Monday 4 July 2016

ವಾರದ ಸಣ್ಣಕಥೆ :: ಬಾಲ್ಯದ ನೆನಪುಗಳು ಗೋಡಂಬಿ ಜೊತೆಗೆ


ವಾರದ ಸಣ್ಣಕಥೆ :: ಕಷ್ಟಕರ ಬಾಲ್ಯ
😍😃😊😍😃😊😍😃😊😍
ನಾವು ಚಿಕ್ಕವರಿದ್ದಾಗ  ಎಪ್ರಿಲ್ , ಮೇ ರಜೆ ಬಂದರೆ ಅಕ್ಕ ಮತ್ತು ನನಗೆ ಗೇರು ಹಣ್ಣು ಒಟ್ಟು ಮಾಡುವ ಕೆಲಸ. ತುಂಬಾ ಮರಗಳಿದ್ದವು. ಮೂರು ಹೊತ್ತು ತಪ್ಪದೆ ಆ ಕೆಲಸ ಮಾಡಿದರೆ ಎರಡು-ಮೂರು ತಿಂಗಳ , ಜೀವನ ನಡೆಯುತ್ತಿತ್ತು. ಕೃಷಿಕರಾದ ಕಾರಣ ತೆಂಗು ,ಅಡಿಕೆ, ಬಾಳೆ ಜೊತೆಗೆ ಕಾಳುಮೆಣಸು ,ಗೇರು ಬೆಳೆ ಇವೇ ನಮ್ಮ ಜೀವನಾಧಾರವಾಗಿತ್ತು..
ಕ್ವಿಂಟಾಲುಗಟ್ಟಲೆ ಮಾರುವಾಗ ಕೈತುಂಬಾ ಕೆಲಸವಿರುವುದು ಸಹಜವೇ. ಮಾರ್ಚ್- ಎಪ್ರಿಲ್  ಪರೀಕ್ಷಾ ಸಮಯವೂ ಹೌದು. ಓದುವುದರ ಜೊತೆಗೆ ಅದನ್ನು ಮಾಡಲೇಬೇಕು. ಇಲ್ಲದಿದ್ದರೆ ಬೈಗುಳ ಕೇಳಬೇಕು.
" ಬಿದ್ದ ಹಣ್ಣುಗಳನ್ನೆಲ್ಲ ಒಟ್ಟು ಮಾಡಿ, ಅದರ ಬೀಜ ತೆಗೆದು ತೊಳೆದು ಒಣಗಿಸಿ ೨ದಿನ ಆದ ಮೇಲೆ ಅಂಗಡಿಗೆ ಕೊಟ್ಟು ಬರುವುದು. " ಆ ಕೆಲಸ ಮಾತ್ರ ತಂದೆಗೆ.  ಅಕ್ಕ ,ರಜೆಗೆ ಅಣ್ಣಂದಿರೆಲ್ಲ ಬರುತ್ತಾರೆ ಅಜ್ಜಿ ಮನೆಗೋ, ದೊಡ್ಡಮ್ಮನ ಮನೆಗೋ ಹೋಗಬೇಕು ಎನ್ನುವ ಆಸೆ ಮುಂದಿಟ್ಟಾಗ ಅಪ್ಪ ಬಯ್ಯುತ್ತಿದ್ದರು. "ನಿನ್ನ ಸ್ಕೂಲ್ ಫೀಸ್ ಕಟ್ಟಲು ಅಜ್ಜಿ ಮನೆಯವರು ಬರುವುದಿಲ್ಲವೆಂದು.."  ಅಮ್ಮನಿಗೂ ಅಳುವ ಅಕ್ಕನ್ನು ಹೇಗೆ ಸಮಾಧಾನ ಪಡಿಸುವುದು ಎಂದು ತಿಳಿಯದೇ ಮೌನವಾಗಿರುತ್ತಿದ್ದಳು. ಅದನ್ನೆಲ್ಲ ಹತ್ತಿರದಿಂದ ನೋಡಿದ ನಾನು ಅಂತಹ ಆಸೆಗಳನ್ನು ನನ್ನಲ್ಲೆ ನುಂಗಿಕೊಳ್ಳುತ್ತಿದ್ದೆ. ಯಾರ ನೆಂಟರ ಮನೆಗೂ ಬರುವುದಿಲ್ಲ ನೀನು ಎಂಬುದು ಈಗಲೂ ನನ್ನ ಮೇಲಿರುವ ಅಪವಾದ.. ರರ ಮಕ್ಕಳ ಜೊತೆಗೆ ಆಟವಾಡಿ ರಜೆಯನ್ನು ಕಳೆಯುತ್ತಿದ್ದೆ‌ ಅಂತು ಬಿಸಿಲಿಗೆ ಕರಟಿ ಹೋಗಿ ,ಮರ ಹತ್ತಿ ಹಣ್ಣು ಕೊಯ್ದು ಮನೆ ಬಾಗಿಲಿಗೆ ತಂದು ಗುಡ್ಡೆಹಾಕುವಾಗ ಮುಖ ಕೆಂಪು ಟೊಮ್ಯಾಟೊ ಹಣ್ಣಿನಂತಾಗಿರುತ್ತಿತ್ತು. ಮೈಮಂಡೆಯೆಲ್ಲಾ ಒಂದು ರೀತಿಯ ವಾಸನೆ ಬರುವುದು. ನಮ್ಮ ಮನೆ ರಸ್ತೆ ಬದಿಗೇ ಇರುವುದರಿಂದ ಕಾರಿನಲ್ಲಿ ಹೋಗುವವರೆಲ್ಲ ಅದರಲ್ಲೂ ಕ್ರಿಸ್ತಿಯನ್ನರು ಒಮ್ಮೆ ಕಾರು  ನಿಲ್ಲಿಸಿ ತಾಜಾಹಣ್ಣು ಕೇಳಿ ತೆಗೆದುಕೊಂಡು ಹೋಗುತ್ತಿದ್ದರು.. ಆಗೆಲ್ಲ ಮನಸ್ಸಿಗೆ ಏನೋ ಒಂದು ರೀತಿಯ ಖುಷಿ ಯಾಗುತ್ತಿತ್ತು..
😍😊😃😍😊😃😍
ಇಷ್ಟಾಗಿಯೂ ಮೇ ಕೊನೆಯವರೆಗೂ ಅಮ್ಮ ಸುಮ್ಮನೇ ಇರುತ್ತಾಳೆ. ಕೊನೆಯ ಒಂದು ವಾರದ ಹಣ್ಣನ್ನೆಲ್ಲ ಒಟ್ಟುಮಾಡಿ ಆ ಒಣಗಿದ ಗೇರುಬೀಜದ ಚೀಲವನ್ನು ಆಟೋದಲ್ಲಿ ತುಂಬಿಸಿಕೊಂಡು ನಮ್ಮೂರ ದೊಡ್ಡಂಗಡಿಗೆ ಮಾರಿ , ಬಂದ ಹಣದಿಂದ ನಮಗೆ ಸ್ಕೂಲಿಗೆ ಹೋಗಲು ಒಂದು ಜೊತೆ ಬಟ್ಟೆ ಖರೀದಿಸುತ್ತಿದ್ದಳು. ಅವರು ಮೇ ತಿಂಗಳಿಗೆ ಮಾತ್ರ ಬಟ್ಟೆ ಮಾರಲು ಎಂದು ನಮ್ಮೂರಿಗೆ ಬರುವ ಮುಸ್ಲಿಂ ಅಬ್ದುಲ್ ಬಾಯ್ ಹತ್ತಿರ.  ಕಾರಣ ಅವರಲ್ಲಿ ಒಂದು ಅಂಗಿ ಖರೀದಿಸಿದರೆ ಇನ್ನೊಂದು ಉಚಿತ. ರೋಡು ಬದಿಯಲ್ಲಿಯೇ ಒಂದು ತಿಂಗಳು ವ್ಯಾಪಾರ ಮಾಡಿ ಕೊನೆಗೆ ಬೇರೆ ಊರಿಗೆ ಹೋಗುವುದು ಅವರ ವಾಡಿಕೆ.. ನಮ್ಮೂರಿನ ಅಂಗಡಿಗಳಲ್ಲಿಯೇ ಅಧಿಕ ಬೆಲೆ ಕೊಟ್ಟು ಪಡೆಯುವಷ್ಟು ಹಣ ಇರುತ್ತಿರಲಿಲ್ಲ.. ಮಿಡಿ, ಫ್ರಾಕ್ ಚೂಡಿದಾರ್ ಏನೇ ಆಗಿರಲಿ ಒಂದು ಪಡೆದರೆ ಒಂದು ಫ್ರೀ..  ಆ ಒಂದು ಜೊತೆ ಮಿಡಿ ಅಥವಾ ಫ್ರಾಕ್ನಲ್ಲೆ ಒಂದು ವರುಷ ಕಳೆಯಬೇಕಿತ್ತು... ಮಳೆಗಾಲಕ್ಕೆ ನೀರುಕಲೆ, ಸರಿಯಾಗಿ ಒಣಗಿರುವುದಿಲ್ಲ,  ವರುಷದ ನಡುವೆಯೇ ಹರಿದು ಹೋದರು ಹೊಲಿದುಕೊಂಡು ಅದನ್ನೇ ಹಾಕಿಕೊಂಡು ಹೋಗಬೇಕಿತ್ತು..
😍😃😊😍
ಈಗ ಒಂದು ಇಪ್ಪತ್ತು - ಇಪ್ಪತ್ತೈದು ವರುಷಗಳೇ ಕಳೆದಿವೆ.  ಆಯಸ್ಸು ಮುಗಿದು ಸತ್ತು ಹೋದವು, ರೋಗಬಾಧೆಗೆ ಒಳಪಟ್ಟವು,  ಕೆಲವನ್ನು ಕಡಿದುಹಾಕಿದರು ಹೀಗೆ ಗೇರುಮರಗಳು ಒಂದೋ-ಎರಡೋ ಬೆರಳೆಣಿಕೆಯಷ್ಟು ಉಳಿದಿವೆ...
ಕೆಲವು ಕಷ್ಟಗಳನ್ನೆಲ್ಲ ಹತ್ತಿರದಿಂದ ನೋಡಿ, ಅನುಭವಿಸಿ , ಬೆಳೆದು ಬಂದ ನಾವು, ಆದರೆ ನಮ್ಮ ತಂಗಿ ಅದೆಲ್ಲದರ ಗೋಜಿಗೆ ಇಲ್ಲ.. ಕಾರಣ ಆ ಕಷ್ಟ ಈಗಿಲ್ಲ..
- ಸಿಂಧು ಭಾರ್ಗವ್ .

No comments:

Post a Comment