Wednesday 29 September 2021

Mom She is Always Great ತಾಯಿಯಾದ ಮೇಲೆ ಆಗುವ ಬದಲಾವಣೆಗಳು


ಲೇಖನ : ತಾಯಿಯಾದ ಮೇಲೆ ಆಗುವ ಬದಲಾವಣೆಗಳು

ಹೆಚ್ಚಿನ ಕಡೆಯಲ್ಲಿ ನೀವು ಗಮನಿಸಿದಂತೆ ೨೦-೨೪ ವರುಷದೊಳಗೆ ಹೆಣ್ಮಕ್ಕಳಿಗೆ ಮದುವೆ ಮಾಡಿಸಿ ಗಂಡನ ಮನೆಗೆ ಕಳುಹಿಸುವುದನ್ನು. ಕೆಲವರಿಗೆ ಮದುವೆಯ ಬಗ್ಗೆ  ಆಸಕ್ತಿ ಇಲ್ಲದಿದ್ದರೂ ಕೂಡ ಮನೆಯವರ ಒತ್ತಾಯದ ಮೇರೆಗೆ ಮದುವೆಯಾಗುತ್ತಾರೆ. ಕೆಲವರು ಮನೆಯವರ ಜವಾಬ್ದಾರಿ ಕಡಿಮೆ ಮಾಡಲು ಒಪ್ಪುತ್ತಾರೆ. ಕೆಲವರಿಗೆ ಮದುವೆ ಬಗ್ಗೆ ಏನೂ ಯೋಚನೆಯೂ ಇಲ್ಲದಿದ್ದರೂ ಮದುವೆಯಾಗಿರುತ್ತದೆ. ಕೆಲವರಿಗೆ ಒತ್ತಾಯದ ಮದುವೆಯಾಗುತ್ತದೆ. ಇನ್ನು ಮದುವೆ ಎಂದರೆ ಬಂಧನ /ಜೈಲು ಎಂದೆಲ್ಲ ಯೋಚಿಸುವವರೂ ಇದ್ದಾರೆ. ಮದುವೆ ಎಂಬುದು ಎರಡು ಮನೆ ಮನಸ್ಸುಗಳ ಬೆಸೆಯುವ ಕೊಂಡಿ. ಹೊಸತನಕ್ಕೆ ಮನಃಪೂರ್ವಕವಾಗಿ ಒಗ್ಗಿಕೊಳ್ಳಲೇಬೇಕು.
ಸಂಭ್ರಮಿಸಬೇಕು. ಖುಷಿಪಡಬೇಕು.

ಅದಕ್ಕೆ ಹೇಳುವುದು ಆಯಾಯ ಸಮಯದಲ್ಲಿ ಏನೇನು ಆಗಬೇಕೋ ಹಾಗೆ ನಡೆದರೆ ಒಳ್ಳೆಯದೆಂದು.  ಹೆಣ್ಮಕ್ಕಳಿಗೆ ಉದ್ಯೋಗ, ಮದುವೆ, ಗಂಡನ ಜೊತೆಗಿನ ಹೊಸ ಜೀವನ ಎಲ್ಲವನ್ನೂ ನಿಭಾಯಿಸುವುದು ಕಷ್ಟ. ಹಾಗೆಯೇ ಇವೆಲ್ಲವನ್ನೂ ನಿಭಾಯಿಸಲು ಶಕ್ತರಾಗುವ ಹೊತ್ತಿಗೆ ವರುಷ ೨೬+ ಆಗಿರುತ್ತದೆ. ಆಗ ಎದುರಾಗುವ ಸಮಸ್ಯೆಗಳು ಬೇರೆಯೇ ಇರುತ್ತದೆ.

ಕೆಲವರಿಗೆ ಅನಿಸುವುದಿದೆ, "ಈಗಿನ ಕಾಲದಲ್ಲೂ ಇಷ್ಟು ಬೇಗ ಮದುವೆ ಮಾಡಿಸೋದಾ..?? ಜಾಬ್ ಗೆ ಹೋಗೋದಿಲ್ವಾ ನಿಮ್ಮ ಸೊಸೆ?!??  ಮನೆಯಲ್ಲೇ ಮಕ್ಕಳ ಸಾಕೊಂಡು ಇದ್ದಾಳಾ?!? " ಎಂದು ಬಾಯಿ ಅಗಲಿಸಿ ಗುಂಡು ಕಣ್ಣು ಮಾಡಿಕೊಂಡು ಕೇಳುತ್ತಾರೆ. ಏನೋ ಅಪರಾಧ ಮಾಡುತ್ತಿರುವಂತೆ, ಅಥವಾ ಅವರಿಗೆ ಮೂರ್ಖರಂತೆ ಕಾಣಿಸುವುದು ಹಾಸ್ಯಾಸ್ಪದ. ತಮ್ಮ ಮೂಲವನ್ನು ಮರೆತು ಈಗಿನ ಕಾಲಕ್ಕೆ ತಕ್ಕಂತೆ ಬದಲಾಗುತ್ತಿರುವವರು ಮಾತ್ರವೇ ಈ ರೀತಿ ಕೇಳುವುದು.

ಬೇಗ ಮದುವೆಯಾದರೆ ಹೆಣ್ಮಕ್ಕಳ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಎಂದು ವೈದ್ಯಕೀಯ ವಲಯವೇ ಹೇಳುತ್ತದೆ. ಒಂದೆರಡು ವರುಷದೊಳಗೆ ಮಗುವಾದರೆ ಮತ್ತೆ ಅವುಗಳ ಲಾಲನೆ ಪಾಲನೆಯಲ್ಲಿ ೧೦ ಹತ್ತು ವರ್ಷಗಳನ್ನು ವ್ಯಯಿಸಬೇಕಾಗುತ್ತದೆ. ನಮ್ಮ ಜೀವಿತದ ಹತ್ತು ವರುಷ ಏನೂ ಅರಿಯದ ಮುಗ್ಧ ಮಕ್ಕಳನ್ನು ಬೆಳೆಸಲು ತ್ಯಾಗ ಮಾಡಬೇಕಾಗುತ್ತದೆ. ಅದೊಂದು ಗ್ರೇಟ್ ಅನುಭವ. ಮಹತ್ವದ ಸಾಧನೆ. ಈಗಿನ ಕಾಲದಲ್ಲಿ ಒಂದು ಸುಸಂಸ್ಕೃತ ವಾತಾವರಣದಲ್ಲಿ ಮಕ್ಕಳ ಬೆಳೆಸುವುದೂ ಅಗತ್ಯವಾಗಿದೆ.

ನಂತರ ೩೪ ವರ್ಷದ ಮೇಲೆ ಕೆಲಸಕ್ಕೆ ಸೇರಬಹುದು. ನಿಮ್ಮ ಜೀವನ ನಿಮಗಾಗಿ ಬದುಕಬಹುದು. ಮಕ್ಕಳು ಶಾಲೆಗೆ ಹೋಗಲು ಪ್ರಾರಂಭಿಸುತ್ತಾರೆ. ಓದುವುದು ಬರೆಯುವುದು, ಗಂಡ ಆಫೀಸಿಗೆ ಹೋದರೆ ಮಕ್ಕಳು ಶಾಲೆಗೆ ಹೋದರೆ ಮನೆ ಖಾಲಿ ಇರುತ್ತದೆ. ಬೇಸರ ಕಳೆಯಲು ನೀವೂ ಉದ್ಯೋಗಕ್ಕೆ ಸೇರಬಹುದು.. ಒಂದು ೫೫-೬೦ ವರುಷಗಳ ಕಾಲ ದುಡಿಯಬಹುದು.

ಹಾಗಾಗಿ ತಾಳ್ಮೆ ಅಗತ್ಯ. ಎಲ್ಲದಕ್ಕೂ ಅತಿಯಾಗಿ ಯೋಚಿಸದೆ ಮಕ್ಕಳಿಗಾಗಿ ಒಂದಷ್ಟು ವರುಷಗಳು ತ್ಯಾಗ ಮಾಡಬೇಕಾಗುತ್ತದೆ.

ಇನ್ನು ತಾಯಿಯಾದ ಮೇಲೆ ಕಂಡ ಬದಲಾವಣೆಗಳು :
*****************************************
ಪ್ರಥಮವಾಗಿ ಸಮಯದ ಅಭಾವ. ನಮಗೆ ಅಂತ ಸಮಯ ಸಿಗುವುದಿಲ್ಲ. ಅತಿಯಾದ ಕೆಲಸ. ಪುಟ್ಟ ಮಕ್ಕಳು ಅವರಾಗೇ ಏನೂ ಮಾಡುವುದಿಲ್ಲವೆಂದಾಗ ಬೆಳಿಗ್ಗೆ ಏಳಿಸಿ ಹಲ್ಲು ಉಜ್ಜಿಸುವುದರಿಂದ ರಾತ್ರಿ ನೀತಿಕತೆ ಹೇಳಿ ಮಲಗಿಸುವ ತನಕ ಎಲ್ಲವೂ ತಾಯಿಯೇ ಮಾಡಬೇಕು. ಹಗಲು - ರಾತ್ರಿ‌ ನಿದಿರೆ ಬಿಡಬೇಕು. ನಮಗಾಗಿ ಕುಳಿತು ತಿನ್ನುವಷ್ಟು ಸಮಯ ಇರುವುದಿಲ್ಲ. ಗಬಗಬ ತಿಂದು, ಅರೆಬರೆ ತಿಂದು ಮಕ್ಕಳ ನೋಡುವುದಾಗುತ್ತದೆ. ಮಗುವಿಗೆ ತಿನಿಸಿದ ಮೇಲೆ ನಮ್ಮ ಹಸಿವು ಇಂಗಿರುತ್ತದೆ. ಸಮಯ ಕಳೆದು ಹೋಗುವುದೇ ತಿಳಿಯುವುದಿಲ್ಲ. ದಪ್ಪ ಆಗುತ್ತಾರೆ. ವ್ಯಾಯಾಮ ಮಾಡಲು ಸಮಯವಿರುವುದಿಲ್ಲ. ಹಾಡು ಸಿನೆಮಾ ಓದುವುದು ಯಾವುದಕ್ಕೂ ವೈಯಕ್ತಿಕ ಸಮಯ ಸಿಗುವುದಿಲ್ಲ. ಮಕ್ಕಳ ಆರೋಗ್ಯ ಕೆಟ್ಟಾಗ ವೈದ್ಯರ ಬಳಿ ಓಡಿ ಹೋಗಿ ಕಾದು ಔಷಧಿ ಕೊಡಿಸಬೇಕು. ರಾತ್ರಿ ನಿದಿರೆ ಬಿಟ್ಟು ಅವರ ಆರೈಕೆ ಮಾಡಬೇಕು.

ಗಂಡನ ಜೊತೆ ಏಕಾಂತವಾಗಿ ಸಮಯ ಕಳೆಯಲು ಆಗುವುದಿಲ್ಲ. ಅವನಿಗೆ ಬೇಸರವಾದರೆ ನಮಗೂ ಬೇಸರ. ಕೆಲವು ಗಂಡಸರು ಕೊಂಚಕೊಂಚವೇ ಬದಲಾಗುತ್ತ ಹೋಗುತ್ತಾರೆ. ಉದ್ಯೋಗಕ್ಕೆ ಹೋಗುವವರು ಕೆಲವೊಮ್ಮೆ ತಮ್ಮ ವೃತ್ತಿಯನ್ನು ನಿಲ್ಲಿಸಿ ಮಗುವಿನ ಪಾಲನೆಯಲ್ಲಿ ತೊಡಗಬೇಕಾಗುತ್ತದೆ. ಕಾರಣ ಸಹಾಯಕ್ಕೆ ಆಯಾ, ಅಥವಾ ಬೇರೆ ಯಾರೂ ಇರದಿದ್ದಾಗ ಈ ಸಮಸ್ಯೆ ಎದುರಾಗುತ್ತದೆ.

ಮಕ್ಕಳ ಎದುರು ಅಳುವ ಹಾಗಿಲ್ಲ. ಬೇಸರವಾದರೆ ತೋಡಿಕೊಳ್ಳುವ ಹಾಗಿಲ್ಲ. ಓಡೋಡಿ ಬಂದು "ಯಾಕಮ್ಮ ಅಳುವೆ " ಎಂದು ಕೇಳುವರು. ಸದಾ ನಗುತ್ತ ಇರಬೇಕು. ನಮ್ಮ ಮನಸ್ಸಿನ ನೋವನ್ನು ನಾವೇ ಯಾವುದೋ ಮೂಲೆಯಲ್ಲಿ ಮಕ್ಕಳಿಗೆ ಗೊತ್ತಾಗದ ಹಾಗೆ ಅಳಬೇಕು. ಅವರೆದು ಹೇಳುವ ಹಾಗಿಲ್ಲ. ನಕಾರಾತ್ಮಕವಾಗಿ ಯೋಚಿಸುವ ಹಾಗಿಲ್ಲ,ಮಾತನಾಡುವ ಹಾಗಿಲ್ಲ. ಸಮಾಧಾನ ಮಾಡಿಕೊಳ್ಳಬೇಕು. ಹೊಂದಿಕೊಂಡು ಹೋಗಬೇಕು. ಸಹಿಸಿಕೊಳ್ಳಬೇಕು. ಕೆಲವರಿಗೆ ಗಂಡ ಸರಿಯಿಲ್ಲದಿದ್ದರೆ ಕೂಡ ಮಕ್ಕಳ ಎದುರು ದೂರು ಹೇಳಬಾರದು. ಮಕ್ಕಳ ಎದುರೇ ಗಂಡನೊಂದಿಗೆ ಜಗಳ ಮಾಡಬಾರದು. ಗಂಡನ ಬಗ್ಗೆ ಕೇವಲ ವಾಗಿ ಮಾತನಾಡಬಾರದು.  ಅವರಿಗೆ ಕೂಡ ತಂದೆಯ ಬಗ್ಗೆ ಕೆಟ್ಟ ಅಭಿಪ್ರಾಯ ಬೆಳೆಯಲು ಕಾರಣವಾದೀತು. ಅವರು ಕೂಡ ತಂದೆಗೆ  ಗೌರವ ಕೊಡದಿರಬಹುದು.

ಬದುಕು ಏನೆಲ್ಲ ಕಲಿಸಿಕೊಡುತ್ತದೆ. ಮೊದಲಿಗೆ ಸಹನೆ ತ್ಯಾಗ ಒಂದೇ ನಾಣ್ಯದ ಎರಡು ಮುಖಗಳಂತೆ. ಹೆಣ್ಣಿಗೆ ಅದೇ ಭೂಷಣ. ತಾಯಿಯಾಗಿ ಮಕ್ಕಳಿಗೆ ಓದಿಸುವುದು ಬರೆಯಲು ಕಲಿಸಿಕೊಡಬೇಕು. ಸ್ನೇಹಿತರ ಜೊತೆಗೆ ಹೇಗೆ ಸ್ನೇಹದಿಂದ ಇರಬೇಕು ಎಂಬುದೂ ತಿಳಿಸಿಕೊಡಬೇಕು. ಹೆದರದೇ ಧೈರ್ಯದಿಂದ ಇರಲು , ಮಾತನಾಡಲು ಕಲಿಸಿಕೊಡಬೇಕು. ನೀತಿ ಕತೆಗಳನ್ನು ಹೇಳಿಕೊಡಬೇಕು.

ಅಮ್ಮ - ಹೇಗೆ ಗ್ರೇಟ್ ಎಲ್ಲರಿಗಿಂತ ಒಂದು ಹಂತ ಮೇಲೆಯೇ ಇರುವುದು ಎಂದು ಯೋಚಿಸುವುದಕ್ಕಿಂತ ಹಾಗೆಯೇ ಬಾಳಿ ತೋರಿಸಬೇಕು. ಮಕ್ಕಳಿಗೆ ಅಮ್ಮನೇ ಸರ್ವಸ್ವ. ಅವಳನ್ನು ನೋಡುತ್ತಲೇ ಅವಳ ಒಡನಾಟದಲ್ಲೇ ಬೆಳೆಯುತ್ತಾರೆ. "ಅಮ್ಮ... ಅಮ್ಮಾ..." ಎಂದು ಕಾಲಿಗೆ ಸುತ್ತು ಹಾಕಿಕೊಂಡಿರುತ್ತಾರೆ. ಪ್ರತಿಯೊಂದಕ್ಕೂ ಅಮ್ಮನನ್ನೇ ಅವಲಂಭಿಸಿಕೊಂಡಿರುತ್ತಾರೆ. ಅಮ್ಮನಿಲ್ಲದ ಮನೆಯೇ ಶೂನ್ಯ ವಾತಾವರಣ.

ಅತಿಯಾಗಿ ನಗಲೂ ಹಾಸ್ಯ ಮಾಡಿಕೊಂಡು ಚಿಲ್ ಔಟ್ ಮಾಡಲೂ ಸಾಧ್ಯವಾಗದು. ಅಮ್ಮ ಯಾವಾಗಲೂ ಎಲ್ಲವನ್ನೂ ತ್ಯಜಿಸುವವಳು.  ಮಮತೆಯ ಸ್ಥಾನವನ್ನು ತುಂಬಿಸುವವಳು. ಆತ್ಮಬಲ, ಶಕ್ತಿ , ಧೈರ್ಯ ನೀಡುವವಳು. ಅಮ್ಮನ ಸ್ಥಾನ ಪಡೆದ ಮೇಲೆ ಏನೆಲ್ಲ ಅನುಭವವಾಗುವುದು. ಇದು ನಿಜಕ್ಕೂ ಗ್ರೇಟ್.

ಧನ್ಯವಾದಗಳು
ಸಿಂಧು ಭಾರ್ಗವ ಬೆಂಗಳೂರು

(ಲೇಖಕಿ)

Tuesday 28 September 2021

ಲೇಖನ : ಹೆಣ್ಣಿನ ಶೋಷಣೆಗೆ ಕೊನೆ ಎಂತು??

 

Source images stop abused save girls

ಲೇಖನ : ಹೆಣ್ಣಿನ ಶೋಷಣೆಗೆ ಕೊನೆ ಎಂತು??

ಹೆಣ್ಣು ಮನೆ ಬೆಳಗುವ ದೀಪ. ಸದಾ ತನ್ನವರ ಒಳಿತನ್ನೇ ಬಯಸುವವಳು. ತನ್ನ ವಯೋಸಹಜ ಆಸೆ ಆಕಾಂಕ್ಷೆಗಳನ್ನು ಬದಿಗಿಟ್ಟು ಬದುಕುವ ತ್ಯಾಗಮಯಿ. ಆದರೆ ಹೆಣ್ಣಾಗಿ ಹುಟ್ಟಿದಿ ನೀ ಹುಣ್ಣಿನಂತ ಬಾಳು ಬದುಕು, ಮಣ್ಣಾಗುವ ವರೆಗೂ ನೀ ಎಲ್ಲವನ್ನೂ ಸಹಿಸು ಎಂಬರ್ಥದ ಹಿರಿಯ ಜನಪದ ಹಾಡನ್ನು ಕೂಡ ನಾವು ಕೇಳಿರುತ್ತೇವೆ.  ಹೆಣ್ಣಾಗಿ ಹುಟ್ಟಿದುದಕ್ಕೆ ಎಲ್ಲವನ್ನೂ ಸಹಿಸಿಕೊಂಡು ಹೋಗಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಮನೆಯಲ್ಲಿ ಮಾತ್ರವಲ್ಲದೇ ಈ ಸಮಾಜದಲ್ಲಿ, ವೃತ್ತಿಜೀವನದಲ್ಲಿ ಅದೆಷ್ಟೋ ಮಹಿಳೆಯರು ಕಿರುಕುಳ, ಒತ್ತಡದ , ದೌರ್ಜನ್ಯಕ್ಕೆ ಒಳಗಾಗುತ್ತಾರೆ. ಕೆಲವರು ಮೂಕವೇದನೆ ಅನುಭವಿಸುತ್ತಾರೆ. ಕೆಲವರು ಅಂತಹ ಸ್ಥಳದಿಂದ ಹೊರನಡೆಯುತ್ತಾರೆ. ಇನ್ನೂ ಕೆಲವರು ಇಹಲೋಕ ತ್ಯಜಿಸುವುದೂ ಉಂಟು.

ಹಾಗಾಗಿ ಹೆಣ್ಣಿನ ಶೋಷಣೆಗೆ ಕೊನೆ ಇಲ್ಲ ಎಂದೇ ಹೇಳಬಹುದು.  ಕೆಲವರಿಗೆ ಹೆಣ್ಣು ಮಗು ಹುಟ್ಟಿತೆಂದು ಸಸಾರ. ಇನ್ನು ಕೆಲವರಿಗೆ ಕೆಲಸದ ಆಳು, ಮನೆಯಲ್ಲಿಯೇ ಬಿದ್ದಿರಬೇಕು. ವರದಕ್ಷಿಣೆ ಕಿರುಕುಳದಿಂದ ಅಮಾನವೀಯ ಕೃತ್ಯ ಎಸಗುವುದು ಸರ್ವೇಸಾಮಾನ್ಯವಾದ ಸಂಗತಿ. ಯಾರೊಂದಿಗೂ ಹೇಳಿಕೊಳ್ಳುವ ಹಾಗಿಲ್ಲ. ಹೇಳಿದರೂ ಸಾಂತ್ವಾನದ ಮಾತುಗಳು ಕೇಳಿ ಬರುವ ಬದಲು "ಎಲ್ಲರ ಮನೆಯ ದೋಸೆ ತೂತೆ...ಹೊಂದಿಕೊಂಡು ಹೋಗು .." ಎಂಬ ಮಾತು ತೇಲಿಸಿಬಿಡುತ್ತಾರೆ. ಆಕೆಯ ಮನಸ್ಸಿನ ಮೇಲಾಗುವ ಪರಿಣಾಮಗಳನ್ನು ಯಾರೂ ಅರ್ಥಮಾಡಿಕೊಳ್ಳಲು ಹೋಗುವುದಿಲ್ಲ. ಇಷ್ಟೇ ಅಲ್ಲದೇ ಇನ್ನೊಂದು ಮುಖವಾಗಿ ತಮ್ಮ ಯವ್ವನದ ಕಾಮಕೇಳಿಗೆ ಗರ್ಭಿಣಿಯಾಗಿ ಗರ್ಭಪಾತ ಮಾಡಿಸಿಕೊಳ್ಳುವ ಹೆಣ್ಮಕ್ಕಳು, ಅಥವಾ ಹೆತ್ತು ತೊಟ್ಟಿಯಲ್ಲಿ ಶಿಶುವನ್ನು ಎಸೆದು ಹೋಗುವವರು ಇದ್ದಾರೆ. ಮಾದಕ ದ್ರವ್ಯಗಳ ಸೇವನೆಗೆ ಬಲಿಯಾಗಿ ಹೆಣ್ಮಕ್ಕಳು ತಮ್ಮ ಸುಂದರ ಬದುಕನ್ನು ನಾಶಮಾಡಿಕೊಳ್ಳುವವರೂ ಇದ್ದಾರೆ. ಇನ್ನು ಹಣದ ಆಸೆಗೆ ವೇಶ್ಯಾವಾಟಿಕೆ  ದಂಧೆಗೆ ನೂಕುವ ಕ್ರೂರಿಗಳು, ಎಳೆ ಮಗುವಿನಿಂದಾದಿಯಾಗಿ ವೃದ್ಧ ಹೆಂಗಸು, ಬಿಕ್ಷುಕಿಯನ್ನೂ ಬಿಡದೇ ನಡೆಯುವ ಅತ್ಯಾಚಾರಗಳು, ಕೊನೆಗೆ ವಿಷಯ ಹೊರಬರಬಾರೆಂದು ಕೊಲೆಯಲ್ಲಿ ಅಂತ್ಯ. ತಮ್ಮ ಕೈಗೆ ಸಿಗದಿದ್ದರೆ ಶೀಲಗೆಟ್ಟವಳೆಂಬ ಪಟ್ಟ ಕಟ್ಟುವುದು ಇಲ್ಲ ಕೆಲ ಗಂಡಸರು ತಮ್ಮ ಹೆಂಡತಿಯ ಮೇಲೆಯೇ ಶಂಕೆ ಪಡುವುದು... ಒಂದೇ ಎರಡೇ...

            ಇದೆಲ್ಲವೂ ಸಮಾಜದಲ್ಲಿ ನಡೆದಾಗ ಉಳಿದ ಹೆಣ್ಮಕ್ಕಳ ರಕ್ತ ಕುದಿಯುತ್ತದೆ. ಅದೇ ತನಗೇ ಹಾಗೆ ಆದಾಗ ಬಾಯಿ ಮುಚ್ಚಿಕೊಂಡು ಸಹಿಸಿಕೊಳ್ಳುತ್ತಾರೆ. ಕೆಲವರು ಮುಂದೆ ಬಂದು ದನಿ ಎತ್ತಿದರೂ ಕಾಣದ ಬಲಿಷ್ಠ ಕೈಗಳು ಅಲ್ಲಿಯೇ ಕ್ಷೀಣಿಸುವ ಹಾಗೆ ಮಾಡಿ ಬಿಡುತ್ತಾರೆ. ಕೆಲವರಿಗೆ ಮಾತ್ರವೇ ನ್ಯಾಯ ಸಿಗುತ್ತದೆ.

Source images: save girls, stop abused


ಅತ್ಯಾಚಾರ, ಆಸಿಡ್ ದಾಳಿ, ಕೊಲೆಯತ್ನ, ಹಲ್ಲೆ ಇವೆಲ್ಲದಕ್ಕೂ ಅವಳ ಮೇಲಿನ ದ್ವೇಷಕ್ಕೆ ಇರಬಹುದು. ಪ್ರೀತಿಯ ವಿಚಾರಕ್ಕಿರಬಹುದು. ಹಣಕ್ಕಾಗಿ ಕೂಡ ಕೃತ್ಯವೆಸಗಬಹುದು. ಅಥವಾ ಅಚಾನಕ್ ಆಗಿ ಯಾರು ಅಪರಿಚಿತನಿಂದಲೂ  ಅತ್ಯಾಚಾರಕ್ಕೊಳಗಾಗಬಹುದು. ಆಸಿಡ್ ದಾಳಿಗಳಾಗಬಹುದು. ಮಹಿಳೆಯರು ಮತ್ತು ಮಕ್ಕಳ ಮೇಲೆ ಆಗುವ ಇಂತಹ ದೌರ್ಜನ್ಯಕ್ಕೆ ತಕ್ಕ ಶಿಕ್ಷೆಯನ್ನು ನಮ್ಮ ಕಾನೂನು ಜಾರಿಗೊಳಿಸಿದರೆ ಅದರ ಭಯ ಅಪರಾಧಿಗಳಿಗೆ ಮೂಡುವುದು ಸುಳ್ಳಲ್ಲ. ಅತ್ಯಾಚಾರಕ್ಕೆ ಒಳಗಾದ ಸಂತೃಸ್ತೆಯ ಹೇಳಿಕೆ ಪಡೆದು ಅಪರಾಧಿಗಳ ಹುಡುಕಿ, ಅಪರಾಧವೆಸಗಿದ್ದು ಸಾಬೀತಾದರೆ ನೇರವಾಗಿ ಗುಂಡಿಕ್ಕಿ ಸಾಯಿಸುವ ಶಿಕ್ಷೆ ನೀಡಬೇಕು. ಕೆಲವು ಸಂತೃಸ್ತರು ದೂರನ್ನು ದಾಖಲಿಸಲು ಮುಂದೆ ಬರುವುದೇ ಇಲ್ಲ. ಮತ್ತೊಂದಿಷ್ಟು ಪ್ರಶ್ನೆಗಳ ಕೇಳಿ ಮನಸ್ಸನ್ನು ಘಾಸಿಗೊಳಿಸುತ್ತಾರೆ ಎಂಬ ಭಯ. ಅಥವಾ ಆಕೆಗೂ ಹಾಗು ಮನೆಯವರಿಗೂ ಅವಮಾನದ ಮೇಲೆ ಅವಮಾನ ಎದುರಿಸುವ ಆತ್ಮಸ್ಥೈರ್ಯ ಕುಂದಿರುವುದು ಇದಕ್ಕೆ ಕಾರಣ ಎನ್ನಬಹುದು.

ಕೆಲವೊಮ್ಮೆ ಆಕೆಯ‌ ಮನೆಯವರಿಗೆ ಒಂದಷ್ಟು ಹಣ ನೀಡಿಯೋ, ಇಲ್ಲ ಮದುವೆ ಮಾಡಿಕೊಂಡೋ ವಿಷಯವನ್ನು ಅಲ್ಲೇ ಮುಚ್ಚಿಹಾಕುತ್ತಾರೆ. ಕಾರಣ, ಕೆಲವೊಮ್ಮೆ ಅತ್ಯಾಚಾರವು ಪರಿಚಿತರಿಂದಲೇ ನಡೆಯುವುದು. ಮಹಿಳೆಯ ಮೇಲಾಗುವ ದೌರ್ಜನ್ಯ ,ಹಿಂಸೆಯು ಕೂಡ ಹಿರಿಯರ ಸಮ್ಮುಖದಲ್ಲಿ ಮಾತುಕತೆ ಸಂಧಾನದ ಮೇಲೆ ವಿಷಯವು ಅಲ್ಲೇ ತಣ್ಣಗಾಗುವುದು. ಹಾಗಾಗಿ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸರ್ಕಾರವಾಗಲಿ ,ಕಾನೂನಾಗಲಿ ಕಠಿಣ ಶಿಕ್ಷೆಯನ್ನು ವಿಧಿಸಿದರೆ ಮಾತ್ರವೇ ಇಂತಹ ಘಟನೆಗಳು ಮರುಕಳಿಸದಂತೆ ಇರಲು ಸಾಧ್ಯ. ಅಲ್ಲದೇ ತಮಗಾದ ಅನ್ಯಾಯದ ವಿರುದ್ಧ ದನಿ ಎತ್ತಲು ಮಹಿಳೆಯರಿಗೆ ಧೈರ್ಯಬರುವುದು. ಅಂತಹ ಕೂಪದಲ್ಲಿ ಬಿದ್ದು ಸಾಯುವುದಕ್ಕಿಂತ ಸ್ವತಂತ್ರವಾಗಿ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಾಗುವುದು.

ಮಹಿಳೆಯರಾಗಿ ಇಂತಹ ವಿಷಮ ಸ್ಥಿತಿಯಲ್ಲಿ ಧೈರ್ಯಗೆಡಬಾರದು. ಬದುಕು ಕಟ್ಟಿಕೊಳ್ಳಬೇಕು. ಈ ಸಮಾಜ ಆಡುವ ಚುಚ್ಚು ಮಾತಿಗೆ ಧೃತಿಗೆಡದೆ ತಲೆ ಎತ್ತಿ ಬಾಳಬೇಕು. ನ್ಯಾಯಕ್ಕಾಗಿ ಹೋರಾಡಬೇಕು. ಇಲ್ಲ ಅಂತಹ ಕೆಟ್ಟ ಪರಿಸರದಿಂದ ಹೊರಬಂದು ಹೊಸ ಜೀವನ ಪ್ರಾರಂಭಿಸಬೇಕು. ಬದಲಾಗಿ ಸಾವಿಗೆ ಶರಣಾಗಬಾರದು. ಈ ಜಗತ್ತಿನಲ್ಲಿ ಸಾಂತ್ವಾನ ಹೇಳುವ ಕೈಗಳು ಕೂಡ ಇವೆ‌. ನೆನಪಿರಲಿ. ಹೆಣ್ಣನ್ನು ಕೇವಲ ಭೋಗದ ವಸ್ತುವಾಗಿ, ಹೆರುವ ಯಂತ್ರವಾಗಿ, ವರದಕ್ಷಿಣೆ ತಂದು ಕೊಡುವ ATM ಯಂತ್ರವಾಗಿ ನೋಡುವ ಬದಲು, ನಾನಾ ಕಾರಣ ಒಡ್ಡಿ ಪೀಡಿಸುವ ಬದಲು ಅವಳಿಗೂ ಮನಸ್ಸಿದೆ. ನೋಯಿಸದಿರಿ. ಬದುಕಲು ಬಿಡಿ ಎಂಬುದ ಅರ್ಥ ಮಾಡಿಕೊಳ್ಳಿರಿ.

ಸಿಂಧು ಭಾರ್ಗವ್ | ಬೆಂಗಳೂರು-೨೧
ಬರಹಗಾರ್ತಿ

Uses of Amla Custurd Apple and Gauva ಸೀಬೆಹಣ್ಣು, ಸೀತಾಫಲ ಹಾಗು ನೆಲ್ಲಿಕಾಯಿಯ ಉಪಯೋಗ

ಕನ್ನಡ ಲೇಖನ


ಮಾರುಕಟ್ಟೆಯ ಆವರಿಸಿದ ಸೀತಾಫಲ ಹಾಗೂ ಸೀಬೆಹಣ್ಣುಗಳು

ಕಾಲಕ್ಕೆ ತಕ್ಕಂತೆ ಕೋಲ ಕಟ್ಟು ಎಂಬ ಹಿರಿಯರ ನಾಣ್ನುಡಿಯಂತೆ ಆಯಾಯ ಕಾಲಕ್ಕೆ ತಕ್ಕಂತೆ ನಾವು ಹೊಂದಿಕೊಂಡು ಬದುಕಬೇಕು. ನಮ್ಮ ಆಹಾರಕ್ರಮದಲ್ಲಿ ಋತುಗಳಿಗೆ ಅನುಗುಣವಾಗಿ ಕೂಡ ಬದಲಾವಣೆ ಮಾಡಿಕೊಳ್ಳಬೇಕು. ಈಗ ಲ್ಲಿ ಗಲ್ಲಿಯಲ್ಲಿ, ತಳ್ಳೋ ಗಾಡಿಯಲ್ಲಿ, ತರಕಾರಿ ಸಂತೆಗಳಲ್ಲಿ ಕಾಣ ಸಿಗುವ ಹಣ್ಣುಗಳೆಂದರೆ ಸೀಬೆಹಣ್ಣು ಹಾಗೂ ಸೀತಾಫಲ ಹಣ್ಣುಗಳ ರಾಶಿ. ಜೊತೆಗೆ ನೆಲ್ಲಿಕಾಯಿಯು ತನ್ನ ಸ್ಥಾನವನ್ನು ಪಡೆದಿದೆ. ಒಮ್ಮೆ ಗಮನಿಸಿದರೆ ವಿಟಮಿನ್ ಸಿ ಅಂಶ ಹೇರಳವಾಗಿರುವ ಈ ಹಣ್ಣುಗಳು ಈಗಿನ ಮಾಸಕ್ಕೆ ನಮ್ಮ ದಿನನಿತ್ಯದ ಬಳಕೆಯಾಗಬೇಕು. ಇವುಗಳ ಉಪಯೋಗ, ಏಕೆ ಬಳಸಬೇಕು ಎಂದು ನೋಡೋಣ.

ಮೊದಲಿಗೆ ಸೀಬೆಹಣ್ಣು : 

Uses of Gauva Fruits



ನಮ್ಮ ದೇಶದಲ್ಲಿ ಅದರಲ್ಲೂ ಕರ್ನಾಟಕಲ್ಲಿ ಅಗಸ್ಟ್ ಮಾಸದಲ್ಲಿಯೇ ಸೀಬೆಹಣ್ಣುಗಳು ಕಟಾವಿಗೆ ಬರುವುದು. ಒಂದಷ್ಟು ಜನರು ನೇರವಾಗಿ ತೋಟಕ್ಕೆ ಹೋಗಿ ಹಣ್ಣುಗಳ ಖರೀದಿಸಿದರೆ, ಹೆಚ್ಚಿನವರು ಮಾರುಕಟ್ಟೆಯಲ್ಲಿ ಬರುವ ಈ ಸೀಬೆಹಣ್ಣನ್ನು ಖರೀದಿಸುವರು. ಕೆ.ಜಿಗೆ 40-50  ರೂಪಾಯಿ ದರವನ್ನು ನಿಗದಿ ಮಾಡಲಾಗಿರುತ್ತದೆ. ಬಿಳಿ ಬಣ್ಣದ, ಕಡುಗುಲಾಬಿ, ಕೆಂಪು ಬಣ್ಣದ ತುಂಬಾ ಸಿಹಿಯಾದ, ಸ್ಪಲ್ಪ ಸಿಹಿಯಾದ ಹಣ್ಣುಗಳ ನಾವು ಕಾಣಬಹುದಾಗಿದೆ. ಅದರಲ್ಲಿಯೂ ಅತ್ಯಂತ ದೊಡ್ಡ ಗಾತ್ರದ ಥೈಲ್ಯಾಂಡ್ ನ ಸೀಬೆಹಣ್ಣುಗಳು ಕೂಡ ನಮ್ಮ ರಾಜ್ಯಕ್ಕೆ ಲಗ್ಗೆ ಇಟ್ಟಿವೆ ಎನ್ನಬಹುದು. ಒಂದು ಹಣ್ಣು ಸುಮಾರು ೭೦೦-೭೫೦ ಗ್ರಾಂ ತೂಕ ತೂಗುತ್ತದೆ.
ಸೀಬೆಹಣ್ಣು ಎಲ್ಲ ಕಾಲದಲ್ಲೂ ಬೆಳೆಯುವ ಬೆಳೆಯಾಗಿದೆ. ಇದರ ಎಲೆಗಳು ಕೂಡ ಉಪಯೋಗಕಾರಿ. ವಿಟಮಿನ್ ಸಿ ಅಂಶ ಹೇರಳವಾಗಿ ಈ ಹಣ್ಣಿನಲ್ಲಿರುತ್ತದೆ. ಅಲ್ಲದೇ ಐರನ್,ಕ್ಯಾಲ್ಸಿಯಂ, ವಿಟಮಿನ್ ಎ ಅಂಶವೂ ಒಳಗೊಂಡಿದೆ. ಕೊಬ್ಬಿನಂಶ ಅತ್ಯಂತ ಕಡಿಮೆಯಿರುವ ಈ ಹಣ್ಣನ್ನು ಎಲ್ಲರೂ ಸೇವಿಸಬಹುದು. ಬಡವರ ಸೇಬು ಎಂದೇ ಹೆಸರುವಾಸಿಯಾದ ಈ ಹಣ್ಣನ್ನು ಪ್ರತಿದಿನ ಒಂದೊಂದು ಹಣ್ಣನ್ನು ತಿಂದರೆ ಜೀರ್ಣಕ್ರಿಯೆ ವೃದ್ಧಿಸುತ್ತದೆ. ಕಿತ್ತಳೆ ಹಣ್ಣಿಗಿಂತ ಅತಿ ಹೆಚ್ಚು ವಿಟಮಿನ್‌ ಸಿ ಅಂಶ ಹೊಂದಿರುವ ಈ ಹಣ್ಣು ಸೇವಿಸುವುದರಿಂದ ಅಲ್ಜೈಮರ್‌, ಅರ್ಥರೈಟಿಸ್‌ ಹಾಗೂ ಕಣ್ಣಿನ ಪೂರೆಯುಂಟಾಗುವಂತಹ ಕಾಯಿಲೆಗಳನ್ನು ದೂರಾಗಿಸುತ್ತದಂತೆ. ಅಷ್ಟೇ ಅಲ್ಲದೆ ಕ್ಯಾನ್ಸರ್‌ ಹಾಗೂ ಹೃದಯ ಕಾಯಿಲೆಗಳನ್ನು ದೂರವಿಡುತ್ತದಂತೆ.
ಹಣ್ಣಿಗೆ ಸ್ವಲ್ಪ ಪುಡಿ ಉಪ್ಪು ಹಾಗೂ ಕಾಳುಮೆಣಸಿನ ಪುಡಿ ಬೆರೆಸಿ ತಿಂದರೆ ಇನ್ನೂ ರುಚಿಯಾಗಿರುತ್ತದೆ.

ಸೀತಾಫಲ ಹಣ್ಣು :

Uses of Custerd Apple


 ಮಳೆಗಾಲದಲ್ಲಿ ಹೇರಳವಾಗಿ ಕಾಣಸಿಗುವ ಹಣ್ಣುಗಳಲ್ಲಿ ಇದು ಕೂಡ ಒಂದು. ಇದರಲ್ಲಿ ಕೂಡ ವಿಟಮಿನ್ ಸಿ ಹಾಗೂ ವಿಟಮಿನ್ ಎ ಯಥೇಚ್ಛವಾಗಿ ಸಿಗುತ್ತದೆ. ಇದು ವಿಪರೀತ ಸಿಹಿಯಾದ ಹಣ್ಣಾಗಿದೆ.  ಕಣ್ಣಿನ ದೃಷ್ಟಿಯನ್ನು ಅಭಿವೃದ್ಧಿ ಪಡಿಸುವಲ್ಲಿ ಸೀತಾಫಲ ಹಣ್ಣು ಪ್ರಮುಖ ಪಾತ್ರವಹಿಸುತ್ತದೆ. ಏಕೆಂದರೆ ಈ ಮೇಲಿನ ವಿಟಮಿನ್ ಅಂಶಗಳು ಇದರಲ್ಲಿ ಇರುವುದರ ಜೊತೆಗೆ ರಿಬೋಫ್ಲಾವಿನ್, ವಿಟಮಿನ್ ಬಿ2 ಅಂಶಗಳು ಕೂಡ ಆಗಿರುವುದರಿಂದ ಫ್ರೀ ರಾಡಿಕಲ್ ಅಂಶಗಳ ವಿರುದ್ಧ ಹೋರಾಡುವ ಆಂಟಿ ಆಕ್ಸಿಡೆಂಟ್ ರೂಪಗಳು ನಿಸರ್ಗದತ್ತವಾಗಿ ಈ ಹಣ್ಣುಗಳಲ್ಲಿ ಸಿಗುತ್ತವೆ. ನಿಮ್ಮ ಕಣ್ಣಿನ ಹಲವಾರು ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸುವಲ್ಲಿ ಇವುಗಳ ಪಾತ್ರ ತುಂಬಾ ದೊಡ್ಡದು. ನಾರಿನ ಅಂಶ ಹಾಗೂ ಮ್ಯಾಗ್ನೀಶಿಯಂ ಇದರಲ್ಲಿ ಇರುವುದರಿಂದ ಜೀರ್ಣಕ್ರಿಯೆಗೆ ಸಹಕಾರಿ. ಮಲಬದ್ಧತೆ ಸಮಸ್ಯೆ ದೂರವಾಗಿಸುತ್ತದೆ. ಬಾಯಿಯ ಹುಣ್ಣಿಗೆ ಕೂಡ ರಾಮಬಾಣ. ಸೀತಾಫಲ ಹಣ್ಣುಗಳಲ್ಲಿ ಮೆಗ್ನೀಷಿಯಂ ಮತ್ತು ಪೊಟ್ಯಾಷಿಯಂ ಅಂಶದ ಪ್ರಮಾಣ ತುಂಬಾ ಹೆಚ್ಚಾಗಿ ಕಂಡುಬರುತ್ತದೆ. ಹೃದಯದ ಕಾಯಿಲೆಗಳನ್ನು ದೂರ ಇರಿಸುವ ಮತ್ತು ಮಾಂಸಖಂಡಗಳ ಅಭಿವೃದ್ಧಿಯಲ್ಲಿ ನೆರವಾಗುವ ಜೊತೆಗೆ ರಕ್ತದ ಒತ್ತಡವನ್ನು ಕೂಡ ನಿಯಂತ್ರಣ ಮಾಡಿಕೊಳ್ಳುವ ನಿಟ್ಟಿನಲ್ಲಿ ಸೀತಾಫಲ ಹಣ್ಣುಗಳನ್ನು ಸೇವನೆ ಮಾಡಬಹುದು. ಅಲ್ಲದೆ ಕೊಲೆಸ್ಟರಾಲ್‌ ಪ್ರಮಾಣ ಕಡಿಮೆ ಮಾಡಲು ಸಹಕಾರಿಯಾಗಿದೆ.

ನೆಲ್ಲಿಕಾಯಿ : 



ಬೆಟ್ಟದ ನೆಲ್ಲಿ ಎಂದೇ ಖ್ಯಾತಿಪಡೆದ ನೆಲ್ಲಿಕಾಯಿಯಲ್ಲಿ ಕೂಡ ವಿಟಮಿನ್ ಸಿ ಅಂಶ ಅತ್ಯಧಿಕವಾಗಿರುತ್ತದೆ. ಈಗ ಮಾರುಕಟ್ಟೆಯಲ್ಲಿ ಸುಲಭವಾಗಿ ಸಿಗುವ ನೆಲ್ಲಿಕಾಯಿಯನ್ನು ತಂದು ಕತ್ತರಿಸಿ ಪುಡಿ ಉಪ್ಪು ಬೆರೆಸಿ ಸೇವಿಸಬಹುದು. ಇದು ಹುಳಿ, ಒಗರು, ಸಿಹಿ ಅಂಶವನ್ನು ಒಳಗೊಂಡಿದೆ. ಇಲ್ಲವೇ ಉಪ್ಪಿನ ಕಾಯಿ ಮಾಡಿಟ್ಟು ಶೇಕರಿಸಿಡಬಹುದು. ಹಾಗೆಯೇ ಕತ್ತರಿಸಿ ಒಣಗಿಸಿ ಡಬ್ಬಿಯಲ್ಲಿ ಸಂರಕ್ಷಿಸಿಡಬಹುದು. ಪ್ರತಿದಿನ ಒಂದೆರಡು ನೆಲ್ಲಿ ಎಸಳು ತಿಂದು ನೀರು ಕುಡಿದರೆ ಕ್ಯಾಲ್ಸಿಯಂ ಅಂಶ ವೃದ್ಧಿಸುತ್ತದೆ. ಸಂಪೂರ್ಣ ದೇಹದ ಆರೋಗ್ಯ ಹೆಚ್ಚಿಸಲು ಸಹಕಾರಿಯಾಗಿದೆ. ಆಯುರ್ವೇದ ಔಷಧದಲ್ಲಿ ಮಹತ್ವದ ಪಾತ್ರ ವಹಿಸುವ ನೆಲ್ಲಿಕಾಯಿ, ಅದರ ಬೇರು, ಎಲೆಗಳು, ಚಕ್ಕೆಗಳನ್ನು ಯಾವಾಗ ಬೇಕಾದರು ನಾವು ಉಪಯೋಗಿಸಬಹುದು. ಇದರಿಂದ ಮಧುಮೇಹವು ನಿಯಂತ್ರಣದಲ್ಲಿರುತ್ತದೆ. ದೇಹದಲ್ಲಿನ ವಿಷಕಾರಿ ಅಂಶಗಳ ಹೊರಹಾಕಲು ಸಹಕಾರಿತಾಗಿದೆ.  ದೇಹದ ತೂಕದ ನಿರ್ವಹಣೆಗೆ ಹಾಗೂ ಕೂದಲಿನ ಪೋಷಣೆ, ಚರ್ಮದ ಆರೈಕೆಯಲ್ಲಿ ಈ ನೆಲ್ಲಿಕಾಯಿ ಮಹಥವದ ಪಾತ್ರ ವಹಿಸುತ್ತದೆ. ಶಾಂಪೂ ರೂಪದಲ್ಲಿ , ನೆಲ್ಲಿಪುಡಿಯ ಬಳಕೆ ಮಾಡಬಹುದಾಗಿದೆ.

ಹಾಗಾಗಿ ಸ್ನೇಹಿತರೇ ಋತುಗಳಿಗನುಸಾರವಾಗಿ ನೈಸರ್ಗಿಕವಾಗಿ ಬೆಳೆಯುವ ಮಾರುಕಟ್ಟೆಯಲ್ಲಿ ಬರುವ ಹಣ್ಣು ತರಕಾರಿಗಳನ್ನು ಮನೆಗೆ ಕೊಂಡೊಯ್ದು ಆಹಾರವಾಗಿ ಸೇವಿಸೋಣ. ಆರೋಗ್ಯವನ್ನು ಕಾಪಾಡಿಕೊಳ್ಳುವ ಕಡೆಗೆ ಗಮನಹರಿಸೋಣ.

- ಸಿಂಧು ಭಾರ್ಗವ ಬೆಂಗಳೂರು (ಲೇಖಕಿ)

Breast cancer ಹೆಣ್ಮಕ್ಕಳ ಕಾಡುವ ಸ್ತನ ಕ್ಯಾನ್ಸರ್

 ಲೇಖನ : ಮಹಿಳೆಯರ ಕಾಡುವ ಸ್ತನ ಕ್ಯಾನ್ಸರ್


ಸ್ತನ ಕ್ಯಾನ್ಸರ್ Breast cancer


ಈಗೀನ ಜೀವನ ಕ್ರಮಕ್ಕೆ, ಬದಲಾಗುವ ಹಾರ್ಮೋನ್‌ಗಳಿಂದ ಒಂದಿಲ್ಲ ಒಂದು ತರಹದ ಕ್ಯಾನ್ಸರ್ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ ಎಂಬುದೇ  ಆಶ್ಚರ್ಯಕರ. ಅದರಲ್ಲಿಯೂ ಮಹಿಳೆಯರ ಕಾಡುವ "ಸ್ತನ ಕ್ಯಾನ್ಸರ್". ಹಲವು ಲಕ್ಷಣಗಳು ಕಾಣಿಸಿಕೊಂಡರು ಕೂಡ  ಕೆಲವೊಮ್ಮೆ ಹೇಳಲು ಮುಜುರುಗ ಎನಿಸುವ ಮನಸ್ಥಿತಿಯಲ್ಲಿ  ಮಹಿಳೆಯರು ಇರುತ್ತಾರೆ. ಗೌಪ್ಯವಾಗಿಡಲು ಪ್ರಯತ್ನಿಸುತ್ತಾರೆ. ಇದರಿಂದ ಮುಖ್ಯವಾಗಿ ಇಂತದ್ದೇ ಸಮಸ್ಯೆ ಮುಂದೆ ಭಾದಿಸಬಹುದು ಎಂಬ ಸುಳಿವು ಕೂಡ ಅವರಿಗಿರುವುದಿಲ್ಲ. ಪ್ರತೀ ವರ್ಷವೂ ಸರಿಸುಮಾರು 1.5 ಲಕ್ಷದಷ್ಟು ಸ್ತ್ರೀಯರಲ್ಲಿ ಈ ರೋಗವು ಪತ್ತೆಯಾಗುತ್ತಿದೆ. ಸಾಕಷ್ಟು ಪ್ರಮಾಣದಲ್ಲಿ ಸಮಸ್ಯೆ ಉಲ್ಬಣಗೊಂಡ ಮೇಲೆಯೇ ಮಹಿಳೆಯರಿಗೆ ಇದರ ಅರಿವಾಗುವುದು. 


ಸ್ತನ ಕ್ಯಾನ್ಸರ್ ನ ಲಕ್ಷಣಗಳು ಮತ್ತು ಕಾರಣಗಳನ್ನು ತಿಳಿಯೋಣ : 

ಮೊದಲನೆಯದಾಗಿ ಸ್ತನ ಕ್ಯಾನ್ಸರ್ ಎಂದರೆ ಸ್ತನದ ಸುತ್ತಲೂ ರೂಪುಗೊಳ್ಳುವ ಗಡ್ಡೆ. ಕ್ಯಾನ್ಸರ್ ಜೀವಕೋಶಗಳು ಸ್ತನದ ಜೀವಕೋಶಗಳನ್ನು ಆವರಿಸಿ ಈ ರೋಗವು ಕಾಣಿಸಿಕೊಳ್ಳುತ್ತದೆ. ಪ್ರತಿಯೊಂದು ಸ್ತನವು ಹಾಲನ್ನು ಉತ್ಪಾದಿಸುವ ಲೋಬ್ಸ್ ಎಂದು ಕರೆಯಲ್ಪಡುವ 15-20 ಗ್ರಂಥಿಗಳನ್ನು ಹೊಂದಿರುತ್ತದೆ. ಸ್ತನ ಕ್ಯಾನ್ಸರ್ ಸಾಮಾನ್ಯವಾಗಿ ಈ ಲೋಬ್ಸ್‌ನಲ್ಲಿ ಪ್ರಾರಂಭವಾಗುತ್ತದೆ. ಇದು ತೊಟ್ಟುಗಳ ಪ್ರದೇಶದ ಕೆಳಗಿರುವ ಒಂದು ಗಟ್ಟಿ ಗಡ್ಡೆಯಾಗಿ ಕಂಡುಬರುತ್ತದೆ. ಈ ಮಾರಣಾಂತಿಕ ರೋಗಕ್ಕೆ ವಿವಿಧ ಹಂತಗಳಿವೆ. ಮೊದಲ ಹಂತದಲ್ಲಿದ್ದರೆ, ಕ್ಯಾನ್ಸರ್ ಸ್ತನ ನಾಳಕ್ಕೆ (ಹಾಲು ಉತ್ಪಾದಿಸುವ ಸ್ಥಳ) ಸೀಮಿತವಾಗಿದೆ ಎಂದರ್ಥ, ಇದು ಮೊದಲಿನ ಹಂತವಾಗಿದೆ. ಅಲ್ಲದೇ ಸ್ತನ ಕ್ಯಾನ್ಸರ್ಗೆ ಕಾರಣವಾಗುವ ಕೆಲವು ಅಪಾಯಕಾರಿ ಅಂಶಗಳೆಂದರೆ ಸ್ತ್ರೀ ಲೈಂಗಿಕ ಸಂಬಂಧ, ಬೊಜ್ಜು, ದೈಹಿಕ ವ್ಯಾಯಾಮದ ಕೊರತೆ, ಮದ್ಯ ಹಾಗೂ ಧೂಮಪಾನ ಸೇವನೆ, ಋತುಬಂಧದ ಸಮಯದಲ್ಲಿ ಹಾರ್ಮೋನು ಬದಲಿ ಚಿಕಿತ್ಸೆ, ಆಲಸ್ಯವಾಗಿ ಮಕ್ಕಳಾಗುವುದು ಅಥವ ಮಕ್ಕಳು ಆಗದೇನೇ ಇರುವುದು, ಮುದಿ ವಯಸ್ಸಿನಲ್ಲಿ ಕೂಡ ಬರಬಹುದು. 

ಮಹಿಳೆಯರು ಸ್ತನದಲ್ಲಿ ಗಡ್ಡೆಯಾಗಿದೆಯಾ ಎಂದು ಸ್ವತಃ ಪರೀಕ್ಷಿಸಬಹುದು. ಅಥವಾ ತೋಳುಗಳ ವ್ಯಾಯಾಮ ಮಾಡುವಾಗ ನೋವು ಬರುವುದೇ ಎಂದು ಗಮನಿಸಬಹುದು. ಅನುಮಾನ ಬಂದರೆ ಅಲ್ಟ್ರಾಸೌಂಡ್ ಸ್ಕ್ಯಾನ್, ಸ್ತನದ ಎಮ್.ಆರ್.ಐ ಸ್ಕ್ಯಾನ್ ಮಾಡಿಸಬಹುದು. 

ಮುಖ್ಯವಾಗಿ ಇನ್ನೊಂದು ಗಮನಿಸಬೇಕಾದ ಅಂಶವೇನೆಂದರೆ ಮಹಿಳೆಯರಲ್ಲಿ "ಹಾರ್ಮೋನಿನ ಅಸಮತೋಲನ" ಉಂಟಾದಾಗಲು ಈ ತರಹ ಸಮಸ್ಯೆ ಬರಲುಬಹುದು. ಗರ್ಭಾಶಯ, ಅಂಡಾಶಯದ ಕ್ಯಾನ್ಸರ್ ಬಂದಿದ್ದರೆ ನಂತರದಲ್ಲಿ ಸ್ತನದ ಕಡೆಗೂ ವಿಸ್ತರಿಸಬಹುದು. ಹೆರಿಗೆ ಬಾಣಂತಿಯ ಸಮಯದಲ್ಲಿ ಹಾಲೂಡಿಸುವಾಗ ಗಡ್ಡೆ ರಚನೆಯಾಗಿದ್ದರೆ ಇದು ಮುಂದೆ ಕ್ಯಾನ್ಸರ್ ಗಡ್ಡೆಯಾಗುವ ಸಾಧ್ಯತೆಗಳೂ ಇವೆ.  

ಕ್ಯಾನ್ಸರ್ ನಿಂದ ರಕ್ಷಿಸುವ ಬಿಆರ್‌ಸಿಎ1 ಮತ್ತು ಬಿಆರ್‌ಸಿಎ2 ಜೀನ್ಸ್‌ಗಳು ಪ್ರೊಟೀನುಗಳನ್ನು ಉತ್ಪತ್ತಿ ಮಾಡುತ್ತದೆ. ಒಂದು ವೇಳೆ ಅವುಗಳು ದೋಷಪೂರಿತವಾಗಿದ್ದರೆ ೪೦ ವರ್ಷದ ಮೇಲ್ಪಟ್ಟ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಶೇ. 80ರಷ್ಟಿರುತ್ತದೆ. ಖುತುಚಕ್ರದಲ್ಲಿ ಆಗಾಗ್ಗೆ ಏರುಪೇರಾಗುವುದು, ಮಾನಸಿಕ ಆರೋಗ್ಯ ಕೆಡುವುದು, ಅತಿ ಬೇಗ ಭಾವುಕರಾಗುವುದು, ಸಿಡುಕುವುದು, ಕೊರಗುವುದು ಇವೆಲ್ಲವೂ ಹಾರ್ಮೋನುಗಳ ಅಸಮತೋಲನದಿಂದ ಬಳಲುವ ಲಕ್ಷಣಗಳು.  ಸ್ಥೂಲಕಾಯದಿಂದ ಈಸ್ಟ್ರೋಜನ್ ಹಾರ್ಮೋನ್ ಹೆಚ್ಚು ಬಿಡುಗಡೆಯಾಗುತ್ತದೆ. ಇದರಿಂದ ಬ್ರೆಸ್ಟ್ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಸ್ತನದ ತೊಟ್ಟಿನಲ್ಲಿ ಊತ, ತೊಟ್ಟು ಒಳಕ್ಕೆ ಹೋಗಿರುವುದು, ಅಥವಾ ಬಿಳಿ / ಹಳದಿ ಬಣ್ಣದ ಹಾಲು ಜಿನುಗುವುದು, ಮುಟ್ಟಿದಾಗ ಗಡ್ಡೆಯಂತೆ ಭಾಸವಾಗುವುದು, ನೋವು ಕಾಣಿಸಿಕೊಳ್ಳುವುದು, ಕಂಕುಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ, ಚರ್ಮ ಕೆಂಪಾಗುವುದು ಇವೆಲ್ಲವೂ ಲಕ್ಷಣಗಳಾಗಿವೆ.


ಚಿಕಿತ್ಸಾಕ್ರಮ : 

ಓಂಕೋಟೈಪ್ ಡಿಎಕ್ಸ್ ಮತ್ತು ಮಾಮ್ಮಪ್ರಿಂಟ್ ಗಳಂತಹ ಕೆಲವು ವರ್ಣತಂತು ಪರೀಕ್ಷೆಗಳ ಜೊತೆಗೆ ಕೆಲ ನಿರ್ಧಿಷ್ಟ ವರ್ಣತಂತು ಪರೀಕ್ಷೆಗಳೂ ಮಾಡಿಸಬೇಕಾಗುತ್ತದೆ.  ಒಂದೇ ಗುಂಪಿಗೆ ಸೇರಿರೋ ರೋಗಿಗಳು ಹಾರ್ಮೋನ್ ಚಿಕಿತ್ಸೆಯಿಂದ ಪ್ರಯೋಜನ ಪಡೆಯುವರೋ ಅಥವಾ ಕಿಮೋಥೆರಪಿಯಿಂದ ಪ್ರಯೋಜನ ಪಡೆಯುವರೋ ಎಂಬುದನ್ನ ನಿರ್ಧರಿಸಲು ಈ ವರ್ಣತಂತು ಪರೀಕ್ಷೆಗಳು ನೆರವಾಗುತ್ತವೆ. ಅದನ್ನು ಚಿಕಿತ್ಸೆ ನೀಡುವ ವೈದ್ಯರು ಸಲಹೆ ನೀಡುತ್ತಾರೆ. ಆಗಾಗ್ಗೆ ಚಿಕೊತ್ಸೆಗೆ ಒಳಗಾಗುತ್ತಿರಬೇಕು. ಪ್ರಮುಖವಾಗಿ ಧೂಮಪಾನ ಮದ್ಯಪಾನದಿಂದ ದೂರವಿರಬೇಕು.   ಅದರ ಜೊತೆಗೆ ಬೇಳೆಕಾಳು, ಪೌಷ್ಟಿಕಾಂಶ ಆಹಾರ, ಸೊಪ್ಪು ತರಕಾರಿ ಮೊಳಕೆ ಕಾಳುಗಳ ಸೇವನೆ ಅತ್ಯಗತ್ಯ. ಜೊತೆಗೆ ನಿಯಮಿತ ವ್ಯಾಯಾಮ. ಮನಸ್ಸಿಗೆ ಘಾಸಿ ಮಾಡುವ ವಿಷಯದ ಕುರಿತು ಯೋಚಿಸದೇ ಇರುವುದು ಉತ್ತಮ. ನಕಾರಾತ್ಮಕವಾಗಿ ಯೋಚಿಸದೇ ಸದಾ ಧನಾತ್ಮಕ ಚಿಂತನೆ ಮಾಡುತ್ತಿರಬೇಕು. ಆಧಾತ್ಮದ ಕಡೆಗೆ ಮನವನ್ನು ಕೇಂದ್ರೀಕರಿಸಬಹುದು. ಪ್ರಕೃತಿ ಆರಾಧನೆ ಕೂಡ ಬೇಗದಲ್ಲಿ ಚೇತರಿಸಿಕೊಳ್ಳಲು ಸಹಕಾರಿಯಾಗುವುದು. ರೋಗಿಗೆ ಆತ್ಮಸ್ಥೈರ್ಯ ನೀಡುವ ಮಾತುಗಳನ್ನಾಡಬೇಕು. ಜೊತೆಗೆ, ವರ್ಷಕ್ಕೊಂದು ಬಾರಿ ಸ್ತನಗಳ ಎಂ.ಆರ್.ಐ. ಮಾಡಿಸ್ಕೊಳ್ಳೋದು ಮತ್ತು ಹಾರ್ಮೋನಿನ ಚಿಕಿತ್ಸೆಗೊಳಗಾಗೋದು ಸೂಕ್ತ.


- ಸಿಂಧು ಭಾರ್ಗವ ಬೆಂಗಳೂರು ( ಲೇಖಕಿ )




Monday 27 September 2021

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೋಟ ಶಿವರಾಮ ಕಾರಂತರ ಜನ್ಮದಿನದ ಅಂಗವಾಗಿ ವಿವಿಧ ಸಾಹಿತ್ಯಿಕ ಸ್ಪರ್ಧೆಗಳ ಸಪ್ತಾಹ ಕಾರ್ಯಕ್ರಮ

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕೋಟ ಶಿವರಾಮ ಕಾರಂತರ ಜನ್ಮದಿನದ ಅಂಗವಾಗಿ ವಿವಿಧ ಸಾಹಿತ್ಯಿಕ ಸ್ಪರ್ಧೆಗಳ ಸಪ್ತಾಹ ಕಾರ್ಯಕ್ರಮ..



✍🏻ಲೇಖನ, ಪ್ರಬಂಧ, ಪ್ರವಾಸ ಕಥನ, ಮಕ್ಕಳ ನಾಟಕ ರಚನೆ, ಕವನ ವಾಚನ ಹಾಗೂ ಇನ್ನಿತರ ಸ್ಪರ್ದೆಗಳು..

"ಬತ್ತದ ತೊರೆ ಸ್ನೇಹ ಬಳಗ" - ಕಾರಂತಜ್ಜನ ನೆರಳಿನಡಿಯಲ್ಲಿ.. ಎಂಬ ಅಡಿಬರಹದೊಂದಿಗೆ ಹುಟ್ಟಿಕೊಂಡ ಹೊಸ ಸಾಹಿತ್ಯ ಬಳಗವು ಅಕ್ಟೋಬರ್ ಮೊದಲ ವಾರದಲ್ಲಿ ಕೋಟ ಶಿವರಾಮ ಕಾರಂತರ ಜನ್ಮದಿನದ ಅಂಗವಾಗಿ ವಿವಿಧ ಸಾಹಿತ್ಯಿಕ ಸ್ಪರ್ಧೆಗಳನ್ನು ನಡೆಸಲು ಮುಂದಾಗಿದೆ. 

(೧) ದಿನಾಂಕ : ೦೪/೧೦/೨೦೨೧ ಸೋಮವಾರ ಕವನ ರಚನೆ ಹಾಗೂ ಕವನ ವಾಚನ ಸ್ಪರ್ಧೆ

(ವಿ.ಸೂ : ವಿಷಯ ನಿಮ್ಮ ಆಯ್ಕೆ. ಸಾಲುಗಳ ಮಿತಿ : ೨೦-೨೪ ಸಾಲುಗಳು. ಮೊಬೈಲ್ ಅಡ್ಡ ಹಿಡಿದು ವೀಡಿಯೋ ಮಾಡಿರಿ. ಸುಮಾರು ಮೂರು ನಿಮಿಷಗಳ ಕಾಲ)

(೨) ದಿನಾಂಕ : ೦೫/೧೦/೨೦೨೧ ಮಂಗಳವಾರ

"ನಾ ಓದಿದ ಕಾರಂತರ ಕಾದಂಬರಿ.. ವಿಮರ್ಶಾ ಲೇಖನ ಸ್ಪರ್ಧೆ" 

(ವಿ.ಸೂ : ಪದಗಳ ಮಿತಿ ೧೦೦೦ ಪದಗಳು ಸುಮಾರು ಎರಡು ಪುಟಗಳಷ್ಟು)

(೩) ದಿನಾಂಕ : ೦೬/೧೦/೨೦೨೧ ಬುಧವಾರ

"ಲಲಿತ ಪ್ರಬಂಧಾ ಸ್ಪರ್ಧೆ" 

(ವಿ.ಸೂ : ವಿಷಯ ನಿಮ್ಮದೇ ಇರಲಿ. ಪದಗಳ ಮಿತಿ ೧೦೦೦- ೧೫೦೦  (ಸುಮಾರು ಎರಡರಿಂದ ಮೂರು ಪುಟಗಳಷ್ಟು)

(೪) ದಿನಾಂಕ : ೦೭/೧೦/೨೦೨೧ ಗುರುವಾರ

ನೀವು ಭೇಟಿ ಮಾಡಿದ ಕುತೂಹಲಭರಿತ ಸ್ಥಳದ ಕುರಿತಾದ "ಪ್ರವಾಸ ಕಥನ"

(ವಿ.ಸೂ : ಪದಗಳ ಮಿತಿ ೧೦೦೦, ಸುಮಾರು ಎರಡು ಪುಟಗಳಷ್ಟು)

(೫) ದಿನಾಂಕ : ೦೮/೧೦/೨೦೨೧ ಶುಕ್ರವಾರ

"ಮಕ್ಕಳ ನಾಟಕ ರಚನೆ" 

(ವಿ.ಸೂ : ವಿಷಯ ನಿಮ್ಮದೇ ಇರಲಿ. ಸುಮಾರು ಎರಡರಿಂದ ಮೂರು ಪುಟಗಳು, ಪಾತ್ರಗಳ ಸಂಖ್ಯೆ ೫-೭)

(೬) ದಿನಾಂಕ : ೦೯/೧೦/೨೦೨೧ ಶನಿವಾರ

ಚಟುವಟಿಕೆ ವಿಭಾಗದಲ್ಲಿ ಕಾರಂತರ ಭಾವಚಿತ್ರ ಅಥವಾ ಅವರ ಕಾದಂಬರಿಯ ಮುಖಪುಟದ ಚಿತ್ರವನ್ನು ಬಿಡಿಸುವುದು.


ನಿಯಮಗಳು :

೧) ಹಿರಿಯರು , ಕಿರಿಯರು, ವಿದ್ಯಾರ್ಥಿಗಳು ಕೂಡ ಭಾಗವಹಿಸಬಹುದಾಗಿದೆ. 

೨) ಇಮೇಜ್ ಗಳನ್ನು ಸ್ವೀಕರಿಸುವುದಿಲ್ಲ.

೩) ಬರಹಗಳಿಗೆ ಸೂಕ್ತ ಶೀರ್ಷಿಕೆ ನೀಡಬೇಕಾಗಿ ಕೋರಿಕೆ. 

೪) ಕೊನೆಯಲ್ಲಿ ನಿಮ್ಮ ಹೆಸರು, ಊರು ಮೊಬೈಲ್ ಸಂಖ್ಯೆ ಕಡ್ಡಾಯವಾಗಿ ನಮೂದಿಸಿರಬೇಕು. 


ಭಾಗವಹಿಸಿದ ಪ್ರತಿಯೊಬ್ಬರಿಗೂ ಇ-ಪ್ರಮಾಣಪತ್ರವನ್ನು ನೀಡಿ ಗೌರವಿಸಲಾಗುವುದು. ಹಾಗೂ ಮೊದಲ‌ ಮೂವರು ವಿಜೇತರಿಗೆ ಪುಸ್ತಕ ಬಹುಮಾನದ ಜೊತೆಗೆ ಪ್ರಮಾಣಪತ್ರವನ್ನು ನೀಡಿ ಗೌರವಿಸಲಾಗುವುದು.


ಹೆಚ್ಚಿನ ಮಾಹಿತಿಗಾಗಿ ಕಛೇರಿ ಸಂಖ್ಯೆ : +91 7795743862


"ಕಾರಂತರ ಜನ್ಮದಿನದ ಅಂಗವಾಗಿ ಸ್ಪರ್ಧೆಗಾಗಿ" ಎಂದು ನಮೂದಿಸಿರಿ.


ನಿಮ್ಮ ಬರಹಗಳನ್ನು ಕಳುಹಿಸಬೇಕಾದ ಇ-ಮೇಲ್  ಐಡಿ :  battadatore@gmail.com


ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಕೋರಿಕೆ. 


ನಿರ್ವಾಹಕರು ಮತ್ತು ತೀರ್ಪುಗಾರರು

ಬತ್ತದ ತೊರೆ ಸ್ನೇಹ ಬಳಗ, ಬೆಂಗಳೂರು 




Friday 24 September 2021

September month of articles..

 Paper cuttings.. September month of articles..

1) ಸಂಪದ ಸಾಲು ಮಾಸಪತ್ರಿಕೆ - ಮಕ್ಕಳ ಸಾಹಿತ್ಯ ಪದ್ಯ ನೀತಿ ಕತೆ

೨) ಕೊಂಕಣವಾಹಿನಿ ದಿನಪತ್ರಿಕೆ - ಭಕ್ತಿಗೀತೆಗಳು, ಲೇಖನ ಆರೋಗ್ಯ ಮಾಹಿತಿ

೩) ಜನಮಿಡಿತ ದಿನಪತ್ರಿಕೆ.  ಕವನಗಳು, ಪತ್ರಿಕಾ ವರದ

೪) ಹರ್ಷವಾಣಿ ಮಾಸಪತ್ರಿಕೆ ಮಕ್ಕಳ ಸಾಹಿತ್ಯ ಕತೆ


ಆಯ್ಕೆ ಮಾಡಿ ಪ್ರಕಟಿಸಿದ ಸಂಪಾದಕ ಬಳಗಕ್ಕೆ ವಂದನೆಗಳು🌹










ಸ್ತನ ಕ್ಯಾನ್ಸರ್ ಲಕ್ಷಣಗಳು & ಚಿಕಿತ್ಸಾ ಕ್ರಮಗಳು