Wednesday 21 December 2016

ಕವಿತೆ- ಕರಗೀತೇ ಬೆಳ್ಳಿಮೋಡ..?!







ಕವಿತೆ- ಕರಗೀತೇ ಬೆಳ್ಳಿಮೋಡ..?!
~~~~~~~~~~~~~
ತಂದೆ: 
ಬೆಳ್ಳಿಮೋಡಗಳ ನಡುವೆ ನಿನಗಾಗೇ
ಅರಮನೆಯೊಂದಿದೆ ಮಗಳೆ..!
ಬೇಸರವಾದಾಗೆಲ್ಲ ಚಂದಿರನ ಜೊತೆ ಹರಟುತ್ತಿರು..!!
*
ನೋಡು, ನಿನ್ನ ಹೂದೋಟದಲಿ 
ತಾರೆಗಳು ಅರಳಿ ನಿಂತಿವೆ..!
ಎಲ್ಲವನೂ ಕೊಯ್ದು ತಂದು ನೇಯುತ್ತಿರು..!!
*
ಮಳೆ ಬರಬಹುದು ಮಗಳೇ..
ಕಾಮನ ಬಿಲ್ಲಿನ ಕೊಡೆಮೂಡಿದೆ..!
ನೆನೆಯದಿರು ಮಗಳೆ..
ಶೀತ ಮಾರುತಕೆ ನೆಗಡಿಯಾಗಲಿದೆ..!!
*
ವೈದ್ಯಲೋಕದ ಅಪ್ಸರೆ
ನಿನ್ನ ತಪಾಸಣೆಗೆ ಬಂದಿಹಳು..!
ರವಿಕಿರಣದ ಶಾಖಕೊಟ್ಟರೆ 
ಸರಿಯಾಗುವುದೆನ್ನುವಳು..!!
*
ಬುವಿಯ ಇಣುಕಿ ನೋಡದಿರು ಮಗಳೆ..
ಇಲ್ಲಿರುವುದೇ ಚೆಂದ..!
ತಿರುಗಿ ಬರುವ ಮನಮಾಡಬೇಡ..
ಗಂಡನ ಮನೆಯೇ ಅಂದ..!!
*
ಈ ಅರಮನೆಯಲ್ಲಿ
ಫಲ ,ಪುಷ್ಪ , ಏನಿದೆ?ಏನಿಲ್ಲ..?
ಬೇಕೆಂದಾಗ ಹಕ್ಕಿಯ ಹಾಗೆ 
ವಿಹರಿಸುತ್ತಿರಬಹುದಲ್ಲಾ..!!
*
ಪ್ರೀತಿಯ ಪತಿರಾಯ 
ಇರುವನು ಜೊತೆಯಲಿ..!
ತೋರಿಸದಿದ್ದರು ಅವನಿಗೆ 
ಪ್ರೀತಿ ಇದೆ ಮನದಲ್ಲಿ..!!
***
ಮಗಳು: 
ಕೈಗೊಬ್ಬ ಆಳು ,
ದಿಟ ಕಾಲು ಒತ್ತಲು ಇರುವಳು..!
ಕೆಲಸ ಮುಗಿಸಿ ಅವರೆಲ್ಲ 
ಮನೆಗೆ ವಾಪಾಸಾಗುವರು..!!
*
ಮನೆಗೆ ಹಿಂದಿರುಗಿ ಪತಿರಾಯನಿಗೆ
 ಪ್ರೀತಿಯ ಕೈತುತ್ತು ತಿನಿಸುವರು..!
ನನಗಿಲ್ಲ ಆ ಅದೃಷ್ಟವೆಂದು 
ಮರುಗುತ ಕುಳಿತಿರುವೆನು..!!
*
ಎಲ್ಲವೂ ಇದ್ದಂತೆ ಏನೂ ಇಲ್ಲವಿಲ್ಲಿ..!
ಅರಮನೆಯ ಒಡತಿ ನಾನು
ಬೇಯುತಿರುವೆನು ವಿರಹದುರಿಯಲ್ಲಿ..!!

~ ಸಿಂಧುಭಾರ್ಗವ್ .ಬೆಂಗಳೂರು

No comments:

Post a Comment