Sunday 24 July 2022

ಕುಡಿಯರ ಕೂಸು ಕಾದಂಬರಿ ವಿಮರ್ಶಾ ಲೇಖನ

ಡಾ॥  ಕೆ. ಶಿವರಾಮ ಕಾರಂತರ ‘ ಕುಡಿಯರ ಕೂಸು ‘





ಡಾ॥ ಕೆ. ಶಿವರಾಮ ಕಾರಂತರು ಪಕ್ಕಾ ವಾಸ್ತವಿಕ ಬರಹಗಾರ. ಅವರ ಕೃತಿಗಳೆಲ್ಲವೂ ಸ್ವಾನುಭವದ ರಸಪಾಕ. ತಮ್ಮ ಎಲ್ಲಾ ಕೃತಿಗಳಲ್ಲಿನ  ಪಾತ್ರಗಳ ಮೂಲಕ ತಮ್ಮನ್ನು ತಾವೇ ವಿಸ್ತರಿಸಿಕೊಳ್ಳುತ್ತಾ ಹೋಗುತ್ತಾರೆ ಕಾರಂತರು. ಗಾಢವಾದ ವಾಸ್ತವಿಕ ಪ್ರಜ್ಞೆ,  ಮಾನವೀಯ ಅನುಕಂಪಗಳನ್ನಿಟ್ಟುಕೊಂಡು ಬರೆಯುವ ಕಾರಂತರು , ವಾಸ್ತವ ಪಂಥದ ಕಾದಂಬರಿಗೆ ತಮ್ಮ ಕಾಣಿಕೆಯನ್ನು ಅರ್ಥಪೂರ್ಣವಾಗಿ ಸಲ್ಲಿಸಿದ್ದಾರೆ. ಅವರ ಕಾದಂಬರಿಯಲ್ಲಿನ ವಿವರಗಳು ಕೇವಲ ದಾಖಲೆಯಾಗಿ ಪರಿಣಮಿಸದೆ, ಸಾಮಾನ್ಯ ಜನಜೀವನದ ಸುಖದುಃಖಗಳ ಪರಾಮರ್ಶೆಯ ಜೊತೆಗೇ ಒಂದು ಜೀವನ ವಿನ್ಯಾಸವನ್ನೇ ಕಟ್ಟಿಕೊಡುವ ಸಾಮರ್ಥ್ಯ ಇರುವಂತಹವು. ಈ ನೆಲದ ಮಣ್ಣಿನಲ್ಲಿಯೇ ಹುಟ್ಟಿ, ತಳವೂರಿ, ಗ್ರಾಮೀಣ ಜೀವನದ ಸರಳತೆ, ಮುಗ್ಧತೆ, ಶ್ರಮ ಜೀವನಕ್ಕೆ ಮನಸೋತವರಾದರೂ, ಬದಲಾವಣೆಗಳನ್ನು ನಿಷ್ಠುರವಾಗಿ ದಾಖಲು ಮಾಡಿ, ಅದರ ಅಗತ್ಯ ಇದೆ ಎಂಬುದನ್ನೂ ಪ್ರತಿಪಾದಿಸುತ್ತಾರೆ ಕಾರಂತರು. ಹಳ್ಳಿಗಾಡಿನ ಮಾತುಗಳ ಕಿರು ಪ್ರಯೋಗದಿಂದ ಕಾವ್ಯವನ್ನು ಚಿಮ್ಮಿಸುವ, ಕಥೆ ಹೇಳುವ ಪರಿಕ್ರಮದಲ್ಲಿ ಸಾಮಾಜಿಕ ಬದಲಾವಣೆಗಳನ್ನು ಧ್ವನಿಸುವ ಕಾರಂತರು ಜೀವನೋತ್ಸಾಹದಲ್ಲಿ ಅನಂತ ನಂಬಿಕೆಯನ್ನು ಇಟ್ಟುಕೊಂಡಿದ್ದರು ಎಂಬುದು ಅವರ ಬರಹಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.  ಅವರಲ್ಲಿ ಘೋಷಿತ ಕ್ರಾಂತಿಕಾರತೆ, ತೋರಿಕೆಯ ನಂಬಿಕೆ ಇಲ್ಲ. ಅವರ ಬದುಕು-ಬರಹ ಭಿನ್ನವಾಗಿರಲಿಲ್ಲ. ಆದ್ದರಿಂದಲೇ ಅವರ ಬರಹಗಳ ಘನತೆ ಹೆಚ್ಚು. ದಟ್ಟವಾದ ಅನುಭವವೇ ಅವರ ಬರಹಗಳ ಜೀವಾಳ. ಅವರ ಉತ್ಕೃಷ್ಟ ಕೃತಿಗಳಲ್ಲಿ  ಪ್ರಸ್ತುತ ‘ಕುಡಿಯರ ಕೂಸು’ ಸಹ ಒಂದು. 1978ರ ಸುಮಾರಿಗೆೇ  ನಾಲ್ಕನೆಯ  ಆವೃತ್ತಿ ಕಂಡ ಈ ಕೃತಿ ರಾಜಲಕ್ಷ್ಮಿ ಪ್ರಕಾಶನದಿಂದ ಹೊರಬಂದಿದೆ. ಈ ಕಾದಂಬರಿ ‘ಮಲೆಯ ಮಕ್ಕಳು’  ಎಂಬ ಹೆಸರಿನಲ್ಲಿ ಚಲನಚಿತ್ರವೂ ಆಗಿದೆ.


ಶ್ರೀಯುತರು ಈ ಕೃತಿಯಲ್ಲಿ ಪ್ರಧಾನವಾಗಿ ಮಲೆಗಳಲ್ಲಿ ವಾಸಿಸುವ,  ನಿಸರ್ಗದ ಮಕ್ಕಳಾದ ಮಲೆಕುಡಿಯರ ಜೀವನಕ್ರಮದ ಮೇಲೆ ಕ್ಷ-ಕಿರಣ ಬೀರಿದ್ದಾರೆ. ಮಲೆಕುಡಿಯರ ಜೀವನದಲ್ಲಿ ಇರುವ ಕಟ್ಟಳೆ,ಆಚಾರ-ವಿಚಾರ, ನಂಬಿಕೆ ಹೇಗಿವೆ ಎಂಬುದರ ಸ್ಥೂಲಪರಿಚಯ ಈ ಕೃತಿಯಲ್ಲಿ ನಮಗೆ ಸಿಗುತ್ತದೆ. ಕುಡಿಯರ ಹಾಗೂ ನಿಸರ್ಗದ ನಡುವಿನ ಸಂಬಂಧ, ಅವರಲ್ಲಿ ಕಾಣಬಹುದಾದ ಆರ್ಥಿಕ ಬದಲಾವಣೆಗಳು, ನಂಬಿಕೆಗಳ ಪ್ರಭಾವ...ಹೀಗೆ ಎಲ್ಲದರ ಸಮಗ್ರ ಚಿತ್ರಣ ನಮಗೆ ಒದಗಿಸುತ್ತಾರೆ. ಒಂದು ಹಳ್ಳಿಯ ಕುಡಿಯರ ಸಾಮಾಜಿಕ ಬದುಕಿನ ಏಳು-ಬೀಳುಗಳನ್ನು ಸಮರ್ಥವಾಗಿ ದಾಖಲು ಮಾಡುವ ಈ ಕಾದಂಬರಿಯು,  ಒಂದು ಪ್ರಾದೇಶಿಕ ಕಾದಂಬರಿಯ ಎಲ್ಲ ಗುಣಗಳನ್ನು ಮೈಗೂಡಿಸಿಕೊಂಡಿದೆ.  ಅಲ್ಲದೆ ಜೀವನವನ್ನು ಮುಗ್ಧ ಹಾಗೂ ಕಷ್ಟ ಸಹಿಷ್ಣುಗಳಾದ ಮಲೆಕುಡಿಯರ ದೃಷ್ಟಿಕೋನದಿಂದ ಲೇಖಕರು ನೋಡಿರುವುದರಿಂದ,  ಜೀವನದ ಸ್ವರೂಪ, ಸಾಧ್ಯತೆಗಳ ಬಗ್ಗೆ  ಕಾದಂಬರಿ ಮಾಡುವ ಹೇಳಿಕೆಗೆ ಪ್ರಾತಿನಿಧಿಕ ಮಹತ್ವವಿದೆ. ಕುಡಿಯರ ಜೀವನದ ಸಂಕಟಗಳು,  ನೋವುಗಳು ಹಾಗೂ ಮೂಲಭೂತ ಸಮಸ್ಯೆಗಳ ನಡುವೆಯೂ ಬತ್ತಿ ಹೋಗದ ಅವರ ಮಾನವೀಯ ಗುಣಗಳು ಅನಾವರಣಗೊಳ್ಳುವಾಗ ಬದುಕಿನ ಮೂಲ ಸೆಲೆ ಇದೇ ಅನ್ನಿಸದಿರದು. 

ಕಾರಂತರು ಹಳ್ಳಿಗರ ಕಾರ್ಪಣ್ಯದ ಬದುಕನ್ನು ಸಹ್ಯವಾಗಿಸುತ್ತಿರುವ,  ನಿರಂತರವಾಗಿ ಮುಂದುವರಿಸುತ್ತಿರುವ ಪ್ರೇರಣೆಗಳನ್ನೂ  ಶೋಧಿಸಿ ತೋರಿಸುತ್ತಾರೆ ನಮಗೆ.  ಹಣ - ಅಧಿಕಾರ ಉಳ್ಳವರ ಆಸ್ತಿಯಾದರೆ,  ಬಡಜನರ ಆಸ್ತಿ -ಅವರ ದೈಹಿಕ ಶ್ರಮ, ದುಡಿಮೆ, ಹೇಗಾದರೂ ಬದುಕಬೇಕು ಎಂಬ ಅವರ ಅಚಲ ಛಲ, ಎನ್ನುವುದು ಕಾರಂತರ ಅಂಬೋಣ. ಈ ಕಾದಂಬರಿಯಲ್ಲಿ ನಾವು ಮನುಷ್ಯರನ್ನು ಅವರ ಎಲ್ಲಾ ಅವಸ್ಥೆಗಳಲ್ಲಿಯೂ ನೋಡಬಹುದಾಗಿದೆ. ಈ ಉತ್ಪ್ರೇಕ್ಷೆಯಿಲ್ಲದ ಸಹಜ ಬರವಣಿಗೆಯೇ ಕಾರಂತರ ಬರಹಗಳ ಪ್ರಬಲ ಆಕರ್ಷಣೆ.  


ಕಾದಂಬರಿಯ ಮುಖ್ಯವಸ್ತು ಮಲೆಕುಡಿಯರ ಜೀವನಕ್ರಮ.  ಅವರು ನಂಬುವ ಕಲ್ಕುಡ ದೈವ , ಸಂಕ್ರಾಂತಿಗೆ ನಡೆಯುವ ಕೋಲದ ವಿವರಣೆ,  ಅವರು ನಡೆಸುವ ಶಿಕಾರಿಯ ವಿವರಣೆ, ಅವರ ಕುಮರಿ  ಬೇಸಾಯ ಮತ್ತು  ತನ್ನಿಂತಾನೆ ಬೆಳೆಯುವ ಏಲಕ್ಕಿ ಬೇಸಾಯ ಮತ್ತು ಅದರ  ಲಾಭದ ವಿಶ್ಲೇಷಣೆ, ಅವರ ಆಹಾರ- ವಸತಿ,  ಉಡುಗೆ-ತೊಡುಗೆ , ಅವರು ತಮ್ಮ ಗುರಿಕಾರನನ್ನು ಆರಿಸುವ ಕ್ರಮ….ಹೀಗೆ ಎಲ್ಲಾ ವಿಷಯಗಳ ಬಗ್ಗೆ ಪ್ರಸ್ತಾಪಿಸುತ್ತಾರೆ ಕಾರಂತರು. ಈ ವಿಸ್ತ್ರುತ ವಿವರಣೆಯ  ಹಿಂದಿನ ಕಾರಂತರ ಅಧ್ಯಯನ ನಮ್ಮ ಊಹೆಗೂ ನಿಲುಕದ್ದು. ಮಲೆಕುಡಿಯರ ಆರ್ಥಿಕ ಬದಲಾವಣೆಗಳ ಬಗ್ಗೆಯೂ   ತಿಳಿಸುತ್ತಾ , ಅವರು ಜಾತ್ರೆ ನಡೆಸುವ ರೀತಿ , ಅವರು ಬಯಸುವ ಕನ್ನಡಿ, ಬಣ್ಣದ ಬಟ್ಟೆ, ಗಾಜು,  ಕಬ್ಬಿಣದ  ಬಳೆ, ಕಬ್ಬಿಣದ ಪಿಕಾಸಿ, ಬೆಂಕಿಪೊಟ್ಟಣ...ಇವುಗಳನ್ನು ವಿವರಿಸುತ್ತಾ  ಅವರು ನಿಧಾನವಾಗಿ ಬದಲಾವಣೆಗೊಳ್ಳುತ್ತಿರುವುದನ್ನೂ,  ಅದರ ಅನಿವಾರ್ಯತೆಯನ್ನೂ ನಮ್ಮೆದುರಿಗೆ ಇಡುತ್ತಾ ಹೋಗುತ್ತಾರೆ ಕಾರಂತರು. ಆದರೆ ಅಂಕೆಸಂಖ್ಯೆಗಳನ್ನು ತಿಳಿಯದ ಕುಡಿಯರು  ಎಂದೇ ಹೇಳುತ್ತಾ ಕಾರಂತರು, ಪಾತ್ರಗಳ ವಯಸ್ಸನ್ನು ಅಂಕಿಗಳ ಮೂಲಕ ಮತ್ತೆ ಮತ್ತೆ ಉಲ್ಲೇಖಿಸುತ್ತಾ ಸ್ವಲ್ಪ ಕಸಿವಿಸಿ ಉಂಟು ಮಾಡುತ್ತಾರೆ. 

 

ಭಯದ ನೆರಳಲ್ಲೇ ಆರಂಭವಾಗುವ ಕಥೆ ಉದ್ದಕ್ಕೂ ಮೂಢನಂಬಿಕೆಗಳ ಆಚರಣೆಯನ್ನೇ ಹೇಳುತ್ತಾ ಹೋದರೂ, ಕಾರಂತರ ವ್ಯಂಗ್ಯದಿಂದ ಹೊರತಾಗಿ ಉಳಿಯುವುದಿಲ್ಲ.  ಯಾರಿಗೂ ತಿಳಿಯದಂತೆ ತನ್ನ ಒಡಲು ತಣಿಯಲು ಸುಬ್ರಹ್ಮಣ್ಯಕ್ಕೆ ಹೋಗಿ ಬರುವ ಕೆಂಚ,  ಅಳುಕಿನಿಂದಲೇ ದೇವರ ಪಾತ್ರಿಯ  ಎದುರು ನಿಂತಾಗ ಲೇಖಕರು ಈ ರೀತಿ ಹೇಳಿಕೆ ನೀಡುತ್ತಾರೆ ‘ ಬೂದನೊಬ್ಬನಿಗೆ ಗೊತ್ತಿದ್ದ ವಿಷಯವಾದ್ದರಿಂದ, ಅದನ್ನು ಪೂಜಾರಿಯೂ ತಿಳಿದಿರಲಿಲ್ಲ. ಆದಕಾರಣ ಕಲ್ಕುಡ ದೈವವೂ ತಿಳಿಯಲಿಲ್ಲ’ ಎಂದು. ದೈವ ಪಾತ್ರಿಗಳ ಸೋಗಲಾಡಿತನದ ಬಗಗಿನ ಅವರ ಅಸಹನೆ ಇಲ್ಲಿ ಸ್ಪಷ್ಟವಾಗಿ ಪ್ರಕಟಗೊಳ್ಳುತ್ತದೆ. ಜನ ಕಲ್ಕುಡ ನಲ್ಲಿ ಇಟ್ಟ ಅಪರಿಮಿತ ಮೂಢಭಕ್ತಿ ಕಾರಂತರ ಟೀಕೆಗೆ ಈಡಾಗುವುದನ್ನು ಕಾದಂಬರಿಯುದ್ದಕ್ಕೂ ನಾವು ಗಮನಿಸಬಹುದು. ಹಿರಿಮಲೆಯ ಚೋಮನ ಮಗಳಾದ ಗಿಡ್ಡಿ,  ಕ್ರೈಸ್ತಮತಕ್ಕೆ ಬ್ರಗಾಂಜಾನ ದೆಸೆಯಿಂದ ಮತಾಂತರವಾದುದನ್ನು ಕಲ್ಕುಡ ಸೂಕ್ಷ್ಮವಾಗಿ ಪ್ರಸ್ತಾಪಿಸುವ ಬಗ್ಗೆ ಲೇಖಕರು ನೀಡುವ ವಿಶ್ಲೇಷಣೆ ಏನೆಂದರೆ ‘ಈ ವಿಷಯವನ್ನು ಹೆಂಡತಿಯ ಮೂಲಕ ಪೂಜಾರಿ ತಿಳಿದಿದ್ದರಿಂದ ಅದು ಕಲ್ಕುಡ ದೈವಕ್ಕೂ ತಿಳಿಯಿತು’ ಎಂದು.  ಒಂದು ಅಂದಾಜಿನ ಭವಿಷ್ಯ ಹೇಳುವ ಕವಡೆ ಸನ್ಯಾಸಿಯೂ  ಅವರ ಟೀಕೆಗೆ ಗುರಿಯಾಗುತ್ತಾನೆ.



ಕಾದಂಬರಿಯ ಮುಖ್ಯಪಾತ್ರವಾಗಿ ಕರಿಯ ನಮ್ಮ ಮನದಲ್ಲಿ ಅಚ್ಚಳಿಯದೆ ಉಳಿಯುತ್ತಾನೆ.   

ಬದಲಾವಣೆಗಳಿಗೆ ಒಗ್ಗದ, ಬಗ್ಗದ ಕರಿಯ , ತನ್ನ ವಂಶದ ಕುಡಿಯನ್ನು ರಕ್ಷಿಸುವ ಸಲುವಾಗಿ ತನ್ನ ನೆಚ್ಚಿನ ದೈವವನ್ನೂ ಎದುರಿಸುವ ಧೈರ್ಯ ತೋರುವಾಗ ಕಾರಂತರ ಆಶಯದ ಪ್ರತೀಕವೆಂಬಂತೆ ತೋರುತ್ತಾನೆ.  ಕರಿಯ ಒಂದು ರೀತಿಯಲ್ಲಿ ತಬ್ಬಲಿಯಾದರೂ ನಿಸರ್ಗದ ಕೈಗೂಸಾಗಿ ಮಾತೃಪ್ರೇಮವನ್ನು ಪಡೆಯುತ್ತಾನೆ. ಬಾಲ್ಯದಲ್ಲಿ ತನ್ನ ಒಡನಾಡಿ ಕಾಳನೊಂದಿದಗೆ ಇಡೀ ಕಾಡನ್ನೇ ಅಲೆಯುವ ಆತನ ಪ್ರಕೃತಿ ಪ್ರೇಮವನ್ನು ವರ್ಣಿಸುವಾಗ ಕಾರಂತರ ವರ್ಣನಾ ಸಾಮರ್ಥ್ಯದ ಬಗ್ಗೆ ಹೆಮ್ಮೆ ಎನಿಸುತ್ತದೆ.  ಕರಿಯ ಅನಾಥನಾದರೂ ಕಾಡು ಮನುಷ್ಯರ ನಡುವಿನ ನಿಜ ಮನುಷ್ಯನಾಗಿ ಬೆಳೆಯುವುದು ತೃಪ್ತಿಕರ ಎನಿಸುವುದು. ಆತನ ಹಾಗೂ ಕಾಟು ನಾಯಿಯ ಸಂಬಂಧ, ಅತ್ಯುನ್ನತ ‘ಗುರಿಕಾರ’ ಪದವಿಯನ್ನು ಅಲಕ್ಷಿಸುವ ಮಟ್ಟಿಗೆ ಬೆಳೆಯುವ ಆತನ ‘ಕೆಂಚ’ ಆನೆಯ  ಬಗೆಗಿನ  ಮಮತೆ, ಕುಡಿಯರ  ನೀತಿಗೆ ವಿರೋಧವಾಗಿಯೂ ಬೇರೊಬ್ಬರ ಉರುಳಲ್ಲಿದ್ದ ಹರಿಣವನ್ನು ರಕ್ಷಿಸುವ ಅವನ ಸಹಾನುಭೂತಿ,  ಗಿಡ್ಡಿಯು ಕ್ರೈಸ್ತ ಮತಕ್ಕೆ ಮತಾಂತರಳಾಗಿ  ಹಿರಿಮಲೆಗೆ ಹಿಂದಿರುಗಿದ್ದೆೇ  ಆದರೂ ಅವಳನ್ನು ಮದುವೆಯಾಗುವ ತಿಮ್ಮನಿಗೆ ಪ್ರೋತ್ಸಾಹ ನೀಡುವ ಅತನ ಹೃದಯ ವೈಶಾಲ್ಯತೆ, ಇಡೀ ಕುಡಿಯರ ಸಮುದಾಯದ ಕೋಪಕ್ಕೆ ತುತ್ತಾಗಿಯೂ ತಿಮ್ಮ ಗಿಡ್ಡಿಯರ ಬದುಕು ಕಟ್ಟಲು  ನೆರವಾಗುವ ಆತನ ಮಾನವೀಯತೆ,  ಕರಿಯನನ್ನು ಮರೆಲಾರದ ಪಾತ್ರವನ್ನಾಗಿಸುತ್ತದೆ. ಕಾರಂತರು ಅವರ ನಿಲುವುಗಳನ್ನೆಲ್ಲಾ ಕರಿಯನ ಪಾತ್ರದ ಮೂಲಕ ಸಮರ್ಥಿಸಿಕೊಂಡಂತೆ ಭಾಸವಾಗುತ್ತದೆ.


ಕೆಂಚ ವಯೋವೃದ್ಧನಾಗಿಯೂ ಎಲ್ಲರನ್ನೂ ಸಾಧ್ಯವಾದಷ್ಟು ಸಂಭಾಳಿಸುವ ವ್ಯಕ್ತಿಯಾಗಿ ಸ್ವಲ್ಪಮಟ್ಟಿಗೆ ಚಿಂತನಯೋಗ್ಯವಾದ ಮನಸ್ಸುಳ್ಳವನಾಗಿ ಕಾಣಿಸಿಕೊಂಡು, ವಾತ್ಸಲ್ಯಮೂರ್ತಿಯಾಗಿ ನಿಲ್ಲುತ್ತಾನೆ. ಆದುದರಿಂದಲೇ ಆತನ ಸಾವು ಕರಿಯನಿಗೆೇ ಅಲ್ಲದೆ ನಮಗೂ ತಬ್ಬಲಿತನ ಮೂಡಿಸುತ್ತದೆ. ಆದರೆ

ಕುರುಡು ನಂಬಿಕೆಗೆ ಜೋತು ಬಿದ್ದು ತನ್ನ ಸೊಸೆಯ ಸಾವಿಗೆ ಅಪ್ರತ್ಯಕ್ಷವಾಗಿ ಕಾರಣನಾಗುವ ಕೆಂಚನ ಬಗ್ಗೆ ಮರುಕ ಹುಟ್ಟುತ್ತದೆ. ಈ ಸಂದರ್ಭದಲ್ಲಿ, ನಮಗೆ ಕುರುಡು ನಂಬಿಕೆಗಳಿಂದಾಗುವ ಅವಘಡ, ಅನಾಹುತದ ಬಗ್ಗೆ ಖೇದವೆನಿಸಿದರೂ, ಆ ಭಯದ ಕಾರಣದಿಂದಲಾದರೂ ಅವರ ನೈತಿಕ ಚೌಕಟ್ಟು ಬಿಗಿಯಾಗಿ ಉಳಿಯುವುದರ ಬಗ್ಗೆ  ಹಾಗೂ ಹಿಂಸೆ, ಅಧರ್ಮಗಳ ಬಗ್ಗೆ ಅವರಲ್ಲಿ ಉಂಟಾಗುವ ಭಯ ಮತ್ತು ಒಳ್ಳೆಯದರತ್ತ ಅವರ ಆಸಕ್ತಿಯನ್ನು ಹೊರಳಿಸುವ ಆ ಮೂಢನಂಬಿಕೆಯ ತಾಕತ್ತನ್ನು ಒಪ್ಪದೇ ಇರಲಾಗುವುದಿಲ್ಲ. ಇದನ್ನು ತನ್ನ ಚಿಕ್ಕಿಯ ಅನೈತಿಕ ಸಂಬಂಧದಿಂದಲೇ ಆಕೆಯ ಸಾವು ಸಂಭವಿಸಿತು ಎಂದು ಪಶ್ಚಾತ್ತಾಪಪಡುವ ತುಕ್ರನ ಪಾತ್ರದಲ್ಲಿ ನಾವು ಗಮನಿಸಬಹುದು. ಅಂಕೆಶಂಕೆಯಲ್ಲಿಡಲೆಂದೇ ಪ್ರಾರಂಭವಾಗುವ ನಂಬಿಕೆಯ ಆಚರಣೆಗಳು,  ಮೂಢನಂಬಿಕೆಯ ಹಂತಕ್ಕೆ ಹೋಗಿ ನಿಲ್ಲುವುದು ದುರಂತವಷ್ಚೇ.


ತಿಮ್ಮ ಖಂಡಿತವಾಗಿಯೂ ಒಬ್ಬ ನಿಷ್ಟುರ ಹಾಗೂ ಸಹೃದಯದ ಮನುಷ್ಯನಾಗಿ ಚಿತ್ರಿಸಲ್ಪಟ್ಟಿದ್ದಾನೆ.  ಕಾರಂತರು, ಶೋಷಿತ ವರ್ಗದವರ ಒಂದು ಪ್ರತಿಭಟನೆಯ ಕೂಗಿನಂತೆ ಈ ಪಾತ್ರ ಪೋಷಣೆ ಮಾಡಿದ್ದಾರೆ.  ಅನ್ಯಾಯ ಸಹಿಸದ ಕೆಳಗಿನ ವರ್ಗದ ಮನುಷ್ಯನಾಗಿ ನಮ್ಮಿಂದ ಭೇಷ್ ಅನ್ನಿಸಿಕೊಳ್ಳುತ್ತಾನೆ ತಿಮ್ಮ . ಗುರಿಕಾಕರಿಕೆಯ ವಿಷಯದಲ್ಲಿ ಧಣಿಯನ್ನೇ  ಎದುರಿಸುವ ತಿಮ್ಮ, ಅನ್ಯಾಯವನ್ನು ಪ್ರತಿಭಟಿಸುತ್ತಾ ಮುಂದುವರೆದು ಕೊನೆಗೂ ಅನಾಮಿಕನಂತೆ  ಬದುಕು ನಡೆಸಬೇಕಾಗಿ ಬರುವುದು ಉನ್ನತವರ್ಗದ ದಬ್ಬಾಳಿಕೆಯಿಂದ. ಆದರೂ ನೈತಿಕ ಅಧಃಪತನ ಒಪ್ಪದ ಆತ,  ಕೂಳಿನ ಎಂಜಲು ಆಳಾಗುವುದನ್ನು ಧಿಕ್ಕರಿಸಿ,  ತನ್ನ ಮಲೆಯನ್ನೇ ಬಿಟ್ಟು ಬಿಡುವ ಸಂದರ್ಭದಲ್ಲಿ,  ಖಂಡಿತವಾಗಿಯೂ ನಮ್ಮಲ್ಲಿರುವ ಬಡವ-ಬಲ್ಲಿದರ ನಡುವಿನ ಅನಾಹುತಕಾರಿ ಅಂತರದ ಬಗ್ಗೆ ತಿರಸ್ಕಾರ ಹುಟ್ಟುತ್ತದೆ.  ಶೋಷಿತವರ್ಗ ಎಷ್ಟೇ  ಪ್ರತಿಭಟಿಸಿದರೂ ಅವರಿಗೆೇ ಮಾರಕವಾಗುವ ಪರಿಸ್ಥಿತಿ  ಸಲ್ಲದು ಎಂಬ ಕಾರಂತರ ಯಾವತ್ತೂ ಪ್ರತಿಪಾದನೆ ಇಲ್ಲಿ ಧ್ವನಿಸುತ್ತದೆ.


ಇನ್ನು ತಿರುಮಲ ಭಟ್ಟರ ಬಗ್ಗೆ ಎರಡು ಮಾತು ಅತ್ಯಗತ್ಯ. ಆತ ಒಂದು ಪ್ರಬಲ ವರ್ಗದ,  ದಾರ್ಷ್ಟ್ಯ ಪ್ರವೃತ್ತಿಯಿಂದ ಹಾಗು ವಿಲಾಸೀತನದಿಂದ ಹಳ್ಳಿ ಜನರನ್ನು ದುರುಪಯೋಗಪಡಿಸಿಕೊಳ್ಳುವ ಧೂರ್ತನಾಗಿ    ಕಾಣಿಸಿಕೊಳ್ಳುತ್ತಾನೆ.  ಆತನ ಸರ್ವಾಧಿಕಾರಿ ನರಿಬುದ್ಧಿ,  ನಿಷ್ಪಾಪಿ ಜನರಲ್ಲಿ ಆತ ಕೆರಳಿಸುವ ವಿಷಯ ಲೋಲುಪತೆ ಹಾಗೂ ಒಳಜಗಳ ಇವುಗಳಿಂದ ಆತ ಖಳನಾಯಕನ ಪಟ್ಟವನ್ನೇ ಪಡೆಯುತ್ತಾನೆ.  ಕಾರಂತರು ಆತನನ್ನು ಒಂದು ಸಾಮಾಜಿಕ ವರ್ಗಗಳಲ್ಲಿ ಉನ್ನತ ವರ್ಗವೊಂದರ ಪ್ರತಿನಿಧಿಯಾಗಿ ಚಿತ್ರಿಸಿ, ನಮ್ಮಲ್ಲಿ ಆ ವರ್ಗದವರ ದಬ್ಬಾಳಿಕೆ, ಸರ್ವಾಧಿಕಾರಿ ಪ್ರವೃತ್ತಿಯ ಬಗ್ಗೆ ರೋಷ ಉಕ್ಕಿಸುವುದರಲ್ಲಿ ಸಫಲರಾಗುತ್ತಾರೆ.   


ಇನ್ನು ಕೆಂಪಿ ಹೆಣ್ಣಿಗೆ ಹೆಣ್ಣೇ ಶತ್ರು ಎಂಬುದನ್ನು ತಾನೆೇ ನಿದರ್ಶನವಾಗಿ ಪ್ರತಿಪಾದಿಸುವಂತೆ ಕಂಡುಬರುತ್ತಾಳೆ. ತನ್ನ ಸೌಂದರ್ಯಕ್ಕೆ ತಾನೇ ಮರುಳಾಗುವ ಕೆಂಪಿ, ಅಸೂಯೆಯಿಂದ ಗಿಡ್ಡಿಗೆ  ವಿಷವಿಕ್ಕುವ ಸಂಕುಚಿತ ಪಾತ್ರವಾಗಿ ಹೇವರಿಕೆ ಹುಟ್ಟಿಸುತ್ತಾಳೆ.  ಆದರೆ ಗಿಡ್ಡಿಯ ಪಾತ್ರ ತನ್ನದೇ ಆದ ರೀತಿಯಲ್ಲಿ ನಮ್ಮ ಅನುಕಂಪ ಗಿಟ್ಟಿಸುವಲ್ಲಿ ಸಫಲವಾಗುತ್ತದೆ.  ಆಕೆಯು  ಕ್ರೈಸ್ತ ಮತಕ್ಕೆ ಮತಾಂತರ ಹೊಂದುವ ಸಂದರ್ಭದಲ್ಲಿ ಬರುವ ವಲ್ಲಿ ಬ್ರಗಾಂಜ, ಚಿನುವಾ ಅಚಿಬೆಯ ‘ Things Fall Apart’ ನ ಕ್ರೈಸ್ತ ಪಾದ್ರಿಯ  ಹೋಲಿಕೆ ಪಡೆದರೆ ಗಿಡ್ಡಿ ಅಲ್ಲಿಯ  ‘ನೋಯಿ’ಯನ್ನು ಹೋಲುತ್ತಾಳೆ. ಆದ್ದರಿಂದಲೇ  ಆಕೆ ಮಲೆಗೆ  ಹಿಂತಿರುಗಿದಾಗ ತನ್ನ ಸಮಾಜದ ಕುಂದುಕೊರತೆಗಳೇ ಅವಳಿಗೆ  ದೊಡ್ಡದಾಗಿ ಕಾಣಿಸುತ್ತದೆ. ಆಕೆಯ ದೈರ್ಯ, ಮಮತೆ ಒಳ್ಳೆಯತನ ಅವಳ ಕೆಡುಕನ್ನು ಮರೆಮಾಚುವಲ್ಲಿ  ಸಫಲವಾಗಿದೆ.  ಕೆಂಪಿಯ ಸಾವು ನಮ್ಮನ್ನು ಚಿಂತನೆಗೆ ಗುರಿಮಾಡುತ್ತದೆ.  ಕಾಳನ ಪಾತ್ರ ಕಾದಂಬರಿಯಲ್ಲಿ ಸ್ವಲ್ಪ ಸೊರಗಿದಂತೆ  ಕಂಡರೂ ಕೊನೆಯಲ್ಲಿ ಪುಷ್ಟಿಗೊಳ್ಳುತ್ತದೆ.  ಒಟ್ಟಿನಲ್ಲಿ ಎಲ್ಲಾ ಪಾತ್ರಗಳೂ  ಅವುಗಳ ಇತಿಮಿತಿಯಲ್ಲಿ ಪರಿಪೂರ್ಣವಾಗಿ ನಿಂತಿವೆ.ನಿಸರ್ಗದ ಕ್ರೌರ್ಯವನ್ನೇ  ಆಗಲಿ ಸಮಾಜದ ಕ್ರೌರ್ಯವನ್ನೇ ಆಗಲಿ ತಿಮ್ಮ, ಗಿಡ್ಡಿ , ಕರಿಯನಂತಹ ಸಾತ್ವಿಕರೂ  ದೇವರ ಅವಲಂಬನೆಯಲ್ಲಿ ಎದುರಿಸುವುದಿಲ್ಲ ಎಂಬ ಅಂಶ ಇಲ್ಲಿ ಮುಖ್ಯವಾಗುತ್ತದೆ. ತನ್ನನ್ನು ಆವರಿಸಿದ ಎಲ್ಲಾ ತೊಂದರೆ ತೊಡಕುಗಳ ನಡುವೆಯೂ ನಿಜವಾದ ಅರ್ಥದಲ್ಲಿ ಮನುಷ್ಯನಾಗಿ ಕಾಣಿಸುವ, ಮಲೆಯ ಮಕ್ಕಳಲ್ಲಿ ಒಬ್ಬನಾದ ಕುಡಿಯ- ಕರಿಯನಿಂದಾಗಿ ‘ಕುಡಿಯರ ಕೂಸು’ ಅನ್ವರ್ಥ ವಾಗುತ್ತದೆ.


ಕುಗ್ಗದ ನಿಷ್ಠುರತೆ , ತೀಕ್ಷ್ಣವಿಚಾರಮಂಥನ ಕಾರಂತರ ಕೃತಿಗಳ ಹೆಗ್ಗುರುತು. ಕಾರಂತರು ಈ ಕಾದಂಬರಿಯಲ್ಲಿ, ಕೇವಲ ಒಂದು ನಿರ್ದಿಷ್ಟ ಸಮುದಾಯದ ನೋವು-ನಲಿವುಗಳ ಕಥೆಯನ್ನಷ್ಟೇ ಅಲ್ಲ , ಒಟ್ಟೂ ಮನುಷ್ಯನ ಅದಮ್ಯ  ಜೀವನೋತ್ಸಾಹದ ಸ್ವರೂಪವನ್ನು ಧ್ವನಿಸುತ್ತಾ, ಸುಧಾರಣೆ ಎಲ್ಲಿ ಆದರೆ ಬದುಕು ಸುಖಮುಖವಾಗಬಹುದು ಎಂಬುದನ್ನೂ ಅಲ್ಲಲ್ಲೇ ಸೂಕ್ಷ್ಮ ಜನವಾಗಿ ತಿಳಿಸುತ್ತಾ ನಮ್ಮನ್ನು ಚಿಂತನೆಗೆ ಹಚ್ಚುತ್ತಾರೆ.  


ಆರ್. ಸುಮ

ಕೆನರಾ ಬ್ಯಾಂಕ್

ರಾಜರಾಜೇಶ್ವರಿನಗರ ಶಾಖೆ

ಬೆಂಗಳೂರು-೫೬೦೦೯೮.