Monday 27 June 2016

ವಾರದ ಕಥೆ :: ಮರಿಯಪ್ಪನ ಪಾರ್ಕ್ ನಲ್ಲಿ ಆ ಸಂಜೆ‌







ವಾರದ ಕಥೆ :: ಮರಿಯಪ್ಪನ ಪಾರ್ಕ್ ನಲ್ಲಿ ಆ ಸಂಜೆ‌ 
*******
ನಾವು ಪಾರ್ಕಿಗೆ ಹೋಗುವುದು ವಾರಾಂತ್ಯದ ಅತಿಥಿಗಳಂತೆ.. ಅದೂ ಮಗುವಿನ ಒತ್ತಾಯಕ್ಕೆ, ಸಮಯ ಸಿಕ್ಕಾಗ, ಮಳೆಬರುವುದೆಂಬ ನೆಪ, ಹೀಗೆ ಇಲ್ಲ ಸಲ್ಲದ ನೆಪವೊಡ್ಡಿ ತಪ್ಪಿಸಿಕೊಳ್ಳುವುದು.. ಕಾರಣ ನನಗೆ ಇಷ್ಟವಿಲ್ಲ. ಅನ್ನುವುದಕ್ಕಿಂತಲೂ ಹಸಿರನ್ನೇ ಹೊದ್ದು ಮಲಗಿರುವ ಪ್ರಕೃತಿ ಮಾತೆ ಮಡಿಲಿನಲಿ ಬೆಳೆದ ನನಗೆ ಇದು ಕೃತಕವೆನಿಸುತ್ತದೆ.. ಹಸಿರನ್ನು ನೋಡಲೆಂದೇ ಒಂದು ಕಡೆ ಹೋಗಬೇಕು ಎಂದಾಗ ಮನಸ್ಸಿಗೆ ಬೇಸರದ ಛಾಯೆ. ನಮ್ಮ ಕರಾವಳಿಯ ಸೊಬಗು, ಸಾಲುಮರಗಳು,ಪಶುಪಕ್ಷಿಗಳ ಸುಪ್ರಭಾತ ರಾತ್ರಿ ಮಲಗುವಾಗ ಜೋಗುಳ ,ನಗುವಾಗ ಗೆಳತಿ, ಅಳುವಾಗ ಜೊತೆಗಾತಿ ಹೀಗೆ ಉಸಿರಾಗಿರುವ ಅವಳನ್ನು ಬಿಟ್ಟು ಬಂದು ನಾನು ಅನಾಥೆಯಾದಂತಹ ಭಾವ.
***
ಆದರೂ ಮಗುವಿಗೆ . ಅವನಿಗೆ ಇದಲ್ಲದೇ ಬೇರೆ ಏನಿದೆ ಮರಗಿಡ, ಪಕ್ಷಿಗಳೆಂದು ತೋರಿಸಲು..
ಅದಕ್ಕಾದರೂ ಹೋಗುವುದು. ಹತ್ತಿರವಾಗಿದ್ದರೆ ದಿನವೂ ಹೋಗಬಹುದಿತ್ತು. ಬಸ್ಸಿನಲ್ಲೇ ಇಲ್ಲಾ ಆಟೋದಿಂದ ಹೋಗಬೇಕೆಂದು ಬೇಜಾರು.ಅದಕ್ಕೆ ಅಪರೂಪಕ್ಕೆ ಬೇಟಿ ನೀಡುವುದು. ಮೊನ್ನೆ ರವಿವಾರ ಸಂಜೆ ಮಳೆಯೂ ಸಹ ಕಡಿಮೆ ಇತ್ತು.. ಮನಸ್ಸು ಮಾಡಿ ಹೋಗಿದ್ದೆವು. ಇಷ್ಟೆಲ್ಲಾ ಇದ್ದರೂ ಆ ಹಸಿರನ್ನು ನೋಡಿದರೇ ನನ್ನೇ ನಾ ಮರೆಯುವುದಂತು ನಿಜ. ತಿಳಿಯದೇನೆ ಬಾಲ್ಯಕ್ಕೆ ಸಾಗುವೆ..‪#‎ಮಗು‬ ಅವನಷ್ಟಕ್ಕೆ ಮುದ್ದಾಗಿ ಹೆಜ್ಜೆ ಇಡುತ್ತಿದ್ದ. ‪#‎ಇವರು‬ಸ್ವಲ್ಪ ಹೊಟ್ಟೆ ಬಂದಿದೆ ಕರಗಿಸಿಕೊಳ್ಳಬೇಕು , ದಿನ ಇಲ್ಲಿಗೆ ಬರಬೇಕು ಎಂದು ಆರಂಭಶೂರರಂತೆ ಮಾತು ಉದುರಿಸಿದರು.. ನಾನೋ ಯಾವುದೋ ಕನಸಿನ ಲೋಕಕ್ಕೆ ತೇಲಿದೆ. ಒಂದು ಸುತ್ತು ಬಂದು ಕುಳಿತೆ. ಮಗುವನ್ನು ಆಡಿಸಲು ಕರೆದುಕೊಂಡು ಹೋದರು..
ಹಾಗೆ ಸುತ್ತ ಕಣ್ಣಾಡಿಸಿದೆ....
***

ಜೋಕಾಲಿಯಲಿ ಜೀಕುವ ಮಕ್ಕಳು, ಆನೆ ಸೋಂಡಿಲಿನ ಜಾರು ಬಂಡಿಯಲ್ಲಿ ಜಾರುವ ಮಕ್ಕಳು, ಕೆಲವು ಮಕ್ಕಳಂತೂ ಹೆತ್ತವರ ಎದುರು ಧೈರ್ಯ ಪ್ರದರ್ಶಿಸುವುದು, ಕೆಲವು ಮಕ್ಕಳು ಒಂದು ಹೆಜ್ಜೆ ಮುಂದಿಡಲೂ ಭಯಗೊಳ್ಳುತ್ತಿದ್ದವು.. ನಿಜ. ಹುಟ್ಟಿನಿಂದಲೇ ಈ ಧೈರ್ಯ, ಭಯವೆಲ್ಲ ಬರುವಂತದ್ದು ಅನ್ನಿಸಿತು. ಕೆಲವು ಅಪ್ಪದಿರು ಉತ್ಸಾಹದಿಂದಿದ್ದರು, ಕೆಲವರು ಮುಖ ಸಿಂಡರಿಸಿಕೊಂಡಿದ್ದರು, ಕೆಲವರಿಗೆ ಹೊಟ್ಟೆ ಭಾರ ಬಾಗಲೂ ಆಗುತ್ತಿರಲಿಲ್ಲ. ಕೆಲವು ಮಕ್ಕಳು ಬಿದ್ದು ಅಳುವುದು, ಅಣ್ಣನು ಆಡುವುದನ್ನು ನೋಡಿ ಕೇಕೆ ಹಾಕಿ ನಗುವ ಪುಟ್ಟಮಗು, ಕೆಲ ಹಿರಿಯರು ತಮ್ಮ ವೃತ್ತಿ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರು. ಕೆಲವರು ಹಿರಿಯ ಮಹಿಳೆಯರು ಸೊಸೆಯಂದಿರ ದೂರು ಹೇಳುತ್ತಲೇ ೩-೪ಸುತ್ತು ಸುತ್ತಿದರು. ಕೆಲವರಂತು ಕಿವಿಗೆ ಸಂಗೀತ ಸಿಕ್ಕಿಸಿಕೊಂಡು ನಡೆಯುತ್ತಿದ್ದರು. ಕೆಲವು ಹುಡುಗರು ಓಡುವುದು, ಶೆಟಲ್ ಆಟ ಒಂದು ಕಡೆ.. ಬಲೂನು ಮಾರುವಾತ ತನ್ನೆಲ್ಲ ಉಸಿರನ್ನು ಬಲೂನೊಳಗೆ ತುಂಬಿಸಿ ಮಾರಾಟಕ್ಕಿಟ್ಟಿದ್ದ... ಅದನ್ನು ಪಡೆಯಲು ಮಕ್ಕಳ ಹಠ, ತಾಯಿಯಂದಿರ ಸಿಡುಕು. ಹಕ್ಕಿಗಳೆಲ್ಲ ತಮ್ತಮ್ಮ ಗೂಡು ಸೇರುತ್ತಿದ್ದವು, ಕೆಲವು ನೆನೆದ ಜೋಡಿ ಹಕ್ಕಿಗಳು ಅಂಟಿಕೊಂಡು ಕುಳಿತು ಮೈಬಿಸಿ ಮಾಡಿಕೊಳ್ಳುತ್ತಿದ್ದವು. 
ಹಾಸ್ಯ ಮಾಡುತ್ತ ಗೆಳೆಯರ ಕಾಲ್ ಎಳೆಯುವವರ ಗುಂಪು, ಏನೋ ತಾಳ ತಪ್ಪಿತೆಂದು ಗೆಳೆಯನ ಹತ್ತಿರ ಹೇಳಿ ಅಳುತ್ತಿರುವ ಹುಡುಗಿ.. ಮನೆಮನೆ ಕಥೆ , ಪೆನ್ನು ಪೇಪರ್ ಹಿಡಿದು ಬರೆಯುತ್ತಿದ್ದ ಯುವಕವಿ. ಪಾನಿಪುರಿ ಮಾರುವಾತ. ಕೆಲವರು ತಮ್ಮ ನಾಯಿಯ ಜೊತೆ ನಡಿಗೆ, ಅದಕ್ಕೆ ಪ್ರತಿಸ್ಪರ್ಧಿ ಯಂತೆ ಬೀದಿನಾಯಿಗಳು ಸುತ್ತು ಬರುತ್ತಿದ್ದವು. ನಾರ್ಥ್ ಈಸ್ಟ್ , ತಮಿಳರು, ತೆಲುಗು ಜನರು, ಮಾರ್ವಾಡಿಗಳು, ಕನ್ನಡಿಗರು, ಮುಸಲ್ಮಾನರು, ಹಿರಿಯರು ಕಿರಿಯರು, ಎಲ್ಲರ ಸಮಾಗಮ.. 
**


ಗೇಟಿನಿಂದ ಹೊರಗೆ ಒಂದಷ್ಟು ಸ್ವಂತವಾಹನಗಳು ಕಾಯುತ್ತ ನಿಂತಿದ್ದವು, ಕೆಲವರು ಕಾರಿನಲ್ಲಿ ಬಂದು "ಅಯ್ಯೋ ಕೆಸರಾಗುತ್ತೆ, ಮಳೆ ಬೇರೆ ಬಂದಿದೆ , ಬೇಡ ಇಳಿಯುವುದು .." ಎಂದು ವಾಪಾಸ್ಸಾದರು. ಸುತ್ತ ತಿಂಡಿ ತಿನಿಸಿನ ವ್ಯಾಪಾರಿ ಅಂಗಡಿಗಳು... ಒಂದಕ್ಕೆ ಎರಡು ರೇಟು, ಬೇಡವೆಂದರೂ ಮಕ್ಕಳ ಹಠಕ್ಕೆ ತೆಗೆದುಕೊಳ್ಳುವುದು... ಜಾತಿ ಧರ್ಮ ದ , ಗಡಿರೇಖೆಯ ಎಲ್ಲೆ ಮೀರಿದ ಆ ಮುಗ್ಧ‌ಮಕ್ಕಳು ಜೊತೆಗೆ ಆಡುವುದನ್ನು ನೋಡುವುದೇ ಮನಸ್ಸಿಗೆ ಹಿತ.. 
ಅಬ್ಬಾ ಒಂದಾ.. ಎರಡಾ. ನಾನು ಮನದಲ್ಲೆ ಎಲ್ಲವನ್ನು ಸವಿಯುತ್ತಾ ಹಕ್ಕಿಗಳಿಗೆ ಶುಭರಾತ್ರಿ ಹೇಳಿ ಅಲ್ಲಿಂದ ಹೊರಟೆ .. 
.
ಸಿಂಧು ಭಾರ್ಗವ್ ‌..



No comments:

Post a Comment