Wednesday 21 December 2016

ಕಥೆ ನಮ್ಮ ಗೌರಿ

ಕಥೆ: ನಮ್ಮ ಗೌರಿ
~~~~~~~~~

ಮುಂಜಾನೆ ಆರಾಯಿತು. ಬೆಳ್ಳಂಬೆಳಿಗ್ಗೆ ಗೌರಿಗೆ ಹೆರಿಗೆ ನೋವು ಬಂದಿದೆ. ಎರಡು ಹೆಜ್ಜೆ ಮುಂದೆ ಎರಡು ಹೆಜ್ಜೆ ಹಿಂದೆ ಇಡುತ್ತಿದ್ದಾಳೆ. ಅಸಾಧಾರಣ ನೋವು ಒಮ್ಮೆ ಕಾಣಿಸಿಕೊಂಡು ಮತ್ತೆ ಸಮಸ್ಥಿತಿಗೆ ಬಂದು ಬಿಡುತ್ತದೆ. ಅಮ್ಮನೋ ಕೊಟ್ಟಿಗೆಯಿಂದ ಕದಲುತ್ತಿಲ್ಲ. ಒಮ್ಮೆ ಕಿವಿ ಸವರುತ್ತಾ, ಒಮ್ಮೆ ತಲೆ ಸವರುತ್ತಾ, ಬೆನ್ನಿಗೆ ನೀರು ಹಾಕುತ್ತಾ ನಾನು ನಿನ್ನ ಜೊತೆಗೆ ಇದ್ದೇನೆ ಎನ್ನುವ ಧೈರ್ಯ ತುಂಬುತ್ತಿದ್ದಾಳೆ. ಉ.ಹುಂ..!! ಇಲ್ಲ ಮಧ್ಯಾಹ್ನವಾದರೂ ಕರು ಹಾಕುವ ಲಕ್ಷಣ ಕಾಣಿಸುತ್ತಿಲ್ಲ. ಆಗಾಗೇ ಹೊಟ್ಟೆನೋವು ಬಂದುಹೋಗುತ್ತಿದೆ ಅಷ್ಟೆ. ನಾವು ಕರು ಹೊರಬರಬಹುದಾ? ಗಿಣ್ಣು ಹಾಲು ಸವಿಯಲು ಕಾತುರರಾಗಿದ್ದೆವು.
 *
ಅಮ್ಮನಿಗೆ ಊಟಕ್ಕೆ ಹೋಗಲೂ ಮನಸ್ಸಿಲ್ಲ. ಗಂಟಲಿಗೆ ನೀರು ಇಳಿಯುತ್ತಿಲ್ಲ. ಅಲ್ಲೆ ಕಂಬದ ಹತ್ತಿರ ಕುಳಿತವಳಿಗೆ ಮೊದಲ ಮಗಳು ಹೆರಿಗೆಗೆಂದು ತವರು ಮನೆಗೆ ಬಂದ ನೆನಪಾಗುತ್ತದೆ. ಅವಳದೂ ಈ ಗೌರಿಯ ಹಾಗೆ, ಹೆರಿಗೆ ದಿನ ಬಂದರೂ ನೋವು ಕಾಣಿಸಿಕೊಂಡಿರಲಿಲ್ಲ. ಆಸ್ಪತ್ರೆಗೆ ಸೇರಿಸಿ ನೋವು ಬರುವ ಹಾಗೆ ಮಾಡಿದರೂ ಏನೂ ಪ್ರಯೋಜನವಿಲ್ಲ. ಆಗಾಗ್ಗೆ ನೋವು ಬಂದು ಪ್ರಾಣ ಹಿಂಡಿತೇ ಹೊರತು ಮಗುವಿನ ತಲೆನೋಡುವ ಸುಳಿವಿಲ್ಲ. "ಇನ್ನೇನು ಕಾಯುವುದು? ಆಪರೇಶನ್ ಮಾಡಿಸುವ.." ಎಂದು ಡಾಕ್ಟರಮ್ಮ ಹೇಳಿ ಸಹಿ ತೆಗೆದುಕೊಂಡಿದ್ದರಷ್ಟೆ.. ಹೆರಿಗೆ ಆಗಿಹೋಗಿತ್ತು. ನರ್ಸ್ ಕೋಣೆಯಿಂದ  ಡಾಕ್ಟರಮ್ಮನ ಕೂಗಿ ಕರೆದಳು. "ಗಂಡುಮಗು ಕಣಮ್ಮ.. ನೀವು ಅಜ್ಜಿ ಆಗಿದ್ದೀರಿ. ತಾಯಿಮಗು ಆರೋಗ್ಯದಿಂದ ಇದ್ದಾರೆ, ಇನ್ನೇನು ಸಮಸ್ಯೆ ಇಲ್ಲ. ತೂಕವೂ ಸರಿಯಾಗಿದೆ. ಹಾಲು ಕುಡಿಸಲು ಹೇಳಿ. ನಿಮಗೆ ಶುಭವಾಗಲಿ". ಎಂದು ನಗುನಗುತ್ತಾ ಹೊರನಡೆದರು.
ಗೌರಿಯೂ ಹಾಗೆ ನಮ್ಮ ಮನೆಯಲ್ಲೇ ಹುಟ್ಟಿ ಬೆಳದವಳು. ಮುದ್ದಿನಿಂದ ಸಾಕಿದ್ದಾರೆ ನಮ್ಮ ತಂದೆತಾಯಿ. ಅದರ ಓಡಾಟ, ಹುಲ್ಲುತಿನ್ನುವ ರೀತಿ ಕಂಡು ಖುಷಿಯಾಗುತ್ತಿತ್ತು... ಅದನ್ನೆಲ್ಲ ನೆನಪಿಸುತ್ತ ಕಂಬಕ್ಕೆ ತಲೆ ಕೊಟ್ಟು ಕುಳಿತಿರುವಾಗಲೇ ಗೌರಿ ಕರುಹಾಕಿಯೇ ಬಿಟ್ಟಳು. ಹೌದು  ಗೌರಿಗೆ ಹೆಣ್ಣುಕರುವಾಗಿತ್ತು. ಅವಳೋ ತನ್ನ ಕಂದಮ್ಮನನ್ನು ನೋಡಲು ಆತುರಪಡುತ್ತಿದ್ದಳು. ಅಮ್ಮ ಮುಖಮೈಯನ್ನೆಲ್ಲಾ ತೊಳೆದು , ಕಾಲಿನ ಉಗುರು ತೆಗೆದು, ನಿಲ್ಲಿಸಲು ಪ್ರಯತ್ನಿಸಿದರು. ಅಂತೂ ಕರು ನಿಂತಿತು. "ಅಂಬಾ..." ಎಂದು ಜೋರಾಗಿ‌ ಕೂಗಿತು. ಅದೆಷ್ಟು ಸೋಜಿಗ ಅಲ್ಲವೇ.. "ಅಮ್ಮ" ಎಂಬ ಎರಡಕ್ಷರ.. ಹಾಲು ಕುಡಿಸಲು ಕರುವನ್ನು ಅದರ ತಾಯಿಯ ಹತ್ತಿರ ಕರೆದುಕೊಂಡು ಹೋಗಲು ನನ್ನಮ್ಮ ಮುಂದಾದರು. ನಮ್ಮ ಅಮ್ಮ "ಕರು ಬಂತು ನೋಡಿಬನ್ನಿ" ಎಂದು ಕೂಗಿ ಕರೆದರು.. ನಮೆಗೆಲ್ಲ ಖುಷಿಯೋ ಖುಷಿ. ಕರುವಿಗೆ ಬೇಕಾದಷ್ಟು ಹಾಲು ಕುಡಿಸಿದ ಮೇಲೆ ಉಳಿದ ಹಾಲಿನಿಂದ ಗಿಣ್ಣು ಮಾಡಬಹುದಲ್ಲ ಅದಕ್ಕೆ.
*
ಹೌದು ಹಸು/ದನ/ ಗೋವು ನಮಗೆ ಅಂದರೆ ಕರಾವಳಿ ತೀರದಲ್ಲಿ ಜೀವನ ನಡೆಸುವವರಿಗೆ ಮನೆ ಮಗಳಿದ್ದಂತೆ. ಅದನ್ನು ಸಾಕಿ ಸಲಹುವುದು ಒಂದು ಕರ್ತವ್ಯವೆಂದು ನಾವು ಎಂದಿಗೂ ಎನಿಸಿದವರಲ್ಲ. ಅದರಿಂದ ಏನು ಲಾಭ ಬರುತ್ತದೆ ಎಂದು ಸಾಕುವುದಿಲ್ಲ. ಹೆಚ್ಚಾಗಿ ಮನೆಮಗಳಂತೆ ಪ್ರೀತಿಯಿಂದ ಸಾಕಿ ಸಲಹುತ್ತೇವೆ. ಅದರ ಎಲ್ಲಾ ಕೆಲಸಗಳನ್ನು ಸೇವೆ ಎಂಬಂತೆ ಮಾಡುತ್ತೇವೆ. ಗೋವು ಮತ್ತು ನಾಗರಹಾವು ನಮಗೆ ಕಣ್ಣಿಗೆ ಕಾಣುವ ದೇವರು..‌ ಕರಾವಳಿಯಲ್ಲಂತೂ ಪೂಜೆ ಮಾಡಿ ಧನ್ಯರಾಗುತ್ತೇವೆ. ಅಲ್ಲದೇ ಹುಟ್ಟಿದ ಮಗುವಿಂದ ಹಿಡಿದು ಮರಣ ಹೊಂದುವವರೆಗೂ ಒಂದಲ್ಲ ಒಂದು ರೀತಿಯಲ್ಲಿ ಗೋವಿನ ಹಾಲು, ಅಥವಾ ಹಾಲಿನ ಉತ್ಪನ್ನಗಳನ್ನು ಜನರು ಸೇವಿಸದೇ ಇರಲಾರರು. ಗೋಹತ್ಯೆಗೆ " ಇತಿಃಶ್ರೀ " ಹಾಡಲೇ ಬೇಕು. ಗೋವುಗಳನ್ನು ರಕ್ಷಿಸಬೇಕು. ಅವು ರೈತರ ಮಿತ್ರನಂತೆ. ಕೃಷಿಕರಿಂದಲೇ, ಅವರು ಬೆಳೆವ ಬೆಳೆಯಿಂದಲೇ ತಾನೆ ನಾವೆಲ್ಲ ಊಟಮಾಡುತ್ತಿರುವುದು. ಅಂದಮೇಲೆ ಅವರ ಜೊತೆಗಿರುವ ಆ ಮೂಖಪ್ರಾಣಿಯ ಮೇಲೆ ಯಾಕಷ್ಟು ಕ್ರೂರವಾಗಿ ವರ್ತಿಸುತ್ತಾರೆ.. ಇನ್ನಾದರೂ ನಿಲ್ಲಲಿ..

- ಸಿಂಧುಭಾರ್ಗವ್. 

No comments:

Post a Comment