Wednesday 27 July 2016

ವಾರದ ಸಣ್ಣ ಕತೆ : ಚಿಗುರಲಿ ಕನಸು



ವಾರದ ಸಣ್ಣ ಕತೆ: ಚಿಗುರಲಿ ಕನಸು
~~~~~
ಸಂಜೆ ಸೂರ್ಯಾಸ್ತಮಾನ, ಕೆಂಪು ಆಗಸ ನೋಡುತ ಕುಳಿತು ಬಿಟ್ಟಿದ್ದೆ. ಹದ್ದುಗಳೆಲ್ಲ ಮನೆಗೆ ಹೋಗುವುದ ಬಿಟ್ಟು ನನ್ನ ತಲೆಯ ಮೇಲೆ ಸುತ್ತುತ್ತ ಇದ್ದವು. ಸತ್ತು ಹೋಗಿದ್ದೇನೆ ಎಂದುಕೊಂಡಿರಬಹುದಾ..?! ಮತ್ತೇನು ಕಲ್ಲುಬಂಡೆಯ ಹಾಗೆ ಕದಲದೇ ಕುಳಿತಿದ್ದರೆ ಹಾಗೆ ತಾನೆ ಅರ್ಥ. ರುಮು ರುಮು ಬೀಸುವ ಗಾಳಿಯು ಕೂಡ ಅಡ್ಡದಿಂದ ಏಳಲು ಹೇಳುತ್ತಿದೆ. ಅದರ ಕಡೆಗೂ ಲಕ್ಷ್ಯ ಕೊಡದಿದ್ದಕ್ಕೆ ನನ್ನನ್ನೆ  ದೂಡಿಕೊಂಡು ಹೋಗುತ್ತಿದೆ. ಯಾಕಾಗಿ ಹೀಗೆ ಕುಳಿತಿರುವೆ..? ಸಂಜೆ ದೇವರಿಗೆ ದೀಪ ಹಚ್ಚುವ ಸಮಯದಲ್ಲಿ..
**
ಹ್ಮ... ಜೀವನ‌ ಹೀಗೆ ಎಂದು ಈವರೆಗೆ ಯಾರಿಗೂ ವ್ಯಾಖ್ಯಾನಿಸಲಾಗಲಿಲ್ಲ... ಅವರವರ ಪಾಲಿಗೆ ಬಂದದ್ದನೇ ಅರ್ಥೈಸಿ ಇನ್ನೊಬ್ಬರಿಗೆ ಹೇಳುತ್ತಿದ್ದಾರೆ. ಯಾವುದು ನಿಜವಲ್ಲ.
**
#ಸಿರಿವಂತರ‌ಮನೆ ಇಡಲು ಜಾಗವಿಲ್ಲ, ಮಗನಿಗೆ ಮದುವೆಯಾಗಿ ಎಷ್ಟು ವರುಷವಾದರು ಮಕ್ಕಳಾಗಲಿಲ್ಲ. ೫-೬,ವರುಷದ ನಂತರ ಒಂದು ಮಗು ಹುಟ್ಟುತ್ತದೆ.‌ಎಲ್ಲರಿಗೂ ಖುಷಿ. ಹಬ್ಬದ ವಾತಾವರಣ. ಆದರೆ  ಡಾಕ್ಟರ್ ಗೆ ಒಂದು ರೀತಿಯ ಕಸಿವಿಸಿ. ಈ ಮಗುವಿಗೆ ಮುಂದೆ ಸಮಸ್ಯೆ ಎದರಾಗುತ್ತದೆ‌ ಎಂದು. ಅದನ್ನು ಹೇಳಲು ಮನಸ್ಸು ಮಾಡಲಿಲ್ಲ. ಒಂದು ವರುಷದ ಮೇಲೆ ಅವರು ಎನಿಸಿದಂತೆ ಮಗು ನಡೆಯುತ್ತಿರಲಿಲ್ಲ. ತನ್ನ ಕಾಲಿನ ಸ್ವಾಧೀನ ಕಳೆದುಕೊಂಡಿತ್ತು.. ಈಗ ಎರಡು ವರುಷದ ಮೇಲಾಗಿದೆ. ಆದರೂ  ಮಗುವು ಮಲಗಿದ್ದಲ್ಲಿಯೇ. ಅಷ್ಟು ಹಣವಿದ್ದರೂ ಏನೂ ಮಾಡಲಾಗದ ಪರಿಸ್ಥಿತಿ.
**
#ಇನ್ನೊಂದು ಸಿರಿವಂತ ಕುಟುಂಬ ಕೊನೆಯ ಮಗಳಿಗೆ ಮದುವೆ ಮಾಡಿ ೧೦ವರುಷವಾಗಿದೆ. ಮಕ್ಕಳಿಲ್ಲ. ಪ್ರತಿ ಸಲಿ ಊರಿಗೆ ಬಂದು ವಾಪಾಸಾಗುವಾಗ ಅಳುತಲೇ ಹಿಂದಿರುಗುತ್ತಾಳೆ. ದತ್ತು ತೆಗೆದುಕೊಳ್ಳಲು ಅಷ್ಟು ವಯಸ್ಸಾಗಲಿಲ್ಲ. ಗಂಡಹೆಂಡಿರಿಬ್ಬರು ( ಸ್ಥೂಲಕಾಯದವರು) ದಪ್ಪ ಇದ್ದ ಕಾರಣ ಮಕ್ಕಳಾಗುವುದು ಕಷ್ಟವೆಂದು ಸ್ವತಃ ಡಾಕ್ಟರ್ ಹೇಳಿದ್ದರು.
**
#ಇನ್ನೊಬ್ಬರ ಮನೆಯಲ್ಲಿ ಮಗುವಿದೆ. ನೋಡಿಕೊಳ್ಳಲು ಯಾರಿಲ್ಲವೆಂದು ಕೆಲಸಕ್ಕೆ ಹೋಗುತ್ತಿದ್ದ ತಾಯಿ ನಿಲ್ಲಿಸಿ  ಮಗುವಿನ ಆರೈಕೆ ಮಾಡುತ್ತ ದಿನಕಳೆಯುತ್ತಿದ್ದಾಳೆ.
#ಇನ್ನೊಂದು ಮನೆಯಲ್ಲಿ ಗಂಡಹೆಂಡಿರಿಬ್ಬರು ಕೆಲಸಕ್ಕೆ ಹೋಗುವವರು. "ಇನ್ನು ಮಕ್ಕಳಾಗಲಿಲ್ಲವಾ..??" ಎಂಬ ಪ್ರಶ್ನೆಗೆ ಬಾಯಿ ಮುಚ್ಚಿಸಲು ಮನೆಯಲ್ಲಿ ಒಂದು ಮಗುವಿದೆ . ನೋಡಿಕೊಳ್ಳಲು ಯಾರಿಲ್ಲವೆಂದು ಡೇ_ಕೇರ್ ಸೆಂಟರ್ ನಲ್ಲಿ ಬಿಟ್ಟು ಕೆಲಸಕ್ಕೆ ಹೋಗುತ್ತಾರೆ.. ಆ ಮಗುವಿಗೆ ಆಯಮ್ಮನೇ ಎಲ್ಲವೂ. ಅವರ ಜೊತೆ ಖುಷಿಯಲ್ಲಿರುತ್ತದೆ. ಹೆತ್ತವರು ಬಂದಾಗ ಕಿರಿಕಿರಿ ಅಳುವುದು, ಏನೋ‌ ಒಂದು ರೀತಿಯ ಅಸಮಧಾನ ತೋರಿಸುತ್ತದೆ..
ಹ್ಮ..ಮ್..!!
ಮೊನ್ನೆ ಎಲ್ಲೋ ಓದಿದ ನೆನಪು, ಗೆಳೆಯರಿಬ್ಬರ ಮಾತು :
" ಜೀವನದಲ್ಲಿ ಏನಾದರೂ ಕಷ್ಟಪಟ್ಟು ಸಾಧನೆ ಮಾಡಬೇಕು ಕಣೋ. ನೀನೊಬ್ಬ ಎಲ್ಲದ್ದಕ್ಕೂ ಹೆದರೋದು.."
" ಹ್ಮ.. ಕಷ್ಟಪಟ್ಟಿದ್ದಕ್ಕೆ  ಇನ್ನು ನಾಲ್ಕು ತಿಂಗಳಲ್ಲಿ ನಾನು ಅಪ್ಪ ಆಗ್ತಾ ಇದ್ದೀನಿ.."
" ಥೂ.. ನಿನ್ನ ಅಪ್ಪ ಆಗೋದು, ಮಗು ಹುಟ್ಟಿಸೋದು ಒಂದು ಸಾಧನೆನಾ..?!"
"ನಿನಗೇನು ಗೊತ್ತು? ಈಗ ೧೦ಜನರಲ್ಲಿ( ಗಂಡಸರು) ೭ ಜನರು ಮಾತ್ರ ತಂದೆ ಪಟ್ಟ ಪಡೆದುಕೊಳ್ತಾ ಇದ್ದಾರೆ. ಅದರಲ್ಲಿ ನಾನೂ ಒಬ್ಬ..
**
ಮೊದಲೆಲ್ಲ ಮನೆ ತುಂಬಾ ಮಕ್ಕಳು. ಮೊದಲೆರಡು ಬಾಣಂತನಕ್ಕೆ ತಾಯಿ ತವರು ಮನೆಗೆ ಹೋಗ್ತಾರೆ. ನಂತರದ್ದೆಲ್ಲ ಮನೆಯ ಹಿರಿಯ ಮಕ್ಕಳೇ ನೋಡಿಕೊಳ್ಳೋದು. ಆದರೆ ಈಗ ಬಸುರಿ ( ಪ್ರೆಗ್ನೆಂಟ್) ಎಂದು ಗೊತ್ತಾದಾಗ ಬೆಡ್ ರೆಸ್ಟ್ ನಲ್ಲಿದ್ದವರು ಹೆರಿಗೆ ಮುಗಿಸಿ ಮನೆಗೆ ಬರುವ ತನಕವೂ ಬೆಡ್ ರೆಸ್ಟ್ ನಲ್ಲಿಯೇ, ಅದೂ ಸಿಸೇರಿಯನ್ ಮಾಡಿಯೇ ಮಗು ತೆಗಿಯಬೇಕು. ಒಂದು‌ ಮಗು ಕೈಗೆ ಬರಲು ನಡೆಸುವ ಒದ್ದಾಟ ಅಷ್ಟಿಷ್ಟಲ್ಲ.. ಅಷ್ಟಾಗಿಯೂ ಮಕ್ಕಳಿಲ್ಲ ಎಂದು ಕೊರಗುವವರು, ಹರಕೆ ಕಟ್ಟುವವರು,  ಮಗುವಿಗೋಸ್ಕರ ಜೀವನವನ್ನೇ ತ್ಯಾಗ ಮಾಡುವವರು,  ಕೆಲಸ ಬಿಡಲು ಇಚ್ಛಿಸದವರು ಆಯಮ್ಮನ ಕೈಗೆ ಮಗುವ ನೀಡುವವರು...
**
ಅವರಿವರ ಮನೆ ಕತೆ ನಮಗ್ಯಾಕೆ‌ ಹೇಳುತ್ತೀರಿ?! ನೀವ್ಯಾಕೆ ಬೇಡದ ಚಿಂತೆ ಮಾಡುತ್ತೀರಿ? ಎನ್ನುತ್ತಿರ ಬಹುದು, ಹಾಗೆ ಕಲ್ಲಾಗಿ ಕುಳಿತುಕೊಂಡದ್ದು " ಕೈಕಾಲಿನಲ್ಲಿ ಸ್ವಾದೀನ ಕಳೆದುಕೊಂಡ ಆ ಮಗುವನ್ನು ಬಹಳ‌ ಹತ್ತಿರದಿಂದ ನೋಡಿದಾಗ, ನನ್ನ ಮಗು ಕೇಳಿದ ಪ್ರಶ್ನೆಗಳಿಗೆಲ್ಲ ಉತ್ತರ ನೀಡಲಾಗದೇ ಗಂಟಲು ಕಟ್ಟಿಬಂದಾಗ...
" ಅವನ್ಯಾಕೆ ನನ್ನ ಜೊತೆ ಆಡಲು ಬರುತ್ತಿಲ್ಲ, ನಿಲ್ಲು ಎಂದರೆ ಯಾಕೆ‌ ನಿಲ್ಲುತ್ತಿಲ್ಲ, ಯಾಕೆ ಮಾತನಾಡೋದಿಲ್ಲ ? ಯಾಕೆ ನಗೋದಿಲ್ಲ ? ಮಲಗಿಕೊಂಡೇ ಯಾಕೆ ಇರ್ತಾನೆ ?
ಹ್ಮ... ಯಾಕೆ?! ಯಾಕೆ ?! ಯಾಕೆ?!
***
"ದೇವರು ಎಲ್ಲರಿಗೂ ಎಲ್ಲವನ್ನೂ ಕರುಣಿಸುವುದಿಲ್ಲ. ಒಂದಲ್ಲ ಒಂದು ಕೊರತೆಯನ್ನು ಇಟ್ಟೇ ಇಟ್ಟಿರುತ್ತಾನೆ. ಯಾಕೆ?! ಎಲ್ಲಿ ಖುಷಿಯಲ್ಲಿ ತೇಲುತಾ ತನ್ನನ್ನು ಮರೆತುಬಿಡುವನಾ ಮನುಷ್ಯಜೀವಿ ಎಂದು..." ಮಗು/ಮಕ್ಕಳು , ಮೊದಮೊದಲು ಅದೊಂದು ಸಮಸ್ಯೆ ಎನ್ನಿಸದಿದ್ದರೂ ಕೊನೆಕೊನೆಗೆ ಕೊರಗಾಗಿ ಕಾಡುವುದಂತು ನಿಜ. ದೊರಕಿದುದರಲ್ಲೆ ತೃಪ್ತಿ ಪಟ್ಟು ಖುಷಿಯಾಗಿರಬೇಕು ಅಷ್ಟೆ...
~~~
#ಸಿಂಧು_ಭಾರ್ಗವ್. 

No comments:

Post a Comment