Tuesday 28 March 2023

ಪ್ಯಾನ್ ಇಂಡಿಯಾ ಸಿನೆಮಾದಿಂದ ಸಮಾಜದ ಮೇಲೆ ಉಂಟಾಗುವ ಪ್ರಭಾವಗಳು

 

Google images source

ಚಾರ್ಲಿ ಸಿನೆಮಾ ನೋಡಿ ಮೈಮನಸ್ಸು ತಂಪಾದ ಭಾವ ಮೂಡಿದ್ದು ಸುಳ್ಳಲ್ಲ. ನಾಯಕ‌ನಟಿಯೇ ಇಲ್ಲದಿದ್ದರೂ ಮೂಕಪ್ರಾಣಿ/ಸಾಕು ಪ್ರಾಣಿಯನ್ನೇ ಮುಖ್ಯ ಪಾತ್ರವನ್ನಾಗಿಸಿ ಅದಕ್ಕೆ ಕ್ಯಾನ್ಸರ್ ನಂತಹ ಮಾರಿ ಬಂದಾಗ ಎದುರಾಗುವ ಸನ್ನಿವೇಶಗಳು, ಎದುರಿಸುವ ಕಷ್ಟಗಳನ್ನು ತುಂಬಾ ಚೆನ್ನಾಗಿ ತೋರಿಸಿದ್ದಾರೆ. ಎಂತಹ ಕಲ್ಲು ಮನಸ್ಸು ಕೂಡ ಕರಗುತ್ತದೆ, ಒರಟು ಮನಸ್ಸು ಕೂಡ ಪ್ರಾಣಿಗಳು ತೋರಿಸುವ ಪ್ರೀತಿಯ ಮುಂದೆ ಸೋಲುತ್ತವೆ ಎಂಬುದನ್ನು ತೋರಿಸಿಕೊಟ್ಟರು. ಹಾಡುಗಳು ಕೂಡ ಬಾಯಲ್ಲಿ ಗುನುಗುವಂತೆ ಮಾಡಿದರು.

ನಂತರದಲ್ಲಿ ಕಾಂತಾರ ಸಿನೆಮಾ ಸಮಾಜಮುಖಿಯಾಗಿದ್ದು ಪ್ರಧಾನಿ ಮೋದಿಯವರ ಮೆಚ್ಚುಗೆಯ ಜೊತೆಗೆ ವಿಶ್ವಸಂಸ್ಥೆಯಲ್ಲಿ ಕೂಡ ಸದ್ದು ಮಾಡಲು ಅವಕಾಶ ಪಡೆದುಕೊಂಡಿತು. ನಿಜ ಕಾಂತಾರ ಸಿನೆಮಾ ಏಕೆ & ಹೇಗೆ ಗೆಲುವನ್ನು ಕಂಡಿತು ಎಂದರೆ ಕೆಲವರು ಕೋಲದಿಂದ ಎಂದರು. ಕೆಲವರು ಕ್ಲೈಮಾಕ್ಸ್ ನಿಂದ, ಹಾಡಿನಿಂದ ಎಂಬ ಅಭಿಪ್ರಾಯ ಹೊರಹಾಕಿದರು‌.

ಆದರೆ ಮೋದಿಯವರೆಗೆ ತಲುಪಲು ಏನು ಕಾರಣ, ಅವರೇನು ಸಿನೆಮಾ ನೋಡುತ್ತ ಕುಳಿತಿರುವರೇ? ಅಷ್ಟು ಸಮಯವಾದರೂ ಇದೆಯೇ? Save Forest,  Save Trees Save Tribals ಕಾಡು & ಕಾಡಿನ ಜನರ ರಕ್ಷಣೆಯ ಕುರಿತಾದ ಕತೆ ಇರುವ ಕಾರಣ ಸಿನೆಮಾ ಎಲ್ಲೆಡೆ ಪ್ರಶಂಸೆ ಗಳಿಸಿತು.
ನಿಜ, ಬುಡಕಟ್ಟು ಜನಾಂಗದವರು, ಸಿದ್ದಿ ಜನಾಂಗದವರು (Tribals) ಆದಿವಾಸಿಗಳು, ದಲಿತರು, ಕಾಡಿನ ಸಮೀಪವೇ ವಾಸಿಸುತ್ತಿರುವವರು, ಕಾಡೊಳಗೆ ವಾಸಿಸುವ ಕಾಡಿನ ಸಂರಕ್ಷಣೆ ಮಾಡುತ್ತಿರುವ ಈ ಜನರನ್ನು ಕಾಡಿಂದಲೇ ಹೊರಹಾಕುವ ಹುನ್ನಾರ ದಶಕಗಳಿಂದ ನಡೆಯುತ್ತಲೇ ಇದೆ. ಭೂಮಾಫಿಯಾ , ಅರಣ್ಯನಾಶ  ಅಭಿವೃದ್ಧಿ ಹೆಸರು ನೀಡಿ ಪ್ರಕೃತಿಯ ಅಳಿವಿನ ಅಂಚಿಗೆ ತಳ್ಳುವ ಲೋಭಿಗಳು ರಾಜಕಾರಣಿಗಳು ಇರುವುದು ಇಂದು ನಿನ್ನೆಯಿಂದಲ್ಲ.

ನಿಜ ಹೇಳಬೇಕೆಂದರೆ ಅಲ್ಲಿನ ಜ‌ನರಿಗೆ ಮೂಲಭೂತ ವ್ಯವಸ್ಥೆಗಳ ಕೊರತೆಯಿದೆ. ಅವರಿಗೆ ಇನ್ನೂ ಸರಿಯಾಗಿ ಆಧಾರ್ ಕಾರ್ಡ್, ಓಟರ್ ಐಡಿ ಇಲ್ಲ, ವಿದ್ಯುತ್ ಇಲ್ಲ ಸರಿಯಾದ ರಸ್ತೆಮಾರ್ಗವಿಲ್ಲ. ಅವರ ಮಕ್ಕಳಿಗೆ ಶಾಲೆ ಇಲ್ಲದೆ ಓದಿನಿಂದ ವಂಚಿತರಾಗಿದ್ದಾರೆ. ಹೊರ ಪ್ರಪಂಚಕ್ಕೆ ಒಗ್ಗಿಕೊಳ್ಳಲು ಹೆದರುತ್ತಾರೆ. ಅವರಿಗೆ ಸರಿಯಾದ ಮಾರ್ಗದರ್ಶನ ನೀಡಿದರೆ ಹೊರ ಪ್ರಪಂಚಕ್ಕೆ ಕರೆತರಬಹುದು. ಅವರ ಕಣ್ಣು ಕಿವಿ ಸೂಕ್ಷ್ಮವಾಗಿರುತ್ತದೆ. ಓಟದಲ್ಲಿ ಜಮೈಕಾದ ಹುಸೇನ್ ಬೋಲ್ಟ್ ನ ಕೂಡ ಮೀರಿಸಬಹುದು. ಅಂದರೆ ಇವರು ಕೂಡ ಅಷ್ಟು ತೀಕ್ಷ್ಣವಾಗಿರುತ್ತಾರೆ.

ಈಗೀಗ ಅಲ್ಲಿನ ಜನರ ಮೇಲೆ‌‌ ಸ್ವಲ್ಪ ಬೆಳಕು ಹರಿದಿರಬಹುದು. ರಸ್ತೆ ಬಂದಿರಬಹುದು, ಕರೆಂಟು, ಟಿವಿ ಮೊಬೈಲು, ಶಾಲೆ ಬಂದಿರಬಹುದು. ಅವರ ವೇಷಭೂಷಣ ಕೂಡ ಬೇರೆಯದೇ ಆಗಿರುತ್ತದೆ. ಆಹಾರ ಪದ್ದತಿ ಹಬ್ಬ ಆಚರಣೆ ನಂಬಿಕೆಗಳು ಕೂಡ ಬೇರೆಯೇ ಆಗಿದೆ. ಅವರನ್ನು ನಗರಕ್ಕೆ ಉದ್ಯೋಗ ಕೊಡಿಸುವ ನೆಪದಲ್ಲಿ ಕರೆದುಕೊಂಡು ಬಂದು ಮೋಸ ಮಾಡಿದವರಿದ್ದಾರೆ. ನಡು ನೀರಿನಲ್ಲಿ ಕೈಬಿಟ್ಟವರಿದ್ದಾರೆ. ಹಾಗಾಗಿ ಅವರಿಗೆ ಸಿಟಿಯ ಜನರ ಮೇಲೆ ನಂಬಿಕೆಯಿಲ್ಲ. ಆದರೆ ಇನ್ನೂ ಕೆಲವರು ಪ್ಯಾಂಟು ಶರ್ಟು ಧರಿಸಿ ಬರುವ ಜನರನ್ನು‌ ನೋಡಿದರೆ ಹೆದರಿ ಒಳ ಓಡುವವರಿದ್ದಾರೆ.

ಇದು ಕೇವಲ ಕರ್ನಾಟಕದ ಅರಣ್ಯ ಭಾಗದ ಕತೆಯಲ್ಲ. ನೆರೆ ರಾಜ್ಯದಲ್ಲಿ ಕೂಡ ಇದೇ ಸಮಸ್ಯೆ ಎದ್ದು ಕಾಣುತ್ತಿದೆ. ಅನೇಕ ಸಿನೆಮಾಗಳು ಬಂದಿವೆ ಕೂಡ. ದಲಿತರ ಪರ ಸಿನೆಮಾಗಳು ಬಂದಿದ್ದವು. ಸಿನೆಮಾದಿಂದ ದಂಗೆ ಏಳಲು ಪ್ರಾರಂಭಿಸಿದರು. ಇಂತಹ ಸಮಾಜಮುಖಿ ಸಿನೆಮಾಗಳು ಬರಬೇಕೇ ವಿನಃ ಪ್ಯಾನ್ ಇಂಡಿಯಾ ಸಿನೆಮಾ ಮಾಡಲು ಹೋಗಿ ರಕ್ತ ಹರಿಸುವ ಸಮಾಜಘಾತಕ ಸಿನೆಮಾ ಮಾಡುವುದಲ್ಲ.ಲಾಜಿಕ್ ಇಲ್ಲದ ಕಬ್ಜದಂತಹ ರುಂಡ ತುಂಡರಿಸಿ ಮನೆ ತನಕ ತರುವ ದೃಶ್ಯ ನಿಜಕ್ಕೂ ಬೆಚ್ಚಿ ಬೀಳಿಸುತ್ತದೆ. ಇದು ಸಮಾಜದ ಮೇಲೆ‌ ಎಂತಹ ದುಷ್ಪರಿಣಾಮ ಬೀರಬಹುದು ನೀವೇ ಯೋಚಿಸಿ. ಹೆಂಗಸರು ಮಕ್ಕಳು ಇಂತಹ ಸಿನೆಮಾ ನೋಡುವ ಹಾಗೇ ಇಲ್ಲ. ಈಗಾಗಲೇ ಲಿವ್ ಇನ್ ಸಂಬಂಧಗಳು ಹೆಚ್ಚುತ್ತಿವೆ. ಅಲ್ಲದೇ ಸಣ್ಣ ಕಾರಣಕ್ಕೆ ಜಗಳ ಮಾಡಿಕೊಂಡು ಕೊಲೆ ಮಾಡಿ ದೇಹವನ್ನು ತುಂಡು ತುಂಡು ಮಾಡಿ‌ ಪ್ಲಾಸ್ಟಿಕ್ ಚೀಲದಲ್ಲೋ ಫ್ರಿಡ್ಜ್ ನಲ್ಲೋ ತುಂಬಿಸಿಡುವ ಹೇಯ ಕೃತ್ಯಗಳು ನಡೆಯುತ್ತಿವೆ.

ಅಂತದರಲ್ಲಿ ಪದೇಪದೆ ಅಂತಹದೇ ಸಿನೆಮಾಗಳ ಮಾಡಿ ವಿಶ್ವಾದ್ಯಂತ ಬಿಡುಗಡೆ ಮಾಡಿದರೆ ಪರಿಣಾಮ ಏನಾಗಬೇಡ.
ಸಾಲದಕ್ಕೆ ಕೋಟಿ‌ಕೋಟಿ ಖರ್ಚು ಮಾಡುವುದು, ಕಾಂಚಾಣ ಕುರುಡು ಎಂದರೆ ತಪ್ಪಾಗಲಾರದು. ಸೈನ್ಸಾರ್ ಮಂಡಳಿಯವರು ಹೇಗೆ ಇಂತಹ ಸಿನೆಮಾದ
ಬಿಡುಗಡೆಗೆ ಅವಕಾಶ ನೀಡಿದರು. ರಕ್ತ ಚೆಲ್ಲುವುದಕ್ಕೂ ರಕ್ತದಲ್ಲೇ ಓಕಳಿಯಾಟ, ಕುರಿ ಕೊಯ್ದ ಹಾಗೆ ರುಂಡ ತುಂಡರಿಸುವುದು ಇದಕ್ಕೆಲ್ಲ ಹೇಗೆ ಅವಕಾಶ ನೀಡುವರು??
ಅಂತಹ ಭೀಕರ ದೃಶ್ಯಗಳಿಗೆ ಕತ್ತರಿಹಾಕಬೇಕಲ್ಲವೇ? ಅಲ್ಲಿ ಕೂಡ ಹಣವೇ ಮೇಲುಗೈ ಸಾಧಿಸಿತೇನೋ?  ಹೋಗಲಿ ಮೂರು ಮೂರು ದಿಗ್ಗಜರು (ನಾಯಕನಟರು) ಕೂಡ ಕತೆಯನ್ನು ಹೇಗೆ ಒಪ್ಪಿಕೊಂಡರು.?? ಸ್ವಲ್ಪ ತೋಚಿಸಬೇಕಿತ್ತು..


..
- ಸಿಂಧು ಭಾರ್ಗವ ಬೆಂಗಳೂರು. ಲೇಖಕಿ.


ಕವನ :ಬರಹದಲ್ಲಿ ಏನು ಅಡಗಿದೆ??

 

ಗೂಗಲ್ ಚಿತ್ರ



ಬರಹದಲ್ಲೇನು ಅಡಗಿದೆ??


ಬರಹದಲ್ಲಿ ಅಡಗಿದೆ ಸಂತಸ

ವಿರಹದಲ್ಲಿ ಅಡಗಿದೆ ದುಃಖ

ಗೆಲುವಿನಲ್ಲಿ ಅಡಗಿದೆ ಗರುವ

ಸೋಲಿನಲ್ಲಿ ಅಡಗಿದೆ ಪಾಠ..


ಬರೆಯುತಲಿ‌ ನೋವ ಮರೆಯಬಹುದು

ಕಲ್ಪನೆಗೆ ಜೀವ ತುಂಬಬಹುದು

ಓದುಗರ ಮನ ತಣಿಸಬಹುದು

ಕುತೂಹಲವನು ಕೆರಳಿಸಬಹುದು


ಭಾವಜೀವಿಯಾಗಿ ವಿಹರಿಸಬಹುದು

ಕನಸುಗಳ ಹೆಣೆಯಬಹುದು

ಬರಹದಿಂದ ಬದಲಾವಣೆಯು

ಮೂಡಿಸಬಹುದು ಹೊಸತನವು


ಬರವಣಿಗೆ ಎಂದರೆ ಸ್ಪರ್ಧೆಯಲ್ಲ

ಬಹುಮಾನ ಪ್ರಮಾಣಪತ್ರಕೆ ಹಾತೊರೆಯಬೇಕಿಲ್ಲ

ಒಳಗುಂಪುಗಾರಿಕೆ ನಡೆಸುವ ಗುಂಪುಗಳು

ಸಾಹಿತ್ಯಸೇವೆಯೆಂಬ ಹೆಸರನ್ನು ಇರಿಸಿಕೊಂಡಿಹರು


ಬರವಣಿಗೆ ಎಂಬುದು ಆತ್ಮಸಖ

ನಮ್ಮೊಳಗಿನ ಹೊಯ್ದಾಟಕೆ 

ಕಂಡುಕೊಳ್ಳುವ ಮುಕ್ತಿಪಥ..

ಸಾಗೋಣ ನಿರಂತರ ಕೃಷಿಯಲ್ಲಿ

ತೊಡಗಿಸಿಕೊಳ್ಳೋಣ ಬರವಣಿಗೆಯಲ್ಲಿ


- ಸಿಂಧು ಭಾರ್ಗವ ಬೆಂಗಳೂರು.


ಯುಗಾದಿ ಹಬ್ಬದ ಶುಭಾಶಯ

ಮೊಬೈಲ್ ಕ್ಲಿಕ್


ಹನಿಗವನಗಳು 

ದತ್ತಪದಗಳು : ಯುಗಾದಿ,  ಷರತ್ತು , ಬರಗೆಟ್ಟು 

-(೧)- ಮಾಮರ


ಮಾಮರದಲ್ಲಿ ನಗುವ ಹೂಗಳು

ಝೇಂಕರಿಸುವ ದುಂಬಿಗಳ ಹಿಂಡು

ಗೊಂಚಲಿನ ಸಂಧಿಯಲ್ಲಿ ಮಿಡಿ ಮಾವು

ಇಣುಕುತಿದೆ ಜಗವ ನೋಡಲು..

ಮಾವಿನ ಎಲೆಗಳ ತೋರಣ ಕಟ್ಟಿ

ಹಬ್ಬಕೆ ಸ್ವಾಗತ ಕೋರೋಣ

ಬಂಧುಬಳಗವನು ಸಿಹಿಯೂಟಕೆ ಕರೆದು

ಕಷ್ಟ-ಸುಖಗಳ ಕೇಳೋಣ..


- ೨) - ಬೇವು ಬೆರೆಸಿ


ಬೇವಿ‌ನ ಚಿಗುರನು ಬೆಲ್ಲದ ಜೊತೆಗೆ

ಬೆರೆಸಿ ಕುಟ್ಟಿ ರಸ ತೆಗೆದು

ಯುಗಾದಿ ಹಬ್ಬದ ದಿನದಲಿ ಎಲ್ಲರೂ

ಜೊತೆಜೊತೆಗೆ ಸವಿದು

ಕಷ್ಟ ಸುಖಗಳ ಸ್ವೀಕರಿಸೋ ವಿಧಾನ

ಹಿರಿಯರಿಂದ ಮುಂದುವರಿದು

ಸಂಪ್ರದಾಯವ ಎಂದೂ ಮರೆಯದಿರಿ

ಬೆಳೆಸಿ, ವೈಜ್ಞಾನಿಕ ಕಾರಣ ತಿಳಿದು


(೩) ಚಿಗುರು


ನಿನ್ನ ಮೇಲೆ 

ಮತ್ತೊಮ್ಮೆ ಒಲವಾಗಿದೆ 

ಕಾರಣ,

ಮಾವು ಬೇವು ಚಿಗುರಿದೆ

ಹೊಸ ಸಂವತ್ಸರ

ಕೂಗಿ ಕರೆದಿದೆ

ನವನವೀನ 

ನಿತ್ಯನೂತನ ಎನಿಸಿದೆ


(೪) ಬೆಲ್ಲದ ಪಾನಕ



ನಿನ್ನ  ಪ್ರೀತಿಯು

ಬಿಸಿಲಿಗೆ

ತಂಪ ನೀಡುವ 

ಬೆಲ್ಲದ ಪಾನಕ/

ಅಪ್ಪುಗೆಯಿಂದ

ಮರೆಸಯವೆ

ಮನದ 

ನೋವಿನ ಸೂತಕ//


(೫) ನೂತನ


ನೂತನ ಗಳಿಗೆಯಲ್ಲಿ

ನವೀನವಾಗಿ

ನಿತ್ಯ ಜೀವನದಲ್ಲಿ

ನವರಂಗನು ಬೆರೆಸಿ

ನಯನಗಳಲ್ಲಿ

ಭರವಸೆಯ ಕಾಂತಿ

ಕುಗ್ಗದಂತೆ

ನೋಡಿಕೊಳ್ಳೋಣ..

-ನುಡಿಸಿಂಧು🍁


(೬) ಷರತ್ತು


ಷರತ್ತು ಹಾಕಿ ಪ್ರೀತಿಸಲು ಆಗದು..

ಷರತ್ತು ಹಾಕಿ ಮಕ್ಕಳ ಬೆಳೆಸಲು ಸಾಧ್ಯವಾಗದು..

ವಾತ್ಸಲ್ಯ, ಪ್ರೀತಿಯ ಒರತೆ ಸದಾ ಹರಿದು ಬರಲಿ

ಯಾರನ್ನು ಇಲ್ಲಿ ಬಂಧಿಸಲಾಗದು.

-ನುಡಿಸಿಂಧು🍁


(೭) ಷರತ್ತು ಬದ್ಧ


ನಿನ್ನ ಪ್ರೀತಿಯ ಮಾಡದ ತಪ್ಪಿಗೆ ಸಮಾಜದ ಎದುರು ಸಿಕ್ಕಿಬಿದ್ದೆ.

ಷರತ್ತುಬದ್ಧ ಜಾಮೀನು ಪಡೆದು ಈಗಷ್ಟೇ ಹೊರಬಂದೆ.

ಭಯವಿಲ್ಲ ನನಗೆ ಈ ಸಮಾಜ ಪ್ರೇಮಿಗಳ ಎಂದಿಗೂ ಬದುಕಲು ಬಿಡದು.

ಸತ್ತರೂ ಸರಿಯೇ ಹೋರಾಟ ನಡೆಸುವ ನಿಲ್ಲಿಸೆನು..

- ನುಡಿಸಿಂಧು🍁



(೮) ಬರಗೆಟ್ಟ ಬದುಕು


ಬರಗೆಟ್ಟ ಬದುಕಿಗೆ ಅವನೇ ರಾಜ

ಕಟ್ಟಿಕೊಂಡ ತಪ್ಪಿಗೆ ಅವಳೇ ರಾಣಿ..

ರಾಜ ರಾಣಿಗೆ ಹೊಟ್ಟೆ ತುಂಬಲು ಬಿಸಿ ಗಂಜಿಯೂಟ..

ಕಣ್ತುಂಬಾ ನಿದಿರೆ ಬರಲು ಆಗಸದ ಕಡೆ ನೋಟ..

ತಂಗಾಳಿ ಮೈ ಸೋಕಿದಾಗ ಜನಿಸಿದ ಎರಡು ಮತ್ತೊಂದು ಮಕ್ಕಳು..

ಭವಿಷ್ಯದ ಬಗ್ಗೆ ಭಯವಿಲ್ಲ, ಕೈಗೆ ಸಿಕ್ಕ ಕೆಲಸ ಮಾಡಬಲ್ಲರು..


- ಸಿಂಧು ಭಾರ್ಗವ, ಬೆಂಗಳೂರು

ಎರಡು ತಲೆಮಾರು ಕವನ

ಎರಡು ತಲೆಮಾರು

Pinterest image




ಅಪ್ಪನಿಗೆ ಅರವತ್ತಾದರೆ. ಮಗನಿಗಿನ್ನೂ ಮೂವತ್ತು.

ಅಪ್ಪನಿಗೆ ಬಿಸಿ ರಕ್ತ ತಣ್ಣಗಾಗುತ್ತ ಬಂದರೆ

ಮಗನಿಗೆ ಕುದಿಯುವ ಬಿಸಿಹುಮ್ಮಸ್ಸು...

•••

ಆಗೆಲ್ಲ, ಅಪ್ಪನ ಕೋಣೆ ತುಂಬಾ‌ ಫರ್ಫ್ಯೂಮು ಸುವಾಸನೆ

ಈಗ ಬಿಪಿ ಶುಗರು, ಮಂಡಿನೋವಿನ ಎಣ್ಣೆಯ ವಾಸನೆ

ಮಗನ ಮೈತುಂಬಾ ಬೆವರ ಹನಿಗಳ ಘಮ

ಅವನ ಬಳಿಯಿರುವ ಸುಗಂಧದ್ರವ್ಯಕ್ಕೂ ಬೆಲೆ ಜಾಸ್ತಿ..

•••

ಅಪ್ಪನ ಅನುಭವದ ಮಾತುಗಳು ಮಗನಿಗೆ ಬೇಡವೀಗ.

ಮಗನು ತನ್ನ ಮೇಲೇ ತಾ ಪ್ರಯೋಗಗಳ ಮಾಡಿಕೊಳ್ಳುತ್ತಾ

ಜೀವನವೇ ಒಂದು ಚಾಲೆಂಜ್ ಎಂದು ತೋರಿಸಿಕೊಡಲು ಹೊರಟವ..

•••

ಅಪ್ಪನಿಗೆ ಆಗಾಗ್ಗೆ ಕಾಡುವ ಆರೋಗ್ಯ ಸಮಸ್ಯೆಗೆ

ಸರಿಯಾಗಿ ಮಾತ್ರೆ ತಿನ್ನದೇ ಇರುವುದೇ ಕಾರಣ

ಎಂಬ ತರ್ಕ ಮಗನದ್ದು.

ಆಗಾಗ್ಗೆ ಏರುಪೇರಾಗುವ ತಂದೆಯ ಮನೋಬಲ, ಆತಂಕ, ಒಳಗೊಳಗೆ ಪುಕಪುಕ, ಟೊಳ್ಳಾಗುತ್ತಿರುವ ದೇಹ, ಮೂಳೆ ಮಾಂಸ ಮಜ್ಜೆಗಳು ಎಂದು ಒಪ್ಪುವ ಮನಸಿಲ್ಲ..

ಮಗನಿಗೋ ಕಲ್ಲು ಬಂಡೆಯನ್ನೂ ಒಡೆದುಹಾಕುವಷ್ಟು ಧೈರ್ಯ, ತಾಕತ್ತಿರುವ ರೆಟ್ಟೆಗಳು.

•••

ಅಪ್ಪನಿಗೆ ರಾತ್ರಿ ಕಣ್ಣಿಗೆ ನಿದ್ದೆ ಹತ್ತುವುದಿಲ್ಲ, ಪದೇ‌ಪದೇ ಮೂತ್ರಕ್ಕೆ ಹೋಗಬೇಕು.. ಶುಗರ್ ಎಂದರೆ ಹಾಗೆ ತಾನೆ?!

ಈ ಮಗನೋ ಒಮ್ಮೆ ದುಡಿದು ಮನೆಗೆ ಬಂದರೆ ಬುಸ್ಸಪ್ಪನ ತರಹ ಬಿದ್ದುಬಿಡುವ. ಬೆಳಿಗ್ಗೆಯೇ ಎಚ್ಚರವಾಗುವುದು.. ನಿದ್ದೆಗೆ ಇನ್ನೂ ಸಮಯಬೇಕು ಎಂದು ಹಪಹಪಿಸುವ.

•••

ಆಗ ಅಪ್ಪನ ಪರ್ಸ್ ತುಂಬಾ ನೋಟಿನ ಕಂತೆಗಳಿದ್ದವು.

ಪದೇ ಪದೇ ಎಣಿಸುತ್ತಾ ನಸುನಗುತ್ತಿದ್ದರು‌. ಮಗನಿಗೆ ತೋರಿಸಿ ಹೇಳಿ "ತಾನು ಹಣವಂತ" ಎಂದು ಒಳಗೊಳಗೆ ಬೀಗುತ್ತಿದ್ದರು. ಮಗನ ಕಣ್ಣಲ್ಲೂ ಕನಸುಗಳನ್ನು ತುಂಬಿಸಿದ್ದರು.

ಈಗ ಅಂತದ್ದೇ ಸೇಫ್ಟಿಪರ್ಸ್ ನಲ್ಲಿ ಮಾತ್ರೆಗಳ ಸ್ಟ್ರಿಪ್ಸ್ ನ ತುಂಬಿಸಿಕೊಂಡಿದ್ದಾರೆ. ಅದಕ್ಕೂ ರಬ್ಬರ್ ಬ್ಯಾಂಡ್ ಬೇರೆ..

ಮೂರು ಹೊತ್ತು ಅದನ್ನು ತೆರೆದು ಮಾತ್ರೆಗಳ ಸೇವಿಸುತ್ತಾರೆ. ತಿಂಗಳು ಮುಗಿದರೆ ಮಾತ್ರೆಯೂ ಮುಗಿದಂತೆ.

•••

ಅಪ್ಪ ಆಗೆಲ್ಲ ದುಡಿಮೆಗೆ ಹೋಗುತ್ತಿದ್ದಾಗ ಪೆನ್ನು ಪೇಪರು ಹಿಡಿದು ಅದೇನೋ ಲೆಕ್ಕಚಾರ ಮಾಡುತ್ತಲೆ ಇರುತ್ತಿದ್ದರು. ಕೆಲವೊಮ್ಮೆ ಮಂಡೆಬಿಸಿ ಮಾಡಿಕೊಳ್ಳುತ್ತಿದ್ದರು.

ಈಗ ಪೆನ್ನು ಎಲ್ಲಿದೆಯೋ ?? ಖಾಲಿ ಹಾಳೆಗಳ ಕಂಡಾಗೆಲ್ಲ ಏನಾದರು ಗೀಚುವ ಅನಿಸುವುದು..

ಮಗನದೋ ಫೋನ್ ಪೇ_ಯಲ್ಲೇ ವ್ಯವಹಾರ. ಮೊಬೈಲ್ ನಲ್ಲೇ ನೋಟ್ಸ್ ಮಾಡಿಕೊಳ್ಳುವ ಬಿಡಿ.

•••÷•••

ಹೀಗೆ ಅಪ್ಪ ಮಗನೆಂದರೆ ಹಣ್ಣೆಲ್ಲೆ- ಚಿಗುರೆಲೆಯಿದ್ದಂತೆ. ಅಪ್ಪ ಮಾಡಿದ್ದನ್ನೇ ಮಗನು ಮಾಡುತ್ತಿರುವ.

ಅವಕಾಶ, ಪರಿಸ್ಥಿತಿ, ಸೌಲಭ್ಯಗಳು ಬೇರೆಯಾಗಿವೆ ಎಂಬುದು ಅಷ್ಟೆ ವ್ಯತ್ಯಾಸ.

ಅವನು ಕೂಡ ನಾಳೆ ಸೇಫ್ಟೀ ಪರ್ಸ್ ಮೊರೆ ಹೋಗುವ ಎಂಬುದೇ ಸತ್ಯ. 


✒ ಸಿಂಧು ಭಾರ್ಗವ, ಬೆಂಗಳೂರು

ಲೇಖಕಿ.

Tuesday 7 March 2023

Holi festival celebration at Udupi

 



ಬಾಲ್ಯದ ನೆನಪು : ಲೇಖಕಿ ಸಿಂಧು ಭಾರ್ಗವ ಬೆಂಗಳೂರು


          ಹೋಳಿ ಹಬ್ಬ ಎಂದರೆ ಬಾಲ್ಯದ ನೆನಪುಗಳಿಗೆ ಮನಸ್ಸು ಜಾರುವುದು. ಗುಮ್ಟಿ (ಗುಮ್ಮಟೆ) ವಾದ್ಯದ ಸದ್ದು ಆ ಪುಟ್ಟ ಮಕ್ಕಳ ನೃತ್ಯ ಎಂದೂ ಮರೆಯಲು ಸಾಧ್ಯವಿಲ್ಲ. ಕೊನೆಯ ವಾರ್ಷಿಕ ಪರೀಕ್ಷಾ ಸಮಯದಲ್ಲೇ ಪ್ರತಿವರ್ಷ ಹೋಳಿ ಹಬ್ಬ ಬರುವಾಗ ನಮ್ಮ ಸ್ನೇಹಿತರಿಗೆ ಓದಲು ಶಾಲೆಗೆ ಬರಲು ಕಷ್ಟವಾಗುತ್ತಿತ್ತು. ಹಾಗೆಯೇ ಹೋಳಿ ಹಬ್ಬದ ಆಚರಣೆಯಲ್ಲಿ ತಪ್ಪಿಸಿಕೊಂಡರೆ ಅವರು ಮನೆಯವರಿಂದ ಬೈಗುಳ ತಿನ್ನಬೇಕಿತ್ತು. ಶಾಲೆಯಲ್ಲಿ ಸ್ವಲ್ಪ ವಿನಾಯಿತಿ ಪಡೆದು  ಖುಷಿಖುಷಿಯಾಗಿ ಜೊತೆಗೆ ಸೇರಿ ಹಬ್ಬವನ್ನು ಆಚರಿಸುತ್ತಿದ್ದರು. ನಮ್ಮ ಊರಲ್ಲಿ (ಹಳ್ಳಿಯಲ್ಲಿ) ಶೇಕಡಾ ೮೦%  ಮರಾಠರು, ಕುಡುಬಿ ಹಾಲಕ್ಕಿ ಜನಾಂಗದವರೇ ಇರುವುದು. ಉಳಿದಂತೆ ಬೇರೆ ಜಾತಿಯವರು ವಾಸವಾಗಿದ್ದಾರೆ. ಎಲ್ಲರೂ ಒಬ್ಬರಿಗೊಬ್ಬರು ಸಹಾಯಮಾಡಿಕೊಂಡು ಸ್ನೇಹದಿಂದ ಬದುಕ ಕಟ್ಟಿಕೊಂಡಿದ್ದಾರೆ.

ಇದರ ಮೂಲ: ಮೊದಲೆಲ್ಲ ಮರಾಠರು, ಕುಡುಬಿ (ಹಾಲಕ್ಕಿ ಜನಾಂಗದ ಜನರು) ಜನಾಂಗದವರಲ್ಲಿ (ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ) ಶಿಕ್ಷಿತರು, ಶಾಲೆಗೆ ಹೋಗುವುದು ತೀರಾ ಕಡಿಮೆ. ಏಳನೇ ತರಗತಿ ತನಕ‌ ಓದಿದರೆ ಅದೇ ಹೆಚ್ಚು. ಅವರು ಹೆಚ್ಚಾಗಿ ತಾಂಡ ಕಾಮನದಲ್ಲಿ ವಾಸಿಸುತ್ತಿದ್ದರು. ತಗ್ಗಾದ ಗುಡಿಸಲು ಮನೆ ಕಟ್ಟಿಕೊಂಡು ವಾಸವಿರುತ್ತಿದ್ದರು. ಗುಂಪು ಗುಂಪಾಗಿ ವಾಸಿಸುತ್ತಿದ್ದರು. ಆಗೆಲ್ಲ ಶಿಕ್ಷಣ, ಮೂಲ ಸೌಕರ್ಯಗಳ ಕೊರತೆ ಎದುರಾಗುತ್ತಿತ್ತು. ತೋಟದ ಕೆಲಸ, ಬುಟ್ಟಿ ಹೆಣೆಯುವುದು, ಹಸುಸಾಕಾಣಿಕೆ, ತರಕಾರಿ ಬೆಳೆಸುವುದು, ಕಾಡು ಜೇನು ಸಂಗ್ರಹಿಸಿ ಮಾರುವುದು, ಸೊಪ್ಪು, ತರಕಾರಿ ಬೆಳೆಸುವುದು, ಹೂವು, ಗಡ್ಡೆ ಗೆಣಸು ಬೆಳೆಸುವುದು ಅದನ್ನು ಸಂತೆಗೆ ಮನೆಮನೆಗೆ ಮಾರುವುದು ಅವರ ಜೀವನೋಪಾಯದ ದಾರಿಯಾಗಿದೆ. ಕೆಲವು ಔಷಧೀಯ ಗಿಡಮೂಲಿಕೆಗಳ ಪರಿಚಯ ಅವರಿಗೆ ಚೆನ್ನಾಗಿದೆ. ನಾಟಿ ವೈದ್ಯರಂತೆ ಕೆಲಸಮಾಡುತ್ತಾರೆ. ಬಹಳ ಚುರುಕುತನ, ಸೂಕ್ಷ್ಮವಾಗಿ ಕಿವಿ ದೃಷ್ಟಿ ಅವರದು.

ಆದರೆ ಈಗ ಆ ಸಮಸ್ಯೆಗಳಿಲ್ಲ. ಸರ್ಕಾರದಿಂದ ಅನೇಕ ಯೋಜನೆಗಳು ಅವರಿಗಾಗಿ ಬಂದಿವೆ. ಸಾಲ ಪಡೆಯಬಹುದು, ಮೀಸಲಾತಿ, ಅವರು ಕೂಡ ಓದಿನಲ್ಲಿ ಆಸಕ್ತಿ ತೋರಿಸುವ ಕಾರಣ ಅತ್ಯಂತ ಹೆಚ್ಚು ಅಂಕ ಗಳಿಸಿ ಸರ್ಕಾರಿ ಉದ್ಯೋಗ ಪಡೆದವರು ತುಂಬಾ ಜನರಿದ್ದಾರೆ. ಅಲ್ಲದೇ ಕೃಷಿ ತರಕಾರಿ ಕೂಡ ಬೆಳೆಸುವುದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಮರೆತಿಲ್ಲ.


ಇದರ ಹಿನ್ನೆಲೆ: ಕೆಲವರು ಅನಾರೋಗ್ಯ ಸಮಸ್ಯೆ ಎದುರಾದರೆ ಮಕ್ಕಳು (ಸರಿಯಾಗಿ ನಡೆದುಕೊಳ್ಳದೇ ಇದ್ದರೆ) ಮೊಂಡು, ಹಟಮಾರಿತನವಿದ್ದರೆ ಮುಂದಿನ ಹೋಳಿಗೆ ಮಗನ ಕಾಲಿಗೆ ಗೆಜ್ಜೆ ಕಟ್ಟುವೆ ಎಂದು ತಾಯಂದಿರು ಹರಕೆ ಹೊರುತ್ತಾರೆ. ಹೀಗೆ ಚಿಕ್ಕವರಿಂದಲೇ ಹೋಳಿ ಕುಣಿತಕ್ಕೆ (ನೃತ್ಯಕ್ಕೆ) ಪದಾರ್ಪಣೆ ಮಾಡುವರು. ನಂತರ ಗುರಿಕಾರರ ಸಲಹೆ ಸೂಚನೆ ಮೇರೆಗೆ ಗುಮ್ಟಿ ವಾದ್ಯವನ್ನು ನುಡಿಸುತ್ತಾ ಹಾಡು ಹೇಳುತ್ತ ಮೊದಲು ದೇವಿಯ ಎದುರು ನೃತ್ಯಮಾಡಿ ನಂತರ ಆ ಊರಿನ ಮನೆಮನೆಗೆ ಬರುತ್ತಾರೆ.

ಗದ್ದುಗೆ ಅಮ್ಮನವರಿಗೆ (ವನದುರ್ಗೆ) ಪೂಜೆ ಸಲ್ಲಿಸಿ ಐದು ದಿನಗಳ ಮೊದಲೇ ಕುಡಿತವನ್ನು ಬಿಟ್ಟು ದೇವಿಯ ಆರಾಧನೆಯಲ್ಲಿ ತೊಡಗುತ್ತಾರೆ. ಅವರಲ್ಲಿ ಗುರಿಕಾರರ ಮಾತೇ ಅಂತಿಮ. ಯಾರು ಯಾವ ಊರಲ್ಲಿ ಇದ್ದರು ಕೂಡ ಹೋಳಿ ಹಬ್ಬಕ್ಕೆ ಊರಿಗೆ ಬರಲೇಬೇಕು. ತಪ್ಪಿಸಿಕೊಳ್ಳಲು ಸಾಧ್ಯವಿರಲಿಲ್ಲ. ಮಕ್ಕಳು ಸಹ ಹಾಡುಗಳನ್ನು, ಹೆಜ್ಜೆಹಾಕುವುದನ್ನು ಕಲಿತಿರಬೇಕು. ಅವರ ವರ್ಣಮಯ ವೇಷವನ್ನು ನೋಡುವುದೇ ಚಂದ. ತಲೆಯಲ್ಲಿ ಮುಂಡಾಸು ಕಟ್ಟಿಕೊಂಡು ಅದಕ್ಕೆ ಅಬ್ಬಲಿಗೆ ಹೂವಿನ, ಚೆಂಡು ಹೂವಿನ ಮಾಲೆಯನ್ನು ಸುತ್ತಿ, ಕಾಲಿಗೆ ಗೆಜ್ಜೆ ಕಟ್ಟಿಕೊಂಡು, ಕಿರೀಟದಂತೆ ಹಕ್ಕಿಯ ಗರಿಯನ್ನು ಸಿಕ್ಕಿಸಿಕೊಂಡಿರುತ್ತಾರೆ. ಉದ್ದ ಕೈ ನಿಲುವಂಗಿ, ವಿವಿಧ ಬಣ್ಣದ ನೆರಿಗೆ ಕಟ್ಟಿದ ಪಟ್ಟಿ, ನೀಟಾಗಿ ಸೀರೆ ಸುತ್ತಿಕೊಂಡು, ಸೊಂಟಕ್ಕೆ ಬಿಗಿಯಾಗಿ ಇನ್ನೊಂದು ಪಟ್ಟಿ ಕಟ್ಟಿಕೊಳ್ಳುತ್ತಾರೆ. ಮಧ್ಯಾಹ್ನದ ಮೇಲೆ ಮನೆಮನೆ ತೆರಳಲು ಸಿದ್ಧರಾಗುವರು.




ಅವರನ್ನು ಸ್ವಾಗತಿಸಲೆಂದೇ ನಾವು ಮನೆಯ ಅಂಗಳವನ್ನು ಸಗಣಿಯಿಂದ ಅಂದವಾಗಿ ಸಾರಿಸುತ್ತೇವೆ. ಅವರು ಬರುವವರೆಗೆ ಕಾಯುತ್ತ ಕುಳಿತಿರುತ್ತೇವೆ. ಕೆಲವೊಮ್ಮೆ ಮಧ್ಯಾಹ್ನ, ಕೆಲವೊಮ್ಮೆ ಸಂಜೆ ರಾತ್ರಿ ೧೦ ಗಂಟೆ ಸಹ ಆಗಬಹುದು. ಮನೆಗೆ ಬಂದ ಕೂಡಲೇ ಅವರೇ ನೀರು ಕೇಳಿ ಪಡೆದು ಕೈಕಾಲು ತೊಳೆದುಕೊಂಡು ನೃತ್ಯ ಪ್ರಾರಂಭಿಸುತ್ತಾರೆ. ಹದಿನೈದು ಜನ ಗುಂಮ್ಟಿ ಹಿಡಿದು ಬಡಿಯುತ್ತಾ ವೃತ್ತಾಕಾರವಾಗಿ ಕುಣಿಯುತ್ತಾ ಬರುತ್ತಾರೆ. ಗುಂಮ್ಟಿಯ ಜೊತೆಗೆ ತಟ್ಟೆಯಾಕಾರದ ತಾಳ ಬಡಿಯುತ್ತಾ ಕುಣಿಯುತ್ತಾ ಸುತ್ತು ಬರುತ್ತಾರೆ. ಬಣ್ಣ ಬಣ್ಣದ ಹೂವ ತಾಂಬೆ ಎಂದು ಹಾಡುತ್ತಾ ಕುಣಿಯುತ್ತಾರೆ. ಕುಣಿತ ವೇಗ ಪಡೆದಂತೆ ತಮ್ಮಲ್ಲಿರುವ ಕೋಲಾಟದ ನೃತ್ಯ ಪ್ರಾರಂಭವಾಗುತ್ತದೆ. ಎಗರಿ ಎಗರಿ ಕುಣಿವ ಚೆಂದ ಅದಕ್ಕೆ ಅವರದೇ ಆದ ಮರಾಠಿ ಭಾಷೆಯ ಹಾಡು ಒಂದಕ್ಕೊಂದು ಮಿಳಿತಗೊಂಡು ವಿಶೇಷವಾದ ಭಕ್ತಿ ಸನ್ನಿವೇಶ ಮೂಡಿಬರುತ್ತದೆ. ಜನಪದ ಸೊಗಡನ್ನು ಹೊಂದಿದ ಅವರ ನೃತ್ಯ ಬಾಯಿಯಿಂದ ಬಾಯಿಗೆ ಬಂದಿರುವ ಪದ ಕಟ್ಟಿ ಹಾಡುವ ಹಾಡು ಕೇಳಲು ಕಿವಿಗೆ ತಂಪಾಗಿರುತ್ತದೆ. ಕೈಲಾಸವಾಸಿ ಶಿವನ ಕತೆ, ಕಾಮದಹನ , ಕೃಷ್ಣನ ಬಾಲಲೀಲೆ ಹೀಗೆ ಅನೇಕ ಘಟನೆಗಳು ಪದ್ಯದಲ್ಲಿರುತ್ತದೆ.

ಅವರು ಹೋಗುವ ಮನೆಯಲ್ಲಿ ಪುಟ್ಟ ಮಗುವಿದ್ದರೆ ಅದನ್ನು ಭುಜದ ಮೇಲೆ ಕೂರಿಸಿಕೊಂಡು ನೃತ್ಯಮಾಡುತ್ತಾರೆ. ಭಯವನ್ನು ಓಡಿಸಲು ಹೀಗೆ ಮಾಡುವರು ಎಂಬ ನಂಬಿಕೆ. ನಂತರ ಕೋಲಾಟ, ಮಕ್ಕಳ ನೃತ್ಯ ಗುಮ್ಟಿ ನೃತ್ಯ ಹೀಗೆ ಮೂರು ಹಂತದಲ್ಲಿ ಇದೆ. ಕೊನೆಗೆ ಮನೆಯ ಯಜಮಾನ ಒಂದು ಸೇರು ಅಕ್ಕಿ, ಎಲೆ ಅಡಿಕೆ, ತೆಂಗಿನ ಕಾಯಿ, ಹಣ ಶಕ್ತಿಗನುಸಾರವಾಗಿ ನೀಡಿ ನಮಸ್ಕರಿಸುತ್ತಾರೆ. ಲೋಕರೂಢಿ ಮಾತು , ಕಷ್ಟ ನಷ್ಟದ ಬಗ್ಗೆ ಮಾತಿಗಿಳಿಯುತ್ತಾರೆ. ಅವರ ಜಾತಿಯವರ ಮನೆಯಲ್ಲಿ ರಾತ್ರಿ ಊಟದ ವ್ಯವಸ್ಥೆ ಇರುತ್ತದೆ. ಒಂದು ೩೦ರಿಂದ ೪೦ ಜನರ ಮೇಲೆ ಸೇರುತ್ತಾರೆ.ಪ್ರತಿರಾತ್ರಿ ಒಬ್ಬೊಬ್ಬರ ಮನೆಯಲ್ಲಿ ಊಟದ ವ್ಯವಸ್ಥೆ ಮಾಡಬೇಕು.


ನಂತರ ಮತ್ತದೇ ದೇವಸ್ಥಾನಕ್ಕೆ ಹೋಗಿ ಮನೆಮನೆಯಲ್ಲಿ ಕೊಟ್ಟ ಪಡಿಯನ್ನು ಇರಿಸಿ ನಮಸ್ಕರಿಸಿ ಅದನ್ನು ಒಟ್ಟಾಗಿ ಉಪಯೋಗಿಸುತ್ತಾರೆ. ಕಷ್ಟದಲ್ಲಿರುವವರ ಅಭಿವೃದ್ಧಿಗೆ ವಿನಿಯೋಗಿಸುತ್ತಾರೆ. ಈ ಆಚರಣೆಯನ್ನು ಇಂದಿಗೂ ಚಾಚೂತಪ್ಪದೆ ನಡೆಸಿಕೊಂಡು ಬರುತ್ತಿದ್ದಾರೆ ಎಂಬುವುದೇ ವಿಶೇಷ.

ಕೊನೆಯ ದಿನ ಅಂದರೆ ಫಾಲ್ಗುಣ ಶುದ್ಧ ಹುಣ್ಣಿಮೆಯ ರಾತ್ರಿ ನಡುವಿನಲ್ಲಿ ಕಟ್ಟಿಗೆಯ ಬೆಂಕಿ ಹಾಕಿ ಅದರ ಸುತ್ತ‌ ನರ್ತಿಸಿ ಕೊಳದಲ್ಲಿ ಓಕುಳಿಯ ನೀರಿನಿಂದ ಸ್ನಾನ ಮಾಡುವರು. ನೀರಾಟವಾಡುತ್ತ ಸಂಭ್ರಮಿಸುವರು.



(ಹೇರಾಡಿ ಗ್ರಾಮ ಬಾರಕೂರು ಉಡುಪಿ ಜಿಲ್ಲೆ ...)
(ಕೆಲ ಸಂಗ್ರಹಿತ ಚಿತ್ರ ಮಾಹಿತಿ ಅಂತರ್ಜಾಲ ಕೃಪೆ)
.
.
..

Wednesday 1 March 2023

ನನ್ನ ಬಿಂಬ

 


ಶೀರ್ಷಿಕೆ : ಮನಸಾರೆ ಅಳುವಾಸೆ


ನೋವಿನ ಮನದ ಭಾರವ ಇಳಿಸಲು

ಮನಸಾರೆ ಅತ್ತು ಬಿಡುವಾಸೆ

ಆದರೆ

ನಾನೀಗ ಎರಡು ಮಕ್ಕಳ ತಾಯಿ

ಹಾಗೆಲ್ಲ ಮಕ್ಕಳೆದುರು ಅಳುವ ಹಾಗಿಲ್ಲ..

ಗಂಡನ ಎದುರು ಅತ್ತರೆ

ಒಮ್ಮೆ ಸಮಾಧಾನ ಮಾಡಬಹುದು

ಮತ್ತೆ ನಾಟಕ ಎಂದು ಕೊಳ್ಳುವರು..

ಮಕ್ಕಳ ಎದುರು ಅತ್ತರೆ?!

ಏನಾಯ್ತಮ್ಮಾ ?? ಎಂದು ಕೇಳುವರು

ಅದರ‌ ಕಾರಣ, ತಂದೆ ಎಂದು ತಿಳಿದರೆ

ಅಪ್ಪನನ್ನೇ ದ್ವೇಷಿಸಲು ಮುಂದಾಗುವರು..

ಬೇಡವೇ ಬೇಡ...

ಹುಟ್ಟಿಸಿದ ತಂದೆಯನ್ನು

ಕಡೆಗಣಿಸುವುದು ಬೇಡ..

ನನ್ನ ನೋವು ನನಗಿರಲಿ

ಹೆಚ್ಚೇನಿಲ್ಲ, ನನ್ನ ಆಸೆ ಕನಸುಗಳಿಗೆ

ಇಲ್ಲಿ‌ ಜಾಗವೇ ಇಲ್ಲ.

ಹಣವೆಂಬ ಮಾರಿ ಎಲ್ಲವ

ನುಂಗಿ ಹಾಕುವಾಗ

ಎಷ್ಟು ಲಕ್ಷ್ಮೀ ಪೂಜೆ ಮಾಡಿದರೂ ಫಲವಿಲ್ಲ.


ಹೆಚ್ಚೇನಿಲ್ಲ..

ನಾನು ಅಳಬೇಕು ಎಂದುಕೊಂಡರೂ

ಪಕ್ವವಾಗುತ್ತಿರುವ ಬುದ್ಧಿ

ದಪ್ಪವಾಗುತ್ತಿರುವ ಚರ್ಮ

ಗಟ್ಟಿಗೊಳ್ಳುವ ಮನಸ್ಸು

ಅಳಲೂ ಬಿಡುತ್ತಿಲ್ಲ.

ಎಲ್ಲವನ್ನೂ ನುಂಗುಕೊಂಡು

ಇದೆಲ್ಲ ಮಾಮೂಲು ಎಂದುಕೊಂಡು

ಹೆಜ್ಜೆ  ಹಾಕುವುದೇ ಜೀವನ..



ಮಕ್ಕಳ ಕನಸುಗಳಿಗೆ ರೆಕ್ಕೆ ಕಟ್ಟಲು ಹೆತ್ತವರು ಶಕ್ತರು

ಅದೇ ಮಡದಿಯ ಕನಸುಳಿಗೆ ಇಲ್ಲಿ ಕಿವಿಗಳಿಲ್ಲ..

ಗೃಹಿಣಿಯ ಪಾಡು ಕೇಳುವವರಿಲ್ಲ..

ನಾನೂ ಕೆಲಸಕ್ಕೆ ಹೋಗುವೆ ಎಂದರೆ ಒಪ್ಪಿಗೆ ಇಲ್ಲ

ಬದುಕು ಬಂದಂತೆ ಸ್ವೀಕರಿಸುತ್ತ

ಹೆಜ್ಜೆ ಹಾಕುವಾಗಲೇ ಕಲ್ಲು ಮುಳ್ಳುಗಳು

ಕಾಲಿಗೆ ಚುಚ್ಚುವುದು‌..

ನಾನು ಅಳುವ ಹಾಗಿಲ್ಲ..

ಮಕ್ಕಳೇ ಬಂದು ಸಮಾಧಾನ ಪಡಿಸುವರು

ಧೈರ್ಯ ತುಂಬುವರು..

ಅವರ ಮುಂದೆ ನಾನು ಚಿಕ್ಕವಳಾಗಿ ಬಿಡುವುದೇ?!


ಇಲ್ಲ ಇಲ್ಲ.... ನಾನು ಅಮ್ಮ,

ಎಲ್ಲವನ್ನೂ ಇಂಗಿಸಿಕೊಂಡು

ಬಲೂನಿನಂತೆ ಗಾಳಿ ತುಂಬಿಸಿಕೊಂಡು

ಉಬ್ಬಿಕೊಂಡು ಬಳ್ಳಿಯಂತೆ ಹಬ್ಬಿಕೊಂಡು

ಬದುಕ ಕಟ್ಟಿಕೊಳ್ಳಬೇಕು..

ಇದೇ ವಾಸ್ತವ..


ಸತ್ಯದ ದರ್ಪಣದಲ್ಲಿ

ನನ್ನ ಮುಖ ಚಂದವೇ ಕಾಣುತ್ತದೆ.

ಕೊಂಚ ನಗು ಎನ್ನುತ್ತದೆ..

ನಾನು ನಗುವೆ,‌ ನನ್ನ ಬಿಂಬವಾದ ಅದು ಕೂಡ ನಗುತ್ತದೆ.


ರಚನೆ ::  ಸಿಂಧು ಭಾರ್ಗವ ,ಬೆಂಗಳೂರು.


ಬರಹ 01 Mar 2023 (ಮೊಬೈಲ್ ಚಿತ್ರ)