Sunday, 18 December 2016

ಕವಿತೆ- ಕರಾಳತೆ

ಕವಿತೆ : ಕರಾಳತೆ

ನೇಹದಲ್ಲಿ ಕಳಪೆಯಿಲ್ಲ
ಮಾತಿನಲ್ಲಿ ಮೋಸವಿಲ್ಲ..
ಮರಿಯು ಗೂಡಿನಲ್ಲಿಲ್ಲ,
ತಾಯಿಹಕ್ಕಿ ಕಾಣುತ್ತಿಲ್ಲ..

ಹದ್ದು ಬಂದ ನೆರಳಿದೆ
ಏನು ಮಾಡಿತೋ ? ಅರಿಯದೆ..
ರೆಕ್ಕೆಪುಕ್ಕ ಚದುರಿದೆ
ಕಿರುಚಿದ ದನಿ ಆವರಿಸಿದೆ..

ತಾಯಿಹಕ್ಕಿ ಬಗೆಯ ಅರಿತು
ಮುಗಿಲ ಕಡೆಗೆ ಹಾರಿತು..
ಬುವಿಯ ಆಳಕಿಳಿದು ಹುಡುಕಿ
ಮುದುಡಿ ನೊಂದು ಕುಳಿತಿತು..

ಕೊನೆಗೂ ಸಿಕ್ಕ ರಕ್ತಸಿಕ್ತ
ಕರುಳಬಳ್ಳಿಯ ದೇಹವು..
ನೆರೆದವರ ಕಂಪಿಸಿತು
ಮುಗಿಲು ಮುಟ್ಟಿದ ರೋಧನವು..

- ಸಿಂಧುಭಾರ್ಗವ್. 🌷‌ 

ಲೇಖನ- ಬಣ್ಣದ ಚಿಟ್ಟೆ ಹಿಡಿಯುತಾ


(@)(@)
ಬಣ್ಣದ ಚಿಟ್ಟೆಯ ಹಿಡಿಯುತಾ

ಮದುವೆ ಎನ್ನುವುದು ನಿಂತಿರುವುದೇ ನಂಬಿಕೆ ಮೇಲೆ. ಆದರೆ ಈಗಿನ ಇಂಟರ್ನೆಟ್ ಕಾಲದಲ್ಲಿ ಯಾರ ಮೇಲೂ ನಂಬಿಕೆ ಮೂಡಲೂ ಸಾಧ್ಯವಾಗುತ್ತಿಲ್ಲ..
**

ಹಿಂದಿನ ಕಾಲದಲ್ಲಿ "ಹುಡುಗ ಹಿಡಿದ ಕೆಲಸ ಮಾಡದೇ ಬಿಡುವವನಲ್ಲ, ಸಾಧಿಸುವ ಛಲವಿದೆ, ಒಳ್ಳೇ ಗುಣವಿದೆ. ಈಗ ಕಷ್ಟ ಇರಬಹುದು, ಮುಂದೆ ಅವನೂ ಶ್ರೀಮಂತ ಆಗ್ತಾನೆ ನೋಡು. ನಿಷ್ಟಾವಂತ, ನಂಬಿಕಸ್ಥ, ನೀನು ಇವನನ್ನ ಮದುವೆ ಆಗಿ ಒಳ್ಳೆಯ ಜೀವನ ನಡೆಸಬಹುದಮ್ಮ.. ಒಪ್ಕೋ ವರನನ್ನ..." ಎನ್ನುತ್ತಿದ್ದರು.. ಹಿರಿಯರ ಮಾತಿಗೆ ಒಪ್ಪಿ ಹುಡುಗಿಯೂ ತಲೆಯಾಡಿಸಿ ಮದುವೆ ಆಗುತ್ತಿದ್ದಳು. ಕಷ್ಟದಲ್ಲೂ ಸುಖದಲ್ಲೂ ಜೊತೆಗಿದ್ದು ಅವನ ಏಳಿಗೆಯನ್ನು ಆನಂದಿಸುತ್ತಿದ್ದಳು. ಅತ್ತೆಮಾವನ ಸೇವೆ ಮಾಡುವುದರ ಜೊತೆಗೆ ಮನೆಯಲ್ಲಿದ್ದ ಗಂಡನ ಒಡಹುಟ್ಟಿದವರನ್ನೂ ಪ್ರೀತಿಯಿಂದಲೇ ನೋಡಿಕೊಳ್ಳುತ್ತಿದ್ದಳು. ಆದರೆ ಈಗ,
ಪರವೂರಿನಲ್ಲಿ ಕೆಲಸ , ಕಾರು , ಬಂಗಲೆ, ಲಕ್ಷ ಸಂಬಳ, ಒಬ್ಬನೇ ಮಗ, ಅತ್ತೆಮಾವರಿಂದ ದೂರವಿರಬೇಕು, ತಂಗಿಯಿದ್ದರೂ ಅವಳು ಸೆಟಲ್ ಆಗಿರಬೇಕು.. ಹೀಗೆ ಎಲ್ಲವೂ ವ್ಯವಸ್ಥಿತವಾಗಿದ್ದರೆ ಆ ಹುಡುಗನ ಒಪ್ಪುವರು. ಅವನ ಗುಣವನ್ನಾಗಲೀ,‌ ಮನೆಯವರನ್ನಾಗಲಿ ನೋಡಲು ಹೋಗುವುದಿಲ್ಲ..
ಈಗಿನ ವಿದೇಶಿ ಕಂಪೆನಿಯಲ್ಲಿ ಯಾವಾಗ ತೆಗೆದು ಬಿಸಾಕುವರೋ ಗ್ಯಾರೆಂಟಿ ಇಲ್ಲ. ಮನೆಯಲ್ಲಿರುವ ವಸ್ತು ಒಡವೆ ಎಲ್ಲದರಲ್ಲಿಯೂ ಇ.ಎಮ್.ಐ ಹಣೆಪಟ್ಟಿ ಅಂಟಿಸಿಬಿಟ್ಟಿರುತ್ತಾರೆ. ಯಾವಾಗ ಏನಾಗುತ್ತದೆಯೋ ಹರಿಯೇ ಬಲ್ಲ. ಆದರೂ ಅಂತಹ ಹುಡುಗನನ್ನೇ ಹುಡುಕುವರು.. ಟೀಚರ್, ಬ್ಯಾಂಕ್ ಕೆಲಸದವರು, ಲೆಚ್ಚರ್, ಇನ್ಯಾವುದೇ  ಕೆಲಸದವರೋ ಅಥವಾ ಊರಿನಲ್ಲೇ ಉದ್ಯೋಗ ಹುಡುಕಿಕೊಂಡು ನೆಮ್ಮದಿ ಜೀವನ ನಡೆಸುತ್ತಿರುವವರೋ ಕಣ್ಣಿಗೆ ಕಾಣರು.
**
ಮದುವೆ ಎನ್ನುವುದು ನಿಂತಿರುವುದೇ ನಂಬಿಕೆ ಮೇಲೆ. ಆದರೆ ಈಗಿನ ಇಂಟರ್ನೆಟ್ ಕಾಲದಲ್ಲಿ ಯಾರ ಮೇಲೂ ನಂಬಿಕೆ ಮೂಡಲೂ ಸಾಧ್ಯವಾಗುತ್ತಿಲ್ಲ..
**
ಒಂದು ವಧು/ವರನ ಹೆಸರು ಜಾತಕ ಬಂದಿತೆಂದರೆ ಮೊದಲು ಹುಡುಕುವುದು ಮುಖಹೊತ್ತಿಗೆಯಲ್ಲಿ. ಅಲ್ಲಿ ಅವರ ಪ್ರೋಫೈಲ್, ಫೋಟೋಸ್, ಸೆಲ್ಫೀಸ್ ಅವರು ಹಾಕುವ ಪೋಸ್ಟ್ಗಳನ್ನು ನೋಡಿಯೇ ಇವರು ಯಾವ ತರಹದ ಹುಡುಗ/ಗಿ ಎಂದು ವ್ಯಾಖ್ಯಾನವನ್ನು ನೀಡುತ್ತಾರೆ. ಅಲ್ಲದೇ ಒಂದು ಹುಡುಗಿ/ಗನ ಫೋಟೋ ಕೈಗೆ ಸಿಕ್ಕಿತೆಂದರೆ ತನ್ನ ಬಳಗದ ಸ್ನೇಹಿತರಿಗೆಲ್ಲಾ ಮುಕ್ತವಾಗಿ ತೋರಿಸಲು ವಾಟ್ಸ್ಅಪ್ ಇದೆ. ಅಲ್ಲಿ ಒಬ್ಬ ಒಂದು ಕೆಟ್ಟ ಕಮೆಂಟ್ ಮಾಡಿದರೂ ಬಂದ ವರ/ಧುವನ್ನು ಬೇಡವೆಂದು ತಿರಸ್ಕರಿಸಿ ಬಿಡುತ್ತಾರೆ. ಇದರಿಂದ ಮದುವೆ ಆಗದೇ ವಯಸ್ಸು ಓಡಿಹೋಗುತ್ತಲೇ ಇರುತ್ತದೆ.
ನಾನೇ ಸನಿಹದಿಂದ ಕೇಳಿಸಿದಂತೆ, "ಅವನ ಎಫ್.ಬಿ ಫೋಟೋಸ್ ನೋಡು, ವಿಕ್ ಎಂಡ್ ಸುತ್ತೋದೇ ಕೆಲ್ಸವೇನೋ.. ಒಂದಷ್ಟು ಹುಡ್ಗೀರು ಫ್ರೈಂಡ್ಸ್  ಬೇರೆ.. ನನಗೆ ಆ ಹುಡುಗ ಬೇಡ.."
"ಅದು ಅವಳ ಬಾಯ್ ಫ್ರೈಂಡ್ ಇರಬೇಕು ಅವನು ಕಮೆಂಟ್ ಮಾಡುವ ರೀತಿ ನೋಡಿದ್ರೆ ಯಾಕೋ ಅನುಮಾನ ಬರ್ತಾ‌ ಇದೆ, ನನಗೆ ಈ ಹುಡುಗಿ ಬೇಡ.."
"ಸಾವಿರಸಾವಿರ ಸ್ನೇಹಿತರು ಸಾಲದ್ದಕ್ಕೆ ಫೋಲೋವರ್ಸ್ ಬೇರೆ, ಎಷ್ಟು ಹುಡುಗೀರ್ ಗೆ ಫ್ಲರ್ಟ್ ಮಾಡಿದ್ದಾನೋ..? ನನಗೆ ಈ ಹುಡುಗ ಬೇಡ.."
ಅದು ಸರಿ ಇಲ್ಲ ,ಇದು ಸರಿ ಇಲ್ಲ.. ಎಂದು ತಾವೇ ನಿರ್ಧಾರ ಮಾಡುವಷ್ಟು ಮುಂದುವರಿದ್ದಾರೆ.. ಅಷ್ಟಲ್ಲದೇ ಈಗೆಲ್ಲಾ ರೆಸ್ಯೂಮ್ ನೋಡಿ ಹುಡುಗನನ್ನು ಬೇಡ ಹೇಳುವ ಕಯಾಲಿ ಶುರುವಾಗಿದೆ.
"ನಾನು MBA Gold Medalist, ಅವನು ಇಂಜಿನಿಯರಿಂಗ್ ಮಾಡಿದ್ದು, ಮ್ಯಾಚ್ ಆಗಲ್ಲ.." , "ಅವನು MCom  ಮಾಡಿದ್ದು ಬೇಡ, ನಾನು MBA ಮಾಡಿದವಳು.." , "ಅವನಿಗೆ ಒಳ್ಳೆ ಕಂಪೇನಿಲಿ ಜಾಬ್ ಇಲ್ಲ.. ಎರಡು ಕಂಪೆನಿ ಬದಲಿಸಿದ್ದಾನೆ, ಸಂಬಳವೂ ಕಡಿಮೆ ಬೇಡ.." , ಅವಳು ಮದುವೆ ಆದ ಮೇಲೆ ಕೆಲ್ಸ ಬಿಡೋದಾದರೆ ಓಕೆ, ಇಲ್ಲಾಂದ್ರೆ ಬೇಡ.." , "ಅವನಿಗೆ ಸ್ವಂತ ವೆಹಿಕಲ್ ಇಲ್ಲ, ಮನೆ ಇಲ್ಲ ಆಫ಼ೀಸ್ ಕ್ಯಾಬ್ ಲಿ ಹೋಗಿ ಬರ್ತಾನೆ, ಯಾರ್ದೋ ರೂಮಲ್ಲಿ ಇರ್ತಾನಂತೆ, ಬೇಡಾ ನನಗೆ.." ಹೀಗೆ.... ಬೇಡ ಎನ್ನಲು ಹುಡುಕುವ ಪಟ್ಟಿ ಬೆಳೆಯುತ್ತಲೆ ಇರುತ್ತದೆ..ಇದೆಲ್ಲಾ ಸುಳ್ಳು ಎಂದು ಭಾವಿಸುವುದೇ ಬೇಡ, ಕಣ್ಣಾರೆ ನೋಡಿದ್ದಕ್ಕೆ ಬರೆಯುತ್ತಿರುವುದು. ಯಾಕೆ ಹೀಗೆ ? ಹಿರಿಯರು ಇರುವುದಾದರೋ ಯಾಕೆ? ಅವರ ಮಾತಿಗೆ ಬೆಲೆ ಇಲ್ಲವೇ? ಅಷ್ಟಕ್ಕೂ ನಂಬಿಕೆಯೇ ಇಲ್ಲದ ಮೇಲೆ ಮದುವೆ ಆಗಿ ಇವರು ಜೀವನ ನಡೆಸುವುದಾದರೂ  ಹೇಗೆ..?? ನಾನೂ ದುಡಿಯುವೆ, ನಾನೂ ಸಬಲೆ ಎಂದು ಕೈತುಂಬಾ ಸಂಬಳ ಉದ್ಯೋಗ ಕ್ಷೇತ್ರದಲ್ಲಿ ಮಿಂಚುವುದೇ ಮುಖ್ಯವಾಗುತ್ತದೆ.. ಸಂಸಾರ ಸಸಾರವಾಗುತ್ತದೆ.. ಹೊಂದಾಣಿಕೆ, ತ್ಯಾಗಕ್ಕೆ ಜಾಗವೇ ಇರುವುದಿಲ್ಲ, ಮಕ್ಕಳಿರುವುದೇ ಅನುಮಾನ, ಹುಟ್ಟಿದ ಮಕ್ಕಳೂ ಅನಾಥರಾಗುತ್ತಾರೆ. ಎನಿಸಿದರೆ ಭಯವಾಗುತ್ತದೆ. ಏನೋ ಪಡೆದ ಸಂತಸದಲ್ಲಿ ಮುಖ್ಯವಾಗಿ ಬೇಕಾದುದನ್ನ ಕಳೆದುಕೊಳ್ಳುತ್ತಾರೆ..

- ಸಿಂಧುಭಾರ್ಗವ್ 

ಲೇಖನ- ನೀನೊಂದು ಮುಗಿಯದ ಮೌನ

(@)(@)(@)


(@()@)
ನೀನೊಂದು ಮುಗಿಯದ ಮೌನ,
ನಾ ಹೇಗೆ ತಲುಪಲಿ‌ ನಿನ್ನ..
ನೀನೊಂದು ಕಡಲಿನ ಧ್ಯಾನ
ನಾ ಹೇಗೆ ಬೆರೆಯಲಿ ನಿನ್ನ..

ನಿಜ ನೀ ನನಗೆ ಅರ್ಥವಾಗುತ್ತಲೇ ಇಲ್ಲ. ನೀನು ಹೀಗೇ.. ಎಂದು ಕೊಂಡರೆ ಹಾಗಿರುವುದಿಲ್ಲ. ಹೀಗಲ್ಲ ಎಂದೆನಿಸಿದರೆ ಹಾಗೆ ಬದಲಾಗಿರುತ್ತೀ. ಹೀಗೆ ಹಾಗೇ ಅಯ್ಯೋ..!! ನನ್ನ ಮನಸ್ಸನ್ನು ಗೊಂದಲದ ಗೂಡಾಗಿಸಿ ಬಿಟ್ಟೆ  ನೋಡು. ನಿನ್ನ ಜೊತೆ ಮಾತನಾಡಬೇಕು ನಾಲ್ಕು ಹೆಜ್ಜೆ ಕೈಕೈ ಹಿಡಿದು ನಡೆಯಬೇಕು, ನಿನ್ನ ಪ್ರೀತಿಯ ನಿನ್ನ ಬಾಯಿಯಿಂದಲೇ ಕೇಳಿಸಿಕೊಳ್ಳಬೇಕು, ನಿನ್ನ ತರಲೆ,ತುಂಟತನವನ್ನು ಅನುಭವಿಸಬೇಕು.. ಏನೆಲ್ಲ ಕನಸುಗಳು. ನಿನ್ನ ನೋಡಿದ ಮೊದಲ ದಿನದಿಂದ ಇಂದಿನ ವರೆಗೂ ಕನಸುಗಳ ಪಟ್ಟಿ ಬೆಳೆಯುತ್ತಲೇ ಇದೆ.ಆದರೆ ನೀನು ಮಾತ್ರ ಕೈಗೆ ಸಿಗದ ಅಂಬರಕೆ ಚಾಚಿದ ಕುಸುಮವಾದೆ. ಹುಣ್ಣಿಮೆಗೆ ಬಂದು ಮನ ತಣಿಸುವ ಅಮವಾಸ್ಯೆಗೆ ಮಾಯವಾಗುವ ಚಂದಿರನಾದೆ. ನನ್ನ ಪ್ರೀತಿಯ ಪರಿಯ ಹೇಳಿಕೊಳ್ಳಲು ಆತುರವಿದೆ.. ನಿನ್ನೊಂದಿಗೆ ಬೆರೆಯಲು ಕಾತುರವಿದೆ. ಆದರೆ ನಿನಗೆ ಸಮಯವೇ ಇಲ್ಲ. ಅದೊಂದೇ ಕಾರಣ ನೀನನಗೆ ನೀಡುವುದು.. ನಿನ್ನ ಮೇಲೆ ರೇಗಾಡಬೇಕು ಎಂದೆನಿಸುತ್ತದೆ.. ನೀ ಸನಿಹವಿಲ್ಲ. ನನ್ನ ಕೋಪ ತಣಿಸಲು ನೀ ತೊಡೆಯ ಮೇಲೆ ಮಲಗಿಸಿಕೊಂಡು ತಲೆ ಸವರಬೇಕು ಎಂದೆನಿಸುತ್ತದೆ, ನೀ ಸನಿಹವಿಲ್ಲ.. ದೂರದೂರದಲೇ ವಿರಹಬೇಗೆಯಿಂದ ಸುಡುತಿದೆ ಒಡಲು. ಪ್ರೀತಿ ಎಂದರೆ ಹೀಗೇನಾ.. ಎಲ್ಲರೂ ಪಾರ್ಕು, ಬೀಚು ಎಂದು ಸುತ್ತುತ್ತಾರೆ? ನಮಗೇಕೆ ಸಾಧ್ಯವಿಲ್ಲ. ಭ್ರಮೆಯೋ ಕಲ್ಪನಾಲೋಕದಲ್ಲೋ ಸ್ವಚ್ಛಂದವಾಗಿ ವಿಹರಿಸುತ್ತಿರುತ್ತಾರೆ, ನಮಗೇಕೆ ಸಾಧ್ಯವಾಗುತ್ತಿಲ್ಲ.. ನಾನೊಂದು ಕಡೆ, ನೀ'ನೊಂದು' ಕಡೆ ಜೋಡಿ ಹಕ್ಕಿಗಳು ಒಂದೇ ಗೂಡಿನಲಿ ಜೊತೆಯಾಗುವುದಿ ಯಾವಾಗ? ಬೇಡ ಅದೆಲ್ಲ ಬೇಡ ಬಿಡು. ಸಾಧ್ಯವಾಗದ ಕನಸು. ಕಲ್ಪನೆಗಳಿಗೆ ಜೀವ ನೀಡಲು ನಮ್ಮಿಬ್ಬರಿಗೂ ಸಾಧ್ಯವಿಲ್ಲ. ಆದರೆ ದಿನಕ್ಕೆ ಒಮ್ಮೆಯಾದರೂ ಮಾತನಾಡಲು ಏನಾಗಬೇಕು? ಅದೂ ನಿನ್ನಿಂದ ಸಾಧ್ಯವಿಲ್ಲವೇ? ನೀ ಹೀಗೆ ದೂರದೂರ ಸರಿದರೆ ನನಗೇಕೋ ಅಂಜಿಕೆ , 'ಅಳು'ಕು ಎಲ್ಲವೂ. ಮನಸ್ಸು ನೀರಿನಲ್ಲಿ ಅದ್ದಿತೆಗೆದ ಸ್ಪಾಂಜಿನಂತೆ ಆಗುತ್ತದೆ. ಈ ಒದ್ದಾಟ ನನ್ನನೇ ಕುಗ್ಗಿಸುತ್ತಿದೆ. ಬೇರೆ ಯಾರೂ ಬೇಡ ಅನ್ನಿಸುತ್ತಿದೆ. ಮನದಲ್ಲಿ ಇಷ್ಟು ನೋವ ಇಟ್ಟುಕೊಂಡು ಈ ಪ್ರಪಂಚದೆದುರು ನಗುವಿನ ಮುಖವಾಡ ತೊಟ್ಟು ಜೀವಿಸಲು ಇಷ್ಟವಾಗುತ್ತಿಲ್ಲ. ಎಲ್ಲರಿಂದ ಒಂದಷ್ಟು ದೂರವಿರುವ ಆಸೆ. ಅದು ನನ್ನಿಂದ ಮಾತ್ರ ಸಾಧ್ಯ. ನೀ ಸುಖಿಯಾಗಿರು. ಬಿಡುವಾದರೆ ಮಾತನಾಡಬೇಕನಿಸಿದರೆ ತುಟಿಗೆ ಹಾಕಿದ ಬೀಗ ತೆಗಿ.. ಎಲ್ಲರಿಗೂ ಸಮಯದ ಅಭಾವವಿರುತ್ತದೆ. ಆದರೆ ಪ್ರೀತಿಪಾತ್ರರಿಗೆಂದೇ ನಮ್ಮವರಿಗೆಂದೇ ಹೊಂದಿಸಿಕೊಳ್ಳುವುದು ಒಂದು ಕಲೆ. ಕಾರಣ ಅವರು ನಮಗಾಗೇ ಉಸಿರಾಡುತ್ತಿರುತ್ತಾರೆ.. ನಮ್ಮ ಒಳಿತಿಗಾಗೇ ಬೇಡುತ್ತಿರುತ್ತಾರೆ. ನಮಗಾಗೇ ಕೊರಗುತ್ತಾ ಸೊರಗುತ್ತಿರುತ್ತಾರೆ. ಇದನ್ನ ಅರ್ಥಮಾಡಿಕೊಳ್ಳುವುದು ನಮಗೇ ಬಿಟ್ಟಿದ್ದು..

- ಸಿಂಧುಭಾರ್ಗವ್.

Wednesday, 9 November 2016

My Father. ತಂದೆ ಕವಿತೆ

******


ಮಗುವಾಗಿದೆಯಲ್ಲಪ್ಪ ನಿನ್ನ ಮನಸ್ಸೀಗ.
ನಾನೂ ಮಗುವೇ ಇನ್ನೂ ನಿನಗೀಗ..

ನನ್ನ ಕಣ್ಣಲ್ಲಿ ಕಣ್ಣೀರ ನೋಡಲು ಬಯಸದವ ನೀನು.
ನಿನ್ನ ಪ್ರೀತಿಯ ತೋರಿಸಲು ಹೆಣಗಾಡಿದವ ನೀನು..

ಅಷ್ಟು ದಡ್ಡಿನಾನಲ್ಲಪ್ಪ..
ನನ್ನ ಉಸಿರಿನಲಿ ನಿನ್ನ ಪಾಲಿದೆ,
ನಿನ್ನ ರಕುತವೇ ನನ್ನಲ್ಲೂ ಹರಿಯುತಿದೆ..

ಕೆಟ್ಟ ದುನಿಯಾವಿದು ಅಪ್ಪ,
ನೀ ಗಿಣಿಯಂತೆ ಸಾಕಿದ್ದೆ..
ನಾ ಹಾರಾಡಲು ಬಯಸಿದ್ದೆ..
ಕಷ್ಟ ಕಂಡೆ, ನೋವನುಂಡೆ
ನಿನ್ನಲ್ಲಿ ಹೇಳಲು ಭಯಗೊಂಡೆ..

ನಿನ್ನ ಮಾನ, ಸಮ್ಮಾನ ನನ್ನ ಕೈಯಲ್ಲಿದೆ ಅಪ್ಪ..
ಮದುವೆ ಆಯ್ತು ಹೊಸದಾದ ಮನೆಯ ದೀಪಬೆಳಗಿದೆ..

ನಾವು ಹುಟ್ಟಿದಾಗ ನಿನಗೆ ಜವಾಬ್ದಾರಿ ಜಾಸ್ತಿ ಇತ್ತು ,
ಹಗಲು ರಾತ್ರಿಯ ಲೆಕ್ಕ ತಪ್ಪುತಿತ್ತು.

ಕಂದಮ್ಮಗಳ  ದಿನಕ್ಕೆ ಒಮ್ಮೆ  ನೋಡುವುದೂ ಕಷ್ಟವಾಗುತ್ತಿತ್ತು.
ಒಳಗೊಳಗೆ ಅಳುತಲಿದ್ದ ಆ ಮೊಗವೀಗ ಕಣ್ಣೆದುರು ಬಂತು..

ಅರಿಯುವೆನು ಪಿತನೇ..
ನಿನ್ನ ಪ್ರೀತಿಯ ನಿನ್ನ ಕಂಗಳಲ್ಲೇ ನಾ ನೋಡಿದ್ದೆ..
ನಿನ್ನ ಕಾಳಜಿಯನ್ನು ತಾಯಿಯಲ್ಲಿ ನೋಡಿದ್ದೆ..

ನನಗೂ ನೂರಾರು ಕನಸುಗಳ ಕಟ್ಟಿಕೊಳ್ಳಲು ಹಾದಿತೋರಿಸಿದೆ.
ಇಳಿವಯಸ್ಸು ,ಮಗುವಿನ ಮನಸ್ಸು
ವಿಶ್ರಾಂತಿ ಬೇಕಪ್ಪಾ..

ಸ್ವಲ್ಪ ಬಾ ಇಲ್ಲಿ ಕುಳಿತುಕೋ..
ನನ್ನ ಮಗನ ಜೊತೆ ಹರಟೆ ಹೊಡಿ ಆಟವಾಡು ಮತ್ತೆ ಮಗುವಾಗು..
ಮುಸ್ಸಂಜೆ ಹೊಂಗಿರಣ ಮನಕ್ಕಿಳಿದಿದೆ ತಾನೆ..

ಅಷ್ಟೇ ಸಾಕು..
ಇನ್ನೇನು ನಾನಿನಗೆ ಕೊಡಲು ಸಾಧ್ಯ..
ನಿನ್ನ ನೆಮ್ಮದಿಯ, ನಗುಮುಖ ನೋಡುವುದೇ ನನ್ನ ಭಾಗ್ಯ..

- ಶ್ರೀಮತಿ ಸಿಂಧು ಭಾರ್ಗವ್. 🌷

Friday, 28 October 2016

Kavite- Deepavali

ನನ್ನೆಲ್ಲಾ ಸಹೃದಯೀ ಮಿತ್ರರಿಗೆ ದೀಪಾವಳಿಯ ಹಾರ್ದಿಕ ಶುಭಾಶಯಗಳು.. ಈ ದೀಪಾವಳಿಯೂ ನಿಮ್ಮೆಲ್ಲರ ಮನೆಮನಗಳನ್ನು ಬೆಳಗಲಿ..
ಅಂಧಕಾರವನ್ನು - ಮೌಢ್ಯವನ್ನು  ಕಳೆದು ಹೊರಜಗತ್ತನ್ನು ಪ್ರೀತಿಯಿಂದ ನೋಡುವ ಹಾಗೆ ಆಗಲಿ..
ಶ್ರೀಲಕುಮಿ- ಶ್ರೀಹರಿಯ ಕೃಪೆ ಸದಾ ನಿಮಗೊಲಿಯಲಿ..

~ ಶ್ರೀಮತಿ ಸಿಂಧುಭಾರ್ಗವ್ ಮತ್ತು ಮನೆಯವರು..
~~~~~~~~~~~~~~~~~~~~~

)(@)(


ದೀಪಾವಳಿ ಪರ್ಬ ಮತ್ತೊಮ್ಮೆ ಬಂದಿದೆ..
ಮನೆ-ಮನಗಳಲಿ ಬೆಳಕ ತಂದಿದೆ..

ಎಣ್ಣೆ ಹಚ್ಚಲು ಗರಿಕೆಹುಲ್ಲು ಕಾದಿದೆ..
ಅಲಂಕಾರಗೊಂಡು ಹರಿಯು ನಿಂತಿದೆ..

ದೇವರಿಗೆ ತುಪ್ಪದ ದೀಪ..
ನಡುನಡುವೆ ತುಂಬಿದ ದೂಪ..

ಹೂವಿನ ಹಾರಗಳದ್ದೇ ಹಾಡು..
ಪುಟಾಣಿಗಳ ಹೊಸಬಟ್ಟೆ ನೋಡು..

ವಿವಿಧ ಖಾದ್ಯ ನೈವೇದ್ಯಕ್ಕೆ...
ನೆಂಟರು ಬರುವರು ಭೋಜನಕ್ಕೆ..

ಬಿಡುವಿರದ ಕೆಲಸ ಅಮ್ಮನಿಗೆ..
ಹೊರಗಿನ ಕೆಲಸಗಳು ಅಪ್ಪನಿಗೆ..

ಅಣ್ಣ ತಮ್ಮಂದಿರ ಪಟಾಕಿ..
ಅಕ್ಕತಂಗಿಯರ ಮಾತಿನ ಚಟಾಕಿ..

ಹಿರಿಯರ ನೆನಪಿಸುವ ಆಕಾಶಬುಟ್ಟಿ..
ಗೋಪೂಜೆಗೆ ಕಾಯುತಲಿದೆ ಹಟ್ಟಿ..

ರೈತರಿಗೆ ಬಿಡುವು ಹಸುಗಳಿಗೆ ಮೇವು
ಊರಿಡೀ ತುಂಬಿದೆ ಸಂತಸವು..

~ ಸಿಂಧುಭಾರ್ಗವ್. ಬೆಂಗಳೂರು
((ಹರಿ - ದೊಡ್ಡ ಪಾತ್ರೆ, ಹಟ್ಟಿ - ಕೊಟ್ಟಿಗೆ))

Happy Deepavali 2016

)(@)(

#ದೀಪಾವಳಿ ಎಂದರೆ ನೆನಪಾಗುವುದು
ಪಕ್ಕದ ಶೆಟ್ಟರ ಮನೆಯ  ಶ್ರೀಮಂತಿಕೆ,
ಆಗಸದೆತ್ತರಕ್ಕೆ ಹಾರಿ ಚಿತ್ತಾರ ಮೂಡಿಸುವ ರಾಕೇಟ್, 
ನಮ್ಮ ಮನೆಯಲಿ ನಗುತಲಿದ್ದ ಪುಟ್ಟ ಹಣತೆ,  ಹಿರಿಯರ ನೆನಪಿಸುವ ಆಕಾಶಬುಟ್ಟಿ, ಬಿಡಿ ಪಟಾಕಿ ಕಲ್ಲಿನಿಂದ ಜಜ್ಜುತ್ತಿದ್ದ, ಪಿಸ್ತೂಲ್ ತೋರಿಸಿ ಹೆದರಿಸುತ್ತಿದ್ದ ನೆರೆಮನೆ ಮಕ್ಕಳು,
ಎಲ್ಲಿ ಯಾವಾಗ ಪಟಾಕಿ ಸಿಡಿಯುವುದೋ ಎಂಬ ಭಯದ ಜೊತೆಜೊತೆಗೆ ಪೇಚಿಗೆ ಸಿಲುಕಿಸುವ ತರಲೆ ಮಕ್ಕಳು, 
ಅಮ್ಮನ ಬಿಡುವಿರದ ಕೆಲಸ,
ಅಪ್ಪನ ಗಡಿಬಿಡಿ ತಕಪಕ ಕುಣಿತ,
ಅಕ್ಕ-ಅಣ್ಣನ ಲೆಕ್ಕದ ನಕ್ಷತ್ರಕಡ್ಡಿ ಕದಿಯುವುದು,
ಕೈಸುಟ್ಟುಕೊಂಡು ವಿಪರೀತ ನೋವಿನಿಂದ ಅಳುವುದು,

#ದೀಪಾವಳಿ ಎಂದರೆ ನೆನಪಾಗುವುದು,
ಎಣ್ಣೆ ಸ್ನಾನ, ಗೋಪೂಜೆ, ಲಕ್ಷ್ಮಿ ಪೂಜೆ, ತುಳಸೀಪೂಜೆ, ಗದ್ದೆಗೂ, ಕಟಾವು ಮಾಡಿ ತಂದ ಬತ್ತದ ರಾಶಿಗೂ ಪೂಜೆ ಮಾಡುವುದು.

#ದೀಪಾವಳಿ ಎಂದರೆ,
ಹೊಸ ಬಟ್ಟೆ , ಪಾಯಸ, ಸಿಹಿಯೂಟ, ಗೆಜ್ಜೆಸದ್ದು ,ಬಳೆಯ ಸಂಗೀತ ರಂಗೋಲಿ, ಭಜನೆ,ಭಕ್ತಿ, ಮದುವೆಯಾದ ಮೊದಲ ವರುಷ ಅಳಿಯ ಬರುವ ಸಡಗರ,  ಕತ್ತಲೆ ಕವಿದ ಪುಟ್ಟ ಗೂಡಿಗೂ ಹಣತೆ ಹಚ್ಚಿ ದೀಪ ತೋರಿಸಿ ಬೆಳಕು ತುಂಬುವ ಸಮಯ.#ಬಲಿಚಕ್ರವರ್ತಿ ಬಂದು ಈ ಸಂಭ್ರಮ ನೋಡಿ ಎಲ್ಲಾ ರೀತಿಯಲ್ಲಿಯೂ ಸಂತುಷ್ಟನಾಗಿ ಆಶೀರ್ವದಿಸಿ ಮುಂದೆ ಸಾಗುವ ಹಬ್ಬ..

#ದೀಪಾವಳಿ ಎಲ್ಲರಿಗೂ ಶುಭವನ್ನೇ ತರಲಿ. 
ಕತ್ತಲೆ ಎಂದರೆ ಅಂಧಕಾರ ಎಲ್ಲಾ ರೀತಿಯ ಅಂಧಕಾರ ಕಳೆದು ಜನರ ಮನಸ್ಸಿನಲ್ಲಿ ಹೊಂಗಿರಣ ಮೂಡಲಿ. 
ಒಳ್ಳೆಯ ಮನಸ್ಸಿನಿಂದ ಹೊರ ಜಗತ್ತನ್ನು ನೋಡುವಂತಾಗಲಿ..ನಗುನಗುತಾ ಬಾಳಿರಿ..

- ಶ್ರೀಮತಿ ಸಿಂಧುಭಾರ್ಗವ್. ಬೆಂಗಳೂರು

ಕವನ ದೀಪಾವಳಿಯ ಶುಭಾಶಯಗಳು

)(@)(


ಜೀವನದ ಸಂತೆಯಲಿ,
ಬೆಳಕಿನ ಸಂಭ್ರಮ..
ಒಂದೊಂದು ಹಣತೆಯಲು
ಭಾವ ಅನುಪಮ..

ದೀಪ ಹಚ್ಚಿ ಬನ್ನಿ, ಮನೆಯ ಬೆಳಗಿಸಿ..
ಮನದ ಮೂಲೆಮೂಲೆಗೂ ಬೆಳಕ ಹಾಯಿಸಿ..

ಅಲ್ಲೊಬ್ಬ ದೇಶ ಕಾಯುತಲಿರುವ,
ಅವನ ನೆನಪಿಸುತ ದೀಪ ಹಚ್ಚುವ..

ಊಟವಿಲ್ಲದೇ ಬಡವ ನರಳುತಿರುವ..
ನಮ್ಮ ಪಾಲಿನ ಸಿಹಿಯ ಅವಗೆ ನೀಡುವ..

ಕೋಪ ಮಾಡುವ ಜೀವಕೆ ತಾಳ್ಮೆ ತುಂಬುವ..
ಕೊಲ್ಲು ಎನ್ನುವ ಕೈಗೆ ಹೂವ ನೀಡುವ..

ಪಂಜರದ ಪಕ್ಷಿಯ ಹಾರಿಬಿಡುವಾ..
ದವಸ ನೀಡುವ, ಪ್ರೀತಿ ಮಂತ್ರ ಸಾರುವ..

ಸಿರಿತನದ ಸೌಂದರ್ಯ ಕಣ್ಣ ತುಂಬಿಸಿಕೊ.
ತನ್ನ ಪಾಲಿನ ತುತ್ತು ತನಗೆ ಎಂದುಕೊ..

ಬೇಧಭಾವ ಮರೆತು ಹಣತೆ ಬೆಳಗಿಸಿ..
ದೀಪಾವಳಿಯ ಖುಷಿಯಿಂದ ಆಚರಿಸಿ..


ಸಿಂಧುಭಾರ್ಗವ್. ಬೆಂಗಳೂರು

ಕವನ ನಿನ್ನ ಕಂಡಾಗಲೆಲ್ಲ....

ನಿನ್ನ ಕಂಡಾಗೆಲ್ಲ ನೆನಪು ಮತ್ತೆ ಕಾಡುವುದು..
ದಿನವ ದೂಡಬೇಕಲ್ಲ ಮರೆತಂತೆ ನಟಿಸುವುದು..

ಮಾತು ಮೂಕವಾಗಿದೆ..
ಕಣ್ಣಸನ್ನೆ ಮರೆತಂತಿದೆ..
ನೋಟ ಓರೆಯಾಗಿದೆ..
ಹಾಡು ಹುಟ್ಟಿಕೊಂಡಿದೆ..

ಕಣ್ಣಹನಿಯೂ ಸದ್ದಿಲ್ಲದೇ ಉರುಳುತಿದೆ..
ಎದೆಬಡಿತವು ಬಿಡದೇ ಬಡಬಡಿಸುತಿದೆ..

ವಿರಹದ ಗೀತೆ ಮೂಡಿದೆ..
ಮನವು ಮೌನವಾಗಿದೆ..
ಪದಗಳ ಉಸಿರು ಕಟ್ಟಿದೆ..
ಲೇಖನಿ ಅರ್ಧಕ್ಕೆ ನಿಂತಿದೆ..

ನೀನು ಬಂದು ಗೋರಿ ಮೇಲೆ ಹೂವು ಇಡಬೇಕಿದೆ...

ಸಿಂಧುಭಾರ್ಗವ್. ಬೆಂಗಳೂರು

Bayake baduku

(@)ಬಯಕೆ ಮತ್ತು ಬದುಕು
ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ...

(@)ಬಯಕೆ ಕೊನೆಗೊಳ್ಳುವುದು ಬದುಕು ಕೊನೆಗೊಂಡಾಗಲೇ...

(@)ಬಯಕೆಯನ್ನು ಬಂಧಿಸಬೇಕೆಂಬುದೂ ಕೂಡ ಒಂದು ರೀತಿಯ ಬಯಕೆಯೇ...

(@)ನಮ್ಮೆಲ್ಲ ಬಯಕೆಗಳು ಈಡೇರಿಸಲೆಂದೆ ಬದುಕು  ಸವೆಸುವುದು...

(@)ನಮ್ಮ ಬದುಕಿನಲಿ ಬಯಕೆಗಳೇ ಇಲ್ಲದಿದ್ದರೆ ಹಾದಿ ಮುಂದೆ ಸಾಗದು...

(ಗಮನಿಸಿ ಇಲ್ಲಿ ಬಯಕೆ= ಆಸೆ,ಅಭಿಲಾಷೆ,ಆಸಕ್ತಿ ಹೀಗೆ ಅನೇಕ ಅರ್ಥವನ್ನು ಕೊಡುತ್ತದೆ.)

-ಸಿಂಧುಭಾರ್ಗವ್ 😍

Wednesday, 19 October 2016

ಕವನ - ನಿನ್ನ ಒಂದು ಮಾತೇ ಸಾಕು

ನಿನ್ನ ಒಂದು ಮಾತೇ ಸಾಕು
ನನ್ನ ಮೌನ ಮುರಿಯಲು..
ನಿನ್ನ ಒಂದು ನೋಟ ಸಾಕು
ನನ್ನ ಮೈಯ ತಣಿಸಲು..

ನನ್ನ ನಿನ್ನ ಪ್ರೀತಿಯಲ್ಲಿ
ಕವನಗಳದೇ ಹಾವಳಿ..
ಸನಿಹ ವಿರಹವೆರಡು ಈಗ
ಪ್ರೀತಿಯಲಿ ಮಾಮೂಲಿ..

ಹೂವ ಹಾಸಿ ಕಾಯಿತಿರುವೆ
ನಿನ್ನ ಒಂದು ಬರುವಿಗೆ..
ಕಾದುಕುಳಿತು ಸಮಯ ಕಳೆದೆ
ನಿನ್ನ ಮತ್ತೆ ನೆನೆಯುತ..

ಹರುಷಗೊಂಡ ರವಿಯು ತಾನು
ನನ್ನ ನೋಡಿ ಕೆಂಪಾದನು..
ಪಡುಗಡಲ ಅಲೆಯಲಿ ಕಲೆತು
ಮುಳುಗಲು ಸಜ್ಜಾದನು..

ಕೈಯ ರಂಗವಲ್ಲಿ ಈಗ
ಘಮವ ಹೊತ್ತು ಸಾಗಿದೆ..
ಯಾರ ಬಳಿಗೆ ಕೇಳಿದಾಗ
 ನಿನ್ನ ಹೆಸರ ಹೇಳಿದೆ..

ಮದುವೆ ದಿಬ್ಬಣವ ಕಂಡು
ಮನವು ಹಕ್ಕಿಯಾಗಿದೆ..
ನಾಳಿನ ಜೀವನವ ಎನಿಸಿ
 ಹಣೆಯ ಬಿಂದಿ ನಕ್ಕಿದೆ..

- ಸಿಂಧುಭಾರ್ಗವ್