Tuesday 2 August 2016

ವಾರದ ಸಣ್ಣ ಕತೆ : ನೆನೆದ ಮಲ್ಲಿಗೆ ಯಂತೀ ಜೀವನ


**
ರಾತ್ರೆ ಹತ್ತಾದರೂ ಹೂವನ್ನು ಗುಡ್ಡೆಹಾಕಿಕೊಂಡು ಮಾರುತ್ತಿದ್ದ. ನೂರು ಗ್ರಾಮ್ಗೆ ಹತ್ತು ರೂಪಾಯಿ ..
.ನೂರಕ್ಕೆ‌ ಹತ್ತು ... ನೂರಕ್ಕೆ ಹತ್ತು... ಎಂದು. ಅವನ ಹೆಂಡತಿ ಮನೆ ಬಾಗಿಲಿಗೆ ಹತ್ತು ಸಲಿ ಬಂದು ಇಣುಕಿಹೋದಳು. ಒಲೆಯನ್ನು ಹಿಡಿಸಿ, ಮತ್ತೆ ಆರಿಸಿಹೋಗುತ್ತಿದ್ದಳು. ಪುಟ್ಟಮಗು ಅಪ್ಪ ತರುವ ಚಾಕಲೇಟಿಗೆ ಕಾಯುತ್ತಿತ್ತು.
ಕೊರೆಯುವ ಚಳಿ. ನಡುಗುತ್ತಲೇ ಬೊಬ್ಬೆಹಾಕುತ್ತಿದ್ದ. ಕೈಕಾಲು ತಂಡಿಗಟ್ಟಿತ್ತು. ಮಳೆರಾಯ ಬೇಕಂತಲೇ "ಧೋ..." ಎಂದು ಸುರಿಯುತ್ತ ಅವನ ಸಹನೆಯ ಜೊತೆ ಆಟವಾಡುತ್ತಿದ್ದ... ನೆನೆದ ಹೂವು ಕೆ.ಜಿ.ಗೆ ಲೆಕ್ಕ ಸಿಗದೆಂದು ಬೆಳಿಗ್ಗೆಯಿಂದ‌‌ ಯಾರು ಕೊಳ್ಳಲಿಲ್ಲ. ಆ ದಿನದ ವ್ಯಾಪಾರದಲ್ಲಿ ಹಾಲು , ಹಿಡಿಯಷ್ಟು ಅಕ್ಕಿ-ಬೇಳೆ, ನಾಲ್ಕು ತರಕಾರಿ , ಮೂರು ಮೊಟ್ಟೆ ತೆಗೆದುಕೊಂಡು ಹೋದರೆ ಮಧ್ಯರಾತ್ರೆ  ಒಂದು ಊಟಮಾಡಬಹುದು. ಈ ದಿನ ಹಣದ ಚೀಲ ತುಂಬಲಿಲ್ಲ. ಗಂಟೆಯೂ ಆಯ್ತು. ಎಲ್ಲ ಬ್ಯಾಗಿಗೆ ತುಂಬಿಸಿ ಭಾರವಾದ ಮನಸ್ಸಿನಿಂದ ಮನೆಗೆ ವಾಪಾಸ್ಸಾದ.
ಬಾಗಿಲಿನಲ್ಲಿಯೇ ಹೆಂಡತಿ ಅವನ ಕೈನೋಡಿದಳು. "ಐದು ಮೊಟ್ಟೆ ತೆಗೆದುಕೊಳ್ಳುವಷ್ಟು ವ್ಯಾಪಾರವಾಯ್ತು ಮಾರಾಯ್ತಿ.. ಇದನ್ನೆ ಆಮ್ಲೇಟ್ ಮಾಡಿ ತಿನ್ನುವ. ಬೇಸರಿಸಬೇಡ.."
"ಹ್ಮ.. ನಮಗೆ ಅಡ್ಡಿಲ್ಲ. ಮಗು..?!. ಅದು ಪದೆ ಪದೇ ಏಳುತ್ತದೆ. ಹಸಿವಾಗಿ ಹೊಟ್ಟೇಲಿ ಸಂಕಟವಾಗುತ್ತೆ. ನಾನೇನು ಕೊಡಲಿ ಆಗ.?!
ನಾನು ಕೆಲಸಕ್ಕೆ ಹೋಗುತ್ತಿದ್ದೆ. ನನ್ನಿಂದಲೇ ಇಷ್ಟೆಲ್ಲ ಕಷ್ಟ ನಿಮಗೆ.. ಕ್ಷಮಿಸಿ.."
" ಅಯ್ಯೋ... ಹುಚ್ಚಿ , ನೀ ಇಲ್ಲದಿದ್ದರೆ ನಾನು ಇಷ್ಟೂ ದುಡಿಯುತ್ತಿರಲಿಲ್ಲವೇನೋ.. ? ಈಗೊಂದು ಜವಾಬ್ದಾರಿ ಬಂದಿದೆ. ನೀನೇ ನನಗೆ ಸ್ಪೂರ್ತಿ. ನಮ್ಮ ಮನೆ ಲಕ್ಷ್ಮಿ ನೀನು... ಏನೇನೋ ಯೋಚಿಸಬೇಡ.." "ಮಗು ಒಂದಾದರೂ ಬೇಕೇ ಬೇಕು, ನಮ್ಮ ನೋವು ಮರೆಸಲು ಅವಳೇ ಪುಟ್ಟದೇವತೆಯಾಗಿ ಬಂದಿದ್ದಾಳೆ. ಎಂದು ಸಮಾಧಾನ ಮಾಡುತ್ತಿದ್ದ.. ಅಲ್ಲೇ ಹತ್ತಿರದಲ್ಲಿದ್ದ ಮಗು "ಅಪ್ಪಾ... ಚಾಕಲೇಟ್ ತರಲಿಲ್ವಾ.. ಬೇಡಬಿಡು ನಾಳೆ‌ ತಾ ಆಯ್ತಾ.." ಎಂದಾಗ ಗಂಡಹೆಂಡತಿರು ಮಗುವನ್ನು ಗಟ್ಟಿಯಾಗಿ ತಬ್ಬಿಕೊಂಡು ಅಳತೊಡಗಿದರು.
ಹಾಗೆ ಮಾಡಿದ ಆಮ್ಲೇಟನ್ನು ತಿಂದು‌ ಮಲಗಿದರು...
*_*_*
ಇಂತಹದ್ದು ಸಾವಿರಾರಿದೆ.‌ ಅಂದಂದಿನ  ದುಡಿಮೆಯಿಂದ‌ ಜೀವನ ಸಾಗಿಸುವಂತಹ ಜನರು. ಚೆನ್ನಾಗಿ ವ್ಯಾಪಾರವಾದರೆ ಹೊಟ್ಟೆತುಂಬಾ ಊಟ, ಇಲ್ಲದಿದ್ದರೆ ತಣ್ಣೀರು ಬಟ್ಟೆ. ಯಾರೂ ಗಮನಿಸಿರುವುದೇ ಇಲ್ಲ ನೋಡಿ...

#ಸಿಂಧುಭಾರ್ಗವ್. 

No comments:

Post a Comment