Tuesday 24 January 2017

ನ್ಯಾನೋ ಕಥೆಗಳು


ಸಣ್ಣ ಪುಟ್ಟ ಕಥೆ : (ನ್ಯಾನೋ ಕಥೆಗಳು)
*
#ದಗೆ_ಬಿಡುತ್ತಾ ಓಡೋಡಿ ಬಂದು ತಿಳಿನೀರಿನಲ್ಲಿ ನೀರುಕುಡಿಯಲು ಬಾಯಿಕೊಟ್ಟ ಮರಿಮೇಕೆಗೆ ,ನೀರಿನಲ್ಲಿ ತನ್ನ ನೆರಳು ನೋಡಿಯೇ ಭಯವಾಯಿತು. ಕಾರಣ ತಾಯಿಮೇಕೆಯನ್ನು ಈಗಷ್ಟೆ ಕಟುಕ ಸಾವಿನ ದಾರಿ ತೋರಿಸಿದ್ದ..

**
#ಪಿಕವೊಂದು ಹಾಡುವುದ ಕಂಡು ಕಾಕಮರಿಗೆ ಮತ್ಸರ.
ತಾನೂ ಕಡಿಮೆಯೇನಿಲ್ಲವೆಂದು ಹಾಡಲು ಶುರುಮಾಡಿ ಜನರಿಂದ  ಬೈಸಿಕೊಂಡಿತು..

***
#ಅವನನ್ನು ಬಹಳ ಚಿಕ್ಕವಯಸ್ಸಿನಿಂದಲೇ
ಧರ್ಮ-ಕರ್ಮವೆಂದು ಕಲೆಸಿ ಕಟ್ಟಿದ ಗೋಡೆಗೆ ಮೊಳೆಹೊಡೆದು ತೂಗುಹಾಕಿದ್ದಾರೆ..

****
#ತನ್ನ_ಮನೆಯ ಮಲ್ಲಿಗೆ ತೋಟಕೆ ಬಾಯಿಹಾಕಿದ ಹಸುವಿನ ಕರುವಿಗೆ ಬಾಸುಂಡೆ ಬರುವ ಹಾಗೆ ಹೊಡೆದ ಗೃಹಿಣಿ, ಅದೇ ಹಸುವಿನ ಹಾಲನ್ನು ತನ್ನ ಬಾಣಂತಿ ಮಗಳಿಗಾಗಿ ಬೇಡಿ ತರುತ್ತಿದ್ದಾಳೆ..

*****
#ಸಂಪನ ಸಂಪತ್ತು ಹೇರಳವಾಗಿದ್ದರೂ/ಇಲ್ಲದಿದ್ದರೂ,
ದೋಸೆಗೆ ಚಟ್ನಿಯಂತೆ ಇಲ್ಲಾ ಭರಣಿಯ‌ ಉಪ್ಪಿನಕಾಯಿಯಂತೆ ನೆಂಚಿ ತಿನ್ನುವ ಮಲ್ಲಿಗೆ ಸುಖವಾಗಿದ್ದಾಳೆ...

#ಸಂಪನ_ಮನದರಸಿ_ಮಲ್ಲಿ...

#ಸಿಂಧುಭಾರ್ಗವ್. 🍁

Thursday 5 January 2017

ಕವಿತೆ : ಅಪ್ಪ ಸೂಕ್ಷ್ಮತೆಯ ಜೀವಾಳ

ಕವನ :ಅಪ್ಪ :.

ಅಪ್ಪನ ಅಡುಗೆ ರುಚಿ
ತಿನ್ನಲು ಪುಣ್ಯಬೇಕು,
ಅವರ ಸವೆದ ಚಪ್ಪಲಿ ಹಾಕಿ
ನಾಲ್ಕ್ ಹೆಜ್ಜೆ ನಡೆಯಬೇಕು..

ಅಮ್ಮನೋ ನೋವು ,ಅಳುವನು
ಒಂದೇ ತಕ್ಕಡಿಯಲಿ ತೂಗುವಳು.
ಅದಕ್ಕೆಂದೇ ಸೆರಗನು
ಕೈಯಲ್ಲೇ ಹಿಡಿದಿಹಳು..

ಅಪ್ಪನ ಮನದ ನೋವ
ನೋಡಿದಿರಾ ನೀವು.?!
ದುಃಖ ಉಮ್ಮಳಿಸಿ ಬಂದರೂ
ಕಣ್ಣಂಚಿನಲೇ ತುಂಬಿಕೊಂಡಿರುವರು..

ಚಳಿಗೆ ನಡುಗುವಾಗ ಬಂದು
ಹೊದಿಕೆ ಹೊದಿಸುವರು..
ಸುಖನಿದಿರೆ ಮಾಡೆಂದು
ತಲೆ ಸವರಿ ಹೋಗುವರು..

ಪರೀಕ್ಷೆಯಲಿ ಫೇಲಾದರೆ
ಹುಸಿಕೋಪಗೊಳ್ಳುವರು..
ಅಳಬೇಡ ಇನ್ನೊಮ್ಮೆ
ನೋಡು ಎನ್ನುವರು..

ಭುಜದ ಮೇಲೆ ಹೊತ್ತು
ಜಾತ್ರೆ ತೋರಿಸುವರು..
ಬೇಕು-ಬೇಡಗಳ ಪೂರೈಸುತಲೇ
ಹೀರೋ ಆಗುವರು.

ಅಮ್ಮನ ಹೊಗಳುವವರೇ ಎಲ್ಲಾ..
ಅಪ್ಪನ ಸವೆತ ಗಮನಿಸಿದವರಿಲ್ಲ..

ಅಪ್ಪನ ಮಗುಮನಸ್ಸ ಅರಿತವರೇ ವಿರಳ..
ಅಪ್ಪ ಸೂಕ್ಷ್ಮತೆಯ ಜೀವಾಳ..

- #ಸಿಂಧುಭಾರ್ಗವ್ 🍁

ಲೇಖನ : ನಮ್ಮೂರು ನಮಗೇ ಚಂದ


Google source pic

GoogleSourcepic



ಕಥೆ: ನಮ್ಮೂರು ನಮಗೇ ಚಂದ

ಚಿಕ್ಕವರಿದ್ದಾಗ ಅಮ್ಮನ ಕೈಲಿ ಬೈಸಿಕೊಂಡದ್ದು , ಅಪ್ಪನ ಜೇಬಿನಿಂದ ಹಣ ಕದ್ದದ್ದು, ಅಪ್ಪನ ಸೈಕಲ್ಲಿನ ಮುಂದಿನ ಚಿಕ್ಕ ಸೀಟಿನಲ್ಲಿ  ಕುಳಿದು ಮೈಲಿ ಗಟ್ಟಲೆ ದೂರ ಸಾಗಿ ಸಿನೇಮಾ‌ ನೋಡಿ ಬರುತ್ತಿದ್ದದ್ದು. ಅಮ್ಮ  ಕೂಡಿಟ್ಟ ಹಣದಿಂದ ದೀಪಾವಳಿಗೆ ಹೊಸಬಟ್ಟೆ ಕೊಡಿಸಿದ್ದು.. ತೋಡಿನಲ್ಲಿ ಮೀನು, ಏಡಿ ಹಿಡಿಯುತ್ತಿದ್ದುದು, ಕೆರೆಯಲ್ಲಿ ತಾವರೆ ಕೀಳಲು ಹೋಗಿ‌  ಕೆಸರಿನಲ್ಲಿ‌ ಕಾಲು ಹೂತು ಹೋದದ್ದು. ಅಜ್ಜಿ ತೀರಿಹೋದ ರಾತ್ರಿ ಅವರನ್ನು ಸುಡುವುದ ಮರೆಮಾಚಿ ನೋಡಿದ್ದು. ನಮ್ಮ ಮನೆಯ ಹಟ್ಟಿಯಲ್ಲಿ ದಾಸಿ ಕರು ಹಾಕಿದ್ದು, ಗಿಣ್ಣು ಹಾಲು ಕುಡಿದದ್ದು. ತೋಟದ ಕೆಲಸಕ್ಕೆ ಬರುವ ರಾಧಾ, ರೇವತಿ ಜೊತೆಗೆ ನಾನು‌ ಕುಳಿತು ಚಾತಿಂಡಿ ತಿನ್ನುತ್ತಾ ಹರಟೆ ಹೊಡೆಯುತ್ತಿದುದು, ಗದ್ದೆ, ನಟ್ಟಿ  ನಡುವುದು, ಕೊಯ್ಲು, ದೀಪಾವಳಿ, ಸಂಕ್ರಾಂತಿ, ಯುಗಾದಿ ,ಹೊಸ್ತು ಹಬ್ಬ ಹೀಗೆ ಹಳ್ಳಿಗರಾದ ನಮಗೆ ಹಬ್ಬಗಳದ್ದೇ ಸಂಭ್ರಮ. ಇವೆಲ್ಲ ಸಾವಿರದ ಸವಿನೆನಪುಗಳು
**
ಹಚ್ಚಹಸುರಿನಿಂದ ಕೂಡಿರುವ ಕರಾವಳಿಯಲ್ಲಿ (ಉಡುಪಿ ಜಿಲ್ಲೆಯ ಬಾರಕೂರು) ನೀರಿಗೇನು ಬರವಿಲ್ಲ, ಎಲ್ಲಿ ಬಾವಿ ತೋಡಿದರೂ ನೀರು ಸಿಗುತ್ತದೆ. ಹಾಗಾಗಿ ಕೃಷಿ, ಹೈನುಗಾರಿಕೆಯೇ ಜೀವನಾಧಾರವಾಗಿದೆ. ತೆಂಗು, ಅಡಿಕೆ, ಬಾಳೆ, ವೀಳ್ಯದೆಲೆ, ಕಾಳುಮೆಣಸು, ಬೇಸಿಗೆಯಲ್ಲಿ ಉದ್ದು, ಹೆಸರುಕಾಳು, ಅವಡೆ ಬೆಳೆ ಬೆಳೆಯುತ್ತಾರೆ..ಅಲ್ಲದೇ ಅದರ ಜೊತೆಗೆ ಚಿಕ್ಕು, ಮಾವು, ಹಲಸು, ಪುನರ್ಪುಳಿ, ಹೆಬ್ಬಲಸು, ಕೆಸುವಿನ ಎಲೆ , ಅಮ್ಟೆಕಾಯಿ, ಹರಿವೆ ಸೊಪ್ಪು , ಬಸಲೆ ಸೊಪ್ಪು ಎಲ್ಲರ ಮನೆಯಲ್ಲಿ ಹಿತ್ತಲ‌ಮಿತ್ರನಂತೆ ಹುಲುಸಾಗಿ ಬೆಳೆದಿರುತ್ತದೆ. ಪರಊರಿನಿಂದ ಬೇಸಿಗೆ ರಜೆಗೆ ಮಕ್ಕಳು, ಮೊಮ್ಮಕ್ಕಳು ಊರಿಗೆ ಬಂದರೆ ಹೊಟ್ಟೆ ತುಂಬಾ ತಿನ್ನಲು ಹಣ್ಣುಗಳು ಯತೇಶ್ಚವಾಗಿ ಸಿಗುತ್ತದೆ. ಕುಂದಗನ್ನಡ ಮಾತನಾಡುವುದೆಂದರೆ ಪಂಚಪ್ರಾಣ. ನಮ್ಮ ಮಾತೃಭಾಷೆಯೇ ಅದಾದ ಕಾರಣ ಎಲ್ಲರೂ ನಗೆಯ ಚಟಾಕಿ, ತಮಾಷೆ ಮಾಡುತ್ತಾ ನಗುಮುಖದಿಂದಲೇ ಹೊಸಬರನ್ನು ಸ್ವಾಗತಿಸುತ್ತೇವೆ. ಎಲ್ಲಿ ಹೋದರೂ ನಮ್ಮ ಭಾಷೆಯಿಂದಲೇ ಜನ ಗುರುತಿಸುತ್ತಾರೆ ಎಂಬುದೇ ವಿಷೇಶ. ಕಡಲ ಮಕ್ಕಳಾದ ಕಾರಣ ಹೆಂಗಳೆಯರು ನೋಡಲು ಸುಂದರವಾಗಿರುತ್ತಾರೆ. ಅವರ ಅಂದಕ್ಕೆ  ಮನಸೋಲುವವರೇ ಜಾಸ್ತಿ. ಅಲ್ಲದೇ ಬಲು ಘಾಟಿ ಕೂಡ. ಹೆಣ್ಮಕ್ಕಳು ಯಾರಿಗೂ ಸ್ವಲ್ಪವೂ ಸಡಿಲ ಬಿಡದೇ ಎಲ್ಲಿ ಬೇಕಾದರೂ ಹೋಗಿ (ಕಛೇರಿಗಳಲ್ಲಿ) ತಮ್ಮ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ಬರುವಷ್ಟು ಧೈರ್ಯವಂತರು. ದುಡಿಮೆಯೇ ಜೀವಾಳ. ಯಾರೂ ಸುಖಾಸುಮ್ಮನೆ ಹರಟೆ ಹೊಡೆಯುತ್ತಾ ಕಾಲಹರಣ ಮಾಡುವುದಿಲ್ಲ. ಏನಾದರೊಂದು ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ನಮ್ಮೂರು ಬಾರಕೂರು ಒಂದು ಸರ್ವಧರ್ಮಗಳ ಸಮ್ಮಿಲನವಾಗಿದೆ ಎಂದು ಹೆಮ್ಮೆಯಿಂದ ಹೇಳಬಹುದು. ಜಾತಿ,ಮತ ಧರ್ಮದ ಹಂಗು ತೊರೆದು ಎಲ್ಲರೂ ಒಂದೇ ತಾಯಿಯ ಮಕ್ಕಳಂತೆ ಸ್ನೇಹ ಸೌಹಾರ್ದತೆಯಿಂದ ಜೀವನ ನಡೆಸುತ್ತಾ ಇದ್ದಾರೆ. ಹಾಗೆ ಮುಖ್ಯವಾಗಿ ನಾಟ್ಯಕಲೆ, ಯಕ್ಷಗಾನ , ಸಾಹಿತ್ಯ,  ಭಾಷಣ, ವಿಧ್ಯಾಭ್ಯಾಸದಲ್ಲಿಯೂ, ವಿವಿಧ ಕ್ಷೇತ್ರಗಳಲ್ಲಿಯ ಉದ್ಯೋಗದಲ್ಲಿಯೂ ಮುಂಚೂಣಿಯಲ್ಲಿರುತ್ತಾರೆ. ದೇಶವಿದೇಶಗಳಲ್ಲಿ ತಮ್ಮ ಶಕ್ತಿ ಮತ್ತು ಯುಕ್ತಿ ಪ್ರದರ್ಶನದಿಂದ ಊರಿಗೆ ಹೆಸರು, ಕೀರ್ತಿ ತಂದುಕೊಟ್ಟಿದ್ದಾರೆ.

- ಸಿಂಧುಭಾರ್ಗವ್ 🍁

ಹಾಡು : ಸಂಜೆಗೆಂಪು ಮೂಡಿತು




‌ಚಿತ್ರಕ್ಕೊಂದು ಕವಿತೆ ೦೨ : ಸಂಜೆಗೆಂಪು ಮೂಡಿತು.
ಚಿತ್ರಕೃಪೆ: ವರದರಾಜ್ ಬ್ಯಾಲ್ಯ ಸರ್..
~~~~~~~~~~~~~~~~~
ಸಂಜೆಗೆಂಪು‌ ಮೂಡಿತು,
ಕೆರೆಯು ತಂಪುಗಟ್ಟಿತು..
ಹಾರೋ ಹಕ್ಕಿ ಗೂಡು ಸೇರಿ
ನಿದಿರೆಗೆ ಜಾರಿತು..

ಕೆಲಸ ಮುಗಿಸಿ ರೈತರು
ಮನೆಯ ಕಡೆಗೆ ನಡೆದರು..
ಬಿಸಿಯ ಮುದ್ದೆ ತಿಂದು
ತೇಗಿ ಹರುಷಗೊಂಡರು..
••
ಶಶಿಯು ಮೇಲೆ ಬಂದನು,
ಮನಕೆ ಮುದವ ತಂದನು..
ಜೀರುಂಡೆ ಹಾಡು ಕೇಳಿ
ಉಲ್ಲಾಸಗೊಂಡೆನು..

ಕನಸು ಕಾಣೋ ಸಮಯವು
ಹೊದಿಕೆ ಹೊದೆಯೊ ತವಕವು..
ತಂಗಾಳಿ ಮೈಸೋಕಿ
ಇನಿಯನ ನೆನೆಸಿತು ..
••
ಪಿಸುಗುಡುವ ಇನಿಯನು
ಮಾತು‌ ನಿಲ್ಲಿಸಲೆನ್ನಲು..
ಕೆನ್ನೆ ಕೆಂಪಾಗಿ ನಾನು ಅಪ್ಪಿಕೊಂಡೆ
ತನುವನು..

ಮತ್ತೆ ರವಿಯು ಬೆಳಗಲು
ಹಕ್ಕಿ ಗೂಡು ಬಿಟ್ಟಿತು..
ರಂಗವಲ್ಲಿ ಮನೆಯ ಎದುರು
ಕಿಲಕಿಲನೆ‌ ನಕ್ಕಿತು..
•••
- #ಸಿಂಧುಭಾರ್ಗವ್ 🍁

ಲೇಖನ: ವ್ಯಕ್ತಿ ಪರಿಚಯ ಸಿಂಧು ಭಾರ್ಗವ್

ಸಾಹಿತ್ಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವವರು ತುಂಬಾ ವಿರಳ. ಒಂದುಕಾಲದಲ್ಲಿ ಜನರ ಅಭಿಪ್ರಾಯ ಹಾಗಿತ್ತು "ಅದರಿಂದ ಏನು ಲಾಭವಿಲ್ಲ, ನಮ್ಮ ಕೈಯಿಂದಲೇ ಹಣ ವ್ಯಯಿಸಬೇಕಾಗುತ್ತದೆ. ಈಗಿನ ಕಾಲದಲ್ಲಿ ಒಂದು ಕೃತಿ ಬಿಡುಗಡೆ ಗೊಳಿಸಿದರೆ ಅದನ್ನು ಕೊಂಡು ಓದುವ ಓದುಗರು ಕಡಿಮೆ ಸಂಖ್ಯೆಯಲ್ಲಿದ್ದಾರೆ. ೩೦-೪೦ಸಾವಿರ ಖರ್ಚು ಬಂದರೆ ಸಾಹಿತಿಗೆ ಅಷ್ಟೇನು ಲಾಭ ಸಿಗುವುದಿಲ್ಲ. ಆದರೆ ಹೆಸರು ,ಕೀರ್ತಿ,ಸನ್ಮಾನ, ಹೊಗಳಿಕೆಯ ಮಾತು ಕಿವಿತುಂಬುತ್ತದೆ. ಜೇಬು ತುಂಬುವುದು ಅನುಮಾನವೇ..  ಅದನ್ನು ನಂಬಿ ಜೀವನ ನಡೆಸಲು ಅಸಾಧ್ಯ ಎನ್ನುತ್ತಿದ್ದರು. ಆದರೆ ಈಗಿನ ಯುವ ಪೀಳಿಗೆಯವರು ಆ ಮಾತನ್ನು ಸುಳ್ಳುಮಾಡಲು ಹೊರಟಿದ್ದಾರೆ. ಪುಸ್ತಕವನ್ನು ಕೊಂಡು ಓದುವ ಒಂದು ವರ್ಗ ಇನ್ನೂ ಇದೆ. ಹಿರಿಯ ಸಾಹಿತಿಗಳ ಅನುಭವೀ ಸಾಹಿತಿಗಳ ಹೊಸಹೊಸ ಕೃತಿಗಳು ಯಾವಾಗ ಬಿಡುಗಡೆಯಾಗುತ್ತದೆ ಎಂದು ಕಾಯುತ್ತಿರುತ್ತಾರೆ. ಆನ್ಲೈನ್ ಮೂಲಕ ಕೊಂಡು ಓದುತ್ತಾರೆ. ಅಲ್ಲದೇ ಪುಸ್ತಕದ ಮಳಿಗೆಗಳಿಗೆ ಭೇಟಿನೀಡಿ ಕೊಂಡುಕೊಳ್ಳುತ್ತಾರೆ. ಬರವಣಿಗೆ ಎನ್ನುವುದು ಕವಿಯ ಮನಸ್ಸಿನ ವಿವಿಧ ತುಮುಲಗಳನ್ನು , ಭಾವನೆಗಳನ್ನು ಹೊರಹಾಕುವ ಪ್ರಕ್ರೀಯೆ ಎನ್ನಬಹುದು. ಕೆಲವರು ಕಲ್ಪನೆಗೆ ಜೀವನೀಡುತ್ತಾರೆ. ಇನ್ನು ಕೆಲವರು ತಮ್ತಮ್ಮ ಪ್ರೀತಿ ಪಾತ್ರರ ಹೊಗಳಿ ಬರೆಯುತ್ತಾರೆ. ಇನ್ನು ಸಾಮಾಜಮುಖಿಯಾಗಿ, ಕ್ರಾಂತಿಕಾರಿಯಾಗಿ ಸಮಾಜದಲ್ಲಿ ,ಜನರಲ್ಲಿ ಸಂಚಲನ ಮೂಡಿಸುವಂತೆ ಬರೆಯುವವರು ಇದ್ದಾರೆ. ಅದಕ್ಕೇ ತಾನೆ "ಲೇಖನಿ ಎಂಬುದು ಖಡ್ಗದ ಹಾಗೆ ಹರಿತ" ಎನ್ನುವುದು.
~~~
ಬರವಣಿಗೆ ಎನ್ನುವುದು ಕವಿಯ ಮನಸ್ಸಿನ ವಿವಿಧ ತುಮುಲಗಳನ್ನು , ಭಾವನೆಗಳನ್ನು ಹೊರಹಾಕುವ ಪ್ರಕ್ರೀಯೆ ಎನ್ನಬಹುದು. ಕೆಲವರು ಕಲ್ಪನೆಗೆ ಜೀವನೀಡುತ್ತಾರೆ. ಇನ್ನು ಕೆಲವರು ತಮ್ತಮ್ಮ ಪ್ರೀತಿ ಪಾತ್ರರ ಹೊಗಳಿ ಬರೆಯುತ್ತಾರೆ. ಇನ್ನು ಸಾಮಾಜಮುಖಿಯಾಗಿ, ಕ್ರಾಂತಿಕಾರಿಯಾಗಿ ಸಮಾಜದಲ್ಲಿ ಹಾಗೂ ಜನರ ಮನಸ್ಸಿನಲ್ಲಿ ಸಂಚಲನ ಮೂಡಿಸುವಂತೆ ಬರೆಯುವವರು ಇದ್ದಾರೆ. ಅದಕ್ಕೇ ತಾನೆ "ಲೇಖನಿ ಎಂಬುದು ಖಡ್ಗದ ಹಾಗೆ ಹರಿತ" ಎನ್ನುವುದು.
~~~
ಉಡುಪಿ ಜಿಲ್ಲೆ ಕಲೆ,ಸಾಹಿತ್ಯ,ಸಂಸ್ಕೃತಿಗೆ  ಹೆಸರುವಾಸಿಯಾಗಿದೆ. ಕೋಟ ಶಿವರಾಮ ಕಾರಂತರಿಂದ ಹಿಡಿದು ಅದೆಷ್ಟೋ ಹಿರಿಯ ಸಾಹಿತಿಗಳು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ. ಅವರು ಹಾಕಿಕೊಟ್ಟ ಹಾದಿಯಲ್ಲಿ ಈಗಿನ ಪೀಳಿಗೆಯವರು ನಡೆಯುತ್ತಿದ್ದಾರೆ ಎಂಬುದೇ ವಿಷೇಶ. ಸಿಂಧುಭಾರ್ಗವ್ ಉಡುಪಿ ಜಿಲ್ಲೆಯ ಬಾರಕೂರಿನ ಪುಟ್ಟ ಹಳ್ಳಿ ಹೇರಾಡಿಯಲ್ಲಿ ಶ್ರೀಮತಿ ವಸಂತಿ ಭಟ್ ಮತ್ತು ಚಂಡೆ ಶ್ರೀ ನರಸಿಂಹ ಭಟ್'ರ‌ (ಬಾರಕೂರಿನಲ್ಲಿ ಪ್ರಖ್ಯಾತ ಪಾಕ ತಜ್ಞರು) ಎರಡನೇ ಪುತ್ರಿಯಾಗಿ‌ ಜನಿಸಿದ ಇವರು ಪ್ರಾರ್ಥಮಿಕ ಶಿಕ್ಷಣವನ್ನು ಹೇರಾಡಿ ಶಾಲೆಯಲ್ಲಿಯೂ, ಹೈಸ್ಕೂಲ್ ಮತ್ತು ಕಾಲೇಜು ಶಿಕ್ಷಣವನ್ನು NJC ಬಾರಕೂರಿನಲ್ಲಿ ಮುಗಿಸಿದರು. ನಂತರ ಡಿಪ್ಲೋಮಾ ಇನ್ ಕಂಪ್ಯೂಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್‌ ಉಡುಪಿಯ ಇಂದಿರಾ ಶಿವರಾವ್ ಪಾಲಿಟೆಕ್ನಿಕ್ ಕಡಿಯಾಳಿಯಲ್ಲಿ ಮುಗಿಸಿದರು. ಕಾಲೇಜು ಜೀವನ ಮುಗಿಸಿ BHEL ನಲ್ಲಿ HR Dept ನಲ್ಲಿ ಕೆಲಸಕ್ಕೆ ಸೇರಿದ್ದರು. ನವೀನ್ ಭಟ್ ರನ್ನು ವಿವಾಹವಾಗಿ  ಬೆಂಗಳೂರಿಗೆ ಬಂದು ನೆಲಸಿದರು.
~~~
ಸಾಮಾಜಿಕ ಜಾಲತಾಣಗಳಾದ ಮುಖಹೊತ್ತಿಗೆ ,ವಾಟ್ಸ್ ಅಪ್ ಗಳಿಂದ ನಮಗೆ ಲಾಭವೂ ಇದೆ ಹಾಗೆ ಅತೀಯಾದರೆ ತೊಂದರೆಯೂ ಆಗುವುದು. ಸಿಕ್ಕಿದ ಅವಕಾಶವನ್ನು ಪರಿಪೂರ್ಣವಾಗಿ ಉಪಯೋಗಿಸುವ ಕಲೆ ,ಕಲಾವಿದನಿಗೆ ಇರಬೇಕು. ಇದಕ್ಕೆ ನಿದರ್ಶನ ಸಿಂಧುಭಾರ್ಗವ್. ಗೃಹಿಣಿಯಾದ ಇವರು ಬಿಡುವಿನ ಸಮಯದಲ್ಲಿ ಬರೆಯುವುದನ್ನು ಹವ್ಯಾಸವಾಗಿ ಶುರುಮಾಡಿದರು. (೨೦೧೨ರಲ್ಲಿ) ಅದಕ್ಕೆ ಪ್ರೇರಣೆಯಾದದ್ದು ಕನ್ನಡಬ್ಲಾಗ್ ಎನ್ನುವ ತಂಡ. ಅದೊಂದು ಯುವ ಬಹರಗಾರರ ವೇದಿಕೆಯಾಗಿತ್ತು. ಅಲ್ಲಿ ಪ್ರಸಾದ್.ವಿ. ಮೂರ್ತಿ ಎಂಬ ಮಿತ್ರನು ಸರಾಗವಾಗಿ ಕವಿತೆಗಳನ್ನು ಬರೆಯುತ್ತಿದ್ದುದನ್ನು ನೋಡಿ ಬಹಳ ಆಕರ್ಷಿತರಾಗಿ "ಈ ರೀತಿ ಬರೆಯಲು ತನಗೂ ಯಾಕೆ‌ ಸಾಧ್ಯವಿಲ್ಲ ಎಂದು ಸಣ್ಣ ಚುಟುಕುಗಳನ್ನು ಬರೆಯಲು ಲೇಖನಿ ಹಿಡಿದರು. ಈಗ ಕಥೆ,ಲೇಖನಗಳನ್ನು ಬರೆಯುತ್ತಿದ್ದಾರೆ. ಅಲ್ಲದೇ ಸರಳ-ಸುಲಭವಾಗಿ ಕವಿತೆ, ಹಾಡು ಬರೆಯಲು ೨೦೧೬ ರಲ್ಲಿ ಶುರುಮಾಡಿದರು. ಅವರು ಬರೆದ ಕವನ ಓದಿ ತಿದ್ದಿ ತೀಡಿದವರು ಶ್ರೀಯುತ ಕೃಷ್ಣಪ್ರಸಾದ್.(USA) ಇವಳಿಗೆ ಬರೆಯುವ ಕಲೆ ಇದೆ , ಆದರೆ ಹೇಗೆ ಬರೆಯುವುದು ಎಂದು ತಿಳಿದಿಲ್ಲ ಎಂದು ಅರಿತು ಕವಿತೆ ಅಥವಾ ಹಾಡು ಬರೆಯುವುದನ್ನು ಸುಂದರವಾಗಿ ತಿಳಿಸಿಕೊಟ್ಟರು. ಕಳೆದ ಮೂರು ವರುಷದಿಂದ "ಯುಗಪುರುಷ ಕಿನ್ನಿಗೋಳಿ" ಮಾಸಪತ್ರಿಕೆಯು ಇವರ ಲೇಖನಗಳು, ಕಥೆಗಳನ್ನು ಪ್ರಕಟಿಸುತ್ತಾ ಬಂದಿದೆ. ಇನ್ನು ಸಿಂಹನೋಟ ಪತ್ರಿಕೆ, ಸಂಪದಸಾಲು ಮಾಸಪತ್ರಿಕೆಯಲ್ಲಿಯೂ ಹಾಗೆ ಕನ್ನಡಪ್ರಭದಲ್ಲಿ ವಿಶೇಷವಾಗಿ ತಾಯಿ ಬಗ್ಗೆ ಬರೆದ ಲೇಖನ ಪ್ರಕಟಗೊಂಡಿತ್ತು.
ಇನ್ನು ಆನ್ಲೈನ್ ಪತ್ರಿಕೆ, ಬ್ಲಾಗ್ ಗಳಾದ ರೀಡೂಕನ್ನಡ ತಂಡ, ಪಂಜುಪತ್ರಿಕೆಯಲ್ಲಿ, ನೇಸರನ ಜಗಲಿಯಲ್ಲಿ ಬ್ಲಾಗ್ ಗಳಲ್ಲಿ ಲೇಖನಗಳು,‌ಕಾವ್ಯ_ಖಜಾನೆಯಲ್ಲಿ, ಹೊನಲು.ನೆಟ್, ನ್ಯೂಸ್ ಕನ್ನಡ ಆನ್ಲೈನ್ ಪೇಪರ್ ಗಳಲ್ಲಿ ಕವಿತೆಗಳು ಪ್ರಕಟಗೊಂಡಿದ್ದವು. ಅವರು ಬರೆದ "ಜೀವನದ ಸಂತೆಯಲಿ" ಎಂಬ ಕೃತಿಯು ಬಿಡುಗಡೆಯ ಹಂತದಲ್ಲಿದೆ..
ಈಗಷ್ಟೆ ಅಂಬೆಗಾಲಿಡುತಲಿರುವ ಯುವಬರಹಗಾರ್ತಿಗೆ ತುಂಬುಹೃದಯದಿಂದ ಹರಸೋಣ. ಇನ್ನಷ್ಟು ಯಶಸ್ಸು ಅವರದಾಗಲಿ..

ಹಾಡು: ತವರು ಮನೆಯಲಿ ಗೆಳತಿ

.


‌ಹಾಡು : ತವರು ಮನೆಯಲಿ ಗೆಳತಿ

ಊರಿಗೆ ಹೊರಟಳು ನನ್ನ ಗೆಳತಿ ಊರಿಗೆ ಹೊರಟಳು..
ತವರು ಮನೆಕಡೆ ಇಣುಕಿ ಬಾ ಎಂದು ಹೇಳಿದೆನು..

ಕಮಾನು ಕಟ್ಟಿದ ಮಿಠಾಯಿ ಹೂವು ಸ್ವಾಗತ ಕೋರಿತ್ತು ||೨||
ಅಂಗಳದಲ್ಲಿನ ರಂಗವಲ್ಲಿ ನಗುತ ನಿಂತಿತ್ತು..

ಸಗಣಿ ಸಾರಿಸಿ ಒಳ ನಡೆದಿದ್ದ ಅಮ್ಮನ ನೋಡಿದಳು||೨||
ನೆಂಟರು ಬಂದರು ನಿಮ್ಮ‌ ಮನೆಗೆ ಎಂದು ಕೂಗಿದಳು..
ನಿಮ್ಮ ಮಗಳ ಸ್ನೇಹಿತೆ ಎಂದಳು..

ಅಮ್ಮನು ತಿರುಗಿ ನೋಡಿ ಒಮ್ಮೆ  ನಗುವ ಬೀರಿದರು..||೨||
ಬನ್ನಿ ಕುಳಿತುಕೊಳ್ಳಿ ಎಂದು ಕುಡಿಯಲು ನೀಡಿದರು..

ದಣಿದ ದೇಹಕೆ ನೀರನು ಇಳಿಸಿ ಮಾತಿಗೆ ಕೂತರು..||೨||
ನಗುಮೊಗದ ಹೆತ್ತವರ ನೋಡಿ ಖುಷಿಯ ಪಟ್ಟಳು..

ಮಗಳ ಬಗೆಗೆ ಕೇಳಿ ತಿಳಿದುಕೊಳ್ಳುವ ಆತುರವೂ..||೨||
ಹೊಂದಿಕೊಂಡು ಹೋಗುತ್ತಿರುವಳೇ? ಎಂಬ ಕಾತುರವು..

ಅವರ ಜೀವನ ಹಾಲು ಜೇನು ಚೆನ್ನಾಗಿದೆಯಮ್ಮ..||೨||
ದೂರದಲ್ಲಿ ಇರುವ ನಿಮಗೆ ಬೇಡ ಭಯವಮ್ಮ..

ಗೆಳತಿ ಮಾತ ಕೇಳಿ ತಾಯಿ ಮನವು ತಣಿಯಿತು..||೨||
ಹೊಟ್ಟೆ ತುಂಬಾ ಊಟ ಬಡಿಸಿ ವಂದನೆ ಹೇಳಿತು.
ಹೆತ್ತಕರುಳು ವಂದನೆ ಹೇಳಿತು...

- ಸಿಂಧುಭಾರ್ಗವ್. 🍁

Wednesday 4 January 2017

ಕವಿತೆ: ಸ್ನೇಹ ನವಿರಾದ ನವಿಲುಗರಿ



ಕವಿತೆ : ಸ್ನೇಹ ಒಂದು ನವಿರಾದ ನವಿಲುಗರಿ

ನವಿರಾದ ನವಿಲುಗರಿ ಮರಿಹಾಕಿದೆ..
ನೇಹದ ತಂಗಾಳಿ ಸೋಕಿಹೋಗಿದೆ..
ಹಿಂದೆಂದೂ ಕಾಣದ ಸಂತೋಷ ಒಂದುಕಡೆ..
ಮನದ ಮಾತಿಗೆ ಜಾಗ ಇನ್ನೊಂದು ಕಡೆ..

ಬೈಗುಳಕೆ ಕಿವಿಯಿದೆ, ತರಲೆ ಕಚಗುಳಿಯಿಡುತಿದೆ..
ಕನಸುಗಳು ನೂರಾರು ಕೈಸೇರಿದಂತಿದೆ..
ಸಂಬಂಧ ಬೆಸೆಯಲು ನಗುವೇ ನಾಯಕ..
ನಂಬಿಕೆಯೇ ಜೊತೆಗೆ ಸಾಗಲು ನಾವಿಕ..

ಅಪ್ಪ ಅಮ್ಮನ ನೆನಪು ಕೆಲವು ಮುಖಗಳಲಿ..
ಅಣ್ಣ-ತಂಗಿನ ನೆನಪು ಕೆಲವು ಮನಗಳಲಿ..
ಆಗಸಕೆ ಗಾಳಿಪಟವ ಬಿಡುವ ತವಕವು..
ನೀರಿನಲಿ ಕಾಲುಗೆಜ್ಜೆಯ ಸಪ್ಪಳವು..

ನೋವಿಲ್ಲ ಸ್ವಲ್ಪವೂ ಸೋತಾಗ ಮನಕೆ..
ಧೈರ್ಯ ಹೇಳಲು ಗೆಳೆಯರಿಲ್ಲವೇ ಜೊತೆಗೆ..
ರಕ್ತಸಂಬಂಧಗಳ ಮೀರಿ ಬೆಳೆಯುವುದು..
ಸ್ನೇಹ ಸಂಬಂಧವು ಎಂದೂ ಶಾಶ್ವತವು..

- ಸಿಂಧು ಭಾರ್ಗವ್ 🍁




ಕವನ: ನಿನ್ನ ಭೇಟಿಯಾಗಿ ಅರಿತೆನು

ಕವನ: ನಿನ್ನ ಭೇಟಿಯಾಗಿ ಅರಿತೆನು..


ನಿನ್ನ ಭೇಟಿಯಾಗಿ ಅರಿತೆನು
ಪ್ರೀತಿಯೆಂದರೇನು? ಪ್ರೇಮವೇನೆಂಬುದನು..
ನಿನ್ನ ಮಾತಿನಿಂದ ಅರಿತೆನು
ಬಣ್ಣವೇನು? ರೂಪವೇನೆಂಬುದನ್ನು..

ಖಾಲಿಯಾಗಿದ್ದ ಮನಸೀಗ
ಬಂಧಿಯಾಗಿದೆ..
ನಿನ್ನ ಪ್ರೀತಿಯಲಿ ಲೋಕ ಮರೆತು ಹೋಗಿದೆ..

ಬಯಕೆಗಳ ತೋಟದಲಿ
ಸುಮವೀಗ ಅರಳಿದೆ..
ಎಲ್ಲೆಯನೆಲ್ಲಾ ಮೀರಿ
ಬೆಳೆದ ಹಂದರವಾಗಿದೆ..

ಬೆರೆತಿರುವ ಮನಸುಗಳು  ಬಿಗಿಯಾಗಿದೆ,
ನಮ್ಮ ಪ್ರೀತಿಯೀಗ ಪಕ್ವವಾಗಿದೆ..

ಓ ದೇವರೇ ಪ್ರೀತಿಯ ಬೆಳೆಸು, ಪ್ರೇಮಿಗಳ ಉಳಿಸು..

- ಸಿಂಧು. 🍁

ಕವನ : ಆಹಾರ ರೈತರ ಬೆವರ ಹನಿ

ಈ ವರ್ಷದ ಆರಂಭ ಚಿತ್ರಕ್ಕೆ ಕವನ ಬರೆಯುವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವಾಗಿ ಪುಸ್ತಕವನ್ನು ಪಡೆದ ನನ್ನ ಕವನ...
ಧನ್ಯವಾದಗಳು ಯಂಶ ಮತ್ತು ಅನ್ಸಾರ್ ಕಾಟಿಪಳ್ಳ ಅವರಿಗೆ.

ಚಿತ್ರ: ಅರ್ಧ ತಿಂದೆಸೆದ ಆಲೂ ಟ್ವಿಸ್ಟರ್..
~~~~~~~~~~~~~~~~~~~~

@()@

ಹಸಿದವಗೆ ತುತ್ತು
ಅನ್ನಕೂ ಹಾಹಾಕಾರ..
ಹೊಟ್ಟೆ ತುಂಬಿದವಗೆ
ಆಹಾರವೂ ಸಸಾರ..

ಎಸೆದ ತಿನಿಸಿಗೂ
ಇಲ್ಲಿರುವುದು ಬೇಡಿಕೆ..
ಹಸಿದ ಹೊಟ್ಟೆಗಳದು
ಅದೇ ಕೋರಿಕೆ..

ಎಸೆಯುವ ಮೊದಲು
ಸ್ವಲ್ಪ ಯೋಚಿಸಿ,
ನಿಮಗೆಷ್ಟು ಬೇಕೋ
ಅಷ್ಟನ್ನೇ ಉಪಯೋಗಿಸಿ..

ಧೂಳು, ನೊಣಗಳಿಗೂ
ಮರುಕ ಬರುವುದು,
ನಾಚಿಕೆ ಹುಟ್ಟಿಸುವ
ಜನರ ಗುಣವದು..

ಬಡವನ ಹಸಿವು
ಸಾಯುವವರೆಗೂ ನಿಲ್ಲದು.
ಸಿರಿಯನ ಹಸಿವು
ಸಾವಿನಾಚೆಗೂ ನಿಲ್ಲದು..

ರೈತರ ಬೆವರಹನಿ, ಬಡವನ ಕಣ್ಣಹನಿ
ಸುಡುವುದಂತೂ ನಿಜ..
ಪ್ರತಿಹನಿಗೂ ಬೆಲೆಕೊಡಲು
ಕಲಿಯಬೇಕು ಮನುಜ..
~~~~
- ಸಿಂಧುಭಾರ್ಗವ್ 🍁