Friday 24 June 2016

ವಾರಕ್ಕೊಂದು ಸಣ್ಣ ಕಥೆ :: ನೆಮ್ಮದಿಯ ಅರಸುತ್ತ ...

ವಾರಕ್ಕೊಂದು ಸಣ್ಣ ಕಥೆ :: ನೆಮ್ಮದಿಯ ಅರಸುತ್ತ ...
***
#ಪ್ರತಿಭಾ ಹೆಸರಿಗೆ ತಕ್ಕಹಾಗೆ ಬಹುಮುಖ ಪ್ರತಿಭೆಯುಳ್ಳ ಹುಡುಗಿ. ಯಾವುದಕ್ಕೂ ಸೈ. ಗಂಡು ಮಕ್ಕಳಂತೆ ಹೊರಗಿನ ಕೆಲಸಕ್ಕೂ , ಹೆಣ್ಣುಮಕ್ಕಳಂತೆ ತಾಯಿ ಜೊತೆ ಅಡುಗೆ ಮನೆಯಲ್ಲೂ ಸರಾಗವಾಗಿ ಓಡಾಡಿಕೊಂಡಿದ್ದಳು. ನೃತ್ಯ, ಸಂಗೀತ, ಆಟ-ಪಾಠ ಎಲ್ಲದರಲ್ಲೂ ತರಗತಿಯಲ್ಲಿ ಮೊದಲಿಗಳು. ಶಾಲೆಗೂ, ಹೆತ್ತವರಿಗೂ ಕೀರ್ತಿ ತಂದಿದ್ದಳು.
*
ಡಿಗ್ರಿ ಮುಗಿಸಿ ಒಳ್ಳೆಯ ಉದ್ಯೋಗಕ್ಕೆ ಸೇರಿಕೊಂಡಳು. ಹೆತ್ತವರಿಗೂ ನೆಮ್ಮದಿ. ಅವಳಿಗೂ ಖುಷಿ. ಬಿಡುವಿರದ ಕೆಲಸ. ಅವಳಿಂದ ಜವಾಬ್ದಾರಿಯುತವಾಗಿ ನಿಭಾಯಿಸಲು ಸಾಧ್ಯವೆಂದು ಅರಿತೇ ಮ್ಯಾನೇಜರ್ ಆ ಹುದ್ದೆಗೆ ಆಯ್ಕೆ ಮಾಡಿದ್ದರು. ಹಗಲೂ-ಇರುಳೆನ್ನದೇ ಊಟ-ನಿದಿರೆಯಿಲ್ಲದೇ ಕಿಂಚಿತ್ತು ಲೋಪದೋಷ ಬರದಂತೆ ಕರ್ತವ್ಯ ನಿರ್ವಹಿಸುತ್ತಿದ್ದಳು..
**
ಅಮ್ಮ ಒತ್ತಾಯಿಸಿದಕ್ಕೆ ಒಮ್ಮೆ ಬಿಡುವು ಮಾಡಿಕೊಂಡು ದೇವಸ್ಥಾನಕ್ಕೆ ಹೋಗುತ್ತಾಳೆ. ಅಲ್ಲಿ ಕಾಲೇಜಿನಲ್ಲಿದ್ದಾಗಿನ  ಜೀವದಗೆಳತಿ #ಕಲಾ ಸಿಕ್ಕಿ ಭಾವೋದ್ವೇಗಕ್ಕೊಳಗಾಗುತ್ತಾಳೆ.. ಅವಳೂ ಪ್ರತಿಭಾವಂತೆ, ಕಾಲೇಜಿನಲ್ಲಿ ಎಲ್ಲದರಲ್ಲೂ ಪ್ರತಿಸ್ಪರ್ಧಿ ಯಾಗಿದ್ದಳು. ಉದ್ಯೋಗಕ್ಕೂ ಹೋಗುತ್ತಿದ್ದಳು. ಆದರೆ ಹೆತ್ತವರ ಮಾತಿನಂತೆ ಮದುವೆಯಾಗಿ ಮುದ್ದಾದ ಯುವರಾಣಿಯ ಆರೈಕೆಯಲ್ಲಿ ಬಿಜಿಯಾಗಿದ್ದಳು .. ಅದರ ಜೊತೆಗೆ ತಾನು ಕಲಿತ ಭರತನಾಟ್ಯ, ಸಂಗೀತವನ್ನು ಪುಟ್ಟ ಮಕ್ಕಳಿಗೆ ಧಾರೆಯೆರೆಯುತ್ತಿದ್ದಳು.. ಅಲ್ಲಿಯೂ ಹಣ ಬರುತ್ತಿತ್ತು.. ಜೊತೆಗೆ ಗೌರವ , ನೆಮ್ಮದಿಯ ಜೀವನ ಅವಳದು. ಅಲ್ಲದೆ ಅವಳಲ್ಲಿನ ಕಲೆಯನ್ನು ಪ್ರೋತ್ಸಾಹಿಸುವ ಗಂಡ, ಅತ್ತೆ-ಮಾವ . ಎಂದೆಲ್ಲಾ ತನ್ನ ಖುಷಿಯನ್ನು ವಿಧವಿಧವಾಗಿ ಹಂಚಿಕೊಳ್ಳುತ್ತಿದ್ದಳು.
ಆಗ ಪ್ರತಿಭಾಳ ಒದ್ದಾಟದ ಜೀವನ ಎಣಿಸಿ ತಾಯಿಕರುಳಿಗೆ ಸಂಕಟವಾಗುತ್ತಿತ್ತು. ಪ್ರತಿಭಾಳಿಗೂ ಏನೇನೋ ಗೊಂದಲ,ಅಸ್ಪಸ್ಟತೆ ಎದುರಾಗತೊಡಗಿತು. ನಾನು ಯಾಕಾಗಿ ಒದ್ದಾಡುತ್ತಿರುವೆ.? ಒಂದು ನಿಮಿಷವೂ ಬಿಡುವಿಲ್ಲದಂತೆ ಯಾಕೆ ದುಡಿಯಬೇಕು?! ಯಾರಿಗಾಗಿ ಈ ಹೆಸರು ಕೀರ್ತಿ.!? ಎಂದು ಕುಸಿದು ಬಿಟ್ಟಳು. ನಿಧಾನಕ್ಕೆ ತಾಯಿ ಮಾತುಗಳೆಲ್ಲವೂ ಅವಳ ಸುತ್ತ ಸುತ್ತತೊಡಗಿತು. ಪ್ರೀತಿಸಿದವನ
..
" ಮದುವೆಯಾಗಲು ಒಪ್ಪುವೆಯಾ.? ವರನ ಕಡೆಯವರು ತುಂಬಾ  ಒತ್ತಾಯಿಸುತ್ತ ಇದ್ದಾರೆ.?! ಆ ಹುಡುಗ ನಿನಗಾಗಿಯೇ ಕಾಯುತ್ತಿದ್ದಾನೆ. ನಿನ್ನ ಸಂಗೀತದ ವೀಣೆ ರೂಮಿನಲ್ಲಿ ಧೂಳು ತಿನ್ನುತ್ತಿದೆ ನೋಡಿದೆಯಾ?! ನಾಟ್ಯ ಗೆಜ್ಜೆಗಳು ಸದ್ದುಮಾಡದೇ ಮೌನ ತಳೆದಿವೆ ಗಮನಿಸಿದೆಯಾ!? ನೀನು ಎಲ್ಲಿರುವೆ ಎಂದು ಒಮ್ಮೆ ಯೋಚಿಸಿದ್ದೀಯಾ..?! "
ಹ್ಮ.....!!
ಎತ್ತರೆತ್ತರ ಏರುವ ಹುಮ್ಮಸ್ಸಿನಲ್ಲಿ ಸಣ್ಣ ಸಣ್ಣ ಖುಷಿಗಳನ್ನೇ ಕೊಂದಿರುತ್ತೇವೆ. ಅದನ್ನೇ ತಮ್ಮ ಮೆಟ್ಟಲನ್ನಾಗಿಸಿಕೊಂಡಿರುತ್ತೇವೆ.. ಆದರೆ ಹೆಣ್ಣು ಹೆಣ್ಣೇ... ಮಾಡಬೇಕಾದ ಕರ್ತವ್ಯವನ್ನು ಮಾಡಲೇಬೇಕು. ಇನ್ನೂ ಕಾಲ ಮಿಂಚಿಲ್ಲ ಎಂದೆಣಿಸಿದವಳೇ ಯಾಂತ್ರಿಕ ಜೀವನದಿಂದ ಹೊರಬಂದು ಮತ್ತೆ ಹೊಸ ಜೀವನ ಆರಂಭಿಸಿದಳು. ಅವಳಿಗಾಗಿಯೇ ಕಾಯುತ್ತಿದ್ದ ಹೆಸರಾಂತ ಭರತನಾಟ್ಯಗಾರನ ಕೈಹಿಡಿದಳು. ತನ್ನ ಕಲೆಗೆ ಮತ್ತೆ ಜೀವ ನೀಡಿದಳು. ಮೌನಿಯಾಗಿದ್ದ ಗೆಜ್ಜೆಗಳಿಗೆ ಸ್ವರತುಂಬಿಸಿದಳು. ಕಲಾರಾಧನೆಯಿಂದ ಅವರ ಮನೆ ತುಂಬಿಹೋಗಿತ್ತು.....

- ಸಿಂಧು ಭಾರ್ಗವ್ ...

No comments:

Post a Comment