Friday 24 June 2016

ವಾರದ ಸಣ್ಣ ಕಥೆ :: ಹೆತ್ತವರ ನೋಡಿದ್ದೇವೆ.. ಅವರಲ್ಲಿನ ಗಂಡಹೆಂಡಿರನ್ನಲ್ಲ....

ವಾರದ ಸಣ್ಣ ಕಥೆ :: ಹೆತ್ತವರ ನೋಡಿದ್ದೇವೆ.. ಅವರಲ್ಲಿನ ಗಂಡಹೆಂಡಿರನ್ನಲ್ಲ....
ಗಾಢ ಮೌನವಾಗಿದ್ದ ರೂಮಿನಿಂದ ಹೊರ ಬಂದವಳೇ ಗಂಡನನ್ನು ಹುಡುಕಿದಳು.... ಸೋಫಾದಲ್ಲೇ ಇದ್ದವರು ಅಲ್ಲಿ ಕಾಣಿಸದಾಗ ಹೆಸರು ಕೂಗುತ್ತಾ ಹುಡುಕತೊಡಗಿದಳು...
ಆತ ಗಾರ್ಡನ್ನಿನ ಒಂದು ಮೂಲೆಯಲ್ಲಿ ‌ಭಾರವಾದ ಮನಸ್ಸಿ ನಿಂದ ಅರಳೋ ಹೂವನ್ನು ನೋಡುತ್ತ ನಿಂತಿದ್ದ......
****
'' ನಾನು ತಾಯಿ ಮನೆಯಲ್ಲಿ ರಾಣಿ ತರ ಇದ್ದೇ... ಯಾವುದೂ ಕುಂದು ಕೊರತೆ ಇಲ್ಲದ ಹಾಗೆ ನನ್ನ ಅಪ್ಪ ಅಮ್ಮ ನೋಡ್ಕೊಂಡಿದ್ದಾರೆ ಗೊತ್ತಾ.... ನೀವು ನೋಡಿದರೆ ಕೈಯಲ್ಲಿ ಕಾಸಿಲ್ಲ ಅಂತ ಅಳ್ತೀರ.... ತಿಂಗಳು ಕೊನೆಗೆ ತೂತು ಬಿದ್ದ ಜೇನನ್ನು ನಾಚಿಕೆ ಇಲ್ಲದೇ ನನ್ನ ಎದುರು ತೋರಿಸ್ತೀರಾ.... ಮಹಾರಾಣಿ ತರ ಬೆಳೆದವಳು ನಾನು, ನೀವು ಒಳ್ಳೆಯ ಉದ್ಯೋಗದಲ್ಲಿದ್ದೀರಿ ಅಂತ ತಾನೇ ನಿಮಗೆ ಹೆಣ್ಣು ಕೊಟ್ಟಿದ್ದು??
ಮುಂಜಾನೆಯ ಒಗ್ಗರಣೆಯಂತೆ ಗಂಡನಿಗೆ ಬೈದು ಕೋಣೆ ಒಳಗೆ ಹೋಗಿ ಅಪ್ಪ ಅಮ್ಮನ ಫೋಟೋ ನೋಡುತ್ತ ಅಳಲು ಶುರುಮಾಡಿದಳು ಶಿಲ್ಪಾ.....
ಅದೇನೋ ನೆರಳು ಹಿಂದಿನಿಂದ ಬಂದಂತಾಯಿತು.... ತಿರುಗಿ ನೋಡಿದರೆ ಅಮ್ಮ...
" ಯಾಕೆ ಹೀಗೆ ಮಾಡ್ತಾ ಇದ್ದೀಯಾ... ನಾವು ನಿನಗೆ ಇದನ್ನೇ ಕಲಿಸಿಕೊಟ್ಟಿದ್ದಾ...?
ನಿನಗೇನೇ ಗೊತ್ತು.. ನಿನ್ನ ದೊಡ್ಡದು ಮಾಡಲು ನಾವು ಎಷ್ಟು ಕಷ್ಟ ಪಟ್ಟಿದ್ದೇವೆ ಎಂದು?
ಹರಿದ ಸೀರೆಯನ್ನು ಬುಡಮೇಲು ಮಾಡಿ ಉಟ್ಟು, ನಿನಗೆ ಹಬ್ಬಕ್ಕೆಂದು ಹೊಸ ಬಟ್ಟೆ ಕೊಡಿಸಿದ್ದೇವೆ...
ನಡು ರಾತ್ರಿ ಅಪ್ಪ ಕೆಲಸದಿಂದ ಬಂದು ಬಾಗಿಲು ಬಡಿದಾಗ, ಸಂಜೆ ಏನೂ ತಿನ್ನಲಿಲ್ಲ ಕಣೇ, ತುಂಬಾ ಕೆಲಸವಿತ್ತು ... ಹೊಟ್ಟೆ ಹಸಿಯುತ್ತಿದೆ ಎನ್ನುವಾಗೆಲ್ಲಾ ಕರುಳು ಚುರುಕ್ ಅನ್ನುತ್ತಿತ್ತು.... ನೀನು ಗಡತ್ತಾಗಿ ನಿದ್ರೆಯಲ್ಲಿರುತ್ತಿದ್ದೆ..
ಕೂಡಿಸಿಟ್ಟ ಹಣದಲ್ಲಿ ನಿನಗಾಗೇ ಓದಲು ರೂಮಿನ ವ್ಯವಸ್ಥೆ ಮಾಡಿದ್ದೆವು.. ಬೆಳಿಗ್ಗೆ ಬಿಸಿಬಿಸಿ ತಿಂಡಿಮಾಡಿ ಕೊಟ್ಟು ನಾನು ತಂಗಳ ತಿನ್ನುತ್ತಿದ್ದೆ.. ಅದನ್ನರಿಯದ ನೀನು ಕಾಲೇಜು ಹುಡುಗರೆಲ್ಲ ಮದ್ಯಾಹ್ನ ಊಟಕ್ಕೆ ಕ್ಯಾಂಟನ್ ಗೆ ಹೋಗುತ್ತಾರೆ, ನಾನೊಬ್ಬಳೇ ಈ ತಣಿದ ತಿಂಡಿ ತಿನ್ನಬೇಕು ಎಂದಾಗ ಅದಕ್ಕೂ ಹಣ ಕೊಡುತ್ತಿದ್ದೆ..
ಹೌದು, ತಪ್ಪು ನಮ್ಮದೇ.. ನಿನಗೆ ಹೆತ್ತವರಾಗಿ ಮಹಾರಾಣಿಯಂತೆ ನೋಡಿಕೊಂಡೆವು.. ಆದರೆ ಗಂಡ-ಹೆಂಡಿರಾಗಿ ನಾವು ಹೇಗಿದ್ದೆವು ಎಂದು ನಿನಗೆ ತೋರಿಸಿಕೊಡಲಿಲ್ಲ.. ನೆರಮನೆ ಕನಕಳ ತರ ನನ್ನ ಗಂಡ ಬಡವ, ಏನೂ ತರುವುದಿಲ್ಲ, ಮನೆಗಾಗಿ ಏನೂ ಮಾಡುವುದಿಲ್ಲ ಎಂದು ಮಕ್ಕಳೆದುರು ಅತ್ತುಕರೆದು ಅಪ್ಪ ಒಬ್ಬ ನಿಶ್ಪ್ರಯೋಜಕ ಎಂಬಂತೆ ಮಾಡಿಬಿಟ್ಟಿದ್ದಳು..
ಹಾಗೆ ನಿನ್ನೆದುರು ಅಳಬೇಕಿತ್ತು ಅಲ್ವಾ..??
ಆಗ ಇಷ್ಟು ದೊಡ್ಡ ಕನಸನ್ನು ನೀನು ಕಾಣುತ್ತಲೂ ಇರಲಿಲ್ಲ, ತಂದೆ ಮೇಲೆ ಗೌರವವೂ ಇರುತ್ತಿರಲಿಲ್ಲ....
ಜೀವನ ಹೀಗೆ. ಮಗಳಾಗಿ ರಾಣಿ ಹಾಗೆ ಇರಬಹುದು.. ಹೆಂಡತಿಯಾಗಿ ತ್ಯಾಗಮಯಿ ಆಗಲೇಬೇಕು. ಅದನ್ನು ಅರ್ಥ ಮಾಡಿಕೋ..
ಯಾರಿಗಾಗಿ ಇದೆಲ್ಲಾ ಮಾಡುವೆ? ನಿನ್ನ ಮಕ್ಕಳು, ಗಂಡನಿಗೇ ತಾನೆ...?
ಆಗಲೇ ನೀ ಈಗ ಹೇಳಿದ ಮಾತು ನಿನ್ನ ಮಕ್ಕಳು ಹೇಳಲು ಸಾಧ್ಯ.. ಗೌರವಿಸಲು ಸಾಧ್ಯ....
**
‪#‎ಸಿಂಧು‬_ಭಾರ್ಗವ್...

No comments:

Post a Comment