Thursday 28 July 2016

ನಮ್ಮ ನಡುವೆ ಇರುವ ಅವರು (ನಮ್ಮವರು)

ಅವನು ನಮ್ಮವನಲ್ಲ ,
ಆದರೆ ಕೆಟ್ಟವನಲ್ಲ..

ಧರಿಸುವ ಧಿರಿಸು ಬಿಳಿ,
ಮನಸ್ಸಂತೂ ತುಂಬಾ ತಿಳಿ..

ದಯೆ ಕರುಣೆಯ ಮೂರ್ತಿ ,
ಶಾಂತಿ ಸಾರುತಿರುವ ಕೀರ್ತಿ..

ಶುಕ್ರವಾರ ನಮಾಜಿಗೆ,
ಲಕ್ಷ್ಮಿ ಯ ಪೂಜೆ ನಮಗೆ.

ಸಮೂಹದಲಿ, ಅವನ ಇಷ್ಟ ಪಡದವರಿಲ್ಲ ..
ನಮ್ಮವರಿಗೆ ಅವನ ಕಂಡರಾಗುವುದಿಲ್ಲ..

ಸ್ನೇಹ ಪ್ರೀತಿಗೆ ಜೀವಕೊಡುವ,
ನಾನಿದ್ದೇನೆ ಎಂಬ ಧೈರ್ಯ ನೀಡುವ..

ಅವನು ಈ ಗಾಳಿ,ನೀರನ್ನೇ ಕುಡಿಯುವುದು ,
ನಾವೂ ಅದನ್ನೆ  ತಾನೆ ನಂಬಿರುವುದು ..

ಪ್ರಕೃತಿಗೆ ಅವನೊಂದಿಗೆ ಬೇಧವಿಲ್ಲ
ಸಮಾಜಕ್ಕೆ ನಮ್ಮವನೆನ್ನಲು ಸಮ್ಮತವಿಲ್ಲ...
**
ಯಾರು ದೂರಿದರೂ, ದೂರವಿರಿಸಿದರೂ
ಮಾನವೀಯತೆಗೆ, ಸ್ನೇಹಸೌಹಾರ್ಧಕ್ಕೆ ಬೆಲೆ ಎಂದಿಗೂ ಇದ್ದೇ ಇದೆ.
ಅಗತ್ಯ ಬೇಕಾದಾಗ ಯಾರ ರಕ್ತ ಯಾರ ಜೀವ ಸೇರುವುದೋ ಯಾರಿಗೆ ಗೊತ್ತು..?!
ಯಾರ ತೋಟದ ಹೂವು ಯಾರ ದೇವರ ಪಟ ಸೇರುವುದೋ ಯಾರಿಗೆ ಗೊತ್ತು..!? ನಮ್ಮ ಮನೆಯಲಿ ಸುಪ್ರಭಾತ ಮೊಳಗುವ ಮೊದಲೇ ದರ್ಗಾದಲ್ಲಿ ಅಲ್ಲಹು ಅಕ್ಬರ್ ಎಂಬ ಘೋಷ ಕೇಳುತ್ತಿರುತ್ತದೆ. ಪಕ್ಕದ ಮನೆಯ ಕೋಳಿಕೂಡ ಅಂಗಳಕ್ಕೆ ಬರಲು ಬಿಡದವರು ನಮ್ಮವರು. ವ್ಯಾಪಾರ ವ್ಯವಹಾರದಲ್ಲಿ ನಿಪುಣರಾದ ಕಾರಣ ಅವರಲ್ಲೇ ಹೋಗಿ ಚರ್ಚಿಸಿಯಾದರೂ ತೆಗೆದುಕೊಂಡು ಬರುವರು. ಅವರಿಗೇ ಬೈಯುವರು. ನಮ್ಮವರು ಸ್ವಾರ್ಥಿಗಳು. ಜಗಳ ತಂದು ಇಡುವವರು, ಬೇಳೆಬೇಯಿಸಿಕೊಳ್ಳುವವರು, ಉಪಯೋಗಿಸಿ ಬಿಸಾಕುವವರು, ಹೊಟ್ಟೆಕಿಚ್ಚು ಎಲ್ಲವೂ ತುಂಬಿಸಿಕೊಣ್ಡಿರುವವರು.
**
ಜಗಳ , ಕಲಹ ಯಾಕಾಗಿ ?! ಎಲ್ಲೋ ಮುಸುಕುಧಾರಿಗಳು ಗಡ್ಡಧಾರಿಗಳು, ರಕ್ತಪಾತ ನಡೆಸಿದಾಗ ಉಂಟಾಗುವ ಭಯ,
#ನಮ್ಮವರ ( ನಮ್ಮ ನಡುವೆ ಇರುವ #ಅವರ) ಮೇಲೆ ಪಡುವ ಅನುಮಾನ, ಹತ್ತಿರವಿದ್ದವರಿಗೆ ನಾವು ಮಾಡುವ ಅವಮಾನ, ನಾವು ಅಂತವರಲ್ಲ ಎನ್ನುವ ಅವರುಗಳ ಸಮರ್ಥನಾ ನುಡಿಗಳು,
ತಲೆಮಾರಿನಿಂದ  ಅವರಬಗೆಗೆ ಮೂಡಿರುವ
ಕಪ್ಪುಚುಕ್ಕೆಯ ನಾವು ಅಳಿಸಿ ಹಾಕದಿದ್ದರೆ , ಅವರೆಲ್ಲರೂ ನಮ‌್ಮ ಸ್ನೇಹಿತರು ಎಲ್ಲರೂ ಕೆಟ್ಟವರಲ್ಲ, ಅಂತಹ ಕೆಟ್ಟ ರಕ್ತಹೀರುವ ಹುಳುಗಳಿಗೆ ಅವರಲ್ಲೂ ಜಾಗವಿಲ್ಲ ,  ಅಲ್ಲಾಹುವಿನಲ್ಲೂ ಕ್ಷಮೆಯಿಲ್ಲ ಎಂದು ನಾವು ನಮ್ಮ‌ಮಕ್ಕಳಿಗೆ ತಿಳಿಹೇಳದಿದ್ದರೆ , ನಾವು ಸತ್ತಮೇಲೆ
ನಮ್ಮ‌ಮಕ್ಕಳ ಕಾಲಕ್ಕೂ ಅದು ಮುಂದುವರಿಯುತ್ತದೆ...

#ಇನ್ನಾದರೂಸಾಕುನಿಲ್ಲಿಸಿ.

No comments:

Post a Comment