Wednesday 21 December 2016

ಕಥೆ- ಫಲಾಫಲಗಳು ದೇವನಿಗೆ ಬಿಟ್ಟದ್ದು..

ಕಥಾ ಶೀರ್ಷಿಕೆ :
"ಹಾಕೋದು ಬಿತ್ತೋದು ನನ್ನಿಚ್ಛೆ, ಆಗೋದು ಹೋಗೋದು ಅವನಿಚ್ಛೆ"

ರಾಮು ತಂದೆ ಇಲ್ಲದ ಬಡವರ ಮನೆ ಹುಡುಗ. ಅಮ್ಮ ಸಾಲಸೋಲ ಮಾಡಿ ಓದಿಸುತ್ತಿದ್ದಳು. ಅವನಿಗೋ ಇಂಜಿನಿಯರಿಂಗ್ ಓದಿ, ಪ್ರಸಿದ್ಧ ಕಂಪೆನಿಯೊಂದರಲ್ಲಿ ಕೆಲಸಕ್ಕೆ ಸೇರಬೇಕೆಂಬ ಆಸೆ. ಆಗಾದರೂ ನಮ್ಮ ಕಷ್ಟಗಳಿಗೆಲ್ಲ ಮುಕ್ತಿ ಸಿಗಬಹುದು ಎಂಬ ಬಯಕೆ. ಅದಕ್ಕೆ ಎಲ್ಲಾ ರೀತಿಯ ತಯಾರಿ ನಡೆಸುತ್ತಿದ್ದ. ಶಿಸ್ತಿನ ಜೀವನ ನಡೆಸುತ್ತಾ ,ಓದಿನ ಕಡೆ ಗಮನ ಕೊಡುತ್ತಾ ,ಅಮ್ಮನ ಕೆಲಸಕ್ಕೂ ನೆರವಾಗುತ್ತಿದ್ದ.
ನೆರಮನೆಯ ಸೋಮುವಿಗೆ ಓದಿನಲ್ಲಿ ಆಸಕ್ತಿಯೂ ಕಡಿಮೆ, ಹಾಗೆ ಕಷ್ಟವೆಂದರೆ ಏನೂ ಎಂದು ಅರಿವಿಗೆ ಬಾರದಂತೆ ತಂದೆತಾಯಿ ಬೆಳೆಸಿದ್ದರು. ಅವನು ಮುಂದೆ ಏನಾಗುತ್ತಾನೋ ಎಂಬ ಆತಂಕ ಮನೆಮಾಡಿತ್ತು. ಒತ್ತಾಯಿಸಿ ಸಿ.ಇ.ಟಿ ಪರೀಕ್ಷೆ ಬರೆಯಲು ಹೇಳಿದರು. ಇಂಜಿನಿಯರಿಂಗ್ ಸೀಟು ಸಿಕ್ಕಿತು. ರಾಮು ಕೂಡ ಅದೇ ಕಾಲೇಜಿನಲ್ಲಿ ಸೀಟು ಪಡೆದ. ಇಬ್ಬರೂ ಒಂದೆ ರೂಮಿನಲ್ಲಿ ತಮ್ಮ ಕಾಲೇಜು ದಿನಗಳನ್ನು ಕಳೆಯಲು ಶುರುಮಾಡಿದರು. ಗಂಭಿರವಾಗಿ ಓದುತ್ತಿದ್ದ ರಾಮುವೂ ಎಲ್ಲ ಸೆಮಿಸ್ಟರ್ ನಲ್ಲಿ ಪಾಸಾದ. ಆದರೆ ಸೋಮು , ಅಲ್ಲಿಯೂ ಆಸಕ್ತಿ ತೋರುತ್ತಿರಲಿಲ್ಲ. ಹೆತ್ತವರ ಬಲವಂತಕ್ಕೆ ಅಲ್ಲಿ ಬಂದು ಕುಳಿತಹಾಗೆ ವರ್ತಿಸುತ್ತಿದ್ದ. ಇಷ್ಟವಿದ್ದರೆ ತರಗತಿಗೆ ಹೋಗುತ್ತಿದ್ದ. ಪ್ರತಿ ಇಂಟರ್ನಲ್ಸ್ ನಲ್ಲಿ ಪಾಸಾಗುವುದು ಅನುಮಾನವಿತ್ತು. ಹಾಗೆ ಕೆಟ್ಟ ಗೆಳಯರ ಸಹವಾಸದಿಂದ ಧೂಮಪಾನ ,ಮದ್ಯಪಾನ ಎಲ್ಲವನ್ನೂ ಮೈಗಂಟಿಸಿಕೊಂಡಿದ್ದ. ಅವನ ಈ ವರ್ತನೆ ರಾಮುವಿಗೆ ಹಿಡಿಸದೇ ಹಾಸ್ಟೇಲಿನಲ್ಲಿ ತಾನು ಬೇರೆ ರೂಮಿಗೆ ಬದಲಾಯಿಸಿಕೊಂಡ. ಕಷ್ಟಪಟ್ಟು ಓದಿ ಪ್ರತೀ ಸೆಮಿಸ್ಟರ್ ಪರೀಕ್ಷೆಯಲ್ಲೂ ಉತ್ತಮ ಅಂಕ ಗಳಿಸುತ್ತಾ ಬಂದ. ಅಮ್ಮನಿಗೂ ತಿಂಗಳಿಗೊಮ್ಮೆ ಪತ್ರ ಬರೆದು ಎಲ್ಲವನ್ನೂ ಖುಷಿಯಿಂದ ಹಂಚಿಕೊಳ್ಳುತ್ತಿದ್ದ. ಜೊತೆಗೆ ತಾಯಿ ಸೋಮುವಿನ ಬಗ್ಗೆ ಕೇಳಿದಾಗ "ಅವನ ಬಗ್ಗೆ ಏನು ಹೇಳುವುದು , ಸ್ವಲ್ಪವೂ ಬದಲಾವಣೆ ಇಲ್ಲಮ್ಮ." ಎಂದು ಸುಮ್ಮನಾಗುತ್ತಿದ್ದ. ಇದರ ಮಧ್ಯೆ ಸೋಮು ಪ್ರಶ್ನೆ ಪತ್ರಿಕೆ ಕದ್ದನೆಂದು ಕಾಲೇಜಿನಿಂದ ಹೊರಹಾಕಿದರು. ಹೆತ್ತವರ ಕನಸು ನೀರಿನಲ್ಲಿ ಹೋಮ ಮಾಡಿದಂತಾಯಿತು. ಹೇಗೋ ಕಾಲೇಜಿನಲ್ಲಿ ಬೇಡಿಕೊಂಡು ಕೊನೆಯ ಸೆಮಿಸ್ಟರ್ ಪರೀಕ್ಷೆಗೆ ಕುಳಿತುಕೊಳ್ಳಲು ಅವಕಾಶ ಕಲ್ಪಿಸಿಕೊಟ್ಟರು. ಸ್ವಲ್ಪ ಬುದ್ಧಿ ಬಂದ ಸೋಮುವಿಗೆ , ಬಾಲ್ಯದ ಗೆಳೆದ ರಾಮುವಿನ ನೆನಪಾಯಿತು. ಅವನ ಸಹಾಯ ಪಡೆದಾದರೂ ಓದಿ ಪಾಸಾಗಬೇಕು ಎಂದ ಪಣತೊಟ್ಟ. ರಾಮುವು ಪಕ್ಕದ ಕೋಣೆಯಲ್ಲಿ ಓದುತ್ತಿದ್ದವನನ್ನು ಮಾತನಾಡಲು ಕರೆದ. "ನನ್ನೆಲ್ಲ ತಪ್ಪಿನ ಅರಿವಾಗಿದೆ. ನಿನ್ನ ಮನಸಿಗೂ ನೋವುಂಟು ಮಾಡಿದ್ದೆ. ನನ್ನನ್ನು ಕ್ಷಮಿಸಿ ಬಿಡು " ಎಂದು ಬೇಡಿಕೊಂಡ. ಅವನು ಮನಕರಗಿ ಕ್ಷಮಿಸಿ ಓದಲು ಸಹಾಯ ಮಾಡಿದ. ಹಗಲು ರಾತ್ರಿ ಎನ್ನದೇ ಇಬ್ಬರೂ ಕಷ್ಟಪಟ್ಟು ಓದಿದರು. ಬಾಲ್ಯದ ನೆನಪುಗಳನ್ನೆಲ್ಲ ಮೆಲುಕು ಹಾಕುತ್ತಾ ಖುಷಿಖುಷಿಯಾಗಿ ಓದುತ್ತಿದ್ದರು. ಅವನ ಈ ಬದಲಾವಣೆಯನ್ನು ತರಗತಿಯ ಅಧ್ಯಾಪಕರು ನೋಡಿ ಸಂತೋಷ ಪಟ್ಟರು.
*
ಕೊನೆಗೂ ಸತ್ವಪರೀಕ್ಷೆಯ ದಿನ ಹತ್ತಿರ ಬಂದಿತು. ಎಲ್ಲರೂ ಪರೀಕ್ಷಾ ಹಾಲಿನಲ್ಲಿ ಗಂಭೀರವಾಗಿ ಕುಳಿತಿದ್ದರು. ಅದೆಷ್ಟೋ ಪರೀಕ್ಷೆಗಳ ಬರಿಯದೇ ತೇಲಿಸಿಬಿಟ್ಟಿದ್ದ ಸೋಮುವಿಗೆ ಒಮ್ಮೆ ಕಣ್ಣು ತೇವಗೊಂಡಿತು. ಪ್ರಶ್ನೆ ಪತ್ರಿಕೆಯ ಪಡೆದ ಸೋಮು ಗೊತ್ತಿದ್ದ ಪ್ರಶ್ನೆಗಳಿಗೆಲ್ಲ ಉತ್ತರಿಸಿ ಹಾಲಿನಿಂದ ಹೊರನಡೆದ. ರಾಮುವೂ ಎಲ್ಲವೂ ಸುಲಭವಾಗಿರುವ ಪ್ರಶ್ನೆಗಳ ಬಂದಿದ್ದವು ಎಂದು ಖುಷಿಯಿಂದ ಪರೀಕ್ಷೆ ಬರೆದು ಹೊರನಡೆದ.
*
ತಿಂಗಳುಗಳು ಉರುಳಿದವು. ಫಲಿತಾಂಶಕ್ಕಾಗಿ ಎಲ್ಲರೂ ಕಾಯುತ್ತಿದ್ದರು. ಸೋಮುವಿಗೆ ಫಲಿತಾಂಶ ನೋಡುವ ಧೈರ್ಯವಿರಲಿಲ್ಲ. ಪಾಸಾಗುತ್ತೇನೋ ಇಲ್ಲವೋ ಎಂಬ ಭಯಕಾಡುತ್ತಿತ್ತು.. ಆದರೆ ರಾಮು ಮತ್ತು ಸೋಮು ಎಲ್ಲದರಲ್ಲೂ ಪಾಸಾಗಿದ್ದರು. ಅದಕ್ಕೇ ಹೇಳುವುದು ಪ್ರಯತ್ನ ನಮ್ಮದು ಫಲ ದೇವರಿಗೆ ಬಿಟ್ಟಿದ್ದು ಎಂದು.

- ಸಿಂಧುಭಾರ್ಗವ್ .

No comments:

Post a Comment