Monday 27 February 2023

ಹನಿಗವನಗಳು ವಿಮಾನವೇರಿ

 

(ಗೂಗಲ್‌ ಚಿತ್ರ)

ವಿಷಯ: ವಿಮಾನವೇರಿ

ಹನಿಗವನಗಳು
ಸಿಂಧು ಭಾರ್ಗವ, ಬೆಂಗಳೂರು

(೧) ವಿಮಾನವೇರಿ

ವಿಮಾನವೇರಿ ಹಾರುವ ಆಸೆ
ಮೋಡದ ನಡುವಲಿ ಚಲಿಸುವ ಆಸೆ
ಬುವಿಯನು ಒಮ್ಮೆ ಇಣುಕುವ ಆಸೆ
ಕಣ್ಣಿಗೆ ಸಣ್ಣಗೆ ಕಾಣುವುದೆಲ್ಲವ
ಒಂದೊಂದಾಗಿ ಎಣಿಸುವ ಆಸೆ

(೨) ಗುರಿಯೆಡೆ ಪಯಣ

ಸಪ್ತಸಾಗರವ ದಾಟಬಹುದು
ವಿದೇಶಕೆ ಪ್ರಯಾಣ ಬೆಳೆಸಬಹುದು
ಹೊಸಹೊಸ ಯಶಸ್ಸಿನ ಕದವ ತೆರೆಯಲು
ಗುರಿಯತ್ತ ನಾವು ಸಾಗಬಹುದು

(೩) ಮರೆಯಬಾರದು

ಮರೆಯಬಾರದು ನಮ್ಮ ಹುಟ್ಟೂರ
ಉಸಿರು ನೀಡಿದ ತಾಯ್ನಾಡ
ಬದುಕು ಕಟ್ಟಿಕೊಳ್ಳಲು ಹೋಗಿ
ತೊರೆಯಬಾರದು ನಮ್ಮ ಸಂಸ್ಕಾರ...

ಬದುಕಿದು ನರ್ತನ ಶಾಲೆ





ಬದುಕಿದು ನರ್ತನ ಶಾಲೆ

ಕುಣಿಸುವವರದ್ದೇ ಒಂದು ಲೀಲೆ..


ವಿಧಿಯಾಟ, ದೇವರ ಪಾಠ

ಬದುಕಿನಲ್ಲಿ ಕಲಿಯಲಿದೆ ಅಪಾರ...

ಅಹಮಿಕೆಯ ತೊರೆದರೆ ಇಲ್ಲ ಭವಭಾರ..


ಹೊಸಹೊಸದು ಕನಸುಗಳಿಗೆ ಗೆಜ್ಜೆಕಟ್ಟಿರಿ

ನಿಂದಿಸುವವರ ಕಂಡು ನಕ್ಕು ಸುಮ್ಮನಾಗಿರಿ..


ಇಂತಹ ನರ್ತನ ಶಾಲೆಗೆ

ಗುರುಗಳು ಯಾರು ಬಲ್ಲಿರೇನೋ?!

ಅದೇ ನಿಮ್ಮ ಹಿತಶತ್ರುಗಳು, 

ನಿಮ್ಮ ಜೊತೆಗೆ ಇರುವ ನೆಂಟರು ಬಂಟರು.. 

ನಿಮ್ಮ ಯಶಸ್ಸನ್ನು ಕಂಡು ಸಹಿಸದೇ

ಕೊಂಕು ನುಡಿಯುವವರು, 

ಹುಳುಕು ಹುಡುಕುವವರು 😀

ನರ್ತಿಸಿ ಸುಸ್ತಾಗಿ ಒಂದೆಡೆ ಕುಳಿತರೆ

ಬಂದು ಬೆನ್ನು ತಟ್ಟಿ ಮತ್ತೆ ಪ್ರೋತ್ಸಾಹ ನೀಡುವವರು..


ಸಿಂಧು ಭಾರ್ಗವ ಬೆಂಗಳೂರು.

Google image source

Tuesday 21 February 2023

ಆದಿಪ್ರಾಸದಲ್ಲಿ ಕನ್ನಡ ಕವಿತೆ ಸುಂದರ ಸ್ವಪ್ನ


(ಗೂಗಲ್ ಚಿತ್ರ)


ಶೀರ್ಷಿಕೆ : ಸುಂದರ ಸ್ವಪ್ನವ ಕಂಡೆ

ಸಿಂಧು ಭಾರ್ಗವ ಬೆಂಗಳೂರು


ಸುಂದರ ಸ್ವಪ್ನವ ಕಂಡೆನು ನಾನು

ಇಂದೇ ಹೇಳಿ ಬಿಡುವೆನು

ಎಂದು ಕೂಡ ಕಂಡಿರಲಿಲ್ಲ‌ ಇದನು

ಮುಂದೆಯೂ ನಾ ಕಾಣೆನು..


ಇಂದಿರೇಶನ ಬೇಡಿಕೊಂಡವಳು ನಾ

ಇಂದು ಫಲಿಸಿತು ಪೂಜಾ ಫಲ,

ಬಂದು ಹೇಳುವೆ ಆ ಕನಸನು..

ಒಂದು ನಿಮಿಷ ಇತ್ತ ಕೇಳಿರಿ..


ಕುಂದಿರದ ನಗುಮೊಗದಲ್ಲಿ

ನಿಂತಿಹನು ಎದುರು ನವತರುಣನು

ಸುಂದರ ಮುಖಾರವಿಂದ ನೋಡುತಲೇ

ಚಂದದ ಮಗುವಂತೆ ನಾ ಕುಣಿದೆನು..


ವಂದಿಸುತಾ ಮನ ಹೇಳಿತು; ಇವನೇ

ಮುಂದಿನ ವರನು ನಿನ್ನ ವರಿಸುವನು...

ಎಂದಾದರು ಬಂದೇ ಬರುವ

-ನೆಂದು ನಾ ಕಾಯುತಲಿರುವೆನು...


(ಗೂಗಲ್‌ ಚಿತ್ರಕೃಪೆ)

(ದಿನಾಂಕ ೨೧/೦೨/೨೦೨೩)


Saturday 18 February 2023

ಕವನ : ನೀನೇನೆ ಎಲ್ಲೆಡೆ

 

ಶೀರ್ಷಿಕೆ: ನೀನೇನೆ ಎಲ್ಲೆಡೆ
ಸಿಂಧು ಭಾರ್ಗವ ಬೆಂಗಳೂರು

        (ಗೂಗಲ್ ಇಮೇಜ್)


ನೀನೇ ನನಗೆಲ್ಲಾ

ನೀನಿಲ್ಲದೇ ಬಾಳಿಲ್ಲ

ಎಂಬಂತಹ ಭಾವನೆ ನನಗಿಲ್ಲ..

ನಿನ್ನ ನೆನಪುಗಳು

ಆಡಿದ ಮಾತುಗಳು

ಜೊತೆಯಾಗಿ ಬೆಂಬಲಕ್ಕೆ‌ ನಿಂತಿವೆಯಲ್ಲ...


ನೀನಿಲ್ಲದಿದ್ದರೂ,

ದೂರಾಗಿ ನಿಂತರೂ

ಬದುಕುವೆ ನಾನು, ನಿನ್ನನ್ನೇ ಸ್ಪೂರ್ತಿಯಾಗಿಸಿ..

ಹಗಲು ಕಳೆದರೂ

ಇರುಳು ಸರಿದರೂ

ಖುಷಿಪಡುವೆ ನಮ್ಮಯ ಪ್ರೀತಿಯ ಒಪ್ಪವಾಗಿಸಿ..


ಹೊಸ ಚಿಗುರು ಬಂದು

ಹಳೆ ಬೇರು ನಳಿಸಿ

ಲತೆಯೊಂದು ಕಳೆಕಟ್ಟಲೇಬೇಕು

ಮಳೆಗಾಲಕೆ ಮಿಂದು

ಚಳಿಗಾಲಕೆ ನಡುಗಿ

ವೈಶಾಖದ ಬಿಸಿಗೆ ಮೈಯೊಡ್ಡಲೇಬೇಕು...


ಗಡಿಯಾರದ ಮುಳ್ಳು

ತಿರುಗುವ ಓಟಕೆ

ಸಮಯವೇ ನಾಚಿ ತಲೆಬಾಗಲೇಬೇಕು..

ಬಿಡುವಿರದ ಕಾಯಕ

ಸುರಿಯುತಿರುವ ಬೆವರಿಗೆ

ವಿಶ್ರಾಂತಿಗೆ ನಿಶೆಯ ಆತುಕೊಳ್ಳಲೇಬೇಕು..


*****


(ದಿನಾಂಕ: 18 Feb 2023)

(ಗೂಗಲ್ ಚಿತ್ರಕೃಪೆ)

Wednesday 15 February 2023

ನನ್ನೊಡನೆ ನೀನಿರಲು ಹನಿಗವನಗಳು

 

ನನ್ನೊಡನೆ ನೀನಿರಲು

ಗೂಗಲ್ ಚಿತ್ರ


ಪ್ರಿಯ ಜೀವಾತ್ಮ

ನನ್ನೊಡನೆ ನೀನಿರಲು

ಗರ್ವದಲಿ ಉಬ್ಬುವೆ

ಹೊಟ್ಟೆ ಬಿರಿಯೆ ತಿನ್ನುವೆ

ಹೊಸಹೊಸ ಸಾಧನೆಗೈಯುವೆ

ಕಣ್ತುಂಬಾ ನಿದ್ರಿಸುವೆ

ನೀ ಇಲ್ಲವಾದರೆ,

ಜನ ಹೆಣ ಎನ್ನುವರು

ಚಟ್ಟದಲ್ಲಿ ಹೊತ್ತು‌

ಮಸಣದ ಕಡೆ ಸಾಗುವರು

ಒಳ್ಳೆಯ ಕೆಲಸ ಮಾಡಿದ್ದರೆ

ಹೊಗಳಿ ನಾಲ್ಕು ಹನಿ

ಕಣ್ಣೀರು ಸುರಿಸುವರು...

(೨)

ಪ್ರಿಯ ಸಂಗಾತಿ

ನನ್ನೊಡನೆ ನೀನಿರಲು

ಜೀವನದ ಅರ್ಧಾಂಶವೇ ನೀನು

ನಿನ್ನೊಂದಿಗೆ ಕಳೆವ ಕ್ಷಣಗಳೇ ಹಾಲುಜೇನು..

ಅರಿತು ಬೆರೆತು ಬಾಳುವಾಗ ಬೇಕು ಇನ್ನೇನು?!

ಸಂಗಾತಿ ನೀ ದೂರವಾಡೊದೆ,

ಕಣ್ಣೀರಲ್ಲಿ ಕೈತೊಳೆಯುವಂತೆ

ಒಂಟಿತನವು ಕಾಡಿದಾಗ ಮನ ಬೇಯುವಂತೆ..

ನೆನಪುಗಳ ಸಿಹಿಪಾಕವೂ ಕಹಿಯಾದಂತೆ..

(೩)

ಪ್ರಿಯ ಕನ್ನಡಕ

ನನ್ನೊಡನೆ ನೀನಿರಲು

ಹೊರಗಿನ ಚಿತ್ರಣಗಳೆಲ್ಲವೂ ಸುಸ್ಪಷ್ಟ

ಓದಲು ಬರೆಯಲು ಬಲು ಇಷ್ಟ..

ದಿನವನು ಕಳೆಯಲು ಇಲ್ಲ ಕಷ್ಟ..

ಅದೇ ಮರೆತೆನೆಂದರೆ,

ಇಟ್ಟ ಕನ್ನಡಕ ಎಲ್ಲಿ ಹೋಯ್ತು

ಅಕ್ಷರಗಳೆಲ್ಲ ಮಂಜು ಮಂಜಾಯ್ತು

ಸರಿಯಾಗಿ ಏನೂ ಕಾಣಿಸದು

ಕೂಡಲೇ ಚಿಂತೆ ಶುರುವಾಗುವುದು

(೪)

ಉತ್ತಮ ಮನಸ್ಸು

ನನ್ನೊಡನೆ ನೀನಿರಲು

ಎಲ್ಲರನು ಸಮಾನವಾಗಿ ಕಾಣುವೆನು

ಜಾತ್ಯಾತೀತ ಬದುಕಿಗೆ ನಾಂದಿ ಹಾಡುವೆನು

ಕಷ್ಟ ಸುಖಗಳಿಗೆ ಅಂಜದೆ ಮುನ್ನಡೆಯುವೆನು

ಇತರರ ಕಷ್ಟಕ್ಕೆ ಮರುಗುವೆನು

ಅದೇ ಸ್ವಾರ್ಥಿಯಾದರೆ,

ನಾನೇ ಎಲ್ಲ ಎನ್ನುವೆನು

ಪರರ ಚಿಂತೆ ಮಾಡೆನು

ಬೇಕು ಬೇಡಗಳ ಖರೀದಿಸುತ

ಹಣವನು ಪೋಲು ಮಾಡುವೆನು

(೫)

ಓದು - ವಿದ್ಯೆ

ನನ್ನೊಡನೆ ನೀನಿರಲು

ಧೈರ್ಯ ಮೂಡುವುದು

ಆತ್ಮವಿಶ್ವಾಸದಿ ಹೆಜ್ಜೆ ಹಾಕಬಹುದು

ಗುರಿಯ ತಲುಪಲು ಸಹಾಯವಾಗುವೆ

ಬುದ್ಧಿ ವಿಕಸನ ಹೊಂದುವುದು

ವಿದ್ಯೆ ಇಲ್ಲದಿರೆ,

ವಿಶಾಲ ಮನೋಭಾವ ಮೂಡದು

ಮನ, ಸಂಕುಚಿತವಾಗಿ ಅಂಜುವುದು

ಸರಿಯಾದ ಉದ್ಯೋಗ ಸಿಗದೇ ಒದ್ದಾಡಬೇಕಾದೀತು

ಕಂಡ ಕನಸುಗಳು ಕಮರಿಹೋಗುವವು..

(೬)

ಕೈತುಂಬಾ ಸಂಪಾದನೆ

ನನ್ನ ಬಳಿ ಹಣವಿದ್ದರೆ

ನಾನೇ ರಾಜನಂತೆ

ಮೆರೆಯುವ ಬದಲು

ಸಹಾಯ ಮಾಡುವೆ

ಕಷ್ಟದಲ್ಲಿರುವವರಿಗೆ

ಕನಸುಗಳ ಸಾಕಾರಗೊಳಿಸಲು

ಹೆಜ್ಜೆ ಹಾಕುವೆ ಗುರಿಯೆಡೆಗೆ..

ಹಣವೇ ಇಲ್ಲ

ಕಿಸೆಯಲ್ಲಿ ಕಾಸಿಲ್ಲ

ಕನಸುಗಳಿಗೆ ಜಾಗವಿಲ್ಲ

ಒಂದು ಸಿಕ್ಕರೆ ಇನ್ನೊಂದಿಲ್ಲ

ಬಯಕೆಗಳ ಕೈ ಚೆಲ್ಲಬೇಕಲ್ಲ...


- ಸಿಂಧು ಭಾರ್ಗವ ಬೆಂಗಳೂರು

(ಬರಹ ದಿನಾಂಕ: 15 Feb 2023)

(ಗೂಗಲ್ ಚಿತ್ರಕೃಪೆ)


ನಡಿಗೆ ಉತ್ತಮ ಅಭ್ಯಾಸ walk daily

 ನಡಿಗೆ ಉತ್ತಮ ಅಭ್ಯಾಸ- ವೈಚಾರಿಕ ಲೇಖನ


ಗೂಗಲ್ ಚಿತ್ರಕೃಪೆ.

      ನಡಿಗೆ ಎನ್ನುವುದು ಒಂದು ಉತ್ತಮ ವ್ಯಾಯಾಮ. ಮಳೆ‌ಚಳಿ ಬೇಸಿಗೆ ಎಂಬ ಕಾಲದ ಹಂಗಿಲ್ಲದೇ ಸಂಜೆ ಅಥವಾ ಮುಂಜಾನೆ ನಡೆಯಬಹುದು. ಶುದ್ಧ ಗಾಳಿ, ಸೂರ್ಯನ ಬೆಳಕು, ವಿಟಮಿನ್ ಡಿ ಹೇರಳವಾಗಿ ಮುಂಜಾನೆ ಸಿಗುವ ಕಾರಣ ಅದುವೇ ಸೂಕ್ತವೆನಿಸಿದೆ. ಇನ್ನು ಚಳಿಗಾಲದಲ್ಲಿ ಬೆಳಿಗ್ಗೆ ನಡೆಯುವುದು ಎಂದರೆ ಎಲ್ಲಿಲ್ಲದ ಕೆಲವರಿಗೆ ಆಸಕ್ತಿ. ವಾಕಿಂಗ್ ಗೆ ಹೋಗುವವರು, ಜಾಗಿಂಗ್ ಗೆ ಹೋಗುವವರು ಕಿವಿಯನ್ನು ಹಾಡನ್ನು ಕೇಳಿಸಿಕೊಳ್ಳುತ್ತಾ ಅದರ ತಾಳಕ್ಕೆ ತಕ್ಕಂತೆ ಜಾಗಿಂಗ್ ಮಾಡುವಾಗ ಮನಸ್ಸು ಪ್ರಫುಲ್ಲಗೊಳ್ಳುತ್ತದೆ. ಮುಂಜಾನೆಯ ಶುದ್ಧ ಗಾಳಿ ಆಮ್ಲಜನಕವನ್ನು ಉಸಿರಾಡುವಾಗ ಶ್ವಾಸಕೋಶವೂ ಅರಳುತ್ತದೆ. ಹೆಪ್ಪುಗಟ್ಟಿದ ರಕ್ತವೂ ಬಿಸಿಯಾಗೀ ಸರಾಗವಾಗಿ ನಾಳದಲ್ಲಿ ಸಂಚರಿಸುವಂತಾಗುತ್ತದೆ. ಹೃದಯವೂ ಸುರಕ್ಷಿತವಾಗಿರುತ್ತದೆ.


ಮುಂಜಾನೆಯ ಸುಪ್ರಭಾತದ ಜೊತೆಗೆ ಆ ಹಕ್ಕಿಗಳ ಕಲರವ, ಕಾಳು ಕಸ ಕಡ್ಡಿಗಳ ಹೆಕ್ಕಿ ತಿನ್ನುವುದನ್ನು ನೋಡುವುದೇ ಚಂದ. ಅವುಗಳ‌ ಜಗಳ‌ ಚಲ್ಲಾಟ ಮುದ್ದಾಟ ಮನಸ್ಸಿಗೂ ಮುದ ನೀಡುತ್ತದೆ. ಇನ್ನು ನಾಯಿ ಅಳಿಲು ಹಸುಕರುಗಳನ್ನು ನಾವು ಕಾಣಬಹುದಾಗಿದೆ. ಸೂರ್ಯನ ಎಳೆಬಿಸಿಲಿಗೆ ಮೈ ಅರಳಿಸಿ ನಿಲ್ಲುವ ಬಗೆಬಗೆಯ ಸುಮಗಳ ರಾಶಿ ಮಧುವ ಹೀರಲು ಬರುವ ದುಂಬಿಗಳ ಗೋಗರೆಯುವಿಕೆ... ನೋಡಲೂ ಅಕ್ಷಿಗಳಿಗೊಂದು ಹಬ್ಬ.


ಇನ್ನು ಘಮಘಮಿಸುವ ಮಲ್ಲಿಗೆ ಮಾಲೆ, ದೇವಾಲಯದ ಪಚ್ಚ ಕರ್ಪೂರ, ಗೋಪಿ ಚಂದನ, ಊದುಬತ್ತಿ, ಸಂಪಿಗೆ ಸೇವಂತಿಗೆ ಪರಿಮಳ ಭಕ್ತಿಪರವಶರಾಗಿ ದೇವರು ಇದ್ದಾನೆ ಎಂಬ ನಂಬಿಕೆಯನ್ನು  ಇಮ್ಮಡಿಗೊಳಿಸುತ್ತದೆ. ಸಾತ್ವಿಕ ಆಧ್ಯಾತ್ಮಿಕ ಭಾವಕ್ಕೆ ಬೆಲೆಕಟ್ಟಲಾದೀತೆ?? ಮನೆಯಂಗಳ, ರಸ್ತೆ ದೇವಾಲಯದ ಮುಂಬಾಗ ನೀರು ಚೆಲ್ಲಿ ಗುಡಿಸಿ ಸ್ವಚ್ಛ ಮಾಡಿ ರಂಗೋಲಿ ಬಿಡಿಸುವ ಮಹಿಳೆಯರ ಕಂಡರೆ ಹೆಮ್ಮೆ  ಎನಿಸುವುದು. ನಮ್ಮ ಸಂಸ್ಕೃತಿಯ ಮರೆಯಲಾದೀತೆ??


ಅದರ ಜೊತೆಜೊತೆಗೆ ವಾಕಿಂಗ್ ಹೋಗುವಾಗ ಮೂಗಿಗೆ ಬಡಿಯುವ ತಮ್ಮತ್ತ ಸೆಳೆಯುವ ಇಡ್ಲಿ ವಡಾ ಸಾಂಬಾರ್ ಮಸಾಲ ದೋಸೆ ಟೋಮಾಟೋ ರೈಸ್ ಘಮಘಮ ಅಲ್ಲೇ ನಿಂತು ಬೆಳಿಗ್ಗೆ ತಾಜಾ ಉಪಹಾರವನ್ನು ಇಲ್ಲೇ ಸವಿದು ಬಿಡೋಣ ಎಂದೆನಿಸಿ ಕಾಲಿಗೆ ಬ್ರೇಕ್ ಹಾಕಿಬಿಡುತ್ತದೆ. ಮುಂಜಾನೆಯ ಉಪಾಹಾರವನ್ನು ಅದೂ ಕೂಡ ಲಘು ಉಪಹಾರವನ್ನು ಹೊತ್ತಿಗೆ ಸರಿಯಾಗಿ ಸವಿಯದೇ ಇರಲಾದೀತೆ?? ಆರೋಗ್ಯವೇ ಭಾಗ್ಯ ಎಂಬುದು ಸತ್ಯತಾನೆ.?? ಮುಂಜಾನೆಯ ಉಪಹಾರವನ್ನು ಎಂದಿಗೂ ಹೊತ್ತು ಮೀರಿ ಸೇವಿಸಬಾರದು.


ಇನ್ನು ಸ್ನೇಹಿತರ ಬಳಗ:: ಬೆಳಿಗ್ಗೆ ಪ್ರತಿದಿನ ವಾಕಿಂಗ್ ಗೆ ಬರುವ ಅಪರಿಚಿತರು ಒಂದು ನಗುವಿನ ವಿನಿಮಯದ ಮೂಲಕ  ದಿನಗಳು ಕಳೆದಂತೆ ಸ್ನೇಹಿತರಾಗಿ ಬಿಡುತ್ತಾರೆ. ಅವರ ಬಗೆಗೆ ಕಷ್ಟ ನಷ್ಟು ಓದು ಉದ್ಯೋಗ ರಾಜಕೀಯ ಕ್ರೀಡಾ ಮಾಹಿತಿಗಳ ವಿನಿಮಯ ಮಾಡಿಕೊಂಡು ತಾವೂ ವಿಷಯಗಳ ಸಂಗ್ರಹಿಸಿ ಇತರರಿಗೂ ಹಂಚಿ ಬುದ್ಧಿಯನ್ನು ಚುರುಕಾಗಿಸಿಕೊಳ್ಳುತ್ತಾರೆ. ಚಿಂತನೆಗೆ ಹಚ್ಚುವ ವಿಚಾರಗಳು ಬೇಡವೆಂದರೆ ಆದೀತೆ??


ಆರೋಗ್ಯದ ಹಿತ ದೃಷ್ಟಿಯಿಂದ::: ಈ ನಡಿಗೆ ಜಾಗಿಂಗ್ ಪ್ರತಿದಿನ ಇಪ್ಪತ್ತು ನಿಮಿಷವಾದರು ಮಾಡಲೇಬೇಕು.  ಜಿಮ್ ಗೆ ಹೋಗಿ ವರ್ಕೌಟ್ ಮಾಡಿ ಬೆವರು ಇಳಿಸುವುದು ಎಲ್ಲರಿಗೂ ಸಾಧ್ಯವಾಗದು. ಅಂತವರು ನಡಿಗೆಯಲ್ಲಿ ತೊಡಗಿಸಿಕೊಳ್ಳಿ. ಚೆನ್ನಾಗಿ ನೀರು ಸೇವಿಸಿ. ಪ್ರತಿದಿನ ಮುಂಜಾನೆ ಮತ್ತು  ಸಂಜೆ ನಡೆಯಿರಿ. ರಕ್ತ ಸಂಚಾರ ಸುಗಮವಾಗಿ ಸಾಗಿ ಹೃದಯವನ್ನು ಕಾಪಾಡಿಕೊಳ್ಳಬಹುದು. 


- ಸಿಂಧು ಭಾರ್ಗವ ಬೆಂಗಳೂರು.

ವೈಚಾರಿಕ ಲೇಖನ.

Tuesday 14 February 2023

ಬಸ್ಸಿನಲ್ಲಿ ಸಂಚರಿಸುವಾಗ ಆಗುವ ಅನುಭವಗಳು

 



Google image

ಬೆಳಿಗ್ಗೆ ಆರು ಗಂಟೆಗೆಲ್ಲ ಎದ್ದು ಮನೆ ಗುಡಿಸಿ ಸ್ವಚ್ಛ ಮಾಡಿ ತಿಂಡಿ ಕಾಫಿ ಎಂದು ಅದನ್ನು ರೆಡಿ ಮಾಡಿ ಗಂಡ ಮಕ್ಕಳ ‌ಏಳಿಸಿ ಅವರಿಗೆ ತಿಂಡಿ ಕೊಟ್ಟು ಶಾಲೆ ಆಫೀಸಿಗೆ ಕಳುಹಿಸುವಾಗ ಸೀಮಾಳ ದಿನಚರಿಯಲ್ಲಿ ಒಂದಷ್ಟು ಮುಗಿದಂತೆ. ನಂತರ?

ನಂತರ ತಾನು ತಿಂಡಿಯ ಡಬ್ಬಕ್ಕೆ ತುಂಬಿಸಿಕೊಂಡು ಜೊತೆಗೆ ಯಾವುದಾದರು ಹಣ್ಣನ್ನು ಕತ್ತರಿಸಿ ಅದನ್ನು ಇಟ್ಟುಕೊಂಡು ನೀರಿನ ಬಾಟಲಿ ರೆಡಿ‌ ಮಾಡಿಕೊಂಡು ಮನೆ ಬಾಗಿಲಿಗೆ ಬೀಗ ಹಾಕುವಾಗಲೇ ಅವಳ ಆಫೀಸಿನ ಬಸ್ಸು ಹಾರ್ನ್ ಹಾಕುತ್ತದೆ.

"ಬಂದೇ..." ಎಂದು ಡ್ರೈವರ್ ಅಣ್ಣನ ಕೂಗಿ ಕರೆದು ಅವಸರದಲ್ಲಿ ಬಸ್ ಹತ್ತುವಾಗ ಎಲ್ಲರಿಗೂ ಗುಡ್ ಮಾರ್ನಿಂಗ್ ಹೇಳಿ ನಗುಮುಖದಿಂದ ಸ್ವಾಗತಿಸಿ ಆ ದಿನವನ್ನು ಕಳೆಯಲು ಮನಸ್ಸು ಸಿದ್ದಗೊಳ್ಳುತ್ತದೆ. ಆಫೀಸಿನ ಒತ್ತಡದ ಎಲ್ಲಾ ಕೆಲಸಗಳನ್ನು ಮುಗಿಸಿ ಮಧ್ಯಾಹ್ನ ಕಟ್ಟಿ ತಂದಿದ್ದ ತಿಂಡಿ ಸವಿದು ಸಂಜೆಯವರೆಗೆ ಕೆಲಸ ಮುಗಿಸಿ ಮತ್ತದೇ ಬಸ್ಸು ಏರುವಾಗ ದಣಿವಾಗಿ ದೇಹವು ಕಿಟಕಿಯ ತಂಪು ಗಾಳಿಗೆ ಮುಖ ಒಡ್ಡಲು ಹೇಳುತ್ತದೆ.

ಹಾಗೆಂದು ಪ್ರತಿ ಸಂಜೆ ಮನೆಗೆ ಬರುವಾಗ ನಿದ್ದೆ ಮಾಡಿದರೆ ಹೇಗೆ? ಹೊರಗೆ ಏನು ನಡೆಯುತ್ತಿದೆ ಎಂದು ತಿಳಿಯುವ ಕುತೂಹಲ ಬೇಡವೇ.?? ಹೋಗಲಿ ಬಸ್ಸಿನೊಳಗೆ ಏನೆಲ್ಲ ನಡೆಯುತ್ತದೆ ಎಂಬ ಕುತೂಹಲ ಇಲ್ಲವೇ??

ಸೀಮಾಳು ಕೂಡ ಮಾತು ಕಡಿಮೆ. ಎಲ್ಲರನ್ನು ಒಮ್ಮೆ ಮಾತನಾಡಿಸಿ ಕೈ ತೊಳೆದುಕೊಳ್ಳುವವಳು. ಮತ್ತೆ ಯಾರ ವೈಯಕ್ತಿಕ ಜೀವನದ ಬಗ್ಗೆಯಾಗಲಿ, ಆಫೀಸಿನಲ್ಲಿ ನಡೆದ ಕತೆಯನ್ನಾಗಲಿ ಚರ್ಚಿಸುವ ಗೋಜಿಗೆ ಹೋಗುವುದಿಲ್ಲ. ಮೊದಲೆಲ್ಲ ಆಫೀಸು ಮುಗಿದಾಗ ವಿಪರೀತ ತಲೆನೋವು ಕಾಣಿಸಿಕೊಂಡು ಅಲ್ಲೇ ಕಿಟಕಿಗೆ ಒರಗಿ ನಿದ್ದೆಗೆ ಜಾರುತ್ತಿದ್ದಳು. ಸುಮಾರು ನಲವತ್ತು ನಿಮಿಷಗಳ ಪ್ರಯಾಣವಾದ ಕಾರಣ ಆ ನಿದ್ದೆ ಸಹಾಯಮಾಡುತ್ತಿತ್ತು.


ನಂತರ ಅದೇ ಅಭ್ಯಾಸವಾಗಿ ಹೋದ ಕಾರಣ ತಲೆನೋವು ಕಡಿಮೆಯಾಯಿತು. ತನ್ನ ಸೀಟಿನಲ್ಲಿ ಕುಳಿತವಳು ಮೆಲ್ಲಗೆ ಮೊಬೈಲ್ ನಲ್ಲಿ ಎಫ್. ಎಂ. ಹಾಡು ಕೇಳುವ ಅಭ್ಯಾಸ ಬೆಳೆಸಿಕೊಂಡಳು. ಆ ಹಾಡಿಗೆ ಗುನುಗುತ್ತ ತಲೆ ಅಲ್ಲಾಡಿಸುತ್ತಾ ಚಿಟಕಿ ಹೊಡೆಯುತ್ತಾ  ಅವಳದೇ ಲೋಕವನ್ನು ಸೃಷ್ಟಿಸಿಕೊಂಡು ಖುಷಿಪಡುತ್ತಿದ್ದಳು. ನಂತರ ಪಕ್ಕದಲ್ಲೇ ಕುಳಿತ ಸಹೋದ್ಯೋಗಿಯ ಮಾತನಾಡಿಸುವ ಮನಸ್ಸು ಮಾಡಿದಳು. ಅವಳ ಮನೆ ಮದುವೆ ಸಂಸಾರದ ವಿಷಯ ಎಲ್ಲ ಕೇಳಿ ತಿಳಿದುಕೊಂಡು ಸ್ನೇಹಿತೆಯರಾದರು.

ನಂತರದಲ್ಲಿ ಪ್ರತಿಸಂಜೆ ಇಬ್ಬರೂ ಜೊತೆಗೆ ಕೂರುವುದು ಅಭ್ಯಾಸ ಮಾಡಿಕೊಂಡರು. ಅವಳಿಗೂ ಎಫ್.ಎಂ. ಗೀಳು ಹತ್ತಿಸಿದಳು‌.


ಸೀಮಾಳಿಗೆ ಒಳ್ಳೆಯ ಗುಣ ಇದ್ದ ಕಾರಣ ಯಾರ ಜೊತೆಗೂ ತಕರಾರು ಮಾಡಿಕೊಳ್ಳುವುದಾಗಲಿ, ತಂದಿಡುವ ಕೆಲಸವಾಗಲಿ ಮಾಡುತ್ತಿರಲಿಲ್ಲ. ಹಾಗಾಗಿ ಜಗಳವಾಗುವ ಪ್ರಶ್ನೆಯೇ ಇಲ್ಲ. ಒಮ್ಮೆ ಹಾಗೆ ಸೀಮಾಳು ‌ಕುಳಿತ ಹಿಂದಿನ ಸೀಟಿನಲ್ಲಿ ನಗುತ್ತಾ , ಪರಸ್ಪರ ಕಾಲೆಳೆದುಕೊಂಡು  ಮಾತನಾಡುತ್ತಿದ್ದವರು ಒಂದೇ ಸಮನೆ ಮಾತಿಗೆ ಮಾತು ಬೆಳೆಸಿ ಜಗಳ ಮಾಡಿಕೊಂಡರು. ಕಾಲರ್ ಪಟ್ಟಿ ಹಿಡಿದೆಳೆದು ಬೈಸಿಕೊಳ್ಳುತ್ತಿದ್ದರು. ನಂತರ ಬಸ್ಸಿನ ಚಾಲಕ ಬಸ್ಸನ್ನು ಪಕ್ಕಕ್ಕೆ ನಿಲ್ಲಿಸಿ ಚೆನ್ನಾಗಿ ಉಗಿದು "ಏನು ನಾನೀಗ ಗಾಡಿ ಓಡಿಸಬೇಕಾ? ಇಲ್ಲಾ ಪೋಲೀಸ್ ಠಾಣೆಗೆ ತೆಗೆದುಕೊಂಡು ಹೋಗಬೇಕಾ? ಎಂದು ಕೇಳಿದ.
ಉಳಿದವರು. "ಏನ್ರೀ ನಿಮ್ಮ ಜಗಳ.... ಸುಮ್ಮನಿರಿ. ಸಮಾಧಾನ ಮಾಡಿಕೊಳ್ಳಿ..." ಎಂದು ಹೇಳಿದರು. ಅಲ್ಲೇ ವಿಷಯ ನಿಂತಿತು. ಸೀಮಾ ಬೆಚ್ಚಿ ಬಿದ್ದರು.

ಸೀಮಾಳ ಗೆಳತಿಗೆ ಒಬ್ಬ ಪ್ರೇಮಿಯಿದ್ದ. ಪ್ರತಿಸಂಜೆ ಕೆಲಸ ಮುಗಿಸಿ ಮನೆಗೆ ಹೊರಡುವಾಗಲೇ ಕರೆ ಮಾಡುತ್ತಿದ್ದ. ಪಿಸುಗುಟ್ಟಲು ಶುರುಮಾಡಿದರೆ ಸೀಮಾಳ ಮನೆ ಬಂದರೂ ನಿಲ್ಲಿಸುತ್ತಲೇ ಇರಲಿಲ್ಲ. ಅದೆಂತ ಮಾತನಾಡುವುದೋ? ಅದೇನು ವಿಷಯ ಇರುವುದೋ? ಸೀಮಾಳಿಗೆ ಅಚ್ಚರಿ.
"ನೀವಿಬ್ಬರೂ ಏನು ಮಾತನಾಡುವುದು? ಎಂದು ಕೇಳಿದರೆ "ಏನೂ ಇಲ್ಲ... ಸುಮ್ನೆ.. ಹೀಗೆ....??"  ಎನ್ನಬೇಕೆ😃

ಸೀಮಾಳಿಗೆ ಸಂಜೆಯ ತಂಗಾಳಿ ಆ ಟ್ರಾಫಿಕ್ ಜಾಮ್ ಗು ಪುಷ್ಟಿ ನೀಡುವುದು. ಅವಳಿಗೆ ಬೋರ್ ಎನಿಸುವುದೇ ಇಲ್ಲ. ಆ ಟ್ರಾಫಿಕ್ ನ ಸಂಧಿಯಲ್ಲಿ ಬೈಕ್ ನವನು ನುಸುಳಿ ಹೋಗುವುದ ನೋಡುವುದೆ ಚಂದ. ಹುರಿಗಡಲೆ ಹುರಿಯುತ್ತ ತನ್ನ ಕಬ್ಬಿಣದ ಬಾಣಾಲೆ‌ ಕುಟ್ಟಿ ಕರೆಯುವ ದನಿ ಚಂದ.. ಕಾಲೇಜು ಹುಡುಗರ ಗುಂಪುಗಳು‌ ನಡೆದುಕೊಂಡು ಹೋಗುವುದ‌ ನೋಡುವಾಗ ತನ್ನ ಕಾಲೇಜು ದಿನಗಳ‌ ಮೆಲುಕು ಹಾಕಿಕೊಳ್ಳುವುದಿದೆ.

ಕೆಲವೊಮ್ಮೆ ಅಪಘಾತ ಸಂಭವಿಸಿ ಚದುರಿ ಬೀಳುವ ಗಾಜಿನ ಚೂರುಗಳು, ಗುಂಪು ಸೇರುವ ಜನರು, ಅಪಾಯ ಸೂಚಬೆ ನೀಡುತ್ತ ಕೂಗುತ್ತ ಬರುವ ಅಂಬ್ಯುಲೆನ್ಸ್ ನೋಡಿ ಎದೆ ನಡುಗಿ ದೇವರ ಬೇಡುವುದು... ಆ ಸಂಜೆ ಹಕ್ಕಿಗಳು ಮನೆ ಕಡೆಗೆ ಸಾಗುವ ಸಾಲುಗಳ‌ನೋಡಲು ಕಣ್ಣಿಗೆ ಹಬ್ಬ. ಆ ಸಂಜೆಯ ಸೂರ್ಯಾಸ್ತಮಾನದ ಬಣ್ಣಬಣ್ಣದ ಆಗಸವನ್ನು ನೋಡುವುದೇ‌‌ ಕಣ್ಣಿಗೆ ಹಬ್ಬ..



ಹೀಗೆ ಸೀಮಾಳು ಬಸ್ಸಿನಲ್ಲಿ ಸಂಚರಿಸುವಾಗ ಮನಸಾರೆ ಆಸ್ವಾದಿಸುವಳು.‌

- ಸಿಂಧು ಭಾರ್ಗವ ಬೆಂಗಳೂರು
ಲೇಖಕಿ



.....