Thursday 31 January 2019

ವರಕವಿ ಬೇಂದ್ರೆಯವರ ಲೇಖನ

ಲೇಖನ: ನಾಕುತಂತಿಯ ನಾಯಕ ದ.ರಾ.ಬೇಂದ್ರೆ


ವರಕವಿ ಬೇಂದ್ರೆ ಎಂಬ ನಾಮಾಂಕಿತರಾದ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು ೧೮೯೬ ಜನವರಿ ೩೧ ರಂದು ಧಾರವಾಡದ ಬ್ರಾಹ್ಮಣ ಕುಟುಂಬದಲ್ಲಿ ರಾಮಚಂದ್ರ ಭಟ್, ಮತ್ತು ಅಂಬಿಕೆ ಯವರ ಪುತ್ರನಾಗಿ ಜನಿಸಿದರು. ವೃತ್ತಿಯಲ್ಲಿ ಶಿಕ್ಷಕರಾಗಿದ್ದ ಇವರು ಅಂಬಿಕಾತನಯದತ್ತ ಎಂಬ ಕಾವ್ಯನಾಮದಡಿಯಲ್ಲಿ ಅನೇಕ ಕವಿತೆ ಕಥೆ, ಅನುವಾದ, ವಿಮರ್ಷಾತ್ಮಕ ಕಾವ್ಯಗಳನ್ನು ರಚಿಸಿದ್ದಾರೆ. ಅಂಬಿಕಾತನಯದತ್ತ ಎಂದರೆ "ಸಾರ್ವತ್ರಿಕ ಒಳದನಿ" ಎಂಬ ಅರ್ಥವನ್ನು ನೀಡುತ್ತದೆ. ಕಾಲೇಜು ಜೀವನದಲ್ಲಿಯೇ ಕವಿತೆಗಳನ್ನು ಬರೆಯುವ ಹವ್ಯಾಸ ರೂಢಿಸಿಕೊಂಡಿದ್ದ ಇವರು ೧೯೧೮ರಲ್ಲಿ ಮೊದಲ ಕವನವು "ಪ್ರಭಾತ" ಎಂಬ ಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು. ಅಲ್ಲದೆ ೧೯೨೨ ರಲ್ಲಿ "ಕೃಷ್ಣಕುಮಾರಿ" ಎಂಬ ಮೊದಲ ಕಾವ್ಯ ಸಂಕಲನ ಪ್ರಕಟವಾಗಿತ್ತು.  ಅದರಿಂದಾಚೆ ಗರಿ, ಕಾಮಕಸ್ತೂರಿ, ಸೂರ್ಯಪಾನ, ನಾದಲೀಲೆ, ನಾಕು ತಂತಿ, ಮೊದಲಾದ ಕವನಸಂಕಲನಗಳನ್ನು ಪ್ರಕಟಿಸಿದರು‌. ಅವರು ತಮ್ಮೊಳ ಹೊಕ್ಕು ನೋಡುವ ಪರಿ ಅದ್ಭುತವಾಗಿ ಅವರ ಕವಿತೆಗಳಲ್ಲಿ ಮೂಡಿಬಂದಿದೆ.

೧೯೭೪ರಲ್ಲಿ ಇವರು ಬರೆದ ನಾಕುತಂತಿ ಕವನಸಂಕಲನ ಕ್ಕೆ ಕೇಂದ್ರ ಸರ್ಕಾರದಿಂದ ಜ್ಞಾನಪೀಠ ಪ್ರಶಸ್ತಿಯು ಲಭಿಸಿತು. ಕವಿತೆಗಳನ್ನಲ್ಲದೇ ಸಂಶೋಧನಾತ್ಮಕ ಲೇಖನಗಳನ್ನು, ವಿಮರ್ಶೆಗಳನ್ನು ,ನಾಟಕಗಳನ್ನು, ಅನುವಾದಗಳನ್ನು ಬರೆಯುತ್ತಿದ್ದರು. ಅಲ್ಲದೇ ಆಗಿನ ಕಾಲದಲ್ಲಿಯೇ  ಅಂದರೆ ಸರಿಸುಮಾರು ೧೯೨೧ ರಲ್ಲಿಯೇ "ಗೆಳೆಯರ ಗುಂಪು " ಎಂಬ ತಂಡವನ್ನು ಕಟ್ಟಿಕೊಂಡು ಗೆಳೆಯರೊಂದಿಗೆ ಸಾಹಿತ್ಯದ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.

ಆಗೆಲ್ಲ ಬ್ರಿಟಿಷ್ ಸರ್ಕಾರವಿದ್ದ ಕಾಲ. ಬೇಂದ್ರೆಯವರ "ಗರಿ" ಕವನಸಂಕಲನ ದಲ್ಲಿ "ನರಬಲಿ" ಎಂಬ ಕವನವು ಬ್ರಿಟಿಷ್ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿತ್ತು. ಕಾರಣ ಸ್ವಾತಂತ್ರ್ಯದ ಕಿಚ್ಚು ಹಚ್ಚಿಸುವಂತಹ ಕವನವನ್ನು ಬರೆದು ಅವರು ಪ್ರತಿಯೊಬ್ಬ ದೇಶಭಕ್ತನ ಮನದಲ್ಲಿ ಆಕ್ರೋಶ ಹುಟ್ಟುವಂತೆ ಮಾಡಿದ್ದರು. ಅಪಾರ ದೇಶಪ್ರೇಮಿಯಾದ ಬೇಂದ್ರೆಯವರು ತಮ್ಮ ಕವಿತೆಗಳ ಮೂಲಕವೇ ಒಂದು ರೀತಿಯಲ್ಲಿ ಸ್ವಾತಂತ್ರ್ಯ ಹೋರಾಟ ನಡೆಸುತ್ತಿದ್ದರು. ಚಳುವಳಿಗಳಲ್ಲಿ ಭಾಗವಹಿಸಿ ಸೆರೆಮನೆವಾಸ ಕೂಡ ಅನುಭವಿಸಿದ್ದರು. ಕ್ರಾಂತಿಕಾರಿ ಕವಿತೆಗಳನ್ನು ಬರೆದು ಪ್ರತಿಯೊಬ್ಬ ವ್ಯಕ್ತಿಗೂ ತಲುಪುವಂತೆ ಮಾಡುತ್ತಿದ್ದರು.

ಅಲ್ಲದೇ ಕುಣಿಯೋಣು ಬಾರಾ, ಪಾತರಗಿತ್ತಿ ಪಕ್ಕ ನೋಡಿದೇನಾ ಅಕ್ಕ (ಮಕ್ಕಳಗೀತೆಗೆ ಇಂದಿಗೂ ಶಾಲೆಗಳಲ್ಲಿ ಮಕ್ಕಳು ನೃತ್ಯ ಮಾಡುತ್ತಾರೆ.) ಇಳಿದು ಬಾ ತಾಯೇ ಇಳಿದು ಬಾ....(ದೇಶಭಕ್ತಿ ಹೆಚ್ಚಿಸುವ ಗೀತೆ) ನಾನು ಬಡವಿ ಆತ ಬಡವ ಒಲವೇ ನಮ್ಮ ಬದುಕು...(ಎಂಬ ಪ್ರೇಮಗೀತೆ, ಜೀವನದ ಮೌಲ್ಯವನ್ನು ಸಾರುವ ಕವಿತೆಗಳು)
" ನನ್ನ ಹರಣ ನಿನಗೆ ಶರಣ, ಸಕಲ ಕಾರ್ಯ ಕಾರಣ....
ಸರಸ ಜನನ ವಿರಸ ಮರಣ , ಸಮರಸವೇ ಜೀವನ...!! ಎಂಬ ಗೀತೆಯಾಗಲಿ, "ನೀ ಹೀಂಗ ನೋಡಬ್ಯಾಡ ನನ್ನ( ಮಗ ತೀರಿಹೋದಾಗ ಹಾಡುವ ಹಾಡು) ತುಂಬಾ ಹೃದಯ ಸ್ಪರ್ಶಿಯಾಗಿದೆ. " ನೀನು, ನಾನು, ಆನು ತಾನು... ನಾಕೇ ನಾಕುತಂತಿ..."  "ಬಂಗಾರದೆಲೆಯ ಮೇಲೆ ತಂಗಾಳಿ ಬೀಸಿಬಂತು...", " ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ...",  "ಬಾ ಬಾರೋ.. ಬಾರೋ ಬಾರೋ ಬಾರೋ ಸಾಧನಕೇರಿಗೆ.. ಮರಳಿ ನಿನ್ನೀ ಊರಿಗೆ....." ಎಂಬ ಹಾಡಿನಿಂದ ಸುಮಧುರ ತರಂಗದ ರೀತಿಯಲ್ಲಿ ನಯವಾಗಿ, ಹಿತವಾಗಿ ಕವಿಮನಸ್ಸುಗಳನ್ನು ಸೆಳೆಯುತ್ತಾರೆ. ಅದೊಂದು ಬೇರೆಯದೇ ಲೋಕಕ್ಕೆ ಕರೆದುಕೊಂಡು ಹೋಗುತ್ತಾರೆ. ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೇ ಬೇರೂರಿದೆ. ಇಂದಿಗೂ ಜನ ಆಗಾಗ ಗುನುಗುನಿಸುತ್ತಾ ಇರುವುದು ವಿಷೇಶವಾಗಿದೆ. ಸಿ.ಅಶ್ವತ್, ಮೈಸೂರು ಅನಂತಸ್ವಾಮಿ, ಅವರ ಪುತ್ರರಾದ ರಾಜು ಅನಂತಸ್ವಾಮಿಯವರು, ಎಂಡಿ. ಪಲ್ಲವಿ ಯವರ ಧ್ವನಿಯಲ್ಲಿ ಬೇಂದ್ರೆಯವರು ಬರೆದ ಅನೇಕ ಹಾಡುಗಳು ಹೊನ್ನಿನಂತೆ ಹೊಳೆಯಲು ಶುರುಮಾಡಿತು. ಆಗೆಲ್ಲ ಕ್ಯಾಸೆಟ್ ನಲ್ಲಿ ಹಾಡು ಕೇಳುವ ಕಾಲ. ಇವರ ಹಾಡುಗಳು ಕ್ಯಾಸೆಟ್ ಕಂಪೆನಿಗಳಿಗೆ ಅಪಾರ ಕೀರ್ತಿ,ಯಶಸ್ಸು , ಆರ್ಥಿಕವಾಗಿಯೂ ಲಾಭ ತಂದು ಕೊಟ್ಟಿತು.. "ಧಾರವಾಡದ ಅಜ್ಜ" ಎಂದೇ ಕರೆಯಲ್ಪಡುವ ಇವರು ಈಗಿನ ಯುವಕವಿಗಳಿಗೆ ಸ್ಪೂರ್ತಿಯ ಚಿಲುಮೆ. ಇಂದಿನ ಜಾಲತಾಣಗಳ ಯುಗದಲ್ಲಿ ಅನೇಕ ಸಾಹಿತ್ಯ ಪ್ರೇಮಿಗಳು ಫೇಸ್ ಬುಕ್, ವಾಟ್ಸ್ ಆಪ್ ನಲ್ಲಿ ಸಾಧನಕೇರಿ , ಧಾರವಾಡದ ಅಜ್ಜ , ಕನ್ನಡಸಾಹಿತ್ಯ ಕೃಷಿ, ಎಂಬಿತ್ಯಾದಿ ಗುಂಪು ಕಟ್ಟಿಕೊಂಡು ಅವರ ನೆರಳಿನಡಿಯಲ್ಲಿ ಹೆಜ್ಜೆಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಅದರ ಮೂಲಕ ಧಾರವಾಡದ, ಹಾಗೆಯೇ ಬೇಂದ್ರೆಯವರ ಹೆಸರನ್ನು ವಿಶ್ವದಾದ್ಯಂತ ಬೆಳಗಿಸುವಲ್ಲಿ ತೊಡಗಿಸಿಕೊಂಡಿದ್ದಾರೆ‌.
  ಕನ್ನಡ ಅಲ್ಲದೇ ಮರಾಠಿ ಭಾಷೆಯಲ್ಲಿ ಕೂಡ ಅನೇಕ ಕವಿತೆಗಳನ್ನು ಬರೆದಿದ್ದಾರೆ. ಹೀಗಾಗಿ ಇವರನ್ನು "ಕನ್ನಡದ ಠಾಗೋರ್"  ಎಂದು ಕರೆಯುತ್ತಿದ್ದರು. ಹಾಗೆಯೇ ಅರಳು ಮಲ್ಲಿಗೆ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸಂವಾದ (ಮರಾಠಿ ಕೃತಿಗೆ) ಕೇಳ್ಕರ್ ಬಹುಮಾನ, ನಾಕುತಂತಿಗೆ ಕೇಂದ್ರ ಜ್ಞಾನಪೀಠ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ ಇನ್ನೂ ಅನೇಕ ಪ್ರಶಸ್ತಿಗಳು ಅವರ ಸಾಹಿತ್ಯ ಸೇವೆಗೆ ನೀಡಿದ ಗೌರವವಾಗಿದೆ. ಅಲ್ಲದೇ ಉಡುಪಿ ಅದಮಾರು ಮಠದವರಿಂದ "ಕನ್ನಡ ಕವಿಕುಲ ತಿಲಕ" ( ಕನ್ನಡ ಕವಿಗಳಲ್ಲಿಯೇ ಇವರೊಂದು ಸ್ವರ್ಣ ಮುಕುಟ) ಎಂಬ ಗೌರವಕ್ಕೆ ಪಾತ್ರರಾಗಿದ್ದರು.

ಮತ್ತೆ ಶ್ರಾವಣ ಬಂತು, ಒಲವೇ ನಮ್ಮ ಬದುಕು, ಮುಗಿಲ ಮಲ್ಲಿಗೆ, ಉತ್ತರಾಯಣ, ಹೃದಯ ಸಮುದ್ರ, ಜೀವಲಹರಿ,ನಮನ, ಉಯ್ಯಾಲೆ, ಸಖೀಗೀತ, ಸೂರ್ಯ ಪಾನ ಇನ್ನೂ ಅನೇಕ ಸಮಗ್ರ ಕಾವ್ಯಗಳನ್ನು ರಚಿಸಿದ್ದಾರೆ. "ನವೋದಯ ಸಾಹಿತ್ಯ ಚಳುವಳಿಯ ಹರಿಕಾರ" ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

 ಕವಿ, ದಾರ್ಶನಿಕ ಬೇಂದ್ರೆ ಈ ಯುಗದ ಒಬ್ಬ ಮಹಾಕವಿ. ೧೯೮೧ರ ಅಕ್ಟೋಬರ್‌ನಲ್ಲಿ ತೀರಿಕೊಂಡ ಅವರು ಕವಿಗಳಿಗೆ, ಸಾಹಿತಿಗಳಿಗೆ ಸ್ಫೂರ್ತಿಯ ಸೆಲೆ. ಎಲ್ಲಾ ಕಾಲಕ್ಕೂ ಬಾಳುವಂತಹ ಕವನಗಳನ್ನು ರಚಿಸಿದ ಕೀರ್ತಿ ಅವರದಾಗಿದೆ.
😊💐🌸🌱🌹🌻🌼🌷🌱🌿🍀📚📚📚📝
ನುಡಿನಮನ ಬರೆದವರು,
ಸಿಂಧು ಭಾರ್ಗವ್. ಬೆಂಗಳೂರು.

Monday 14 January 2019

ಲೇಖನ ಮಕರ ಸಂಕ್ರಾಂತಿ ೨೦೧೯

ಲೇಖನ: ಮಕರ ಸಂಕ್ರಾಂತಿ

*ಮಕರ ಸಂಕ್ರಮಣವೆಂದರೆ* : ಮಕರ ರಾಶಿಯಾಗಿಯು, ಸಂಕ್ರಮಣ ಎಂದರೆ ಸೂರ್ಯನು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಮಾಡುವುದು ಎಂದರ್ಥ. (ಮೇಷ ಸಂಕ್ರಮಣ, ವೃಷಭ ಸಂಕ್ರಮಣ, ಮಿಥುನ ಸಂಕ್ರಮಣ ಹೀಗೆ....) ಹಾಗಾಗಿ ಈಗ ಸೂರ್ಯನು ಮಕರರಾಶಿಗೆ ಪ್ರವೇಶ ಮಾಡಿರುವುದರಿಂದಾಗಿ ಇಂದು ಮಕರಸಂಕ್ರಮಣ.

 

*ಯಾಕೆ ಉಳಿದೆಲ್ಲಕ್ಕಿಂತ ಇಷ್ಟು ವಿಶೇಷವೆಂದರೆ* : ದೇಶದಾದ್ಯಂತ ಆಚರಿಸುವ ಹಬ್ಬಗಳಲ್ಲಿ ಮಕರಸಂಕ್ರಾಂತಿಯು ಒಂದು. ಇಂದಿನಿಂದ ಉತ್ತರಾಯಣ ಪ್ರಾರಂಭವಾಗುವುದು.  ಎಲ್ಲರಿಗೂ ತಿಳಿದಿರುವಂತೆ *ಆಯನವೆಂದರೆ* ಸೂರ್ಯನು ಚಲಿಸುವಮಾರ್ಗ, ಸೂರ್ಯನು ಕಟಕ ಸಂಕ್ರಾಂತಿಯಿಂದ ದಕ್ಷಿಣದತ್ತ ಚಲಿಸುತ್ತಿದ್ದು, ಮಕರ ಸಂಕ್ರಾಂತ್ರಿಯಿಂದ ತನ್ನ ಮಾರ್ಗವನ್ನು ಬದಲಾಯಿಸಿ, ಉತ್ತರದ ಕಡೆ ಚಲಿಸುತ್ತಾನೆ. ಕೊರೆಯುವ ಚಳಿ ಮಾಗಿತಿಂಗಳು ಮುಗಿದು ಹಗಲು ಜಾಸ್ತಿಯಾಗಿ, ಕತ್ತಲು ಕಡಿಮೆಯಾಗುತ್ತದೆ.



*ರೈತರಿಗೆ* : ಮಕರಸಂಕ್ರಮಣವು ತುಂಬಾ ವಿಶೇಷವಾದ ಸ್ಥಾನವನ್ನು ಪಡೆಯುತ್ತದೆ. ರೈತರು ಸುಗ್ಗಿ ಹಬ್ಬವೆಂದೂ ಕರೆಯುತ್ತಾರೆ. ರೈತರು ತಮ್ತಮ್ಮ ಹೊಲದಲ್ಲಿಯೇ ಬೆಳೆದ ಬೆಳೆಗಳಾದ ಅವರೆಕಾಯಿ, ಕಬ್ಬು, ಸಜ್ಜೆ, ಗೆಣಸು-ಮರಗೆಣಸು, ನೆಲಗಡಲೆ ಬದನೆಕಾಯಿ, ವಿವಿಧ ತರಕಾರಿ, ಸೇವಂತಿಗೆ , ಮಲ್ಲಿಗೆ , ಜಾಜಿ ಇನ್ನೂ ಅನೇಕ ಬಗೆಯ ಬೆಳೆಗಳನ್ನು ಕಟಾವುಮಾಡಿ ,ರಾಶಿ ಹಾಕಿ ಪೂಜೆ ಮಾಡಿ ಸಿಹಿಪೊಂಗಲ್ (ಸಿಹಿಹುಗ್ಗಿ) ಮಾಡಿ ಸೂರ್ಯದೇವನಿಗೆ ನೈವೇದ್ಯವನ್ನು ಮಾಡಿ , ಹಾಗೆಯೇ *ಎಳ್ಳು-ಬೆಲ್ಲವನ್ನು* (ಅದರಲ್ಲಿ ಬಿಳಿಎಳ್ಳು, ಬೆಲ್ಲದ ಸಣ್ಣಸಣ್ಣ ಚೂರುಗಳು, ಕಡಲೆಪಪ್ಪು ಅಥವಾ ಪುಟಾಣಿ, ಹುರಿದ ನೆಲಗಡಲೆ, ಕಬ್ಬಿನ ಚೂರುಗಳಿರುತ್ತವೆ) ಎಲ್ಲ ಬಂಧುಗಳಿಗೂ, ಸ್ನೇಹಿತರಿಗೂ ಹಂಚಿ ಬಹಳ ಹರುಷದಿಂದ, ಸಂಭ್ರಮದಿಂದ  ಹಬ್ಬವನ್ನು ಆಚರಿಸುತ್ತಾರೆ. ಸಕ್ಕರೆಅಚ್ಚುಗಳಿಂದ ಗೊಂಬೆಗಳ ಮಾಡುವುದು ಶ್ರೇಷ್ಠವಾಗಿರುತ್ತದೆ.
ಅಲ್ಲದೇ ರಾತ್ರಿಗೆ ಎತ್ತುಗಳನ್ನು ಅಲಂಕರಿಸಿ ಕಿಚ್ಚು ಹಾಯಿಸಿ ಅವುಗಳಲ್ಲಿನ ಭಯವನ್ನೂ ಓಡಿಸುತ್ತಾರೆ. ಉತ್ತರ ಕರ್ನಾಟಕದಲ್ಲಿ ಊರಿಗೆ ಊರೇ ಅಂಗಳದಲ್ಲಿ ರಂಗೋಲಿ ಬಿಡಿಸಿ ಹೂವುಗಳಿಂದ ಅಲಂಕರಿಸಿ ಸಿಹಿ ಭಕ್ಷ್ಯ ಭೋಜವ ತಯಾರಿಸಿ ಹಬ್ಬವನ್ನು ಆಚರಿಸುತ್ತಾರೆ.ದಕ್ಷಿಣ ಕನ್ನಡದಲ್ಲಿ ದೇವಾಲಯಗಳಲ್ಲಿ ವಿಶೇಷವಾದ ಪೂಜೆಗಳನ್ನು ನಡೆಸಲಾಗುತ್ತದೆ. ಉಡುಪಿ ಶ್ರೀ ಕೃಷ್ಣ ಮಠ, ಮಾರಣಕಟ್ಟೆ ಮಹಾಲಿಂಗೇಶ್ವರ ದೇವಾಲಯ, ಮಂದರ್ತಿ ದುರ್ಗಾಪರಮೇಶ್ವರಿ ದೇವಸ್ಥಾನ, ನಾಗರಾಡಿ ಇನ್ನೂ ಅನೇಕಾನೇಕ ಕಾರಣೀಕ ಕಡೆಗಳಲ್ಲಿ ಢಕ್ಕೆಬಲಿ- ಹಾಲುಹಿಟ್ಟಿನ ಸೇವೆ, ದರ್ಶಿನ ಸಿಂಗಾರಹೂವು, (ನಾಗದೇವರ ನುಡಿಸೇವೆ) ತುಲಾಭಾರ ಸೇವೆ, ಹೂವಿನ ಅಲಂಕಾರ ಸೇವೆ, ಸಿಂಗಾರ ಹೂವು, ಸೇವಂತಿಗೆ ಹೂವಿನ ಅಲಂಕಾರ, ರಂಗಪೂಜೆ,  ಸತ್ಯನಾರಾಯಣ ಪೂಜೆ, ರಥೋತ್ಸವ ನಡೆಯುತ್ತದೆ. ಕೇರಳದಲ್ಲಿ ನಲವತ್ತೈದು ದಿನಗಳ ಕಾಲ ವೃತಾಚರಣೆಯಲ್ಲಿದ್ದ ಅಯ್ಯಪ್ಪ ಭಕ್ತರು ಇರುಮುಡಿ ಕಟ್ಟಿಕೊಂಡು ಶಬರಿಮಲೆಗೆ ಹೋಗುತ್ತಾರೆ. ಹಾಗೆಯೇ ರಾತ್ರಿ ಸಮಯದಲ್ಲಿ ಭಕ್ತಾಧಿವೃಂದಕ್ಕೆ ಮಕರಜ್ಯೋತಿ ಕಾಣಿಸುವುದು ಇವತ್ತಿನ ಸಂಕ್ರಮಣಕ್ಕೆ. ತಮಿಳುನಾಡಿನಲ್ಲಿ ಪೊಂಗಲ್ ಆಚರಣೆ ಬಹಳ ವಿಶೇಷವಾಗಿ ನಡೆಯುತ್ತದೆ‌. ಆಂಧ್ರ ಪ್ರದೇಶ, ತೆಲಂಗಾಣದಲ್ಲಿಯೂ ಸಂಕ್ರಾಂತಿ ಹಬ್ಬವನ್ನು ಆಚರಿಸುತ್ತಾರೆ. ಹಾಗೂ ಉತ್ತರ ಭಾಗದಲ್ಲಿ ಗಾಳಿಪಟ ಹಾರಿಸುವುದು ಅಲ್ಲಿನ ವಿಶೇಷತೆ. ಹನ್ನೆರಡು ವರ್ಷಗಳಿಗೊಮ್ಮೆ ಬರುವ ಕುಂಭಮೇಳ ಹರಿದ್ವಾರ, ಉಜ್ಜೈನಿ, ನಾಸಿಕ್, ಹಾಗೂ ಅಲಹಾಬಾದ್ ನಲ್ಲಿ ಜರುಗುವುದು ಈ ಸಂಕ್ರಮಣ ದಲ್ಲಿಯೇ. ಈ ಭಾರಿ ಕುಂಭಮೇಳ ವಿಜ್ರಂಬಣೆಯಿಂದ ನಡೆಸಲು ಚಾಲನೆ ನೀಡಲಾಗಿದೆ. ಹಾಗೆಯೇ ಮಾಘಮೇಳ ಪ್ರಯಾಗದಲ್ಲಿಯೂ, ಗಂಗಾಸಾಗರ ಮೇಳ -ಗಂಗಾನದಿತಟದಲ್ಲಿಯೂ, ಮಕರಮೇಳ -ಒಡಿಸ್ಸಿದಲ್ಲಿ ಯೂ ನಡೆಯುತ್ತದೆ.





     *ಆಧ್ಯಾತ್ಮಿಕವಾಗಿ* : ಇಂದು ಕಪ್ಪು ಎಳ್ಳನ್ನು ದಾನ ಮಾಡುವುದು, ಪವಿತ್ರ ನದಿಯಲ್ಲಿ ಕಪ್ಪು ಎಳ್ಳಿನೊಂದಿಗೆ ಪುಣ್ಯಸ್ನಾನ ಮಾಡುವುದು, ದೇವಾಲಯದಲ್ಲಿ ಎಳ್ಳೆಣ್ಣೆಯ ದೀಪ ಹಚ್ಚುವುದು ಇವೆಲ್ಲವೂ ಪುಣ್ಯದ ಕೆಲಸವೆಂಬುದು ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಉತ್ತರಾಯಣದ ಪುಣ್ಯಕಾಲದಲ್ಲಿ ನಾವು‌ ಮಾಡಿದ ದಾನಧರ್ಮಗಳು ಜನ್ಮ ಜನ್ಮ ದಲ್ಲಿಯೂ ಸದಾ ನಮ್ಮನ್ನು ಕಾಯುವಂತೆ ಸೂರ್ಯದೇವನು ಅನುಗ್ರಹಿಸುತ್ತಾನೆ ಎಂಬುದು ವಾಡಿಕೆ.
ಈ ಶುಭದಿನದಂದು ತಿಲದಾನ, ತಿಲಾಹೋಮ, ತಿಲಭಕ್ಷಣೆ ಒಳ್ಳೆಯದು.



*ಎಳ್ಳು ಬೆಲ್ಲ ನೀಡುವುದರ ಒಳಾರ್ಥ* : ಸುಗ್ಗಿ ಕಾಲದಲ್ಲಿ ಚಳಿ ಅಧಿಕವಾಗಿರುತ್ತದೆ. ಎಳ್ಳಿನಲ್ಲಿ ಎಣ್ಣೆಯ ಅಂಶವಿರುವುದು ಎಲ್ಲರಿಗೂ ತಿಳಿದಿದೆ. ಹಾಗಾಗಿ ಅದನ್ನು ಬೆಲ್ಲದೊಂದಿಗೆ ಸೇವಿಸಿದರೆ ಮೂಳೆಗಳಿಗೆ ಕ್ಯಾಲ್ಸಿಯಂ ಹಾಗೂ ಎಣ್ಣೆಯ ಅಂಶ ನಮ್ಮ ಚರ್ಮವನ್ನು ಸುಕ್ಕುಗಟ್ಟಲು ಬಿಡದೆ ಚರ್ಮದ ಕಾಂತಿ ಹೆಚ್ಚಿಸಲು ಸಹಾಯಮಾಡುತ್ತದೆ . ದೇಹವನ್ನು ಬೆಚ್ಚಗಿರಿಸುತ್ತದೆ. ಪುಷ್ಟಿ ನೀಡುತ್ತದೆ.
ಹಾಗಾಗಿ ಹಿಂದುಗಳ ಆಚಾರ ವಿಚಾರಗಳು ಮೌಢ್ಯವಾಗಿರದೇ ವೈಜ್ಞಾನಿಕವಾಗಿ, ಪುರಾಣೈತಿಹಾಸಿಕವಾಗಿ ಆಧ್ಯಾತ್ಮಿಕವಾಗಿಯೂ ಬಲವಾಗಿದೆ.

ನನ್ನ ಎಲ್ಲ ಆತ್ಮೀಯ ಸ್ನೇಹಿತರಿಗೂ ಬಂಧುಗಳಿಗೂ ಮಕರಸಂಕ್ರಾಂತಿ ಹಬ್ಬದ ಶುಭಕೋರುತ್ತಾ,

ಎಳ್ಳು ಬೆಲ್ಲ ತಿಂದು ಸ್ನೇಹ ಸೌಹಾರ್ದಯನ್ನು ಮೆರೆಯೋಣ.!
ಒಳ್ಳೊಳ್ಳೆಯ ಮಾತುಗಳನ್ನೇ ನುಡಿಯೋಣ.!!

ಸೂರ್ಯಕಾಂತಿ ಹೂವಿನಂತೆ ಸದಾ ಉಲ್ಲಾಸ-ಸಂತೋಷದಿಂದ ಬಾಳೋಣ.!
ಮನಸ್ಸನ್ನು ಹುಗ್ಗಿಯಂತೆ ಸಿಹಿಯಾಗಿರಿಸೋಣ.!!

- *ಸಿಂಧು ಭಾರ್ಗವ್. ಬೆಂಗಳೂರು*