Monday 11 May 2020

ಲೇಖನ : ಅಮ್ಮ ಎಂದಾಗ

ಅಮ್ಮ ಎಂದಾಗ... ಲೇಖನ


ಲೇಖನ: ಅಮ್ಮ ಎಂದಾಗ...
.
.
ಅಮ್ಮ ಎಂದರೆ ಹರುಷ ನೂರ್ಮಡಿಯಾಗುವುದು. ಗರ್ಭಕೊಳದಲ್ಲಿ ಮತ್ಸ್ಯವಾಗಿ ವಿಹರಿಸುತ್ತಿದ್ದ ನಮಗೆ ಅದೇ ಒಂದು ಪರಪಂಚವಾಗಿತ್ತು. ಹಡೆದು ಭೂಮಿತಾಯಿಯ ಮಡಿಲಿಗಿಟ್ಟು ಇನ್ನೊಂದು ಪ್ರಪಂಚವ ಪರಿಚಯಿಸಿಕೊಟ್ಟ ಮಹಾತಾಯಿ ಆಕೆ. ನವಮಾಸವೂ ನೋವ ನುಂಗಿಕೊಂಡು , ಕನಸ ಕಟ್ಟಿಕೊಂಡು ತನ್ನ ಆಸೆ ಆಕಾಂಕ್ಷೆಗಳ ಮೆಲುದನಿಯಲ್ಲಿ ಭ್ರೂಣಕ್ಕೆ ತಿಳಿಸಿ ಮೊಟ್ಟಮೊದಲ ಸಂವಹನ ನಡೆಸಿದವಳು ಆಕೆ‌. ಬಗೆಬಗೆಯ ತಿಂಡಿ ತಿನಿಸುಗಳ "ಬಯಕೆ" ಎಂಬ ಹೆಸರಿನಲ್ಲಿ ತಿಂದು ತನ್ನ ಗರ್ಭದೊಳಗಿರುವ ಕುಡಿಗೂ ಉಣಿಸಿದವಳು ಆಕೆ. ಈ ಜನುಮವೇ ಆಕೆ ನಮಗೆ ನೀಡಿದ ವರದಾನವಾಗಿದೆ. ನಡೆದಾಡುವ ದೇವರು ಎನ್ನಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ತನ್ನ ಅಭಿರುಚಿಗಳ ಬದಿಗೊತ್ತಿ ಕೇವಲ ಮಗುವಿನೊಂದಿಗೆ ಹೊಸದೊಂದು ಪುಟ್ಟಪ್ರಪಂಚವನ್ನು ಸೃಷ್ಟಿಸಿಕೊಂಡು ಬದುಕು ಕಟ್ಟಿಕೊಳ್ಳುವವಳು ಆಕೆ. ಗಂಡ ಉದ್ಯೋಗದಲ್ಲಿ ತಲ್ಲೀನನಾದರೆ ತಾಯಿ ಮಗುವಿನ ಲಾಲನೆ ಪಾಲನೆಯಲ್ಲಿ ತನ್ಮಯಳಾಗಿರುತ್ತಾಳೆ. ತಾಯಿ ಬಳ್ಳಿಯ ಹೂವುಗಳಾಗಿ ಅರಳಿದ ನಮಗೆ ಈಗ ಸಂತೃಪ್ತಿಯ ಜೀವನ ನಡೆಸುವುದೊಂದೇ ದಾರಿ. ರಭಸದಿ ಹರಿಯುವ ಅದೆಷ್ಟೋ ನದಿಗಳಿದ್ದರೂ ಶಾಂತವಾಗಿರುವ ಸರೋವರಗಳ ಸಂಖ್ಯೆ ತೀರ ಕಡಿಮೆ. ಅದಕ್ಕೆ ತಾನೆ, ತಾಯಿಯನ್ನು ಸರೋವರಕ್ಕೆ ಹೋಲಿಸುವುದು. ಸಹನೆ, ತಾಳ್ಮೆಯ ಮೂರುತಿ ಆಕೆ.

ಗಂಡನ ಪ್ರೀತಿಯ ಜೊತೆಗೆ ಬಾಳಲು ಬಯಸುವ ಆಕೆಗೆ ಮಕ್ಕಳು ಒಂದು ಬದುಕು ಕಟ್ಟಿಕೊಳ್ಳುವ ತನಕ ನೆಮ್ಮದಿಯಿರುವುದಿಲ್ಲ. ಯಾವಾಗಲೂ ಸಕಾರಾತ್ಮಕವಾಗಿ   ಚಿಂತಿಸುವ ಅಮ್ಮ, ಮಕ್ಕಳಿಹೆ ಅದೂ ಹೆಣ್ಮಕ್ಕಳಿಗೆ ಅವರ ಗಂಡನ ಮನೆಯಲ್ಲಿ ಸದಾ ಧೈರ್ಯದಿಂದ ಇರಬೇಕು ಎಂದು ಸ್ಪೂರ್ತಿ ನೀಡುತ್ತಾಳೆ. ಹೆಣ್ಮಕ್ಕಳಿಗೆ ಮದುವೆ ಮಾಡಿಸಿ ಕಳುಹಿಸುವಾಗ ಅಳುವ ಅಮ್ಮ, ತಾನು ಈ ಮನೆಗೆ ಸೊಸೆಯಾಗಿ ಬಂದ ದಿನಗಳನ್ನು ನೆನೆಸಿ ಮೌನವಹಿಸುತ್ತಾಳೆ. ಮದುವೆಯ ಹೊಸತರಲ್ಲಿ ಮಗಳು ಗಂಡ, ಗಂಡನ‌ಮನೆಯವರ ಜೊತೆ ಹೇಗೆ ಹೊಂದಿಕೊಂಡು ಹೋಗುತ್ತಾಳೋ ಎಂಬುವುದೇ ಒಂದು ಚಿಂತೆ ಅವಳಿಗೆ ಕಾಡುತ್ತಿರುತ್ತದೆ. ಗಂಡನ ಮನೆಯಿಂದ ಯಾವ ದೂರು ಬರಬಾರದು ಎಂಬುದೇ ಅವಳ ಆಸೆಯಾಗಿರುತ್ತದೆ.  ಹಾಗೆಯೇ ಮಗನಿಗೆ ಸೊಸೆಯನ್ನು ತಂದುಕೊಳ್ಳುವಾಗಲೂ ತುಂಬಾ ಜಾಗರೂಕಳಾಗಿ ಆಯ್ಕೆ ಮಾಡಲು ಹೋಗುತ್ತಾಳೆ.  ನಮ್ಮನ್ನು ಆರೈಕೆ ಮಾಡದಿದ್ದರೂ ಪರವಾಗಿಲ್ಲ ಮಗನ ಮನಸ್ಸಿಗೆ ನೋಯಿಸದಿರಲಿ ಎಂಬುವುದೇ ಅವಳ ಬಯಕೆಯಾಗಿರುತ್ತದೆ. ಇಷ್ಟು ದಿನ ನಾನು ನೋಡಿಕೊಂಡೆ, ಇನ್ನು ನಿನ್ನ ಜವಾಬ್ದಾರಿ ಎಂದು ಧಾರೆ ಎರೆಯುವ ಸಮಯದಲ್ಲೇ ಸೊಸೆಯನ್ನು ನೋಡಿ ಕಣ್ಣಿಂದಲೇ ಮಾಹಿತಿ ರವಾನಿಸುತ್ತಾಳೆ.
ನಿಜ. ಮಡದಿಯಾಗಿ ಯಾನಿ ಸೊಸೆಯಾಗಿ ಒಬ್ಬರ ಮನೆಗೆ ಬಂದ ಹೆಣ್ಣು ವರುಷದೊಳಗೆ ಶುಭಸಮಾಚಾರ ನೀಡಿ ತಾಯಿಯಾಗಿ ಬಿಡುತ್ತಾಳೆ. ಆ ತಾಯಿಯ ಪಾತ್ರ ನಿರ್ವಹಿಸಲು ಅವಳು ಸಂಪೂರ್ಣವಾಗಿ ತನ್ನ ಆಸೆ ಆಕಾಂಕ್ಷೆಗಳನ್ನು ತ್ಯಾಗ ಮಾಡಲೇಬೇಕಾಗುತ್ತದೆ. ಇಲ್ಲದಿರೆ ಸರಾಗವಾಗಿ ಸುಲಲಿತವಾಗಿ ಜೀವನ ನಡೆಯದು. ಎಲ್ಲ ತಾಯಿಯಂದಿರೂ ಸುಖಸಂತೋಷದಿಂದಿರಲಿ. ಅವರ ಆರೋಗ್ಯ ವೃದ್ಧಿಸಲಿ.
.
.
- ಸಿಂಧು ಭಾರ್ಗವ್ | ಬೆಂಗಳೂರು-೨೧

#happymothersday #kannadaarticle #article #momslove
MOMS love and care 💕
#Sindhubhargavquotes #ಅಮ್ಮಎಂದರೆ #ಅಮ್ಮನಪ್ರೀತಿ ಒಂದು #ಕನ್ನಡಲೇಖನ #ಪ್ರತಿನಿಧಿ_ದಿನಪತ್ರಿಕೆ ಯಲ್ಲಿ ಪ್ರಕಟವಾಗಿದೆ. #may102020 💞 #sundaynewspaper

Thursday 7 May 2020

ಕರ್ನಾಟಕ ಜಾನಪದ ಸಾಹಿತ್ಯ ಜನಪದ ಹಾಡುಗಳ ಬೃಹತ್ ಸಂಗ್ರಹ ೨೦೨೦

ಜನಪದ ಹಾಡುಗಳು


ನಲ್ಮೆಯ ಕವಿಮನಗಳೇ,

ದಿನಾಂಕ 25-04-2020 ಶನಿವಾರ ದಂದು "ಸಾಹಿತ್ಯ ಸಂಕ್ರಾಂತಿ" - ಎಪ್ರಿಲ್ ತಿಂಗಳ "ರಾಜ್ಯಮಟ್ಟದ ಜನಪದ ಶೈಲಿಯ ಹಾಡು ರಚನಾ ಸ್ಪರ್ಧೆ ಹಾಗು  "ರಾಜ್ಯಮಟ್ಟದ ಜನಪದ ಕಾವ್ಯ ಪುರಸ್ಕಾರ" ಕ್ಕೆ ಜನಪದ ಶೈಲಿಯ ಹಾಡುಗಳನ್ನು ಆಹ್ವಾನಿಸಲಾಗಿತ್ತು.


ಜನಪದ ಹಾಡುಗಳ ಸಂಗ್ರಹ


ನಮ್ಮ ಸಂಸ್ಥೆಯ ಕಳೆದ ತಿಂಗಳು ನಡೆಸಿದ ರಾಜ್ಯಮಟ್ಟದ ಜನಪದ ಶೈಲಿಯ ಹಾಡು ರಚನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು "ಜನಪದ ಕಾವ್ಯ ಪುರಸ್ಕಾರ" ಕ್ಕೆ ಭಾಜನರಾದ "ದಿನೇಶ್ ಎನ್." ಅವರ ಬಗ್ಗೆ ಹಾಗು ಸ್ಪರ್ಧೆಯ ಬಗೆಗೆ ಮಾಹಿತಿ ಇರುವ ಪತ್ರಿಕಾ ವರದಿ.

ಪ್ರಕಟಣೆ:-ಜನಮಾಧ್ಯಮ ವಾರ್ತಾಪತ್ರಿಕೆ

ಜನಪದ ಕಾವ್ಯ ಪುರಸ್ಕಾರ ಪತ್ರಿಕಾ ವರದಿ

ಪ್ರಕಟಣೆ:- ಜನಮಾಧ್ಯಮ ವಾರ್ತಾಪತ್ರಿಕೆ , ಮತ್ತು ವಿಜಯವಾಣಿ ದಿನಪತ್ರಿಕೆ. 

ಬಹುಮಾನಿತ ಸ್ಪರ್ಧಿಗಳ ಹಾಡುಗಳ ಸಾಹಿತ್ಯ ನಿಮಗಾಗಿ :
.


೧) ಜನಪದ ಗೀತೆ: ರೈತ

ಆ ಊರು ಈ ಊರು|
ನಮ್ಮೂರು ನಿಮ್ಮೂರು‌‌|
ರೈತನಿಲ್ಲದ ಊರು ಹಾಳೂರು.!!೧!!
ಭರಣಿ ಹೊಯ್ದರೇ|
ಧರಣಿ ತುಂಬಿದ ಕಾಳು|
ರೈತ ಬಿತ್ತಿದರೇ ಬೆಳೆಸಾಲು !!೨!!
ಭೂತಾಯಿ ಮಣ್ಣಿಗೆ|
ತಣ್ಣೀರು ಜೊತೆಯಾಗಿ|
ಬಿತ್ತಿದ ಬೀಜ ಮೊಳೆದಾವೋ!!೩!!
ಹಸಿರು ಸೀರೆಯನುಟ್ಟು|
ಬಸಿರಲ್ಲಿ ತೆನೆಯ ಹೊತ್ತು|
ಹೊಸ ಬೆಳೆಯ ಜನಕೆ ನೀಡ್ಯಾಳೋ!!೪!!
ಹೊಸತು ಬೆಳೆಯ ಕಂಡು|
ರೈತ ಸಂತಷಗೊಂಡು|
ಕಾಳನ್ನು ಹಸನು ಮಾಡ್ಯಾನೋ!!೫!!
ಹಸನು ಮಾಡಿದ ಕಾಳ|
ಹೊಸೆದು ಹುಗ್ಗಿಯ ಮಾಡಿ|
ರೈತನ ಹಾಡಿ ಹೊಗಳ್ಯಾರೋ!!೬!!

ರಚನೆ - ಶ್ರೀಮತಿ ವಿಮಲಾ ಪಟಗಾರ. ಮುರ್ಡೇಶ್ವರ
.
.
೨) ಹಾಡು: ಭೂಮಿ ತಾಯಿ 

ಎಲ್ಲಾ ತಾಯಿಗಿಂತ ಭೂಮಿ ತಾಯಿ ಮೇಲು |
ಹೊತ್ತಾರೆ ಎದ್ದು ನೆನೆದೇನಾ | ತಾಯಿಯ
ನಾನು ಮತ್ತೊಮ್ಮೆ ಕೈಯ ಮುಗಿದೇನಾ    ||೧||   
ಮಳೆರಾಯ ಬಂದಾನೋ ಹರುಷಾವ ತಂದಾನೋ |
ಬೋರೆಂದು ಮಳೆಯ ಸುರಿಸ್ಯಾನ | ಮಳೆರಾಯ
ಭೂತಾಯ ಮಡಿಲ ತೊಯ್ದಾನಾ              ||೨||
ತೊಯ್ದ ಭೂತಾಯ ಮಣ್ಣಿನ ಮಗ ನೋಡಿ |
ನೇಗಿಲ ಹಿಡಿದು ಹೊಂಟ್ಯಾನ | ಭೂತಾಯ
ಮಡಿಲಿಗೆ ಬೀಜವ ಬಿತ್ಯಾನ                      ||೩||
ಬಡವ ಬಲ್ಲಿದನೆಂಬ ಭೇದಾವ ಮಾಡದೇ |
ಕೈ ತುಂಬ ಧಾನ್ಯವ ನೀಡ್ಯಾಳ | ಭೂತಾಯಿ
ತುತ್ತಿಟ್ಟು ನಮ್ಮ ಸಲುಹ್ಯಾಳ                      ||೪||    
ಧರಣಿ ಮಹಿಮೆಯ ಅರಿಯದ ದುರುಳರು |
ಭೂತಾಯಿ ಎದೆಯ ಸೀಳ್ಯಾರ | ದುರುಳರು
ತಮ್ಮ ನಾಶಕ್ಕೆ ತಾವೇ ಹೊಂಟ್ಯಾರ           ||೫||
ನಿನ್ನನ್ನೇ ತುಳಿದ್ಯಾರ ಒಡಲನ್ನೇ ಬಗೆದ್ಯಾರ |
ಸಹನೆಗೆ ನಿನ್ನ ಸಮನ್ಯಾರ | ಭೂತಾಯಿ
ನಿನ್ನ ಹಂಗೆ ಕಾಣೆ ಇನ್ಯಾರ                       ||೬||     

ರಚನೆ - ಕುಮಾರಿ ಸ್ನೇಹಾ. ಮುರ್ಡೇಶ್ವರ 
.
.
3)
•••••••••••••••••••••••
ಸವಿಯೊಲವ ಸೋನೆ..
•••••••••••••••••••••••
ಕಾದು ಕುಂತೆ ನೀ ಬರ್ತಿಯಂತ
ಹೊತ್ತು ಜಾರಿತು ನೋಡ..
ಚಿಂತಿ ಹಿಡಿಸಿದಿ ನೀ ಬರದೆ ನಲ್ಲೆ
ಹಿಂಗ ನನ್ನ ಕಾಡಬ್ಯಾಡ..
ಗೆಳತಿ ನೀ ಹಿಂಗ ಕಾಡಬ್ಯಾಡ..
ನನ್ನುಸಿರು ಉಸಿರಾಗ ನಿಂದ ಹೆಸ್ರು
ನೀ ಜತೆಗಿದ್ರ ಸುಗ್ಗಿ ಹಬ್ಬ..
ಕಾರಣ ಹೇಳದೆ ಸರಿಬ್ಯಾಡ ದೂರ
ಕವಿತೈತೆ ನನಗ ಮಬ್ಬ..
ಗೆಳತಿ ನನಗ ಕವಿತೈತಿ ಮಬ್ಬ..
ಹುಣ್ಣಿಮೆ ಹೊಳ್ಪು ನಿನ್ನ ನಗಿಯಾಗ
ಸವಿ ಜೇನಿನ್ಹಂಗ ನಿನ್ನ ಮಾತು.
ಕೋಗಿಲೆ ಸ್ವರದಿಂಪು ನಿನ್ನ ದನಿಯಾಗ
ವಾರಿ ನೋಟಕ ನಿಂತೆ ಸೋತು..
ಗೆಳತಿ ವಾರಿ ನೋಟಕ ನಿಂತೆ ಸೋತು..
ನಿನಗಾಗೆ ಹಂಬಲಿಸಿ ಸೊರಗೈತೆ ಜೀವ
ಈ ಬಾಳ ಎಳೆಬಿಸಿಲು ನೀನೆ..
ನಿನ್ನ ಜತೆ ಸೇರಿ ನಲಿವಾಸೆ ನಿತ್ಯವೂ
ಎರೆಯೆ ಸವಿಯೊಲವ ಸೋನೆ..
ಗೆಳತಿ ಎರೆಯೆ ಸವಿಯೊಲವ ಸೋನೆ..

ರಚನೆ - ದಿನೇಶ್. ಎನ್ 
.
.
4)     "  ಶೀಗೆ ಹುಣ್ಣಿಮೆ"

ಮೂಡು ಕೆಂಪಾಗಿ ಪೂರ್ವದಲಿ ರವಿಮೂಡಿ
ಭುವಿಯೆಲ್ಲ ಬೆಳಕಾಗಿ, ಗಿಡಮರ ಹಸಿರಾಗಿ
ಕೊಂಬೆಯಲಿ  ಹೂ ಅರಳಿಹುದು ನೋಡಣ್ಣll
ಭೂಮಿತಾಯಿ ಹಸಿರಾಗಿ ಮನಕೆಲ್ಲ ಉಸಿರಾಗಿ
ಮನುಜ ಕುಲಕೆ ದೀವಿಗೆಯಾಗಿ   
ಜಗದೊಡೆಯ ನೇಸರನು ಬಂದಿಹನು ನೋಡಣ್ಣ ll
ಅಡಿಕೆಮರ ಶೃಂಗಾರಗೊಂಡು,ಎಲೆಬಳ್ಳಿ ಸುತ್ಕೊಂಡು
ಭೂಮಿತಾಯಿ ಸಡಗರದಿ ಶೀಗೆಹುಣ್ಣಿಮೆ
ಪೂಜೆಗೆ ಸಜ್ಜಾದಳು ನೋಡಣ್ಣll
ಹಸಿರು ಕುಪ್ಪಸ ತೊಟ್ಟು ,ಪಟ್ಟೆ ಸೀರೆಯುಟ್ಟು
ಮುಡಿಗೆ ಮಲ್ಲಿಗೆ ಹೂವು ಮುಡಿದು
ಆಭರಣದಿ ಅಲಂಕಾರಗೊಂಡಳು ನೋಡಣ್ಣ ll
ಬಂಧು-ಬಾಂಧವರೆಲ್ಲ ರುಚಿ ರುಚಿ ಅಡಿಗೆ ಮಾಡಿ
ಬಂಡಿಯ್ಯಾಗೆ ಊಟ ಕಟ್ಕೊಂಡು
ಭೂದೇವಿಗೆ ಎಡೆಮಾಡಿ ಉಣ್ಣಿರಣ್ಣ ll
ಮುತ್ತೈದೆಯರಿಗೆ ಮಡಿಲ ತುಂಬಿ
ಸಕಲೋಪಚಾರದಿ ಪೂಜಿಸಿ ಸಿಂಗಾರದಿ
ಆರತಿ ಎತ್ತಿ ಮಂದಿಗೆಲ್ಲ ಸಂತಸ ನೋಡಣ್ಣll


ರಚನೆ - ಡಾ.ಎನ್ ಆರ್ ಮಂಜುಳ.
.
.

5) ಅಮ್ಮನ ಮನಸ್ಸು 

ಬಚ್ಚಲ ಹಂಡ್ಯಾದಾಗ ಬೆಚ್ಚೆನ್ನ ನೀರು ಕಾಸಿ
ಜಳಕಕ ಹದನ ಗೊಳಿಸ್ಯಾಳ !!ಗರತಿ!!
ಎಣ್ಣೆ ಮಜ್ಜನವ ಮಾಡಿಸ್ಯಾಳ !!೧!!
ಎರಕಾವ ಹೊಯ್ದ ಮ್ಯಾಗ  ಅಂಗಾರ  ಹಣೆಗಿಟ್ಟು
ತೊಟ್ಟಿಲಲ್ಲಿ ಕೂಸ ಮಲಿಗಿಸ್ಯಾಳ !!ಗರತಿ!!
ದೃಷ್ಟಿಯ ತೆಗೆದು ಸುಖಿಸ್ಯಾಳ !!೨!!
ಜೋಗುಳ ಪಾಡುತ್ತಾ, ಲಲ್ಲೆಯ ಗರೆಯುತ್ತಾ
ಚಂದನ ಕಥೆಯ ಉಸಿರ್ಯಾಳ !!ಗರತಿ!!
ಸುಖ ನಿದ್ದೆ ನೋಡಿ ನಲಿದಾಳ !!೩!!
ಗದ್ದಲ ತಡೆಯುತ್ತಾ, ಆಗಾಗ ಇಣುಕುತ್ತಾ
ಕರುಳ ಕುಡಿ ಜೋಪಾನ ಮಾಡ್ಯಾಳ !!ಗರತಿ!!
ಬೆಚ್ಚಿದ ಮಗುವ ಸಂತೈಸ್ಯಾಳ !!೪!!
ಅದರತ್ತಲೇ ಚಿತ್ತ ಮನಸ್ಸಿಲ್ಲ ಕೆಲಸದತ್ತ,
ಎತ್ತಿ ಮುದ್ದಾಡಲು ಚಡ ಪಡಿಸ್ಯಾಳ !!ಗರತಿ!!
ಅಮೃತಪಾನ ಕೊಡಲು ಹಂಬಲಿಸ್ಯಾಳ !!೫!!
ಅಧರದಿ ಮಂದಹಾಸ ಮೂಡಿಸ್ಯಾನ ಚಂದ್ರಹಾಸ,
ನಕ್ಕ ಗುಳಿಕೆನ್ನೆಯ ಸವರ್ಯಾಳ !!ಗರತಿ!!
ಧನ್ಯತೆ ಭಾವದಿ ಬೀಗ್ಯಾಳ !!೬!!

ರಚನೆ - ಶ್ರೀಮತಿ ಜೋಶಿ  ಶಿಕ್ಷಕಿ ಸೊರಬ
.
.
6) ಜನಪದ ಶೈಲಿ ತ್ರಿಪದಿಗಳು : ಪತಿರಾಯ

ಬೆಳಗಾಗ ನಾನೆದ್ದು ಮೊಸರನ್ನು ಕಡೆದೇನು ।
ಬೆಣ್ಣೆಯ ಉಂಡೆ ತೆಗೆದೇನು।ಸರದಾರ
ಹೊಲದಿಂದ ಬರೋ ಹಾದಿ ಕಾದೇನು
ಬೆಣ್ಣೆಯ ಮನದವನು ನನ್ನಯ ಇನಿಯಾ।
ಕಣ್ಣಲ್ಲೇ ಪಿರುತಿ ತುಂಬಿಹನು।ಸರದಾರ
ಮೊಸರಲ್ಲಿ ಕಲ್ಲನ್ನು ಹುಡುಕಾನು
ಖಾರದ ಮಜ್ಜಿಗೆಯು  ಊಟಕೆ ಚಂದ।
ರೊಟ್ಟಿಗೆ ಬೆಣ್ಣೆಯು ಬಲು ಚಂದ।ನನ್ನಿಯನ
ಏಕಾಂತ ಮಾತು ಬಹು ಚಂದ
ಹಾಲಿಗೆ ಹುಳಿ ಹಿಂಡಿ ಹಾಳಾಗಿ ಹೋತು।
ಹಾಳಾಗದು ಹುಳಿ ಹಿಂಡಿದರೂ।ನಮ್ಮೊಳಗ
ಕೇಳನು ನನ್ನ ಸರದಾರ
ದುಃಖ ಹೆಚ್ಚಾಗಿ ಹೆಪ್ಪುಗಟ್ಟಿದರೂನು।
ನನ್ನಿನಿಯ ತಲೆಯನ್ನು ಸವರಲು। ಬೆಣ್ಣೆಯು
ಬಿಸಿ ಮುಟ್ಟಿದಂಗೆ ಕರಗುವೆನು
ಮೊಸರಲ್ಲಿ ಬೆಣ್ಣೆ  ಎಲ್ಲಿಹುದು ಮಹಾರಾಯ।ಕಣ್ಣಿಗೆ ಕಾಣದೆ ಅಡಗಿಹುದು।ಕಡೆದರೆ
ಪಿರುತಿಯ ಬೆಣ್ಣೆ ತೇಲುವುದು
.
ರಚನೆ : ✍🏻 ಮಂಜುನಾಥ ಕೆ ಶಿವಪುರ.
.
.
07) ನನ್ನವಳು ಚೆಲ್ವಿ 

ಹಿತ್ತಾಳೆ ಕೊಡಪಾನ ಕಂಠಕ್ಕೆ ಸುತ್ಯಾಳ
ಕೋಮಲ ಕರದಿ ಬಿಗಿದಾಳ | ನನ್ನೊಡತಿ
ನೀರನ್ನು ಹೊತ್ತು ತರುತಾಳ || 
ನಿಂಬಿಯ ವನ ಸಾಗಿ ತುಂಬಿಯ ಗಿಡ ತೂಗಿ
ನಡುವಿನ ನಡುವು ನಲುಗೈತೋ | ನೀರು ತುಳುಕಿ
ಜಾರುವ ತವಕ ತೋರೈತೋ ||
ಬಳ್ಳಿಯು ಬಳುಕೈತಿ ಚೆಂದಕ್ಕೆ ಮರುಳಾಗಿ
ನನ್ನವ್ಳ ನೋಡೆಽ ಉರಿತಾನ | ಸೂರ್ಯದೇವ
ಸುಡುತಾನ ಕ್ವಾಪ ಉಗಿದಾನ ||
ಏರಿಯ ಕಲ್ಲೊಂದು ಕಾಲಡಿ ತಾ ಬಂದು
ವಿಲವಿಲನೆ ತಾನು ಹೊರಳೈತೋ | ಕೋಮಲೆ
ಸೋಕಿ ತನ್ತಾನ ಕರಿಗ್ಹೋತೋ ||
ಮುಸುಕಿನ ಮರೆಯಿಂದ ಹೊರಬಂದ ಶಶಿಯಂಗೆ
ತಿಂಗಳ ಬೆಳಕ ಚಲೌಳೆ | ನನ್ನರಸಿ ರಾಣಿ
ಅಮವಾಸೆಗೂ ಅಳು ತರಸ್ಯಾಳೆ ||
ಕೆರೆಯೊಳ ಮೀನೆಲ್ಲ ಮ್ಯಾಲ್ಬಂದು ನಿಂತಾವೆ
ಚಂದ್ರಾನ ತುಣುಕ ನೋಡೋಕೆ | ನನ್ನವಳ ಚೆಲುವ
ಹಾಡ್ಯಾಡಿ ಹೊಗಳಿ ನಲಿದಾವೆ ||

ರಚನೆ:  ✏ಲಿಂಬಿ ಲಿಂಗೇಶ್ ಬಿದರಕುಂದಿ
.
.
08) ಬಂಗಾರದ ಬೆಡಗಿ

ಅಂಗಳಕ ನೀ ಬಾರೆ ತಿಂಗಳ ಚೆಲುವೆ
ಒಲವಿನ ಉಂಗುರ ನೀಡುವೆ ಬಾರೆ
ಸಿಂಗಾರದ ಗೊಂಬೆ ಬಂಗಾರದ ಬೆಡಗಿ
ಹೆಂಗಾರ ಮಾಡಿ ಎದುರಿಗೆ ಬಾರೆ. !!ಪ!!
ಎದುರು ಮನೆಯ ಕಿಟಕಿ ಪಡಕಿನಲಿ
ಇಣುಕಿಣುಕಿ ನನ್ನ ನೋಡಾಕಿ.
ಕಣ್ಣ ಸಣ್ಣೆಯಲಿ ಕೆಣಕೆಣಕಿ ಕರೆದು
ಗುಟ್ಟೊಂದ ಹೇಳಾಕ ಬಳಿಗೆ ಕರದಾಕಿ.
ಜಾತ್ರೆಗೆ ಹೋದಾಗ ಹತ್ರಾನೇ ಬರುವಾಕಿ
ತೊಟ್ಟಿಲ್ದಾಗ ಕೈಕುಲುಕಿ ಜೋರು ನಕ್ಕಾಕಿ.
ಚೂಡಾ ಕರದಂಟಂದ್ರೆ ಜೀವ ಬಿಟ್ಟಾಕಿ
ಮಾತಿನಲ್ಲಿ ಮನೆಯ ಕಟ್ಟಿ ಹೋದಾಕಿ.
ತೇರು ನೋಡುವಾಗ ಜೋರಾಗಿ ಕುಣದಾಕಿ
ಸಿಳ್ಳೆ ಹೊಡೆದು ಮಳ್ಳಿಯಂತೆ ನಿಂತಾಕಿ.
ನನ್ನ ನೋಡು ನೆಪದಾಗ ಹಿತ್ತಲದಾಗ
ಬಂದು ಬಂದು ನಿಂತು ನೋಡಾಕಿ.
ತುಡುಗಿ ಜೀವ ಗಡಿಗೆಯಲ್ಲಿದ್ದಾಂಗ
ತಿರುಗಾಮುರುಗಾ ನನ್ನ ನೋಡುವಾಕಿ.
ಹಲ್ಲು ಕಿರಿದು ಮಲ್ಲಿಗೆಯ ನಗು ಬೀರಿ
ಮೆಲ್ಲಗೆ ಕೈಮಾಡಿ ಕರೆದು ಮಾತಾಡಾಕಿ.

ರಚನೆ : ಈಶ್ವರ ಕುರಿ (ಶಿಕ್ಷಕರು)
.
.

9) ಜನಪದ ಹಾಡು:  ಕರಾವಳಿ ನೋಡು ಬಾ

ಕರಾವಳಿ ನಾಡನ್ನು ನೋಡು ಬಾ ಮೈಸಿರಿಯೇ॥೨ಸಲ॥
ಕರಾವಳಿ ನಾಡನ್ನು ನೋಡು ಬಾ ಮೈಸಿರಿಯೇ
ಕರಾವಳಿ ನಾಡಲ್ಲಿ ಏನಿಹುದು ಓ ಮನವೇ
ಕರಾವಳಿ ನಾಡಲ್ಲಿ ಏನಿಹುದು ಓ ಮನವೇ
ತಿಳಿದಿಲ್ಲವೆನಗೆ ತಿಳಿಸೆಯಾ ಎಲೆ ಮನವೇ
ಸುತ್ತಾಡಿ ಬರುವ ಆ ನಾಡನ್ನು
ಸುತ್ತಾಡಿ ಬರುವ ಆ ನಾಡನ್ನು॥ಕ॥
ಕರಾವಳಿ ತೀರದಲ್ಲಿ ಕಡಲಿನ ತೆರೆ ನೋಡು॥೨ಸಲ॥
ಕರಾವಳಿ ತೀರದಲ್ಲಿ ಕಡಲಿನ ತೆರೆ ನೋಡು
ಅದರ ದಡದಲ್ಲಿ ಮನಸಾರೆ ಕುಳಿತು ನೋಡು
ಅದೇ ಕಣೋ ನನ್ನ ಹೊನ್ನಾಡು।
ಸುಕೋಮಲ ಮನವೇ ತೋರು ಬಾ ನಿನ್ನ ಹೊನ್ನಾಡ
ಸುಕೋಮಲ ಮನವೇ ತೋರು ಬಾ ನಿನ್ನ ಹೊನ್ನಾಡ॥
ಮರಳಿನ ರಾಶಿ ನೋಡು ಕಪ್ಪೆ ಚಿಪ್ಪನು ನೋಡು॥೨ಸಲ॥
ಮರಳಿನ ರಾಶಿ ನೋಡು ಕಪ್ಪೆ ಚಿಪ್ಪನು ನೋಡು
ಚಿಪ್ಪಿನ ಒಳಗಡೆ ಮುತ್ತಿಹುದು ನೀ ನೋಡು
ಚಿಪ್ಪಿನ ಒಳಗಡೆ ಮುತ್ತಿಹುದು ನೀ ನೋಡು
ಅದೇ ಕಣೋ ನನ್ನ ಹೊನ್ನಾಡು।
ಸುಕೋಮಲ ಮನವೇ ತೋರು ಬಾ ನಿನ್ನ ಹೊನ್ನಾಡ
ಸುಕೋಮಲ ಮನವೇ ತೋರು ಬಾ ನಿನ್ನ ಹೊನ್ನಾಡ॥
ಮೀನು ಸಿಗುತ್ತಾವೆ ಕಡಲ ಗರ್ಭದಲ್ಲಿ॥೨ಸಲ॥
ಮೀನು ಸಿಗುತ್ತಾವೆ ಕಡಲ ಗರ್ಭದಲ್ಲಿ
ಅಲೆಗಳ ಅಬ್ಬರ ಹಾಡುತಾವೆ ನೀ ನೋಡು
ಅಲೆಗಳ ಅಬ್ಬರ ಹಾಡುತಾವೆ ನೀ ನೋಡು
ಅದೇ ಕಣೋ ನನ್ನ ಹೊನ್ನಾಡು।
ಸುಕೋಮಲ ಮನವೇ ತೋರು ಬಾ ನಿನ್ನ ಹೊನ್ನಾಡ
ಸುಕೋಮಲ ಮನವೇ ತೋರು ಬಾ ನಿನ್ನ ಹೊನ್ನಾಡ॥
ಮುತ್ತಿನ ನಾಡಲ್ಲಿ ಮುತ್ತಿನ ಹೊಳೆ ಹರಿಸಿ॥೨ಸಲ॥
ಮುತ್ತಿನ ನಾಡಲ್ಲಿ ಮುತ್ತಿನ ಹೊಳೆ ಹರಿಸಿ
ಪ್ರೀತಿಯ ಭಾಷೆಯ ನಾವಾಡುವಾ ಬಾರ
ನೀನೇ ಕಣೋ ನನ್ನ ಕನಸುಗಾರ॥
ಸ್ವಚ್ಛ ಮನಸುಳ್ಳ ನಾಡು ಅಚ್ಚ ಸಂಸ್ಕೃತಿ ನೋಡು
ಸ್ವಚ್ಛ ಮನಸುಳ್ಳ ನಾಡು ಅಚ್ಚ ಸಂಸ್ಕೃತಿ ನೋಡು
ನನ್ನ ನಾಡಿನ ವಿಶೇಷ ಇದೇ ನೋಡು
ನನ್ನ ನಾಡಿನ ವಿಶೇಷ ಇದೇ ನೋಡು
ಹೋಗೋಣ ಬಾರಾ ಕರಾವಳಿಗೆ॥ಕರಾವಳಿ॥
ಕರಾವಳಿ ನಾಡನ್ನು ಕೊಂಚ ನಾ ತಿಳಿದೇನು
ಕರಾವಳಿ ನಾಡನ್ನು ಕೊಂಚ ನಾ ತಿಳಿದೇನು
ಅರಿತಾಯ್ತು ಸೌಂದರ್ಯದಾಗರವ ಮನವೇ
ಹೋಗೋಣ ಬಾರೇ ನಿನ್ನ ನಾಡಿಗೆ॥ಕರಾವಳಿ॥

ಹೆಸರು: ಹರೀಶ್ ಕಜೆ .ಮಂಗಳೂರು
.
.
10) ಶೀರ್ಷಿಕೆ- "ತವರಿಂದ ತಾಯಿಯು ಬಂದಾಳ"

ತವರು ಮನೆಗೆ ಹೋದ ನಮ್ಮನೇ ಸಿರಿದೇವಿ
ಮರಳೀ ಮನೆಗಿಂದೂ ಬಂದಾಳ||ಮನೆಯಲ್ಲಿ||
ಸಂತಸದ ಹೊಳೆಯನ್ನೇ ಹರಿಸ್ಯಾಳ....
ನೀನಿಲ್ಲದಾ ಮನೆಯು ದೇವರಿಲ್ಲದ ಗುಡಿಯು
ನಿನ್ನಯ ಉಡಿ ತುಂಬಾ ಬಾಗೀನವೇ||ಕೇಳವ್ವ||
ಕಾಳ ರಾತ್ರಿಯಲೂ ನೀ ಬೆಳದಿಂಗಳೇ...
ಏನೇ ಇದ್ದರೂ ತಾಯಿ ನೀನಿದ್ದ ಹಾಂಗಲ್ಲ
ನೀನಿರದ ಕ್ಷಣಗಳೂ ಯುಗವಾಗೀ||ಕಳೆದೈತೆ||
ಕಾದು ಕುಳಿತ ಮನವೂ ಸೊರಗೈತೇ...
ನಿನ್ನಯ ಆಗಮಕೆ ಮನಸಲ್ಲಿ ನವಿಲೀಗ
ನಲಿದು ನಾಟ್ಯವನೇ ಆಡೈತೇ...||ನೋಡಲ್ಲಿ||
ಅಂಬರದಿ ಕೋಲ್ಮಿಂಚೂ ಬೆಳಗೈತೇ...
ರಂಗೋಲಿ ಕೇಳಿದವು ತಾಯೀ ಎಲ್ಲಿಹಳೆಂದು
ಅದಕೊಂದು ಉತ್ತರವ ನೀಡೀಗ||ಓ ತಾಯೇ||
ಅಂಗಳದಿ ಚಿತ್ತಾರಾ ಬಿಡಿಸೀಗ....
ಬಾಳೇಯ ಆ ಗೊನೆಯೂ ಜೋಳದ ಸಿರಿ ತೆನೆಯೂ
ಬಾಗೀ ಸ್ವಾಗತವ ಕೋರ್ಯಾವಾ..||ಬಾರವ್ವ||
ಬಲಗಾಲಿನಲೀ ಬಾಗೀಲ ದಾಟವ್ವ...

ರಚನೆ : ಮಹೇಶ್ ಹೆಗಡೆ,ಸಿದ್ದಾಪುರ.
.
.
೧೧) ಅವ್ವನ ಚಿಂತಿ

ತವರೂರ ಮನಿಯಾಗ ಹಡೆದವ್ವ ಕಾಯ್ತಾಳ
ಶಿವನನ್ನು ನೆನೆಯುತ್ತ ಇರುತಾಳ | ನನ್ನ ಅವ್ವ
ಢವಢವನೆ ಎದೆಯು ಹೊಡಿತಾದ ||
ಬಸುರಿ ನಾನೆಂದವಳ ಮನದಾಗ ಚಿಂತಿಯು
ಉಸಿರನ್ನು ನಿಡುಸುಯ್ದು ಬಿಡುತಾಳ | ಆಗಾಗ
ಹೆಸರನ್ನೆ ಜಪಿಸಿ ಕರೆತಾಳ ||
ತಿಂಗಳು ಏಳಾದಾಗ ಓಡೋದಿ ಬಂದಾಳ
ಅ0ಗಳದಿ ನಿಂತೆನ್ನ ಕೂಗ್ಯಾಳ | ಕೂಸೆಂದು
ಬಂಗಾರಿ ನನ ಮುದ್ದು ಎಂದಾಳ ||
ಒಳ್ಳೇ ದಿನ ನೋಡ್ಕೊಂಡ್ ಸೀಮಂತ ಮಾಡ್ಯಾರ
ಕಳ್ಳೇ ಕಾಯ್ ಕಜ್ಜಾಯ ತಂದಾರ | ನನಗಂತ
ಎಳ್ಳುಂಡೆ ತುಪ್ಪ ಬಡಿಸ್ಯಾರ ||
ಚಪ್ಪರದ ನಡುವಿಂದ ಕರಕೊಂಡು ಹೋಗಾಕ
ಅಪ್ಪ ಅವ್ವ ಎಲ್ಲ ನಿಂದಾರ | ನನ ಗಂಡ
ಸಪ್ಪೆ ಮೋರೆ ಹಾಕಿ ನೋಡ್ಯಾರ ||
ಅತ್ತೆ ಮಾವನ ಆಶೀರ್ವಾದ ತೆಕ್ಕೊಂಡು ನಾ
ಮತ್ತೆ ಬರುವೆನೆಂದು ಹೇಳಾಯ್ತು | ಪತಿಗೊಂದು
ಮುತ್ತು ಕೊಟ್ಟಲ್ಲಿಂದ ಹೊರಟಾಯ್ತು ||

ಹೆಸರು: ಲತಾ ಆಚಾರ್ಯ ಬನಾರಿ
.
.
12) ಬಯಕಿ ಹುಚ್ಚು

ಬಯಕಿ ಹುಚ್ಚು ಎಲ್ಲಾ ನುಂಗೇತಿ
ನೋಡಪ್ಪಾ ಮನುಷಾ
ಬಯಕಿ ಹುಚ್ಚು ಎಲ್ಲಾ ನುಂಗೇತಿ.
ಬಾವಿ ನೀರ ಬೋರು ನುಂಗಿ
ಕೆರೆಯ ನೀರ ಗದ್ದೆ ನುಂಗಿ
ಅಂತರ್ಜಲವಾ ಖಾಲಿ ಮಾಡೈತಿ
ನೋಡಪ್ಪಾ ಮನುಷಾ ಅಂತರ್ಜಲವಾ ಖಾಲಿ ಮಾಡೈತಿ.
ಬಚ್ಚಲ ಮನಿ ಸಿಂಕ್ ನುಂಗಿ
ಚರಗಿ ಜಾಗ ನಳಾ ನುಂಗಿ
ಜಾಸ್ತಿ ನೀರ ಬಳಸೊಂಗ ಆಗೇತಿ
ನೋಡಪ್ಪಾ ಮನುಷಾ ಜಾಸ್ತಿ ನೀರ ಬಳಸೊಂಗ ಆಗೇತಿ.
ಕಾಡ ಜಾಗಾ ನಾಡ ನುಂಗಿ
ಮರದ ಜಾಗಾ ಮನುಜಾ ನುಂಗಿ
ಮಳಿ ಬರದಂಗ ಆಗೇತಿ
ನೋಡಪ್ಪಾ ಮನುಷಾ ಮಳೀನ ಬರದಂಗ ಆಗೇತಿ.
ಅಗಲೀಕರಣ ನೆಲವ ನುಂಗಿ
ರಸ್ತೆಯೆಲ್ಲಾ ವೃಕ್ಷಾನ ನುಂಗಿ
ಹಸಿರ ಚೆಲುವು ಇಲ್ದಂಗ ಆಗೇತಿ
ನೋಡಪ್ಪಾ ಮನುಷಾ ಹಸಿರ ಚೆಲುವು ಇಲ್ದಂಗ ಆಗೇತಿ.

ರಚನೆ - ಜ್ಯೋತಿ.ನು.ಜವಳಿ. 
.
.

13) ನನ್ನವ್ವ

ಹೊತ್ತಾರೆ ಏಳವ್ವ ಕೈಮುಗಿದು ಪರಶಿವಗೆ|
ನತ್ತೊಂದು ನೀನೆ ಸರಿಪಡಿಸಿ |ಬೆಳಗೋಕೆ|
ಬತ್ತಿಯಾ ದೀಪ ಹಚ್ಚವ್ವ!!೧!!

ಮಾರಿಗೆಯ ನೀ ತೊಳೆದು ಹಿಂದೊಲೆಗೆ ನೀರಿಟ್ಟು|
ಹಾರೈಸೊ ಅತ್ತೆ ಮಾವರಿಗೆ |ಎಂದೆಂದು|
ಗೋರಂಟಿ ಕರದಿ ನಮಿಸವ್ವ!!೨!!

ಮುಚ್ಚಿರುವ ಕದವನ್ನೆ ಕಿಚ್ಚಿರದೆ ತೆರೆಯವ್ವ|
ಹಚ್ಚಡದ ಗಾಳಿ ಸುಳಿವಂತೆ |ಒಳಹೊರಗ|
ಸಚ್ಚರಿತ ಮನೆಯ ಮಗಳವ್ವ!!೩!!

ಅಂಗಳವ ನೀ ಗುಡಿಸಿ  ಹೊಸಿಲನ್ನ ನೀ ತೊಳೆದು|
ಕಂಗಳೇ ಮೆಚ್ಚೊ ರಂಗೋಲೆ |ಬೆರಳಲ್ಲಿ|
ಮಂಗಳಕೆ ಮಗಳೆ ಬಿಡಿಸವ್ವ!!೪!!

ಬದಲಾದ ಕಾಲದಲಿ ಬದುಕುವುದ ನೀ ಕಲಿತು|
ಹದವಾಗಿ ಮನೆಯೆ ನಡೆಸುತ್ತ |ಹಿಡಿತದಲಿ|
ಹೃದಯದಲೆ ಉಳಿದು ಬಾಳವ್ವ!!೫!!

ನಕ್ಕೊಂತ ಓಡಾಡು ಸೊಕ್ಕಿರದ ಮಾತಾಡು|
ಬೊಕ್ಕಸವ ಅರಿತು ಬಾಳುವೆಯ |ನಡೆಸವ್ವ|
ವಕ್ಕಲಿನ ಗರತಿ ನನ್ನವ್ವ!!೬!!

ರಚನೆ - ಪಕ್ಕೀರಪ್ಪ ತಾಳಗುಂದ
.
.
ಜನಪದ ಕವನಗಳು

೧೪) ಜೀವನಯಾತ್ರೆ

ಸುಟ್ಟು ಕಮರಿದ ಮಾಳಿಗೆಯಲ್ಲಿ
ಹೆಣ್ಣಾಗಿ ಹುಟ್ಟಿದೆ ಹಿಟ್ಟಿಲ್ಲದ ಹಟ್ಟಿಯಲ್ಲಿ
ಜರಿದರಂತೆ ಪಾಪ ಪಿಂಡವೆಂದು
ನೆಪವಾಗಿ ಕೊಂಕು ನುಡಿದರಂದು//1//

ಅವ್ವನ ಕಣ್ಣೀರೆನಗೆ ದಿನವೂ ಪಾಠ
ತಂಗಳನ್ನವೆ ನನಗೆ ಭಾರಿ ಊಟ
ತೊಟ್ಟು ಬಿಟ್ಟ  ವಸ್ತ್ರವೇ ಹಬ್ಬಕೆ ಹೊಸಬಟ್ಟೆ
ಹೋಳಿಗೆಯ ಹೊಸವರುಷಕೆ ಒಮ್ಮೆ ಸಿಹಿಯು//2//

ಕಡು ಸಿಟ್ಟಿನ ಮುಂಗೋಪದ ಹೆತ್ತಪ್ಪ
ಸಿಗಿದೇ ಬಿಡುವ ಮಾಡಿದರೆ ತಪ್ಪ
ತಪ್ಪಾಗದಂತೆ ವಿಧಿ ಬರೆದ ಬರಹ
ದಾರಿ ತಪ್ಪಿಸಿತು ನನ್ನ  ಬೇಗೆಯಾ ವಿರಹ//3//

ಕುಲುಮೆಯಲಿ ಕಾದಿತ್ತು ವಯಸಿನ ಬಿಗಿತ
ಅರಿಯದೆ ತೋಡಿಹರು ಕೂಪ
ತಿಳಿಯದೇ ಬಿದ್ದಿಹೆನು ಪಾಪಿಗಳ ಲೋಕ
ಚಿಗುರುತ್ತ ಕೂಗಿತ್ತು ಒಡಲಲ್ಲಿ ಕಂದನ ಶೋಕ//4//

ಕಮರಿತ್ತು  ಕುಹಕ ನುಡಿಯ ಬದುಕು
ಚೀರಿತ್ತು ಉಳಿಸಿಬಿಡಿ ಅರಳಲಿ ಕೂಸು
ಆರಿಗೂ ಕೇಳದಾಯಿತು ನನ್ನ ನೋವು
ಸಿಕ್ಕಿತ್ತು ರಕ್ಕಸರಿಗೆ ತಂಪಾದ  ಕಾವು...//5//

ರಚನೆ: ವಿನುತಾ ಕಿಚ್ಚಿಕೇರಿ - 
.
.
೧೫) ಜಾನಪದ ಗೀತೆ: ತವರಿನ ಸಿರಿ

ತವರಿನ ಸಿರಿಯವ್ವ ತಂಗಿ ನೀನು
ಬೆವರಿನ ಬಡತನ ಮರಿಬೇಡ //ತಂಗೆವ್ವ//
ಗಂಡನ ಮನಿಯಾಗ ನೀ ಬಾಳ.!

ಹೆತ್ತಪ್ಪ ಅವ್ವಗೆ ಹೆಸರ ತರಬೇಕವ್ವ
ಹಾಲುಂಡ ತವರ ಮರಿಬೇಡ//ತಂಗೆವ್ವ//
ಅತ್ತಿ ಮಾವರ ಮಾತ ಮೀರಬ್ಯಾಡ.!

ಗಂಡನ ಮನಿಯಾಗ ಮುತ್ನಂಗ ಇರಬೇಕ
ಮುತ್ತಂತ ಬಾಳೆ ಮಾಡಬೇಕ//ತಂಗೆವ್ವ//
ನಿನ್ನ ಗಂಡನ ನೆಚ್ಚಿ ನೆಡಿಯಬೇಕ.!

ಹೊತ್ತಾರೆ ಎದ್ದು ಮನೆಗೆಲಸ ಮಾಡಬೇಕ
ಅಪರಂಜಿ ಮಾತ ಆಡಬೇಕ //ತಂಗೆವ್ವ//
ನಿನ್ನತ್ತಿ ನಾದ್ನ್ಯಾರು ಮೆಚ್ಚಬೇಕ.!

ಗಂಡ ಮೈದುನರ ಜೋಪಾನ ಮಾಡವ್ವ
ಕ್ವಾಪದ ಬುದ್ದಿ ಬಿಡಬೇಕ//ತಂಗೆವ್ವ//
ಮಡಿಲಿನ ಕಾಣಿಕೆ ತರಬೇಕ..!

ಯಾರೆನ ಅಂದರೂ ಕಣ್ಣಿರೂ ಬ್ಯಾಡವ್ವ
ತಾಪವಾದರೂ ತಡಿಬೇಕ//ತಂಗೇವ್ವ//
ತವರಿನ ಕುಲಕೀರ್ತಿ ಬೆಳಗಬೇಕ

✍️-ಲಕುಮಿಕಂದ ಮುಕುಂದ
.
.
೧೬) ಜಾನಪದ ಗೀತೆ : ನಾ ಕೆಟ್ಟೆ ಗೆಳೆಯಾ

ಅಪ್ಪ ಅಮ್ಮನ ಮಡಿಲ ಬಿಟ್ಟೆ
ಸಿರಿಸಂಪತ್ತ ತೊರೆದು ಬಿಟ್ಟೆ
ನೀನ್ಯಾಕ ನನ ಬಿಟ್ಟೆ / ನಂಬಿ
ನಿನ್ನ ನಾ ಕೆಟ್ಟೆ ಗೆಳೆಯಾ ||

ಅಕ್ತತಂಗೇರ ಒಲವಾ ಬಿಟ್ಟೆ
ಬಂಧುಬಳಗ ತೂರಿ ಬಿಟ್ಟೆ
ನೀನ್ಯಾಕ ನನ ಬಿಟ್ಟೆ / ನಂಬಿ
ನಿನ್ನ ನಾ ಕೆಟ್ಟೆ ಗೆಳೆಯಾ ||

ಓದು ಬರಹ ಮೊದಲೇ ಬಿಟ್ಟೆ
ನಿನಗೆ ಎಲ್ಲವ ಅರ್ಪಿಸಿ ಬಿಟ್ಟೆ
ನೀನ್ಯಾಕ ನನ ಬಿಟ್ಟೆ / ನಂಬಿ
ನಿನ್ನ ನಾ ಕೆಟ್ಟೆ ಗೆಳೆಯಾ ||

ಕೋಪ ತಾಪ ಕಳೆದು ಬಿಟ್ಟೆ
ಸಹನೆ ಒಂದೇ ತಳೆದು ಬಿಟ್ಟೆ
ನೀನ್ಯಾಕ ನನ ಬಿಟ್ಟೆ / ನಂಬಿ
ನಿನ್ನ ನಾ ಕೆಟ್ಟೆ ಗೆಳೆಯಾ ||

ಹಾದಿ ಬೀದಿ ಸುತ್ತೋದ ಬಿಟ್ಟೆ
ಎಲ್ಲಾ ಸಮಯ ನಿನಗೆ ಕೊಟ್ಟೆ
ನೀನ್ಯಾಕ ನನ ಬಿಟ್ಟೆ /ನಂಬಿ
ನಿನ್ನ ನಾ ಕೆಟ್ಟೆ ಗೆಳೆಯಾ ||

ತೇಜಾವತಿ ಹೆಚ್. ಡಿ. 
.
.

೧೬) ಸಾಲ ಬೇಡ ನನ್ನಪ್ಪ .

ಸಿರಿತನ ಸಿಗಲಿಲ್ಲ //ಬಡತನ ತಪ್ಪಲಿಲ್ಲಾ //
ದುಡಿದುಡಿದು ಸಾಕಾತು//ನನ್ನಪ್ಪಗ//
ಕಾಲೆಲ್ಲಾ ಸವೆದಾವ ಈ ಮನಿಗೆ//

ಅಣ್ಣನ ಮದುವೆಯಾತು//ತಂಗಿಯ ತೊಟ್ಲ ಹೊಯ್ತು //
ಸಾಲದ ಹೊರೆಯು ತಲಿಮ್ಯಾಲ //ನನ್ನಪ್ಪಗ//
ಸಾಲಗಾರ ನಿಂತಾರ ಮನಿ ಮುಂದ//

ಬಡ್ಡಿಗೆ ಬಡ್ಡಿ ಹಾಕ್ಯಾರ ಚಕ್ರಬಡ್ಡಿ//
ಕೂಡಿಟ್ಟ ದುಡ್ಡು ಖಚಾ೯ದರೂ //ನನ್ನಪ್ಪಗ //
ಸಾಲ ತಪ್ಪಲಿಲ್ಲ ಮನಿಯಾಗ//

ಅಳಬ್ಯಾಡ ನನ್ನಪ್ಪಾ// ಕಣ್ಣೀರ ಸುರಿಸಬ್ಯಾಡ // 
ಜೊತೆಯಾಗಿ ಇದ್ದೇವಿ ನಿನ್ನ ಜೀವಕ//
ಸಾಲಕ ಹೆದರಿ ಸಾಯಬೇಡಾ//

ಬಿತ್ತಿದ ಬೆಳೆ ಒಣಗಿ//ಫಲ ಕೈಗೆ ಬರದಂಗಾತು//
ಬರಗಾಲ ಬಿದ್ದೈತಿ ದೇಶದ ಮ್ಯಾಗ// ನನ್ನಪ್ಪ//
ಸಾಲಕ ಹೆದರಿ ಸಾಯಬೇಡಾ//

ಹಗಲು ರಾತ್ರಿ ದುಡಿದರೂ ನಮಗೇನು ಕಮ್ಮಿ//
ಮಳೆಬಿದ್ರ ಬೆಳೆ ಫಲವ ಕೊಟ್ಟಾವು//ನನ್ನಪ್ಪ//
ಬಡತನವು ನೀಗಿತು ಮನಿಯಾಗ //

ಬೀಸೈತಿ ಬಿರುಗಾಳಿ ಕೆಂದೂಳ ಮುಗಿಲೇರಿ //
ಆಕಾಶ ಭೂಮಿ ಒಂದಾಗಿ ಸುರಿದೈತಿ//ಮಳೆರಾಯ//
ಬರಗಾಲ ದೂರ ಮಾಡ್ಯಾನ//

ಹಳ್ಳ ಕೊಳ್ಳ ಹರಿದಾವು// ಕೆರೆ ಕಟ್ಟೆ ತುಂಬ್ಯಾವು
ಭೂತಾಯಿ ನಕ್ಕಾಳ ಹಸಿರಾಗಿ//ನನ್ನಪ್ಪ//
ರಾಶಿ ರಾಶಿ ದಾನ್ಯ ಕೊಟ್ಟಾಳ //

ಡಾ|| ಆಯ್.   ಎಫ್ .  ಮಳಗಿ 
.
.
17 ) ಭೂತಾಯಿ

ಓಕುಳಿಯ ರಂಗು ಚೆಲ್ಯಾನ
ಮುಗಿಲಾಗ ಮೂಡಿದ ರವಿಯು/
ಮಲಗಿದ ಮಕ್ಕಳ ಎಬಿಸೈತಿ
ಹಕ್ಕಿಗಳ ಹಾಡಿನ ದನಿಯು/

ವರುಷದ ದಗದಿನ ಬೆವರೀಗೆ
ಕರುಣದಿ ಫಲವ ನೀಡೈತಿ ಸುಗ್ಗಿ/
ಮನೆ ಮಂದಿಯ ಮನಸಿನ್ಯಾಗ
ಎಂತಾ ಖುಷಿಯು ತುಂಬೈತಿ ಹಿಗ್ಗಿ/

ಕಣ್ಣಾಗ ಕಣ್ಣಿಟ್ಟು ಕಾದಿದ್ದ ಪೈರು
ಹಣ್ಣಾಗಿ ಸಂಪತ್ತು ತೂಗೈತಿ/
ರೊಟ್ಟಿಯ ಗಂಟು ಕಟ್ಟಿದ ಜೀವ
ಎದೆ ತುಂಬಿ ಹಾಡ ಹಾಡೈತಿ/

ರಾಮಣ್ಣ ಬಾರೋ, ಸೋಮಣ್ಣ ಬಾ
ಕಾಳಿಂಗ, ಮಾಲಿಂಗ ಎತ್ತು ಹಸಿದಾವೋ/
ಹಂತಿಯ ಹೂಡಿ ದಣಿದ ಬಸವಣ್ಣ
ಹತ್ತಿಯ ಕಾಳನು ಬೇಡ್ಯಾವೋ/

ನೂರಾನಿ ಮಲಗಿದ್ಹಂಗ
ಬಿದೈತಿ ನೋಡ ಬತ್ತದ ರಾಶಿ/
ಅನ್ನ ನೀಡಿದ ಭೂತಾಯಿಗೆ
ನಮಿಸೋಣ ಶರಣೆಂದು ಸಿಂಗರಿಸಿ/

ಶ್ರೀಮತಿ. ಶಕುಂತಲಾ ಎಫ್ ಕೋಣನವ
.
.
18 ) ನನ್ನಾ ಸರದಾರ

ಹುರಿ ಮೀಸೆ ಹೈದ ಬೇಟೆ ಹುಲಿಯಂಥಾ ದೇಹಾ
ಇವನ್ಕಂಡ್ರೆ ನಂಗ್ಯಾಕೋ ವಿಪರೀತ ಮೋಹಾ

ಮಿಡಿ ಹಾವಿನಾಂಗಾ ಮಿಂಚ್ಯಾವೆ ಗಲ್ಲ
ಹೂವೊಂದು ನಾಚಿ ಮುಖ ಮುಚ್ಚಿತಲ್ಲ

ಹೊಳೆಯ ದಂಡೆಗೆ ದನಕರುಗಳ ಹೊಡೆದು ಬಂದ
ಹತ್ತಾರು ಹೆಂಗಳೆಯರ ಕಂಗಳಿಗೆ ತಂಪನ್ನ ತಂದ

ಹೊಲಗದ್ದೆ ಬದುವಿನಲಿ ಕೆಲಸ ಮಾಡಲಿ ನಿಂದ
ಹರವಾದ ಎದೆ ಕಂಡು ಹಿಗ್ಯಾವೆ ಹರೆಯದ ವೃಂದ

ನಾನವನ ಸೆಳೆದೆ ಮುಡಿದು ಸೂಜಿಮಲ್ಲಿಗೆ
ಸರಸಾದ ಮಾತಿನಲಿ ಸಮರಿಲ್ಲ ಅವಗ
ತಿದ್ದಿದಾ ಸಿರಿಗಂಧ ಅವ ಸಾವಿರದ ಒಳಗೆ
ನೆನೆದಾಗ ಸುಳಿದಾವ ತಂಗಾಳಿ ಹೃದಯದಾ ಬಳಿಗೆ

ಪರಸಿವನ ಪರುಷೆಯಲಿ ಪಾರಿಜಾತದ ಹಾರ
ಪರಮ ಭಕುತಿಯಲಿ ಪಿಡಿದು ಪೂಜಿಸಿದ 

ಪಟ್ಟೆ ಪೀತಾಂಬರದ ಪಂಚೆಯಲಿದ್ದ ಚತುರ
ಪ್ರೀತಿಯಲಿ ಪುಷ್ಪವಿತ್ತೆನಗೆ ಪರಿಣಯಕೆ ಕರೆಕೊಟ್ಟ ಧೀರ

ಬಾಸಿಂಗ ಬಿಗಿದು ಬಂದಾನಾ ಸರದಾರ
ಪ್ರೀತಿಯ ಚಾಮರವ ಬೀಸಿದ ಗೆಣೆಕಾರ

ವರುಷವೊಂದರಲೆ ನನ್ನ ಮಡಿಲ ತುಂಬಿದ ಶೂರಾ
ಮುಕ್ಕಣ್ನ ಕರುಣೆ ನನಗಿವ ಸಿಕ್ಕಿದಾ ಮುತ್ತಿನ ಹಾರ

ರಚನೆ - ನಾಗಲಕ್ಷ್ಮಿ ಪ್ರಸನ್ನಕುಮಾರ್
.
.
19) 
ಜನಪದ ಶೈಲಿಯ ಹಾಡು:- ತೊಟ್ಟಿಲ ಕಂದ


ತಾನಿ ತಂದಾನೊ ತಾನೊ ತಂದನಾನೋ
ತಾನಿ ತಂದಾನೊ ತಾನೊ ತಂದನಾನೋ...
.
ತೊಟ್ಟಿಲ ಕಂದನು ನಗತಾನಾ
ಬೆಳ್ಳಿ ಬಟ್ಟಲಿನ್ಹಂಗ ಹೊಳಿತಾನಾ
ತೊಟ್ಟಿಲ ಕಂದನು ನಗತಾನಾ
ಆ ದ್ಯಾವ್ರೇ ತೊಟ್ಲಲ್ಲಿ ಮಲಗ್ಯಾನಾ

ಅವ್ವನ ನೋವನ್ನು‌ ಮರಿಸ್ಯಾನಾ
ಅಪ್ಪನ ದಣಿವನ್ನು ಕಳೆದಾನಾ
ಅಣ್ಣನ ಆಟಕ್ಕ ಕರಿತಾನಾ
ಜೀವ್ನದ ಕಂತೆಯನ್ನು ಇಳಿಸ್ಯಾನಾ

ಹಸಿವಾದ್ರ ಅಮ್ಮಾ..s ಎಂದು ಅಳತಾನಾ
ಅವ್ವನು ಓಡೋಡಿ ಬರತಾಳಾ
ಸೆರಗಿನಡಿಯಿಂದ ಹಾಲುಡಿಸ್ತಾಳಾ
ಮುದ್ದು ಮಗಿನ ಹೊಟ್ಟಿ ತಣಿಸ್ತಾಳಾ

ಚುಕ್ಕಿಗಳ ಬೆರಳಿಂದ ಎಣಿಸ್ತಾನಾ
ಚಂದ್ರಮನಾ ನೋಡಿ ನಗತಾನಾ
ತೊಟ್ಟಿಲಿಗೆ ಕಾಲಿಂದ ಒದಿತಾನಾ
ಬೆಳ್ಳಿಗೆಜ್ಜೆ ಸದ್ದು ಕೇಳಿ‌ ನಲಿತಾನಾ //ತೊಟ್ಟಿಲ ಕಂದನು ನಗತಾನಾ//

ರಚನೆ : ತುಳಸಿ ಭಟ್ (ಸಿಂಧು ಭಾರ್ಗವ್ | ಬೆಂಗಳೂರು)
.
20)
ಮರೆಯಾದ ನನ್ನವ್ವ 
*****************

ತಾಯಿ ಇಲ್ಲದ ತವರನ್ನು  ನೆನೆಯುತ್ತ 
ಕಂಬನಿ ಕೋಡಿ ಹರಿದಾವ /ಮನದೊಳಗೆ 
ಅವ್ವನ ಮೊಗವೇ ಕಂಡಾವ ||

ಪ್ರೀತಿಯ ಹರಿಸಿದ ಅವ್ವನು ಈಗಿಲ್ಲ 
ಎಂಬುದ ಮನವದು ಸಹಿಸಲ್ಲ /ನಿತ್ಯವೂ 
ಅವಳದೇ ನೆನಪು ದಿನವೆಲ್ಲ ||

ಹೊತ್ತಾರೆ ಎದ್ದು ನಿತ್ಯದ ಕೆಲಸವನು 
ನಗುತಲಿ ಮುಗಿಸುವ ನನ್ನವ್ವ /ಇಂದಿಗೆ  
ನೆನಪಾಗಿ ಕಾಡುವಳು ಮನದಾಗ ||

ಮೌನದಿ ಮಾತುಗಳ ಪೋಣಿಸಿದ ಅವ್ವನನು
ಅರಿಯದೆ ಹೋದೇವು ನಾವಾಗ /ಬಾಳಿನಲಿ 
ಮರೆಯೆವು ಅವಳನ್ನು ಬದುಕಾಗ ||

ಅತ್ತಾಗ ಕಣ್ಣೊರೆಸಿ ಮುದ್ದಿಸಿದ ನನ್ನವ್ವ 
ಇಂದೀಗ ಮರೆಯಾಗಿ ಹೋಗ್ಯಾಳ /ಬಾನಲ್ಲಿ 
ತಾರೆಯರ ಕೂಡಿ ನಗುತಾಳ||

ನೀ ತೋರಿದಾ ದಾರಿ  ಬದುಕಿಗೆ ಆಸರೆಯು
ಆ ಹಾದಿಯಲ್ಲೇ ನಡೆದೇನ/ನನ್ನವ್ವ
ಪ್ರತಿ ಕ್ಷಣವು ನಿನ್ನನ್ನ ನೆನದೇನ||

ಆಶಾ ಮಯ್ಯ ಊರು : ಪುತ್ತೂರು 
.
.
21))
ಜಾನಪದ ಗೀತೆ ಶೀರ್ಷಿಕೆ  : ಉಳಿಸಿ ಬೆಳೆಸಿ 

ಬೇಸಿಗೆಯ ಬಿಸಿಲಝಳ ಹೆಚ್ಚಿ ಎಲ್ಲೆಡೆಗೆ 
ಭೂತಾಯಿಯೆ ಬಸವಳಿದು ಕುಂತಾಳೋ |ನಂಜುಂಡ 
ಬಾಯಾರಿ ನೀರಿಗಾಗಿ ಬಾಯ್ಬಿಟ್ಟಳೋ 

ಹನಿ ನೀರು ಸಿಕ್ತಿಲ್ಲ ಗಿಡ ಮರಗಳಿಗೆಲ್ಲ 
ಎಲೆಯುದುರಿ ಬೋಳು ಬೋಳಾಯ್ತೋ| ಹೇ ಶಿವನೆ 
ನೆರಳಿಲ್ಲದೆ ಧಗೆ ಹೆಚ್ಚಿ ನಿಲದಂಗಾಯ್ತೋ 

ಕೊಳವೆ ಬಾವಿ ಬರಿದಾಗಿ ಹೋಯ್ತಲ್ಲ 
ಆಳಕ್ಕೆ ಕೊರೆದರು ಹನಿ ನೀರು ಸಿಗಲಿಲ್ಲ | ಭಗವಂತಾ 
ಅಂತರ್ಜಲ ಮಟ್ಟವು ಕೆಳಕ್ಕಿಳಿಯಿತಲ್ಲ 

ಮಂದಿ ಕೇಳೋದಿಲ್ಲ ಪ್ರಕೃತಿ ಉಳೀಲಿಲ್ಲ 
ಗಿಡಮರ ಒಂದನ್ನೂ ಯಾರು ಬೆಳೀತಿಲ್ಲ | ಭೂಮಿಯ 
ತಾಪವು ದಿನ ದಿನವೂ  ಹೆಚ್ಚುತ್ತಿದೆಯಲ್ಲ 

ಹಸಿರೇ ಇಲ್ಲದಿರೆ ಉಸಿರು ಉಳಿದೀತೇ 
ಹೃದಯ ಕಾಯಿಲೆಗೆ ಜೀವ ತುತ್ತಾದಿತೇ | ಲೋಕದಲಿ 
ಮನುಜನ ವಿನಾಶಕ್ಕೆ ನಾಂದಿಯಾದೀತೇ 

ನೆಡಿರಣ್ಣ ಗಿಡಗಳ ಉಳಿಸಿರಿ ಮರಗಳ 
ನಾಳೆ ಸಾಯಗೊಡದಿರಿ ಕಂದಮ್ಮಗಳ | ಸುಜನರೇ 
ತೊಟ್ಟರೆ ಪಣವನು ನಮಗೆ ಉಳಿಗಾಲ 

- ಹರಿನರಸಿಂಹ ಉಪಾಧ್ಯಾಯ .ಬೆಂಗಳೂರು 
.
.
22))

●*ಒಕ್ಕಲಿಗರ ಮನೆ ಬದುಕು*●
      ~~~~~~~●~~~~~~~

ಹೊತ್ತಾರೆ ಏಳುತ್ತ  ಹಾಳುಗಸ ಗುಡಿಸ್ಯಾರ !
ಹೊಸ್ತಿಲ ತೊಳೆದು ಬೊಟ್ಟಿಕ್ಕಿ ! ಅಂಗಳದ
ಕಸವೆತ್ತಿ ಸಗಣಿ ಸಾರ್ಸ್ಯಾರ !!೧!!

ಸಗಣಿ ಬಳಿದಂಗ್ಳಕ್ಕೆ ರಂಗಾ ನೀನೊಲಿಯೆಂದು !
ಬಾಗಿ ರಂಗೋಲಿ ಹಾಕ್ಯಾರ ! ಹಿತ್ತಲಿನ 
ಹೂವಿಟ್ಟು ಸಿಂಗಾರ ಮಾಡ್ಯಾರ !!೨!!

ಅನ್ನ ಬೇಯ್ಸೋ ಒಲೆಗೆ ಊರ್ಮಂಜು ಬಳಿಯುತ್ತ !
ಭಸ್ಮ ಕುಂಕುಮಾ ಹಚ್ಚ್ಯಾರ ! ಕೈಮುಗಿದು
ಒಲಿಹೊತ್ತ್ಸಿಅಂಬಲಿ ಬೇಯ್ಸ್ಯಾರ !!೩!!

ಅತ್ತ ಮನಿಗಂಡ್ಮಕ್ಳು ಸಗಣಿ ಕಸ ತೆಗೆದಾರ !
ಎತ್ತಿನ ಬೆನ್ಮೈಯ್ಯ ಉಜ್ಜುತ್ತಾ ! ಹಿಟ್ತಿನ್ಸಿ
ಹುಲ್ಲು ನೀರುಣಿಸಿ ಬಂದಾರಾ !!೪!!

ಅಂಬಾಲಿ ಉಂಡ್ಬಿಟ್ಟು ಗಳೇವಾ ಕಟ್ಬಿಟ್ಟು !
ಉಳುಮೆ ಕಾಯ್ಕಕ್ಕೆ ಹೊಂಟಾರ !! ಏನ್ಚಂದ
ಬಸವಾನ ಹಿಂದಿಂದ ರೈತಣ್ಣ !!೫!!

ಇತ್ತ ಮನಿ ತಾಯವ್ವ ಮನಿಕೆಲ್ಸ ಮುಗಿಸ್ಯಾಳ !
ರೊಟ್ಟಿ ಪಲ್ಯಾ ಹಿಂಡಿ ಹುಳಿಬುತ್ತಿ ! ತಲಿಮ್ಯಾಲೆ
ಇಟ್ಕೊಂಡು ಹೊಲಕಾ ಹೊಂಟಾಳ !!೬!!

ಮನಿಗಿಂತ ಅಡವಿ ಹಡೆದವ್ವ ಎನ್ನುತ್ತ !
ಬೈಗಾಗೊ ತನಕಾ ದುಡಿತಾರ ! ಮನೆಗ್ಬಂದು
ಕಣ್ತುಂಬ ನಿದ್ದಿಯ ಮಾಡ್ತಾರ !!೭!!

---ನಾಗರತ್ನಾತ್ಮಜೆ (ಮಂಜಮ್ಮ ಎ ಬಿ)
ಹೊಳೆಸಿರಿಗೆರೆ
.
.
ಸಂಗ್ರಹ : ನವಪರ್ವ ಫೌಂಡೇಶನ್ (ರಿ.) ಬೆಂಗಳೂರು
ನಡೆಸಿದ ರಾಜ್ಯಮಟ್ಟದ ಜಾನಪದ ಸಾಹಿತ್ಯ ರಚನಾ ಸ್ಪರ್ಧೆ ೨೦೨೦ ಎಪ್ರಿಲ್ ೨೫.

ಕರ್ನಾಟಕ ಜಾನಪದ ಸಾಹಿತ್ಯ ಜನಪದ ಹಾಡುಗಳ ಸಂಗ್ರಹ ೨೦೨೦



ಸಾಹಿತ್ಯ ಸಂಕ್ರಾಂತಿ" - ಎಪ್ರಿಲ್ ತಿಂಗಳ "ರಾಜ್ಯಮಟ್ಟದ ಜನಪದ ಶೈಲಿಯ ಹಾಡು ರಚನಾ ಸ್ಪರ್ಧೆ ಹಾಗು  "ರಾಜ್ಯಮಟ್ಟದ ಜನಪದ ಕಾವ್ಯ ಪುರಸ್ಕಾರ" ಸಮಾರಂಭ ಬೆಂಗಳೂರು

                               ‌‌‌‌‌‌‌ ಜನಪದ ನೃತ್ಯ

ಜನಪದವೇ ಸರ್ವಪದ




ನಲ್ಮೆಯ ಕವಿಮನಗಳೇ,
ದಿನಾಂಕ 25-04-2020 ಶನಿವಾರ ದಂದು "ಸಾಹಿತ್ಯ ಸಂಕ್ರಾಂತಿ" - ಎಪ್ರಿಲ್ ತಿಂಗಳ "ರಾಜ್ಯಮಟ್ಟದ ಜನಪದ ಶೈಲಿಯ ಹಾಡು ರಚನಾ ಸ್ಪರ್ಧೆ ಹಾಗು  "ರಾಜ್ಯಮಟ್ಟದ ಜನಪದ ಕಾವ್ಯ ಪುರಸ್ಕಾರ" ಕ್ಕೆ ಜನಪದ ಶೈಲಿಯ ಹಾಡುಗಳನ್ನು ಆಹ್ವಾನಿಸಲಾಗಿತ್ತು.

ಒಟ್ಟು ೯೧ ಸ್ಪರ್ಧಿಗಳು ಭಾಗವಹಿಸಿದ್ದರು. ಅದರಲ್ಲಿ ಒಂದಷ್ಟು ಸ್ಪರ್ಧಿಗಳು ನಿಯಮವನ್ನು ಉಲ್ಲಂಘಿಸಿದ್ದರು. ಮೂರು ಸುತ್ತಿನ ಆಯ್ಕೆ ಪ್ರಕ್ರಿಯೆ ನಡೆದ ಮೇಲೆ ೨೦ ರಿಂದ ಒಟ್ಟು ೧೨ ಸ್ಪರ್ಧಿಗಳನ್ನು ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ. ಈ ಕೆಳಗಿನಂತಿವೆ.

"ಜನಪದ ಕಾವ್ಯ ಪುರಸ್ಕಾರಕ್ಕೆ ಭಾಜನರಾದವರು"
ಪ್ರಥಮ ಬಹುಮಾನ
♦️ ದಿನೇಶ್ ಎನ್.
ದ್ವಿತೀಯ ಬಹುಮಾನ
♦️ ಸ್ನೇಹಾ ಎಮ್.ಎಸ್.
ಮತ್ತು
♦️ಪಕ್ಕೀರಪ್ಪ ತಾಳಗುಂದ
ತೃತೀಯ ಬಹುಮಾನ
♦️ ಲಿಂಗೇಶ್ ಎಚ್. ಬಿದರಕುಂದಿ
ಮೇಲಿನ ನಾಲ್ವರೂ ಬಹುಮಾನವನ್ನು ಪಡೆದು "ಜನಪದ ಕಾವ್ಯ ಪುರಸ್ಕಾರ" ಕ್ಕೆ ಭಾಜನರಾಗಿರುತ್ತಾರೆ.
👑🎓✍️📚😊📚😊✍️📚😊🎓👑


ಹಾಗೆಯೇ ನಿರ್ಣಾಯಕರ ಮೆಚ್ಚುಗೆ ಪಡೆದ ಜನಪದ ಶೈಲಿಯ ಹಾಡುಗಳನ್ನು ಬರೆದ ಸ್ಪರ್ಧಿಗಳು :
೧) ಈಶ್ವರ ಕುರಿ
೨) ಡಾ. ಇಮಾಮ್ ಎಫ್ ಮಳಗಿ
೩) ಲತಾ ಬನಾರಿ
೪) ಲಕುಮಿಕಂದ ಮುಕುಂದ

೫) ಮಹೇಶ್ ಹೆಗಡೆ
೬) ಮಂಜುನಾಥ್ ಶಿವಪುರ
೭) ಶ್ರೀಮತಿ ಜೋಶಿ
೮) ವಿಮಲಾ ಪಟಗಾರ
ಇವರಿಗೆ ಪುಸ್ತಕಗಳನ್ನು ಮತ್ತ  ಇ- ಪ್ರಮಾಣಪತ್ರಗಳನ್ನು 
ಬಹುಮಾನವಾಗಿ ನೀಡಲಾಗುವುದು.

   ಭಾಗವಹಿಸಿದ ಹಾಗು ವಿಜೇತ ಸರ್ವ ಕವಿಮನಸ್ಸುಗಳಿಗೆ ಮನದುಂಬಿ ಅಭಿನಂದನೆಗಳನ್ನು ಸಂಸ್ಥೆಯು ತಿಳಿಸುತ್ತಿದೆ.🌷
ನವಪರ್ವ ಫೌಂಡೇಶನ್ (ರಿ.) ಬೆಂಗಳೂರು
ಅಧ್ಯಕ್ಷರಾಗಿ

ಕೆ.ಎಸ್. ಮುರುಳೀಧರ್ 
+91 99455 51423