Friday 17 July 2020

ಲೇಖನ ಕೆಲವೊಂದ್ ಆಚರಣೆಗ್ ತರ್ಕಾತ್.. ಕುಂದಾಪ್ರಕನ್ನಡ




ಕಿರುಲೇಖನ : ಕೆಲವೊಂದ್ ಆಚರಣೆಗೆ ತರ್ಕಾತ್








ಎಂತ ಗೊತಿತಾ.. "ಇದೆಂತ ಮಿಡ್ಕಾಣಿಯಪ್ಪಾ... ನಮ್ ಭಾಷಿ ನಮ್ ಬದ್ಕ್, ನಿನ್ನೆ ಹುಟ್ಟಿದ್, ನಾಳಿ ಸಾಯುದ್ ಎಲ್ಲ ಇಲ್ಲಿಯೇ.. ಅದನ್ನ ಎತ್ತಿ ಹೇಳುಕೋ, ಖುಷಿಲ್ ಕೊಣುಕೋ ಎಂತ ಇತ್.?? ಅಂದ್ ಮೊನ್ನೆ ಹಳ್ಯರ್ ಒಬ್ರ್ ಹೇಳಿರ್.  ನಾವೆಲ್ಲ ಅದೇ ಭಾಷಿನ್ ಮಾತಾಡ್ತೆ ಇತ್ತಲೇ.. ಇಲ್ಲೇ ಬದ್ಕತಾ ಇತ್ತಲೇ ಅಂದ್ ಅವ್ರಿಗೆಲ್ಲ ಅನ್ಸುದ್ ಸುಳ್ಳಲ್ಲ. ತಪ್ಪೂ ಅಲ್ಲ.
ಈ "ವಿಶ್ವ ಕುಂದಾಪ್ರ ಕನ್ನಡ ದಿನ ಆಚರಣೆ" ಗೆ ಬಂದದ್ದೇ ಊರ್ ಮನಿಯಲ್ ಇಪ್ಪೋರಿಗಂತಲ್ಲ, ಊರ್ ಬಿಟ್ ಪರೂರಲ್ ಇಪ್ಪೋರಿಗೆ. ಓದ್ ಮುಗ್ಸಿ ಪರೂರಲ್ ಕೆಲ್ಸ ಹುಡ್ಕಂಡ್ ಹೋಯ್ ಬಾಡಿಗಿ ಮನಿ ಮಾಡಿರೇ ಕತಿ ಕೇಂತ್ರ್ಯಾ...??!
ಈ ಬೆಂಗ್ಳೂರೇ ತಕ್ಕಣಿ,
ಶಾಲೀಲ್ ಇಂಗ್ಲಿಷ್, ಓನರ್ ತೆಲ್ಗೀನವರ್, ಫಸ್ಟ್ ಫ್ಲೋರ್ ತಮಿಳಿನರ್, ಮೇಲ್ ಮನಿಯರ್ ಮಾರ್ವಾಡಿಗಳ್, (ಮರಾಠಿ, ಹಿಂದಿ) ಇದ್ರ್ ಮಧ್ಯ ನಾವ್ ಹೋಯ್ ಸೇರ್ಕಂಡ್ರೆ  ಕನ್ನಡ ಮಾತಾಡುದೇ ಕಷ್ಟದಲ್ ಇನ್ ಕುಂದಾಪ್ರ ಕನ್ನಡ ಮಾತಾಡುಕ್ ಆತ್ತಾ... ನಮ್ ಮಕ್ಕಳ ಹತ್ರ ಮಾತಾಡ್ಲಕ್.  ಆರೆ ಅವ್ ಹೆಚ್ಚಿಗಿ ಹೊರ್ಗೇ ಇಪ್ಪುಕೋಯ್  ನಮ್ಮ ಕನ್ನಡದ ಪದಗಳ್ ಒಂದೋ ಎರಡೋ ನೆನ್ಪಿರತ್ ಬಿಟ್ರೆ ಅವ್ ಮಾತಾಡು ಭಾಷಿ ದಾಟಿಯೇ ಬದ್ಲಾಯ್ ಇರತ್. ಹೀಂಗಿಪ್ಪತಿಗೆ ವರ್ಷ ಕಳ್ಹಾಂಗೂ " ನಮ್ ಭಾಷಿ ಉಳ್ಸಿ.. ಕುಂದಾಪ್ರ ಕನ್ನಡ ಎಲ್ಲರಿಗೂ ಗೊತ್ತಾಯ್ಲಿ, ನಿಮ್ ಮೊಮ್ಮಕ್ಕಳಿಗೇ ಮೊದ್ಲ್ ನಮ್ ಭಾಷಿ ಕಲ್ಸಿ.. ಅಂಬು ಕಾಲ ಬಂದ್ಬಿಡ್ತ್..." ಹೀಂಗ್ ಆತ್ ಅಂದ್ ಯಾರಾರು ಎಣ್ಸಿರ್ಯಾ.....??
ಒಂದ್ ಹಬ್ಬ ಬಪ್ಪುಕಿಲ್ಲೆ ಪರೂರಲ್ ಇಪ್ಪು ಅಬ್ಬಿ, ಅಪ್ಪಂಗೆ ತಮ್ ತೌರ್ಮನಿ, ಊರು ದೋಸ್ತಿಗಳ್ ನೆನಪ್ ಆಯ್ತ್.  "ನಾವ್ ಹುಡಗ್ರ್ ಮಕ್ಕಳ್ ಎಷ್ಟ್ ಗಮ್ಮತ್ ಮಾಡ್ತಾ ಇದ್ದಿತ್. ಆ ಶಿವರಾತ್ರಿ ಹಬ್ಬ ಬಂದ್ರಂತೂ ಒಂದ್ ಹಿಂಡ್ ದೋಸ್ತಿಗಳ್ ಎಲ್ಲ ಸೇರಿ ನಡುರಾತ್ರಿ ರಸ್ತಿಲ್ ಹೋಪುದ್. ಸಿಕ್ಕೂ ಮನಿಗೆಲ್ಲ ಶೆಟ್ಟಿಕಲ್ ಹೊಡಿಯುದ್. ಮೇವ್ಹರಿ ರಸ್ತಿಮಧ್ಯೆ ಇಟ್ ಬಿಸ್ನೀರ್ ಕಾಯ್ಸುದ್. ಬೆಚ್ಚಪ್ಪ‌ನ್ ನಿಲ್ಸುದ್, ದಿವಾಳಿ ಹಬ್ಬಕ್ಕೆ ಗಂಟಿಗಳನ್ ಮೀಸಿ ಮೈಗೆಲ್ಲ ಬಿಳಿಸೇಡಿ ಬಣ್ಣ ಹಚ್ಚಿ ಕಿಸ್ಕರ್, ದಾಸನ್  ಹೂವಿನ್ ಹಾರ ಹಾಕುದ್, ಅವುಗಳಿಗೆ ಪೂಜೆ ಮಾಡುದ್ , ವಸ್ವಂತ, ತುಳ್ಸೀ ಪೂಜೆ, ಬಲೀಂದ್ರ ಪೂಜಿಗ್ ರಾತ್ರಿಗಟ್ ಗದ್ದಿಗ್ ಹೋಯ್ ಕೂವ್...ಕೂವ್... ಹೊಡಿಯುದ್.. ಪಟಾಕಿ ಹೊಡ್ಸುದ್, ಇನ್ ಆ ಹೊಸ್ತ್ ಹಬ್ಬ ಮರಿಯುಕ್ ಆತ್ತಾ... ಗೆದ್ದಿ ತೆನೆ ಕೊಯ್ಕಂಡ್ ಬಂದ್ ಪೂಜೆ, ಚೌಂತಿಕಾಯ್ ಕೊಚ್ಲ್, ಹೊಸ್ತ್ ಊಂಟ ಅಮ್ಮಂಗ್ ಅಡ್ಗೀಗ್ ಸಹಾಯ ಮಾಡುದ್, ಮನಿ ಎಲ್ಲ ಚಂದ ಮಾಡುದ್, ಅಂಗ್ಳದಲ್ ರಂಗೋಲಿ ಬಿಡ್ಸಿ ಚಂದ ಕಾಂಬುದ್, ಅಣ್ಣ ತಂಗಿ ತಮ್ಮ ಅಕ್ಕ ಅಜ್ಜ ಅಜ್ಜಿ , ಸೋದರತ್ತಿ , ಮಾವ ಚಿಕ್ಕಪ್ಪ ಚಿಕ್ಕಮ್ಮ , ನೆಂಟರ್ ಮನಿ, ಪತ್ರೊಡೆ, ಅರ್ಸಿನ್ ಎಲೆ ಕಾಯ್ ಕಡ್ಬು, ನಾಗರಪಂಚಮಿ, ಸೋಣಿತಿಂಗಳ ಸೋಣಿ ಆರ್ತಿ, ದೇವಸ್ಥಾನದಲ್ ಸಂಕ್ರಾಂತಿ, ಹೆಣ್ಮಕ್ಕಳ ಇಷ್ಟದ್ ಗಣೇಶನ್ ಸಂಕಷ್ಟಿ , ಗಣ್ಪತಿ ಹಬ್ಬ, ಗುಡ್ಡಟ್ , ಆಣಿಗುಡ್ಡಿ, ಮಾರಣಕಟ್ಟೆ, ಪಂಚಲಿಂಗೇಶ್ವರ ದೇವಾಸ್ಥಾನ, ದುರ್ಗಾ ಪರಮೇಶ್ವರಿ ದೇವಸ್ಥಾನ, ಮಾರಿ ಹಬ್ಬ, ಕಂಬ್ಳ, ಕೊಡಿಹಬ್ಬ, ಕೋಲ, ಭೂತ, ದರ್ಶಿನ, ಸಂತಿ, ಜಾತ್ರೆ, ಕೋಳಿಪಡಿ, ಮರವಂತೆ ಕಡ್ಲ್ , ಅಲ್ದೇ ಕಡ್ಲಿ ಪಂಚಕಜ್ಜಾಯ, ಉಂಡಿ, ಹಸಿ ಗ್ವಾಯ್ಬೀಜ ಹಾಕಿ ಮಾಡು ಹೆಸರ್ ಬ್ಯಾಳಿ ಪಾಯ್ಸ , ಅಷ್ಟೇ ಅಲ್ದೇ ಬಸ್ ಸ್ಟಾಂಡ್ ಲಿ ಕೂತ್ ಕಂಡ್  ಜವಾನ್ರ್ ಆಡೋ ಆಟ, ಮಾಡೋ ಗಮ್ಮತ್, ಹೆಣ್ಗಳಿಗ್ ಹಿಲಾಲ್ ಹಾಕುದ್, ಲೈನ್ ಹೊಡ್ಯುದ್  ಒಂದಾ ಎರಡಾ‌.." ಎಷ್ಟೆಷ್ಟೋ... ಹಳಿ‌ನೆನಪ್.... ಅದನ್ ಎಣ್ಸಕಂಡ್ ಕೂಡ್ಲೇ ಬ್ಯಾಡ ಅಂದ್ರೂ ಕಣ್ ಒದ್ದಿ ಆತ್. 😢 ಹೆಣ್ಮಕ್ಕಳ್ ಕೋಣಿಯಲ್ ಕೂತ್ ಮರ್ಕುದೇ ಸಯ್.. "ಅಮ್ಮ.. ಎಂತ ಆಯ್ತಾ.. ಮರ್ಕಬ್ಯಾಡಾ.. ಅಂದ್ ಅವರ್ ಮಕ್ಕಳ್ ಬಂದೇ ಸಮಾಧಾನ ಮಾಡ್ಕ್.." ಗಂಡ್ ಮಕ್ಕಳಿಗ್ ಮರ್ಕೂಕ್ ಆತ್ತಾ.. "ಶೇ!! ಈ ಸಲಿ ದಿಪಾಳಿಗ್ ಊರಿಗ್ ಹೋಪುಕೆ ಆಯ್ಲಾ.." ಅಂದ್ ಮನ್ಸಲ್ಲೇ ಬೇಜಾರ್ ಮಾಡ್ಕಂತ್ರ್..
ಹಾಂಗಂತ ಒಂದ್ಸಲಿ ಊರ್ ಬಿಟ್ಮೇಲ್ ಎಲ್ಲ ಹಬ್ಬಕ್ಕೂ ,‌ಕೆಲ್ಸಕ್ ರಜಿ ಹಾಕಿ ಬಪ್ಪುಕಾತ್.. ಹೆಚ್ಚಂದ್ರ್ ಒಂದ್ವರ್ಷ ಬರ್ಲಕ್ , ಎರಡ್ ವರ್ಷ..ಮತ್ತೆ ಜೀವ್ನ ಬ್ಯಾಡ ಅಂದರೂ ನಮ್ಮನ್ ಕಟ್ಟಿ ಹಾಕತ್. ಊರಿಗ್ ಹೋಪುಕೇ ಕಷ್ಟ ಆತ್.ಮಕ್ಕಳ್ ಶಾಲಿ, ಗಂಡನ್ ಕೆಲ್ಸ, ಈಗ‌ಹೆಣ್ಮಕ್ಕಳೂ ಕೆಲ್ಸಕ್ ಹೋತ್ರ್ ಬಿಡಿ.  ತಳ್ಕಟ್ ಹಾಕಿ ಅರ್ಧಕ್ ನಿಲ್ಸಿದ್ ಮನಿ ಕಟ್ಟುಕೆ ಇದೇ ಪರೂರ್ ದುಡ್ ಕೊಟ್ಟದ್, ಬಾಮಿ‌ತೋಡುಕೂ ಇದೇ ಸಹಾಯ ಮಾಡಿದ್. ತಂಗಿ ಮದಿಗೆ ಚಿನ್ನ , ಅಳಿಯಂಗ್ ಮರ್ತಾದಿ ಕ್ರಮ ಮಾಡುಕೂ ಇದೇ ಪರೂರ್ ದುಡ್ ಕೊಟ್ಟದ್, ಇಷ್ಟೆಲ್ಲ ಜವಾಬ್ದಾರಿ ಮುಗ್ಸಿ 30 ವರ್ಷ ಆಪುವತಿಗ್ ಒಂದ್ ಮದಿ , ತನ್ ಜೀವನ ಅಂದ್ ಕನ್ಸ್ ಕಟ್ಕಂಡದ್ದೂ ಇದೇ ಪರೂರಲ್. ಕೆಲವರಿಗೆ ಶ್ರೀಮಂತರ್ ಆಯ್ಕ್ ಅಂದ್ ಶೋಕಿ.‌ ಕೆಲವರಿಗೆ ಊರ್ ಬಿಡುದು ಅನಿವಾರ್ಯ. ಹಾಂಗಾಂಯ್  ಹೊಟ್ಟೆಗ್ ಊಟ, ಇಪ್ಪುಕ್ ಜಾಗ , ದುಡ್ ಕೊಟ್ಟ ಪರೂರನ್ನು ದೂರುಕ್ ಆತಿಲ್ಲೆ. ಈ ಪರೂರ್ ಅಂದ್ರೆ ಬರೀ ಬೆಂಗ್ಳೂರ್ ಮಾತ್ರ ಅಲ್ಲ, ಮುಂಬೈ, ಕಲ್ಕತ್ತಾ, ಬೆಳ್ಗಾಂ , ಧಾರವಾಡ, ದಾವಣಗೆರೆ, ರಾಜ್ಯದ್ ಎಲ್ಲ ಜಿಲ್ಲೆಯಲ್ಲೂ ಇದ್ರ್ ನಮ್ಮವ್ರ್. ಅಷ್ಟೇ ಅಲ್ದೇ ವಿದೇಶದಲ್ಲೂ ಇದ್ರ್.
ಈ ತರದ್ ಆಚರಣೆ ಮಾಡಿದ್ರೆ ಅದೆಲ್ಲ ನೆನ್ಪ್ ಮಾಡ್ಕಂಡ್ ಒಂದ್ ಸಲ ಆರೂ ಖುಷಿ ಪಡ್ಲಕ್ . ಮತ್ತೆ ನಮ್ ಬಾಲ್ಯಕ್ ಹೋಯ್ ಬರ್ಲಕ್. ಅದನ್ನೆಲ್ಲ ಮರು ಸೃಷ್ಟಿ ಮಾಡ್ಲಕ್. ಆ ಗಮ್ಮತ್ತೇ ಬ್ಯಾರೆ. ಈ ಒತ್ತಡದ್ ಬದ್ಕಿಗ್ ಒಂದ್ ಸ್ಪೂರ್ತಿ, ಶಕ್ತಿ ಬತತ್. ನಾವ್ ಇದ್ರಲ್ಲೇ ಖುಷಿ ಪಡತ್‌ . ನೀವ್ ಅಡ್ಡ ಬರ್ಬೇಡಿ. ಪ್ಲೀಸ್.. 


(ಸಂಗ್ರಹ ಚಿತ್ರಗಳು)
ಬರಹಗಾರ್ತಿ :  ಸಿಂಧು ಭಾರ್ಗವ್ - ಬೆಂಗಳೂರು-೨೧

ಅಬ್ಬಿಗೊಂದ್ ಕಾಗ್ದ : ತಾಯಿಗೊಂದು ಪತ್ರ ಕುಂದಾಪ್ರಕನ್ನಡ


ಅಬ್ಬಿಗೊಂದ್ ಪತ್ರ :


ಪ್ರೀತಿಯ ಅಮ್ಮ,
ಹೇಂಗಿದ್ದೀ? ಅಪ್ಪಯ್ಯ ಹುಷಾರ್ ಇದ್ರಾ? ಊರಲ್ ಮಳಿ‌ಜೋರಾ? ತಂಗಿ ಎಂತ ಮಾಡ್ತಳ್.....ನಾ ಹುಟ್ಟಿದ್ ಶ್ರಾವಣ ಮಾಸದಲ್. ಹುಟ್ಟಿದ್ ಕೂಡ್ಲೇ ಅಮ್ಮ ಇಟ್ ಹೆಸರೇ ರಾಧಿಕಾ. ಆಗಲಿಕ್ಕೆಲ್ಲ ಈ ನಾಮಕರಣ ಶಾಸ್ತ್ರ ಎಲ್ ಇದ್ದಿತ್.??  ಆಸ್ಪತ್ರಿಲೇ ಮಿಡ್ ಬಾಯಮ್ಮ ಹೆಸರ್ ಇಡ್ತಿದ್ದೀರ್..

         ಈಗಿನ್ ಮೊಬೈಲ್ ಕಾಲದಲ್ಲು ಕಾಗದ ಬರುವರ್ ಯಾರೂ ಇಲ್ಲೆ. ನೆನಪ್ ಆರ್ ಕೂಡ್ಲೆ ಪೋನ್ ಮಾಡ್ತ್ರ್... ಆರೆ ನನಗೆ ಪೋನ್ ಮಾಡುದ್ ಅಂದ್ರೆ ಏನೋ ಒಂತರ ರಗ್ಳಿ. ಮನಿ ಕೆಲ್ಸ, ಮಕ್ಕಳನ್ ಮೇಯ್ಸುದ್, ನಮ್ ಸಂಸ್ಥೆ ಕೆಲಸ , ಎಂತಾರು ಬರೂದ್, ಪೇಪರಿಗ್ ಕೊಡುದ್ ಹೀಂಗೆ ,ಇಪ್ಪು ಹದ್ನಾರ್ ಹರ್ಬಲ್ ಬೆಳ್ಗಾತ್ ರಾತ್ರಿ ಆತ್.. ಪೋನ್ ಮಾಡ್ಕ್ ಅಂದ್ ಎಣ್ಸುದ್.. ಅಷ್ಟ್ರಲ್ ರಾತ್ರಿ ಆಯಿರತ್. ಸಮಯ ಕಳ್ದ್ ಹೋತಾ ಇತ್. ಆರೂ ಅಕ್ಕ ಪೋನ್ ಮಾಡ್ತಳ್ ಅಲ್ದಾ.. ನಿಂಗ್ ಸಮಾಧಾನ. ಅಕ್ಕ ತಂಗಿ ಮಸ್ತ್ ಮಾತಾಡುದ್. ಅಲೆ.. ಅದಕ್ಕೆ ನಾನ್ ಸುಮ್ನೇ ಇಪ್ಪುದ್.  😀😀  ನಮ್ಮ ಹೆಣ್ ಬರೀ‌ ಪಾಪದ್ದೇ.. ಯಾರ್ ಎಷ್ಡ್ ನೋವ್ ಕೊಟ್ರೂ ಎದರ್ ಮಾತಾಡುದಿಲ್ಲೆ... ಅಂತಾ ಇದ್ದೆ ನೀನ್. ನಂಗದ ಗೊತ್ ಅಮಾ, ನಿಂಗೇ  ನಂದೆಡ ನೆನಪಾತ್. ಎಲ್ ಒಂದೇ ಕೂಕಣ್ ಮರ್ಕತಾ ಇರತ್ತೋ, ಟೆನ್ಶನ್ ಮಾಡ್ಕಂತಾ ಇರತ್ತೋ ಅಂದೇ ಎಣ್ಸತೆ ನೀನ್. ಹಾಗೇನಿಲ್ಲ ಬಿಡ್. ಇಲ್ ನಾನ್ ಖುಷಿಲ್ ಇದ್ದೆ . ಯೋಚ್ನಿ ಮಾಡ್ಬೇಡ.

ಮೊದ್ಲಿಂದಲೂ ನಾನ್ ಒಬ್ಳೇ ಇದ್ದ್ ಅಭ್ಯಾಸ.ಮಾತ್ ಕಮ್ಮಿ. ಹಚ್ಕಂಬುದ್ ಕಮ್ಮಿ ಅತೇನ್ ಅಲ್ಲ. ಎಲ್ಲ‌ ಒಡ್ಳೊಳಗೇ ಇರತ್. ನಮ್ಮ ತೋಟ ಗದ್ದಿ ಅಂದ್ರೆ ಪ್ರಕೃತಿಯನ್ನೇ ಇಷ್ಟ ಪಡುದ್ ಜಾಸ್ತಿ. ಮತ್ ದೋಸ್ತಿಗಳನ್ನೇ ಇಷ್ಟ ಪಡ್ತಿದ್ದೆ. ಅದೆಲ್ಲ ಓದುವರೆಗೆ ಮಾತ್ರ ಅಂದ್ ಕಡಿಕ್ ಗೊತ್ತಾಯ್ತ್. ಅಷ್ಟೊತ್ತಿಗ್ ನಾನ್ ಒಂಟಿಭೂತ. ಅಲ್ಲ ನೀನ್ ಇದ್ದದ್ದೂ ಹಾಂಗೆ ಅಂಬ..  ಬೆಳಿಗ್ಗೆ ಎದ್ ಬೆನ್ ಬಗ್ಸ್ಲಂಡ್ ಕೆಲ್ಸ ಮಾಡುಕ್ ಶುರಿಮಾಡಿರ್ ರಾತ್ರಿ ಆಯಕ್ ತಲೆ ಎತ್ತಕಾರೇ. ಯಾರ್ ಸುದ್ದಿಗೂ ಹೋತಿರಲ್ಲೆ. ಯಾರ್ ಮನಿ ಸುದ್ದೀಯೂ ಕೇಂತಿರಲ್ಲೆ.. ನಂಗೂ ಅದೇ ಬುದ್ದಿ ಬಂದಿತ್. ಈಗಲೂ ನಂದೇ ಲೋಕದಲ್ ತಿರ್ಗತಾ ಇಪ್ಪುದ್ ಅಂದ್ರೆ ಖುಷಿ. ಇನ್ ನನಗೆ ಅಬ್ಬಿಮನಿ ನೆನಪ್ ಆಯ್, ಆ ತೋಂಟ ಗದ್ದಿ ನೆನಪಾಯ್ ಮರ್ಕದ್, ಇಲ್ಲ ಅಪ್ಪಯ್ಯ ನ ನೆನಪಾಯ್ ಮರ್ಕದ್ ತಿಂಗಳಿಗ್ ಒಂದ್ ಸಲಿ ಆರೂ ಮಾಡ್ತೆ. ಅದೆಲ್ಲ ನಿಮ್ಗೆ ಗೊತ್ತೇ ಅತಿಲ್ಲೆ. ಗಂಡನ್ ಮನಿಲ್ ಒಂದ್ ಸಾಸ್ಮಿ ಕಾಳ್ ಬಿದ್ರೂ ಅಬ್ಬಿಗ್ ಪೋನ್ ಮಾಡಿ ಹೇಳೂ ಹೆಣ್ಮಕ್ಕಳೇ ಜಾಸ್ತಿ. ಅದೆಲ್ಲ ನಂಗ್ ಇಷ್ಟ ಆತಿಲ್ಲೆ. ನಿಂಗ್ ವಯಸ್ಸಾಯ್ತ್. ಗಂಡ , ಗಂಡನ ಮನಿ ಸಮಸ್ಯೆ ಹೇಳಿರೆ ತಲಿಗ್ ಹಾಕಂತೆ. ರಾತ್ರಿ ನಿದ್ರಿ ಮಾಡುದಿಲ್ಲೆ. ಬೇಜಾರ್ ಮಾಡ್ಕಂತೆ. ನಿನ್ ತಲಿಲ್ ಅದ್ ಅದೇ ತಿರ್ಗತಾ ಇರತ್. ನಿನ್ ಆರೋಗ್ಯ ಕೆಡತ್. ಅದ್ಕೆ ನಾನ್ ಪೋನ್ ಮಾಡುದ್ ಕಡ್ಮಿ. ಎಲ್ಲ ಟೆನ್ಶನ್ ನಂಗೇ ಇರಲಿ. ನಾನೇ ರಾತ್ರಿ ನಿದ್ರಿ ಬಿಡ್ತೆ. 😀😀 ಮಾಯಿದ್ ಜ್ವಾಗಳ ಇದ್ದದ್ದೇ...


ಈ ಸಲಿ ಕರೋನ ಹಳ್ಳಿ ಅಂದಿಲ್ಲ ದೆಲ್ಲಿ ಅಂದಿಲ್ಲ ಪೂರ ಪ್ರಪಂಚನ್ನೆ ಹೆದ್ರಿಸಿ ಬಿಟ್ಟಿತ್. ಸ್ವಂತ ಉದ್ಯೋಗ ಮಾಡುವವರ್ ಮಣ್ಣಕಚ್ಚಿರ್. ತಿಂಗ್ಳ ಸಂಬಳದವರ್ ಸ್ವಲ್ಪ ಉಸರಾಡ್ತ ಇದ್ರ್.... ಅದನ್ ಯೋಚ್ನೆ ಮಾಡಿರೇ ತಲಿಕೆಡತ್... ಸಾಯ್ಲಿ.
ಮಾರ್ಚ್ ೧೫ ಕ್ ತಂಗಿ ನಿಶ್ಚಿತಾರ್ಥ ಕ್ ಹೋಯ್ ಎರಡ್ ದಿನ ಮನಿ ಎಲ್ಲ ಗುಡ್ಸಿ ಪಾತ್ರೆ ಎಲ್ಲ ತೊಳ್ದ್ ವತ್ರಿ ಮಾಡಿ ಮೇಲ್ ಬೆಚ್ಚಿ ಬಂದಿದ್ದೆ. ಅದೂ ಗಂಡನ ಸಿಕ್ಸ್ ಸೆನ್ಸ್ (6th Sense) ಎಚ್ಚರಿಸಿ ದಿನದಲ್ ಮೂರ್ಮೂರ್ ಸಲ ಪೋ‌ನ್ ಮಾಡಿ ಬಾ - ಬಾ ಅಂದ್ ಕರಿಯೂಕ್ ಹೋಯ್ ದೊಡ್ ಮಗನ್ ಅಲ್ಲೇ ಬಿಟ್ ಚಣ್ ಮಗಿನ್ ಒಟ್ಟಿಗೆ ಬೆಂಗಳೂರಿನ ಬಸ್ ಹತ್ತಿದೆ. ಅದಾಯ್ ಐದಾರ್ ದಿನಕ್ಕೆ ಲಾಕ್ ಡೌನ್ ಅಂದ್ ಮೋದಿಯವರ್ ಹೇಳಿರ್. ನಾನೆಲ್ಲರೂ ಊರಲ್ಲೇ ಇದ್ದಿರೇ.. ಇಲ್ ಗಂಡನ್ ಕತಿ ಹೈಲ್ ಆತಿದ್ದಿತ್. ಅವರಿಗೆ ಜೀರ್ಗಿ ಯಾವುದ್ ಕುತ್ತುಂಬ್ರಿ ಯಾವುದ್ ಅಂದ್ ಗೊತ್ತಿಲ್ಲೆ. ಹೊರಗ್ ಹೋಟ್ಲು ಬಾಗಲ್ ತೆಗಿತಿರಲ್ಲೆ. ನಾನ್ ತಿರ್ಗಿ ಎಪ್ರಿಲ್ ಲಿ ಹೊಯ್ಕ್ ಅಂದ್ ಎಣ್ಸಿಯೂ ಹೋಪುಕ್ ಆಯ್ಲ.. ಮಸ್ತ್ ಬೇಜಾರ್ ಆಯ್ತ್. ಮದ್ವೆ ಆಯ್ ಹತ್ ವರ್ಷದಲ್ ಈ ಬ್ಯಾಸಿಗಿ ರಜಿ ತಪ್ಸಕಂತ ಇರಲ್ಲೆ.. ಈ ಸಲಿಯೇ ಸೈ. ಅಮ್ಮ..


ನಾನ್ ಬೆಗ್ಳೂರಿಗ್ ಬಂದ್ ಹತ್ ವರ್ಷ ಆಯ್ತ್.. ಆರೂ ಊರಿಗ್ ಹ್ವಾಪಾ ಅಂದೇ ಮನ್ಸ್ ಹೇಳತ್‌ ಈ ಬಣ್ಣದ್ ಲೋಕ ಬ್ಯಾಡ ನಂಗೆ...


ಈ ಸಲಿ ನಾನ್ ಹಲ್ಸಿನ್ ಹಪ್ಪಳ, ಉದ್ದಿನ್ ಸೆಂಡಿಗಿ, ಹಲ್ಸಿನ್ ಹಣ್, ಪೇರ್ಲೆ ಕಾಯ್ , ಮಾಯಿನ್ ಹಣ್, ಮುರಿನೋಡ್ , ನಾಗನ ಕಟ್ಟಿ, ಗದ್ದಿ ತೋಂಟ ಎಲ್ಲ ಮಿಸ್ ಮಾಡ್ಕಂಡೆ. ಒಂದಷ್ಟ್ ಪಟ ತೆಗ್ದ್ ಗದ್ದಿ ಎಲ್ಲ ಸುತ್ತಿ ಖುಷಿ ಪಡ್ತಿದ್ದೆ. ಅದೆಲ್ಲದಕ್ಕೂ ಕಲ್ ಬಿತ್.  ಕಿಚ್ಹಿಡದ್ ಕರೋನಾ ವೈರಸ್.

ನಿಂಗ್ ಗೊತ್ತಾ ನಾನೀಗ ತುಂಬಾ ಬದ್ಲ್ ಆಯ್ದೆ. ಅಮ್ಮ- ಅಮ್ಮನ ಸ್ಥಾನಕ್ ನ್ಯಾಯ ಒದ್ಗಿಸುದ್ ಅಷ್ಟ್ ಸುಲಭಯಿಲ್ಲೆ. ನೀನ್ ಹೇಂಗ್ ನಿನ್ನ ಜೀವ್ನ ಕಳ್ದೆ ಅಂದ್ ಈಗ ಅರ್ಥ ಆತಾ ಇತ್. 😭😭 ನಮ್ದ್  ಅಂದ್ ಏನೂ ಆಸಿ ಇಟ್ಕಂಬುಕಿಲ್ಲೆ. ನಮ್ ಆಸಕ್ತಿ ಅಭಿರುಚಿಗೆ ಪುರ್ಸೊತ್ ಮಾಡ್ಕಂಬುಕೇ ಆತಿಲ್ಲೆ. ಇಪ್ಪತ್ ನಾಲ್ಕ್ ಗಂಟಿಯೂ ಗಂಡ ಮಕ್ಕಳ್ , ಅವ್ರ್ ಕುಂಡಿ ಬಾಯ್ ಕಾಂಬುದೇ ಆತ್. ಈ ಜೀವ್ನಾನೇ ಹಾಂಗೆ, ಕೆರಿಲ್ ಸುತ್ತಾಕಂಬ್ ಚಾಬ್ಲ್ ಕಣೆಗೆ. ಗಂಡ ಮಕ್ಕಳ್ , ಒಂದಷ್ಟ್ ಜವಾಬ್ದಾರಿ ಕಾಲಿಗೆ ಸುತ್ತಹಾಕಂಡ್ ಎಳಿತಾ ಇರತ್. ಒಂದಷ್ಟ್ ತ್ಯಾಗ ಮಾಡ್ಕ್, ಎಲ್ಲವನ್ನೂ ಸಯಿಸ್ಕಂಡ್ ಇರ್ಕ್, ಬ್ಯಾಡ ಅಂದ್ ಬಿಟ್ ಹೋಪುಕ್ ಆತಿಲ್ಲ. ಇಲ್ಲೇ ಬದ್ಕ್.. ಮಕ್ಕಳಿಗಾರೂ ನಾವ್ ಬದ್ಕಕ್.  ಈ ಬೆಂಗಳೂರ್ ನಂಗ್ ಸುತಾರಾಮ್ ಇಷ್ಟ ಇಲ್ಲೆ. ಚಿನ್ನದ್ ಪಂಜರದಲ್ ಇಪ್ಪೋ ಗಿಣಿ ಕಣೆಗೆ. ಇಲ್ಲಿನ್ ಜೀವ್ನ ನರಕ‌.  ಕೆಲಸಕ್ ಹೋಪೋ ಹೆಂಗಸ್ರ್ ಆರೂ ಇನ್ನೊಂದ್ ತರದ್ ಕಷ್ಟ. ಅಕ್ಕ ಎಷ್ಟ್ ಪಟ್ಲ್ ಅಂದ್ ನಿಂಗೂ ಗೊತ್ತಿತ್. ಅದೇ ಮನೇಲೇ ಕೂಕಂಬುದ್ ಅಂದ್ರೂ ಮರ್ಲ್ ಹಿಡಿಯುಕ್ ಒಂದ್ ಬಾಕಿ. 😃😃 ಪರೂರ್ ಜೀವ್ನ ಪರ್ದೇಶಿ ಜೀವ್ನ....


ಇನ್ ನಾ ನಿಂಗೆ ಕೆಲ್ಸದಲ್ ಎಷ್ಟ್ ಸಹಾಯ ಮಾಡಿತ್ ಅಂದ್ ನೆನಪ್ ಮಾಡ್ಕಂಡ್ರೆ  ಜಾಸ್ತಿ ಏನ್ ಇಲ್ಲೆ. ಗದ್ದಿ ಕೆಲ್ಸ ಕೈದ್ ಮಾಡಿ ತೆಂಗಿನ್ ಸಸಿ ಹಾಕುಕ್ ಹೋಯ್. ಅಪ್ಪಯ್ಯ ಹೋಟೆಲ್ ಬಿಟ್ ಅಂಡ್ಗಿ ಕೆಲ್ಸ ಶುರು ಮಾಡುಕೋಯ್. ಇನ್ ಹಟ್ಟಿ, ದನ ಸಾಂಕುದ್, ಹಾಲ್ ಕರ್ಯುದ್ ನೀನೇ ಎಲ್ಲ ಮಾಡ್ತಿದ್ದೆ. ಬಾಯ್ರ್ ಕೊಡುದ್ ,ಹಟ್ಟಿ ತೊಳಿಯುದ್, ದನಿನ್ ಉಚ್ಚಿ ಹಾಕಿ ಸಗ್ಣಿ ಕರಡುದ್  ಗೋಬರ್ ಗ್ಯಾಸ್ ಗೆ , ಎರಡ್ ಕಿಲೋ ಮೀಟರ್ ನಡ್ಕಂಡೇ ಹೋಯ್ ಡೈರಿಗೆ  ಹಾಲ್ ಕೊಟ್ ಬಪ್ಪುದ್ ನಾವ್. ವರ್ಷಕ್ ಗ್ವಾಯ್ ಬೀಜ ಮಾರಿ ಕೊಡ್ಸು ಎರಡ್ ಅಂಗಿಲೆ ಒಂದ್ವರ್ಷ ಪೂರ ಶಾಲಿಗ್ ಹೋಯ್ ಬತ್ತಾ ಇದ್ದಿತ್.. ನೀನ್ ಮಾಡೋ ಗೋದಿಕಡಿ ಉಪ್ಪಿಟ್, ಗೋದಿ ದ್ವಾಸಿ ವರ್ಷ ಪೂರ್ತಿ ತಿಂತಾ ಇದ್ದಿತ್.


ಗುಡ್ಸುದ್ ಒರ್ಸುದ್ ಎಲ್ಲೋ ಪುರ್ಸೊತ್ ಆರೆ ಹುಲ್ ಹೆಡ್ಗಿ ಹೊರ್ಸುಕ್ ಗದ್ದಿಗ್ ಬತ್ತಿತ್. ನಾವು ಕೆಲವ್ ಸಲಿ ಹುಲ್ ಕೊಯ್ತಾ ಇತ್. ಇನ್ ಮಾಯಿನ್ ಕಾಯಿ ಕೊಯ್ಯುಕೆ ಗ್ವಾಯ್ ಹಣ್ ಹೆಕ್ಕುಕೆ, ತೆಂಗಿ‌ನ್ ಕಾಯ್ , ಅಡ್ಕಿ ಬಿದ್ದದ್ ಹೆಕ್ಕುದ್ ಇದೆಲ್ಲ ಮಂಡಿ ಹೋಪಷ್ಟ್ ಕೆಲ್ಸ ಏನ್ ಅಲ್ಲ ಅಂದೇ ಹೇಳ್ಲಕ್. ಮಕ್ಕಳ್ ಮಾಡ್ದೇ ಇನ್ಯಾರ್ ಮಾಡುದ್. ನಮ್ ಕಣ್ಣದಲ್ಲೇ ತೊಂಡೆ ಚಪ್ಪರ, ಅಲಸಂಡೆ, ಹೀರೆಕಾಯ್, ಬೆಂಡಿಕಾಯ್, ಬಸಳೆ ಹರಿವೆ ಸೊಪ್ , ವಿಟಮಿನ್ ಸೊಪ್ಪು ಎಲ್ಲ ಬೆಳಿಯುಕ್ ಹೋಯ್ ಅಂಗ್ಡಿ ತರಕಾರಿ ತರ್ಕಂದ್ ಇರಲ್ಲೆ..

ಆರೆ ಅಪ್ಪಯ್ಯಂಗೇ ಒಂದ್ ಗಂಡ್ ಮಗನ್ ಕಣೆಗೆ ಕಲ್ಸ ಮಾಡಿ ಕೊಡ್ತಾ ಇತ್. ಅವರದ್ ಅಡ್ಗಿ ಕೆಲ್ಸ, ಆ ಪಾತ್ರೆ, ಭಾರಯಿಪ್ಪೋ ದೊಡ್ ದೊಡ್ ಕೌಳಿಗೆ ಎಲ್ಲ ಎತ್ತಿ ಗೂಡ್ ರಿಕ್ಷಾಕ್ ಹಾಕುದ್ ಸೌದಿ ಒಟ್ ಮಾಡಿ ಕೊಡುದ್, ಅವ್ರ್ ಟೆನ್ಶನ್, ಸಿಟ್- ಸಿಟ್ ಮಾಡಿ ಕುಣಿಯುದ್, ಎಲ್ಲರೆದರ್ ಹೆಣ್ಮಕ್ಕಳ್ ಅಂದೂ ಕಾಣ್ದೆ ಬಾಯಿಗ್ ಬಂದ್ ಹಾಂಗ್ ಬೈಯುದ್... ಬೇವ****ಗಳ್... ಕಿಚ್ಹಿಡವ್.. ಎಲ್ಲ‌ಮನಿ ಬಿಟ್ ಹೋಯ್ನಿ.. ನಾನೊಬ್ನೆ‌ ಮಾಡ್ಕಂತೆ... ಅಬ್ಬಾ!! ಒಂದಾ ಎರಡಾ.. ದರ್ಶಿನ‌ ಪಾತ್ರಿಗಳ್ ಕಣೆಗೆ... ಕಣ್ಣಿಗ್ ಕೈಹಾಕಿದಾಂಗ್ ಹೆದ್ರಸತಾ ಇದ್ರ್.. ಅದಕ್ಕೆಲ್ಲ ನೀ‌ನ್ ಉಸ್ರ್ ಕಟ್ಕಂಡ್ ಬಾಯ್ ಮುಚ್ಕಂಡ್ ಅಲ್ ಓಡಿ ಇಲ್ ಓಡಿ, ಕೆಲಸ ಮಾಡ್ತಾ ಇದ್ದೆ, ನಾನೂ ಅಕ್ಕನೂ ಮಾಡ್ತಾ ಇತ್.. ಎದರ್ ಮಾತಾಡ್ತಿರಲ್ಲ. ಹಾಂಗೇ ಅವರ್ ರಿಕ್ಷಾ ತಕಂಡ್ ಅಡ್ಗೀಗ್ ಹೋದ್ ಮೇಲೆ ಒಂದ್ ಸಲಿ ಕೂತ್ ನೀನ್ ಉಸರ್ ತಕಂತಿದ್ದೆ. ಮತ್ತೆ ಎಂತಾರು ಜೋಕ್ಸ್ ಮಾಡಿ ಆ ವಾತಾವರಣ( mind set ) ಬದಲಾಯಿಸ್ತಿದ್ದೆ. ಹಾಂಗಾಯ್ ನಮಗೂ ಅಪ್ಪಯ್ಯ ಸಿಟ್ ಮಾಡೋರ್, ಬೈಯೋರ್ ಅಂದ್ ಅನ್ಸುಕಾಗ, ಮಕ್ಕಳಿಗೆ ಅಪ್ಪಯ್ಯ ನ ಬಗ್ಗೆ ಕೆಟ್ ಅಭಿಪ್ರಾಯ ಬಪ್ಪುಕಾಗ, ದ್ವೇಷ ಮಾಡುಕಾಗ, ಅಂದ್ ನೀನ್ ಎಷ್ಟ್ ಚಂದ ನಿಭಾಯಿಸ್ತಿದ್ದೆ. ನಂಗೆ ಈಗಲೂ ಅಪ್ಪಯ್ಯ ಅಂದ್ರೆ emotion ಆಪುದ್. ಅವರ್ ಎಷ್ಟ್ ಕಷ್ಟ ಪಟ್ತಿದ್ರ್. ಅವರಿಗಿದ್ ಜವಾಬ್ದಾರಿ, ಬೆನ್ನಿಗ್ ಚೂರಿ ಹಾಕೋರ್, ಸುಳ್ಳು ಸುದ್ದಿ ಹಬ್ಸೋರ್...ಅವರ್ ಏಳಿಗಿ ಸಹಿಸುಕ್ ಆಗದೇ ಹಿತ ಶತ್ರುಗಳ್ ಕಾಟ ಕೊಡ್ತಿದ್ದದ್.. ಹೇಂಗೆ ಎಲ್ಲ ಅವರೊಬ್ಬರೇ ನಿಭಾಯಿಸಿದ್ರ್.. (One man army ತರ) ನಿನ್ ಹತ್ರವೇ ಎಲ್ಲ ಹೇಳ್ತಾ ಇದ್ರೇನೋ.. 

ಗಂಡ್ ಮಗ ಇಲ್ಲ ಅಂದ್ ಅವರಿಗೆ‌ ಎಷ್ಟೋ ಸಲ ಕಾಡಿದ್ ಇತ್‌ . ಹ್ಹ ಹ್ಹ ... ಅವ್ ಎಂತಕ್ ಪದಾರ್ಥಕ್ಕಾ.... 😏😏 ಗಂಡ್ ಮಗ ಇದ್ದಿರ್ ಅವನ್ ಅವತಾರ್ ಇನ್ನೇಂಗ್ ಇರ್ತಿತ್ತೋ..  ಹೀಂಗ್ ಸಿಟ್ ಸಿಟ್ ಮಾಡು ದರ್ಶಿನ್ ಪಾತ್ರಿ ಕಣೆಗಿದ್ ಅಪ್ಪಯ್ಯನಿಗೆ ಸಮಾ‌ಬೈದ್ ಊರ್ ಬಿಟ್ ಹೋತಾ ಇದ್ನೇನೋ.. ಅಲ್ದನಾ... ನಾವಾದಕ್ ಇತ್‌ 😃😃 ನಾವಾರ್ ಅಪ್ಪಯ್ಯ.... ಅಪ್ಪಯ್ಯ, ಅಮ್ಮ...... ಅಮ್ಮ ಅಂದ್ ಹಿಂದ್ ಹಿಂದೇ ಸುತ್ತತ್... ಹೋಯ್ಲಿ ಬಿಡ್. ಇಲ್ದಿದ್ರ್ ಬಗ್ಗಿ ಚಿಂತಿ ಎಂತಕೆ..?!?


ಎಲ್ಲ ಕೆಲಸ ನೀನೇ ಮಾಡ್ತಿದ್ದೆ. ಅಡ್ಗಿ ಮನಿಗೂ ಬಪ್ಪುಕ್ ಬಿಡ್ತಿರಲ್ಲೆ.  ಆರೆ ಅಪ್ಪಯ್ಯ ನಮ್ಗೆ ಅನ್ನ ಸಾರ್ ಪಲ್ಯ ಬಟಾಟಿ ಪೋಡಿ, ಚಟ್ನಿ, ಉಪ್ಪಿಟ್ ಎಲ್ಲ ಕಲ್ಸಿ ಕೊಟ್ಟಿರ್. ಅಪ್ಪಯ್ಯನ ಅಡ್ಗಿ ಕೈರುಚಿ ಇಡೀ ಊರಿಗೆ ಫೇಮಸ್. ಪರೂರಿನಲ್ ಇಪ್ಪೋರು ಅಪ್ಪಯ್ಯ ಮಾಡಿದ್ ಸಾರಿನ ಪುಡಿ ತಗಂಡ್ ಹೋತಾ ಇದ್ರ್. ಎರಡ್ ಹೆಣ್ಮಕ್ಕಳ ಮದಿ ಮಾಡ್ಸುದ್ , ಬಾಮಿ ತೋಡುದ್, ಹೊಸ‌ಮನಿ ಕಟ್ಟುದ್ ಎಷ್ಟ್ ಕಷ್ಟ , ಎಷ್ಟ್ ಲಕ್ಷ ಲಕ್ಷ ಖರ್ಚ್ ಬತತ್ ಅಂದ್ ಲೆಕ್ಕ ಕೊಡ್ಕ್ ಅಂದಿಲ್ಲೆ... ಇನ್ ನೀನ್  ನಾಲ್ಕ್ ಮೊಮಕ್ಕಳ ಬಾಣಂತನ ಕಂಡ್ ಹಗಲ್ ರಾತ್ರಿ ನಮಗಾಯ್ ಕಷ್ಟ ಪಟ್ಟೆ. ಈಗ ಮೈತುಂಬಾ ಕಾಯಿಲೆ ಬಿಪಿ ,ಶುಗರ್, ಥೈರಾಯ್ಡ್ ಆಪರೇಶನ್ , ಸೋಡಿಯಂ ಕೊರತೆ ಬಂದದ್ , ಕೊಲೆಸ್ಟರಾಲ್ ಬಂದದ್ ಒಂದಾ ಎರಡಾ... ಈಗ ಎಲ್ಲ ಕಡ್ಮಿ ಆಯ್ ಒಂದ್ ಹದದಲ್ ಇತ್. ಕೊಲೆಸ್ಟರಾಲ್ ಜಾಸ್ತಿ ಆಯ್ ಒಂದ್ ಸಲ  ಮದ್ಯರಾತ್ರಿಗ್ ಎದಿ ನೋವ್ ಬಂದ್ ಲಘು ಹೃದಯಾಘಾತ ಆದದ್ ಎಣ್ಸಿರೇ ಈಗಲೂ ಹೆದ್ರಿಕಿ ಆತ್. ನೀನ್ ಮೆಷಿನ್ ಆಯ್ ಹೋಯ್ದೆ. ಇನ್ನಿನ್ ಜೀವ ಕೇಂತಿಲ್ಲ . ಈ ಮನ್ಷರಿಗೆ ರೆಸ್ಟ್ ಬೇಕ್ ಕಾಣ್.  ಜಾಸ್ತಿ ಕೆಲಸ ಮಾಡ್ಬೇಡ ಅಂದ್ ಹೇಳುಕೂ  ಆತಿಲ್ಲೇ , ನಾವ್ ಹತ್ರ ಇಲ್ಲ ಅಲ್ಲೇ... ಇನ್ ಯಾರ್ ಕೆಲ್ಸ ಮಾಡುದ್....
ಆರೂ ಅಪ್ಪಯ್ಯಂಗ್  ಹೇಳಿ ಹೇಳಿ ಅಡ್ಗಿ ಕೆಲ್ಸ ಬಿಟ್ ರಿಟಾಯರ್ಡ್ ತಗಂಡದ್ ಸ್ವಲ್ಪ ನೆಮ್ಮದಿ. ಅಮ್ಮ  ನಿಂಗ್ ಮತ್ತೆ ಅಪ್ಪಯ್ಯನಿಗೆ ಆರೋಗ್ಯ ಆಯುಷ್ಯ ಕೊಡಲಿ ಅಂದ್ ದಿನಾ ಬೇಡ್ಕಂತೆ.  ಕರೋನಾದಿಂದ ತಂಗಿ ಮದಿ‌ ನಿಂತ್ ಹೋಯ್ತ್. ಆ ಖುಷಿ ಮತ್ ಬತ್ತಿಲ್ಲ. ಮಾಸ್ಕ್ ಹಾಕಂಡ್ ಬನ್ನಿ, ೫೦ ಜನ ಮಾತ್ರ ಬನ್ನಿ ಅಂದ್ ಹೇಂಗ್ ಹೇಳುಕ್ ಆತ್.. ಈ ಕರೋನಾದಿಂದ ಬರೀ ಬೇಜಾರ್ .


ಮದಿ ಹಾಲ್ ಬುಕ್ ಮಾಡಿತ್, ಅಡ್ಗಿ ಭಟ್ರಿಗೆ, 300-400 ಜನರಿಗೆ ಹೇಳಿಕಿ‌ ಹೇಳಿತ್ ಎಲ್ಲ ರೆಡಿ ಮಾಡ್ಕಂಡ್ ಮೇಲ್ ಹೀಂಗೆಲ್ಲ ಆರೆ ಎಷ್ಟ್ ಬೇಜಾರ್ ಅಲ್ದಾ....ಅವ್ಳಿಗೆ ಎಷ್ಟ್ ಆಸಿ, ಕನ್ಸ್ ಇದ್ದಿತ್. ಒಬ್ಳೇ ಎಷ್ಟ ಮರ್ಕತಳೇನೋ... ಅದ್ಕೆ.. ಈ ಸಲಿ ಎಂತ ಆರೂ , ನಿಗ್ದಿ ಮಾಡಿದ್ ದಿನವೇ, ನಮಗೆ ಬೆಂಗಳೂರಿಂದ ಬಪ್ಪುಕ್ ಆಗ್ದಿರೂ ಅದೇ ದಿನಕ್ಕೆ ಮದಿ ಮಾಡಿ.  ಅವಳ್ ಗಂಡನ್ ಮನಿಗೆ ಹೋಪುದೇ ಮುಖ್ಯ.


ಇಂತಿ ನಿನ್ನ ಮಗಳು,
ಅಮ್ಮನ ಪ್ರೀತಿ ರಾಧಿಕಾ...


(ನಮ್ಮೂರು ಬಾರ್ಕೂರು ಇಪ್ಪುದ್  ಬೆಂಗ್ಳೂರು.)

ಕನ್ನಡಹಾಡು : ಅಬ್ಬಿ ಭಾಷಿ ಒಡ್ಲ್ ಭಾಷಿ ಕುಂದಾಪ್ರಕನ್ನಡ



ಕುಂದಾಪ್ರಕನ್ನಡ ಹಾಡು : ಅಬ್ಬಿ ಭಾಷಿ  ಇದ್ ಒಡ್ಲ್ ಭಾಷಿ.


( ವಿ. ಸೂ : ಹಾಡಿನ ಧ್ವನಿಮುದ್ರಣ ಬಿಡುಗಡೆಯಾಗಿದೆ. ಜುಲೈ_೨೦_೨೦೨೦)


ಅಬ್ಬಿ ಭಾಷಿ ಒಂದೇ ಸಾಕ್ ನೋವ್ ಹೊರ್ಗ್ ಹಾಕುಕೆ
ಅಬ್ಬಿ‌ ಪ್ರೀತಿ ಒಂದೇ  ಸಾಕ್ ಬ್ಯಾರೆ ಚಿನ್ನ ಎಂತಕೆ
ಹಗ್ಲ್ ರಾತ್ರಿ ನಿದ್ರಿ‌ ಬಿಟ್ ನಿನ್ನ ಸಾಕಿದ್ ಅಬ್ಬಿಗೆ
ಹೆಂಡ್ತಿ ಬಂದಳ್ ಅಂದ್ಹೇಳಿ ದೂರ ಮಾಡುದ್ ಎಂತಕೆ?!


ಕೊಚ್ಚಕ್ಕಿ ಕೂಳ್ ಮ್ಯಾಲೆ ಗಟ್ಟಿ ಮೊಸ್ರಾಕಿ ಉಣ್ಸಿದ್ಲ್
ತಾನ್ ತಂಗ್ಳ ತಿಂದ್ ನಿಂಗೆ ಬಿಸಿಕೂಳ್ ಬಡ್ಸಿದ್ಲ್
ಒಡ್ಲ್ ಜ್ವರ ಬಂದಲ್ ಗಡಾ..!!
ಒಡ್ಲ್ ಜ್ವರ ಬಂದಾಗಳಿಕೆ ಕಂಬ್ಳಿ ಹೊಚ್ಚಿ ಮಲ್ಗಿಸಿದ್ಲ್
ಕಾಳ್ಮೆಣ್ಸಿನ್ ಕಷಾಯ ಮಾಡಿ ಮದ್ಯರಾತ್ರಿಗ್ ಕುಡ್ಸಿದ್ಲ್

ಒಂದಾ ಎರ್ಡಾ ಅಬ್ಬಿ ಸೇವಿ ನೆನ್ಪಿಗೆ ಬತ್ತಿಲ್ಯನಾ
ಊರ್ ಬಿಟ್ ಪರೂರಿಗ್ ಹೋದೆ ಅಂದ್
ಅಬ್ಬಿನ್ ಮರಿಯುಕ್ ಆತ್ತನಾ
ನಮ್ ಭಾಷಿ ಒಡ್ಲ್ ಭಾಷಿ ಹೇಂಗೆ ಬಿಡುದ್ ಹೇಳ‌ನಾ
ಸತ್ರೂ ಸೈ ಆಡೋ ಭಾಷಿಲ್ ಬದ್ಲ್ ಆತಿಲ್ಲ ಕಾಣನಾ!!
ಬದ್ಲ್ ಆತಿಲ್ಲ‌ ಕಾಣನಾ...

ಸಿಂಧು ಭಾರ್ಗವ್ ಬೆಂಗಳೂರು-೨೧
ಊರು ಬಾರ್ಕೂರ್. ಉಡುಪಿ ಜಿಲ್ಲೆ






ಭತ್ತ ಕುಟ್ಟುವ ಹಾಡುಗಳ ಸಂಗ್ರಹ ಕುಂದಾಪ್ರಕನ್ನಡ


#ಭತ್ತ_ಕುಟ್ಟುವ_ಹಾಡು  ಕುಂದಾಪ್ರ ಕನ್ನಡ
ಒಂದ್ ಮಲ್ಲಿಗಿ ಮಿಟ್ಟಿ ಅಲ್ಲಿಟ್ಟಿ ಇಲ್ಲಿಟ್ಟಿ
ಕಲ್ಲಾ ಮೇಲಿಟ್ಟಿ ಕೈ ಬಿಟ್ಟಿ..
ಕಲ್ಲಾ ಮೇಲಿಟ್ಟಿ ಕೈ ಬಿಟ್ಟಿ
ಮಂದರ್ತಿ ತೇರ ಮೇಲಿಟ್ಟಿ ಕೈ ಮುಗ್ದಿ

..ಹ್ಯಾಂ ಹ್ಞೂ ...ಹ್ಯಾಂ ಹ್ಞೂ .....

ನಮ್ಮನಿ ಸುತ್ತಲು ಕೆಮ್ಮಣ್ಣಿನ ಪಾಗಾರ ಧೂಳ ಕಾಲವರೆ ಬರಬೇಡಿ ...
ಧೂಳ ಕಾಲವರೆ ಬರಬೇಡಿ
ನಮ್ಮನೆಗೆ ಚಿನ್ನದ ಕಾಲ್ ಒಡೆಯರು ಬರುತಾರೆ

...ಹ್ಯಾಂ ಹ್ಞೂ ...ಹ್ಯಾಂ ಹ್ಞೂ....
ಅಕ್ಕ ಸಾಕಿದ ಕೋಳಿ ಅಂಕದಲರ್ಜುನಾ
ನಾ ಸಾಕಿದ ಕೋಳಿ ಉರಿ ಹುಂಜಾ...
ನಾ ಸಾಕಿದ ಕೋಳಿ ಉರಿ ಹುಂಜಾ
ಕೂಗಿದರೆ ಮುಂಬೈ ಪಟ್ಟಣವು ಬೆಳಗೈತು

....ಹ್ಯಾ ಹ್ಞೂ ಹ್ಯಾ ಹ್ಞೂ ......

ಭತ್ತ ತೊಳು ಕೈಗೆ ಬಯ್ಣಿ ಮುಳ್ಳ ಹೆಟ್ಟಿತ ಮದ್ದಿಗ್ ಹ್ವಾದಣ್ಣ ಬರಲಿಲ್ಲಾ
ಮದ್ದಿಗ್ ಹ್ವಾದಣ್ಣ ಬರಲಿಲ್ಲಾ ಬಸ್ರುರ್ ಸೂಳಿ ಕಂಡಲ್ಲೇ ಒರಗಿದಾ

....ಹ್ಯಾ ಹ್ಞೂ ಹ್ಯಾ ಹ್ಞೂ .....


ಹಾದಿ ಮೇಲ್ ಹ್ವಾಪರೆ ಹಾಡೆಂದು ಕಾಣಬೇಡಿ
ಹಾಡಲ್ಲ ನನ್ನ ಒಡಲೂರಿ
ಹಾಡಲ್ಲ ನನ್ನ ಒಡಲೂರಿ
ದೇವರೇ ಬೆವರಲ್ಲ ನನ್ನ ಕಣ್ಣೀರು

....ಹ್ಯಾಂ ಹ್ಞೂ ....ಹ್ಯಾಂ ಹ್ಞೂ

ಹಳ್ಳಿ ಮೇಲಿನ ಹುಡುಗ ಹಲ್ಲೆಲ್ಲ ಬೆಳ್ಳಗೆ
ಬೆಳ್ಳುಳ್ಳಿ ಗೆಂಡೆ ಬಗಲಾಗೆ,
ಬೆಳ್ಳುಳ್ಳಿ ಗೆಂಡೆ ಬಗಲಾಗೆ ಇಟ್ಕೊಂಡು
ಮರಳು ಮಾಡಿದನೆ ಹುಡುಗೀರ

....ಹ್ಯಾಂ ಹ್ಞೂ...ಹ್ಯಾಂ ಹ್ಞೂ....


ಕಪ್ಪು ಹೆಂಡತಿಯೆಂದು ಸಿಟ್ಟು ಮಾಡಲು ಬ್ಯಾಡ
ನೇರಳೆ ಹಣ್ಣು ಬಲು ಕಪ್ಪು
ನೇರಳೆ ಹಣ್ಣು ಬಲು ಕಪ್ಪು ಅಣ್ಣಯ್ಯ
ತಿಂದು ಕಂಡರೆ ರುಚಿ ಬಾಳ

...ಹ್ಯಾಂ ಹ್ಞೂ ಹ್ಯಾಂ ಹ್ಞೂ .

ಹೊಸ ನೆಂಟ್ರ ಬಂದೀರ್, ಹಸಿ ಹಾಕಿ ನೀರ್ ಕೊಡಿ
ಹಸಿನ್ ಹಾಲೆಗ್ ಎಸರಿಡಿ
ಹಸಿನ್ ಹಾಲೆಗೆ ಎಸರಿಡಿ ನಮ್ಮನಿ
ಹೆಸರು ಹತ್ತುರೇ ನೆನೆಯಲಿ.....ಹ್ಯಾಂ ಹ್ಞೂ ಹ್ಯಾಂ ಹ್ಞೂ

ಭತ್ತ ತೊಳು ಹೆಣ್ಮಕ್ಳೆ ಅತ್ತಿತ್ತ ಕಾಣ್ಬೇಡಿ
ಬರ್ತಾರೆ ನಿಮ್ಮ ಬಗಿಯರ್
ಬರ್ತಾರೆ ನಿಮ್ಮ ಬಗಿಯರ್ ಹೆಣ್ಮಕ್ಳೆ
ತರ್ತಾರೆ ನಿಮಗೆ ತೌಡ್ ಹಿಟ್ಟ

.....ಹ್ಯಾಂ ಹ್ಞೂ ಹ್ಯಾಂ ಹ್ಞೂ

ಅಕ್ಕಿಯ ತೊಳಸುದ ಚೊಕ್ಕು ಮುತ್ತಿನ ಹಂಗೆ
ಅಕ್ಕ ನಿನ್ನ ಕೊರಳ ಪದಕವು
ಅಕ್ಕ ನಿಮ್ಮ ಕೊರಳ ಪದಕವು ಪಾವನ ಸರ
ಒಪ್ಪಿತ ಅಕ್ಕಮ್ಮನ ಕೊರಳಿಗೆ....ಹ್ಯಾಂ ಹ್ಞೂ ಹ್ಯಾಂ ಹ್ಞೂ..


ಒಂದಕ್ಕಿ ಬೆಂದಿತ್ ಒಂದಕ್ಕಿ ಬೈಲಿಲ್ಲ
ಬೆಂಗೇರಿ ಸೌದಿ ಹಿಡಿಲಿಲ್ಲ
ಬೆಂಗೇರಿ ಸೌದಿ ಹಿಡಿಲಿಲ್ಲ ಅಣ್ಣಯ್ಯ
ಗಂಧದ ಚೆಕ್ಕಿ ಒಡಕ್ಕೋಡ

...ಹ್ಯಾಂ ಹ್ಞೂ...ಹ್ಯಾಂ ಹ್ಞೂ...

ಬತ್ತಿಲ್ಲ ಅಂದರೂ,ಬಪ್ಪುಕೆ ಹೇಲ್ಕಂಡ್
ಬಂದರು ಒಂದೂ ಹುಳ ಇಲ್ಲ
ಬಂದರು ಒಂದೂ ಹುಳ ಇಲ್ಲ ಅಶೋಕಣ್ಣ
ನಾಳಿಂದ ಬಪ್ಪುಕೆ ನಂಗೆಡ್ಯ

.....ಹ್ಜ್ಹಾಂ ಹ್ಜ್ಹೂಹ್ಜ್ಹಾಂ ಹ್ಜ್ಹೂ


ಪಾರಿಜಾತದ ಹೂಗು ಪಾಗಾರಕೆರಗಿತು
ಯಾರಮ್ಮ ಹೂಗು ಕೊಯ್ಯಿಬ್ಯಾಡಿ
ಯಾರಮ್ಮ ಹೂಗು ಕೊಯ್ಯಿಬ್ಯಾಡಿ ನಮ್ಮಾನಿ
ದೇವ್ರಿಗೆ ಬೇಕು ಹೊಸ ಹೂಗು...

ಹ್ಯಾಂ ಹ್ಞೂ...ಹ್ಯಾಂ ಹ್ಞೂ

ಬೊಂಬಾಯಿ ಅಶೋಕಣ್ಣ ಬಾಯಿ ಬಿಟ್ರೇ..ಮಕ್ಕಳ್..
ಓಡ್ ಬತ್ತೋ ಏಲ್ಲಿದ್ರೊ.....ಆದರೇ,
ಈ ಪದ ಕೇಂಡ್ರೇ....ಯಕೊ ಕಣ್ಣ್-ಕೂರ್ತೋ......
ಹ್ಯಾಂ ಹ್ಜ್ನೂ

....ಹ್ಯಾಂ ಹ್ಜ್ಹೂಂ.....


ಅಪ್ಪೈನ ಮನೆಯಲ್ಲೋ ಎಪ್ಪತ್ತು ತೆಂಗಿನ ಮರ
ಕೊನಿ ನೂರ್ ಅದ್ಕೆ ಹೆಡಿ ನೂರು
ಕೊನಿ ನೂರ್ ಅದ್ಕೆ ಹೆಡಿ ನೂರು ಅಪ್ಪಯ್ಯ
ನಂಗೂ ನನ್ ತಂಗಿಗೂ ಸರ್ ಪಾಲು

....
ಹ್ಯಾಂ ಹ್ಞೂ...ಹ್ಯಾಂ ಹ್ಞೂ...

ನಾ ತೂಗು ತೊಟ್ಟಿಲಿಗೆ ನಾಗ ಬೆತ್ತದ ನೇಣ್
ನಾ ತೂಗಿ ಬನದ ಗಿಳಿ ತೂಗಿ
ನಾ ತೂಗಿ ಬನದ ಗಿಳಿ ತೂಗಿ ಕೊಡ್ಲಾಡಿ
ಹಳಿಯಮ್ಮ ತೂಗಿ ಸುಖ ನಿದ್ರಿ

....
ಹ್ಯಾಂ ಹ್ಞೂ... ಹ್ಯಾಂ ಹ್ಞೂ....

ಅಕ್ಕ ತಂಗ್ಯರು ಕೂಡಿ ಚುಳ್ಳಿ ಹೂವ್ ಕೊಯ್ವಾಗ
ಅಲ್ಲೊಬ್ಬ ಕಳ್ಳ ಎದುರಾದ
ಅಲ್ಲೊಬ್ಬ ಕಳ್ಳ ಎದುರಾದ ತಂಗ್ಯಮ್ಮ
ಚುಳ್ಳಿ ಹೂ ಸಾಕ ಮನಿಗ್ ಹ್ವಾಪು

....
ಹ್ಯಾಂ ಹ್ಞೂ...ಹ್ಯಾಂ ಹ್ಞೂ..


ಕೆಳ ಗೆದ್ದಿ ಕೆಸರೆಂದ ಮೇಲ್ ಗೆದ್ದಿ ಬಿಸಿಲೆಂದ
ಹೂಗಿನ್ ಹೆದ್ದರೀನೆ ಹಿಡಿದಾನ
ಹೂಗಿನ್ ಹೆದ್ದರೀನೆ ಹಿಡಿದಾನ ನನ್ ತಮ್ಮ
ಅದ್ ನಮ್ಮ ತಾಯಿ ತವರೂರು
ಯಾಲಕ್ಕಿ ಎಲೆಕರದ ಮೂಲಂಗಿ ಬುಡಕರದ
ಮೂರೊತ್ತು ಮೆಲುವ ಎಲೆಕರದ
ಮೂರೊತ್ತು ಮೆಲುವ ಎಲೆಕರದ ಅಣ್ಣಯ್ಯ
ಮಡದಿ ಕರದೊಂದು ಬಿಡದೀರು..


ಬಾಚಿ ಕಟ್ಟಿದ ಮಂಡೆ ಬಾಗಲ ಹೂವಿನದಂಡೆ
ನನ ತಾಯಿ ತೆಗೆದ ಬಕುತಲಿ
ನನ ತಾಯಿ ತೆಗೆದ ಬಕುತಲಿ ಬಾಮುಕುದ
ನನ್ನಣ್ಣ ತಪ್ಪಾ ಕೊನೆ ಹೂವ... ಹ್ಯಾಂ ಹ್ಞೂ ..ಹ್ಯಾಂ ಹ್ಞೂ ...
ಎಲ್ಲಾ ದೇವರಿಗೂ ನೆಲ್ಲಕ್ಕಿ ನೈದ್ಯವೂ
ನಮ್ಮನಿ ತಳದ ಒಡ್ತಿಯೇ
ನಮ್ಮನಿ ತಳದ ಒಡ್ತಿಯೇ ಮೂಕಾಂಬೆ
ಹಾಲಕ್ಕಿ ನೈದ್ಯವು ಅನುದಿನವು.

ಹ್ಯಾಂ ಹ್ಞೂ ..ಹ್ಯಾಂ ಹ್ಞೂ ..

ಸತ್ಯವುಳ್ಳ ಹೈಗುಳಿಯ ಸತ್ಯ ಕಾಣಕೆಂದು
ಬತ್ತಿ ಇಲ್ಲದೆ ದೀಪ ಉರಿದಾವು
ಬತ್ತಿ ಇಲ್ಲದೆ ದೀಪ ಉರಿದಾವು ಹೈಗುಳಿಯಲ್ಲಿ
ಸತ್ಯ ತೋರಿದವು ಜನರಿಗೆ ....

ಹ್ಯಾಂ ಹ್ಞೂ ..ಹ್ಯಾಂ...


ಸಂಗ್ರಹದಿಂದ....
#ವಿಶ್ವಕುಂದಾಪ್ರಕನ್ನಡದಿನ2020 #ಕುಂದಾಪ್ರಕನ್ನಡ #ವಿಶ್ವಕುಂದಾಪ್ರಕನ್ನಡದಿನ #ಭಾಷಿಅಲ್ಲಬದ್ಕ್  #ಭತ್ತಕುಟ್ಟುವಹಾಡು ಸಂಗ್ರಹದಿಂದ ನಿಮಗಾಗಿ. #kannadabarahagalu   #july202020

ರುಚಿಗಳು : ವಿಶೇಷಣಪದ ಪ್ರಯೋಗ ಕುಂದಾಪ್ರಕನ್ನಡ

ನಮ್ ಕನ್ನಡ ನಮ್ ಹಮ್...
#ವಿಶ್ವಕುಂದಾಪ್ರಕನ್ನಡದಿನ2020 #ನಮ್ಮೂರುಬಾರ್ಕೂರು #ಕುಂದಾಪ್ರಕನ್ನಡ

ರುಚಿಗಳು : ವಿಶೇಷಣಪದ ಪ್ರಯೋಗ

ಉಪ್ಪು : ಉಪ್ಪಿನ್ ಕರಾಸ್   ( ಉದಾ: ಸಾಂಬಾರ್ ಗೆ ಉಪ್ಪು ಜಾಸ್ತಿ ಆರೆ,
"ಎಂತಾ ಮರಾಯ್ತಿ ಒಂದ್ ಮುಷ್ಟಿ ಉಪ್ ಸೊರ್ದಿದ್ಯಾ.. ಉಪ್ಪಿನ್ ಕರಾಸ್  ಆಯ್ತ್, ಇದನ್ ಹ್ಯಾಂಗ್ ತಿಂಬುದ್"..)  😳

ಹುಳಿ : ಹುಳಿ ಹಪ್ಪಟ್ ( ಉದಾ: ಸಾಂಬಾರ್ ಗೆ ಹುಳಿ ಜಾಸ್ತಿ ಆರೆ,
"ಎಂತಾ ಮರಾಯ್ತಿ ಹುಳಿ ಹುಳಿ ಹಪ್ಪಟ್ ಆಯ್ತಲೇ"...) 😉

ಖಾರ : ಖಾರ ಕಿಚ್  ( ಉದಾ: ಸಾಂಬಾರ್ ಗೆ ಖಾರ ಜಾಸ್ತಿ ಆರೆ,
"ಎಂತಾ ಮರಾಯ್ತಿ ಖಾರ ಕಿಚ್ ಮಾಡಿದ್ಯಲೆ  ಇದನ್, ಮಕ್ಕಳ್ ಹೇಂಗ್ ಉಂಬುದ್"...) 😠

ಕಹಿ : ಕಿರ್ ಕಯ್ಞಿ  ( ಉದಾ: ಹಾಲೆ ಕೆತ್ತಿ ಆಶಾಡಿ ಅಮಾಸಿಗ್ ಎಲ್ಲರೂ ಕುಡಿತ್ರಿ.. ಅದರ್ ರುಚಿ ಕಿರ್ ಕಯ್ಞಿ ಅಂದ್ ನಿಮ್ಗೂ ಗೊತ್ತಿತ್ ) 😬

ಸಿಹಿ : ಸಿಹಿ ಸಿಹಿ ಪಾನಕ  ( ಉದಾ: ಚಾ ಗೆ ಸಕ್ರಿ ಜಾಸ್ತಿ ಆರೆ,
"ಎಂತಾ ಮರಾಯ್ತಿ ಚಾ ಹೋಯ್ ಸಕ್ರಿ ಪಾನ್ಕ  ಮಾಡಿದ್ಯಲೇ..) 😃

ನಾನೇ ಸಿಂಧು ಭಾರ್ಗವ್ | ಊರ್ : ಬಾರ್ಕೂರ್  ಇಪ್ಪುದ್ ಬೆಂಗ್ಳೂರು. #kannadabarahagalu #sindhubhargavquotes



Tuesday 7 July 2020

ಹಾಡು : ನಮ್ಮಯ ಭಾರತ


ಕನ್ನಡ ಕವಿತೆ ಶೀರ್ಷಿಕೆ : ನಮ್ಮಯ ಭಾರತ


ನಮ್ಮಯ ಭಾರತ ಹೆಮ್ಮೆಯ ಭಾರತ
ಭಾರತಾಂಬೆಯ ಮಕ್ಕಳು ನಾವು
ನಮ್ಮಯ ಭಾರತ ಹೆಮ್ಮೆಯ ಭಾರತ
ಗರುವದಿ ಹೇಳುವ ಬನ್ನಿ ಎಲ್ಲರೂ

ದೇಶವಾಸಿಗಳ ಭದ್ರತೆಗಾಗಿ
ಯೋಧರು ಕಾವಲು ಕಾಯುವರು
ಉಳುವ ಯೋಗಿಯು ಅನ್ನವ ನೀಡಿ
ಜನತೆಯ ಹಸಿವನು ನೀಗುವನು

ಎಂತಹ ಕಠಿಣ ಗಳಿಗೆಯಲ್ಲಿಯೂ
ಎದೆಗುಂದದೆ ಸಾಗುವ ಪ್ರಧಾನಿಗಳು
ಸಾಲವ ನೀಡುತ ಬಡವರ ರಕ್ಷೆಗೆ
ಪಣತೊಟ್ಟಿಹ ಮಂತ್ರಿಗಳು

ಬೇಸಿಗೆ ಕಾಲವು ಮುಗಿದೇ ಹೋಯಿತು
ಕರೋನಾ ಮಾರಿಯ ಹಾವಳಿಗೆ
ವಿಶ್ವದೆಲ್ಲೆಡೆ ವೈದ್ಯರು ಬಂದರು
ಕೋಟ್ಯಾಂತರ ಜನರ ರಕ್ಷಣೆಗೆ

ಸಾವು ನೋವುಗಳ ಅಂಕೆಯು ಕೂಡ
ಏರಿಕೆಯಾಗಿದೆ ದಿನದಿನಕೆ
ದೇಶದ ಜನರು ಕಂಗಾಲಾದರು
ಅರ್ಥ ವ್ಯವಸ್ಥೆಯ ಏರಿಳಿತಕ್ಕೆ

ಮುಂಗಾರು ಮಳೆಯ ಪ್ರವೇಶವೀಗ
ಚಂಡಮಾರುತದ ಹಾವಳಿಯು
ಮನೆಮಠ ಕಳೆದು ಕೊಳ್ಳುವ ಭೀತಿಗೆ
ಸಿಲುಕಿದ ರಾಜ್ಯದ ನೆರೆಪೀಡಿತರು

ಎಂತಹ ಕಷ್ಟಕೂ ಅಂಜದೇ ನಿಲ್ಲುವ
ಆತ್ಮಬಲವು ನಮ್ಮಲ್ಲಿದೆ
ನೆರೆಯ ದೇಶಗಳು ಲಗ್ಗೆ ಇಡುತಿರೆ
ಎದೆಯೊಡ್ಡಿ ಹೋರಾಡುವ ಧೈರ್ಯವಿದೆ

ಭಾರತಾಂಬೆಯ ಕುವರರು ನಾವು
ಸಯ್ಯಮ, ಶಾಂತಿಯೆ ನಮ್ಮ ಮಂತ್ರವು
ಈ ಮಣ್ಣಿನಲಿ ಜನಿಸಿದ ನಾವು
ಅಮ್ಮಗೆ ಕೀರುತಿಯ ತಂದು ಕೊಡುವೆವು



ರಚನೆ : ಶ್ರೀಮತಿ ತುಳಸಿ.
ಸಿಂಧು ಭಾರ್ಗವ್ ಬೆಂಗಳೂರು (ಕಾವ್ಯನಾಮ)

Barkur Some Google Photos..






ಹಾಡು : ಬಾ ಬಾರೋ

ಬಾ ಬಾರೋ ಬಾರೋ ಬಾರೋ ಬಾರೋ ನಿನ್ನಯ ತವರಿಗೆ
ಮರಳಿ ಬಾರಕೂರಿಗೆ
ಹಸಿರು ಹೊದ್ದಿಹ ಊರಿಗೆ, ಮಂಜುಮುಸುಕಿದ ಕೇರಿಗೆ
ಬಾರೋ ನಿನ್ನಯ ತವರಿಗೆ

ಕುಣಿದು ನಲಿದ ಬಾಲ್ಯವನ್ನು  ನೆನಪು ಮಾಡುವ ಊರಿಗೆ
ಗೆಳೆಯ ಗೆಳತಿ ಕೂಡಿ ಆಡಿ ಬೆಳೆದ ಸುಂದರ ಶಾಲೆಗೆ
// ಬಾ ಬಾರೋ//

ಅಪ್ಪ ಅಮ್ಮ ಸಲಹಿದ
ಗದ್ದೆ ತೋಟ ಬೆಳೆಸಿದ
ಉಸಿರು ನೀಡಿ ಹರಸಿದ
ಹೆಸರು ನೀಡಿ ಬೆಳೆಸಿದ // ಬಾ ಬಾರೋ//

ನೋವು ನಲಿವು ಎಲ್ಲ ಸಹಜ ದೂರದೂರ ಸಾಗಲು
ಮನೆಯ ನೆನಪು ಮರಳಿ ಬರುವುದು
ಒಂಟಿಭಾವ ಮೂಡಲು // ಬಾ ಬಾರೋ//

ಹಣದ ಹಿಂದೆ ಹೋಗಿ ಜನರು ತವರೂರನು‌ ಮರೆವರು
ಬಿಡುವು ಇರದೇ ದುಡಿವ ಜೀವಕೆ ವಿರಾಮ ಬೇಕು ಎನುವರು
ಮರಳಿ ತವರಿಗೆ ಬರುವರು
// ಬಾ ಬಾರೋ//

- ಸಿಂಧು ಭಾರ್ಗವ್ ಬೆಂಗಳೂರು

ಸಣ್ಕತಿ : ಹಳ್ತಿನ್ ಕಾಲಕ್ ಮಕ್ಕಳ್ ಎಲ್ ಇರ್ತ್ವೇ?!?

ಸಣ್ಕತಿ :  ಹಳ್ತಿನ್ ಕಾಲಕ್ ಮಕ್ಕಳ್ ಎಲ್ ಇರ್ತ್ವೇ?!?


ಸುಬ್ರಾಯ್ ಭಟ್ರ್ ಹೆಂಡ್ತಿ ಶಾಂತಮ್ಮ ರಾತ್ರಿ ೯ ಗಂಟಿಗ್ ಮಹಾಭಾರತ ಧಾರಾವಾಹಿ ಮುಗ್ಸಿ ಅಡ್ಗಿ‌ಮನಿಗೆ ಹೋದ್ರ್. ಇಬ್ಬರಿಗೂ ಶುಗರ್. ರಾತ್ರಿಗ್ ಚಪಾತಿ ಮಾಡಿ ತಿಂಬುದ್ ಅಭ್ಯಾಸ ಮಾಡ್ಕಂಡಿರ್. ಹೊರ್ಗ್ ಜಿರಾಪತಿ‌ ಮಳಿ. ಕಗ್ಗಾನ್ ಕತ್ಲಿ.  ಗೋದಿಹಿಟ್ಟಿನ್ ಡಬ್ಬ, ಅದೇ ಆಗಿನ್ ಕಾಲದ್ ಅಲ್ಯೂಮಿನಿಯಂ ಡಬ್ಬದಲ್ ಒಂದ್ ಮೂರ್ನಾಕ್ ಕೆ.ಜಿ ಆಪಷ್ಟ್ ಗೋದಿ ಹಿಟ್ಟಿ ಇದ್ದಿತೇನೋ. ಅದನ್ ಮೇಲಿಂದ ತೆಗಿಯೊತಿಗೆ ಕೈ ತಪ್ಪಿ ಕಾಲ್ ಮ್ಯಾಲೆ ಬಿತ್.  " ಅಯ್ಯೋ ರಾಮ!! ಹೋಯ್ ಇಲ್ ಬನ್ನಿಯೇ.." ಅಂದ್ ಕೂಗಿ ಕರಿತಾ ಶಾಂತಮ್ಮ ಜೋರಾಯ್ ಮರ್ಕುಕೇ ಶುರುಮಾಡಿರ್. ಸುಬ್ರಾಯ್ ಭಟ್ರ್ " ಎಂತ ಆಯ್ತ್ ಹೆಣೆ.. ಬಂದೆ ಬಂದೆ ಅಂದ್ ಓಡಿ ಬಪ್ಪುವಷ್ಟ್ರಲ್ ಕಾಲ್ ಕಪ್ಗಟ್ಟಿ ಆಯ್ತ್.. ಈ ರಾತ್ರಿಲ್ ಡಾಕ್ಟರ್ ಹತ್ರ ಹೇಂಗ್ ಹೋಪುದ್. ಹೊರ್ಗ್ ಜೋರ್ ಮಳಿ ಬೇರೆ ಬತ್ತಾ‌ಇತ್. ರಕ್ತ ಹೆಪ್ ಗಟ್ಟಿ ಆಯ್ತಲೇ ದೇವ್ರೇ..... ಇನ್ನೇನ್ ಮಾಡುದ್ ನಾನ್... ಅಂದ್ ಹೆದ್ರೀ ನೆರ್ಮನಿ ಶ್ಯಾಮಲನ್ನ ಕರಿಯುಕ್ ಹೋರ್.. ಮಳಿಲೇ ನೆನಿತಾ " ಶ್ಯಾಮಲಾ... ಓ ಶ್ಯಾಮಲಾ.. ಶಾಂತನ ಕಾಲಿಗ್ ಪೆಟ್ ಆಯ್ತ್ , ನಂಗ್ ಎಂತ ಮಾಡ್ಕ್ ಅಂದ್ಹೇಳಿಯೇ ಗೊತ್ತಾತಿಲ್ಲೇ... ಒಂದ್ಚೂರ್ ಕಾಣಲೇ.. ಬಾ ಮರಾಯ್ತಿ..." ಅಂದ್ ಗೋಗರ್ದರ್..

ಶ್ಯಾಮಲಕ್ಕ ಮಕ್ಕಳಿಗೆಲ್ಲ ಊಟ ಬಡ್ಸತಾ ಇದ್ಲ್. " ಮಕ್ಕಳೇ ನೀವೇ ಎಂತ ಬೇಕ್ ಕಂಡ್ ಹಾಕಂಡ್ ಊಟ ಮಾಡಿ.. ನಾ ಈಗ ಬತ್ತೆ ಅಕ್ಕಾ..."  ಅಂದ್ಗೇಳಿ ಓಡಿ ಬಂದ್ಲ್.. ಬಪ್ಪುವತಿಗೆ ಅವಳ ಮನಿಲಿದ್ದ ಐಡೆಕ್ಸ್ ಡಬ್ಬ ಹಿಡ್ಕಂಡೇ ಬಂದ್ಲ್. ಅಷ್ಟ್ರಲ್ ಕಪ್ಪಾಯ್ ಮಸ್ತ್ ನೋಯುಕ್ ಶುರುವಾಯ್ತ್. ಹಾಂಗೆ ಕಾಲ್ ದಪ್ಪ ಆಯ್ ಬೀಗಿತ್.  ಬಂದವಳೇ.. ಅವರ ಕಾಲಿಗೆ ಐಡೆಕ್ಸ್, ಉಪ್ಪು ಕಲ್ಸಿ ಹಚ್ಚಿ ಬಟ್ಟೆ ಸುತ್ತಿದ್ರ್. ‌ಹಾಂಗೇ ಚಪಾತಿ ಹಿಟ್ ಕಲ್ಸಿ ಚಪಾತಿ ಮಾಡಿದ್ರ್.  ಅದಕ್ ನೆಂಚಕಂಬುಕೆ ಎಂತ ಇರಲ್ಲೆ. ಅವರ್ ಮನೆದೇ ಉಳಿದ್ ಎರಡ್ ಸೌಂಟ್ ಸೌತಿಕಾಯಿ ಪದಾರ್ಥ ತಂದ್ ಬಿಸಿಮಾಡಿ ಚಪಾತಿ ಒಟ್ಟಿಗ್ ಹಾಕಿ ಕೊಟ್ಲ್. ಶುಗರ್ ಮಾತ್ರಿ ತಿಂಬುಕ್ ಕೊಟ್ ನೀರು ಕೊಟ್ರ್.

ಅಂತೂ ರಾತ್ರಿ ಊಟ ಮುಗಿತ್. ಇಷ್ಟೆಲ್ಲ ಆಪತಿಗ್ ಹನ್ನೊಂದ್ ಗಂಟಿ ಆತ ಬಂತ್. " ನೀವ್ ಮಲ್ಕಣಿ. ನಾನ್ ಮನಿಗೆ ಹೋತೆ. ಮಕ್ಕಳ್ ಉಂಡ್ ಜಾಗ ಸಾರ್ಸಿದ್ವೋ.!? ಇಲ್ಯೋ..?! " ಅಂದ್ ಹೇಳಿ ಸೆರ್ಗಿನ್ ತುದಿಲ್ ಕೈ ಒರ್ಸಕಂಡ್ ಮನಿಗ್ ಓಡಿದ್ಲ್. ಅಲ್ ಆದ್ದೂ ಹಾಂಗೆ.. ಮಕ್ಕಳ್ ಉಂಡ್ ಬಟ್ಲ್  ನಲ್ಲಿ ಕಟ್ಟಿಲ್ ಇಟ್ ಅಡ್ ಮಲ್ಕಂಡ್ ಟಿ.ವಿ ಕಾಂತ ಇದ್ದೋ. ಚಣ್ ಹೆಣ್ ನಿದ್ರಿ ಮಾಡಿ ಆಯ್ತ್. ಹೋದೋರೇ ಎಲ್ಲ ಒರ್ಸಿ ಪಾತ್ರ ತೊಳದ್ ಶ್ಯಾಮಲನೂ ನಿದ್ರಿ ಮಾಡಿದ್ರ್.

ಶಾಂತಮ್ಮನ ಕಾಲ್ ನೋಯ್ತಾ ಇಪ್ಪುಕೋಯ್ ನಿದ್ರಿಯೇ ಬರಲ್ಲೆ.  ಕಿಟಿಕಿ ತೆಕ್ಕಂಡ್ ಕ್ವಾಟ್ ಮೇಲ್ ಅದರ್ ದಂಡಿಗ್ ತಲ್ದಿಂಬ್ ಇಟ್ ಬೆನ್ನನ್ ಕ್ವಾಟಿಗೆ  ಒರ್ಗಿ ಕೂತ್ ಹೊರಗ್ ಕಾಂತ ಆಯ್ಕಂಡ್ರ್. ಆಗಾಗ ಬಪ್ಪು ಕೋಲ್ ಮಿಂಚಿಂದ ತೆಂಗಿನ್ ಮರದ್ ಸುಳಿ‌ ಕಾಂತ ಇರ್ತಿತ್.  "ಎರಡ್ ಮಕ್ಕಳೂ ಫಾರೇನ್ ಲಿ ಇದ್ದೋ. ವರ್ಷಕ್ ಒಂದ್ ಸಲಿ ಬಪ್ಪುದೂ ಕಷ್ಟದಲ್. ಹೋಯ್.. ಇದ್ ಎಂತದೇ ನಮ್ ಜೀವ್ನ..?!  ಶ್ಯಾಮಲ ಓಡ್ ಬಂದ್ ಸಹಾಯ ಮಾಡುಕ್ಹೋಯ್ ಆಯ್ತ್. ಹಳ್ತಿನ್ ಕಾಲಕ್ ಮಕ್ಕಳ್ ಹತ್ರ ಇಲ್ದಿದ್ ಮೇಲೆ............" ಅಂತ ಹೇಳಿದ್ರ್....

ಸುಬ್ರಾಯ್ ಭಟ್ರ್ ಚಣ್ಣಕ್ ನೆಗೆಯಾಡಿ " ಹೌದೌದ್... ಎಂತ ಮಾಡುಕಿಲ್ಲೆ...ಅವ್ ನಮ್ ಮಾತ್ ಎಲ್ ಕೇಂತೋ...  ನೀ ಅಲ್ಲೇ ಒರ್ಗಿ ಮಲ್ಕೋ, ಹಾಂಗೇ ನಿದ್ರಿ ಬತ್ ಕಾಣ್......" ಅಂದ್ರ್

- ಸಿಂಧು ಭಾರ್ಗವ್ ಬೆಂಗಳೂರು
#ವಿಶ್ವಕುಂದಾಪ್ರಕನ್ನಡದಿನ2020 #ಕುಂದಾಪ್ರಕನ್ನಡ #ನಮ್ಮಕುಂದಾಪ್ರ
#ಭಾಷಿಅಲ್ಲಬದ್ಕ್

Friday 3 July 2020

ಲೇಖನ : Boycottchina ಚೀನಾ ಉತ್ಪನ್ನಗಳನ್ನು ಭಾರತದಲ್ಲಿ ಸಂಪೂರ್ಣ ನಿಲ್ಲಿಸಲು ಸಾಧ್ಯವೇ??



ಸಿಡಿದೆದ್ದ ಸಿಂಹ ಪಾಕ್ಷಿಕ

Kannada_article about #boycottchina is it possible??


ಬಿಸಿಬಿಸಿ ಸುದ್ಧಿ..
ಓದದೇ ನಿರಾಶರಾಗದಿರಿ..
ಚೀನಾದ ಉತ್ಪನ್ನಗಳನ್ನು ನಮ್ಮ ದೇಶದಲ್ಲಿ ನಿಲ್ಲಿಸಲು ಸಾಧ್ಯವೇ..?? ಲೇಖಕಿ ಸಿಂಧು ಭಾರ್ಗವ್ ಅವರ ಲೇಖನ ಸಿಡಿದೆದ್ದ ಸಿಂಹ 🦁 ಪಾಕ್ಷಿಕದಲ್ಲಿ...
#boycottchina #sidideddasimha #newspaper #kannada_article
🥰
✍️📚✍️📚📰🗞️✍️📚🗞️✍️📚

ಸಂಪಾದಕ ಬಳಗಕ್ಕೆ ವಂದನೆಗಳು💐. #ಕನ್ನಡಲೇಖನ  #kannadaliterature #kannadigaru #Sindhubhargavquotes 
#ಸಿಡಿದೆದ್ದ_ಸಿಂಹ 🦁  #ಕನ್ನಡಪಾಕ್ಷಿಕ 🥰🌹👆📚😊✍️🙏🌹✨🌹
01-July-2020 To 15 -july -2020
ಧನ್ಯವಾದಗಳು💐  #siruguppa  #kannadapoems #kannadaquotes  #monthofjuly


#BOYCOTT_CHINA ಚೀನಾ 
ಉತ್ಪನ್ನಗಳ ಬಳಕೆಯನ್ನು ನಮ್ಮ ದೇಶದಲ್ಲಿ ನಿಲ್ಲಿಸಲು ಸಾಧ್ಯವೇ..??


ಇತ್ತೀಚಿಗಿನ ವಿದ್ಯಮಾನಗಳ ನೋಡಿದಾಗ ಭಾರತ-ಚೀನಾ ಗಡಿಭಾಗದಲ್ಲಿನ ಗಲ್ವಾನ್‌ ಕಣಿವೆಯಲ್ಲಿ ಭಾರತೀಯ ಸೇನೆಯ ಮೇಲೆ ದಾಳಿ ಮಾಡುವ ಮೂಲಕ ಚೀನಾ 1993, 1996 ಮತ್ತು 2013ರಲ್ಲಿ ಮಾಡಿಕೊಳ್ಳಲಾದ ಗಡಿ ಶಾಂತಿ ಒಪ್ಪಂದವನ್ನು ಉಲ್ಲಂಘಿಸಿದೆ. 1993ರ ಒಪ್ಪಂದದ ಪ್ರಕಾರ, ಒಂದು ವೇಳೆ ಉಭಯ ಪಡೆಗಳ ಯಾವುದೇ ಯೋಧರು ಗಡಿ ದಾಟಿ ಒಳಗೆ ಬಂದರೆ ಅವರನ್ನು ವಾಪಸ್‌ ಕುಳುಹಿಸಬೇಕು. ಆದರೆ, ಚೀನಾ ಗಲ್ವಾನ್‌ನಲ್ಲಿ ಈ ನಿಯಮ ಪಾಲಿಸಿಲ್ಲ. ನಡುರಾತ್ರಿಯಲ್ಲಿ ಪೂರ್ವ ನಿಯೋಜಿತವಾಗಿ ಮಾತಿಗಿಳಿದು ಮೊಳೆಗಳನ್ನು ಹೊಂದಿದ ರಾಡ್, ಬಡಿಗೆ, ಕಲ್ಲುಗಳಿಂದ ಭಾರತೀಯ ಯೋಧರ ಮೇಲೆ ದಾಳಿ ಮಾಡಿ ಸಾಯಿಸಿದ್ದಾರೆ. ಕೊರೆಯುವ ಚಳಿಯಲ್ಲಿಯೂ ಭಾರತೀಯ ಯೋಧರು ಪ್ರತಿ ದಾಳಿ ಮಾಡಿದ್ದರಾದರೂ ಜೂನ್ ೧೬-೧೭ ಕ್ಕೆ ೨೦ ಯೋಧರು ಹುತಾತ್ಮರಾಗಬೇಕಾಯಿತು. ಇದೊಂದು ಅಮಾನವೀಯ ಕೃತ್ಯ. ಅಲ್ಲದೇ ಕುತಂತ್ರೀ ಬುದ್ಧಿ ಚೀನಾಕ್ಕೆ ಸರ್ವತ್ರ ಧಿಕ್ಕಾರ.
ಹೀಗಿರುವಾಗ ಇದರ ಬೆನ್ನಲ್ಲೇ ಚೀನಾದ ಉತ್ಪನ್ನಗಳನ್ನು ನಮ್ಮ ದೇಶದಲ್ಲಿ ನಿಷೇಧಿಸಬೇಕು ಎಂಬ ಕೂಗು ಹೆಚ್ಚಾಗಿದೆ. ಸೈನಿಕರು ಅಲ್ಲಿ ದೇಶಕ್ಕಾಗಿ ಸಾಯುತ್ತಿದ್ದರೆ, ನೀವು ಡಬ್ ಸ್ಮ್ಯಾಶ್ ಮಾಡಿಕೊಂಡು ಕುಣಿಯುತ್ತೀರಾ... ಎಂದು ಸಾಮಾಜಿಕ ಜಾಲತಾಣದಲ್ಲಿ ಎಲ್ಲರೂ ದೇಶಪ್ರೇಮ ಬಿತ್ತರಿಸುವವರು ಹುಟ್ಟಿಕೊಂಡಿದ್ದಾರೆ. ಡಬ್ ಸ್ಮಾಶ್ ಮಾಡಿಕೊಂಡು ಬಂದಿದ್ದ ಟಿಕ್ ಟಾಕ್ ಆಪ್ ನ ಮಾತ್ರ ನಿಷೇಧಿಸಿದರೆ ಸಾಲದು‌. ಅದರ ಜೊತೆಗೆ ಅನೇಕ ದಿನಬಳಕೆಯ ಉತ್ಪನ್ನಗಳನ್ನು ನಿಷೇಧಿಸುವುದರ ಕಡೆಗೆ ಗಮನ ಹರಿಸಬೇಕು. ಹಾಗೆಂದು ದಿಢೀರನೆ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಕಾರಣ ವ್ಯಾವಹಾರಿಕವಾಗಿ ದೇಶ-ವಿದೇಶಗಳು ಒಪ್ಪಂದಗಳಿರುತ್ತವೆ. ಅಲ್ಲದೇ ಅದರ ಬದಲಿಗೆ ಇನ್ನು ಯಾವುದನ್ನು ಉಪಯೋಗಿಸಬೇಕೆಂಬ "ಬದಲೀ ಉತ್ಪನ್ನಗಳ" ಬಗ್ಗೆ ಮಾಹಿತಿಯ ಕೊರತೆಯಿದೆ. ಜನಸಾಮಾನ್ಯರು ಅಷ್ಟು ಸುಲಭವಾಗಿ ಬದಲಾಗುವುದು ಕಷ್ಟಸಾಧ್ಯ.
ಟಿಕ್ ಟಾಕ್ ಬಗ್ಗೆ ಹೇಳುವುದಾದರೆ:-  ಭಾರತೀಯರು ಒಂದು ವಿಷಯದ ಬಗ್ಗೆ ಭಾವನಾತ್ಮಕವಾಗಿ ಬೆಸೆದುಕೊಂಡಿರುತ್ತಾರೆ. ಕೆಲವರು ಸಮಯ ಕಳೆಯಲು, ಕೆಲವರು ಸಮಯ ಹಾಳು ಮಾಡಲು, ಇಲ್ಲ ತಮ್ಮ ಕಲೆ, ಪ್ರತಿಭೆಯನ್ನು ಹೊರಹಾಕಲು ಒಂದು ವೇದಿಕೆ ಸಿಗಬೇಕೆಂದು ಹಾತೊರೆಯುತ್ತ ಇರುತ್ತಾರೆ. ಮಧ್ಯರಾತ್ರಿಯ ತನಕ ನಿದ್ದೆ ಬರುವುದಿಲ್ಲವೆಂದು ಯೂಟ್ಯೂಬ್ ನಲ್ಲಿ ಅರ್ಧಗಂಟೆ , ಒಂದು ಗಂಟೆ ಅವಧಿಯ ವೀಡಿಯೋ ನೋಡಿ  ಬೇಸರವಾದ ಜನರಿಗೆ ಇದೊಂದು ಹದಿನೈದರಿಂದ ಮೂವತ್ತು ಸೆಕಂಡಿನಲ್ಲಿ ಮನೋರಂಜನೆ ನೀಡುವ ಸಣ್ಣ ಸಣ್ಣ ತುಣುಕುಗಳ ವೀಡಿಯೋ ಜೊತೆಗೆ ಅದಕ್ಕೆ ಸರಿಯಾದ ಹಾಡುಗಳ ಸಂಯೋಜನೆ ನೋಡಲು ದೊರೆತಾಗ ಬಹುಬೇಗನೆ ಅದಕ್ಕೆ ಅಂಟಿಕೊಂಡರು. ಅಲ್ಲದೇ ಆಮ್_ಆದ್ಮಿ ಯಂತರ ಜನರಿಗೆ ವೇದಿಕೆ ದೊರಕಿದ್ದು ಇನ್ನಷ್ಟು ಸಂಖ್ಯೆಯಲ್ಲಿ ಈ ಆಪ್ ನು ಬಳಸಲು ಉತ್ತೇಜನ ನೀಡಿದ ಹಾಗಾಯಿತು. ಹಳ್ಳಿ ಹೊಲದಲ್ಲಿ ನಿಂತು ನೃತ್ಯ ಮಾಡುವ ರೈತಮಹಿಳೆ ಮಾಡಿದ ವೀಡಿಯೋಗೆ ಕೂಡ ಲಕ್ಷ ಜನರು ನೋಡಿ ಹಂಚಿಕೊಂಡರು. ನೃತ್ಯ, ಚಿತ್ರ ಬಿಡಿಸುವುದು, ಹಾಡುವುದು, ಅಭಿನಯ, ಸಂಭಾಷಣೆ ಹೇಳುವುದು, ಡಬ್ ಸ್ಮ್ಯಾಶ್, ಅಡುಗೆ, ಕುಸುರಿ ಕೆಲಸ , ಕ್ರಾಫ್ಟ್, ಹೊಲಿಗೆ, ವೈದ್ಯ ವಿಜ್ಞಾನ ಮಾಹಿತಿ, ವಕೀಲರಿಂದ ಸಲಹೆ, ಪ್ರಾಣಿ ಪ್ರಪಂಚ, ಪ್ರಕೃತಿ, ಫೋಟೋಗ್ರಫಿ ಕಲಿಕೆ ಇನ್ನೂ ಅನೇಕ ಕಲೆಗಳಿಗೆ ವೇದಿಕೆ ಸಿಕ್ಕಿ ಲಕ್ಕೋಪಲಕ್ಷ ಜನರು ವೀಕ್ಷಿಸಿ ಹಂಚಿಕೊಂಡಾಗ, ಅಲ್ಲದೇ ಇದೇ ಖಾಸಗೀ ಸುದ್ಧಿ ಮಾಧ್ಯಮದವರು ತಮ್ಮ ಟಿ.ಆರ್. ಪಿ. ಗೋಸ್ಕರ ಅದರಲ್ಲಿ ಬಹುಪ್ರಚಾರದಲ್ಲಿದ್ದ ವ್ಯಕ್ತಿಗಳ ಹುಡುಕಿ ತೆಗೆದು ಅವರ ವೀಡಿಯೋಗಳನ್ನು ಬಿತ್ತರಿಸಿ ಹೊಗಳಿಕೆಯ ಮಹಾಪೂರಗೈದಾಗ ಒಬ್ಬ ಆಮ್_ಆದ್ಮೀಗೆ ಆದ ಸಂತಸ ಅಷ್ಟಿಷ್ಟಲ್ಲ. ಅಲ್ಲಿ ಎಲ್ಲರೂ ಹಿರೋಗಳೇ ಆದರು. ಈಗ ಅವರ ಮನಸ್ಥಿತಿ ಹೇಗಿದೆ ಎಂದರೆ ಜೀವ ಬೇಕಾದರು ತೊರೆಯಬಹುದು ಟಿಕ್ ಟಾಕ್ ಬಿಡುವುದಿಲ್ಲ ಎಂಬಂತೆ.. ಹಾಗೆಂದು ನಾನು ಟಿಕ್ ಟಾಕ್ ಗೆ ಬೆಂಬಲಿಸುತ್ತಿಲ್ಲ.
ಅದನ್ನೇ ಬಂಡವಾಳ ಮಾಡಿಕೊಂಡ ಚೀನಾ ಅಷ್ಟಕ್ಕೆ ನಿಲ್ಲದೇ ಹೆಲೊ, ಶೇರ್ ಇಟ್, ಲಿವ್ ಮೀ, ಯೂ ಕ್ಯಾಮ್ ಪರ್ಫೆಕ್ಟ್, ವಿಗೋ ವೀಡಿಯೋ, ಪಬ್ ಜೀ, ವೀ ಚಾಟ್, ಕ್ಯಾಮ್ ಸ್ಕ್ಯಾನರ್, ಲೈಕೀ, ಬ್ಯೂಟಿ ಪ್ಲಸ್, ಇ. ಎಸ್, ಜೂಮ್ ವೀಡಿಯೋ, ವೀವಾ ವೀಡಿಯೋ, WPS office, ಯೂಸಿ ಬ್ರೌಸರ್ ಹೀಗೆ ಅನೇಕ ಮನೋರಂಜನಾ ಉತ್ಪನ್ನಗಳನ್ನು ಪರಿಚಯಿಸಿದವು. ಅಷ್ಟೇ ಅಲ್ಲದೇ ಸಲೀಸಾಗಿ ದೇಶದ ಹಳ್ಳಿಹಳ್ಳಿಯ ಜನರ ಮೊಬೈಲ್ ಗೂ ತಲುಪುವ ಹಾಗೆ ಮಾಡಿದವು. ಆಗೆಲ್ಲ ಯಾರೂ ತಡೆಯಲಿಲ್ಲ. ಎಲ್ಲರೂ ಅದರ ಸದುಪಯೋಗ ಪಡೆದವರೇ ಇದ್ದರು. ಇದೇನೊ ಮಾತಿದೆಯಲ್ಲ , ಎಲ್ಲವೂ ಒಳ್ಳೆಯ ರೀತಿಯಲ್ಲಿ  ನಡೆದರೆ ನಾವು ನೀವು ಬಾಯ್ ಬಾಯ್, ಇಲ್ಲದಿದ್ದರೆ ದುಶ್ಮನ್ ಗಳು ಎಂದು...
ಈ ಚೀನಾದ ಉತ್ಪನ್ನಗಳ ಬಗ್ಗೆ ಈಗ ಒಲ್ಲದ ಮನಸ್ಸು ತೋರಿಸುವ ಬದಲು, ಸೈನಿಕರು ಹುತಾತ್ಮರಾದರೆಂದು ದೇಶಪ್ರೇಮ ತೋರಿಸುವ ಬದಲು, ಮೊದಲಿನಿಂದಲೂ ಬೇಡ ಎಂದಿದ್ದರೆ ಚೆನ್ನಾಗಿರುತ್ತಿತ್ತು ತಾನೆ. ಕೇವಲ ಟಿಕ್ ಟಾಕ್ ಬ್ಯಾನ್ ಮಾಡಿದರೆ ಏನೂ ಪ್ರಯೋಜನವಿಲ್ಲ. ಅದರ ಬದಲಾಗಿ ಅಲ್ಲಿಂದ ತರಿಸಿಕೊಂಡ ಸ್ಮಾರ್ಟ್ ಫೋನ್ ಗಳು, ಮೊಬೈಲ್ ಗಳು, ಎಲ್. ಇ. ಡಿ, ಕೈಗೆ ವಾಚ್, ಕೆಲವು ಸಿಸಿಟಿವಿ ಉಪಕರಣಗಳು, 3D ಪ್ರಿಂಟರ್ಗಳು, ಡ್ರೋನ್, ಅಷ್ಟೇ ಏಕೆ ಮೊಬೈಲ್ ಗೆ ಹಾಕುವ ಕವರ್ ಕೂಡ ಚೀನಾದೇ ಇದೆ.

ಸಾಲದಕ್ಕೆ ಹೊಟ್ಟೆ ತುಂಬಿಸಿಕೊಳ್ಳಲು ಹಕ್ಕಾ ನೂಡಲ್ಸ್, ಚೈನೀಸ್ ನೂಡಲ್ಸ್, ಬೇಬಿ ಕಾರ್ನ್ , ಸ್ವೀಟ್ ಕಾರ್ನ್ ಇಂದ ಮಾಡುವ ತಿಂಡಿಗಳು, ಸೂಪ್, ಪ್ರೆಶ್ ಸೇಬು ಹಣ್ಣು, ಫ್ರೈಡ್ ರೈಸ್ ಹೀಗೆ ಅನೇಕ ತಿಂಡಿಗಳು ಕೂಡ ಚೀನಾದವರು ನಾಲಿಗೆಗೆ ರುಚಿ ಹತ್ತಿಸಿದ್ದಾರೆ. ದೀಪಾವಳಿಯ ಪಟಾಕಿಗಳು, ಆಕಾಶ ಬುಟ್ಟಿ ಕೂಡ ಚೀನಾದ್ದೇ ಬೇಕೆಂಬಂತೆ ಆಗಿದೆ.


ಮುಂಜಾನೆ ಎದ್ದು ರಾತ್ರಿ ಮಲಗುವ ತನಕ, ಉಂಡು ಹೇತುವ ತನಕ ತಿಂಡಿ ತೀರ್ಥ, ಬಟ್ಟೆ ಬರೆ, ಶೋಕಿಗಾಗಿ ತೊಡುವ ವಾಚ್, ಸನ್ ಗ್ಲಾಸ್, ಚಪ್ಪಲಿ, ಶೂಗಳು, ಸೊಂಟಕ್ಕೆ ಬೆಲ್ಟ್  ಎಲ್ಲವೂ ಚೀನೀಮಯವಾಗಿದೆ. ಅಷ್ಟೇ ಏಕೆ ಪುಟ್ಟ ಮಗು ಆಟವಾಡುವ ಗೊಂಬೆಗಳು, ಕೀ ಕೊಡುವ ಸಣ್ಣ ಸಣ್ಣ ವಾಹನಗಳು, ಆಟಿಕೆಗಳು ಕೂಡ "Made in China" ಎಂದೇ ನಮೂದಿಸಿರುತ್ತದೆ. ಒಂದು ಮಕ್ಕಳ ಆಟಿಕೆ ಕೂಡ ಭಾರತೀಯ ಉತ್ಪನ್ನವಾಗಿರಲು ಬಿಡದ ಚೀನಾ, ಅಲ್ಲದೇ ಅದನ್ನು ತಡೆದು ಭಾರತೀಯರಿಗೆ ಉದ್ಯೋಗವಕಾಶ ನೀಡದ ನಮ್ಮ ದೇಶ ಏನು ಮಾಡುತ್ತಿದೆ.  ನಮ್ಮ ದೇಶದ ಹಳ್ಳಿ ಹಳ್ಳಿಗೂ ಸಂತೆಯಲ್ಲಿ , ಜಾತ್ರೆಯಲ್ಲಿ ಕೂಡ "Made in china" ದ ಎಲ್. ಇ.ಡಿ ಉತ್ಪನ್ನಗಳು, ಆಟಿಕೆಗಳು ತಲುಪುವ ತನಕ ಸುಮ್ಮನಿದ್ದು ಈಗ #COTTCHINA  ಎಂದು ಹ್ಯಾಶ್ ಟ್ಯಾಗ್ ಹಾಕಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡರೆ ಎಲ್ಲವೂ ನಿಂತು ಬಿಡುವುದೇ..??  ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ, ಅಥವಾ ಅಕ್ಕಪಕ್ಕದವರು ಮಾಡುವರೆಂದು ನಾವೋ...  ಹೀಗೆ "ಸರ್ವಂ ಚೀನೀಮಯಂ" ಮಾಡಿಬಿಟ್ಟಿದ್ದೇವೆ. ಚೀನಾದ ಪಾರುಪತ್ಯ ಅಥವಾ ಕರಿನೆರಳು ಹಾಸಿ ಮಲಗಿದೆ.


ಹೀಗಿರುವಾಗ ಯಾವುದೋ ಒಂದು ದಿನ ರಸ್ತೆಯಲ್ಲಿ ನಿಂತು ಚೀ‌ನ ಬಾವುಟಕೆ ಬೆಂಕಿ ಹಚ್ಚಿ ಮುಷ್ಕರ ಮಾಡಿದರೆ ಎಲ್ಲವನ್ನೂ ನಿಲ್ಲಿಸಲು ಸಾಧ್ಯವೇ..?? ಸ್ವದೇಶಿ ಉತ್ಪನ್ನಗಳ ಹೆಚ್ಚೆಚ್ಚು ಉತ್ಪಾದನೆ ಹಾಗು ಬಳಕೆ ಎರಡೂ ನಮ್ಮ ದೇಶದಲ್ಲಿ ಖಡ್ಡಾಯವಾಗಿ ಬಳಕೆಯಾಗಬೇಕು. ಕೇಂದ್ರ ಸರ್ಕಾರ ಆದೇಶ ಹೊರಡಿಸಬೇಕು. ಜನರ ಮನಸ್ಥಿತಿ ಬದಲಾಗಬೇಕು. ನಮ್ಮವರಿಗೆ ಉದ್ಯೋಗವಕಾಶಗಳು ದೊರೆಯಬೇಕು. ಆರ್ಥಿಕವಾಗಿ ಚೇತರಿಕೆ ಕಾಣಬೇಕು. ಎಲ್ಲದಕ್ಕೂ ಸಮಯ ಸಯ್ಯಮ ಬೇಕೇಬೇಕು.


ಲೇಖಕಿ : ಸಿಂಧು ಭಾರ್ಗವ್ | ಬೆಂಗಳೂರು


Wednesday 1 July 2020

ಲೇಖನ : ಕರ್ನಾಟಕ ಪತ್ರಿಕಾ ದಿನಾಚರಣೆ


ಕಿರುಲೇಖನ : ಕರ್ನಾಟಕ ಪತ್ರಿಕಾ ದಿನಾಚರಣೆ
ಮಂಗಳೂರು ಸಮಾಚಾರ (Google image source )

Your quote images

Your quote image

ಜನಮಿಡಿತ ದಿನಪತ್ರಿಕೆಯಲ್ಲಿ ಲೇಖನ ಪ್ರಕಟವಾಗಿದೆ


            ಜುಲೈ ಒಂದರಂದು ಮೊದಲ ಬಾರಿಗೆ ಕರುನಾಡಿನಲ್ಲಿ  "ಮಂಗಳೂರು ಸಮಾಚಾರ" ಪತ್ರಿಕೆ ಆರಂಭವಾಯಿತು. ಪ್ರಜಾಪ್ರಭುತ್ವದ ನಾಲ್ಕನೇ ಆಧಾರ ಸ್ಥಂಭವೆ ಈ ಪತ್ರಿಕಾ ಮಾಧ್ಯಮ.  ೧೮೩೪ ರಲ್ಲಿ ಬಂದ ಮೊದಲ ಕನ್ನಡ ವಾರಪತ್ರಿಕೆ ಇದಾಯಿತು. ತನ್ಮೂಲಕ ಕರ್ನಾಟಕದಲ್ಲಿ ತಲೆ ಎತ್ತಿದ ಮೊದಲ ಕನ್ನಡ ಪತ್ರಿಕೋಧ್ಯಮ ಎಂಬ ಹೆಗ್ಗಳಿಕೆ ಪಡೆಯಿತು. ಜನರು ನಿರ್ಭೀತರಾಗಿ ಸ್ವತಂತ್ರವಾಗಿ ವಾದ ಮಂಡಿಸುವ, ದೂರು ನೀಡುವ ವೇದಿಕೆ ಇದಾಗಿದೆ. ಅನ್ಯಾಯವನ್ನು ದಾಖಲು ಮಾಡಲು ಸರ್ಕಾರದ ಗಮನಕ್ಕೆ ತರಲು, ದೀನರ ಸಂಕಷ್ಟಕ್ಕೆ ದನಿಯಾಗಲು , ಅನೇಕರ ಕುಂದು ಕೊರತೆಗಳನ್ನು ನೀಗಿಸಲು ಈ ಪತ್ರಿಕೆಗಳು ಸಹಕಾರಿಯಾಗಿವೆ. ಹಳ್ಳಿ, ಪಟ್ಟಣ, ಜಿಲ್ಲೆ, ರಾಜ್ಯದ ಹಾಗೆ ದೇಶ-ವಿದೇಶದ ಸುದ್ದಿಯನ್ನು ಪ್ರತಿದಿನ ಮುಂಜಾನೆ ಅಲ್ಲದೇ ಸಂಜೆ ಹೊತ್ತು ತರುತ್ತವೆ. ಆಗಿನ ಕಾಲದಲ್ಲಿ ಪಾಶ್ಚಿಮಾತ್ಯರು ತಮ್ಮ ಕ್ರೈಸ್ತ ಧರ್ಮದ ಪ್ರಚಾರ ಮಾಡಲು ಬಳಸಿದರು. ಮೊಳೆ ಅಚ್ಚಿನ ಮೂಲಕ ವಿಚಾರಗಳನ್ನು ಬಿತ್ತರಿಸುತ್ತಿದ್ದರು. ಈಗೆಲ್ಲ ಡಿಜಿಟಲ್ ಮಾಧ್ಯಮವಾಗಿದೆ.


           ಇಂದಿನ ಕಾಲಕ್ಕೆ ಪತ್ರಿಕಾ ಮಾಧ್ಯಮ ಹೊಚ್ಚ ಹೊಸತಾಗಿ ತಲೆ ಎತ್ತಿದೆ. ಸಾಪ್ತಾಹಿಕ ಪುರವಣಿ ಎಂದು ವಿಶೇಷವಾಗಿ ವಾರದ ಏಳು ದಿನಗಳಲ್ಲಿ ವಿವಿಧ ವಿಭಾಗದಲ್ಲಿ ಸಮಾಚಾರಗಳನ್ನು ಬಿತ್ತರಿಸುತ್ತವೆ. ಅಲ್ಲದೆ ಪತ್ರಿಕೋಧ್ಯಮ ವಲಯದವರಿಗೆ ಮಾತ್ರವಲ್ಲದೇ ಯುವ ಬರಹಗಾರರಿಗೂ ವೇದಿಕೆ ನೀಡಿವೆ. ಸಾಹಿತ್ಯ ಸಾಂಸ್ಕೃತಿಕ, ಮಹಿಳೆಯರಿಗೆ, ಆರೋಗ್ಯ, ಕರಕುಶಲ, ಕೃಷಿ ವಲಯ, ಉದ್ಯಮ, ವ್ಯವಹಾರ, ಆಧ್ಯಾತ್ಮ, ಚಿಂತನ-ಮಂಥನ, ಪುಟಾಣಿಗಳಿಗಾಗಿ ಮಕ್ಕಳ ಸಾಹಿತ್ಯ, ವಿಸ್ಮಯ ಪ್ರಪಂಚ , ಜ್ಞಾನ - ವಿಜ್ಞಾನ, ಸಿನಿಮಾಹಿತಿ, ಉದ್ಯೋಗಾವಕಾಶಗಳ ಮಾಹಿತಿ ಹೀಗೆ ವಿವಿಧ ವಿಚಾರಧಾರೆಗಳ‌ ಮಹಾಪೂರ, ವರ್ಣಮಯವಾಗಿ ಪತ್ರಿಕಾ ವಲಯದಿಂದ ಓದುಗರಿಗೆ ತಲುಪುತ್ತಿದೆ.


        ಈಗಿನ ಕರೋನಾ ವೈರಸ್ ನ ಹಾವಳಿ ಇದ್ದರೂ ಪತ್ರಿಕಾ ಮಾಧ್ಯಮವು ತನ್ನ ಸೇವೆಯನ್ನು ನಿಲ್ಲಿಸಿರಲಿಲ್ಲ. ಜೀವಭಯ, ರೋಗ ಭಯದ ವಾತಾವರಣದ ನಡುವೆಯೂ ದಿನಪತ್ರಿಕೆಯನ್ನು ಪ್ರತಿದಿನ ಮನೆ-ಮನೆಗೆ ಹಂಚುವ ಹುಡುಗರಿಗೆ ದೊಡ್ಡ ಸಲ್ಯೂಟ್ ಹೇಳಲೇಬೇಕು. ಅಲ್ಲದೇ ಪತ್ರಿಕಾ ಸಂಪಾದಕ ಬಳಗಕ್ಕೆ ಅಭಿನಂದನೆಗಳನ್ನು ತಿಳಿಸೋಣ.

 ಸಿಂಧು ಭಾರ್ಗವ್ ಬೆಂಗಳೂರು-೨೧