Friday 29 October 2021

ಲೇಖನ : ಸಿಹಿತಿನಿಸುಗಳ ಸವಿಯುವಾಗ ಗಮನಹರಿಸಿರಿ

 

Source Images




ಲೇಖನ : ಸಿಹಿತಿನಿಸುಗಳ ಸವಿಯುವಾಗ ಗಮನಹರಿಸಿರಿ

ಲೇಖಕಿ ಸಿಂಧು ಭಾರ್ಗವ ಬೆಂಗಳೂರು.

ಸಿಹಿ ಹಾಗು ಸಿಹಿತಿಂಡಿ ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಮಕ್ಕಳಂತೂ ಚಾಕಲೇಟ್, ಡೈರಿಮಿಲ್ಕ್ ಗಳನ್ನು ಕೈತುಂಬಾ ತುಂಬಿಸಿಕೊಂಡು ತಿನ್ನುತ್ತಾರೆ. ಜಾಮೂನು ಕಂಡರೆ ಮೂರ್ನಾಲ್ಕು ಒಂದೇ ಉಸಿರಿಗೆ "ಗುಳುಂ" ಮಾಡುವವರೂ ಇದ್ದಾರೆ. ಹಬ್ಬ ಹರಿದಿನಗಳಲ್ಲಿ ಸಿಹಿಖಾದ್ಯಗಳ ಗಮ್ಮತ್ತೇ ಬೇರೆ. ಮದುವೆ ಸಮಾರಂಭದಲ್ಲಿ,  ಹಬ್ಬದ ಸಂದರ್ಭಗಳಲ್ಲಿ ತನ್ನತ್ತ ಸೆಳೆಯುತ ಬಾಣಸಿಗರನ್ನು ಹೊಗಳಲು ಮೊದಲ ಸ್ಥಾನ ಪಡೆಯುವುದು ಈ ಸಿಹಿ ಖಾದ್ಯಗಳು.

ಅದರಲ್ಲಿ ಮೊದಲನೆಯದಾಗಿ ವಿವಿಧ ರೀತಿಯ ಪಾಯಸಗಳು. ಮನೆಯಲ್ಲಿ ಹಬ್ಬ ಹರಿದಿನಗಳಲ್ಲಿ ತಾಯಿ ಹತ್ತಾರು ಬಗೆಯ ಅಡುಗೆ ಮಾಡುವಾಗ ಪಾಯಸವನ್ನು ಮಾಡಿಯೇ ಮಾಡುತ್ತಾರೆ. ಸುಲಭವಾಗಿ ಹೆಸರುಬೇಳೆ ಪಾಯಸ, ಶಾವಿಗೆ ಪಾಯಸ(ಕೀರು) ಮಾಡಬಹುದು. ದ್ರಾಕ್ಷಿ ಗೋಡಂಬಿ ಬಾದಾಮಿ, ದಪ್ಪ ಹಾಲು ಬೆರೆಸಿ ಪಾಯಸ ಮಾಡಿದರೆ ಆಹಾ!! ಎಂತ ರುಚಿ. ಮನೆಮಂದಿಯೆಲ್ಲರೂ ಬಾಯಿ ಚಪ್ಪರಿಸಿ ಸವಿಯುತ್ತಾರೆ. ಆದರೆ ಮಕ್ಕಳು "ಬೇಡ" ಎಂದು ಹೇಳುವುದೇ ಜಾಸ್ತಿ. ಮುದ್ದು ಮಾಡಿ ಒಂದು ಸೌಟು ಪಾಯಸ ಹಾಕಿಕೊಳ್ಳುವಂತೆ ಒತ್ತಾಯ ಮಾಡುತ್ತಾರೆ. ಕಷ್ಟದಲ್ಲಿ ಮುಖ ಸಿಂಡರಿಸಿಕೊಂಡು ಹೇಗೋ ತಿಂದು ಮುಗಿಸುತ್ತಾರೆ ಬಿಡಿ.

ಕೆಲವರಿಗೆ ಸಿಹಿ ಎಂದರೆ ತುಂಬಾ ಇಷ್ಟ. ಹಾಲು ಪರಮ್ಮಾನ್ನ, ಗೋದಿಕಡಿ ಪಾಯಸ, ಅವಲಕ್ಕಿ ಪಾಯಸ, ಕಡಲೆಬೇಳೆ ಪಾಯಸ ಎಂದರೆ ಅಚ್ಚುಮೆಚ್ಚು. ಅದಕ್ಕೆ ಒಣಹಣ್ಣುಗಳ ಬೆರೆಸಿದಾಗ ಬಿಸಿ ಬಿಸಿಯ ಜೊತೆಗೆ ಘಮವೂ ಮೂಗಿಗೆ ಬಡಿಯುತ್ತದೆ. ಹಾಗೆಯೇ ಬೆಲ್ಲ, ಕಾಯಿಹಾಲು ಬೆರೆಸಿ ಚೆನ್ನಾಗಿ ಕುದಿಸಿ ಮಾಡುವ ಪಾಯಸ ಬಾಯಲ್ಲಿ ನೀರೂರುವಂತೆ ಮಾಡುವುದು. ಎರಡು ಮೂರ ಸಲಿ ಹಾರಿಸಿಕೊಂಡು ಹೊಟ್ಟೆ ತುಂಬಾ ಸವಿಯುತ್ತಾರೆ. ಕಾಯಿಹಾಲು, ಬೆಲ್ಲದಿಂದ ಮಾಡಿದ ಪಾಯಸ ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲಿ ಕ್ಯಾಲ್ಸಿಯಂ ಅಂಶ ಅಧಿಕವಾಗಿರುತ್ತದೆ. ಹಾಗಾಗಿ ಆಗಾಗ್ಗೆ ಮಕ್ಕಳಿಗೆ ಮನೆಯಲ್ಲಿ ವಿಶೇಷ ಸಂದರ್ಭವಿಲ್ಲದಿದ್ದರೂ ವಾರಕ್ಕೊಮ್ಮೆ ಪಾಯಸ ಮಾಡಿ ಬಡಿಸಬೇಕು.

ಇನ್ನು ಪಾಯಸ ಮಾತ್ರವಲ್ಲದೇ ಕ್ಯಾರೆಟ್ ಹಲ್ವಾ, ಲಡ್ಡು, ಬರ್ಫಿ, ಅಕ್ಕಿ ಅಥವಾ ಗೋದಿ ಹಾಲುಬಾಯಿ, ಅಪ್ಪ, ಸಿಹಿಗುಂಬಳ ಕಡುಬು, ಮೈಸೂರು ಪಾಕ್, ಪೇಡ, ಡ್ರೈ ಜಾಮೂನು, ಅತಿರಸ, ಹೋಳಿಗೆ, ಚಿರೋಟಿ ಹೀಗೆ ಲಘು ಸಿಹಿ ಹೊಂದಿದ ಸಿಹಿಖಾದ್ಯಗಳನ್ನು ತಯಾರಿಸಿ ಸವಿಯಬಹುದು.

ಸಕ್ಕರೆ ಸೇವಿಸುವಾಗ ಎಚ್ಚರ ವಹಿಸಬೇಕು:

೧)ಬೆಲ್ಲದಿಂದ ತಯಾರಿಸಿದ ಸಿಹಿಖಾದ್ಯ ಆರೋಗ್ಯಕರ.
೨) ಸಕ್ಕರೆಯಿಂದ ತಯಾರಿಸಿದ ಸಿಹಿಖಾದ್ಯಗಳಿಂದ ಕೊಲೆಸ್ಟರಾಲ್‌ ಬರಬಹುದು. ಉದರದಲ್ಲಿ ಸಕ್ಕರೆ ಬೇಗನೆ ಕರಗುವುದಿಲ್ಲ.
೩) ಸಕ್ಕರೆ, ಉಪ್ಪು, ರವೆ, ಬಿಳಿಅಕ್ಕಿ, ಮೈದಾ ಬಿಳಿವಿಷ (ವೈಟ್ ಪಾಯಿಸನ್) ವಿಭಾಗಕ್ಕೆ ಸೇರುತ್ತದೆ.
೪) ಮುಂಜಾನೆಯ ಚಹಾಗೆ ಕೂಡ ಕಡಿಮೆ ಸಕ್ಕರೆ ಬಳಸಿ ಅಥವಾ ಸಕ್ಕರೆ ಇಲ್ಲದೆ ಸೇವಿಸಿದರೂ ಆರೋಗ್ಯಕ್ಕೆ ಒಳ್ಳೆಯದು.
೫) ದಿನದಲ್ಲಿ ಸಕ್ಕರೆ ಬಳಸುವ ಪ್ರಮಾಣ ಕಡಿಮೆಮಾಡಬೇಕು. ಶುಗರ್ (ಮಧುಮೇಹ) ಬಂದರೇನೆ ಸಕ್ಕರೆ ತಿನ್ನುವುದು ಬಿಡಬೇಕೆಂದಿಲ್ಲ. ಪೂರ್ವದಿಂದಲೇ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು.
೬) ಸಕ್ಕರೆಗಿಂತ ಕಲ್ಲುಸಕ್ಕರೆ, ಕೆಂಪು ಕಲ್ಲು ಸಕ್ಕರೆ ತುಂಬಾ ಒಳ್ಳೆಯದು.
೭) ಮಕ್ಕಳಿಗೆ ಕಲ್ಲುಸಕ್ಕರೆ ವಿಳ್ಯದೆಲೆ ಜೊತೆಗೆ ಜಜ್ಜಿ ತಿನ್ನಿಸಿದರೆ ಕಫ ಕಡಿಮೆಯಾಗುವುದು.
೮) ಕಲ್ಲುಸಕ್ಕರೆಯನ್ನು ಸಿಹಿ ತಿಂಡಿ ತಯಾರಿಸುವಲ್ಲಿ ಬಳಸಬಹುದು.
೯) ಮದುಮೇಹಿಗಳು ಸಕ್ಕರೆ ಸೇವಿಸುವುದನ್ನು ನಿಲ್ಲಿಸಿ ಮುಂಜಾನೆ ಸಪ್ಪೆ ಚಹಾ ಸವಿಯುವಾಗ ಒಣ ಖರ್ಜೂರವನ್ನು ತಿನ್ನಬಹುದು.
೧೦) ಮಕ್ಕಳಿಗೆ ಚಾಕಲೇಟ್, ಕ್ಯಾಂಡಿ ಕೊಡಲೇಬಾರದು. ಹಲ್ಲುಗಳ ಸಂದಿಯಲ್ಲಿ ಸಿಕ್ಕಿ ಹುಳುಕು ಹಲ್ಲು ಸಮಸ್ಯೆ ಬರುತ್ತದೆ. ಸರಿಯಾಗಿ ಹಲ್ಲು ಉಜ್ಜಲು ಹೇಳಬೇಕು.
೧೧) ಸಕ್ಕರೆ ಬದಲಿಗೆ ಜೇನುತುಪ್ಪ, ಹಣ್ಣಿನ ರಸಗಳನ್ನು ಬಳಸಬಹುದು. ಅವು ನೈಸರ್ಗಿಕ ಸಿಹಿಯನ್ನು ಹೊಂದಿರುತ್ತವೆ.
೧೨) ಇನ್ನೊಂದು ಗಮನಿಸಲೇ ಬೇಕಾದ ಅಂಶವೇನೆಂದರೆ, ಸಿಹಿತಿಂಡಿಗಳ ತಂದು ಫ್ರಿಡ್ಜ್  ನಲ್ಲಿ ಇಡಬಾರದು.
೧೩) ಇನ್ನು ಐಸ್ ಕ್ರೀಂ ನಲ್ಲಿ ಸಕ್ಕರೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಬಳಸಲಾಗುತ್ತದೆ. ಅದು ಕೂಡ ಆರೋಗ್ಯಕ್ಕೆ ಹಾನಿಕಾರಕ.
೧೪) ಅಯ್ಯೋ!! ಸಿಹಿತಿಂಡಿ, ಯಾರೂ ತಿನ್ನದೇ ಉಳಿಯಿತಲ್ಲ, ಎಂದು ಮನೆಯಲ್ಲಿ ತಾಯಿ ಅಥವಾ ಮಕ್ಕಳಿಗೆ ನೀಡಿ ಹತ್ತು ಹದಿನೈದು ದಿನಗಳ ಹಳೆಯ ಸಿಹಿತಿಂಡಿಗಳ ತಿನ್ನುವವರೂ ಇದ್ದಾರೆ. ಹಾಗೆ ಮಾಡಿದರೆ ತಾಜಾ ರಹಿತ, ಗಟ್ಟಿಯಾದ, ಹೆರೆ ಕಟ್ಟಿದ ಸಕ್ಕರೆ, ಹಳೆಯ ರಿಫೈಂಡ್ ಆಯಿಲ್, ನಿಮ್ಮ ಉದರವನ್ನು ಸೇರಿದರೆ ಜೀರ್ಣವಾಗದೇ ಅಜೀರ್ಣವಾಗಬಹುದು. ಕಫ ಉಂಟಾಗುತ್ತದೆ.
೧೫) ಬೇಕರಿಗಳಲ್ಲಿ‌ ಗಾಜಿನ ಡಬ್ಬಗಳಲ್ಲಿ ಸಂಗ್ರಹಿಸಿಟ್ಟ ಸಿಹಿತಿಂಡಿಗಳನ್ನು ಖರೀದಿಸುವಾಗಲೂ ಎಚ್ಚರಿಕೆವಹಿಸಿರಿ.

ಹೀಗೆ ಹೆಚ್ಚಾಗಿ ಸಕ್ಕರೆಯಿಂದಲೇ ತಯಾರಿಸುವ ಸಿಹಿತಿಂಡಿಗಳಿಂದ ನಮ್ಮ ಆರೋಗ್ಯಕ್ಕೆ ಹಾನಿಕಾರಕ ಪರಿಣಾಮ ಬೀರುತ್ತದೆ. ಬಾಯಿಗೆ ರುಚಿ ನೀಡಿದರೂ ಬಹಳ ಎಚ್ಚರವಹಿಸಿ ಸೇವಿಸಬೇಕು.



Monday 25 October 2021

Sindhu Bhargava October month of articles

ಅಕ್ಟೋಬರ್ ಮಾಸದ ಎಲ್ಲ ಪತ್ರಿಕಾ ಲೇಖನಗಳು... ಆಯ್ಕೆ ಮಾಡಿ ಪ್ರಕಟಿಸಿದ ಪತ್ರಿಕಾ ಸಂಪಾದಕರಿಗೆ ವಂದನೆಗಳು🌹

ಕೊಂಕಣವಾಹಿನಿ ದಿನಪತ್ರಿಕೆ

ಜನಮಿಡಿತ ದಿನಪತ್ರಿಕೆ

ಹರ್ಷವಾಣಿ ಮಾಸಪತ್ರಿಕೆ

ಯುಗಪುರುಷ ಮಾಸಪತ್ರಿಕೆ

ಕರ್ಮವೀರ ವಾರಪತ್ರಿಕೆ

ಸ್ತ್ರೀ ಜಾಗೃತಿ ಮಾಸಪತ್ರಿಕೆ
















Wednesday 6 October 2021

ಲೇಖನ: ಹರೆಯದ ಮಕ್ಕಳ ಸಮಸ್ಯೆಯನ್ನು ಹೆತ್ತವರು ಕೂತು ಪರಿಹರಿಸಬೇಕು

 

Google source images

ಲೇಖ‌ನ  : ಈಸಬೇಕು ಇದ್ದು ಜೈಸಬೇಕು

ನಿತ್ಯಶ್ರೀ ಎಂಬ ಮುದ್ದಾದ ಹುಡುಗಿ ಹರೆಯಕ್ಕೆ ಕಾಲಿಟ್ಟು ಒಂದೆರಡು ಮಾಸವಾಯಿತಷ್ಟೆ. ಮಗಳು ಮೈನೆರೆದಳು ಎಂದು ಅಕ್ಕ ಪಕ್ಕದವರನ್ನೆಲ್ಲ ಕರೆದು ವಿಶೇಷವಾದ ಕಾರ್ಯಕ್ರಮವನ್ನು ನಡೆಸಿ ಆರತಿ ಎತ್ತಿ ಜರಿಸೀರೆ ಉಡಿಸಿ ಹೂವಮುಡಿಸಿ ಮದುಮಗಳಂತೆ ಸಿಂಗರಿಸಿದ್ದಳು. ಮಾವ ಬಂದು ಚಿನ್ನದ ಸರ, ಅಜ್ಜಿ ಚಿನ್ನದ ಬಳೆಯನ್ನು ಉಡುಗೊರೆ ನೀಡಿದರು. ತಾಯಿ ಮನೆಯಿಂದ ಸಂಭ್ರಮವೋ ಸಂಭ್ರಮ. ಎಲ್ಲವೂ ಮುಗಿದು ಒಂದೆರಡು ತಿಂಗಳು ಕಳೆಯುತಲೇ ನಿತ್ಯನ ನಡವಳಿಕೆಯಲ್ಲಿ ಬದಲಾವಣೆಗಳು ಕಾಣಿಸತೊಡಗಿದವು. ಅಕ್ಕ ಪಕ್ಕದ ಗೆಳತಿಯೊಂದಿಗೆ  ಹೆಚ್ಚೆಚ್ಚು ಮಾತನಾಡುವುದು, ನಗುವುದು ಅಲ್ಲೇ ಸಮಯ ಕಳೆಯುವುದು. ಓದುವುದರಲ್ಲಿ ಆಸಕ್ತಿ ಕಡಿಮೆಯಾಗುತ್ತ ಬಂದಿತು. ಯಾವಾಗಲೂ ತನ್ನ ಸೌಂದರ್ಯದ ಬಗ್ಗೆ ಚಿಂತಿಸುವುದು. ಗೆಳತಿಯರು ಹೊಗಳಲಿ ಎಂದು ಏನೇನೋ ಪ್ರಯತ್ನಪಡುವುದು, ಅರೆಬರೆ ಮೈತೋರಿಸುವ ಬಟ್ಟೆ ಹಾಕುವುದು, ಮೊಬೈಲ್ ನಲ್ಲೇ ಮುಳುಗಿದ್ದು ಸೆಲ್ಫೀ ತೆಗೆದುಕೊಳ್ಳುವುದು. ತಾಯಿಗೆ ಇದೆಲ್ಲವೂ ವಿಚಿತ್ರ ಅನಿಸಿದರೂ ವಯಸ್ಸಿನ ಮಗಳು ಎಂದು ಸುಮ್ಮನಾಗುತ್ತಿದ್ದರು. ಆದರೆ ದಿನೇದಿನೇ ಇದು ಹೆಚ್ಚಾಗತೊಡಗಿತು. ಒಮ್ಮೆ ಮೊಬೈಲ್ ನಲ್ಲಿ ಮಧ್ಯರಾತ್ರಿ ತನಕ ಸಂದೇಶ ಕಳುಹಿಸುತ್ತ ಯಾರೊಂದಿಗೋ ಸಂವಹನ ನಡೆಸುತ್ತಿದ್ದಳು. ಮಗಳಿನ್ನೂ ಎಚ್ಚರದಿಂದಿರುವುದನ್ನು ತಾಯಿ ಗಮನಿಸಿದರು‌. ಯಾರೊಂದಿಗೆ ಮಾತನಾಡುತ್ತಿದ್ದೀ ಎಂದು ಕೇಳಿದರೆ ಉತ್ತರ ಕೊಡದೇ ಮಲಗಿದ್ದಳು.

ಇದಾದ ಮೇಲೆ ಮರುದಿನ ಕೂಡ ಹಾಗೆಯೇ ಮೊಬೈಲ್ ನಲ್ಲಿ ಮಾತನಾಡುತ್ತ  ಮೇಲಿನ ಮಹಡಿಗೆ ಹೋಗಿದ್ದಳು. ತಾಯಿಯು ಹಿಂಬಾಲಿಸಿ ಹೋದಾಗ ಹುಡುಗನ ದನಿ ಕೇಳಿಸಿತ್ತು. ಮೊಬೈಲ್ ಕಸಿದುಕೊಂಡು "ಯಾರವನು? ನಮ್ಮ ಮರ್ಯಾದೆ ಕಳೆಯುವೆಯಾ? ತಂದೆಗೆ ಗೊತ್ತಾದರೆ ನಿನ್ನ ಕೊಂದೇ ಬಿಡುವರು.. ಇದನ್ನೆಲ್ಲ ಇಂದಿಗೆ ನಿಲ್ಲಿಸು .." ಎಂದು ಕೇಳಿಕೊಂಡರು. ದೊಡ್ಡ ಜಗಳವಾಗಿ ಮಗಳಿಗೆ ಹೊಡೆದರು. ಅತ್ತರು. ಎಲ್ಲವೂ ಒಂದೇ ಸಮನೆ ಜೋರಾಗಿತ್ತು.
ಒಮ್ಮೆ ಬಿಗಿಯಾದ ಜೀನ್ಸ್ ಪ್ಯಾಂಟ್ ಟೀ ಶರ್ಟ್ ಹಾಕಿಕೊಂಡು ಸೆಲ್ಪೀ ತೆಗೆದರೆ ಇನ್ನೊಮ್ಮೆ ಮೇಕಪ್ ಮಾಡಿಕೊಂಡು ಕೂದಲನ್ನು ಹಾರಲು ಬಿಟ್ಟು ಸೆಲ್ಫೀ ತೆಗೆದುಕೊಳ್ಳುತ್ತಿದ್ದಳು. ಮೊದಮೊದಲು ತಾಯಿಗೆ ಹೆದರುತ್ತಿದ್ದರೆ ನಂತರದಲ್ಲಿ ತಾಯಿಯ ಎದುರೇ ಹುಡುಗನ ಜೊತೆ ಮಾತನಾಡುತ್ತಿದ್ದಳು. ನೇರವಾಗಿ ತನ್ನ ಫೋಟೋ ತೆಗೆದು ಕಳುಹಿಸುತ್ತಿದ್ದಳು. ತಾಯಿಗೆ ಇದೇನು ಅರಿವಾಗುತ್ತಿರಲಿಲ್ಲ. ಮಗಳ ಮೇಲಿನ ವ್ಯಾಮೋಹವೋ, ಅತಿಯಾದ ನಂಬಿಕೆಯೋ ಅಥವಾ ಈಗಿನ ತಂತ್ರಜ್ಞಾನದ ಸಾಮಾಜಿಕ ಜಾಲತಾಣಗಳ ಪ್ರಭಾವದ ಅರಿವು ಅವರಿಗೆ ಇಲ್ಲದ ಕಾರಣ ಮಗಳು ಎಂತಹ ಅಪಾಯದಲ್ಲಿ ಸಿಲುಕಿದ್ದಾಳೆ ಎಂದೂ ಕೂಡ ಗೊತ್ತಿರದ ಪರಿಸ್ಥಿತಿಯಲ್ಲಿ ಅವರಿದ್ದರು. ಆದರೆ ಯಾವಾಗಲೂ ಬೈಯುವುದು, ಓದು ಎಂದು ಹೇಳುವುದು ಆಗಾಗ್ಗೆ ಜಗಳ ಸಾಮಾನ್ಯವಾಗಿ ನಡೆಯುತ್ತಿತ್ತು. ಎಷ್ಟು ಹೇಳಿದರೂ ಮಗಳು ಮಾತ್ರ ಹರೆಯದ ಹುಚ್ಚುತನಕ್ಕೆ ತನ್ನತನವನ್ನು ಯಾವುದೋ ಪುಂಡ ಹುಡುಗರ ಕೈಗೆ ಒಪ್ಪಿಸಿದ್ದಳು. ಆಚೆಕಡೆಯಿಂದ ಆ ಹುಡುಗ ವಿಧವಿಧವಾಗಿ ಹೊಗಳುತ ಅರೆಬರೆ ಬಟ್ಟೆಹಾಕಿಕೊ ಎಂದು ಹೇಳುವುದು, ಅವಳನ್ನು ಒಬ್ಬಳೇ ರೂಮಿಗೆ ಹೋಗಿ ಅರೆನಗ್ನ ಫೋಟೋ ಕಳುಹಿಸು ಎಂದು ಒತ್ತಾಯಿಸುವುದು, ಪ್ರೀತಿಯ ಹೆಸರಿನಲ್ಲಿ ಇವಳನ್ನು ಸಂಪೂರ್ಣವಾಗಿ ಮುಳುಗಿಸಿದ್ದ. ಅಲ್ಲದೇ ತಾನೊಬ್ಬನೆ ಇರುವೆ ಎಂದು ಸುಳ್ಳು ಹೇಳಿ ತನ್ನ ಸುತ್ತ ಒಂದಷ್ಟು ಹುಡುಗರ ಗುಂಪನ್ನೇ ಕೂಡಿಕೊಂಡು ಅವಳು ಕಳುಹಿಸುತ್ತಿದ್ದ ಫೋಟೋಗಳನ್ನು ನೋಡಿ ಮಜ ಮಾಡುತ್ತಿದ್ದ. ಗೆಳೆಯರ ಮೊಬೈಲ್ ಗಳಿಗೂ ಕಳುಹಿಸುತ್ತಿದ್ದ. ಅವನ ಕಣ್ಣಿಗೆ ಅವಳೊಂದು ಕುರಿಯಂತೆ ಕಾಣಿಸುತ್ತಿದ್ದಳು. ತನ್ನ ವಿಕೃತ ಮನಸ್ಸಿಗೆ ಹೇಗೆ ಬೇಕೋ ಹಾಗೆ ಬಳಸಿಕೊಳ್ಳುತ್ತಿದ್ದ‌. ಇತ್ತಲಿಂದ ಇದೇನು ಗೊತ್ತೇ ಇರದ ಅವನ ನೀಚಬುದ್ದಿಗೆ ಅಮಾಯಕಿಯು ಬಲಿಯಾಗುತ್ತಿದ್ದಳು. ಯಾವ ಅಪಾಯದ ಕರೆಗಂಟೆ ಕೂಡ ಕೇಳಿಸಿಕೊಳ್ಳದ ಕೊಂಚವೂ ಅನುಮಾನವನ್ನು ಪಡದೇ ಅವನು ಹೇಳಿದ ಹಾಗೆ ನಡೆದುಕೊಳ್ಳುತ್ತಿದ್ದಳು. ಅದಕ್ಕೆ ಮೇಲಿನ ಮನೆ ಗೆಳತಿ ಕೂಡ ದಿನವೊಂದರಂತೆ ಪುಂಕಾನುಪುಂಕ ಹುಡುಗರ ಬಗ್ಗೆ ವಿಷಯ ತಿಳಿಸುತ್ತಿದ್ದಳು. ಹುಡುಗರ ಮೇಲೆ ಆಸಕ್ತಿ ಬರುವ ಹಾಗೆ ಮಾಡಿ, ನೀನು ಇನ್ನು ಚಂದ ಕಾಣಿಸಿಕೊಳ್ಳಬೇಕು. ಹಳ್ಳಿಗುಗ್ಗು ಎನ್ನಬಾರದು ಅಂತೆಲ್ಲ ಕಿವಿ ಊದಿ ಉಬ್ಬಿಸುತ್ತಿದ್ದಳು. ಅದರಂತೆ ನಿತ್ಯಶ್ರೀ ಪ್ರತಿದಿನ ತಾಯಿಯ ಹತ್ತಿರ ಹಣ ಕೇಳುವುದು , ಬಟ್ಟೆ ಖರೀಸುವುದು, ಮೇಕಪ್ ಗೆ ಬೇಕಾದ ಸಾಮಾಗ್ರಿಗಳ ಖರೀಸುವುದು, ಹೀಗೇ ಹಣವನ್ನು ನೀರಿನಂತೆ ಖರ್ಚು ಮಾಡುತ್ತಿದ್ದಳು. ತಾಯಿಗೆ ಇದುವೇ ದೊಡ್ಡ ತಲೆಬಿಸಿಯಾಯಿತು. ಒಮ್ಮೆ ಹುಡುಗ " ಬಾಯ್ ಕಟ್ ಮಾಡಿಸಿಕೋ ನಿನಗೆ ಚಂದ ಕಾಣಿಸುತ್ತದೆ. ಎಂದು ಯಾವುದೋ ಸಿನೆಮಾದ, ನಟಿಯ ಫೋಟೋ ಕಳುಹಿಸಿ ಹೀಗೆ ಡ್ರೆಸ್, ಹೇರ್ ಸ್ಟೈಲ್ ಮಾಡಿಕೋ.." ಎಂದಿದ್ದ.  ಆಗ  ತಾಯಿಯ ಹತ್ತಿರ "ನನಗೆ ಬಾಯ್ ಕಟ್ ಮಾಡಿಸಬೇಕು. ಬ್ಯೂಟಿ ಪಾರ್ಲರ್ ಗೆ ಹೋಗುವೆ, ಹಣ ಕೊಡು..." ಎಂದು ದುಂಬಾಲು  ಬಿದ್ದಳು. ಹತ್ತನೇ ತರಗತಿಗೆ ಹೋಗಲು ಅಡ್ಮಿಶನ್ ಕೂಡ ಮಾಡಿಸಿಕೊಳ್ಳಲು ಇಷ್ಟ ಪಡದೇ ಮನೆಯಲ್ಲೇ ಇದ್ದಳು. ಆನ್ಲೈನ್ ಕ್ಲಾಸ್ ಇದೆ ಎಂದು ಸುಳ್ಳು ಹೇಳಿ ಒಬ್ಬ ಬೀದಿ ಹುಡುಗನ ಸೆಳೆತಕ್ಕೆ ಸಿಲುಕಿದ್ದಳು. ತಾಯಿ ಎಷ್ಟು ಅತ್ತರು ಗೋಗರೆದರು ಕೇಳಿಸಿಕೊಳ್ಳುತ್ತಲೇ ಇರಲಿಲ್ಲ.

" ಇದ್ದಕ್ಕಿದ್ದಂತೆ ಇವಳಿಗೆ ಈ ಆಲೋಚನೆ ಏಕೆ ಬಂದಿತು‌ ಅದೂ ಇಷ್ಟ ಉದ್ದ ಕೂದಲನ್ನು ಕತ್ತರಿಸುವುದಾದರೂ ಏಕೆ? ನಾನು ಹಣ ಕೊಡುವುದಿಲ್ಲ. ನಿನಗೆ ಹುಚ್ಚು ಹಿಡಿದಿದೆಯಾ? ಯಾವಾಗ ನೋಡಿದರೂ ಸೌಂದರ್ಯದ ಬಗೆಗೆ ಆಸಕ್ತಿ ಜಾಸ್ತಿ. ಮೇಕಪ್ ,ಬಟ್ಟೆ, ನೈಲ್ ಪಾಲಿಶ್, ಇಯರ್ ರಿಂಗ್ಸ್, ಮ್ಯಾಚಿಂಗ್ಸ್ ಎಂದೆಲ್ಲ ಹಣ ಕೇಳುವೆ. ಎಲ್ಲಿಂದ ಬರುತ್ತದೆ? ಟ್ಯೂಷನ್ ಫೀಸ್ ಜೊತೆಗೆ  ಆನ್ಲೈನ್ ಕ್ಲಾಸ್ ಫೀಸ್ ಕೂಡ ಕೊಡಬೇಕು. ಕರೋನಾದಿಂದ ತಂದೆಗೆ ಕೆಲಸ ಇಲ್ಲ. ಹಣ ಎಲ್ಲಿಂದ ಬರುತ್ತದೆ ಹೇಳು..." ಎಂದು ಬೈಯ ತೊಡಗಿದರು. ಜಗಳ ಮಾಡಿದರು. ಹೊಡೆದರು."ಕಾಯಿ ಕದ್ದವರ ಬಾಯಿ ಮೇಲು" ಎಂಬಂತೆ ನಿತ್ಯಶ್ರೀ ತಾಯಿಗೆ ಬೈಯತೊಡಗಿದಳು. ಬೊಬ್ಬೆಹಾಕುವುದು, ಅಳುವುದು ಹೆಚ್ಚಾಯಿತು. ಇವರಿಬ್ಬರ ಜೋರುದನಿ ಅಕ್ಕಪಕ್ಕದ ಮನೆಗಳಿಗೂ ಕೇಳಿಸಿತು. "ಮರ್ಯಾದೆ ಕಳೆಯುವೆಯಾ?" ಎಂದು ಹೊಡೆದರು. ನಿತ್ಯಶ್ರೀ ಕಿರುಚುತ್ತ ಒಳ ಓಡಿದಳು. ಆದರೆ ತನ್ನ ಹಟ ಬಿಡಲಿಲ್ಲ ‌. ದಿನಗಳು ಉರುಳಿದವು ಅಮ್ಮ ಹಣ ಕೊಡಲಿಲ್ಲ. ಆಚೆಯಿಂದ ಹುಡುಗ ಒತ್ತಾಯ ಮಾಡುವುದು ಹೆಚ್ಚಾಯಿತು. ನಿತ್ಯಶ್ರೀಗೆ ಒತ್ತಡ ಹೆಚ್ಚಾಯಿತು. ಒಂದು ರೀತಿಯಲ್ಲಿ ಅವನ ವಶಕ್ಕೊಳಗಾದವಳಂತೆ ನಡೆದುಕೊಳ್ಳುತ್ತಿದ್ದಳು. ನಾನು ಸೋಲುತ್ತಿದ್ದೇನೆ ಎಂದು ಅವಳಿಗೆ ಅನಿಸತೊಡಗಿತು. ಅವನು ಹೇಳಿದ ಒಂದು ಕೆಲಸ ನನಗೆ ಮಾಡಲು ಆಗುತ್ತಿಲ್ಲವಲ್ಲ. ಎಂದು ಅನಿಸತೊಡಗಿತು‌. ಅವನು ಕೂಡ "ನನ್ನ ಪ್ರೀತಿಸುತ್ತೀಯಾ ತಾನೆ?! ನನ್ನ ಆಸೆಗೆ ಇಲ್ಲ ಎನ್ನುವುದಿಲ್ಲ ತಾನೆ??.." ಎಂದೆಲ್ಲ ಬ್ಲಾಕ್ ಮೇಲ್ ಮಾಡುತ್ತಿದ್ದ. ಆಗಾಗ್ಗೆ ಪೀಡಿಸುತ್ತಿದ್ದ.

Google source Images


ಇವಳಿಗೆ ಏನಾಯಿತೋ ಏನೋ? ಮತ್ತೆ ತಾಯಿಯ ಬಳಿ ಕೇಳಿದಳು. "ನನಗೆ ಬಾಯ್ ಕಟ್ ಮಾಡಿಸಿಕೊಳ್ಳಲೇಬೇಕು. ಹಣ ಕೊಡು" ಎಂದು. "ಅದಕ್ಕೆ ಮುನ್ನೂರು-ನಾನೂರು ರೂಪಾಯಿ ಖರ್ಚಾಗುತ್ತದೆ ನಾನು ಕೊಡುವುದಿಲ್ಲ" ಎಂದರು. ಕೂಡಲೇ ಸಿಟ್ಟು ಮಾಡಿಕೊಂಡು ರೂಮುಗೆ ಹೋಗಿ ಜೋರಾಗಿ ಬಾಗಿಲು ಹಾಕಿಕೊಂಡು ಆ ಹುಡುಗನಿಗೆ ವೀಡಿಯೋ ಕರೆಮಾಡಿ ಫ್ಯಾನಿಗೆ ಸೀರೆ ಬಿಗಿದು "IAm Sorry.. ನಾನು ಸೋತುಹೋದೆ.. ನಿನ್ನ ಒಂದು ಸಣ್ಣ ಆಸೆಯನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ನೀನೆಷ್ಟು ಪ್ರೀತಿಸುತ್ತೀಯಾ.. ನನಗಾಗಿ ಏನೆಲ್ಲ ಮಾಡಿದಿ. ಆದರೆ ನನ್ನ ಕೈಲಿ ಏನೂ ಮಾಡಲು ಸಾಧ್ಯವಾಗುತ್ತಿಲ್ಲ. ಕ್ಷಮಿಸಿ ಬಿಡು. ನನ್ನ ತಾಯಿ, ತುಂಬಾ ಜೋರು ಕೆಟ್ಟವಳು, ನನ್ನ ಆಸೆಗೆ, ಕನಸುಗಳಿಗೆ ಬೆಲೆ‌ ಕೊಡೋದಿಲ್ಲ. ನಾನಿಲ್ಲಿ ಒಂಟಿ, ನನಗ್ಯಾರು ಇಲ್ಲ... ಎಂದೆಲ್ಲ ಹೇಳಿ ನೇಣು ಬಿಗಿದುಕೊಂಡಳು. ಒದ್ದಾಡತೊಡಗಿದಳು. ಅವಳ ದನಿ ತಾಯಿಗೆ ಕೇಳಿಸಿತು‌ ಕಿಟಕಿಯಿಂದ ನೋಡಿದಾಗ ಆಘಾತವಾಯಿತು. ಒಮ್ಮೆಗೆ ಬಾಗಿಲನ್ನು ಒಡೆದು ಒಳ ಹೋದರು. ಅತ್ತಲಿಂದ ಆ ಹುಡುಗನಿಗೆ ಶಾಕ್ ಆಗಿ ನಂಬರ್ ಡಿಲೀಟ್ ಮಾಡಿದ್ದ. ಕೂಡಲೇ ಮೊಬೈಲ್ ಸ್ವಿಚ್ ಆಫ್ ಮಾಡಿದ್ದ.

ಇಲ್ಲಿ ಗಮನಿಸಬೇಕಾದ ವಿಷಯವೇನೆಂದರೆ,
೧) ನಿತ್ಯಶ್ರೀ, ಆ ಹುಡುಗ ಯಾರು ಏನು ಎಂದು ಕೂಡ ಅರಿಯದೇ ಪ್ರೀತಿ ಎಂಬ ಹೆಸರಿನಲ್ಲಿ ಮೋಸದ ಜಾಲಕ್ಕೆ ಬಿದ್ದವಳು. ತರಗತಿಯ ಹುಡುಗನಲ್ಲದಿದ್ದರೂ ಅಪರಿಚಿತ ಹುಡುಗನ ಸ್ನೇಹ ಬೆಳೆಸಿದ್ದಳು.
೨) ಹೆತ್ತವರಿಗೆ ಸುಳ್ಳು ಹೇಳಿ ಹಾಡುಹಗಲೇ ಮೋಸ ಮಾಡುತ್ತಿದ್ದಳು. ತಾನೇ ಬುದ್ಧಿವಂತೆ , ತಾಯಿಯನ್ನು ಹೇಗೆ ಬೇಕಾದರೂ ಮೋಸ ಮಾಡಬಹುದು ಎಂದು ಬಗೆದ ನಿತ್ಯಶ್ರೀ ತಾನೇ ಮೋಸ ಹೋದಳು.
೩) ಹರೆಯದ ಹುಚ್ಚು ಆಸೆಗಳಿಗೆ ರೆಕ್ಕೆ ಕಟ್ಟಲು ಹೋಗಿ, ನನಗೂ ಒಬ್ಬ ಗೆಳೆಯ ಬೇಕು... ಎಂದು ಬಯಸಿ ರೆಕ್ಕೆ ಮುರಿದುಕೊಂಡು ನೆಲಕ್ಕುರುಳಿ ಬಿದ್ದವಳು.
೪) ಅಲ್ಲದೇ ಹರೆಯದ ಮಕ್ಕಳ ಜವಾಬ್ದಾರಿಯನ್ನು ತಂದೆಯಾದವರು ತೆಗೆದುಕೊಳ್ಳದೇ ತನಗೆ ಉದ್ಯೋಗವೇ ಮೊದಲು ಎಂಬಂತೆ ಮನೆ ಮತ್ತು ಮಕ್ಕಳ ಜವಾಬ್ದಾರಿಯನ್ನು ಹೆಂಡತಿಗೆ ವಹಿಸುವುದು.
೫) ಹರೆಯಕ್ಕೆ ಕಾಲಿಟ್ಟಾಗ ಆ ಮಕ್ಕಳಿಗೆ ಮನೆ, ಹೆತ್ತವರ ಮಾತುಗಳು ಉಸಿರು ಕಟ್ಟಿದಂತಾಗಿ , ಹೊರಗಿನವರ ಮೇಲೆ ನಂಬಿಕೆ ಅತಿಯಾಗುವುದು.
೬) ಹೆತ್ತವರನ್ನೇ ಶತ್ರುಗಳ ಹಾಗೆ ನೋಡಿ, ಹೊರಗಿನ ಸೆಳೆತಕ್ಕೆ ಬಲಿಯಾಗುವುದು.
೭) ಒಂದೇ ಮಗಳು ಯಾ ಮಗನೆಂದು ಅತಿಯಾಗಿ ಮುದ್ದು ಮಾಡಿ ಸಾಕಿ, ಅವರ ಬೇಡಿಕೆಗಳನ್ನೆಲ್ಲ ಇಡೇರಿಸುತ್ತ ಬಂದರೆ ಹರೆಯಕ್ಕೆ ಬಂದಾಗ ಕೈಗೆ ಸಿಗುವುದಿಲ್ಲ.
೮) ಮಕ್ಕಳು ಹರೆಯಕ್ಕೆ ಬಂದಾಗ ಎಚ್ಚರವಹಿಸುವ ಬದಲು ಮೊದಲಿನಿಂದಲೇ ಅವರ ಜೊತೆಗಿದ್ದು ಕಷ್ಟನಷ್ಟಗಳ ಬಗ್ಗೆ ಆಗಾಗ್ಗೆ ತಿಳುವಳಿಕೆ ನೀಡುತ್ತಿರಬೇಕು. ಜೀವನದ ಮೌಲ್ಯಗಳನ್ನು ತಿಳಿಸಿಕೊಡಬೇಕು. ಓದು, ವಿದ್ಯಾಭ್ಯಾಸದ ಮಹತ್ವ, ಉದ್ಯೋಗ , ಹಣದ ಮಹತ್ವ, ಕಷ್ಟ ನಷ್ಟಗಳ ಅರಿವು ಮೂಡಿಸುತ್ತಿರಬೇಕು.
೯) ತಮ್ಮ ತಾಯಿ ಈಗಿನ ತಂತ್ರಜ್ಞಾನದ ಅರಿವು ಇಲ್ಲದೇ ಇರಬಹುದು ,ಆದರೆ ಹೆತ್ತ ಕರುಳಿಗೆ ಮಗ/ಮಗಳು ಅಡ್ಡದಾರಿ ಹಿಡಿಯುತ್ತಿದ್ಸಾಗ ಮುಂದೇನೋ ಅನಾಹುತವಾಗುತ್ತದೆ ಎಂಬ ಸುಳಿವು ಬರುವುದು ಸುಳ್ಳಲ್ಲ.
೧೦) ಮಕ್ಕಳ ಕೈಗೆ ಮೊಬೈಲ್ ಸಿಕ್ಕಿದಾಗ ಅತಿಯಾಗಿ ಬಳಸುತ್ತ, ಪ್ರಪಂಚವೇ ತನ್ನ ಮುಷ್ಠಿಯಲ್ಲಿದೆ ಎಂದು ಭಾವಿಸುವುದೇ , ಯಾರದೋ ಕಾಣದ ಕೈಗೆ ಸಿಕ್ಕಿಹಾಕಿಕೊಳ್ಳಲು ಕಾರಣ. ಅತಿಯಾದ ಆಕರ್ಷಣೆ, ಕುತೂಹಲಗಳೇ ಅನಾಹುತಗಳನ್ನು ಆಹ್ವಾನಿಸುತ್ತವೆ.

- ಸಿಂಧು ಭಾರ್ಗವ ಬೆಂಗಳೂರು (ಲೇಖಕಿ)