Monday 11 July 2016

ವಾರದ ಕಥೆ :: ಜೀವನದ ಜೊತೆ ರಾಜಿ ಆದ ರಾಜಿ ( ಲೇಖನ )

ವಾರದ ಸಣ್ಣ ಕಥೆ :: ಜೀವನದ ಜೊತೆ ರಾಜಿ ಆದ ರಾಜಿ
***

ಬೇರೆಯವರ ಡೈರಿ ಓದಬಾರದೆನ್ನುತಾರೆ. ಆದರೆ ನಾನು ಅವಳ ಡೈರಿ ಓದಿದ ನಂತರ ನನಗೆ ಅವಳ ಮೇಲಿದ್ದ ಪ್ರೀತಿ ಗೌರವ ಇನ್ನಷ್ಟು ಜಾಸ್ತಿಯಾಯಿತು..
ರಾಜಿ ಮತ್ತು( ರಾಜೇಶ್ವರಿ ) ನಾನು ಬಾಲ್ಯದ ಗೆಳತಿಯರು. ಬಹಳ ವರುಷಗಳ ಬಳಿಕ ನಾನು ಅವಳ ಮನೆಗೆ  ಹೋಗಿದ್ದೆ. ಬೆಳಿಗ್ಗೆ ತಿಂಡಿ ಕೂಡ ಅಲ್ಲಿಯೇ. ಎಷ್ಟು ಮಾತನಾಡಿದರೂ ಮುಗಿಯುತ್ತಲೇ ಇಲ್ಲ.‌ ಬಾಲ್ಯದ ನೆನಪುಗಳನ್ನೆಲ್ಲ ಮೆಲುಕು ಹಾಕುತ್ತಿದ್ದೆವು. "ಗಂಟೆ  ೧೧ಆಯಿತು ಸ್ನಾನಕ್ಕೆ ಹೋಗಿ ..." ಎಂದು ಅವಳ‌ ಅಮ್ಮ ಅಡುಗೆಕೋಣೆಯಿಂದಲೇ ಹೇಳಿದರು. ಅವಳು ಬಾತ್ರೂಮ್ ಸಿಂಗರ್ .ಗಾಯನ ಕೇಳಿಸಿಕೊಳ್ಳುತ್ತ ನಗು ಬರುತ್ತಿತ್ತು. ಹಾಗೆ ಅವಳ‌‌ ಕ‌ಪಾಟಿನ ಕಡೆಗೆ ಕಣ್ಣಾಯಿತು. ಬಟ್ಟೆಗಳನ್ನೆಲ್ಲಾ ನೀಟಾಗಿ ಜೋಡಿಸಿ ಇಟ್ಟುಕೊಳ್ಳುತ್ತಾಳೆ ಆಕೆ. ಕೆಲಸಕ್ಕೆ ಹೋಗಿ ಬರುವ ಶಿಸ್ತಿನ ಜೀವನ ಅವಳದು. ನಾನಂತೂ ಕಸದ ರಾಶಿಯಲ್ಲೆ ಇರುವುದು. ಉದಾಸೀನದ ಮುದ್ದೆ. ಹಾಗೇ ನೋಡುತ್ತಿದ್ದಾಗ ಒಂದು ಡೈರಿ ಸಿಕ್ಕಿತು. ಬೇಡವೆಂದರೂ ಓದುವ ಕುತೂಹಲ ಹೆಚ್ಚಾಯಿತು. ಅದೂ ಹಳೆಯ ಡೈರಿ. ಮೊದಲ ಪುಟದಲ್ಲಿ
ಅವಳು ಬರೆದದ್ದು:
" ಎಲ್ಲಾ ಮಕ್ಕಳಿಗೂ ಪಿ.ಯೂ.ಸಿ ಜೀವನದ ಬಹುಮುಖ್ಯ ಘಟ್ಟ. ಡಾಕ್ಟರ್, ಇಂಜಿನಿಯರ್, ಅಥವಾ ಡಿಗ್ರೀ ಮಾಡಲೋ ಅದು ಬೇಕೇ ಬೇಕು. ಹಾಗಿರುವಾಗ  ಮೊದಲಿನಿಂದಲೂ ಸ್ನೇಹಿತರ ಜೊತೆಗೆ ಇದ್ದ ನಾನು ಪಿ.ಯೂ.ಸಿ. ಗೆ ಮನೆಯವರು ಸಯನ್ಸ್ ತೆಗೆಸಿಕೊಟ್ಟರು. ಬೇರೇ ಕಾಲೇಜಿಗೆ ಸೇರಿದೆ. ಎಷ್ಟು ಓದಿದರೂ ತಲೆಗೆ ಹೋಗುತ್ತಿರಲಿಲ್ಲ. ಅಕ್ಕ ಬುದ್ಧಿವಂತೆ ಎಂದು ನನಗೂ ಸಯನ್ಸ್ ತೆಗೆಸಿಕೊಟ್ಟರೇ ವಿನಃ ನನಗೆ ಆ ವಿಷಯದಲ್ಲಿ ಆಸಕ್ತಿ ಇರಲಿಲ್ಲ. ಪ್ರತಿ ಕ್ಲಾಸ್ ಟೆಸ್ಟ್ ನಲ್ಲಿಯೂ ಫೇಲ್ ಆಗುತ್ತಿದ್ದೆ. ತಂದೆಯನ್ನು ಕಾಲೇಜಿಗೆ ಕರೆಯುತ್ತಿದ್ದರು. ಆಗೆಲ್ಲ‌ ಅವರಿಗೆ  ಅವಮಾನವಾಗುವ ಹಾಗೆ ಮಾಡಿದೆನಲ್ಲ ಎಂದು ಬೇಸರವಾಗುತ್ತಿತ್ತು. ಊರವರಿಗೆಲ್ಲ‌ ವಿಷಯ ಬೇಗನೆ ತಿಳಿದುಬಿಟ್ಟಿತು. ನನ್ನ ಗೆಳತಿಯರೆಲ್ಲ ಒಮ್ಮೆ ಫೇಲ್ ಆದರೆ ಇನ್ನೊಂದು ಇಂಟರ್ನಲ್ ಲಿ ಪಾಸ್ ಆಗುತ್ತಿದ್ದರು‌.‌ಆಗ ಇನ್ನೂ ಕುಸಿದು ಹೋಗುತ್ತಿದ್ದೆ. ಅವರಿಗಿರುವ ಹಠ, ಛಲ ನನಗೆ ಇಲ್ಲವಲ್ಲ, ಮತ್ತೆ ತಂದೆಯನ್ನ ಕಾಲೇಜಿಗೆ ಕರೆಸಬೇಕೆಂದು. ಊಟ ,ನಿದಿರೆ ಮಾಡದೇ ನರಕ ಸದೃಶ ಆ ಎರಡು ವರುಷ ಕಳೆದಿದ್ದೆ‌ . ನೋಡಲು ಸಣಕಲು, ಯಾವುದರಲ್ಲೂ ಆಸಕ್ತಿ ಇರಲಿಲ್ಲ. ಮನೆಯವರ ಮುಖ ನೋಡಲೂ ಸಾಧ್ಯವಾಗುತ್ತಿರಲಿಲ್ಲ. "ನಗು" ಪದದ ಅರ್ಥ ಗೊತ್ತಿರಲಿಲ್ಲ. ಅಮ್ಮನಿಗೂ ತಲೆಬಿಸಿ ಕೊಡುತ್ತಿದ್ದೆ.. ಕ್ಲಾಸಿನಲಿ ವಿಷಯವೆಲ್ಲವೂ ಅರ್ಥವಾಗುತ್ತಿತ್ತು. ಆದರೆ ಅದನ್ನು ಬರೆಯಲು ಸಾಧ್ಯವಾಗುತ್ತಿರಲಿಲ್ಲ. ಇಂಗ್ಲೀಷ್ ದೊಡ್ಡ ಭೂತದಂತೆ ತಲೆಎತ್ತಿ ನಿಂತಿತ್ತು. ಅಳುವುದೊಂದೇ ನನಗೆ ಇರುವುದು. ಒಮ್ಮೆ ಪರೀಕ್ಷೆ ಬರೆದು ಮನೆಗೆ ಬಂದಾಗ ಅಪ್ಪ ಹೇಳಿದರು " ಈ ಸಲಿ ಯಾವಾಗ ಬರಬೇಕು ಹೇಳು ಫ್ರೀ ಮಾಡಿಕೊಂಡು ಬರುತ್ತೇನೆ" ಎಂದು ಆಗ ಸತ್ತೇ ಹೋದಂತ ಅನುಭವ. ಅವರಿಗೆ ನನ್ನ ಮೇಲೆ ನಂಬಿಕೆ ಹೊರಟುಹೋಗಿದೆ. ಎಂದು ಗೊತ್ತಾಯಿತು. ಮೊದಲೇ ಮರ್ಯಾದೆ ಮೂರುಕಾಸಾಗಿದೆ. ನನಗೆ ನನ್ನ ಮೇಲೆ ನಂಬಿಕೆ‌ ಇಲ್ಲದಿರುವಾಗ ಜೀವನ  ಮುಗಿತೆಂದು ಎಣಿಸಿ ಸಾಯಲು ಹೊರಟೆ. ಹೇಗೆ ಸಾಯುವುದು ಎಂದೂ ತಿಳಿದಿಲ್ಲ. ನಂತರ ಭಯ ಒಂದು ಕಡೆ‌ ಹೀಗೆ ಅರ್ಧ ಕ್ಕೆ ಜೀವ ಕಳೆದುಕೊಂಡರೆ ಮತ್ತೆ ಹುಟ್ಟುತ್ತಾರೆ ಎಂಬ ಭಲವಾದ ನಂಬಿಕೆ. ಬೇಡ. ಎಂದು ಮನಸ್ಸು ಬದಲಾಯಿಸಿದೆ. ಹೇಗೋ ಪ್ರಥಮ  ಪಿ.ಯು. ಮುಗಿಯಿತು. ಪಾಸಾಗಿದ್ದೆ. ನನಗೆ ಅನುಮಾನ ಹೇಗೆ ಪಾಸು ಮಾಡಿದರು ಎಂದು. ಅಮೇಲೆ ದ್ವಿತೀಯ ಪಿ.ಯು.

*
ಅಲ್ಲಿಯೂ ಅದೇ ಹಣೆಬರಹ. ಅಕ್ಷರಗಳೇಲ್ಲ ಅಣಕಿಸುತ್ತಿದ್ದ ವು. ಮತ್ತದೇ ಕೆಟ್ಟ ಯೋಚನೆಗಳು. ಸಾಯುವ ವಿಫಲಯತ್ನ, ಯಾರ ಮುಖನೋಡದೆ, ಬಿಸಿಲ ಕಾಣದೇ ವರುಷ ಕಳೆದೆ. ಕಾಲೇಜಿಗೆ ಬಂಕ್ ಮಾಡುತ್ತಿದ್ದೆ.
*
ಇದ್ದೆಲ್ಲಾ ಸ್ನೇಹಿತೆಯರು ಸಿ.ಇ.ಟಿ ಪರೀಕ್ಷೆಗೆ ತಯಾರಿ ಮಾಡುತ್ತಿದ್ದರು. ಅವರಿಗೆಲ್ಲ ಒಂದು ಗುರಿ ಇತ್ತು. ನನಗೂ ಆಸೆ ಇದೆ. ಡಾಕ್ಟರ್ ಆಗಬೇಕೆಂದು. ಆದರೆ ಅದರ ಹಾದಿಯಲ್ಲಿ ಸಾಗಲು ಸಾಧ್ಯವಾಗುತ್ತಿರಲಿಲ್ಲ. ಪ್ರಯತ್ನಗಳು ಫಲಿಸುತ್ತಿರಲಿಲ್ಲ.. ಪರಿಣಾಮ ಪೇಲ್. ನೆಂಟರೆಲ್ಲ ಹಂಗಿಸಲು ಶುರು ಮಾಡಿದರು. "ಒಂದು ನಲವತ್ತು ಮಾರ್ಕ್ ತೆಗೆಯಲೂ ಆಗಲಿಲ್ಲ‌ ಅಲ್ವ ನಿನಗೆ  ?!" ಅಮ್ಮನಿಗೆ ಟೆನ್ಶನ್ ಆಯಿತು. ಅಪ್ಪ ಮದುವೆ ಮಾಡಿಸುವ ಅವಳಿಗೆ ಎಂದು ಹೇಳಿದರು. ಆಗ ಅಮ್ಮ‌ "ಇಲ್ಲ ಅವಳಿಗೆ ಸಣ್ಣ ಕೆಲಸಕ್ಕೆ ಸೇರುವ ಹಾಗೆ ಮಾಡಬೇಕು‌, ಕಂಪ್ಯೂಟರ್ ಕ್ಲಾಸಿಗೆ ಸೇರಲಿ" ಎಂದರು. ಆಮೇಲೆ‌ ನೆರೆಮನೆಯವರ ಸಹಾಯದಿಂದ ಡಿಪ್ಲೋಮಾ ಸೇರಿಸಿದಳು. ಅವಳಿಗೆ ನಾನು ಸೋಲುವುದು ಇಷ್ಟವಿರಲಿಲ್ಲ. ನಾನು ಚಿಕ್ಕದಿರುವಾಗ ಬುದ್ಧಿವಂತೆ ಯಾಗಿದ್ದ ಹುಡುಗಿ‌ ಆಮೇಲೆ ಓದಲು ಆಸಕ್ತಿ ಕಳೆದುಕೊಂಡವಳು. ಯಾಕೆ ಎನ್ನುವುದೇ ಉತ್ತರ ಸಿಗದ ಪ್ರಶ್ನೆ ಯಾಗಿತ್ತು.
ಅಲ್ಲಿನ ಹೊಸ ಗೆಳತಿಯರು ಜೀವನ ಅಂದರೆ ಹೇಗೆ ಎಂಬ ಅರ್ಥವಾಗ ತೊಡಗಿತು‌. ನಮ್ಮ ಜೀವನ ನಮ್ಮ ಕೈಲೇ ಇರುವುದು. ರೂಪಿಸಿಕೊಳ್ಳಬೇಕಾದುದು ನಾವೇ ವಿನಹ ಬೇರಾರಲ್ಲ. ಸಹಾಯಕ್ಕೆ ,ಬೆಂಬಲಕ್ಕೆ ಹೆತ್ತವರು ಸದಾ ಇರುತ್ತಾರೆ. ಈಗ ಇದ್ದ ಅವಕಾಶ ಕಳೆದುಕೊಂಡರೆ ಮುಂದೆ ಸಿಗದಿರಬಹುದು ಎನಿಸಿ ಚೆನ್ನಾಗಿ ಓದಿ ಅಮ್ಮ ನನ್ನ ಮೇಲಿಟ್ಟ ನಂಬಿಕೆ ಉಳಿಸಿದೆ. ಕೆಲಸವೂ ಸಿಕ್ಕಿತು. ಈಗ ಸಂತೋಷದಲ್ಲಿದ್ದೇನೆ. ಆಗಿನ ದಿನಗಳನ್ನು ಎಣಿಸಿದರೆ ನಗು ಬರುತ್ತದೆ. ಸರಿಯಾಗಿ ಸಾಯಲೂ ಗೊತ್ತಿಲ್ಲ ದಿದ್ದರೂ ಕೈಕೊಯ್ದುಕೊಂಡಿದ್ದೆ.  ಈಗ ಬದುಕುವ ಆಸೆ ಹೆಚ್ಚಾಗಿದೆ.‌.
ನನ್ನ ಜೀವನದ ತಿರುವು ಕಂಡ #ಗಳಿಗೆ ಅದು.
______*****______
ಹ್ಮ..ಮ್.
ಅವಳ ಡೈರಿ ಓದಿ ಮನಸ್ಸು ಮೌನಕ್ಕೆ ಶರಣಾಯಿತು. ಈ ಪ್ರಪಂಚವೇ ಹಾಗೆ. ಜನ ಗೆಲ್ಲುವ ಕುದುರೆ ಬಾಲಕ್ಕೆ ಹಣ‌ಕಟ್ಟುತ್ತಾರೆ. ವಿನಃ ಸೋಲುವ ಕುದುರೆಗಲ್ಲ. ಸಾಧನೆ ಮಾಡಿದ ವಿದ್ಯಾರ್ಥಿ ಗಳ ಹೆಸರು ಮಾಧ್ಯಮ ದ ಮುಖಪುಟ ದಲ್ಲಿ ಬರುವುದೇ ವಿನಃ ಅನುತ್ತೀರ್ಣರಾದವರದಲ್ಲ. ಗೆದ್ದ ಎತ್ತಿನ ಬಾಲ ಹಿಡಿಯುವವರೇ ಜಾಸ್ತಿ ಬಿಟ್ಟರೆ ಸೋತವರ ಮುಖ ಕೂಡ ನೋಡುವುದಿಲ್ಲ. ಮಕ್ಕಳಿಗೆ ಯಾವ ವಿಷಯದಲ್ಲಿ ಆಸಕ್ತಿ ಇದೆ ಎಂದು ಕೇಳಿ ಅವರಿಗೆ ಓದಲು ಬಿಡಬೇಕೇ ವಿನಃ ಹೆತ್ತವರಿಗೆ ಇಷ್ಟವಾಗುವ ವಿಷಯವೆಂದೋ, ಅಕ್ಕ-ಅಣ್ಣ ತೆಗೆದುಕೊಂಡರೆಂದು ಅದಕ್ಕೆ ಸೇರಿಸಬಾರದು. ಪ್ರತಿಯೊಂದು ಮಗುವು ತನ್ನದೇ ಆದ ವಿಶೇಷ ಅಭಿರುಚಿ ,ಆಸಕ್ತಿಯನ್ನು ಹೊಂದಿರುತ್ತದೆ. ಅದನ್ನು ಗುರುತಿಸಬೇಕು. ಸೋತಾಗ ಬೆಂಬಲಕ್ಕೆ ನಿಲ್ಲಬೇಕು. ಮತ್ತೂ ಚುಚ್ಚುವ ಮಾತನ್ನಾಡಿ ಕುಗ್ಗಿಸುವುದಲ್ಲ. ನೊಂದ ಮನಸ್ಸು ಕುಗ್ಗಿಹೋದಾಗ ,ಸೋಲು ಮೇಲಿಂದ ಮೇಲೆ ಎದುರಾದಾಗ ಸಾಯುವ ಯೋಚನೆ ಮಾಡುತ್ತಾರೆ... ಅವರನ್ನು ಸೂಕ್ಷ್ಮವಾಗಿ ಗಮನಿಸಿ ಧೈರ್ಯತುಂಬಬೇಕು... ಜೀವನ ದೊಡ್ಡಹಾದಿ. ಅರ್ಧಕ್ಕೆ ನಿಲ್ಲಿಸುವುದಲ್ಲ. ಸೋಲು ಎಂದಾಗ ಜೀವನ ಅಲ್ಲಿಯೇ ಕೊನೆಯಾಗುವುದಿಲ್ಲ ಎಂದು ತಿಳಿಸಿಹೇಳಬೇಕು..

- #ಸಿಂಧು ಭಾರ್ಗವ್ 😍

No comments:

Post a Comment