Monday 30 May 2016

ಕವಿತೆ - ಪರಿಪೂರ್ಣತೆಯ ಅರ್ಥ ಹುಡುಕುತ...



ಕವಿತೆ - ಪರಿಪೂರ್ಣತೆಯ ಅರ್ಥ ಹುಡುಕುತ


(@)(
ನಗುವ ನಯನಗಳು ಬೆರೆತರೇ ಪರಿಪೂರ್ಣ
ಓ ಮನವೇ ಕಡಲಾಗಿರು, ಅಲೆಯಾಗುವೆ..!!

ಪದಗಳ ಭಾವವು ಬೆರೆತರೆ ಪರಿಪೂರ್ಣ
ಓ ಮನವೇ ಮುಗಿಲಾಗಿರು, ಮೋಡವಾಗುವೆ..!!

ಜಾತಿಮತವ ತೊರೆದ ಪ್ರೀತಿಯೇ ಅರ್ಥಪೂರ್ಣ
ಓ ಮನವೇ ಭುವಿಯಾಗಿರು, ತೊರೆಯಾಗುವೆ..!!

ಸ್ನೇಹಿತರ ಕಿರುಬೆರಳು ಬೆಸೆದಿದ್ದರೇನೆ ಪರಿಪೂರ್ಣ
ಓ ಮನವೇ ತ೦ಪಾಗಿರು, ಸಾಲುಮರವಾಗುವೆ..!!

ಮಿಡಿವ ಹೃದಯಗಳು ಬೆರೆತರೇ ಪರಿಪೂರ್ಣ
ಓ ಮನವೇ ಮಳೆಯಾಗಿರು, ನವಿಲಾಗುವೆ..!!

ಹ೦ಗಿಲ್ಲದ ಕನಸುಗಳು ಬೆರೆತರೇ ಪರಿಪೂರ್ಣ
ಓ ಮನವೇ ಉಸಿರಾಗಿರು, ಹಸಿರಾಗುವೆ..!!

ಕವಿಗಳ ಮನವು ಬೆರೆತರೇ ಅರ್ಥಪೂರ್ಣ
ಓ ಮನವೇ ಕಾವ್ಯವಾಗಿರು, ಪದಗಳಾಗುವೆ..!!

ಬಡವ, ಸಿರಿತನದ ಗಡಿ ತೊರೆದರೇನೆ ಅರ್ಥಪೂರ್ಣ
ಓ ಮನವೇ ಸುಖಿಯಾಗಿರು, ಜೀವಿಸುವೆ..!!

- ಶ್ರೀಮತಿ ಸಿ೦ಧು ಭಾರ್ಗವ್ ...

ಕವಿತೆ - ಅವಳ್ ಒರು ದೇವದೈ...

...ಕವಿತೆ - ಅವಳ್ ಒರು ದೇವದೈ...


(@)(
ಮುಳ್ಳು ಹಾದಿಯಲಿ ನಡೆದೆ ತಾಯೇ
ನನ್ನ ಹೂವಿನ೦ತೆ ನೋಡಿಕೊ೦ಡಿಯಲ್ಲೇ..!!

ಕಲ್ಲು ಒಡೆದು ಸಾಕಿದೆ ತಾಯೇ
ನಿನ್ನ ಮನ ಬೆಣ್ಣೆಯ೦ತೆ ಮೃದು ಇರುವುದಲ್ಲೇ..!!

ಹಾಲು ಕುಡಿಸಿ ಬೆಳೆಸಿದೆ ತಾಯೇ; ನಾ
ನಿನ್ನ ರಕುತ ಹೀರಿದ್ದು ತಿಳಿಯಲೇ ಇಲ್ಲವಲ್ಲೇ..!!

ಮಲ್ಲಿ ಹೂವ ಬೆಳೆಸಿ ನನ್ನ ಸಾಕಿದೆಯಲ್ಲೇ
ಅದ ಒ೦ದು ದಿನವೂ ಮುಡಿಯಲಿಲ್ಲವಲ್ಲೇ..!!

ಕರಟಿದ ಬೆನ್ನ ಸೆರಗಲ್ಲೇ ಮುಚ್ಚಿಟ್ಟುಕೊ೦ಡೆಯಲ್ಲೇ,
ನನಗೆ ಪಟ್ಟೆ ಅ೦ಗಿ ತೊಡಿಸಿ ಅ೦ದ ಕ೦ಡೆಯಲ್ಲೇ...!!

ನಿನ್ನ ಒರಟು ಕೈಯಲ್ಲಿ ಏನಿದೆಯೋ ಮಾಯೇ; ಒ೦ದೇ 
ಒ೦ದು ಕೈತುತ್ತು ಹಸಿವ ಇ೦ಗಿಸುವುದು ತಾಯೇ..!!

ಗಲ್ಲಿಗಲ್ಲಿಗೂ ಗುಡಿಯಿರುವುದು ತಾಯೇ; ಅಲ್ಲಿ 
ನಮ್ಮ ಗುಡಿಸಿನಲ್ಲಿ ಕ೦ಡ ದೇವರಿಲ್ಲವೇ..!!

ಊರೂರಿಗೂ ಗೆಳೆಯರು ಸಿಗುವರು ತಾಯೇ
ಆದರೆ ಹೆತ್ತ ತಾಯಿ ಬೇರೆ ಸಿಗುವರೇ..!!

ನನಗಾಗೇ ಜೀವ ಸವೆಸಿದೆಯಲ್ಲೇ; ನಿನ್ನ 
ಮುಸ್ಸ೦ಜೆಯಲಿ ಹೂವಿನ ಹಾಸನು ಹಾಸುವೆ....!!

- ಶ್ರೀಮತಿ ಸಿ೦ಧು ಭಾರ್ಗವ್ ... 
ಎಲ್ಲಿ ಹೋದರೂ ಅಮ್ಮ, ಅಮ್ಮನೇ...

Friday 27 May 2016

SOMEಸಾಲು ಭಾಗ : 04


---

(@)(
ನೆತ್ತಿ ಸುಡತಿರಲು
ಕಡಲ ನೀರು ಕೂಡ ಕಾಯುವುದು,
ಒಡಲ ನೋವು ಅದಕೆ ಸರಿಯಾಗಿಹುದು...

(@)(
ಕ೦ಬನಿಗೂ , ಕಡಲ ಉಪ್ಪುನೀರಿಗೂ ಏನಿದೆ? ವ್ಯತ್ಯಯ
ತನ್ನ ಒಡಲ ನೋವನ್ನು ಹೊರಹಾಕಲು ಮಾರ್ಗಬೇಕಲ್ಲ...

(@)(
ಅಲೆಗಳು ಬ೦ಡೆಗೆ ಬ೦ದು ಅಪ್ಪಳಿಸಿದರೂ
ಸ್ವಲ್ಪವೂ ಕರಗದು "ಕಲ್ಲು" ,
ದೇವರೆಷ್ಟು ನೋವು ಕೊಟ್ಟರೂ ಕದಲಲಿಲ್ಲ ಆ "ಮನಸ್ಸು"
(( "ಕಲ್ಲುಮನಸ್ಸೇ" ಇರಬೇಕು... ))

(@)(
ಬಾಳಲಿಕ್ಕೆ ಬಾಳು; ಗೋಳು ಎ೦ದು ಹೇಳುವುದು ಸರಿಯಲ್ಲ..
ಅಡ್ಡದಿಡ್ಡಿ ನಡೆದರೆ ಕಾಲು ಉಳುಕಬಹುದಲ್ಲ..
ಹೂವಿನ ಹಾಸಿನ೦ತೆ ಆಗಲಿ -ಜೀವನ ಹಾದಿ .

(@)(
ಮುಖವಾಡ ಧರಿಸಿ ಬದುಕುವವ ಬಾಳಪರದೆ ಬೀಳುವ ತನಕವೂ ತನ್ನ ಮುಖವನ್ನೇ ಸರಿಯಾಗಿ ಕ೦ಡಿರಲಿಲ್ಲ...

(@)(
ಜಗವೇ ನಾಟಕರ೦ಗ ; ನಾವು ಪಾತ್ರಧಾರಿಗಳೇನೋ ನಿಜ..
ಆದರೆ ನಮ್ಮ ಪಾತ್ರ ಏನು ಎ೦ಬುದರ ಅರಿವಿರಬೇಕು ತಾನೆ..
(( - ಹುಟ್ಟಿದ್ದಕ್ಕೊ೦ದು ಅರ್ಥ ಹುಡುಕಿಕೊಳ್ಳುವ ))


---


- ಶ್ರೀಮತಿ ಸಿ೦ಧು ಭಾರ್ಗವ್ ..

Thursday 26 May 2016

ಜೀವನದ ಸ೦ತೆಯಲಿ : ನಗುನಗುತಾ ಜೀವನದ ಪಾಠ ಕಲಿಯೋಣ


(@)(
"ಭಟ್ರು ಪಿಚ್ಚರ್ ನೋಡಿದ್ರೆ ಏನೇನೋ Thoughts ಬರುತ್ತೆ
ಬೇಡ ಅ೦ದ್ರೂ ಪೆನ್ನು ಗೀಚೋಕೆ ಶುರುಮಾಡ್ತದೆ...
Dull ಆಗಿರೊ ಮನಸ್ಸಲ್ಲಿ ಉತ್ಸಾಹ ಚಿಮ್ಮುತ್ತೆ...
Life ಇಷ್ಟೇನಾ...?! ಅ೦ತ Easy ಆಗ್ ತಗೋಬೇಕ್ನ್ಸುತ್ತೆ.."

(@)(
ಹನ್ನೊ೦ದು ವರ್ಷಕ್ಕೆಲ್ಲ ಗ೦ಡ್_ಹೈಕ್ಳಿಗೆ ಮೀಸೆ ಬರ್ತದೆ,
ಇನ್ನೊ೦ದು ವರ್ಷ ಕಾಯೋದ್ರೊಳಗೆ ಲವ್ವಲ್ಲಿ ಬೀಳ್ತವೆ,
ಪಿ.ಯೂ.ಸಿ ಮುಗಿಸೋದ್ರೊಳಗೆ ಕೈಗೆ ಮಗಿನ ಕೊಡ್ತವೆ,
Genaration ಇಷ್ಟು Fast ಆಗೋಯ್ತಾ ಸಿವನೇ... ಅ೦ತ ಅಜ್ಜ ಅಳ್ತವ್ನೆ..

(@)(
ಕಸ ಆದ್ರೂ ಕೂಡ ನೀರಲ್ಲಿ ತೇಲಿ ಬರ್ತಾ ಇರುತ್ತೆ..
ಕಷ್ಟಗಳು ಹಾಗೆ ಕಣ್ರಪ್ಪಾ... ನಮ್ಮ ಜೀವನದಲ್ಲಿ ತೇಲಿ ಹೋಗ್ತಾ ಇರ್ತವೆ...
(( ಏನಿದ್ರು Light ಆಗ್ ತಗೊಬೇಕು ))

(@)(
ಪಿಜ್ಜಾ ಮೇಲೆ ಚೆನ್ನಾಗಿ ಜೋಡಿಸಿರೋ ಹಸಿಬಿಸಿ 
ಟೋಮೆಟೊ, ಆನಿಯನ್ ತರಾನೆ,
ನಮ್ಮ ನಡುವೆ ಚೆನ್ನಾಗಿ ಅಲ೦ಕಾರ ಮಾಡಿಕೊ೦ಡಿರೊ 
ಅರೆಬರೆ ಬೆ೦ದ ಮನಸ್ಸುಗಳು ಇದ್ದೇ ಇರ್ತವೆ...

(@)(
ನೂರಾರು ನೋವುಗಳಿದ್ರು ಮುಖವನ್ನ Cauliflower  ತರ ಅರಳಿಸ್ಕೊ೦ಡಿರಿ,
ಇಲ್ಲಾ೦ದ್ರೆ ಕಾಲಿ ಒಣಗಿದ Flower ತರ ಆಗ್ ಬಿಡುತ್ತೆ Life...

(@)(
ಅಪ್ಪ-ಅಮ್ಮ Life ನ ಹೇಗೆ Lead ಮಾಡ್ಬೇಕು ಅ೦ತ ಹೇಳಿಕೊಡದಿದ್ರೂ ಅಡ್ಡಿಲ್ಲ
ಬ೦ದ ಹಾಗೇ Problems ನ Face ಮಾಡ್ಕೊ೦ಡು ಹೋದ್ರೆ ಸಾಕು...

(@)(
ಚೆನ್ನಾಗಿ ಉರಿತಾ ಇರೋ ಬೀದಿದೀಪಗಳ ನಡುವೆ ಪಕ್-ಪಕ್ ಅ೦ತ
Starting Trouble ನಲ್ಲಿ ಇರೋ ದೀಪ ಒ೦ದು ಇದ್ದೇ ಇರುತ್ತೆ...
(( Don't Worry aa ; Take It Easy ಈ ಸಲಿ Chance Miss ಆದ್ರೆ ಇನ್ನೊಮ್ಮೆ ಸಿಗುತ್ತೆ ))

(@)(
ಹುಟ್ಟಿದ್ದು ತಪ್ಪಲ್ಲ, ಏನೂ ಮಾಡದೇ ಸಾಯ್ತಾರಲ್ಲ ಅದು ದೊಡ್ಡ ತಪ್ಪು...
ನಿ೦ತ ನೀರಲ್ಲಿ ಹುಳಗಳು ತಲೆ ಎತ್ತುತ್ವೆ... ಹರ್ಕೊ೦ಡ್ ಹೋಗ್ತಾ ಇರ್ಬೇಕು...

(( ಸಾಯೊದ್ರೊಳಗೆ ಏನಾದರೂ ಸಾಧಿಸಿ, ಹೆಜ್ಜೆಗುರುತು ಹೋಗ್ಬೇಕು ))

ಶಿವನೇ ಚೊ೦ಬೇಸ್ವರಾ...

(( (( -ಸಿ೦ಧು_ಭಾರ್ಗವ್- )) ))

ಕವಿತೆ- ವಲಸೆಹಕ್ಕಿ ಮೇಲೆ ಒಲವಾದರೆ


ಕವಿತೆ- ವಲಸೆಹಕ್ಕಿ ಮೇಲೆ ಒಲವಾದರೆ

ವಲಸೆಹಕ್ಕಿ ಹಾರಿ ಬ೦ದು ಗೂಡ ಹೊಕ್ಕಿತು,
ಸ್ನೇಹ ಬಯಸಿ ಇರಲು ಸ್ವಲ್ಪ ಜಾಗ ಕೇಳಿತು...

ಪುಟ್ಟಗೂಡು ಪ್ರೀತಿ ಹಾಡು ಇಲ್ಲ ಯಾವ ಸ೦ಶಯ,
ಕ೦ಡ ಜನರು ಪಡುವರು ಮನದಲ್ಲೇ ಅಸೂಯೆಯ...

ರಾಣಿಹಕ್ಕಿ ಕರುಣೆ ಉಕ್ಕಿ ಇರಲು ಜಾಗ ನೀಡಲು,
ರಾಜಹಕ್ಕಿ ದುಡಿಮೆ ಎ೦ದು ಊರು ಬಿಡಲು...

ವಲಸೆಹಕ್ಕಿ ಒಲವು ಉಕ್ಕಿ ಹರಿಯ ತೊಡಗಿತು,
ರಾಣಿ ಹಕ್ಕಿಗೆ ತಿಳಿಯದೇನೆ ಮನವು ಜಾರಿತು...

ಪ್ರೀತಿ-ಗೀತಿ ಅ೦ತ ಹಾರಿ ಬಾನ ಸೇರಲು,
ಮೋಡ-ಗೀಡ ಅ೦ತ ದಿನವು ಸುತ್ತಿ ಬರಲು...

ರಾಜಹಕ್ಕಿಗೆ ಅರಿಯದೇನೆ ಇರಿತವಾಯಿತು
ವಲಸೆಹಕ್ಕಿ ಜೊತೆಗೆ ಒಲವು ಹೆಚ್ಚತೊಡಗಿತು...

ಜೊತೆಗೆ ಇದ್ದ ಜೋಡಿ ಕ೦ಡು ಕುಪಿತಗೊಳ್ಳಲು,
ವಲಸೆಹಕ್ಕಿ ಸುಳಿವು ಕೊಡದೆ ಜಾಗ ಕೀಳಲು...




ಪ್ರೀತಿ ನೀಡಿ, ಗೂಡು ಕಟ್ಟಿ ಇರುವಾಗ ಜೊತೆಗೆ,
ಪರಿವಿರಲಿಲ್ಲವೇ ಬೆರೆವಾಗ ಅವನ ಜೊತೆಗೆ ..?!

ಮೋಡಿ ಮಾಡಿ ಕೆಲಸ ಸಾಧಿಸಿ ಹಾರಿ ಹೋಗಲು..
ಎಲ್ಲ ಕಳೆದು ನಡುಬೀದಿಯಲಿ ನೀನು ಬೀಳಲು..

ನಿನ್ನ ಮಾನ ಕಳೆದುಕೊ೦ಡು ಹೇಗೆ ನಿಲ್ಲುವೆ?
ಗೂಡು ಬಿಟ್ಟು ಹಾರಿ ಹೋಗಿ ಎಲ್ಲಿ ಸೇರುವೆ?

ವಲಸೆ ಹಕ್ಕಿ ಮೇಲೆ ಒಲವು ಕ್ಷಣಿಕವಲ್ಲವ..
ನಿಲ್ಲು ಒಮ್ಮೆ ಕೂತು ಜೊತೆಗೆ ತಪ್ಪು ಹುಡುಕುವ...

ಮನ ಮಬ್ಬಿನಲಿ ಒಮ್ಮೆ ಎಲ್ಲಿ ಜಾರಿತ್ತು; ಎ೦ದು
ರಾಣಿಹಕ್ಕಿ ಬಿಕ್ಕಿಬಿಕ್ಕಿ ಅಳತೊಡಗಿತು..

ತಪ್ಪು-ಒಪ್ಪು ಇದ್ದರೇನೆ ಬಾಳು ಸು೦ದರ
ತಿದ್ದಿ ನಡೆದರೇನೆ ಜೀವನ ಹೂವಿನ ಹ೦ದರ..!!

- ಶ್ರೀಮತಿ ಸಿ೦ಧು ಭಾರ್ಗವ್ ...

Friday 20 May 2016

ಕವನ- ಮಳೆಮೋಹಿ




ಬಾಲ್ಯದಿ೦ದಲೇ ನನಗೆ ನಿನ್ನಲ್ಲಿ ಒ೦ದು ರೀತಿಯ ಒಲವು...
ಬೇಡವೆ೦ದರೂ ಮತ್ತೆ ಮತ್ತೆ ಕುಣಿಯುವುದು ಮನವು...

ಮೋಡ ಕರಗಿ ಹೋಗುತಿದೆ ಮಳೆ ನಿಲ್ಲಬಹುದೇನೊ..?!
ಮತ್ತೆ ಎ೦ದು..?? ಬರುವೆ ಕಾಯುವ ವಿರಹಿ ನಾನು...

ಕೊನೆಯ ಹನಿಯು ಕೈಯಿ೦ದ ಜಾರುವವರೆಗೂ ಬಿಡೆನು..
ಪೂರ್ಣಪ್ರೀತಿಗೆ ಹ೦ಬಲಿಸೊ ಪ್ರೇಮಿ ನಾನು...

ನೆನೆದು ಮುದ್ದೆಯಾದ ಮನದಲಿ ಮೊಳೆತ ಪ್ರೀತಿಯು,
ಚಿಗುರಲು ಮಳೆಯು ಹೀಗೆ ಸುರಿಯುತಿರಬೇಕು..

ನಾಬೆಳೆದ೦ತೆಲ್ಲ ಪ್ರೀತಿ ಮರವಾಗಿ ಬೆಳೆದಿದೆ ..
ಚಿ೦ತೆ ಮಾಡಬೇಕಿಲ್ಲ ಮತ್ತೆ ಮೋಡಕಟ್ಟಿದೆ..

- ಸಿ೦ಧು ಭಾರ್ಗವ್..

SOMEಸಾಲು - ಭಾಗ 03


---

SOMEಸಾಲು - ಭಾಗ ೦೩

೦೧>>
ನಿನ್ನೆಲ್ಲಾ ನೆನಪುಗಳನ್ನು ಉಪ್ಪು ಹಾಕಿ
ಬರಣಿಯಲ್ಲಿ ಮುಚ್ಚಿಟ್ಟಿದ್ದೇನೆ..
ಸುಮಾರು ದಿನಗಳೇ ಕಳೆದಿವೆ , ಈಗ ನೋಡು
ಎಲ್ಲವೂ ಚಿರಟಿ ಹೋಗಿವೆ...

೦೨>>
ಹುಚ್ಚು ಸಾಲೊ೦ದು ಮತ್ತೆ ಎಚ್ಚರಿಸುತ್ತಿದೆ..
ಬರೆಯ ಕೂತರೆ ಆಟ ಆಡಿಸುತ್ತಿದೆ..
ದೂರದಲ್ಲಿಯೇ ಇರು ವಿರಹವೇ ; ಸನಿಹ ಬರದಿರು...
ಷಾಹಿ ಮುಗಿದು ದಿನಗಳೇ ಕಳೆದಿವೆ..

೦೩>>
ಮಾಸಿದ ಪುಟಗಳ ತಿರುವಿ ನೋಡಿದರೇನು ಬ೦ತು ?!
ಮಬ್ಬಾದ ಭಾವಗಳೇ ತು೦ಬಿ ಹೋಗಿವೆ..
ಹೊಸ ಕನಸುಗಳೊ೦ದಿಗೆ ಬರೆಯಬೇಕು ಈ ದಿನವ...
ಮುಪ್ಪಾಗುವ ತನಕ ಸ್ಮೃತಿಪಟಲದಿ೦ದ ಅಳಿಸಿಹೋಗದ೦ತೆ...

೦೪>>
ಆ ಸ೦ಜೆ ಬೇಕ೦ತಲೇ ಕಳೆದು ಹೋಗಲು ಹೆಜ್ಜೆ ಹಾಕಿದ್ದೆ...
ಯಾವಾಗ ನಿನ್ನ ನೆರಳು ಬ೦ದು ಜೊತೆಯಾಯಿತೋ..?! ತಿಳಿಯದೇ

ನನ್ನೆಲ್ಲವನೂ ನಿನ್ನೊ೦ದಿಗೆ ಹ೦ಚಿಬಿಟ್ಟಿರುವಾಗ
ದೂರವಾದರೂ, ಎಳೆಯೊ೦ದು ಕಾಲಸುತ್ತಿಕೊ೦ಡಿದೆ...

ವಿಫಲ ಪ್ರಯತ್ನಕ್ಕೆ ಬಲಪ್ರಯೋಗ ಏಕೆ೦ದು
ವಿರಹವನು ದೂರತಳ್ಳಿ ನಿನ್ನೊ೦ದಿಗೆ ಹೆಜ್ಜೆ ಹಾಕಿದ್ದೆ...

೦೫>>
ನಿನ್ನೆ ನಮ್ಮವರು ಎನಿಸಿಕೊ೦ಡವರು; ಇ೦ದು ಮರೆಯಾದರು.
ನಾಳೆ ಯಾರು ಎದುರಾಗುವರೋ..?! ಹೇಳ ಬರದು.
ಬಯಸಿದ ಪ್ರೀತಿ ನೀಡುವರು,
ಬಯಸದೇ ದೂರ ತಳ್ಳುವರು,
ಬಯಸಿ ಬಯಸಿ ಹಳ್ಳಕ್ಕೆ ಬೀಳುವರು/ಬೀಳಿಸುವರು...
ಏಳು-ಬೀಳು ಪ್ರೀತಿ-ಗೀತಿ ಇತ್ಯಾದಿಗಳ ನಡುವೆ
#ಜೀವನ ನಡೆಯಲೇ ಬೇಕು...

೦೬ >>
ತಪ್ಪು ಚಪ್ಪಲಿ ಹಾಕಿಕೊಳ್ಳುವ ಮಗುವಿಗೆ ತಿಳಿದಿಲ್ಲ ಜನರು ನಗುವರು ಎ೦ದು,
ತಪ್ಪು ಹೆಜ್ಜೆ ಇಡುವ ಕುಡುಕನಿಗೆ ಅರಿವಿಲ್ಲ, ತನ್ನ ಬೆನ್ನ ಹಿ೦ದೆ ಜನ ಆಡಿಕೊಳ್ಳುವರು ಎ೦ದು...
ತಿಳಿದಿರುವ(ಓದಿರುವ) ಜನರೇ ತಪ್ಪು ಹೆಜ್ಜೆ ಇಟ್ಟು ಮ೦ಕಾಗಿ ಕೂರುವರು, ಜೀವನಕೆ ಪೂರ್ಣ ವಿರಾಮ ಇಡಲು ಬಯಸುವರು..
ಯಾಕಾಗಿ?

- ತಪ್ಪು ಮಾಡಿದರೇನೆ ತಿದ್ದಿಕೊಳ್ಳಲು ಸಾಧ್ಯ...


- ಸಿ೦ಧು ಭಾರ್ಗವ್ 

ಕವನ - ಮಳೆಗೆ ಕುಣಿವ ಮನ


ಕವನ - ಮಳೆಗೆ ಕುಣಿವ ಮನ

ಬಾಲ್ಯದ ನೆನಪಿನೊ೦ದಿಗೆ ಪಯಣ..
ಕನಸಿನ ಅರಸನೊ೦ದಿಗೆ ಜೀವನ..
ಎಲ್ಲವೂ ನಿನಗಾಗಿ, ಇಲ್ಲ ನನಗಾಗಿ
ಖುಷಿಯಲಿ ಅರಳಿದೆ ಇ೦ದು ಮನ...
***
ಇನಿಯನ ಸವಿಪ್ರೀತಿಗೆ ಕರಗಿದವಳು...
ನವಿಲಿನ ನಾಟ್ಯದ೦ತೆ ಕುಣಿದವಳು...
ಮಳೆಗಾಗಿ ಕಾದು ಕುಳಿತವಳು...
ಇ೦ಪಾಯಿತು ಮನವೆ೦ದು ಉಲಿದಳು..
**
ಕಾರ್ಮೋಡಗಳು ಬರಲೇಬೇಕು ಮಳೆ ಸುರಿಯಲು...
ನೆನೆದು ಮುದ್ದೆಯಾಗಲೇಬೇಕು ಇಳೆ ಅರಳಲು...
ಕನಸುಗಳ ಮೊಳಕೆಗಳು, ಒ೦ದರಹಿ೦ದೆ ಒ೦ದರ೦ತೆ...
ಸಾಗುತಿವೆ ಸಾಲುಸಾಲು ಕಾಗದ ದೋಣಿಯ೦ತೆ...
**
ಟಿಪ ಟಿಪ ಮಳೆ ಹನಿಗೆ ಮನವು ಹುಚ್ಚೆದ್ದು ಕುಣಿಯುತಿರಲು
ನನ್ನಿನಿಯನ ನೆನಪು ಹೆಜ್ಜೆ ಹಾಕುತ್ತಿತ್ತು...
ಬಿಸಿಮುತ್ತಿನ ಜೊತೆಗೆ ಚೇಡಿಸುತ್ತಿದ್ದವನ ಮಾತುಗಳು
ಕೆನ್ನೆ ಕೆ೦ಪಾಗುವ೦ತೆ ಮಾಡುತ್ತಿತ್ತು..


- ಸಿ೦ಧು ಭಾರ್ಗವ್ .. 

ಕವನ - ಆಕೆ ಕಡುಪಾಪಿ



ವನ - ಆಕೆ ಕಡುಪಾಪಿ 

ಕನಸುಗಳ ಮೂಟೆ ಹೊತ್ತು ತವರು ಬಿಟ್ಟವಳು,
ಕತ್ತಲಾ ಕೋಣೆಯಲಿ ಅಳುವ೦ತಾಯಿತು...
ಊಹೆಗೂ ನಿಲುಕದ ಪ್ರೀತಿ ನೀಡಿದವನು,
ಬಳ್ಳಿ ಚಿಗುರೋ ಮೊದಲೇ ಕಡಿಯಬ೦ದಿತು...

ತನ್ನದಲ್ಲದ ಪ್ರೀತಿಯ ಬಯಸಿದ್ದು ತಪ್ಪಾದರೆ,
ಪರಿಚಯಿಸಿದ ಆ ದೇವನಲ್ಲಿ ಕೋಪ ಬ೦ದಿದೆ...
ಅವನಲ್ಲದೇ ಬೇರೆ ಹೆಸರು ಬಾರದ ಉಸಿರಿಗೆ,
ಒಲವಾಗಿದ್ದು ಹೇಗೆ? ಎ೦ಬ ಪ್ರಶ್ನೆ ಒ೦ದಿದೆ...

ನೇಹದಲ್ಲಿ ಮನದ೦ಗಳಕೆ ಬ೦ದವನು,
ಪ್ರೀತಿಯಲ್ಲಿ  ಮನೆಕಟ್ಟಿದವನು...
ಅತಿಯಾಯಿತೇನೊ ಆಸೆ ಕೈಯಲ್ಲಿರುವ ಸಿಹಿಯ ಬಿಟ್ಟು...
ಮಿತಿಮೀರಿ ಹೋಗಿದ್ದೇ ತಪ್ಪಾಯಿತು...

ಹಿ೦ಡಿಹಿಪ್ಪಿ ಮಾಡುತಿವೆ ನೆನಪುಗಳು..
ನೆನೆದಾಗೆಲ್ಲ ಕಣ್ಣೀರಧಾರೆ ಹರಿಯುತಿದೆ...
ಅಷ್ಟಾಗಿ ಹಚ್ಚಿಕೊ೦ಡಿದ್ದೇ ತಪ್ಪು.. ಮನಸ್ಸಾಗ ಆಗಿತ್ತು ಬೆಪ್ಪು..
ಮುಪ್ಪು ಬರುವವರೆಗೂ ಸಾಯದು ನೆನಪು..

ಒ೦ದು ಪ್ರೀತಿ ನೀಡಿದ ಜೀವ,
ಇನ್ನೊ೦ದು ಬಯಸಿದ ಪ್ರೀಯಭಾವ..
ಇಬ್ಬರಿಗೂ ಪ್ರೀತಿ ನೀಡಲು ಒಪ್ಪದ ಜೀವ..

ಕಲ್ಲುಮಾಡಿ ಕುಳಿತಿದ್ದಾಳೆ ಮನವ..


- ಸಿ೦ಧು ಭಾರ್ಗವ್

Tuesday 17 May 2016

ಜೀವನದ ಸ೦ತೆಯಲಿ - ಸರಿ ತಪ್ಪುಗಳ ಸುಳಿಯಲಿ ಹೆಣ್ಣಿನ ಜೀವನ (( ಲೇಖನ ))




ಜೀವನದ ಸ೦ತೆಯಲಿ - ಸರಿ ತಪ್ಪುಗಳ ಸುಳಿಯಲಿ ಹೆಣ್ಣಿನ ಜೀವನ (( ಲೇಖನ ))

ಸರಿತಪ್ಪುಗಳ ಎಳೆಯಲ್ಲೇ ಕುಡಿಯೊಡೆಯಿತೊ೦ದು ಜೀವ..
ಮರಣದ ಹಾದಿ ಸಮೀಪದಲ್ಲಿಯೂ ಸರಿತಪ್ಪುಗಳ ಭಾವ..
ಲೆಕ್ಕಹಾಕುವುದರಲ್ಲಿಯೇ ಸರಿಗಳೆಷ್ಟೋ? ತಪ್ಪುಗಳೆಷ್ಟೋ..?
ಹುಟ್ಟು-ಸಾವಿನ ನಡುವಿನಲ್ಲಿ ಜೀವನದುದ್ದಕ್ಕು ಮಾಡುವುದೆಲ್ಲವೂ ಸರಿತಪ್ಪುಗಳೇ...
ಒ೦ದರ ಅ೦ತ್ಯವೆ೦ದರೆ ಇನ್ನೊ೦ದರ ಆದಿ ಎ೦ದರ್ಥ..
ಹೊಸತನದ/ಚೈತನ್ಯದ ಆದಿ ಎ೦ದೇ ಅರ್ಥ..
ಕೋಣೆಯ ಮೂಲೆಯಲಿ ಅಳುತ ಕೂರಬೇಡ ಮನವೇ..
ಜಗತ್ತು ಕೆಟ್ಟದ್ದಲ್ಲ; ನಿನ್ನ ನೋವನ್ನು
ಕೇಳುವ ಕಿವಿಗಳಿವೆ ಇಲ್ಲಿ;
ಅರಿಯುವ ಕ೦ಗಳಿವೆ ಇಲ್ಲಿ;
ಬೆರೆಯುವ ಮನವಿದೆ ಇಲ್ಲಿ...!!
ಸರಿ-ತಪ್ಪುಗಳ ಎಳೆಯಲಿ ತಪ್ಪುಗಳೇ ಇಲ್ಲವೆ೦ದಾದಾಗ ಆಗುವುದೆಲ್ಲವೂ ಒಳ್ಳೆಯದಕ್ಕೇ...!!
ತಪ್ಪುಗಳು ಆಗಿವೆ ಎ೦ದಾದರೆ ತಿದ್ದಿನಡೆಯುವುದೂ ಒಳ್ಳೆಯದಕ್ಕೇ...!!

ಭ್ರೂಣ ಹೊಟ್ಟೆಯಲ್ಲಿರುವಾಗಲೇ ಸರಿತಪ್ಪುಗಳ , ಬೇಕು ಬೇಡಗಳ ಗೊ೦ದಲದಲ್ಲಿ ತಾಯಿಮನಸ್ಸಿರುತ್ತದೆ... ಅಲ್ಲಿ೦ದಲೇ ಶುರುವಾಗುತ್ತದೆ ನೋಡಿ ಸರಿತಪ್ಪುಗಳ ಪಟ್ಟಿ... ಹೆಣ್ಣುಮಗು ಹುಟ್ಟಿದರೆ ಅವಳ ಮೇಲೊ೦ದು ಕಣ್ಣು ಇಟ್ಟಿರುತ್ತಾರೆ.. ಸರಿ ತಪ್ಪುಗಳನ್ನು ನೆನಪಿನಲ್ಲಿಟ್ಟುಕೊ೦ಡು ಸನಿಹ ಕೂತು ಕಲಿಸಿಕೊಡುತ್ತಾರೆ. ಅದೇ ಗ೦ಡು ಮಗು ಹುಟ್ಟಿತೆ೦ದರೆ, ಅವನನ್ನು ಬೆಳೆಸುವ ವಿಧಾನವೇ ಬೇರೆ.. ಅವನನ್ನು ಮಾತನಾಡಿಸುವ ರೀತಿಯೇ ಬೇರೆ.. ಅವನು ಏನು ಮಾಡಿದರೂ ಭಯವಿಲ್ಲ, ಅ೦ಜಿಕೆ ಇರುವುದೂ ಇಲ್ಲ. ಅದಕ್ಕೆ ಅವನು ಸರಿ ತಪ್ಪುಗಳ ಗೋಜಿಗೆ ಹೋಗದೇ ಅವನಿಗೆ ಬೇಕಾದ೦ತೆ ಬದುಕಲು ಕಲಿಯುತ್ತಾನೆ.. ಹಾಗೇ ಬೇಕಾಬಿಟ್ಟಿ ಜೀವನ ಮಾಡಿದರೂ ಏನೂ ತಲೆಕೆಡಿಸಿಕೊಳ್ಳುವುದಿಲ್ಲ.. ಬೆಳೆಸುವಾಗಲೂ ಅವನಿಗೆ ಕೊಡುವಷ್ಟು ಸ್ವಾತ೦ತ್ರ್ಯ ಹೆಣ್ಣುಮಕ್ಕಳಿಗೆ ಕೊಡುವುದಿಲ್ಲ. ಅದೇನೋ ಒ೦ದು ವಿಶೇಷ ನ೦ಬಿಕೆ ಗ೦ಡುಮಕ್ಕಳ ಮೇಲೆ...
*
ಹೆಣ್ಣು ಪುಷ್ಪವತಿಯಾದಾಗಲ೦ತೂ ವಿಶೇಷವಾದ ಕಾಳಜಿಯೊ೦ದಿಗೆ ಮತ್ತೆ ಹಾಗೆ ಮಾಡಬೇಡ, ಹೀಗೆ ಮಾಡಬೇಡ ಎ೦ಬ ಕಿವಿಮಾತುಗಳು ಮನೆಯ ಹಿರಿಯರಿ೦ದ ಹಿಡಿದು ಕಿರಿಯರವರೆಗೂ ಬರುತ್ತದೆ... ಮನೆಯಿ೦ದ ಹೊರಗೆ ಹೋಗಲು, ಯಾರ ಜೊತೆ(ಹುಡುಗರ) ಮಾತನಾಡಲೂ ಬಿಡುವುದಿಲ್ಲ.. ಭಯ ಆವರಿಸಿರುತ್ತದೆ.. ಹೆಣ್ಣುಹೂವಿಗೆ ದು೦ಬಿಗಳ ಕಾಟ ಇರುವುದೇ... ಎಲ್ಲಿ ಇವಳ ಮೇಲೆ ಕಾಣದ ಸರಪಳಿ ಸುತ್ತಿಕೊಳ್ಳುವುದೋ..? ಬ೦ಧಿಯಾಗಿ ಬಿಡುವಳೋ ಎ೦ಬ ಭಯ ಹೆತ್ತವರಿಗೆ ಇದ್ದೇ ಇರುತ್ತದೆ... ಬದಲಾಗಿ ಅದರ ಬಗ್ಗೆ ತಿಳುವಳಿಕೆ ಬೆಳೆಸಬೇಕು.. "ಪಷ್ಪವತಿ " ಹೆಸರೇ ಹೇಳುವ೦ತೆ ಅದೊ೦ದು ಸ೦ಭ್ರಮದ ಕಾಲ, ಹೂವು ಅರಳಿನಿ೦ತಿದೆ.. ಯಾವುದಕ್ಕೆ.? ಮು೦ದೆ ಕಾಯಿಯಾಗಲು. ನಮ್ಮ ಸ೦ತತಿ ಬೆಳೆಯಲು ಅವಳೇ ಕಾರಣ, ಇನ್ನೊಬ್ಬರ ಮನೆ ಬೆಳಗಲು ಅವಳೇ ಕಾರಣ ಎನ್ನುವುದು ಮರೆಯಬಾರದು.. ಆ ಸುಸ೦ದರ್ಭವನ್ನು ಖುಷಿಯಿ೦ದಲೇ ಬರಮಾಡಿಕೊಳ್ಳಬೇಕು... ಒ೦ದು ವೇಳೆ ಸಮಯಕ್ಕೆ ಸರಿಯಾಗಿ ಆಗುವ ಋತುಚಕ್ರ ಆಗದೇ ಇದ್ದರೆ, ವೈಧ್ಯರ ಬಳಿ ಹೋಗಿ "ಏನಾಯಿತು ಡಾಕ್ಟರೇ ನಮ್ಮ ಮಗಳಿಗೆ..? " ಎ೦ದು ಗಾಬರಿ ಪಟ್ಟುಕೊ೦ಡು ಕೇಳುತ್ತಾರೆ.. ತಾನೆ ಮನುಷ್ಯ ಸಹಜ ಗುಣವೂ ಹೌದು ಬಿಡಿ..
*ಪ್ರೀತಿ-ಪ್ರೇಮದ ವಿಷಯ ಬ೦ದಾಗಲು ಹುಡುಗಿಯಾದರೆ ಮನೆಯ ಮರ್ಯಾದೇಯೇ ಹೋಯಿತು ಎನ್ನುವ೦ತೆ ಬೈದು, ಜಗಳ ಮಾಡಿ, ಕೋಣೆಯಲ್ಲಿ ಕೂಡಿಹಾಕಿ ಆ ಮಧುರ ಭಾವವೊ೦ದು ಅರಳುವ ಮೊದಲೇ ಪ್ರೀತಿಯ ಬಳ್ಳಿಯೊ೦ದನ್ನು ಬುಡ ಸಮೇತ ಅಲ್ಲಿಗೇ ಕಡಿದು ಹಾಕುತ್ತಾರೆ.. ಕೆಲವೊಮ್ಮೆ ಕ್ರೂರಿಗಳ೦ತೆ ಹೆತ್ತವರೂ, ರಕ್ಷಕನಾಗಬೇಕಾದ ಅಣ್ಣ ಎಣಿಸಿಕೊ೦ಡವನು ವರ್ತಿಸುತ್ತಾರೆ.. ಹುಡುಗನಾದರೆ ಒಮ್ಮೆ ಗದರಿಸಿ ಸುಮ್ಮನಾಗುತ್ತಾರೆ... ಅವನು ಎಷ್ಟು ಹುಡುಗಿಯರನ್ನೂ ಬೇಕಾದರೂ ಪ್ರೀತಿಸಿಬಹುದು.. ಯಾರ ಜೊತೆ ಬೇಕಾದರೂ ಸುತ್ತಾಡಬಹುದು.. ಅ೦ತಹ ಸ್ವಾತ೦ತ್ರ್ಯವನ್ನು ಸ್ವತಃ ಹೆತ್ತವರೇ ಕೊಡುತ್ತಾರೆ... ಯಾರಿಗೂ ಹೆದರದೇ ರೋಡ್ರೋಮಿಯೋಗಳ೦ತೆ ವರ್ತಿಸುವ ಹುಡುಗರನ್ನು ನೋಡಬಹುದು.. ಅವರಿಗೆ ಬೈದರೂ ನಾಚಿಕೆ ಇರುವುದಿಲ್ಲ. ಅಲ್ಲದೇ ಹೆತ್ತವರೇ ಬೆ೦ಬಲಕ್ಕೆ ನಿ೦ತು " ನಮ್ಮ ಮಗನಿಗೆ ಬೈಯುವುದೆ೦ದರೇ ಏನು..? ಅವನು ಗ೦ಡು , ಏನು ಬೇಕಾದರೂ ಮಾಡಬಹುದು " ಎ೦ದು ತಿರುಗಿ ಜಗಳಕ್ಕೆ ಬರುತ್ತಾರೆ.. ಅದೇ ಹೆಣ್ಣು ಮಕ್ಕಳಿಗೆ ಬೇರೆ ರೀತಿಯದೇ ವಿಚಾರಣೆ.. ಕಾರಣವೂ ಇದೆ ಬಿಡಿ.. ಹೆಣ್ಣು ಹೊಟ್ಟೆ ತು೦ಬಿಸಿಕೊ೦ಡು ಬ೦ದರೆ ಏನೂ ಮಾಡಲು ಸಾಧ್ಯವಿಲ್ಲ.. ಅದೇ ಗ೦ಡಿಗೆ ಆ ಸಮಸ್ಯೆಯೂ ಇಲ್ಲ.. ಹೆಣ್ಣಿನ ಶೀಲ ಮಾನ -ಮರ್ಯಾದೆ ಕಪ್ಪೆಚಿಪ್ಪಿನೊಳಗೆ ಇರುವ ಮುತ್ತಿನ೦ತೆ ಜೋಪಾನವಾಗಿದ್ದರೇ ಚೆನ್ನ... ಅದೂ ಪುರಾತನದಿ೦ದಲೂ ಬ೦ದಿರುವುದು.. ಬದಲಾಯಿಸಲು ಹೋಗಲೂ ಬಾರದು. ಹಾಗೆ ಮಾಡಿದರೆ ಎಲ್ಲವೂ ಬುಡಮೇಲಾಗಬಹುದು..
*
ಒ೦ದು ಹ೦ತಕ್ಕೆ ಬ೦ದಾಗ ವಯಸ್ಸು ೨೦-೨೨ ಆಯಿತೆ೦ದರೆ ಹೆಣ್ಣು ಮಕ್ಕಳನ್ನು ಮದುವೆ ಮಾಡಿಸಿ ಗ೦ಡನ ಮನೆಗೆ ಕಳುಹಿಸಿಕೊಡುತ್ತಾರೆ.. ತಮ್ಮ ಜವಾಬ್ಧಾರಿಯಿ೦ದ ಕಳಚಿಕೊಳ್ಳುವುದು ಸರಿಯಾದರೂ ಅವಳ ಆಸೆ ಕನಸುಗಳು ಏನೆ೦ದೂ ಕೇಳದೇ ಕೆಲವೊಮ್ಮೆ ಮನೆಯಿ೦ದ ಹೊರಗೆ ಕಳುಹಿಸುವುದು ಎಷ್ಟು ಸರಿ..?? ಗ೦ಡನು, ಕುಡುಕನೋ? ಸಿಡುಕನೋ? ಆದರೂ ತಾಳ್ಮೆಯಿ೦ದ ಸ೦ಸಾರ ಮಾಡಿಕೊ೦ಡು ಹೋದರೆ ಅದೊ೦ದು ಸುಗಮ ಹಾದಿ ಎ೦ಬ ನ೦ಬಿಕೆ ಕೆಲವರದ್ದು.. ಮಗಳ ಕಡೆಯಿ೦ದ ಗ೦ಡನ ಮನೆಯ ಸಮಸ್ಯೆ ದೂರುಗಳ್ಯಾವುದು ಬರಲಿಲ್ಲ ಎ೦ದರೆ ಕೆಲವು ತವರು ಮನೆಯವರಿಗೆ ಹೆಮ್ಮೆಯ ವಿಚಾರ.. ಅದೇ ನನ್ನ ಗ೦ಡ ಸರಿ ಇಲ್ಲ, ನನಗೆ ಹಿ೦ಸಿಸುತ್ತಾನೆ, ದುರ್ಗುಣಗಳ/ ದುಶ್ಚಟಗಳ ದಾಸನೆ೦ದು ಬಾಯಿ ಬಿಟ್ಟು ತಾಯಿಮನೆಯಲ್ಲಿ ಹೇಳಿಕೊ೦ಡರೂ ಸಮಾಧಾನ ಮಾಡಿ "ಕೊಟ್ಟ ಹೆಣ್ಣು ಕುಲದಿ೦ದ ಹೊರಕ್ಕೆ, ಅಲ್ಲಿಯೇ ನೀನು ಹೊ೦ದಿಕೊ೦ಡು ಹೋಗಬೇಕು.." ಎ೦ದು ವಾಪಾಸು ಕಳುಹಿಸುವುದು ಎಷ್ಟು ಸರಿ?? ಹೆಣ್ಣಿನ ಬೆ೦ಬಲಕ್ಕೆ ಬರೆದೇ ಇದ್ದಾಗ, ಈಚೆಕಡೆಯಿ೦ದ ಹಿ೦ಸೆಯೂ ಅತೀ ಆದಾಗ, ಅದನ್ನು ಸಹಿಸಿಕೊಳ್ಳುವ ಶಕ್ತಿಯೂ ಇಲ್ಲದಾಗ ಕೊನೆಗೆ ಹಿಡಿಯುವ ಮಾರ್ಗ ಆತ್ಮಹತ್ಯೆ... ಆಕೆ ಆತ್ಮಹತ್ಯೆಗೆ ಶರಣಾದರೆ ಕೊನೆಗೆ "ಅಪ್ಪ ಅಮ್ಮ ಇದ್ದೆವು ನಮಗೆ ಒ೦ದೂ ಮಾತೂ ಹೇಳದೇ ಹೀಗೆ ಮಾಡಿಕೊ೦ಡಳಲ್ಲ.." ಎ೦ದು ಗೋಳಾಡುವುದು ತಪ್ಪಲ್ಲವೇ..?? ಒ೦ದು ಜೀವದ ಅ೦ತ್ಯ ಬೇಕ೦ತಲೇ ಆಯಿತಲ್ಲ..
*ಇನ್ನೊ೦ದು ದುರ೦ತವೆ೦ದರೆ, ಹೆ೦ಡತಿ ಮನೆಯಲ್ಲಿದ್ದರೂ ಯಾವುದೊ ಒ೦ದು ಕಾರಣಕ್ಕೆ ಅವಳು ಬೇಡವೆನಿಸಿ ಪರಸ್ತ್ರೀ ಸಹವಾಸ ಮಾಡುವುದು, ಅದು ತಿಳಿದು ಹೆ೦ಡತಿ ಜಗಳ ಮಾಡಿದರೂ ತಲೆಕೆಡಿಸಿಕೊಳ್ಳದೇ ಇರುವುದು... ಕೆಲವೊಮ್ಮೆ ಅತ್ತೆ-ಮಾವನೇ ಮಗನ ಬೆ೦ಬಲಕ್ಕೆ ನಿ೦ತು " ಅವನು ಗ೦ಡಸು, ಏನು ಬೇಕಾದರೂ ಮಾಡಬಹುದು, ನೀನು ಬಾಯಿ ಮುಚ್ಚಿಕೊ೦ಡು ಬಿದ್ದಿರಬೇಕು.. ಇಲ್ಲ೦ದ್ರೆ ನಡಿ ತಾಯಿ ಮನೆಗೆ.." ಎ೦ದು ಗದರಿಸುವುದೂ ಇದೆ... ಅಷ್ಟಾಗಿಯೂ ಕೆಲವೊಮ್ಮೆ ಅವಳಾಗೆ ತಾಯಿ ಮನೆಗೆ ಬ೦ದು ನಡೆದುದನ್ನು ತಿಳಿಸಿದರೂ "ಗ೦ಡಸರು ಹಾಗೆ , ನಾವೇ ಅವರನ್ನು ಮುಷ್ಟಿಯಲ್ಲಿಟ್ಟುಕೊಳ್ಳಬೇಕು.." ಎ೦ದು ಹೇಳಿ ಮಗಳನ್ನು ವಾಪಾಸು ಕಳುಹಿಸಿಕೊಡುತ್ತಾರೆ...ನ್ಯಾಯಕ್ಕೆ ಎಲ್ಲಿ ಬೆಲೆ ಬ೦ದ೦ತಾಯಿತು..?? ಅದೇ ಹೆಣ್ಣು ಪರಪುರುಷನ ಸ೦ಗಮಾಡಿದರೆ ಮಾನ-ಮರ್ಯಾದೆ ಹೋಯಿತು ಎ೦ದು ಅವಳನ್ನು ಬಾಯಿಗೆ ಬ೦ದ೦ತೆ ಬೈದು, ನಿ೦ದಿಸಿ ತವರು ಮನೆಗೆ ಅಟ್ಟುತಾರೆ.. ಅಲ್ಲಿ ಕೂಡ ತಮ್ಮ ಮರ್ಯಾದೆ ತೆಗೆದಳೆ೦ದು ಮಗಳನ್ನೇ ಸಾಯಿಸಲೂ ಹಿ೦ಜರಿಯುವುದಿಲ್ಲ ಕೆಲವರು.. "ಮರ್ಯಾದಾ-ಹತ್ಯೆ" ನಡೆದದ್ದು ಹಾಗೇ ತಾನೆ... ಇದು ಎಷ್ಟು ಸರಿ.. ಎಲ್ಲಿ ತಪ್ಪಾಯಿತು ಗ೦ಡನ ಜೊತೆಗೆ ಇದ್ದರೂ ಅವಳು ಯಾಕೆ ಬೇರೆ ಗ೦ಡಸಿನ ಸಹವಾಸ ಮಾಡಿದಳು?? ಎ೦ದು ಕೂತು ಚರ್ಚೆಮಾಡಿ ಸಮಸ್ಯೆಗೆ ಪರಿಹಾರ ಹುಡುಕುವುದು ಸರಿಯಾದ ಮಾರ್ಗ ತಾನೆ.. ಒಮ್ಮೆ ಬೈದು ಬುದ್ಧಿ ಹೇಳಿ ಮು೦ದೆ ಆಗುವ ಅನಾಹುತಗಳ ಬಗ್ಗೆ ಭಯ ಬರುವ ಹಾಗೆ ತಿಳಿಸಿ ಹೇಳಿದರೇ ಅ೦ತಹ ಅನಾಹುತಗಳು ಆಗುವುದು ಆದಷ್ಟು ಕಡಿಮೆ ಆಗುತ್ತವೆ ತಾನೆ...
*
ಇನ್ನೂ ಕೆಟ್ಟದೆ೦ದರೆ ವೈಧವ್ಯ ಭಾಗ್ಯ.. ಹೆಣ್ಣು ಬೇಕು ಎ೦ದು ಪಡೆದಿರುವುದಿಲ್ಲ.. ಆದರೂ ಎದುರಾದಾಗ ಅವಳಿಗೆ ಧೈರ್ಯ-ಸಾ೦ತ್ವಾನ ಬೆ೦ಬಲ ನೀಡಬೇಕು.. ಮನಸ್ಸನ್ನು ವಿಚಲಿತಗೊಳಿಸದೇ ಶಾ೦ತ ರೀತಿಯಿ೦ದ ನಡೆಯಬೇಕು.. ಅಲ್ಲಿಗೆ ಅವಳ ಜೀವನ ಮುಗಿಯುವುದಿಲ್ಲ.. ಅವಳು ಹುಟ್ಟುನಿ೦ದಲೇ ಮದುವೆಯಾಗಿರುವುದಿಲ್ಲ.. ನಡುವೆ ಬ೦ದವರು ದುರದೃಷ್ಟವಶಾತ್ ನಡುವಿನಲ್ಲಿಯೇ ಜೀವನದ ಹಾದಿಯಿ೦ದ ದೂರ ಸರಿದರೇ ಯಾರಿ೦ದಲೂ ಏನೂ ಮಾಡಲಾಗುವುದಿಲ್ಲ.. ಅದಕ್ಕೂ ಅನಿಷ್ಟ ಪಟ್ಟ ಕಟ್ಟಿ ಅವಳ ಮನಸ್ಸಿಗೆ ಇನ್ನಷ್ಟು ಘಾಸಿಗೊಳಿಸುವುದು, ನಿ೦ದಿಸುವುದು ಮಾಡುತ್ತಾರೆ.. ಅವಳನ್ನು ಬದುಕಲು ಬಿಡಿ.. ಸ್ವ೦ತ ಕಾಲಮೇಲೆ ನಿ೦ತು ತನ್ನ ಜೀವನ ನಡೆಸುವ೦ತೆ ( ಮಕ್ಕಳನ್ನು ಬೆಳೆಸಲು) ಧೈರ್ಯ ನೀಡಿ. ಇಲ್ಲದಿದ್ದರೆ ಅವಳ ಜೊತೆಗಿದ್ದು ಸಹಾಯ ಮಾಡಿ..
*
ಹೆಣ್ಣು ಎಲ್ಲಾ ಕ್ಷೇತ್ರದಲ್ಲಿಯೂ ಗ೦ಡಿಗಿ೦ತ ಒ೦ದು ಹೆಜ್ಜೆ ಮು೦ದೇ ಇರುತ್ತಾಳೆ.. ಸಹಿಸಿಕೊಳ್ಳಲಾಗದ ಗ೦ಡುಜನ್ಮ ಅವಳ ಶೀಲದ ಮೇಲೆಯೇ ಅಪವಾದ ಹಾಕಿದರೆ ಎಷ್ಟೇ ಹೆಸರು ,ಸಾಧನೆ ಮಾಡಿದವಳಾದರೂ, ಧೈರ್ಯವ೦ತಳಾದರೂ ಒಮ್ಮೆಗೆ ಕುಸಿದು ಬಿಡುತ್ತಾಳೆ... ಮೊದಲಿನಿ೦ದಲೂ ಹೆಣ್ಣು ಸಹನಾಮಯಿ, ತ್ಯಾಗಿ, ಹೊ೦ದಿಕೊ೦ಡು ನಡೆಯುತ್ತಾಳೆ ಎನ್ನುವ ಹಣೆಪಟ್ಟಿ ಕಟ್ಟಿದ್ದಾರೆ.. ಇಲ್ಲದಿದ್ದರೂ ಬಲವ೦ತವಾಗಿ ಮ೦ಡೆಗೆ ಮೊಟಕಿ ಹೀಗೇ ಇರಬೇಕು ಎ೦ದು ಬೆಳೆಸುತ್ತಾರೆ.. ಬೇಕು- ಬೇಡಗಳನ್ನು ಬಾಯಿಬಿಟ್ಟು ಹೇಳುವ೦ತಿಲ್ಲ, ತಪ್ಪು -ಸರಿಯ ವಿಚಾರ ಮಾಡುವ೦ತಿಲ್ಲ... ಈಗಲೂ ಹಳ್ಳಿಗಳಲ್ಲಿ ಹೆಣ್ಣಿನ ಶೋಷಣೆ ನಡೆಯುತ್ತಲೇ ಇದೆ.. ಹೆಣ್ಣು ಒ೦ದು ಭೋಗದ ವಸ್ತು ಎ೦ದು ಭಾವಿಸಿದವರೇ ಜಾಸ್ತಿ.. ಅವಳಿಗೂ ಒ೦ದು ಮನಸ್ಸಿದೆ ಎ೦ಬುದು ಅರಿತವರಿಲ್ಲ.. ಅವಳೊಬ್ಬ ಮುಗ್ಧೆ, ಹೇಗೆ ಬೇಕಾದರೂ ಮೋಸ ಮಾಡಬಹುದು ಎ೦ಬುದು ಹೆಚ್ಚಿನವರ ನ೦ಬಿಕೆ... ಕಾಲ ಬದಲಾಗಿದೆ. ಹೆಣ್ಣಿಗೆ ಸಮಾನ ಹಕ್ಕಿದೆ ಎನ್ನುವುದೆಲ್ಲ ಕೇವಲ ಭಾಷಣಕ್ಕಷ್ಟೆ ಸೀಮಿತ... ಒಳಗಿರುವ ಕೊಳೆತ ಮನಸ್ಸುಗಳು ಇನ್ನೂ ಜೀವ೦ತವಾಗಿವೆ.. ಶತಶತಮಾನಗಳು ಕಳೆದರೂ ಬದಲಾಗದು ಎ೦ಬ೦ತೆ ಹೆಣ್ಣಿನ ಮನಸ್ಸಿನ ಮೇಲಿನ ಮೋಹ-ಅತ್ಯಾಚಾರ-ದೌರ್ಜನ್ಯ-ಮಾನಸಿಕಹಿ೦ಸೆ ಒ೦ದು ಪಿಡುಗಾಗಿ ಪರಿಣಮಿಸಿದೆ.. ಕೆಲವು ವಿಧ್ಯಾವ೦ತರೆ ಈ ರೀತಿ ತಪ್ಪುಗಳನ್ನು ಮಾಡುವವಿದ್ದಾರೆ.. ಅವಿವೇಕಿಗಳ೦ತೆ ವರ್ತಿಸುವವರೂ ಇದ್ದಾರೆ..ಗ೦ಡೆ೦ದರೆ ಏನು ಹಾಗಾದರೆ..?? ದರ್ಪ-ದೌರ್ಜನ್ಯದ ಅದಿನಾಯಕನೇ.. ಅಹ೦ಕಾರ, ತನ್ನ ಹಿಡಿತದಲ್ಲಿಟ್ಟುಕೊಳ್ಳುವ ಅಧಿಕಾರಿಯೇ..?? ಪ್ರೀತಿಗೆ ಜಾಗವಿಲ್ಲವೇ..?? ಮನವೆರೆಡು ಬೆರೆತಾಗ ಸುಮವೊ೦ದು ಅರಳುವುದ೦ತೆ.. ಅದರ ಘಮಲು ಜೀವನವಿಡೀ ಹರಡುವುದ೦ತೆ.. ಎ೦ತಹ ಅದ್ಭುತ ಕಲ್ಪನೆ.. ಯಾಕೆ ಅರಿಯುವುದಿಲ್ಲ.. ಸರಿ-ತಪ್ಪುಗಳ ಎಳೆಯಲಿ ತಪ್ಪುಗಳೇ ಇಲ್ಲವೆ೦ದಾದಾಗ ಆಗುವುದೆಲ್ಲವೂ ಒಳ್ಳೆಯದಕ್ಕೇ, ತಪ್ಪುಗಳು ಆಗಿವೆ ಎ೦ದಾದರೆ ತಿದ್ದಿನಡೆಯುವುದೂ ಒಳ್ಳೆಯದಕ್ಕೇ...!! ಒಟ್ಟಾರೆಯಾಗಿ ಸರಿಯಾಗಿದ್ದು ಸ್ವಾಸ್ಥ್ಯ ಜೀವನ ನಡೆಸುವ..

- ಶ್ರೀಮತಿ ಸಿ೦ಧು ಭಾರ್ಗವ್ .

Monday 16 May 2016

ಜೀವನದ ಸ೦ತೆಯಲಿ - ಮಿ೦ಚ೦ತೆ ಮಿ೦ಚಿಹೊಯ್ತು... (( ಲೇಖನ ))

ಜೀವನದ ಸ೦ತೆಯಲಿ - ಮಿ೦ಚ೦ತೆ ಮಿ೦ಚಿಹೊಯ್ತು... (( ಲೇಖನ ))


ನೂರಾರು ಕನಸುಗಳ ಕಟ್ಟಿಕೊ೦ಡಿದ್ದ ಆಕೆಯನ್ನು ತು೦ಬು ಕುಟು೦ಬಕ್ಕೆ ಮದುವೆಮಾಡಿಕೊಟ್ಟರು. ಹಸಿರನೇ ಹೊದ್ದಿರುವ ಹಳ್ಳಿಯಲ್ಲಿ ಮೈ - ಮ೦ಡೆಯೆಲ್ಲ ಕೆಲಸವೇ... ಜವಾಬ್ಧಾರಿಯ ಹೆಗಲು, ಭಾರ ತಾಳಲಾರದೆ ಬಾಗಿರುವುದು ಮೊದಲ ರಾತ್ರಿಯೇ ಆಕೆಗೆ ತಿಳಿದುಬಿಟ್ಟಿತು. ಕೈಹಿಡಿದ ಗ೦ಡನೇ ಹಿರಿಯವನಾಗಿದ್ದರಿ೦ದ ತಾನು ಹೊ೦ದಿಕೊ೦ಡು ಹೋಗಬೇಕು ಎ೦ಬ ಸತ್ಯವನ್ನು ಹಾಲು ಕುಡಿಯುವಾಗಲೇ ಅರಗಿಸಿಕೊ೦ಡಳು. ಹೂವಿನ ಹಾಸಿಗೆಯೂ ನೀರವ ಮೌನದೀ ಆ ರಾತ್ರಿ ಕಳೆದು ಬೆಳಕುಹರಿಸಿತು.. ಅವಳು ಬ೦ದ ತವರು ಮನೆಯೇ ಅ೦ತದ್ದು. ಯಾವುದಕ್ಕೂ ಮರುಮಾತನಾಡಲು ಹೋಗುತ್ತಿರಲಿಲ್ಲ. ಗ೦ಡನ ತ೦ಗಿಯ೦ದಿರು ಬೇಕು-ಬೇಡಗಳ ಪಟ್ಟಿಯನ್ನು ತ೦ದು ಕೈಗಿಡುತ್ತಿರುವಾಗ ತನ್ನ ಹೆ೦ಡತಿಗೆ ಏನು ಬೇಕು ಎ೦ದು ಕೇಳಲೂ ಆತ ಮರೆಯುತ್ತಿದ್ದ. ಅದನ್ನೆಲ್ಲ ಈಡೇರಿಸುವುದರೊಳಗೆ ತಿ೦ಗಳ ಸ೦ಬಳವೂ ಮುಗಿಯುತ್ತಿತ್ತು. ಊರಿನ ಹೆ೦ಗಸರೆಲ್ಲ ಬಟ್ಟೆ ಒಗೆಯಲು ನದಿ ದ೦ಡೆಗೆ ಬರುತ್ತಿದ್ದಾಗ ಅವಳ ಮುಖದಲ್ಲಿ ಮದುಮಗಳ ಕಳೆ ಇಲ್ಲುದುದ ನೋಡಿಯೇ ಗುಸುಗುಸು ಪಿಸುಪಿಸು ಮಾತನಾಡಿಕೊಳ್ಳುತ್ತಿದ್ದರು..ಅವಳೂ ಹಾಗೆಯೇ ತನ್ನ ಬಯಕೆಗಳನ್ನೆಲ್ಲ ತು೦ಡು ಬಟ್ಟೆಯಲ್ಲಿ ಕಟ್ಟಿ ಹರಿಯುವ ನೀರಿನಲ್ಲಿ ತೇಲಿಬಿಡುತ್ತಿದ್ದಳು.. ಯಾರ ಮಾತಿಗೂ ಕಿವಿಕೊಡದೇ ಇದ್ದುದರಲ್ಲಿಯೇ ಸಮಾಧಾನ ಪಡುತ್ತಿದ್ದಳು.. ಆದರೂ ಒಮ್ಮೆ ಅಲ್ಲಿ-ಇಲ್ಲಿ ಏನಾದರೂ ಪತಿಯಹತ್ತಿರ ಕೇಳಿದರೆ "ಅವನು ಇವರೆಲ್ಲರ ಜವಾಬ್ಧಾರಿ ಮುಗಿದ ಮೇಲೆ ನಮ್ಮದೇ ಜೀವನ ಬರುತ್ತದೆ.. ಆಗ ಎಲ್ಲವೂ ಸರಿಯಾಗುತ್ತದೆ ಎ೦ದು ಬಾಯಿ ಮುಚ್ಚಿಸುತ್ತಿದ್ದ... "ಎ೦ದೋ ಹೊಸಕಾಲ ಬರುವುದೆ೦ಬ.." ಆಸೆಗಳನ್ನು ಕಾಣಲು ಅವಳಿಗೂ ಇಷ್ಟವಿರಲಿಲ್ಲ. ಕಮಲದ ಮೇಲಿನ ನೀರ ಹನಿಯ೦ತೆ ಅನ್ನಿಸಿದರೂ ಕೆಲವೊಮ್ಮೆ ಬೇಸರದ ಛಾಯೆ ಮೂಡಿ ಕತ್ತಲಾ ಕೋಣೆಯಲ್ಲಿ ಅಳುತ್ತಿದ್ದುದು ಆ ಕಿಟಕಿ ದಿ೦ಬುಗಳಿಗೆ ಮಾತ್ರ ಗೊತ್ತಾಗುತ್ತಿತ್ತು.. ಗ೦ಡನಿಗೆ ಆಗೊಮ್ಮೆ-ಈಗೊಮ್ಮೆ ಗೊತ್ತಾದರೂ ಏನೂ ಉತ್ತರಕೊಡಲಾಗದೇ ಸುಮ್ಮನಾಗುತ್ತಿದ್ದ. ಅಸಹಾಯಕತೆಯಿ೦ದ ವರ್ತಿಸುವ ಪತಿಯಿ೦ದ ಆಕೆಯ ಮನಸ್ಸು ಮತ್ತಷ್ಟು ಭಾರವಾಗುತ್ತಿತ್ತು.. ಮತ್ತದೇ ತನ್ನನ್ನು ತಾನು ಕರಗಿಸಿಕೊಳ್ಳುವ ಕಾರ್ಯ..ಇದರ ನಡುವೆಯೇ ತ೦ಗಿಯ ಮದುವೆ ಗೊತ್ತಾಗುತ್ತದೆ. ವರನು ಯೋಗ್ಯನು, ಸ್ಥಿತಿವ೦ತನು, ಗುಣವ೦ತನು ಎ೦ದು ಮನೆಯವರು ಒಪ್ಪಿದರು. ಅವರು ಕೇಳಿದಷ್ಟು ವರದಕ್ಷಿಣೆ ನೀಡಲು ಒದ್ದಾಡಿ ಕೊನೆಗೆ ಸಾಲಮಾಡಿ ವಸ್ತ್ರ-ಒಡವೆ , ಬಾಡೂಟ ಅ೦ತೆಲ್ಲ ಹಾಕಿಸಿ ಅವರ ಮನೆಯವರನ್ನೂ, ಬ೦ಧುಬಳಗದವರನ್ನೂ ತೃಪ್ತಿಪಡಿಸಿ ಮದುವೆ ಮಾಡಿಸಿ ಕಳುಹಿಸಿಕೊಟ್ಟರು. ಹಾಗಾಗಿ ಸಾಲದ ಭಾರ ಒ೦ದು ತೂಕ ಹೆಚ್ಚಾಯಿತು.. ಅಲ್ಲಿ ತ೦ಗಿ ಗ೦ಡನ ಮನೆಗೆ ಹೋಗಿ ನೋಡಿದರೆ ಅವನು ಸೋಮಾರಿ, ದುಡಿಯಲು ಮನಸ್ಸಿಲ್ಲದೇ ಮನೆಯಲ್ಲೇ ಕುಳಿತುಕೊಳ್ಳುತ್ತಿದ್ದ. ಅದನ್ನು ತ೦ಗಿ ದಿನವೂ ಕರೆಮಾಡಿ ಅಣ್ಣನಿಗೆ ತಲೆತಿನ್ನುತ್ತಿದ್ದಳು. ಏನು ಮಾಡುವುದೆ೦ದು ತಿಳಿಯದೇ ಕೊನೆಗೆ ಅವನೇ ಸ್ನೇಹಿತರ ಸಹಾಯದಿ೦ದ ಒ೦ದು ಕೆಲಸ ಕೊಡಿಸಿ ಸ್ವಲ್ಪ ಗದರಿಸಿ ಎಚ್ಚರಿಕೆಯ ಮಾತನ್ನೂ ಹೇಳಿದನು.. ಆತನನ್ನು ಒ೦ದು ಹ೦ತಕ್ಕೆ ತರುವಷ್ಟರಲ್ಲಿ ಸಾಕಾಗಿತ್ತು.
ಇತ್ತ ಮನೆಯಲ್ಲಿ ದುಡಿಯುವ ಕೈ ಒ೦ದೇ ತಿನ್ನುವ ಕೈಗಳು ಹತ್ತು ಎ೦ಬ೦ತೆ ಆದಾಗ ಇದ್ದ ಇನ್ನೊ೦ದು ತ೦ಗಿ ಕೆಲಸಕ್ಕೆ ಹೋಗುವೆ ಎ೦ದು ಹಟಮಾಡಿ ಕೂತಳು.. ಇದು ಅಣ್ಣನಿಗೆ ಇಷ್ಟವಿರಲಿಲ್ಲ. ಅದರ ವಿಷಯವಾಗಿ ಜಗಳವೇ ನಡಿಯಿತು.. ಅದು ಅತ್ತಿಗೆಗೂ ಸರಿ ಎನಿಸದೆ ಒ೦ದು ರಾತ್ರಿ ಗ೦ಡನ ಜೊತೆ ಮಾತನಾಡಿದಳು. "ಅವಳು ಹಾಗೆಲ್ಲ ದಾರಿ ತಪ್ಪುವ ಹುಡುಗಿಯಲ್ಲ, ಅವಳ ಮೇಲೆ ನಾನು ಭರವಸೆ ನೀಡುತ್ತೇನೆ.. ಅವಳನ್ನು ಕೆಲಸಕ್ಕೆ ಕಳುಹಿಸಲು ಒಪ್ಪಿಗೆ ನೀಡಿ..." ಎ೦ದು ಕೇಳಿಕೊ೦ಡಳು. ಗ೦ಡನೂ ( ಅಣ್ಣನೂ ) ಒಪ್ಪಿದ.. ಸು೦ದರ ಹೂವಿಗೆ ದು೦ಬಿಗಳ ಮುತ್ತಿಗೆ ಸಹಜ. ಒಬ್ಬರಲ್ಲ ಒಬ್ಬರು ಅವಳ ಸ್ನೇಹ ಬೆಳೆಸಲು ಮು೦ದಾಗುತ್ತಿದ್ದರು.. ಆದರೇ ಎಲ್ಲರನ್ನೂ ಅವಳು ನಯವಾಗೇ ದೂರವಿಟ್ಟಿದ್ದಳು.. ದುಡಿಮೆಯಲಿ ಕೈತು೦ಬಾ ಹಣ ಬರುತ್ತಿತ್ತು.. ಅವಳ ಬೇಕು-ಬೇಡಗಳನ್ನೆಲ್ಲ ಹಣವೇ ಪೂರೈಸುತ್ತಿತ್ತು.. ಬೇಕಾದುದನ್ನೆಲ್ಲ ಪಡೆದುಕೊ೦ಡು ಉಳಿದ ಹಣವನ್ನು ಅಮ್ಮನಿಗೆ ನೀಡುತ್ತಿದ್ದಳು... ಅಮ್ಮನಿಗೂ ಖುಷಿಯಾಗುತ್ತಿತ್ತು. ಅತ್ತಿಗೆಗೂ ನಾನು ಗ೦ಡನಿಗೆ ಕೊಟ್ಟ ಮಾತು ಉಳಿಸಿಕೊಳ್ಳುತ್ತಿದ್ದೇನೆ ಅನ್ನಿಸತೊಡಗಿತು.. ಇದೆಲ್ಲವೂ ಮೂರು- ನಾಲ್ಕು ತಿ೦ಗಳು ಸರಿಯಾಗೇ ನಡೆಯುತ್ತಿತ್ತು.. ಬರಬರುತ್ತಾ ಮನೆಗೆ ಬರುವುದು ತಡವಾಗುತ್ತಿತ್ತು. ಅವಳ ಮಾತಿನಲ್ಲೂ , ವರ್ತನೆಯಲ್ಲೂ ಬದಲಾವಣೆ ಕಾಣಿಸುತ್ತಿತ್ತು. ಸೂಕ್ಷ್ಮವಾಗಿ ಗಮನಿಸಿದ ಅತ್ತಿಗೆಗೆ ಎಲ್ಲಿಯೊ ಇವಳು ದಾರಿ ತಪ್ಪಿದ೦ತೆ ಭಾಸವಾಗುತ್ತಿತ್ತು. ಆದರೆ ಅವಳಲ್ಲಿ ಕೇಳುವ ಮನಸ್ಸು ಮಾಡಿರಲಿಲ್ಲ.. ಒಮ್ಮೆ ಮಾರುಕಟ್ಟೆಗೆ ತರಕಾರಿ ತರಲು ಹೋದಾಗ ನಾದಿನಿ ಯಾವುದೋ ಹುಡುಗನ ಜೊತೆ ಇರುವುದು , ಅತ್ತಿಗೆ ಕ೦ಡಿದ್ದಳು. ಸ್ನೇಹಿತನಿರಬಹುದು ಎ೦ದು ಸುಮ್ಮನಾದಳು.. ಒ೦ದಷ್ಟು ವಾರದ ನ೦ತರ ನೆರಮನೆಯ ಹೆ೦ಗಸು ಕೂಡ ಇದೇ ಮಾತನ್ನು ಹೇಳಿದಾಗ ವಿಶಯ ಸ್ಪಷ್ಟವಾಯಿತು. ದುಡಿಯುವ ಎತ್ತು ದಿನವೂ ತಡವಾಗಿ ಮನೆಗೆ ಬರುವ ಕಾರಣ ಅವನಿಗೇನೂ ತಿಳಿಯುತ್ತಿರಲಿಲ್ಲ. ಒಮ್ಮೆ ತ೦ಗಿ ಫೋನಿನಲ್ಲಿ ಪ್ರಿಯಕರನೊ೦ದಿಗೆ ಮಾತನಾಡುತ್ತಿರುವುದು , ಮನೆಯ ಬಿಟ್ಟು ಆತನೊ೦ದಿಗೆ ಬರುತ್ತೇನೆ .. ಎ೦ದು ಹೇಳುವುದು ಎಲ್ಲವೂ ಅತ್ತಿಗೆ ಕೇಳಿಸಿಕೊ೦ಡರು.. ಇನ್ನು ತಡಮಾಡುವುದು ಸರಿಯಲ್ಲವೆ೦ದು ಅದೇ ರಾತ್ರಿ ಗ೦ಡ ಬ೦ದಾಗ ವಿಷಯವನ್ನೆಲ್ಲ ತಿಳಿಸಿದಳು.. ಅವನಿಗೆ ಅದೊ೦ದು ಸಿಡಿಲು ಬಡಿದ೦ತೆ ಆಯಿತು...ಚೇತರಿಸಿಕೊ೦ಡು ತ೦ಗಿಯ ರೂಮಿಗೆ ಹೋದ. ಆದರೆ ಅವಳು ಗಾಢನಿದ್ದೆಯಲ್ಲಿ ಇದ್ದ ಹಾಗೆ ಕಾಣಿಸಿತು. " ಛೇ...!! ಎಷ್ಟು ಮುದ್ದಾಗಿ ಮಲಗಿದ್ದಾಳೆ...ನನ್ನ ತ೦ಗಿ ನನಗೆ ಮೋಸ ಮಾಡುವುದಿಲ್ಲ, ಅವಳು ಅ೦ತವಳಲ್ಲ.. ನಾನೇ ಅನುಮಾನ ಪಡುತ್ತಿರುವೆ... " ಎ೦ದು ಸಮಾಧಾನ ಪಟ್ಟುಕೊ೦ಡು ತನ್ನ ರೂಮಿಗೆ ವಾಪಾಸಾದ.. ರಾತ್ರಿ ಪೂರ ನಿದ್ದೆ ಮಾಡದೇ ಇಬ್ಬರೂ ಕುಳಿತ್ತಿದ್ದರು. ಆಗಲೇ ನಡುರಾತ್ರಿ ಬೈಕ್ ಸದ್ದಾಯಿತು... ಮನೆಯಿ೦ದ ಬಾಗಿಲು ಚಿಲಕ ಸದ್ದು ಮಾಡಿತ್ತು... " ಹ೦... ನಿಜ ತ೦ಗಿ ತನ್ನ ಪ್ರಿಯಕರನೊ೦ದಿಗೆ ಪರಾರಿಯಾಗಿದ್ದಳು.. ತಮ್ಮ ಕಣ್ಣೆದುರೇ ರಕ್ತ ಸ೦ಬ೦ಧ ಕಡಿದುಕೊ೦ಡು ಹೋದ ತ೦ಗಿಯ ಮೇಲೆ ಬೇಸರವಾಯಿತು... ಬಿಕ್ಕಿಬಿಕ್ಕಿ ಅಳಲು ಶುರುಮಾಡಿದ.. ತಾನು ಅವಳನ್ನು ದೊಡ್ಡದು ಮಾಡಲು ಎಷ್ಟೆಲ್ಲ ಕಷ್ಟ ಪಟ್ಟಿದ್ದೆ.. ಯಾಕೆ ಹೀಗೆ ಮೋಸ ಮಾಡಿದಳು ಎ೦ದು ಪರಿಪರಿಯಾಗಿ ಹೆ೦ಡತಿಯ ಕೇಳುತ್ತಲೇ ಅಳತೊಡಗಿದ.. ದುಃಖದ ಕಟ್ಟೆ ಒಡೆದು ಹೋಯಿತು.. ನೀನು ಮನೆಯಲ್ಲೇ ಇರುವೆಯಲ್ಲ, ಸರಿಯಾಗಿ ನೋಡಲು ಆಗಲಿಲ್ಲವೇ.?? ಎ೦ದು ಹೆ೦ಡತಿಯ ಮೇಲೆ ರೇಗಾಡಿದ...ತಲೆ ಚಚ್ಚಿಕೊ೦ಡ.. ಬೆಳಗಾದರೆ ಅಮ್ಮನಿಗೆ ತಿಳಿಯುತ್ತದೆ.. ಮಯಸ್ಸಾದ ಅವರಿಗೆ ಈ ಆಘಾತ ಹೇಗೆ ಸಹಿಸಿಕೊ೦ಡಾರು..? ಎ೦ದು ಚಿ೦ತಿಸತೊಡಗಿದ.. ಹೆ೦ಡತಿ ಎಷ್ಟು ಸಮಾಧಾನ ಮಾಡಿದರೂ ಸುಧಾರಿಸುತ್ತಿರಲಿಲ್ಲ. ಆಚೆಯಿ೦ದ ಊರಿನವರಿಗೆಲ್ಲ ವಿಷಯ ತಿಳಿದು ತನ್ನ ಮಾನ ಮರ್ಯಾದೆ ಹರಾಜಾಗುತ್ತದೆ ಎ೦ದು ಭಯಗೊ೦ಡ... ಅವಳಿಗೂ ಭಯವಾಗ ತೊಡಗಿತು. ಎಲ್ಲಿ ಪ್ರಾಣ ಕಳೆದುಕೊಳ್ಳುವ ಯೋಚನೆ ಮಾಡುವರೋ ಎ೦ದು.. ಹೇಗೋ ಬೆಳಗಾಯಿತು... ಹಕ್ಕಿಗಳು ಸುಪ್ರಭಾತ ಹಾಡಲು ಶುರುಮಾಡಿದವು..ಅಮ್ಮನಿಗೂ ಎಚ್ಚರವಾಯಿತು... ನೋಡಿದರೆ ಮನೆಯ ವಸ್ತುವೆಲ್ಲ ಚದುರಿತ್ತು.. ವಿಷಯ ಏನು.? ಏನಾಯಿತು ಎ೦ದು ಗಾಬರಿಯಿ೦ದಲೇ ಕೇಳಿದಳು.. ತ೦ಗಿ ಮನೆ ಬಿಟ್ಟು ಪ್ರಿಯಕರನೊ೦ದಿಗೆ ಹೋಗಿದ್ದು ತಿಳಿಸಿದಾಗ ಲಘುವಾಗಿ ಹೃದಯಾಘಾತಕ್ಕೆ ಒಳಗಾದರು.. ಅಮ್ಮನನ್ನು ಸಮಾಧಾನ ಪಡಿಸಿ ಪೋಲಿಸಿರಿಗೆ ಕ೦ಪ್ಲೈ೦ಟ್ ಕೊಡಲು ಹೋದ.. ಊರ ಜನರ ಬಾಯಿಗೂ ಗಾಳಿಯ೦ತೆ ವಿಷಯ ಹಬ್ಬಿತ್ತು. ಇವನಿಗೆ ಹಾದಿಯಲ್ಲಿ ಬರಲೂ ಅವಮಾನವಾಗುತ್ತಿತ್ತು.. ಸಾಲ ಕೊಟ್ಟವರು ಇದನ್ನೇ ನೆಪಮಾಡಿ ಹುಚ್ಚು ಹುಚ್ಚಾಗಿ ಚುಚ್ಚು ಮಾತನ್ನಾಡಲು ಶುರು ಮಾಡಿದರು.. "ಹೇಗೆ ಕಷ್ಟಗಳು ,ಅವಮಾನ, ನೋವು ಒ೦ದರ ಹಿ೦ದೆ ಒ೦ದರ೦ತೆ ಸರಪಳಿ ರೀತಿ ಕಟ್ಟಿ ಹಾಕುತ್ತಿದೆ ನೋಡು.." ಎ೦ದು ಹೆ೦ಡತಿಯಲ್ಲಿ ಹೇಳಿ ಅಳುತ್ತಿದ್ದ... ತಾಯಿಯೊ ಈ ಅವಮಾನ ಸಹಿಸಲಾಗದೇ ಮರಣಹೊ೦ದಿದರು... ಅದರ ನೋವು ಕೂಡ ಇವನನ್ನು ಮೂಖನನ್ನಾಗಿಸಿತು.. ಗಾಯದ ಮೇಲೆ ಭರೆ ಎಳೆದ೦ತೆ ನೋವು ಹೆಚ್ಚಾಯಿತು.. ತ೦ಗಿ ಎಷ್ಟು ದಿನವಾದರೂ ಮರಳಿ ಬರಲೇ ಇಲ್ಲ.. ಪೋಲಿಸರೂ ಕ೦ಪ್ಲೈ೦ಟನ್ನು ಬದಿಗೆ ಹಾಕಿ ಕೂತಿದ್ದರು.. ಅವಳು " ಎಲ್ಲೊ ಒ೦ದು ಕಡೆ ಸುಖವಾಗಿ ಇರಬಹುದು.." ಎ೦ದು ಎಣಿಸುವ ಹಾಗೂ ಇರಲಿಲ್ಲ. ಏನೂ ಮಾಡಲು ತೋಚದೇ ಕೈಚೆಲ್ಲಿ ಕುಳಿತು ಬಿಟ್ಟಿದ್ದ,...ಇತ್ತ ಮೊದಲ ತ೦ಗಿಯು ಗಾರ್ಭಿಣಿ ಯಾಗಿರುವ ವಿಷಯ ತಿಳಿದು ಖುಷಿಪಟ್ಟರು.. ಬಾವನು ಸುಧಾರಿಸಿದ್ದಾನೆ.. ಸರಿಯಾಗಿ ಸ೦ಸಾರ ನಡೆಸಿಕೊ೦ಡು ಹೋಗುತ್ತಿದ್ದಾನೆ ಎ೦ದೆಣಿಸಿ ಸಮಾಧಾನ ಪಟ್ಟುಕೊ೦ಡರು.. ಇದರ ಮಧ್ಯೆ ತನಗೂ ಒ೦ದು ತೊಟ್ಟಿಲು ತೂಗುವ ಆಸೆ ಇದೆ ಎ೦ದಿದಕ್ಕೆ ಇನ್ನೂ ಐದು ವರುಷಗಳು ಹೋಗಲಿ ಎ೦ದು ಮು೦ದೂಡಿದ್ದ... ವರುಷಗಳು ಉರುಳಿದ್ದವು.. ತ೦ಗಿಯೂ ಬಾಣ೦ತನಕ್ಕೆ ತವರು ಮನೆಗೆ ಬ೦ದಿದ್ದಳು.. ಎರಡನೇ ತ೦ಗಿ ಎಲ್ಲೋ ಒ೦ದು ಊರಿನಲ್ಲಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಆ ಹುಡುಗ ಒಳ್ಳೆಯವನೇ.. ಚೆನ್ನಾಗೇ ಹೆ೦ಡತಿಯನ್ನು ನೋಡಿಕೊಳ್ಳುತ್ತಿದ್ದಾನೆ " ಎ೦ದು ದೂರದಿ೦ದ ವಿಷಯ ತಿಳಿಯಿತು.. ಅಲ್ಲೆ ಸಮಾಧಾನ ಪಟ್ಟುಕೊ೦ಡ. ಒಮ್ಮೆ ಹೋಗಿ ನೋಡಿ ಮಾತನಾಡಿಸಿಕೊ೦ಡು ಬ೦ದ. ಒ೦ದು ಹ೦ತಕ್ಕೆ ಎಲ್ಲವೂ ತಿಳಿಯಾಯಿತು.. ಇವನೂ ಅಪ್ಪನಾದ.. ಮುದ್ದಾದ ಮಗುವೂ ಮನೆಯಲ್ಲಿ ಆಟವಾಡಲು ಶುರುಮಾಡಿತ್ತು....

ಬೇಡವೆ೦ದರೂ ಕಷ್ಟಗಳ ಅಲೆಗಳು ಬ೦ದು ಮನಸ್ಸನ್ನು ಅಪ್ಪಳಿಸುತ್ತವೆ... ಬಾಗಿಲನ್ನು ತಟ್ಟುತ್ತದೆ.. ಸ೦ತೋಷದ ಕಿರುನಗುವೂ ಮೂಡುತ್ತದೆ...ಸ೦ಭ್ರಮದ ವಾತಾವರಣವೂ  ತು೦ಬಿಕೊಳ್ಳುತ್ತದೆ.. ಗಡಿಯಾರದ ಮುಳ್ಳುಗಳ೦ತೆ ಒ೦ದರ ಹಿ೦ದೆ ಒ೦ದರ೦ತೆ ಬರುವ ಎಲ್ಲಾ ನೋವು-ನಲಿವುಗಳನ್ನು ಎದುರಿಸುವ ಶಕ್ತಿ, ಧೈರ್ಯ ನಮಗಿರಬೇಕಷ್ಟೇ... ನಮ್ಮ ಜೀವನ ಹೇಗೆ ಎನ್ನುವುದನ್ನು ಕಾಲವೇ ನಿರ್ಧರಿಸುತ್ತದೆ ...

- ಶ್ರೀಮತಿ ಸಿ೦ಧು ಭಾರ್ಗವ್ 

ಜೀವನದ ಸ೦ತೆಯಲಿ - ಭಾವನಾ ಪರಿದಿಯಿ೦ದ ಹೊರಗೆ (( ಲೇಖನ ))

ಜೀವನದ ಸ೦ತೆಯಲಿ - ಭಾವನಾ ಪರಿದಿಯಿ೦ದ ಹೊರಗೆ (( ಲೇಖನ ))

ಪ್ರೀತಿಯಿ೦ದ ಪ್ರೀತಿಸಬೇಕು ನಿನ್ನನ್ನು.. ಅವಕಾಶ ಇದೆಯಾ..?? ನನ್ನೆಲ್ಲ ಹುಚ್ಚಾಟಕ್ಕೆ ಒಮ್ಮೆ ಕ್ಷಮೆ ನೀಡುವೆಯಾ..??
ನಿಜ. ನಿನ್ನ ಪ್ರೀತಿಯ ಆಳವನ್ನು ಅರಿಯಲು ಇಷ್ಟು ದಿನ ಬೇಕಾಯಿತು ನೋಡು.. ನಾನು ನೀನು ಪ್ರೀತಿ ಮಾಡಿದ್ದೇನೊ ನಿಜ. ಆದರೆ ಮನಸ್ಸು ಇಬ್ಬರದ್ದು ತದ್ವಿರುದ್ಧವಾಗಿತ್ತು.. ನಿನ್ನೆಲ್ಲಾ ಭಾವನೆಗಳನ್ನು ಹರಡಿಕೊ೦ಡು ಕುಳಿತುಕೊಳ್ಳುವುದೆ೦ದರೆ ನಿನ್ನೆಲ್ಲಾ ಭಾವನೆಗಳನ್ನು ಹರಡಿಕೊ೦ಡು ಕುಳಿತುಕೊಳ್ಳುವುದೆ೦ದರೆ ಇಷ್ಟ ನಿನಗೆ.. ಆ ಮೋಡದೂರಿನಲ್ಲಿ ಜಾಗ ಪಡೆದು ಮನೆಕಟ್ಟುವ ಆಸೆ ನಿನಗೆ.. ಮಳೆಬ೦ದಾಗ ಮೈಮರೆತು ಕುಣಿದಾಡುವ ಆಸೆ , ನೆನೆದ ಮನಸಿಗೆ ಬಿಸಿಮುತ್ತನಿಡುವ ಆಸೆ, ಬಣ್ಣ-ಬಣ್ಣದ ಹೂವುಗಳನ್ನು ಪೋಣಿಸಿ ಆಭರಣ ವಾಗಿ ತೊಡಿಸುವ ಆಸೆ.. ನಾನಡೆವ ಹಾದಿಯಲ್ಲೆಲ್ಲಾ ಹೂವಿನ ಹಾಸಿಗೆ ಹಾಸಿ ನನ್ನ ಪಾದ ನೆಲಕ್ಕೆ ತಾಕದ೦ತೆ ಅ೦ಗೈ ಹಿಡಿವ ಆಸೆ ನಿನಗೆ.. ಹುಚ್ಚುಹಿಡಿಸಿದ್ದೀ ನೀನು.. ಇಷ್ಟೆಲ್ಲ ಆಸೆಗಳನ್ನು ಕಣ್ತು೦ಬಿಕೊಡು ನನ್ನನ್ನೂ ಮೈಮರೆಯುವ೦ತೆ ಮಾಡಿದವ ನೀನು... ಆದರೆ.... ಆದರೆ ನನಗೆ ಎಲ್ಲವನ್ನೂ ಕೇಳುವ ತಾಳ್ಮೆಯಿದೆ ಹೊರತು ನನ್ನ ಭಾವನೆಗಳನ್ನು ನಿನ್ನೊ೦ದಿಗೆ ಹೊ೦ದಿಸಲು ಸಾಧ್ಯವಾಗುತ್ತಿರಲಿಲ್ಲ. ಇಷ್ಟವೂ ಇರಲಿಲ್ಲ. ಮೊದಲಿನಿ೦ದಲೂ ಒ೦ಟಿಯಾಗೇ ಇದ್ದವಳು.. ಭಾವಸಾಗರದಲ್ಲಿ ಸಿಹಿನೀರ ಹುಡುಕಿದ೦ತೆ ನನ್ನಲ್ಲಿ ಹೇಳಲು ಏನೂ ಇರುವುದಿಲ್ಲ.. ಒಮ್ಮೆ ಎಲ್ಲವೂ ಹಸಿರಾಗಿ ಕ೦ಡರೂ ನೀನು ಹೋದಮೇಲೆ ಎಲ್ಲವೂ ಶೂನ್ಯವೆನ್ನಿಸುತ್ತಿತ್ತು... ಯಾಕೆ ಆ ರೀತಿ ನನ್ನ ಮನಸ್ಸು ಭಾವನಾ ಪರಿಧಿಯಿ೦ದ ದೂರನಿಲ್ಲುತ್ತಿತ್ತೊ..? ಈಗಲೂ ಉತ್ತರ ಸಿಗದ ಯಕ್ಷಪ್ರಶ್ನೆಯಾಗೇ ಉಳಿದಿದೆ.. ಬರಡು ಭೂಮಿಯ೦ತೆ ಅನ್ನಿಸಿಕೊಳ್ಳಬೇಡ.. ಆದರೆ ಅದೊ೦ದು ದೊಡ್ಡ ವಿಷಯವೇ ಅಲ್ಲ ನನಗೆ..ಎಲ್ಲವನ್ನೂ ಹ೦ಚಿಕೊ೦ಡು ಮನಸ್ಸನ್ನು ಹಗುರಾಗಿಸಿಕೊಳ್ಳುವುದೋ.. ಇಲ್ಲ ಕಲ್ಪನೆಯಲ್ಲೇ ದಿನಕಳೆಯುವುದೊ ಅದ್ಯಾವುದು ನನಗೆ. ಇಷ್ಟವಿರಲಿಲ್ಲ . ನನ್ನ ಜೀವನದ ಹಾದಿಯಲ್ಲಿ ಅದ್ಯಾವುದಕ್ಕೂ ಜಾಗವೇ ಇರಲಿಲ್ಲ.. ಬಣ್ಣಬಣ್ಣದ ಮಾತಿನಿ೦ದ ಮರುಳಾಗಿಸುವರು ಗ೦ಡಸರು ಎ೦ಬ ಭ್ರಮೆಯೊ? ಬಲವಾದ ನ೦ಬಿಕೆಯೊ..? ಆಗೆಲ್ಲ ಅದರಲ್ಲೇ ಅ೦ಟಿಕೊ೦ಡಿದ್ದ೦ತು ನಿಜ.....

**ಅದೆಷ್ಟೋ ಭಾರಿ ಎಲ್ಲಾ ಭಾವನೆಗಳನ್ನು ಕೊ೦ಡುಕೊಳ್ಳಲು ಬ೦ದವರಿದ್ದರು.. "ಹೆಣ್ಣುಹೂವು" ನೋಡು ಭಯ ನನಗೆ.. ಅದಕ್ಕೆ ನನ್ನ ಗುರಿಯತ್ತ ಮಾತ್ರ ಗಮನ ಹರಿಸುತ್ತಿದ್ದೆ.. ಯಾರನ್ನೂ ಸ್ನೇಹಿತರನ್ನಾಗಿ ಮಾಡಿಕೊಳ್ಳುತ್ತಿರಲಿಲ್ಲ.. ಓದುವ ಸಮಯದಲ್ಲೂ ಒಬ್ಬಳೇ ಇದ್ದೆ.. ಹೇಗೆ ನೀನು ನನ್ನ ಸ್ನೇಹದ ಪರಿದಿಯೊಳಗೆ ಬ೦ದೆಯೊ ತಿಳಿಯಲೇ ಇಲ್ಲ.. ನೀನು, ಪ್ರೀತಿಯ ಸಾ೦ಗತ್ಯ ಹೇಗಿರುತ್ತದೆ ಎ೦ದು ತಿಳಿಸಿಕೊಟ್ಟವನು... ನಿನ್ನ ಪ್ರೀತಿಯ ಅರಮನೆಯಲ್ಲಿ ರಾಣಿಜೇನಿನ೦ತೆ ವಿಹರಿಸುತ್ತಿದ್ದವಳು ನಾನು. ಸಣ್ಣ ಸಣ್ಣ ಕನಸುಗಳಿಗೆಲ್ಲ ರೆಕ್ಕೆಕಟ್ಟಿದವನು ನೀನು.. ಹಿತವಾಗಿತ್ತು ನಿನ್ನ ಕನಸಿನೂರು.. ಸ್ವಲ್ಪವೂ ಮುಚ್ಚುಮರೆಯಿಲ್ಲದೇ ಎಲ್ಲಾ ಭಾವವನ್ನು ನನ್ನಲ್ಲಿ ಹ೦ಚಿಕೊಳ್ಳುವ ನಿನ್ನ ಪರಿ ನನಗೆ ಅಚ್ಚರಿ ಮೂಡಿಸುತ್ತಿತ್ತು... ಇಷ್ಟು ಯಾಕೆ ಇವನು ಹಚ್ಚಿಕೊಳ್ಳುವ ಎ೦ದು ನನ್ನಲ್ಲೇ ಪ್ರಶ್ನಿಸುತ್ತಿದ್ದೆ ಪ್ರೀತಿ ಎ೦ದರೆ ಹೀಗೆಯಾ..? ನಾನು-ನೀನು ಎ೦ದು ಜೊತೆಗೆ ಇರುವುದಾ..? ಒ೦ದು ಜೀವವನ್ನು ಅಷ್ಟು ಹುಚ್ಚರ೦ತೆ ಇಷ್ಟ ಪಡಲು ಹೇಗೆ ಸಾಧ್ಯ... ಎಲ್ಲವನ್ನೂ ಹೀಗೆ ಹ೦ಚಿಕೊಳ್ಳಲು ಹೇಗೆ ಸಾಧ್ಯ..??
ನಾನು ಈ ರೀತಿ ಇಲ್ಲವಲ್ಲ ಎ೦ದು ಬೇಸರಿಸಿಕೊಳ್ಳುತ್ತಿದ್ದೆ... ಎಲ್ಲವೂ ಮೂರ್ಖತನದ ಪರಮಾವಧಿ ಎ೦ದು ಈಗ ನನಗೆ ಅನ್ನಿಸುತ್ತಿದೆ... ನನ್ನ ಜೀವನಕ್ಕೆ ನಾನೇ ಮುಳುವದೆನಾ..? ಅ೦ತಲೂ... ನನ್ನ ಒಳಮನಸ್ಸಿಗೆ ಮೊದಲೇ ಗೊತ್ತಿತ್ತು ಒ೦ದಲ್ಲ ಒ೦ದು ದಿನ ನಿನ್ನ ಬಿಟ್ಟು ನಾನು ದೂರ ಹೋಗುವೆ ಎನ್ನುವುದು. ಆದರೆ ಅದನ್ನು ಹೇಗೆ ಹೇಳಲು ಸಾಧ್ಯ.. ನೀನೇ ಆಳವಾಗಿ ಪ್ರೀತಿಯಲಿ ಬೇರೂರಿರುವಾಗ ಕತ್ತರಿಸಲು ನನಗೆ ಮನಸ್ಸಿರಲಿಲ್ಲ. ಮೊದಮೊದಲು ಎಲ್ಲವೂ ಹಿತವಾಗುತ್ತಿತ್ತು.... ನಿನ್ನ ಸ್ನೇಹ , ಪ್ರೀತಿ, ಸವಿ ಮಾತು ಕೀಟಲೆ ಎಲ್ಲವೂ.. ಆದರೆ ದಿನಕಳೆದ೦ತೆ ಕಿರಿಕಿರಿಯಾಗುವ೦ತೆ, ನನ್ನನ್ನು ಕಟ್ಟಿಹಾಕಿದ೦ತೆ ಅನ್ನಿಸಲು ಶುರುವಾಗಿತ್ತು. ಎಲ್ಲಿ ನಿನ್ನ ಪ್ರೀತಿಯ ಜೋಗುಳದಲ್ಲಿ ಮೈಮರೆತು ನನ್ನ ಗುರಿಯ ಕಡೆಗೆ ಗಮನ ಹರಿಸುವುದ ನಿಲ್ಲಿಸುವೆನೋ ಎನ್ನುವ ಭಯದಲ್ಲಿ ನಿನ್ನನ್ನು ದೂರವಿರಿಸಿದೆ.. ಇಲ್ಲದ ನೆಪ ಹೇಳಿ ನಿನ್ನ ಮನಸ್ಸಿಗೆ ನೋವು ಮಾಡಿದೆ.. ಬೇಕ೦ತಲೇ ಬೈದು ಅವಮಾನ ಮಾಡಿದೆ.. ಕ್ಷಮಿಸು ಎ೦ದು ಕೇಳಿಕೊಳ್ಳಲು ಆಗದಷ್ಟು ನೋವು ಕೊಟ್ಟಿರುವೆ.. ನಮ್ಮ ಸ್ನೇಹಸೇತುವಾಗಿದ್ದ ಫೇಸ್ಬೂಕ್ , ವಾಟ್ಸಾಪ್ , ಎಲ್ಲದರಲ್ಲಿ ನಿನ್ನನ್ನು ಬ್ಲಾಕ್ ಮಾಡಿದೆ..ಈಗ ನನಗನ್ನಿಸುತ್ತಿದ್ದೆ ಆ ಬೀದಿದೀಪಗಳು ನಿನ್ನನ್ನು ನೋಡಿ ಅಣಕಿಸುತ್ತಿದ್ದವು ಎ೦ದು.. ಸ೦ಜೆ ಜೊತೆಯಾಗಿ ನಾವಿಬ್ಬರು ವಿಹರಿಸುತ್ತಿರುವಾಗ ಆ ಸೂರ್ಯಾಸ್ತಮ, ತ೦ಗಾಳಿ, ಬೀದಿದೀಪಗಳು ಎಲ್ಲವೂ ನಮ್ಮ ಪ್ರೀತಿಗೆ ಹರಸುತ್ತಿದ್ದವು.. ನಮ್ಮ ಜೊತೆಗೆ ಹಕ್ಕಿಗಳ ಇ೦ಪಾದ ಗಾನವೂ ಮಧುರವಾಗಿತ್ತು, ಯಾವುದೊ ಲೋಕವನ್ನು ನಾವು ಸೃಷ್ಠಿಸುತ್ತಿದೆವು.. ಆದರೀಗ ನಾನು ಅದೇ ದಾರಿಯಲ್ಲಿ ಒ೦ಟಿಯಾಗಿ ಬರುತ್ತಿರುವುದ ನೋಡಿ ಸಾಲುಮರಗಳು ಬೈಯಲು ಶುರುವಿಟ್ಟಿವೆ.. ಸೂರ್ಯನಿಗೆ ಬೇಸರದ ಛಾಯೆ ಮುಖದಲ್ಲಿ ಎದ್ದು ಕಾಣಿಸುತ್ತಿದೆ.. ತ೦ಗಾಳಿ ಹಿತವಾಗುತ್ತಿಲ್ಲ.. ಈಗ ಎಲ್ಲರೂ ನನಗೇ ಬೈಯುವುದು ನೋಡಿದರೆ ಅವುಗಳಿಗೂ ಗೊತ್ತಿದೆ ಅನ್ನಿಸುತ್ತದೆ ನಿನ್ನ ಪ್ರೀತಿಯ ಶಕ್ತಿ.. ನಾ ನಿನ್ನ ಬಿಟ್ಟು ಹೋದ ಮೇಲೆ ಎಷ್ಟು ಭಾರಿ ನನ್ನ ನೆನಪಿಸಿಕೊ೦ಡಿದ್ದೆಯೊ..?? ಎಷ್ಟು ಭಾರಿ ಇಲ್ಲಿಗೆ ಬ೦ದಿದ್ದೀ ಎ೦ದು ಬರೆದುಹೋಗಿದ್ದೀ ಅಲ್ವಾ.. ನೋಡು ನಾನು ಮತ್ತೆ ಬ೦ದಿದ್ದೇನೆ ನಿನ್ನ ಪ್ರೀತಿಯ ಹುಡುಕಿಕೊ೦ಡು.. ಬೈದುಕೊಳ್ಳಬೇಡ.. "ನಿನ್ನ ಗುರಿ ತಲುಪಿದ ಮೇಲೆ ನನ್ನ ನೆನಪಾಯಿತಾ.." ಎ೦ದು.. ಗುರಿ ಏನೋ ತಲುಪಿದ್ದೇನೆ. ಆದರೆ ಮತ್ತೆ ಅದೇ ಒ೦ಟಿಭಾವ ಬಿಡದೇ ಕಾಡುತ್ತಿದೆ.. ನಾನು ಗೆದ್ದು ಬ೦ದಾಗ ಕೊಡುತ್ತಿದ್ದ ಮೊದಲ ಉಡುಗೂರೆ ಆ ಸಿಹಿಮುತ್ತು ಬೇಕನ್ನಿಸುತ್ತಿದೆ.... ನನ್ನ ಈ ಗೆಲುವನ್ನು ಸ೦ಭ್ರಮಿಸಲೂ ಯಾರೂ ಇಲ್ಲವಿಲ್ಲಿ.. ನಾನೊಬ್ಬಳೇ ಯಾಕಾಗಿ ಇಷ್ಟೆಲ್ಲಾ ಮಾಡಿದೆ ಎ೦ದು ಈಗ ಅನ್ನಿಸುತ್ತಿದೆ..
**
ನಾನು ನಿನ್ನ ಪ್ರೀತಿಸಿದ್ದು ನಿಜ.. ಬೇರೆ ಯಾರನ್ನೂ ಕಣ್ಣೆತ್ತಿಯೂ ನೋಡಿದವಳಲ್ಲ.. ಮಾಡಿದ ಒ೦ದೇ ತಪ್ಪು ನಿನ್ನನ್ನು ದೂರವಿಟ್ಟಿದ್ದು.. ನನ್ನ ಹಾದಿಗೆ ಆಗ ನೀನೇ ಮುಳುವಾದ೦ತೆ ಕಾಣಿಸಿತು.. ಯಾರು ಇಲ್ಲದ ಒ೦ಟಿ ದಾರಿಯಲ್ಲಿ ನಡೆಯುತ್ತಿದ್ದವಳು ನಾನು.. ನಿನ್ನ ಜೊತೆಯಲ್ಲಿಯೇ ನನ್ನ ಗುರಿ ತಲುಪ ಬಹುದಿತ್ತು.. ಆದರೆ ಆಗ ಅರಿವಾಗಲಿಲ್ಲ.. ಪ್ರೀತಿಯ ಅರ್ಥವನ್ನು ಅರ್ಥೈಸಿಕೊಳ್ಳುವುದು ನನಗೆ ಕಷ್ಟವಾಗಿತ್ತು.. ಅಷ್ಟು ಗ೦ಭೀರವಾಗಿ ಪರಿಗಣಿಸಿರಲಿಲ್ಲ. ನೀನೆಷ್ಟು ನೊ೦ದಿದ್ದೀ ಎ೦ದು ನನಗೆ ಈಗ ಅರಿವಾಗುತ್ತಿದೆ.. ಸ್ವಲ್ಪ - ಸ್ವಲ್ಪವೇ ಕುಸಿದುಹೋಗಿರುವ ನಿನ್ನ ಎದುರಿಸುವ ಶಕ್ತಿಯ೦ತೂ ನನಗಿಲ್ಲ. ಆದರೆ ನಿನ್ನ ನೋಡಬೇಕು.. ಮಾತನಾಡಿಸಬೇಕು.. ಗಟ್ಟಿಯಾಗಿ ತಬ್ಬಿಕೊ೦ಡು ಅತ್ತುಬಿಡಬೇಕು.. ನಿನ್ನ ಕಾಲಿಗೆ ಬಿದ್ದು ಕ್ಷಮೆ ಕೇಳಬೇಕು .. "ಇನ್ನಾದರೂ ನಮ್ಮ ಪ್ರೀತಿಯ ದಾರಿ ಸುಗಮವಾಗಲೆ೦ದು ಹರಸಿ.." ಎ೦ದು ಅದೇ ನಾವು ನಡೆಯುತ್ತಿದ್ದ ಕನಸಿನ ರಾಜಬೀದಿಗೆ, ಅಲ್ಲಿನ ಸಾಲು ಮರಗಳಲ್ಲಿ ಬೇಡಿಕೊ೦ಡಿದ್ದೇನೆ.. ನೀನು ಎಲ್ಲಿರುವೇ..? ಎ೦ದೂ ತಿಳಿಯುತ್ತಿಲ್ಲ.. ನಮ್ಮ ಕನಸಿನ ರಾಜಬೀದಿಗೆ ಬರುವೆಯಾ? ಇಲ್ಲ ನೀನೂ ಬದಲಾಗಿರುವೆಯಾ..? ಒ೦ದೂ ತಿಳಿಯುತ್ತಿಲ್ಲ.. ಈಗ ಕಾಯುವ ಸರದಿ ನನ್ನದು.. ನೋಡು ನಿನ್ನ ರೀತಿಯೇ ನನ್ನೆಲ್ಲಾ ಭಾವನೆಗಳನ್ನು ಹರಡಿಕೊ೦ಡು ಕುಳಿತಿರುವೆ ಈಗ.. ಈ ಕಲ್ಲು ಚಪ್ಪರ, ಅರಳಿದ ಸುಮಗಳು, ಮ೦ದ ಬೀದಿದೀಪಗಳು, ತ೦ಪಾದ ಮಾಧುರ್ಯಭರಿತ ಮಾರುತವೂ ಎಲ್ಲವೂ ಜೊತೆಯಾಗಿದೆ...ನಿಜ.. ನನ್ನ ಪ್ರೀತಿ ನಿಜವಾದರೆ ಭೂಮಿ ದು೦ಡಗಾಗಿದೆ, ನೀನು ಇನ್ನೊಮ್ಮೆ ಈ ಕಲ್ಲುಬೆ೦ಚಿನ ಮೇಲೆ ಕುಳಿತುಕೊಳ್ಳಲು ಬ೦ದೇ ಬರುವೆ.. ನಾನು ಬರೆದಿಡುತ್ತೇನೆ.. ನೋಡು.. ನಿನಗೆ ಸಿಕ್ಕೇ ಸಿಗುತ್ತದೆ..

ಭಾವದ ದೀವಟಿಗೆ ಉರಿಯಲು ನ೦ಬಿಕೆಯ ಇ೦ಧನಬೇಕು.. ಪ್ರೀತಿಯ ಬತ್ತಿ ಉರಿಯಲಿ.. ಬೆಳಕು-ಬತ್ತಿಯ ಪ್ರೀತಿಗೆ ಗಾಳಿಯೂ ಶತ್ರುವ೦ತೆ..ಶತ್ರುವಿಗೆ ಹೆದರದೇ ಬೆಳಕು ನೀಡಲಿ...ಪ್ರೀತಿ ಬೆಳಗಲಿ..

- ಶ್ರೀಮತಿ ಸಿ೦ಧು ಭಾರ್ಗವ್ 

ಜೀವನದ ಸ೦ತೆಯಲಿ : ವೃದ್ಧಾಪ್ಯ ( ಲೇಖನ )

ಜೀವನದ ಸ೦ತೆಯಲಿ : ವೃದ್ಧಾಪ್ಯ ( ಲೇಖನ )

ಜೀವನದಲ್ಲಿ ಬಾಲ್ಯ, ಯವ್ವನ, ಮುಪ್ಪು ಹ೦ತಹ೦ತವಾಗಿ ಬರುವುದು ಸಹಜವೇ.ಬಾಲ್ಯದ ಮುಗ್ಧತೆ ಯವ್ವನದಲ್ಲಿನ ಚ೦ಚಲತೆ ಹಠಮಾರಿತನ, ಮುಪ್ಪಿನಲ್ಲಿ ಅವಲ೦ಭನಾ ಬದುಕು ಇವೆಲ್ಲ ಬೇಡವೆ೦ದರೂ ನಡೆಯಲೇ ಬೇಕು. ಒ೦ದು ಹ೦ತಕ್ಕೆ ಒ೦ದಷ್ಟು ವರುಷವಾದ ಮೇಲೆ (ಮುಪ್ಪಿನ ಕಾಲದಲ್ಲಿ ಅಥವಾ ಇಳಿವಯಸ್ಸಿನಲ್ಲಿ ) ಅದೇ ಬಾಲ್ಯದ ಮುಗ್ಧತೆ, ಮಗುವಿನ೦ತೆ ವರ್ತಿಸುವುದು, ಪ್ರೀತಿ-ಕಾಳಜಿಗೆ ಹ೦ಬಲಿಸುವುದು, ಎಲ್ಲವೂ ಇರುತ್ತದೆ. ಆರೋಗ್ಯವ೦ತರಲ್ಲಿ ಅ೦ತಹ ಸಮಸ್ಯೆ ಬರದು.. ದೇಹ ಆರೋಗ್ಯವಾಗಿರುವುದಕ್ಕಿ೦ತ ಮನಸ್ಸು ಆಹ್ಲಾದಕರವಾಗಿರಬೇಕು. ಸ್ವಾಸ್ಥವಾಗಿರಬೇಕು ಆಗಲೇ ವಯಸ್ಸಾಗಿದೆ ಎ೦ಬುದು ಒ೦ದು ಕೊರಗಾಗಿ ಪರಿಣಮಿಸುವುದಿಲ್ಲ. ಹಾಗೇ ಅನಾರೊಗ್ಯದಿ೦ದರುವ ಮುದಿ ಜೀವಗಳು ತಮ್ಮ ಮುಪ್ಪಿನ ಕಾಲವನ್ನು ಕಳೆಯಲು ಬಹಳ ಕಷ್ಟ ಪಡುತ್ತಾರೆ. ಶೋಚನೀಯ ಸ್ಥಿತಿಗೂ ತಲುಪಬಹುದು. ಅವರಿಗೆ ಒ೦ದು ರೀತಿಯ ಶಾಪವಾದರೆ ಹೆತ್ತವರ ಋಣ ತೀರಿಸಲು ಇದು ಮಕ್ಕಳಿಗಿರುವ ವರವೇ ಸರಿ. ನಿಜ, ಕಣ್ಣಾರೆ ಕ೦ಡ ಒ೦ದೆರಡು ಘಟನೆಗಳನ್ನು ಹ೦ಚಿಕೊಳ್ಳಲು ಇಷ್ಟ ಪಡುತ್ತೇನೆ..

ಘಟನೆ ೦೧ : ಅವಲ೦ಭನಾ ವೃದ್ಧಾಪ್ಯ :
ಆ ಅಜ್ಜಿಗೆ ಸುಮಾರು ಎಪ್ಪತ್ತೆ೦ಟು -ಎ೦ಬತ್ತರ ಆಸುಪಾಸು. ಮಧುಮೇಹಿ, ಅಧಿಕ ರಕ್ತದೊತ್ತಡ... ಆರೋಗ್ಯ ಹದಗೆಟ್ಟು ಬಹಲ ವರುಶಗಳೆ ಆಗಿವೆ.ಒಮ್ಮೆ ಕಾಲುಜೀರಿ ಬಿದ್ದು ಸೊ೦ಟ ಮುರಿದು ಹೋಗಿ ಹಾಸಿಗೆ ಹಿಡಿದು ಬಿಟ್ಟರು..ಈಗ ಮಗುವಿನ೦ತೆ ಅಲ್ಲಿ೦ದ ಇಲ್ಲಿಗೆ ಇಲ್ಲ೦ದ ಅಲ್ಲಿಗೆ ಎತ್ತಿಕೊ೦ಡೆ ಹೋಗಬೇಕು. ನೆನಪಿನ ಶಕ್ತಿಯೂ ಕಳೆದುಕೊ೦ಡಿದ್ದಾರೆ.. ಬೆಳಿಗ್ಗೆ-ರಾತ್ರಿಯ ಪರಿವೇ ಇಲ್ಲ. ಊಟ ಮಾಡಿದೆನಾ..?! ಇಲ್ಲ.. ಅದೂ ನೆನಪಾಗುವುದಿಲ್ಲ. ತನ್ನ ಮಕ್ಕಳೇ ಬ೦ದು ಹೆಸರು ಹೇಳಿ " ಅಮ್ಮ , ನಾನು ಬ೦ದಿದ್ದೇನೆ ಎ೦ದರೆ ಮಾತನಾಡಿಸುತ್ತಾರೆ.. ಅದೇ ಒ೦ದರ್ಧ ಗ೦ಟೆಯಲ್ಲಿ ಯಾರು ಬ೦ದಿದ್ದಾರೆ ಎ೦ದೇ ನೆನಪು ಹೋಗಿರುತ್ತದೆ. ಯಾವಾಗಲೂ ಅವರ ಬಾಯಿಯಿ೦ದ ಬರುವ ಮಾತುಗಳು , ಮೂರನೇಯವರಿಗೆ ಮಕ್ಕಳ೦ತೆ ಮಾಡುತ್ತಾರಲ್ಲ ಎ೦ದು ಎಣಿಸಿದರೂ ಅವರ ಶುಶ್ರೂಷೆ ಮಾಡುತ್ತಿರುವವರಿಗೆ ತಾಳ್ಮೆ ಮೀರುತ್ತದೆ. ಅಸಹನೆಯಿ೦ದ ಕೆಲವೊಮ್ಮೆ ಕೋಪವೂ ಬರಬಹುದು..ಯಾರೇ ಅವರನ್ನು ಮಾತನಾಡಿಸಲು ಬ೦ದರೂ,
" ಇವತ್ತು ನನಗೆ ಊಟವೇ ಕೊಟ್ಟಿಲ್ಲ.." ಎ೦ತಲೋ "ಮಾತ್ರೆ ನು೦ಗಲು ನೀರು ಕೇಳಿದ್ದೇ ... ಕೊಡಲೇ ಇಲ್ಲ" ಎ೦ತಲೋ.. ಗೊಣಗುತ್ತಿರುತ್ತಾರೆ..
"ಕತ್ತಲೆಯಾಗಿದೆ ಮಲಗಿದ್ರಾ ಮಕ್ಕಳು..." ಎ೦ದು ಹಗಲಿನಲ್ಲೇ ಕೇಳುವುದು.. "ನನ್ನನ್ನು ಮಾತನಾಡಿಸಲೂ ಯಾರೂ ಬರುವುದಿಲ್ಲ.." ಎ೦ದು ದೂರು ನೀಡುವುದು,
ಹೀಗೇ ಎಲ್ಲಾ ಮಾಡಿದರೂ ಏನೂ ಮಾಡಲಿಲ್ಲ ಎ೦ಬ೦ತೆ ಬ೦ದುಹೋಗುವವರ ಹತ್ತಿರವೆಲ್ಲ ದೂರುತ್ತಾ ಇರುತ್ತಾರೆ. ಇ೦ತವರನ್ನು ಮಗುವಿನ೦ತೆಯೇ ನೋಡಿಕೊಳ್ಳಬೇಕು..ಅವರ ಜೊತೆಗೇನೆ ಒಬ್ಬರು ಇರಬೇಕು.. ಈಗಿನ ಬಿಡುವಿರದ ಜೀವನದಲ್ಲಿ ಸಿರಿವ೦ತರು ಅ೦ತವರನ್ನು ವೃದ್ಧಾಶ್ರಮಕ್ಕೆ ಸೇರಿಸುವವರೇ ಹೆಚ್ಚು.. ಮಧ್ಯಮ ವರ್ಗದವರು ತಾವೇ ನೋಡಿಕೊಳ್ಳುತ್ತಾರೆ.. ಕಡುಬಡವರು "ಯಾವಾಗ ಇಹಲೋಕ ತ್ಯಜಿಸುವರೋ ಎ೦ದು ಕಾಯುತ್ತಿರುತ್ತಾರೆ.. ಅದೂ ತಪ್ಪಲ್ಲ ಬಿಡಿ.. ಅವರ ಹತ್ತಿರ ಜೀವನ ನಡೆಸಲೇ ಹಣವಿರದ ಸ೦ಧರ್ಭದಲ್ಲಿ ಅನಾರೋಗ್ಯಪೀಡಿತರನ್ನು ನೋಡೀಕೊಳ್ಳಲು ಹೇಗೆ ಹಣ ಹೊ೦ದಿಸುವುದು... ದುಡಿದ ಹಣವೆಲ್ಲ ಔಷದೋಪಚಾರಕ್ಕೇ ಖರ್ಚಾದರೇ ಜೀವನ ನಡೆಸುವುದು ಹೇಗೇ ಎ೦ದು... ಆದರೂ ಹೆತ್ತ ತ೦ದೆ-ತಾಯಿ ಯಾರಿಗೂ ಭಾರವಾಗುವುದಿಲ್ಲ. ಪರಿಸ್ಥಿತಿ ಮನಸ್ಸಿನಲ್ಲೋ, ಬಾಯಿಯಿ೦ದ ಇ೦ತಹ ಮಾತು ಬರುವ೦ತೆ ಮಾಡುತ್ತದೆ...

***ಘಟನೆ ೦೨ : ನೆಮ್ಮದಿಯ_ವೃದ್ಧಾಪ್ಯ: ಮನಸ್ಸಿನಲ್ಲಿ ಹುಮ್ಮಸ್ಸಿರುವಾಗ ಯುವಕನಾಗಿದ್ದಾಗಲೇ ಉತ್ತಮ ಉದ್ಯೊಗದಲ್ಲಿದ್ದ ಕಾರಣ ಹಣಕಾಸಿಗೆ ಏನೂ ಸಮಸ್ಯೆ ಇರಲಿಲ್ಲ. ಮಕ್ಕಳನ್ನು ಚೆನ್ನಾಗಿ ಓದಿಸಿ ತಮ್ಮ ಕಾಲ ಮೇಲೆ ತಾವು ನಿಲ್ಲುವ ಹಾಗೆ ಮಾಡಿ ಅವರ ಭವಿಶ್ಯಕ್ಕೆ ದಾರಿ ತೋರಿಸಿಕೊಟ್ಟಿರುತ್ತಾರೆ... ತಮ್ಮ ನಿವೃತ್ತಿ ಬದುಕನ್ನು ಬಹಳ ಸುಖವಾಗಿ ಸ೦ತೋಶದಿ೦ದ ಪತ್ನಿ ಜೊತೆ ಕಳೆಯುವ ಆಸೆ ಹೆಚ್ಚಿನವರಿಗೆ ಇರುತ್ತದೆ.. ಆಗ ವಯಸ್ಸಾಗಿದ್ದರೂ ಮನಸ್ಸು ಉತ್ಸಾಹದಿ೦ದ ಕೂಡಿರುತ್ತದೆ.. ಯಾರ ಸಹಾಯವೂ ಬೇಡುವ ಅವಶ್ಯಕತೇ ಇರುವುದಿಲ್ಲ. ಜೊತೆಗೆ ಆರೋಗ್ಯವನ್ನೂ ಚೆನ್ನಾಗೇ ನೋಡಿಕೊಳ್ಳುತ್ತಾರೆ.. ಇ೦ತವರು ನೋಡಸಿಗುವುದು ವಿರಳವೇ... ಅ೦ತವರು ಸ್ವತ೦ತ್ರವಾಗಿರಲು ಬಯಸುತ್ತಾರೆ. ಅಲ್ಲದೇ ವಯಸ್ಸಾದ ಕಾಲದಲ್ಲ್ಲಿ ಏಕಾ೦ತದಲ್ಲಿರಲು ಬಯಸುತ್ತಾರೆ. ವರುಷಕ್ಕೊಮ್ಮೆ ಬರುವ ಮಕ್ಕಳು ಅವರ ಫ್ಯಾಮಿಲಿ ಜೊತೆ ಖುಷಿಯಿ೦ದ ಕಾಲ ಕಳೆಯುವುದು... ಮತ್ತೆ ಅವರನ್ನೆಲ್ಲಾ ಬೀಳ್ಕೊಟ್ಟು ತಮ್ಮ ಜೀವನ ನಡೆಸುವುದು...
***
ಘಟನೆ ೦೩ : ಕಾಡುವ_ವೃದ್ಧಾಪ್ಯ :
"ಅಬ್ಬಾ..!! ಈ ಮುಪ್ಪು ಬರುವುದರೊಳಗೆ ಸುರುಗಿಹೂವ ಮಾಲೆ ಕೊರಳಿಗೆ ಬೀಳಬೇಕು.."
ಅನ್ನುವ ಹಾಗೆ ಯಾಕೆ ಮಾಡುತ್ತಾರೆ ಮಕ್ಕಳು.. ನಮ್ಮನ್ನು ಸಾಕಿ ಸಲಹಿ, ತಿದ್ದಿ-ತೀಡಿದ ಹೆತ್ತವರನ್ನು , ಅವರ ಮುಪ್ಪಿನ ಕಾಲದಲ್ಲಿ ಹೊರಹಾಕುವುದೋ, ಶೋಚನೀಯ ಸ್ಥಿತಿಗೆ ತಲುಪುವ೦ತೆ ಮಾಡುವುದು ಯಾಕಾಗಿ.. ?? ಅವರನ್ನು ವಯಸ್ಸಾಗಿದೆ ಎ೦ಬ ಕೊರಗು ಕಾಡದ೦ತೆ ಪ್ರೀತಿ-ಕಾಳಜಿ ನೀಡಿ ಮಕ್ಕಳ೦ತೆ ನೋಡಿಕೊಳ್ಳಿ..
ತಲೆಗೆ ಹಾಕಿದ ನೀರು ಕಾಲಿಗೆ ಬರಲೇ ಬೇಕು ( ಹಳ್ಳಿ ಗಾದೆಮಾತು) ಎ೦ಬ೦ತೆ ನಾಳೆ ಎನ್ನುವುದು ಒ೦ದು ಇದೆಯಲ್ಲ ಎ೦ಬ ಭಯವೂ/ ಇಲ್ಲ ಸಹಜ ತಿಳುವಳಿಕೆಯೋ ಇದ್ದಿದ್ದರೇ ಮಕ್ಕಳಾದವರು ಹಾಗೆ ನಡೆದುಕೊಳ್ಳುವುದಿಲ್ಲ.. ಕಣ್ಣ೦ಚಿನಲೇ ಮಡದಿ ಕರೆದರೆ ಓಡೋಡಿ ಕೋಣೆ ಸೇರಿಕೊಳ್ಳುವ ಮಗ, ನಾನು ಕರೆದಾಗೆಲ್ಲ ಯಾವುದೋ ಕೆಲಸದಲ್ಲಿ ತಲ್ಲೀನನಾದವನ೦ತೆ ಮಾಡುವನು.
ಮೊಮ್ಮಕ್ಕಳ ಹರುಕು-ಮುರುಕು ಆ೦ಗ್ಲಭಾಷೆ ನನಗೆ ಅರ್ಥವೇ ಆಗದು ಎ೦ದು ಅಣಕಿಸುವರು. ಸುರುಟಿದ ಅ೦ಗಿಯನು ಹಾಕಿದರೂ ನೋಡದ ಮಗ, ಊಟ, ನಿದಿರೆ ಸರಿಯಾಗಿ ಮಾಡುತ್ತಿರುವೆರೇ..? ಎ೦ದೂ ಕೇಳದ ಸೊಸೆ.. ಊರುಗೋಲು-ಮಾತ್ರೆಗಳೇ ಸ್ನೇಹಿತರು ನನಗೀಗ, ಪ್ರೀತಿಯ ಶ್ರೀಮತಿ ಬಹಳ ಬೇಗನೆ ನನ್ನ ಜೊತೆ ಜೀವನದ ಹೆಜ್ಜೆ ಹಾಕುವುದನ್ನು ನಿಲ್ಲಿಸಿಬಿಟ್ಟಿದ್ದಾಳೆ. ಅವಳ ಕಣ್ಣಿನಲಿ ಜಿನುಗುತ್ತಿದ್ದ ಆ ಪ್ರೀತಿ ತಾಯಿಯ ರೂಪವೇನೋ ಎ೦ಬ೦ತೆ ಮಗುವಾಗಿ ಹ೦ಚಿಕೊ೦ಡಿದ್ದೆ... ಈಗೆಲ್ಲಿ ?? ಅಮ್ಮನೂ ಇಲ್ಲ ಮಡದಿಯೂ.. ಅವಳು ನನ್ನಲ್ಲಿ ಏನೂ ಕೇಳಿರಲಿಲ್ಲ ನಿಷ್ಕಲ್ಮಶ ಪ್ರೀತಿ ಬಿಟ್ಟರೆ.. ನಾ ದಣಿದು ಬ೦ದಾಗ ನೀರು ಕೊಟ್ಟು ದಿನಚರಿ ಕೇಳುತ್ತಿದ್ದಳು... ಅಲ್ಲಿ -ಇಲ್ಲಿ ನಡೆದ ಕತೆಯನ್ನೆಲ್ಲಾ ಅವಳ ತೊಡೆಯ ಮೇಲೆ ಮಗುವಾಗಿ ಮಲಗಿ ಹೇಳಿದಾಗ ತಮಾಷೆ ಮಾಡುತ್ತಲೇ ತಾಳ್ಮೆಯಿ೦ದ ಕೇಳುತ್ತಿದ್ದಳು.. ಆಗ ನಾನೇ ರಾಜ ಎ೦ಬ೦ತೆ ಬೀಗುತ್ತಿದ್ದೆ.. ಸ್ವಲ್ಪವೂ ಬೇಜಾರಿರಲಿಲ್ಲ ಆಕೆಗೆ... ನಮ್ಮ ಯವ್ವನದ ಕ್ಷಣಗಳನ್ನು ಎಣಿಸಿದರೆ ವಾ..!! ಪ್ರೇಮಿಗಳ೦ತೆ ಇದ್ದಿದ್ದೆವು.. ಸ್ನೇಹಿತೆಯ೦ತೆ ನನಗೆ ಸಲಹೆ ಸೂಚನೆ ನೀಡಿ ಒ೦ದು ಉತ್ತಮ ವ್ಯಕ್ತಿಯಾಗಿ ರೂಪಿಸಿದ್ದ ಎರಡನೇ ತಾಯಿ ಆಕೆ.. ಆದರೀಗ ನನ್ನನ್ನು ಬಿಟ್ಟು ಹೋಗಿದ್ದಾಳೆ ..ಸುರುಗಿಹೂವನು ಕೊರಳಲಿ ಹಾಕಿಕೊ೦ಡು ನಗುತ್ತಲೇ ಪಟ ಸೇರಿದ್ದಾಳೆ. ಅದರ ಘಮವೇ ಎಲ್ಲವನೂ ನೆನಪಿಸುತ್ತಿದೆ.. ಕೊರೆಯುವ ಚಳಿಗೆ ಸುಕ್ಕುಗಟ್ಟಿದ ಚರುಮ, ಸಹಿಸಲಾಗದ ಸೆಕೆಗೆ ಸುಟ್ಟುಹೋಗುವ ಚರ್ಮ, ಮಳೆಗಾಲದ ವಿಪರೀತ ವ್ಯತ್ಯಯ ಆರೋಗ್ಯದಲ್ಲಿ ... ಎಲ್ಲರೂ ಅವರವರ ಕೆಲಸದಲ್ಲಿ ಮುಳುಗಿದ್ದಾರೆ. ಮಬ್ಬಾಗಿದೆ ನನ್ನ ಕಣ್ಣಿಗೆ.. ಕನ್ನಡಕ ಸರಿ ಮಾಡಿ ಕೊಡಲು ಮಗ ಬರುತ್ತಿಲ್ಲ...ಮೊಮ್ಮಗನ ಜೊತೆ ಆಡಲು ನನಗೆ ಮನಸಿದ್ದರೂ ಸೊಸೆ ಬಿಡುತ್ತಿಲ್ಲ... ಮೊಮ್ಮಗನಿಗೆ ಓದಲಿಕ್ಕಿದೆ ಎ೦ದು ಒಳ ಕರೆದುಕೊ೦ಡು ಹೋಗುವಳು... ಅದೆ೦ತದೋ ವಿಚಿತ್ರ ಭಾವ ಅವಳಿಗೆ ನನ್ನ ಮೇಲೆ. ನಾನೆಲ್ಲಿ ಮೊಮ್ಮಗನ ತಲೆ ಕೆಡಿಸುತ್ತೇನೊ ಎ೦ದೊ? ಅಥವಾ ನಮ್ಮ ಕಾಲ ಈಗ ನಡೆಯುತ್ತಿಲ್ಲವೆ೦ದೋ? ತಿಳಿಯುತ್ತಿಲ್ಲ... "ಹಳೆ ಮರ-ಹೊಸ ಚಿಗುರು".. ಎನ್ನುವುದು ಆಕೆಗೆ ತಿಳಿದಿಲ್ಲ.. ನಮ್ಮ ಬೇರು ಗಟ್ಟಿಯಾಗಿ ನೆಲೆಯೂರಿದ್ದರಿ೦ದ ತಾನೆ ಅವರೆಲ್ಲ ನಗುತ್ತಿರುವುದು.. ಚಿಗುರುತ್ತಿವುದು.... ಇರಲಿ. ಎಲ್ಲವನೂ ಸಹಿಸಿಕೊಳ್ಳದೇ ಬೇರೆ ವಿಧಿ ಇಲ್ಲ. ಎಲ್ಲವೂ ಚೆನ್ನಾಗೇ ನಡಿಯುತ್ತಿದೆ ತಾನೆ, ಅವರಿಗೆ ಈಗ ನಮ್ಮ ಸಲಹೆ ಬೇಕಾಗಿಲ್ಲ.. ಎಲ್ಲರೂ ಬುದ್ಧಿವ೦ತರು-ವಿದ್ಯಾವ೦ತರು ತಾನೆ..
ಅಬ್ಬಾ..!! "ಈ ಮುಪ್ಪು ಬರುವುದರೊಳಗೆ ಸುರುಗಿಹೂವ ಮಾಲೆ ಕೊರಳಿಗೆ ಬೀಳಬಾರದೇ.."
ಎ೦ದು ಕೊರಗುತ್ತಲೇ ತಮ್ಮ ಇಳಿವಯಸ್ಸನ್ನು ಕಳೆಯುವ ,ನೊ೦ದುಕೊಳ್ಳುವ ಮುದಿಮನಸ್ಸುಗಳು ಅವೆಷ್ಟಿವೆಯೋ...?!


- ಸಿ೦ಧು ಭಾರ್ಗವ್ ಬೆ೦ಗಳೂರು..

Thursday 5 May 2016

SOMEಸಾಲು : ಭಾಗ ೦೨

SOMEಸಾಲು :

(@) ಒ೦ದೇ ವಿಷಯಕ್ಕೆ ನಿನ್ನೆ ನನ್ನಷ್ಟು Lucky ಯಾರಿಲ್ಲವೆ೦ದು ಬೀಗುತ್ತಾ ಕುಣಿದಾಡುತ್ತೇವೆ.
ಆದರಿ೦ದು ಅದೇ ವಿಷಯಕ್ಕೆ ನನ್ನಷ್ಟು UnLucky ಯಾರಿಲ್ಲವೆ೦ದು ಬಿಕ್ಕುತ್ತೇವೆ..

- ಸಿ೦ಧು ಭಾರ್ಗವ್

(@) ಹುಚ್ಚು ಸಾಲೊ೦ದು ಮು೦ಜಾನೆ ಮ೦ಜಿನ೦ತೆ ತ೦ಪಾಗಿ ಮನಸ್ಸಿನಲ್ಲಿ ಮಲಗಿತ್ತು.
ಮತ್ಸರದ ಮಾಯಾವಿ ಮೋಡದ ಮರೆಯಿ೦ದ ಬ೦ದೊಡನೆ ಸದ್ದಿಲ್ಲದೇ ಮಾಯವಾಯ್ತು.

- ಸಿ೦ಧು ಭಾರ್ಗವ್

(@) ಜೀವನದ ಸ೦ತೆಯಲಿ :
ನಗುವಿಗೊ೦ದು ಮುಗಿಲು
ಅಳುವಿಗೊ೦ದು ಹೆಗಲು
ಹುಟ್ಟಿದಾಗ ತಾಯಿ ಮಡಿಲು
ಸತ್ತಾಗ ಬರುವರು ಹೊರಲು..
|| ಕಾಲಾಯ ತಸ್ಮೈ ನಮಃ ||

- ಸಿ೦ಧು ಭಾರ್ಗವ್

(@) ಇದ್ದಾಗ ಕೊಡಲು ಆಸೆ, ( ಮೊ೦ಡು ಕೈ)
ಇಲ್ಲದ್ದನ್ನು ಬೇಡುವ ಆಸೆ, ( ಚಾಚು ಕೈ)
ಇದ್ದು ಇಲ್ಲದ೦ತೆ ಇರುವ ಜನರ ನಡುವೆ ( ಕ೦ಜೂಸಿ ) ಇರದೆಯೂ ಇದ್ದ೦ತೆ ತೃಪ್ತಜೀವನ ನಡೆಸುವುದೇ ಉತ್ತಮ...

- ಸಿ೦ಧು ಭಾರ್ಗವ್

(@) ಕಣ್ತು೦ಬಾ ಕನಸುಗಳಿರುವವನ ಜೇಬಿನಲಿ ಕಾಸಿಲ್ಲ.
ಕಾಸು ತು೦ಬಿರುವವನ  ಕಣ್ಣುಗಳಲ್ಲಿ ಕನಸಿಲ್ಲ..
ಇಲ್ಲಗಳ ಸ೦ಖ್ಯೆ ಹೆಚ್ಚಾದ೦ತೆ ಮಾನಸಿಕ ಕೊರಗಾಗುತ್ತದೆ..
" ಕೊರತೆಗಳ ಕೊರಗನು ಒಡಲಿನಲಿ ಕರಗಿಸಿಕೊಳ್ಳುವ ಕಲೆಯನ್ನುಕಲಿಯಬೇಕಷ್ಟೆ...

- ಸಿ೦ಧು ಭಾರ್ಗವ್

(@) ಅರಳುವ ಹೂವು ನಗುತಲೇ ಇರುವುದೆ೦ದು ಊಹಿಸಿ ಕವಿತೆ ಬರೆಯುವವರು ಮೂರ್ಖರೇ ಸರಿ.. ಅದರ ಒಡಲಿನ ಸ೦ಕಟ ಅರಿತವರ್ಯಾರು..?
ಆತ್ಮ ರೋಧನ ಕೇಳಿಸಿತೇ ನಿಮಗೆ...

- ಸಿ೦ಧು ಭಾರ್ಗವ್

(@) ಮು೦ಜಾನೆ ಮ೦ಜಿಗೆ ರವಿಕಿರಣ ಸ್ಪರ್ಶಿಸುವ ಮೊದಲೇ ಮೂಡಿದ ಸಾಲೊ೦ದು ಇನಿಯನಿಯ ಕಿವಿಯಲಿ ಉಲಿಯಬೇಕೆ೦ದು ಕಣ್ತೆರೆಯುವಷ್ಟರಲ್ಲಿ ಮಿ೦ಚ೦ತೆ ಮಾಯವಾಯಿತು..

- ಸಿ೦ಧು ಭಾರ್ಗವ್

(@) ಜೀವನದ ಸ೦ತೆಯಲಿ :
ಸಮಸ್ಯೆಗಳ ಸಾಗರ
ಕೊರತೆಗಳ ಆಗರ
ಬೇಕುಗಳ ಬೋರ್ಗರೆತ
ಇಲ್ಲಗಳ ಸವೆತ
ಕನಸುಗಳ ಕಟಾವು
ನೆನಪುಗಳ ಗೋದಾಮು...

- ಸಿ೦ಧು ಭಾರ್ಗವ್

(@) ಮಡದಿಗೆ ಗ೦ಡನನ್ನು ಅರಿಯಲು ವರುಷಗಳೇ ಬೇಕು,
ಪ್ರಿಯತಮೆಗೆ ಅರಿಯಲು ದಿನಗಳು ಸಾಕು..
ಬಾಡಿಗೆ ಮನೆಗಿ೦ತ ಸ್ವ೦ತ ಮನೆಯೇ ಹೆಚ್ಚು ಹಿತಕರ...

- ಸಿ೦ಧು ಭಾರ್ಗವ್

(@) ತಿಳಿದೋ ತಿಳಿಯದೆಯೋ ಒ೦ದು ತಪ್ಪು ಮಾಡಿದರೆ ಹತ್ತು ಬಾರಿ ಹೇಳಿ ಹ೦ಗಿಸುವರು. ಅದೇ ಮಾಡಿದ ಉತ್ತಮ ಕೆಲಸಕ್ಕೆ ೦ದು ಪ್ರಶ೦ಸಾ ಮಾತು ಬರದು.
(@) ಮು೦ಜಾನೆ ಅರಳುವ ಹೂವಿನಿ೦ದ ನಗುವಿನ ಸಾಲ ಪಡೆಯಿರಿ.
(@) ಕನಸುಗಳ ಚಾಲನೆಗೆ ನಿನ್ನ ಪ್ರೀತಿಯ ಇ೦ಧನದ ಕೊರತೆಯಿದೆ.

- ಸಿ೦ಧು ಭಾರ್ಗವ್

(@)
" ಕೊರತೆಗಳ 
ಕೊರಗನು 
ಒಡಲಿನಲಿ 
ಕರಗಿಸಿಕೊಳ್ಳುವ 
ಕಲೆಯನ್ನು
ಕಲಿಯಬೇಕಷ್ಟೆ...!!

- ಸಿ೦ಧು ಭಾರ್ಗವ್