Saturday 5 August 2017

ಲೇಖನ : ಜೀವನದ ಸಂತೆಯಲಿ ಸ್ನೇಹಸುಗಂಧ

ಲೇಖನ : ಜೀವನದ ಸಂತೆಯಲಿ ಸ್ನೇಹಸುಗಂಧ


      ಇನ್ನೇನು ಸ್ನೇಹಿತರ ದಿನಾಚರಣೆ ಹತ್ತಿರ ಬರುತ್ತಿದೆ. ಶಾಲಾ-ಕಾಲೇಜು ಹುಡುಗರಿಗಂತೂ ಕಾಂಪಾಸ್ ನಲ್ಲಿ ಹಬ್ಬದ ವಾತಾವರಣ.ಆ ಹಂತ ದಾಟಿ ಬಂದವರಿಗೆ ನೆನಪು ಇದೆಯೋ ಇಲ್ಲವೋ.. ಹಾಗೆ ಸ್ನೇಹದ ಕುರಿತಾದ ಒಂದು ಸಣ್ಣ ಲೇಖನ, ಓದಿ ನಿಮ್ಮ ಅಭಿಪ್ರಾಯ ತಿಳಿಸಿ..
        ಜೀವನವೇ ಒಂದು ಉಗಿಬಂಡಿಯಂತೆ. ಅದೆಷ್ಟು ದೂರ ಪಯಣಿಸಬೇಕೆಂದು ಯಾರಿಗೂ ತಿಳಿಯದು. ನಡುನಡುವೆ ಸಿಗುವ ನಿಲ್ದಾಣದಲ್ಲಿ ಒಂದಷ್ಟು ಸ್ನೇಹಿತರು ನಮ್ಮ‌ಜೀವನಕ್ಕೆ ಬಂದು-ಇದ್ದು-ಮತ್ತೆ ಇಳಿದು ಹೋಗುತ್ತಾರೆ. ಕೊನೆಗೆ ಉಳಿಯುವುದು ಒಂದಷ್ಟು ನೆನಪುಗಳು, ಸವಿನೆನಪುಗಳಿಂದ ಮೂಡುವ ಆನಂದಭಾಷ್ಪ, ಹಾಗೂ ಕಹಿಘಟನೆಯಿಂದ ಉದುರಿದ ಕಣ್ಣೀರ ಹನಿಗಳು.... ಸ್ನೇಹ ಆರಂಭವಾಗಲು ಕಿರುನಗು ಸಾಕು. ಚಿಗುರಲು ಕಾಳಜಿ ತುಂಟತನದಿಂದ ಕೂಡಿದ ಮಾತು, ಪರಸ್ಪರ ಸಹಾಯ ಮಾಡುವ ಮನೋಭಾವ ಎಲ್ಲವೂ ಬೇಕು‌. ಆದರೊಂದು ಬಹುಮುಖ್ಯವಾಗಿ ಸ್ನೇಹ ಈ ಜಾತಿ-ಧರ್ಮ ನೋಡಿಯಾಗಲಿ, ಆಸ್ತಿ-ಅಂತಸ್ತು ನೋಡಿಯಾಗಲಿ ಬರುವುದಿಲ್ಲ. ಹಾಗೆ ಜೊತೆಗೆ ಬಂದವರೂ ಹೆಚ್ಚು ದಿನ ಉಳಿಯುವುದೂ ಇಲ್ಲ.
          ಹೆಣ್ಣು ಮಕ್ಕಳಿಗೆ ಹೆಚ್ಚಾಗಿ ಮದುವೆಯಾದ ಮೇಲೆ ಕಾಲೇಜುದಿನದ ಸ್ನೇಹಿತರ ಸಂಪರ್ಕ ದಲ್ಲಿರುವುದು ಕಷ್ಟವಾಗುತ್ತದೆ. ಗೃಹಿಣಿಯರಿಗೆ (ಮನೆಯಲ್ಲೇ ಇರುವವರಿಗೆ) ಅಕ್ಕ-ಪಕ್ಕದ ಮನೆಯ ಮಹಿಳಾಮಣಿಗಳೇ ಸ್ನೇಹಿತರಾಗುತ್ತಾರೆ.ಉದ್ಯೋಗಕ್ಕೆ ಹೋಗುವವರಿಗೆ ಸಹೋದ್ಯೋಗಿಗಳು ಒಂದಷ್ಟು ಜನ. ಈಗಿನ ಕಾಲದಲ್ಲಿ ಎಫ್.ಬಿ (ಫೇಸ್ಬುಕ್, ಫ್ರೈಂಡ್ಸ್ ಬುಕ್) ಇದೆ. ಅಲ್ಲಿ ಒಂದಷ್ಟು ಸ್ನೇಹಿತರು ಸಿಗುತ್ತಾರೆ. ಮೊಬೈಲ್ ನಂಬರ್ ತೆಗೆದುಕೊಂಡು ವಾಟ್ಸ್ ಆಪ್ ನಲ್ಲೂ ಬಂದುಬಿಡ್ತಾರೆ. ಹಾಗೆ ಹಳೆಯ ಗೆಳೆಯ/ತಿಯರೂ ಮತ್ತೆ ಮಾತಿಗೆ/ಸಂಪರ್ಕಕ್ಕೆ ಸಿಗುತ್ತಾರೆ..
.
.

ಆದರೆ ನಿಜವಾದ ಸ್ನೇಹಿತೆ/ತ ಅಂದರೆ ಯಾರು? ನಂಬಿಕೆ, ಪ್ರೀತಿ,ವಿಶ್ವಾಸಕ್ಕೆ ಅರ್ಹರು ಯಾರು..??

ನಮ್ಮ ಮನಸ್ಸಿನ ಮಾತುಗಳನ್ನು (ನೋವುಗಳು ಅಥವಾ ಸಂತೋಷದ ವಿಷಯಗಳಿರಬಹುದು)  ಕೇಳುವ , ಸಾಂತ್ವಾನ ಹೇಳುವ ಸಹೃದಯಿ ಮಿತ್ರರು ನಮ್ಮ ಜೊತೆ ಇದ್ದಾರೆ ಅಂದರೆ ಅದೇ ಅದೃಷ್ಟ..
ಕಷ್ಟ ಕಾಲಕ್ಕೆ ಕರ ಸಹಾಯ ಇಲ್ಲಾ ಹಣದ ಸಹಾಯ ಮಾಡುವ ಸ್ನೇಹಿತರು,ಮಾನವೀಯತೆ ಇರುವ ಮನಸ್ಸುಗಳು ಬೇಗ ಆಪ್ತರಾಗಿ ಬಿಡುತ್ತಾರೆ. ಎಲ್ಲೋ ಯಾವುದೋ ಅಪರಿಚಿತ ಊರಿನಲ್ಲಿ ದಿಕ್ಕುಕಾಣದೇ ಒದ್ದಾಡುತ್ತಿದ್ದಾಗ ಸಹಾಯ ಮಾಡಿದವರೂ ಯಾವಾಗಲೂ ನೆನಪಿನಲ್ಲಿ ಉಳಿಯುತ್ತಾರೆ. ಆದರೆ ಅವರೆಲ್ಲ ಸ್ನೇಹಿತರಲ್ಲ. ಅವರಲ್ಲಿ ಮಾನವೀಯತೆ ಇದೆ ಎನ್ನಬಹುದು. ಅಂತವರ ಸ್ನೇಹವನ್ನು ಮುಂದುವರಿಸಲೂ ಆಗುವುದಿಲ್ಲ. ಕೃತಜ್ಞತೆಯನ್ನು ತಿಳಿಸಲು ಮಾತ್ರ ಸಾಧ್ಯ.
••••
ಆದರೆ ನಂಬಿಕೆಗೆ ದ್ರೋಹ ಮಾಡುವವರು, ಮೋಸ ಮಾಡುವವರು, ಅಲ್ಲಿಂದ ಇಲ್ಲಿಗೆ ಚಾಡಿ ಹೇಳಿ ಜಗಳ ತಂದಿಡುವವರು, ಮತ್ಸರ ಪಡುವವರು ಮೊಸಳೆ ಕಣ್ಣೀರು ಹಾಕಿ ಸಾಲ ಕೇಳಿಪಡೆದು ಹಣ ವಾಪಾಸು ಮಾಡದೇ ಇರುವವರು, ವ್ಯಾಪಾರ-ವ್ಯವಹಾರದಲ್ಲಿ ಮೋಸ ಮಾಡುವವರು, ಎದುರಿಗೊಂದು-ಹಿಂದೊಂದು ಮಾತನಾಡುವವರು, ಇಷ್ಟವಾಗದಿದ್ದರೂ ನಮ್ಮ ಜೀವನದಲ್ಲಿ ಮೂಗು ತೂರಿಸುವವರು, ಸಂಸಾರದಲ್ಲಿ ಬಿರುಕು ಮೂಡುವ ಹಾಗೆ ಮಾಡುವವರು, ಅವಮಾನ-ಅಗೌರವ ತೋರಿಸುವವರು,ತಾತ್ಸಾರ-ಸಸಾರ ಮಾಡುವವರು....ಅಂತವರು ಯಾರಾಗಿದ್ದರೂ ಸರಿಯೇ, ಮೊದಲು ನಮಗೆ ಎಷ್ಟು ಬೇಕಿದ್ದರು ಸಹಾಯ ಮಾಡಿದವರಾಗಿರಬಹುದು ಅಂತವರಿಂದ ದೂರ ಇರಿ. ಮಾತನಾಡಲು ,ನಿಮ್ಮ ಜೊತೆ ವ್ಯವಹಾರ ಮಾಡಲು ಇಷ್ಟವಿಲ್ಲ ಎಂದು ಮುಲಾಜಿಲ್ಲದೇ ಹೇಳಿ ಬಿಡಿ. ಮಾತು ನಿಲ್ಲಿಸಿಬಿಡಿ. ಆದರೆ ದ್ವೇಷ ಕಟ್ಟಿಕೊಳ್ಳಬೇಡಿ. ದ್ವೇಷದಿಂದ ನಮ್ಮ ಜೀವನ ಇಕ್ಕಳದಲ್ಲಿ ಸಿಕ್ಕಿಹಾಕಿಕೊಂಡಂತಾಗುತ್ತದೆ. ಅವರ ಸೇಡಿನ ಜ್ವಾಲೆಗೆ ಸಾವು-ನೋವು ಸಂಭವಿಸುತ್ತದೆ. ಸ್ನೇಹ ಬೆಳೆಸುವ ಮೊದಲೇ ಜಾಗರೂಕರಾಗಿರಿ. ನಮ್ಮ ತೀರ ವೈಯಕ್ತಿಕ ವಿಷಯಗಳನ್ನು , ಹಣಕಾಸಿನ ಬಗ್ಗೆ , ಸಂಸಾರದ ಒಳಗುಟ್ಟುಗಳನ್ನು ಎಷ್ಟೇ ಆಪ್ತರಾಗಲಿ ಹಂಚಿಕೊಳ್ಳಲು ಹೋಗಬಾರದು.
ಕೊನೆಯದಾಗಿ,ಮುಪ್ಪಿನ ಕಾಲದಲ್ಲಿ ಕೂಡ ಜನರು ಸ್ನೇಹವನ್ನು ಬಯಸುತ್ತಿರುತ್ತಾರೆ. ತಮ್ಮ ಅನುಭವಗಳನ್ನು ಹಂಚಿಕೊಳ್ಳಲೋ, ಮನದ ನೋವನ್ನು ಹೊರಹಾಕಲೋ, ಏಕಾಂಗಿತನವನ್ನು ಕಳೆಯಲೋ, ಒಂದಷ್ಟು ಸಮಯ ಕಳೆಯಲೆಂದು ಹಿರಿಯ ಮನಸ್ಸುಗಳು ಪಾರ್ಕ್‌ನಲ್ಲಿ, ದೇವಸ್ಥಾನದ ಕಟ್ಟೆಯಲ್ಲಿ ಮಾತನಾಡುತ್ತಾ ಕುಳಿತಿರುವುದನ್ನು ನಾವು ನೋಡಬಹುದು. ಒಂದಷ್ಟು ಅಮೂಲ್ಯ ಜವಾಬ್ದಾರಿಗಳನ್ನು ಮುಗಿಸಿರುವ ಅವರೆಲ್ಲರಿಗೂ ಸಂಧ್ಯಾಕಾಲದಲ್ಲಿ ಒಂದಷ್ಟು ನೆಮ್ಮದಿ, ಖುಷಿ, ಮನಸ್ಸಿಗೆ ಹಿತವೆನಿಸಿದರೆ ಸಾಕೆಂದೆನಿಸುತ್ತದೆ. ಹೀಗೆ ಒಂದಲ್ಲ ಒಂದು ಹಂತದಲ್ಲಿ ಮನುಷ್ಯ ಸ್ನೇಹಜೀವಿಯಾಗಿರುತ್ತಾನೆ.
.
.

ಸ್ನೇಹ ಹಚ್ಚಹಸಿರಾಗಿರಬೇಕು‌. ಉಸಿರು ಕಟ್ಟುವಂತಾಗಬಾರದು.
"ವಿಶ್ವಸ್ನೇಹಿತರ ದಿನಾಚರಣೆಯ ಶುಭಾಶಯಗಳು."

- ಸಿಂಧು ಭಾರ್ಗವ್.

ಸಂತೆಯಲ್ಲಿ ಗುನುಗಿದ ಹಾಡು: ಶ್ರಾವಣ ಬಂದಿದೆ ಈಗ

*_ಸಂತೆಯಲ್ಲಿ ಗುನುಗಿದ ಹಾಡು: ಶ್ರಾವಣ ಬಂದಿದೆ ಈಗ_*

ಎಲ್ಲಿ ನೋಡಿದರಲ್ಲಿ
ಹುಲ್ಲು ಹಾಸಿಗೆ ನೆಲದಲ್ಲಿ
ಶ್ರಾವಣ ಬಂದಿದೆ ಈಗ..

ಹಸಿರು ಹೊದ್ದ ವನದೇವಿ
ಕಣ್ಣಮುಂದೆ ನಿಂತಳಿಲ್ಲಿ
ಶ್ರಾವಣ ಬಂದಿದೆ ಈಗ..

ಆಗಸಕೆ ಚಪ್ಪರ ಹಾಕಿ
ಭುವಿಗೆ ಹಸಿರ ಹೊದೆಸಲು
ಶ್ರಾವಣ ಬಂದಿದೆ ಈಗ

ಸರದಿ ನಿಂತ ಹಬ್ಬಗಳಿಗೆ
ಹರುಷ ಪಡುವ ಹೆಂಗಳೆಯರು
ಶ್ರಾವಣ ಬಂದಿದೆ ಈಗ..

ತನುಮನದ ಶುದ್ಧಿಗಾಗಿ
ವೃತಗಳ ಆಚರಿಸಲು
ಶ್ರಾವಣ ಬಂದಿದೆ ಈಗ..

ಬಿಡದೇ ಸುರಿವ ಮಳೆರಾಯ
ಮನಕೆ ತಂಪು ನೀಡಲು
ಶ್ರಾವಣ ಬಂದಿದೆ ಈಗ..

_- ಸಿಂಧು ಭಾರ್ಗವ್._

ಸಂತೆಯಲಿ ಗುನುಗಿದ ಹಾಡು ಕನಸಿನ ಪ್ರಸೂತಿ

ಸಂತೆಯಲಿ ಗುನುಗಿದ ಹಾಡು : *_ಕನಸಿನ ಪ್ರಸೂತಿ:_*
*°°° °°° °°° °°° °°° °°°*
ಹೊಕ್ಕುಳ ಬಳ್ಳಿಯಲಿ
ಕನಸಿನ ಮಗುವು
ಮಿಸುಕಾಡಿತಿದೆ..

ಉಸಿರಿನ ಬಸಿರೀಗ
ಕನಸೊಂದನು
ಹಡೆಯ ಹೊರಟಿದೆ..

ಓ ಇನಿಯಾ,

ಮಗುವಿನ
ಎದೆಬಡಿತದ
ಪಲ್ಲವಿಯನ್ನು
ಕೇಳು ಬಾ...

ಹೆಜ್ಜೆಗಳು
ಕಳಗುಳಿ
ಇಡುವುದಾ
ಸವಿಯ ಬಾ..

ನಾ
ನೋಡಬೇಕೀಗ
ನಿನ್ನದೇ ಆದ
ಪ್ರತಿರೂಪವಾ..

ಅದಕ್ಕಾಗಿಯೇ
ಕಾಯುತಲಿರುವೆ
ದಿನಗಳ
ದೂಡುತಾ..

📝 - *#ಸಿಂಧು* 🍁

ಸಂತೆಯಲಿ ಗುನುಗಿದ ಹಾಡು: ನಮ್ಮ ಪ್ರೀತಿ ಗೂಡು

*ಸಂತೆಯಲಿ ಗುನುಗಿದ ಹಾಡು: ನಮ್ಮ ಪ್ರೀತಿ ಗೂಡು*

ನಿನ್ನ ನೋಡಿದ ಮೊದಲ ದಿನವೇ,
ಮೋಡಿ ಮಾಡಿದೆಯಲ್ಲ.
ಮಾತನಾಡಿದ ಮೊದಲ ಪದವೇ
ಮನದಲಿ ಉಳಿದಿದೆಯಲ್ಲ..

ಹೆಮ್ಮರವಾಗಿದೆ ನಮ್ಮ ಪ್ರೀತಿ
ಬೇಧಭಾವ ಮಾಡುವ ಹಾಗಿಲ್ಲ...
ನೆರಳೊಂದು ನಗುತ ನಿಂತಿದೆ
ದೂರು ಹಾಕುವ ಹಾಗಿಲ್ಲ...

ಅಚ್ಚುಮೆಚ್ಚು ನೀನೀಗ,
ಯಾರಿಗೂ ಹೇಳುವ ಹಾಗಿಲ್ಲ..
ಮುಚ್ಚುಮರೆಯಲಿ ಮೂಡಿದ ಪ್ರೀತಿ,
ಹಂಚಿಕೊಳ್ಳುವ ಹಾಗಿಲ್ಲ..

ನಮ್ಮ ಲೋಕದಲ್ಲಿ ನಾವೇ ಸುಖಿಗಳು,
ಸಂಶಯವಂತೂ ಇಲ್ಲವೇ ಇಲ್ಲ..
ಯಾರನು ಬರಲು ನಾನು ಬಿಡೆನು,
ಅಪನಂಬಿಕೆಯಂತೂ ನಿನಗೆ ಸಲ್ಲ..

ನಾಳಿನ ದಿನಗಳ ಕನಸಿನಲಿ,
ಇಂದಿನ ನೋವುಗಳ ಮರೆಯುವ ಮೆಲ್ಲ..
ಹರುಷದ ಕ್ಷಣಗಳ ನೆನಪಿಸುತ,
ಬಾನಾಡಿಗಳಾಗುವ ಬಾ ನಲ್ಲ..

📝 -ಸಿಂಧು ಭಾರ್ಗವ್ 🍁

ಅರಿವಿನ ದೀಪ

🙏🌸 ಅರಿವಿನ ದೀಪ -೦೧ 🌸🙏

🌸 ಹುಲುಮಾನವ 🌸
ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು
ಎಲ್ಲೋ ಕೊಳೆತು,  ಎಲ್ಲೋ ಕರಗಿ
ಹೋಗೋ ಜೀವ ನಮ್ಮದೆಂಬ
ವಿಷಯ ಅರಿಯದ ಮಾನವ,
ಹೆಣ್ಣು- ಹೊನ್ನು-ಮಣ್ಣಿಗಾಗಿ
ಹಾರಾಡುವುದ ನೋಡುವುದೇ ಒಂದು
ಹಾಸ್ಯಾಸ್ಪದ....  😏

🙏🌷 *_||•ಹರಿಃಓಂ•||_* 🌷🙏

@()@)(@)(@)(@)@
*||• ಅರಿವಿನ ದೀಪ-೨ •||*
☺🙏🍓🌷🌷🍓🌷☺
*||.ತಾಳ್ಮೆ ಅತೀ ಮುಖ್ಯ.||*
ಯಾರೂ ಜೊತೆಗಿಲ್ಲ ಎಂದೋ ಯಾರ ಸಹಾಯವೂ ನಮಗಿಲ್ಲ ಎಂದೋ ಕೆಲವೊಮ್ಮೆ ಕೊರಗಿದ್ದಿದೆ. ಆದರೆ ಎಲ್ಲರೂ ಎದುರಿಗೇ ಇದ್ದು ನಮ್ಮ ಕಷ್ಟಕ್ಕೆ ದನಿ ಕೂಡ ಆಗದಿದ್ದಾಗ ಉಂಟಾಗುವ ಸಂಕಟ ಅನುಭವಿಸಿದವರಿಗೇ ಗೊತ್ತು....

*"ಎಲ್ಲರಿದ್ದೂ ಯಾರೂ ಇಲ್ಲ ಎಂಬಂತೆ.. ಯಾರನ್ನೂ ಅವಲಂಬಿತರಾಗಬೇಡಿ.. ಆದರೆ ತಾಳ್ಮೆ, ಸಹನೆ, ಸಮಸ್ಯೆಗೆ ನಾವಾಗೇ ಪರಿಹಾರ ಕಂಡುಕೊಳ್ಳುವ ಜಾಣ್ಮೆ ಬೆಳೆಸಿಕೊಳ್ಳಿ"*


🙏🌷 *_||•ಹರಿಃಓಂ•||_* 🌷🙏

@()@()@()@()@
😊🍁 *_ಅರಿವಿನ ದೀಪ-೦೩_* 🍁😊
*ಮಾತು ಕಡಿಮೆಯಾಡಿದರೂ ಸಮಸ್ಯೆ ಏನಿಲ್ಲ, ಆಡಿದಮಾತು ಸರಿಯಾಗಿರಬೇಕು. ಕಾರಣ 'ಅವರು ನಮ್ಮ ಜೊತೆ ಮಾತನಾಡುವುದೇ ಇಲ್ಲಪ್ಪಾ..' ಎಂದು ಒಂದು ದೂರು ಬರಬಹುದು.. ಆದರೆ ನಮ್ಮ ಮನಸ್ಸಿಗೆ ತೋಚಿದ್ದನ್ನೆಲ್ಲಾ ಮಾತನಾಡಿ(ಸಲಿಗೆಯಿಂದಲೋ, ಕೋಪದಿಂದಲೋ) ಆ ಮಾತುಗಳು ಸಹ್ಯವೆನಿಸದೇ ಹೋಗಿ ನಂತರ  ಅವರ ಕೊನೆಉಸಿರಿರುವ ವರೆಗೂ ನೆನಪುಳಿಯುವಂತಾದರೆ ಮನಸ್ಸು ಅಸಮಧಾನದ ಕೂಪವಾಗಿ ಬಿಡುತ್ತದೆ..*

🙏🌷 *_||•ಹರಿಃಓಂ•||_* 🌷🙏

@()@()@()@()@
😊🍁 *_ಅರಿವಿನ ದೀಪ-೦೪_* 🍁😊
🐝🐝 ಮಗುವಿನ ಮನಸ್ಸು, ನಗುವಿನ ಮುಖ ಹೊಂದುವುದು ಎರಡೂ ಕಷ್ಟ🐝🐝
🌼🌸 ದೊಡ್ಡವರಾದ ಹಾಗೆ ಎರಡನ್ನೂ ಪೊರೆ ಕಳಚಿದ ಹಾವಿನಂತೆ ತೆಗೆದು ಹಾಕುವವರೇ ಜಾಸ್ತಿ .🌼🌸
🐣🐥 ಹಾಗೆ ಮಾಡದೇ, ಅದರ ಜೊತೆಗೆ ಜೀವನವನ್ನು  ನಡೆಸಿ. ಸದಾ ಮಗುವಿನಂತೆ ಬಂದ ನೋವನ್ನು ಕ್ಷಣದಲ್ಲಿ ಮರೆಯುತಾ ಮತ್ತೆ ನಿಮ್ಮ ಕರ್ತವ್ಯದಲ್ಲಿ ತೊಡಗಿಕೊಳ್ಳಿ..🐥🐣

🙏 || ಹರೇ_ಕೃಷ್ಣಾ || 🙏

ಸಂತೆಯಲಿ ಗುನುಗಿದ ಹಾಡು: ಪ್ರಿಯ ಮಾಧವ

*_ಸಂತೆಯಲಿ ಗುನುಗಿದ ಹಾಡು: ಪ್ರಿಯ ಮಾಧವ_*

ಮುತ್ತಿನು ಸುರಿಸುವ
ಮುರುಳಿಯ ಗಾನವು
ಮನವನು ತಣಿಸಿದೆ ಇಂದು...

ದೂರದ ಊರಿಗೆ
ತೇಲಿಸಿ ಮನದ
ಭಾರವ ಇಳಿಸಿದೆ ಇಂದು...

ಮನದಲಿ ಶ್ಯಾಮನ
ನೆನಪುಗಳೇ
ತುಂಬಿವೆ ಸಾವಿರಾರು..

ಶ್ಯಾಮನ ಗಾನಕೆ
ಮನವೀಗ
ಭ್ರಮರವಾಗಿದೆ ನೋಡು..

ಇನಿಯನ ಜೊತೆಯಲಿ
ಇರುವೆನು ಎನ್ನುವ
ಹರುಷವು  ನನ್ನೀ ಮನಕೆ..

ಪರಿಶುದ್ಧ ಪ್ರೇಮದ
ಅಮಲಿನಲಿ ಇರುವೆವು
ನಾವೀಗ ಜೊತೆಜೊತೆಗೆ...

📝 -ಸಿಂಧು ಭಾರ್ಗವ್. 🍁

ಕವನ: ಪುಟಾಣಿ ಲಕುಮಿ

ಕವನ: ಪುಟಾಣಿ ಲಕುಮಿ

ಹೆಜ್ಜೆಯ ಮೇಲೆ ಹೆಜ್ಜೆಯನಿಟ್ಟು
ಗೆಜ್ಜೆಯ ದನಿಯ ಮನದಲಿ ಬಿಟ್ಟು
ಎತ್ತ ಹೋದಳು ಲಕುಮಿ..

ಕಿಲಕಿಲ ನಗುತ ನೋವನು‌‌ ಮರೆಸಲು
ಮತ್ತೆ ಬಂದಳು ಲಕುಮಿ..

ಹಾಲುಗೆನ್ನೆಯ
ನೋಡುತ ಕುಳಿತರೆ
ನಾಳಿನ ಚಿಂತೆಯು ಬರದು..

ಹವಳದ ತುಟಿಯ
ನಗುವ ನೋಡಿದರೆ
ಬಾಳಲಿ ಚಿಂತೆಯು ಇರದು..

ಮುದ್ದು ಮಗುವಿನ
ಆಟವ ನೋಡುತ
ಸಮಯವು ಸರಿಯುತಲಿಹುದು..

ಮನೆಯ ದೀಪವು
ನಗುತಿರಲೆಂದು
ಮನವು ಹರಸುತಲಿಹುವು..
ಸದಾ ಮನವು ಹರಸುತಲಿಹುದು..

📝 - ಸಿಂಧು ಭಾರ್ಗವ್ 🍁

ಸಂತೆಯಲಿ ಗುನುಗಿದ ಹಾಡು : ಮಳೆಯು ಸುರಿಯುತಿದೆ

ಸಂತೆಯಲಿ ಗುನುಗಿದ ಹಾಡು : ಮಳೆಯು ಸುರಿಯುತಿದೆ..

ಸುತ್ತ‌ಮುತ್ತಲು
ಕಪ್ಪು ಕತ್ತಲು
ಮಳೆಯು ಸುರಿಯುತಿದೆ..

ಹಗಲು ಇರುಳಿನ
ಅರಿವೇ ಆಗದು
ಮಳೆಯು ಸುರಿಯುತಿದೆ...

ಕಪ್ಪೆಗಳ ಮನವೀಗ
ತಂಪಗಾಗಿದೆ
ಮಳೆಯು ಸುರಿಯುತಿದೆ...

ಸೊಳ್ಳೆಗಳ ಬಳಗದ
ಹಾಡು ಕೇಳಿದೆ
ಮಳೆಯು ಸುರಿಯುತಿದೆ...

ಮಿಂಚು ಹುಳುಗಳು
ಮಿಂಚುತಲಿವೆ
ಮಳೆಯು ಸುರಿಯುತಿದೆ..

ನವಿಲುಗಳು ಗರಿಯ
ಮುದುಡಿ ಕುಳಿತಿವೆ
ಮಳೆಯು ಸುರಿಯುತಿದೆ...

ಹೂವುಗಳು ನೆನೆದು
ತೊಪ್ಪೆಯಾಗಿವೆ
ಮಳೆಯು ಸುರಿಯುತಿದೆ...

ಕೆರೆ-ಕಟ್ಟೆಗಳು
ತುಂಬಿ ಹರಿದಿದೆ
ಮಳೆಯು ಸುರಿಯುತಿದೆ...

ಗಾಳಿಯ ರಭಸಕೆ
ಮರಗಳುರುಳಿವೆ
ಮಳೆಯು ಸುರಿಯುತಿದೆ...

ಕಡಲ ಕೊರೆತವು
ಅಧಿಕವಾಗಿದೆ
ಮಳೆಯು ಸುರಿಯುತಿದೆ...

ಮೀನುಗಾರರ
ಕೆಲಸ ನಿಂತಿದೆ
ಮಳೆಯು ಸುರಿಯುತಿದೆ...

ಕರಿದ ಖಾದ್ಯಕೆ
ಬೇಡಿಕೆ ಬಂದಿದೆ
ಮಳೆಯು ಸುರಿಯುತಿದೆ...

ಕಡುಬು ಪತ್ರೊಡೆ
ಘಮವ ಸೂಸಿದೆ
ಮಳೆಯು ಸುರಿಯುತಿದೆ...

ಗೊರಬು- ಕೊಡೆಯು
ತಲೆಯ ಏರಿದೆ
ಮಳೆಯು ಸುರಿಯುತಿದೆ...

ನೇಗಿಲ ಯೋಗಿಗೆ
ಕೆಲಸ ಹೆಚ್ಚಿದೆ
ಮಳೆಯು ಸುರಿಯುತಿದೆ...

- 📝 ಸಿಂಧು ಭಾರ್ಗವ್ 🍁

(( ಕರಾವಳಿಯ ಮಳೆಯ ಸೊಬಗನು ನೋಡಲೆರಡು ಕಣ್ಣು ಸಾಲದು..ಮನದಲೇನೋ ಹರುಷ ಭಯವು ಜೊತೆಜೊತೆಗೆ ಮೂಡುವುದು.. ))