Saturday 9 July 2016

ಬ್ರಹ್ಮ ಕಮಲ Brahmakamala in Kannada





Brahmakalam ಬ್ರಹ್ಮ ಕಮಲ ಹೂವು:: ವಿಶೇಷ ವಾಗಿ ರಾತ್ರಿಯಲ್ಲಿ ಅರಳುವ ಈ ಹೂವಿನ ಜಾಡು ಹಿಡಿದು ಹೊರಟಾಗ
_*_*_*_*_
ಕಮಲನಾಭ ವಿಷ್ಣುವು ತನ್ನ ದೇಹದಿಂದ ಒಂದು ಬೃಹತ್ ಕಮಲದ ಹೂವನ್ನು ಹೊರಚಾಚಿದಾಗ ಅದರ ಮೇಲೆ 'ಕಮಲಭವ' ಅಂದರೆ ಸೃಷ್ಟಿಕರ್ತನಾದ ಬ್ರಹ್ಮ ಕುಳಿತಿರುತ್ತಾನೆ ಎಂಬ ನಂಬಿಕೆ ಪುರಾಣದಲ್ಲಿದೆ. ಹೀಗಾಗಿ ಈ ಹೂವಿಗೆ '' #ಬ್ರಹ್ಮಕಮಲ '' ಎನ್ನುವ ಹೆಸರು ಬಂದಿದೆ. #ರಾತ್ರಿ_ರಾಣಿ ಎಂದೂ ಕರೆಯುತ್ತಾರೆ. ಇದರ ಮೂಲ ಹಿಮಾಲಯ,  ಉತ್ತರಖಂಡದಲ್ಲಿ ಬೆಟ್ಟಗಳ ನಡುವೆ, ಪೊದೆಗಳಲ್ಲಿ ಶೀತವಾತಾವರಣಕ್ಕೆ, ವಿಶೇಷವಾಗಿ ಚಂದಿರನ ಬೆಳಕಿಗಾಗೇ ಕಾಯುತ್ತ ಅವನಂತೆಯೆ ಬೆಳದಿಂಗಳಂತೆ ಅರಳಿ ನಿಲ್ಲುವ ಹೂವು ಇದಾಗಿದೆ. ಶುಭ್ರಬಿಳಿ ಬಣ್ಣ ಮನಸ್ಸಿಗೆ ಮುದ ನೀಡುವುದಲ್ಲದೇ ಕಣ್ಣಿಗೂ ತಂಪಾಗಿಸುತ್ತದೆ. ಈಗಂತೂ ಈ ಹೂವಿನ ಸೌಂದರ್ಯಕ್ಕೆ ಮಾರುಹೋದವರೇ ಇಲ್ಲ. ಎಲ್ಲರ ಮನೆಯ‌ಪಾಟ್ಗಳಲ್ಲೂ ಉಳಿದೆಲ್ಲ ಹೂವಿನ ಗಿಡಗಳ ನಡುವೆ ಮುಖ್ಯ ಅತಿಥಿಯಾಗಿ ಕಂಗೊಳಿಸುತ್ತಿರುತ್ತದೆ.
ಉಳಿದೆಲ್ಲ ಗಿಡಗಳಂತೆ ಬೀಜದಿಂದ ವಂಶಾಭಿವೃದ್ಧಿಕಂಡರೆ ಇದು ಕಾಂಡ ಮತ್ತು ಎಲೆಯಿಂದ ಬೆಳವಣಿಗೆ ಹೊಂದುತ್ತದೆ. ಇದರ ಕಾಂಡ ಅಥವಾ ಎಲೆಯನ್ನು  ನೆಟ್ಟು ಒಂದು- ಒಂದೂವರೆ ವರುಷ ಹಾಗೆ ಬಿಡಬೇಕು. ಒಮ್ಮೆಗೆ ನೋಡಿದರೆ ಏನೂ ಬೆಳವಣಿಗೆ ಕಾಣಿಸುತ್ತಿಲ್ಲವಲ್ಲ ಎನಿಸಿದರೂ ಅದು ಮಣ್ಣಿನೊಳಗೆ ಬೇರೂರಿ ಭದ್ರ ನೆಲೆನಿಂತಿರುತ್ತದೆ.. ಆಮೇಲೆ ಕಾಂಡವೇ ಎಲೆಯಾಗಿ ಮಾರ್ಪಾಡು ಹೊಂದಿ ಮೊಗ್ಗು ಕುಳಿತುಕೊಳ್ಳುತ್ತದೆ. ಜೂನ್ - ಅಗಷ್ಟ್ ತಿಂಗಳ ನಡುವೆ ಇದು ಹೂ ಬಿಡುವುದನ್ನು ಕಾಣಬಹುದು. ಹಾಗೆ ಸೆಪ್ಟಂಬರ್ ವರೆಗೂ ಒಂದೆರಡು ಹೂವು ಅರಳುವುದೂ ಇದೆ.ಒಮ್ಮೆಗೆ ೧೦-೧೫ ಮೊಗ್ಗು ಕುಳಿತು ವಿಸ್ಮಯ ಮೂಡಿಸುತ್ತದೆ.‌ಮೊಗ್ಗು ಕೂಡ ೧೫-೨೦ ದಿನಗಳ ಕಾಲ ಬೆಳವಣಿಗೆ ಹೊಂದಿದ ಮೇಲೆಯೇ ಹೂವು ಅರಳುವುದು.. ನೇರಳೆ ಬಣ್ಣದ ತೊಟ್ಟನ್ನು ಹೊಂದಿದ್ದು ಶುಭ್ರವಾದ ಬಿಳಿ ಬಣ್ಣದಿಂದ ಕೂಡಿದ ಹೂವಿನ ನಡುವೆ ಹಳದಿ ಬಣ್ಣದ ಶಲಾಕ ಮತ್ತು ಕೇಸರವಿದೆ. ಇದು ರಾತ್ರಿ ೮-೧೨ ಗಂಟೆಗಳ ನಡುವೆ ಅರಳುತ್ತದೆ. ಆಗಿನ ಘಮವಂತು ಅಮಲೇರಿಸುವಂತೆ ಮಾಡುತ್ತದೆ . ಆದರೆ ಸೂರ್ಯೋದಯಕ್ಕೂ ಮೊದಲು ಬಾಡಿಹೋಗುವುದಂತು ಇದರ ಇನ್ನೊಂದು ವಿಶೇಷತೆ. ನಡು ರಾತ್ರಿಯಲ್ಲಿ ಯೇ ನಾವು ಅದರ ಅರಳುವಿಕೆಗೆ ಕಾದು ಕುಳಿತು ಅದರ ಅಂದವ ಆಸ್ವಾದಿಸಬೇಕು..
ಸುಮಾರು ಎರಡರಿಂದ ಮೂರು ಅಡಿ ಉದ್ದ ಬೆಳೆಯುವ ಇದರ ಎಲೆ, ಕಾಂಡ, ಹೂವು, ಬೇರು ಎಲ್ಲವೂ ಆಯುರ್ವೇದದ ಔಷಧಗಳಲ್ಲಿ ಬಳಕೆಯಾಗುತ್ತದೆ. ಬೇರನ್ನು ತೇಯ್ದು ಗಾಯಗಳಿಗೆ ಹಚ್ಚುವುದರಿಂದ ಗಾಯ ಬೇಗನೇ ಮಾಯುತ್ತದೆ. ಹೂವಿನ ದಳದಿಂದ ಸಿದ್ಧಪಡಿಸಿದ ತೈಲವನ್ನು ಮಾನಸಿಕ ಕಾಯಿಲೆಗಳಿಗೆ ಔಷಧಿಯಾಗಿ ಬಳಸುತ್ತಾರೆ. ಸೌಂದರ್ಯಕ್ಕಿಂತಲೂ ಹೆಚ್ಚಾಗಿ ಧಾರ್ಮಿಕ ಕಾರಣಕ್ಕಾಗಿ ಇದನ್ನು ಬೆಳೆಸುವುದೇ ಹೆಚ್ಚು. ಬ್ರಹ್ಮ ಕಮಲ ಯಾರ ಮನೆಯಲ್ಲಿ ಅರಳುತ್ತದೆಯೋ ಆ ಮನೆಯ ಒಡೆಯರು ಸಂಪದ್ಭರಿತರಾಗುತ್ತಾರೆ ಎನ್ನುವ ಪ್ರತೀತಿ ಇದೆ. ಇದೊಂದು ವಿಸ್ಮಯದ ಸಸ್ಯವೆನ್ನಲು ಎರಡು ಮಾತಿಲ್ಲ...

 - 😍 ಸಿಂಧು ಭಾರ್ಗವ್ 😍

No comments:

Post a Comment