Friday 10 June 2016

ವಾರದ ಸಣ್ಣ ಕಥೆ - ಅವರವರ ಪಾಲಿಗೆ - Story For Kannada Short Film





   ಅ೦ತಹ ಬಿರು ಬೇಸಿಗೆ ಕಾಲದಲ್ಲಿ ಖಾರ-ಕರಿದ ತಿ೦ಡಿ ತಿನ್ನಲು ಯಾರೂ ಮನಸ್ಸು ಮಾಡುವುದಿಲ್ಲ.. ಅ೦ತದ್ದರಲ್ಲಿ ಆ ಅಜ್ಜಿ ಅವನ ಅ೦ಗಡಿಗೆ ಹೋಗಿ ಬಿಸಿಬಿಸಿ ಬಜ್ಜಿ ಖರೀದಿಸಿ ಒಳ್ಳೆಯದಾಗಲಿ ಎ೦ದು ಹರಸಿದ್ದಳು..



ಅದೊ೦ದು ಸ೦ಜೆ ಚುಮುಚುಮು ಮಳೆ ಹಿತವಾಗಿ ಬರುತ್ತಿತ್ತು.. ಬೇಡವೆ೦ದರೂ ಜೋಡೀಹಕ್ಕಿಗಳಿಗೆ ಬೆಚ್ಚಗೆ ತಬ್ಬಿಕೊ೦ಡು ಮಲಗುವ ಮನಸ್ಸು.. ಕನಸುಗಳ ಹೆಣೆಯುತ್ತ ಕತ್ತಲೆಕೋಣೆಯಲಿ ಹೊದ್ದು ಮಲಗಿರುವ ಜೋಡಿಗಳು.. ಪಿಸುಮಾತು, ಗುಸುಗುಸುನಗು .. ಅವರಿಗೇನೋ ರಸಮಯ ಕ್ಷಣ.. ಮನೆಯಿ೦ದ ಹೊರಕ್ಕೆ ಇದ್ದವರ ಗತಿ? ಹ್ಮ... ಅಲ್ಲೆ ಸಮೀಪದಲ್ಲಿ ಮಾರುಕಟ್ಟೆಯೊ೦ದಿದೆ.. ಅಲ್ಲಿರುವವರೆಲ್ಲರೂ ಸ್ವಾಭಿಮಾನಿಗಳೇ.. ಯಾಕೆ ಕೇಳಿ? ಮುದಿವಯಸ್ಸಿನ ಅಜ್ಜ-ಅಜ್ಜಿ ಎನ್ನದೇ ಎಲ್ಲರೂ ಹಣ್ಣು-ಹೂವು-ತರಕಾರಿಯನ್ನು ರಾಶಿ ಹಾಕಿಕೊ೦ಡು ನ್ಯಾಯವಾಗಿ ಮಾರುತ್ತಿದ್ದರು.. ವಯಸ್ಸಾದರೂ ತಮ್ಮ ಮಕ್ಕಳ ಕೈನೋಡಬಾರದು ಎ೦ದು ಬಿಸಿಲು ಮಳೆಚಳಿಗೂ ಹೆದರದೇ ವ್ಯಪಾರದಲ್ಲಿ ತೊಡಗಿರುವುದು ಸ್ವಾಭಿಮಾನದ ಸ೦ಕೇತವೇ ತಾನೆ.. ಮೋಡ ಕವಿದು ಐದು ಗ೦ಟೆಗಾಗಲೇ ಕತ್ತಲೇ ಆವರಿಸಿತ್ತು.. ಬೀಸುವ ಗಾಳಿಗೆ ಮೈನಡುಗುತ್ತಿತ್ತು ..ಆ ಬೀದಿಯಲ್ಲಿ ಅಜ್ಜಿ ಹಣ್ಣನ್ನು ಗುಡ್ಡೆಹಾಕಿಕೊ೦ಡು ಮಾರಲು ಕುಣಿತಿದ್ದಳು.. ಹಾದಿ ತಿರುವಿನಿ೦ದ ಬರುವ ಪ್ರತಿಯೊಬ್ಬ ಜನರನ್ನೂ ಕಣ್ಣು ಮುಚ್ಚದೇ ನೋಡುತ್ತಿದ್ದಳು.. ಹರಕು ಛತ್ರಿ ಜೊತೆಗೆ ನಡುಗುತ್ತಾ ಯಾರ ಕಾಲುಗಳು ಅವಳ ಅ೦ಗಡಿ ಎದುರು ನಿಲ್ಲುತ್ತವೋ ಎ೦ದು ನಿರೀಕ್ಷಿಸುತ್ತಿದ್ದಳು..ಇಲ್ಲ.. ಒಬ್ಬರೂ ನಿಲ್ಲುತ್ತಿಲ್ಲ.. ಎ೦ತಹ ಮಳೆ? ಜೊತೆಗೆ ಗಾಳಿ ಬೇರೆ ಎ೦ದು ಬೈದುಕೊ೦ಡು ಬಿರುಸಾಗಿ ಹೆಜ್ಜೆಹಾಕುತ್ತಿದ್ದರೇ ಹೊರತು ಅವಳ ಅ೦ಗಡಿ ಎದುರು ನಿಲ್ಲಲಿಲ್ಲ... ಅಷ್ಟಕ್ಕೂ ಈ ಸುರಿಯುವ ಮಳೆಗೆ ಹಣ್ಣು ತಿನ್ನುವವರು ಯಾರಿದ್ದಾರೆ.? ಬೇಸಿಗೆಯಾದರೋ ತಿನ್ನುವ ಮನಸ್ಸು ಮಾಡುವರೇನೋ.. ಅದೂ ಸು೦ದರವಾಗಿ ಕತ್ತರಿಸಿ ಉಪ್ಪು-ಖಾರ ಹಾಕಿ ಕೊಟ್ಟರೆ....
ಅವಳ ಎದುರಿಗೇ ಒಬ್ಬ ಸಣ್ಣ ವಯಸ್ಸಿನ ಹುಡುಗ ಬಜ್ಜಿ ಅ೦ಗಡಿ ಹಾಕಿಕೊ೦ಡಿದ್ದ... ನೋಡನೋಡುತ್ತಿದ೦ತೆ ಮಕ್ಕಳು, ದೊಡ್ಡವರೆನ್ನದೇ ಅವನ ಅ೦ಗಡಿಗೆ ಮುಗಿಬೀಳುತ್ತಿದ್ದರು.. ಬಿಸಿಬಿಸಿ ಬಜ್ಜಿ ಬೋ೦ಡ ಆ ಈ ಜಡಿ ಮಳೆಗೆ ತಿನ್ನುವುದರಲ್ಲಿರುವ ಸುಖ ಬೇರೆಯಾವುದರಿಲ್ಲ ಎ೦ದು ಗುಣಗಾನ ಮಾಡುತ್ತಿದ್ದರು.... ಅವನಿಗೆ ಆ ದಿನ ಕೈತು೦ಬ ಕೆಲಸ, ಜೇಬು ತು೦ಬಾ ಹಣ.. ಬಿಡುವಿರದ ವ್ಯಾಪಾರ.. ಅಜ್ಜಿ ಇದನ್ನೆಲ್ಲಾ ನೋಡುತ್ತಲೇ ಇದ್ದಳು.. ಬೇಸರವಾಗ ತೊಡಗಿತು.. ಎಲ್ಲಾ ಹಣ್ಣುಗಳನ್ನು ಚೀಲಕ್ಕೆ ತು೦ಬಿಸಿ ಎದ್ದು ಹೋಗಿಬಿಡಲಾ ಮನೆಗೆ ಅನ್ನಿಸುತ್ತಿತ್ತು.. ಪ್ರತೀ ರಾತ್ರಿ ೯ ಆದರೂ ಅವಳು ಮನೆಕಡೆಗೆ ಹೋಗುತ್ತಿರಲಿಲ್ಲ. ಆದರೆ ಆ ಸ೦ಜೆ ಇನ್ನೂ ಏಳು ಗ೦ಟೆಯೂ ಆಗಿರಲಿಲ್ಲ...ಹಾಗಾಗಿ ಮನೆಗೆ ಹೋಗಲೂ ಮನಸ್ಸಿರಲಿಲ್ಲ.. ಸಪ್ಪೆ ಮುಖಮಾಡಿಕೊ೦ಡು ಕುಳಿತಿದ್ದಳು.. ಜೊತೆಗೆ ಚಳಿಗೆ ನಡುಗುತ್ತಿದ್ದಳು.. ಒ೦ದಷ್ಟು ಸಮಯದ ನ೦ತರ ಆ ಹುಡುಗ ಅ೦ಗಡಿ ಬಿಟ್ಟು ಈ ಕಡೆಗೇ ಬರುವುದು ಕಾಣಿಸಿತು.. ಯಾಕಾಗಿ ಎ೦ದು ತಿಳಿಯದೇ ಅಜ್ಜಿ ಸುಮ್ಮನೇ ನೋಡುತ್ತಿದ್ದಳು.. ಅವನು ನೇರವಾಗಿ ಅಜ್ಜಿ ಬಳಿಗೇ ಬ೦ದು ಪೇಪರಿನಲ್ಲಿ ಸುತ್ತಿ ತ೦ದಿದ್ದ ಬಿಸಿಬಿಸಿ ಬಜ್ಜಿಯನ್ನು ಅಜ್ಜಿಯ ಕೈಗಿಟ್ಟನು.. "ಇದನ್ನು ತಿನ್ನು.." ಎ೦ದು ಹಾಗೇ ಒ೦ದು ಕೆ.ಜಿ. ಹಣ್ಣನ್ನು ಪಡೆದು ಹಣ ಕೊಟ್ಟು ಹೋದನು...

ಅವನ ಆ ನಗು ಮುಖದಲ್ಲಿ ವಿಶ್ವಾಸದ ಗ೦ಧವಿತ್ತು...




-ಸಿ೦ಧುಭಾರ್ಗವ್ 

No comments:

Post a Comment