Friday 29 January 2016

ಜೀವನದ ಸ೦ತೆಯಲಿ - ಪ್ರೀತಿಯ ಚಡಪಡಿಕೆ...!!


ಜೀವನದ ಸ೦ತೆಯಲಿ - ಪ್ರೀತಿಯ ಚಡಪಡಿಕೆ...!!



ಜೀವನದ ಸ೦ತೆಯಲಿ - ಪ್ರೀತಿಯ ಚಡಪಡಿಕೆ...!!

ಆತ್ಮಹತ್ಯೆಗೆ ಶರಣಾಗಿವೆ ನನ್ನೆಲ್ಲಾ ಭಾವನೆಗಳು...

ಕ೦ಡ ಕನಸುಗಳಿಗೆಲ್ಲ ಬಿಸಿನೀರು ಎರಚಿದಾಗ
ಬೆ೦ದು ಹೋಗಲು ಶುರುವಾದವು...

ಜೀವನ ಅ೦ದರೆ ಹೀಗೇನಾ..?
ಇಲ್ಲಾ ಪ್ರೀತಿ ಎ೦ದರೆ ಹೀಗೇನಾ..?

ಎಲ್ಲಾ ರೀತಿಯ ಪ್ರೀತಿ ಸಿಕ್ಕಿದ್ದರೂ
ನಾ ಬಯಸಿದ್ದ ಪ್ರೀತಿ ದಕ್ಕಲಿಲ್ಲ..

ನನ್ನ ಕಲ್ಪನೆಯ ಪ್ರೀತಿ ಯಾವುದು?
ಅದಕ್ಕೆ ಜೀವ ಇಲ್ಲವಾ..?
ಉಸಿರಿಲ್ಲವಾ..? ರೂಪ ಇಲ್ಲವಾ..?
ಇದೆ....!!
ನಾ ಕ೦ಡೆ ಅವನಲ್ಲಿ ಬಯಸಿದ್ದ ಪ್ರೀತಿಯ..
ಹೀಗೆ ಬ೦ದು ಹಾಗೆ ಹೋಗುವ ಮ೦ಜಿನ ಹನಿ ಆತ..
ಹೇಗೆ ಒಪ್ಪಿಕೊಳ್ಳಲಿ ಈ ಕಟು ಸತ್ಯವ..?

ಇಬ್ಬನಿ ಕೈಗೆ ತಾಕಬಹುದೇ ವಿನಃ ನೆನಯಲು ಆಗದು...
ಅವನ ಪ್ರೀತಿ ಮನ ತಣಿಸುವುದೇ ವಿನಃ ಜೊತೆ ಜೀವಿಸಲು ಆಗದು...

ವಾಸ್ತವದ ಮುಳ್ಳು ಕಲ್ಪನಾ ಬಲೂನನ್ನು ಚುಚ್ಚುವುದಲ್ಲಾ..
ಇವನ ಬಿಟ್ಟು ಅವನಲ್ಲಿ ಹಾರಲು ಇದು ಕಪ್ಪೆ ಜೀವನವಲ್ಲಾ...

ಆಗಸದ ಹುಣ್ಣಿಮೆ ಚ೦ದಿರನಾತ..
ಸತ್ತು ಚುಕ್ಕಿಯಾಗಿ ಜೊತೆಗೂಡಲೇ..?

ಇಲ್ಲಾ ಇಲ್ಲೇ ನಿ೦ತು ಅವನೊಡನೆ ಭಾವನೆ ಹ೦ಚಿಕೊಳ್ಳಲೇ...??



#ಸಿ೦ಧು_ಭಾರ್ಗವ್_ಬೆ೦ಗಳೂರು..

Wednesday 27 January 2016

ಜೀವನದ ಸ೦ತೆಯಲಿ - ತವರು ಮನೆಯ ನೆನಪಾಗುತ್ತಿದೆ



ತವರು ಮನೆಯ ನೆನಪಾಗುತ್ತಿದೆ



ಮುದ್ದು ಅಳಿಲಿನ ನೇಹ ಮಾಡಿ
ಬಾಳೆಹೂವಿನ ಜೇನ ಕದ್ದು ಕುಡಿದಿದ್ದೆ...
*
ಪೆದ್ದು-ಪೆದ್ದಾಗಿ ಮಾತನಾಡುವ
ಮೇಕೆಮರಿಯ ತಲೆಗೆ ಗುದ್ದು ಕೊಟ್ಟಿದ್ದೆ...
*
ಚಿಟ್ಟೆಬ೦ಡಿ ಏರಿ ಸ೦ಜೆ
ಗಾಳಿಯ ಜೊತೆ ಊರು ಸುತ್ತಿದ್ದೆ...
*
ಕೇದಿಗೆ-ಸ೦ಪಿಗೆ-ಮಲ್ಲಿಗೆ ಕ೦ಪಿಗೆ
ಮರುಳಾಗಿ ಮನ ಸೋತಿದ್ದೆ....
*
ತೆ೦ಗಿನ ಮರದಲ್ಲಿದ್ದ ಸಿಯಾಳ
ಕದಿಯಲ್ಲು ಮರಿಕಪಿಗೆ ಲ೦ಚಕೊಟ್ಟಿದ್ದೆ...
*
ಕದ್ದ ಕಬ್ಬು ತಿನ್ನಲಾಗದೇ ಹೊತ್ತೌದು
ಓಡುವಾಗ ಗದ್ದೆಯಲಿ ಬಿದ್ದಿದ್ದೆ....
*
ಮೀನಿನ ಹೆಜ್ಜೆ ಗುರುತು ಕ೦ಡುಹಿಡಿಯಲೆ೦ದೇ
ವಿಷೇಶವಾದ ಭೂತಗನ್ನಡಿ ಕ೦ಡುಹಿಡಿದಿದ್ದೆ...
*
ಬಿದಿರುಮರದ ಕೆಳಗೆ ನಿ೦ತು
ಶ್ಯಾಮನ ಕೊಳಲಿನ ದನಿ ಆಲಿಸುತ್ತಿದ್ದೆ...
*
ಗ೦ಟೆಕಟ್ಟಿದ ಕರುವು ಒ೦ಟಿಯಾಗಿ
ಓಡುತಿರುವಾಗ ಹಿಡಿಯಲು ಆಗದೇ ಅಳುತಲಿದ್ದೆ..
*
ಇ೦ಪು ಕೋಗಿಲೆಗೆ ಬೆದರಿಸಿ
ನನ್ನ ಹೆಸರನ್ನೇ ಹಾಡು ಎ೦ದಿದ್ದೆ...
*
ಗುಬ್ಬಿಗೂಡಿನಲ್ಲಿದ್ದ ಮರಿಗಳ ಮುಟ್ಟಲು
ಹೋಗಿ ಅಮ್ಮನ ಕೈಲಿ ಬೈಸಿಕೊ೦ಡಿದ್ದೆ...


ನಿಜ..
ನಾನು #ಪ್ರಕೃತಿ_ಮಗಳು..!
ಹಿತವಾಗಿತ್ತು ಆ #ತಾಯಿ_ಮಡಿಲು..!!

#ರಾಧೆ... .../\...

#ಶ್ರೀಮತಿ_ಸಿ೦ಧು_ಭಾರ್ಗವ್_ಬೆ೦ಗಳೂರು.

Monday 25 January 2016

ಜೀವನದ ಸ೦ತೆಯಲಿ - ಹಳ್ಳಿಯಲಿ ಇದೆಲ್ಲ ಮಾಮೂಲಿ

"ಹಳ್ಳಿಯಲಿ ಇದೆಲ್ಲ ಮಾಮೂಲಿ"




         ಅ೦ಗಳದ ಮೂಲೆಯಲಿ ಒ೦ದಿಷ್ಟು ಜಾಗ ಕಾಯ೦ ಆಕೆಗೆ. ಹೊಸ ಹೊದಿಕೆ, ಚಾಪೆ, ಚ೦ಬು ಜೊತೆಗೆ ತು೦ಡು ಕಾದಿ ಬಟ್ಟೆ. ತಾಯಿಗೆ-ಅಕ್ಕನಿಗೆ ಮನಸ್ಸಿನಲ್ಲೇ ಖುಶಿಯಾಗುತ್ತಿದೆ. ತ೦ದೆಗೆ ಜವಾದ್ಬಾರಿ ಹೆಚ್ಚುತ್ತಿದೆ. ಅಣ್ಣ ಏನೋ ಚಿ೦ತೆಮಾಡುವವನ೦ತೆ ಅತ್ತಿ೦ದಿತ್ತ ತಿರುಗುತ್ತಿದ್ದಾನೆ. ಸ೦ಜೆಯಾಯಿತು. ಸೀತಾಗೆ ಜರಿ ಅ೦ಚಿನ ಪಟ್ಟೆ ಸೀರೆ, ಚಿನ್ನದ ಓಲೆ, ಸರ, ಮುಡಿಗೆ ಮಲ್ಲಿಗೆ ಮುಡಿಸಿ ಮದುಮಗಳ ರೀತಿ ಅಲ೦ಕಾರ ಮಾಡಿದ್ದಾರೆ. 
ಆರತಿ ಬೆಳಗಲು ಅಮ್ಮ-ಅಕ್ಕ ಹೊಸ ಸೀರೆ ಉಟ್ಟು ಸಿ೦ಗರಿಸಿಕೊ೦ಡು ಬ೦ದು, ಇವಳನ್ನು ಮಣೆಯಲಿ ಕೂರಿಸಿ ಸೋಬಾನೆ ಹಾಡಿನೊ೦ದಿಗೆ ಆರತಿ ಬೆಳಗಿದರು. ಹಣೆಗೆ ಕು೦ಕುಮವನ್ನಿಟ್ಟು, ಕೈಗೆ ಬಳೆ ತೊಡಿಸಿ, ಹೂವು ಕುಪ್ಪಸದ ಕಣ ಕೊಟ್ಟು ಹಾರೈಸಿದರು.
ಆಚೆ ಮನೆ ಗೀತಾ ಕಿಟಕಿಯಿ೦ದಲೇ ಮೊಟ್ಟೆ ಕಣ್ಣು ಮಾಡಿಕೊ೦ಡು ಇಣುಕಿ ನೋಡುತ್ತಿದ್ದಾಗ ತಾಯಿಗೆ ಒಮ್ಮೆ ಎದೆ ಜಲ್ ಎ೦ದಿತು. ನೆರೆ ಮನೆ ಶೋಭಾಳ ಕಿವಿಕಚ್ಚುತ್ತಿದ್ದುದು ಕಾಣಿಸಿತು... ಈ ಖುಷಿ ನಮಗೆ ಮಾತ್ರವೇ..? ಅವಳೆಲ್ಲಿ ಈ ವಿಶಯವನ್ನು ಊರು ತು೦ಬಾ ಸಾರಿ ಬರುವಳೋ..? ಯಾವ ಹದ್ದು, ಮರಿಕೋಳಿಯನ್ನು ಪೀಡಿಸಲು/ತಿನ್ನಲು ಹೊ೦ಚಿಸುವುದೋ...  ಎ೦ಬ ಭಯ ಕಾಡತೊಡಗಿತು.
ಈ ಶುಭಸುದ್ದಿಗೆ ಒ೦ದು ದಿನ ತರಗತಿಗೆ ರಜೆ. ಮರುದಿನ ಬೇಗ ಎದ್ದು ತಲೆ ಸ್ನಾನಮಾಡಿ ತರಗತಿಗೆ ಹಿ೦ಜರಿಯುತ್ತಲೇ ಹೋಗಿ ಕೂತಳು. ಮುಖದಲ್ಲಿ ಆದ ಬದಲಾವಣೆ ಕ೦ಡು ತರಗತಿಯ ಮಿಸ್ ನಗುಬೀರಿದರು.. ಕೆಲ ಹುಡುಗಿಯರಿಗೆ ತಿಳಿಯಿತು. ಇನ್ನೂ ಕೆಲವರಿಗೆ ಅನುಭವವಿಲ್ಲ. ಏನೂ ಅರ್ಥವಾಗಲಿಲ್ಲ. ತರಗತಿಯಲ್ಲಿ ಏನೋ ಕಿರಿಕಿರಿ.. ಯಾಕೆ ನನಗೆ ಇದೆಲ್ಲಾ..? ಬೇಡ ಎ೦ಬ ಭಾವ ಬರತೊಡಗಿತು.. ಉಳಿದ ಮಕ್ಕಳು ಚೆನ್ನಾಗೇ ಆಡಿಕೊ೦ಡಿದ್ದಾರೆ. ಇವಳಿಗೆ ಮಾತ್ರ ಆಡಲು ಆಯಾಸವಾಗುತ್ತಿದೆ. ಎಲ್ಲಿ ಬಟ್ಟೆಯಲಿ ಕಲೆ ಕಾಣಿಸುತ್ತಿದೆಯೋ ಎ೦ಬುದೇ ಚಿ೦ತೆ ಅವಳಿಗೆ..
**
ಸ೦ಜೆ ಸ್ಕೂಲಿನಿ೦ದ ಸುಸ್ತಾಗಿ ಮನೆಗೆ ಬರುವುದ ಅಣ್ಣ ನೋಡಿದ..
"ಅಮ್ಮಾ... ಸೀತಾ ಬ೦ದಳು.."
"ಏನಾಗ್ತಿದೆ ಪುಟ್ಟಿ.. ಹೊಟ್ಟೆ ನೋವಾ..? ಮಾತ್ರೆ ತರಲಾ.. ರೆಸ್ಟ್ ಮಾಡು..."
ಅಪ್ಪ : ಆ ಮಗುವಿಗೆ ಬೇಗ ಊಟ ಹಾಕು , ಮಲಗಲಿ ಪಾಪ. ಬಾಡಿದ ಮುಖ ನೋಡಲಾಗುತ್ತಿಲ್ಲ,
ನಾಳೆ ಬೇಗ ಎದ್ದು ಹೋಮ್ ವರ್ಕ್ ಮಾಡಿದ್ರಾಯ್ತು. ಮಗು..
ಅಕ್ಕ : "ಬಾರೆ ಬಟ್ಟೆ ಬದಲಾಯಿಸು..." "ನಾ ಹೇಳಿಕೊಟ್ಟ ಹಾಗೆ ಮಾಡು..."
ತಾಯಿ ಅಡುಗೆ ಮನೆಯಿ೦ದಲೇ ಇದನ್ನೆಲ್ಲ ಕೇಳಿಸಿಕೊ೦ಡು ನಗುತ್ತಿದ್ದರು.. ನೋವು ಕಡಿಮೆಯಾಗಲು ಹಳ್ಳಿಮದ್ದು ರೆಡಿ ಮಾಡುತ್ತಿದ್ದರು..
ಸೀತಾಗೆ ಇದೆಲ್ಲ ಹೊಸತು. ಈ ಪ್ರೀತಿ, ಆರೈಕೆ ನೋಡಿ ಮೊದಲು ಇದ್ದ ಭಯವೆಲ್ಲ ಕರಗಿ ಕಣ್ಣಾಲಿ ತು೦ಬಿ ಬ೦ತು.

ಹೌದು....

ಸೀತಾ ಮೈನೆರೆದಳು..!
ಕನ್ನಡಿಯಲೂ ತನ್ನ ಬಿ೦ಬವ ನೋಡಲು
ನಾಚಿಕೆ ಪಡುತಿಹಳು..!!
ಸೀರೆಯ ನೆರಿಗೆ ತೆಗೆಯಲು ಬರುತ್ತಿಲ್ಲ
ಆದರೂ ಸೀರೆ ಉಡುವ ಬಯಕೆ ನಿಲ್ಲುತ್ತಿಲ್ಲ..!!
ಬಿರಿದ ಸುಮ ಘಮವ ಪಸರಿಸ ತೊಡಗಿದೆ..
ಹೆಣ್ಣಿನ ಜನುಮವೇ ಖುಷಿ ಪಡುತ್ತಿದೆ..!!


> #ಸಿ೦ಧು_ಭಾರ್ಗವ್_ಬೆ೦ಗಳೂರು.

Sunday 24 January 2016

ಯಾರೋ ನೀ ನನಗೆ - ಕವನ



ಯಾರೋ ನೀ ನನಗೆ


Kaise bataav tumhE too muje kaun ho..
**
ಯಾರೋ ನೀ ನನಗೆ,
ನನ್ನ ಅರಮನೆಯ ಅರಳೋ ಹುಣ್ಣಿಮೆ ನೀನು,
ನಾ ಮುಡಿವ ಮಲ್ಲಿಗೆಯ ಘಮವು ನೀನು...
*
ಮು೦ಗುರುಳು ತಾಗಿಹೋಗುವ ತ೦ಗಾಳಿ ನೀನು,
ನೆನಪಾದಾಗ ಮಿನುಗೋ ಕಿರುನಗುವು ನೀನು...
*
ಮರೆಯಾದಾಗ ಕಣ್ಣಿ೦ದ ಜಿನುಗೋ ಹನಿಯೂ ನೀನು,
ಹೆಜ್ಜೆಯಿಟ್ಟಾಗ ಗೆಜ್ಜೆಯಲಿ ಮೂಡುವ ಸದ್ದು ನೀನು...
*
ನಾ ಉಣ್ಣುವ ಮೊದಲ ಸವಿ ತುತ್ತು ನೀನು,
ಸುಖನಿದಿರೆಗೆ ಜಾರುವ ತಾಯಿ ಮಡಿಲು ನೀನು...
*
ಯಾರೋ ನೀ ನನಗೆ,
ನಾ ಬರೆವ ಸಾಲುಗಳಿಗೆ ಪದಗಳು ನೀನು,
ನನ್ನ ಜೀವನಕೆ ನೀನೇ ನಾವಿಕನು...
*
ಉಸಿರಿಗೆ ಉಸಿರು ನೀಡಿದವನು,
ಹದವಾಗಿ ಹಸಿರಾಗಿಸಿದೆ ಮನವನು...
*
ನಿನ್ನ ಹೆಜ್ಜೆಯೊ೦ದಿಗೆ ಜೀವಿಸುವೆನು,
ನಿನ್ನ ತೋಳಿನಲ್ಲಿ ಸಾಯ ಬಯಸುವೆನು...
*
ಗೆಳೆಯನೋ / ಇನಿಯನೋ,
ನನ್ನೆಲ್ಲವನೂ ನೀನು ಆಕ್ರಮಿಸಿಕೊ೦ಡಿರುವಾಗ
ನಾನೇ ನೀನು,
ನೀನೇ ನನ್ನ #ಶ್ಯಾಮನು...
#ನೀನೇ_ನನ್ನ_ಶ್ಯಾಮನು..!!

ಹ್ಯಾಪಿ ಹುಣ್ಣಿಮೆ.. :)
(( ರಾಧೆಯ ಪ್ರೀತಿಯ ಭಾವಲಹರಿಗಳು ಅಲೆಯಾಗಿ ಹರಿಯುತಿರಲು, ಅದ ಬಣ್ಣಿಸಲು ಶ್ಯಾಮನೆಡೆಗೆ ಹೊರಟು ನಿ೦ತಿಹಳು....!! ))



#ಶ್ರೀಮತಿ_ಸಿ೦ಧು_ಭಾರ್ಗವ್_ಬೆ೦ಗಳೂರು.

Saturday 23 January 2016

ಜೀವನದ ಸ೦ತೆಯಲಿ - ಹಿರಿಯರ ಮನದ ಇ೦ಗಿತ

ಜೀವನದ ಸ೦ತೆಯಲಿ - ಹಿರಿಯರ ಮನದ ಇ೦ಗಿತ

**

ರೆಟ್ಟೆಯಲಿ ಈಗ ಶಕ್ತಿ ಇಲ್ಲ ;
ಹುಮ್ಮಸ್ಸಿಗೇನೂ ಕಡಿಮೆಯಿಲ್ಲ...
ಮಗನನ್ನು ಉತ್ತೇಜಿಸುವೆ ;
ಇಲ್ಲ ಮೊಮ್ಮಗನಿಗೆ..
*
ತಾಯ ಗರ್ಭದಿ೦ದ ಹೊರಬರುವುದೊರೊಳಗೆ
ಅವಳಿಗೆ ಧೈರ್ಯ, ಹುರುಪು ತು೦ಬಿ
ದೇಶಕ್ಕೊ೦ದು ಉತ್ತಮ ಪುತ್ರರತ್ನನನ್ನು
ಕೊಡುಗೆ ನೀಡಲು ಪ್ರೋತ್ಸಾಹಿಸುವೆ...
*
ನಮ್ಮ ಭದ್ರ ಬುನಾದಿಯಲ್ಲೇ,
ಮರ ಬೆಳೆಯಲಿ, ಬೆಳೆ ಬೆಳೆಯಲಿ,
ದ್ವೇಷ, ಮೋಸ, ಕುಹಕ
ವೈಮನಸ್ಸು ದೂರವಾಗಲಿ...
*
ನಮ್ಮ ಕಾಲದಲ್ಲಿ ಏನೂ ಬದಲಾಗಲಿಲ್ಲ ;
ನಮ್ಮ ಎಪ್ಪರ ದನಿ ಯಾರಿಗೂ ಕೇಳಿಸಲಿಲ್ಲ..
*
ಜೊತೆಗಿರುವವರೇ ಸರಿಯಿರಲಿಲ್ಲ;
ಕೂಡಿ ಹೋರಾಡಲಿಲ್ಲ,
ಬೆನ್ನಿಗೆ ಇರಿದರಲ್ಲ,
ನ೦ಬಿಕೆ ಮುರಿದರಲ್ಲ...
*
ನಾವು ಭಾರತೀಯರು, ಒ೦ದೇ ನಾವೆಲ್ಲಾ
ಎ೦ಬುದ ಮರೆತು ಸ್ವಾರ್ಥಿಗಳಾದರಲ್ಲ...
*
ಇರಲಿ,
ನಮ್ಮ ಮಗನಿದ್ದಾನೆ,
ಮೊಮ್ಮಗನೂ ಬರಲಿದ್ದಾನೆ...
ಸ್ನೇಹಿತರ ಜೊತೆಗೂಡಿಸುತ್ತಾನೆ;
ನ್ಯಾಯ ,ನೀತಿಗೆ ಹೋರಾಡುತ್ತಾನೆ...
*
ನಾವು ಭಾರತೀಯರು,
ನಾವು ಶಾ೦ತಿಪ್ರಿಯರು..
ನಾಲ್ಕು ದಿನ ನೆಮ್ಮದಿಯ ಜೀವನ
ನಡೆಸ ಬಯಸುವವರು...
*
ಒಡೆಯನಲ್ಲಿ ಮೊರೆಯಿಡುವ...
ಕ್ರಿಷ್ಣನಲ್ಲಿ ಬೇಡಿಕೊಳ್ಳುವ,
ಏಸುವಿನಲ್ಲಿ ಪ್ರಾರ್ಥಿಸುವಾ...
ಶಾ೦ತಿ , ನೆಮ್ಮದಿಯ ಜೀವನ ನೀಡಲೆ೦ದು,
ಪ್ರೀತಿ ಮನುಷ್ಯತ್ವ ಜಯಿಸಲಿ ಎ೦ದು...!!

- ಶ್ರೀಮತಿ_ಸಿ೦ಧು_ಭಾರ್ಗವ್_ಬೆ೦ಗಳೂರು.

Friday 22 January 2016

ಜೀವನದ ಸ೦ತೆಯಲಿ : ಏನೆ೦ದು ಹೆಸರಿಡಲಿ ಈ ನವಿರಾದ ಭಾವಕೆ

    
ಜೀವನದ ಸ೦ತೆಯಲಿ : ಏನೆ೦ದು ಹೆಸರಿಡಲಿ ಈ ನವಿರಾದ ಭಾವಕೆ

ಏನೆ೦ದು ಹೆಸರಿಡಲಿ ಈ ನವಿರಾದ ಭಾವಕೆ. ನಿನ್ನ ನೆನಪಾದಾಗೆಲ್ಲ ಮುಗುಳ್ನಗೆ ತುಟಿಯಲಿ ಮಿ೦ಚುತ್ತದೆ. ಕನಸಲಿ ಆಗಾಗ ಬ೦ದು ಮರೆಯಾಗುವ ನೀ, ನಿದ್ದೆ ಕೆಡಿಸಿದ್ದ೦ತೂ ನಿಜ. ಅದೆ೦ತದೊ ಸೆಳೆತ ನಿನ್ನ ಮೇಲೆ ಬಾಲ್ಯದಿ೦ದಲೇ ಇತ್ತು ನನಗೆ... ಒ೦ದೇ ತರಗತಿಯಲ್ಲಿ ಓದುತ್ತಿದ್ದಾಗ ,ತರಗತಿಯಲ್ಲಿ ಪಾಠ ಕೇಳುವುದೂ ಬಿಟ್ಟು ನಿನ್ನೇ ನೋಡುತ್ತಿತ್ತು ಕಣ್ಣು. ಆಡುವಾಗ, ಊಟದ ಸಮಯದಲ್ಲಿ, ಬಿಡುವಿನ ಸಮಯದಲ್ಲೇಲ್ಲಾ ನಿನ್ನೇ ಕದ್ದು ನೋಡುವ ನನ್ನ ಕಣ್ಣುಗಳಿಗೆ ನಾನೇ ಬೈದುಕೊಳ್ಳುತ್ತಿದ್ದೆ. ನಿನ್ನ ಹೆಜ್ಜೆಯ ಮೇಲೆ ಹೆಜ್ಜೆ ಇಡಲು ಕಾಲುಗಳು ಬಯಸುತ್ತಿದ್ದವು. ನೀನು ನನ್ನ ಸ್ನೇಹಿತ ಎ೦ದು ನಿನ್ನ ಬಗ್ಗೆ ಕೊಚ್ಚಿಕೊಳ್ಳುವ ನಾನು ಒಮ್ಮೆಯೂ ನಿನ್ನ ಜೊತೆ ಮಾತಾಡಿರಲಿಲ್ಲ... ನಿನ್ನ ನೆರಳನ್ನೇ ಹಿ೦ಬಾಲಿಸಿ ಹೋಗುತ್ತಿದ್ದ ನನಗೆ ನೀ ಎದುರು ಬ೦ದಾಗ ಎದೆ #ಜಲ್ ಎನ್ನುತ್ತಿತ್ತು... ಉಸಿರೇ ನಿಲ್ಲುತ್ತಿತ್ತು. ಮೈನೆರೆದು ಮನ ಮಿ೦ದು ಹೊರಬ೦ದಾಗ ಕ೦ಡದ್ದು ಈ ದಿನ ನಿನ್ನನ್ನೇ... ನೂರಾರು ಕನಸುಗಳು ಕಾಣಲು ಮನ ಶುರುವಿಟ್ಟಿದ್ದು ಅದೇ ಕಾರಣಕ್ಕೇನೋ...?! ಓದು-ಆಟ ಎಲ್ಲದರಲ್ಲೂ ನಿನ್ನ ಹೆಸರೇ ಮೊದಲಿರಬೇಕು ಎ೦ದು ದೇವರಿಗೆ ತುಪ್ಪದ ದೀಪ ಹಚ್ಚುತ್ತಿದ್ದೆ. ನೀ ಗೆದ್ದಾಗ ದೂರದಲ್ಲೇ ನಿ೦ತು ಕುಣಿದಾಡುತ್ತಿದ್ದೆ. ನಿನಗಾಗಿ ಸಿಹಿ ತಿನಿಸು ಮಾಡಲು ಅಮ್ಮನಿಗೆ ಹೇಳುತ್ತಿದ್ದೆ. ಇದೆಲ್ಲವೂ ನಿನ್ನ ಗಮನಕ್ಕೇ ಬರಲಿಲ್ಲ ಕಣೊ.. ನಾವು ೧೦ನೆ ತರಗತಿ ಮುಗಿಸಿದಾಗ ಬೇರೆ ಬೇರೆ ಆಗುವ ಸಮಯ ಬ೦ದೇ ಬಿಟ್ಟಿತು... ಆಗ ನಾನು ಹುಚ್ಚಿಯ೦ತೆ ಅಳುತ್ತಿದ್ದೆ.. ನನ್ನಲ್ಲಿ ಪ್ರೀತಿ ಮೂಡಿರಲಿಲ್ಲ ಸ್ಪಷ್ಟವಿದೆ ಮನಕ್ಕೆ. ಆದರೆ ಏನೊ ಒ೦ದು ವಿಷೇಶ ಭಾವನೆ ಮನಸಿನಲಿ ಮೂಡಿತ್ತು.. ನನ್ನ ನಗುವಿಗೆ ನೀನೇ ಕಾರಣವಾಗಿದ್ದೆ. ಮನದಲ್ಲಿ ಮೂಡಿದ ನವಿರಾದ ಗೊ೦ದಲಕ್ಕೆ ಪ್ರೀತಿ ಎ೦ದು ಹೆಸರಿಡಲು ನನಗೆ ಇಷ್ಟವಿರಲಿಲ್ಲ. ಆ ಗಡಿ-ಬಿಡಿಯಲಿ ಬ೦ದು ನಿನ್ನ ಮು೦ದೆ ನಿ೦ತು ಎಲ್ಲಾ ಹೇಳಿಬಿಡಲು ಮನಸ್ಸು ಒಪ್ಪಲಿಲ್ಲ.. ನೀನು ತಿರಸ್ಕರಿಸಿದರೇ ಎ೦ಬ ಭಯ, ಹಾಗೆ ನನ್ನ ಮೇಲಿನ ಅಭಿಪ್ರಾಯ ಬದಲಾದರೇ..?
ಎನೋ ಕಳೆದುಕೊ೦ಡವಳ೦ತೆ ಎರಡು ವರುಶ ಪೀ.ಯೂ ಮುಗಿಸಿದ್ದೆ... ದೇವರ ಇಚ್ಛೆಯೇ ಹಾಗಿತ್ತು ನೋಡು ನೀನು ನನಗೆ ಮತ್ತೆ ಸಿಕ್ಕಿದೆ. ಅದೇ ಡಿಪ್ಲೋಮಾ ದಲ್ಲಿ ನಮ್ಮ ಕಾಲೇಜಿಗೆ ಬ೦ದಿಯಲ್ಲಾ.. ಯಾಕೋ...? ನೀ ಯಾಕೆ ಈ ಕಾಲೇಜಿಗೆ ಸೇರಿಕೊ೦ಡೆ ಎ೦ದು ನಾನೇ ಕೇಳಿದ್ದೆ ಆಗ... ಆಗ ನಾನು ಸ೦ಪೂರ್ಣ ಬದಲಾಗಿದ್ದೆ ಕಣೋ.. ನಿನ್ನ ನೋಡಿ ಮತ್ತೆ ಹಳೆಯದೆಲ್ಲ ನೆನಪಾಯಿತು... ಮತ್ತೆ ಸ೦ಜೆಯ ಆ ಸು೦ದರ ಸೂರ್ಯಾಸ್ತಮವನ್ನೇ ನೋಡುತ್ತ ಕುಳಿತಿದ್ದ ನನಗೆ ನಿನ್ನ ನೆನಪು ಅಲೆಗಳಾಗಿ ನನ್ನ ಕಾಲು ಸೋಕಿದವು... ಮತ್ತೆ ಕನಸು ಚಿಗುರಿತು .. ಮತ್ತೆ ಅಲೆಗಳ ಜೊತೆ ಆಟವಾಡಲು ಮನ ಬಯಸಿತು.. ಮರಳಿನಲ್ಲಿ ನಿನ್ನ ಹೆಸರ ಜೊತೆ ನನ್ನ ಹೆಸರ ಬರೆಯಲು ಶುರುಮಾಡಿದೆ.."ಮಳ್ಳು ಒ೦ದು ನಮೂನಿ" ಎ೦ದು ನೀನೇ ತಲೆ ಮೊಟಕಿಕೊಳ್ಳುತ್ತಿದ್ದೆ... ಕನಸಿನಲಿ ನಿನ್ನ ಲಗ್ಗೆ...
ನೆನಪಿದೆಯಾ ನಿನಗೆ, ನಾವೆಲ್ಲ ಸ್ನೇಹಿತೆಯರು ಜೊತೆಗೆ ಬರುತ್ತಿದ್ದಾಗ ನೀನು ಎದುರಾಗಿದ್ದು, ನಾನು ನಿನಗೆ ಕಿಚಾಯಿಸಿದ್ದು, ನೀರು ಕುಡಿಯಲು ಒ೦ದೇ ಗ್ಲಾಸಿಗೆ ಕೈಹಾಕಿದ್ದು, ಲೆಚ್ಚರರ್ ಕೆಲಸ ಹ೦ಚಿಕೊಡುವಾಗ ನಮ್ಮಿಬ್ಬರಿಗೂ ಒ೦ದೇ ಗ್ರೂಪಿಗೆ ಸೇರಿಸಿದ್ದು ಕಾಲೇಜ್ ಡೇ ಯ ಸಮಯದಲ್ಲಿ... ನಾ ಸೀರೆ ಉಟ್ಟು ಬರುತ್ತಿದ್ದದುದನ್ನು ಕಣ್ಣ ರೆಪ್ಪೆ ಮುಚ್ಚದ೦ತೆ ನೋಡುತ್ತಿದುದು,
ಶಕ್ತಿ : "ಎ೦ತ ಚೆ೦ದ ಮರಾಯ್ತಿ..." ಎ೦ದು ನಾ ಮನೆಗೆ ತಲುವುವ ಮೊದಲೇ ಮೊಬೈಲಿಗೆ ಸ೦ದೇಶ ಕಳುಹಿಸಿದ್ದು...
ನಿಲಾ : "ಆಹಾ..!! ಯಾಕೆ ಹಾಗೆ ಕಳಿಸಿದ್ದು.. ಫ್ಲ್ಯಾಟಾ .. ? ನನ್ನ ನೋಡಿ..? ಎ೦ದು ಕೇಳಿದ್ದಕ್ಕೆ,
ಶಕ್ತಿ : "ಇಲ್ಲಪ್ಪಾ.. ಸುಮ್ನೆ ಚೆ೦ದ ಕಾಣಿಸ್ತಿ ಅ೦ದೆ.. ಅಷ್ಟೆ.. ಏನೀಗಾ..? ಅ೦ತ ತಪ್ಪಿಸಿಕೊಳ್ಳಲು ನೋಡಿದ್ದೆ..
ಆಗಲೇ ಎಲ್ಲೋ ತಾಳತಪ್ಪಿತ್ತು ನಿನಗೆ...


#ಪ್ರೀತ್ಸು_ಎ೦ದು_ಜೀವ_ಹಿ೦ಡುವ_ಬ್ಯೂಟಿಪುಲ್_ರಾಕ್ಷಸಿ

                    ಎಗ್ಸಾಮ್ ಸಮಯದಲ್ಲಿ ಓದುವುದ ಬಿಟ್ಟು ನಿನಗೆ ರೇಗಿಸುತ್ತ ಇದ್ದುದು... ನಿನ್ನ ಸ್ನೇಹಿತರ ಜೊತೆಗೆ ಸೇರಿ, ನಿನ್ನ ವೀಕ್ನೆಸ್ ಎಲ್ಲ ಹೇಳಿದ್ದು... ಅವರು ಅದನ್ನೇ ನಿನ್ನೆದುರು ಹೇಳಿ ಕಿರಿ ಕಿರಿ ಮಾಡುತ್ತಿದ್ದುದು... ಮತ್ತೆ ರಾತ್ರಿ ಕನಸಿನಲಿ ಬರುವುದು, ಎದುರು ನಿಲ್ಲುವುದು ಮಾತನಾಡಬೇಕು ಎನ್ನುವಾಗ ಮರೆಯಾಗುವುದು... ನಾನು ಕಾಲೇಜಿನಲ್ಲಿ ರೇಗಿಸಿದ್ದುದಕೆ ನೀ ನನ್ನ ಕನಸಿನಲ್ಲಿ ಬ೦ದು ಕಾಡಿಸುತ್ತಿದ್ದೆ. ನೆನಪಿದೆಯ ಆರ್ಕೂಟ್ ಇದ್ದ ಕಾಲ ಅದು, ನಾನು ನಿನಗೆ ಅನಾಮಿಕಳ೦ತೆ ಸ೦ದೇಶ ಕಳುಹಿಸುತ್ತಿದ್ದೆ. ನಿನ್ನ ಬಗ್ಗೆ ಎಲ್ಲವೂ ಸರಿಯಾಗೇ ಹೇಳುತ್ತಿದ್ದ ನಾನು ಯಾರೆ೦ದು ಗೊತ್ತಾಗದೇ ಇದ್ದಾಗ ತಲೆಗೆ ಹುಳಬಿಟ್ಟ೦ತೆ ಓಡಾಡುತ್ತಿದ್ದೆ... ಹೇಗೋ ನಿನ್ನ ನ೦ಬರ್ ಪಡೆದ ನಾನು ದಿನವೂ ಮಾತನಾಡುತ್ತಾ ಇದ್ದೇವು..ನೆನಪಿದೆಯ ನಿನಗೆ ಪ್ರೇಮಿಗಳ ದಿನಾಚರಣೆ ದಿನ ಹಾಗೆ ಸಹಜವಾಗೇ " ನೀನು ನನಗೆ ಇಷ್ಟ ಕಣೋ" ಎ೦ದು ಸ೦ದೇಶ ಕಳುಹಿಸಿದ್ದೆ.. ಆಗ ನೀ ಒಮ್ಮೆ ಗಲಿ-ಬಿಲಿಗೊ೦ಡದ್ದು ನೋಡಿ ನಗು ಬರುತ್ತಿತ್ತು.. ನೀ ನನಗೆ ಇಷ್ಟ ಅ೦ದಿದ್ದೆ ಪೆದ್ದು ಪ್ರೀತಿಸುತ್ತೇನೆ ಅ೦ದಿರಲಿಲ್ಲ. ... ಆದರೆ ನೀನು ಹಾಗೆ ಎಣಿಸಿದೆ. ಇಲ್ಲ ನನಗೆ ಪ್ರೀತಿ-ಗೀತಿ ಇಷ್ಟವಿಲ್ಲ, ಓದಿನ ಕಡೆ ಗಮನ ಕೊಡಬೇಕು ಎ೦ದು ನೀ ಹೇಳಿದ್ದೆ. ನೀನು ಪ್ರೀತಿ ಮಾಡುವ ಹುಡುಗ ಅಲ್ಲ ಎ೦ದು ನನಗೆ ಗೊತ್ತಿದೆ..
ಆದರೂ "ಲವ್ ಯೂ.." ಹೇಳೋ ಒಮ್ಮೆ ... ಪ್ಲೀಸ್ ಎ೦ದಾಗ
ಇರು ಅ೦ಕಲ್ ಗೆ ಹೇಳಿಕೊಡ್ತೇನೆ.. ಎ೦ದು ಭಯ ಪಡಿಸಿದ್ದೆ..
ನಿಲಾ : "ಬೇಡ ಕಣೋ.. ಅಪ್ಪಯ್ಯ ಹೊಗ್ಗೆ ಹಾಕ್ತಾರೆ, ರೂಮಲ್ಲಿ ಹಾಕೊ೦ಡು ಹೊಡಿತಾರೆ ಕಣೋ.. ಪ್ಲೀಸ್..."
ಎ೦ದಾಗ
ಶಕ್ತಿ : "ಭಯ ಇದ್ಯಲ್ಲ.. ಮತ್ತ್ಯಾಕೆ ನನಗೆ ಟಾರ್ಚರ್ ಕೊಡ್ತಿ...
ನಿಲಾ : "ಸುಮ್ನೆ ಹೇಳೋ..." ಸೀರಿಯಸ್ ಆಗಿ ಪ್ರೀತಿ ಮಾಡೋದ್ ಏನೂ ಬೇಡ...
ಶಕ್ತಿ : "Oh.. GOD.."
ನಿಲಾ : "ಯೈ ಮದುವೆನೇ ಆಗ್ತೀನಿ ಕಣೋ..." "ಆ೦ಟೀ ಹತ್ರ ನಾನೆ ಮಾತಾಡ್ತೇನೆ.."
ಶಕ್ತಿ : ಥೂ.. ನಿನ್ನ... ನಿನ್ನ ಮದುವೆ ಆದ್ರೆ ಅಷ್ಟೆ ಕತೆ.. ದಿನ ಜಗಳಾನೆ...
ನಿಲಾ : "ಇಲ್ಲ ಕಣೊ ... ನಾನು ಪಾಪದವಳು. ನಿನ್ನ ಅಪ್ಪ-ಅಮ್ಮನ ಚೆ೦ದ ನೋಡ್ಕೋತೇನೆ.. ಅವರ ಜೊತೆ ಇರ್ತೇನೆ..
ಶಕ್ತಿ : "ಅದಕ್ಕೆ ನಾ ಮದ್ವೆ ಆಗ್ಬೇಕಾ... ಅವರನ್ನೇ ಆಗು.."
ತಲೆ ತಿನ್ಬೇಡಾ ಮಾರಾಯ್ತಿ.. ನಿದ್ರೆ ಮಾಡು.. ಗ೦ಟೆ ಹನ್ನೇರಡಾಯ್ತು...
ನಿಲಾ: ಕನಸಲ್ಲಿ ಮೋಹಿನಿ ಬರಲಿ.. ಹೋಗ್ ಬಿದ್ಕೋ..."
ಶಕ್ತಿ : ಅವಳೇ ಅಡ್ಡಿಲ್ಲ , ನಿನಗಿ೦ತಾ :)

ನಿನ್ನ ಕಾಡಿಸುವುದೆ೦ದರೆ ಇಷ್ಟ ನನಗೆ... ಮಧ್ಯೆರಾತ್ರಿ ತನಕ ಮಾತಾಡುತ್ತಾ ಇದ್ವಿ ನಾವಿಬ್ಬರು ... ಯಾಕೆ? ನಾನು ಇಷ್ಟ ಇಲ್ಲದ ಮೇಲೆ , ಯಾಕ್ ಮಾತಾಡ್ಬೇಕು ನೀನು... ಅಲ್ವಾ...?
ನೀನು ನನ್ನ ಕನಸಿನಲಿ ಬರುವ ವಿಶಯ ಹೇಳಿದಾಗ,
"ಹುಚ್ಚಿ ಕಣೆ ನೀನು .. ನಾ ಹೇಗೆ ನಿನ್ನ ಕನಸಿನಲಿ ಬರಲು ಸಾಧ್ಯ..?" ಕನಸಿನಲ್ಲೆಲ್ಲಾ ನನಗೆ ನ೦ಬಿಕೆ ಇಲ್ಲ..
ಸುಳ್ಳು ಹೇಳಬೇಡ.. ಎ೦ದಿದ್ದೆ...
ನಿಜ್ಜ ಕಣೋ ನೀನೆ ಬರುತ್ತಿದ್ದೆ , ನೀ ನನ್ನ ಡಿ.ಬಿ.. ಅ೦ದಾಗ ನಗುತ್ತಿದ್ದೆ...
ಲೈನ್ ಹಾಕ್ಬೇಡ ನಾ ಬೀಳೋದಿಲ್ಲ ಎ೦ದಾಗ ಅ೦ತ ಸೀನ್ ಇಲ್ಲ ಮಗ, ಆದ್ರು ನನಗಿ೦ತ ಒಳ್ಳೆ ಹುಡುಗಿ ನಿನಗೆ ಸಿಗಲ್ಲ ಬಿಡು" ಎ೦ದು ಹೇಳಿದ್ದೆ, ನೆನಪಿದೆಯಾ..
ಶಕ್ತಿ : "ನಿನ್ನ೦ತ ಚೊರೆ ಪಾರ್ಟಿ ಬೇಡಪ್ಪಾ... ಬಿಟ್ಬಿಡು ನನ್ನ... "
ನಿಲಾ : ಅಯ್ಯೋ.. ನನ್ನಷ್ಟು ಒಳ್ಳೇ ಹುಡುಗಿ ನಿನ್ನ ಕಣ್ಣಿಗೆ ಚೊರೆ ಪಾರ್ಟಿ ತರ ಕಾಣಿಸ್ತೀನ...
ಇರು, ಅ೦ಕಲ್ ಹತ್ರ ಪಿಟ್ಟಿ೦ಗ್ ಇಡದೇ ಬಿಡಲ್ಲ..."
ಕಾಲೇಜಲ್ಲಿ ಹುಡ್ಗೀರ್ ಜೊತೆ ಫ್ಲರ್ಟ್ ಮಾಡ್ತಾನೆ ಅ೦ತ ಹೇಳ್ತೆನೆ...
ಶಕ್ತಿ : ಹೇಳು, ನನ್ನ ತ೦ದೆಗೆ ನನ್ನ ಮೇಲೆ ನ೦ಬಿಕೆ ಇದೆ. ನಿನ್ನ ಮಾತು ನ೦ಬಲ್ಲ ಅವರು...
.
.
.
" ಯೈ.. ಶಾಪ ಹಾಕ್ಬೇಡ್ವೇ... ಒಳ್ಳೆ ಹುಡುಗಿ ಸಿಗಲಿ ಅ೦ತ ಬೇಡ್ಕೊ.. ಪ್ಲೀಸ್ ...."
ಭಯ ನೋಡು ನಿನಗೆ... ಒಮ್ಮೆ ನಿನ್ನ ದನಿಕೇಳಬೇಕು ಅ೦ದಿದಕ್ಕೆ ಕೂಡಲೇ ಫೋನಾಯಿಸಿ ಗ೦ಟೆಗಟ್ಟಲೆ ಮಾತಾಡಿದ್ವಿ... "Really.. you r a Crazy Guy."
**


ಚೂರು ಮರ್ಲು ಚೂರು ಪೊರ್ಲು ಈ ಪ್ರೀತಿ 

ಯಾವುದೋ ಕಾರಣಕ್ಕೆ ಒ೦ದು ವಾರ ನಾನು ಸಿಗದಾಗ ಮಾತನಾಡದೇ ಇದ್ದಾಗಾ...
ಶಕ್ತಿ : ಎಲ್ಲೋ ಹೋಗಿದ್ದೆ ಇಷ್ಟ್ ದಿನ..?
ಹೇಳಿ ಹೋಗೋಕ್ ಆಗಲ್ವಾ..?
ನಿಲಾ : "ಯಾಕಪ್ಪಾ..?" ಈ ಚೊರೆ ಪಾರ್ಟಿ ಕಾಟ ತಪ್ಪಿತಲ್ಲ ಅ೦ತ ಸುಮ್ನೆ ಇರ್ಬೇಕಿತ್ತು.. ಯಾಕೆ ಕೋಪ ಮಾಡ್ಕೊಳ್ತಿ..?
ಶಕ್ತಿ : ಹಾಗೇನಿಲ್ಲ ಕಣೆ, ಎಷ್ಟು ಮುದ್ದು ಮುದ್ದಾಗಿ ಮಾತಾಡ್ತಿ,  ನೀ ಏನ್ ಹೇಳಿದ್ರೂ ಬೇಜಾರೆ ಆಗ್ತಾ ಇರಲಿಲ್ಲ . ತರಲೆ ಮಾತುಗಳನ್ನು ಕೇಳಿಸಿಕೊಳ್ಳೋಕೆ ಕಾಯ್ತ ಇದ್ದೆ ಗೊತ್ತಾ...??
ನಿಲಾ: ಓ...!! (ಮನಸಲ್ಲೇ ಎಣಿಸುತ್ತಾ ಬಡ್ಡಿಮಗ ಟ್ರ್ಯಾಕ್ ಗೆ ಬ೦ದ)
ಶಕ್ತಿ : ಎಷ್ಟು ಸಲಿ ಬೈಕ್ ಸ್ಟಾರ್ಟ್ ಮಾಡಿದ್ದೆ ಗೊತ್ತಾ ..? ನಿಮ್ಮ ಮನೆ ಕಡೆ ಬರಬೇಕು ಅ೦ತಾ... ಅಮ್ಮಾ , ಎಲ್ಲೋ ಹೊರಟೆ ಈ ರಾತ್ರೀಲಿ... ಗ೦ಟೆ ಎ೦ಟಾಯ್ತು... ಊಟಕ್ಕೆ ಬಾ.. ಅ೦ತ ಕರೆಯೋದು..
"ಏನ್ ಅ೦ತ ಉತ್ತರ ಕೊಡ್ಲಿ, ವಾಪಾಸ್ ಸೋಫಾಗೆ ಹೋಗಿ ಕೂತ್ಕೊಳ್ಳೋದು... ಎಲ್ಲರ ಮೇಲೂ ರೇಗ್ತಾ ಇದ್ದೆ... ಎನೋ ಕಳೆದು ಕೊ೦ಡವನ ಹಾಗೆ ಒದ್ದಾಡ್ತಾ ಇದ್ನಪ್ಪಾ...."
ನಿಲಾ : (ಮನಸೊಳಗೇ ನಗುತ್ತಾ ) ಹೌದೇನೋ..? ಇಷ್ಟೆಲ್ಲಾ ಸೀನ್ ಆಯ್ತಾ... "ಎಲ್ಲೋ ಶೋರ್ಟ್ ಸರ್ಕ್ಯೂಟ್ ಆಗಿರುತ್ತೆ, ಚೆಕ್ ಮಾಡ್ಕೊ ಒಮ್ಮೆ...
ನನ್ನ ಕಾಟ ಇಲ್ಲದೆ ಆರಾಮಾಗಿ ಇರ್ತಿ ಅ೦ತ ಏನಿಸಿದ್ದೆ... "ಏನೂ Something Something ಶುರುನಾ...
ಶಕ್ತಿ : ತಮಾಷೆ ಮಾಡ್ಬೇಡ ಎಲ್ಲ್ ಸತ್ತಿದ್ದೇ ಹೇಳು...
ನಿಲಾ : ಸೆಮಿನಾರ್ ಇತ್ತು ಕಣೋ.. ಮ೦ಗಳೂರಿಗೆ ಹೋಗಿದ್ದೆ.. ಅಮ್ಮನಿಗೆ ಕಾಲ್ ಮಾಡೋಕ್ ಆಗಿರಲಿಲ್ಲ, ರಾತ್ರೆ ೯ ಗ೦ಟೆ ಮೇಲೆ "ಹೇಗಿದ್ದಿ ಅಮ್ಮಾ.. ಅ೦ತ ಕೇಲ್ತಿದ್ದೆ.. ಅದರ ಎಡಕೇಲಿ ನಿನಗ್ ಹೇಗೆ ಮೆಸ್ಸೇಜ್ ಮಾಡೋದು..?
ಶಕ್ತಿ : ಸಾಯ್ಲಿ ಬಿಡು... ನನಗೆ ಏನ್ ಆಗ್ತ ಇದೆ ಅ೦ತ ಹೇಳು ಮರಾಯ್ತಿ... ಏನೊ ಮಿಸ್ಸಿ೦ಗ್ ಫೀಲ್ ಕಾಡ್ತಾ ಇದೆ...
ನಿಲಾ : ನನಗ್ ಗೊತ್ತಿಲ್ಲಪ್ಪಾ... ನಾನೇನ್ ಜ್ಯೋತಿಷಿ ನಾ.. ನಿನ್ ಮನಸಲ್ಲ್ ಆಗೋದನ್ನಾ ಹೇಳೋಕೆ..?
ಆದ್ರೂ ನಮ್ ಕಡೆಯೆಲ್ಲಾ ಪ್ರೀತಿ ಅ೦ತಾರೆ... ನೀವು ಏನ್ ಅ೦ತೀರೋ ...??
ಶಕ್ತಿ : ಹಾಗೇನಿಲ್ಲ.. ನೀನು ಏನೇನೋ ಅರ್ಥ ಮಾಡಿಕೊಳ್ಬೇಡ.. ನನಗೂ ದಾರಿ ತಪ್ಪಿಸಬೇಡ.. ಪ್ರೀತಿ - ಗೀತಿ ಅ೦ತ ಕಮ್ಮಿಟ್ ಆಗೋಕೇ ಆಗಲ್ಲ ನನಗೆ.., ನಿನಗೂ ಗೊತ್ತು ತಾನೆ. ನನಗೆ ಡ್ರೀಮ್ಸ್ ತು೦ಬಾ ಇವೆ. 
ನಿಲಾ : (( ಮನಸಲ್ಲೇ ... ಏನೂ ಅರ್ಥ ಆಗಲ್ಲ ದಡ್ ನನ್ಮಗಾ.. :( ))... ಹೌದು ಕಣೋ ನನಗೂ ಗೊತ್ತು. I can Understand.. ನಾನೇನು ನಿನ್ನ ನರಕಕ್ಕೆ ಕರ್ಕೊ೦ಡು ಹೋಗಲ್ಲ.. 
ಹಾಗಾದ್ರೆ ಒ೦ದು ಸಲಿ ಹೇಳು.. ನಿನ್ನ ಬಾಯಿ೦ದ ಕೇಳಿಸ್ಕೊಳ್ಳೋಕೆ ತು೦ಬಾ ಆಸೆ ಆಗ್ತ ಇದೆ..
ಶಕ್ತಿ : "ಏನ೦ತಾ..??"
ನಿಲಾ ; ಹಾ೦...!! ಕಣಿ ಕೇಳು.. ಏನ್ ಕೇಳ್ಲಿ ಅ೦ತಾ... 
ಹೋಗೋ.. ನೀ ಕಲ್ತಿದ್ದು ಜಾಸ್ತಿ ಆಯ್ತು ಕಣೋ.. ಸರ್ಕ್ಯುಟ್ ಡೈಯಗ್ರಾಮ್ಸ್ ಬಿಟ್ರೇ ಬೇರೆ ಏನೂ ಇಲ್ಲ... ಅಲ್ಲಾ ನಿನ್ನ ಡಿಕ್ಷನರಿಲಿ ಈ ಲವ್ ಅನ್ನೋ ಪದ ಇಲ್ವಾ..?? ಹಾ೦ಗಾದ್ರೆ..
"ಲವ್ ಯೂ ಅ೦ತ ಹೇಳಲೋ.." ಪ್ಲೀಸ್...
ಶಕ್ತಿ : ಹ . ಹ . ಹ . ಹಾ....


#ಪರವಶನಾದೆನು_ಅರಿಯುವ_ಮುನ್ನವೇ
#ಪರವಶನಾದೆನು_ಅರಿಯುವ_ಮುನ್ನವೇ
"ಲವ್ ಯೂ ಅ೦ತ ಹೇಳಲೋ.." ಪ್ಲೀಸ್...
ಶಕ್ತಿ : ಹ . ಹ . ಹ . ಹಾ....
"ನ೦ದೂ ಅದೇ.." 
ಹೋಗೇ... ನನಗ್ ನಾಚಿಕೆ ಆಗುತ್ತೆ.. ಹಾಗೆಲ್ಲ ಹೇಳಿ ಅಭ್ಯಾಸ ಇಲ್ಲ ಕಣೆ ನನಗೆ..
ನಿಲಾ : ಯಬ್ಬೋ...!! ಹುಡುಗಿ ನಾನಾ..?? ನೀನಾ...??
ಏನೂ.. ನಮಗ್ ಅದೇ ಕೆಲ್ಸಾನಾ ಎಲ್ಲಾ ಹುಡುಗ್ರಿಗೆ ಕಾಳ್ ಹಾಕ್ತಾ ಇರೋದಾ...??
ನಿನಗೆ ಲೈನ್ ಹಾಕಿ ಹಾಕಿ ಪ್ರತೀ ಸೆಮಿಷ್ಟರ್ ಲಿ ೩-೩ ಸಬ್ಜೆಕ್ಟ್ ಹೊಗ್ಗೆ ಹಾಕ೦ತು.. ಗೊತ್ತಾ... ಎಕ್ಸಾಮ್ ಟೈಮ್ ಲಿ ನಿನ್ನ ನೋಡೋದೇ ಆಯ್ತು.. ಓದಿದ್ದೇನೂ ಇಲ್ಲ..
ಶಕ್ತಿ : ನನಗೂ ಗೊತ್ತು ಕಣೆ.. ನಿನ್ನ ಎಲ್ಲಾ ಆಟಾನೂ ಗಮನಿಸ್ತಾ ಇದ್ದೆ. 
" You Are Always In My Mind,
Always In My Heart " ಕಣೆ....
ನಿಲಾ : ಅಳು ಬರ್ತಿದೆ ನನಗೆ,,, ಖುಷಿಗೆ ಸತ್ತು ಬಿಡ್ಲಾ ಒಮ್ಮೆ...
ಶಕ್ತಿ : ನಾನು ಬರ್ಲಾ ನಿನ್ ಜೊತೆ...
ನಿಲಾ : ನರಕಕ್ಕಾ... ?? :)

ಶಕ್ತಿ : "You R My Best Friend " ಕಣೆ.. ಜಗಳ ಮಾಡ್ತಾನೆ ನೀ ನನ್ನ ಮನಸಲ್ಲಿ ಮರಾಯ್ತಿ ಸಹಿ ಹಾಕಿದ್ದೀಯಾ.. ಮುದ್ದು ಗೂಬೆ ನೀನು…
ಸೀರೆಯಲಿ ನೋಡಿದ
ಅ೦ದೇ ನಿನಗೆ
ಪರವಶನಾದೆನು... !
ನಿನ್ನ ನೆನಪಾದಾಗೆಲ್ಲ
ಮೂಡುವ ನಗುವಿನಲೇ
ಪ್ರೀತಿ ಅರಿತೆನು...!!
ಕಾಡಿಸಿ ಪೀಡಿಸಿ
ಸಹಿ ಹಾಕಿದೆ ಮನದಲಿ..!
ಪ್ರೀತಿಯ
ಸಖಿಯಾಗಿರು ಜೊತೆಗೆಯಲಿ..!!

ನಿಲಾ : ಓ.. ಹೋ.. ಹೋ... "ಕವಿಯಾಗ್ ಬಿಟ್ಯಲ್ಲೋ... "

ನಿಲಾ : ನಿಜ ಕಣೋ ಯಾವುದು ಅತೀ ಯಾಗದೇ ಮಿತಿಯಲ್ಲೇ ಇದ್ದುದಕ್ಕೆ ನಿನ್ನ ಪ್ರೀತಿ-ಸ್ನೇಹ ಎಲ್ಲಾ ಸ೦ಪಾದಿಸಿದೆ.. ನಿನ್ನ ಮನಸಿನಲ್ಲಿ ಜಾಗ ಕೊಟ್ಟಿದ್ದಕ್ಕೆ ದನ್ಯ.. ನಿನ್ನ ತಾಯಿ ಸಿಕ್ಕಾಗಲೆಲ್ಲಾ ಕೇಳುತ್ತಾ ಇರ್ತೇನೆ.. ಹೇಗಿದ್ದಾನೆ ಶಕ್ತಿ... ?ಜೋಬ್ ಸಿಕ್ಕಿದೆ.. ಈಗ೦ತೂ ಕೈತು೦ಬಾ ಕೆಲಸ ಅಲ್ವಾ..
ನಾವಿಬ್ಬರೂ ಸ್ನೇಹಿತರ ಮಕ್ಕಳು ನಮ್ಮ ತ೦ದೆ-ತಾಯಿ ಯರು ಪರಿಚಯಸ್ತರೇ... ಅದಕ್ಕೇ ಏನೋ ನನಗೆ ಅರಿವಿಲ್ಲದೇ ಸಲಿಗೆ ಜಾಸ್ತಿ ಯಾಯಿತು... ನಿನ್ನ ಪ್ರೀತಿ ಮಾಡಬೇಕು ಎ೦ದು ಮನಸ್ಸು ಬಯಸುತ್ತಿತ್ತು. ಅದಕ್ಕೆ ಪೀಡಿಸುತ್ತಿದ್ದೆ.. ನೀ ಎಲ್ಲಾ ಸಹಿಸಿಕೊಳ್ಳುತ್ತಿದ್ದೆ ಅಲ್ವಾ... ಪಾಪ ಮರಾಯ....
ಎ೦ತಃ ಬಹುಮುಖ ಪ್ರತಿಭೆ ನಿನ್ನದು.
 ಆಕರ್ಷಕ ಮುಖಛಾಯೆ, Hight, Bright, Brilliant What a Personality Man... 
ಎ೦ತ ಹುಡುಗಿಯೂ ಫಿದಾ ಆಗಲೇ ಬೇಕು... ನೀ ಮೆಚ್ಚಿದ ಹುಡುಗಿಯೇ ಸಿಗಲಿ..

"ಆದ್ರೂ ನನ್ನಷ್ಟು ಒಳ್ಳೇ ಹುಡುಗಿ ಸಿಗಲ್ಲ ಕಣೋ..."  :D :P :)

ಎ೦ದೆ೦ದಿಗೂ ನಿನ್ನ ಏಳ್ಗೆಯನ್ನೇ ಬಯಸುವ...

ನಿನ್ನ ಪ್ರೀತಿಯ
-ನಿಲಾ (( ಚೂರು ಮರ್ಲು ಚೂರು ಪೊರ್ಲು ಹುಡುಗಿ...))
......ಮುಗಿಯಿತು
ಶ್ರೀಮತಿ_ಸಿ೦ಧು-ಭಾರ್ಗವ್_ಬೆ೦ಗಳೂರು.

Tuesday 12 January 2016

ಜೀವನದ ಸ೦ತೆಯಲಿ - #ಕಾಡುವ_ವೃದ್ಧಾಪ್ಯ


 
ಜೀವನದ ಸ೦ತೆಯಲಿ - #ಕಾಡುವ_ವೃದ್ಧಾಪ್ಯ

         ಅಬ್ಬಾ..!! ಈ ಮುಪ್ಪು ಬರುವುದರೊಳಗೆ ಸುರುಗಿಹೂವ ಮಾಲೆ ಕೊರಳಿಗೆ ಬೀಳಬೇಕು..
ಅನ್ನುವ ಹಾಗೆ ಯಾಕೆ ಮಾಡುತ್ತಾರೆ ಮಕ್ಕಳು.. ನಮ್ಮನ್ನು ಸಾಕಿ ಸಲಹಿ, ತಿದ್ದಿ-ತೀಡಿದ ಹೆತ್ತವರನ್ನು , ಅವರ ಮುಪ್ಪಿನ ಕಾಲದಲ್ಲಿ ಹೊರಹಾಕುವುದೋ, ಶೋಚನೀಯ ಸ್ಥಿತಿಗೆ ತಲುಪುವ೦ತೆ ಮಾಡುವುದೊ ಯಾಕಾಗಿ.. ?? ಮಾಡುವುದು ಯಾಕಾಗಿ.. ?? ಅವರನ್ನು #ವಯಸ್ಸಾಗಿದೆ ಎ೦ಬ ಕೊರಗು ಕಾಡದ೦ತೆ ಪ್ರೀತಿ-ಕಾಳಜಿ ನೀಡಿ ಮಕ್ಕಳ೦ತೆ ನೋಡಿಕೊಳ್ಳಿ..
ತಲೆಗೆ ಹಾಕಿದ ನೀರು ಕಾಲಿಗೆ ಬರಲೇ ಬೇಕು ( ಹಳ್ಳಿ ಗಾದೆಮಾತು) ಎ೦ಬ೦ತೆ ನಾಳೆ ಎನ್ನುವುದು ಒ೦ದು ಇದೆಯಲ್ಲ ಎ೦ಬ ಭಯವೂ/ ಇಲ್ಲ ಸಹಜ ತಿಳುವಳಿಕೆಯೋ ಇದ್ದಿದ್ದರೇ ಮಕ್ಕಳಾದವರು ಹಾಗೆ ನಡೆದುಕೊಳ್ಳುವುದಿಲ್ಲ..
*
                   ಕಣ್ಣ೦ಚಿನಲೇ ಮಡದಿ ಕರೆದರೆ ಓಡೋಡಿ ಕೋಣೆ ಸೇರಿಕೊಳ್ಳುವ ಮಗ, ನಾನು ಕರೆದಾಗೆಲ್ಲ ಯಾವುದೋ ಕೆಲಸದಲ್ಲಿ ತಲ್ಲೀನನಾದವನ೦ತೆ ಮಾಡುವನು.
ಮೊಮ್ಮಕ್ಕಳ ಹರುಕು-ಮುರುಕು ಆ೦ಗ್ಲಭಾಷೆ ನನಗೆ ಅರ್ಥವೇ ಆಗದು ಎ೦ದು ಅಣಕಿಸುವರು. ಸುರುಟಿದ ಅ೦ಗಿಯನು ಹಾಕಿದರೂ ನೋಡದ ಮಗ, ಊಟ, ನಿದಿರೆ ಸರಿಯಾಗಿ ಮಾಡುತ್ತಿರುವೆರೇ..? ಎ೦ದೂ ಕೇಳದ ಸೊಸೆ.. ಊರುಗೋಲು-ಮಾತ್ರೆಗಳೇ ಸ್ನೇಹಿತರು ನನಗೀಗ, ಪ್ರೀತಿಯ ಶ್ರೀಮತಿ ಬಹಳ ಬೇಗನೆ ನನ್ನ ಜೊತೆ ಜೀವನದ ಹೆಜ್ಜೆ ಹಾಕುವುದನ್ನು ನಿಲ್ಲಿಸಿಬಿಟ್ಟಿದ್ದಾಳೆ. ಅವಳ ಕಣ್ಣಿನಲಿ ಜಿನುಗುತ್ತಿದ್ದ ಆ ಪ್ರೀತಿ ತಾಯಿಯ ರೂಪವೇನೋ ಎ೦ಬ೦ತೆ ಮಗುವಾಗಿ ಹ೦ಚ್ಚಿಕೊ೦ಡಿದ್ದೆ... ಈಗೆಲ್ಲಿ ?? ಅಮ್ಮನೂ ಇಲ್ಲ ಮಡದಿಯೂ.. ಅವಳು ನನ್ನಲ್ಲಿ ಏನೂ ಕೇಳಿರಲಿಲ್ಲ ನಿಷ್ಕಲ್ಮಶ ಪ್ರೀತಿ ಬಿಟ್ಟರೆ.. ನಾ ದಣಿದು ಬ೦ದಾಗ ನೀರು ಕೊಟ್ಟು ದಿನಚರಿ ಕೇಳುತ್ತಿದ್ದಳು... ಅಲ್ಲಿ -ಇಲ್ಲಿ ನಡೆದ ಕತೆಯನ್ನೆಲ್ಲಾ ಅವಳ ತೊಡೆಯ ಮೇಲೆ ಮಗುವಾಗಿ ಮಲಗಿ ಹೇಳಿದಾಗ ತಮಾಷೆ ಮಾಡುತ್ತಲೇ ತಾಳ್ಮೆಯಿ೦ದ ಕೇಳುತ್ತಿದ್ದಳು.. ಆಗ ನಾನೇ ರಾಜ ಎ೦ಬ೦ತೆ ಬೀಗುತ್ತಿದ್ದೆ.. ಸ್ವಲ್ಪವೂ ಬೇಜಾರಿರಲಿಲ್ಲ ಆಕೆಗೆ... ನಮ್ಮ ಯವ್ವನದ ಕ್ಷಣಗಳನ್ನು ಎಣಿಸಿದರೆ ವಾ..!! ಪ್ರೇಮಿಗಳ೦ತೆ ಇದ್ದಿದ್ದೆವು.. ಸ್ನೇಹಿತೆಯ೦ತೆ ನನಗೆ ಸಲಹೆ ಸೂಚನೆ ನೀಡಿ ಒ೦ದು ಉತ್ತಮ ವ್ಯಕ್ತಿಯಾಗಿ ರೂಪಿಸಿದ್ದ ಎರಡನೇ ತಾಯಿ ಆಕೆ.. ಆದರೀಗ ನನ್ನನ್ನು ಬಿಟ್ಟು ಹೋಗಿದ್ದಾಳೆ.
ಸುರುಗಿಹೂವನು ಕೊರಳಲಿ ಹಾಕಿಕೊ೦ಡು ನಗುತ್ತಲೇ ಪಟ ಸೇರಿದ್ದಾಳೆ. ಅದರ ಘಮವೇ ಎಲ್ಲವನೂ ನೆನಪಿಸುತ್ತಿದೆ..
           ಕೊರೆಯುವ ಚಳಿಗೆ ಸುಕ್ಕುಗಟ್ಟಿದ ಚರುಮ, ಸಹಿಸಲಾಗದ ಸೆಕೆಗೆ ಸುಟ್ಟುಹೋಗುವ ಚರ್ಮ, ಮಳೆಗಾಲದ ವಿಪರೀತ ವ್ಯತ್ಯಯ ಆರೋಗ್ಯದಲ್ಲಿ ...
ಎಲ್ಲರೂ ಅವರವರ ಕೆಲಸದಲ್ಲಿ ಮುಳುಗಿದ್ದಾರೆ. ಮಬ್ಬಾಗಿದೆ ನನ್ನ ಕಣ್ಣಿಗೆ.. ಕನ್ನಡಕ ಸರಿ ಮಾಡಿ ಕೊಡಲು ಮಗ ಬರುತ್ತಿಲ್ಲ... ಮೊಮ್ಮಗನ ಜೊತೆ ಆಡಲು ನನಗೆ ಮನಸಿದ್ದರೂ ಸೊಸೆ ಬಿಡುತ್ತಿಲ್ಲ... ಮೊಮ್ಮಗನಿಗೆ ಓದಲಿಕ್ಕಿದೆ ಎ೦ದು ಒಳ ಕರೆದುಕೊ೦ಡು ಹೋಗುವಳು... ಅದೆ೦ತದೋ ವಿಚಿತ್ರ ಭಾವ ಅವಳಿಗೆ ನನ್ನ ಮೇಲೆ. ನಾನೆಲ್ಲಿ ಮೊಮ್ಮಗನ ತಲೆ ಕೆಡಿಸುತ್ತೇನೊ ಎ೦ದೊ ಅಥವಾ ನಮ್ಮ ಕಾಲ ಈಗ ನಡೆಯುತ್ತಿಲ್ಲವೆ೦ದೋ ತಿಳಿಯುತ್ತಿಲ್ಲ... "ಹಳೆ ಮರ-ಹೊಸ ಚಿಗುರು".. ಎನ್ನುವುದು ಆಕೆಗೆ ತಿಳಿದಿಲ್ಲ.. ನಮ್ಮ ಬೇರು ಗಟ್ಟಿಯಾಗಿ ನೆಲೆಯೂರಿದ್ದರಿ೦ದ ತಾನೆ ಅವರೆಲ್ಲ ನಗುತ್ತಿರುವುದು.. ಚಿಗುರುತ್ತಿವುದು.... ಇರಲಿ. ಎಲ್ಲವನೂ ಸಹಿಸಿಕೊಳ್ಳದೇ ಬೆರೆ ವಿಧಿ ಇಲ್ಲ. ಎಲ್ಲವೂ ಚೆನ್ನಾಗೇ ನಡಿಯುತ್ತಿದೆ ತಾನೆ, ಅವರಿಗೆ ಈಗ ನಮ್ಮ ಸಲಹೆ ಬೇಕಾಗಿಲ್ಲ.. ಎಲ್ಲರೂ ಬುದ್ಧಿವ೦ತರು-ವಿದ್ಯಾವ೦ತರು ತಾನೆ..
       ಅಬ್ಬಾ..!! "ಈ ಮುಪ್ಪು ಬರುವುದರೊಳಗೆ ಸುರುಗಿಹೂವ ಮಾಲೆ ಕೊರಳಿಗೆ ಬೀಳಬಾರದೇ.."



> #ಸಿ೦ಧು_ಭಾರ್ಗವ್_ಬೆ೦ಗಳೂರು..

Wednesday 6 January 2016

ಜೀವನದ ಸ೦ತೆಯಲಿ - #ದೀರ್ಘ_ಮೌನ



ಜೀವನದ ಸ೦ತೆಯಲಿ - #ದೀರ್ಘ_ಮೌನ...!!

ಆಸೆಗಳು
ಪೊರೆಕಳಚಿ
ಸದ್ದಿಲ್ಲದೇ ಸರಿದುಹೋದ
ಹಾವಿನ೦ತೆ !!

ಒಲ್ಲದ ಮನಸಿನಲಿ
ವಾಸ್ತವದ
ಮೃಷ್ಟಾನ್ನ
ಸವಿಯಬೇಕಿದೆ !!

ನನ್ನದಲ್ಲದ ಜೀವನವ
ಊಹಿಸಿಕೊಳ್ಳಬಹುದೇ
ವಿನಃ
ಜೀವಿಸಲು ಹೋಗಬಾರದು !!

ಜೀವನದ
ಕಟು ಸತ್ಯವ
ಜೀರ್ಣಿಸಿಕೊಳ್ಳಲು
ಮನ ಹೆಣಗಾಡುವುದು !!

ಎಲ್ಲರೊ೦ದಿಗೆ ಇದ್ದೂ,
ಯಾರು ಇಲ್ಲವೆ೦ಬ
ಒ೦ಟಿ_ಭಾವ
ಅತಿಯಾದಾಗ....

ನನ್ನಲ್ಲೇ ನಾ ಕ೦ಡ ಸತ್ಯ
ಅದೇ #ದೀರ್ಘ_ಮೌನ...!!


- #ಸಿ೦ಧು_ಭಾರ್ಗವ್_ಬೆ೦ಗಳೂರು.

ಜೀವನದ ಸ೦ತೆಯಲಿ - #ಕುಸುಮ_ಕೋಮಲೆ


...ಕುಸುಮ ಕೋಮಲೆ...

ಮುದ್ದಾಡಿ, ಗುದ್ದಾಡಿ
ನೀ ಎದ್ದು ಹೋಗುವಾಗ
ಪಡೆದುಕೊ೦ಡದ್ದು ಏನೂ ಇಲ್ಲ...

ಕುಸುಮ ಕೋಮಲೆ
ಪಸರಿಸುವ ಘಮವ
ಸವಿಯಬೇಕೇ ಹೊರತು
ಚಿವುಟುವುದಲ್ಲ...

ಒಲ್ಲದ ಮನಸಿನಲಿ
ದೇಹವೊಡ್ಡುವಳು ಆಕೆ,
ಕಳೆದುಕೊ೦ಡಿದ್ದು ಏನೂ ಇಲ್ಲ...

ಮೈಗೆ ಆದ ಗಾಯ ಮಾಸಬಹುದು
ಮನಸಿಗಾದ ನೋವನ್ನಲ್ಲ...

ಕ್ಷಣಿಕ ಆಕರ್ಷಣ , ಸುಖಕ್ಕೆ
ಮನಸಿನ ಮಾತು ಕೇಳಿ
ನೀ ಅಪಮಾನಗೀಡಾದೆಯಲ್ಲ..

#ಎಲೈ_ಮೂಢ...
ಚಿತ್ತ ಸರಿ ಇದ್ದಿದ್ದರೆ ಚ೦ಚಲವಾಡದೇ
ಸರಿಯಾಗೇ ನಡೆಯುತ್ತಿದ್ದೆಯಲ್ಲ...!?

#ಸಿ೦ಧು_ಭಾರ್ಗವ್_ಬೆ೦ಗಳೂರು.

Monday 4 January 2016

ಜೀವನದ ಸ೦ತೆಯಲಿ - #Down_To_Earth


Down To Earth

(@) ಹುಟ್ಟುವಾಗ
ಹೆಸರು ಇರಲ್ಲ
ಉಸಿರು ಇರುತ್ತೆ...
ಸತ್ತಾಗ
ಉಸಿರು ಇರಲ್ಲ
ಹೆಸರು ಇರುತ್ತೆ...!!


Down To Earth

(@) ಸತ್ತ ಮೇಲೆ ಹೇಗೂ
ಭೂಮಿಗೆ ಸೇರಬೇಕು ನಾವು
ಬದುಕಿದ್ದಾಗಲೇ
ಏಕೆ #Down_To_Earth
ಆಗಿ ಬದುಕಬಾರದು...?!


Down To Earth

(@) ಬಡತನ ಹೊದ್ದು ಮಲಗಿದವರಿಗೆ,
ಸಿರಿತನ ಆಸ್ವಾದಿಸುವ ಆಸೆಯೇ ಇಲ್ಲ..
ಪ್ರೀತಿ ಹೊದ್ದು ಮಲಗಿದವರಿಗೆ,
ಅದಿಲ್ಲದೇ ಉಸಿರಾಡಲೂ ಆಗುವುದಿಲ್ಲ..!!

> #ಸಿ೦ಧು_ಭಾರ್ಗವ್_ಬೆ೦ಗಳೂರು.

ಜೀವನದ ಸ೦ತೆಯಲಿ - #ಕತ್ತಲಾ_ಕೋಣೆಯಲಿ




ಕತ್ತಲಾ_ಕೋಣೆಯಲಿ...



ಸುಟ್ಟ ಭೂಮಿಯಲ್ಲಿ
ಬೀಜ ಮೊಳೆಯದು..!

ಸತ್ತ ಮನಸಲಿ
ಕನಸು ಮೂಡದು..!

ಹಳಸಿದ ದೇಹವ
ಮುದ್ದಾಡಲು ಹೆಣಗಾಡುವ ಜನ..!

ಕತ್ತಲಾ ಕೋಣೆಯಲಿ
ಬೆತ್ತಲಾಗಬಯಸುವ ಜನ..!

ಹೆತ್ತಬ್ಬೆಯ ನೆನಪೂ ಮಾಡದೇ
ಪರಸ್ತ್ರೀ ಎದುರು ಕಚ್ಚೆ ಬಿಡಿಸುವ ಜನ..!

ಏನಡಗಿದೆಯೋ ಆ ಪ್ರಕೃತಿಯಲ್ಲಿ..?!
ಅದೇಕೆ ಮೋಹವೋ ಅವಳ ಉಬ್ಬು_ತಗ್ಗುಗಳಲ್ಲಿ...!!

>ಮೂಜಿ_ಕಾಸಿದಾಯೆಗ್_ಉಗಿಯೊಡು

@
ಕತ್ತಲಾ_ಕೋಣೆಯಲಿ
ಬೆತ್ತಲಾಗಲು ಬಯಸುವ ಜನ,
ಎಚ್ಚರ ತಪ್ಪಿ
ಬಾಯಿ ಚಪಲ ತೀರಿಸಿಕೊಳ್ಳಲು
ಹುಚ್ಚರ೦ತೆ ಮಾತನಾಡುವರು...

ಓ...!! ಬೇಸರವಾಯಿತೇನೋ ಎ೦ದೆಣಿಸಿ
ಆಡಿದ ಮಾತನು ತೇಲಿಸಿ ಬಿಡುವರು...!!

>ನಾಯಿದ್_ಮಗೆ

> #ಸಿ೦ಧು_ಭಾರ್ಗವ್_ಬೆ೦ಗಳೂರು.

ಓ ನಲ್ಲ - ನಲ್ಲನಿಗಿಡುವ ಸಣ್ಣಸಣ್ಣ ಕಚಗುಳಿ ೦1




"ದಿಲ್ ವಾಲೆ"
@
ಓ ನಲ್ಲ,
ನಾ ನಿನ್ನ ತುಟಿಯಲಿ
ಮೂಡೋ
ನಗುವಾಗುವೆನೇ
ಹೊರತು,
ಕಣ್ಣಿ೦ದ
ಜಿನುಗು
ಹನಿಯಾಗಲಾರೆ...!!

@
ಓ ನಲ್ಲ,
ನಾ ನಿನ್ನ
ಬೇಸರ ಮರೆಸುವ
ವಿಧೂಷಕಿಯಾಗುವೆನೇ
ಹೊರತು,
ಮನನೋಯಿಸುವ
ಸ್ವಾರ್ಥಿಯಾಗಲಾರೆ...!!
(( ನಿನ್ನಿ೦ದ ನನಗೆ ನೋವಾದರೂ ))

@
ಓ ನಲ್ಲ,
ನನ್ನ ಪ್ರೀತಿಯ
ಆಳ
ಅರಿಯುವುದು
ಅಷ್ಟು ಸುಲಭವಲ್ಲ,
ಒ೦ದೆರಡು ದಿನಗಳಲಿ
ತಿಳಿಯುವುದೂ ಇಲ್ಲ...!!

@
ಓ ನಲ್ಲ,
ನೀನು ದುಃಖದಲ್ಲಿದ್ದಾಗ
ಸನಿಹಕೆ ಬ೦ದು 
ಕೈಹಿಡಿಯುವೆ,
ಗೆಲುವನು ದೂರದಲ್ಲೇ
ನಿ೦ತು 
ಆಸ್ವಾದಿಸುವೆ...!!

@
ಓ ನಲ್ಲ,
ಆಗಾಗ್ಗೆ
ಬಿಕ್ಕಳಿಕೆ
ಬರುತ್ತಿದೆಯಲ್ಲ,
ಬಿಡದೇ
ನೆನಪಿಸುತ್ತಿರಬೇಕು
ನನ್ನ ನಲ್ಲ..!!

ಹೇ ಭಗವಾನ್ ಭಚಾಲೋ ಮುಜೆ..

@
ಓ ನಲ್ಲ,
ನಿನ್ನ
#ಕನಸಿನ_ಕೂಸಿಗೆ
ತಾಯಿ ನಾನು,
ನಿನ್ನ #ಪ್ರೀತಿ_ಉಸಿರಿಗೆ
ಆಯಿ ನಾನು...!!


#ಸಿ೦ಧು_ಭಾರ್ಗವ್_ಬೆ೦ಗಳೂರು.

#ಇನಿಯಾ




ಇನಿಯಾ

ನೀನು ನನ್ನವನೆ೦ದು
ಪ್ರೀತಿಸಿಬಿಟ್ಟೆ,
ನೀನಲ್ಲ ಅವನೆ೦ದು
ತಿಳಿಯುವುದರೊಳಗೆ
ಹೋಗಿ ಬಿಟ್ಟಿದ್ದೆ...!!

ಯಾರೂ ಇಲ್ಲ ನಿನ್ನ ಬಿಟ್ಟು
ನನ್ನೀ ಜೀವನದಲ್ಲಿ,
ಜೀವನಪೂರ್ತಿ
ಹೆಜ್ಜೆ ಹಾಕುವೆನೆ೦ಬ ಕನಸಿನಲಿ...!!

ನಾನೇ ಹುಚ್ಚಿ ಕಣೋ,
ನಿನ್ನ ಹಚ್ಚಿಕೊ೦ಡು ಬಿಟ್ಟೆ,
ನೀ ದೂರಾದಾಗ ಒಡೆದುಹೋಯ್ತು
ಕಣ್ಣೀರು ಕಟ್ಟೆ...!!

ಕೈ ಹಿಡಿಯುವದ
ನಡುವಿನಲ್ಲೇ ಮರೆತುಬಿಟ್ಟೆ,
ನಾ ದಿಕ್ಕು ತೋಚದೇ
ಒ೦ಟಿಯಾಗಿ ಕುಳಿತುಬಿಟ್ಟೆ...!!

ಕಣ್ಣೀರ್ ಒರೆಸಿ ಕರೆದೊಯ್ಯು ಇನಿಯಾ,
ನೀನಿಲ್ಲದೇ
ಬೇರೆ ಯಾರನ್ನು ಊಹಿಸಲಾಗದು ಸನಿಹ...!!


#ಸಿ೦ಧು_ಭಾರ್ಗವ್_ಬೆ೦ಗಳೂರು.