Monday 8 August 2016

ವಾರದ ಸಣ್ಣ ಕತೆ : ಜಲ್ಲಿಕಲ್ಲು



ವಾರದ ಸಣ್ಣ ಕತೆ: ಜಲ್ಲಿಕಲ್ಲು
~~~
"ನೀವು ದಿನವಿಡೀ ಊರೂರು ಸುತ್ತಿದರೂ, ನಾವು ಕೊಡುವ ಆಹಾರ, ಬಟ್ಟೆ, ಸಿಗದು. ಇನ್ನೂ ಒಂದು ವರುಷ ನೆಮ್ಮದಿಯಿಂದ ಜೀವನ‌ ಮಾಡಬಹುದು.. ರೆಟ್ಟೆ ಮುರಿದು ಕೆಲಸ ಮಾಡಿದರೆ ಹೊಟ್ಟೆತುಂಬಾ ಊಟ ,ಕಣ್ತುಂಬಾ ನಿದಿರೆ ನಿಮ್ಮ ಪಾಲಿಗೆ. ಹಠಮಾಡಿದರೆ ಮಣ್ಣುತಿನ್ನುವಿರಿ. ಹಿರಿಯರೆಲ್ಲ ಸೇರಿ ಮಾತುಕತೆ ನಡೆಸಿ ಒಂದು ನಿರ್ಧಾರಕ್ಕೆ ಬನ್ನಿ..." ಎಂದು ಏರಲು ದನಿಯಿಂದ ಧನಿಕ ಬೊಬ್ಬಿಡುತ್ತಿದ್ದ..
***
ಅಲ್ಲೊಂದು ವಿಶಾಲವಾದ ಜಾಗವಿತ್ತು. ಅಷ್ಟರವರೆಗೆ ಯಾರೂ ನೋಡಿರಲಿಲ್ಲ.
ಸಣ್ಣ ಸಣ್ಣ ಗುಡಿಸಲು ಕಟ್ಟಿಕೊಂಡು ಪ್ಲಾಸ್ಟಿಕ್ ,ಕಸಕಡ್ಡಿ ಆಯುವವರು ಜೀವನ ನಡೆಸುತ್ತಿದ್ದರು. ಸುತ್ತಲೂ ಹಳೆಯ ಮರಗಳು ವಿಶಾಲವಾಗಿ ತನ್ನೆಲ್ಲ ರೆಂಬೆ-ಕೊಂಬೆಗಳನ್ನು ಚಾಚಿಕೊಂಡು ನೆರಳು ನೀಡುತ್ತಿದ್ದವು.. ಹಕ್ಕಿಪಕ್ಕಿಗಳು ಆ ಮರಗಳಲ್ಲಿ ಆಶ್ರಯ ಪಡೆದುಕೊಂಡಿದ್ದವು..
ನೆಲದಮೇಲೆಲ್ಲ ಹುಲ್ಲುಹಾಸಿಗೆ. ಅದನ್ನು ತಿನ್ನಲು ಹಸುಗಳು, ಆಡು ಕುರಿಗಳು ಬರುತ್ತಿತ್ತು. ಮಕ್ಕಳು ಯಾರ ಗೊಡವೆ ಇಲ್ಲದೆ ಆಡಿಕೊಂಡಿದ್ದರು.
ಹಳ್ಳಿಯ ವಾತಾವರಣ, ಶುದ್ಧಗಾಳಿ ,ಸಾಕಷ್ಟು ಬೆಳಕು ಯಾವುದಕ್ಕು ಕೊರತೆಯಿಲ್ಲದೆ ಜನರು ಬದುಕುತ್ತಿದ್ದರು..
**
ಒಮ್ಮೆ ಅದೆಲ್ಲಿಂದಲೋ ಬಂದ ಆಗರ್ಭ ಶ್ರೀಮಂತ  ನಾಲ್ಕಾರು ಮಂದಿಗಳೊಂದಿಗೆ ನೆಲವನ್ನು ಅಳೆತೆಮಾಡಲು ಶುರುಮಾಡಿದ್ದ.ಅವನ ಕಾರು ಬಂದೊಡನೆ ಮರದಲ್ಲಿದ್ದ ಹಕ್ಕಿಪಕ್ಕಿಗಳೆಲ್ಲ "ಏನೋ ಅನಾಹುತವಾಗಲಿದೆ ಎಂಬ ಮುನ್ಸೂಚನೆ ನೀಡುವಂತೆ ವಿಚಿತ್ರ ಧ್ವನಿಯಲ್ಲಿ ಕೂಗಲು  ಶುರುಮಾಡಿದವು. ಹಸುಗಳು ಕೂಡ ಗಾಬರಿ ಮುಖದಿಂದ ಆ ಕಾರನ್ನೆ ನೋಡುತ್ತಿದ್ದವು.. ನೆಲದಲ್ಲೇ ಕುಂಟೆಬಿಲ್ಲೆ ಆಡುತ್ತಿದ್ದ ಮಕ್ಕಳೆಲ್ಲ ಮನೆಯೊಳಗೆ ಓಡಿಹೋದರು. ಹೆತ್ತವರಿಗೆ ವಿಷಯ ತಿಳಿಸಿದರು. ಅಷ್ಟರಲ್ಲೇ ಆ ಧನಿಕ ೫-೧೦ ಮಂದಿಯನ್ನು ಒಟ್ಟುಗೂಡಿಸಿ ಮಾತಿಗಿಳಿದಿದ್ದ.. ಇಲ್ಲೊಂದು ಅಪಾರ್ಟ್ಮೆಂಟ್ ತಲೆಯೆತ್ತಲಿದೆ. ನೀವೆಲ್ಲ ಮನೆ ಕಾಲಿ ಮಾಡಿಕೊಂಡು ಹೋಗಿ ಎಂದು ಹೇಳುತ್ತಿದ್ದ. ಅವರಿಗಾದ ಆಘಾತ ಅಷ್ಟಿಷ್ಟಲ್ಲ .. "ಇಲ್ಲ ಹೋಗಲು ಸಾಧ್ಯವಿಲ್ಲ.." ಎಂದು ಕೆಲವರು ಅಲ್ಲೇ ವಿರೋಧಿಸಿದರು... ಜಗಳವಾಯ್ತು. ಕೈಕೈಮಿಲಾಯಿಸಿದರು. ಆ ಧನಿಕ ವಾಪಾಸ್ಸಾದ. ಮತ್ತೆ ಒಂದು ವಾರ ಬಿಟ್ಟು ಬಂದ.. ಅವನ ಮಾತು ಕೇಳಿದ ಜನರು ಮರುಮಾತನಾಡದೇ ಎಲ್ಲರೂ ಬಾಯಿಮುಚ್ಚಿಕೊಂಡು ಒಪ್ಪಿದರು...
ಸಿಮೆಂಟಿನ ಜೊತೆಗೆ ಜಲ್ಲಿಕಲ್ಲು ಬೆರೆಸಿ ಕಟ್ಟಿದ ಅಪಾರ್ಮೆಂಟ್ ವರುಷದೊಳಗೆ ತಲೆಎತ್ತಿ ನಿಂತಿತ್ತು...
~
😍 #ಸಿಂಧು_ಭಾರ್ಗವ್.. 😍

No comments:

Post a Comment