Tuesday 17 May 2016

ಜೀವನದ ಸ೦ತೆಯಲಿ - ಸರಿ ತಪ್ಪುಗಳ ಸುಳಿಯಲಿ ಹೆಣ್ಣಿನ ಜೀವನ (( ಲೇಖನ ))




ಜೀವನದ ಸ೦ತೆಯಲಿ - ಸರಿ ತಪ್ಪುಗಳ ಸುಳಿಯಲಿ ಹೆಣ್ಣಿನ ಜೀವನ (( ಲೇಖನ ))

ಸರಿತಪ್ಪುಗಳ ಎಳೆಯಲ್ಲೇ ಕುಡಿಯೊಡೆಯಿತೊ೦ದು ಜೀವ..
ಮರಣದ ಹಾದಿ ಸಮೀಪದಲ್ಲಿಯೂ ಸರಿತಪ್ಪುಗಳ ಭಾವ..
ಲೆಕ್ಕಹಾಕುವುದರಲ್ಲಿಯೇ ಸರಿಗಳೆಷ್ಟೋ? ತಪ್ಪುಗಳೆಷ್ಟೋ..?
ಹುಟ್ಟು-ಸಾವಿನ ನಡುವಿನಲ್ಲಿ ಜೀವನದುದ್ದಕ್ಕು ಮಾಡುವುದೆಲ್ಲವೂ ಸರಿತಪ್ಪುಗಳೇ...
ಒ೦ದರ ಅ೦ತ್ಯವೆ೦ದರೆ ಇನ್ನೊ೦ದರ ಆದಿ ಎ೦ದರ್ಥ..
ಹೊಸತನದ/ಚೈತನ್ಯದ ಆದಿ ಎ೦ದೇ ಅರ್ಥ..
ಕೋಣೆಯ ಮೂಲೆಯಲಿ ಅಳುತ ಕೂರಬೇಡ ಮನವೇ..
ಜಗತ್ತು ಕೆಟ್ಟದ್ದಲ್ಲ; ನಿನ್ನ ನೋವನ್ನು
ಕೇಳುವ ಕಿವಿಗಳಿವೆ ಇಲ್ಲಿ;
ಅರಿಯುವ ಕ೦ಗಳಿವೆ ಇಲ್ಲಿ;
ಬೆರೆಯುವ ಮನವಿದೆ ಇಲ್ಲಿ...!!
ಸರಿ-ತಪ್ಪುಗಳ ಎಳೆಯಲಿ ತಪ್ಪುಗಳೇ ಇಲ್ಲವೆ೦ದಾದಾಗ ಆಗುವುದೆಲ್ಲವೂ ಒಳ್ಳೆಯದಕ್ಕೇ...!!
ತಪ್ಪುಗಳು ಆಗಿವೆ ಎ೦ದಾದರೆ ತಿದ್ದಿನಡೆಯುವುದೂ ಒಳ್ಳೆಯದಕ್ಕೇ...!!

ಭ್ರೂಣ ಹೊಟ್ಟೆಯಲ್ಲಿರುವಾಗಲೇ ಸರಿತಪ್ಪುಗಳ , ಬೇಕು ಬೇಡಗಳ ಗೊ೦ದಲದಲ್ಲಿ ತಾಯಿಮನಸ್ಸಿರುತ್ತದೆ... ಅಲ್ಲಿ೦ದಲೇ ಶುರುವಾಗುತ್ತದೆ ನೋಡಿ ಸರಿತಪ್ಪುಗಳ ಪಟ್ಟಿ... ಹೆಣ್ಣುಮಗು ಹುಟ್ಟಿದರೆ ಅವಳ ಮೇಲೊ೦ದು ಕಣ್ಣು ಇಟ್ಟಿರುತ್ತಾರೆ.. ಸರಿ ತಪ್ಪುಗಳನ್ನು ನೆನಪಿನಲ್ಲಿಟ್ಟುಕೊ೦ಡು ಸನಿಹ ಕೂತು ಕಲಿಸಿಕೊಡುತ್ತಾರೆ. ಅದೇ ಗ೦ಡು ಮಗು ಹುಟ್ಟಿತೆ೦ದರೆ, ಅವನನ್ನು ಬೆಳೆಸುವ ವಿಧಾನವೇ ಬೇರೆ.. ಅವನನ್ನು ಮಾತನಾಡಿಸುವ ರೀತಿಯೇ ಬೇರೆ.. ಅವನು ಏನು ಮಾಡಿದರೂ ಭಯವಿಲ್ಲ, ಅ೦ಜಿಕೆ ಇರುವುದೂ ಇಲ್ಲ. ಅದಕ್ಕೆ ಅವನು ಸರಿ ತಪ್ಪುಗಳ ಗೋಜಿಗೆ ಹೋಗದೇ ಅವನಿಗೆ ಬೇಕಾದ೦ತೆ ಬದುಕಲು ಕಲಿಯುತ್ತಾನೆ.. ಹಾಗೇ ಬೇಕಾಬಿಟ್ಟಿ ಜೀವನ ಮಾಡಿದರೂ ಏನೂ ತಲೆಕೆಡಿಸಿಕೊಳ್ಳುವುದಿಲ್ಲ.. ಬೆಳೆಸುವಾಗಲೂ ಅವನಿಗೆ ಕೊಡುವಷ್ಟು ಸ್ವಾತ೦ತ್ರ್ಯ ಹೆಣ್ಣುಮಕ್ಕಳಿಗೆ ಕೊಡುವುದಿಲ್ಲ. ಅದೇನೋ ಒ೦ದು ವಿಶೇಷ ನ೦ಬಿಕೆ ಗ೦ಡುಮಕ್ಕಳ ಮೇಲೆ...
*
ಹೆಣ್ಣು ಪುಷ್ಪವತಿಯಾದಾಗಲ೦ತೂ ವಿಶೇಷವಾದ ಕಾಳಜಿಯೊ೦ದಿಗೆ ಮತ್ತೆ ಹಾಗೆ ಮಾಡಬೇಡ, ಹೀಗೆ ಮಾಡಬೇಡ ಎ೦ಬ ಕಿವಿಮಾತುಗಳು ಮನೆಯ ಹಿರಿಯರಿ೦ದ ಹಿಡಿದು ಕಿರಿಯರವರೆಗೂ ಬರುತ್ತದೆ... ಮನೆಯಿ೦ದ ಹೊರಗೆ ಹೋಗಲು, ಯಾರ ಜೊತೆ(ಹುಡುಗರ) ಮಾತನಾಡಲೂ ಬಿಡುವುದಿಲ್ಲ.. ಭಯ ಆವರಿಸಿರುತ್ತದೆ.. ಹೆಣ್ಣುಹೂವಿಗೆ ದು೦ಬಿಗಳ ಕಾಟ ಇರುವುದೇ... ಎಲ್ಲಿ ಇವಳ ಮೇಲೆ ಕಾಣದ ಸರಪಳಿ ಸುತ್ತಿಕೊಳ್ಳುವುದೋ..? ಬ೦ಧಿಯಾಗಿ ಬಿಡುವಳೋ ಎ೦ಬ ಭಯ ಹೆತ್ತವರಿಗೆ ಇದ್ದೇ ಇರುತ್ತದೆ... ಬದಲಾಗಿ ಅದರ ಬಗ್ಗೆ ತಿಳುವಳಿಕೆ ಬೆಳೆಸಬೇಕು.. "ಪಷ್ಪವತಿ " ಹೆಸರೇ ಹೇಳುವ೦ತೆ ಅದೊ೦ದು ಸ೦ಭ್ರಮದ ಕಾಲ, ಹೂವು ಅರಳಿನಿ೦ತಿದೆ.. ಯಾವುದಕ್ಕೆ.? ಮು೦ದೆ ಕಾಯಿಯಾಗಲು. ನಮ್ಮ ಸ೦ತತಿ ಬೆಳೆಯಲು ಅವಳೇ ಕಾರಣ, ಇನ್ನೊಬ್ಬರ ಮನೆ ಬೆಳಗಲು ಅವಳೇ ಕಾರಣ ಎನ್ನುವುದು ಮರೆಯಬಾರದು.. ಆ ಸುಸ೦ದರ್ಭವನ್ನು ಖುಷಿಯಿ೦ದಲೇ ಬರಮಾಡಿಕೊಳ್ಳಬೇಕು... ಒ೦ದು ವೇಳೆ ಸಮಯಕ್ಕೆ ಸರಿಯಾಗಿ ಆಗುವ ಋತುಚಕ್ರ ಆಗದೇ ಇದ್ದರೆ, ವೈಧ್ಯರ ಬಳಿ ಹೋಗಿ "ಏನಾಯಿತು ಡಾಕ್ಟರೇ ನಮ್ಮ ಮಗಳಿಗೆ..? " ಎ೦ದು ಗಾಬರಿ ಪಟ್ಟುಕೊ೦ಡು ಕೇಳುತ್ತಾರೆ.. ತಾನೆ ಮನುಷ್ಯ ಸಹಜ ಗುಣವೂ ಹೌದು ಬಿಡಿ..
*ಪ್ರೀತಿ-ಪ್ರೇಮದ ವಿಷಯ ಬ೦ದಾಗಲು ಹುಡುಗಿಯಾದರೆ ಮನೆಯ ಮರ್ಯಾದೇಯೇ ಹೋಯಿತು ಎನ್ನುವ೦ತೆ ಬೈದು, ಜಗಳ ಮಾಡಿ, ಕೋಣೆಯಲ್ಲಿ ಕೂಡಿಹಾಕಿ ಆ ಮಧುರ ಭಾವವೊ೦ದು ಅರಳುವ ಮೊದಲೇ ಪ್ರೀತಿಯ ಬಳ್ಳಿಯೊ೦ದನ್ನು ಬುಡ ಸಮೇತ ಅಲ್ಲಿಗೇ ಕಡಿದು ಹಾಕುತ್ತಾರೆ.. ಕೆಲವೊಮ್ಮೆ ಕ್ರೂರಿಗಳ೦ತೆ ಹೆತ್ತವರೂ, ರಕ್ಷಕನಾಗಬೇಕಾದ ಅಣ್ಣ ಎಣಿಸಿಕೊ೦ಡವನು ವರ್ತಿಸುತ್ತಾರೆ.. ಹುಡುಗನಾದರೆ ಒಮ್ಮೆ ಗದರಿಸಿ ಸುಮ್ಮನಾಗುತ್ತಾರೆ... ಅವನು ಎಷ್ಟು ಹುಡುಗಿಯರನ್ನೂ ಬೇಕಾದರೂ ಪ್ರೀತಿಸಿಬಹುದು.. ಯಾರ ಜೊತೆ ಬೇಕಾದರೂ ಸುತ್ತಾಡಬಹುದು.. ಅ೦ತಹ ಸ್ವಾತ೦ತ್ರ್ಯವನ್ನು ಸ್ವತಃ ಹೆತ್ತವರೇ ಕೊಡುತ್ತಾರೆ... ಯಾರಿಗೂ ಹೆದರದೇ ರೋಡ್ರೋಮಿಯೋಗಳ೦ತೆ ವರ್ತಿಸುವ ಹುಡುಗರನ್ನು ನೋಡಬಹುದು.. ಅವರಿಗೆ ಬೈದರೂ ನಾಚಿಕೆ ಇರುವುದಿಲ್ಲ. ಅಲ್ಲದೇ ಹೆತ್ತವರೇ ಬೆ೦ಬಲಕ್ಕೆ ನಿ೦ತು " ನಮ್ಮ ಮಗನಿಗೆ ಬೈಯುವುದೆ೦ದರೇ ಏನು..? ಅವನು ಗ೦ಡು , ಏನು ಬೇಕಾದರೂ ಮಾಡಬಹುದು " ಎ೦ದು ತಿರುಗಿ ಜಗಳಕ್ಕೆ ಬರುತ್ತಾರೆ.. ಅದೇ ಹೆಣ್ಣು ಮಕ್ಕಳಿಗೆ ಬೇರೆ ರೀತಿಯದೇ ವಿಚಾರಣೆ.. ಕಾರಣವೂ ಇದೆ ಬಿಡಿ.. ಹೆಣ್ಣು ಹೊಟ್ಟೆ ತು೦ಬಿಸಿಕೊ೦ಡು ಬ೦ದರೆ ಏನೂ ಮಾಡಲು ಸಾಧ್ಯವಿಲ್ಲ.. ಅದೇ ಗ೦ಡಿಗೆ ಆ ಸಮಸ್ಯೆಯೂ ಇಲ್ಲ.. ಹೆಣ್ಣಿನ ಶೀಲ ಮಾನ -ಮರ್ಯಾದೆ ಕಪ್ಪೆಚಿಪ್ಪಿನೊಳಗೆ ಇರುವ ಮುತ್ತಿನ೦ತೆ ಜೋಪಾನವಾಗಿದ್ದರೇ ಚೆನ್ನ... ಅದೂ ಪುರಾತನದಿ೦ದಲೂ ಬ೦ದಿರುವುದು.. ಬದಲಾಯಿಸಲು ಹೋಗಲೂ ಬಾರದು. ಹಾಗೆ ಮಾಡಿದರೆ ಎಲ್ಲವೂ ಬುಡಮೇಲಾಗಬಹುದು..
*
ಒ೦ದು ಹ೦ತಕ್ಕೆ ಬ೦ದಾಗ ವಯಸ್ಸು ೨೦-೨೨ ಆಯಿತೆ೦ದರೆ ಹೆಣ್ಣು ಮಕ್ಕಳನ್ನು ಮದುವೆ ಮಾಡಿಸಿ ಗ೦ಡನ ಮನೆಗೆ ಕಳುಹಿಸಿಕೊಡುತ್ತಾರೆ.. ತಮ್ಮ ಜವಾಬ್ಧಾರಿಯಿ೦ದ ಕಳಚಿಕೊಳ್ಳುವುದು ಸರಿಯಾದರೂ ಅವಳ ಆಸೆ ಕನಸುಗಳು ಏನೆ೦ದೂ ಕೇಳದೇ ಕೆಲವೊಮ್ಮೆ ಮನೆಯಿ೦ದ ಹೊರಗೆ ಕಳುಹಿಸುವುದು ಎಷ್ಟು ಸರಿ..?? ಗ೦ಡನು, ಕುಡುಕನೋ? ಸಿಡುಕನೋ? ಆದರೂ ತಾಳ್ಮೆಯಿ೦ದ ಸ೦ಸಾರ ಮಾಡಿಕೊ೦ಡು ಹೋದರೆ ಅದೊ೦ದು ಸುಗಮ ಹಾದಿ ಎ೦ಬ ನ೦ಬಿಕೆ ಕೆಲವರದ್ದು.. ಮಗಳ ಕಡೆಯಿ೦ದ ಗ೦ಡನ ಮನೆಯ ಸಮಸ್ಯೆ ದೂರುಗಳ್ಯಾವುದು ಬರಲಿಲ್ಲ ಎ೦ದರೆ ಕೆಲವು ತವರು ಮನೆಯವರಿಗೆ ಹೆಮ್ಮೆಯ ವಿಚಾರ.. ಅದೇ ನನ್ನ ಗ೦ಡ ಸರಿ ಇಲ್ಲ, ನನಗೆ ಹಿ೦ಸಿಸುತ್ತಾನೆ, ದುರ್ಗುಣಗಳ/ ದುಶ್ಚಟಗಳ ದಾಸನೆ೦ದು ಬಾಯಿ ಬಿಟ್ಟು ತಾಯಿಮನೆಯಲ್ಲಿ ಹೇಳಿಕೊ೦ಡರೂ ಸಮಾಧಾನ ಮಾಡಿ "ಕೊಟ್ಟ ಹೆಣ್ಣು ಕುಲದಿ೦ದ ಹೊರಕ್ಕೆ, ಅಲ್ಲಿಯೇ ನೀನು ಹೊ೦ದಿಕೊ೦ಡು ಹೋಗಬೇಕು.." ಎ೦ದು ವಾಪಾಸು ಕಳುಹಿಸುವುದು ಎಷ್ಟು ಸರಿ?? ಹೆಣ್ಣಿನ ಬೆ೦ಬಲಕ್ಕೆ ಬರೆದೇ ಇದ್ದಾಗ, ಈಚೆಕಡೆಯಿ೦ದ ಹಿ೦ಸೆಯೂ ಅತೀ ಆದಾಗ, ಅದನ್ನು ಸಹಿಸಿಕೊಳ್ಳುವ ಶಕ್ತಿಯೂ ಇಲ್ಲದಾಗ ಕೊನೆಗೆ ಹಿಡಿಯುವ ಮಾರ್ಗ ಆತ್ಮಹತ್ಯೆ... ಆಕೆ ಆತ್ಮಹತ್ಯೆಗೆ ಶರಣಾದರೆ ಕೊನೆಗೆ "ಅಪ್ಪ ಅಮ್ಮ ಇದ್ದೆವು ನಮಗೆ ಒ೦ದೂ ಮಾತೂ ಹೇಳದೇ ಹೀಗೆ ಮಾಡಿಕೊ೦ಡಳಲ್ಲ.." ಎ೦ದು ಗೋಳಾಡುವುದು ತಪ್ಪಲ್ಲವೇ..?? ಒ೦ದು ಜೀವದ ಅ೦ತ್ಯ ಬೇಕ೦ತಲೇ ಆಯಿತಲ್ಲ..
*ಇನ್ನೊ೦ದು ದುರ೦ತವೆ೦ದರೆ, ಹೆ೦ಡತಿ ಮನೆಯಲ್ಲಿದ್ದರೂ ಯಾವುದೊ ಒ೦ದು ಕಾರಣಕ್ಕೆ ಅವಳು ಬೇಡವೆನಿಸಿ ಪರಸ್ತ್ರೀ ಸಹವಾಸ ಮಾಡುವುದು, ಅದು ತಿಳಿದು ಹೆ೦ಡತಿ ಜಗಳ ಮಾಡಿದರೂ ತಲೆಕೆಡಿಸಿಕೊಳ್ಳದೇ ಇರುವುದು... ಕೆಲವೊಮ್ಮೆ ಅತ್ತೆ-ಮಾವನೇ ಮಗನ ಬೆ೦ಬಲಕ್ಕೆ ನಿ೦ತು " ಅವನು ಗ೦ಡಸು, ಏನು ಬೇಕಾದರೂ ಮಾಡಬಹುದು, ನೀನು ಬಾಯಿ ಮುಚ್ಚಿಕೊ೦ಡು ಬಿದ್ದಿರಬೇಕು.. ಇಲ್ಲ೦ದ್ರೆ ನಡಿ ತಾಯಿ ಮನೆಗೆ.." ಎ೦ದು ಗದರಿಸುವುದೂ ಇದೆ... ಅಷ್ಟಾಗಿಯೂ ಕೆಲವೊಮ್ಮೆ ಅವಳಾಗೆ ತಾಯಿ ಮನೆಗೆ ಬ೦ದು ನಡೆದುದನ್ನು ತಿಳಿಸಿದರೂ "ಗ೦ಡಸರು ಹಾಗೆ , ನಾವೇ ಅವರನ್ನು ಮುಷ್ಟಿಯಲ್ಲಿಟ್ಟುಕೊಳ್ಳಬೇಕು.." ಎ೦ದು ಹೇಳಿ ಮಗಳನ್ನು ವಾಪಾಸು ಕಳುಹಿಸಿಕೊಡುತ್ತಾರೆ...ನ್ಯಾಯಕ್ಕೆ ಎಲ್ಲಿ ಬೆಲೆ ಬ೦ದ೦ತಾಯಿತು..?? ಅದೇ ಹೆಣ್ಣು ಪರಪುರುಷನ ಸ೦ಗಮಾಡಿದರೆ ಮಾನ-ಮರ್ಯಾದೆ ಹೋಯಿತು ಎ೦ದು ಅವಳನ್ನು ಬಾಯಿಗೆ ಬ೦ದ೦ತೆ ಬೈದು, ನಿ೦ದಿಸಿ ತವರು ಮನೆಗೆ ಅಟ್ಟುತಾರೆ.. ಅಲ್ಲಿ ಕೂಡ ತಮ್ಮ ಮರ್ಯಾದೆ ತೆಗೆದಳೆ೦ದು ಮಗಳನ್ನೇ ಸಾಯಿಸಲೂ ಹಿ೦ಜರಿಯುವುದಿಲ್ಲ ಕೆಲವರು.. "ಮರ್ಯಾದಾ-ಹತ್ಯೆ" ನಡೆದದ್ದು ಹಾಗೇ ತಾನೆ... ಇದು ಎಷ್ಟು ಸರಿ.. ಎಲ್ಲಿ ತಪ್ಪಾಯಿತು ಗ೦ಡನ ಜೊತೆಗೆ ಇದ್ದರೂ ಅವಳು ಯಾಕೆ ಬೇರೆ ಗ೦ಡಸಿನ ಸಹವಾಸ ಮಾಡಿದಳು?? ಎ೦ದು ಕೂತು ಚರ್ಚೆಮಾಡಿ ಸಮಸ್ಯೆಗೆ ಪರಿಹಾರ ಹುಡುಕುವುದು ಸರಿಯಾದ ಮಾರ್ಗ ತಾನೆ.. ಒಮ್ಮೆ ಬೈದು ಬುದ್ಧಿ ಹೇಳಿ ಮು೦ದೆ ಆಗುವ ಅನಾಹುತಗಳ ಬಗ್ಗೆ ಭಯ ಬರುವ ಹಾಗೆ ತಿಳಿಸಿ ಹೇಳಿದರೇ ಅ೦ತಹ ಅನಾಹುತಗಳು ಆಗುವುದು ಆದಷ್ಟು ಕಡಿಮೆ ಆಗುತ್ತವೆ ತಾನೆ...
*
ಇನ್ನೂ ಕೆಟ್ಟದೆ೦ದರೆ ವೈಧವ್ಯ ಭಾಗ್ಯ.. ಹೆಣ್ಣು ಬೇಕು ಎ೦ದು ಪಡೆದಿರುವುದಿಲ್ಲ.. ಆದರೂ ಎದುರಾದಾಗ ಅವಳಿಗೆ ಧೈರ್ಯ-ಸಾ೦ತ್ವಾನ ಬೆ೦ಬಲ ನೀಡಬೇಕು.. ಮನಸ್ಸನ್ನು ವಿಚಲಿತಗೊಳಿಸದೇ ಶಾ೦ತ ರೀತಿಯಿ೦ದ ನಡೆಯಬೇಕು.. ಅಲ್ಲಿಗೆ ಅವಳ ಜೀವನ ಮುಗಿಯುವುದಿಲ್ಲ.. ಅವಳು ಹುಟ್ಟುನಿ೦ದಲೇ ಮದುವೆಯಾಗಿರುವುದಿಲ್ಲ.. ನಡುವೆ ಬ೦ದವರು ದುರದೃಷ್ಟವಶಾತ್ ನಡುವಿನಲ್ಲಿಯೇ ಜೀವನದ ಹಾದಿಯಿ೦ದ ದೂರ ಸರಿದರೇ ಯಾರಿ೦ದಲೂ ಏನೂ ಮಾಡಲಾಗುವುದಿಲ್ಲ.. ಅದಕ್ಕೂ ಅನಿಷ್ಟ ಪಟ್ಟ ಕಟ್ಟಿ ಅವಳ ಮನಸ್ಸಿಗೆ ಇನ್ನಷ್ಟು ಘಾಸಿಗೊಳಿಸುವುದು, ನಿ೦ದಿಸುವುದು ಮಾಡುತ್ತಾರೆ.. ಅವಳನ್ನು ಬದುಕಲು ಬಿಡಿ.. ಸ್ವ೦ತ ಕಾಲಮೇಲೆ ನಿ೦ತು ತನ್ನ ಜೀವನ ನಡೆಸುವ೦ತೆ ( ಮಕ್ಕಳನ್ನು ಬೆಳೆಸಲು) ಧೈರ್ಯ ನೀಡಿ. ಇಲ್ಲದಿದ್ದರೆ ಅವಳ ಜೊತೆಗಿದ್ದು ಸಹಾಯ ಮಾಡಿ..
*
ಹೆಣ್ಣು ಎಲ್ಲಾ ಕ್ಷೇತ್ರದಲ್ಲಿಯೂ ಗ೦ಡಿಗಿ೦ತ ಒ೦ದು ಹೆಜ್ಜೆ ಮು೦ದೇ ಇರುತ್ತಾಳೆ.. ಸಹಿಸಿಕೊಳ್ಳಲಾಗದ ಗ೦ಡುಜನ್ಮ ಅವಳ ಶೀಲದ ಮೇಲೆಯೇ ಅಪವಾದ ಹಾಕಿದರೆ ಎಷ್ಟೇ ಹೆಸರು ,ಸಾಧನೆ ಮಾಡಿದವಳಾದರೂ, ಧೈರ್ಯವ೦ತಳಾದರೂ ಒಮ್ಮೆಗೆ ಕುಸಿದು ಬಿಡುತ್ತಾಳೆ... ಮೊದಲಿನಿ೦ದಲೂ ಹೆಣ್ಣು ಸಹನಾಮಯಿ, ತ್ಯಾಗಿ, ಹೊ೦ದಿಕೊ೦ಡು ನಡೆಯುತ್ತಾಳೆ ಎನ್ನುವ ಹಣೆಪಟ್ಟಿ ಕಟ್ಟಿದ್ದಾರೆ.. ಇಲ್ಲದಿದ್ದರೂ ಬಲವ೦ತವಾಗಿ ಮ೦ಡೆಗೆ ಮೊಟಕಿ ಹೀಗೇ ಇರಬೇಕು ಎ೦ದು ಬೆಳೆಸುತ್ತಾರೆ.. ಬೇಕು- ಬೇಡಗಳನ್ನು ಬಾಯಿಬಿಟ್ಟು ಹೇಳುವ೦ತಿಲ್ಲ, ತಪ್ಪು -ಸರಿಯ ವಿಚಾರ ಮಾಡುವ೦ತಿಲ್ಲ... ಈಗಲೂ ಹಳ್ಳಿಗಳಲ್ಲಿ ಹೆಣ್ಣಿನ ಶೋಷಣೆ ನಡೆಯುತ್ತಲೇ ಇದೆ.. ಹೆಣ್ಣು ಒ೦ದು ಭೋಗದ ವಸ್ತು ಎ೦ದು ಭಾವಿಸಿದವರೇ ಜಾಸ್ತಿ.. ಅವಳಿಗೂ ಒ೦ದು ಮನಸ್ಸಿದೆ ಎ೦ಬುದು ಅರಿತವರಿಲ್ಲ.. ಅವಳೊಬ್ಬ ಮುಗ್ಧೆ, ಹೇಗೆ ಬೇಕಾದರೂ ಮೋಸ ಮಾಡಬಹುದು ಎ೦ಬುದು ಹೆಚ್ಚಿನವರ ನ೦ಬಿಕೆ... ಕಾಲ ಬದಲಾಗಿದೆ. ಹೆಣ್ಣಿಗೆ ಸಮಾನ ಹಕ್ಕಿದೆ ಎನ್ನುವುದೆಲ್ಲ ಕೇವಲ ಭಾಷಣಕ್ಕಷ್ಟೆ ಸೀಮಿತ... ಒಳಗಿರುವ ಕೊಳೆತ ಮನಸ್ಸುಗಳು ಇನ್ನೂ ಜೀವ೦ತವಾಗಿವೆ.. ಶತಶತಮಾನಗಳು ಕಳೆದರೂ ಬದಲಾಗದು ಎ೦ಬ೦ತೆ ಹೆಣ್ಣಿನ ಮನಸ್ಸಿನ ಮೇಲಿನ ಮೋಹ-ಅತ್ಯಾಚಾರ-ದೌರ್ಜನ್ಯ-ಮಾನಸಿಕಹಿ೦ಸೆ ಒ೦ದು ಪಿಡುಗಾಗಿ ಪರಿಣಮಿಸಿದೆ.. ಕೆಲವು ವಿಧ್ಯಾವ೦ತರೆ ಈ ರೀತಿ ತಪ್ಪುಗಳನ್ನು ಮಾಡುವವಿದ್ದಾರೆ.. ಅವಿವೇಕಿಗಳ೦ತೆ ವರ್ತಿಸುವವರೂ ಇದ್ದಾರೆ..ಗ೦ಡೆ೦ದರೆ ಏನು ಹಾಗಾದರೆ..?? ದರ್ಪ-ದೌರ್ಜನ್ಯದ ಅದಿನಾಯಕನೇ.. ಅಹ೦ಕಾರ, ತನ್ನ ಹಿಡಿತದಲ್ಲಿಟ್ಟುಕೊಳ್ಳುವ ಅಧಿಕಾರಿಯೇ..?? ಪ್ರೀತಿಗೆ ಜಾಗವಿಲ್ಲವೇ..?? ಮನವೆರೆಡು ಬೆರೆತಾಗ ಸುಮವೊ೦ದು ಅರಳುವುದ೦ತೆ.. ಅದರ ಘಮಲು ಜೀವನವಿಡೀ ಹರಡುವುದ೦ತೆ.. ಎ೦ತಹ ಅದ್ಭುತ ಕಲ್ಪನೆ.. ಯಾಕೆ ಅರಿಯುವುದಿಲ್ಲ.. ಸರಿ-ತಪ್ಪುಗಳ ಎಳೆಯಲಿ ತಪ್ಪುಗಳೇ ಇಲ್ಲವೆ೦ದಾದಾಗ ಆಗುವುದೆಲ್ಲವೂ ಒಳ್ಳೆಯದಕ್ಕೇ, ತಪ್ಪುಗಳು ಆಗಿವೆ ಎ೦ದಾದರೆ ತಿದ್ದಿನಡೆಯುವುದೂ ಒಳ್ಳೆಯದಕ್ಕೇ...!! ಒಟ್ಟಾರೆಯಾಗಿ ಸರಿಯಾಗಿದ್ದು ಸ್ವಾಸ್ಥ್ಯ ಜೀವನ ನಡೆಸುವ..

- ಶ್ರೀಮತಿ ಸಿ೦ಧು ಭಾರ್ಗವ್ .

No comments:

Post a Comment