Thursday 25 June 2020

ಲೇಖನ : ಹೆಣ್ಣಿನ ಶೋಷಣೆಗೆ ಕೊನೆ ಎಂತು?


ಲೇಖನ : ಹೆಣ್ಣಿನ ಶೋಷಣೆಗೆ ಕೊನೆ ಎಂತು??

ಪ್ರತಿನಿಧಿ ದಿನಪತ್ರಿಕೆ ಯಲ್ಲಿ ಪ್ರಕಟವಾಗಿದೆ.

Nudijenu_daily newspaper

ಹೆಣ್ಣಿನ ಶೋಷಣೆಗೆ ಕೊನೆ ಇಲ್ಲ ಎಂದೇ ಹೇಳಬಹುದು.  ಕೆಲವರಿಗೆ ಹೆಣ್ಣು ಮಗು ಹುಟ್ಟಿತೆಂದು ಸಸಾರ. ಇನ್ನು ಕೆಲವರಿಗೆ ಕೆಲಸದ ಆಳು, ಮನೆಯಲ್ಲಿಯೇ ಬಿದ್ದಿರಬೇಕು. ಕೆಲ ಅತ್ತೆಗೆ, ನಾದಿನಿಯರಿಗೆ ಬಂದ ಸೊಸೆ ಮಗನನ್ನು/ಸಹೋದರನನ್ನು ಕೈವಶ ಮಾಡಿಕೊಳ್ಳುತ್ತಾಳೋ ಎಂಬ ಭಯ. ಮಗನ ಮೇಲಿನ ಅತಿಯಾದ ಮೋಹದಿಂದ ಸ್ವಾರ್ಥಿಗಳಾಗಿ ಬಂದ ಸೊಸೆಗೆ ಕಣ್ಣೀರು ಹಾಕಿಸುವುದು, ವರದಕ್ಷಿಣೆ ಕಿರುಕುಳದಿಂದ ಅಮಾನವೀಯ ಕೃತ್ಯ ಎಸಗುವುದು. ತಮ್ಮ ಯವ್ವನದ ಕಾಮಕೇಳಿಗೆ ಗರ್ಭಿಣಿಯಾಗಿ ಗರ್ಭಪಾತ ಮಾಡಿಸಿಕೊಳ್ಳುವ ಹೆಣ್ಮಕ್ಕಳು, ಅಥವಾ ಹೆತ್ತು ತೊಟ್ಟಿಯಲ್ಲಿ ಶಿಶುವನ್ನು ಎಸೆದು ಹೋಗುವವರು. ಇನ್ನೊಂದು ಮುಖವಾಗಿ, ಮಾದಕ ವಸ್ತುಗಳ ಸೇವನೆಗೆ ಬಲಿಯಾಗಿಸಿ ಹೆಣ್ಮಕ್ಕಳನ್ನು ದುಡ್ಡಿನ ಆಸೆಗೆ ದೇಹಮಾರಿಕೊಳ್ಳುವ  ದಂದೆಗೆ ನೂಕುವ ಕ್ರೂರಿಗಳು, ಎಳೆ ಮಗುವಿನಿಂದಾದಿಯಾಗಿ ವೃದ್ಧ ಹೆಂಗಸು, ಬಿಕ್ಷುಕಿಯನ್ನೂ ಬಿಡದೇ ಮಾಡುತ ಅತ್ಯಾಚಾರಗಳು, ಕೊನೆಗೆ ವಿಷಯ ಹೊರಬರಬಾರೆಂದು ಕೊಲೆಯಲ್ಲಿ ಅಂತ್ಯ. ತಮ್ಮ ಕೈಗೆ ಸಿಗದಿದ್ದರೆ ಶೀಲಗೆಟ್ಟವಳೆಂಬ ಪಟ್ಟ ಕಟ್ಟುವುದು ಇಲ್ಲ ಕೆಲ ಗಂಡಸರು ತಮ್ಮ ಹೆಂಡತಿಯ ಮೇಲೆಯೇ ಶಂಕೆ ಪಡುವುದು....
            ಇದೆಲ್ಲವೂ ಸಮಾಜದಲ್ಲಿ ನಡೆದಾಗ ಉಳಿದ ಹೆಣ್ಮಕ್ಕಳ ರಕ್ತ ಕುದಿಯುತ್ತದೆ. ಅದೇ ತನಗೇ ಹಾಗೆ ಆದಾಗ ಬಾಯಿ ಮುಚ್ಚಿಕೊಂಡು ಸಹಿಸಿಕೊಳ್ಳುತ್ತಾರೆ. ಕೆಲವರು ಮುಂದೆ ಬಂದು ದನಿ ಎತ್ತಿದರೂ ಅಲ್ಲಿಯೇ ಕ್ಷೀಣಿಸುವ ಹಾಗೆ ಮಾಡಿ ಬಿಡುತ್ತಾರೆ. ಕೆಲವರಿಗೆ ನ್ಯಾಯ ಸಿಗುತ್ತದೆ.
ಹೆಣ್ಣು ಸಹನೆ,ತಾಳ್ಮೆ ,ಸಯ್ಯಮ, ಸ್ನೇಹ-ಪ್ರೀತಿ, ವಾತ್ಸಲ್ಯ, ಮಮಕಾರದ ಸಾಕಾರ ಮೂರ್ತಿ‌. ಸಲಹೆಗಾರ್ತಿ,ಶಿಕ್ಷಕಿ, ರಕ್ಷಕಿ ಕೂಡ.  ಅವಳು ಎಷ್ಟು ಸಾಧ್ಯವೋ ಅಷ್ಟು ಸಹಿಸಿಕೊಂಡು ಬದುಕುತ್ತಾಳೆ. ಎಷ್ಟು ತಿದ್ದಬೇಕು ಅಷ್ಟು ತಿಳಿ ಹೇಳಿ ತಿದ್ದಲು ಪ್ರಯತ್ನಿಸುತ್ತಾಳೆ. ಅಲ್ಲದೇ ಮನಸ್ಸು ಮಾಡಿದರೆ ಅದರ ದುಪ್ಪಟ್ಟು ಕೋಪ, ಆಕ್ರೋಶ, ಧೈರ್ಯ ಸಾಹಸ ಪ್ರವೃತ್ತಿ ಆಕೆಗಿರುತ್ತದೆ. ಆಕ್ರೋಶವನ್ನು ಹೊರಹಾಕುತ್ತಾಳೆ. ಸಿಡಿದೆದ್ದ ಜ್ವಾಲಾಮುಖಿಯಾಗುತ್ತಾಳೆ. ಎಂಬುವುದನ್ನು ಮರೆಯದಿರಿ.
ತಾಯಿ ಇಲ್ಲದ ಮನೆ, ಮನೆಯೇ ಅಲ್ಲ. ಹಾಗಾಗಿ ಗಂಡ ಅತ್ತೆ ಮಾವ, ನಾದಿನಿಯರು ಕೊಡುವ ಕಷ್ಟಗಳ ಸಹಿಸಿಕೊಂಡು, ತನ್ನ ಮಕ್ಕಳಿಗಾಗಿ ಬದುಕುತ್ತ ಬರುತ್ತಾಳೆ. ಹಾಗೆಯೇ ಹೆಣ್ಣು ಹೆತ್ತವರಿಗೆ ಮದುವೆ ಮಾಡಿ ಕಳುಹಿಸುವುದೇ ಕಷ್ಟಕರವಾದ ಪರಿಸ್ಥಿತಿಯಲ್ಲಿ, ಗಂಡನ ಮನೆಯ ಪರಿಸ್ಥಿತಿ, ಅವರು ಕೊಡುವ ಕಷ್ಟ- ನೋವನ್ನು ಹಂಚಿಕೊಳ್ಳುವುದು ಸರಿ ಕಾಣದೇ ಸಹಿಸಿಕೊಂಡು ಗಂಡನ ಮನೆಯಲ್ಲಿ ಬದುಕುತ್ತಿರುತ್ತಾಳೆ. ಅಲ್ಲದೇ ತನ್ನ ನೋವು ಕಣ್ಣೀರು ಮಕ್ಕಳಿಗೆ ಅರಿವಾಗದ ಹಾಗೆ ಬೆಳೆಸುತ್ತಾಳೆ. ಕಾರಣ "ಮನೆ"ಯ ಸ್ವರೂಪ ಕೆಡಿಸಬಾರದು ಎಂದು‌. ಅವಳ ತಾಳ್ಮೆಗೂ ಒಂದು ಮಿತಿಯಿರುವುದು, ನೆನಪಿರಲಿ.
ಇನ್ನು ಅತ್ಯಾಚಾರ, ಆಸಿಡ್ ದಾಳಿ ಅವಳ ಮೇಲಿನ ದ್ವೇಷಕ್ಕೆ ಇರಬಹುದು. ಒತ್ತಾಯಪೂರ್ವಕವಾಗಿ ಪ್ರೀತಿಸಲು ಹೇಳಿದರೆ ಯಾರು ಒಪ್ಪುವುದಿಲ್ಲ. ಪ್ರೀತಿ ಮೂಡಬೇಕಾದದ್ದು ವಿನಃ  ಒತ್ತಾಯಿಸಿ ಬಲತ್ಕಾರದಿಂದ ಪಡೆಯಲು ಸಾಧ್ಯವಿಲ್ಲ. ಅಥವಾ ಅಚಾನಕ್ ಆಗಿ ಯಾರು ಅಪರಿಚಿತನಿಂದಲೂ  ಅತ್ಯಾಚಾರಕ್ಕೊಳಗಾಗಬಹುದು. ಆಸಿಡ್ ದಾಳಿಯಾಗಬಹುದು. ಹಾಗೆಂದು ಧೈರ್ಯಗೆಡಬಾರದು. ಬದುಕು ಕಟ್ಟಿಕೊಳ್ಳಬೇಕು. ಈ ಸಮಾಜ ಆಡುವ ಚುಚ್ಚು ಮಾತಿಗೆ ಧೃತಿಗೆಡದೆ ತಲೆ ಎತ್ತಿ ಬಾಳಬೇಕು. ನ್ಯಾಯಕ್ಕಾಗಿ ಹೋರಾಡಬೇಕು. ಇಲ್ಲ ಅಂತಹ ಕೆಟ್ಟ ಪರಿಸರದಿಂದ ಹೊರಬಂದು ಹೊಸ ಜೀವನ ಪ್ರಾರಂಭಿಸಬೇಕು. ಬದಲಾಗಿ ಸಾವಿಗೆ ಶರಣಾಗಬಾರದು. ಈ ಜಗತ್ತಿನಲ್ಲಿ ಸಾಂತ್ವಾನ ಹೇಳುವ ಕೈಗಳು ಕೂಡ ಇವೆ‌. ನೆನಪಿರಲಿ. ಇದು ಎಲ್ಲ ಗಂಡಸರಿಗೆ ಆರೋಪ ಮಾಡಲು ಬರೆದ ಲೇಖನವಲ್ಲ. ಬದಲಾಗಿ ವರದಕ್ಷಿಗೆ ಕಿರುಕುಳ, ಅನುಮಾನ , ಅತ್ಯಾಚಾರ ಹಿಂಸೆ ನಿಲ್ಲಿಸಲಿ ಎಂದು ಹೇಳಿದ್ದು. ನಮಗೂ ಮನಸ್ಸಿದೆ. ಬದುಕಲು ಬಿಡಿ. 

ಸಿಂಧು ಭಾರ್ಗವ್ | ಬೆಂಗಳೂರು-೨೧
ಬರಹಗಾರ್ತಿ

Monday 22 June 2020

Fathersday2020 ಅಪ್ಪನ ದಿನಕ್ಕೆ ಆಪ್ತ ಮಾತು

Father's day special edition @Vijaykarnataka

Vijaykarnataka my article

Family photo


ವಿಜಯ ಕರ್ನಾಟಕ ಅಪ್ಪನ ದಿನಕ್ಕೆ ಆಪ್ತ ಮಾತು..

ಒಂದು ಈರುಳ್ಳಿಯನ್ನೇ ತೆಗೆದುಕೊಳ್ಳಿ. ತಾನು ಮಣ್ಣಿನಲ್ಲಿ ಬೇರೂರಿ, ಕೊಳೆತು ಗೊಬ್ಬರವಾಗಿ ಮೊಳಕೆಯೊಡೆಯಲು ಸಹಾಯಮಾಡುತ್ತದೆ. ಅಪ್ಪನೂ ಹಾಗೆಯೇ.‌ ಅಪ್ಪ,  ಮಕ್ಕಳ ಏಳಿಗೆಗೆ ಬಸವಳಿದು ,ಸವೆದು ಶ್ರಮಿಸುವವನು. ರಕ್ಷಾಕವಚದಂತೆ ತನ್ನ ಮಕ್ಕಳನ್ನು ರಕ್ಷಿಸುವನು. ನಮ್ಮ ತಂದೆ "ಹೇಗೆ ಬದುಕಬೇಕು ಎಂದು ಕಲಿಸಿಕೊಡಲಿಲ್ಲ. ಬದಲಾಗಿ ಬದುಕಿ ತೋರಿಸಿದರು".‌ ಅವರಲ್ಲಿ ಸ್ನೇಹ ,ಪ್ರೀತಿ ,ವಿಶ್ವಾಸ, ಸಹಾಯಹಸ್ತ, ತಮಾಷೆ ಮಾಡುವ ಗುಣ ಎಲ್ಲವೂ ಇದೆ. ಹುರಿಮೀಸೆಯಡಿಯಲ್ಲಿನ ಕೋಪದಲ್ಲಿ ಒಂದು ಕಾಳಜಿಯು ಇದೆ. ಅದನ್ನು ಅಮ್ಮ ಕಂಡುಕೊಂಡಿದ್ದಳು. ನಾವು ಮೂವರು ಹೆಣ್ಮಕ್ಕಳು. ಸಣ್ಣವರಿದ್ದಾಗ ಇನ್ನೂ ನೆನಪಿದೆ, ಆಗ ನನಗೆ ಹದಿಮೂರು ವರ್ಷ ವಯಸ್ಸು. ತಿಂಗಳ ಋತುಚಕ್ರ ಶುರುವಾದಾಗ ವಿಪರೀತ ಹೊಟ್ಟೆನೋವು ಕಾಣಿಸಿಕೊಳ್ಳುವುದು. ಆಗೆಲ್ಲ ನಮ್ಮ ತಂದೆ  " ಶಾಲೆಯ ಹೋಮ್ ವರ್ಕ್ ಏನೂ ಮಾಡೋದು ಬೇಡ. ಬೇಗ ಊಟ ಮಾಡಿ ಮಲ್ಕೋ. ಎಷ್ಟು ಹೊಟ್ಟೆ ನೋಯ್ತಾ ಇದೆಯೋ ಏನೋ... ಏಯ್.. ವಸಂತೀ...ಅವಳಿಗೆ ಬೇಗ ಊಟ ಹಾಕು. ಪಾಪ!! ಮಲಗಲಿ. ಎಂದು ಸಂಜೆಯ ವೇಳೆಗೆ ಹೇಳುತ್ತಿದ್ದರು. ತಾಯಿಯ ಅಂತಃಕರಣ ಅವರಲ್ಲಿದೆ.  ಇದೊಂದು ಉದಾಹರಣೆ ಅಷ್ಟೇ. ಇನ್ನೂ ಅನೇಕ ರೀತಿಯಲ್ಲಿ ಅಪ್ಪ ನನಗೆ ಇಷ್ಟವಾಗುತ್ತಾರೆ. ಕೃಷಿ, ಹೈನುಗಾರಿಕೆ, ಓದುವುದು, ಸಂಗೀತ, ಯಕ್ಷಗಾನ ಹಾಡುಗಾರಿಕೆ ಎಲ್ಲವೂ ಅವರ ಆಸಕ್ತಿ ವಿಷಯಗಳು. ಅಪ್ಪಂದಿರ ದಿನದ ಶುಭಾಶಯಗಳು💐. ಅಪ್ಪ ಐ ಲವ್ ಯೂ ಅಪ್ಪ...
ಪ್ರೀತಿಯ ಮಗಳು,
ರಾಧಿಕಾ

Thursday 4 June 2020

ಭಾವಗೀತೆ : ಮುರಳಿಯ ಗಾನ

#google_image

#ಹಕ್ಕಿಬಿತ್ತಿದಕಾಳು_ಕಥೆಕವನಗಳಸಂಕಲನ

ಭಾವಗೀತೆ : ಮುರಳಿಯ_ಗಾನ

ತಿಳಿಸಂಜೆ ವೇಳೆಯಲಿ, ಹೂಬನದ ಹಾದಿಯಲಿ
ಮುರಳಿಯ ಗಾನವು ಕೇಳುತ್ತಿತ್ತು...
ರಾಧಾ ಮಾಧವರು ಏಕಾಂತದಲ್ಲಿರಲು
ಕೋಕಿಲದ ದನಿಯು ಜೊತೆಯಾಗಿತ್ತು

ಹಸಿರು ಹಾಸಿನ ಮೇಲೆ ಹರಿಣಗಳ ಜಿಗಿದಾಟ
ಮನಸಿಗೇನೋ ಮುದವಾಗಿತ್ತು
ಅಲ್ಲೊಂದು ಇಲ್ಲೊಂದು ಇಣಚಿಗಳ ಕುಣಿದಾಟ
ನಯನಗಳಿಗೆ ಮೆದುವಾಗಿತ್ತು

ತಂಗಾಳಿ ಮೈಸೋಕಿ ರೋಮಾಂಚನ ವಾಗಲು
ರಾಧೆಯ ಮೊಗದಲ್ಲಿ ನಗುಮೂಡಿತ್ತು
ಪಿಸುನುಡಿಯ  ನುಡಿಯಲು ಮಾಧವನ ಕಿವಿಯಲ್ಲಿ
ಆನಂದದ ಅಲೆಯೇ ತುಳುಕಾಡಿತು

ಜಿಟಿಜಿಟಿ ಮಳೆಹನಿ ಸುರಿದಾಗ ಮಾಧವನು
ರಾಧೆಯ ಮರದಡಿಗೆ ಬರಸೆಳೆದನು
ಸೆರಗಿನ ಮರೆಯಲ್ಲಿ ರಾಧೆಯ ಜೊತೆಗೂಡಿ
ಶೃಂಗಾರ ಕಾವ್ಯವನು ಬರೆದಿಹನು

ಗೋಪಾಲನಾಗಿ ಲೋಕವನೇ ನಡೆಸುವ
ಮುರಳೀಲೋಲನ ಲೀಲೆಯಿದು
ಅಮರ ಪ್ರೇಮಕೆ ಪ್ರಕೃತಿಯನ್ನೇ
ಸಾಕ್ಷಿಯನ್ನಾಗಿಸಿದ ಗಳಿಗೆಯಿದು

ರಚನೆ : ಸಿಂಧು ಭಾರ್ಗವ್ | ಬೆಂಗಳೂರು

#sindhubhargavquotes #kannadapoem #yqjogi_kannada kannadabarahagalu #ರಾಧಾಕೃಷ್ಣ ರಾಧೆ ರಾಧೆ ಮುರಳೀಲೋಲ

Wednesday 3 June 2020

ಲೇಖನ : ಅಮ್ಮ ಎಂದರೆ ಹರುಷ



ಎಲ್ಲರಿಗೂ ಶುಭೋದಯ💐 ನಮಸ್ಕಾರಗಳು🙏 #ಅಮ್ಮಎಂದರೆ ... ಸಂಪಾದಕತ್ವದ ಲೇಖನ ಕೃತಿ ಇಂದು ನನ್ನ ಕೈಸೇರಿದೆ ಎನ್ನಲು ತುಂಬಾ ಹರ್ಷವಾಗುತ್ತಿದೆ. ಮೈತ್ರಿ ಪ್ರಕಾಶನದ ಉತ್ತಮ ಯೋಜನೆಯಲ್ಲಿ ನಾವೂ ಭಾಗಿಯಾಗಿರುವುದು ಖುಷಿಯ ವಿಚಾರ. ನಾನು ಬರೆದ ಲೇಖನ ಕೂಡ ಪ್ರಕಟವಾಗಿದೆ. ಹೃತ್ಪೂರ್ವಕ ವಂದನೆಗಳು💐 ✍️📚😊✍️📚😊🌹✍️📚

😊🌹😊📚✍️🌹 ----ಸಿಂಧು ಭಾರ್ಗವ್ ಬೆಂಗಳೂರು"




ಲೇಖನ : ಅಮ್ಮ ಎಂದಾಗ...
ಬರಹಗಾರ್ತಿ : ಸಿಂಧು ಭಾರ್ಗವ್ | ಬೆಂಗಳೂರು

ಅಮ್ಮ ಎಂದರೆ ಹರುಷ ನೂರ್ಮಡಿಯಾಗುವುದು. ಗರ್ಭಕೊಳದಲ್ಲಿ ಮತ್ಸ್ಯವಾಗಿ ವಿಹರಿಸುತ್ತಿದ್ದ ನಮಗೆ ಅದೇ ಒಂದು ಪರಪಂಚವಾಗಿತ್ತು. ಹಡೆದು ಭೂಮಿತಾಯಿಯ ಮಡಿಲಿಗಿಟ್ಟು ಇನ್ನೊಂದು ಪ್ರಪಂಚವ ಪರಿಚಯಿಸಿಕೊಟ್ಟ ಮಹಾತಾಯಿ ಆಕೆ. ನವಮಾಸವೂ ನೋವ ನುಂಗಿಕೊಂಡು , ಕನಸ ಕಟ್ಟಿಕೊಂಡು ತನ್ನ ಆಸೆ ಆಕಾಂಕ್ಷೆಗಳ ಮೆಲುದನಿಯಲ್ಲಿ ಭ್ರೂಣಕ್ಕೆ ತಿಳಿಸಿ ಮೊಟ್ಟಮೊದಲ ಸಂವಹನ ನಡೆಸಿದವಳು ಆಕೆ‌. ಬಗೆಬಗೆಯ ತಿಂಡಿ ತಿನಿಸುಗಳ "ಬಯಕೆ" ಎಂಬ ಹೆಸರಿನಲ್ಲಿ ತಿಂದು ತನ್ನ ಗರ್ಭದೊಳಗಿರುವ ಕುಡಿಗೂ ಉಣಿಸಿದವಳು ಆಕೆ. ಈ ಜನುಮವೇ ಆಕೆ ನಮಗೆ ನೀಡಿದ ವರದಾನವಾಗಿದೆ. ನಡೆದಾಡುವ ದೇವರು ಎನ್ನಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ತನ್ನ ಅಭಿರುಚಿಗಳ ಬದಿಗೊತ್ತಿ ಕೇವಲ ಮಗುವಿನೊಂದಿಗೆ ಹೊಸದೊಂದು ಪುಟ್ಟಪ್ರಪಂಚವನ್ನು ಸೃಷ್ಟಿಸಿಕೊಂಡು ಬದುಕು ಕಟ್ಟಿಕೊಳ್ಳುವವಳು ಆಕೆ. ಗಂಡ ಉದ್ಯೋಗದಲ್ಲಿ ತಲ್ಲೀನನಾದರೆ ತಾಯಿ ಮಗುವಿನ ಲಾಲನೆ ಪಾಲನೆಯಲ್ಲಿ ತನ್ಮಯಳಾಗಿರುತ್ತಾಳೆ. ತಾಯಿ ಬಳ್ಳಿಯ ಹೂವುಗಳಾಗಿ ಅರಳಿದ ನಮಗೆ ಈಗ ಸಂತೃಪ್ತಿಯ ಜೀವನ ನಡೆಸುವುದೊಂದೇ ದಾರಿ. ರಭಸದಿ ಹರಿಯುವ ಅದೆಷ್ಟೋ ನದಿಗಳಿದ್ದರೂ ಶಾಂತವಾಗಿರುವ ಸರೋವರಗಳ ಸಂಖ್ಯೆ ತೀರ ಕಡಿಮೆ. ಅದಕ್ಕೆ ತಾನೆ, ತಾಯಿಯನ್ನು ಸರೋವರಕ್ಕೆ ಹೋಲಿಸುವುದು. ಸಹನೆ, ತಾಳ್ಮೆಯ ಮೂರುತಿ ಆಕೆ.




ಮದುವೆ ಮೊದಲ ದಿನಗಳು: ನಾವು ಹಳ್ಳಿಯಲ್ಲಿ ಹುಟ್ಟಿ ಬೆಳೆದವರಾದ ಕಾರಣ, ನಮ್ಮ ಹೆತ್ತವರ ಬಾಲ್ಯದಲ್ಲಿ ಬಡತನವು ಮೈಮಂಡೆ ಪೂರ ಮೆತ್ತಿಕೊಂಡಿತ್ತು. ತಂದೆ , ವೃತ್ತಿಯಲ್ಲಿ ಭೀಮಸೇನನಂತೆ ಅಡುಗೆ ಮಾಡುತ್ತಿದ್ದರು. ಕೃಷಿ ಭೂಮಿ ಸ್ವಲ್ಪ ಮಟ್ಟಿಗೆ ನಡೆಸಿಕೊಂಡು ಬಂದಿದ್ದರು‌. ಭತ್ತ, ತರಕಾರಿ, ಸೊಪ್ಪು , ತೆಂಗು, ಬಾಳೆ, ಅಡಿಕೆ, ಅವರೆ, ಹೆಸರು ಕಾಳುಗಳು ಆಯಾಯ ಕಾಲಕ್ಕೆ ಬೆಳೆಯುತ್ತ ಇದ್ದರು. ಮುಟ್ಟಿದ್ದೆಲ್ಲ ಮಸಿ ಎನ್ನುವ ಹಾಗೆ ಹಣವು‌ ಕೈಯಲ್ಲಿ ಸ್ವಲ್ಪವೂ ಉಳಿಯುತ್ತಿರಲಿಲ್ಲ. ಅಷ್ಟೆ ಅಲ್ಲದೇ ಅವರ ತಾಯಿ ಕೂಡ ಅನಾರೋಗ್ಯಕ್ಕೆ ತುತ್ತಾಗಿ ಚಾಪೆ ಹಿಡಿಯುವ ಹಾಗಾಯಿತು‌. ಅವರನ್ನು ನೋಡಿಕೊಳ್ಳಲು ಹೆಣ್ಣು ದಿಕ್ಕಿಲ್ಲದ ಕಾರಣ, ಮದುವೆ ಮಾಡಿಕೊಳ್ಳುವ ಪ್ರಸ್ತಾಪ ಮನೆಯಲ್ಲಿ ನಡೆಯಿತು‌. ಆಗ ತಂದೆಗೆ ಪರಿಚಯವಿದ್ದವರು ನಮ್ಮ ಅಜ್ಜಯ್ಯ. ಅವರು ಒಂದು ಹೋಟೇಲಿನಲ್ಲಿ ಕೆಲಸ ಮಾಡುತ್ತಿದ್ದರು. ಆಗೆಲ್ಲ ಬಾರಕೂರಿನಲ್ಲಿ "ಭಾರತಿ ಹೋಟೆಲ್" ತುಂಬಾ ಹೆಸರುವಾಸಿಯಾಗಿತ್ತು. ಅಜ್ಜಯ್ಯ ಇವರ ಸ್ನೇಹಿತರಾದ ಕಾರಣ, "ನನಗೆ ಮದುವೆ ಆಗಬೇಕು. ಒಂದು  ಹೆಣ್ಣಿದ್ರೆ ಹೇಳಿ ಕಾಂಬ.." ಎಂದಿದ್ದರಂತೆ. ಈ ತರುಣನ ಉತ್ಸಾಹ ನೋಡಿ ಅಜ್ಜಯ್ಯನಿಗೆ ಖುಷಿಯಾಗಿ ಇಷ್ಟು ಚುರುಕು ಹುಡುಗ, ಕಣ್ತುಂಬಾ ಕನಸುಗಳ ತುಂಬಿಕೊಂಡವ ನನ್ನ ಮಗಳನ್ನು ಚೆನ್ನಾಗಿ ನೋಡಿಕೊಳ್ಳ ಬಲ್ಲ ಎಂದು ಯೋಚಿಸಿ, ಮಗಳ‌ ಜಾತಕವನ್ನೇ  ನೀಡಿದರಂತೆ. ಜಾತಕ ಕೂಡಿ ಬಂದು ಮದುವೆಯೂ ನಡೆಯಿತು. ಮದುಮಗಳಾಗಿ ಹೊಸ ಹಳ್ಳಿಮನೆಯ ಅಕ್ಕಿಸೇರು ತುಳಿದು ಬಲಗಾಲಿಟ್ಟು ಮಹಾಲಕ್ಷ್ಮಿಯಂತೆ ಆ ಮನೆಗೆ ಪ್ರವೇಶಿಸಿದಳು.
ನನ್ನಮ್ಮನೂ ತರುಣಿಯಾಗಿದ್ದಾಗ ನೋಡಲು ಥೇಟ್ ಶ್ರೀದೇವಿಯಂತೆಯೇ ಇದ್ದರು. ಅದೇ ಹಿಂದಿ ಸಿನೇಮಾ ನಟಿಯ ಹಾಗೆ. ಆ ನಗು, ಮೆಲುದನಿಯ ಮಾತುಗಳು, ಉದ್ದವಾದ ನಾಗರಜಡೆ, ಜಡೆ ತುಂಬಾ ಮಲ್ಲಿಗೆ, ಅಬ್ಬಲಿಗೆ ಇಲ್ಲ ಮುತ್ತುಮಲ್ಲಿಗೆ ಹೂವಿನ ದಂಡು ಮುಡಿಯದೇ  ಇರುತ್ತಿರಲಿಲ್ಲ. ನಕ್ಕಾಗೆಲ್ಲ ಕೆನ್ನೆಯಲ್ಲಿ ಮೂಡುತ್ತಿದ್ದ ಗುಳಿ. ಆ ಗುಳಿ ಕೆನ್ನೆ ನನಗೂ ಈಗ ವರವಾಗಿದೆ ಎನ್ನಲು ಖುಷಿಯಾಗುತ್ತದೆ. ತವರು ಮನೆಯಲ್ಲಿಯೂ ಬಡತನವಿದ್ದ ಕಾರಣ ಉದ್ಯೋಗಕ್ಕೆ ಹೋಗುತ್ತಿದ್ದಳು. ಹೆತ್ತವರ ಕಷ್ಟಕ್ಕೆ ಹೆಗಲಾಗಿ ನಿಂತಿದ್ದಳು. ಗಟ್ಟಿಗಿತ್ತಿ‌, ಧೈರ್ಯವಂತೆ, ಸ್ವಾಭಿಮಾನಿ. ಸತ್ಯದೇವತೆ. ತನ್ನಂತಹ ಅದೆಷ್ಟೋ ಹೆಣ್ಮಕ್ಕಳಿಗೆ ಕೆಲಸವನ್ನು ಉಚಿತವಾಗಿ ಕಲಿಸಿಕೊಟ್ಟವಳು. ಆಗೆಲ್ಲ ಹೊಲಿಗೆ, ಬೀಡಿ ಕಟ್ಟುವುದು ಹಳ್ಳಿ ಹೆಣ್ಮಕ್ಕಳ ಮುಖ್ಯ ಉದ್ಯೋಗವಾಗಿತ್ತು ನೋಡಿ. ಹೆಣ್ಮಕ್ಕಳು ದುಡಿಯಬೇಕು, ತಮ್ಮ ಕಾಲಮೇಲೆ ನಿಲ್ಲಬೇಕು ಎನ್ನುವ ಅಭಿಪ್ರಾಯ ಅವಳಲ್ಲಿ ಧೃಡವಾಗಿತ್ತು. ಅದರಂತೆ ಮದುವೆ ಆದಮೇಲೂ ಬೀಡಿಕಟ್ಟಲು ಪ್ರಾರಂಭಿಸಿದ್ದಳು.ಆದರೆ ನಮ್ಮ ತಂದೆ ಬೇಡ ಅಂದ ಕಾರಣ ನಿಲ್ಲಿಸಿದರು‌. ಆಗೆಲ್ಲ ನಮ್ಮ ತಂದೆ ಬೀಡಿ ಸೇದುತ್ತ ಇದ್ದರಂತೆ. ಮದುವೆ ಹೊಸತರಲ್ಲಿ ಅಮ್ಮನಿಗೆ ಅವರ ನೋಡಿ ಕೋಪ ಬಂದು ಈ ದುಷ್ಚಟ ,ದುರಭ್ಯಾಸ ಬಿಡಬೇಕೆಂದು ಉಪವಾಸ ಕೂತಿದ್ದಳಂತೆ. ಬೀಡಿ ಸೇದುವುದು ನಿಲ್ಲಿಸಿದರೆ ಮಾತ್ರ ಮಲಗುವ ಕೋಣೆಗೆ ಪ್ರವೇಶ ಎಂದು ಕಟ್ಟಪ್ಪಣೆ ಹೊರಡಿಸಿದ್ದಳಂತೆ. ಆದರೆ ಅಪ್ಪನಿಗೆ ಇದೆಲ್ಲ ಯಾವ ಲೆಕ್ಕ. ದೊಡ್ಡ ಹೀರೋ ತರಹ ಬಂದು ಮಲಗುವ ಕೋಣೆಯ ಬಾಗಿಲಿಗೆ ಬಲವಾಗಿ ಒದ್ದು ಬಾಗಿಲನ್ನೇ ಮುರಿದು ಹಾಕಿದ್ದರಂತೆ‌ .
"ನಿನ್ನ ಆಟ ನನ್ನ ಹತ್ತಿರ ನಡೆಯೋದಿಲ್ಲ. ಹಟಮಾಡುವುದನ್ನು ಬಿಡು‌ ನನ್ನ ಇಷ್ಟದಂತೆ ನಾ ಬದುಕೋದು, ನೀ ಹೇಳಿದ್ದೆಲ್ಲ ಕೇಳಬೇಕೆಂದಿಲ್ಲ..." ಎಂದು ಜೋರು ಮಾಡಿದ್ದರಂತೆ. ಪಾಪ! ಅಮ್ಮ ಅಳುತ್ತ ಊಟ ಮಾಡದೆ ಮಲಗಿದ್ದರಂತೆ.
ನಮ್ಮಮ್ಮನಲ್ಲಿ ದಾದಿ, ಆಯಿಯ ಎಲ್ಲ ಗುಣಗಳೂ ಇತ್ತು. ಈಗಲೂ ಇದೆ. ಇಪ್ಪತ್ತೆರಡು ವರುಷದ ತರುಣಿ ಆದವಳು ತನ್ನ ಹಾಸಿಗೆ ಹಿಡಿದ ಅತ್ತೆಯ ಚಾಕರಿ ಮಾಡಿದ್ದಳು. ಕಕ್ಕ, ಉಚ್ಚೆ ಎಲ್ಲವೂ ಬಾಚಿ ತೆಗೆದಿದ್ದಳು. ಪಾರ್ಶ್ವವಾಯು ಹೊಡೆದ ಕಾರಣ ಒಂದು ಕಡೆ ಸ್ವಾಧೀನವಿರಲಿಲ್ಲ. ಅತ್ತೆಗೆ ಊಟ ಮಾಡಿಸುವುದು, ನೀರು ಕುಡಿಸುವುದು, ಸ್ನಾನ ಮಾಡಿಸಿ ಸೀರೆ ಉಡಿಸುವುದು, ಮಲಗಿಸುವುದು, ಹೀಗೆ ಎಲ್ಲ ತರಹದ ಶುಶ್ರೂಷೆ ಮಾಡುತ್ತಿದ್ದಳು. ಅಜ್ಜಿಗೆ ಏನೂ ನೆನಪಿರುವುದಿಲ್ಲವಂತೆ, ಕೆಲವೊಮ್ಮೆ ಹಳೆಯದೆಲ್ಲ ನೆನಪಾಗಿ ಏನೇನೋ ತುಳುವಿನಲ್ಲಿ ಮಾತನಾಡುತ್ತ ಚಾವಡಿಯ ಬಾಗಿಲ ಬಳಿ ತೆವಳಿಕೊಂಡು ಹೋಗುತ್ತಿದ್ದರಂತೆ. ನಡೆಯಲಾಗದೆ ದೊಪಕ್ಕನೆ ಬಿದ್ದು ಮೈ ಕೈ ಗಾಯ ಮಾಡಿಕೊಳ್ಳುತ್ತಿದ್ದರಂತೆ. ಆಗೆಲ್ಲ ಮಗುವಿಗೆ ಆರೈಕೆ ಮಾಡಿದ ಹಾಗೆ ನೋಡಿಕೊಂಡಿದ್ದಳಂತೆ. "ನೀ ನನ್ನ ಅಮ್ಮ.. ಎಂದು ಅಜ್ಜಿ ಕಣ್ಣೀರು ಹಾಕುತ್ತಿದ್ದರಂತೆ. ಈಗಿನ ಹೆಣ್ಮಕ್ಕಳು ಯಾರು ಮಾಡುತ್ತಾರೆ ಹೇಳಿ?
ಇದರ ನಡುವೆಯೇ ಪ್ರೀತಿ ಅಂಕುರಿಸಿ ನವಮಾಸ ಕಳೆದು ಮುದ್ದಾದ ಹೆಣ್ಣು ಮಗುವು ಮಡಿಲಿಗೆ ಬಂದಿತ್ತು. ಅತ್ತೆಯ ಆರೈಕೆ, ಮಗುವಿನ ಲಾಲನೆ ಪಾಲನೆ, ಗದ್ದೆಯ ಜನನ ಕೆಲಸ, ಹೈನುಗಾರಿಕೆ, ಹಟ್ಟಿಯಲ್ಲಿ ಎಮ್ಮೆಗಳು, ಹಸುಗಳು... ಅಬ್ಬಾ!! ಒಂದಾ ಎರಡಾ.. ದಣಿವರಿಯದ ಯಂತ್ರದಂತೆ ಎಲ್ಲ ಕೆಲಸಗಳನ್ನು ಒಂದರ ನಂತರ ಒಂದರಂತೆ ಮಾಡಿ ಮುಗಿಸುತ್ತಿದ್ದಳಂತೆ. ಹಗಲಾದರೆ ಸಾಕು ಇವಳ‌ ಬಿಡುವಿರದ ಕೆಲಸದಲ್ಲಿ ರಾತ್ರಿಯಾಗುವುದೇ ತಿಳಿಯುತ್ತಿರಲಿಲ್ಲವಂತೆ. ಸ್ವಲ್ಪ ಊಟ, ಇನ್ನೊಬ್ಬರಿಗಾಗಿಯೇ ಬದುಕು, ಆಸೆಗಳು ಅವಳ ಮನಸ್ಸಿನ ಶಬ್ದಕೋಶದಲ್ಲಿಯೇ ಇಲ್ಲದಂತೆ ಬದುಕು ಸಾಗಿಸಿದವಳು "ನಮ್ಮಮ್ಮ..!!" (ಗಂಟಲು ಕಟ್ಟುತ್ತಿದೆ, ಮೌನಕ್ಕೆ ಶರಣು)




ನಮ್ಮ ತಂದೆಗೆ ತನ್ನ ಹೆಂಡತಿಯೆಂದರೆ ತುಂಬಾ ಪ್ರೀತಿ. ಏಕೆಂದರೆ ತನ್ನ ಅನಾರೋಗ್ಯ ಪೀಡಿತ ಅಮ್ಮನ ಶುಶ್ರೂಷೆ ಮಾಡಿ ಮಗುವಿನ ಹಾಗೆ ನೋಡಿಕೊಂಡವಳು ನಾಳೆ ನನ್ನನ್ನೂ ಚೆನ್ನಾಗಿ ನೋಡಿಕೊಳ್ಳುತ್ತಾಳೆ ಎಂಬ ನಂಬಿಕೆಯು ಅವರ  ಮನದ ಆಳದಲ್ಲಿ ಬೇರೂರಿತ್ತು. ನಂಬಿಕೆಯೇ ಜೀವನ ತಾನೆ. ಕಷ್ಟದ ಜೀವನದಲ್ಲಿ ಸಹಾಯಕ್ಕೆ ಬೆನ್ನೆಲುಬಾಗಿ ನಿಂತವಳು ನಮ್ಮಮ್ಮ. ಮಾಂಗಲ್ಯ ಸರವನ್ನು ಅಡವಿಟ್ಟು ಹಣಪಡೆದು ಅದರಿಂದ ಏನೋ ಸ್ವಂತ ಉದ್ಯೋಗ ಮಾಡಲು ಹೊರಟಾಗ ಎದುರು ಮಾತನಾಡದೇ ಇದ್ದ ಒಂದು ಚಿನ್ನದ ಚೂರನ್ನು ಕೊಟ್ಟವಳು ನಮ್ಮಮ್ಮ. ಹೀಗೆ ವರುಷ ಕಳೆದಂತೆ ಇನ್ನೆರಡು ಹೆಣ್ಣುಮಕ್ಕಳ ಹಡೆದು ಬದುಕು ನಡೆಸುತ್ತಾ ಬಂದಳು. ತಮ್ಮ ಮಕ್ಕಳಿಗಾಗಿಯೇ ಅವರ ಕಷ್ಟಕ್ಕೆ ಮಿಡಿಯುವ ಮಾತೃ ಹೃದಯ ಅವಳದ್ದು. ವರುಷಗಳು ಉರುಳಿದಂತೆ ತಂದೆಯ ವೃತ್ತಿಯಲ್ಲಿಯೂ ಬೆಳವಣಿಗೆ ಕಂಡಿತು. ಹಣಕಾಸಿನ‌ ಸಮಸ್ಯೆ ದೂರಾಗತೊಡಗಿತು. ದೇವರ ಕರುಣಾಕೃಪೆ ಹೆತ್ತವರ ಮೇಲಾಯಿತು. ಮೂರೂ ಹೆಣ್ಮಕ್ಕಳಿಗೆ ಓದಿಸಿದರು. ಎರಡು ಹೆಣ್ಮಕ್ಕಳ ಮದುವೆ ಮಾಡಿಸಿ ಕನ್ಯಾದಾನದ ಪುಣ್ಯವನ್ನು ತಮ್ಮದಾಗಿಸಿಕೊಂಡರು. ಹೆಣ್ಮಕ್ಕಳು ಹೆರಿಗೆಗೆಂದು ಬಂದಾಗ ಆರೈಕೆ ಮಾಡಿ ನಾಲ್ಕು ಗಂಡುಮೊಮ್ಮಕ್ಕಳ "ಅಮ್ಮಮ್ಮ" /ಅಜ್ಜಿಯಾದರು. ಇಂದಿಗೂ ಮೊಮ್ಮಕ್ಕಳಿಗೆ ಅಮ್ಮಮ್ಮ ಎಂದರೆ ತುಂಬಾ ಪ್ರೀತಿ. ಎಲ್ಲ ಕೆಲಸವನ್ನೂ ತಾನೇ ಮಾಡುತ್ತಾ ಮಕ್ಕಳಿಗು, ಗಂಡನಿಗೂ ಕಷ್ಟವಾಗದಂತೆ ನೋಡಿಕೊಳ್ಳುತ್ತಿದ್ದಾಳೆ. ಒಂದೇ ಹದದಲ್ಲಿ ಬದುಕು ಸಾಗಿಸುತ್ತ ಬಂದಿದ್ದಾಳೆ.
ಗದ್ದೆ ಕೆಲಸಕ್ಕೆ, ತೋಟದ ಕೆಲಸಕ್ಕೆ, ಮನೆ ಗೆಲಸಕ್ಕೆ ಬರುವ ಕೆಲಸದವರನ್ನೆಲ್ಲ ಬಹಳ ಆದರದಿಂದ ನೋಡಿಕೊಳ್ಳುತ್ತ ಊರ ಜನರಿಗೆಲ್ಲ ಪ್ರೀತಿಯ "ಅಮ್ಮಾ.." ಆಗಿ ಬದುಕು ನಡೆಸಿದಳು. ಎಡಗೈಯಲ್ಲಿ ಕೊಟ್ಟಿದ್ದು ಬಲಗೈಗೆ ಗೊತ್ತಾಗುತ್ತಲೇ ಇರುತ್ತಿರಲಿಲ್ಲ ನೋಡಿ. ಆ ತರಹ ಸಹಾಯ ಮಾಡುವ ಗುಣದವಳು. ಕೊಟ್ಟಿಗೆಯಲ್ಲಿ ಹತ್ತಾರು ಹಸುಕರುಗಳ ಸಾಕಿ ಸಲಹಿ ಹಾಲು ಡೈರಿಗೆ ಕೊಟ್ಟು ಅಲ್ಲಿನ ಗ್ರಾಮದಲ್ಲಿಯೇ ಅತೀ ಹೆಚ್ಚು ಹಾಲು ಉತ್ಪಾದಿಸುವ ಮನೆ ಎಂಬ ಖ್ತಾತಿ ಪಡೆದಿದ್ದರು. ಹಸುಗಳಿಗೆ ಹೊತ್ತೊತ್ತಿಗೆ ಹಸಿಹುಲ್ಲು, ಆಹಾರ, ನೀರು, ಕೊಟ್ಡಿಗೆ ಗುಡಿಸಿ ತೊಳೆದು ಸ್ವಚ್ಛ ಮಾಡುವುದು, ಅವುಗಳು ಗರ್ಭ ಧರಿಸಿ ನವಮಾಸ ತುಂಬಿ ಕರು ಹಾಕಿದಾಗ ಅವುಗಳ ಆರೈಕೆಯಲ್ಲಿ ತೊಡಗಿಸಿಕೊಳ್ಳುವುದು. ಅಬ್ಬಾ ನಿಜಕ್ಕೂ ಎಲ್ಲರ ಪ್ರೀತಿಯ "ಅಮ್ಮ..." ಆಗಿದ್ದಾಳೆ.
ಈಗ ಯಾವುದಕ್ಕೂ ಚಿಂತೆಯಿಲ್ಲದೇ ನಮ್ಮ ತಂದೆಯವರು ಆರ್ಥಿಕವಾಗಿ ಸ್ಥಿತಿವಂತರಾಗಿದ್ದಾರೆ. ಆಗ ಮದುಮಗಳಾಗಿ ಕಾಲಿಟ್ಟಾಗ ಕಷ್ಟಕೋಟಲೆಗಳೇ ಮಂದಿರವಾಗಿದ್ದರೂ ಎಲ್ಲವನ್ನೂ ಸಹಿಸಿಕೊಂಡು ತಾಳ್ಮೆಯಿಂದ ನಾಳೆಯ ನಮ್ಮಜೀವನ ಉತ್ತಮವಾಗುವುದು, ಅಭಿವೃದ್ಧಿ ಕಾಣುವುದು ಎಂಬ ಭರವಸೆಯೊಂದಿಗೆ ಗಂಡನಿಗೆ ಜೊತೆಯಾಗಿ ಹೆಜ್ಜೆಹಾಕುತ್ತ ಬದುಕು ಸಾಗಿಸಿದ ಕಾರಣ ಈಗ ಜೀವನ ನಂದನವನವಾಗಿದೆ. ಈಗ ಅವಳಿಗೆ ವಯಸ್ಸು ಐವತ್ತೇಳು ವರುಷ. ಸುಸ್ತು ಆಯಾಸ ,ಆಗಾಗ ಹದಗೆಡುವ ಆರೋಗ್ಯ, ಥೈರಾಯ್ಡ್, ಶುಗರ್, ಬಿಪಿ , ಮಂಡಿನೋವು ಎಲ್ಲ ತರಹದ ಖಾಯಿಲೆಗಳೇ ಅವಳಿಗೆ ಸ್ನೇಹಿತರು. ದಿನ ಬೆಳಗಾದರೆ ತಿನ್ನಲೇಬೇಕಾದ ಗುಳಿಗೆಗಳು. ಸಾಲದಕ್ಕೆ ಹೆಣ್ಮಕ್ಕಳ ಸಂಸಾರದ ಸಣ್ಣಪುಟ್ಟ ಏರುಪೇರು ಯೋಚನೆ-ಆಲೋಚನೆಗಳು. ಇದೆಲ್ಲದರ ನಡುವೆ ಚಿಂತಿಸಲು ಬೇರೆ ಕಾರಣ ಬೇಕೇ?
ಅಮ್ಮ ನೀನು ನೂರ್ಕಾಲ ಚೆನ್ನಾಗಿ ಬಾಳಬೇಕು. ಊರ ಜನರಿಗೆ, ಹಸುಕರುಗಳಿಗೆ, ಹೊಟ್ಟೆಯಲ್ಲಿ ಹುಟ್ಡಿದ ಮಕ್ಕಳಿಗೆ, ಕೈಹಿಡಿದ ಗಂಡನ ಆರೈಕೆ ಮಾಡಿ ಎಲ್ಲರಿಂದಲೂ ಬಾಯಿತುಂಬಾ "ಅಮ್ಮಾ....." ಎಂದು ಕರೆಯಿಸಿಕೊಳ್ಳಲು ಅದರ ಹಿಂದಿರುವ ಸಹನೆ, ತ್ಯಾಗ, ಸೇವಾಮನೋಭಾವವೇ ಮೂಲಕಾರಣ. ನೆಮ್ಮದಿಯಿಂದ, ನಿವೃತ್ತಿ ಜೀವನವನ್ನು ಆರಾಮದಾಯಕವಾಗಿ ಕಳೆಯಬೇಕು. ಅದೇ ನನ್ನಾಸೆ.

ಲೇಖಕರು : ಶ್ರೀಮತಿ ಸಿಂಧು ಭಾರ್ಗವ್ ಬೆಂಗಳೂರು

Tuesday 2 June 2020

ಲೇಖನ ಕರೋನಾದಿಂದ ಮದುವೆ ಮಾತ್ರ ಮುಂದೂಡಿದ್ದಲ್ಲ

ಕರೋನಾದಿಂದ ಮದುವೆ ಮುಂದೂಡಿದೆ. ಅಷ್ಟೇ ಅಲ್ಲ
Source images

Wedding groom and Bride source images


🍀 ಮದುಮಗಳ ತಂದೆ, ಮೊದಲೇ ಬುಕ್ ಮಾಡಿದ ಛತ್ರದ ಅಡ್ವಾನ್ಸ್ ವಾಪಾಸು ಕೇಳಿಯಾಯಿತು.
🍀 ಅಡುಗೆ ಭಟ್ಟರಿಗೆ, ಬಡಿಸುವವರಿಗೆ, ಶ್ಯಾಮಿಯಾನ,ಫೋಟೊ-ವೀಡಿಯೋಗ್ರಾಫರ್, ಸ್ಟೂಡಿಯೋದವರಿಗೆ, ಪುರೋಹಿತರಿಗೆ ಕರೆಮಾಡಿ ಮುಂದೂಡಿದ ವಿಷಯ ತಿಳಿಸಬೇಕಾಯಿತು.
🍀 ಛತ್ರದ ಮ್ಯಾನೇಜರ್, ವಾದ್ಯಕ್ಕೆ, ಮಂಟಪದ ಅಲಂಕಾರಕ್ಕೆ, ಕ್ಲೀನಿಂಗ್ ಗೆ , ಐಸ್ ಕ್ರೀಮ್ ಕೊಡುವವರಿಗೆ, ಇನ್ನು ಸ್ಪೆಶಲ್ ಸಿಹಿಖಾದ್ಯ ಮಾಡಿಸುವುದಾದರೆ ಅವರಿಗೂ
ಹೇಳಿದವರೆಲ್ಲರಿಗೂ ಬೇಡ ಎನ್ನಬೇಕಾಯಿತು.
🍀 ಅಂಗಡಿಯವರ ತರಕಾರಿ, ದಿನಸೀ, ಪುರೋಹಿತ ಸಾಮಗ್ರಿಗಳು ಅಲ್ಲೇ ಉಳಿಯಿತು.
🍀 ಹೂವು-ಹಣ್ಣುಗಳ ವ್ಯಾಪಾರಿಗಳಿಗೆ ಬೇಸರವಾಯಿತು.
🍀 ಮದುವೆಗೆ ಬರುವವರಿಗೆ ವಾಹನ ವ್ಯವಸ್ಥೆ ಮಾಡಲೋಸುಗ ಮುಂಗಡ ಬುಕ್ ಮಾಡಿದ ಕಾರು, ಮಿನಿ ಬಸ್ ನವರಿಗೆ ಬೇಡ ಹೇಳಬೇಕಾಯಿತು.

ಕರೋನಾದಿಂದ ಮದುವೆ ಮುಂದೂಡಲಾಗಿದೆ. ಅಷ್ಟೇ ಅಲ್ಲ,
Source image

🌳 ಸಂಬಂಧಿಕರಿಗೆ, ಸ್ನೇಹಿತರಿಗೆ ಅರ್ಧದಷ್ಟು ಹೇಳಿಕೆ‌ ಹೇಳಿದವರಿಗೆಲ್ಲ ಮತ್ತೆ ಮುಂದೂಡಲ್ಪಟ್ಟ ವಿಷಯ ತಿಳಿಸಬೇಕಾಯಿತು. ಕೆಲವರ ಫೋನ್ ನಂಬರ್ ಕೂಡ ಇಲ್ಲ. ಎಲ್ಲೋ ಬೇರೆಯವರ ಫಂಕ್ಷನ್ ಗೆ ಬಂದಾಗ ನಮ್ಮ ಮಗಳ‌ ಮದುವೆಗೂ ಬನ್ನಿ ಎಂದು ಕಾಗದ ಹಂಚಿದ್ದು.
🌳 ಮನೆಯ ಸುತ್ತ ಮುತ್ತ ಕ್ಲೀನ್ ಮಾಡಿಸಿ ಮನೆಯ ಗೋಡೆಗೆಲ್ಲ ಬಣ್ಣ ಬಳಿಯುವ  ಯೋಜನೆಯಲ್ಲಿ ಇದ್ದಾಗಲೇ ಹೀಗಾದ ಕಾರಣ ಅವರಿಗೂ ಕೆಲಸ / ಸಂಬಳ ತಪ್ಪಿತು.
🌳 ಬಟ್ಟೆ ಮಳಿಗೆಯಲ್ಲಿನ ಪಟ್ಟೆ ಸೀರೆ, ವೇಷ್ಟೀ ಶಾಲುಗಳು ಹಾಗೆಯೇ ಉಳಿದವು.
🌳 ಬಳೆಯಂಗಡಿ, ಹೊಲಿಗೆಯವರು ಮನೆಯಲ್ಲೆ ಖಾಲಿ ಕುಳಿತರು. ಮೇಕಪ್ ಮಾಡಿಸುವವರಿಗೆ ಕೆಲಸವಿಲ್ಲ. ಮೆಹಂದಿ ಹಚ್ಚಿ ಸೀಸನ್ ಲಿ ಸಾವಿರ ಸಾವಿರ ಹಣ ಮಾಡುತ್ತಿದ್ದವರಿಗೆ ಕೆಲಸವಿಲ್ಲ. ಡಿ.ಜೆ ಗದ್ದಲವಿಲ್ಲ. ವೈನ್, ಮದ್ಯ, ಮೆಹಂದಿ ಹಿಂದಿನ ರಾತ್ರಿಯ ಬಾಡೂಟ ಚಪ್ಪರಿಸುವ ಹಾಗಿಲ್ಲ.

ಕರೋನಾದಿಂದ ಮದುವೆ ಮುಂದೂಡಲಾಗಿದೆ, ಅಷ್ಟೇ ಅಲ್ಲ
Corona virus source image

Source image

🌲 ಮದುಮಕ್ಕಳ, ಮನೆಯವರ, ಹೆತ್ತವರ ಸಂಭ್ರಮಕ್ಕೆ ಅವಕಾಶವಿಲ್ಲ. ನಾವು ಯಾರಿಗೂ ಕಮ್ಮಿ ಇಲ್ಲ, ವರನ ಮನೆಯವರ ಎದುರು ನಾವು ಸಣ್ಣವರಾಗ ಬಾರದು ಎಂದು ಕೆಲವರು ದುಂದುವೆಚ್ಚ ಮಾಡುತ್ತಿದ್ದರು. ಅದಕ್ಕಾಗಿಯೇ ಲಕ್ಷಲಕ್ಷ ತೆಗೆದಿಡುತ್ತಿದ್ದರು. ಆ ಹಮ್ಮಿಗೆ ಈಗ ಜಾಗವಿಲ್ಲ.
🌲 ಎಪ್ರಿಲ್ ಮೇ ಸೀಸನ್ನಿನಲ್ಲಿ  ದುಡಿದು ಒಂದಷ್ಟು ಹಣ ಒಟ್ಟು ಮಾಡುವ ಪ್ರತಿಯೊಬ್ಬರ ವೃತ್ತಿ ಜೀವನಕ್ಕೆ ಬ್ರೇಕ್ ಬಿದ್ದಿದೆ.
🌲 ಕೈಯಲ್ಲಿ ಕಾಸಿಲ್ಲದೇ, ಕೂಡಿಟ್ಟ ಹಣವೆಲ್ಲ ಖಾಲಿಯಾಗುತ್ತ ಬಂದಿದೆ.
🌲 ಹಳ್ಳಿ ಜೀವನವಾದರೆ ತಮ್ಮ ಮನೆಯಲ್ಲೆಯೇ ಕೈತೋಟ ಮಾಡಿಕೊಂಡು ದಿನದ ಊಟಕ್ಕೆ ತರಕಾರಿ, ಹಣ್ಣು, ಸೊಪ್ಪುಗಳು, ತೆಂಗಿನಕಾಯಿ ಬೆಳೆಸಿಕೊಂಡು ಬದುಕಬಹುದು.
🌲 ಉಳಿದವರಿಗೆ?? ಎಲ್ಲವನ್ನೂ ಹಣ ನೀಡಿಯೇ ಖರೀದಿಸಬೇಕು ಎನ್ನುವವರಿಗೆ ತುಂಬಾ ಕಷ್ಟವಾಗುತ್ತದೆ.
🌲 ಕರೋನಾ ಮಾರಿ ಇಂದು ನಾಳೆಗೆ ಮುಗಿಯುವ ಲಕ್ಷಣವಿಲ್ಲ. ಇದರೊಂದಿಗೆ ಬದುಕಬೇಕು ಎಂದು‌ ಮನದಲ್ಲಿ ಧೃಡಸಂಕಲ್ಪ ಮಾಡಿಕೊಂಡು ನಮ್ಮ ಎಚ್ಚರಿಕೆಯಲ್ಲಿ ನಾವಿದ್ದು ಮತ್ತೆ ಜೀವನ ಕಟ್ಟಿಕೊಳ್ಳಬೇಕು.

ಲೇಖನ :- ಸಿಂಧು ಭಾರ್ಗವ್ ಬೆಂಗಳೂರು