Tuesday 6 September 2022

ದುಡಿಯುವ ಅನಿವಾರ್ಯತೆ

ದುಡಿಯುವ ಅನಿವಾರ್ಯತೆ ಹಾಗೂ ಸ್ವಂತಿಕೆ ಉಳಿಸಿಕೊಳ್ಳುವ ಪ್ರಯತ್ನ

- ಸಿಂಧು ಭಾರ್ಗವ ಬೆಂಗಳೂರು


ದುಡಿಮೆ ಎನ್ನುವುದು ಬದುಕಿನ ಜೀವನಾಧಾರ. ಮನೆಯಲ್ಲಿ ಗಂಡ ಹೆಂಡತಿ ಮಕ್ಕಳು ಯಾರೇ ಆಗಲಿ ದುಡಿದು ಹಣ ಸಂಪಾದಿಸುತ್ತಿದ್ದು, ಸ್ವಾವಲಂಬಿಯಾಗಿ ಬದುಕುತ್ತಿದ್ದರೆ, ಮನೆಯ ಖರ್ಚಿಗೂ ಸಹಕರಿಸಿದಾಗ ಮನೆಯ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ನೆಮ್ಮದಿ ನೆಲೆ ನಿಲ್ಲುತ್ತದೆ. ಈಗಿನ ದಿನಬಳಕೆಯ ವಸ್ತುಗಳ ಬೆಲೆ ಹೆಚ್ಚಳ, ಅಗತ್ಯ ವಸ್ತುಗಳ ಬೆಲೆ ದುಬಾರಿಯಾದ ಕಾಲದಲ್ಲಿ ಬದುಕುವುದು ತುಂಬಾ ಕಷ್ಟಕರ. ಒಬ್ಬರ ಸಂಬಳದಿಂದ  ಆರ್ಥಿಕ ಮಟ್ಟ ಸುಧಾರಿಸುವುದಿಲ್ಲ. ಆಯವ್ಯಯ ಲೆಕ್ಕಾಚಾರ ಸರಿಸಮವಾಗಿರುತ್ತದೆ. ಭವಿಷ್ಯಕ್ಕಾಗಿ ಉಳಿಕೆಯ ಪ್ರಮಾಣ ಕಡಿಮೆಯಾಗುತ್ತದೆ.

ಗೃಹಿಣಿಯರನ್ನು ಕಾಡುವ ಸಮಸ್ಯೆ :
ಇದು ಒಂದೆಡೆಯಾದರೆ ಇನ್ನೊಂದು ಕಡೆ, ಸ್ವಂತಿಕೆಯನ್ನು ಉಳಿಸಿಕೊಳ್ಳಲು ಹಲವರು ಒದ್ದಾಡುತ್ತಿರುತ್ತಾರೆ.
ಈ ಸಮಾಜದಲ್ಲಿ ತನ್ನದೊಂದು ಗುರುತು , ತನ್ನ ಇರುವಿಕೆಗಾಗಿ ಹವಣಿಸುತ್ತಿರುತ್ತಾರೆ. ಕೇವಲ ಗೃಹಿಣಿಯಾಗಿ ಅಡುಗೆಮನೆಯಲ್ಲಿ ಇರುವುದು, ಗಂಡ ಮಕ್ಕಳ ಸೇವೆ ಮಾಡಿಕೊಂಡಿರುವುದು ಅಥವಾ ಹಿರಿಯ ಅತ್ತೆಮಾವನ ನೋಡಿಕೊಳ್ಳುವುದರಲ್ಲೇ ವರುಷಗಳ ಕಳೆಯುವುದು ಎಂದರೆ ಯಾರಿಗೆ ತಾನೆ ಇಷ್ಟವಾಗುವುದು.?? ಒಂದಷ್ಟು ವರುಷಗಳ ಕಾಲ ಹೀಗೆ ನಡೆಯಬಹುದು. ನಂತರದಲ್ಲಿ ಮನಸ್ಸು ರೋಸಿಹೋಗುತ್ತದೆ. ಖಿನ್ನತೆಗೆ ಒಳಗಾಗುತ್ತಾರೆ. ಇಷ್ಟು ಮಾಡಿಯೂ ಒಳ್ಳೆಯ ಮಾತಿಲ್ಲ, ಗೌರವವಿಲ್ಲ ತನ್ನನ್ನು ಯಾರೂ ಗಮನಿಸುತ್ತಿಲ್ಲ ಎಂಬ ಭಾವನೆ ಮೂಡುತ್ತದೆ. ಪ್ರತಿಯೊಂದಕ್ಕೂ ಗಂಡನ ಕೈ ನೋಡಬೇಕು. ಹಣಕ್ಕಾಗಿ ಅವನ ಮುಂದೆ ಕೈಚಾಚಬೇಕು ಎಂದು ಮನಸ್ಸು ಬೇಸರಪಡುತ್ತದೆ. ತಮಗೆ ಆಸೆಪಟ್ಟದ್ದನ್ನು ಕೊಂಡುಕೊಳ್ಳುವ ಸ್ವಾತಂತ್ರ್ಯವಿಲ್ಲ ಎಂಬ ಯೋಚನೆ ಬರುತ್ತದೆ.

ಹಾಗೆಂದು ಉದ್ಯೋಗಕ್ಕೆ ಹೋಗುವವರು ನೆಮ್ಮದಿಯಾಗಿರುತ್ತಾರೆಯೇ?? ಎಂದು ಕೇಳಿದರೆ ಅವರಿಗೂ ಅನೇಕ ಸಮಸ್ಯೆಗಳಿವೆ. ವೃತ್ತಿ ಜೀವನದಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತವೆ. ವೃತ್ತಿ ಸ್ಥಳಗಳಲ್ಲಿ ಹಾಗೂ ಮನೆಯಲ್ಲಿ ಎರಡೆರಡು ಕಡೆ ಸಂಬಾಳಿಸಿಕೊಂಡು ಹೋಗುವುದು ಸವಾಲೇ ಸರಿ. ಆದರೆ ಹಣದ ಸಮಸ್ಯೆ ಎದುರಾಗುವುದು ಕಡಿಮೆ. ಆರ್ಥಿಕ ಪರಿಸ್ಥಿತಿ ಸುಧಾರಿತವಾಗಿರುತ್ತದೆ ಎನ್ನಬಹುದು.

ಮಹಿಳೆಯರಲ್ಲಿ ವಯಸ್ಸು ಹೆಚ್ಚಾದಂತೆ ಆರೋಗ್ಯ ಸಮಸ್ಯೆಗಳು ಕಾಡತೊಡಗುತ್ತವೆ. ದೇಹದಲ್ಲಿ ಶಕ್ತಿ ಕುಂದುತ್ತದೆ. ತಮ್ಮ ಆರೋಗ್ಯದ ಕಡೆಗೆ ಗಮನ ಹರಿಸುವುದನ್ನು ಕಡಿಮೆ ಮಾಡುವುದು ಒತ್ತಡದ ಜೀವನಶೈಲಿ ಮಹಿಳೆಯರಿಗೆ ಸಮಸ್ಯೆಯುಂಟುಮಾಡುತ್ತದೆ. ಇತ್ತೀಚೆಗೆ ಬಂದ ವರದಿಯ ಪ್ರಕಾರ, ಥೈರಾಯ್ಡ್, ಮಧುಮೇಹ, ಅಧಿಕ ರಕ್ತದೊತ್ತಡ, ಗರ್ಭಕೋಶದ ಸಮಸ್ಯೆ, ಕ್ಯಾನ್ಸರ್ನಂತಹ ಮಹಾಮಾರಿ ಸಮಸ್ಯೆಗಳು ಮೂವತ್ತೈದು ವರುಷ ದಾಟಿದ ಮಹಿಳೆಯಲ್ಲಿ ಕಂಡುಬಂದಿದೆ ಎಂಬುದು ಆಘಾತಕಾರಿ ವಿಷಯ. ಆರೋಗ್ಯ ಮತ್ತು ನೆಮ್ಮದಿ ಮುಖ್ಯವೇ? ಆಸ್ತಿ ಸಂಪತ್ತು ಹಣ ಮುಖ್ಯವೇ? ಎಂಬ ಪ್ರಶ್ನೆ ಸದಾ ಸುಳಿಯುತ್ತಲೇ ಇರುತ್ತದೆ.

ಗೂಗಲ್ ಇಮೇಜ್


ಸ್ವಂತಿಕೆಗಾಗಿ ಹೋರಾಟ ನಡೆಸುವ ಅಗತ್ಯವಿದೆಯೇ??
ಮನೆಯಲ್ಲಿ ಗೃಹಿಣಿಯರನ್ನು ಕೆಲಸಮಾಡುವ ಯಂತ್ರದಂತೆ ಪರಿಗಣಿಸುವ ಬದಲು ಮನೆಮಂದಿಗೆಲ್ಲ ಅವರಿಗೂ ಒಂದು ಮನಸ್ಸಿದೆ ಎಂಬ ಅರಿವಾಗಬೇಕು. ಮನೆಯಲ್ಲಿ ಗಂಡ ,ಮಕ್ಕಳು ಸೇರಿದಂತೆ ಎಲ್ಲರೂ ಅವರನ್ನು ಗೌರವಿಸುವ ಆಗಾಗ್ಗೆ ಹೊಗಳಿಕೆಯ ಮಾತುಗಳನ್ನಾಡಿ, ಅವರು ಮಾಡುವ ಕೆಲಸಗಳಿಗೆ ಮೆಚ್ಚುಗೆ ಸೂಚಿಸಿ ಖುಷಿಪಡಿಸುವ ಮೂಲಕ ಅಭಿನಂದಿಸಬಹುದು. ಅಲ್ಲದೇ ಪ್ರತಿಯೊಂದಕ್ಕೂ ಗಂಡನ ಕೈನೋಡುವ ಹಾಗೆ ಮಾಡುವ ಬದಲು ಅವರಿಗಾಗಿಯೇ ತಿಂಗಳಿಗೆ ಖರ್ಚಿಗೆಂದು ಒಂದಷ್ಟು ಹಣ ನೀಡಬೇಕು. ‌ಅಲ್ಲದೇ ಹೊರಗಡೆ ಕರೆದುಕೊಂಡು ಹೋಗುವುದು, ಗಂಡ ಹೆಂಡತಿ ಇಬ್ಬರೇ ಏಕಾಂತದಲ್ಲಿ ಸಮಯ ಕಳೆಯುವುದು ಮನಸ್ಸಿನ ಮಾತುಗಳನ್ನು‌ ಹಂಚಿಕೊಳ್ಳುವುದು, ಮಕ್ಕಳು ಮನೆ ಕೆಲಸದಲ್ಲಿ ಸಹಾಯ ಮಾಡುವುದು, ಹೀಗೆ ಮಾಡಿದರೆ ಗೃಹಿಣಿಯಾದವರಿಗೆ ತಮ್ಮ ಇರುವಿಕೆಯ ಅನುಭವವಾಗುತ್ತದೆ.  ಪ್ರೀತಿಯ ಕೊರತೆ, ಪ್ರೀತಿಯ ಅಭಾವ ಉಂಟಾಗುವುದಿಲ್ಲ. ಆಗಾಗ್ಗೆ ಸಿಡುಕುವುದು, ತಾಳ್ಮೆ ಕಳೆದುಕೊಂಡು ಅಸಹನೆ ತೋರುವುದಿಲ್ಲ. ಅಲ್ಲದೇ ದುಡಿಯುವ ಗಂಡನಿಗೆ ಬೆನ್ನೆಲುಬಾಗಿ ನಿಲ್ಲುತ್ತಾಳೆ. ಮನೆಯ ಖರ್ಚನ್ನು ನಿಭಾಯಿಸುವ ಸಾಮರ್ಥ್ಯ ಅವಳಿಗೂ ಇದೆ. ಅವಳ ಅಭಿಪ್ರಾಯಗಳಿಗೂ ಬೆಲೆ ಕೊಡಬೇಕು.

ಹೀಗೆ ಮಾಡಿದಾಗ ದುಡಿಮೆಗೆ ಹೋಗುವ ಅನಿವಾರ್ಯ ಎದುರಾಗುವುದಿಲ್ಲ. ತೀರ ಸಂಕಷ್ಟದಲ್ಲಿದ್ದಾಗ, ಗಂಡನ ಸಂಬಳವೇ ಕಡಿಮೆಯಾಗಿದ್ದಾಗ, ಗಂಡನೇ ಇಲ್ಲದಿದ್ದಾಗ ಮನೆ ಮಕ್ಕಳ ವಿದ್ಯಾಭ್ಯಾಸಕ್ಕೆ ಹಣ ಹೊಂದಿಸಲು ಕಷ್ಟವಾದಾಗ ಗಂಡನಿಗೆ ಹೆಗಲು ನೀಡುವುದು ಹಾಗು ಹೆಂಡತಿಯೇ ಜೀವನದ ಬಂಡಿ ಎಳೆಯುವುದು ಅನಿವಾರ್ಯವಾಗುತ್ತದೆ. ಇಲ್ಲದಿದ್ದರೆ ಗೃಹಿಣಿಯಾಗಿದ್ದುಕೊಂಡು ಮನೆಯನ್ನು ಸಂಬಾಳಿಸಿಕೊಂಡು ಹೋಗಬಹುದು. ಕೆಲಸಕ್ಕೆ ಹೋಗುವುದು ಅವರ ಆಯ್ಕೆಯೇ ವಿನಃ ಅಗತ್ಯತೆ ಅಲ್ಲ.

.