Wednesday 19 October 2016

ಲೇಖನ- ಸಾಹಿತ್ಯ ಕ್ಷೇತ್ರ

               ಸಾಹಿತ್ಯ ಕ್ಷೇತ್ರ ಅನ್ನುವಂತದ್ದು ಬಹುದೊಡ್ಡ ಸಾಗರದಂತೆ.. ಅದರ ಆಳದಲ್ಲಿರುವ ಪದಭಂಡಾರಗಳೆಂಬ ಮುತ್ತುರತ್ನಗಳನ್ನು ಹುಡುಕಿ ತರುವುದು ಅಷ್ಟು ಸುಲಭದ ಮಾತಲ್ಲ..ಸತತ ಪರಿಶ್ರಮ, ಕೃಷಿ, ಅಗತ್ಯ.. ಅದೊಂದು ರೀತಿಯ ತಪಸ್ಸು.. ಈಗೀಗ ಮಾಧ್ಯಮಗಳ ಸಂಖ್ಯೆ ಅತಿಯಾಗಿದೆ.. ಸಾಮಾಜಿಕ ಜಾಲತಾಣಗಳದ್ದೇ ಮಹಿಮೆ. ನಾವು ಬರೆದ ಬರಹಗಳು ಪತ್ರಿಕೆಗಳಿಗೆ , ಮಾಸಪತ್ರಿಕೆಗಳಿಗೆ ಕಳುಹಿಸಬೇಕೆಂದಿಲ್ಲ. ವಾಟ್ಸ್ಅಪ್ / ಫೇಸ್ ಬುಕ್ ಗಳಲ್ಲಿ ಎರಡೆರಡು ಸಾಲು ಬರೆದು  ಪೋಸ್ಟ್ ಮಾಡಿದರೂ ಲೈಕ್/ಕಮೆಂಟ್ಸ್ ಗಳು ಬರುತ್ತವೆ.. ಕೆಲವರಿಗೆ ಅಷ್ಟೆ ಸಾಕು ಎಂಬ ತೃಪ್ತಿ.. ಅದು ಒಳ್ಳೆಯದಲ್ಲ.. ನಮ್ಮ ಬರಹ ಅಲ್ಲಿಗೆ ಮಾತ್ರ ಸೀಮಿತವಾಗಬಾರದು. ಇನ್ನು ಕೆಲವರಿದ್ದಾರೆ, ನಾಲ್ಕು ಸಾಲು ಬರೆದು ಹಾಕಿದ ಕೂಡಲೇ ಅವನು ಕವಿಯಾಗಲು ಅರ್ಹನಾಗಿರುವುದಿಲ್ಲ.. ಒಂದಷ್ಟು ಜನ ಹೊಗಳುವರು ತನ್ನದೇ ಅಭಿಮಾನ ಬಳಗವಿದೆ ಎನ್ನುವ ಅಹಂ ತಲೆಗೇರಿಸಿಕೊಂಡು ತಾನೊಬ್ಬ ಕವಿಯೆಂದು ತಿರುಗಾಡುವುದು ಈಗೀಗ ಸಾಮಾನ್ಯವಾಗಿಬಿಟ್ಟಿದೆ.. ಅದಕ್ಕೆ ಮೂಲಕಾರಣ ಅಂಗೈಯಲ್ಲಿ ಮನೆಮಾಡಿರುವ ಫೇಸ್ಬುಕ್/ವಾಟ್ಸ್ಅಪ್. ವ
ಮೊಟ್ಟಮೊದಲಾಗಿ ಮನದಲ್ಲಿ ವಿನಯತೆ ಮತ್ತು ವಿಧೇಯತೆ ಇರಬೇಕು.. ಇಂದು ನಿಮ್ಮನ್ನು ಹೊಗಳುವವರು ನಾಳೆ ಇನ್ನು ಸ್ವಲ್ಪ ಚೆಂದವಾಗಿ ಬರೆಯುವವನ ಸ್ನೇಹ ಸಿಕ್ಕಿತೆಂದು ಅಲ್ಲಿಗೆ ಹಾರಿಬಿಡುವರು.. ಅವರನ್ನು ಹೊಗಳಲು ಶುರುಮಾಡುವರು. ನಿಮಗೆ ಬರುವ ಲೈಕ್/ ಕಮೆಂಟ್ ಗಳು ಕಡಿಮೆಯಾಗತೊಡಗಿದಾಗಲೇ ಅರಿವಾಗುವುದು, ಮನಸ್ಸು ಮಂಕಾಗುವುದು.. ತಲೆಕೆಡಿಸಿಕೊಳ್ಳುವುದು.. ದಡದಲ್ಲಿಯೇ ಕುಳಿತು ಸಮುದ್ರದ ಅಲೆಗಳಲಿ ತೆಲಿದಂತೆ ಕನಸುಗಾಣುವುದಲ್ಲ.. ತೆರೆಗಳಿಗೆ ವಿರುದ್ಧವಾಗಿ ಈಜಬೇಕು‌. ಜಯಿಸಬೇಕು.
**
ಅಷ್ಟು ಸುಲಭದಲ್ಲಿ ಸಾಹಿತಿ ಎನ್ನುವ ಪಟ್ಟ ಸಿಗುವುದಿಲ್ಲ‌‌‌.. ಕವಿಯಾಗಲು ಸಾಧ್ಯವಿಲ್ಲ.. ನಮ್ಮಲ್ಲಿ ಇನ್ನಷ್ಟು ಬರೆಯಬೇಕೆಂಬ ಹಸಿವು ಇರಬೇಕು.ಸತತವಾಗಿ ಹೊಸಹೊಸ ಪದಗಳ ಬಳಕೆ, ವಾಕ್ಯರಚನೆ, ಚುಟುಕಾಗಿ ನಾವು ಏನು ಹೇಳಬಯಸಿದ್ದೇವೆ ಅನ್ನುವುದನ್ನು ಸ್ಪಷ್ಟವಾಗಿ ಹೇಳುವ ತಾಕತ್ತು ಇದ್ದರೇನೆ ಬರವಣೆಗೆಯಲ್ಲಿ ನಮ್ಮದೇ ಆದ ಛಾಪನ್ನು ಮೂಡಿಸಲು ಸಾಧ್ಯ..
ನಾನು ಹೇಳುತ್ತಿರುವುದು ಪತ್ರಿಕೋದ್ಯಮ ಪದವಿ ಓದಿ ಲೇಖಕರೆನಿಸಿಕೊಳ್ಳುವವರಿಗಲ್ಲ..ಅವರ ಹಾದಿಯೇ ಬೇರೆ..ಅವರ ನಡುವೆ ಇರುವ ಬರವಣಿಗೆಯಲ್ಲಿ ಆಸಕ್ತಿಯಿರುವವರು ಹೇಗೆ ಗುರುತಿಸಿಕೊಳ್ಳುವುದು?  ಎಲೆಮರೆ ಕಾಯಿಯಂತೆ ಮುತ್ತು ಉದುರಿಸುವ ಹಾಗೆ ಸ್ಫುಟವಾಗಿ ಬರೆಯುವ ಯುವಬರಹಗಾಗರಿಗೆ ಹೇಳುತ್ತಿರುವುದು.. ವೃತ್ತಿಯೊಂದಿರುತ್ತದೆ, ಪ್ರವೃತ್ತಿಯಾಗಿಯೋ ಇಲ್ಲಾ ಹವ್ಯಾಸವಾಗಿಯೋ ಬರಹವನ್ನು ಆಯ್ಕೆ ಮಾಡಿಕೊಂಡಿರುವವರಿಗೆ ಹೇಳುತ್ತಿರುವುದು.. ಅವರು ಪ್ರಕಾಶಿಸುವುದು ಹೇಗೆ.. ಹೊರ ಜಗತ್ತಿಗೆ ಗುರುತಿಸಿಕೊಳ್ಳುವುದು ಹೇಗೆ ಎನ್ನುವುದರ ಬಗ್ಗೆ ಮಾತನಾಡುತ್ತಿರುವುದು.
**
ಅದಕ್ಕೆ ಶ್ರೀಯುತ ಡಾ. ನ. ದಯಾನಂದ ಶೆಟ್ಟಿಯವರು ಹೇಳಿದಂತೆ, "ಹೆಚ್ಚೆಚ್ಚು ಓದುವ ಅಭ್ಯಾಸವಿಟ್ಟುಕೊಳ್ಳಬೇಕು, ಪದಗಳ ಭಂಡಾರ ನಮ್ಮ ಮಸ್ತಕದೊಳಗಿರಬೇಕು.." ಪೇಪರ್ ಆಗಲಿ, ಕಾದಂಬರಿಯಾಗಲಿ, ಸಣ್ಣ ಬಜ್ಜಿ ಕಟ್ಟಿಕೊಟ್ಟ ಪೇಪರಿನ ಪೀಸಿನಲ್ಲಿ ಕೂಡ (ಚಿಂದಿ ಹಾಳೆಯೆನ್ನಬಹುದು) ನಮಗೇನು ವಿಷಯ ಸಿಗುತ್ತದೆ? ಹೊಸದಾದ ಪದಗಳು ಇದೆಯಾ? ಅದರ ಅರ್ಥ ಹೇಗೆ? ಯಾಕಾಗಿ ಉಪಯೋಗಿಸಿದರು ಎಂಬಿತ್ಯಾದಿ ತರ್ಕ, ಆಲೋಚನೆಗಳನ್ನು ಮನದಲ್ಲೇ ಮಾಡುತ್ತಾ ಹೋದಂತೆ ನಮಗೆ ಅದರ ಹಿಡಿತ ಸಿಗುತ್ತದೆ.. ಅದೊಂದು ಅಭ್ಯಾಸವಾಗುತ್ತದೆ.. ಅಲ್ಲದೇ ನಾವು ಬರೆದುದನ್ನು ಪತ್ರಿಕೆಗಳಿಗೆ ಕಳುಹಿಸಿದರೆ ಆಯ್ಕೆಯಾಗುವುದಿಲ್ಲ‌ ಎಂಬ ಕೊರಗು ಕೆಲವರಿಗೆ. "ಅವನು ಕಳುಹಿಸಿದ ನಿನ್ನೆಯಷ್ಟೆ ದೊಡ್ಡದಾಗಿ ಪೇಪರಿನಲ್ಲಿ ಬಂತು.. ನಾನು ಎಷ್ಟು ಕಳುಹಿಸಿದ್ದೇನೆ ಆದರೆ ಆಯ್ಕೆ ಮಾಡುವುದೇ ಇಲ್ಲ.." ನನಗೆ ಅದೃಷ್ಟ ವೇ ಸರಿ ಇಲ್ಲ.. ಎಂದು ವೈರಾಗಿಗಳ ಹಾಗೆ ಯುದ್ಧದಲ್ಲಿ ಸೋತವರ ಹಾಗೆ ಮಂಕಾಗಿ ಕುಳಿತುಬಿಡಬೇಡಿ..ಅದನ್ನು‌ ಮೊದಲು ಮನಸ್ಸಿನಿಂದ ತೆಗೆದು ಹಾಕಿ.. ನನ್ನ ಬರಹಗಳನ್ನು ಇನ್ನಷ್ಟು ಓರೆಗೆ ಹಚ್ಚಬೇಕೇನೋ? ಅದಕ್ಕೆ ಆಯ್ಕೆಯಾಗಲಿಲ್ಲವೆಂದು ಮನಸ್ಸಿನಲ್ಲೇ ಯೋಚಿಸಿ. ಪ್ರಯತ್ನ ಪಡುತ್ತಾ ಇರಿ. ಧನಾತ್ಮಕವಾಗಿ ಯೋಚಿಸಿದಷ್ಟು ನಮಗೇ ಒಳ್ಳೆಯದು..
ಎಲ್ಲ ಯುವಬರಹಗಾರರಿಗೂ ಸಾಹಿತ್ಯ ಕ್ಷೇತ್ರದಲ್ಲಿ ಮಿನುಗಲು ಆ ಶಾರದಾ ಮಾತೆಯ ಅನುಗ್ರಹವಿರಲಿ ಎಂದು ಪ್ರಾರ್ಥಿಸುವೆ. ಎಲ್ಲರಿಗೂ ಶುಭವಾಗಲಿ.

-ಸಿಂಧುಭಾರ್ಗವ್. ಬೆಂಗಳೂರು.

No comments:

Post a Comment