Wednesday 21 December 2016

ಕಥೆ- ಪ್ರಯತ್ನ ನಮ್ಮದಿರಲಿ ಫಲಾಪೇಕ್ಷೆ ಇಲ್ಲದೆಯೇ..

ಕಥಾ ಶೀರ್ಷಿಕೆ :
"ಹಾಕೋದು ಬಿತ್ತೋದು ನನ್ನಿಚ್ಛೆ, ಆಗೋದು ಹೋಗೋದು ಅವನಿಚ್ಛೆ"

ಶೇಕರ್ ಮತ್ತು ಸೀಮಾ ಗೆ "ಮಯೂರಿ" ಒಬ್ಬಳೇ ಮಗಳು. ಮುದ್ದಾಗಿ ಸಾಕಿ ಬೆಳೆಸುತ್ತಾರೆ. ಅವಳಿಗೆ ನೃತ್ಯ ನಾಟ್ಯಕಲೆಯಲ್ಲಿ ಎಲ್ಲಲ್ಲದ ಆಸಕ್ತಿ. ಹಾಗಾಗಿ ತನ್ನ ಮೂರನೇ ವಯಸ್ಸಿನಲ್ಲಿಯೇ ಭರತನಾಟ್ಯಕ್ಕೆ ಸೇರಲು ಇಚ್ಛಿಸುತ್ತಾಳೆ. ಅದರ ತರಬೇತಿ ಪಡೆಯಲು ಹೆತ್ತವರು  ಉತ್ತಮ ಗುರುಗಳ ಹುಡುಕಿ ನಾಟ್ಯಶಾಲೆಗೆ ಸೇರಿಸುತ್ತಾರೆ. ದಿನವೂ ತರಗತಿಯ ಅಭ್ಯಾಸದ ಜೊತೆಜೊತೆಗೆ ಸಂಜೆಯ ಸಮಯದಲ್ಲಿ ನಾಟ್ಯಶಾಲೆಗೂ ಹೋಗಿ ಭರತನಾಟ್ಯವನ್ನೂ ಅಭ್ಯಾಸ ಮಾಡುತ್ತಾಳೆ. ಅವಳೇ ಇಷ್ಟಪಟ್ಟು ಕಲಿಯುತ್ತಿರುವುದರಿಂದ ಅಲ್ಲಿ ತಿಳಿಸಿಕೊಡುವ ಹೆಜ್ಜೆಗಳು ಹಾವಭಾವಗಳು ಕಠಿಣವೆನಿಸಲಿಲ್ಲ. ನೀರು ಕುಡಿದಷ್ಟು ಸುಲಭವಾಗಿ ನರ್ತಿಸುತ್ತಿದ್ದಳು. ಹಾಗೆ ಎಲ್ಲರ ಮನಗೆದ್ದಳು. ಕಠಿಣ ಅಭ್ಯಾಸದ ನಂತರ ಎಲ್ಲರ ಮನಸ್ಸಿನಲ್ಲಿದ್ದಂತೆ ರಂಗಪ್ರವೇಶ ಮಾಡುವ ಸುದಿನ ಬಂದೇ ಬಿಟ್ಟಿತು. ಆ ಸಮಾರಂಭಕ್ಕೆ ಗಣ್ಯಾತಿಗಣ್ಯರನ್ನು ಆವ್ಹಾನಿಸಿದ್ದರು. ಮೊದಲ ಬಾರಿಗೆ ರಂಗಮಂದಿರದಲ್ಲಿ ಬಣ್ಣಹಚ್ಚಿ ,ಕಾಲಿಗೆ ಗೆಜ್ಜೆಕಟ್ಟಿ ನರ್ತಿಸುವ ಸೊಬಗೇ ಬೇರೆಯಾಗಿತ್ತು. ಎಲ್ಲರೂ ಖುಷಿಯಿಂದಲೇ ಸಮಾರಂಭವನ್ನು ನೋಡಿದರು. ಹರಸಿ ತಮ್ತಮ್ಮ ಮನೆಗೆ ಹಿಂದಿರುಗಿದರು.
*
ಆದರೆ ಆ ದಿನವೇ ಅವಳ ಪಾಲಿಗೆ ಕರಾಳ ದಿನವಾಗುತ್ತದೆ ಎಂದು ಯಾರೂ ಎನಿಸಿರಲಿಲ್ಲ. ವಿಧಿಲಿಖಿತ ಬೇರೇಯೇ ಆಗಿತ್ತು. ಅವರು ಮನೆಗೆ ಹಿಂತಿರುವಾಗ ರಾತ್ರಿ ಹತ್ತರ ಸಮಯವಿರಬಹುದು. ಅವರ ಕಾರು ಮುಂಬರುವ ಲಾರಿಗೆ ಡಿಕ್ಕಿ ಹೊಡೆದು ನುಜ್ಜುಗುಜ್ಜಾಯಿತು. ಏನಾಗಿದೆ ಎಂಬ ಅರಿವೇ ಇರಲಿಲ್ಲ. ಪ್ರಜ್ಞೆ ಬರುವಲ್ಲಿಗೆ ತಂದೆ-ತಾಯಿ ಮಗಳು ಮೂವರು ಆಸ್ಪತ್ರೆ ಸೇರಿದ್ದರು. ಮಯೂರಿಯನ್ನು ಪರೀಕ್ಷಿಸಿದ ವೈದ್ಯರು "ಕಾಲಿಗೆ ಬಲವಾಗಿ ಪೆಟ್ಟು ಬಿದ್ದಿದೆ, ಮೂಳೆಗಳೆಲ್ಲ ನುಜ್ಜುಗುಜ್ಜಾಗಿದೆ, ಆಪರೇಶನ್ ಮಾಡಿ "ರಾಡ್" ಅಳವಡಿಸಬೇಕಾಗುತ್ತದೆ ಎಂದರು. ಹೆತ್ತವರಿಗೆ ಅದೊಂದು ಶಾಕ್ ಆಗಿತ್ತು. ಸರಿ ಇನ್ನೇನು ಮಾಡುವುದು ಎಂದು ಒಪ್ಪಿಕೊಂಡರು. ಆರೇಳು ತಿಂಗಳವರೆಗೂ ಮಯೂರಿಗೆ ನಡೆಯಲು ಕಷ್ಟವಾಗುತ್ತಿತ್ತು. ಆದರೆ ಆತ್ಮವಿಶ್ವಾಸ ಕುಂದಲಿಲ್ಲ. ನಿಧಾನಕ್ಕೆ ತಾಯಿ ಸಹಾಯದಿಂದ ಪ್ರದಿ ದಿನ ಮನೆಯ ವರಾಂಡದಲ್ಲಿಯೇ ನಡೆಯುತ್ತಿದ್ದಳು. ಅರ್ಧಕ್ಕೆ ನಿಂತ ತರಗತಿಗೆ ಹೋಗುವುದಕ್ಕೂ ಶುರುಮಾಡಿದಳು. ಅವಳ ಗೆಳತಿಯರು ಓದು ಬರಹದಲ್ಲಿ ಸಹಾಯಮಾಡುತ್ತಿದ್ದರು.
ಒಮ್ಮೆ ಸಂಜೆ ಹೊರಗಡೆಯಿಂದ ಜೋರಾಗಿ ಮಳೆ ಸುರಿಯುತ್ತಿತ್ತು. ಆಗ ಅವಳಿಗೆ ಅವಳ ರೂಮಿನ ಕಪಾಟಿನಲ್ಲಿದ್ದ ಗೆಜ್ಜೆಕಟ್ಟಿನ ನೆನಪಾಯಿತು. ಅದರ ಸಂಗೀತ ಕಿವಿಯನ್ನು ಸುತ್ತುತ್ತಿತ್ತು. ಹಿಂದೊಮ್ಮೆ ಹೀಗೆ ಸುರಿಯುತ್ತಿದ್ದ ಮಳೆಗೆ ಖುಷಿಯಿಂದ ಮನಬಿಚ್ಚಿ ಮಯೂರದಂತೆ ನರ್ತಿಸಿದ್ದು ನೆನಪಾಗಿ ಕಣ್ಣಲ್ಲಿ ಹನಿಯು ತನ್ನಿಂದ ತಾನಾಗೇ  ಜಿನುಗಿತು. ಮತ್ತೆ ಗೆಜ್ಜೆ ಕಟ್ಟಿದಳು. ಕುಂಟುತ್ತಾ ಮನೆಯಿಂದ ಹೊರಗೆ ಬಂದಳು ನರ್ತಿಸಲು ಪ್ರಾರಂಭಿಸಿದಳು.ಅಮ್ಮನಿಗೆ ದೂರದಿಂದ ಈ ಶಬ್ಧಕೇಳಿ ಓಡೋಡಿ ಬಂದರು. ಮಗಳ ಮನಸ್ಸು ನೆನೆದಿತ್ತು. ಅಳು ಬಂದಿತು. ಇಬ್ಬರೂ ತಬ್ಬಿಕೊಂಡು ಅತ್ತರು. ಮನದಮಾತು ವಿನಿಮಯವಾಯಿತು. ಮತ್ತೆ ಮುಂಜಾನೆ ಗುರುಗಳ ಹತ್ತಿರ ಹೋಗಿ ನೃತ್ಯಮಾಡಲು ಅವಕಾಶ ಕೊಡಿ ಎಂದು ಕೇಳಿಕೊಂಡಳು. ಅವರು ಕುಂದದ ಆತ್ಮವಿಶ್ವಾಸ ನೋಡಿ ಹೆಮ್ಮೆಪಟ್ಟರು. ನಿಧಾನಕ್ಕೆ ಒಂದೊಂದೆ ಸುಲಭದ ಹೆಜ್ಜೆಗಳನ್ನು ಕಲಿಸುತ್ತಾ ಅವಳಿಗೆ ಸುಲಭವಾಗುವ ರೀತಿಯಲ್ಲಿಯೇ ಸ್ಪಂದಿಸಿದರು. ಮತ್ತೆ ರಂಗಮಂದಿರಕ್ಕೆ ಗೆಜ್ಕೆಕಟ್ಟಿ ಸಭಿಕರ ಎದುರು ಬಣ್ಣಹಚ್ಚಿ ಮಯೂರಿ ನರ್ತಿಸಿದಳು. ಯಾರಿಗೂ ಅವಳಿಗೆ ಅಪಘಾತದಲ್ಲಿ  ಕಾಲಿಗೆ ಪೆಟ್ಟು ಬಿದ್ದು ರಾಡ್ ಹಾಕಿದ್ದಾರೆ ಎಂದು ಅರಿವಿಗೆ ಬರಲೇ ಇಲ್ಲ. ಅಂತಹ ಅದ್ಭುತ ನರ್ತನ ಕಂಡು ಅವಳಿಗೆ "ನಾಟ್ಯಮಯೂರಿ" ಎಂಬ ಬಿರುದು ಸನ್ಮಾನ ನೀಡಿ ಗೌರವಿಸಿದರು.. ಹೀಗೆ ಸತತ ಪರಿಶ್ರಮದಿಂದ ನಮಗೆ ಗೆಲುವು ಸಿಗುತ್ತದೆ. ಎಂತಹ ಸಂಧರ್ಭದಲ್ಲಿಯೂ ಆತ್ಮವಿಶ್ವಾಸ ಕಡಿಮೆಮಾಡಿಕೊಳ್ಳಬಾರದು ಎಂದು ಎಲ್ಲರಿಗೂ ತೋರಿಸಿಕೊಟ್ಟಳು.

- ಸಿಂಧುಭಾರ್ಗವ್.

No comments:

Post a Comment