Thursday 19 November 2020

International men's day 2020ಪುರುಷರ ದಿನಾಚರಣೆಯ ಪ್ರಯುಕ್ತ ಲೇಖನ ಗಂಡಸರು ಹೇಗಿರಬೇಕು??

 

ಪುರುಷರ ದಿನಾಚರಣೆಯ ಪ್ರಯುಕ್ತ ಲೇಖನ ಗಂಡಸರು ಹೇಗಿರಬೇಕು?!

ಲೇಖಕಿ: ಸಿಂಧು ಭಾರ್ಗವ್ ಬೆಂಗಳೂರು-೨೧



ಗಂಡಸರು ಹೇಗಿರಬೇಕು ಎನ್ನುವ ಬದಲು ಹೇಗಿರುತ್ತಾರೆ ಎಂದು ಒಮ್ಮೆ ನೋಡಿ ಬಿಡೋಣ.

ಚಿಕ್ಕಂದಿನಿಂದಲೂ ಅಣ್ಣ, ಅಕ್ಕನಾದವರಿಗೆ ಹೊಂದಿಕೊಂಡು ಹೋಗಲು ಕಲಿಸಿರುತ್ತಾರೆ. ಚಿಕ್ಕವರು ಮಾಡುವ ತಪ್ಪಿಗೆ ತಾವು ಬೈಸಿಕೊಳ್ಳುವುದು ಒಂದಷ್ಟು ತ್ಯಾಗ ಮಾಡುವ ಗುಣ ತನ್ತಾನೆ ಮನದಲ್ಲಿ ಮೂಡಿಸುತ್ತಾರೆ. ಬೆಳೆಯುತ್ತ ಕೆಲಸಗಳನ್ನು ಕಲಿಸಿ ಕೊಡುತ್ತಾರೆ. ಹಣದ ವ್ಯವಹಾರ ಮಾಡಲು ತಿಳಿಸಿಕೊಡುತ್ತಾರೆ. ಗೆಳೆಯರೊಂದಿಗೆ ಆಟವಾಡಿಕೊಂಡು ಇದ್ದ ಮಗ(ಮಗು)ನನ್ನು ಪ್ರತ್ಯೇಕಿಸಲು ನೋಡುತ್ತಾರೆ. ಏಕೆಂದರೆ ಎಲ್ಲಿ ಸಹವಾಸ ದೋಷದಿಂದ ತಮ್ಮ ಮಗನೂ ಬದಲಾದರೆ ಎಂಬ ಭಯ. ಚಿಗುರು ಮೀಸೆ ಕಾಣಿಸಿಕೊಂಡಾಗ ಅಮ್ಮನಿಗೆ ಖುಷಿಯಾಗುತ್ತದೆ. ತನ್ನ ಮಗ ಹೀರೋ ತರಹ ಕಾಣಬೇಕೆಂಬ ಆಸೆಯಾಗುತ್ತದೆ. ಹಾಗೆಯೇ ಹುಡುಗಿಯ ಬಗ್ಗೆ ಎಚ್ಚರಿಕೆ, ಪ್ರೀತಿ- ಪ್ರೇಮ ಎಂಬ ಪಾಶಕ್ಕೆ ಬೀಳಬೇಡ ಎಂದು ಸಾರಿ-ಸಾರಿ  ಹೇಳುತ್ತಾ ಇರುತ್ತಾರೆ. ದುರಭ್ಯಾಸಕ್ಕೆ ಸಿಲುಕದಂತೆ ಎಚ್ಚರಿಸುತ್ತಾರೆ.

ಓದಿ ಅತೀ ಹೆಚ್ಚು ಅಂಕ  ಗಳಿಸದಿದ್ದರೂ ಪರವಾಗಿಲ್ಲ. ಚುರುಕುತನ ಇರಲೆಂದು ಆಶಿಸುತ್ತಾರೆ. ಎಲ್ಲಿ ಹೋದರು ಯಾವ ಕೆಲಸ ಬೇಕಾದರೂ ಮಾಡಿ ಬರುವ ಧೈರ್ಯ ,ಕಲೆ , ವಾಕ್ಚಾತುರ್ಯ ಅವನಿಗೆ ಬರಬೇಕು ಎಂಬ ಬಯಕೆಯಿರುತ್ತದೆ. ಉದ್ಯೋಗ ಸಿಕ್ಕಾಗ ಹೆತ್ತವರಿಗೆ ಆಗುವ ಸಂತಸ ಅಷ್ಟಿಷ್ಟಲ್ಲ. ಮಗನು ಸಂಬಳ ಕೊಡದಿದ್ದರೂ ಪರವಾಗಿಲ್ಲ, ದುಂದುವೆಚ್ಚ ಮಾಡದಂತೆ ನೋಡಿಕೊಳ್ಳುತ್ತಾರೆ. ಕೂಡಿಡುವ ಸಲಹೆ ನೀಡುತ್ತಾರೆ. ಮದುವೆಯಾಗಲೆಂದು ಅವನ ಗುಣಗಾನ ಮಾಡುತ್ತಲೇ ಯೋಗ್ಯ ಹೆಣ್ಣನ್ನು ಹುಡುಕುತ್ತಾರೆ. ತಮ್ಮ ಮಗ ಎಲ್ಲಿ ಬದಲಾಗುತ್ತಾನೋ ಎಂಬ ಭಯಕ್ಕಿಂತ ಬರುವ ಸೊಸೆಯು ಎಲ್ಲಿ ತಮ್ಮ ಮಗನಿಗೆ ಕಟ್ಟುನಿಟ್ಟು ಮಾಡುತ್ತಾಳೋ ಎಂಬ ಭಯವೇ ಜಾಸ್ತಿಯಾಗುತ್ತದೆ. ಮಗು ಬಂದಾಗ ಮುದ್ದಾದ ಮೊಮ್ಮಗುವನ್ನು ಆಡಿಸಲು ಬಯಸುತ್ತಾರೆ. ಮಗನ ಜವಾಬ್ದಾರಿಯನ್ನು, ಗಡಿಬಿಡಿ ಜೀವನವ ಕಣ್ಣಾರೆ  ಕಂಡು ಖುಷಿಪಡುತ್ತಾರೆ. ನಿಟ್ಟುಸಿರು ಬಿಡುತ್ತಾರೆ. ಹೇಗಿದ್ದ ಮಗ ಹೇಗಾಗಿ ಬದಲಾದ ಎಂದು ಚಿಕ್ಕಮಗುವಿನಿಂದ ಅಂದಿನ ತನಕದ ಘಟನೆಗಳ ಮೆಲುಕು ಹಾಕುತ್ತಾರೆ.

ಮಗನೂ ಕೂಡ ಹೆತ್ತವರ ಬಗ್ಗೆ ಹೆಮ್ಮೆ ಪಟ್ಟುಕೊಂಡು ಪ್ರೀತಿ ಹೆಚ್ಚಿಸಿಕೊಂಡು ಗೌರವಿಸುತ್ತಾನೆ. ತನಗೆ ಹೆತ್ತವರು ಹೇಳಿಕೊಟ್ಟ ಪಾಠಗಳನ್ನೇ ತನ್ನ ಮಕ್ಕಳಿಗೂ ಹೇಳುತ್ತಾನೆ. ಇದು ಸಭ್ಯಸ್ತ ಸುಸಂಸ್ಕೃತ ಮನೆತನದ ಮಕ್ಕಳ ಕಥೆ. ಇದರಲ್ಲಿ ಬದಲಾವಣೆಯಾದರೆ ಜೀವನವೇ ಅಂಕುಡೊಂಕಾದೀತು.

💐🍀🍀🍁🌾🌻🌿🌾🌺🍁💐🌷🍀🌺🌿🌿🌼🌻

ಹೌದು, ಅಪ್ಪ ಎಷ್ಟು ಕಷ್ಟ ಪಡುತ್ತಾರೆ ಎಂದು ಅಮ್ಮನಿಗೆ ಮಾತ್ರ ತಿಳಿಯುವುದು. ಮಕ್ಕಳಿಗೆ ಅವರ ಬೇಕು ಬೇಡಗಳ ಪೂರೈಸಿದರೆ ಅಪ್ಪ ಒಳ್ಳೆಯವರು ಎಂದಾಗುತ್ತಾರೆ. ಹಣದ ಪೂರೈಕೆಗೆ ಎಷ್ಟು ಶ್ರಮವಹಿಸುತ್ತಾರೆ ಎಂದೆಂಬುದು ಮಕ್ಕಳಿಗೆ ಬೇಡ. ಅವರಿಗೆ ಬುದ್ಧಿ ಬಂದು, ಉದ್ಯೋಗ ಸಿಕ್ಕು ಜವಾಬ್ದಾರಿ ಹೆಗಲೇರಿದಾಗ ತಂದೆಯ ಕಷ್ಟ ಅರ್ಥವಾಗುತ್ತದೆ.

ಗಂಡಸರ ದಿನ ಯಾನಿ ಪುರುಷರ ದಿನ ಎಂದಾಗ ಸಿರಿವಂತರ ಜೀವನಕ್ಕಿಂತ , ಒಬ್ಬನ ದುಡಿಮೆ ಪೈಸೆ-ಪೈಸೆ ಒಟ್ಟು ಮಾಡುವುದು, ಮನೆಮಂದಿಯ ಬೇಡಿಕೆ ಪೂರೈಸುವ ಅದೆಷ್ಟೋ ಗಂಡು ಹುಡುಗರೋ ಇಲ್ಲ ತಂದೆಯ ನೆನಪು ಮಾಡಿಕೊಂಡರೆ ಒಳ್ಳೆಯದು‌. ತನ್ನ ಆಸೆ ಆಕಾಂಕ್ಷೆಗಳ ಬದಿಗಿಟ್ಟು ಅಕ್ಕ ತಂಗಿಯರ ಮದುವೆ, ತಮ್ಮನ ವಿದ್ಯಾಭ್ಯಾಸಕ್ಕಾಗಿ ನಿಸ್ವಾರ್ಥ ದುಡಿಮೆ ಮಾಡುವ ಗಂಡು ಜೀವವನ್ನು ನೆನಪಿಸಿಕೊಳ್ಳಲೇಬೇಕು.
"ನನಗೇನು ಬೇಡ. ನಿಮಗೇನು ಬೇಕು ತಗೊಳ್ಳಿ.. ನಿಮ್ಮ ಸಂತೋಷವೇ ನನ್ನ ಸಂತೋಷ..." ಎನ್ನುವ ಅವನ/ರ ನುಡಿಗಳಲ್ಲೇ ತ್ಯಾಗದ ಗಂಧ ಬೀರುತ್ತಾ ಇರುತ್ತದೆ. ವರುಷ ದಾಟಿದ ಮೇಲೆ ಮದುವೆ, ಚಿಗುರು ಮೀಸೆ ಗಡುಸಾದ ಮೇಲೆ ಆಸೆಗಳಿಗೆ ಎಲ್ಲಿಯ ಜಾಗ.?!  ಜವಾಬ್ದಾರಿ ಒಂದು ಕೆಳಗಿಳಿಸಿದ ಮೇಲೆ ಮತ್ತೊಂದು ಹೀಗೆ ಮೇಲಿಂದ ಮೇಲೆ ಕರ್ತವ್ಯ , ಜವಾಬ್ದಾರಿ ಹೆಸರಿನಲ್ಲಿ ಬಾರ ಹೊತ್ತುಕೊಂಡೇ ನಡೆಯುವ ಎತ್ತಿನಂತೆ ಬದುಕು ಅವರದ್ದು. ಊಟ ನಿದಿರೆಗೂ ಸಮಯವಿಲ್ಲದೇ ದುಡಿಯುವುದು, ಹಣಕಾಸಿನ ಸಮಸ್ಯೆಗಳನ್ನು ಎದುರಾದರೂ ಯಾರೊಂದಿಗೂ ಹೇಳಿಕೊಳ್ಳಲಾಗದೇ ಸಾಲ ನೀಡಿದವರು ಅಡ್ಡಲಾಗಿ ನಿಂತು ಬೈದಾಗೆಲ್ಲ ಬೈಸಿಕೊಂಡು, ಅವಮಾನ ಸಹಿಸಿಕೊಂಡು, ಸುರಿವ ಬೆವರ ಒರೆಸಿಕೊಂಡು ಕಿವಿಯ ಮುಚ್ಚಿಕೊಂಡು ತಲೆ ತಗ್ಗಿಸಿ ಸಂಜೆ ಮನೆಕಡೆ ಹೆಜ್ಜೆ ಹಾಕುವ ಭಾರವಾದ ಮನಸ್ಸನ್ನು ಅರ್ಥಮಾಡಿಕೊಳ್ಳುವುದೇ ಒಂದು ಒಗಟು.

ಅಪ್ಪನ ದುಡಿಮೆಯಲ್ಲಿ ದುಂದುವೆಚ್ಚ ಮಾಡುತ್ತ, ಓದಿನ ವಯಸ್ಸಿನಲ್ಲಿ ಸರಿಯಾಗಿ ಓದದೇ ಉದ್ಯೋಗವೂ ಸರಿಯಾಗಿ ಸಿಗದೇ ತನ್ನ ಜೀವನದ ಜೊತೆಗೇನೇ ಆಟವಾಡುವ ಬೇಜವಾಬ್ದಾರಿ ಹುಡುಗರು ಸಾವಿರಾರು ಜನರಿದ್ದಾರೆ. ಮದುವೆಯಾದರೆ ಸರಿಯಾಗಬಹುದು ಎಂದೆನಿಸಿ ಮದುವೆ ಮಾಡಿದರೂ ತವರು ಮನೆ ಬಿಟ್ಟು ಬಂದ ಮಡದಿಯನ್ನು ಆಚೈಸದೇ ಹಂಗಿಸಿ ಜಗಳ ಮಾಡಿ ಅವಮಾನ ಮಾಡುತ, ಕುಡಿತ - ಧೂಮಪಾನದ ದಾಸರಾಗಿ ತಮ್ಮ ಜೀವನವನ್ನು ನರಕ ಮಾಡಿಕೊಂಡ ಗಂಡಸರೂ ಇದ್ದಾರೆ. ಎಂದೋ ಅಮಲಿನಲ್ಲಿ ಒಂದಾಗಿ ಹುಟ್ಟಿದ ಮಕ್ಕಳಿಗೆ ಕೂಡ ಸರಿಯಾದ ತಂದೆಯಾಗದೇ, ತದನಂತರದಲ್ಲಿ ಕೂಡ ಬದಲಾಗದೆ, ತಾಯಿಯ ಮೇಲೆ ಸಂಪೂರ್ಣ ಜವಾಬ್ದಾರಿ ಹೊರಿಸಿ ತನ್ನ ಕರ್ತವ್ಯ ಮತ್ತು ಜವಾಬ್ದಾರಿಯಿಂದ ವಿಮುಖನಾದ ಗಂಡಸರೂ ಇದ್ದಾರೆ.
ತಮ್ಮ ಕನಸುಗಳ ಬೆನ್ನಟ್ಟಿ ಶ್ರೀಮಂತ ವ್ಯಕ್ತಿಯಾಗಿ ಸಮಾಜದಲ್ಲಿ ಗೌರವಯುತರಾಗಿ ಬಾಳುತ ದಾನ ಧರ್ಮ ಮಾಡುವವರೂ ಇದ್ದಾರೆ. ತನ್ನ ಕನಸುಗಳ‌ ಭಾಗಿಯಾಗಿ ಮಡದಿ ಮಕ್ಕಳ ಮತ್ತು ಹೆತ್ತವರ ಪ್ರೀತಿಯಿಂದ ಕಾಣುವವರೂ ಇದ್ದಾರೆ.



💐🌷🍀🍁🌾🌻🌼🌿🌾🌻🌿🌾🌻🍀💐🌷🍁🍀

ಹೀಗೆಯೇ ಮೊದಲಿತ್ತು,
ಗಂಡಾಗಿ ಹುಟ್ಟುತಲೇ ಜವಾಬ್ದಾರಿ ಹೊರುತಾನೆ
ಹೆಣ್ಣು ಹೊರುವಳು ಕೂಸನು
ಸಾಕಿ ಸಲಹಲು ಹೆಣ್ಣು ಶ್ರಮಿಸುವಳು
ಗಂಡು ಬೆವರ ಸುರಿಸಿ ದುಡಿದು ದಣಿವನು
ಹೆಣ್ಣು, ಆದರಿಸಿ ಬಿಸಿಯಾದ ಊಟ ಉಣಬಡಿಸುವಳು
ತುಂಬು ಮನೆಯಲ್ಲಿ ಪ್ರೀತಿ ಪ್ರೇಮವ ಹಂಚುವಳು

🍁🌱💐💐🍀🍁🌲💮🏵🌳🌹🌴🌺🌻🌾🌿🌼

ಹೆಂಡತಿಯ ಪ್ರೀತಿ  ಬೇಡ ಎಂದವನೇ ಮೂರ್ಖ
ಹೆತ್ತವ್ವಗೆ ಸತಾಯಿಸಿ ಸಂಕಟ ಕೊಡುವವನು ಮುಟ್ಠಾಳ
ಪರಸತಿಗೆ/ ಹೆಣ್ಣಿಗೆ ಕಣ್ಣು ಹಾಕುವವ ಕಾಮುಕ
ಸತಿಯ ನಿರ್ಲಕ್ಷಿಸಿ ಅನ್ಯ ಸ್ತ್ರೀ ಸಂಗ ಬಯಸಯವವ ವಂಚಕ

🍀💐🌷🌱🍁🍂🌲🌳🍃🌴🌾🌻🌼🌿🌺🌹🏵

ಈಗ, ಗಂಡು ಹೆಣ್ಣು ಇಬ್ಬರೂ ಸಮಾನರು
ಉದ್ಯೋಗ ಹಣಕಾಸು ಗೌರವ ಬಯಸುವವರು
ಮನೆಕೆಲಸದಲ್ಲಿ ಕೂಡ ಹಂಚಿಕೊಂಡೇ ಮಾಡುವರು
ಪ್ರೀತಿ ಪ್ರೇಮ ವಿನಿಮಯಕೆ ಸಮಯ ಮೀಸಲಿಡುವರು
ವ್ಯಾವಹಾರಿಕ ಯಾಂತ್ರಿಕ ಬದುಕಿನ ದಾಸರು
ಕನಸುಗಳ ಪೂರೈಸುತಲೇ ಕೂಸನು ಗಮನಿಸರು
ಬೆಳೆದ ಮಗನ ಎದುರು ಕೇವಲವಾಗುವರು

- ಸಿಂಧು ಭಾರ್ಗವ್ | ಬೆಂಗಳೂರು-೨೧

Tuesday 3 November 2020

ಚಳಿಗಾಲದ ಆಪ್ತಮಿತ್ರ ನೆಲ್ಲಿಕಾಯಿ

 ಚಳಿಗಾಲದ ಆಪ್ತಮಿತ್ರ ನೆಲ್ಲಿಕಾಯಿ



ನೆಲ್ಲಿಕಾಯಿಯ ಬಗ್ಗೆ ಕಿರುಪರಿಚಯ:-

ನೆಲ್ಲಿಕಾಯಿ,  ಬೆಟ್ಟದ ನೆಲ್ಲಿಕಾಯಿ, ನೆಲ ನೆಲ್ಲಿಕಾಯಿ ಹೀಗೆ ನೆಲ್ಲಿಕಾಯಿಯು ಅನೇಕ ತರಹದಲ್ಲಿ ನಮಗೆ ಕಾಣಸಿಗುತ್ತದೆ. ಆರೋಗ್ಯಕ್ಕೆ ತುಂಬಾ ಉಪಕಾರಿಯಾದ ಈ‌ ನೆಲ್ಲಿಕಾಯಿಯನ್ನು  ಒಂದಿಲ್ಲೊಂದು ರೂಪದಲ್ಲಿರುವ ನಾವು ಸೇವಿಸುತ್ತೇವೆ. ರುಚಿಯಲ್ಲಿ ಹುಳಿ ಮಿಶ್ರಿತ ಒಗರು. ಕಿತ್ತಳೆ ಹಣ್ಣಿಗಿಂತ ೨೦ ಪಟ್ಟು ಹೆಚ್ಚು" ವಿಟಮಿನ್ ಸಿ" ಅಂಶ ಇದರಲ್ಲಿದೆ. ಮೂರು ಕಿತ್ತಳೆ ಹಣ್ಣಿನಲ್ಲಿ ಇರುವ ವಿಟಮಿನ್ ಅಂಶ ಒಂದು ನೆಲ್ಲಿಕಾಯಿಯಲ್ಲಿ ಇರುತ್ತದೆ. 


ವಿಟಮಿನ್ ಸಿ  ಉಪಯೋಗ:-

ವಿಟಮಿನ್ ಸಿ ಅಂಶ ಅತ್ಯಧಿಕವಾಗಿ ಮನುಷ್ಯ ದೇಹಕ್ಕೆ ಬೇಕು. ಪಾಲಕ್ ಸೊಪ್ಪು, ಕಿತ್ತಳೆ‌ಹಣ್ಣು, ಲಿಂಬೆ, ದ್ರಾಕ್ಷಿ, ಹೂಕೋಸು, ಅನಾನಾಸು, ಸ್ಟ್ರಾಬೆರಿ ಹಣ್ಣು, ಟೊಮ್ಯಾಟೊ, ನೆಲ್ಲಿಕಾಯಿ, ಕಿವಿ ಹಣ್ಣಗಳಲ್ಲಿ ವಿಟಮಿನ್ ಸಿ. ಆಂಶ ಅತ್ಯಧಿಕವಾಗಿ ಇರುತ್ತದೆ.  ಇದರಿಂದ ದೃಷ್ಟಿ ದೋಷ ಬರುವುದಿಲ್ಲ. ಚರ್ಮ ವಯಸ್ಸಿಗೂ ಮೊದಲು ನೆರಿಗೆಗಟ್ಟುವುದು ಕಡಿಮೆಮಾಡುವುದು, ಗರ್ಭಿಣಿ ಮಹಿಳೆಯರಿಗೆ ಮಗು ಬೆಳೆಯಲು ಸಹಾಯಕ.  ವಿಟಮಿನ್ ಸಿ ಕೊರತೆಯಾದರೆ ಸ್ಕರ್ವಿ ರೋಗ ಬರುತ್ತದೆ. ಅದನ್ನು ತಡೆಗಟ್ಟಲು ಇವೆಲ್ಲದರ ದಿನಬಳಕೆ ಉಪಯೋಗ ಅಗತ್ಯ. 



ಹಾಗಾಗಿ ಚಳಿಗಾಲದಲ್ಲಿ ಎಲ್ಲರು ಅಗತ್ಯವಾಗಿ ನೆಲ್ಲಿಕಾಯಿಯನ್ನು ಸೇವಿಸಲೇ ಬೇಕು. ಸಾಧಾರಣವಾಗಿ ಅಕ್ಟೋಬರ್ ನಿಂದ ಜನವರಿ ತನಕವೂ ಬೆಳೆಯುತ್ತದೆ. ಈ ಚಳಿಗಾಲದಲ್ಲಿ ಮಾರುಕಟ್ಟೆಗೆ ಈಗಾಗಲೇ ನೆಲ್ಲಿಕಾಯಿ ಲಗ್ಗೆ ಇಟ್ಟಾಗಿದೆ. ಮುಖ್ಯವಾಗಿ ಆಯುರ್ವೇದದ ಅರಸನಾಗಿ ನೆಲ್ಲಿಕಾಯಿ, ಒಣನೆಲ್ಲಿಕಾಯಿ, ನೆಲ್ಲಿ ಪುಡಿ, ಚೂರ್ಣ ಎಂದೆಲ್ಲ ಇದನ್ನು ಬಳಸುತ್ತಾರೆ. ನೆಲ್ಲಿಯ ಬೇರು, ರೆಂಬೆ, ಹೂವು, ಎಲೆಗಳು ಕೂಡ ಆಯುರ್ವೇದ ಗುಣಹೊಂದಿದೆ. ವರ್ಷಪೂರ್ತಿ ನೆಲ್ಲಿಕಾಯಿಯನ್ನು ಒಣಗಿಸಿ ತಿನ್ನಬಹುದು. 



ಒಮ್ಮೆ ನೆಲ್ಲಿಕಾಯಿ ತಿಂದು ನೀರು ಕುಡಿದರೆ ದಣಿವು ಆಯಾಸ ಕಡಿಮೆಯಾಗುತ್ತದೆ. ಬಾಯಿ ತುಂಬಾ ಸಿಹಿಸಿಹಿ ಅನುಭವವಾಗುತ್ತದೆ. ‌ನೆಲ್ಲಿಕಾಯಿ ಉಪ್ಪಿನ ಕಾಯಿ, ಚಟ್ನಿ, ತಂಬುಳಿ ಕೂಡ ಮಾಡಿ ಅಡುಗೆಯಲ್ಲಿ ಬಳಸುತ್ತಾರೆ. ಅಲ್ಲದೇ ದೀಪಾವಳಿಯ ಕಾರ್ತಿಕ ಮಾಸದಲ್ಲಿ ತುಳಸಿ ಪೂಜೆ ಮಾಡುವಾಗ ನೆಲ್ಲಿಕಾಯಿ ತುಪ್ಪದ ದೀಪವು ಅಗತ್ಯವಾಗಿ ಬೇಕಾಗುತ್ತದೆ . ತುಳಸಿ ಗಿಡ, ನೆಲ್ಲಿಕಾಯಿ ರೆಂಬೆಯೊಂದಿಗೆ ಮದುವೆಮಾಡಿಸುವ ಶಾಸ್ತ್ರವಿದೆ. ಅಂದರೆ ಶ್ರೀಕೃಷ್ಣನ ವಾಸಸ್ಥಾನ ನೆಲ್ಲಿ ಮರದಲ್ಲಿದೆ ಎಂಬ ನಂಬಿಕೆಯಿದೆ. ಹೋಮ ಹವನದಲ್ಲಿ ನೆಲ್ಕಿಕಾಷ್ಟಗಳ ಬಳಕೆ ಮಾಡುತ್ತಾರೆ.  ಇದರಿಂದ ವಾತಾವರಣ ಶುಧ್ಧಿಯಾಗುತ್ತದೆ. ಮನುಷ್ಯರಿಗೂ ಶುದ್ಧ ಗಾಳಿ ಉಸಿರಾಡಬಹುದು. 




ನೆಲ್ಲಿಕಾಯಿಯ ಉಪಯೋಗ:-


ನೆಲ್ಲಿಕಾಯಿ ಪುಡಿ ಸೇವನೆಯಿಂದ ಮಧುಮೇಹ ಕಡಿಮೆಯಾಗುತ್ತದೆ.

ರಕ್ತದೊತ್ತಡ ಕಡಿಮೆಯಾಗುತ್ತದೆ. ದೇಹದ ತೂಕ ಕಡಿಮೆಯಾಗುತ್ತದೆ.

ಚಳಿಗಾಲದಲ್ಲಿ ಎದುರಾಗುವ ಸೀತ ಕಡಿಮೆಮಾಡಲು ನೆಲ್ಲಿಕಾಯಿ ಸಹಕಾರಿಯಾಗಿದೆ.

ಬಿಕ್ಕಳಿಕೆ ಬಂದಾಗ ನೆಲ್ಲಿ ಎಸಳು ತಿಂದು ನೀರು ಕುಡಿದರೆ ಒಳ್ಳೆಯದು.

ನೆಲ್ಲಿಕಾಯಿಯನ್ನು  ಅಗಿದು ತಿನ್ನುವುದರಿಂದ ವಸಡು ಗಟ್ಟಿಯಾಗುತ್ತದೆ.

ನೆಲ್ಲಿಕಾಯಿಯನ್ನು ತುಂಡರಿಸಿ ಉಪ್ಪಿನಲ್ಲಿ ನೆನೆಸಿ ಪ್ರತಿದಿನ ಸೇವಿಸಿದರೆ ಕೆಟ್ಟ ಕೊಲೆಸ್ಟರಾಲ್ ( bad cholesterol) ಕಡಿಮೆ ಮಾಡುತ್ತದೆ.

ಚಿಕ್ಕ ಮಕ್ಕಳಿಗೆ ಟಿವಿ ಮೊಬೈಲ್ ನೋಡಿ ದೃಷ್ಟಿ ಸಮಸ್ಯೆ ಬರುವ ಸಾಧ್ಯತೆ ಇದೆ. ಇದರಿಂದ ಕಡಿಮೆಮಾಡಬಹುದು. 


ಸಿಂಧು ಭಾರ್ಗವ್ | ಬೆಂಗಳೂರು-೨೧