Wednesday 21 December 2016

ವಾರದ ಸಣ್ಣ ಕತೆ: ಇನ್ನೇನಿದ್ದರು ಮರೆತಂತೆ ನಟಿಸಬೇಕಷ್ಟೆ.

ವಾರದ ಸಣ್ಣ ಕತೆ:
ಇನ್ನೇನಿದ್ದರು ಮರೆತಂತೆ ನಟಿಸಬೇಕಷ್ಟೆ...
~~@~~




ಈ ಭೂಮಿ ನಿಂತಿರುವುದೇ ಸ್ನೇಹ ಮತ್ತು ಪ್ರೀತಿ ಮೇಲೆ ಎಂದು ನಾನು ಬಲವಾಗಿ ನಂಬಿರುವೆ.. ನಿಮಗೆ ಸಮ್ಮತವಿದೆಯಾ?! ಭೂಮಿ ನಿಂತಿರುವುದೇ ಗುರುತ್ವಾಕರ್ಷಣೆಯ ಬಲದಿಂದ. ಅಂದರೆ ಅಲ್ಲಿಯೂ ಒಂದು ರೀತಿಯ ಆಕರ್ಷಣೆ ಇರಬೇಕು ಮತ್ತು ಇದೆ ಎಂದಾಯಿತು ತಾನೆ..?! ಕೆಲವರ ಮನಸ್ಸು ಬಲು ಸೂಕ್ಷ್ಮ. ಇನ್ನೂ ಕೆಲವರದು ಒರಟು ಕಲ್ಲಿನಂತೆ, ಇನ್ನೂ ಕೆಲವರದು ಮಳೆಗಾಲದಲ್ಲಿ ಜಾರುವ ಪಾಚಿಯಂತೆ (ಬೇಕೆಂದಾಗ ಅಂಟಿಕೊಳ್ಳುವುದು, ಬೇಡವೆಂದಾಗ ಜಾರಿಕೊಳ್ಳುವುದು) ಎಷ್ಟೇ ಕಷ್ಟಪಟ್ಟು ನಾವು ಪ್ರೀತಿಸುವ ಸ್ನೇಹಿತರನ್ನು ದೂರವಿಡಬೇಕು ಎಂದರೂ ಸಾಧ್ಯವಾಗದು. ನೆನಪುಗಳು ಸುತ್ತಿಸುತ್ತಿ ಬರುತ್ತಲೇ ಇರುತ್ತವೆ. ನಮ್ಮ ನಡುವೆ ಅದೆಷ್ಟೋ ಜನರಿದ್ದರೂ ನಮ್ಮ ಮನಸ್ಸು ಎಲ್ಲರನ್ನೂ ಸ್ನೇಹಿತರೆಂದು ಒಪ್ಪಬೇಕೆಂದಿಲ್ಲ. ಒಪ್ಪಿಕೊಂಡ ಸ್ನೇಹಿತರನ್ನು ಯಾವುದೋ ಕ್ಷುಲ್ಲಕ ನೆಪವೊಡ್ಡಿ ದೂರವಿಡುವ ವರ್ಗ ಮೊದಲಿನಿಂದಲೂ ಇತ್ತು. ಈಗೀಗ ಹೆಚ್ಚಾಗುತ್ತಿದೆ. ಕೆಲವರ ಸ್ನೇಹ ಕಾಲೇಜು ದಿನಕ್ಕೆ ಮಾತ್ರ ಸೀಮಿತವಾಗಿದೆ. ಉದ್ಯೋಗಕ್ಕೆ ಹೋಗುವಾಗ ಅಲ್ಲಿ ಒಂದಷ್ಟು ಜನರ ಪರಿಚಯ, ಸ್ನೇಹ ಎಂಬಿತ್ಯಾದಿ. ಕೆಲವರಿಗೆ ಸಮಯ ಕಳೆಯಲು‌ ನಾಲ್ಕು ಜನ ಬೇಕಲ್ಲ ಎಂದೋ, ಸಿರಿವಂತನೆಂದೋ, ಗುಣವಂತನೆಂದೋ, ಬುದ್ಧಿವಂತನೆಂದೋ ಸ್ನೇಹ ಬೆಳೆಸುವುದುಂಟು. ಆದರೂ ಒಂಟಿಯಾಗಿ ಕೊರಗುವ ಬದಲು ಭಾವನೆಗಳಿಗೆ ಕಿವಿಯಾಗುವ ಒಬ್ಬರಾದರೂ ಸ್ನೇಹಿತನನ್ನು ಹೊಂದಿರಲೇಬೇಕು. ಕೆಲವರು ಹೀರೋಯಿಸಮ್ ತೋರಿಸಲೆಂದೇ ಸಾಕಷ್ಟು ಗೆಳೆಯರ ಬಳಗವನ್ನು ಕಟ್ಟಿಕೊಂಡಿರುತ್ತಾರೆ. ಕಷ್ಟಕಾಲದಲ್ಲಿ ಸಹಾಯಕ್ಕೆ ಬರುವವನೇ ನಿಜವಾದ ಸ್ನೇಹಿತ. ಅವನು ಯಾರೇ ಆಗಿರಲಿ, ಜಾತಿ,ಧರ್ಮ, ಬಣ್ಣ, ಹಣ ಇದ್ಯಾವುದೂ ಸ್ನೇಹಕ್ಕೆ ಅಡ್ಡಿ ಬರುವುದಿಲ್ಲ. ಆದರೆ ಕಾಲೇಜು ಕಾಂಪಸ್ಸಿನಿಂದ ಹೊರ ಬಂದಕೂಡಲೇ ಅದೇ ಬಹು ದೊಡ್ಡ ಗೋಡೆಯಾಗಿ ಮಾರ್ಪಾಡಾಗಿರುತ್ತದೆ. ಕಾರಣವೇ ಇಲ್ಲದೇ ದೂರಸರಿದು, ಮರೆತು ಗೋರಿ ಕಟ್ಟಿ ಕುಸುಮವೊಂದನ್ನು ಇಟ್ಟಿರುತ್ತಾರೆ.
***
ಆದರೂ ಹೆಣ್ಣುಮಕ್ಕಳಿಗೆ ಈ ಸ್ನೇಹವನ್ನು ಹೆಚ್ಚುಕಾಲ ಮುಂದುವರಿಸಲು ಸಾಧ್ಯವಾಗದು. ಅದಕ್ಕೆ ಜೀವಕೊಡಲು ನೆನಪುಗಳಿಗೆ ಮಾತ್ರ ಸಾಧ್ಯವಾಗುವುದೇ ವಿನಃ ಜೊತೆಗೆ ನಡೆಯಲು ಆಗದು. ಕಾರಣ ಮದುವೆಯಾದ ಮೇಲೆ ಅವರ ಜೀವನ ಸಂಪೂರ್ಣ ಬದಲಾಗುತ್ತದೆ. ಅದಕ್ಕೆ ಒಗ್ಗಿಕೊಳ್ಳಲೇಬೇಕು.  ಇಲ್ಲ "ನಾನು ಇರುವುದೇ ಹೀಗೆ, ಸ್ನೇಹಿತರಿಲ್ಲದೇ ನನಗೆ ಬದುಕಲು ಆಗುವುದಿಲ್ಲ, ಅವರೇ ಉಸಿರು, ಅವರೇ ಜೀವ, ಸಾಯುವ ತನಕ ಅವರನ್ನು ದೂರವಿಡಲಾರೆ ಅವರ ಜೊತೆ ಸುತ್ತಾಡಲು ಹೋಗುವೆ, ಬಂಧುಗಳಿಗಿಂತ ಅವರೇ ಹೆಚ್ಚು, ಹಾಗೆ ಹೀಗೆ..." ಎಂದೆಲ್ಲ ದನಿ ಎತ್ತಿದರೆ ತಾಯಿ‌ಮನೆಗೆ ತಿರುಗಬೇಕಾಗ ಬಹುದು. ಉದ್ಯೋಗ ಮಾಡುವ ಜಾಗದಲ್ಲಿಯೂ ಸಲುಗೆಯಿಂದ ವ್ಯವಹರಿಸಿದರೆ ಹೆಸರು ಕೆಡಿಸಿಕೊಳ್ಳಬೇಕಾದೀತು. ಮನೆಯಲ್ಲಿ ಕಿರಿಕಿರಿ ಗಂಡ-ಹೆಂಡಿರ ನಡುವೆ ಅಸಮಾಧಾನ, ಜಗಳ ಹೀಗೆ ಸಮಸ್ಯೆಗಳೆಂಬ ಕುದಿಯುವ ಬಿಸಿನೀರನ್ನು ಮೈಗೆ ಸುರಿದುಕೊಂಡಂತೆ.. ಬೊಕ್ಕೆ ಬಂದು, ಉರಿ ಕಡಿಮೆಯಾಗಿ ಆದ ಗಾಯ ಗುಣವಾದರೂ ಕಲೆ ಮಾತ್ರ ಮಾಸದು.. ಕೊನೆಗೆ ಮನೆಯವರೆಲ್ಲ ಹುಡುಗಿಯ ಸುತ್ತಕುಳಿತು ಪುಂಕಾನುಪುಂಕ ಬುದ್ಧಿ ಮಾತುಗಳನ್ನಾಡಿ "ಯಾಕೆ ಬೇಕು ನಿನಗೆ ಇದೆಲ್ಲಾ..?!" ಎಂದು ಕೇಳುವವರೇ ಜಾಸ್ತಿ.. ಆಗ ಬೇಡವೆಂದರೂ ಒಂದು ರೀತಿಯ ವೇದನೆ ಅತೀಯಾಗಿ ಕಾಡುವುದು. ನಾನು ಕೊಟ್ಟ ಮಾತನ್ನು ಉಳಿಸಿಕೊಳ್ಳಲಾಗಲಿಲ್ಲ ಎಂದು. ಎಲ್ಲದರಲ್ಲಿಯೂ ವಿಶಾಲ ಮನೋಭಾವದಿಂದ ನೋಡುವ ಗಂಡಾಗಲಿ/ ಹೆಣ್ಣಾಗಲಿ ನನ್ನ ಸಂಗಾತಿ ಬೇರೆಯವನ/ಳ ಜೊತೆ ಅತಿಯಾಗಿ ಇಲ್ಲದಿದ್ದರೂ ಸಲುಗೆಯಿಂದ ಇರುವುದ ನೋಡಿದರೆ ಸಹಿಲಾರರು. ಹೊಟ್ಟೆಉರಿಯೋ ಇಲ್ಲಾ ಪೊಸೆಸಿವ್ ಆಗಿಯೋ ವರ್ತಿಸುವುದು ಸಹಜ. ಅದನ್ನು ತಪ್ಪು ಎನ್ನಲೂ ಆಗದು. ಆದರೆ ಅದೇ ಅನುಮಾನಕ್ಕೆ ತಿರುಗಿ ಮಾನಸಿಕವಾಗಿ/ ದೈಹಿಕವಾಗಿ ಹಿಂಸಾಚಾರಕ್ಕೆ ಬದಲಾದರೆ ಮಾತ್ರ ಖಂಡಿಸಬೇಕಾಗುತ್ತದೆ. ಆಗ ಹೆಣ್ಣಿನ ಹೆತ್ತವರು ಒಡಹುಟ್ಡಿದವರು ಅಲಕ್ಷ್ಯಮಾಡದೇ ಅವಳ ನೋವಿನ ಮಾತನ್ನು ತಳ್ಳಿಹಾಕದೇ ಗಂಭೀರವಾಗಿ ಪರಿಗಣಿಸಿ ಒಂದು ನಿರ್ಧಾರಕ್ಕೆ ಬರಬೇಕಾಗಿತ್ತದೆ..
**
ಈಗೀಗ ಸಾಮಾಜಿಕ ಜಾಲತಾಣ ಇರುವುದರಿಂದ ಬೇಡವೆಂದರೂ ಹಳೆಯ ಗೆಳೆಯ/ತಿಯರೆಲ್ಲ ಸಿಗುತ್ತಾರೆ.  ಹಳೆಯ ಮೊದಲ ಪ್ರೀತಿ ಕೂಡ ಕೆಲವೊಮ್ಮೆ ಚಿಗುರಬಹುದು. ವಾಟ್ಸ್ ಅಪ್ ನಿಂದ ಮತ್ತೆ ಹಳೆಯ ನೆನಪುಗಳನ್ನು  ಮೆಲುಕು ಹಾಕುತ್ತಾ ಹರಟುತ್ತಾ ಇನ್ನೊಂದು ಜೀವಕ್ಕೆ ಮೋಸಮಾಡುತ್ತಿರಬಹುದು. ಬಹುಮುಖ್ಯವಾದುದೆಂದರೆ ನಮಗೆ ಸರಿ ಎನಿಸಿದ್ದು ಮಾಡಿದಾಗ ಯಾರ ಮಾತು ನೆನಪಾಗಿವುದಿಲ್ಲ. ಅದೇ ಬೇರೆಯವರು ಆ ತಪ್ಪನ್ನೇ ಮಾಡಿದಾಗ ಎತ್ತಿ ತೋರಿಸುತ್ತೇವೆ. ಬಾಗಿ ಬೆನ್ನು ತೋರಿಸಿದರೆ ನಾಲ್ಕು ಪೆಟ್ಟು ಕೂಡ ಕೊಡುತ್ತೇವೆ. ಹಾಗಾಗಿ ಈ ಸಾಮಾಜಿಕ ಜಾಲತಾಣದಿಂದ ಒಂದಷ್ಟು ಜನರ ನೆಮ್ಮದಿ ಕೆಟ್ಟಿರುವುದಂತು ನಿಜ. ಕೆಲ ಸಂಬಂಧಗಳಲ್ಲಿ ಬಿರುಕು ಮೂಎಇರುಬುದಂತೂ ನಿಜ. ಇನ್ನು ಕೆಲವು ಗಂಡಸರು ದಬ್ಬಾಳಿಕೆ ಮಾಡುವುದು, ಕೈಹಿಡಿದ ಸಂಗಾತಿಯ ಮನದ ಇಚ್ಛೆಯನ್ನು ಅರಿತುಕೊಳ್ಳುವ ಮನಸ್ಸು‌ ಮಾಡದೇ, ಅವರ ಆಸಕ್ತಿಗಳೇನು? ಎಂದು ಕೇಳದೆ ಕೇವಲ ಮನೆ ಕೆಲಸಕ್ಕೆ ಸೂಕ್ತೆ ಎನ್ನುವಂತೆ ಬಿಂಬಿಸಿ ಮತ್ತಷ್ಟು ಮಾನಸಿಕವಾಗಿ‌ ಕುಗ್ಗಿಸುವುದು. ಅತ್ತೆಮಾವನವರ ಕಿರಿಕುಳ ಅದಕ್ಕೆ ಸಾಥ್ ಕೊಡಲು. ಹೀಗೆಲ್ಲ ಇರುವಾಗ ನಡುನಡುವೆ ಸಂಜೆ ತಂಗಾಳಿಯಾಗಿ ಹಳೆಯನೆನಪುಗಳೆಲ್ಲ ಮೈಸೋಕಿ ಹೋಗುವಾಗ ಮನಸಿಗೊಂದು ರೀತಿಯ ರೋಮಾಂಚನವಾಗಿವುದು. ಸ್ನೇಹಿತರ ನೆನಪು, ಕಾಲೇಜು ದಿನಗಳು ಕಾಡತೊಡಗಿದಾಗ ಬೇಡವೆಂದರೂ ಕಂಗಳಲಿ ಹನಿ ತುಂಬಿಕೊಳ್ಳುವುದು. ಆ ದಿನ ಮತ್ತೆ ಬರುವುದಿಲ್ಲವೆಂದು ಒಪ್ಪಿಕೊಂಡಾಗ ಬೇಕಂಯಲೇ ಕಲ್ಲಾಗಿ ಹೋಗಬೇಕಾಗುತ್ತದೆ.. ಯಾರೊಂದಿಗೂ ಮಾತನಾಡಲು ಆಗದು. ಯಾರ ಸಂಪರ್ಕದಲ್ಲಿ ಇರಲು ಅಸಾಧ್ಯವೆಂದಾಗ ಸ್ನೇಹಿತರೆಲ್ಲರನ್ನೂ  ಮರೆತಂತೆ ನಟಿಸಬೇಕಷ್ಟೆ..

~ ಸಿಂಧುಭಾರ್ಗವ್.ಬೆಂಗಳೂರು 

No comments:

Post a Comment