Wednesday 17 May 2017

ಸಂತೆಯಲ್ಲಿ ಗುನುಗಿದ ಹಾಡು : ರಾಧೆ ರಾಧೆ ಮನವನು ತಣಿಸಿದೆ ನೀ..




(@)(@)(@)



ಸಂತೆಯಲ್ಲಿ ಗುನುಗಿದ ಹಾಡು : ರಾಧೆ ರಾಧೆ ಮನವನು ತಣಿಸಿದೆ ನೀ..
*** *** ***
ರಾಧೆ ರಾಧೆ ಮನವನು ತಣಿಸಿದೆ ನೀ..
ರಾಧೆ ರಾಧೆ ಪ್ರೀತಿಯ ಉಣಿಸಿದೆ ನೀ..

ನಿನ್ನಯ ಪ್ರೀತಿಗೆ ಹೂಬನ ಅರಳಿದೆ..
ನಿನ್ನಯ ಸ್ನೇಹಕೆ ದುಂಬಿಯು ಹಾಡಿದೆ..
ಕೊಳಲಿನ ನಾದಕೆ ನೀ ಜೊತೆಯಾದೆ..
ಕಿರುಬೆರಳನು ಹಿಡಿಯುತ ನೀ ನಡೆದೆ..

 ರಾಧೆ ರಾಧೆ ಮನವನು ತಣಿಸಿದೆ ನೀ...

ಸೋಲಲಿ ನಿಂತು ಸಲಹೆಯ ನೀಡಿದೆ..
ನೋವಲಿ ನಿಂತು ಬೆಂಬಲ ನೀಡಿದೆ..
ಹೆಂಗಳೆಯರ ಮನ ಗೆದ್ದವ ನಾನು..
ನನ್ನೀ ಮನವ ಗೆದ್ದವಳು ನೀನು..

ರಾಧೆ ರಾಧೆ ಮನವನು ತಣಿಸಿದೆ ನೀ..

ನಮ್ಮಯ ಪ್ರೀತಿಯು ಜನರಿಗೆ ಮಾದರಿ
ನೋವನು ಮರೆಸುವ ಪ್ರೀತಿಯು ಸಿಗಲಿ
ನಮ್ಮಯ ನಡತೆಯು ಲೋಕಕೆ ಮಾದರಿ
ಸ್ವಾರ್ಥವು ಇಲ್ಲದೆ ಪ್ರೀತಿಯ ಮಾಡಲಿ

📝 ಸಿಂಧು ಭಾರ್ಗವ್ 🍁


Tuesday 16 May 2017

ಕವನ: ಆರೋಗ್ಯದ ಕಡೆ ಗಮನ ನೀ ಕೊಡು

ಕವನ: ಆರೋಗ್ಯದ ಕಡೆ ಗಮನ ನೀ ಕೊಡು


*** *** ***
ನಾನಿನ್ನು ಹೊರಡುವೆ ಅಳದಿರು ಉಸಿರೆ..
ನಾನಿನ್ನು ಹೊರಡುವೆ ಕೊರಗದಿರು ಉಸಿರೇ..
ಈ ವಿರಹ ಅನಿವಾರ್ಯ, ಬೇಕಂತಲೇ ಅಲ್ಲ..
ನಮ್ಮ ಕನಸೊಂದು ಬರಲಿಕ್ಕಿದೆಯಲ್ಲ..

ಕಾಯಬೇಕು, ದೂರವಿರಲೇ ಬೇಕು..
ತವರು ಮನೆಯಲಿ ನಾಲ್ಕು ದಿನ ಕಳೆಯಲೇ ಬೇಕು..

ನಾನು ಮಾಡಿದ ಕೈರುಚಿ ನೆನಪಾಗಬಹುದೀಗ..
ನಾನಾಡಿದ ಜಗಳ ಕಾಡುವುದು ನಿನಗೀಗ..

ಸಾಮೀಪ್ಯ ಬಯಸಲಾಗೊಲ್ಲ,ಕೈಬಳೆ ಸದ್ದಿಲ್ಲ ..
ರೇಗಿಸಲು ನಾನಿಲ್ಲ, ಮುದ್ದಿಸಲೂ ಜೊತೆಗಿಲ್ಲ..

ನನ್ನ ಕೆಲಸಗಳೊಂದಿಷ್ಟು ಹೊರೆಯಾಗಬಹುದೀಗ
ಮನೆಯಲಿ ಖಾಲಿತನ ಕಾಡಬಹುದೀಗ..

ಹೊತ್ತೊತ್ತಿಗೆ ಊಟವ ನೀಮಾಡು
ರಾತ್ರಿಯ ನಿದಿರೆಯ ತಪ್ಪಿಸದಿರು

ಕೋಪವು ಬರುವುದು, ರೇಗುವೆ ನಿನ್ನ ಮೇಲೆ..
ಪ್ರೀತಿಯು ಕಡಿಮೆ ಆದಂತೆ ಅನಿಸಿದಾಗ ನನ್ನ ಮೇಲೆ..

ನಾಮಾಡಿದ ತಪ್ಪನು ನೀ‌ ಕ್ಷಮಿಸು ಮನವೇ....
ದುಡುಕಿಯಾಡಿದ ಮಾತನು ಮರೆತುಬಿಡು ಮನವೇ..

ನಾನಿನ್ನು ಹೊರಡುವೆ ಅಳದಿರು ಉಸಿರೆ..
ನಾನಿನ್ನು ಹೊರಡುವೆ ಕೊರಗದಿರು ಉಸಿರೇ..

- ಸಿಂಧು ಭಾರ್ಗವ್.

Monday 15 May 2017

ಲೇಖನ : "ತವರುಮನೆ ದೀಪ ನಮ್ಮ ತಾಯಿಯ ರೂಪ"

ಲೇಖನ : "ತವರುಮನೆ ದೀಪ ನಮ್ಮ ತಾಯಿಯ ರೂಪ"

Some Photos Of My Family....






ಅಮ್ಮನ ಹಾಗೆ ಯಾರೂ ಇಲ್ಲ..ಅಮ್ಮನಂತೆ ಎಲ್ಲೂ ಇಲ್ಲ. ಮೊದಲಿಗೆ ಎಲ್ಲಾ ತಾಯಿಯಂದಿರಿಗೆ ಅಮ್ಮಂದಿರ ದಿಬಾಚರಣೆಯ ಶುಭಹಾರೈಕೆಗಳು.
ಮಗುವಿನ ಮೊದಲ ಅಳುವ ಆಸ್ವಾದಿಸುವ, ಜಗವ ತೋರಿಸುವ,ನಗುವ ತರಿಸುವ ನೋವ ಮರೆಸುವ "ಅಮ್ಮ".....
***
ಏನ ಹೇಳಲಿ ಅವಳ ಬಗ್ಗೆ. ತ್ಯಾಗವನ್ನೇ ಮೈಗಂಟಿಸಿಕೊಂಡವಳು
ವಯಸ್ಸೇನು ಮುದುಕಿಯದೇ..? ಎಲ್ಲಾ ಸುಖವ ಕಂಡವಳೇ? ಮಕ್ಕಳು ಮರಿಗಳನ್ನ ಎತ್ತಿ ಆಡಿಸಿದವಳೇ.? ಎಳೆವಯಸ್ಸಿನಲ್ಲಿಯೇ ಹೊಂದಿಕೊಳ್ಳುವ ಗುಣವ ಬೆಳೆಸಿಕೊಂಡವಳು.‌ ಕರಿಮಣಿ ಸರವ ಅಡವಿಡಲು ಕೊಟ್ಟು ಪತಿರಾಯ ಏನೋ ಹೊಸ ಜೀವನವ ಶುರುಮಾಡುವ ,ಹೊಸ ಉದ್ಯೋಗ ಮಾಡಲು ಹೊರಟಿರುವ ಎಂಬ ನಂಬಿಕೆ ಇಟ್ಟಿದ್ದವಳು. ರೇಶಿಮೆ ಸೀರೆಗೆ ಆಸೆ ಪಡದ, ಕಾಟನ್ ಸೀರೆಯ ಸೊಸೈಟಿಯಿಂದ ತಂದು ಉಡುತ್ತಿದ್ದಳು. ತವರಿನಲ್ಲಿ ಚಿನ್ನದ ಒಡವೆ ಎಲ್ಲೇ ? ಎಂದು ಕೇಳಬಾರದಲ್ಲ,ಹಾಗಾಗಿ ಉಮಾಗೋಲ್ಡ್ ಸರ ಮತ್ತು ಬಳೆಗಳನ್ನು ತೊಡುತ್ತಿದ್ದವಳು‌. ಸ್ವಲ್ಪವೂ ಗಂಡನ ಮೇಲೆ ಅಸಮಧಾನ ತೋರಿಸುತ್ತಿರಲಿಲ್ಲ. ಜಗಳ ಮಾಡುತ್ತಿರಲಿಲ್ಲ. ಗಂಡನನ್ನು ದೂರುತ್ತಿರಲಿಲ್ಲ. ಮಕ್ಕಳ ಹತ್ತಿರವೆಲ್ಲ ತಂದೆಯ ಬಗ್ಗೆ ದೂರು ಹೇಳುತ್ತಿರಲಿಲ್ಲ. ಕೈಹಾಕಿದ ಕೆಲಸವೆಲ್ಲ ಮಸಿಯಾಗುತ್ತಿದ್ದರೂ ಏನೋ ಒಂದು ನಂಬಿಕೆಯಿಂದ ಗಂಡನಿಗೂ ಸಮಾಧಾನ ಮಾಡಿ "ನಾಳೆಯ ಜೀವನ ನಮ್ಮದೇ..." ಎಂಬ ಆತ್ಮವಿಶ್ವಾಸ ತುಂಬುತ್ತಿದ್ದವಳು. ತನ್ನ ಗಂಡನನ್ನು ಯಾರ ಎದುರಿಗೂ ಹೆಚ್ಚಾಗಿ ತವರು ಮನೆಯಲ್ಲಿ ಅಕ್ಕ ತಂಗಿಯರ ಎದುರಿಗೆ ಕಡಿಮೆ ಎಂಬಂತೆ ಮಾತನಾಡುತ್ತಿರಲಿಲ್ಲ. ಅವರಿಗೂ ಮಾತನಾಡಲು ಬಿಡುತ್ತಿರಲಿಲ್ಲ.ಹಾಗೇನಾದರೂ ಹೇಳಿದರೆ ಜಗಳಕ್ಕೇ ನಿಲ್ಲುತ್ತಿದ್ದಳು.
***
ಅಮ್ಮ ಏನೆಲ್ಲ ನಮಗೆ ಕಲಿಯಲು ಬಿಟ್ಟಳು. ಮಕ್ಕಳ ಜೀವನಕ್ಕಿಂತ ಇನ್ನೊಬ್ಬರ ಸತಿಯಾಗಿ ಬಾಳಸಂಗಾತಿಯಾಗಿ ಹೇಗೆ ಬದುಕಬೇಕು ಎಂಬುದನ್ನೇ  ತೋರಿಸಿಕೊಟ್ಟವಳು. ಕಲಿಸಲಿಲ್ಲ‌. ಹತ್ತಿರ ಕುಳ್ಳಿರಿಸಿ ಏನೆನ್ನನ್ನೂ ಹೇಳಿಕೊಡಲಿಲ್ಲ‌ . ಅವಳು ನಡೆದುಕೊಂಡದ್ದೇ ಹಾಗೆ. ಕಷ್ಟದಲ್ಲಿ ಜೀವನ ನಡೆಸುವುದಿದೆಯಲ್ಲ, ಅದಕ್ಕೂ ಮೇಲಾಗಿ ಮಕ್ಕಳಿಗೆ ಗಂಡ-ಹೆಂಡಿರ ಹಣಕಾಸಿನ ಕಷ್ಟ ಗೊತ್ತಾಗದಂತೆ ಜೀವನ ನಡೆಸುವುದಿದೆಯಲ್ಲ  ನಿಜಕ್ಕೂ ಅಧ್ಬುತ. ಗಟ್ಟಿಗಿತ್ತಿ. ಧೈರ್ಯವಂತೆ. ಕೈಯಲ್ಲಿ ಹಣ ಬೇಕಾಗುವಷ್ಟು ಇಲ್ಲದಿದ್ದರೂ ಮಕ್ಕಳ ಬೇಕುಬೇಡಗಳನ್ನು ಪೂರೈಸುವುದು ನಿಜಕ್ಕೂ ಒಂದು ಸವಾಲು. ಒಂದು ಮೂವತ್ತು ವರುಷದ ಹಿಂದೆ ಹೆಚ್ಚಿನವರ ಜೀವನ ಹೀಗೆ ಇದ್ದಿರುತ್ತದೆ. ಅವರ ಮಕ್ಕಳು ಹೀಗೆ ಯೋಚಿಸುವವರಾಗಿರುತ್ತಾರೆ. ಬಡತನದ ,ಕಷ್ಟದ ಜೀವನವೇ ಆಗೆಲ್ಲ ಇದ್ದಿತ್ತು. ಅದೂ ಮೊದಲೆರಡು ಮಕ್ಕಳು ಜಾಸ್ತಿಯೇ ಜೀವನವನ್ನು ಬಹಳ ಹತ್ತಿರದಿಂದ ಅಪ್ಪ ಅಮ್ಮ ನಿಂದ ಕಲಿತಿರುತ್ತಾರೆ. ಅಂತವರಿಗೆ ಈಗ ಬದುಕು ಕಟ್ಟಿಕೊಳ್ಳಲು ಕಷ್ಟವೆನಿಸುವುದಿಲ್ಲ. ಹೊಂದಾಣಿಕೆ, ಅನ್ಯೋನ್ಯತೆ, ಪಾರಸ್ಪರಿಕ ಅರ್ಥಮಾಡಿಕೊಳ್ಳುವಿಕೆ, ನಂಬಿಕೆ, ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಗಂಡ ಎಂಬ ಪ್ರೀತಿ , ಅವ ನನ್ನವನು ಎಂಬ ಪ್ರೀತಿ ಬಾಳ ಪಯಣವನ್ನು ಇನ್ನಷ್ಟು ಸಂತೋಷದಿಂದ ನಡೆಸುತ್ತಿರುತ್ತದೆ.ಅಷ್ಟೆ ಬೇಕಾಗಿರುವುದು.
***
ಈಗಿನ ಜನರೇಷನ್ (ಕಾಲದ) ಮಕ್ಕಳಲ್ಲಿ ಪಾರಸ್ಪರಿಕ ನಂಬಿಕೆ ಎಂಬುದೇ ಇರುವುದಿಲ್ಲ. ಅದಕ್ಕಿಂತಲೂ ಜಾಸ್ತಿ ತಾನೂ ಓದಿದ್ದೇನೆ, ಉದ್ಯೋಗಸ್ಥೆ.ಒಂಟಿಯಾಗಿ ಜೀವಿಸಬಲ್ಲೆ, ನಾನು ಯಾರ ಸಹಾಯ ಇಲ್ಲದೆಯೂ ಬದುಕಬಲ್ಲೆ ಎಂಬ ಅಹಂ ತಲೆಯಲ್ಲಿ ಕುಣಿದಾಡುತ್ತಿರುತ್ತದೆ‌. ಹೊಂದಿಕೊಂಡು ಹೋಗಬೇಕು ಎಂಬ ಪದಕ್ಕೆ ಬೆಲೆ ಕೊಡುವುದಿಲ್ಲ. ಅರ್ಥವೂ ಗೊತ್ತಿರುವುದಿಲ್ಲ. ಚಿಕ್ಕಚಿಕ್ಕ ವಿಷಯಕ್ಕೂ ತಪ್ಪು ಕಂಡು ಹಿಡಿಯುವುದು, ಸಂಗಾತಿಯಿಂದ ಬಿಡುಗಡೆ ಪಡೆಯುವುದರ ಬಗ್ಗೆಯೇ ಯೋಚಿಸುತ್ತಾ ಇರುತ್ತಾರೆ. ಜೊತೆಗೆ ಕೂಡಿ ಬಾಳಬೇಕೆನ್ನುವ ಆಸೆ ಕನಸುಗಳು ಇರುವುದಿಲ್ಲ. ಅವರಿಗೆ ನಾವು ಏನೂ ಹೇಳಲೂ ಆಗುವುದಿಲ್ಲ. ಕೇಳಿದರೆ 'ಕಾಲ ಬದಲಾಗಿದೆ, ನಿಮ್ಮಹಾಗೆ 1947ನಲ್ಲೇ ಯಾರು ಇರಲು ಬಯಸೋದಿಲ್ಲ' ಎನ್ನುವರು.ಎಂತಹ ಹಾಸ್ಯಾಸ್ಪದ. ಕಾಲ ಬದಲಾಗಿಲ್ಲ. ಮನಸ್ಥಿತಿ ಬದಲಾಗಿದೆ. ಅಮ್ಮನ ಒಮ್ಮೆ ನೆನಪು ಮಾಡಿಕೊಂಡರೆ ಅವಳ ತ್ಯಾಗ ಅವಳು ಪಟ್ಟ ಕಷ್ಟ ಒಮ್ಮೆ ನೆನಪು ಮಾಡಿಕೊಂಡರೆ ಹೀಗೆ ಹೇಳಲು ಬರುವುದಿಲ್ಲ ಅನ್ನಿಸುತ್ತದೆ.

- ಸಿಂಧು ಭಾರ್ಗವ್.

Saturday 13 May 2017

ಕವನ : ಬೋಳು ಭಾವನೆ

ಕವನ : ಬೋಳು ಭಾವನೆ



ಭಾವನೆಗಳನ್ನೆಲ್ಲ ಕಳಚಿಟ್ಟಿದ್ದೇನೆ..
ಕೆಲವನ್ನು ನೆಲದೊಳಗೆ,
ಹಲವನ್ನು ಮನದೊಳಗೆ
ಮುಚ್ಚಿಟ್ಟಿದ್ದೇನೆ..

ಮಳೆಯನ್ನೇ ಕಾಯುತಿರುವೆ
ಮೊಳಕೆಯೊಡೆಯ ಬಹುದು..
ಮನ ತಣಿಯುವುದ ನೋಡುತಿರುವೆ
ಕನಸು ಚಿಗುರಬಹುದು..

ಪ್ರೀತಿಯ ನಾಯಕನಾತ
ಮರೆತು ಹೋಗಿರುವ..
ಮನದ ನಾವಿಕನಾತ
ತೊರೆದು ಸಾಗಿರುವ..

ನನಗೀಗ ಅಲೆಗಳೇ ಗೆಳತಿಯರು..
ಭಾವನೆಗಳಿಗೆ ಜೊತೆಗಿಹರು..

ಕ್ಷಮಿಸುವುದ ಕಲಿಸುತ್ತಾ
ನೋವುಗಳ ಮರೆಸಿಹರು..
ಮತ್ತೊಂದು ಹೊಸ ಪರ್ವ
ಬರುವ ಭರವಸೆ ತುಂಬಿಹರು..

- ಸಿಂಧು ಭಾರ್ಗವ್.🍁

Thursday 11 May 2017

ಕವನ: ಪರಮ ಸ್ವಾರ್ಥಿಯ ಕೊನೆಯೆಂದು??

ಸುಂದರ_ಪ್ರಕೃತಿಗೇ ಎಲ್ಲರೂ ಮಕ್ಕಳೇ..

ತಂಪಾಗಿ ಬೀಸುವ ಗಾಳಿ ಕೇಳಲಿಲ್ಲ ನೀನು ಯಾವ ಜಾತಿ?
ಬೆಳಕು ನೀಡುವ ರವಿಯು ಕೇಳಲಿಲ್ಲ ನಿನದು ಯಾವ ಮತ?

ಅಕ್ಕಿ ಬೆಳೆಯುವ ಮಣ್ಣಿಗೆ ಜಾತಿಮತದ ಹಂಗಿಲ್ಲ..
ನೀನು ಮೇಲ್ಜಾತಿ ನೀನು ಕೀಳು ಎಂದು ಹರಿವ ನೀರು ಇಂಗಿಲ್ಲ..

ನಮಗಾಗಿ ಎಲ್ಲವನೂ ನೀಡುವ ತ್ಯಾಗಮಯಿ ಪ್ರಕೃತಿ ಮಾತೆ,
ಆದರೆ ಮನುಜ ಅದೆಲ್ಲವೂ ನನದೇ ಎಂದು ಸ್ವಾಧೀನಕ್ಕೆ ತಂದುಕೊಂಡು ಕೊಡುಕೊಳ್ಳುವಿಕೆಯಲಿ ಜಾತಿಮತಧರ್ಮದ  ದುರ್ಗಂಧ ಬೀರುತ್ತಿದ್ದಾನೆ..

ಪರಮಸ್ವಾರ್ಥಿಯ ಕೊನೆಯೆಂದು?!? :

ಧರ್ಮ-ಕರ್ಮಗಳ ನಡುವೆ ನಮ್ಮ ಜೀವನ.

:: 😍😂😉😊😍😂😉
ಯೋಗರಾಜ್ ಭಟ್ರಿಂದ ಸ್ಪೂರ್ತಿ ಪಡೆದ ಸಿಂಧು. ವಿಷಯವಸ್ತು : ಧರ್ಮ-ಕರ್ಮಗಳ ನಡುವೆ ನಮ್ಮ ಜೀವನ..
😍😂😉😊😍😂😉 ::

೧) ಪರಿಶುದ್ಧ ಆತ್ಮವಿರುವವರಿಗೆ ಈ ಜಾತಿ-ಮತ-ಧರ್ಮದ ಯಾವುದೇ ಹಂಗಿರುವುದಿಲ್ಲ.

೨) ನಾವು ಮಾಡುವ ಕೆಲಸದಲ್ಲಿ ತೃಪ್ತಿಯ ಜೊತೆಗೆ ನಿಷ್ಠೆ ,ಪ್ರಾಮಾಣಿಕತೆ ಇರಲೇಬೇಕು. ಆಗಲೇ ಯಶಸ್ಸು ಸಿಗಲು ಸಾಧ್ಯ.

೩) ಜಗತ್ತಿನಲ್ಲಿ ಅನ್ಯಾಯ, ಅಧರ್ಮ, ಅಕ್ರಮ ತಾಂಡವವಾಡುತ್ತಿದೆ.
ಕಣ್ಣು, ಕಿವಿ, ಬಾಯಿಯನ್ನು
ಮುಚ್ಚಿಕೊಂಡ ಗಾಂಧೀಜಿಯ ಮೂರು ಮಂಗಗಳಿಗೆ ಕೈಸೋತು ಹೋಗುತ್ತಿದೆ.😢😯😐

೪)) ಭಾಷೆ ಬಗ್ಗೆಯಾಗಲಿ, ಧರ್ಮದ ಬಗ್ಗೆಯಾಗಲಿ ಅಂಧಾಭಿಮಾನ ಇರಕೂಡದು. ಅದು ಅದೆಷ್ಟೋ ಜನರ ಮಾನಹಾನಿಗೂ,ಪ್ರಾಣಹಾನಿಗೂ ಕಾರಣವಾಗುವುದು.
❌🙅✖

೫)) ಕಾಮ, ಕ್ರೋಧ, ಮೋಹ, ಮದ, ಮತ್ಸರ, ಲೋಭ,ಸಂಶಯ, ಮಮಕಾರ, ಅಹಂಕಾರ ಇವುಗಳು ಮನುಷ್ಯನ ಸಹಜವಾದ ಒಂಭತ್ತು ವೈರಿಗಳು. ಹಾಗೇ ಮನುಷ್ಯನಿಗೆ ಹುಟ್ಟುಗುಣಗಳಾಗಿ ಬಂದಿರುತ್ತವೆಯೇ ಹೊರತು ಯಾವುದೇ ಧರ್ಮಕ್ಕೆ ಅಂಟಿಕೊಂಡಿದ್ದಲ್ಲ.

ಆದರೆ, ಆದರೆ ಸ್ವಾರ್ಥಿಗಳು ತಮ್ಮ ಲಾಭಕ್ಕೋಸ್ಕರ ಒಬ್ಬ ವ್ಯಕ್ತಿ ಮಾಡಿದ ತಪ್ಪನ್ನು ಧರ್ಮದ ಹೆಸರಿನಲ್ಲಿ ಮುಚ್ಚಿಹಾಕಿಯೋ(ರಕ್ಷಿಸಲು) ಅಥವಾ ಅದೇ ಧರ್ಮದ ಹೆಸರಿನಲ್ಲಿ ಶಿಕ್ಷೆ ನೀಡಲು ಮುಂದಾಗುತ್ತಾರೆ..

(ಗೂಗಲ್ ಚಿತ್ರ)


🙏🌷 ಶುಭನುಡಿ🌷🙏

- ಸಿಂಧು ಭಾರ್ಗವ್ , ಬೆಂಗಳೂರು

ಜೀವನದ ಬಗ್ಗೆ ಒಂದು ಅವಲೋಕನ ಮಾವಿನ ವಾಟೆಯಂತೀ ಜೀವನ

ನಮ್ಮ ಜೀವನವೂ ಈ ಮಾವಿನ ವಾಟೆ ತರಹ. ಬರುವಾಗಲೂ ಬತ್ತಲೆ, ಹೋಗುವಾಗಲೂ ಬತ್ತಲೆ. ನಡುವೆ ಒಂದಷ್ಟು ದಿನ ಉಬ್ಬುವುದು ಕೊಬ್ಬುವುದು. ಮಾವಿನ ಹಾಗೆಯೇ ಮುರುಟಿಹೋದ ಮನಸ್ಸುಗಳು, ಕೊಳೆತುಹೋದ ಮನಸ್ಸುಗಳು, ಹೇಗೆ ಹೊರಗಿನಿಂದ ನೋಡಲು ಮಾವು ಸುಂದರವಾಗಿ ಕಾಣಿಸುತ್ತದೆಯೋ ಜನರೂ ಕೂಡ ಮುಖವಾಡ ಧರಿಸಿಕೊಂಡು ಸುಂದರವಾಗಿಯೇ ಮೋಸಮಾಡುವರು, ಮಾತನಾಡುವರು. ಆದರವರ ಮನಸ್ಸು ಸ್ವಾರ್ಥ, ಮತ್ಸರ, ದ್ವೇಷದ ಕೂಪವಾಗಿರುತ್ತದೆ.. ಅವರ ಸಂಗ ನಮಗೆ ಹುಳಿಮಾವು ತಿಂದ ಅನುಭವ ನೀಡುತ್ತದೆ.
**
ಪ್ರಾಯದಲ್ಲಿ ಹುಳಿ ತೋರಿಸುವುದು, (ಅಹಂ) ಬಿಸಿಲು-ಗಾಳಿ ,ಹಗಲು-ರಾತ್ರಿ ಎನ್ನದೇ ಮೈಯೊಡ್ಡಿ ನಿಂತು ಮಾವು ಹೇಗೆ ಮಾಗುವುದೋ ಮುಪ್ಪು ಬಂದಹಾಗೆ ದುಡಿತ, ಸವೆತದ ನಡುವೆ ನಮ್ಮ ಜೀವಿತದ ಅನುಭವದ ಸಿಹಿಯನ್ನು ಹಂಚಲಿಕ್ಕೆ ಶುರುಮಾಡುತ್ತೇವೆ.
**
ಆದರೆ ಎಲ್ಲಾ ಕಾಲದಲ್ಲಿಯೂ ,ಎಲ್ಲಾ ರುಚಿಯಲ್ಲಿಯೂ ಜನ ಮಾವನ್ನು ಇಷ್ಟ ಪಡುತ್ತಾರೆ.. ಹೇಗೆ ಉಪ್ಪು ಬೆರೆಸಿ , ಕಾರ ಬೆರೆಸಿ ತಿನ್ನುವರೋ ಹಾಗೆ ನಾವು ಜೀವನದಲ್ಲಿ ಸ್ನೇಹ-ಪ್ರೀತಿ ಬೆರೆಸಿ ಸೌಹಾರ್ದತೆಯಿಂದ ಬಾಳಬೇಕು..

- ಸಿಂಧು ಭಾರ್ಗವ್ 🍁

ಚುಟುಕು:: ನಾನು ಮತ್ತು ನನ್ನ ಕಡಲು




ನಾನು ಮತ್ತು ನನ್ನ _ಕಡಲು..

#ಶೃಂಗಾರ :
೧) ಕಡಲಿನಾಳದಲಿ ಚಿಪ್ಪೊಂದನ್ನು
ತಂದು ಕೊಡು ಇನಿಯಾ...
ಅದರಲ್ಲಿರುವ ಮುತ್ತಿನ ಜೊತೆಗೆ ನನ್ನ ನಾಲ್ಕು ಮುತ್ತನ್ನೂ ಸೇರಿಸಿ ನಿನಗೆ ಕೊಡುವೆ...😘
~
#ವೇದನೆ :
೨) ವಿರಹಿ ಅಲ್ಲ ನಾನು, ಕಡಲು ಜೊತೆಗಿಹುದು.‌..
ಅಲೆಗಳು ಒಂದೊಂದಾಗಿ ಬಂದು ಕಣ್ಣೀರೊರೆಸುವುವು...😢
~
#ಹಾಸ್ಯ :
೩) ನಾನು ಮತ್ತು ನನ್ನ ಕಡಲು,
ಸಂಜೆ ಅಮ್ಮ ಮಾಡಿದ ಬಂಗುಡೆ ಫ್ರೈಯಿಂದಲೇ ತುಂಬುವುದು ನನ್ನ ಒಡಲು.. 😝
~
#ವಾಸ್ತವ :
೪) ಸ್ತಬ್ಧವಾಗಿ ನಿಂತ ಬಂಡೆಗಳು,
ಸಾಲುಸಾಲು ತೆಂಗಿನ ಮರಗಳು,
ಜೊತೆಗೆ ಉಪ್ಪು ನೀರಿನಿಂದ ಕೂಡಿದ ಕಡಲು...
ಹಾಗೆ ನಮ್ಮ ಜೀವನವೂ,
ಆಗಾಗ ಬರುವ ಕಷ್ಟಗಳು,
ನಡುನಡುವೆ ಸುಖದ ಎಳನೀರು,
ನೊಂದಾಗ ಹೊರಹಾಕುವ ಉಪ್ಪು ಕಣ್ಣೀರು..🙏😍
~
#ಹಾಸ್ಯ :
೫) ದಿನವೂ ಸಂಜೆ ಕಡಲ ಅಲೆಗಳ ನೋಡುತ
ದೂರಾದ ಪ್ರಿಯತಮೆಯ ನೆನಪು ಮಾಡುತ ಬಾಟಲಿ ಏರಿಸುವೆ..
ಇಂದು ಸ್ವಲ್ಪ ಚೇಂಜ್ ಇರಲಿ ಅಂತ ಜ್ಯೂಸ್ ಕುಡಿತ ಇದ್ರೂ,
ನನ್ನ ಗೆಳೆಯ ಬಂದು
ಎಷ್ಟ್ ಕುಡಿತಿ ಮರಾಯ, ಸಾಕ್ ನಿಲ್ಸಾ.. ಅಬ್ಬಿ ಕರಿತಾ ಇದ್ಲ್ ಮನಿಗ್ ಹೋಪಾ ಬಾ.. ಅಂತಾನೆ.. 😇😝

- ಸಿಂಧು ಭಾರ್ಗವ್. 🍁

Wednesday 10 May 2017

ಸಂತೆಯಲಿ ಗುನುಗಿದ ಹಾಡು : ಕಳೆದುಹೋದ ಹಾದಿಯಲ್ಲಿ

ಸಂತೆಯಲಿ ಗುನುಗಿದ ಹಾಡು : ಕಳೆದುಹೋದ ಹಾದಿಯಲ್ಲಿ

ಕಳೆದು ಹೋದ ಹಾದಿಯಲ್ಲಿ ಮತ್ತೆ ಹುಡುಕಬೇಕಿದೆ..
ತೊರೆದುಹೋದ ಇನಿಯನ ಮತ್ತೆ ಹುಡುಕಬೇಕಿದೆ..

ಆಡಿ ಹೋದ ಮಾತಿನಲ್ಲಿ
ಸರಿಯು ಕಾಣಬಹುದು ಈಗ..
ಮುನಿಸಿಕೊಂಡ ಮನಸಿನಲ್ಲಿ
ಕನಸು ಮೂಡಬಹುದು ಈಗ..

ನಿನ್ನ ಪ್ರೀತಿ ಪ್ರೇಮವೀಗ
ಕಾಡುತಿಹುದು ಬಿಡದೆ ಈಗ..
ನಿನ್ನ ನಡೆಯು ನುಡಿಯು ಈಗ
ಬೇಡುತಿಹುದು ಮತ್ತೆ ಈಗ..

ಒಮ್ಮೆ ಬಂದು ಎದುರು ನಿಂತು
ನಗುವ ಬೀರಿ ಹೋದರೂನು
ಮನಕೆ ಹೊಸತು ಹುರುಪು ಬಂದು
ಹಳೆಯ ನೋವ ಮರೆವೆ ನಾನು..

ಕಾಯುತಿರುವೆ ಎಂದಿನಂತೆ ನೀನು ಬರುವುದಾ...
ಕಾಯುತಿರುವೆ ಎಂದಿನಂತೆ ಅದೇ ಹಾದಿಯಾ...

- ಸಿಂಧು ಭಾರ್ಗವ್. 🍁

ಸಂತೆಯಲಿ ಗುನುಗಿದ ಹಾಡು : ನಗಲು ಬಾರದೇ ಮುಗುದೆ.

ಸಂತೆಯಲಿ ಗುನುಗಿದ ಹಾಡು : ನಗಲು ಬಾರದೇ ಮುಗುದೆ..

ಮುನಿಸು ಏತಕೆ ಮಗುವೆ, ನಗಲು ಬಾರದೇ,
ಮುತ್ತನೊಂದು ನಿನಗೆ ಕೊಡುವೆ ಸನಿಹ ಬಂದರೇ...
**
ಆಟ ಆಡಬೇಡ ಎಂದು ನಾನು ಹೇಳಬಾರದೀಗ
ಊಟಮಾಡು ಬಾರೆ ಎಂದು ನಾನು‌ ಕರೆಯಬಾರದೀಗ..

ಕಳ್ಳ ನೋಟ ಬೀರಬಹುದು ಎಂಬ ಭಯವು ನನಗೀಗ...
ನಿನ್ನ ಹೊರಗೆ ಬಿಟ್ಟು ನಾನು ಹೇಗೆ ಕೆಲಸಮಾಡಲೀಗ..
ಮುನಿಸು ಏತಕೆ ಮಗುವೆ, ನಗಲು ಬಾರದೇ..
**
ನಾನು ತೋರುವ ಕಾಳಜಿಯು ಬಿಗಿದ ಹಗ್ಗವಾಗಬಹುದು..
ನನ್ನ ಮಮತೆಯು ನಿನಗೆ ಕಟ್ಟಿಹಾಕಲೂ ಬಹುದು..

ಅನಿಸಬಹುದು ಈಗ ಮಗುವೆ
ವಯಸು ಹಾಗೆ ಅರಿಯದಾದೆ
ನೀನು ಮುಂದೆ ತಾಯಿಯಾಗು ಎಲ್ಲ ಅರಿಯುವೆ..
ನೀನು ಮುಂದೆ ತಾಯಿಯಾಗು ಎಲ್ಲ ಅರಿಯುವೆ..

- ಸಿಂಧು ಭಾರ್ಗವ್ 🍁

ಸಂತೆಯಲಿ ಗುನುಗಿದ ಹಾಡು : ನೆನಪಿನ ಹೆಜ್ಜೆಗುರುತ

ಸಂತೆಯಲಿ ಗುನುಗಿದ ಹಾಡು : ನೆನಪಿನ ಹೆಜ್ಜೆಗುರುತ


ನೆನಪಿನ ಹೆಜ್ಜೆ ಗುರುತು ಅಳಿಸುವ ಮಳೆಹನಿಯೆ
ನಿನ್ನಲಿ ನಾ ಮುನಿಸಿಕೊಂಡಿರುವುದು  ಸರಿಯೆ

ಸಾಗಿದೆ ಸಾಗಿದೆ ಜೀವನ ಸಾಗಿದೆ
ಮಾಗಿದ ನೆನಪದು ಜೀವಕೆ  ಬೇಕಿದೆ

ನೀರಿಲ್ಲದೆ ಬಾಯಾರಿದೆ ,ನೀನಿಲ್ಲದೆ ಬಾಳಾರಿದೆ

ಅರಿಯಾಗದೆ ತೊರೆಯಾಗಿಸು
ದುಮ್ಮಾನವ ಮರೆಯಾಗಿಸು

ಮನದಾಸೆಯ ಚಿಗುರಾಗಿಸು
ಹೃದಯವಾ ಹಗುರಾಗಿಸು

ನಿನ್ನನು ಕ್ಷಮಿಸುವೆ... ಬದುಕನು ರಮಿಸುವೆ...

- ಸಿಂಧು ಭಾರ್ಗವ್🍁

ಸಂತೆಯಲಿ ಗುನುಗಿದ ಹಾಡು : ನೀ ಶ್ಯಾಮನಲ್ಲ

ಸಂತೆಯಲಿ ಗುನುಗಿದ ಹಾಡು : ನೀ ಶ್ಯಾಮನಲ್ಲ

ನೀ ಶ್ಯಾಮನಲ್ಲ ನಾನು ರಾಧೆ
ಮೊದಲೆ ಅಲ್ಲ..
ನೀ ಶ್ಯಾಮನಲ್ಲ ನಾನು ರಾಧೆ
ಮೊದಲೆ ಅಲ್ಲ..
ನಮ್ಮ ಪ್ರೀತಿ ಪ್ರೇಮ ಕೂಡ
ಅವರಿಗಿಂತ ಕಡಿಮೆ ಇಲ್ಲ..
ನಮ್ಮ ಪ್ರೀತಿ ಪ್ರೇಮ ಕೂಡ
ಅವರಿಗಿಂತ ಕಡಿಮೆ ಇಲ್ಲ..
*
ಮಲ್ಲಿಗೆಯ ಮೊಗ್ಗನೊಮ್ಮೆ
ಮೂಗುತಿಯ ಮಾಡಿಸಿದ್ದೆ..
ನೈದಿಲೆಯ ಎಸಳ ತಂದು
ಕಿವಿಯ ಓಲೆ ತೊಡಿಸಿದ್ದೆ..

ರಾಗ ತಾಳ ಇಲ್ಲದೇನು
ಹಾಡುಹೊಸೆಯ ಬಲ್ಲೆ ನೀನು..
ಮನದ ಭಾವ ಬೆಸೆದು ನೀನು
ಹೊಸತು ಲೋಕ ತರುವೆ ನೀನು..
ನೀ ಶ್ಯಾಮನಲ್ಲ ನಾನು ರಾಧೆ
ಮೊದಲೆ ಅಲ್ಲ..
*
ಕನಸ ಕಾಣ ಹೊರಟ ನಯನ
ನಿನ್ನೇ ಎನಿಸಿ ನಾಚಿದಂತೆ
ಮುತ್ತು ನೀಡ ಬರುವ ತುಟಿಯು
ನಿನ್ನ ನೋಡಿ ಹೆದರಿದಂತೆ
*
ರಸಮಯದ ಸಮಯದಲ್ಲಿ
ನಿನ್ನ ಹೆಸರ ಗುನುಗಿದಂತೆ
ಜೊತೆಗೆ ಹೆಜ್ಜೆಹಾಕೋ ನೀನು
ಮನದ ಅರಸನಾದೆಯಂತೆ..
ನೀ ಶ್ಯಾಮನಲ್ಲ ನಾನು ರಾಧೆ
ಮೊದಲೆ ಅಲ್ಲ..

- ಸಿಂಧು ಭಾರ್ಗವ್ 

ಸಣ್ಣ ಕವನ : ಇನಿಯನ ಪ್ರೀತಿ

ಸಣ್ಣ ಕವನ : ಇನಿಯನ ಪ್ರೀತಿ

ಇನಿಯನು ಪ್ರೀತಿಯಿಂದ
ಅಪ್ಪಿಕೊಂಡರೆ ಲತೆಯಾಗುವೆ..

ದುಂಬಿಯಂತೆ ಮಧುವ
ಹೀರಿದರೆ ನಾಚಿ ನೀರಾಗುವೆ..

ಸರಸದಲಿ ಬೆರೆತಾಗ
ಕಡೆದ ಮಜ್ಜಿಗೆಯಾಗುವೆ..

ಕಾಳಜಿಯ ಮಾತಿನಲಿ
ತಾಯಿಯ ನೋಡುವೆ..

ಅರೆಕ್ಷಣವೂ ದೂರಾದರೂ
ಹೆದರಿ‌ಚಡಪಡಿಸುವೆ..

ಇನಿಯನ ಪ್ರೀತಿಗೆ
ರಚ್ಚೆಹಿಡಿವ ಮಗುವಾಗುವೆ..

- ಸಿಂಧು ಭಾರ್ಗವ್ .

ಸಂತೆಯಲಿ ಗುನುಗಿದ ಹಾಡು: ಕನಸಲಿ ಬಂದೆ ನೀನು

ಸಂತೆಯಲಿ ಗುನುಗಿದ ಹಾಡು: ಕನಸಲಿ ಬಂದೆ ನೀನು
~~~
(@)(@)
ಕನಸಲಿ ಬಂದೆ ನೀನು
ಮನದಲಿ‌ ನಿಂತೆ ನೀನು
ಕವನವ ಬರೆದೆ ನೀನು
ಸನಿಹಕೆ ಕರೆದೆ ನೀನು

ಕಂಗಳು ತುಂಬಿದ ನಿನ್ನಯ ಬಿಂಬಕೆ
ಮನವಿದು ಕುಣಿಯುತ ನಿನ್ನೆಡೆ ಬಂತು..
ಸುಮಧುರ ಗಾನವು ಕೇಳಿದ ಕೂಡಲೆ
ತನುವಿದು ಕುಣಿಯುತ ನಿನ್ನೆಡೆ ಬಂತು.
ಕನಸಲಿ ಬಂದೆ ನೀ
ಮನದಲಿ ನಿಂತೆ ನೀ..

ಹಿತಮಿತ ಮಾತಿಗೆ ಸೋತಿಹೆ ನಾನು
ನಿನ್ನಯ ಮೌನವೆ ಜೊತೆಗಿಹುದಿಂದು
ಪ್ರೀತಿಗೆ ಹೊಸ ಭಾಷೆಯ ಬರೆಯುತ
ಇಬ್ಬರು ಸೇರಿ ಸಹಿ ಹಾಕಿದೆವಂದು
ಕನಸಲಿ ಬಂದೆ ನೀ..
ಮನಸಲಿ ನಿಂತೆ ನೀ..

ನಿನ್ನಯ ಪ್ರೀತಿಯ ಜೇನಲಿ ನಾನು
ತನುಮನ ಅರ್ಪಿಸಿ ಮಿಂದಿಹೆನು..
ನಿನ್ನೆಯ ನೆನಪಿನ ಜೊತೆಯಲಿ ನಾನು
ಜೀವನ ಕಳೆಯಲು ನಿಂತಿಹೆನು..

ಕನಸಲಿ ಬಂದೆ ನೀನು
ಮನದಲಿ‌ ನಿಂತೆ ನೀನು..
ಕವನವ ಬರೆದೆ ನೀನು
ಸನಿಹಕೆ ಕರೆದೆ ನೀನು..

- ಸಿಂಧು ಭಾರ್ಗವ್

ಲೇಖನ : ಹಿಂದೇ ಇರುವ ಮುಖಪರಿಚಯ ಇಲ್ಲದ ಹಿಂಬಾಲಕರು

ಲೇಖನ : ಹಿಂದೇ ಇರುವ ಮುಖಪರಿಚಯ ಇಲ್ಲದ ಹಿಂಬಾಲಕರು

ಮೊದಲೆಲ್ಲಾ ಸಮಾಜದಲ್ಲಿನ ಉನ್ನತ ಸ್ಥಾನದಲ್ಲಿರುವ  ವ್ಯಕ್ತಿಗಳು ಜನರಿಗೆ ತಿಳಿಸಬೇಕಾದ ವಿಷಯವನ್ನು ತಲುಪಿಸಬೇಕಾದರೆ ಮಾಧ್ಯಮಗಳ ಸಭೆ ಕರೆಯುತ್ತಿದ್ದರು. ಹಳ್ಳಿಯಿಂದ ದಿಲ್ಲಿಯ ಜನರೂ ಕೂಡ ಬೆಳಗಾಯಿತೆಂದರೆ ರೇಡಿಯೋ ಕೇಳಿಕೊಂಡೆ ದೇಶವಿದೇಶದ ಆಗುಹೋಗುಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದರು.ನಿನ್ನೆ ನಡೆದ ಘಟನೆಗಳೋ, ಮಾಹಿತಿಗಳೋ ಪತ್ರಿಕೆಗಳ ಮೂಲಕ ಮರುದಿನ ಬೆಳಿಗ್ಗೆ ಕೈಸೇರುತ್ತಿತ್ತು‌ . ಆದರೀಗ ಖಾಸಗೀತನದ ಹಾವಳಿ ಹೆಚ್ಚಾಗಿ ಮಾದ್ಯಮಗಳು ನಾಯಿಕೊಡೆಯಂತೆ ತಲೆಯೆತ್ತಿವೆ. ಒಂದು ವಿಷಯವನ್ನು ತಮಗೆ ಬೇಕಾದ ಹಾಗೆ ಅರ್ಥೈಸಿಕೊಂಡು ,ತಿರುಚಿ ದಿನದ ೨೪ಗಂಟೆ ಬೇಕಾದರೂ ಸಂಬಂಧಪಡದ ನಾಲ್ಕು ಜನರನ್ನು ಕರೆದುಕೊಂಡು ಬಂದು ಚರ್ಚೆ ಮಾಡುತ್ತಿದ್ದೇವೆ ಎಂದು ಬೊಬ್ಬೆ ಹಾಕುತ್ತಾ  ಕುಳಿತುಕೊಳ್ಳುತ್ತಾರೆ. ಏನು ಮಾಡಬೇಕು ಎಂದು ಸಲಹೆ ಕೊಡುವುದ ಬಿಟ್ಟು ಅವರಿವರ ತಪ್ಪು ಹುಡುಕುತ್ತಾ ಕುಳಿತಿರುತ್ತಾರೆ. ಹಾಗೆಯೇ ಅಮಾಯಕರನ್ನು ವಂಚಿಸುತ್ತಾರೆ. ನೇರಪ್ರಸಾರದ ಶೋಕಿ ನಾವೇ ಮೊದಲು ವಿಷಯ ಬಿತ್ತರಿಸುತ್ತಿದ್ದೇವೆ ಎಂಬ ಎಕ್ಸಕ್ಲೂಸಿವ್ ನ್ಯೂಸ್ಗಳು ಹೆಚ್ಚಾಗತೊಡಗಿವೆ. ಇದರಿಂದಾಗಿ ಪ್ರತಿಕೀಯೆಗಳು ಕೂಡಲೇ ಬರತೊಡಗಿವೆ.
ಅನೇಕ ಸ್ವಯಂ ಸಂಘಟನೆಗಳು, ಅಭಿಮಾನಿಗಳು, ಸಂಘ ಸಂಸ್ಥೆಗಳು ಅಥವಾ ಹಾಗೆ ಕರೆಸಿಕೊಳ್ಳುವವರು ಬೀದಿಗಿಳಿದು ಕಂಡಕಂಡಲ್ಲಿ ಜಗಳ,ಮುಷ್ಕರ, ಹೊಡೆದಾಟಕ್ಕೆ ನಿಲ್ಲುತ್ತಾರೆ.  ವೈಮನಸ್ಸು ಅತಿಯಾಗಲು ಇವು ಕಾರಣವಾಗುತ್ತಿವೆ. ಅಲ್ಲಿಯೂ ಹಣದ ಹೊಳೆ ಹರಿಸಿ ಅನೇಕ ಕಾಣದ ಕೈಗಳು ಪರಿಸ್ಥಿಯನ್ನು ಅತಿರೇಕಕ್ಕೇರಲು ದಾರಿಮಾಡಿಕೊಡುತ್ತಾರೆ.
.
ಈಗ ಎಲ್ಲರ ಕೈಯಲ್ಲೂ ಮೊಬೈಲ್ ಬಂದಿದೆ. ಕುಂತರೂ ನಿಂತರೂ ಎಲ್ಲಿ ತಿರುಗಾಡಿದರೂ ಜನರಿಗೆ ಊರಲ್ಲಿರುವ ಹೆತ್ತವರಿಗೆ ಹೇಳಲು ಸಮಯವಿರುವುದಿಲ್ಲ. ವಾರಾಂತ್ಯಕ್ಕೆ ಕರೆ ಮಾಡಿ ತಿಳಿಸುತ್ತಾರೆ. ಆದರೆ ಸೆಲ್ಫೀ ಎಂಬ ಹೆಸರಿನಲ್ಲಿ ಫೇಸ್ಬುಕ್, ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿ ಇಡೀ ಜಗತ್ತಿಗೆ ಗೊತ್ತುಮಾಡುತ್ತಾರೆ. ನೆಂಟರಿಷ್ಟರಿಗೂ ಅದರ ಮುಖಾಂತರವೇ ತಿಳಿಯಬೇಕಾಗಿ ಬರುವುದು ವಿಷಾದದ ಸಂಗತಿ. ತಾನು ಮನಸ್ಸಿನಲ್ಲಿ ಗೊಣಗಿಕೊಳ್ಳುವುದನ್ನೂ ಟ್ವೀಟರ್ ನಲ್ಲಿ ಹಾಕಿ ಗಲಭೆ ಎಬ್ಬಿಸುತ್ತಾರೆ. ಅದರಲ್ಲಿಯೂ ಯಾವುದೇ ಜಾತಿ, ಧರ್ಮ, ಭಾಷೆ ನೆಲದ ವಿಚಾರವಾಗಿ ಯಾರೂ ವಿವಾದಾತ್ಮಕ ಹೇಳಿಕೆ ನೀಡಲು ಹೋಗಬಾರದು ಎಂಬ ಸಾಮಾನ್ಯ ಪ್ರಜ್ಞೆ ಯನ್ನು ಬೆಳೆಸಿಕೊಳ್ಳಬೇಕು. ಪ್ರತಿಯೊಂದು ಧರ್ಮದಲ್ಲಿಯೂ ಅವರದೇ ಆದ ನಂಬಿಕೆಗಳಿರುತ್ತವೆ‌ ಅದನ್ನು ವ್ಯಂಗ್ಯ ಮಾಡುವುದಾಗಲಿ, ಲೇವಡಿ ಮಾಡುವುದಾಗಲಿ, ಅಗೌರವ ತೋರುವುದಾಗಲಿ ಮಾಡಬಾರದು. ಇಷ್ಟವಿಲ್ಲದಿದ್ದರೆ ಬಿಟ್ಟುಬಿಡಬೇಕು. ಯಾರೂ ಒತ್ತಾಯ ಮಾಡುವುದಿಲ್ಲ‌ ಅದನ್ನು ಬಿಟ್ಟು ಸಮಾಜದ ಸ್ವಾಸ್ಥ್ಯ ಹಾಳು ಮಾಡುವಂತಹ ಪೋಸ್ಟ್ ಮಾಡುವುದಾದರೂ ಯಾಕೆ..? ಒಂದಷ್ಟು ಜಗಳಗಳಾದ ಮೇಲೆ ಕ್ಷಮೆ ಕೇಳುವುದಾದರೂ ಯಾಕೆ..? ವಿವೇಕವಿರುವವರಾದರೆ ಯೋಚಿಸಿ ಮಾತನಾಡುತ್ತಾರೆ. ಇಲ್ಲದಿದ್ದರೆ ಬಾಯಿಮುಚ್ಚಿಕೊಂಡಿರುತ್ತಾರೆ.  ಸಾಮಾಜಿಕ ಜಾಲತಾಣದಲ್ಲಿರುವ ಫಾಲೋವರ್ಸ್ ಯಾವತ್ತಿಗೂ ಜೊತೆಗಿರುವುದಿಲ್ಲ.  ಜೊತೆಗಿರುವುದು ಕಷ್ಟಕಾಲಕ್ಕೆ ಸಹಾಯ ಮಾಡುವುದು ತಮ್ಮ ಹೆತ್ತವರು, ಒಡಹುಟ್ಟಿದವರು, ಸ್ನೇಹಿತರ ವರ್ಗಮಾತ್ರವೇ. ಒಂದಷ್ಟು ಲೈಕ್ ಒಂದಷ್ಟು ಹಂಚಿಕೊಳ್ಳುವುಕೆ, ತಮಗುಷ್ಟವಾದ ಕಮೆಂಟ್ಗಳು ಬಂದ ತಕ್ಷಣ ಅವರೆಲ್ಲ ನಮ್ಮ ಬೆಂಬಲಕ್ಕಿದ್ದಾರೆ ಎಂದರ್ಥವಲ್ಲ. ಬದಲಾಗಿ ಸಮಾನ ಮನಸ್ಕರು ಎಂದು ಪರಿಗಣಿಸಬಹುದು. ಈಗೀಗ ಮನಸಿಗೆ ತೋಚಿದ್ದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವುದಕ್ಕೆ ಕಡಿವಾಣವೂ ಹಾಕುತ್ತಿದ್ದಾರೆ. ಯಾರ ತೇಜೋವಧೆ ಮಾಡುವಂತಹ ಮಾನನಷ್ಟ ಮಾಡುವಂತಹ ಪೋಸ್ಟ್ ಗಳನ್ನು ಪ್ರಕಟಿಸುವಂತಿಲ್ಲ. ಕಾನೂನಾತ್ಮಕವಾಗಿ ಕೇಸು ಹಾಕಿ ಅವರನ್ನು ಒಳಗೆಕಳುಹಿಸಬಹುದು ಇಲ್ಲವೇ ದಂಡವಿಧಿಸಬಹುದು. ಆಗ ಪರವಾಗಿ ಕಮೆಂಟಿಸಿದವರಾಗಲಿ ಹೊಗಳಿದವರಾಗಲಿ ಜೊತೆಗೆ ಬರುವುದಿಲ್ಲ. ಹತ್ತಿರವಿದ್ದ ಹೆತ್ತವರೋ, ಸ್ನೇಹಿತರೋ ಸಹಾಯಕ್ಕೆ ನಿಲ್ಲಬೇಕು.
.
ಈಗಿನ ಯುವಜನತೆ ಸಮಯವನ್ನು ವ್ಯರ್ಥಮಾಡುತ್ತಾ, ತಮ್ಮ ಕರ್ತವ್ಯವನ್ನು ಮರೆಯುತ್ತಾ ಮೊಬೈಲ್ ನ ವ್ಯಸನಿಗಳಾಗಿದ್ದಾರೆ.

- ಸಿಂಧು ಭಾರ್ಗವ್.

ಜೀವನದ ಸಂತೆಯಲಿ - ಬದುಕುವ ಕಲೆ ಬೆಳೆಸಿಕೊಳ್ಳಿ

ಜೀವನದ ಸಂತೆಯಲಿ - ಬದುಕುವ ಕಲೆ ಬೆಳೆಸಿಕೊಳ್ಳಿ.

ಕೆಲ ಹೆಣ್ಣು ಮಕ್ಕಳಿಗೆ ತವರು ಮನೆಯಲ್ಲಿ ಏನೂ ಸಿರಿತನ ಇರುವುದಿಲ್ಲ. ಬಡನದಲ್ಲಿಯೇ ಜೀವನ ಕಳೆದಿರುತ್ತಾರೆ.
ಆದರೆ ಗಂಡನ ಮನೆಯಲ್ಲಿ ಬೇಕಾದಷ್ಟು ಆಸ್ತಿ-ಅಂತಸ್ತು ಹಣಕಾಸಿನಲ್ಲಿ ಉತ್ತಮರಾಗಿರುತ್ತಾರೆ.
ಕೆಲ ಹೆಣ್ಣು ಮಕ್ಕಳು ತವರು ಮನೆಯಲ್ಲಿ ಮಹಾರಾಣಿಯರಂತೆ ಬೆಳೆದಿರುತ್ತಾರೆ. ಎಲ್ಲದಕ್ಕೂ ಲೆಕ್ಕಚಾರ ಹಾಕುತ ಜೀವನ ನಡೆಸುವ ಸಂಗಾತಿ ಮತ್ತು ಅವರ ಮನೆಯವರು ಸಿಗುತ್ತಾರೆ.
ಕೆಲ ಹೆಣ್ಣು ಮಕ್ಕಳಿಗೆ ತವರು ಮನೆಯಲ್ಲಿಯೂ ಕಷ್ಟದ ಜೀವನ , ಗಂಡನ ಮನೆಯಲ್ಲಿಯೂ ಕಷ್ಟದ ಜೀವನವೇ.
ಇನ್ನು ಕೊನೆಯದಾಗಿ , ಕೆಲ ಹೆಣ್ಣು ಮಕ್ಕಳು ಹುಟ್ಟಿನಿಂದಲೇ ಸಿರಿತನದ ಸುಪ್ಪತ್ತಿಗೆಯಲ್ಲಿಯೇ ಬದುಕಿ ಅಭ್ಯಾಸ, ಎಲ್ಲದಕ್ಕೂ ಆಳು-ಕಾಳು ,ಕಷ್ಟ ಎಂದರೆ ಏನೂ ಅಂತಾನೇ ಗೊತ್ತಿರುವುದಿಲ್ಲ. ಹಾಗೆ ಸಿರಿವಂತನ ಅಳಿಯನನ್ನೇ ನೋಡಿ ಮದುವೆಯೂ ಮಾಡಿಸುತ್ತಾರೆ.
***
ಯಾಕೆ ಹಂಚಿಕೊಂಡೆನೆಂದರೆ ,  ಬಾಲ್ಯದ ಜೀವನವನ್ನು ಕಷ್ಟದಿಂದ ಕಳೆದವರು ಮುಂದೆ ಬರುವ ಎಂತಹುದೇ ಕಠಿಣ ಸಂದರ್ಭವನ್ನು ಎದುರಿಸಲು ಶಕ್ತರಾಗಿರುತ್ತಾರೆ. ಬಾಲ್ಯದಲ್ಲಿಯೇ ಹಣದ ಬೆಲೆ ತಿಳಿಯದೇ ಬೆಳೆದ ಮನುಷ್ಯ ಮುಂದೆ ಎದುರಾಗುವ ಕಷ್ಟಗಳಿಗೆ ಮೈಯೊಡ್ಡಲು ಸೋಲುತ್ತಾನೆ. ಆ ಸೋಲನ್ನು ಅವಮಾನವೆಂಬಂತೆ ಪರಿಗಣಿಸಿ ತುಂಬಾ ಖಿನ್ನತೆಗೊಳಗಾಗುತ್ತಾನೆ.

ಪ್ರತಿಯೊಬ್ಬರೂ ನಮ್ಮ ಜೀವನ 'ಹೀಗೆ' ಇರಬೇಕು ಎಂಬ ನೂರಾರು ಕನಸುಗಳನ್ನು ಕಟ್ಟಿಕೊಂಡಿರಬೇಕು. ಇಲ್ಲದಿದ್ದರೆ ಪ್ರಗತಿ ಕಾಣಲು ಸಾಧ್ಯವಿಲ್ಲ. ಬಡವನಾಗಿ ಹುಟ್ಟುವುದು ತಪ್ಪಲ್ಲ, ಬಡವನಾಗೇ ಸಾಯುವುದು ತಪ್ಪು ಎಂದು ಹಿರಿಯರ ಮಾತೇ ಇದೆ‌. ಹಾಗಾಗಿ ನಾವು ಒಂದು ಗಠ ಬೆಳೆಸಿಕೊಳ್ಳಬೇಕು, ನಾವು ಎಲ್ಲರಂತೆ ಸ್ಥಿತಿವಂತರಾಗಬೇಕು ಅದಕ್ಕೆ ಕಷ್ಟಪಟ್ಟು ದುಡಿಯಬೇಕು ಎಂದು. ಯಾವ ಅಭಿವೃದ್ಧಿಯೂ ಕಾಣದ ಜೀವನ ನಿಂತ ನೀರಿನಂತೆಯೇ ಸರಿ. ತಮ್ಮ ಮನೆಯವರಿಗಾಗಿಯೇ  ಜೀವನ ಸವೆಸುವವರೂ ಇರುತ್ತಾರೆ. ಕಷ್ಟಪಟ್ಟು ದುಡಿಯುವುದು, ತಮ್ಮ ಯವ್ವನವನ್ನೇ ತ್ಯಾಗಮಾಡುವುದು, ಮನೆಯವರ ಸಂತೋಷ-ಹಿತ ಕಾಯ್ದುಕೊಳ್ಳಲು ತೇಯ್ದ ಗಂಧದಂತೆ ಬದುಕುತ್ತಿರುತ್ತಾರೆ. ಇವರೂ ಕೂಡ ಒಂದು ರೀತಿಯ ತ್ಯಾಗಮೂರ್ತಿಗಳೇ. ಆಗೆಲ್ಲ ತನ್ನ ಕನಸುಗಳನ್ನೆಲ್ಲ ಸಾಯಿಸಿಕೊಂಡು ಬದುಕಬೇಕೆಂದೇನಿಲ್ಲ. ತನ್ನ ಜೀವನವನನ್ನು ಪ್ರೀತಿಸುತ್ತಾ ಬದುಕುವುದು ಕೂಡ ಒಂದು ಕಲೆ‌. ಪ್ರತಿಯೊಬ್ಬ ವ್ಯಕ್ತಿಗೂ ಕಷ್ಟಸುಖ ಎರಡರ ಅನುಭವವಿರಬೇಕು. ಜೀವನದಲ್ಲಿ ಇನ್ನೊಬ್ಬರಿಗೆ ಬಂದ ಸಮಸ್ಯೆಯೇ ನಮಗೂ ಬರಬೇಕೆಂದಿಲ್ಲ. ಅವರ ಸಮಸ್ಯೆ ನೋಡಿ ನಾವು ಎಚ್ಚೆತ್ತುಕೊಳ್ಳಬಹುದು. ದೂರದಿಂದಲೇ ಗುರುತಿಸಬಹುದು.  ಜೀವನದಲ್ಲಿ ಏಳು-ಬೀಳುಗಳಿದ್ದರೇನೆ ಚಂದ. ಸಹನೆ-ತಾಳ್ಮೆಯೊಂದಿಗೆ ಜೀವನ ನಡೆಸಬೇಕು. ನಾಳೆಯ ದಿನ ನಮ್ಮ ಕೈಲೇ ಇರುತ್ತದೆ. ಹಾಗಾಗ ಬೇಕಾದರೆ ಇಂದು ಚೆಂದವಾಗಿ ಬದುಕಬೇಕು.

- ಸಿಂಧು ಭಾರ್ಗವ್. 

ಕವನ : ಅಲೆಯ ಮೇಲೆ ಮನೆಯ ಕಟ್ಟಿ

ಕವನ : ಅಲೆಯ ಮೇಲೆ ಮನೆಯ ಕಟ್ಟಿ

ಅಲೆಯ ಮೇಲೆ ಮನೆಯ ಕಟ್ಟಿದೆ
ಕಲ್ಲು,ಮರಳು ನೀರಿಗೇನು ಬರಲಿಲ್ಲ..
.
ಸ್ವಪ್ನದಲ್ಲಿ ಕಂಡ ಮನೆಯೇ ತಲೆ ಎತ್ತಿದೆ..
ಹೊಗಳುಭಟರಿಗೇನು ಬರವಿಲ್ಲ...
..
ಮುಂಜಾನೆ ರವಿಯ ಸ್ವಾಗತ, ಸಂಜೆಗೆ
ಶಶಿಯು ನಿಲ್ಲುವ ನಗುತ..
ಹರುಷಕೇನು ಬರವಿಲ್ಲ..
...
ಜೋರಾಗಿ ಬೀಸುತ ಗಾಳಿಯು,
ಅಲೆಅಲೆಯಾಗಿ ಬಂದು ಬಂಡೆಗಪ್ಪಳಿಸಿತು,
ಕನಸಿನ ಮನೆಯೂ ಛಿದ್ರಗೊಂಡಿತು..
ಕಣ್ಣೀರು ತೇಲಿ ತೇಲಿ ದಡವ ಸೇರುತ್ತಿತ್ತು...
.
ಅತ್ತ ರವಿಯು , ಇತ್ತ ಶಶಿಯೂ ಜೊತೆಗೆ ಕಣ್ಣೀರ ಒರೆಸಿದರು..
ಸಾಂತ್ವಾನ, ಪ್ರೀತಿಗೇನು ಬರಗಾಲವಿರಲಿಲ್ಲ...

- ಸಿಂಧು ಭಾರ್ಗವ್ . 🍁

ಕವನ: ಕಾಪಿಡುವೆ ನಿನ್ನ ಪ್ರೀತಿಯ





ಕವನ: ಕಾಪಿಡುವೆ ನಿನ್ನ ಪ್ರೀತಿಯ
•°•°•°•°•°•°•°•°•°•°•°•°•°•°•

ಹೂವು ಮನಕೆ ಮುದವ ನೀಡುವುದು..
ಹೂವು ಮೊಗಕೆ ನಗುವ ನೀಡುವುದು..

ಮೊಗ್ಗು ಅರಳಲು ಸಮಯಬೇಕು..
ಹೂವು ಬಾಡಲು ದಿನವು ಸಾಕು..

ಹಗಲು ಇರುಳು ಕಾಪಿಡುವ ಪ್ರೀತಿಯು
ಮೊಟಕುಗೊಳ್ಳಲು ನಿಮಿಷ ಸಾಕು..

ನಂಬಿಕೆಯ ನೀರೆರೆಯಿರಿ, ಗಿಡದಲ್ಲಿಯೇ ಅಂದವ ಕಾಣಿರಿ..
ಚಿವುಟದಿರಿ.. ಮನವ ನೋಯಿಸದಿರಿ..

ಹರುಷ ಪಡಲು ಮಾತ್ರ ಹೂವಿರುವುದಲ್ಲ..
ಅದರ ಕಾಪಾಡುವುದೂ ನಮ್ಮ ಕರ್ತವ್ಯವಲ್ಲ..

..ಪ್ರೀತಿಯಿಂದ ಪ್ರೀತಿಸಿ..
..ಪ್ರೀತಿಗೋಸ್ಕರ ಜೀವಿಸಿ..

- 📝 ಸಿಂಧು ಭಾರ್ಗವ್ 🍁

ಬ್ಲಡ್ ಡೋನರ್ಸ್ ಮಂಗಳೂರು ವತಿಯಿಂದ ರಾಜ್ಯಮಟ್ಟ ಕವನ ಮತ್ತು ಲೇಖನ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭ

(@)(@)(@)


(@)(@)(@)

ಇದೇ ಮೊದಲ ಬಾರಿಗೆ ಒಂದು ಸ್ಪರ್ಧೆಯಲ್ಲಿ ನಾನು ಬಹುಮಾನ ಪಡೆದಿರುವುದು. ಹಾಗು ನನ್ನ ಹೆಸರು ಒಂದು ಪತ್ರಿಕೆಯಲ್ಲಿ ಬಂದಿರುವುದು ಸಂತಸ ನೀಡಿದೆ.
.
.
ಧನ್ಯವಾದಗಳು..
- 📝 ಸಿಂಧು ಭಾರ್ಗವ್ 💐🙏👍

1))
ಬ್ಲಡ್ ಡೋನರ್ಸ್ ಸಂಘಟನೆ ಮಂಗಳೂರು ಇವರ ವತಿಯಿಂದ ನಡೆದ ರಕ್ತದಾನ ಶಿಬಿರದಲ್ಲಿ ರಾಜ್ಯಮಟ್ಟದ ಕವನ, ಲೇಖನ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮದ ಬಗ್ಗೆ  ವಿಜಯ ಕರ್ನಾಟಕ ಪೇಪರ್ ನಲ್ಲಿ ಒಂದು ಸಣ್ಣ ಲೇಖನ.. ವಿಜೇತರಿಗೆಲ್ಲರಿಗೂ ಅಭಿನಂದನೆಗಳು.ಶುಭಹಾರೈಕೆಗಳು..))
(@)(@)(@)





2))
ಬ್ಲಡ್ ಡೋನರ್ಸ್ ಮಂಗಳೂರು ವತಿಯಿಂದ ರಾಜ್ಯಮಟ್ಟ ಕವನ ಮತ್ತು ಲೇಖನ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭ -

(@)(@)(@)

3))
ಬ್ಲಡ್ ಡೋನರ್ಸ್ ಸಂಘಟನೆ ಮಂಗಳೂರು ಇವರ ವತಿಯಿಂದ ನಡೆದ ಅನೇಕ ಸಮಾಜಮುಖಿ ಕಾರ್ಯಗಳು :
YouTube link is : News at V4 NEWS(24*7) channel 


https://youtu.be/6j624UCQLNY