಂಸಾಮಾರ್ಗವನ್ನು ಬೆಂಬಲಿಸುವುದಿಲ್ಲ. ಶಾಂತಿ-ಪ್ರೀತಿ ಸ್ನೇಹ- ಸೌಹಾರ್ದತೆಗೆ ಜೀವನೀಡಿ ಎನ್ನುತ್ತಾರೆ. ಮನುಷ್ಯರನ್ನು ಮನುಷ್ಯರಂತೆ ನೋಡಿ. ಅವರು ಹಾಕುವ ಬಟ್ಟೆಯಿಂದ ಅಳೆಯಬೇಡಿ. ಎಲ್ಲರನ್ನೂ ಪ್ರೀತಿಸಿ. ಗೌರವಿಸಿ ಎಂದೇ ಹೇಳುತ್ತಾರೆ. ಇನ್ನಾದರೂ ಬದಲಾಗಲಿ ಸಮಾಜ. ಇನ್ನಾದರೂ ಬದಲಾಗಲಿ ಜನರ ಮನಸ್ಥಿತಿ.

- ಸಿಂಧು ಭಾರ್ಗವ್ 🍁

Monday 26 December 2016

Dangal 2016 Hindi Movie

...
...

...

...



ಎಲ್ಲ ಮಕ್ಕಳಿಗೂ ಸ್ಪೂರ್ತಿ ಈ ಗೀತಾ-ಬಬೀತಾ ಜೋಡಿ...
ಹಠ, ಛಲ, ಏಕಾಗ್ರತೆ ಇದ್ದರೆ ಮಾತ್ರ ನಾವು ಸಾಧನೆ ಮಾಡಲು ಸಾಧ್ಯ. ನಾಳೆ ಮಾಡಿದರಾಯಿತು. ಇಂದು ಒಂದು ದಿನ ಫ಼್ರೀ ಆಗಿ ಇರುವಾ, ಎಂದು ಎನಿಸಿದರೆ ಆ ಏಕಾಗ್ರತೆ ಕಳೆದುಕೊಳ್ಳುತ್ತೇವೆ. ಸಾಧನೆ ಎನ್ನುವುದೇ ತಪಸ್ಸು..ಕಠಿಣ ಪರಿಶ್ರಮ ಅತ್ಯಗತ್ಯ. ಹೆಣ್ಣು ಮಕ್ಕಳಾದರೇನು? ಗಂಡು‌ಮಕ್ಕಳಾದರೇನು..?
ಹಾಗೇ ಇಂತಹುದೇ ಹಾದಿಯಲ್ಲಿ ಹೋಗು ಎಂದು ಹೇಳಲು ಒಬ್ಬ ಮಾರ್ಗದರ್ಶಕ ಬೇಕು. ತಿದ್ದಲು ಮೆಂಡರ್ ಬೇಕು. ಹಾಗಿದ್ದರೆ ಮಾತ್ರ ಸಾಧ್ಯ. ಹೆತ್ತವರು ತಾವು ಕಂಡ ಕನಸನ್ನು‌ ಮಕ್ಕಳಿಂದ ಸಾಕಾರಗೊಳಿಸಿಕೊಳ್ಳುತ್ತಾರೆ. ಹಾಗೆಯೆ ಕೆಲವೊಮ್ಮೆ ಒಬ್ಬ ಹುಡುಗ/ಗಿ ಯಲ್ಲಿನ ಪ್ರತಿಭೆ ಗುರುತಿಸಿ‌ ನೀರೆರೆದು ಪ್ರೋತ್ಸಾಹಿಸುತ್ತಾರೆ.
ಗೀತಾ-ಬಬೀತಾ ತಂದೆಯ ಕನಸನ್ನು ನನಸು ಮಾಡಿದವರು. ( ಗೀತಾ ಪೋಗತ್ - ೨೦೧೦ರ ಕಾಮನ್ ವೆಲ್ತ್ ಕ್ರೀಡಾಕೂಟದ ರೆಷ್ಟ್ಲಿಂಗ್ಸ್ ನಲ್ಲಿ ಚಿನ್ನ , ಹಾಗೂ ಬಬೀತಾ ಕುಮಾರಿ ಬೆಳ್ಳಿ ಗೆದ್ದು ದಾಖಲೆ ನಿರ್ಮಿಸಿದ ಹೆಣ್ಣುಮಕ್ಕಳು. ) ಹಾಗೆ ನಮ್ಮ ದೇಶದ ಹೆಸರು ಬೆಳಗಿಸಬೇಕು, ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ರಾಷ್ಟ್ರ ಗೀತೆಯನ್ನು ಮೊಳಗುವಂತೆ ಮಾಡಿದವರು. ಅದಕ್ಕೆ ಚಿನ್ನದ ಪದಕ‌ ಪಡೆದರೇನೆ ಸಾಧ್ಯವಾಗುವುದು. ನಿಜ. ಇಂತಹ ಸಾಧಕರ ಜೀವನಾಧಾರಿದ ಸಿನೇಮಾಗಳು ಹೆಚ್ಚೆಚ್ಚು ಬಂದರೇನೆ ನಮಗೂ ಅವರ ಬಗ್ಗೆ ತಿಳಿದುಕೊಳ್ಳಲು ಸಾಧ್ಯ. ಗೆದ್ದಾಗ ಎರಡು ದಿನ ಹೊಗಳುತ್ತೇವೆ, ಸೋತರೆ ಒಬ್ಬಬ್ಬೊಬ್ಬರು ಒಂದೊಂದು ರೀತಿ‌ ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ. ಆದರೆ ಅದರ ಹಿಂದಿರುವ ಕಠಿಣ ಪರಿಶ್ರಮ, ಅಲ್ಲಿ ತರಬೇತುದಾರರು ನಡೆದುಕೊಳ್ಳುವ ರೀತಿ, ಅವರ ಮನಸ್ಥಿತಿ  ಅರಿವಾಗಬೇಕಾದರೆ ಇಂತಹ ಸಿನೇಮಾಗಳು ಬರಲೇ ಬೇಕು.. ನಾಕಂಡ ಈ ವರುಷದ ಕೊನೆಯ ಸಿನೇಮಾ " #ದಂಗಲ್ (ಹಿಂದಿ-೨೦೧೬) ,ನಿತೇಶ್ ತಿವಾರಿ‌
ನಿರ್ದೇಶನದಲ್ಲಿ ಅದ್ಭುತ ಯಶಸ್ಸನ್ನು ಕಂಡಿದೆ.. ಅಮೀರ್ಖಾನ್, ಸಾಕ್ಷಿ ತನ್ವರ್, ಫಾತಿಮಾ ಸನಾ, ಸಾನ್ಯ ಮಲ್ಹೋತ್ರ ಅವರ ನಟನೆ ಹಾಗೂ ಅದಕ್ಕೆಂದೇ ಪಟ್ಟ ಪರಿಶ್ರಮ ಎದ್ದು ಕಾಣಿಸುತ್ತಿತ್ತು...

~
ಇದು ಎಲ್ಲರಿಗೂ ಸ್ಪೂರ್ತಿಯಾದಂತಹ ಸಿನೇಮಾ. ಮಕ್ಕಳಿಗೆ ತೋರಿಸಲೇ ಬೇಕಾದಂತಹ ಸಿನೇಮಾ ಕೂಡ. ಇನ್ನಷ್ಟು ಹೆಸರು,ಕೀರ್ತಿ, ಪದಕಗಳು ಅವರ ಕೈ ಸೇರಲಿ.. ನಮ್ಮ ದೇಶದ ಬಾವುಟ ಅಂತರಾಷ್ಟ್ರೀಯ ಮಟ್ಟದಲ್ಲಿ ಹಾರಾಡಲ.ಿ


- ಸಿಂಧುಭಾರ್ಗವ್. 🍁

Thursday 22 December 2016

ಕವನ- ಕಮಲದ ಹೂವು


@()@

ನಮ್ಮ_ಕಮಲಿ

ಹಿತ್ತಲಲಿ ಅರಳಿದ ಮಲ್ಲಿಗೆಗೆ
ಮಾರು ಹೋಗುವರು..
ಕೆಂದಾವರೆ ಅರಳು ನಿಂತರೂ
ಗಮನ ಕೊಡರು..
~
ರವಿಯ ಕಿರಣಗಳಿಗೆ
ಮೈಯೊಡ್ಡಿ ನಿಲ್ಲುವಳು.
ದುಂಬಿ ಝೇಂಕಾರಕೆ
ಮನ ಸೋಲುವಳು.
~
ಕೆಸರಿನಲಿ ಅರಳುವಳು,
ಲಕುಮಿಗೆ ಪ್ರಿಯಳು..
ಗೌರವದ ಸ್ಥಾನದಲಿ
ಎಲ್ಲರಿಂದ ಮೊದಲಿಗಳು..
~
ಕವಿಮನಕೆ ಸಖಿ ಇವಳು,
ಜೀವನಕೆ ಸ್ಪೂರ್ತಿ ನೀಡುವಳು‌..
ಇವಳೇ ಅವಳು #ನಮ್ಮ_ಕಮಲಿ...

- ಸಿಂಧುಭಾರ್ಗವ್ 🍁

ಕಥೆ: ನಗುವೆಂಬ ಮುಖವಾಡ


:) @()@ :(


ಕಥೆ: ನಗುವೆಂಬ ಮುಖವಾಡ

ರಾಜು ದಿನವೂ ಊರ ಜನರ ಜೊತೆ ನಗುಮುಖದಿಂದ ಮಾತನಾಡಿಸುತ್ತಾ ತಮಾಷೆ ಮಾಡುತ್ತಾ ಎಲ್ಲರನ್ನೂ ಹೊಟ್ಟೆ ಹುಣ್ಣಾಗಿಸುವಷ್ಟು ಮಾತನಾಡಿಸುತ್ತಿದ್ದ.. ಆ ಊರಿನಲ್ಲಿ ಅವನದೇ ವಯಸ್ಸಿನ ಸ್ನೇಹಿತರು ಇದ್ದರು. ಎಲ್ಲರೂ ಒಂದು ಮರದ ಕೆಳಗೋ, ತೋಟದಲ್ಲೋ, ಬಸ್ ಸ್ಟಾಂಡಿನಲ್ಲೋ ಕುಳಿತು ಗಂಟೆಗಟ್ಟಲೆ ಹರಟೆಹೊಡೆಯುತ್ತಿದ್ದರು. ಅವನು ಒಂದು ದಿನ ಇಲ್ಲವೆಂದರೂ ಬೇಸರವಾಗುತ್ತಿತ್ತು. ಎಲ್ಲರಿಗೂ ಅಚ್ಚುಮೆಚ್ಚಿನ ಹುಡುಗನಾಗಿದ್ದನು. ಸ್ನೇಹಿತನೆಂದರೆ ಹೀಗಿರಬೇಕು ಎಂದು ಎಲ್ಲರೂ ಎನಿಸುತ್ತಿದ್ದರು. ಅವನು ಸಂಜೆಯ ತನಕ ಅಲ್ಲಿಇಲ್ಲಿ ಮಾತನಾಡಿ ಮನೆಗೆ ವಾಪಾಸ್ಸಾಗುತ್ತಿದ್ದ.
ಮನೆಯಲ್ಲಿ ಎಲ್ಲರೂ ಕ್ಷೇಮವೇ? ತಂದೆ ತಾಯಿ ಹೇಗಿದ್ದಾರೆ? ಕೇಳಿದಾಗಲೆಲ್ಲಾ "ಚೆನ್ನಾಗಿದ್ದಾರೆ ಅಂಕಲ್, ಮನೆಯಲ್ಲಿ ಇದ್ದಾರೆ. ಎನ್ನುತ್ತಿದ್ದ. ಇಲ್ಲಾ ಊರಿಗೆ ಹೋಗಿದ್ದಾರೆ ಎನ್ನುತ್ತಿದ್ದ. ಆದರೆ ಒಮ್ಮೆಯೂ ಅವರನ್ನು ಊರಿನವರು ನೋಡಿದ್ದೇ ಇಲ್ಲ. ಅವರು ಹೊರಬರುವುದೇ ಇಲ್ಲವಾ ಎಂದು ಎಲ್ಲರಿಗೂ ಅನುಮಾನ ಬರುತ್ತಿತ್ತು. ಒಮ್ಮೆ ಯಾವುದೋ ಕಾರಣಕ್ಕೆ ರಾಜು ಪರ ಊರಿಗೆ ಹೋಗಬೇಕಾಯಿತು. ಆಗ ಎಲ್ಲರಿಗೂ ಬೇಸರವಾಗುತ್ತಿತ್ತು. ಆದರೂ ಬೀಳ್ಕೊಟ್ಟರು. ನಂತರ ಅವನಿಲ್ಲದ್ದು ನೋಡಿ ಕುತೂಹಲ ತಡೆಯಲಾಗದೇ ಅವನ ಸ್ನೇಹಿತರೇ ತಪ್ಪೆನಿಸಿದರೂ, ರಾಜುವಿನ ಮನೆ ಬೀಗ ಒಡೆದು ಒಳಹೋದರು. ಎಲ್ಲಾ ಕಡೆ ಹುಡುಕಿದರೂ ಹೆತ್ತವರ ಸುಳಿವಿರಲಿಲ್ಲ. ಕೋಣೆಗೆ ಹೋಗಿ ನೋಡಿದರೆ ಅಲ್ಲಿ ತಂದೆ-ತಾಯಿ ಫೋಟೋವಿದ್ದಿತ್ತು. ಜೊತೆಗೊಂದು ಡೈರಿ ಕೂಡ. ಇನ್ನೊಂದು ಕೋಣೆಗೆ ಹೋಗಿ ನೋಡಿದರೆ ಅಲ್ಲೂ ಅಕ್ಕನ ಫೋಟೋ ಮತ್ತು ಒಂದು ಡೈರಿ ಇದ್ದಿತ್ತು. ಪುಟ ತೆಗೆದು ಓದಿದರೆ ಅವನ ದಿನಚರಿಯನ್ನು ಬರೆದಿದ್ದ.. ತಂದೆತಾಯಿ ಜೊತೆ ಮಾತನಾಡುತ್ತಿದ್ದ ಕ್ಯಾಸೆಟ್ ಅಲ್ಲೇ ಸನಿಹವಿತ್ತು. ಇದನ್ನೆಲ್ಲಾ ನೋಡಿ ಸ್ನೇಹಿತರಿಗೆಲ್ಲಾ ತುಂಬಾ ಆಘಾತವಾಯಿತು‌. ಏನಿದೆಲ್ಲಾ? ಅವನ್ಯಾಕೆ ಮುಚ್ಚಿಟ್ಟ ಈ ವಿಷಯವನ್ನು ? ನಮ್ಮನ್ನೆಲ್ಲಾ ನಗಿಸುತ್ತಿದ್ದ ಆ ಪುಟ್ಟ ಮನಸ್ಸಿನೊಳಗೆ ಈ ಪರಿಯ ನೋವಿದೆಯೇ.. ಒಂದೂ ಅರ್ಥವಾಗಲಿಲ್ಲ‌ ಊರಿಗೆ ಊರೇ ಮಾತನಾಡತೊಡಗಿತು.
*
ನಾಲ್ಕು ದಿನ ಬಿಟ್ಟು ರಾಜು ವಾಪಾಸ್ಸಾದ. ಬಸ್ ಸ್ಟ್ಯಾಂಡ್ ಹತ್ತಿರವೇ ಎಲ್ಲಾ ಸ್ನೇಹಿತರು ನಿಂತಿದ್ದರು.‌ ಅವನ ಬರುವಿಕೆಗೇ ಕಾದಿದ್ದರು. ಅವನ ನೋಡುತಲೇ ತಬ್ಬಿಕೊಂಡು ಅಳತೊಡಗಿದರು. ಆಗ ಅವನಿಗೆ ಅ‌ನುಮಾನ ಬಂದಿತು. ವಿಷಯ ತಿಳಿದುಹೋಯಿತಾ ಎಂದು ಪ್ರಶ್ನಿಸಿಕೊಂಡ. ಆಗ ಒಬ್ಬ ಸ್ನೇಹಿತ ಬಿಕ್ಕಿಬಿಕ್ಕಿ ಅಳತೊಡಗಿದ. ಇಬ್ಬರಲ್ಲೂ ಕೊಂಚ ಮೌನ. "ನಾ ನಿನ್ನ ಜೊತೆ ಏನೂ ಕೇಳುವುದಿಲ್ಲ, ಹೇಗೆ ನಡಿಯಿತು ಇದೆಲ್ಲಾ ಯಾವಾಗ ಆದದ್ದು ? ನಿನಗೆ ಇಷ್ಟವಿದ್ದರೆ ತಿಳಿಸು.. ಎಂದುಬಿಟ್ಟ. ಕೊನೆಗೆ ಎಲ್ಲರನ್ನೂ ಮನೆಗೆ ಕರೆದುಕೊಂಡು ಹೋಗಿ ಅವನ ಕತೆ ಹೇಳಿದ.
**
ಅವನಿಗೆ ಒಬ್ಬ ಅಕ್ಕ ಇದ್ದಿದ್ದಳು. ತಂದೆತಾಯಿಯ ಪ್ರೀತಿಯ ಕುಡಿಗಳು. ಯಾವುದಕ್ಕೂ ಕಡಿಮೆ ಇರಲಿಲ್ಲ. ಸ್ಥಿತಿವಂತರೇ.. ಒಮ್ಮೆ ಕಾರಿನಲ್ಲಿ ದೇವಸ್ಥಾನಕ್ಕೆ ಹೋಗಿ ಬರುವಾಗ ರಾತ್ರಿಯಾಗಿತ್ತು. ಗುಡುಗು ಮಿಂಚುಗಳಿಂದ ಕೂಡಿದ ಜೋರಾದ ಮಳೆ ಬರುತಲಿತ್ತು. ಎದುರಿನಿಂದ ವೇಗವಾಗಿ ಬಂದ ಲಾರಿ ಡಿಕ್ಕಿಹೊಡೆದ ಪರಿಣಾಮ ಎಲ್ಲರಿಗೂ ಪೆಟ್ಟಾಯಿತು. ಪ್ರಜ್ಞಾಹೀನರಾಗಿ ಎಲ್ಲರೂ ಬಿದ್ದಿದ್ದರು. ಕೊನೆಗೆ ಎಚ್ಚರವಾಗಿ ನೋಡುವಾಗ ಆಸ್ಪತ್ರೆಯ ಬೆಡ್ಡಿನಲ್ಲಿದ್ದ. ಅಪ್ಪ ಅಮ್ಮ ಎಲ್ಲಿ ಕೇಳಿದರೆ ಅಕ್ಕ ಎದುರಿಗೆ ಬಂದು ಸಮಾಧಾನ ಮಾಡಿದಳು. ಆ ದುರ್ಘಟನೆಯಲ್ಲಿ ಹೆತ್ತವರನ್ನು ಕಳೆದುಕೊಂಡು ಅನಾಥರಾದ ವಿಷಯ ಅರಿವಾಯಿತು.. ನಂತರ ಇಬ್ಬರು ಮಕ್ಕಳೇ ಜೀವನ ನಡೆಸಲು ಶುರುಮಾಡಿದರು. ದೊಡ್ಡಪ್ಪ ಚಿಕ್ಕಪ್ಪನ ಸಹಾಯ ಕೂಡ ಇತ್ತು.‌ ಆದರೆ ಆ ಮನೆ ಬಿಟ್ಟು ಮಾತ್ರ ಅವರು ಬೇರೆಮನೆಗೆ ಹೋಗಲು ಇಚ್ಛಿಸಲಿಲ್ಲ.
*
ಅಕ್ಕನು ಡಿಗ್ರೀ ಓದುತ್ತಿರಬೇಕಾದರೆ ಅವಳಿಗೆ ಒಂದು ಹುಡುಗನ ಪರಿಚಯವಾಯಿತು. ಮೊದಲಿಗೆ ಇದ್ದ ಸ್ನೇಹ ಪ್ರೀತಿಗೆ ತಿರುಗಿತ್ತು. ಅವಳು ಕಷ್ಟವನ್ನೆಲ್ಲಾ ಹಂಚಿಕೊಳ್ಳುತ್ತಿದ್ದಳು. ಅವನು ಸಾಂತ್ವಾನ ಹೇಳುತ್ತಿದ್ದ. ಹಾಗೆ ಖುಷಿಯಾಗಿದ್ದ ಅವಳು ಅವನನ್ನೆ ಮದುವೆಯಾಗಬೇಕೆಂದು ತೀರ್ಮಾನಿಸಿದಳು. ಹಾಗೆ ಅವನಿಗೆ ಸರ್ವಸ್ವವನ್ನೂ ಒಪ್ಪಿಸಿದಳು. ಮೊದಲೆಲ್ಲಾ ಮದುವೆಯಾಗುತ್ತೇನೆ ಎಂದವನು ಈಕೆ ಗರ್ಭಿಣಿ ಎಂದು ತಿಳಿದ ತಕ್ಷಣ ಮಾತಿನ ವರಸೆ ಬದಲಾಯಿಸಿದ. ಅವಳಿಗೆ ಏನು ಮಾಡಬೇಕೆಂದು ತಿಳಿಯದೇ ನೇಣಿಗೆ ಶರಣಾದಳು. ಅಕ್ಕನನ್ನೂ ಕಳೆದುಕೊಂಡ ರಾಜುವಿಗೆ ಆ ಮನೆಯಲ್ಲಿ ಇರಲು ಸಾಧ್ಯವಾಗಲಿಲ್ಲ. ಕತ್ತಲೆ ಕಾಡಲು ಶುರುವಾಯಿತು. ಒಂದಷ್ಟು ಹಣ ಹಿಡಿದುಕೊಂಡು ಓದು ಅರ್ಧಕ್ಕೆ ನಿಲ್ಲಿಸಿ ಆ ಊರನ್ನೇ ಬಿಟ್ಟು ಬಂದಿದ್ದ. ಸಂಬಂಧಿಕರ ಮಾತೂ ಕೇಳಲಿಲ್ಲ‌.
*
ಹ್ಮ.... "ಇಲ್ಲಿಗೆ ಬಂದ ಮೇಲೆ ನಿಮ್ಮ ಸ್ನೇಹ, ಪ್ರೀತಿ ನೋಡಿ ನಾನು ಸೋತುಹೋದೆ. ಅದಕ್ಕೇನೆ ಈ ನಗುವಿನ ಮುಖವಾಡ ಧರಿಸಿದೆ. ನಿಮ್ಮನ್ನೆಲ್ಲಾ ಮಾತನಾಡಿಸಿ ನಗಿಸಿ ಮನೆಗೆ ವಾಪಾಸ್ಸಾಗುವಾಗ ಮತ್ತದೇ ನೋವು ಬೇಸರ ಆವರಿಸುತ್ತದೆ. ಮುಖವಾಡ ಕಳಚಿ ಗೋಡೆಯ ಮೊಳೆಗೆ ನೇತುಹಾಕುತ್ತೇನೆ. ನಾಳೆಗೆ ಬೇಕಲ್ಲ ಎಂದು.." ಎಂದನು... ಇದನ್ನೆಲ್ಲಾ ಕೇಳಿಸಿಕೊಂಡ ಅವನ ಸ್ನೇಹಿತರು ಸಮಾಧಾನ ಮಾಡಿದರು. ಒಂದು ಕೆಲಸ ಕೊಡಿಸಿದರು. ಅವನ ಜೀವನಕ್ಕೆ ದಾರಿ ಮಾಡಿದರು. ತಮ್ಮ ಮನೆ ಮಗನಂತೆ ಎಲ್ಲರ ಪ್ರೀತಿ ಅವನಿಗೆ ದೊರಕಿತು.

ನಮ್ಮಲ್ಲಿನ ನೋವು ದುಃಖವನ್ನ ಎದುರಿಗೆ ತೋರಿಸುವ ಬದಲು ನಾಲ್ಕು ಜನರ ಮುಖದಲ್ಲಿ ನಗುವ ತರಿಸುವವರಾಗೋಣ.

-ಸಿಂಧುಭಾರ್ಗವ್.

Wednesday 21 December 2016

Send off for 2016 Welcome to New Year 2017

ಹಳೇ ವರುಷಕ್ಕೆ ಸಂತಸದಿಂದ ಬೀಳ್ಕೊಡುವಾ ಬನ್ನಿ....



ಹೋ ಹೋ ಹೋ... ಕೂ.ಊ..ಊ..ಊ...
ನಾವು ಹೀಗೆ ತಾನೇ ಬೆಟ್ಟದ ಮೇಲೆ ಹೋಗಿಯೋ ಇಲ್ಲಾ ಗುಹೆಯೊಳಗೋ ಜೋರಾಗಿ ಕೂಗುವುದು.. ಹ್ಮ.. ಮುಗಿದೇ ಬಿಟ್ಟಿತು ಈ ವರುಷ. ಈ ಒಂದು ವರುಷದಲ್ಲಿ ಯಾರೆಲ್ಲಾ ಎಷ್ಟು ಸಲಿ ಮುಂಜಾವಿನ ಸೂರ್ಯೋದಯ ನೋಡಿ ಉಲ್ಲಾಸಪಟ್ಟಿದ್ದೀರಿ..? ಎಷ್ಟು ಜನ ಅರಳಿದ ಸುಮಗಳ ನಗುವ ನೋಡಿದ್ದೀರಿ.? ಈಗಷ್ಟೆ ನೆಲಬಿಟ್ಟು ಹಾರಲು ಹೊರಟ ಪತಂಗವನ್ನು ಯಾರೆಲ್ಲಾ ಗಮನಿಸಿದ್ದೀರಿ..? ಹಾದಿಬದಿಯಲಿ ನೋವಿನಿಂದ ನರಳುತ್ತಿದ್ದ ಕುನ್ನಿಮರಿಯನ್ನೋ, ಗಡಗಡ ನಡುಗುತ್ತಿದ್ದ ಭಿಕ್ಷುಕರನ್ನೋ ಯಾರೆಲ್ಲಾ ಸೂಕ್ಷ್ಮವಾಗಿ ನೋಡಿದ್ದೀರಿ..? ಯಾರನ್ನ ಅಳಿಸಿದಿರಿ? ಯಾರ ಮೊಗದಲ್ಲಿ ನಗು ತರಿಸಿದಿರಿ? ಯಾರಿಗೆ ನಿಮ್ಮ ಕೈಲಾದ ಸಹಾಯ ಮಾಡಿದಿರಿ? ಯಾರನ್ನ ನಿಮ್ಮ ಜೀವನದದ ಕಿಕ್_ಔಟ್ ಮಾಡಿದಿರಿ? ಯಾರನ್ನೆಲ್ಲಾ ಹೊಸದಾಗಿ ಮನಸಿನಲ್ಲಿ ಜಾಗ ನೀಡಿದಿರಿ? ನಿಮ್ಮ ಜೀವನದಲ್ಲಿ ವಿಶೇಷವಾಗಿ ಯಾರು ಈ ವರುಷದ ವ್ಯಕ್ತಿ? ಯಾರು ನೀಚ? ಮಾಡಿದ ಸಾಧನೆ ಏನು? ಸೋತ ಕ್ಷಣ ಯಾವುದು?

*@*



ಎಲ್ಲೆಲ್ಲಾ ತಿರುಗಾಡಿದಿರಿ? ಎಷ್ಟು ಕೃತಿಗಳನ್ನು ಕೊಂಡುಕೊಂಡು ಓದಿದಿರಿ? ಯಾವ ಸಿನೇಮಾಕ್ಕೆಲ್ಲಾ ಹೋದಿರಿ? ಇಷ್ಟವಾದ/ಡಬ್ಬಾ ಸಿನೇಮಾಗಳು ಯಾವುದು?ಎಷ್ಟು ಬಟ್ಟೆ ಕಪಾಟು ಸೇರಿದವು? ಎಷ್ಟು ಉಡುಗೆಗಳು ಮೂಲೆ ಸೇರಿದವು?ಗಳಿಸಿದ ಹಣವೆಷ್ಟು? ಖರ್ಚಾದ ಹಣವೆಷ್ಟು? ನಿಮ್ಮ ಊರಿನಲ್ಲೇ ಏನೆಲ್ಲಾ ನಡೆಯಿತು? ಪರವೂರಿನಲ್ಲೋ ? ಜಿಲ್ಲೆ -ರಾಜ್ಯದಲ್ಲೋ ಏನೆಲ್ಲಾ ನಡೆಯಿತು.. ದೇಶದೇಶಗಳ ನಡುವಿನ ಮಾತುಕತೆ?
ಮದುವೆ ?ಮಸಣ ? ಯಾರು ಅಳಿದರು? ಯಾರು ಜನಿಸಿದರು? ಈ ವರುಷ ಮಾಡದೇ ಉಳಿದ ಪ್ರಾಜೆಕ್ಟ್ ಗಳು, ಮಾಡಿದ ತಪ್ಪಗಳು, ಸಾಧಬಧಕಗಳು, ಮುಂದಿನ ವರುಷ ಏನೆಲ್ಲಾ ಮಾಡಬೇಕೆ.ದಿರುವಿರಿ? ಬದಲಾವಣೆ ಅಗತ್ಯವಿದೆಯಾ? ನಿಮ್ಮ ಜೀವನದದ ಹಾದಿ ಸರಿಯಾಗಿದೆಯಾ? ತೃಪ್ತಿ ಇದೆಯಾ ನಿಮ್ಮ ಕೆಲಸದಲ್ಲಿ? ಜೀವನ ಚೆನ್ನಾಗಿ ನಡೆಯುತಿದೆಯಾ?
.
.
ಅಬ್ಬಾ ಹೇಳಹೊರಟರೇ ಪಟ್ಟಿಯೇ ಇದೆ..ಅಂತು ಮುಗಿದೇ ಬಿಟ್ಟಿತು ಹಳೆ ವರುಷ.

⛪🌛🙏 ಸಿಂಧುಭಾರ್ಗವ್ 🍁
#Happy_New_Year-2017

ಮದುವೆ ಬಗ್ಗೆ ಚಿಂತನೆ

ಹಿಂದಿನ ಕಾಲದಲ್ಲಿ:
ಹುಡುಗನಿಗೆ ಹಿಡಿದ ಕೆಲಸ ಮಾಡದೇ ಬಿಡುವವನಲ್ಲ, ಸಾಧಿಸುವ ಛಲವಿದೆ, ಒಳ್ಳೇ ಗುಣವಿದೆ. ಈಗ ಕಷ್ಟ ಇರಬಹುದು, ಮುಂದೆ ಅವನೂ ಶ್ರೀಮಂತ ಆಗ್ತಾನೆ ನೋಡು. ನಿಷ್ಟಾವಂತ, ನಂಬಿಕಸ್ಥ, ನೀನು ಇವನನ್ನ ಮದುವೆ ಆಗಿ ಒಳ್ಳೆಯ ಜೀವನ ನಡೆಸಬಹುದಮ್ಮ.. ಒಪ್ಕೋ ವರನನ್ನ. ಎನ್ನುತ್ತಿದ್ದರು.. ಹಿರಿಯರ ಮಾತಿಗೆ ಒಪ್ಪಿ ಹುಡುಗಿಯೂ ತಲೆಯಾಡಿಸಿ ಮದುವೆ ಆಗುತ್ತಿದ್ದಳು. ಕಷ್ಟದಲ್ಲೂ ಸುಖದಲ್ಲೂ ಜೊತೆಗಿದ್ದು ಅವನ ಏಳಿಗೆಯನ್ನು ಆನಂದಿಸುತ್ತಿದ್ದಳು. ಅತ್ತೆಮಾವನ ಸೇವೆ ಮಾಡುವುದರ ಜೊತೆಗೆ ಮನೆಯಲ್ಲಿದ್ದ ಗಂಡನ ಒಡಹುಟ್ಟಿದವರನ್ನೂ ಪ್ರೀತಿಯಿಂದಲೇ ನೋಡಿಕೊಳ್ಳುತ್ತಿದ್ದಳು.
.
.
ಆದರೆ ಈಗ,
ಪರವೂರಿನಲ್ಲಿ ಕೆಲಸ , ಕಾರು , ಬಂಗಲೆ, ಲಕ್ಷ ಸಂಬಳ, ಒಬ್ಬನೇ ಮಗ, ಅತ್ತೆಮಾವರಿಂದ ದೂರವಿರಬೇಕು, ತಂಗಿಯಿದ್ದರೂ ಅವಳು ಸೆಟಲ್ ಆಗಿರಬೇಕು.. ಹೀಗೆ ಎಲ್ಲವೂ ವ್ಯವಸ್ಥಿತವಾಗಿದ್ದರೆ ಆ ಹುಡುಗನ ಒಪ್ಪುವರು. ಅವನ ಗುಣವನ್ನಾಗಲೀ ,‌ಮನೆಯವರನ್ನಾಗಲಿ ನೋಡಲು ಹೋಗುವುದಿಲ್ಲ..
ಈಗಿನ ವಿದೇಶಿ ಕಂಪೆನಿಯಲ್ಲಿ ಯಾವಾಗ ತೆಗೆದು ಬಿಸಾಕುವರೋ ಗ್ಯಾರೆಂಟಿ ಇಲ್ಲ. ಮನೆಯಲ್ಲಿರುವ ವಸ್ತು ಒಡವೆ ಎಲ್ಲದರಲ್ಲಿಯೂ ಇ.ಎಮ್.ಐ ಹಣೆಪಟ್ಟಿ ಅಂಟಿಸಿಬಿಟ್ಟಿರುತ್ತಾರೆ. ಯಾವಾಗ ಏನಾಗುತ್ತದೆಯೋ ಹರಿಯೇ ಬಲ್ಲ. ಆದರೂ ಅಂತಹ ಹುಡುಗನನ್ನೇ ಹುಡುಕುವರು.. ಟೀಚರ್, ಬ್ಯಾಂಕ್ ಕೆಲಸದವರು, ಲೆಚ್ಚರ್, ಇನ್ಯಾವುದೇ  ಕೆಲಸದವರೋ ಅಥವಾ ಊರಿನಲ್ಲೇ ಉದ್ಯೋಗ ಹುಡುಕಿಕೊಂಡು ನೆಮ್ಮದಿ ಜೀವನ ನಡೆಸುತ್ತಿರುವವರೋ ಕಣ್ಣಿಗೆ ಕಾಣರು.

#ಬಣ್ಣದಚಿಟ್ಟೆ.

ಹಾಡು- ಏನಾಗಿದೆ ನನಗೇನಾಗಿದೆ




ಹಾಡು : `ಏನಾಗಿದೆ ನನಗೇನಾಗಿದೆ` ( ಪ್ರೇರಣೆ ತೆಲುಗು ಹಾಡು)
~~~~~~~~~~~~~~~~~~
ಏನಾಗಿದೆ ನನಗೇನಾಗಿದೆ
ಮನಸೀಗ ಏಕೋ ಮರೆಯಾಗಿದೆ..!
ಹಸಿರಾಗಿದೆ ಉಸಿರಾಗಿದೆ
ನಿನ್ನ ಹೆಸರೀಗ ನನ್ನ ಉಸಿರಾಗಿದೆ..!!
~
ಕರಗಿದೆ ಮನ ಕರಗಿದೆ,
ಇಬ್ಬನಿಯಂತೆ ಈ ಮನ ಕರಗಿದೆ..!
ಮುಳ್ಳಿನ ನಡುವಲಿ ಆ ಸುಮದಂತೆ,
ಅರಳಿದ ಹೂಮನವ ನಾ ನೋಡಿದೆ..!!
~
ಹಾರಾಡಿದೆ ಮನ ಹಾರಾಡಿದೆ
ಕನಸುಗಳೆಲ್ಲ ಕೈಸೇರಿದೆ..!
ಮೋಡದ ಮರೆಯ ಕಿರಣಗಳಂತೆ
ಮನದ ಆಳಕೆ ನೀ ಇಳಿದೆ..!!
~
ಹಾಡಿದೆ ಕೋಗಿಲೆ ಹಾಡಿದೆ
ಜೋಡಿಯ ನೋಡಿ ಈಗ ಹೊಗಳಿದೆ..!
ಕೆರೆಯ ಕಮಲಕೆ ನಾಚಿಕೆಯ ಹೆಚ್ಚಿ
ನಗುತ ಕೆನ್ನೆಯು ಕೆಂಪಾಗಿದೆ..!!
~
ಕುಣಿದಿದೆ ಮನ ಕುಣಿದಿದೆ
ನವಿಲಿನ ಜೊತೆಗೆ ನಲಿದಿದೆ..!
ರಂಗಿನ ಬಣ್ಣ ಮನದಲಿ ಹೆಚ್ಚಿ
ಮದುವೆ ಸಂಭ್ರಮಕೆ‌ ಕಳೆ ಬಂದಿದೆ..!!
~`~
- ಸಿಂಧುಭಾರ್ಗವ್ 🌸

ಹಾಡು: ಮುದುಕಿಯ ಕಂಡೇನು

ಹಾಡು.. :



ಹಾದಿ ಬದಿಯಲಿ ಸಾಗುವಾಗ ಮುದುಕಿಯ ಕಂಡೆನು..
ಹಸಿವಿನಿಂದ ಸೊರಗಿ ಹೋದ ಮುದುಕಿಯ ಕಂಡೆನು..

ಹತ್ತಿರ ಹೋಗಿ ನೀರು ಕೇಳಿ ಕುಡಿಯಲು ಕೊಟ್ಟೆನು.
ಜನಸೇವೆ ಮಾಡಿದ್ದು ಸಾಕು
ಎಂದು ಹೇಳಿಸಿಕೊಂಡೆನು..

ಬೀದಿಬದಿಯಲಿ ಕುನ್ನಿಯೊಂದು ನಡುಗುತ ಮಲಗಿತ್ತು..
ಗೋಣಿಚೀಲವ ಮೈಗೆ ಹೊದೆಸಲು ಹೆಜ್ಜೆ ಹಾಕಿದೆನು..

ಬೀದಿಬದಿಯಲಿ ನಿನ್ನದೇನೆ? ಕೆಲಸವೆಂದರು..
ಪ್ರಾಣಿದಯಾ ಸಂಘದವರು ಇರುವರೆಂದರು.
ಅದನ್ನ ಬಿಟ್ಟುನಡಿ ಎಂದರು..

ನೊಂದುಕೊಂಡ ಜೀವ ನಮ್ಮದೆಂಬ
ಭಾವ ಬೇಡವೇ.?
ಸ್ನೇಹ , ಪ್ರೀತಿ ಎಂದು ಬೆರೆತರೆ ಆಡಿಕೊಳ್ಳುವುದೇ..?!

ಸತ್ಯ ,ನ್ಯಾಯ, ನೀತಿಯೆಂಬ ಮಾತನು,
ಬದಲಿಸಬೇಕು ಇಂದಿನಿಂದ ಎಂದು ಅರಿತೆನು..
ಮಾನವೀಯತೆಗೆ ಇಲ್ಲಿ ಚೂರು ಬೆಲೆಯಿಲ್ಲ.
ಮನುಜರಂತೆ ನಡೆದುಕೊಳ್ಳಲು ಯಾರಿಗೂ ಮನಸಿಲ್ಲ..

- ಸಿಂಧುಭಾರ್ಗವ್. 🌸

ಆಟೋ ಹಿಂದಿನ ಸಾಲು ಭಾಗ೦೬

ಆಟೋ ಹಿಂದಿನ ಸಾಲು :
ಯಾರ ಯೋಗ್ಯತೆಯನ್ನು ಅವರ ತಪ್ಪುಗಳ ಮೇಲೆ ಅಳೆಯಬಾರದು. ಕೆಲವೊಮ್ಮೆ ಕೆಟ್ಟ ಸಮಯಕ್ಕೆ ಸಿಲುಕಿರಬಹುದು..
ಸಿಂಧು.

ಆಟೋ ಹಿಂದಿನ ಸಾಲು :
ದುಃಖದಲ್ಲಿ ಎರಡು ಸಂಗತಿಗಳಿರುತ್ತದೆ. ಒಂದು ನಷ್ಟ ಇನ್ನೊಂದು ಬದುಕನ್ನು ಮತ್ತೆ ಕಟ್ಟಿಕೊಳ್ಳುವುದು.
ಸಿಂಧು

ಆಟೋ ಹಿಂದಿನ ಸಾಲು :
ಪರರಿಗಿಂತ ನಾನೇ ಶ್ರೇಷ್ಠ ಎಂದು ಗರ್ವ ಪಡುವುದು ಮೋಸ ಹೋಗಲುವ ನೇರದಾರಿ.
ಸಿಂಧು 🌸

ಆಟೋ ಹಿಂದಿನ ಸಾಲು :
ನೀನೇನು ಎಂಬುದು ಎಂದು ತಿಳಿಸುವುದೇ ನಿಜವಾದ ಸಂಪತ್ತು. ನಿನ್ನಲ್ಲಿ ಏನಿದೆ ಎಂಬುದನ್ನಲ್ಲ.
ಸಿಂಧು .

ಕವಿತೆ - ನದಿಯಂತೆ ಹರಿಯುತಿದೆ ಮನವೀಗ

ಕವಿತೆ- ನದಿಯಂತೆ ಹರಿಯುತಿದೆ



ದಿನವೀಗ ನದಿಯಂತೆ ಹರಿಯುತಿದೆ,
ನೀನು ಕಾಡುಹೂವಾಗಿ ಜೊತೆಯಾದೆ..

ಮಂದಾರ ಹೂವೀಗ ಅರಳಿ,
ಘಮಮ ಚೆಲ್ಲಿತು ಅಂಗಳದಲ್ಲಿ..
ಜೋಳಿಗೆಯ ಹೆಗಲಲಿ ಧರಿಸಿ,
ಬೇಡದಿರು ಪ್ರೀತಿಯ ಹೆಸರಲ್ಲಿ..

ನೀನೇ ಕುಳಿತಿರುವೆ ನನ್ನೊಳಗೆ,
ಜೋಡಿ ಸುಮಗಳ ನಗುಚೆಲ್ಲಿ..
ಮಾತಿನ ಮೋಡಿಗೆ ಸೋಲುವೆ,
ಬೇರೊಂದು ಗೆಲುವಿನ ಗುಂಗಿನಲಿ..

ಲೋಕವೇ ಪ್ರೀತಿಸುವ ಚಂದಿರನು,
ನನ್ನ ಮನದಂಗಳಕೆ ಬಂದಿಹನು..
ಪ್ರೀತಿ ನಿವೇದಿಸಿದ ಪರಿಯನ್ನು
ನಾ ಹೇಗೆ ವರ್ಣಿಸಲಿ ತಿಳಿಯೆನು..

ಮಬ್ಬಾದ ಮನಕೀಗ ಬೆಳಕನ್ನು,
ಚೆಲ್ಲುತಲೀ ಉಳಿಸಿದ ನೆರಳನ್ನು..
ಹಿಡಿದು ಸಾಗುವ ಕಿರುಬೆರಳನ್ನು,
ಮರೆವ ಲೋಕದ ಜಂಜಡವನ್ನು..

-ಸಿಂಧುಭಾರ್ಗವ್. 🌸

ಕಥೆ- ಪ್ರಯತ್ನ ನಮ್ಮದಿರಲಿ ಫಲಾಪೇಕ್ಷೆ ಇಲ್ಲದೆಯೇ..

ಕಥಾ ಶೀರ್ಷಿಕೆ :
"ಹಾಕೋದು ಬಿತ್ತೋದು ನನ್ನಿಚ್ಛೆ, ಆಗೋದು ಹೋಗೋದು ಅವನಿಚ್ಛೆ"

ಶೇಕರ್ ಮತ್ತು ಸೀಮಾ ಗೆ "ಮಯೂರಿ" ಒಬ್ಬಳೇ ಮಗಳು. ಮುದ್ದಾಗಿ ಸಾಕಿ ಬೆಳೆಸುತ್ತಾರೆ. ಅವಳಿಗೆ ನೃತ್ಯ ನಾಟ್ಯಕಲೆಯಲ್ಲಿ ಎಲ್ಲಲ್ಲದ ಆಸಕ್ತಿ. ಹಾಗಾಗಿ ತನ್ನ ಮೂರನೇ ವಯಸ್ಸಿನಲ್ಲಿಯೇ ಭರತನಾಟ್ಯಕ್ಕೆ ಸೇರಲು ಇಚ್ಛಿಸುತ್ತಾಳೆ. ಅದರ ತರಬೇತಿ ಪಡೆಯಲು ಹೆತ್ತವರು  ಉತ್ತಮ ಗುರುಗಳ ಹುಡುಕಿ ನಾಟ್ಯಶಾಲೆಗೆ ಸೇರಿಸುತ್ತಾರೆ. ದಿನವೂ ತರಗತಿಯ ಅಭ್ಯಾಸದ ಜೊತೆಜೊತೆಗೆ ಸಂಜೆಯ ಸಮಯದಲ್ಲಿ ನಾಟ್ಯಶಾಲೆಗೂ ಹೋಗಿ ಭರತನಾಟ್ಯವನ್ನೂ ಅಭ್ಯಾಸ ಮಾಡುತ್ತಾಳೆ. ಅವಳೇ ಇಷ್ಟಪಟ್ಟು ಕಲಿಯುತ್ತಿರುವುದರಿಂದ ಅಲ್ಲಿ ತಿಳಿಸಿಕೊಡುವ ಹೆಜ್ಜೆಗಳು ಹಾವಭಾವಗಳು ಕಠಿಣವೆನಿಸಲಿಲ್ಲ. ನೀರು ಕುಡಿದಷ್ಟು ಸುಲಭವಾಗಿ ನರ್ತಿಸುತ್ತಿದ್ದಳು. ಹಾಗೆ ಎಲ್ಲರ ಮನಗೆದ್ದಳು. ಕಠಿಣ ಅಭ್ಯಾಸದ ನಂತರ ಎಲ್ಲರ ಮನಸ್ಸಿನಲ್ಲಿದ್ದಂತೆ ರಂಗಪ್ರವೇಶ ಮಾಡುವ ಸುದಿನ ಬಂದೇ ಬಿಟ್ಟಿತು. ಆ ಸಮಾರಂಭಕ್ಕೆ ಗಣ್ಯಾತಿಗಣ್ಯರನ್ನು ಆವ್ಹಾನಿಸಿದ್ದರು. ಮೊದಲ ಬಾರಿಗೆ ರಂಗಮಂದಿರದಲ್ಲಿ ಬಣ್ಣಹಚ್ಚಿ ,ಕಾಲಿಗೆ ಗೆಜ್ಜೆಕಟ್ಟಿ ನರ್ತಿಸುವ ಸೊಬಗೇ ಬೇರೆಯಾಗಿತ್ತು. ಎಲ್ಲರೂ ಖುಷಿಯಿಂದಲೇ ಸಮಾರಂಭವನ್ನು ನೋಡಿದರು. ಹರಸಿ ತಮ್ತಮ್ಮ ಮನೆಗೆ ಹಿಂದಿರುಗಿದರು.
*
ಆದರೆ ಆ ದಿನವೇ ಅವಳ ಪಾಲಿಗೆ ಕರಾಳ ದಿನವಾಗುತ್ತದೆ ಎಂದು ಯಾರೂ ಎನಿಸಿರಲಿಲ್ಲ. ವಿಧಿಲಿಖಿತ ಬೇರೇಯೇ ಆಗಿತ್ತು. ಅವರು ಮನೆಗೆ ಹಿಂತಿರುವಾಗ ರಾತ್ರಿ ಹತ್ತರ ಸಮಯವಿರಬಹುದು. ಅವರ ಕಾರು ಮುಂಬರುವ ಲಾರಿಗೆ ಡಿಕ್ಕಿ ಹೊಡೆದು ನುಜ್ಜುಗುಜ್ಜಾಯಿತು. ಏನಾಗಿದೆ ಎಂಬ ಅರಿವೇ ಇರಲಿಲ್ಲ. ಪ್ರಜ್ಞೆ ಬರುವಲ್ಲಿಗೆ ತಂದೆ-ತಾಯಿ ಮಗಳು ಮೂವರು ಆಸ್ಪತ್ರೆ ಸೇರಿದ್ದರು. ಮಯೂರಿಯನ್ನು ಪರೀಕ್ಷಿಸಿದ ವೈದ್ಯರು "ಕಾಲಿಗೆ ಬಲವಾಗಿ ಪೆಟ್ಟು ಬಿದ್ದಿದೆ, ಮೂಳೆಗಳೆಲ್ಲ ನುಜ್ಜುಗುಜ್ಜಾಗಿದೆ, ಆಪರೇಶನ್ ಮಾಡಿ "ರಾಡ್" ಅಳವಡಿಸಬೇಕಾಗುತ್ತದೆ ಎಂದರು. ಹೆತ್ತವರಿಗೆ ಅದೊಂದು ಶಾಕ್ ಆಗಿತ್ತು. ಸರಿ ಇನ್ನೇನು ಮಾಡುವುದು ಎಂದು ಒಪ್ಪಿಕೊಂಡರು. ಆರೇಳು ತಿಂಗಳವರೆಗೂ ಮಯೂರಿಗೆ ನಡೆಯಲು ಕಷ್ಟವಾಗುತ್ತಿತ್ತು. ಆದರೆ ಆತ್ಮವಿಶ್ವಾಸ ಕುಂದಲಿಲ್ಲ. ನಿಧಾನಕ್ಕೆ ತಾಯಿ ಸಹಾಯದಿಂದ ಪ್ರದಿ ದಿನ ಮನೆಯ ವರಾಂಡದಲ್ಲಿಯೇ ನಡೆಯುತ್ತಿದ್ದಳು. ಅರ್ಧಕ್ಕೆ ನಿಂತ ತರಗತಿಗೆ ಹೋಗುವುದಕ್ಕೂ ಶುರುಮಾಡಿದಳು. ಅವಳ ಗೆಳತಿಯರು ಓದು ಬರಹದಲ್ಲಿ ಸಹಾಯಮಾಡುತ್ತಿದ್ದರು.
ಒಮ್ಮೆ ಸಂಜೆ ಹೊರಗಡೆಯಿಂದ ಜೋರಾಗಿ ಮಳೆ ಸುರಿಯುತ್ತಿತ್ತು. ಆಗ ಅವಳಿಗೆ ಅವಳ ರೂಮಿನ ಕಪಾಟಿನಲ್ಲಿದ್ದ ಗೆಜ್ಜೆಕಟ್ಟಿನ ನೆನಪಾಯಿತು. ಅದರ ಸಂಗೀತ ಕಿವಿಯನ್ನು ಸುತ್ತುತ್ತಿತ್ತು. ಹಿಂದೊಮ್ಮೆ ಹೀಗೆ ಸುರಿಯುತ್ತಿದ್ದ ಮಳೆಗೆ ಖುಷಿಯಿಂದ ಮನಬಿಚ್ಚಿ ಮಯೂರದಂತೆ ನರ್ತಿಸಿದ್ದು ನೆನಪಾಗಿ ಕಣ್ಣಲ್ಲಿ ಹನಿಯು ತನ್ನಿಂದ ತಾನಾಗೇ  ಜಿನುಗಿತು. ಮತ್ತೆ ಗೆಜ್ಜೆ ಕಟ್ಟಿದಳು. ಕುಂಟುತ್ತಾ ಮನೆಯಿಂದ ಹೊರಗೆ ಬಂದಳು ನರ್ತಿಸಲು ಪ್ರಾರಂಭಿಸಿದಳು.ಅಮ್ಮನಿಗೆ ದೂರದಿಂದ ಈ ಶಬ್ಧಕೇಳಿ ಓಡೋಡಿ ಬಂದರು. ಮಗಳ ಮನಸ್ಸು ನೆನೆದಿತ್ತು. ಅಳು ಬಂದಿತು. ಇಬ್ಬರೂ ತಬ್ಬಿಕೊಂಡು ಅತ್ತರು. ಮನದಮಾತು ವಿನಿಮಯವಾಯಿತು. ಮತ್ತೆ ಮುಂಜಾನೆ ಗುರುಗಳ ಹತ್ತಿರ ಹೋಗಿ ನೃತ್ಯಮಾಡಲು ಅವಕಾಶ ಕೊಡಿ ಎಂದು ಕೇಳಿಕೊಂಡಳು. ಅವರು ಕುಂದದ ಆತ್ಮವಿಶ್ವಾಸ ನೋಡಿ ಹೆಮ್ಮೆಪಟ್ಟರು. ನಿಧಾನಕ್ಕೆ ಒಂದೊಂದೆ ಸುಲಭದ ಹೆಜ್ಜೆಗಳನ್ನು ಕಲಿಸುತ್ತಾ ಅವಳಿಗೆ ಸುಲಭವಾಗುವ ರೀತಿಯಲ್ಲಿಯೇ ಸ್ಪಂದಿಸಿದರು. ಮತ್ತೆ ರಂಗಮಂದಿರಕ್ಕೆ ಗೆಜ್ಕೆಕಟ್ಟಿ ಸಭಿಕರ ಎದುರು ಬಣ್ಣಹಚ್ಚಿ ಮಯೂರಿ ನರ್ತಿಸಿದಳು. ಯಾರಿಗೂ ಅವಳಿಗೆ ಅಪಘಾತದಲ್ಲಿ  ಕಾಲಿಗೆ ಪೆಟ್ಟು ಬಿದ್ದು ರಾಡ್ ಹಾಕಿದ್ದಾರೆ ಎಂದು ಅರಿವಿಗೆ ಬರಲೇ ಇಲ್ಲ. ಅಂತಹ ಅದ್ಭುತ ನರ್ತನ ಕಂಡು ಅವಳಿಗೆ "ನಾಟ್ಯಮಯೂರಿ" ಎಂಬ ಬಿರುದು ಸನ್ಮಾನ ನೀಡಿ ಗೌರವಿಸಿದರು.. ಹೀಗೆ ಸತತ ಪರಿಶ್ರಮದಿಂದ ನಮಗೆ ಗೆಲುವು ಸಿಗುತ್ತದೆ. ಎಂತಹ ಸಂಧರ್ಭದಲ್ಲಿಯೂ ಆತ್ಮವಿಶ್ವಾಸ ಕಡಿಮೆಮಾಡಿಕೊಳ್ಳಬಾರದು ಎಂದು ಎಲ್ಲರಿಗೂ ತೋರಿಸಿಕೊಟ್ಟಳು.

- ಸಿಂಧುಭಾರ್ಗವ್.

ಕಥೆ- ಫಲಾಫಲಗಳು ದೇವನಿಗೆ ಬಿಟ್ಟದ್ದು..

ಕಥಾ ಶೀರ್ಷಿಕೆ :
"ಹಾಕೋದು ಬಿತ್ತೋದು ನನ್ನಿಚ್ಛೆ, ಆಗೋದು ಹೋಗೋದು ಅವನಿಚ್ಛೆ"

ರಾಮು ತಂದೆ ಇಲ್ಲದ ಬಡವರ ಮನೆ ಹುಡುಗ. ಅಮ್ಮ ಸಾಲಸೋಲ ಮಾಡಿ ಓದಿಸುತ್ತಿದ್ದಳು. ಅವನಿಗೋ ಇಂಜಿನಿಯರಿಂಗ್ ಓದಿ, ಪ್ರಸಿದ್ಧ ಕಂಪೆನಿಯೊಂದರಲ್ಲಿ ಕೆಲಸಕ್ಕೆ ಸೇರಬೇಕೆಂಬ ಆಸೆ. ಆಗಾದರೂ ನಮ್ಮ ಕಷ್ಟಗಳಿಗೆಲ್ಲ ಮುಕ್ತಿ ಸಿಗಬಹುದು ಎಂಬ ಬಯಕೆ. ಅದಕ್ಕೆ ಎಲ್ಲಾ ರೀತಿಯ ತಯಾರಿ ನಡೆಸುತ್ತಿದ್ದ. ಶಿಸ್ತಿನ ಜೀವನ ನಡೆಸುತ್ತಾ ,ಓದಿನ ಕಡೆ ಗಮನ ಕೊಡುತ್ತಾ ,ಅಮ್ಮನ ಕೆಲಸಕ್ಕೂ ನೆರವಾಗುತ್ತಿದ್ದ.
ನೆರಮನೆಯ ಸೋಮುವಿಗೆ ಓದಿನಲ್ಲಿ ಆಸಕ್ತಿಯೂ ಕಡಿಮೆ, ಹಾಗೆ ಕಷ್ಟವೆಂದರೆ ಏನೂ ಎಂದು ಅರಿವಿಗೆ ಬಾರದಂತೆ ತಂದೆತಾಯಿ ಬೆಳೆಸಿದ್ದರು. ಅವನು ಮುಂದೆ ಏನಾಗುತ್ತಾನೋ ಎಂಬ ಆತಂಕ ಮನೆಮಾಡಿತ್ತು. ಒತ್ತಾಯಿಸಿ ಸಿ.ಇ.ಟಿ ಪರೀಕ್ಷೆ ಬರೆಯಲು ಹೇಳಿದರು. ಇಂಜಿನಿಯರಿಂಗ್ ಸೀಟು ಸಿಕ್ಕಿತು. ರಾಮು ಕೂಡ ಅದೇ ಕಾಲೇಜಿನಲ್ಲಿ ಸೀಟು ಪಡೆದ. ಇಬ್ಬರೂ ಒಂದೆ ರೂಮಿನಲ್ಲಿ ತಮ್ಮ ಕಾಲೇಜು ದಿನಗಳನ್ನು ಕಳೆಯಲು ಶುರುಮಾಡಿದರು. ಗಂಭಿರವಾಗಿ ಓದುತ್ತಿದ್ದ ರಾಮುವೂ ಎಲ್ಲ ಸೆಮಿಸ್ಟರ್ ನಲ್ಲಿ ಪಾಸಾದ. ಆದರೆ ಸೋಮು , ಅಲ್ಲಿಯೂ ಆಸಕ್ತಿ ತೋರುತ್ತಿರಲಿಲ್ಲ. ಹೆತ್ತವರ ಬಲವಂತಕ್ಕೆ ಅಲ್ಲಿ ಬಂದು ಕುಳಿತಹಾಗೆ ವರ್ತಿಸುತ್ತಿದ್ದ. ಇಷ್ಟವಿದ್ದರೆ ತರಗತಿಗೆ ಹೋಗುತ್ತಿದ್ದ. ಪ್ರತಿ ಇಂಟರ್ನಲ್ಸ್ ನಲ್ಲಿ ಪಾಸಾಗುವುದು ಅನುಮಾನವಿತ್ತು. ಹಾಗೆ ಕೆಟ್ಟ ಗೆಳಯರ ಸಹವಾಸದಿಂದ ಧೂಮಪಾನ ,ಮದ್ಯಪಾನ ಎಲ್ಲವನ್ನೂ ಮೈಗಂಟಿಸಿಕೊಂಡಿದ್ದ. ಅವನ ಈ ವರ್ತನೆ ರಾಮುವಿಗೆ ಹಿಡಿಸದೇ ಹಾಸ್ಟೇಲಿನಲ್ಲಿ ತಾನು ಬೇರೆ ರೂಮಿಗೆ ಬದಲಾಯಿಸಿಕೊಂಡ. ಕಷ್ಟಪಟ್ಟು ಓದಿ ಪ್ರತೀ ಸೆಮಿಸ್ಟರ್ ಪರೀಕ್ಷೆಯಲ್ಲೂ ಉತ್ತಮ ಅಂಕ ಗಳಿಸುತ್ತಾ ಬಂದ. ಅಮ್ಮನಿಗೂ ತಿಂಗಳಿಗೊಮ್ಮೆ ಪತ್ರ ಬರೆದು ಎಲ್ಲವನ್ನೂ ಖುಷಿಯಿಂದ ಹಂಚಿಕೊಳ್ಳುತ್ತಿದ್ದ. ಜೊತೆಗೆ ತಾಯಿ ಸೋಮುವಿನ ಬಗ್ಗೆ ಕೇಳಿದಾಗ "ಅವನ ಬಗ್ಗೆ ಏನು ಹೇಳುವುದು , ಸ್ವಲ್ಪವೂ ಬದಲಾವಣೆ ಇಲ್ಲಮ್ಮ." ಎಂದು ಸುಮ್ಮನಾಗುತ್ತಿದ್ದ. ಇದರ ಮಧ್ಯೆ ಸೋಮು ಪ್ರಶ್ನೆ ಪತ್ರಿಕೆ ಕದ್ದನೆಂದು ಕಾಲೇಜಿನಿಂದ ಹೊರಹಾಕಿದರು. ಹೆತ್ತವರ ಕನಸು ನೀರಿನಲ್ಲಿ ಹೋಮ ಮಾಡಿದಂತಾಯಿತು. ಹೇಗೋ ಕಾಲೇಜಿನಲ್ಲಿ ಬೇಡಿಕೊಂಡು ಕೊನೆಯ ಸೆಮಿಸ್ಟರ್ ಪರೀಕ್ಷೆಗೆ ಕುಳಿತುಕೊಳ್ಳಲು ಅವಕಾಶ ಕಲ್ಪಿಸಿಕೊಟ್ಟರು. ಸ್ವಲ್ಪ ಬುದ್ಧಿ ಬಂದ ಸೋಮುವಿಗೆ , ಬಾಲ್ಯದ ಗೆಳೆದ ರಾಮುವಿನ ನೆನಪಾಯಿತು. ಅವನ ಸಹಾಯ ಪಡೆದಾದರೂ ಓದಿ ಪಾಸಾಗಬೇಕು ಎಂದ ಪಣತೊಟ್ಟ. ರಾಮುವು ಪಕ್ಕದ ಕೋಣೆಯಲ್ಲಿ ಓದುತ್ತಿದ್ದವನನ್ನು ಮಾತನಾಡಲು ಕರೆದ. "ನನ್ನೆಲ್ಲ ತಪ್ಪಿನ ಅರಿವಾಗಿದೆ. ನಿನ್ನ ಮನಸಿಗೂ ನೋವುಂಟು ಮಾಡಿದ್ದೆ. ನನ್ನನ್ನು ಕ್ಷಮಿಸಿ ಬಿಡು " ಎಂದು ಬೇಡಿಕೊಂಡ. ಅವನು ಮನಕರಗಿ ಕ್ಷಮಿಸಿ ಓದಲು ಸಹಾಯ ಮಾಡಿದ. ಹಗಲು ರಾತ್ರಿ ಎನ್ನದೇ ಇಬ್ಬರೂ ಕಷ್ಟಪಟ್ಟು ಓದಿದರು. ಬಾಲ್ಯದ ನೆನಪುಗಳನ್ನೆಲ್ಲ ಮೆಲುಕು ಹಾಕುತ್ತಾ ಖುಷಿಖುಷಿಯಾಗಿ ಓದುತ್ತಿದ್ದರು. ಅವನ ಈ ಬದಲಾವಣೆಯನ್ನು ತರಗತಿಯ ಅಧ್ಯಾಪಕರು ನೋಡಿ ಸಂತೋಷ ಪಟ್ಟರು.
*
ಕೊನೆಗೂ ಸತ್ವಪರೀಕ್ಷೆಯ ದಿನ ಹತ್ತಿರ ಬಂದಿತು. ಎಲ್ಲರೂ ಪರೀಕ್ಷಾ ಹಾಲಿನಲ್ಲಿ ಗಂಭೀರವಾಗಿ ಕುಳಿತಿದ್ದರು. ಅದೆಷ್ಟೋ ಪರೀಕ್ಷೆಗಳ ಬರಿಯದೇ ತೇಲಿಸಿಬಿಟ್ಟಿದ್ದ ಸೋಮುವಿಗೆ ಒಮ್ಮೆ ಕಣ್ಣು ತೇವಗೊಂಡಿತು. ಪ್ರಶ್ನೆ ಪತ್ರಿಕೆಯ ಪಡೆದ ಸೋಮು ಗೊತ್ತಿದ್ದ ಪ್ರಶ್ನೆಗಳಿಗೆಲ್ಲ ಉತ್ತರಿಸಿ ಹಾಲಿನಿಂದ ಹೊರನಡೆದ. ರಾಮುವೂ ಎಲ್ಲವೂ ಸುಲಭವಾಗಿರುವ ಪ್ರಶ್ನೆಗಳ ಬಂದಿದ್ದವು ಎಂದು ಖುಷಿಯಿಂದ ಪರೀಕ್ಷೆ ಬರೆದು ಹೊರನಡೆದ.
*
ತಿಂಗಳುಗಳು ಉರುಳಿದವು. ಫಲಿತಾಂಶಕ್ಕಾಗಿ ಎಲ್ಲರೂ ಕಾಯುತ್ತಿದ್ದರು. ಸೋಮುವಿಗೆ ಫಲಿತಾಂಶ ನೋಡುವ ಧೈರ್ಯವಿರಲಿಲ್ಲ. ಪಾಸಾಗುತ್ತೇನೋ ಇಲ್ಲವೋ ಎಂಬ ಭಯಕಾಡುತ್ತಿತ್ತು.. ಆದರೆ ರಾಮು ಮತ್ತು ಸೋಮು ಎಲ್ಲದರಲ್ಲೂ ಪಾಸಾಗಿದ್ದರು. ಅದಕ್ಕೇ ಹೇಳುವುದು ಪ್ರಯತ್ನ ನಮ್ಮದು ಫಲ ದೇವರಿಗೆ ಬಿಟ್ಟಿದ್ದು ಎಂದು.

- ಸಿಂಧುಭಾರ್ಗವ್ .

ಕವನ- ನಾಲ್ಕು ದಿನದ ಬಾಳಿಗೆ




ನಾಲ್ಕು ದಿನದ ಬಾಳಿಗೆ
ಎಲ್ಲವೂ ಬೇಕು, ಬೇಡವೆಂದವರಾರು?!?

ಎಲ್ಲರೂ ನಮ್ಮವರೇ ಎಂದು
ಬದುಕುವವರ್ಯಾರು?!

ಬಣ್ಣಬಣ್ಣದ ಮುಖವಾಡ
ನೋಡಲು ಅಂದವೇ..

ಆನಂದಕ್ಕಲ್ಲ ,ಕೊಳ್ಳುವ ಹಾಗಿಲ್ಲ,

ಕಳಚಿ ಬೀಳಲಿ ಎಂದು
ಶಪಿಸುವ ಮನಸ್ಸಿಲ್ಲ..

ಆರು-ಮೂರು ಮಾತ್ರ ನಮ್ಮದು
ಕರಗಿಸುವ ಹುಳುವಿಗೂ ಬೇಡವಾದೆವು..

ಹೀನಾಯ ಬದುಕಿದು, ಹೊರಬನ್ನಿ ಗೆಳೆಯರೇ..

ಗೋರಿಯ ಮೇಲೊಂದು ಹೂವು ಅರಳಲಿ ..
ಜೀವಿತದ ಕಾಲದಲ್ಲಾದರೂ ಪ್ರೀತಿ ಇರಲಿ..

- ಸಿಂಧುಭಾರ್ಗವ್ 🌸

ಕವನ- ಯಾರಿಗೆ ಗೊತ್ತಿತ್ತು...





ಕವನ- ಯಾರಿಗೆ ಗೊತ್ತಿತ್ತು.!

ಕರುಳಬಳ್ಳಿಯ ಕಡಿದುಹಾಕಿ
ಹೊರಗೆ ಬಂದೆ..
ಮಮಕಾರ ಕಾಲಿಗೆ ಸುತ್ತುತ್ತದೆ ಎಂದು
ಯಾರಿಗೆ ಗೊತ್ತಿತ್ತು?!?

ಸಹೋದರ ಸಂಬಂಧವನ್ನು
ಬಾಲ್ಯದಲಿ ಸಂಭ್ರಮಿಸಿದೆ,
ದಾಯಾದಿ ಮತ್ಸರ ಬರುವುದೆಂದು
ಯಾರಿಗೆ ಗೊತ್ತಿತ್ತು..?!

ಗೆಳೆಯರ ಬಳಗಕೆ
ಮೊದಲಿಗಳಂತೆ ಮಿಂಚುತ್ತಿದ್ದೆ..
ಬೆನ್ನಿಗೇ ಚೂರಿಹಾಕುವರೆಂದು
ಯಾರಿಗೆ ಗೊತ್ತಿತ್ತು.!?

ಕನಸುಗಳ ಹನಿಗಳನ್ನು
ಒಂದೊಂದಾಗಿ ಶೇಕರಿಸಿದ್ದೆ..
ಘನೀಕರಿಸಿ ಘಾಸಿಮಾಡುತ್ತದೆ ಎಂದು
ಯಾರಿಗೆ ಗೊತ್ತಿತ್ತು..?!

ಕಣ್ಣು ಮುಚ್ಚಿದ ಮೇಲೆ
ಹೆಗಲು ಕೊಡಲು ನಾಲ್ವರು
ನನ್ನವರೇ ಅವರೆಂದು
ನೋಡಲು ಕಣ್ಣೆಲ್ಲಿತ್ತು..?!

~~
- ಸಿಂಧುಭಾರ್ಗವ್ .

ಕವಿತೆ: ಪಿತೃ ದೇವೋ ಭವ

ಕವಿತೆ: ಪಿತೃ ದೇವೋ ಭವ


@()@


@()@



ಮಗುವಾಗಿದೆಯಲ್ಲಪ್ಪ ನಿನ್ನ ಮನಸ್ಸೀಗ.
ನಾನೂ ಮಗುವೇ ಇನ್ನೂ ನಿನಗೀಗ..

ನನ್ನ ಕಣ್ಣಲ್ಲಿ ಕಣ್ಣೀರ ನೋಡಲು ಬಯಸದವ ನೀನು.
ನಿನ್ನ ಪ್ರೀತಿಯ ತೋರಿಸಲು ಹೆಣಗಾಡಿದವ ನೀನು..

ಅಷ್ಟು ದಡ್ಡಿನಾನಲ್ಲಪ್ಪ..
ನನ್ನ ಉಸಿರಿನಲಿ ನಿನ್ನ ಪಾಲಿದೆ,
ನಿನ್ನ ರಕುತವೇ ನನ್ನಲ್ಲೂ ಹರಿಯುತಿದೆ..

ಕೆಟ್ಟ ದುನಿಯಾವಿದು ಅಪ್ಪ,
ನೀ ಗಿಣಿಯಂತೆ ಸಾಕಿದ್ದೆ..
ನಾ ಹಾರಾಡಲು ಬಯಸಿದ್ದೆ..
ಕಷ್ಟ ಕಂಡೆ, ನೋವನುಂಡೆ
ನಿನ್ನಲ್ಲಿ ಹೇಳಲು ಭಯಗೊಂಡೆ..

ನಿನ್ನ ಮಾನ, ಸಮ್ಮಾನ ನನ್ನ ಕೈಯಲ್ಲಿದೆ ಅಪ್ಪ..
ಮದುವೆ ಆಯ್ತು ಹೊಸದಾದ ಮನೆಯ ದೀಪಬೆಳಗಿದೆ..

ನಾವು ಹುಟ್ಟಿದಾಗ ನಿನಗೆ ಜವಾಬ್ದಾರಿ ಜಾಸ್ತಿ ಇತ್ತು ,
ಹಗಲು ರಾತ್ರಿಯ ಲೆಕ್ಕ ತಪ್ಪುತಿತ್ತು.

ಕಂದಮ್ಮಗಳ  ದಿನಕ್ಕೆ ಒಮ್ಮೆ  ನೋಡುವುದೂ ಕಷ್ಟವಾಗುತ್ತಿತ್ತು.
ಒಳಗೊಳಗೆ ಅಳುತಲಿದ್ದ ಆ ಮೊಗವೀಗ ಕಣ್ಣೆದುರು ಬಂತು..

ಅರಿಯುವೆನು ಪಿತನೇ..
ನಿನ್ನ ಪ್ರೀತಿಯ ನಿನ್ನ ಕಂಗಳಲ್ಲೇ ನಾ ನೋಡಿದ್ದೆ..
ನಿನ್ನ ಕಾಳಜಿಯನ್ನು ತಾಯಿಯಲ್ಲಿ ನೋಡಿದ್ದೆ..

ನನಗೂ ನೂರಾರು ಕನಸುಗಳ ಕಟ್ಟಿಕೊಳ್ಳಲು ಹಾದಿತೋರಿಸಿದೆ.
ಇಳಿವಯಸ್ಸು ,ಮಗುವಿನ ಮನಸ್ಸು
ವಿಶ್ರಾಂತಿ ಬೇಕಪ್ಪಾ..

ಸ್ವಲ್ಪ ಬಾ ಇಲ್ಲಿ ಕುಳಿತುಕೋ..
ನನ್ನ ಮಗನ ಜೊತೆ ಹರಟೆ ಹೊಡಿ ಆಟವಾಡು ಮತ್ತೆ ಮಗುವಾಗು..
ಮುಸ್ಸಂಜೆ ಹೊಂಗಿರಣ ಮನಕ್ಕಿಳಿದಿದೆ ತಾನೆ..

ಅಷ್ಟೇ ಸಾಕು..
ಇನ್ನೇನು ನಾನಿನಗೆ ಕೊಡಲು ಸಾಧ್ಯ..
ನಿನ್ನ ನೆಮ್ಮದಿಯ, ನಗುಮುಖ ನೋಡುವುದೇ ನನ್ನ ಭಾಗ್ಯ..

- ಸಿಂಧು ಭಾರ್ಗವ್.

ಕಥೆ ನಮ್ಮ ಗೌರಿ

ಕಥೆ: ನಮ್ಮ ಗೌರಿ
~~~~~~~~~

ಮುಂಜಾನೆ ಆರಾಯಿತು. ಬೆಳ್ಳಂಬೆಳಿಗ್ಗೆ ಗೌರಿಗೆ ಹೆರಿಗೆ ನೋವು ಬಂದಿದೆ. ಎರಡು ಹೆಜ್ಜೆ ಮುಂದೆ ಎರಡು ಹೆಜ್ಜೆ ಹಿಂದೆ ಇಡುತ್ತಿದ್ದಾಳೆ. ಅಸಾಧಾರಣ ನೋವು ಒಮ್ಮೆ ಕಾಣಿಸಿಕೊಂಡು ಮತ್ತೆ ಸಮಸ್ಥಿತಿಗೆ ಬಂದು ಬಿಡುತ್ತದೆ. ಅಮ್ಮನೋ ಕೊಟ್ಟಿಗೆಯಿಂದ ಕದಲುತ್ತಿಲ್ಲ. ಒಮ್ಮೆ ಕಿವಿ ಸವರುತ್ತಾ, ಒಮ್ಮೆ ತಲೆ ಸವರುತ್ತಾ, ಬೆನ್ನಿಗೆ ನೀರು ಹಾಕುತ್ತಾ ನಾನು ನಿನ್ನ ಜೊತೆಗೆ ಇದ್ದೇನೆ ಎನ್ನುವ ಧೈರ್ಯ ತುಂಬುತ್ತಿದ್ದಾಳೆ. ಉ.ಹುಂ..!! ಇಲ್ಲ ಮಧ್ಯಾಹ್ನವಾದರೂ ಕರು ಹಾಕುವ ಲಕ್ಷಣ ಕಾಣಿಸುತ್ತಿಲ್ಲ. ಆಗಾಗೇ ಹೊಟ್ಟೆನೋವು ಬಂದುಹೋಗುತ್ತಿದೆ ಅಷ್ಟೆ. ನಾವು ಕರು ಹೊರಬರಬಹುದಾ? ಗಿಣ್ಣು ಹಾಲು ಸವಿಯಲು ಕಾತುರರಾಗಿದ್ದೆವು.
 *
ಅಮ್ಮನಿಗೆ ಊಟಕ್ಕೆ ಹೋಗಲೂ ಮನಸ್ಸಿಲ್ಲ. ಗಂಟಲಿಗೆ ನೀರು ಇಳಿಯುತ್ತಿಲ್ಲ. ಅಲ್ಲೆ ಕಂಬದ ಹತ್ತಿರ ಕುಳಿತವಳಿಗೆ ಮೊದಲ ಮಗಳು ಹೆರಿಗೆಗೆಂದು ತವರು ಮನೆಗೆ ಬಂದ ನೆನಪಾಗುತ್ತದೆ. ಅವಳದೂ ಈ ಗೌರಿಯ ಹಾಗೆ, ಹೆರಿಗೆ ದಿನ ಬಂದರೂ ನೋವು ಕಾಣಿಸಿಕೊಂಡಿರಲಿಲ್ಲ. ಆಸ್ಪತ್ರೆಗೆ ಸೇರಿಸಿ ನೋವು ಬರುವ ಹಾಗೆ ಮಾಡಿದರೂ ಏನೂ ಪ್ರಯೋಜನವಿಲ್ಲ. ಆಗಾಗ್ಗೆ ನೋವು ಬಂದು ಪ್ರಾಣ ಹಿಂಡಿತೇ ಹೊರತು ಮಗುವಿನ ತಲೆನೋಡುವ ಸುಳಿವಿಲ್ಲ. "ಇನ್ನೇನು ಕಾಯುವುದು? ಆಪರೇಶನ್ ಮಾಡಿಸುವ.." ಎಂದು ಡಾಕ್ಟರಮ್ಮ ಹೇಳಿ ಸಹಿ ತೆಗೆದುಕೊಂಡಿದ್ದರಷ್ಟೆ.. ಹೆರಿಗೆ ಆಗಿಹೋಗಿತ್ತು. ನರ್ಸ್ ಕೋಣೆಯಿಂದ  ಡಾಕ್ಟರಮ್ಮನ ಕೂಗಿ ಕರೆದಳು. "ಗಂಡುಮಗು ಕಣಮ್ಮ.. ನೀವು ಅಜ್ಜಿ ಆಗಿದ್ದೀರಿ. ತಾಯಿಮಗು ಆರೋಗ್ಯದಿಂದ ಇದ್ದಾರೆ, ಇನ್ನೇನು ಸಮಸ್ಯೆ ಇಲ್ಲ. ತೂಕವೂ ಸರಿಯಾಗಿದೆ. ಹಾಲು ಕುಡಿಸಲು ಹೇಳಿ. ನಿಮಗೆ ಶುಭವಾಗಲಿ". ಎಂದು ನಗುನಗುತ್ತಾ ಹೊರನಡೆದರು.
ಗೌರಿಯೂ ಹಾಗೆ ನಮ್ಮ ಮನೆಯಲ್ಲೇ ಹುಟ್ಟಿ ಬೆಳದವಳು. ಮುದ್ದಿನಿಂದ ಸಾಕಿದ್ದಾರೆ ನಮ್ಮ ತಂದೆತಾಯಿ. ಅದರ ಓಡಾಟ, ಹುಲ್ಲುತಿನ್ನುವ ರೀತಿ ಕಂಡು ಖುಷಿಯಾಗುತ್ತಿತ್ತು... ಅದನ್ನೆಲ್ಲ ನೆನಪಿಸುತ್ತ ಕಂಬಕ್ಕೆ ತಲೆ ಕೊಟ್ಟು ಕುಳಿತಿರುವಾಗಲೇ ಗೌರಿ ಕರುಹಾಕಿಯೇ ಬಿಟ್ಟಳು. ಹೌದು  ಗೌರಿಗೆ ಹೆಣ್ಣುಕರುವಾಗಿತ್ತು. ಅವಳೋ ತನ್ನ ಕಂದಮ್ಮನನ್ನು ನೋಡಲು ಆತುರಪಡುತ್ತಿದ್ದಳು. ಅಮ್ಮ ಮುಖಮೈಯನ್ನೆಲ್ಲಾ ತೊಳೆದು , ಕಾಲಿನ ಉಗುರು ತೆಗೆದು, ನಿಲ್ಲಿಸಲು ಪ್ರಯತ್ನಿಸಿದರು. ಅಂತೂ ಕರು ನಿಂತಿತು. "ಅಂಬಾ..." ಎಂದು ಜೋರಾಗಿ‌ ಕೂಗಿತು. ಅದೆಷ್ಟು ಸೋಜಿಗ ಅಲ್ಲವೇ.. "ಅಮ್ಮ" ಎಂಬ ಎರಡಕ್ಷರ.. ಹಾಲು ಕುಡಿಸಲು ಕರುವನ್ನು ಅದರ ತಾಯಿಯ ಹತ್ತಿರ ಕರೆದುಕೊಂಡು ಹೋಗಲು ನನ್ನಮ್ಮ ಮುಂದಾದರು. ನಮ್ಮ ಅಮ್ಮ "ಕರು ಬಂತು ನೋಡಿಬನ್ನಿ" ಎಂದು ಕೂಗಿ ಕರೆದರು.. ನಮೆಗೆಲ್ಲ ಖುಷಿಯೋ ಖುಷಿ. ಕರುವಿಗೆ ಬೇಕಾದಷ್ಟು ಹಾಲು ಕುಡಿಸಿದ ಮೇಲೆ ಉಳಿದ ಹಾಲಿನಿಂದ ಗಿಣ್ಣು ಮಾಡಬಹುದಲ್ಲ ಅದಕ್ಕೆ.
*
ಹೌದು ಹಸು/ದನ/ ಗೋವು ನಮಗೆ ಅಂದರೆ ಕರಾವಳಿ ತೀರದಲ್ಲಿ ಜೀವನ ನಡೆಸುವವರಿಗೆ ಮನೆ ಮಗಳಿದ್ದಂತೆ. ಅದನ್ನು ಸಾಕಿ ಸಲಹುವುದು ಒಂದು ಕರ್ತವ್ಯವೆಂದು ನಾವು ಎಂದಿಗೂ ಎನಿಸಿದವರಲ್ಲ. ಅದರಿಂದ ಏನು ಲಾಭ ಬರುತ್ತದೆ ಎಂದು ಸಾಕುವುದಿಲ್ಲ. ಹೆಚ್ಚಾಗಿ ಮನೆಮಗಳಂತೆ ಪ್ರೀತಿಯಿಂದ ಸಾಕಿ ಸಲಹುತ್ತೇವೆ. ಅದರ ಎಲ್ಲಾ ಕೆಲಸಗಳನ್ನು ಸೇವೆ ಎಂಬಂತೆ ಮಾಡುತ್ತೇವೆ. ಗೋವು ಮತ್ತು ನಾಗರಹಾವು ನಮಗೆ ಕಣ್ಣಿಗೆ ಕಾಣುವ ದೇವರು..‌ ಕರಾವಳಿಯಲ್ಲಂತೂ ಪೂಜೆ ಮಾಡಿ ಧನ್ಯರಾಗುತ್ತೇವೆ. ಅಲ್ಲದೇ ಹುಟ್ಟಿದ ಮಗುವಿಂದ ಹಿಡಿದು ಮರಣ ಹೊಂದುವವರೆಗೂ ಒಂದಲ್ಲ ಒಂದು ರೀತಿಯಲ್ಲಿ ಗೋವಿನ ಹಾಲು, ಅಥವಾ ಹಾಲಿನ ಉತ್ಪನ್ನಗಳನ್ನು ಜನರು ಸೇವಿಸದೇ ಇರಲಾರರು. ಗೋಹತ್ಯೆಗೆ " ಇತಿಃಶ್ರೀ " ಹಾಡಲೇ ಬೇಕು. ಗೋವುಗಳನ್ನು ರಕ್ಷಿಸಬೇಕು. ಅವು ರೈತರ ಮಿತ್ರನಂತೆ. ಕೃಷಿಕರಿಂದಲೇ, ಅವರು ಬೆಳೆವ ಬೆಳೆಯಿಂದಲೇ ತಾನೆ ನಾವೆಲ್ಲ ಊಟಮಾಡುತ್ತಿರುವುದು. ಅಂದಮೇಲೆ ಅವರ ಜೊತೆಗಿರುವ ಆ ಮೂಖಪ್ರಾಣಿಯ ಮೇಲೆ ಯಾಕಷ್ಟು ಕ್ರೂರವಾಗಿ ವರ್ತಿಸುತ್ತಾರೆ.. ಇನ್ನಾದರೂ ನಿಲ್ಲಲಿ..

- ಸಿಂಧುಭಾರ್ಗವ್. 

ಕವನ- ಪ್ರೀತಿಯ ವೃತ್ತ..

ನಿನ್ನ ಸ್ನೇಹವೀಗ ನನ್ನ
ಕಂಗಳಲಿ ತುಂಬಿದೆ..

ಕಂಗಳಲಿ ಇರುವ ಪ್ರೀತಿಯ
ಮೌನದಲಿ ಹುಡುಕಿದೆ..

ಮೌನದಲಿ ಬೆರೆತ ಪ್ರೀತಿಯ ಅಪ್ಪುಗೆಯಲಿ ಹುಡುಕಿದೆ..

ನಿನ್ನೊಂದು ಅಪ್ಪುಗೆಯಲ್ಲಿ
ನಾ ಕರಗಿ ನೀರಾಗಿ ಹೋದೆ..

ನೀರಾಗಿ ಹರಿವ ನನ್ನ ,
 ಬೊಗಸೆಯಲ್ಲಿ ನೀ ಹಿಡಿದೆ..

ಬೊಸಗೆ ಪ್ರೀತಿಯನ್ನು ನೀನು ಕಣ್ಣಿಗೊತ್ತಿಕೊಂಡೆ..

- ಸಿಂಧುಭಾರ್ಗವ್ 🌷

ಆಟೋ ಹಿಂದಿನ ಸಾಲುಗಳು ಭಾಗ೦೫

ಆಟೋ ಹಿಂದಿನ ಸಾಲು :
"ಜವಾಬ್ದಾರಿಯ ಉಡುಗೊರೆ"ಯನ್ನು ದೇವರು ಪ್ರತಿಯೊಬ್ಬರಿಗೂ ನೀಡುತ್ತಾನೆ. ನಾವು ಹೇಗೆ ನಿಭಾಯಿಸಿಕೊಂಡು ಹೋಗುತ್ತೇವೆ ಅನ್ನುವುದರ ಮೂಲಕ "ನಮ್ಮ ಜೀವನ" ನಿಂತಿರುತ್ತದೆ..
-ಸಿಂಧು🌷

ಆಟೋ ಹಿಂದಿನ ಸಾಲು :
ಪೂರ್ವಾಗ್ರಹ ಪೀಡಿತರಂತೆ ವರ್ತಿಸುವುದು ತಪ್ಪು.. ಅಷ್ಟಲ್ಲದೇ ತಮ್ಮ ನಿಲುವನ್ನು ಇನ್ನೊಬ್ಬರ ಮೇಲೆ ಹೇರುವಂತಹುದು ಶುದ್ಧತಪ್ಪು..

ಆಟೋ ಹಿಂದಿನ ಸಾಲು :
ನಿಮಗೆ ಒಳ್ಳೆಯ ಗುಣವಿದ್ದರೆ ಹಾಗೆ ಜೀವಿಸಿ ಬದಲಾಗಿ ಕಂಡ ಕಂಡಲ್ಲಿ ಪ್ರದರ್ಶಿಸುವ ಅಗತ್ಯವಿಲ್ಲ.

ಆಟೋ ಹಿಂದಿನ ಸಾಲು :
ಆಕಾರವಿಲ್ಲದ ಆತ್ಮಕ್ಕೆ ಮುಖವಾಡ ತಯಾರಿಸಲು ಹೊರಟಿದ್ದಾರೆ..

ಕವಿತೆ- ಆತ್ಮಜ್ಯೋತಿ ಇದು ದೀಪಾವಳಿಯ ಶುಭಾಶಯಗಳು



ಆತ್ಮಜ್ಯೋತಿ ಇದು,
ದ್ವೇಷ ಅಸೂಯೆ ಕ್ರೌರ್ಯವ
 ತೋರಿದರೆ ಆರುವುದು..!!

ಆತ್ಮಜ್ಯೋತಿ‌ ಇದು,
ಸ್ನೇಹ ಪ್ರೀತಿ‌‌ ಸೌಹಾರ್ಧತೆಯಲಿ ಬೆಳಗುವುದು..!!

ಆತ್ಮಜ್ಯೋತಿ ಇದು 
ದಿನವೂ ಚೈತನ್ಯವಿರಲಿ,
ಅರಳಿದ ಹೂವೊಂದು
ವದನದಲಿ ನಗುತಿರಲಿ..!!

ಆತ್ಮಜ್ಯೋತಿ ಇದು
ನಾಳೆ ಹಾರಿಹೋಗುವುದು,
ಬರಿದೇ ಹಣತೆಯಲ್ಲಿ 
ತೈಲ ಹಿಡಿದು ನಿಲ್ಲುವುದು..!!

ಆತ್ಮಜ್ಯೋತಿ ಇದು 
ಎನಿಸಿದಷ್ಟು ಸುಲಭವಲ್ಲ,
ಪ್ರೀತಿಯಿದ್ದರೇ ಮಾತ್ರ 
ಬೆಳಗುವುದು ,ಸುಳ್ಳಲ್ಲ..!!

ಭಯ,ಭಕ್ತಿ,ಶೃದ್ಧೆ ಜೊತೆಗೆ 
ದಿನವು ನಮಿಸಿ ದೇವನ..
ಸತ್ಯ ,ನ್ಯಾಯ, ಧರ್ಮದಲ್ಲಿ 
ನಡೆಸಿ ನಿಮ್ಮ ಜೀವನ..!!

- ಸಿಂಧುಭಾರ್ಗವ್ 🌷




ಕವನ- ಮರೆತಂತೆ ನಟಿಸುವುದು




ನಿನ್ನ ಕಂಡಾಗೆಲ್ಲ ನೆನಪು ಮತ್ತೆ ಕಾಡುವುದು..
ದಿನವ ದೂಡಬೇಕಲ್ಲ ಮರೆತಂತೆ ನಟಿಸುವುದು..

ಮಾತು ಮೂಕವಾಗಿದೆ..
ಕಣ್ಣಸನ್ನೆ ಮರೆತ ಹಾಗಿದೆ..
ನೋಟ ಬೇರೆಯಾಗಿದೆ..
ಹಾಡು ಹುಟ್ಟಿಕೊಂಡಿದೆ..

ಕಣ್ಣಹನಿಯೂ ಸದ್ದಿಲ್ಲದೇ ಉರುಳುತಿದೆ..
ಎದೆಬಡಿತವು ಬಿಡದೇ ಬಡಿಯುತಿದೆ..

ವಿರಹದ ಗೀತೆ ಮೂಡಿದೆ..
ಮನವು ಮೌನವಾಗಿದೆ..
ಪದಗಳ ಉಸಿರು ನಿಂತಿದೆ..
ಕಲಮ ಕೈಯಿಂದ ಜಾರಿದೆ..

ನೀನು ಬಂದು ಗೋರಿ ಮೇಲೆ ಹೂವು ಇಡಬೇಕಿದೆ..
ತಂಪು ಕಂಗಳಿಂದ ಅದನು‌ ನಾನು ನೋಡಬೇಕಿದೆ..

- ಸಿಂಧುಭಾರ್ಗವ್. ಬೆಂಗಳೂರು

ಚರ್ಚೆ -ಯುವ ಲೇಖಕರಲ್ಲಿ ಭಾಷಾಶುದ್ಧತೆ ಕಡಿಮೆಯಾಗಿತ್ತಿದೆಯೇ

ವಿಷಯ: ಕನ್ನಡ ಯುವ ಲೇಖಕರಲ್ಲಿ ಭಾಷಾಶುದ್ಧತೆ ಮತ್ತು ಕನ್ನಡ ಪದಬಳಕೆ ಕಡಿಮೆಯಾಗುತ್ತಿದೆಯೇ..?

ಹೌದು ಎನ್ನಬಹುದು.ಇತ್ತೀಚೆಗೆ ಬರೆಯುವವರ ಸಂಖ್ಯೆಯು ಹೆಚ್ಚಿದೆ. ಹಾಗೆಯೇ  ಆಂಗ್ಲಪದಗಳ ಬಳಕೆ ಅಲ್ಲಲ್ಲಿ ಕಾಣಸಿಗುತ್ತದೆ. ಪತ್ರಿಕೆಗಳಲ್ಲಿ ಪ್ರಕಟವಾಗುವ ಲೇಖನಗಳಲ್ಲಿಯೂ ಸಹ ಅಂತಹ ಬದಲಾವಣೆಗಳನ್ನು ನಾವು ಕಾಣಬಹುದಾಗಿದೆ.‌ಇದಕ್ಕೆ ವಿರೋಧ ವ್ಯಕ್ತಪಡಿಸುವವರು ಯಾರೂ ಇಲ್ಲ. ವಿರೋಧಿಸಿದರೂ ಲೇಖಕರು ತಮ್ಮನ್ನು ತಾವು ಸಮರ್ಥಿಸಿಕೊಳ್ಳುತ್ತಾರೆ.. ವಾರ್ತೆ ಓದುವವರೂ ಕೂಡ ಅದೆಷ್ಟೋ ಆಂಗ್ಲಪದಬಳಕೆ ಮಾಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಅದು ಈಗೀಗ ಸಾಮಾನ್ಯ ಎಂಬಂತೆ ಎಲ್ಲರೂ ಹೊಂದಿಕೊಂಡು ಹೋಗುತ್ತಿದ್ದಾರೆ. ಆದರೂ ಶುದ್ಧವಾಗಿ‌ ಒಂದು ಚೌಕಟ್ಟಿನ ಒಳಗೆ ಬರೆಯಬೇಕೆಂದರೆ ನಿಯಮಗಳನ್ನು ಅನುಸರಿಸಲೇ ಬೇಕು ತಾನೆ.? ಆದರೆ ಯಾರೂ ಅದನ್ನು ಗಂಭಿರವಾಗಿ ತೆಗೆದುಕೊಳ್ಳುತ್ತಿಲ್ಲ. ಮುಖಪುಸ್ತಕವೆಂಬ ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣಕ್ಷಣಕ್ಕೂ ತಮ್ಮ ಆಲೋಚನಾ ಲಹರಿಗಳನ್ನು ಹರಿಯಬಿಡುವಾಗ ಅದು ಸರಿಯೋ ತಪ್ಪೋ ಎಂದು ಯಾರೂ ಗಮನಿಸುವುದಿಲ್ಲ. ಕೆಲವು ಹಿರಿಯರೂ ತಿದ್ದಿ ಹೇಳುವ ಪ್ರಯತ್ನ ಮಾಡಿದರೂ ಬೆಲೆಕೊಡುವುದಿಲ್ಲ.. ನನಗನ್ನಿಸುವುದು ಅಂತಹ  ಬರಹಗಾರರಿಗೆ ಸಾಹಿತ್ಯಲೋಕದಲ್ಲಿ ಶಾಶ್ವತವಾಗಿ ನೆಲೆನಿಲ್ಲುವ ಆಸೆಯಿರುವುದಿಲ್ಲ. ಇಲ್ಲಿ ಏನಾದರೂ ಸಾಧನೆ ಮಾಡಬೇಕು ಎಂದರೆ ಆಳವಾದ ಅಧ್ಯಯನ ಮಾಡಿರಬೇಕು. ಹೊಸಹೊಸ ವಿಷಯಗಳನ್ನು ತಿಳಿದುಕೊಳ್ಳಬೇಕು
 ಅಗತ್ಯವೆನಿಸಿದ ಕಡೆಗಳಲ್ಲಿ ಆಂಗ್ಲಪದಗಳನ್ನು ಉಪಯೋಗಿಸಬಹುದು. ಇನ್ನೂ ಒಂದು ಮಗ್ಗುಲಿನಲ್ಲಿ ಯೋಚಿಸುವುದಾದರೆ ಯುವ ಬರಹಗಾರರು ಹೊಸತನವನ್ನು ಪರಿಚಯಿಸುತ್ತಾ ಇರಬಹುದಾ?! ಎಲ್ಲರಿಗೂ ಅರ್ಥವಾಗುವ ಹಾಗೆ ಕನ್ನಡ-ಆಂಗ್ಲಪದಗಳ ಬಳಕೆ ಮಾಡಿ ಲೇಖನಗಳನ್ನು ಬರೆಯುತ್ತಿರಬಹುದಾ?! ಯಾವುದು ಸರಿ ಯಾವುದು ತಪ್ಪು ಇನ್ನೂ ಗೊಂದಲವೇ..

- ಸಿಂಧುಭಾರ್ಗವ್. 

ಹಾಡು- ಮರೆತುಬಿಡಲೇನೊ ನಿನ್ನ




ಮರೆತುಬಿಡಲೇನೋ ನನ್ನ
ಸನಿಹದಲೇ ಕುಳಿತು ನಿನ್ನ..
ಮೈಮರೆತುಬಿಡಲೇನೋ
ನಿನ್ನ ಕಣ್ಗಳಲಿ ಬೆರೆತು ಚಿನ್ನ..
**
ಯಾವುದನ್ನು ಮುಚ್ಚಿಡಲಿ ಯಾವುದನ್ನು ಬಿಚ್ಚಿಡಲಿ
ನನ್ನ ಪ್ರೀತಿಯಂಗಳದಲ್ಲಿ...
ನಿನ್ನದೇ ಛಾಯೆ‌ ಮೂಡಿರುವುದು
ಈ ನನ್ನ ಕಂಗಳಲ್ಲಿ...
*
ನೀ ಸನಿಹವಿರುವೆ ಎಂಬ ನಂಬಿಕೆ ಎನಗೆ
ನೀ ದೂರಾದೂ ಚಿಂತಿಲ್ಲ ನೀನಿರುವೆ ನನ್ನೊಳಗೆ..
*
ಸಾಮಿಪ್ಯದ ನಲಿವು ಇಂದಿಲ್ಲ ಮನದಲ್ಲಿ
ನಿನ್ನ ವಿರಹದುರಿಯು ಸುಡುತಿಹುದು ತನುವಲ್ಲಿ..
*
ಜೀವವೇ ಬರುವುದು ನಿನ್ನೊಂದು ಮಾತಿಗೆ,
ಎನೆಂದು ಹೆಸರಿಡಲಿ ನವಿರಾದ ಭಾವಕೆ...
*
ಮಳೆಸುರಿಯುತಿದೆ ನಿನ್ನ‌ಪ್ರೀತಿ ಅತಿಯಾಗಿ
ಮನಕರಗುತಿದೆ ಈಗ ಮರುಳಾಗಿ...
*
ನೀನೇ ಬೇಕು ಎಂದು ಮನ ಹಟಹಿಡಿಯುವ ಮುನ್ನ
ಸೇರಿಬಿಡು ಒಮ್ಮೆ ನನ್ನ ತೋಳನ್ನ..
*
ಬೇರೇನೂ ಬೇಕಿಲ್ಲ ನಿನ್ನ ವಿನಃ
ಸಿಗದಿದ್ದರೆ ಹುಟ್ಟಿ ಬರಬೇಕು ಪುನಃ
***
ಮರೆತುಬಿಡಲೇನೋ ನನ್ನ
ಸನಿಹದಲೇ‌ ಕುಳಿತು  ನಿನ್ನ..

~ಸಿಂಧುಭಾರ್ಗವ್ . ಬೆಂಗಳೂರು

ಹಾಡು- ಪ್ರೇಮಿಗಳ ದಿನಕೆ ಕಾಯುತಿರುವೆನು




 ಹಾಡು.. ಪ್ರೇರಣೆ (ತಮಿಳ್ ಅಲ್ಬಮ್ ಸಾಂಗ್)

ಪ್ರೇಮಿಗಳ ದಿನಕೆ ಕಾಯುತಿರುವೆನು,
ಪ್ರೀತಿಯನ್ನು ಹಂಚಿಕೊಳ್ಳಲು..
ಪ್ರೇಮಿಗಳ ದಿನಕೆ ಕಾಯುತಿರುವೆನು,
ಬಂಧನವ ಬೆಸೆದುಕೊಳ್ಳಲು..

ನಿನ್ನೊಂದು ನಗುವಿಗಾಗಿ..
ನಿನ್ನ ಕನಸು ನನಸಿಗಾಗಿ..
ನಿನ್ನೊಂದು ಮುತ್ತಿಗಾಗಿ..
ನಿನ್ನ ಸವಿಯ ಮಾತಿಗಾಗಿ ..

ಪ್ರೇಮಿಗಳ ದಿನಕೆ ಕಾಯುತಿರುವೆನು,
ಪ್ರೀತಿಯನ್ನು ಹಂಚಿಕೊಳ್ಳಲು..
***
ಕನಸುಗಳ ಮೂಟೆಯನ್ನು
ನಿನ್ನೆದುರೆ ಇಳಿಸುವೆನ್.
ನೆನಪಿಸುತ ನನ್ನ ನೆರಳ
ಬಿಡಿಸಿ ನೀ ನೋಡುಬಾ...
ಮನವೇ ಓ ಮನವೇ.. ನನ್ನ ಪ್ರೀತಿ ಕಣ್ಣು ನೀ..

ನೀನು‌ ನನ್ನ ಜೊತೆಯಿಲ್ಲ,
ನಾನು ನಿನ್ನ ಜೊತೆಯಿಲ್ಲ
ಆ ಆಲಿಂಗನ ಸುಳ್ಳಲ್ಲ..

ಕಟ್ಡುಪಾಡುಗಳನ್ನೆಲ್ಲ
ಬಿಡಿಸಿಕೊಳ್ಳಬೇಕಲ್ಲ..
ಕೊನೆಯ ಆಸೆಯಲ್ಲ..

ಮನವೇ ಓ ಮನವೇ.... ನನ್ನ ಪ್ರೀತಿ ಕಣ್ಣು ನೀ..
**
ಪ್ರೇಮಿಗಳ ದಿನಕೆ ಕಾಯುತಿರುವೆನು,
ಪ್ರೀತಿಯನ್ನು ಹಂಚಿಕೊಳ್ಳಲು..
ಪ್ರೇಮಿಗಳ ದಿನಕೆ ಕಾಯುತಿರುವೆನು,
ಬಂಧನವ ಬೆಸೆದುಕೊಳ್ಳಲು..
.
.
 - ಸಿಂಧುಭಾರ್ಗವ್ .

ಕವನ- ಜೀವನದ ಸಂತೆಯಲಿ ತಿರುಗ ಹೊರಟಿರುವೆ

ಕವನ- ಜೀವನದ ಸಂತೆಯಲಿ ತಿರುಗ ಹೊರಟಿರುವೆ



ಜೀವನದ ಸಂತೆಯಲಿ ತಿರುಗ ಹೊರಟಿರುವೆ..
ನಿನ್ನೆ ಅಲ್ಲಿ ಇಂದು ಇಲ್ಲಿ ನಿಂತಿರುವೆ..!!

ಕನಸುಗಳನ್ನೆಲ್ಲ ಹರಡಿ ಕುಳಿತಿರುವೆ..
ಕೇಳಿದವರಿಗೆಲ್ಲ ಕತೆಯ ಹೇಳುತಿರುವೆ..!!

ಕೊಳ್ಳುವವರೋ ಮಾನ ಹರಾಜು ಹಾಕುವರೋ
ಅವರನೇ ನಂಬಿರುವೆ..
ಮೋಸಮಾಡುವರೋ ಪ್ರಿತಿನೀಡುವರೋ
ಒಂದು ಅರಿಯದಾದೆ..!!

ಮುಗ್ಧೆ ನಾನು ಮನಸ್ಸು ಮುದ್ದೆಯಂತೆ..
 ಕಣ್ಣೀರಿನಲ್ಲಿ ಅದ್ದಿ ತೆಗೆದ ಸ್ಪಾಂಜಿನಂತೆ..!!

ಮೆದು ಮಣ್ಣಿಗೆ ಅಂಟಿಕೊಳ್ಳುವ ಭಾವನೆಗಳು..
ಹಳಸದು ಹಳತಾದರೂ ಪಾಚಿಯಂತೆ..!!

ಮಳೆಗಾಲಕೆ ನಳನಳಿಸುವ ಲಿಲ್ಲಿಹೂವು..
ಬೇಸಿಗೆಗೆ ಬತ್ತಿ ಹೋಗುವ ಕೆರೆಯಂತೆ..!!

ಸಾಗುತಿದೆ ಬಾಳು ನದಿಯಂತೆ ಉದ್ದವಾಗಿ..
ಹರಡಿದೆ ಕನಸು ಬಾನಿನಂತೆ  ವಿಶಾಲವಾಗಿ..!!

ನಗುವು ಅಳುವು ಎಲ್ಲವೂ ಮಾಮೂಲಿ..
ನೆನಪುಗಳ ಮಳಿಗೆಯೊಂದಿದೆ ಜೀವನದ ಸಂತೆಯಲಿ..!!

~~~
-ಸಿಂಧುಭಾರ್ಗವ್ ಬೆಂಗಳೂರು.

ಕವಿತೆ - ವಲಸೆ ಬಂದ ಹಕ್ಕಿಗಳು

ಕವನ : "ವಲಸೆ ಬಂದ ಹಕ್ಕಿಗಳು"



ವಲಸೆ ಬಂದ ಹಕ್ಕಿ ನಾನು
ಗೂಡು ಸೇರಲು ಹುಡುಕಿದೆ..
ಅಲ್ಲಿ ಇಲ್ಲಿ ನಿಂತು
ಕೆಲಕಾಲ ದಣಿವ ಇಂಗಿಸಿದೆ..

ಇಲ್ಲಿ ಯಾರು ನನ್ನವರಲ್ಲ,
ಹೊಸ ಊರಿನಲಿ‌ ನನಗೊಂದು ಹೆಸರೂ ಇಲ್ಲ..
ಇಲ್ಲಿ ಯಾರ ಪರಿಚಯ ಇಲ್ಲ,
ನೀರು ಗಾಳಿಗೂ ನಾನು ಈಗ  ಹೊಸಬನಾದೆನಲ್ಲ..

ಕುರಿಯಂತೆ ಕೆಲವರಿಗೆ,
ಮುಸಿಕುಧಾರಿ ಎಂದೆನಿಸುವರು..
ನನ್ನ ನಿಲುವನ್ನು, ನನ್ನ ನೆಲೆಯನ್ನು
 ಗಟ್ಟಿ ಮಾಡಲು ನೋಡುವೆನು.

ಗೂಡು ಸಿಕ್ಕಿತು ಕೈಗೆ ಕೆಲಸವೂ,
ಬಳಗದವರಿಗೂ ನಾನು ಪರಿಚಿತ..
ಜೊತೆಗೆ ಊಟ, ಮಲಗಲು ಸ್ಮಶಾನ,
ಗಾಳಿ,ನೀರಿಗೂ ಇಲ್ಲಿ‌ ಪೈಸ ಕೊಡಬೇಕಣ್ಣ..

ನಮ್ ಊರಲಿ ಹೀಗಿಲ್ಲಣ್ಣ
ನಮ್ ಊರಲಿ ಹೀಗಿಲ್ಲಣ್ಣ..

ವಿಸ್ಮಯದ ಜಗತ್ತಿಗೆ ಪಾದಾರ್ಪಣೆ ಮಾಡಿದೆ..

ಜೀವನದ ಸಂತೆಯಲಿ ಕನಸಿನ ಚೀಲ ತುಂಬಿಸಲು,
ಬೆವರ ಸುರಿಸಿ ದುಡಿಯುವುದು.
ಕೈತುತ್ತು ನೀಡಿದಾಕೆಯ ಅಡಿಗಡಿಗೆ ನೆನಪಿಸುತ,
ಮರೆಯಲಿ ನಿಂತು ಅಳುವುದು..

ವಲಸೆ ಹಕ್ಕಿ ನಾನು ಇರಲೇ ಬೇಕು ತಿರುಗಿ ನೋಡದೇ..
ಉಸಿರು ಬಿಗಿಹಿಡಿದಾದರೂ ಬದುಕಬೇಕು ನಮ್ಮವರಿಗೆ..

~ಸಿಂಧುಭಾರ್ಗವ್ .ಬೆಂಗಳೂರು

ಕುಂದಾಪ್ರ ಕನ್ನಡ

ಹ್ವಾಯ್... ನಾವು ಕುಂದಾಪ್ರ ಕನ್ನಡದವರ್. ಆರೆ ಕುಂದಾಪ್ರ ಬದಿಯರ್ ಅಲ್ಲ. ಅಯ್ಯಬ್ಯಾ‌ ಬೆಂಗ್ಳೂರಿಂದ ಕುಂದಾಪ್ರ ಮೂಲಿಗ್ ಹೋಪತಿಗ್ ಮದ್ಯಾಹ್ನ ಆಪು. ಅಷ್ಟ್ ಕಷ್ಟ ಇಲ್ಲ.‌ ಮತ್ತೆಲ್ ನಿಮ್ ಮನಿ ಕೇಣ್ಬೇಡಿ ಅಕಾ..
#ದಸರಾ ರಜೆ ಅಂಬ್ರ್ . ನಿಮ್ಗೆಲ್ಲಾ ಸಿಕ್ಕಲ್ಯಾ. ಅಲಾ ಕೊಡಲ್ಯಾ ಆಪೀಸಲ್‌ ಎಂತ ಕತಿ.‌.?! ನಂಗೆ & ನನ್ನ ಮಗನಿಗೆ ರಜೆ. ಅಮ್ಮನ ಮನಿಗ್ ಹೋಯ್ ಬಪ್ಪಾ ಅಂದ್ಹೇಳಿ..
#ಅಮ್ಮನ_ಮನೆ : ಆ ಮಣ್ಣಿನ ಘಮವೇ ಬೇರೆ. ಗಂಟೆ ಹೂಗ್ ಗೇಟಿಗ್ ಬಾಗಿ ತೋರಣ ಕಟ್ಟಿದಾಂಗ್ ಕಾಣತ್. ನಾನೇ ನಟ್ ಹೋದ್ದೇ ಮೇ ತಿಂಗಳಲ್. ಈಗ ಅರ್ಶಿನ (ಹಳದಿ) ಅರ್ಶಿನಾ ಹೂಗ್.. ದಾಸ್ವಾಳ ಬೇಕಾ? ಮಲ್ಲಿಗಿ ಬೇಕಾ? ಗುಲಾಬಿಯಾ..? ಅಯ್ಯೋ ನಮ್ಮನಿ ಕೆಲ್ಸದವಳ್ "ಕೂ...!" ಹೊಡಿತ್ಲ್. ಅವಳ್ ಹೊಸ್ರೂ  ಅದೇ ಕಾಣಿ. ;)
ಬೆಂಗಳೂರ್ ಬಸ್ ಇಳದ್ ಕೂಡ್ಲೇ ಬೆನ್ ಹಿಂದಿಂದ ಒಂದ್ ಹಾಡ್ ಕೇಂಬುಕ್ ಶುರು ಆತ್ "ಸವಿಸವಿ ನೆನಪು ಸವಿಸವಿ ನೆನಪು, ಸಾವಿರ ನೆನಪು.. ನಮ್ ಸುದೀಪಣ್ಣಂದೆ... ( #ಮೈ_ಆಟೋಗ್ರಾಫ್ ಪಿಚ್ಚರಿದ್‌) ಎಷ್ಟ್ ನೆನಪುಗಳಿದ್ದೋ. ಲೆಕ್ಕ ಹಾಕಿರೆ ಕೊಕ್ಕನಕ್ಕಿ ನೆಗಾಡತ್.. ಹೆಣೆ ನೀ ಇನ್ನು ಚಣ್ ಹೆಣ್ಣಿನ್ ಕಣೆಗೆ ಗದ್ದಿ ಸುತ್ತೂಕ್ ಬಂದಿದ್ಯಾ. ನಿಂದ್ ಮಗ ಎಲ್ಲೋದಾ? ಕರ್ಕಂಡ್ ಬಪ್ಪುಕ್ ಆಯ್ಲ್ಯಾ.? ಕೇಣತ್..
ಮೀನ್ಗಳಿಗೆಲ್ಲ ಖುಷಿ , ತೋಡ್ ತುಂಬಾ ಓಡಾಡ್ತಾ ಕುಣಿತಾ ಇದ್ದೋ. ನಾ ಚಣ್ಣಕ್ಕಿಪ್ಪತಿಗೆ ಗಾಳ ಹಾಕ್ತಾ ಇದ್ದೆ. ಅದಕ್ಕೆ ಹೆದ್ರಕಂಡ್ ಕಲ್ಲಿನಡಿ ಸೇರ್ಕಂತ ಇದ್ದೋ.. ಈಗ ಅವಕ್ ಯಾರ್ ರಗಳಿ ಇಲ್ಲಾ ಕಾಣಿ.
ಎಲ್ ಕಂಡ್ರೂ ಹಸಿರ್ ಗದ್ದಿ ತಂಪ್ ಗಾಳಿ..ಬೆಳ್ಗಾತು  ಮಂಜಿನ ಹನಿ. ಕದರ್ ಕೊಯ್ದ್ ಹೊಸ್ತ್ ಮಾಡಿ ಆಯ್ತೇನೋ. ಊರಲ್ಲೆಲ್ಲಾ. ಮುಳ್ ಚೌಂತಿ ಕಾಯ್ ಬೆಳ್ದಿತ್ ಕೊಯ್ದ್ ಇಟ್ಟಿದೆ ಅಂದಿರ್ ಅಮ್ಮ. ನಮಗೆ ಕಾಯ್ತಾ ಇದ್ಲ.. ಮಕ್ಕಳ ಬಾರ್ದೆ ಹಬ್ಬವಾ?! ಏನಂತ್ರೀ..?
ಮದಿ ಆದ್ ಮೇಲೆ ಹೆಣ್_ಮಕ್ಕಳಿಗೆ ಹೇಳಕಾ.. ಇದ್ ಬದ್ ದೇವಸ್ಥಾನಕ್ಕೆಲ್ಲಾ ಹೋಯ್ ಅಡ್ ಬೀಳುಕಿರತ್. ಫುಲ್ ಬಿಜಿ. ಆರೆ ಎಫ್ ಬಿ ಬದಿಗೆ ಬಪ್ಪದ್..
ಮತ್ತೆ ನಾವು ಗೊತ್ತಲ್ದಾ ಪಟ ತೆಗೆಯೋರ್.. ಕ್ಯಾಮೆರಾ ಕೈಯಲ್ ಇದ್ರೆ ಚಣ್ ಇರುವೀನೂ ಅಡ್ಡ ಹಾಕುದೇ ನಗಾಡಾ ಸ್ವಲ್ಪಾ ಅಂದ್ಹೇಳಿ..
ಟಾಟಾ. ಸೀ ಯೂ..

ಸಿಂಧುಭಾರ್ಗವ್.

ಕವನ- ನಮ್ಮ ಸೈನಿಕರು




ನಮ್ಮ ಸೈನಿಕರು :

ಯುದ್ಧ ಘೋಷಣೆ ಮಾಡಿಯೇ
ಎಲ್ಲವೂ ನಡೆಯಬೇಕಂದಿಲ್ಲ..
ಸೇನೆಗೆ ಸೇರಿದ ದಿನದಿಂದಲೇ
ಅವರಲ್ಲಿ ಯುದ್ಧ ಶುರುವಾಗುವುದಲ್ಲ..

ನಮ್ಮನ್ನು ರಕ್ಷಿಸಲು ಪ್ರಾಣದ
ಹಂಗು ತೊರೆಯುವರು..
ಹೆತ್ತವರ /ಸಂಸಾರವ ತೊರೆದು
ಪ್ರಾಣ ತ್ಯಾಗಮಾಡುವರು..

ನಾವು ಕಣ್ತುಂಬಾ ನಿದಿರೆ ಮಾಡಲು
ಅವರ ಕಾವಲಿದೆ..
ಈ ಸತ್ಯವ ಅಂಧರಂತೆ ನಾವೆಲ್ಲ
ಮರೆತ ಹಾಗಿದೆ..

ಪ್ರಾಣಪಕ್ಷಿ ಹಾರಿತೆಂದು ಕಣ್ಣೀರು
ಸುರಿಸಿದರೇನು ಪ್ರಯೋಜನ..?!
ಅವರ ಪ್ರಾಣಕ್ಕೇನಾಗದಿರಲಿ
ಎಂದು ಈಗಲೇ ಪ್ರಾರ್ಥಿಸೋಣ..

~ಸಿಂಧು ಭಾರ್ಗವ್.

ಹಾಸ್ಯ : : ಪೋಲಿಗಳ_ಪರದಾಟ :

ಹಾಸ್ಯ : : ಪೋಲಿಗಳ_ಪರದಾಟ :
ಅಂದದ ಹುಡುಗೀರ ಕಂಡಾಗೆಲ್ಲ ಮನಸ್ಸು ಹಿಂದ್ ಹಿಂದೇ ಓಡುವುದು..

'ಲವ್ ಯೂ ಕಣ್ರೀ' ಎಂದು ಬಾಯಲಿ ಅರಿಯದೇನೇ ಮುತ್ತು ಉದುರುವುದು..

ಉಗಿದರೂ ಉಗಿಸಿಕೊಳ್ಳುವ ಮರ್ಯಾದೆಗೆಟ್ಟ ಹಾರ್ಟು..

ಬಿಸ್ಕೇಟ್ ಹಾಕೋಣ ಅಂದ್ರೆ ಜೇಬು ತೂತು..

ಕರೆನ್ಸಿ ಹಾಕು ಅನ್ನಲ್ಲ ಜೀಯೋ ಸಿಮ್ ಇದೆ ಅವಳಲ್ಲಿ..

ಸೆಲ್ಫೀ ತೆಗೆಸೋಕೂ ಬರಲ್ಲ ಸೆಲ್ಫೀಸ್ಕಿಟ್ ಇದೆ ಅವಳಲ್ಲಿ..

ಥೋ.. ರಾಹುಕಾಲದಲ್ಲೇ ಹುಡ್ಗೀರ್ ಸಿಕ್ತಾರೋ ಇಲ್ಲಾ
ಪ್ರಪೋಸ್ ಮಾಡೋ ಟೈಮ್ ಲಿ ಬೆಕ್ಕು ಅಡ್ಡ ಬಂತಾ..?
ಶಿವನೇ...
😇😜

ಕವಿತೆ- ಜೀವನದ ಸಂತೆಯಲಿ ತಿರುವೊಂದಿದೆ..


ಜೀವನದ ಸಂತೆಯಲಿ ತಿರುವೊಂದಿದೆ,
ತಿರುವಿನ ಮೂಲೆಯಲಿ ಕನಸೊಂದಿದೆ,

ಬುಟ್ಟಿಯ ತುಂಬಾ ಪ್ರೀತಿ ತುಂಬಿದೆ,
ನೀನು ಬಂದು ಖರೀದಿಸ ಬೇಕಿದೆ..

ಅಂದು
ನಿನ್ನನು ಒಪ್ಪಿಕೊಂಡಿದ್ದೆ, ಅಪ್ಪಿಕೊಂಡಿದ್ದೆ,
ನೋಡು ಮನವೀಗ ಬೆಪ್ಪಾಗಿ ಕುಳಿತಿದೆ..

ನೀ ನನಗಾಗಿ ಬರೆದ ಆ ಮೊದಲ ಕವನವನ್ನು
ಇನ್ನೊಮ್ಮೆ ಹೇಳಬೇಕಿದೆ.
ನಾನಿನ್ನ ಮಡಿಲಿನಲಿ ಮಲಗಿ
ಅದನ್ನೆಲ್ಲಾ ಕೇಳುವ ಆಸೆಯಾಗಿದೆ..

ಇತ್ತಿಚೆಗೆ ನೀನೇಕೋ ಬದಲಾದಂತಿದೆ..
ನಿನ್ನ ಮಾತಿನಲ್ಲಿ  ಏನೋ ಮರೆಯಾಗಿದೆ..

ನಿನ್ನ ಮನವೀಗ ಬೇರೆಲ್ಲೋ ಮುಳುಗಿ ಹೋಗಿದೆ..
ಪ್ರೀತಿಯ ಕಂಗಳಿಂದ  ನೋಡುವುದ ಮರೆತಂತಿದೆ..

~~~
- ಸಿಂಧುಭಾರ್ಗವ್.

ಕವಿತೆ- ಅಮ್ಮ




ಅಮ್ಮ :

ಕಲ್ಲು ಒಡೆಯುವಳು ,ಮುಳ್ಳು ಕೀಳುವಳು,
ಕಾಲಿಗೆ ಚಪ್ಪಲಿ ಇಲ್ಲದೇನೆ ನಡೆಯುವಳು..
ಹೊರುವಳು  ನವಮಾಸದ ಭಾರವನು,
ಕರಳುಬಳ್ಳಿಯ ಕತ್ತರಿಸಿ ಬುವಿಗೆ ಬಿಡುವಳು...

ದುಡಿಯುವಳು ಮಿಡಿಯುವಳು,
ಸೆರೆಗಲೇ ಕಟ್ಟಿಕೊಂಡು  ಜೀವನ ಸವೆಸುವಳು..
ಕೊರಗುವಳು ಒಳಗೊಳಗೆ,
ನೀರು ಕುಡಿದು ಹಸಿವ ಇಂಗಿಸುವಳು..

ಕರಿಬೆನ್ನು ಸುಡುತ್ತಿದ್ದರೂ ಚಿಂತೆ ಮಾಡದವಳು,
ಕರುಳಕುಡಿ ಅವ್ವಾ ಎಂದಾಗ ಕರಗುವಳು..
ಬೆನ್ನಿಗಂಟಿದ ಹೊಟ್ಟೆಯ ನೋಡದವಳು,
ಮುಲಾಮು ಹಚ್ಚದೇ ಬದುಕುವಳು..

ಸಿಂಧುಭಾರ್ಗವ್ .

ಲೇಖನ- ಋಣಭಾರ ಅತಿಯಾಗಿ ಕುಗ್ಗಿರುವೆ ಗೆಳತಿ.

((@@))

"ಋಣಭಾರ ಅತಿಯಾಗಿ ಕುಗ್ಗಿರುವೆ ಗೆಳತಿ.."

"ಮರಳಿ ಬಾರದಿರುವ ಕೃಷ್ಣನ ನೆನಪಿನಲ್ಲೇ ಕೊಳಲು ಹಿಡಿದು ಕುಳಿತಿದ್ದ ರಾಧೆಯಂತೆ ಆಗಿದೆ ನನ್ನ ಬದುಕೀಗ.."
**
ಹೌದು ಕಣೆ.. ನೀನೊಂದು ಉತ್ಸಾಹದ ಚಿಲುಮೆಯಂತೆ. ಬಣ್ಣ ಬಣ್ಣಗಳಿಂದ ನರ್ತಿಸುವ ಕಾರಂಜಿಯಂತೆ. ಮಳೆಗಾಗಿ ಎದುರು ನೋಡುತ ಗರಿಬಿಚ್ಚಿ ಕುಣಿವ ನವಿಲಿನಂತೆ. ಮೋಡದ ಮರೆಯಲಿ ಪ್ರಕಾಶಿಸುವ ರವಿಯಂತೆ. ಮಳೆಗಾಲದಲ್ಲಿ ಕಣ್ ತಂಪಾಗಿಸುವ ಪಾಚಿಯಂತೆ. ಚಳಿಗಾಲದಲ್ಲಿ ಮರಗಳ ತುದಿಯಲ್ಲಿ ಹೆಪ್ಪುಗಟ್ಟಿ ನಿಲ್ಲುವ ಮಂಜುಗಡ್ಡೆಯಂತೆ. ಎಷ್ಟು ಹೊಗಳಿದರೂ ಸಾಲದು ಗೆಳತಿ. ನಾ ನಿನ್ನ ಪ್ರೀತಿಸಲು ಯೋಗ್ಯನಾ ಅನ್ನಿಸುವಷ್ಟು ನೀ ನನ್ನನ್ನು ಪ್ರೀತಿಸಿ ಬಿಟ್ಟೆ.
ನೆನಪಿದೆಯಾ?‌‌ ಪ್ರತಿದಿನ ನಾವು‌ ಮಾತನಾಡುವಾಗಲು ನೀನು  ಕೊನೆಗೊಳಿಸುವುದು "ನಿನಗೊಂದು ಮುದ್ದಾದ  ಗೊಂಬೆಯನ್ನು ನೋಡಿ ಮದುವೆ ಮಾಡಿಸಬೇಕು ಕಣೋ. ನನ್ನಷ್ಟೆ ಪೆದ್ದುಪೆದ್ದಾಗಿ ಪ್ರೀತಿಸುವ ಮುದ್ದು ಹುಡುಗಿ ನಿನಗೆ ಸಿಗಲೀ.."‌ ಎಂದು. ಆ ಮೂಲಕ "ನೀನು ನನಗೆ ಸಿಗುವುದಿಲ್ಲ" ಎನ್ನುವ ವಾಸ್ತವವನ್ನು , ಕಠೋರ ಸತ್ಯವನ್ನು ಸುಲಭವಾಗಿ ಸ್ವಲ್ಪಸ್ವಲ್ಪವೇ ಮನಕ್ಕಿಳಿಸುತ್ತಿದ್ದೆ. ಹಾಗೆಯೇ ಹುಚ್ಚುಹಿಡಿಸುವಷ್ಟು ಪ್ರೀತಿಸುತ್ತಲೂ ಇದ್ದೆ. ಹೇಗೆ ಸಾಧ್ಯ ನಿನಗೆ?? ನೀನು ಪ್ರೀತಿಯ ಮುಖವಾಡ ಧರಿಸಿರುವೆಯಾ ಎಂದು ಎಷ್ಟೋ ಬಾರಿ ಪರೀಕ್ಷಿಸಿದೆ. ಮುರ್ಖ ನಾನು. ಅಯ್ಯೋ..!! ಪ್ರೀತಿಗೆ ನಾ ಮಾಡಿದ ಅಪಚಾರವದು. ಮುಖವಾಡವಲ್ಲವದು. ಆಗಲೇ ನಿನ್ನ ನೈಜ್ಯ‌ ಪ್ರೀತಿಯ ಆಳ ಇನ್ನಷ್ಟು ಅರ್ಥವಾಗ ತೊಡಗಿದ್ದು.. ಮರಳಿ ಬಾರದಿರುವ ಕೃಷ್ಣನ ನೆನಪಿನಲ್ಲೇ ಕೊಳಲು ಹಿಡಿದು ಕುಳಿತಿದ್ದ ರಾಧೆಯಂತೆ ಆಗಿದೆ ನನ್ನ ಬದುಕೀಗ. ನಿನಗಿದ್ದಷ್ಟು ಧೈರ್ಯ, ಆತ್ಮವಿಶ್ವಾಸ ನನಗೆ ಇರಲಿಲ್ಲ. ನಮ್ಮ ಪ್ರೀತಿ  ಮದುವೆಯಲ್ಲಿ ಕೊನೆಗೊಳ್ಳುವುದಿಲ್ಲ ಎಂದು ನಿನಗೂ ಗೊತ್ತಿತ್ತು. ಆದರೂ ನಾವು ಪ್ರೀತಿಸಿದೆವು. ಕಾಲ ಹರಣಕ್ಕಂತೂ ಅಲ್ಲವೇ ಅಲ್ಲ. ಪ್ರೀತಿಯ ನಿಜರೂಪ ತಿಳಿಯಬೇಕೆಂದು. ಸಾವಿನ ಕದ ತಟ್ಟುವವರೆಗೂ ಆ ನೆನಪುಗಳು ಜೊತೆಗಿರಬೇಕೆಂದು. ನಮ್ಮನ್ನು ಪ್ರೀತಿಸಿದವರಿಗಾಗಿ, ನಮ್ಮನ್ನೇ ನಂಬಿಕೊಂಡಿರುವವರಿಗಾಗಿ ನಾವು ಬದುಕಬೇಕು ಎಂಬುದನ್ನು ನೀನೆ ಕಲಿಸಿದ್ದು. ನಾನು ನಿನ್ನ ಪ್ರೀತಿ ತರಗತಿಯಲ್ಲಿ  ವಿದ್ಯಾರ್ಥಿಯಾಗಿ ಸೇರಿದ್ದಷ್ಟೆ.. ಹಾಗೇ ಉಳಿದುಬಿಟ್ಟೆ ನೋಡು.
**
ನಾನೇ ನಿನಗೆ ಮೊದಲ ಪ್ರೀತಿ ಮತ್ತು ಕಡೆಯವನೂ ಎಂದು ಹೇಳಿದ್ದೀ ನೀನು. ಹುಚ್ಚು ಹುಚ್ಚು ಕನಸುಗಳನ್ನು ಕಾಣಲು ನೀನು ಬಿಡುತ್ತಲೇ ಇರಲಿಲ್ಲ. ನೀರ‌ಮೇಲಿನ ಗುಳ್ಳೆಯಂತೆ ಅದು ಶಾಶ್ವತವಲ್ಲ ಎಂಬುದು ನಿನಗೆ ಗೊತ್ತಿತ್ತು.. ನೀ ನನಗಾಗಿ ಏನೆಲ್ಲಾ ಮಾಡಿದೆ. ಅದೆಷ್ಟು ಸಮಸ್ಯೆಗಳ ವಿರುದ್ಧ ಹೋರಾಡಿದ್ದೆ. ಏನೇ ಬಂದರೂ ಪ್ರೀತಿಗಾಗಿ ಎಲ್ಲವನ್ನೂ ಎದುರಿಸಬೇಕು ಎಂದು ನೀನು ಕಲಿಸಿಕೊಟ್ಟೆ. "ನನಗೆಷ್ಟು ಸಮಸ್ಯೆ ಎದುರಾದರು ನಾನು ನಿನ್ನ ಸಾಯಿಸುವುದಿಲ್ಲ ಕಣೋ. ನೀನು‌ ನನ್ನ ಉಸಿರಾಗಿದ್ದೀಯಾ.." ಎಂದು ಗದ್ಗದಿತವಾಗಿ ನುಡಿದಿದ್ದು  ಕಿವಿಯಲ್ಲಿನ್ನು ಗುಯ್ ಗುಡುತ್ತಿದೆ ಗೆಳತಿ. ಆದರೆ ನಾನು ನಿನಗಾಗಿ ಏನೂ ಮಾಡಲು ಸಾಧ್ಯವಾಗಲಿಲ್ಲ. ಕೊನೆ ಕೊನೆಗೆ ನಿನ್ನ ಜೊತೆ ದಿನಕ್ಕೆ‌ ಒಂದು ಬಾರಿ ಮಾತಾನಾಡಲು ಸಾಧ್ಯವಾಗದೇ ಹೋಯಿತು. **
ನನ್ನ ಜನುಮ ದಿನವೆಂದರೆ ನಿನಗೆ ಹಬ್ಬವೇ ಆಗಿತ್ತು.. ಮನೆಗೆ ಕರೆಸಿ ಸಿಹಿಖಾದ್ಯ ಮಾಡಿದೆ. ಜೊತೆಗೆ ಕುಳಿತು ಕೈತುತ್ತು ತಿನ್ನಿಸಿದೆ. ನಾನಂತೂ ಒಂದು ಕ್ಷಣ ತಾಯಿಯ ನೆನಪಾಗಿ ಭಾವುಕನಾಗಿ ಹೋದೆ. ಆಗಲೂ "ಇನ್ನೊಂದು ವರುಶದ ಈ ಸುದಿನಕ್ಕೆ ನಾನು‌ ಜೊತೆಗಿರುವೆನೋ? ಇಲ್ಲವೋ? ತಿಳಿಯದು. ಈ ದಿನ ನಾನೇ ಸುಖಿ" ಎಂದು ನನ್ನೆದೆಗೆ ಒರಗಿದ್ದೆ. ಹೇಯ್ ಗೆಳತಿ "ನೀ ನನಗೆ ಎಲ್ಲಾ ರೀತಿಯ ಪ್ರೀತಿ ನೀಡಿದ್ದಿ ಕಣೆ.." ಆದರೆ ನಾನು? ನಿನ್ನ ಜನುಮ ದಿನಕ್ಕೆ ಒಂದು ಸಣ್ಣ ಸಂದೇಶ ಕಳುಹಿಸಿ, ಕರೆ ಮಾಡಿ ನಾಲ್ಕು ಮಾತನಾಡಿ ಕೈ ತೊಳೆದುಕೊಂಡೆ. ಅದಕ್ಕೂ ಸಮಯದ ಅಭಾವ, ಬಿಡುವಿರದ ಕೆಲಸವೆಂಬ ಕಾರಣ ನೀಡಿದೆ. ನಿನಗೆ ನನ್ನ ದನಿ‌ ಕೇಳಿಯೂ ಬಹಳ ಸಮಯವಾಗಿತ್ತೇನೋ. ಅಬ್ಬಾ..‌!! ನಾನು ಪಾಪಿ ಕಣೇ. ನಿನ್ನ ಪ್ರೀತಿಯ ಎಳ್ಳಷ್ಟು ವಾಪಾಸು ನೀಡಲು ಸಾಧ್ಯವಾಗಲಿಲ್ಲ.  ಋಣಭಾರ ಅತಿಯಾಗಿ ಕುಗ್ಗಿಸಿದೆ ಗೆಳತಿ. ಏನು ಮಾಡಲಿ ಹೇಳು.? ಈಗೀಗ ನಿನ್ನ ಜೊತೆ ಮಾತನಾಡಲು ಸಮಯ ಕಳೆಯಲೂ ಸಾಧ್ಯಾವಾಗುತ್ತಲೇ ಇಲ್ಲ. ವಿರಹದುರಿ ಅತಿಯಾಗಿದೆ. ದೂರದೂರ ಸಾಗುತ್ತಿರುವೆನೇನೋ‌ ಎಂದು ಭಾಸವಾಗುತ್ತಿದೆ.. ಆದರೆ ನೀನು ನನ್ನ ಜೊತೆಗೇ ಇದ್ದೀಯಾ..‌ದಿನವೂ ತರಲೆಮಾಡುತ್ತಾ ಮಾತನಾಡುತ್ತೀಯಾ.. ಮನದಲ್ಲಿ ನನ್ನ ಬಗ್ಗೆ ತಪ್ಪು ತಿಳಿದು ಬೇಸರಿಸಬೇಡ.. ನೀನು ಹಾಗಲ್ಲ ಎಂದೂ ನನಗೆ ತಿಳಿದಿದೆ. ಕೆಲಸವಿದೆ ಎಂಬ ಒಂದೇ ಮಾತಿಗೆ ನೀನು, "ನನಗೆ ತೊಂದರೆಯಾಗಬಾರದು" ಎಂದು ಮರುಮಾತನಾಡದೇ ದೂರ ಉಳಿದುಬಿಡುತ್ತಿಯಾ. ನಿನಗೆ ವಿವರಿಸುವ ಅಗತ್ಯವೇ ಇಲ್ಲ ನೋಡು. ಎಷ್ಟು‍ ಚೆನ್ನಾಗಿ  ಅರ್ಥ ಮಾಡಿಕೊಳ್ಳುತ್ತೀಯಾ. ನಿಜವಾಗಿಯೂ ಈಗ ಮನಸ್ಸು ಮಗುವಿನಂತೆ ರಚ್ಚೆಹಿಡಿದು ಅಳುತ್ತಿದೆ. ನೀನೇ ಬೇಕು ನನಗೆ ಎಂದು ಕಣ್ಣೀರು ಸುರಿಸುತ್ತಿದೆ. ನಿನ್ನ ಪ್ರೀತಿಯನ್ನು ಪಡೆಯಲು ನಾನು ಪುಣ್ಯ ಮಾಡಿಲ್ಲವಲ್ಲ. ನೀನೇ ಹೇಳಿದ್ದೀ " ನನ್ನಂತೆಯೇ ಪೆದ್ದು ಪೆದ್ದಾಗಿ ಪ್ರೀತಿ ಮಾಡುವ ಹುಡುಗಿ ನಿನಗೆ ಸಿಗಲಿ.." ಎಂದು.‌ ಇಲ್ಲ ಗೆಳತಿ ನಿಜವಾಗಿಯೂ ಹೇಳುತ್ತಿರುವೆ.. ಕೂಗಿ ಕೂಗಿ ಹೇಳುತ್ತಿರುವೆ ನಿನ್ನಷ್ಟು ಪ್ರೀತಿಸುವ ಹೆಣ್ಣು ಈ ಜಗತ್ತಿನಲ್ಲಿಯೇ ಇಲ್ಲ. ನನಗೆ ನೀನೇ ಬೇಕು. ನಿನ್ನ ಪ್ರೀತಿಯಲ್ಲಿ ಬೇಡವೆಂದರೂ  ಹುಚ್ಚನಾಗಿರುವೆ.. ಓ ದೇವರೇ ! ಒಂದು ಅವಕಾಶ ಕೊಡು ನಮ್ಮಿಬ್ಬರನ್ನು ಮತ್ತೆ ಸೇರಿಸು. ಹ್ಮ್ಮ್...!! ದೇವರನ್ನೇ ನಂಬದ ನನ್ನ ಬಾಯಿಯಲ್ಲಿ ಬಂದೇ ಬಿಟ್ಟಿತು ನೋಡು ಅವನ ಹೆಸರು. ಇದೇ ಗೆಳತಿ ಪ್ರೀತಿಗಿರುವ ಶಕ್ತಿ.. ನೀನು ಜೊತೆಗಿದ್ದರೆ ನಾನು ಪ್ರಪಂಚವನ್ನೇ ಗೆಲ್ಲುವೆ ಎಂಬಾ ಆತ್ಮವಿಶ್ವಾಸ ಮೂಡುತ್ತದೆ. ನೀ ದೂರಾದರೆ ಗಾಳಿ ತೆಗೆದ ಬಲೂನಿನಂತೆ ಅಸ್ಥಿತ್ವವೇ ಇಲ್ಲದ ಹಾಗೆ ಎಲ್ಲೋ ಹಾರಿ ಬೀಳುವೆ. ಕೊನೆಯ ಆಸೆ ಇದೆ ಗೆಳತಿ ಇನ್ನೊಂದು ಜನುಮವಿದ್ದರೆ ನಿನ್ನ ಋಣತೀರಿಸಲು ನಿನ್ನ ಮಗುವಾಗಿ ಹುಟ್ಟಬೇಕು. ನಿನ್ನಂತಃ ತ್ಯಾಗಮಯೀಯ  ನಿನ್ನ ಮಡಿಲಿನಲ್ಲಿ ಮತ್ತೆ ಮಲಗಬೇಕು.

~ ಸಿಂಧು ಭಾರ್ಗವ್. ಬೆಂಗಳೂರು

ಕವಿತೆ- ಕರಗೀತೇ ಬೆಳ್ಳಿಮೋಡ..?!







ಕವಿತೆ- ಕರಗೀತೇ ಬೆಳ್ಳಿಮೋಡ..?!
~~~~~~~~~~~~~
ತಂದೆ: 
ಬೆಳ್ಳಿಮೋಡಗಳ ನಡುವೆ ನಿನಗಾಗೇ
ಅರಮನೆಯೊಂದಿದೆ ಮಗಳೆ..!
ಬೇಸರವಾದಾಗೆಲ್ಲ ಚಂದಿರನ ಜೊತೆ ಹರಟುತ್ತಿರು..!!
*
ನೋಡು, ನಿನ್ನ ಹೂದೋಟದಲಿ 
ತಾರೆಗಳು ಅರಳಿ ನಿಂತಿವೆ..!
ಎಲ್ಲವನೂ ಕೊಯ್ದು ತಂದು ನೇಯುತ್ತಿರು..!!
*
ಮಳೆ ಬರಬಹುದು ಮಗಳೇ..
ಕಾಮನ ಬಿಲ್ಲಿನ ಕೊಡೆಮೂಡಿದೆ..!
ನೆನೆಯದಿರು ಮಗಳೆ..
ಶೀತ ಮಾರುತಕೆ ನೆಗಡಿಯಾಗಲಿದೆ..!!
*
ವೈದ್ಯಲೋಕದ ಅಪ್ಸರೆ
ನಿನ್ನ ತಪಾಸಣೆಗೆ ಬಂದಿಹಳು..!
ರವಿಕಿರಣದ ಶಾಖಕೊಟ್ಟರೆ 
ಸರಿಯಾಗುವುದೆನ್ನುವಳು..!!
*
ಬುವಿಯ ಇಣುಕಿ ನೋಡದಿರು ಮಗಳೆ..
ಇಲ್ಲಿರುವುದೇ ಚೆಂದ..!
ತಿರುಗಿ ಬರುವ ಮನಮಾಡಬೇಡ..
ಗಂಡನ ಮನೆಯೇ ಅಂದ..!!
*
ಈ ಅರಮನೆಯಲ್ಲಿ
ಫಲ ,ಪುಷ್ಪ , ಏನಿದೆ?ಏನಿಲ್ಲ..?
ಬೇಕೆಂದಾಗ ಹಕ್ಕಿಯ ಹಾಗೆ 
ವಿಹರಿಸುತ್ತಿರಬಹುದಲ್ಲಾ..!!
*
ಪ್ರೀತಿಯ ಪತಿರಾಯ 
ಇರುವನು ಜೊತೆಯಲಿ..!
ತೋರಿಸದಿದ್ದರು ಅವನಿಗೆ 
ಪ್ರೀತಿ ಇದೆ ಮನದಲ್ಲಿ..!!
***
ಮಗಳು: 
ಕೈಗೊಬ್ಬ ಆಳು ,
ದಿಟ ಕಾಲು ಒತ್ತಲು ಇರುವಳು..!
ಕೆಲಸ ಮುಗಿಸಿ ಅವರೆಲ್ಲ 
ಮನೆಗೆ ವಾಪಾಸಾಗುವರು..!!
*
ಮನೆಗೆ ಹಿಂದಿರುಗಿ ಪತಿರಾಯನಿಗೆ
 ಪ್ರೀತಿಯ ಕೈತುತ್ತು ತಿನಿಸುವರು..!
ನನಗಿಲ್ಲ ಆ ಅದೃಷ್ಟವೆಂದು 
ಮರುಗುತ ಕುಳಿತಿರುವೆನು..!!
*
ಎಲ್ಲವೂ ಇದ್ದಂತೆ ಏನೂ ಇಲ್ಲವಿಲ್ಲಿ..!
ಅರಮನೆಯ ಒಡತಿ ನಾನು
ಬೇಯುತಿರುವೆನು ವಿರಹದುರಿಯಲ್ಲಿ..!!

~ ಸಿಂಧುಭಾರ್ಗವ್ .ಬೆಂಗಳೂರು

ಲೇಖನ- ಸ್ನೇಹಲೋಕದಲ್ಲಿ ಹೊಸದಾದ ಭಾಷ್ಯ ಬರೆಯಬೇಕು.



ನಗುತಿರು ಪುಟ್ಟ ಮನವೇ ಬೆಳಂದಿಗಳಿನಂತೆ..!
ನಾನಿರುವೆನು ಜೊತೆಗೆ ಎಂದಿನಂತೆ..!!
ಈಗೀಗ ಎಲ್ಲವನೂ ಸ್ವೀಕರಿಸುವ ಧೈರ್ಯ ಬಂದಿದೆ..!
ಮನದಲಿ ನೋವುನಲಿವು ಮಾಮೂಲಿಯಾಗಿದೆ..!!
~
ನಿಜವಾಗಿ ಹೇಳುವುದಾದರೆ ಈ ಜೀವನದ ಸಂತೆಯಲಿ ಸಿಕ್ಕಿದವನಾತ. ನನ್ನ ಮೊಗದಲ್ಲಿ ನಗುವ ಬಯಸಿದವನಾತ. "ಬಿಕ್ಕಿದ್ದು ಸಾಕು ನಿನ್ನ ನಗುಮೊಗವ ನಾ ನೋಡಬೇಕು" ಎಂದಾಗ ಮತ್ತಷ್ಟು ಬಿಕ್ಕಿಬಿಕ್ಕಿ ಅತ್ತಿದ್ದೆ. ಆ ಖುಷಿಯ ಯಾರಲ್ಲಿ ಹೇಳಲಿ.?! ಬೇಕಿತ್ತೇನೋ ಅವನೊಬ್ಬ ನನ್ನ ಕಣ್ಣೀರು ಒರೆಸಲೆಂದು. ಅದಕ್ಕೇ ಬಹಳ ಹತ್ತಿರಕ್ಕೆ ಸೇರಿಸಿಕೊಂಡೆ. ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಂಡೆ. ಪರವಾಗಿಲ್ಲ. "ನಾ ನಿನ್ನ ಇಷ್ಟು ಹಚ್ಚಿಕೊಳ್ಳಲು ಕಾರಣವೇನು..?!" ಎಂದು ಕೇಳಿದರೆ "ಅವನಲ್ಲಿ ನಾನು ನನ್ನ ತಂದೆಯ ನೋಡಿದ್ದೆ, ಅವನ ಸವೆತ ನೋಡಿದ್ದೆ, ಬೆವರು ಹರಿಸಿ ದುಡಿದು ನಂಬಿಕೊಂಡವರ  ಬೇಕುಬೇಡಗಳ ಪೂರೈಸುವುದರಲ್ಲೇ ಜೀವನ‌ ಸವೆಸುವುದ ನೋಡಿದ್ದೆ. ಕಣ್ತುಂಬಾ ಕನಸುಗಳ ಹೊತ್ತಿದ್ದ ನೋಡಿದ್ದೆ. ನಿಷ್ಕಲ್ಮಷವಾದ ಮನಸ್ಸು, ಪ್ರೀತಿ ಎಂದರೆ ಪ್ರೀತಿಯೊಂದೇ ಗೊತ್ತಿರುವುದು, ಸತ್ಯನ್ಯಾಯಕ್ಕೆ ಜಗಳಬೇಕಾದರೂ ಮಾಡುವನು, ಆಗಾಗ ಬರುವ ಕೋಪ,  ಬೇಡವೆಂದರೂ ನೆನಪಿಸಿಕೊಳ್ಳುವ ಅವನ  ಹುಚ್ಚುಮನಸ್ಸು, ಒಮ್ಮೆ ನಾನಿಲ್ಲವೆಂದರೆ ಅವನಾಗೇ ಹುಡಿಕಿಕೊಂಡು ಬರುವುದು , ನಾ ಜೊತೆಗೆ ಇರುವೆನೆಂಬ ನಂಬಿಕೆಯೆಯಿಂದಲೇ ದಿನದ ಆಯಾಸವ ಕಳೆಯುವುದು, ನನಗಿಂತ ಅವನೇ ಹೆಚ್ಚು ಹಚ್ಚಿಕೊಂಡು ಬಿಟ್ಟಿದ್ದ ಎನ್ನಬಹುದು. ದಿನಗಳು ಕಳೆದಂತೆ ನಾವು ಸ್ನೇಹಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದೆವು. ಅದಕ್ಕೊಂದು ನಾಮಕರಣ ಮಾಡಲು ನನಗಂತೂ ಭಯ. ಈ ಕೆಟ್ಟ ಪ್ರಪಂಚ ಏನೆನ್ನುವುದೋ ಎಂದು.
*
ಅವನ ಸ್ನೇಹದಿಂದ ದಿನಕಳೆದುದೇ ತಿಳಿಯಲಿಲ್ಲ. ಆದರೆ ಅವನಿಗೆ ಕೆಲಸದ ಒತ್ತಡಗಳು ಜಾಸ್ತಿಯಾಗಿವೆಯೇ ಹೊರತು ಆ ಭಾರ ಕಡಿಮೆ ಆಗಲಿಲ್ಲ. ಸಮಯವೂ ಸಾಕಾಗುತ್ತಿಲ್ಲ. ನಿದಿರೆ ಊಟ ಎಲ್ಲದರಲ್ಲೂ ವ್ಯತ್ಯಯ. ಜವಾಬ್ದಾರಿ ಹೊತ್ತ ಬೆನ್ನು ಬಾಗುತ್ತಿದೆ. ಕಣ್ತುಂಬಾ ತುಂಬಿಸಿಕೊಂಡಿದ್ದ ಕನಸುಗಳೆಲ್ಲ ಬತ್ತಿಹೋದ ನದಿಯಲ್ಲಿ ತಳಸೇರಿಹೋಗಿದೆ. ಮಾತಿನಲ್ಲಿ ಬದಲಾವಣೆಯಾಗಿದೆ. ಏನೋ ಯೋಚನೆ ಮಾಡುತ್ತಾ ಕುಳಿತುಕೊಳ್ಳುವ, "ಯಾಕೆ ಹೀಗೆ.?! ನನಗೆ ಹೇಳಿದ ನೀನು.. ನೀನ್ಯಾಕೆ ಹೀಗಾದೆ?" ಇನ್ನು ಚಿಕ್ಕ ವಯಸ್ಸು ಜೀವನದ ಹೊಸ ಪರ್ವ ನೋಡಲಿನ್ನು ಬಾಕಿ ಇದೆ. ಈಗಲೇ "ನನ್ನದೆಲ್ಲ ಮುಗಿಯಿತು, ನನಗೆ ಇನ್ನೇನಾಗಬೇಕಿದೆ ? ಎಂದು ಹೇಳುವುದ ಕೇಳಿದರೆ ದುಗುಢವಾಗುತ್ತದೆ. ಮನಸ್ಸಿನಲ್ಲಿ ಆತಂಕವಾಗುತ್ತದೆ, ಹೊಟ್ಟೆಯಲ್ಲಿ ಒಂದು ರೀತಿಯ ಸಂಕಟವಾಗುತ್ತದೆ. ಕನಸನ್ನೆಲ್ಲ ತಾಜವಾಗಿರಿಸಿಕೊಳ್ಳಬೇಕು, ಆದರೆ ಅವನ ಮನಸ್ಸಿನಲ್ಲಿ ಏನೋ ಏರುಪೇರು ಕಾಣುತ್ತಿದೆ. ತಮ್ಮವರಿಗಾಗಿ ಜೀವನವನ್ನೇ ತೇದಿತೇದಿ ಇಂಚಿಂಚಾಗಿ ಕರಗಿಹೋಗುತಲಿರುವ ಶ್ರೀಗಂಧನಾತ. ಅವನಿರುವಲ್ಲಿ ಘಮವೇ ಘಮ. ಆದರೆ ಅವನು ಮಾತ್ರ..?!
*
ಇಲ್ಲ , ನಾನು ಅವನ ಜೊತೆಗೆ ಇದ್ದು ಅವನ ಕನಸುಗಳನ್ನೆಲ್ಲ ಜೀವಂತವಾಗಿರಿಸುವಂತೆ ನೋಡಿಕೊಳ್ಳಬೇಕು. ಅವನು ಅದೇ ಮೊದಲ‌ಮಳೆಯಲ್ಲಿ ಯಾವಾಗಲು ನೆನೆಯುತಿರಬೇಕು.ಅವನ ನಗುವಿಗು, ಅಳುವಿಗೂ ಜೊತೆಯಾಗಬೇಕು. ಆಯಾಸವಾದಾಗೆಲ್ಲ ನನ್ನ ತೊಡೆಯಮೇಲೆ ತಲೆಯಿಟ್ಟು ಮಲಗಲು ಹೇಳಬೇಕು. ಅವನ ಕಂಗಳಲಿ ಮತ್ತೆ ಪ್ರೀತಿ ತುಂಬಿಸಬೇಕು. ನಾಳೆ ಅವನ ನಂಬಿ ಬರುವವಳಿಗೆ ಮೋಸವಾಗಬಾರದು. ಅವಳು ಕತ್ತಲೆಯಲ್ಲಿ ಕೂತು ಅಳಬಾರದು.ಸ್ನೇಹಲೋಕದಲ್ಲಿ ಹೊಸದಾದ ಭಾಷ್ಯ ಬರೆಯಬೇಕು. ಅದಕ್ಕೆಂದೇ ನಾನೀಗ ಅವನ ಜೊತೆಗಿರಬೇಕು.

~ಸಿಂಧುಭಾರ್ಗವ್ .ಬೆಂಗಳೂರು

Simple Thoughts

Simple Thoughts :
@
@
೧) "ವಧು-ವರ"
ಅವನದೋ ಆನೆಯನ್ನು ಬದಿಗೆ ಸರಿಸಿ ನಡುಬೀದಿಯಲ್ಲಿ ಹೋಗುತ್ತಿರುವನೇನೋ ಎಂಬಂತಹ ಶರೀರ..!!

ಇವಳೋ ಗಾಳಿ ಬಂತೆಂದರೆ ತೂರಿಕೊಂಡು ಮರದ ಕೊಂಬೆಯೇರುವಷ್ಟು ಸಪೂರ..!!

೨) "ಕೇಳದಿರಿ ಯಾರೆಂದು"
ಹೇಳದಿದ್ದರೂ ಅವನೇ ಕನಸಿನಲ್ಲಿ ದಿನವೂ ಬರುವುದು..
ಬೇಡವೆಂದರೂ ಕಾಡಿಸಿ ಪೀಡಿಸಿ ಕೆನ್ನೆ ಕಚ್ಚುವುದು..!!

ಬೆಳಿಗ್ಗೆ ಎದ್ದು ಕೆನ್ನೆ ನೋಡಿದರೆ ಕೆಂಪಗಾಗಿರುವುದು..
ಅಯ್ಯೋ ಈ ಸೊಳ್ಳೆಕಾಟದಿಂದ ಹೇಗೆ ಮುಕ್ತಿಪಡೆಯುವುದು..!!

೩) "ನಾನೇಕೆ ಬಿಟ್ಟುಕೊಡಲಿ"
ಅವನೊಬ್ಬ ಪೂರ್ಣ ಚಂದಿರ..
ಸೂಸಿರುವ ನನ್ನ ಮನದಲ್ಲಿ ಬೆಳಂದಿಗಳ..
ಆಗಾಗ ಕೋಪ ತಾಪ ಉರಿದು ಬೀಳುವ..
ಹಾಗೆ ನೋಡಿದರೆ ಚಂದಿರನಲ್ಲಿಯೂ ಕಲೆಗಳಿಲ್ಲವಾ..?!

೪) "ಇದು ಅಂದರ್ ಕಿ ಬಾತ್"
ಅವನ ಮೂಗು ಸಂಪಿಗೆಯಂತೆ..
ಅವನ ಮಾತು ಇಂಪಾಗಿದೆ..
ನಗುವು ಬೆಳದಿಂಗಳಿನಂತೆ..
ಹಲ್ಲುಗಳೇಕೋ ಕಪ್ಪಾಗಿದೆ..

೫) "ಧೈರ್ಯದಿಂದಿರೋಣ"
ಹಾವು ಕಚ್ಚುವುದೆಂದು ದೂರವಿರುವರು..
ಹಸುವು ಹಾಲು ನೀಡುವುದೆಂದು ಸಾಕುವರು..
ಹುಲಿಯ ಕಂಡರೆ ಭಯಪಡುವರು..
ಕುರಿಯ ಕೊಂದು ತಿನ್ನುವರು..
ಮೆತ್ತಗಿದ್ದರೆ ಶಿಕ್ಷೆ ಜಾಸ್ತಿ..
ಹೆದರಿಸುವುದೇ ನಮ್ಮಲ್ಲಿನ ಆಸ್ತಿ..!!
~~~
-ಸಿಂಧುಭಾರ್ಗವ್ 

ಕವಿತೆ- ಕೈಜಾರಿದ ಹನಿ..ಕಾವೇರಿ ನೀರಿನ ಬಗ್ಗೆ




@()@

ಜನರಿಂದ ನೀರಿಗಾಗಿ ಪರದಾಟ..
ಜನನಾಯಕರಿಂದ ಶಾಂತಿಪಾಠ..

ರೊಚ್ಚಿಗೆದ್ದರು ರಕ್ತಪಾತವಾದರೂ ಯಾರಿಗೂ ಕಾಣಿಸದು..
ಸಾವು ನೋವಿಗೂ ನಿಮ್ಮಿಂದ ಬೆಲೆ ಕಟ್ಟಲಾಗದು..

ಭಯಭೀತಿಯಲಿ ಕಂಗೆಟ್ಟ  ಜನಸಾಮಾನ್ಯ..
ದೊರೆಗಳು ನೀಡುವುದಿಲ್ಲ ಇದಕ್ಕೆಲ್ಲ‌ ಮಾನ್ಯ..

ಪರಿಹಾರವಿಲ್ಲದ ಸಾವಿರ ಸಮಸ್ಯೆಗಳು..
ಹುಡುಕ ಹೊರಟವರಿಗೆ ನಿರಾಸೆಗಳು..

ನಮ್ಮ ಕಷ್ಟ ಅಧಿಕಾರಿಗಳಿಗೂ ಬೇಕಿಲ್ಲ..
ಮುಂದೆ ಏನು‌ ಮಾಡಬೇಕೆಂದು
ರೈತರಿಗೂ ಅರಿವಿಲ್ಲ..

ಬೆಂಕಿಯುಂಡೆ ಉಗುಳುವುದರಿಂದ ಏನೂ‌ ಲಾಭವಿಲ್ಲ..
ತಾಳ್ಮೆಯಿಂದ ಸಮಸ್ಯೆಯ ಕಗ್ಗಂಟು ಬಿಡಿಸಬೇಕಲ್ಲ..

ವಿಧ್ಯಾವಂತ ಜನರೇ ನಿರ್ಧರಿಸಬೇಕಿದೆ..
ಯುವಕರೆಲ್ಲ ಒಟ್ಟಾಗಿ ಪರಿಹಾರ ಹುಡುಕಬೇಕಿದೆ..

ಸಿಂಧುಭಾರ್ಗವ್ .ಬೆಂಗಳೂರು

ಕವಿತೆ: "ಸಾಗಲಿ ನಗುವಿನೊಂದಿಗೆ ನಮ್ಮೀ ಜೀವನ"

ಕವಿತೆ: "ಸಾಗಲಿ ನಗುವಿನೊಂದಿಗೆ ನಮ್ಮೀ ಜೀವನ"




ಎಷ್ಟು ಸುಂದರವಲ್ಲವೇ..?!
ಎನಿಸಿದಾಗ ಬಾಲ್ಯ ತಿರುಗಿ ಬಂದರೆ ?!
ನೆನೆದ ಮೊದಲ ಮಳೆಗೆ ಅಮ್ಮ ಬೈದರೆ ?!
ಕಾಸು ಕದ್ದೆನೆಂದು ಅಪ್ಪ ಹೊಡೆದರೆ ?!
ತಿಂಡಿಯಲ್ಲಿ, ಅಕ್ಕ ಅಣ್ಣನ ಪಾಲೂ ಸಿಕ್ಕರೆ...?!

ಎಷ್ಟು ಸುಂದರವಲ್ಲವೇ ?!
ಅಳುವಿನ ಕಡಲು ಕಂಗಳಲಿ,
ನಗುವಿನ ಹೂದೋಟ ಎದುರಿನಲಿ,
ನಾವು ಅತ್ತಿಗೆ, ಅತ್ತೆಯ ಆಡಳಿತದಲಿ,
ಗಂಡಸರು ಪರದಾಟದಲಿ..!!

ಎಷ್ಟು ಬದಲಾವಣೆ ಜೀವನದ ಹಾದಿಯಲಿ,
ಹೊಸದನ್ನು ಬರಮಾಡಿಕೊಳ್ಳಲು  ಹಳೆಯದಕ್ಕೆ ತಿಲಾಂಜಲಿ,
ಸಹ್ಯವಾಗದಿರಲಿ, ಅಸಹ್ಯವೇ ಆಗಿರಲಿ,
ಸಾಗಲೇಬೇಕು ಜೀವನದ ಹಾದಿ..!!

ಎಷ್ಟು ಸುಂದರವಲ್ಲವೇ..
ಜೀವನದ ಸಂತೆಯಲಿ
ನಮ್ಮ ಪರದಾಟ, ದಕ್ಕಿದ ಲಾಭ-ನಷ್ಟ,
ಕೊಂಡುಕೊಳ್ಳದ ಭಾವನೆಗಳು ಕೊಳೆತರೆ ಕಷ್ಟ,
ನಿನ್ನೆ ರಾತ್ರೆ ಕಂಡ ಕನಸಿದೆ,
ಹಾದಿಯುದ್ದಕ್ಕೂ ಗುನುಗಲು ಹಾಡಿದೆ..!!
~*~
ಸಿಂಧುಭಾರ್ಗವ್.ಬೆಂಗಳೂರು

ವಾರದ ಸಣ್ಣ ಕತೆ: ಇನ್ನೇನಿದ್ದರು ಮರೆತಂತೆ ನಟಿಸಬೇಕಷ್ಟೆ.

ವಾರದ ಸಣ್ಣ ಕತೆ:
ಇನ್ನೇನಿದ್ದರು ಮರೆತಂತೆ ನಟಿಸಬೇಕಷ್ಟೆ...
~~@~~




ಈ ಭೂಮಿ ನಿಂತಿರುವುದೇ ಸ್ನೇಹ ಮತ್ತು ಪ್ರೀತಿ ಮೇಲೆ ಎಂದು ನಾನು ಬಲವಾಗಿ ನಂಬಿರುವೆ.. ನಿಮಗೆ ಸಮ್ಮತವಿದೆಯಾ?! ಭೂಮಿ ನಿಂತಿರುವುದೇ ಗುರುತ್ವಾಕರ್ಷಣೆಯ ಬಲದಿಂದ. ಅಂದರೆ ಅಲ್ಲಿಯೂ ಒಂದು ರೀತಿಯ ಆಕರ್ಷಣೆ ಇರಬೇಕು ಮತ್ತು ಇದೆ ಎಂದಾಯಿತು ತಾನೆ..?! ಕೆಲವರ ಮನಸ್ಸು ಬಲು ಸೂಕ್ಷ್ಮ. ಇನ್ನೂ ಕೆಲವರದು ಒರಟು ಕಲ್ಲಿನಂತೆ, ಇನ್ನೂ ಕೆಲವರದು ಮಳೆಗಾಲದಲ್ಲಿ ಜಾರುವ ಪಾಚಿಯಂತೆ (ಬೇಕೆಂದಾಗ ಅಂಟಿಕೊಳ್ಳುವುದು, ಬೇಡವೆಂದಾಗ ಜಾರಿಕೊಳ್ಳುವುದು) ಎಷ್ಟೇ ಕಷ್ಟಪಟ್ಟು ನಾವು ಪ್ರೀತಿಸುವ ಸ್ನೇಹಿತರನ್ನು ದೂರವಿಡಬೇಕು ಎಂದರೂ ಸಾಧ್ಯವಾಗದು. ನೆನಪುಗಳು ಸುತ್ತಿಸುತ್ತಿ ಬರುತ್ತಲೇ ಇರುತ್ತವೆ. ನಮ್ಮ ನಡುವೆ ಅದೆಷ್ಟೋ ಜನರಿದ್ದರೂ ನಮ್ಮ ಮನಸ್ಸು ಎಲ್ಲರನ್ನೂ ಸ್ನೇಹಿತರೆಂದು ಒಪ್ಪಬೇಕೆಂದಿಲ್ಲ. ಒಪ್ಪಿಕೊಂಡ ಸ್ನೇಹಿತರನ್ನು ಯಾವುದೋ ಕ್ಷುಲ್ಲಕ ನೆಪವೊಡ್ಡಿ ದೂರವಿಡುವ ವರ್ಗ ಮೊದಲಿನಿಂದಲೂ ಇತ್ತು. ಈಗೀಗ ಹೆಚ್ಚಾಗುತ್ತಿದೆ. ಕೆಲವರ ಸ್ನೇಹ ಕಾಲೇಜು ದಿನಕ್ಕೆ ಮಾತ್ರ ಸೀಮಿತವಾಗಿದೆ. ಉದ್ಯೋಗಕ್ಕೆ ಹೋಗುವಾಗ ಅಲ್ಲಿ ಒಂದಷ್ಟು ಜನರ ಪರಿಚಯ, ಸ್ನೇಹ ಎಂಬಿತ್ಯಾದಿ. ಕೆಲವರಿಗೆ ಸಮಯ ಕಳೆಯಲು‌ ನಾಲ್ಕು ಜನ ಬೇಕಲ್ಲ ಎಂದೋ, ಸಿರಿವಂತನೆಂದೋ, ಗುಣವಂತನೆಂದೋ, ಬುದ್ಧಿವಂತನೆಂದೋ ಸ್ನೇಹ ಬೆಳೆಸುವುದುಂಟು. ಆದರೂ ಒಂಟಿಯಾಗಿ ಕೊರಗುವ ಬದಲು ಭಾವನೆಗಳಿಗೆ ಕಿವಿಯಾಗುವ ಒಬ್ಬರಾದರೂ ಸ್ನೇಹಿತನನ್ನು ಹೊಂದಿರಲೇಬೇಕು. ಕೆಲವರು ಹೀರೋಯಿಸಮ್ ತೋರಿಸಲೆಂದೇ ಸಾಕಷ್ಟು ಗೆಳೆಯರ ಬಳಗವನ್ನು ಕಟ್ಟಿಕೊಂಡಿರುತ್ತಾರೆ. ಕಷ್ಟಕಾಲದಲ್ಲಿ ಸಹಾಯಕ್ಕೆ ಬರುವವನೇ ನಿಜವಾದ ಸ್ನೇಹಿತ. ಅವನು ಯಾರೇ ಆಗಿರಲಿ, ಜಾತಿ,ಧರ್ಮ, ಬಣ್ಣ, ಹಣ ಇದ್ಯಾವುದೂ ಸ್ನೇಹಕ್ಕೆ ಅಡ್ಡಿ ಬರುವುದಿಲ್ಲ. ಆದರೆ ಕಾಲೇಜು ಕಾಂಪಸ್ಸಿನಿಂದ ಹೊರ ಬಂದಕೂಡಲೇ ಅದೇ ಬಹು ದೊಡ್ಡ ಗೋಡೆಯಾಗಿ ಮಾರ್ಪಾಡಾಗಿರುತ್ತದೆ. ಕಾರಣವೇ ಇಲ್ಲದೇ ದೂರಸರಿದು, ಮರೆತು ಗೋರಿ ಕಟ್ಟಿ ಕುಸುಮವೊಂದನ್ನು ಇಟ್ಟಿರುತ್ತಾರೆ.
***
ಆದರೂ ಹೆಣ್ಣುಮಕ್ಕಳಿಗೆ ಈ ಸ್ನೇಹವನ್ನು ಹೆಚ್ಚುಕಾಲ ಮುಂದುವರಿಸಲು ಸಾಧ್ಯವಾಗದು. ಅದಕ್ಕೆ ಜೀವಕೊಡಲು ನೆನಪುಗಳಿಗೆ ಮಾತ್ರ ಸಾಧ್ಯವಾಗುವುದೇ ವಿನಃ ಜೊತೆಗೆ ನಡೆಯಲು ಆಗದು. ಕಾರಣ ಮದುವೆಯಾದ ಮೇಲೆ ಅವರ ಜೀವನ ಸಂಪೂರ್ಣ ಬದಲಾಗುತ್ತದೆ. ಅದಕ್ಕೆ ಒಗ್ಗಿಕೊಳ್ಳಲೇಬೇಕು.  ಇಲ್ಲ "ನಾನು ಇರುವುದೇ ಹೀಗೆ, ಸ್ನೇಹಿತರಿಲ್ಲದೇ ನನಗೆ ಬದುಕಲು ಆಗುವುದಿಲ್ಲ, ಅವರೇ ಉಸಿರು, ಅವರೇ ಜೀವ, ಸಾಯುವ ತನಕ ಅವರನ್ನು ದೂರವಿಡಲಾರೆ ಅವರ ಜೊತೆ ಸುತ್ತಾಡಲು ಹೋಗುವೆ, ಬಂಧುಗಳಿಗಿಂತ ಅವರೇ ಹೆಚ್ಚು, ಹಾಗೆ ಹೀಗೆ..." ಎಂದೆಲ್ಲ ದನಿ ಎತ್ತಿದರೆ ತಾಯಿ‌ಮನೆಗೆ ತಿರುಗಬೇಕಾಗ ಬಹುದು. ಉದ್ಯೋಗ ಮಾಡುವ ಜಾಗದಲ್ಲಿಯೂ ಸಲುಗೆಯಿಂದ ವ್ಯವಹರಿಸಿದರೆ ಹೆಸರು ಕೆಡಿಸಿಕೊಳ್ಳಬೇಕಾದೀತು. ಮನೆಯಲ್ಲಿ ಕಿರಿಕಿರಿ ಗಂಡ-ಹೆಂಡಿರ ನಡುವೆ ಅಸಮಾಧಾನ, ಜಗಳ ಹೀಗೆ ಸಮಸ್ಯೆಗಳೆಂಬ ಕುದಿಯುವ ಬಿಸಿನೀರನ್ನು ಮೈಗೆ ಸುರಿದುಕೊಂಡಂತೆ.. ಬೊಕ್ಕೆ ಬಂದು, ಉರಿ ಕಡಿಮೆಯಾಗಿ ಆದ ಗಾಯ ಗುಣವಾದರೂ ಕಲೆ ಮಾತ್ರ ಮಾಸದು.. ಕೊನೆಗೆ ಮನೆಯವರೆಲ್ಲ ಹುಡುಗಿಯ ಸುತ್ತಕುಳಿತು ಪುಂಕಾನುಪುಂಕ ಬುದ್ಧಿ ಮಾತುಗಳನ್ನಾಡಿ "ಯಾಕೆ ಬೇಕು ನಿನಗೆ ಇದೆಲ್ಲಾ..?!" ಎಂದು ಕೇಳುವವರೇ ಜಾಸ್ತಿ.. ಆಗ ಬೇಡವೆಂದರೂ ಒಂದು ರೀತಿಯ ವೇದನೆ ಅತೀಯಾಗಿ ಕಾಡುವುದು. ನಾನು ಕೊಟ್ಟ ಮಾತನ್ನು ಉಳಿಸಿಕೊಳ್ಳಲಾಗಲಿಲ್ಲ ಎಂದು. ಎಲ್ಲದರಲ್ಲಿಯೂ ವಿಶಾಲ ಮನೋಭಾವದಿಂದ ನೋಡುವ ಗಂಡಾಗಲಿ/ ಹೆಣ್ಣಾಗಲಿ ನನ್ನ ಸಂಗಾತಿ ಬೇರೆಯವನ/ಳ ಜೊತೆ ಅತಿಯಾಗಿ ಇಲ್ಲದಿದ್ದರೂ ಸಲುಗೆಯಿಂದ ಇರುವುದ ನೋಡಿದರೆ ಸಹಿಲಾರರು. ಹೊಟ್ಟೆಉರಿಯೋ ಇಲ್ಲಾ ಪೊಸೆಸಿವ್ ಆಗಿಯೋ ವರ್ತಿಸುವುದು ಸಹಜ. ಅದನ್ನು ತಪ್ಪು ಎನ್ನಲೂ ಆಗದು. ಆದರೆ ಅದೇ ಅನುಮಾನಕ್ಕೆ ತಿರುಗಿ ಮಾನಸಿಕವಾಗಿ/ ದೈಹಿಕವಾಗಿ ಹಿಂಸಾಚಾರಕ್ಕೆ ಬದಲಾದರೆ ಮಾತ್ರ ಖಂಡಿಸಬೇಕಾಗುತ್ತದೆ. ಆಗ ಹೆಣ್ಣಿನ ಹೆತ್ತವರು ಒಡಹುಟ್ಡಿದವರು ಅಲಕ್ಷ್ಯಮಾಡದೇ ಅವಳ ನೋವಿನ ಮಾತನ್ನು ತಳ್ಳಿಹಾಕದೇ ಗಂಭೀರವಾಗಿ ಪರಿಗಣಿಸಿ ಒಂದು ನಿರ್ಧಾರಕ್ಕೆ ಬರಬೇಕಾಗಿತ್ತದೆ..
**
ಈಗೀಗ ಸಾಮಾಜಿಕ ಜಾಲತಾಣ ಇರುವುದರಿಂದ ಬೇಡವೆಂದರೂ ಹಳೆಯ ಗೆಳೆಯ/ತಿಯರೆಲ್ಲ ಸಿಗುತ್ತಾರೆ.  ಹಳೆಯ ಮೊದಲ ಪ್ರೀತಿ ಕೂಡ ಕೆಲವೊಮ್ಮೆ ಚಿಗುರಬಹುದು. ವಾಟ್ಸ್ ಅಪ್ ನಿಂದ ಮತ್ತೆ ಹಳೆಯ ನೆನಪುಗಳನ್ನು  ಮೆಲುಕು ಹಾಕುತ್ತಾ ಹರಟುತ್ತಾ ಇನ್ನೊಂದು ಜೀವಕ್ಕೆ ಮೋಸಮಾಡುತ್ತಿರಬಹುದು. ಬಹುಮುಖ್ಯವಾದುದೆಂದರೆ ನಮಗೆ ಸರಿ ಎನಿಸಿದ್ದು ಮಾಡಿದಾಗ ಯಾರ ಮಾತು ನೆನಪಾಗಿವುದಿಲ್ಲ. ಅದೇ ಬೇರೆಯವರು ಆ ತಪ್ಪನ್ನೇ ಮಾಡಿದಾಗ ಎತ್ತಿ ತೋರಿಸುತ್ತೇವೆ. ಬಾಗಿ ಬೆನ್ನು ತೋರಿಸಿದರೆ ನಾಲ್ಕು ಪೆಟ್ಟು ಕೂಡ ಕೊಡುತ್ತೇವೆ. ಹಾಗಾಗಿ ಈ ಸಾಮಾಜಿಕ ಜಾಲತಾಣದಿಂದ ಒಂದಷ್ಟು ಜನರ ನೆಮ್ಮದಿ ಕೆಟ್ಟಿರುವುದಂತು ನಿಜ. ಕೆಲ ಸಂಬಂಧಗಳಲ್ಲಿ ಬಿರುಕು ಮೂಎಇರುಬುದಂತೂ ನಿಜ. ಇನ್ನು ಕೆಲವು ಗಂಡಸರು ದಬ್ಬಾಳಿಕೆ ಮಾಡುವುದು, ಕೈಹಿಡಿದ ಸಂಗಾತಿಯ ಮನದ ಇಚ್ಛೆಯನ್ನು ಅರಿತುಕೊಳ್ಳುವ ಮನಸ್ಸು‌ ಮಾಡದೇ, ಅವರ ಆಸಕ್ತಿಗಳೇನು? ಎಂದು ಕೇಳದೆ ಕೇವಲ ಮನೆ ಕೆಲಸಕ್ಕೆ ಸೂಕ್ತೆ ಎನ್ನುವಂತೆ ಬಿಂಬಿಸಿ ಮತ್ತಷ್ಟು ಮಾನಸಿಕವಾಗಿ‌ ಕುಗ್ಗಿಸುವುದು. ಅತ್ತೆಮಾವನವರ ಕಿರಿಕುಳ ಅದಕ್ಕೆ ಸಾಥ್ ಕೊಡಲು. ಹೀಗೆಲ್ಲ ಇರುವಾಗ ನಡುನಡುವೆ ಸಂಜೆ ತಂಗಾಳಿಯಾಗಿ ಹಳೆಯನೆನಪುಗಳೆಲ್ಲ ಮೈಸೋಕಿ ಹೋಗುವಾಗ ಮನಸಿಗೊಂದು ರೀತಿಯ ರೋಮಾಂಚನವಾಗಿವುದು. ಸ್ನೇಹಿತರ ನೆನಪು, ಕಾಲೇಜು ದಿನಗಳು ಕಾಡತೊಡಗಿದಾಗ ಬೇಡವೆಂದರೂ ಕಂಗಳಲಿ ಹನಿ ತುಂಬಿಕೊಳ್ಳುವುದು. ಆ ದಿನ ಮತ್ತೆ ಬರುವುದಿಲ್ಲವೆಂದು ಒಪ್ಪಿಕೊಂಡಾಗ ಬೇಕಂಯಲೇ ಕಲ್ಲಾಗಿ ಹೋಗಬೇಕಾಗುತ್ತದೆ.. ಯಾರೊಂದಿಗೂ ಮಾತನಾಡಲು ಆಗದು. ಯಾರ ಸಂಪರ್ಕದಲ್ಲಿ ಇರಲು ಅಸಾಧ್ಯವೆಂದಾಗ ಸ್ನೇಹಿತರೆಲ್ಲರನ್ನೂ  ಮರೆತಂತೆ ನಟಿಸಬೇಕಷ್ಟೆ..

~ ಸಿಂಧುಭಾರ್ಗವ್.ಬೆಂಗಳೂರು 

ಕವನ - ಒರಟು ಕಲ್ಲಿನ ಸಂಧಿಯಿಂದ



ಒರಟು ಕಲ್ಲಿನ ಸಂಧಿಯಿಂದ ಪ್ರೀತಿಬಳ್ಳಿ ಚಿಗುರಿದೆ...
ಕುರುಚಲು ಗಡ್ಡಕೊಂದು ಮೊದಲ ಮುತ್ತು ಸಿಕ್ಕಿದೆ..

ಬೆಂಕಿ ಆತ ಕರಗಿದ ಬೆಣ್ಣೆಯಂತೆ..
ಬೆಣ್ಣೆ ಈಕೆ ಪ್ರೀತಿಯಲಿ ಮಗುವಿನಂತೆ..

ಮನಸು ಮಾಯವಾಗಲು ಕಣ್ಣೋಟವೇ ಸಾಕಾಯ್ತು..
ಪ್ರೀತಿ ಕುಸುಮ ಅರಳಿ ಸಲುಗೆ ಹೆಚ್ಚಾಯ್ತು..

ಸಿಡಿಲಿನ ಮಳೆ ಬಂದರೂ ನೆನೆಯುವ ಆಸೆಯಾಗಿದೆ..
ಕಾಡುಮರಗಳಿಂದ ಹೂವುಗಳ ಘಮವು ಹರಡಿದೆ..

ಮಾಯಾವಿನಿಯಾಗಿ ನಾನು ನಿನ್ನ ಜೊತೆ ಹೆಜ್ಜೆಹಾಕಬೇಕಿದೆ..
ಮುದ್ದು ಮಾಡುತಾ ಸಮಯ ಕಳೆಯಬೇಕಿದೆ..

ಸೋಲುತಿಹೆನು ಆದರೂ ಗೆಲುವೇ ನನಗೆ..
ನಿನ್ನ ಪಡೆದ ಭಾಗ್ಯ ವರ್ಣಿಸಲಿ ಹೇಗೆ?!

~ ಸಿಂಧುಭಾರ್ಗವ್.

ಕವಿತೆ- ನಿನ್ನ ನೆನಪಿನ ಮಳೆಯೇ ತಂಪು



ತಂಪು ತಂಪು ನಿನ್ನ ನೆನಪಿನ ಮಳೆಯೇ ತಂಪು
ಇಂಪು ಇಂಪು ನಿನ್ನ ನೆನಪಿನ ಸವಿಗಾನವಿಂಪು
ಗುನುತಿರುವೆ ,ನೆನೆಯುರುವೆ
ನೆನಪಿನ ಮಳೆಯಲಿ
ಗುನುಗುತಿರುವೆ , ನೆನೆಯುತಿರುವೆ
ಹಾಡಿನ ಲಯದಲಿ..
||ತಂಪು ತಂಪು||
***
ಈ ಸಂಜೆ ಮಂದ ದೀಪದಡಿ ನಡೆಯುವುದೇ ತಂಪು..
ಜೀರುಂಡೆ ಹಾಡುವುದು ಕಿವಿಗೆ ಇಂಪು..
**
ಮಿಂಚುಹುಳ ಮಿನುಗುವುದ ನೋಡುವುದೇ ತಂಪು.
ಪಂಚಿಗಳೆಲ್ಲ ಹಾಡುತ ಗೂಡು ಸೇರುವುದೇ ಇಂಪು..
**
ಮೋಡಗಳ ಬಿರುಸಿನ ಓಟ ನೋಡುವುದೇ ತಂಪು.
ಗುಡುಗು ಸಿಡಿಲಿನ ಸಂಗೀತವೇ ಮನಸಿಗೆ ಇಂಪು...
**
ಮಳೆಬರಲಿ ಒಮ್ಮೆ..
ಮನಬಿಚ್ಚಿ ಕುಣಿದರೆ ಆಗುವುದು ತಂಪು..
ಪ್ಯಾತೋ ಸಾಂಗಿಗೂ ರಾಪ್ ಮ್ಯೂಸಿಕ್ ಬೆರೆಸಿದಂತೆ ಇಂಪು..
*
ನಿನ್ನ ವಿರಹವೀಗ ನೀಡುತಿದೆ ಹಿತವಾದ ತಂಪು..
ಜೊತೆಗಿರುವಾಗಿನ ಖುಷಿಗಿಂತ ದುಪ್ಪಟ್ಟಾದ ಇಂಪು..
~~~~~
- ಸಿಂಧುಭಾರ್ಗವ್

Monday 19 December 2016

Donate Your Eyes Sindhu Bhargav



@()@


@()@


@()@


@()@


ನನಗೊಂದು ಆಸೆ ಇದೆ. ಕಷ್ಟದಲ್ಲಿರುವವರಿಗೆ ಧನ ಸಹಾಯ ಮಾಡಬೇಕು. ನಾಲ್ಕು ಬಡಮಕ್ಕಳಿಗೆ ಅವರ ವಿಧ್ಯಾಭ್ಯಾಸಕ್ಕೆ ಸಹಾಯ ಮಾಡಬೇಕು ಎಂದು. ಸಧ್ಯದ ಪರಿಸ್ಥಿತಿಯಲ್ಲಿ ನನಗದು ಸಾಧ್ಯವಿಲ್ಲ. ಇನ್ನೂ ಸಮಯವಿದೆ ಮುಂದೆ ಆಗುತ್ತದೆ ಎಂಬುದು ನಂಬಿಕೆ ಕೂಡ ಇದೆ...
ಅದೇ ಸಮಯದಲ್ಲಿ ಈ ನೇತ್ರದಾನದ ಬಗ್ಗೆ ಕೇಳ್ಪಟ್ಟೆ. ನೇತ್ರದಾನ ಮಹಾದಾನ. ಇಬ್ಬರು ಅಂಧರಿಗೆ ನಮ್ಮ ಕಣ್ಣುಗಳು ಬೆಳಕಾಗುತ್ತವೆ ಎಂದೆನಿಸಿದರೆ ಮೈ ರೋಮಾಂಚನವಾಗುತ್ತದೆ. ತಡಮಾಡಲಿಲ್ಲ. ಫಾರ್ಮ ಭರ್ತಿಮಾಡಿ ಸೆಂಡ್ ಮಾಡಿದೆ. ಕಾರ್ಡ್ ಕೂಡ ಬಂದಿತು.ಮನಸ್ಸಿಗೆ ನೆಮ್ಮದಿಯಾಯ್ತು. ಹೆಮ್ಮಯೂ ಕೂಡ.. ಮಾಹಿತಿ ತಿಳಿಸಿದ ಸಂತೋಷ್ ಶೆಟ್ಟಿಗೆ ಹೃತ್ಪೂರ್ವಕ ವಂದನೆಗಳು. ಲಯನ್ಸ್ ಕ್ಲಬ್ ವತಿಯಿಂತ ನಡೆಯುವ ಕಾರ್ಯಕ್ರಮ ಇನ್ನಷ್ಟು ಯಶಸ್ಸು ಕಾಣಲಿ.

- ಸಿಂಧು ಭಾರ್ಗವ್. 🍁

(@)(@)(@)

Eye Pledge Card. Donate your Eyes...
~~~~

ನಾವು ಸತ್ತ ಮೇಲೆಯೂ ಹುಡುಗರಿಗೆ ಲೈನ್ ಹಾಕ್ಬೇಕಂತಿದ್ರೆ ನೇತ್ರದಾನ ಮಾಡಿ.
-ಹಳೇ ಡೈಲಾಗ್.

ನಾವು ಸತ್ತ ಮೇಲೂ ಫ಼ೇಸ್ಬುಕ್ ವಾಟ್ಸ್ಅಪ್ ನೋಡ್ಬೇಕಂತಿದ್ರೆ ನೇತ್ರದಾನ ಮಾಡಿ.
- ಹೊಸ ಡೈಲಾಗ್..

ಆದರೆ,
ಈ ಪ್ರಕೃತಿ ನಮಗೆ ಏನೆಲ್ಲಾ ಕೊಟ್ಟಿದೆ..‌ ಶಾಂತ ಸ್ವರೂಪಿ, ತ್ಯಾಗ-ತಾಳ್ಮೆಯ ಮೂರ್ತಿಮಾತಾ.
ಹಸಿರು ಹೊದ್ದ ಈ ಸುಂದರ ಪ್ರಕೃತಿಯನ್ನ ನೀವು ಸತ್ತ ಮೇಲೂ ನೋಡಬೇಕೆಂದಿದ್ದರೆ , ನೇತ್ರದಾನ ಮಾಡಿ.
- ಇದು ನನ್ನ ಡೈಲಾಗ್.
~~~~

" #LoveNature_LoveYourAttitude "
" #ಹಸಿರೇಉಸಿರು_ನಮ್ಮ ಕಣ್ಣು ಮಣ್ಣಲ್ಲಿ ಮಣ್ಣಾಗುವ ಬದಲು ಇನ್ನೊಬ್ಬರಿಗೆ ಬೆಳಕಾಗಲಿ"

~~~~

- ಸಿಂಧು ಭಾರ್ಗವ್ 🙏

Sunday 18 December 2016

ಕಥೆ: ರಾಧಾ ನೆನಪಾದಳು

)(@)(@)(@)(@)(
ಕಥೆ: ಯಾಕೋ ರಾಧಾ ನೆನಪಾದಳು..
ಹಳ್ಳಿ ಜೀವನವೆಂದರೇ ಹಾಗೆ. ಹಸಿರು ಹೊದ್ದು ಮಲಗಿರುವ ಗದ್ದೆತೋಟಗಳು, ಅಡಿಕೆ ತೆಂಗು ಮರಗಳ ನಡುವೆ ಸುಳಿದಾಡೋ ತಂಗಾಳಿ, ನವಿಲಿನ ನರ್ತನ, ಹಿಮ. ಮಂಜು ಮುಸುಕಿದರೆ ಸಾಕು ಏನೋ‌ ಕೇಡು ಸಂಭವಿಸಬಹುದು ಎಂಬ ಮುನ್ಸೂಚನೆ, ನಡು ರಾತ್ರಿಯಲಿ ಗೀಳಿಡುವ ನರಿಗಳ ದನಿಕೇಳಿದರೆ ಸಾಕು ಭಯಕ್ಕೆ ಅಮ್ಮನ ತಬ್ಬಿಕೊಳ್ಳುವುದು, ಗಂಟೆ ಕಟ್ಟಿದ ಅಂಬಾ ಕರು, ಮುಂಜಾನೆ ಕರೆದ ಹಾಲನು ಡೈರಿಗೆ  ಕೊಟ್ಟು ಮತ್ತೆ ಸ್ಕೂಲಿಗೆ ಹೋಗುವುದು, ಸತ್ಯವೆಂದರೆ ಸತ್ಯ, ಮುಗ್ಧರೆಂದರೆ ಮುಗ್ಧರೇ. ಕೆಲವರು ಮೋಸ ವಂಚನೆ ಮಾಡಿಯೇ ಜೀವನ ನಡೆಸುವವರು, ಕೆಲವರು ಬ್ರೋಕರ್ಗಳು. ಕೆಲವರು ಸ್ವಾಭಿಮಾನಿಗಳು, ಛಲವಂತರು, ಕಷ್ಟಪಟ್ಟು ದುಡಿಯುವವರು. ಕೆಲವರು ಮೈಗಳ್ಳರು. ನಮ್ಮ ಮನೆಕೆಲಸಕ್ಕೆ ತೋಟದ ಕೆಲಸಕ್ಕೆ ಹತ್ತಾರು ಜನ ಗಂಡಾಳು, ಹೆಣ್ಣಾಳುಗಳು ಬರುತ್ತಿದ್ದರು. ಬಾಯಿತುಂಬಾ "ಅಮ್ಮಾ" ಎಂದು ಕರೆಯಿಸಿಕೊಳ್ಳುವ ಗತ್ತು-ಗಮ್ಮತ್ತೇ ಬೇರೆಯದಾಗಿತ್ತು. ಅವರಲ್ಲಿ ರಾಧಾ ಅಜ್ಜಿ ಕೂಡ ಒಬ್ಬಳು. ಸುರಸುಂದರಿ, ಬೆಳ್ಳಗಿನ ತಿಳಿ ಮಜ್ಜಿಗೆ, ಸಪೂರ ಮೈಕಟ್ಟು, ಆಗಿನ ಕಾಲದ ಹೀರೋಯಿನ್ ತರಹ, ಅಲ್ಲದೇ ಛಲವಂತೆ,ಪರಿಶ್ರಮಿ, ಎಲ್ಲರನ್ನೂ ನಕ್ಕು ನಗಿಸುವ ವಿದೂಷಕಿ, ಮಿಮಿಕ್ರೀ ಮಾಡುವಳು, ಸುಗ್ಗೀ ಹಾಡು ಹಾಡುವಳು, ಅಬ್ಬಾ...!! ಅವಳು ಸಕಲಕಲಾ ವಲ್ಲಭೇ.
***
ಅದು 1940 ರ ಕಾಲ. ವಯಸ್ಸಿನ್ನು ಹನ್ನೆರಡಾಗಿರಲಿಲ್ಲ ರಾಧಾಳನ್ನು ಮದುವೆ ಶಾಸ್ತ್ರ ಮುಗಿಸಿ ಗಂಡನ ಮನೆಗೆ ಕಳುಹಿಸಿದರು. ಮದುವೆ ಆದ ಮೇಲೆಯೇ ಗಂಡನ ಮುಖನೋಡಿದ್ದು. ಘಟ್ಟ ಅಂದರೆ ಗೊತ್ತಲ್ಲ, ತೀರ್ಥಹಳ್ಳಿಯಲ್ಲಿ ಗಂಡನ ಮನೆ. ಅವನು ಚಿಕ್ಕ ಹುಡುಗನಾಗಿದ್ದಾಗಿನಿಂದ ಭಟ್ಟರ ಮನೆಯ ಅಡಿಕೆ ತೋಟಕ್ಕೆ ಬೆಚ್ಚಪ್ಪನಾಗಿದ್ದ. ಅಂದರೆ ಅವನ ತಂದೆ ತಾಯಿ ಒಡಹುಟ್ಟಿದವರು ಎಲ್ಲರೂ ಅಲ್ಲೇ ಇರುವುದು.. ಇವಳೋ ಮುದ್ದಾಗಿ ಸಾಕಿದ್ದ ಹೆಣ್ಮಗಳಾದರೂ ಗಂಡನ ಜೊತೆ ಹೆಜ್ಜೆ ಹಾಕಿದ ಮೇಲೆ ಅಲ್ಲಿಗೆ ಸರಿಯಾಗಿ ಇರಲೇ ಬೇಕಲ್ಲ ಎಂದು ಅಡಿಕೆ ಸುಲಿಯುವುದು, ಬೇಯಿಸುವುದು ಎಲ್ಲಾ ಕೆಲಸವನ್ನು ಬಲುಬೇಗನೇ ಕಲಿತುಕೊಂಡಳು. ನಗುಮೊಗದಿಂದ ಎಲ್ಲರ ಮನಗೆದ್ದಳು. ಆದರೆ ಗಂಡ ಕುಡುಕ, ಬೇಡವೆಂದರೂ ರಾತ್ರಿ ಯಕ್ಷಗಾನ ನಡೆಯುವಲ್ಲಿ ಹೋಗುತ್ತಿದ್ದ. ಅಲ್ಲಿ ಏನಾದರೂ ಸಹಾಯ ಮಾಡಿ ನಾಲ್ಕು ಪುಡಿಕಾಸು ಜೇಬಿಗಿಳಿಸುತ್ತಿದ್ದ. ವರುಷದೊಳಗೆ ಮೊದಲ ಮಗುವಿನ ತಾಯಿಯಾದಳು. ಮಗುವನ್ನು ಸಾಕಲು ಭಟ್ಟರ ಮನೆಯವರೇ ಸಹಾಯ ಮಾಡಿದ್ದರು. ಎರಡು ವರುಷಗಳು ಅಂತರದಲ್ಲಿ ಇನ್ನೊಂದು ಗಂಡುಮಗುವಾಯಿತು. ಇವಳಿಗೆ ಗಂಡನ ಪ್ರೀತಿ ಸಿಗುವುದು ಕಡಿಮೆಯಾಯಿತು. ತಾನೇ ದುಡಿದು ಮಕ್ಕಳನ್ನು ಸಾಕಿದಳು. ಆಗೆಲ್ಲಾ ಶಾಲೆಗೆ ಹೋಗುವುದು ಕಡ್ಡಾಯವಾಗಿರಲಿಲ್ಲ. ಹಾಗಾಗಿ ಮಕ್ಕಳಿಬ್ಬರೂ ಓದಿನ ಕಡೆ ಗಮನಕೊಡಲಿಲ್ಲ. ಅಷ್ಟರ ನಡುವೆ ಗಂಡ ಯಕ್ಷಗಾನ ಮೇಳದವರ ಜೊತೆ ಹೋದವನು ಮತ್ತೆ ವಾಪಾಸಾಗಲೇ ಇಲ್ಲ.
***
ಗಂಡ ಇಲ್ಲದ ಹೆಂಗಸನ್ನ ನೋಡುವ ದೃಷ್ಟಿ ಹೇಗಿರುತ್ತದೆ ಎಂದು ಎಲ್ಲರಿಗೂ ಗೊತ್ತು. ಅವಳ ಯವ್ವನೇ ಸುಡುವ ಕೆಂಡವಾಯಿತು. ರಾತ್ರಿ ಕಳೆಯುವುದು ಕಷ್ಟವಾಗುತ್ತಿತ್ತು.  ಕುಡಿದ ನಾಯಿಗಳು ಬೇಕಂತಲೇನೆ ಅವಳ ಮನೆ ಬಾಗಿಲ ಬಡಿದು ಮಾನಸಿಕ ಹಿಂಸೆ ನೀಡುತ್ತಿದ್ದವು. ಆದರೂ ಗಟ್ಟಿಗಿತ್ತಿ. ಹತ್ತಿರ ಬರಲು ಯಾರಿಗೂ ಬಿಡುತ್ತಿರಲಿಲ್ಲ. ಅಲ್ಲದೇ ಸೋಂಟೆ ಹಿಡಿದು ಅತೀಯಾಗಿ ವರ್ತಿದುವವರಿಗೆ ಮೈಕೈ ಮುರಿಯುವಷ್ಟು ,ಬಾಸುಂಡೆ ಬರುವಷ್ಟು ಹೊಡೆದಿದ್ದಳು. ಹಗಲು ರಾತ್ರಿ ಅರೆಬರೆ ನಿದ್ದೆ ಕಣ್ಣಿನಲ್ಲಿಯೇ ಕಳೆಯುತ್ತಿದ್ದಳು. ಅದನ್ನು ಗಮನಿಸಿದ ಭಟ್ಟರ ಅಮ್ಮ ತನ್ನ ಮನೆಯ ಪಕ್ಕದಲ್ಲಿ ಗುಡಿಸಲು ಕಟ್ಟಿಕೊಂಡು ವಾಸವಾಗಿರಲು ಹೇಳಿದರು.ಆಗ  ಜೀವಕ್ಕೆ ಸ್ವಲ್ಪ ಧೈರ್ಯ ನೆಮ್ಮದಿ ಬಂತು. ಗಂಡಬೇಗ ವಾಪಾಸಾಗಲಿ ಎಂದು ಕಂಡಕಂಡ ದೇವರಲ್ಲಿ ಪ್ರಾರ್ಥಿಸುವುದೇ ಆಯಿತು. ಕೊನೆಗೂ ಆರು ವರುಷದ ನಂತರ ಗಂಡ ಬಂದ. ಕುಡಿತದಲ್ಲಿ ಸ್ನಾನ ಮಾಡುತಲಿದ್ದ. ಮಕ್ಕಳಿಗೆ ಮಾತನಾಡಿಸಲೂ ಇಷ್ಟವಾಗಿರಲಿಲ್ಲ. ರಾಧಾಗೆ ಅವನನ್ನು ನೋಡಿ ಅಳುವೇ ಬಂದಿತು. ಬಿಸಿಬಿಸಿ ಅಡುಗೆ ಮಾಡಿ ಬಡಿಸಿದಳು ಕರ್ತವ್ಯವೆಂಬಂತೆ ಮಾಡಿ ಮುಗಿಸಿದಳು. ಆ ರಾತ್ರಿ ಏನಾಯಿತೋ ಗೊತ್ತಿಲ್ಲ. ಮತ್ತೆ ಒಂದು ವಾರ ಹೆಂಡತಿಯ ಸೆರಗಿನಲ್ಲೇ ಅಂಟಿಕೊಂಡಿದ್ದ. ಆದರೂ ಅವಳಿಗೆ ಇಷ್ಟವಾಗುತ್ತಿರಲಿಲ್ಲ. ಮತ್ತೆ ಮೇಳದವರು ಕರೆದರೆಂದು ಹೊರಟೇ ಬಿಟ್ಟ. ಇವಳು ಬೇಡವೆಂದು ಗೋಗರೆದರೂ ಕೇಳಿಸಿಕೊಳ್ಳಲೇ ಇಲ್ಲ. "ಅಮ್ಮಾವ್ರೆ.. ಅವನು ಇನ್ನು ಬಂದರೂ ನಾನು ಸೇರಿಸಿಕೊಳ್ಳುವುದಿಲ್ಲ.. ಬೇಜವಾಬ್ದಾರಿ ಮನುಷ್ಯ ಅವ. ಮಕ್ಕಳನ್ನು ನಾನೇ ದುಡಿದು ಸಾಕ್ತೇನೆ.." ಎಂದು  ತನ್ನ ನೋವನ್ನು ಹೊರಹಾಕಿದಳು. ಅಷ್ಟರಲ್ಲಿ ಮತ್ತೆ ವಾಂತಿ ಮಾಡಿದಳು. ಬೇಡವೀ ಪಿಂಡವೆಂದು ತೆಗೆಸಿಕೊಳ್ಳು ಯಾವುದೋ ಮರದ ಕೆತ್ತೆ ಕಡಿದು ಕುಡಿದಳು. ಉ.ಹುಂ ಗಟ್ಟಿಪಿಂಡ ಸಾಯಲಿಲ್ಲ. ಅಂತೂ ಹೇರಿಗೆ ನೋವು ಕಾಣಿಸಿಕೊಂಡಿತು. ಮುದ್ದಾದ ಹೆಣ್ಣುಮಗು ಹಡೆದಳು. ಆ ಮಗುವು ರಾಧಾಳನ್ನೇ ಹೋಲುತ್ತಿತ್ತು. ಕೆಂಪು-ಕೆಂಪು ಮುಖದ ಗೊಂಬೆಯ ರೀತಿ ಮುದ್ದಾಗಿತ್ತು. ನೋಡಿ ಖುಷಿಯಾಯಿತು. ಹೇಳಬೇಕೆಂದರೆ ರಾಧಾಳಿಗೆ ಇಬ್ಬರು ಅಣ್ಣಂದಿರು, ಇಬ್ಬರು ಅಕ್ಕಂದಿರು ಹಾಗೆ ನಾಲ್ಕು ಜನ ಸಮವಾಗಿ ತಮ್ಮ, ತಂಗಿ ಇದ್ದ ದೊಡ್ಡ ಕುಟುಂಬವಾಗಿತ್ತು. ಅವಳ ಕಷ್ಟ ಅಣ್ಣನಿಗೆ ನೋಡಲಾಗಲಿಲ್ಲ. "ಮನೆತುಂಬಾ ಮಕ್ಕಳಿದ್ದಾರೆ. ನೀನು ಊರಿಗೆ ತಿರುಗಿ ಬಂದುಬಿಡು, ಇಲ್ಲೆ ಒಂದು ಕೆಲಸನೋಡಿದರಾಯಿತು. ಪಾಲಿನ ಜಾಗದಲ್ಲಿ ಮನೆ ಕಟ್ಟಿಕೊಂಡು ಜೀವನ ನಡೆಸು.." ಎಂದ.
***
ಮತ್ತೆ ಹೊಸ ಜೀವನ ಪ್ರಾರಂಭ. ಆಗ ನಾವೆಲ್ಲ ಐದಾರು ವರುಷದ ಪುಟ್ಟಮಕ್ಕಳಷ್ಟೆ. ಅವಳ ಮಕ್ಕಳು ದೊಡ್ಡವರಾಗಿದ್ದರು ಮದುವೆ ಆಗುವ ವಯಸ್ಸಾಗಿತ್ತು. ಗಾರೆ ಕೆಲಸ ಮಾಡಿಕೊಂಡು ಎರಡನೇ ಮಗ ನ್ಯಾಯಯುವ ಜೀವನ ನಡೆಸುತ್ತಿದ್ದ. ಮೊದಲನೇ ಮಗ ತಂದೆಯ ರಕ್ತವೇ ಹರಿಯುವುದನ್ನು ತೋರಿಸಿಕೊಟ್ಟ. ಯಕ್ಷಗಾನ ಬಯಲಾಟದ ಮೇಳಕ್ಕೆ ಸೇರಿದ್ದ. ಹಗಲು ನಿದಿರೆ,ರಾತ್ರೆ ಕುಣಿತ ಅದೇ ಜೀವನವಾಗಿತ್ತು. ಮಗಳಿಗೆ ಯೋಗ್ಯವಾದ ವರನ ನೋಡಿ ಮದುವೆ ಮಾಡಿಸಿದರು. ಆದರೆ ಅವಳು "ಅಮ್ಮನ ಬಿಟ್ಟು ಎಲ್ಲಿಗೂ ಹೋಗುವುದಿಲ್ಲ.." ಎಂದು ಆಸ್ತಿಯಲ್ಲಿ ಪಾಲು ಕೇಳಿ ಅಲ್ಲಿಯೇ ಒಂದು ಮನೆ ಕಟ್ಟಿಕೊಂಡಳು. ಗಂಡನು ಬಾಯಿಮುಚ್ಚಿಕೊಂಡು ಬಂದ. ಆದರೆ ಕೈಯಲ್ಲಿ ಕೆಲಸವೆಂಬುದಿರಲಿಲ್ಲ. ಹೆಂಡತಿಗೆ ಹೊಡೆಯುವುದು, ಹಣ ಕೇಳುವುದು, ಕುಡಿಯುವುದು ಹೀಗೆ ಹಿಂಸಾಕೂಪವಾಗಿತ್ತು ಅವಳ ಸಂಸಾರ. ರಾಧಾಳಿಗೆ ರಾತ್ರಿ ನಿದಿರೆಯೇ  ಮಾಡುತ್ತಿರಲಿಲ್ಲ. ನಂಬಿದ ದೇವರಿಗೆ ಒಂದು ಹರಿಕೆ ಹೊತ್ತು ಮಗಳ ಸಂಸಾರ ಸರಿಯಾಗಲಿ ಎಂದು ಬೇಡಿಕೊಂಡಳು. ದೊಡ್ಡ ಮಗನೋ ಎಲ್ಲಿಯೋ ಯಕ್ಷಗಾನ ಆಟಕ್ಕೆ ಹೋದಾಗ ಒಂದು ಹುಡುಗಿಯ ಕಂಡಿದ್ದ. ಸಿರಿವಂತರ ಮನೆ ಹುಡುಗಿಯವಳು. ಅವಳನ್ನೇ ಮದುವೆ ಆಗುವೆ ಎಂದು ಅವಳ ಸಹೋದರನಲ್ಲಿ ಕೇಳಿ ಒಮ್ಮೆ ಉಗಿಸಿಕೊಂಡಿದ್ದ. ಪಟ್ಟು ಹಿಡಿದು ಅವಳೇ ಬೇಕು ಎಂದು ಹಟಮಾಡಿ ಮದುವೆಯಾದ. ಚೆನ್ನಾಗಿಯೇ ಸಂಸಾರ ನಡೆಯುತ್ತಿತ್ತು. ಆದರೆ ಮನೆಯ ಪಾರುಪತ್ಯ ಪೂರ್ತಿ ಹೆಂಡತಿಯದೇ ಮತ್ತು ಅವಳ ಮನೆಯವರದೇ ಆಗಿತ್ತು. ಆದರೂ ಅವನು ದಾರಿಗೆ ಬಂದನಲ್ಲ ಎಂದು ರಾಧಾ ನಿಟ್ಟುಸಿರು ಬಿಟ್ಟಳು. ಇನ್ನು ಎರಡನೇ ಮಗನಿಗೆ ಸಂಬಂಧ ಬಂದಿತ್ತು. ಹುಡುಗಿಯ ನೋಡಿ ಒಪ್ಪಿದ, ಮದುವೆಯೂ ಆಯಿತು. ಅಲ್ಲಿಂದ ಶುರುವಾಯಿತು ನೋಡಿ ಮಕ್ಕಳ ನಿಜರೂಪ. ಅವರ ಯಕ್ಷಗಾನ ಬಯಲಾಟ..
***
ಮೊದಲಿನ ಸೊಸೆ ಅತ್ತೆಗೆ (ರಾಧಾಳಿಗೆ) ಊಟವಿರಲಿ ,ತೊಟ್ಟು ನೀರು ಕೊಡಲು ನಿರಾಕರಿಸಿದಳು. "ಎರಡನೇ ಮಗನ ಮನೆಯಿದೆ ತಾನೆ, ಹೋಗಲಿ ಅಲ್ಲಿಗೇ.. ಮಗಳೂ ಇಲ್ಲೇ ಇದ್ದಾಳೆ.. ನಾವ್ಯಾಕೆ ಮಾಡಬೇಕು ಎಂದು ದಿನ ಬೆಳಗಾದರೆ ಬೈಯುವುದು, ಹಂಗಿಸುವುದು. ಅವಳ ಕೊಂಕುನುಡಿಗಳ ನುಂಗಲಾಗದೇ ಕಣ್ಣೀರಿಡುತ್ತಿದ್ದಳು ನಮ್ಮಮನೆ ಕೆಲಸಕ್ಕೆ ಬಂದಾಗಲೆಲ್ಲ.. ಇನ್ನು ಎರಡನೇ ಸೊಸೆ "ತಿನ್ನಲು ಉಣ್ಣಲು ಏನೂ ತಕರಾರಿಲ್ಲ, ರಾತ್ರಿ ಮಲಗಲು ಮಗಳ ಮನೆಗೇ ಹೋಗಿ.." ಎನ್ನುತ್ತಿದ್ದಳು. ಅಲ್ಲದೇ "ಗಂಡನ (ಎರಡನೇ ಮಗ) ದುಡಿದ ಹಣ ಕೇಳುವಂತಿಲ್ಲ. ನೀವೇ ದುಡಿಯುತ್ತೀರಲ್ಲ. ಬೇಕಾದರೆ ಮಗಳು-ಅಳಿಯ ಕೊಡುವರು" ಎಂದು ವ್ಯಂಗವಾಡುತ್ತಿದ್ದಳು. ಅಳಿಯ ಬೈದರೂ ತನ್ನ ಗಂಡ ಕುಡುಕ ಎಂದು ಮಗಳಿಗೆ ಗೊತ್ತಿತ್ತು. ನನ್ನ ಸಹಾಯಕ್ಕೆ ಅಮ್ಮ, ಅಮ್ಮನಿಗೆ ನಾನು ಎಂದು ಮನೆಯಲ್ಲಿಯೇ ಇರಿಸಿಕೊಂಡಿದ್ದಳು. ಆಗಲೇ ಶುರುವಾಯಿತು ಮಗಳಿಗೆ "ಜೀವದಲ್ಲಿ ರಕ್ತವಿಲ್ಲ, ಲೋ ಬಿ.ಪಿ, ರೆಸ್ಟ್ ಮಾಡಬೇಕು, ಆರೋಗ್ಯದ ಕಡೆ ಗಮನ ಕೊಡಿ, ಕೆಲಸವೇನು ಮಾಡಬೇಡಿ.. ಹೀಗೆ ಡಾಕ್ಟರ್ ರ ಹಿತವಚನಗಳು. ಬಡವರಿಗೆ ಬೇಡದ ಕಾಯಿಲೆಗಳು ಹೊದ್ದು ಮಲಗಲು ಎಂದು ಗೊಣಗುತ್ತಾ ವಾಪಾಸ್ಸಾದಳು. ತಾಯಿಯೇ ದುಡಿದು ಹಣ್ಣು ಹಂಪಲು ತಂದು , ನೆರಮನೆಯಿಂದ ಹಾಲು ಕೇಳಿ ಪಡೆದು ಮನೆಯಲ್ಲಿ ಅಡುಗೆ ಮಾಡಿ ಮಗಳ ಜೊತೆಗೆ ಮೂರ್ನಾಲ್ಕು ಮೊಮಕ್ಕಳನ್ನೂ ಸಾಕಿ ಸಲಹುತ್ತಿದ್ದಳು. ಮನಸ್ಸಿಗೆ ನೆಮ್ಮದಿಯಿಲ್ಲದೇ ಕಳ್ಳು-ಸಾರಾಯಿಯ ಮೊರೆ ಹೋಗಿ ಅದೆಷ್ಟೋ ಬರುಷಗಳೇ ಆಗಿತ್ತು. ಹೊಗೆಸೊಪ್ಪು ತಿನ್ನುತ್ತಿದ್ದಳು. ಅದೊಂದು ಅಭ್ಯಾಸವಾಗಿ ,ಕೆಟ್ಟ ಚಟವಾಗಿಹೋಯ್ತು. ರಾತ್ರಿ ನಿದಿರೆ ಬರಬೇಕಾದರೆ ಕುಡಿಯಲೇ ಬೇಕಿತ್ತು.
ಇದರ ನಡುವೆ ನಮ್ಮ ಮನೆಗೆ ತೋಟದ ಕೆಲಸಕ್ಕೆ ಬಂದಾಗಲೆಲ್ಲ ನಗುತ್ತಾ ನಗಿಸುತ್ತಾ ಮನಸ್ಸಿನ ನೋವು ಮರೆಯುತ್ತಾ ನಮಗೆಲ್ಲ ಮುದ ನೀಡುತ್ತಿದ್ದಳು.
***
ಇಪ್ಪತ್ತು ವರುಷಗಳು ಉರುಳಿದವು. ಈಗ ರಾಧಾ ಹಾಸಿಗೆ ಹಿಡಿದಿದ್ದಾಳೆ. ಕುಡಿತಕ್ಕೆ ಕರುಳು ಸುಟ್ಟು ಹೋಗಿದೆ. ಪಾರ್ಶ್ವವಾಯು ಬಂದು ದೇಹದ ಎಡಭಾಗದ ಯಾವ ಅಂಗಾಂಗಗಳೂ  ಕೆಲಸಮಾಡುತ್ತಿಲ್ಲ. ಯಾರು ಬಂದರೂ,ಹೋದರೂ ಗೊತ್ತಾಗುವುದಿಲ್ಲ. ಕಣ್ಣುಗಳು ಪೊರೆಬಂದು ಕುರುಡಾಗಿದೆ. ಸೊಸೆಯೋ ಯಾವಾಗ ಸಾಯುವರೋ ಎಂದು ಬಂದವರೆದುರೇ ಹೇಳುತ್ತಾಳೆ. ಅಳಿಯ ಸಂಪೂರ್ಣ ಬದಲಾಗಿ ಹೊಸ "ಮಾಂಸಾಹಾರಿ ಊಟದ ಹೋಟೆಲ್" ಮಾಲೀಕನಾದ. ಒಂದು ಗೂಡು ರಿಕ್ಷಾ, ಬೈಕ್, ಕಾರು, ದೊಡ್ಡ ಮನೆ ಕಟ್ಟಿಸಿ ಸಿರಿವಂತನಾದ. ರಾಧಾಳನ್ನು ಅವನೇ ನೋಡಿಕೊಳ್ಳುತ್ತಿದ್ದಾನೆ. ಎರಡನೇ ಮಗ ಕಣ್ಣಿದ್ದೂ ಕುರುಡ. ಕೇಳಿದರೇ ನಮಗೇ ನಮ್ಮದು ಹೆಚ್ಚಾಗಿದೆ ಅನ್ನುವ. ಹೆಂಡತಿ ಹೇಳಿದ ಹಾಗೆ ಕುಣಿಯುವ. ಬದಲಾಗಿ ಹೋಗಿದೆ ಎಲ್ಲರ ಬದುಕು. ರಾಧಾಳನ್ನ ಕೊನೆಗೂ ಚೆನ್ನಾಗಿ ಆರೈಕೆ ಮಾಡಿದ್ದು ಅವಳ ಮಗಳು-ಅಳಿಯನೇ.‌ ಅದಕ್ಕೇ ಹೇಳುವುದು ಮನೆಗೆ ಒಂದಾದರೂ ಹೆಣ್ಮಗಳಿರಬೇಕು ಎಂದು. ಅವಳಿಗೆ ಮಾತ್ರ ದಯೆ,ಕರುಣೆ, ಸಹನೆ, ಪ್ರೀತಿ, ಮಮತೆ ಎಲ್ಲವೂ ಅರ್ಥವಾಗುವುದು. (ಕೆಲವು ಕಡೆಯ ಅಪವಾದದ ಹೊರತಾಗಿ).

- ಸಿಂಧುಭಾರ್ಗವ್.

ಕವಿತೆ: ಬೇಸರ ಕಳೆಯಲು ಬರೆಯುವೆಯಾ

ಕವನ: ಕವಿತೆ ಬರೆಯುವೆಯಾ

ಮನವು ಮಂಕಾಗಿ ಕುಳಿತಿದೆ ಗೆಳೆಯಾ
ನನಗಾಗಿ ಒಂದು ಕವಿತೆ ಬರೆಯುವೆಯಾ

ರಾಗವಿರಲಿ, ತಾಳವಿರಲಿ
ಪ್ರೀತಿ ಕಲಸಿದ ಸಿಹಿ ಪಾಯಸದಂತಿರಲಿ..

ನಗುವ ತರಿಸುವ ವಿನೋದವಿರಲಿ
ಅಳುವ ತರಿಸುವ ವಿಷಾದವಿರಲಿ

ಸರಸವಿರಲಿ, ಜೊತೆಗೆ
ಕಾಡುವ ಸಾಲೊಂದಿರಲಿ..
ವಿರಸವಿರಲಿ, ಜೊತೆಗೆ
ಬೇಡುವ ಬಯಕೆಯೊಂದಿರಲಿ..

ಮನವು ಮಂಕಾಗಿ ಕುಳಿತಿದೆ ಗೆಳೆಯಾ
ನನಗಾಗಿ ಒಂದು ಕವಿತೆ ಬರೆಯುವೆಯಾ...

- ಸಿಂಧುಭಾರ್ಗವ್.

ಕವನ ಆಶಾಮಣಿಗಳ ಮಾಲೆ

ಕವನ : ಆಶಾಮಣಿಗಳ ಮಾಲೆ :

ಬೆಳಕು ಹರಿದಿದೆ ಪಂಚಿ ಹಾರಿದೆ
ಚಿಲಿಪಿಲಿ ಹಾಡು ಕೇಳಿ ಬರುತಿದೆ
ತೊಳೆದ ಮೊಗದಲಿ ಹೊಸ ಕಳೆಯಿದೆ
ದಿನದ ಪುಟವ ಕಾಣ್ವ ತವಕವಿದೆ..

ಮನೆಯಲೇ ಕುಳಿತರೇನು ಬಂತು
ನಡಿ ನೋಡು ಹೊರಗೆ ಹೊಂಟು

ತಪ್ಪುಗಳ ಹುಡುಕುವ ಜನರಗುಂಪು ನೋಡಲ್ಲಿ
ಬೆನ್ನು ಮುರಿದು ಕೆಲಸ ಮಾಡುವರಿಲ್ಲಿ

ಅವರ ಶಕ್ತಿ ಅಡಗಿದೆ ಗುಟುಕು ಚಹಾದಲ್ಲಿ
ನಡುವೆ ಜೀವನಕೆ ಬೇಕಾಗುವ ನುಡಿಯಲ್ಲಿ

ನಮ್ಮ‌ದೇ ಮಾತು ಕೆಲವರಿಗೆ ಸ್ಪೂರ್ತಿ
ನಾವೇ ಕುಳಿತಿರುವೆವು ಮಂಕಾಗಿ ಪೂರ್ತಿ

ದಿನೇ ದಿನೇ ಏರುವುದು ನಶೆ..
ಬದಲಾಗುವುದು ನಮ್ಮ ದೆಶೆ..

ಆಶಾ ಮಣಿಗಳ ಎಣಿಸುತ ಕುಳಿತುಕೊಳ್ಳುವುದಲ್ಲ..
ಮಾಲೆಮಾಡಿ ಕೊರಳಿಗಿಸಿ ಕೆಲಸ ನೋಡಲ್ಲ..

ನಿನ್ನೆಯದು ಇಂದಿಲ್ಲ
ಇಂದಿನದು ನಾಳೆಗಿಲ್ಲ
ಪುಟಗಳು ತಿರುವುತಲೇ ಸಾಗಬೇಕಲ್ಲ..

ಹೊಸ ಉತ್ಸಾಹದ ಜೊತೆಗೆ ಹೆಜ್ಜೆಯಿಡು ನೀನು
ಸಿಕ್ಕಸಿಕ್ಕ ಕೆಲಸವ ಮಾಡಿ ಅನುಭವೀ ಆಗು

ಜೊತೆಗೆ ಜನರ ಸ್ನೇಹ ಬೆಳೆಸು
ನಗುಮೊಗದಿ ಸ್ವಾಗತಿಸು..
ಕೆಲವರಿಂದ ನಗುವು
ಹಲವರಿಂದ ಪಾಠವು ಸಿಗುವುದು ನೋಡು..

ಆ ಶುಭ ಗಳಿಗೆ, ಇಂದು ಸಿಗುವುದೋ
ನಾಳೆ ಬರುವುದೋ‌ ಕಾಯಬೇಡ ಮನವೇ..

ಖುಷಿಯು ಸಂಗಡವಿರಲಿ
ರಂಗು ತುಂಬಿಸು, ಜೀವನ ಸಾಗುತಲಿರಲಿ..
ರಂಗು ತುಂಬಿಸು, ಜೀವನ ಸಾಗುತಲಿರಲಿ..

- ಸಿಂಧುಭಾರ್ಗವ್ 🌷

ಕವಿತೆ ನಿನಗೆಂದೇ ಕವಿತೆಬರೆದೆ

  "ಕವಿತೆ ಬರೆದೆ"

ನಿನ್ನ ಮಂದಹಾಸ ಬೆಳದಿಂಗಳಿನಂತೆ,
ಹಲ್ಲುಗಳೋ ದಾಳಿಂಬೆ ಕಾಳಿಯಂತೆ,
ಕಂಗಳೋ ಮಿನುಗೋ ತಾರೆಗಳಂತೆ,
ಹುಬ್ಬುಗಳು ಥೇಟ್ ಕಾಮನಬಿಲ್ಲಿನಂತೆ...

ಹೇಯ್ ಮುದ್ದು,
ಹೆಂಗಳೆರ ಹೊಗಳುವ ಕವಿಗಳಿದ್ದಾರೆ,
ನಿನ್ನಂದವ ಹೊಗಳುತ ಕವಯಿತ್ರಿಯಾದೆನಲ್ಲಾ..
ಬರೆವ ಕವಿತೆಗಳ ಸಂಖ್ಯೆ ಹೆಚ್ಚುತಿದೆಯಲ್ಲ..

ತಿಂಗಳ ಹುಣ್ಣಿಮೆಗೊಂದು,
ನಿನ್ನ ಹುಸಿ ಕೋಪಕ್ಕೊಂದು,
ನನಗಾಗಿ ಮೀಸಲಿಡುವ ಸಮಯಕ್ಕೆಂದು,
ಜೊತೆಗಿರದಾಗಿನ ವಿರಹ ವೇದನೆಗೆಂದು...

ಹೇಯ್ ಮುದ್ದು,
ಮುದ್ದಾಗಿ ನೀ ನನ್ನಲ್ಲಿ ಇಳಿದ ಬಗ್ಗೆ ಕುತೂಹಲವಿದೆ,
ನಮ್ಮ‌ ಪ್ರೀತಿಗೀಗ ಹೊಸ ರೆಕ್ಕೆ ಬಂದಿದೆ..
ಬಯಕೆಗಳು ಹೆಚ್ಚಾಗಿವೆ , ಕನಸುಗಳು ಲೆಕ್ಕತಪ್ಪಿವೆ..

ಹೊಸ ಪುಟಗಳ ತಿರುವಿದಂತೆಲ್ಲ
ಕೊನೆಯದಾಗಿ ನಿನ್ನ ಹಸ್ತಾಕ್ಷರವಿದೆ..
ಅದನು ಎದೆಗಪ್ಪುತ
ನಯನಗಳು ತೇವಗೊಂಡಿವೆ...

- ಸಿಂಧುಭಾರ್ಗವ್ 🌸

ಲೇಖನ- ಹೆತ್ತವರನ್ನು ಹೆದರಿಸುವ ಮಕ್ಕಳ ಹರೆಯ

ಹೆತ್ತವರನ್ನು ಹೆದರಿಸುವ ಮಕ್ಕಳ ಹರೆಯ :

ಘಟನೆ ೦೧: ತನು ಕಾಲೇಜಿಗೆ ಈಗಷ್ಟೆ ಸೇರಿಕೊಂಡಿದ್ದಾಳೆ. ಎಲ್ಲವೂ ಹೊಸತು. ಹೊಸ ಗೆಳೆಯರು, ಹೊಸ ಜಾಗ, ಹೊಸ ಪ್ರಾಧ್ಯಾಪಕರ ವರ್ಗ ಎಲ್ಲವೂ.. ಪಿ.ಯೂ.ಸಿ ಯ ಮೊದಲ ವರ್ಷಕ್ಕೆ ಹೋಗುವಾಗ ಎರಡನೇ ವರುಷಕ್ಕೆ ಬಡ್ತಿ ಪಡೆದ ಹುಡುಗರು ರೇಗಿಸುವುದು, ತಮಾಷೆ ಮಾಡುವುದು, ಸ್ನೇಹ ಬೆಳೆಸಿಕೊಳ್ಳಲು ನಿಲ್ಲಿಸಿ ಮಾತನಾಡಿಸುವುದು ಎಲ್ಲವೂ ಸಾಮಾನ್ಯವಾಗಿ ನಡೆಯುತ್ತದೆ. ಆದರೆ ತುಂಬಾ ಮುಗ್ದೆಯಾಗಿದ್ದ ತನುವಿಗೆ ಅದು ಹಿಂಸೆ ಎನಿಸತೊಡಗಿತು. ಒಂದು ಹುಡುಗರ ಗುಂಪು ದಿನವೂ ಅವಳ ದಾರಿಗೆ ಅಡ್ಡಲಾಗಿ ನಿಂತು ರೇಗಿಸುತ್ತಿದ್ದರು. ಅವರಲ್ಲೇ ಇರುವ ಸ್ನೇಹಿತನಿಗೆ (ರಾಜ್) ಪ್ರೀತಿ ನಿವೇದನೆ ಮಾಡಬೇಕೆಂದು ತಾಕೀತು ಮಾಡಿದ್ದರು. ಅದನ್ನು ಇಷ್ಟಪಡದ ತನು ಅಲ್ಲಿಂದ ತಪ್ಪಿಸಿಕೊಳ್ಳಲು ಸಮಯ ಕೇಳಿದಳು. ವಾರಾಂತ್ಯಕ್ಕೆ ರಾಜ್ ನ ಎದುರು ನಿಲ್ಲಲೇ ಬೇಕಾಯಿತು. ಅವಳು ಹೆದರುತ್ತಾ ಕೈಕಾಲು ನಡುಗುತ್ತಾ ಬೆವತುಹೋಗಿದ್ದಳು. ಒಪ್ಪಿಗೆ ಸೂಚಿಸಿದಳು. ರಾಜ್ ನ ಸ್ನೇಹಿತರೆಲ್ಲರೂ ಅವಳನ್ನು ರಾಜ್ ನ ಪ್ರೇಯಸಿ ಎಂದು ಕರೆಯತೊಡಗಿದರು. ಸುತ್ತುವರೆದು ರ್ಯಾಗಿಂಗ್ ಮಾಡಲಾರಂಭಿಸಿದರು. ಅವಳಿಗೆ ಹೇಗೆ ಎದುರಿಸಬೇಕೆಂದು ತಿಳಿಯಲಿಲ್ಲ. ಗೋಡೆಯ ಮೇಲೆಲ್ಲಾ ಅವರಿಬ್ಬರು ಪ್ರೀತಿಸುತ್ತಿದ್ದಾರೆ ಎಂಬರ್ಥದಲ್ಲಿ ಹೆಸರು ಬಳಸಿದರು. ಇದು ಅವಳ ಮನಸ್ಸನ್ನು ಘಾಸಿಗೊಳಿಸಿತು. ಒಂದು ತಿಂಗಳು ಕಳೆಯುವಷ್ಟರಲ್ಲಿ ತನು ನೇಣಿಗೆ ಶರಣಾಗಿದ್ದಳು..
**
ಘಟನೆ ೦೨: ಪ್ರಥಮ ಪಿ.ಯು. ವಿದ್ಯಾರ್ಥಿ ಅಜಯ್ ಗೆ ಯಾವ ವಿಷಯವೂ ಅರ್ಥವಾಗುತ್ತಿರಲಿಲ್ಲ. ಕನ್ನಡ ಮೀಡಿಯಂ ನಲ್ಲಿ ಓದಿದ ಅವನಿಗೆ ಪ್ರತಿಯೊಂದು ವಿಷಯವೂ ಇಂಗ್ಲೀಷಿನಲ್ಲಿಯೇ ಇದ್ದದ್ದು ಕಬ್ಬಿಣದ ಕಡಲೆಯ ಹಾಗಾಯಿತು. ಜೊತೆಗೆ ಅವನಿಗೆ ಸಿಕ್ಕ ಸ್ನೇಹಿತರ ಗುಂಪು ಕೂಡ ಹಾಗೆಯೇ ಇತ್ತು. ಸಿಗರೇಟು ಸೇದಿ(ಧೂಮ್ರಪಾನ ಆರೋಗ್ಯಕ್ಕೆ ಹಾನಿಕಾರಕ) ತರಗತಿಯಲ್ಲಿ ಕುಳಿತುಕೊಳ್ಳುತ್ತಿದ್ದರು. ಬರ್ತ್ ಡೇ ಪಾರ್ಟಿ ಅದು ಇದು ಇಲ್ಲದ ನೆಪ ಹೇಳಿ ಹಣ ಖರ್ಚು ಮಾಡುವುದರ ಜೊತೆಗೆ ಕುಡಿದು ಮನೆಗೆ ಹೋಗದೇ ಅಲ್ಲಿಯೇ ಮಲಗುತ್ತಿದ್ದರು. ಹೆತ್ತವರಿಗೆ ಕೇಳಿದ್ದಕ್ಕೆಲ್ಲ ಸುಳ್ಳಿನ ಕತೆ ಹೆಣೆಯುತ್ತಿದ್ದರು. ಅದರ ಪರಿಣಾಮ ಮೊದಲ ವರ್ಷದ ಫಲಿತಾಂಶ ಅಜಯ್ ಫೇಲಾಗಿದ್ದು. ಮನೆಗೆ ಬರದ ಅವನನ್ನು ತಾಯಿ ಹುಡುಕಿದ ರೀತಿ ಕಣ್ಣೀರು ತರಿಸುತ್ತಿತ್ತು. ಸಿಕ್ಕ ಸಿಕ್ಕ ಸ್ನೇಹಿತರಿಗೆಲ್ಲ ಕರೆ ಮಾಡಿ "ಅಜಯ್ ಮನೆಗೆ ಬಂದಿದ್ದನಾ..?? ಅಲ್ಲಿದ್ದಾನ? ಎಲ್ಲಿ ಇರುವನೆಂದಾದರೂ ಗೊತ್ತಿದೆಯಾ.." ಎಂದು ಅಳುತ್ತಿದ್ದರು..
**
ಇದು ಒಂದೆರಡು ಘಟನೆಗಳಷ್ಟೆ. ಇಂತಹುದು ಅನೇಕ ನಡೆಯುತ್ತದೆ. ಹರೆಯ ಎನ್ನುವುದು ಸುಕೋಮಲ ಬಳ್ಳಿಯಂತೆ. ಹೆಚ್ಚು ಒತ್ತಡ ಹಾಕಿದರೂ ಕಷ್ಟ, ಹಾಗೆ ಬಿಟ್ಟರೆ ಹೇಗಂದರೆ ಹಾಗೆ ಬೆಳೆಯುತ್ತದೆ. ಯಾವ ರೀತಿಯಾಗಿ ಮಕ್ಕಳನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೆತ್ತವರು ಒದ್ದಾಡುತ್ತಾರೆ. ಹರೆಯದ ಮನಸ್ಸಿನಲ್ಲಿ ಏನೇನು ನಡೆಯುತ್ತದೆ ಎಂದು ತಿಳಿದುಕೊಳ್ಳಲು ಆಪ್ತ ಸಮಾಲೋಚನೆ ಮಾಡಲೇ ಬೇಕು. ಮಗಳಾಗಲಿ, ಮಗನಾಗಲಿ ಕಾಲೇಜಿನಿಂದ ಬಂದ ಕೂಡಲೆ ಒಮ್ಮೆ ಏನೆಲ್ಲಾ ನಡೆದಿದೆ ಎಂದು ಕೇಳಬೇಕು. ನಾನೇನು ಚಿಕ್ಕ ಮಗುವಾ? ಎಂದು ಕೇಳಬಹುದು. ಆದರೂ ಅಲ್ಲಿನ ವಿಷಯ ನಾಜೂಕಾಗಿ ತಿಳಿದುಕೊಳ್ಳಬೇಕು. ಅಲ್ಲದೆ ಏನೇ ನಡೆದರೂ ನಿಮ್ಮ ಜೊತೆಗೆ ನಾವಿದ್ದೇವೆ ಎಂಬ ಧೈರ್ಯ ತುಂಬ ಬೇಕು. ಪಾಸೋ ಫೈಲೋ ಜೀವನ ಬೇರೆಯದೇ ಇದೆ. ಅದು ಕಷ್ಟವಾದರೆ ಬೇರೆಯದೇ ಕೋರ್ಸ್ ಮಾಡಬಹುದು ಚಿಂತಿಸಬೇಡ ಎಂಬ ಧನಾತ್ಮಕ ವಿಚಾರಗಳನ್ನು ಹತ್ತಿರದಲ್ಲೇ ಕುಳಿತು ತಿಳಿಹೇಳಬೇಕು. ತನುವಿನ ವಿಚಾರಕ್ಕೆ ಬಂದರೆ "ಅವಳು ಚಂದದ ಹುಡುಗಿ ಎಂದು ರೇಗಿಸುವುದು ಸಹಜವೇ.." ಆದರೆ ಅದನ್ನು ಮನೆಯವರ ಹತ್ತಿರ ಬಂದು ಹೇಳಬೇಕಿತ್ತು. ಮಕ್ಕಳು ಚಿಕ್ಕದಿರುವಾಗ ಹೆತ್ತವರೇ ಕೈ-ಕೈಹಿಡಿದು ಬಿಟ್ಟು ಬರುತ್ತಾರೆ. ಆಗ ಮಕ್ಕಳಿಗೆ ಈ ಪ್ರಪಂಚವೇ ಒಂದು ಸೋಜಿಗದಂತೆ, ವಿಸ್ಮಯದಂತೆ ಕಾಣುತ್ತದೆ. ಅಲ್ಲಿ ನಡೆದ ಪ್ರತಿಯೊಂದು ಘಟನೆಗಳನ್ನು ಓಡೋಡಿ ಬಂದು ಕುತೂಹಲದಿಂದ ಹೇಳತೊಡಗುತ್ತವೆ. ಒಂದಷ್ಟು ದಿನ ಕೇಳಿಸಿಕೊಂಡ ಹೆತ್ತವರು ಕೊನೆಗೊಂದು ದಿನ ಬೈದುಬಿಡುತ್ತಾರೆ. ನಿನ್ನ ಕತೆ ಕೇಳಲು ಸಮಯವಿಲ್ಲ. ತರಗತಿಯ ಅಧ್ಯಾಪಕರು ಕೊಟ್ಟ ಮನೆಕೆಲಸ ಮಾಡಿ, ಓದು ಹೋಗು.." ಎಂದು. ಅಲ್ಲಿಂದ ಶುರುವಾಗುತ್ತದೆ. ಮನದೊಳಗೆ ಯುದ್ಧ. ಯಾವುದು ಅಗತ್ಯವಾಗಿ ಹೇಳಬೇಕೋ ಅದನ್ನೇ ಮಕ್ಕಳು ಭಯದಿಂದ ಹೇಳಲು ಹಿಂಜರಿಯಿತ್ತಾರೆ. ಅದಕ್ಕಿಂತಲೂ  ಅಸುರಕ್ಷತೆ ಕಾಡುತ್ತದೆ. ಆತ್ಮ ಸ್ಥೈರ್ಯ ಕುಂದುತ್ತದೆ. ನಮ್ಮ ಹೆತ್ತವರು ನಮಗೆ ಒತ್ತಾಸೆಯಾಗಿಲ್ಲ ಎನ್ನುವ ಭಾವ ಬಲವಾಗಿ ಕುಳಿತುಬಿಡುತ್ತದೆ. ಅದನ್ನು ಸೂಕ್ಷ್ಮವಾಗಿ ಗಮನಿಸಿ ಪರಿಹಾರ ಹೆತ್ತವರೇ ಹುಡುಕಬೇಕು. ಸ್ನೇಹಿತರಂತೆ ವ್ಯವಹರಿಸಬೇಕು. ಇಲ್ಲದಿದ್ದರೆ ತುಂಬಲಾರದ ನಷ್ಟ ಅನುಭವಿಸುವುದು ಹೆತ್ತವರೇ.

- ಸಿಂಧು ಭಾರ್ಗವ್.