Thursday 5 January 2017

ಲೇಖನ : ನಮ್ಮೂರು ನಮಗೇ ಚಂದ


Google source pic

GoogleSourcepic



ಕಥೆ: ನಮ್ಮೂರು ನಮಗೇ ಚಂದ

ಚಿಕ್ಕವರಿದ್ದಾಗ ಅಮ್ಮನ ಕೈಲಿ ಬೈಸಿಕೊಂಡದ್ದು , ಅಪ್ಪನ ಜೇಬಿನಿಂದ ಹಣ ಕದ್ದದ್ದು, ಅಪ್ಪನ ಸೈಕಲ್ಲಿನ ಮುಂದಿನ ಚಿಕ್ಕ ಸೀಟಿನಲ್ಲಿ  ಕುಳಿದು ಮೈಲಿ ಗಟ್ಟಲೆ ದೂರ ಸಾಗಿ ಸಿನೇಮಾ‌ ನೋಡಿ ಬರುತ್ತಿದ್ದದ್ದು. ಅಮ್ಮ  ಕೂಡಿಟ್ಟ ಹಣದಿಂದ ದೀಪಾವಳಿಗೆ ಹೊಸಬಟ್ಟೆ ಕೊಡಿಸಿದ್ದು.. ತೋಡಿನಲ್ಲಿ ಮೀನು, ಏಡಿ ಹಿಡಿಯುತ್ತಿದ್ದುದು, ಕೆರೆಯಲ್ಲಿ ತಾವರೆ ಕೀಳಲು ಹೋಗಿ‌  ಕೆಸರಿನಲ್ಲಿ‌ ಕಾಲು ಹೂತು ಹೋದದ್ದು. ಅಜ್ಜಿ ತೀರಿಹೋದ ರಾತ್ರಿ ಅವರನ್ನು ಸುಡುವುದ ಮರೆಮಾಚಿ ನೋಡಿದ್ದು. ನಮ್ಮ ಮನೆಯ ಹಟ್ಟಿಯಲ್ಲಿ ದಾಸಿ ಕರು ಹಾಕಿದ್ದು, ಗಿಣ್ಣು ಹಾಲು ಕುಡಿದದ್ದು. ತೋಟದ ಕೆಲಸಕ್ಕೆ ಬರುವ ರಾಧಾ, ರೇವತಿ ಜೊತೆಗೆ ನಾನು‌ ಕುಳಿತು ಚಾತಿಂಡಿ ತಿನ್ನುತ್ತಾ ಹರಟೆ ಹೊಡೆಯುತ್ತಿದುದು, ಗದ್ದೆ, ನಟ್ಟಿ  ನಡುವುದು, ಕೊಯ್ಲು, ದೀಪಾವಳಿ, ಸಂಕ್ರಾಂತಿ, ಯುಗಾದಿ ,ಹೊಸ್ತು ಹಬ್ಬ ಹೀಗೆ ಹಳ್ಳಿಗರಾದ ನಮಗೆ ಹಬ್ಬಗಳದ್ದೇ ಸಂಭ್ರಮ. ಇವೆಲ್ಲ ಸಾವಿರದ ಸವಿನೆನಪುಗಳು
**
ಹಚ್ಚಹಸುರಿನಿಂದ ಕೂಡಿರುವ ಕರಾವಳಿಯಲ್ಲಿ (ಉಡುಪಿ ಜಿಲ್ಲೆಯ ಬಾರಕೂರು) ನೀರಿಗೇನು ಬರವಿಲ್ಲ, ಎಲ್ಲಿ ಬಾವಿ ತೋಡಿದರೂ ನೀರು ಸಿಗುತ್ತದೆ. ಹಾಗಾಗಿ ಕೃಷಿ, ಹೈನುಗಾರಿಕೆಯೇ ಜೀವನಾಧಾರವಾಗಿದೆ. ತೆಂಗು, ಅಡಿಕೆ, ಬಾಳೆ, ವೀಳ್ಯದೆಲೆ, ಕಾಳುಮೆಣಸು, ಬೇಸಿಗೆಯಲ್ಲಿ ಉದ್ದು, ಹೆಸರುಕಾಳು, ಅವಡೆ ಬೆಳೆ ಬೆಳೆಯುತ್ತಾರೆ..ಅಲ್ಲದೇ ಅದರ ಜೊತೆಗೆ ಚಿಕ್ಕು, ಮಾವು, ಹಲಸು, ಪುನರ್ಪುಳಿ, ಹೆಬ್ಬಲಸು, ಕೆಸುವಿನ ಎಲೆ , ಅಮ್ಟೆಕಾಯಿ, ಹರಿವೆ ಸೊಪ್ಪು , ಬಸಲೆ ಸೊಪ್ಪು ಎಲ್ಲರ ಮನೆಯಲ್ಲಿ ಹಿತ್ತಲ‌ಮಿತ್ರನಂತೆ ಹುಲುಸಾಗಿ ಬೆಳೆದಿರುತ್ತದೆ. ಪರಊರಿನಿಂದ ಬೇಸಿಗೆ ರಜೆಗೆ ಮಕ್ಕಳು, ಮೊಮ್ಮಕ್ಕಳು ಊರಿಗೆ ಬಂದರೆ ಹೊಟ್ಟೆ ತುಂಬಾ ತಿನ್ನಲು ಹಣ್ಣುಗಳು ಯತೇಶ್ಚವಾಗಿ ಸಿಗುತ್ತದೆ. ಕುಂದಗನ್ನಡ ಮಾತನಾಡುವುದೆಂದರೆ ಪಂಚಪ್ರಾಣ. ನಮ್ಮ ಮಾತೃಭಾಷೆಯೇ ಅದಾದ ಕಾರಣ ಎಲ್ಲರೂ ನಗೆಯ ಚಟಾಕಿ, ತಮಾಷೆ ಮಾಡುತ್ತಾ ನಗುಮುಖದಿಂದಲೇ ಹೊಸಬರನ್ನು ಸ್ವಾಗತಿಸುತ್ತೇವೆ. ಎಲ್ಲಿ ಹೋದರೂ ನಮ್ಮ ಭಾಷೆಯಿಂದಲೇ ಜನ ಗುರುತಿಸುತ್ತಾರೆ ಎಂಬುದೇ ವಿಷೇಶ. ಕಡಲ ಮಕ್ಕಳಾದ ಕಾರಣ ಹೆಂಗಳೆಯರು ನೋಡಲು ಸುಂದರವಾಗಿರುತ್ತಾರೆ. ಅವರ ಅಂದಕ್ಕೆ  ಮನಸೋಲುವವರೇ ಜಾಸ್ತಿ. ಅಲ್ಲದೇ ಬಲು ಘಾಟಿ ಕೂಡ. ಹೆಣ್ಮಕ್ಕಳು ಯಾರಿಗೂ ಸ್ವಲ್ಪವೂ ಸಡಿಲ ಬಿಡದೇ ಎಲ್ಲಿ ಬೇಕಾದರೂ ಹೋಗಿ (ಕಛೇರಿಗಳಲ್ಲಿ) ತಮ್ಮ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ಬರುವಷ್ಟು ಧೈರ್ಯವಂತರು. ದುಡಿಮೆಯೇ ಜೀವಾಳ. ಯಾರೂ ಸುಖಾಸುಮ್ಮನೆ ಹರಟೆ ಹೊಡೆಯುತ್ತಾ ಕಾಲಹರಣ ಮಾಡುವುದಿಲ್ಲ. ಏನಾದರೊಂದು ಕೆಲಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ನಮ್ಮೂರು ಬಾರಕೂರು ಒಂದು ಸರ್ವಧರ್ಮಗಳ ಸಮ್ಮಿಲನವಾಗಿದೆ ಎಂದು ಹೆಮ್ಮೆಯಿಂದ ಹೇಳಬಹುದು. ಜಾತಿ,ಮತ ಧರ್ಮದ ಹಂಗು ತೊರೆದು ಎಲ್ಲರೂ ಒಂದೇ ತಾಯಿಯ ಮಕ್ಕಳಂತೆ ಸ್ನೇಹ ಸೌಹಾರ್ದತೆಯಿಂದ ಜೀವನ ನಡೆಸುತ್ತಾ ಇದ್ದಾರೆ. ಹಾಗೆ ಮುಖ್ಯವಾಗಿ ನಾಟ್ಯಕಲೆ, ಯಕ್ಷಗಾನ , ಸಾಹಿತ್ಯ,  ಭಾಷಣ, ವಿಧ್ಯಾಭ್ಯಾಸದಲ್ಲಿಯೂ, ವಿವಿಧ ಕ್ಷೇತ್ರಗಳಲ್ಲಿಯ ಉದ್ಯೋಗದಲ್ಲಿಯೂ ಮುಂಚೂಣಿಯಲ್ಲಿರುತ್ತಾರೆ. ದೇಶವಿದೇಶಗಳಲ್ಲಿ ತಮ್ಮ ಶಕ್ತಿ ಮತ್ತು ಯುಕ್ತಿ ಪ್ರದರ್ಶನದಿಂದ ಊರಿಗೆ ಹೆಸರು, ಕೀರ್ತಿ ತಂದುಕೊಟ್ಟಿದ್ದಾರೆ.

- ಸಿಂಧುಭಾರ್ಗವ್ 🍁

No comments:

Post a Comment