Friday 10 February 2017

ಕವಿತೆ: ಜೀವನದ ಸಂತೆಯಲಿ ಮನವೊಂದು ಹುಚ್ಚು ಸಂತೆ

ಹುಣ್ಣಿಮೆಗೆ ಅದೇಕೋ ಉಕ್ಕುವುದು ಪ್ರೀತಿ
~~~~~~~~~~~~~~~~~~~~~
ಯಾವಾಗಲೂ ನಾನೇ ಮೈಮೇಲೆ
ಬಿದ್ದು ಹೋಗುವುದು.
ಅತೀ ಆಯಿತು ಎಂದರೂ ಪ್ರೀತಿ
ಮಧುರ ಅನಿಸುವುದು..

ಪ್ರೇಮಿಗಳ ದಿನದ ಸ್ವಾಗತಕೆ
ಕಾಯುತಿರಬಹುದು  ಹಲವರು..
ದಿನವೂ ಅದರ ಸವಿಯ
ಸವಿಯುವವರು ಕೆಲವೇ ಕೆಲವರು..

ಅವನಲ್ಲಿ ಕೊಂಚ ನೆನಪಿಸಿಕೊಂಡರೂ
ಬಿಕ್ಕಳಿಕೆ  ಬರುವುದು..
'ನೆನಪಿಸಿದ್ದು ಸಾಕು ಹೋಗಿ ಮಲಗು'
ಎಂದಾಗಲೇ ಕಡಿಮೆಯಾಗುವುದು...

ಬಿಡುವಾದಾಗೆಲ್ಲ ಮುತ್ತಿನ ಸುರಿಮಳೆ,
ಕಂತುಕಂತಾಗಿ ಸವಿಯಲಿ ಎಂದು..
ಸಗ್ಗವೇ ಕೈಗಿಡುವ ಅವನ ಪ್ರೀತಿಗೆ
ನಾನು ಋಣಿ ಎಂದೆದೂ...

- ಸಿಂಧು.

ಕವನ : ಮತ್ತೆ ಬಂದಿದೆ ಹುಣ್ಣಿಮೆ

ಮತ್ತೆ ಬಂದಿದೆ ಹುಣ್ಣಿಮೆ...

ನೀನೇಕೆ‌ ಇಂದು ಬಂದೆ...
ಆ ರಾತ್ರಿ ಗಾಢ ಕತ್ತಲ ಅಮವಾಸ್ಯೆಗೆ
ನಿನ್ನ ಕಾಣದಾದಾಗ ನಾನೇಷ್ಟು ಭಯಗೊಂಡಿದ್ದೆ..
ನಾನೆಷ್ಟು ಕಳವಳ ಗೊಂಡಿದ್ದೆ..
ನಿನಗೇನಾದರೂ ತಿಳಿದಿದೆಯಾ..?
ಇಷ್ಟು ದಿನ ಬರದವನು ಇಂದು ಬಂದು
 ನನ್ನೆದುರು ಹಲ್ಲುಕಿರಿಯುತ್ತಾ ಏಕೆ ನಿಂತಿರುವೆ..?
ಹೋ ಮತ್ತೆ ನಿನ್ನ ಬೆಳದಿಂಗಳ ಕಾಂತಿಗೆ
 ಕರಗಿ ನಿನ್ನ ತೋಳಬಂಧನದಲ್ಲಿ ಸಿಲುಕುವೆ ಎನಿಸಿದೆಯಾ.?
ಇಲ್ಲ.. ನನಗೆ ತಿಳಿದಿದೆ.. ನಿನಗೆ ನಾನೀಗ ಅಷ್ಟಾಗಿ ಹಿಡಿಸುತ್ತಿಲ್ಲವೆಂದು..
ಲೋಕವೇ ಮೆ‍ಚ್ಚುವ ನಿನ್ನ, ನಾನು
ನನ್ನವನೆಂದು ಪ್ರೀತಿಸಿದ್ದೇ ತಪಾಯ್ತು..
ಓ ಅಲ್ಲಿ ನೋಡು..
ಹುಚ್ಚು ಹುಡುಗಿ ಬೆಳದಿಂಗಳ ನೋಡಿ ಕನಸ ಕಾಣಲು ಶುರು ಮಾಡಿದ್ದಾಳೆ.
ಕವನವೂ ಬರೆಯಬಹುದು..
ಅಂಗಳದಲ್ಲಿ ನಾಲ್ಕು ಹೆಜ್ಜೆ ನೃತ್ಯವೂ ಮಾಡಬಹುದು..
ಈಗ ಅವಳ ಸರದಿ.
ಮುಂಬರುವಾ ಅಮವಾಸ್ಯೆಗೆ ಅಳುತಾ ಕೂರುವ ಮುನ್ಸೂಚನೆ..
ನಿನ್ನ ಪ್ರೀತಿಸಿದವರಿಗೆಲ್ಲಾ ಇದೇ ಉಡುಗೊರೆ..
ನಿನ್ನ ಮುಕ್ತವಾಗಿ ಪ್ರೀತಿಸುತ್ತಿದ್ದ ನಾನೀಗ ಬಂಧಮುಕ್ತ...!!

- ಸಿಂಧು ಭಾರ್ಗವ್. 🍁

Monday 6 February 2017

ಹಾಡು: ಓ ಜೀವವೇ ನಿನ್ನ ನೋಡುತಲೇ..



#ಓ_ಜೀವವೇ...

ನಿನ್ನ ನೋಡಿ ನೋಡಿ ಜೀವವೇ...
ನಿನ್ನ ನೋಡುತಲೇ ಜೀವಿಸುವೆ..
ನಿನ್ನ ನೋಡಿ ನೋಡಿ ಜೀವವೇ..
ನಿನ್ನ ನೋಡುತಲೇ ಸಾಯುವೆ..

ಒಂಟಿಯಾಗಿದ್ದೆ ನಾನು
ಒಣ ಹುಲ್ಲಿನಂತೆ ಮನಸ್ಸು..
ಸಿಂಚನವಾಯ್ತು ಪ್ರೀತಿಯ
ಚಿಗುರಿ ನಿಂತಿತು ಕನಸು...

ಎದೆಬಡಿತವ ಕೇಳಿಸಿಕೋ
ನಿನ್ನ ಹೆಸರೇ ಹೇಳುತಿದೆ..
ಕಂಗಳ ಒಮ್ಮೆ ಗಮನಿಸು
ನಿನ್ನ ಬಿಂಬವೇ ಕಾಣುತಿದೆ..

ಮಡಿಲಿನಲಿ‌ ಮಲಗಿಸಿ ನಿನಗೆ
ಜೋಗುಳ ಹಾಡುವಾಸೆ..
ನನ್ನ ಕನಸಿನೂರಿಗೆ ನಿನ್ನ
ಅರಸನ ಮಾಡುವಾಸೆ..

ಅನಿಸುವುದು ನನಗೆ ನೀನೇ ಅವನೆಂದು,
ದಿನವೂ ಕನಸಲಿ ಬರುವವನೆಂದು..
ಪೋಣಿಸಿಟ್ಟೆ ಎಲ್ಲಾ ಭಾವಗಳನು
ನಿನ್ನ ಕೊರಳಿಗೆ ಹಾಕಲೆಂದು..

ಪ್ರೀತಿಯ ಪರಿಯ ತಿಳಿಸಿದವ ನೀನು..
ಪ್ರತೀ ಹೆಜ್ಜೆಯನು ಸವಿದವಳು ನಾನು..
ಓ‌ ಜೀವವೇ ನಿನ್ನ ನೋಡುತಲೇ ಜೀವಿಸುವೆ..

- ಸಿಂಧುಭಾರ್ಗವ್ 🍁

ಕವನ: ನಮ್ಮ ಸೈನಿಕರು

@.
@@.
@
🙏 ಅಮ್ಮ ಹೇಳುತ್ತಿದ್ದರು, ನಮ್ಮನ್ನೆಲ್ಲ ರಕ್ಷಿಸುವವನು ಆ ದೇವರು ಎಂದು..
ದೇವರಿಗಿಂತ ಒಂದು ಕೈ ಮೇಲಾದೆಯಲ್ಲೋ... 🙏
••
 🚶 ಹುಟ್ಟಿ ಬೆಳೆದ ಮನೆಯ ಬಿಟ್ಟು ಹೋದೆ, ಈ ದೇಶವೇ ನನ್ನ ಮನೆಯೆಂದು..
 🚶 ಹೆತ್ತವರ ಒಡಹುಟ್ಟಿದವರಿಗೆ ವಿದಾಯ ಹೇಳಿದೆ,ದೇಶದ ಜನರೇ ನನ್ನ ಬಂಧುಗಳೆಂದು..
••
😍 ಚಿಗುರು ಮೀಸೆ, ನೂರಾರು ಕನಸುಗಳು, ಸ್ವಪ್ನ‌ಕನ್ನಿಕೆ ಸ್ವಪ್ನಕ್ಕೆ ಮಾತ್ರ ಸೀಮಿತಳಾದಳು..
😍 ಅಲ್ಲೊಬ್ಬನಿಗೆ ಮದುವೆ ದಿನ ಗೊತ್ತಾಗಿದೆ, ನಾಳೆಯೆಂದರೆ ಮದರಂಗಿ ಕರಗಳಲಿ ಕಂಗೊಳಿಸಲಿದೆ..
😍 ಇಲ್ಲೊಬ್ಬನಿಗೆ ಪುಟ್ಟಪುಟ್ಟ ಕೈಗಳ ಎತ್ತಿ ಆಡಿಸುವ ಭಾಗ್ಯ, ಬಾಣಂತಿ ಮಡದಿಯ ನೋಡುವ ತವಕದಲ್ಲಿದ್ದಾನೆ..
😍 ಇವನೋ ಒಬ್ಬನೇ ಮಗ, ಹಿರಿಯ ತಂದೆತಾಯಿಗೆ ಊಟ-ನಿದಿರೆಯು ದೂರದ ಮಾತಾಗಿದೆ..
••
 😳 ಅಲ್ಲೆಲ್ಲೋ ಗುಂಡಿನ ಶಬ್ಧ ಬೆಚ್ಚಿ ಬೀಳಿಸಿತು ಪ್ರಿಯತಮೆಯಾ, ಕಂಪಿಸಿತು ಮದರಂಗಿ ಕೈಯಾ, ಈಗಷ್ಟೆ ಹೊಸ ಪ್ರಪಂಚ ಕಾಣುತ್ತಿರುವ ಹಸುಳೆಯ, ಮುದಿ ಪೋಷಕರ..
••
🙏 "ರಕ್ತದ ಮಡುವಿನಲ್ಲಿ ಮಡಿದ ವೀರ ಯೋಧ.. ಮಾಡಿದ ಪ್ರಾಣತ್ಯಾಗ" 🙏😭
••
ಎಲ್ಲರೂ ಬಂದರೂ, ಕಣ್ಣೊರೆಸಿದರೂ, ಸರ್ಕಾರಿ ಗೌರವದೊಂದಿಗೆ ದೇಹವ ಮಣ್ಣು ಮಾಡಿದರು....
👍 ಮಗನನ್ನು ಸೈನ್ಯಕ್ಕೆ ಸೇರಿಸಿದ್ದಕ್ಕೆ ಹೆಮ್ಮೆಯಾಗುವುದು, ಪತಿಯಾಗಿ ಪಡೆದುದಕ್ಕೆ ಗರ್ವವಾಗುವುದು..
ಆದರೂ... ಆದರೂ... :(
ಇನ್ನೆಲ್ಲಿ ನೀ ಬರುವೆ..?? ಕೂಡಿಟ್ಟ ಕನಸುಗಳಿಗೆ ಯಜಮಾನನೇ ಇಲ್ಲ.. ನೀನಿಲ್ಲದೇ ಮನೆಮನಗಳು ಬರಿದಾಯಿತಲ್ಲ..ಹೀಗೆ ಒಂದಲ್ಲ ಎರಡಲ್ಲ.. ಸಾವಿರಾರು ಸೈನಿಕರು..

"ನಿಮ್ಮನಿಮ್ಮ ಜೀವನವೇ ದೊಡ್ಡದು ಎಂಬುದು ಬಿಡಿ.. ನಮಗಾಗಿ ನಮ್ಮ ದೇಶಕ್ಕಾಗಿ ಪ್ರಾಣತ್ಯಾಗ ಮಾಡುವವರ ಒಮ್ಮೆ ನೆನಪಿಸಿಕೊಳ್ಳಿ.. ದಿನದಲ್ಲೊಮ್ಮೆ  ಅವರ ಒಳಿತಿಗಾಗಿ ಪ್ರಾರ್ಥಿಸಿ..

#Our_Soldiers.. #ನಮ್ಮಸೈನಿಕರು..

Share With Your Friends
ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಸೈನಿಕರಿಗಾಗಿ ದಿನದಲ್ಲೊಮ್ಮೆ ಪ್ರಾರ್ಥಿಸಿ 🙏🌹

- ಸಿಂಧು ಭಾರ್ಗವ್. 🍁

Wednesday 1 February 2017

ಕವನ : ಬಾಲ್ಯದ ಆಟ

.
@@.
.
ಕವನದ ಶೀರ್ಷಿಕೆ : ಬಾಲ್ಯದ ಆಟ :
* * * * * * * * * * * * * * * * * * *
ಬಾಲ್ಯದಲಿ ಆಡುವ
 ಆಟಗಳೆಲ್ಲವೂ ಚಂದ..
ಕಾತುರ ಕಣ್ಣಿಂದ
ನೋಡುವುದೇ ಆನಂದ..

ಸಮಯದ ಪರಿವಿಲ್ಲ ,
ಮನೆಯ ನೆನಪಿಲ್ಲ..
ಹೊಟ್ಟೆಗೆ ಹಸಿವಿಲ್ಲ ,
ಕನಸಿನಲೂ ಕಾಡುವುದಲ್ಲ..

ಒಮ್ಮೊಮ್ಮೆ ಗೆಳೆಯರ ಗೆಲುವು
ತರಿಸುವುದು ಮತ್ಸರ..
ಇನ್ನೊಮ್ಮೆ ಸೋಲಿಸಲೇ
ಬೇಕೆಂಬ ಕಾತುರ..

ನೋವಿನ ಅರಿವಿಲ್ಲ,
ಸ್ನೇಹಕೆ ಸಮವಿಲ್ಲ ..
ಸೋತರೂ ಬೇಸರವಿಲ್ಲ,
ಗೆದ್ದರೂ ಖುಷಿಯಿಲ್ಲ..

ಆಟದ ಜೊತೆಗೆ ಪಾಠವು ,
ಹಠದಲಿ ಅಡಗಿರುವ ಛಲವು..
ಗೆಳೆಯರ ಜೊತೆಗಿನ ಬಾಲ್ಯವು,
ಸವಿದಷ್ಟು ಸಿಹಿಯಾದ ಅಮೃತವು..


-ಸಿಂಧುಭಾರ್ಗವ್ 🍁

ಕವನ: ಓ ಮಲ್ಲಿಗೆ

.
@@@
.
ಕವನದ ಶೀರ್ಷಿಕೆ : ಓ‌ ಮಲ್ಲಿಗೆ
* * * * * *‌ * *‌ * * * * * * *‌ *‌ *
#ಓ_ಮಲ್ಲಿಗೆ , ಅಂದದ ಮುಗುಳು ನೀನೀಗ.
ಅಪ್ಪ-ಅಮ್ಮನ ಪ್ರೀತಿಯ ಮಗಳು ನೀನೀಗ..
ತಂಗಾಳಿ ಜೊತೆಗೆ ಆಡುವೆ,
ಗಂಧದ ಜೊತೆಗೆ ಬೆರೆಯುವೆ..
ಮನಕೆ ಮುದವ ನೀಡುವೆ..
ಹೆತ್ತವರ ಹಿಡಿತದಲ್ಲಿಯೇ ಇರುವೆ..

#ಓ_ಮಲ್ಲಿಗೆ , ಬಿರಿದ ಸುಮವು ನೀನೀಗ..
ಕಣ್ಗಳ ಕುಕ್ಕುವ ಹರೆಯ ನಿನದೀಗ..
ಬೇಡವೆಂದರೂ ಪಸರಿಸುವ ಘಮವು,
ತಿರುತಿರುಗಿ ನೋಡುವಂತಹ ಸೌಂದರ್ಯವು..
ಕಾಡಿಸುವರು, ಪೀಡಿಸುವರು..
ಜೋಪಾನ ಎಲ್ಲಿಯೂ ಯಾಮಾರದಿರು..

#ಓ_ಮಲ್ಲಿಗೆ, ನೀ ತೊಟ್ಟು ಕಳಚಿ ಬೀಳುವ ಸಮಯವೀಗ..
ಇಳಿವಯಸ್ಸನು ಕಳೆಯುವ ಅವಕಾಶವೀಗ..
ಯವ್ವನವು ಮಾಯವಾಯ್ತು..
ಅನುಭವವು ಜಾಸ್ತಿಯಾಯ್ತು..
ಸಂಧ್ಯಾರಾಗ ಗುನುಗುತಲಿ,
ನಿನ್ನೆಯ ನೆರಳ ಉಳಿಸುತಲಿ,
ಮಲ್ಲಿಗೆ ನೀ‌ನುಳಿದೆ ಎಲ್ಲರ ಮನದಲಿ..

- ಸಿಂಧುಭಾರ್ಗವ್ 🍁

Hats off To Farmer's family



#ಸುಂದರ_ಪ್ರಕೃತಿಗೇ ಎಲ್ಲರೂ ಮಕ್ಕಳೇ..

ತಂಪಾಗಿ ಬೀಸುವ ಗಾಳಿ ಕೇಳಲಿಲ್ಲ ನೀನು ಯಾವ ಜಾತಿ?
ಬೆಳಕು ನೀಡುವ ರವಿಯು ಕೇಳಲಿಲ್ಲ ನಿನದು ಯಾವ ಮತ?

ಅಕ್ಕಿ ಬೆಳೆಯುವ ಮಣ್ಣಿಗೆ ಜಾತಿಮತದ ಹಂಗಿಲ್ಲ..
ನೀನು ಮೇಲ್ಜಾತಿ ನೀನು ಕೀಳು ಎಂದು ಹರಿವ ನೀರು ಇಂಗಿಲ್ಲ..

ನಮಗಾಗಿ ಎಲ್ಲವನೂ ನೀಡುವ ತ್ಯಾಗಮಯಿ ಪ್ರಕೃತಿ ಮಾತೆ,
ಆದರೆ ಮನುಜ ಅದೆಲ್ಲವೂ ನನದೇ ಎಂದು ಸ್ವಾಧೀನಕ್ಕೆ ತಂದುಕೊಂಡು ಕೊಡುಕೊಳ್ಳುವಿಕೆಯಲಿ ಜಾತಿಮತಧರ್ಮದ  ದುರ್ಗಂಧ ಬೀರುತ್ತಿದ್ದಾನೆ..

ಪರಮಸ್ವಾರ್ಥಿಯ ಕೊನೆಯೆಂದು?!? :(

(( Really Hats off to u ))

ಕಥೆ : ಶಾರದಾಳ ದಡ್ಡತನ

ಕಥೆ: ಶಾರದಾಳ‌ ದಡ್ಡತನ

ರಾಜಿ ಹತ್ತನೇ ತರಗತಿಗೂ ಸರಿಯಾಗಿ ಹೋಗಲಿಲ್ಲ. ಓದು ತಲೆಗೆ ಹತ್ತುವುದಿಲ್ಲ ಎಂದು ಅಮ್ಮನಲ್ಲಿ ಅಳಲು ಶುರುಮಾಡಿದ್ದಳು. ಇದ್ದೊಂದು ಮಗಳಾದರೂ ಚೆನ್ನಾಗಿ ಓದಲಿ ಎಂಬ ಕನಸೂ ನೀರಿನಲ್ಲಿ  ಕದಡಿಹೋಯಿತು. ಶಾರದಾ, ರಾಜಿಯ ತಾಯಿ ದಿನ ಬೆಳಿಗ್ಗೆ ರೋಡ್ ಸೈಡ್ ನಲ್ಲಿ ಡಬ್ಬಿ ಅಂಗಡಿ ಇಟ್ಟಿದ್ದಳು. ಬೆಳಿಗ್ಗಿನ ಉಪಹಾಕ್ಕೆ ಇಡ್ಲಿ-ಒಡೆ ಮಾರುತ್ತಿದ್ದಳು. ಸ್ವಾವಲಂಬೀ ಜೀವನ ನಡೆಸುತ್ತಿದ್ದಳು. ಮಧ್ಯಾಹ್ನದ ವೇಳೆ ಬಿಡುವಾಗಿರುತ್ತಿದ್ದಳು. ನಾಳಿನ ತಿಂಡಿಗೆ ಹಿಟ್ಟು ತಯಾರಿಸುವುದು ಚಟ್ನಿ ಮಾಡಲು ಬೇಕಾಗುವ ವ್ಯಂಜನಗಳಿಗೆ ಮಾರುಕಟ್ಟೆಗೆ ಹೋಗುವುದೂ ಸರಿಯಾಗುತ್ತಿತ್ತು. ಅವಳ ಮಾಗಲ್ಯವೋ ರಾತ್ರೆ ಕುಡಿದು ಚರಂಡಿಗೆ ಬಿದ್ದರೆ ಮರುದಿನ ಮಧ್ಯಾಹ್ನ ಏಳುತ್ತಿದ್ದ. ಅಷ್ಟರೊಳಗೆ ಪ್ರತಿದಿನ ಮುಂಜಾನೆ ₹೫೦೦-೬೦೦/- ಸಂಪಾದನೆ ಮಾಡುತ್ತಿದ್ದಳು. ಅಲ್ಲೇ ಸನಿಹದಲ್ಲಿ ಸಣ್ಣ ಗುಡಿಸಿಲಿನಲ್ಲಿ ವಾಸಿಸುತ್ತಿದ್ದರು. ಸ್ಲಮ್ ಏರಿಯಾ ಆದ ಕಾರಣ ಗಂಡು ನಾಯಿಗಳ ಹಾವಳಿ ಜಾಸ್ತಿ ಇತ್ತು. ಆದರೂ ಗಟ್ಟಿಗಿತ್ತಿ ಮಗಳನ್ನು , ತನ್ನನ್ನೂ‌ ರಕ್ಷಿಸಿಕೊಂಡಿದ್ದಳು.
*
ಒಮ್ಮೆ ಅದೆಲ್ಲಿಂದಲೋ ಬಂದ ಹುಡುಗನೊಬ್ಬ ಅಕ್ಕ ಅಕ್ಕ ಎಂದು ಅವಳ ಹಿಂದೆಯೇ ಸುತ್ತುತ್ತಿದ್ದ. ಸೋಮ ದಿನವೂ ಅವಳಿಗೆ ತರಕಾರಿ ತರಲು ಸಹಾಯ ಮಾಡುತ್ತಿದ್ದ. ದಿನ ಕಳೆದಂತೆ ಅವನ ಗಮನ ರಾಜಿ ಮೇಲೆ ಹೋಯಿತು. ಸ್ನೇಹದಲ್ಲಿ ಮಾತನಾಡಲು ಶುರುಮಾಡಿದ್ದ. ಅವನ ಗುಣನಡತೆ ಮೇಲೆ ಶಾರದಾಳಿಗೆ ಅನುಮಾನ ಬರತೊಡಗಿತು. ಆದರೂ ಅಕ್ಕ ಎಂದು ಬಾಯಿತುಂಬಾ ಕರೆಯುತ್ತಾನಲ್ಲ ಎಂದು ಸುಮ್ಮನಿದ್ದಳು. ಮುಗ್ಧೆಯಾದ ರಾಜಿಗೆ ಅವನ ನರಿಬುದ್ಧಿ ತಿಳಿದಿರಲಿಲ್ಲ. ಅದೊಂದು ದಿನ ಮುಂಜಾನೆ ಶಾರದ ಪಾತ್ರೆಯನ್ನೆಲ್ಲಾ ತೊಳೆಯುತ್ತಿದ್ದಾಗ ಗರಬಡಿದವಳಂತೆ ಕುಳಿತಿದ್ದ ರಾಜಿಯ ನೋಡಿದಳು. "ಏನಾಯಿತೇ ನಿನಗೆ? ನಾಲ್ಕು ಪಾತ್ರೆ ತೊಳೆಯಲಾದರೂ ಬರಬಾರದೇ? ಮಂಕಾಗಿ ಏಕೆ ಕುಳಿತಿರುವೆ ? ನಿನ್ನಪ್ಪನೋ ಯಾವುದಕ್ಕೂ ಉಪಕಾರಕ್ಕಿಲ್ಲ.. ನಾನು ಇಷ್ಟು ಒದ್ದಾಎಉವುದು ನಿನಗಾಗೇ ತಾನೇ.. "ಎಂದು ಸ್ವಲ್ಪ ಜೋರಾಗೇ ಕೇಳಿದಳು. ಅವನೆಲ್ಲಿ ನಿನ್ನ ಗೆಳೆಯ ದಿನ ತಿಂಡಿ ತಿನ್ನಲು ಬರುತ್ತಿದ್ದ. ಇಂದೆಲ್ಲಿ ಹೋದ? " ಎಂದು ಕೇಳಿದಳು. ರಾಜಿ ಏನೂ ಮಾತನಾಡಲಿಲ್ಲ. ಅಲ್ಲಿಂದ ಎದ್ದು ಹೋದಳು. ರಾಜಿ ಹೋದುದನ್ನು ನೋಡಿದ ಅಮ್ಮನಿಗೆ ಅಚ್ಚರಿ ಕಾದಿತ್ತು. ರಾಜಿ ತೊಟ್ಟ ಸ್ಕರ್ಟ್ ರಕ್ತದ ಕಲೆಗಳಿದ್ದವು. "ಅಯ್ಯೋ.. ಅಯ್ಯೋ.. ಮಾನ-ಮರ್ಯಾದೆಗಾಗೇ ಬದುಕುತ್ತಿದ್ದವಳು ನಾನು .ಗಂಡ ಸರಿ ಇಲ್ಲದಿದ್ದರೂ ನನ್ನ ಜೀವನ ನಾನು ಕಂಡುಕೊಂಡಿದ್ದೆ.. ಏನಾಯಿತೇ ನಿನಗೆ ಯಾರು ಹೀಗೆ ಮಾಡಿದ್ದು ? ಒದರು? ಬಾಯಿ ಬಿಡು "ಎಂದು ಕಣ್ಣಲ್ಲಿ ನೀರು ತುಂಬಿಕೊಂಡು ಕಿರುಚಾಡ ತೊಡಗಿದಳು. ಸುಸ್ತಾಗಿ ನಡೆಯಲೂ ಆಗದ ರಾಜಿ ಸಣ್ಣ ದನಿಯಲ್ಲಿಯೇ ಸೋಮ ಸೋಮ.. ಎಂದು ಅಲ್ಲೇ ಬಿದ್ದುಬಿಟ್ಟಳು. ಚೀರಾಡಿದ ಶಾರದ ತನ್ನ ಮಗಳಿಗಾದ ಅನ್ಯಾಯ ,ಶೀಲ ಕಳೆದುಕೊಂಡ ನೋವನ್ನು ಹೇಗೆ ಹೊರಹಾಕುವುದೆಂದು ಅರಿಯದೇ ಸಂಕಟಪಡುತ್ತಾ ತಲೆತಲೆ ಜಜ್ಜಿಕೊಳ್ಳುತ್ತಿದ್ದಳು. ಎಷ್ಟು ಹುಡುಕಿದರೂ ಸಿಗದ ಸೋಮ ಊರುಬಿಟ್ಟು ಹೋಗಿದ್ದ..

- ಸಿಂಧುಭಾರ್ಗವ್ 🍁

Friends Forever

ಸ್ನೇಹ_ಸಮ್ಮಿಲನ By, Sabith

ಇಂದು ನನ್ನ ಮತ್ತು ಅನ್ಸಾರ್ ಕಾಟಿಪಳ್ಳವರ ಪಯಣ ಸೀದಾ ಮಲ್ಲೇಶ್ವರಂ ಕಡೆಗಾಗಿತ್ತು
ಏನು ಹೇಳಲಿ ಮಾತೇ ಬರುತಿಲ್ಲ .....ನಮ್ಮ ಅನ್ಸಾರ್ಚರವರಿಂದಾಗಿ ನನ್ನ ಪ್ರೀತಿಯ ಸಿಂಧು ಭಾರ್ಗವ್ ಮತ್ತು ಸಾಹುಕಾರ್ ಅಚ್ಚು'ರನ್ನು ಭೇಟಿ ಆಗುವ ಭಾಗ್ಯ ನನಗೂ ಲಭಿಸಿತು☺
ಸಿಂಧು ಅಕ್ಕಾ ಬರೆಯುವ ಒಂದೊಂದು ಸಾಲುಗಳು ಅತ್ಯದ್ಭುತ ಎನ್ನುವುದರಲ್ಲಿ ಮಾತಿಲ್ಲ.....👍
ಅಚ್ಚುಚ್ಚ ಮತ್ತೆ ಮತ್ತೆ ಓದಿಸಿಕೊಳ್ಳುವ ಸಾಲುಗಳ ಪೊಣಿಸುವ ಕಲಾಕಾರ,ತುಂಬಾ ಶ್ರಮಜೀವಿ😍
ಇವರಿಬ್ಬರದ್ದು ಮೊದಲ ಭೇಟಿ,ಮೊದಲ ಭೇಟಿ ಅಂತ ಅನ್ನಿಸಲೇ ಇಲ್ಲ,ಅಷ್ಟೊಂದು ಆತ್ಮೀಯತೆಯ ಮನಸದು
ನಮ್ಮ ಪಾವತೆ ಮನುಷ್ಯ ಅನ್ಸಾರ್ ಕಾಟಿಪಳ್ಳದವರ ತರ 😍

ಇವರೆಲ್ಲರಂತಹ ಅಪರೂಪದ ವ್ಯಕ್ತಿಗಳೊಂದಿಗೆ ಸ್ನೇಹವಿದೆ ಎನ್ನುವುದೇ ನಿಜಕ್ಕೂ ನನ್ನ ಖುಷಿ....

ಒಳ್ಳೆಯದಾಗಲಿ ನಿಮಗೆಲ್ಲರಿಗೂ ...ತುಂಬಾ ಧನ್ಯವಾದಗಳು ಬಂಗಾರಕ್ಕ,ಅಚ್ಚುಚ್ಚ ಕೆಲಸದ ಒತ್ತಡದಲ್ಲಿದ್ದರೂ ಭೇಟಿಯಾಗಿದ್ದಕ್ಕೆ...

ಕೊನೆಯದಾಗಿ ಎರಡು ಸಾಲು :
ಅಪರಿಚಿತರಾಗಿ ಬಳಿ ಬಂದೆವು.
ಗೆಳೆತನವೆಂಬ ಕೊಂಡಿಯಲ್ಲಿ ಈ ಜೀವನ.
ಮನಸ್ಸು ಅಗೆದಷ್ಟು ಕನಸುಗಳ ಗೋಪುರ
 ಜೊತೆಯಾಗಿ ಈ ಒಡನಾಟ ತುಂಬಾ ತುಂಬಾ ನೆನಪಿನಲ್ಲುಳಿಯುವ ಕ್ಷಣಗಳಿವು
ಭೇಟಿ ಆಕಸ್ಮಿಕವದರೂ ನಿಮ್ಮ ನೆನಪು ಮಾತ್ರ ಶಾಶ್ವತ.😍
.
@@@
.
By, Sindhu
ಆಪ್ತರೊಂದಿಗೆ ಕಳೆಯುವ  ಅದ್ಭುತವಾದ ಸಮಯವನ್ನು‌ ಕಾಪಿಡ ಬೇಕಂತೆ..ಬೆಂಗಳೂರಿನಲ್ಲೇ ಇದ್ದರೂ ನನಗೆ ಯಾರನ್ನೂ ಭೇಟಿ ಮಾಡಲು ಆಗಲಿಲ್ಲ.
ಅನ್ಸಾರ್ Ansar Katipalla ಅವರಿಂದಾಗಿ ಸಾಹುಕಾರ್ ಅಚ್ಚು , ಸಾಬಿತ್ Sabith Kumbra ರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತು.
ಅನ್ಸಾರ್:ಬರವಣಿಗೆಯಲ್ಲಿ ಪರಿಪೂರ್ಣತಾವಾದಿ.. ಒಂದು ಕವನ ಬರೆದರೆ ಅದು Perfect ಆಗಿ ಬರಲೇ ಬೇಕು. ಹಾಗೆಯೆ ಸುಂದರ ಡಿಸೈಯ್ನ್ ಮಾಡಿ ಒಂದು ಚೌಕಟ್ಟಿನಲ್ಲಿ ಹೊಳೆಯುವ ಹಾಗೆ ಮಾಡುತ್ತಾರೆ..
ಸಾಬಿತ್ : ಎಲ್ಲರ ಪ್ರೀತಿಯ ತಮ್ಮ... ನಗಿಸುತ್ತಾ ನಗುತ್ತಾ ಇರುವವನು.. ಸೋ ನೈಸ್..
ಅಚ್ಚು : ತಮ್ಮ ಬಿಜಿ ಕೆಲಸದ ನಡುವೆಯೂ ನನಗಾಗಿ ಸಮಯ ಮೀಸಲಿಟ್ಟಿದ್ದರು.. ನಗು ಮುಖ ತಮಾಷೆ..ಒಂದಷ್ಟು ನಡೆದಾಟದ ನಡುವೆ ಅಂತೂ ಅಚ್ಚು ಬೇಕರಿ ದರುಶನ ಆಯ್ತು.

ಜಝಾಕಲ್ಲಾಹು ಖೈರ್ .
ಆ ಭಗವಂತನ ಅನುಗ್ರಹ ಸದಾ ನಿಮ್ಮೆಲ್ಲರ ಮೇಲಿರಲಿ. ನಗುನಗುತ್ತಾ ಇರಿ..
ಶುಭವಾಗಲಿ.. 🙏🌷
(( ಇನ್ನೊಂದು ಕೊನೆಯ ಮಾತು ಎಲ್ಲದಕ್ಕೂ ಈ ಬರಹಲೋಕವೇ ಕಾರಣ ಆದದ್ದು. ಅದಕ್ಕೆ ವೇದಿಕೆ ಮಾಡಿದ್ದು ಫೇಸ್ಬುಕ್. ಹಾಗಾಗಿ ಖುಷಿಯಾಗುತ್ತೆ. ಬರಹಗಾರರನ್ನ ಭೇಟಿಮಾಡಲು ))
((PikPlace: Nandini Dairy ,one Km far from BEL circle.))

ಎರಡು ಹನಿ ಪ್ರೀತಿಯೆಂದರೇನು ಗೊತ್ತೆ

ಎರಡು ಹನಿಗಳು : ಪ್ರೀತಿಯೆಂದರೇನು ಗೊತ್ತೆ...
@@@@@

ಬೋಳು ಬಯಲೇ ನಿನಗೆ ಪ್ರೀತಿ ಎಂದರೇನು ಗೊತ್ತೆ?!
ಬಿಸಿಗಾಳಿಯನೇ ಅಪ್ಪಿಕೊಂಡಿರುವೆ..
ಸುಳಿಗಾಳಿಗೆ ಸಿಲುಕಿಕೊಳ್ಳುವೆ..
ಸಿಹಿಗಾಳಿಯ ಸವಿಯಬೇಕೆಂದು ಸಂಜೆವರೆಗೆ ಕಾಯುವೆ...
ಚಂದ್ರಮನ ಸಂಗದಲಿ ಸುಖವ ಕಾಣುವೆ..😍
ಅಲ್ಲೇ ಇಹುದು ಪ್ರೀತಿ...
ನಾನದನು ಬಲ್ಲೆನು...

@@@@@@@@

ಕೂಹು-ಕೂಹು ಕೂಗೋ ಕೋಗಿಲೆ
ಪ್ರೀತಿ ಅರ್ಥ ಅರಿತೆಯೇನೋ..
ಮುಂಗಾರಿಗೆ ಅಳುವೆ..
ವಸಂತಕೆ ಕಾಯುವೆ..
ಮಾವು ಚಿಗುರ ತಿಂದು ತೇಗಿ
ಕೂಹೂ ಕೂಹೂ ಹಾಡುವೆ..
ಅಲ್ಲೇ ಇಹುದು ಪ್ರೀತಿ.. ಶುರುವಾಯಿತು ಪ್ರೇಮಗೀತೆ..
ನಾನದನ ಬಲ್ಲೆನು...

- ಸಿಂಧುಭಾರ್ಗವ್. 🍁

Nammoora Habba 2017

#ನಮ್ಮೂರಹಬ್ಬದಲ್ಲಿ #ನಮ್ಮೂರಮಕ್ಕಳ #ಕಲರವ

ಅಭಿನಂದನಾ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಜಯನಗರ ೫ನೇ ಬ್ಲಾಕ್ ಶಾಲಿನಿ ಗ್ರೌಂಡ್ ನಲ್ಲಿ ನಡೆದ "ನಮ್ಮೂರಹಬ್ಬ -ಕರಾವಳಿ ಉತ್ಸವ" ಬಹಳ ಸಂಭ್ರಮದಿಂದ ನಡೆಯಿತು. ಅಚ್ಚುಕಟ್ಟಾಗಿ ಎಲ್ಲೂ ಜನಜಂಗುಳಿ ಎನಿಸದೆ ಕಾರ್ಟೂನ್ ಸಂತೆ(ಸತೀಶ್ ಆಚಾರ್ಯ,ರಘುಪತಿ ಶೃಂಗೇರಿ ect..  ಛಾಯಾಚಿತ್ರ ಪ್ರದರ್ಶನ, ಗಾಳಿಪಟಗಳು, ನಮ್ಮೂರ ಸಂತೆ (ಅಲಸಂಡೆ, ಗುಳ್ಳ, ಸೌತೆಕಾಯಿ ಇನ್ನೂ ಅನೇಕ), ಹೆಂಗಳೆಯರಿಗೆ ಶಾಪಿಂಗ್ , ಲಾವಂಚ ಬೇರಿನಿಂದ ಮಾಡಿದ ಕಲಾಕೃತಿಗಳು, ಮಂಡೆಹಾಳೆ, ಕರಾವಳಿಯ ರುಚಿಕರ ಖಾದ್ಯ ಅಲ್ಲಿನ ಬಾಣಸಿಗರು  (ಹಾಲುಬಾಯಿ,ಪತ್ರೊಡೆ, ಸುಕ್ರುಂಡೆ,ನೀರ್ದೋಸೆ, ಹಾಗೂ ಸೀಫುಡ್ ), ಚರುಮುರಿ, ಕಬ್ಬಿನಹಾಲು, ನಮ್ಮೂರ ಗ್ರಾಮೀಣಕ್ರೀಡೆ(ಕಂಬಳ ಓಟ, ಚುಕ್ಕ ಮಕ್ಕಳಿಗೆ ಒಂಟಿಕಾಲಿನ ಓಟ, ತೆಂಗಿನ ಗರಿಯಿಂದ ಕೈಚಳಕ ತೋರಿಸುವುದು, ಸಪ್ತಪದಿ, ಆದರ್ಶ ದಂಪತಿ, ಹಗ್ಗ ಜಗ್ಗಾಟ ಹತ್ತು ಹಲವಾರು ಆಟಗಳು ಮನಸ್ಸಿಗೆ ಮುದನೀಡಿತ್ತು. ಎಲ್ಲಾ ವಿಭಾಗದಲ್ಲೂ ಜನರು ಬಹಳ ಕುತೂಹಲ ಭರಿತ ಕಣ್ಗಳಿಂದ ನೋಡುತ್ತಿದ್ದದು ವಿಶೇಷ. ಅಲ್ಲದೇ ಸಂಜೆ ಸಮಯದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಬೆಂಗಳೂರಿಗರನ್ನೂ ಆಕರ್ಷಿಸುವಲ್ಲಿ ಯಶಸ್ವೀಯಾಯಿತು. ಹೀಗೆ ೫೦-೬೦ಸಾವಿರ ಜನರನ್ನು ಒಂದೇ ಕಡೆಗೆ ಕೇಂದ್ರೀಕರಿಸಲು ನಮ್ಮೂರಹಬ್ಬ ಸಾಕ್ಷಿಯಾಯಿತು. ಸ್ವಯಂ ಸೇವಕರು ಬಹಳ ಉತ್ಸಾಹದಿಂದಿದ್ದರು. ಎಲ್ಲೆಡೆ ಕುಂದಗನ್ನಡ ಮೊಳಗಿತ್ತು. ನಮ್ಮೂರ ಹಬ್ಬದ ಡೋಲು,ಕೊಳಲಿನ ಸದ್ದು ಇನ್ನೂ ಕಿವಿಯಲ್ಲಿ ಗುಯ್ಗುಡುತ್ತಿದೆ..
#ThankyouVery #NammooraHabba2017
#ನಮ್ಮೂರಹಬ್ಬ೨೦೧೯
#ಕರಾವಳಿಉತ್ಸವ

ಲೇಖನ : ಬದುಕು ಬದಲಿಸಬಹುದು

ಲೇಖನ : ಬದುಕು ಬದಲಿಸಬಹುದು

ಅದೊಂದು ಸಂಜೆ ಏಕಾಂತದಲಿ ಕುಳಿತ ರಾಜೇಶ್ ಏನೋ ಯೋಚನೆ ಮಾಡುತ್ತಾ ಮುಳುಗಿ ಹೋಗಿದ್ದರು. "ಮದುವೆ ಆಗಿ ಮೂವತ್ತು ವರುಷವೇ ಆಗಿಹೋಯ್ತು. ಸವೆದ ದೇಹದ ಜಾಂಟ್ಗಳಿಂದ ಕರಕರ ಸದ್ದು ಬರತೊಡಗಿದೆ. ಮತ್ತೆ ಗ್ರೀಸ್ ಹಚ್ಚಲು ಹೆಂಡತಿಯ ಕರೆಯಬೇಕು. ಮೊನ್ನೆ ಮೊನ್ನೆ ರವಿ ನನ್ನ ವಯಸ್ಸಿನವನೇ ಹೇಳದೇ ಕೇಳದೇ ನಮ್ಮನ್ನೆಲ್ಲಾ ಬಿಟ್ಟು ಹೋದ. ಅವನ ಹೆಂಡತಿ ಮಕ್ಕಳ ಕತೆ ಏನು. ನಾನು ಹೆಂಡತಿಯ ಹತ್ತಿರ ಕುಳಿತು ಅದೆಷ್ಟು ಭಾರಿ ಹೇಳಬಯಸಿದ್ದೆ. ನಾಳೆ ನಾನು ಸತ್ತರೆ....!! ಛೇ.. ಬಿಡ್ತು ಅನ್ನಿ ಈ ಸಂಜೆಗೆ ಇದೆಂತಾ ಮಾತು ಎಂದು ಬಾಯಿ‌ ಮುಚ್ಚಿಸುತ್ತಿದ್ದಳು. ನಿಜವಾಗಿಯೂ ನಾಳೆ‌ ನಾನಿಲ್ಲದ ಅವಳ ಜೀವನ ಹೇಗಿರಬಹುದು.? ನನಗೆ ಅವಳು ಅವಳಿಗೆ ನಾನು. ನಮ್ಮ ಜೀವನ‌ ಮಕ್ಕಳಿಲ್ಲದಿದ್ದರೂ ಹಂಚಿಕೊಂಡು ನಡೆಯುತ್ತಿದೆ. ಆದರೆ ನನ್ನ ಬಾಳ ಸಂಗಾತಿ?! " ಎಂದು ಕಣ್ಣೀರು ಸುರಿಸಿದ.. ಭಾವನಾತ್ಮಕವಾಗಿ ಬೆಸೆದ ಜೀವವನ್ನು ಬಿಟ್ಟು ಹೋಗುವುದು ಅಷ್ಟು ಸುಲಭವಲ್ಲ. ಅದೊಂದು ಕಡೆಯಾದರೆ ಇನ್ನೊಂದು ವ್ಯವಹಾರ.? ವ್ಯಾವಹಾರಿಕವಾಗಿ ಆಕೆ ಒಂದು ದಿನವೂ ತಲೆಹಾಕಲಿಲ್ಲ. ನಾನು ಎಷ್ಟು ದುಡಿಯುವೆ? ಎಷ್ಟು LIC ಪಾಲಿಸಿ ಮಾಡಿರುವೆ. ಎಲ್ಲೆಲ್ಲಾ ಸಾಲ ಕೊಟ್ಟಿದ್ದೇನೆ? ನನ್ನ ಆಸ್ತಿ ಎಷ್ಟು? ಬ್ಯಾಂಕ್ ಬ್ಯಾಲೆನ್ಸ್ ಎಷ್ಟಿದೆ.. ATM password , ಸಾಲ ಪಡೆದಿದ್ದೇನಾ?! ಇದ್ಯಾವುದೂ ಅವಳಿಗೆ ತಿಳಿದಿಲ್ಲ. ‌ನಾನು ದುಡಿದು ತಂದಿದ್ದರಲ್ಲೇ ಅಚ್ಚುಕಟ್ಟಾಗಿ ಮನೆ ನಿರ್ವಹಿಸಿಕೊಂಡು ಹೋಗುತ್ತಿದ್ದಾಳೆ. ಇಲ್ಲ. ಇವತ್ತಾದರೂ ಹೇಳಲೇ ಬೇಕು. ಎಂದು ಹೆಂಡತಿಯ ಕರೆದ. ಮತ್ತೆ ಅದೇ ಮಾತನ್ನಾಡಲು ಹೋದಾಗ ತಡೆದಳು. ••
ನಿಜ. ಸಾವು ಕಠೋರ. ನಾವು ಬದುಕಿರುವ ವರೆಗೂ ಅದನ್ನು ಕೇಳಿಸಿಕೊಳ್ಳಲೂ ಮನಸ್ಸು ಮಾಡುವುದಿಲ್ಲ. ನಮ್ಮ ಜೀವನ ನೀರ ಮೇಲಿನ ಗುಳ್ಳೆಯಂತೆ. ಇಂದೋ?ನಾಳೆಯೋ ತಿಳಿಯದು. ಬದುಕಿರುವಾಗಲೇ ವಿಲ್ ಬರೆದೋ ಇಲ್ಲಾ ವ್ಯವಹಾರದ ಬಗ್ಗೆ ಒಂದು ಬಿಳಿಹಾಳೆಯಲ್ಲಿ ಬರೆದು ಇಟ್ಟಿರುವುದೇ ಒಳ್ಳೆಯದು. ಎಂದು ಅವಳಿರದ ಸಮಯದಲ್ಲಿ ವಿಲ್ ಬರೆದ..

ನೇಮೀಚಂದ್ರ ಅವರು ಬರೆದ ನಾಳೆ ಎಂಬುದು ನನಗಿಲ್ಲ. ಕಥೆಯ ಸಾರ..
(ಪುಸ್ತಕ: ಬದುಕು ಬದಲಿಸಬಹುದು ಭಾಗ-೩
ಸೋಲೆಂಬುದು ಅಲ್ಪವಿರಾಮ)

ಹಾಡು : ಯಾರು ಈ ಹುಡುಗ

ಹಾಡು: ಯಾರು ಈ ಹುಡುಗ..

ಯಾರು ಯಾರು ಈ ಹುಡುಗ
ಊಟ ನಿದಿರೆ ಕದ್ದಿಹನು..
ಒಂದೇ ಒಂದು ನೋಟದಲಿ
ತನ್ನ ಕಡೆಗೆ ಸೆಳೆದಿಹನು..

ಮನದ ಅಂಗಳದಲ್ಲಿ
ಹೂವ ಹಾಸಿರುವೆ ಗೆಳೆಯಾ
ಬಲಗಾಲಿಟ್ಟು ಒಳಗೆಬಾ..

ಸುತ್ತಮುತ್ತಲಿನ ಜನರು
ಕದ್ದು ನೋಡುವ ಮೊದಲು
ಮುತ್ತೊಂದ ನೀ ನೀಡುಬಾ..

||ಯಾರು||
ಕನಸಿನಲಿ ಬಂದು ನೀನು
ಕಚಗುಳಿಯಿಡುವ ಪರಿಯ
ಕನವರಿಸುತ ನಾ ಹೇಳುವೆ..

ಊರೆಲ್ಲಾ ಸುತ್ತಿದರೂ
ಸಾವಿರ ಜನರ ಸೇರಿದರೂ
ನಿನ್ನ ಕಣ್ಗಳಾ ಗುರುತಿಸುವೆ..
||ಯಾರು||

- ಸಿಂಧುಭಾರ್ಗವ್ 🍁