Sunday 18 December 2016

ಕಥೆ: ರಾಧಾ ನೆನಪಾದಳು

)(@)(@)(@)(@)(
ಕಥೆ: ಯಾಕೋ ರಾಧಾ ನೆನಪಾದಳು..
ಹಳ್ಳಿ ಜೀವನವೆಂದರೇ ಹಾಗೆ. ಹಸಿರು ಹೊದ್ದು ಮಲಗಿರುವ ಗದ್ದೆತೋಟಗಳು, ಅಡಿಕೆ ತೆಂಗು ಮರಗಳ ನಡುವೆ ಸುಳಿದಾಡೋ ತಂಗಾಳಿ, ನವಿಲಿನ ನರ್ತನ, ಹಿಮ. ಮಂಜು ಮುಸುಕಿದರೆ ಸಾಕು ಏನೋ‌ ಕೇಡು ಸಂಭವಿಸಬಹುದು ಎಂಬ ಮುನ್ಸೂಚನೆ, ನಡು ರಾತ್ರಿಯಲಿ ಗೀಳಿಡುವ ನರಿಗಳ ದನಿಕೇಳಿದರೆ ಸಾಕು ಭಯಕ್ಕೆ ಅಮ್ಮನ ತಬ್ಬಿಕೊಳ್ಳುವುದು, ಗಂಟೆ ಕಟ್ಟಿದ ಅಂಬಾ ಕರು, ಮುಂಜಾನೆ ಕರೆದ ಹಾಲನು ಡೈರಿಗೆ  ಕೊಟ್ಟು ಮತ್ತೆ ಸ್ಕೂಲಿಗೆ ಹೋಗುವುದು, ಸತ್ಯವೆಂದರೆ ಸತ್ಯ, ಮುಗ್ಧರೆಂದರೆ ಮುಗ್ಧರೇ. ಕೆಲವರು ಮೋಸ ವಂಚನೆ ಮಾಡಿಯೇ ಜೀವನ ನಡೆಸುವವರು, ಕೆಲವರು ಬ್ರೋಕರ್ಗಳು. ಕೆಲವರು ಸ್ವಾಭಿಮಾನಿಗಳು, ಛಲವಂತರು, ಕಷ್ಟಪಟ್ಟು ದುಡಿಯುವವರು. ಕೆಲವರು ಮೈಗಳ್ಳರು. ನಮ್ಮ ಮನೆಕೆಲಸಕ್ಕೆ ತೋಟದ ಕೆಲಸಕ್ಕೆ ಹತ್ತಾರು ಜನ ಗಂಡಾಳು, ಹೆಣ್ಣಾಳುಗಳು ಬರುತ್ತಿದ್ದರು. ಬಾಯಿತುಂಬಾ "ಅಮ್ಮಾ" ಎಂದು ಕರೆಯಿಸಿಕೊಳ್ಳುವ ಗತ್ತು-ಗಮ್ಮತ್ತೇ ಬೇರೆಯದಾಗಿತ್ತು. ಅವರಲ್ಲಿ ರಾಧಾ ಅಜ್ಜಿ ಕೂಡ ಒಬ್ಬಳು. ಸುರಸುಂದರಿ, ಬೆಳ್ಳಗಿನ ತಿಳಿ ಮಜ್ಜಿಗೆ, ಸಪೂರ ಮೈಕಟ್ಟು, ಆಗಿನ ಕಾಲದ ಹೀರೋಯಿನ್ ತರಹ, ಅಲ್ಲದೇ ಛಲವಂತೆ,ಪರಿಶ್ರಮಿ, ಎಲ್ಲರನ್ನೂ ನಕ್ಕು ನಗಿಸುವ ವಿದೂಷಕಿ, ಮಿಮಿಕ್ರೀ ಮಾಡುವಳು, ಸುಗ್ಗೀ ಹಾಡು ಹಾಡುವಳು, ಅಬ್ಬಾ...!! ಅವಳು ಸಕಲಕಲಾ ವಲ್ಲಭೇ.
***
ಅದು 1940 ರ ಕಾಲ. ವಯಸ್ಸಿನ್ನು ಹನ್ನೆರಡಾಗಿರಲಿಲ್ಲ ರಾಧಾಳನ್ನು ಮದುವೆ ಶಾಸ್ತ್ರ ಮುಗಿಸಿ ಗಂಡನ ಮನೆಗೆ ಕಳುಹಿಸಿದರು. ಮದುವೆ ಆದ ಮೇಲೆಯೇ ಗಂಡನ ಮುಖನೋಡಿದ್ದು. ಘಟ್ಟ ಅಂದರೆ ಗೊತ್ತಲ್ಲ, ತೀರ್ಥಹಳ್ಳಿಯಲ್ಲಿ ಗಂಡನ ಮನೆ. ಅವನು ಚಿಕ್ಕ ಹುಡುಗನಾಗಿದ್ದಾಗಿನಿಂದ ಭಟ್ಟರ ಮನೆಯ ಅಡಿಕೆ ತೋಟಕ್ಕೆ ಬೆಚ್ಚಪ್ಪನಾಗಿದ್ದ. ಅಂದರೆ ಅವನ ತಂದೆ ತಾಯಿ ಒಡಹುಟ್ಟಿದವರು ಎಲ್ಲರೂ ಅಲ್ಲೇ ಇರುವುದು.. ಇವಳೋ ಮುದ್ದಾಗಿ ಸಾಕಿದ್ದ ಹೆಣ್ಮಗಳಾದರೂ ಗಂಡನ ಜೊತೆ ಹೆಜ್ಜೆ ಹಾಕಿದ ಮೇಲೆ ಅಲ್ಲಿಗೆ ಸರಿಯಾಗಿ ಇರಲೇ ಬೇಕಲ್ಲ ಎಂದು ಅಡಿಕೆ ಸುಲಿಯುವುದು, ಬೇಯಿಸುವುದು ಎಲ್ಲಾ ಕೆಲಸವನ್ನು ಬಲುಬೇಗನೇ ಕಲಿತುಕೊಂಡಳು. ನಗುಮೊಗದಿಂದ ಎಲ್ಲರ ಮನಗೆದ್ದಳು. ಆದರೆ ಗಂಡ ಕುಡುಕ, ಬೇಡವೆಂದರೂ ರಾತ್ರಿ ಯಕ್ಷಗಾನ ನಡೆಯುವಲ್ಲಿ ಹೋಗುತ್ತಿದ್ದ. ಅಲ್ಲಿ ಏನಾದರೂ ಸಹಾಯ ಮಾಡಿ ನಾಲ್ಕು ಪುಡಿಕಾಸು ಜೇಬಿಗಿಳಿಸುತ್ತಿದ್ದ. ವರುಷದೊಳಗೆ ಮೊದಲ ಮಗುವಿನ ತಾಯಿಯಾದಳು. ಮಗುವನ್ನು ಸಾಕಲು ಭಟ್ಟರ ಮನೆಯವರೇ ಸಹಾಯ ಮಾಡಿದ್ದರು. ಎರಡು ವರುಷಗಳು ಅಂತರದಲ್ಲಿ ಇನ್ನೊಂದು ಗಂಡುಮಗುವಾಯಿತು. ಇವಳಿಗೆ ಗಂಡನ ಪ್ರೀತಿ ಸಿಗುವುದು ಕಡಿಮೆಯಾಯಿತು. ತಾನೇ ದುಡಿದು ಮಕ್ಕಳನ್ನು ಸಾಕಿದಳು. ಆಗೆಲ್ಲಾ ಶಾಲೆಗೆ ಹೋಗುವುದು ಕಡ್ಡಾಯವಾಗಿರಲಿಲ್ಲ. ಹಾಗಾಗಿ ಮಕ್ಕಳಿಬ್ಬರೂ ಓದಿನ ಕಡೆ ಗಮನಕೊಡಲಿಲ್ಲ. ಅಷ್ಟರ ನಡುವೆ ಗಂಡ ಯಕ್ಷಗಾನ ಮೇಳದವರ ಜೊತೆ ಹೋದವನು ಮತ್ತೆ ವಾಪಾಸಾಗಲೇ ಇಲ್ಲ.
***
ಗಂಡ ಇಲ್ಲದ ಹೆಂಗಸನ್ನ ನೋಡುವ ದೃಷ್ಟಿ ಹೇಗಿರುತ್ತದೆ ಎಂದು ಎಲ್ಲರಿಗೂ ಗೊತ್ತು. ಅವಳ ಯವ್ವನೇ ಸುಡುವ ಕೆಂಡವಾಯಿತು. ರಾತ್ರಿ ಕಳೆಯುವುದು ಕಷ್ಟವಾಗುತ್ತಿತ್ತು.  ಕುಡಿದ ನಾಯಿಗಳು ಬೇಕಂತಲೇನೆ ಅವಳ ಮನೆ ಬಾಗಿಲ ಬಡಿದು ಮಾನಸಿಕ ಹಿಂಸೆ ನೀಡುತ್ತಿದ್ದವು. ಆದರೂ ಗಟ್ಟಿಗಿತ್ತಿ. ಹತ್ತಿರ ಬರಲು ಯಾರಿಗೂ ಬಿಡುತ್ತಿರಲಿಲ್ಲ. ಅಲ್ಲದೇ ಸೋಂಟೆ ಹಿಡಿದು ಅತೀಯಾಗಿ ವರ್ತಿದುವವರಿಗೆ ಮೈಕೈ ಮುರಿಯುವಷ್ಟು ,ಬಾಸುಂಡೆ ಬರುವಷ್ಟು ಹೊಡೆದಿದ್ದಳು. ಹಗಲು ರಾತ್ರಿ ಅರೆಬರೆ ನಿದ್ದೆ ಕಣ್ಣಿನಲ್ಲಿಯೇ ಕಳೆಯುತ್ತಿದ್ದಳು. ಅದನ್ನು ಗಮನಿಸಿದ ಭಟ್ಟರ ಅಮ್ಮ ತನ್ನ ಮನೆಯ ಪಕ್ಕದಲ್ಲಿ ಗುಡಿಸಲು ಕಟ್ಟಿಕೊಂಡು ವಾಸವಾಗಿರಲು ಹೇಳಿದರು.ಆಗ  ಜೀವಕ್ಕೆ ಸ್ವಲ್ಪ ಧೈರ್ಯ ನೆಮ್ಮದಿ ಬಂತು. ಗಂಡಬೇಗ ವಾಪಾಸಾಗಲಿ ಎಂದು ಕಂಡಕಂಡ ದೇವರಲ್ಲಿ ಪ್ರಾರ್ಥಿಸುವುದೇ ಆಯಿತು. ಕೊನೆಗೂ ಆರು ವರುಷದ ನಂತರ ಗಂಡ ಬಂದ. ಕುಡಿತದಲ್ಲಿ ಸ್ನಾನ ಮಾಡುತಲಿದ್ದ. ಮಕ್ಕಳಿಗೆ ಮಾತನಾಡಿಸಲೂ ಇಷ್ಟವಾಗಿರಲಿಲ್ಲ. ರಾಧಾಗೆ ಅವನನ್ನು ನೋಡಿ ಅಳುವೇ ಬಂದಿತು. ಬಿಸಿಬಿಸಿ ಅಡುಗೆ ಮಾಡಿ ಬಡಿಸಿದಳು ಕರ್ತವ್ಯವೆಂಬಂತೆ ಮಾಡಿ ಮುಗಿಸಿದಳು. ಆ ರಾತ್ರಿ ಏನಾಯಿತೋ ಗೊತ್ತಿಲ್ಲ. ಮತ್ತೆ ಒಂದು ವಾರ ಹೆಂಡತಿಯ ಸೆರಗಿನಲ್ಲೇ ಅಂಟಿಕೊಂಡಿದ್ದ. ಆದರೂ ಅವಳಿಗೆ ಇಷ್ಟವಾಗುತ್ತಿರಲಿಲ್ಲ. ಮತ್ತೆ ಮೇಳದವರು ಕರೆದರೆಂದು ಹೊರಟೇ ಬಿಟ್ಟ. ಇವಳು ಬೇಡವೆಂದು ಗೋಗರೆದರೂ ಕೇಳಿಸಿಕೊಳ್ಳಲೇ ಇಲ್ಲ. "ಅಮ್ಮಾವ್ರೆ.. ಅವನು ಇನ್ನು ಬಂದರೂ ನಾನು ಸೇರಿಸಿಕೊಳ್ಳುವುದಿಲ್ಲ.. ಬೇಜವಾಬ್ದಾರಿ ಮನುಷ್ಯ ಅವ. ಮಕ್ಕಳನ್ನು ನಾನೇ ದುಡಿದು ಸಾಕ್ತೇನೆ.." ಎಂದು  ತನ್ನ ನೋವನ್ನು ಹೊರಹಾಕಿದಳು. ಅಷ್ಟರಲ್ಲಿ ಮತ್ತೆ ವಾಂತಿ ಮಾಡಿದಳು. ಬೇಡವೀ ಪಿಂಡವೆಂದು ತೆಗೆಸಿಕೊಳ್ಳು ಯಾವುದೋ ಮರದ ಕೆತ್ತೆ ಕಡಿದು ಕುಡಿದಳು. ಉ.ಹುಂ ಗಟ್ಟಿಪಿಂಡ ಸಾಯಲಿಲ್ಲ. ಅಂತೂ ಹೇರಿಗೆ ನೋವು ಕಾಣಿಸಿಕೊಂಡಿತು. ಮುದ್ದಾದ ಹೆಣ್ಣುಮಗು ಹಡೆದಳು. ಆ ಮಗುವು ರಾಧಾಳನ್ನೇ ಹೋಲುತ್ತಿತ್ತು. ಕೆಂಪು-ಕೆಂಪು ಮುಖದ ಗೊಂಬೆಯ ರೀತಿ ಮುದ್ದಾಗಿತ್ತು. ನೋಡಿ ಖುಷಿಯಾಯಿತು. ಹೇಳಬೇಕೆಂದರೆ ರಾಧಾಳಿಗೆ ಇಬ್ಬರು ಅಣ್ಣಂದಿರು, ಇಬ್ಬರು ಅಕ್ಕಂದಿರು ಹಾಗೆ ನಾಲ್ಕು ಜನ ಸಮವಾಗಿ ತಮ್ಮ, ತಂಗಿ ಇದ್ದ ದೊಡ್ಡ ಕುಟುಂಬವಾಗಿತ್ತು. ಅವಳ ಕಷ್ಟ ಅಣ್ಣನಿಗೆ ನೋಡಲಾಗಲಿಲ್ಲ. "ಮನೆತುಂಬಾ ಮಕ್ಕಳಿದ್ದಾರೆ. ನೀನು ಊರಿಗೆ ತಿರುಗಿ ಬಂದುಬಿಡು, ಇಲ್ಲೆ ಒಂದು ಕೆಲಸನೋಡಿದರಾಯಿತು. ಪಾಲಿನ ಜಾಗದಲ್ಲಿ ಮನೆ ಕಟ್ಟಿಕೊಂಡು ಜೀವನ ನಡೆಸು.." ಎಂದ.
***
ಮತ್ತೆ ಹೊಸ ಜೀವನ ಪ್ರಾರಂಭ. ಆಗ ನಾವೆಲ್ಲ ಐದಾರು ವರುಷದ ಪುಟ್ಟಮಕ್ಕಳಷ್ಟೆ. ಅವಳ ಮಕ್ಕಳು ದೊಡ್ಡವರಾಗಿದ್ದರು ಮದುವೆ ಆಗುವ ವಯಸ್ಸಾಗಿತ್ತು. ಗಾರೆ ಕೆಲಸ ಮಾಡಿಕೊಂಡು ಎರಡನೇ ಮಗ ನ್ಯಾಯಯುವ ಜೀವನ ನಡೆಸುತ್ತಿದ್ದ. ಮೊದಲನೇ ಮಗ ತಂದೆಯ ರಕ್ತವೇ ಹರಿಯುವುದನ್ನು ತೋರಿಸಿಕೊಟ್ಟ. ಯಕ್ಷಗಾನ ಬಯಲಾಟದ ಮೇಳಕ್ಕೆ ಸೇರಿದ್ದ. ಹಗಲು ನಿದಿರೆ,ರಾತ್ರೆ ಕುಣಿತ ಅದೇ ಜೀವನವಾಗಿತ್ತು. ಮಗಳಿಗೆ ಯೋಗ್ಯವಾದ ವರನ ನೋಡಿ ಮದುವೆ ಮಾಡಿಸಿದರು. ಆದರೆ ಅವಳು "ಅಮ್ಮನ ಬಿಟ್ಟು ಎಲ್ಲಿಗೂ ಹೋಗುವುದಿಲ್ಲ.." ಎಂದು ಆಸ್ತಿಯಲ್ಲಿ ಪಾಲು ಕೇಳಿ ಅಲ್ಲಿಯೇ ಒಂದು ಮನೆ ಕಟ್ಟಿಕೊಂಡಳು. ಗಂಡನು ಬಾಯಿಮುಚ್ಚಿಕೊಂಡು ಬಂದ. ಆದರೆ ಕೈಯಲ್ಲಿ ಕೆಲಸವೆಂಬುದಿರಲಿಲ್ಲ. ಹೆಂಡತಿಗೆ ಹೊಡೆಯುವುದು, ಹಣ ಕೇಳುವುದು, ಕುಡಿಯುವುದು ಹೀಗೆ ಹಿಂಸಾಕೂಪವಾಗಿತ್ತು ಅವಳ ಸಂಸಾರ. ರಾಧಾಳಿಗೆ ರಾತ್ರಿ ನಿದಿರೆಯೇ  ಮಾಡುತ್ತಿರಲಿಲ್ಲ. ನಂಬಿದ ದೇವರಿಗೆ ಒಂದು ಹರಿಕೆ ಹೊತ್ತು ಮಗಳ ಸಂಸಾರ ಸರಿಯಾಗಲಿ ಎಂದು ಬೇಡಿಕೊಂಡಳು. ದೊಡ್ಡ ಮಗನೋ ಎಲ್ಲಿಯೋ ಯಕ್ಷಗಾನ ಆಟಕ್ಕೆ ಹೋದಾಗ ಒಂದು ಹುಡುಗಿಯ ಕಂಡಿದ್ದ. ಸಿರಿವಂತರ ಮನೆ ಹುಡುಗಿಯವಳು. ಅವಳನ್ನೇ ಮದುವೆ ಆಗುವೆ ಎಂದು ಅವಳ ಸಹೋದರನಲ್ಲಿ ಕೇಳಿ ಒಮ್ಮೆ ಉಗಿಸಿಕೊಂಡಿದ್ದ. ಪಟ್ಟು ಹಿಡಿದು ಅವಳೇ ಬೇಕು ಎಂದು ಹಟಮಾಡಿ ಮದುವೆಯಾದ. ಚೆನ್ನಾಗಿಯೇ ಸಂಸಾರ ನಡೆಯುತ್ತಿತ್ತು. ಆದರೆ ಮನೆಯ ಪಾರುಪತ್ಯ ಪೂರ್ತಿ ಹೆಂಡತಿಯದೇ ಮತ್ತು ಅವಳ ಮನೆಯವರದೇ ಆಗಿತ್ತು. ಆದರೂ ಅವನು ದಾರಿಗೆ ಬಂದನಲ್ಲ ಎಂದು ರಾಧಾ ನಿಟ್ಟುಸಿರು ಬಿಟ್ಟಳು. ಇನ್ನು ಎರಡನೇ ಮಗನಿಗೆ ಸಂಬಂಧ ಬಂದಿತ್ತು. ಹುಡುಗಿಯ ನೋಡಿ ಒಪ್ಪಿದ, ಮದುವೆಯೂ ಆಯಿತು. ಅಲ್ಲಿಂದ ಶುರುವಾಯಿತು ನೋಡಿ ಮಕ್ಕಳ ನಿಜರೂಪ. ಅವರ ಯಕ್ಷಗಾನ ಬಯಲಾಟ..
***
ಮೊದಲಿನ ಸೊಸೆ ಅತ್ತೆಗೆ (ರಾಧಾಳಿಗೆ) ಊಟವಿರಲಿ ,ತೊಟ್ಟು ನೀರು ಕೊಡಲು ನಿರಾಕರಿಸಿದಳು. "ಎರಡನೇ ಮಗನ ಮನೆಯಿದೆ ತಾನೆ, ಹೋಗಲಿ ಅಲ್ಲಿಗೇ.. ಮಗಳೂ ಇಲ್ಲೇ ಇದ್ದಾಳೆ.. ನಾವ್ಯಾಕೆ ಮಾಡಬೇಕು ಎಂದು ದಿನ ಬೆಳಗಾದರೆ ಬೈಯುವುದು, ಹಂಗಿಸುವುದು. ಅವಳ ಕೊಂಕುನುಡಿಗಳ ನುಂಗಲಾಗದೇ ಕಣ್ಣೀರಿಡುತ್ತಿದ್ದಳು ನಮ್ಮಮನೆ ಕೆಲಸಕ್ಕೆ ಬಂದಾಗಲೆಲ್ಲ.. ಇನ್ನು ಎರಡನೇ ಸೊಸೆ "ತಿನ್ನಲು ಉಣ್ಣಲು ಏನೂ ತಕರಾರಿಲ್ಲ, ರಾತ್ರಿ ಮಲಗಲು ಮಗಳ ಮನೆಗೇ ಹೋಗಿ.." ಎನ್ನುತ್ತಿದ್ದಳು. ಅಲ್ಲದೇ "ಗಂಡನ (ಎರಡನೇ ಮಗ) ದುಡಿದ ಹಣ ಕೇಳುವಂತಿಲ್ಲ. ನೀವೇ ದುಡಿಯುತ್ತೀರಲ್ಲ. ಬೇಕಾದರೆ ಮಗಳು-ಅಳಿಯ ಕೊಡುವರು" ಎಂದು ವ್ಯಂಗವಾಡುತ್ತಿದ್ದಳು. ಅಳಿಯ ಬೈದರೂ ತನ್ನ ಗಂಡ ಕುಡುಕ ಎಂದು ಮಗಳಿಗೆ ಗೊತ್ತಿತ್ತು. ನನ್ನ ಸಹಾಯಕ್ಕೆ ಅಮ್ಮ, ಅಮ್ಮನಿಗೆ ನಾನು ಎಂದು ಮನೆಯಲ್ಲಿಯೇ ಇರಿಸಿಕೊಂಡಿದ್ದಳು. ಆಗಲೇ ಶುರುವಾಯಿತು ಮಗಳಿಗೆ "ಜೀವದಲ್ಲಿ ರಕ್ತವಿಲ್ಲ, ಲೋ ಬಿ.ಪಿ, ರೆಸ್ಟ್ ಮಾಡಬೇಕು, ಆರೋಗ್ಯದ ಕಡೆ ಗಮನ ಕೊಡಿ, ಕೆಲಸವೇನು ಮಾಡಬೇಡಿ.. ಹೀಗೆ ಡಾಕ್ಟರ್ ರ ಹಿತವಚನಗಳು. ಬಡವರಿಗೆ ಬೇಡದ ಕಾಯಿಲೆಗಳು ಹೊದ್ದು ಮಲಗಲು ಎಂದು ಗೊಣಗುತ್ತಾ ವಾಪಾಸ್ಸಾದಳು. ತಾಯಿಯೇ ದುಡಿದು ಹಣ್ಣು ಹಂಪಲು ತಂದು , ನೆರಮನೆಯಿಂದ ಹಾಲು ಕೇಳಿ ಪಡೆದು ಮನೆಯಲ್ಲಿ ಅಡುಗೆ ಮಾಡಿ ಮಗಳ ಜೊತೆಗೆ ಮೂರ್ನಾಲ್ಕು ಮೊಮಕ್ಕಳನ್ನೂ ಸಾಕಿ ಸಲಹುತ್ತಿದ್ದಳು. ಮನಸ್ಸಿಗೆ ನೆಮ್ಮದಿಯಿಲ್ಲದೇ ಕಳ್ಳು-ಸಾರಾಯಿಯ ಮೊರೆ ಹೋಗಿ ಅದೆಷ್ಟೋ ಬರುಷಗಳೇ ಆಗಿತ್ತು. ಹೊಗೆಸೊಪ್ಪು ತಿನ್ನುತ್ತಿದ್ದಳು. ಅದೊಂದು ಅಭ್ಯಾಸವಾಗಿ ,ಕೆಟ್ಟ ಚಟವಾಗಿಹೋಯ್ತು. ರಾತ್ರಿ ನಿದಿರೆ ಬರಬೇಕಾದರೆ ಕುಡಿಯಲೇ ಬೇಕಿತ್ತು.
ಇದರ ನಡುವೆ ನಮ್ಮ ಮನೆಗೆ ತೋಟದ ಕೆಲಸಕ್ಕೆ ಬಂದಾಗಲೆಲ್ಲ ನಗುತ್ತಾ ನಗಿಸುತ್ತಾ ಮನಸ್ಸಿನ ನೋವು ಮರೆಯುತ್ತಾ ನಮಗೆಲ್ಲ ಮುದ ನೀಡುತ್ತಿದ್ದಳು.
***
ಇಪ್ಪತ್ತು ವರುಷಗಳು ಉರುಳಿದವು. ಈಗ ರಾಧಾ ಹಾಸಿಗೆ ಹಿಡಿದಿದ್ದಾಳೆ. ಕುಡಿತಕ್ಕೆ ಕರುಳು ಸುಟ್ಟು ಹೋಗಿದೆ. ಪಾರ್ಶ್ವವಾಯು ಬಂದು ದೇಹದ ಎಡಭಾಗದ ಯಾವ ಅಂಗಾಂಗಗಳೂ  ಕೆಲಸಮಾಡುತ್ತಿಲ್ಲ. ಯಾರು ಬಂದರೂ,ಹೋದರೂ ಗೊತ್ತಾಗುವುದಿಲ್ಲ. ಕಣ್ಣುಗಳು ಪೊರೆಬಂದು ಕುರುಡಾಗಿದೆ. ಸೊಸೆಯೋ ಯಾವಾಗ ಸಾಯುವರೋ ಎಂದು ಬಂದವರೆದುರೇ ಹೇಳುತ್ತಾಳೆ. ಅಳಿಯ ಸಂಪೂರ್ಣ ಬದಲಾಗಿ ಹೊಸ "ಮಾಂಸಾಹಾರಿ ಊಟದ ಹೋಟೆಲ್" ಮಾಲೀಕನಾದ. ಒಂದು ಗೂಡು ರಿಕ್ಷಾ, ಬೈಕ್, ಕಾರು, ದೊಡ್ಡ ಮನೆ ಕಟ್ಟಿಸಿ ಸಿರಿವಂತನಾದ. ರಾಧಾಳನ್ನು ಅವನೇ ನೋಡಿಕೊಳ್ಳುತ್ತಿದ್ದಾನೆ. ಎರಡನೇ ಮಗ ಕಣ್ಣಿದ್ದೂ ಕುರುಡ. ಕೇಳಿದರೇ ನಮಗೇ ನಮ್ಮದು ಹೆಚ್ಚಾಗಿದೆ ಅನ್ನುವ. ಹೆಂಡತಿ ಹೇಳಿದ ಹಾಗೆ ಕುಣಿಯುವ. ಬದಲಾಗಿ ಹೋಗಿದೆ ಎಲ್ಲರ ಬದುಕು. ರಾಧಾಳನ್ನ ಕೊನೆಗೂ ಚೆನ್ನಾಗಿ ಆರೈಕೆ ಮಾಡಿದ್ದು ಅವಳ ಮಗಳು-ಅಳಿಯನೇ.‌ ಅದಕ್ಕೇ ಹೇಳುವುದು ಮನೆಗೆ ಒಂದಾದರೂ ಹೆಣ್ಮಗಳಿರಬೇಕು ಎಂದು. ಅವಳಿಗೆ ಮಾತ್ರ ದಯೆ,ಕರುಣೆ, ಸಹನೆ, ಪ್ರೀತಿ, ಮಮತೆ ಎಲ್ಲವೂ ಅರ್ಥವಾಗುವುದು. (ಕೆಲವು ಕಡೆಯ ಅಪವಾದದ ಹೊರತಾಗಿ).

- ಸಿಂಧುಭಾರ್ಗವ್.

No comments:

Post a Comment