Wednesday 21 December 2016

ಲೇಖನ- ಋಣಭಾರ ಅತಿಯಾಗಿ ಕುಗ್ಗಿರುವೆ ಗೆಳತಿ.

((@@))

"ಋಣಭಾರ ಅತಿಯಾಗಿ ಕುಗ್ಗಿರುವೆ ಗೆಳತಿ.."

"ಮರಳಿ ಬಾರದಿರುವ ಕೃಷ್ಣನ ನೆನಪಿನಲ್ಲೇ ಕೊಳಲು ಹಿಡಿದು ಕುಳಿತಿದ್ದ ರಾಧೆಯಂತೆ ಆಗಿದೆ ನನ್ನ ಬದುಕೀಗ.."
**
ಹೌದು ಕಣೆ.. ನೀನೊಂದು ಉತ್ಸಾಹದ ಚಿಲುಮೆಯಂತೆ. ಬಣ್ಣ ಬಣ್ಣಗಳಿಂದ ನರ್ತಿಸುವ ಕಾರಂಜಿಯಂತೆ. ಮಳೆಗಾಗಿ ಎದುರು ನೋಡುತ ಗರಿಬಿಚ್ಚಿ ಕುಣಿವ ನವಿಲಿನಂತೆ. ಮೋಡದ ಮರೆಯಲಿ ಪ್ರಕಾಶಿಸುವ ರವಿಯಂತೆ. ಮಳೆಗಾಲದಲ್ಲಿ ಕಣ್ ತಂಪಾಗಿಸುವ ಪಾಚಿಯಂತೆ. ಚಳಿಗಾಲದಲ್ಲಿ ಮರಗಳ ತುದಿಯಲ್ಲಿ ಹೆಪ್ಪುಗಟ್ಟಿ ನಿಲ್ಲುವ ಮಂಜುಗಡ್ಡೆಯಂತೆ. ಎಷ್ಟು ಹೊಗಳಿದರೂ ಸಾಲದು ಗೆಳತಿ. ನಾ ನಿನ್ನ ಪ್ರೀತಿಸಲು ಯೋಗ್ಯನಾ ಅನ್ನಿಸುವಷ್ಟು ನೀ ನನ್ನನ್ನು ಪ್ರೀತಿಸಿ ಬಿಟ್ಟೆ.
ನೆನಪಿದೆಯಾ?‌‌ ಪ್ರತಿದಿನ ನಾವು‌ ಮಾತನಾಡುವಾಗಲು ನೀನು  ಕೊನೆಗೊಳಿಸುವುದು "ನಿನಗೊಂದು ಮುದ್ದಾದ  ಗೊಂಬೆಯನ್ನು ನೋಡಿ ಮದುವೆ ಮಾಡಿಸಬೇಕು ಕಣೋ. ನನ್ನಷ್ಟೆ ಪೆದ್ದುಪೆದ್ದಾಗಿ ಪ್ರೀತಿಸುವ ಮುದ್ದು ಹುಡುಗಿ ನಿನಗೆ ಸಿಗಲೀ.."‌ ಎಂದು. ಆ ಮೂಲಕ "ನೀನು ನನಗೆ ಸಿಗುವುದಿಲ್ಲ" ಎನ್ನುವ ವಾಸ್ತವವನ್ನು , ಕಠೋರ ಸತ್ಯವನ್ನು ಸುಲಭವಾಗಿ ಸ್ವಲ್ಪಸ್ವಲ್ಪವೇ ಮನಕ್ಕಿಳಿಸುತ್ತಿದ್ದೆ. ಹಾಗೆಯೇ ಹುಚ್ಚುಹಿಡಿಸುವಷ್ಟು ಪ್ರೀತಿಸುತ್ತಲೂ ಇದ್ದೆ. ಹೇಗೆ ಸಾಧ್ಯ ನಿನಗೆ?? ನೀನು ಪ್ರೀತಿಯ ಮುಖವಾಡ ಧರಿಸಿರುವೆಯಾ ಎಂದು ಎಷ್ಟೋ ಬಾರಿ ಪರೀಕ್ಷಿಸಿದೆ. ಮುರ್ಖ ನಾನು. ಅಯ್ಯೋ..!! ಪ್ರೀತಿಗೆ ನಾ ಮಾಡಿದ ಅಪಚಾರವದು. ಮುಖವಾಡವಲ್ಲವದು. ಆಗಲೇ ನಿನ್ನ ನೈಜ್ಯ‌ ಪ್ರೀತಿಯ ಆಳ ಇನ್ನಷ್ಟು ಅರ್ಥವಾಗ ತೊಡಗಿದ್ದು.. ಮರಳಿ ಬಾರದಿರುವ ಕೃಷ್ಣನ ನೆನಪಿನಲ್ಲೇ ಕೊಳಲು ಹಿಡಿದು ಕುಳಿತಿದ್ದ ರಾಧೆಯಂತೆ ಆಗಿದೆ ನನ್ನ ಬದುಕೀಗ. ನಿನಗಿದ್ದಷ್ಟು ಧೈರ್ಯ, ಆತ್ಮವಿಶ್ವಾಸ ನನಗೆ ಇರಲಿಲ್ಲ. ನಮ್ಮ ಪ್ರೀತಿ  ಮದುವೆಯಲ್ಲಿ ಕೊನೆಗೊಳ್ಳುವುದಿಲ್ಲ ಎಂದು ನಿನಗೂ ಗೊತ್ತಿತ್ತು. ಆದರೂ ನಾವು ಪ್ರೀತಿಸಿದೆವು. ಕಾಲ ಹರಣಕ್ಕಂತೂ ಅಲ್ಲವೇ ಅಲ್ಲ. ಪ್ರೀತಿಯ ನಿಜರೂಪ ತಿಳಿಯಬೇಕೆಂದು. ಸಾವಿನ ಕದ ತಟ್ಟುವವರೆಗೂ ಆ ನೆನಪುಗಳು ಜೊತೆಗಿರಬೇಕೆಂದು. ನಮ್ಮನ್ನು ಪ್ರೀತಿಸಿದವರಿಗಾಗಿ, ನಮ್ಮನ್ನೇ ನಂಬಿಕೊಂಡಿರುವವರಿಗಾಗಿ ನಾವು ಬದುಕಬೇಕು ಎಂಬುದನ್ನು ನೀನೆ ಕಲಿಸಿದ್ದು. ನಾನು ನಿನ್ನ ಪ್ರೀತಿ ತರಗತಿಯಲ್ಲಿ  ವಿದ್ಯಾರ್ಥಿಯಾಗಿ ಸೇರಿದ್ದಷ್ಟೆ.. ಹಾಗೇ ಉಳಿದುಬಿಟ್ಟೆ ನೋಡು.
**
ನಾನೇ ನಿನಗೆ ಮೊದಲ ಪ್ರೀತಿ ಮತ್ತು ಕಡೆಯವನೂ ಎಂದು ಹೇಳಿದ್ದೀ ನೀನು. ಹುಚ್ಚು ಹುಚ್ಚು ಕನಸುಗಳನ್ನು ಕಾಣಲು ನೀನು ಬಿಡುತ್ತಲೇ ಇರಲಿಲ್ಲ. ನೀರ‌ಮೇಲಿನ ಗುಳ್ಳೆಯಂತೆ ಅದು ಶಾಶ್ವತವಲ್ಲ ಎಂಬುದು ನಿನಗೆ ಗೊತ್ತಿತ್ತು.. ನೀ ನನಗಾಗಿ ಏನೆಲ್ಲಾ ಮಾಡಿದೆ. ಅದೆಷ್ಟು ಸಮಸ್ಯೆಗಳ ವಿರುದ್ಧ ಹೋರಾಡಿದ್ದೆ. ಏನೇ ಬಂದರೂ ಪ್ರೀತಿಗಾಗಿ ಎಲ್ಲವನ್ನೂ ಎದುರಿಸಬೇಕು ಎಂದು ನೀನು ಕಲಿಸಿಕೊಟ್ಟೆ. "ನನಗೆಷ್ಟು ಸಮಸ್ಯೆ ಎದುರಾದರು ನಾನು ನಿನ್ನ ಸಾಯಿಸುವುದಿಲ್ಲ ಕಣೋ. ನೀನು‌ ನನ್ನ ಉಸಿರಾಗಿದ್ದೀಯಾ.." ಎಂದು ಗದ್ಗದಿತವಾಗಿ ನುಡಿದಿದ್ದು  ಕಿವಿಯಲ್ಲಿನ್ನು ಗುಯ್ ಗುಡುತ್ತಿದೆ ಗೆಳತಿ. ಆದರೆ ನಾನು ನಿನಗಾಗಿ ಏನೂ ಮಾಡಲು ಸಾಧ್ಯವಾಗಲಿಲ್ಲ. ಕೊನೆ ಕೊನೆಗೆ ನಿನ್ನ ಜೊತೆ ದಿನಕ್ಕೆ‌ ಒಂದು ಬಾರಿ ಮಾತಾನಾಡಲು ಸಾಧ್ಯವಾಗದೇ ಹೋಯಿತು. **
ನನ್ನ ಜನುಮ ದಿನವೆಂದರೆ ನಿನಗೆ ಹಬ್ಬವೇ ಆಗಿತ್ತು.. ಮನೆಗೆ ಕರೆಸಿ ಸಿಹಿಖಾದ್ಯ ಮಾಡಿದೆ. ಜೊತೆಗೆ ಕುಳಿತು ಕೈತುತ್ತು ತಿನ್ನಿಸಿದೆ. ನಾನಂತೂ ಒಂದು ಕ್ಷಣ ತಾಯಿಯ ನೆನಪಾಗಿ ಭಾವುಕನಾಗಿ ಹೋದೆ. ಆಗಲೂ "ಇನ್ನೊಂದು ವರುಶದ ಈ ಸುದಿನಕ್ಕೆ ನಾನು‌ ಜೊತೆಗಿರುವೆನೋ? ಇಲ್ಲವೋ? ತಿಳಿಯದು. ಈ ದಿನ ನಾನೇ ಸುಖಿ" ಎಂದು ನನ್ನೆದೆಗೆ ಒರಗಿದ್ದೆ. ಹೇಯ್ ಗೆಳತಿ "ನೀ ನನಗೆ ಎಲ್ಲಾ ರೀತಿಯ ಪ್ರೀತಿ ನೀಡಿದ್ದಿ ಕಣೆ.." ಆದರೆ ನಾನು? ನಿನ್ನ ಜನುಮ ದಿನಕ್ಕೆ ಒಂದು ಸಣ್ಣ ಸಂದೇಶ ಕಳುಹಿಸಿ, ಕರೆ ಮಾಡಿ ನಾಲ್ಕು ಮಾತನಾಡಿ ಕೈ ತೊಳೆದುಕೊಂಡೆ. ಅದಕ್ಕೂ ಸಮಯದ ಅಭಾವ, ಬಿಡುವಿರದ ಕೆಲಸವೆಂಬ ಕಾರಣ ನೀಡಿದೆ. ನಿನಗೆ ನನ್ನ ದನಿ‌ ಕೇಳಿಯೂ ಬಹಳ ಸಮಯವಾಗಿತ್ತೇನೋ. ಅಬ್ಬಾ..‌!! ನಾನು ಪಾಪಿ ಕಣೇ. ನಿನ್ನ ಪ್ರೀತಿಯ ಎಳ್ಳಷ್ಟು ವಾಪಾಸು ನೀಡಲು ಸಾಧ್ಯವಾಗಲಿಲ್ಲ.  ಋಣಭಾರ ಅತಿಯಾಗಿ ಕುಗ್ಗಿಸಿದೆ ಗೆಳತಿ. ಏನು ಮಾಡಲಿ ಹೇಳು.? ಈಗೀಗ ನಿನ್ನ ಜೊತೆ ಮಾತನಾಡಲು ಸಮಯ ಕಳೆಯಲೂ ಸಾಧ್ಯಾವಾಗುತ್ತಲೇ ಇಲ್ಲ. ವಿರಹದುರಿ ಅತಿಯಾಗಿದೆ. ದೂರದೂರ ಸಾಗುತ್ತಿರುವೆನೇನೋ‌ ಎಂದು ಭಾಸವಾಗುತ್ತಿದೆ.. ಆದರೆ ನೀನು ನನ್ನ ಜೊತೆಗೇ ಇದ್ದೀಯಾ..‌ದಿನವೂ ತರಲೆಮಾಡುತ್ತಾ ಮಾತನಾಡುತ್ತೀಯಾ.. ಮನದಲ್ಲಿ ನನ್ನ ಬಗ್ಗೆ ತಪ್ಪು ತಿಳಿದು ಬೇಸರಿಸಬೇಡ.. ನೀನು ಹಾಗಲ್ಲ ಎಂದೂ ನನಗೆ ತಿಳಿದಿದೆ. ಕೆಲಸವಿದೆ ಎಂಬ ಒಂದೇ ಮಾತಿಗೆ ನೀನು, "ನನಗೆ ತೊಂದರೆಯಾಗಬಾರದು" ಎಂದು ಮರುಮಾತನಾಡದೇ ದೂರ ಉಳಿದುಬಿಡುತ್ತಿಯಾ. ನಿನಗೆ ವಿವರಿಸುವ ಅಗತ್ಯವೇ ಇಲ್ಲ ನೋಡು. ಎಷ್ಟು‍ ಚೆನ್ನಾಗಿ  ಅರ್ಥ ಮಾಡಿಕೊಳ್ಳುತ್ತೀಯಾ. ನಿಜವಾಗಿಯೂ ಈಗ ಮನಸ್ಸು ಮಗುವಿನಂತೆ ರಚ್ಚೆಹಿಡಿದು ಅಳುತ್ತಿದೆ. ನೀನೇ ಬೇಕು ನನಗೆ ಎಂದು ಕಣ್ಣೀರು ಸುರಿಸುತ್ತಿದೆ. ನಿನ್ನ ಪ್ರೀತಿಯನ್ನು ಪಡೆಯಲು ನಾನು ಪುಣ್ಯ ಮಾಡಿಲ್ಲವಲ್ಲ. ನೀನೇ ಹೇಳಿದ್ದೀ " ನನ್ನಂತೆಯೇ ಪೆದ್ದು ಪೆದ್ದಾಗಿ ಪ್ರೀತಿ ಮಾಡುವ ಹುಡುಗಿ ನಿನಗೆ ಸಿಗಲಿ.." ಎಂದು.‌ ಇಲ್ಲ ಗೆಳತಿ ನಿಜವಾಗಿಯೂ ಹೇಳುತ್ತಿರುವೆ.. ಕೂಗಿ ಕೂಗಿ ಹೇಳುತ್ತಿರುವೆ ನಿನ್ನಷ್ಟು ಪ್ರೀತಿಸುವ ಹೆಣ್ಣು ಈ ಜಗತ್ತಿನಲ್ಲಿಯೇ ಇಲ್ಲ. ನನಗೆ ನೀನೇ ಬೇಕು. ನಿನ್ನ ಪ್ರೀತಿಯಲ್ಲಿ ಬೇಡವೆಂದರೂ  ಹುಚ್ಚನಾಗಿರುವೆ.. ಓ ದೇವರೇ ! ಒಂದು ಅವಕಾಶ ಕೊಡು ನಮ್ಮಿಬ್ಬರನ್ನು ಮತ್ತೆ ಸೇರಿಸು. ಹ್ಮ್ಮ್...!! ದೇವರನ್ನೇ ನಂಬದ ನನ್ನ ಬಾಯಿಯಲ್ಲಿ ಬಂದೇ ಬಿಟ್ಟಿತು ನೋಡು ಅವನ ಹೆಸರು. ಇದೇ ಗೆಳತಿ ಪ್ರೀತಿಗಿರುವ ಶಕ್ತಿ.. ನೀನು ಜೊತೆಗಿದ್ದರೆ ನಾನು ಪ್ರಪಂಚವನ್ನೇ ಗೆಲ್ಲುವೆ ಎಂಬಾ ಆತ್ಮವಿಶ್ವಾಸ ಮೂಡುತ್ತದೆ. ನೀ ದೂರಾದರೆ ಗಾಳಿ ತೆಗೆದ ಬಲೂನಿನಂತೆ ಅಸ್ಥಿತ್ವವೇ ಇಲ್ಲದ ಹಾಗೆ ಎಲ್ಲೋ ಹಾರಿ ಬೀಳುವೆ. ಕೊನೆಯ ಆಸೆ ಇದೆ ಗೆಳತಿ ಇನ್ನೊಂದು ಜನುಮವಿದ್ದರೆ ನಿನ್ನ ಋಣತೀರಿಸಲು ನಿನ್ನ ಮಗುವಾಗಿ ಹುಟ್ಟಬೇಕು. ನಿನ್ನಂತಃ ತ್ಯಾಗಮಯೀಯ  ನಿನ್ನ ಮಡಿಲಿನಲ್ಲಿ ಮತ್ತೆ ಮಲಗಬೇಕು.

~ ಸಿಂಧು ಭಾರ್ಗವ್. ಬೆಂಗಳೂರು

No comments:

Post a Comment