Thursday 9 June 2016

Happy Birthday Mom



ಅಪರಿಚಿತ ಆತ್ಮವೊ೦ದು ತನ್ನ ಗರ್ಭದೊಳಗೆ ಬ೦ದು ಸೇರಿದಾಗಲೇ ಉಸಿರು ನೀಡಲು ಶುರುಮಾಡಿದ್ದಳು.. ನೂರಾರು ಕನಸು ಕಟ್ಟಿಕೊಳ್ಳುವುದರ ಮೂಲಕ ಕನಸು ಕಾಣುವುದನ್ನು ಮರಿ ಬ್ರೂಣಕ್ಕೂ ಕಲಿಸಿಕೊಟ್ಟಳು... ಸತ್ಯ, ನ್ಯಾಯದಲ್ಲೇ ನಡೆಯಬೇಕು ಎ೦ದು ನವಮಾಸ ನಡೆಯುತ್ತಲೇ ತಿಳಿಸಿದಳು.. 
***
ಎಲ್ಲೋ ಎಲ್ಲೆಮೀರಿದ ಮನಸ್ಸು ತಪ್ಪು ಮಾಡಿತು ಅನ್ನಿಸುತ್ತಿದೆ ಅಮ್ಮ.. ನಿನ್ನ ಹೇಳದೇ ಮಾಡಿದ ತಪ್ಪು ಇದಲ್ಲ.. ಮಾಡಿದ ತಪ್ಪೆಲ್ಲವೂ ನಿನಗೇ ತಿಳಿಯಲೇ ಇಲ್ಲ ಎ೦ಬುದು ಸತ್ಯ.. ಮುಚ್ಚಿಟ್ಟ ಅದೆಷ್ಟೋ ಕಟು ಸತ್ಯಗಳು ನನ್ನಲ್ಲೇ ಉಸಿರುಕಟ್ಟಿಕೊ೦ಡು ಬದುಕುತ್ತಿವೆ.. ನಾನು ಸತ್ತರೆ ತಾನೆ, ಅದು ಸಾಯುವ ಮಾತು..

ಇಲ್ಲಮ್ಮ ಇನ್ನೆ೦ದೂ ನಿನ್ನ ಮನಸ್ಸು ನೋಯಿಸಲಾರೆ.. ಹೀಗೆ೦ದು ಆಣೆ-ಪ್ರಮಾಣ ಮಾಡಬೇಡ.. ಹಾಗೆ ನಡೆದು ತೋರಿಸು ಎ೦ದವಳು ನೀನು... ನಿನ್ನಲ್ಲಿ ಒ೦ದು ಶಕ್ತಿ ಇದೆಯಮ್ಮ. ಅರಿತಿದ್ದೇನೆ.
ನೀನೆ ಆ "ಶಕ್ತಿ" ಜೊತೆಗಿದ್ದಿದ್ದರೆ ನಾನು ಹೀಗೆ ಮಾಡುತ್ತಿರಲಿಲ್ಲವೇನೋ... ನಿನ್ನ ರಕ್ಷಾ ಗೂಡಿನಿ೦ದ ಹೊರನೂಕಿದ್ದೇ ತಪ್ಪಾಯಿತು ನೋಡು... ಈ ಕೆಟ್ಟ ಪ್ರಪ೦ಚಕ್ಕೆ ಬರುವ ಮನಸ್ಸು ನನಗಿರಲಿಲ್ಲ.. ಇಲ್ಲಿ ಹೇಗೆ ಬದುಕಬೇಕು ಎ೦ಬುದು ಅರಿಯಲು ಕಷ್ಟವೇ... ಮೋಸ ಹೋಗುವುದೇ ಜಾಸ್ತಿ.. ಮುಖವಾಡ ಧಾರಿಗಳ ದುನಿಯಾ...

ಹೋಗಲಿ ಬಿಡು.. 
**

ಜನುಮ ದಿನದ ಶುಭಾಶಯಗಳು.. ಮೌನವೇ ತಬ್ಬಿದೆ.. ಮಾತು ಬರದೆ೦ತಲ್ಲ, ಮೂಖಿಯೂ ಅಲ್ಲ, ಒ೦ದು ರೀತಿಯ ಬೇಸರ.. ಮಾತನಾಡಲು ಇಷ್ಟವಿಲ್ಲ..
" ಮದುವೆ ಆಗಿದೆ ಮರಾಯ್ತಿ, ಇನ್ನಾದರೂ ಸ್ವಲ್ಪ ಮಡಿವ೦ತಿಕೆ ಉಳಿಸಿಕೋ..." ಯಾವಾಗ ಗ೦ಭೀರತೆ ಬರುತ್ತೋ ನಿನಗೆ.?? ಎ೦ದು ಯಾವಾಗಲೂ ಕೇಳುತ್ತಿದ್ದೆ.

"ಅದು ಬರುವ ಕಾಲಕ್ಕೆ ಬರುತ್ತೆ ಅಮ್ಮ..." ಎ೦ದು ತೇಲಿಸಿಬಿಡುತ್ತಿದ್ದೆ. ಆಗೆಲ್ಲ.. 
ನೋಡೀಗ.. ನನಗೆ ಅರಿವಿಲ್ಲದೇ ಗ೦ಭೀರತೆ ಆವರಿಸಿದೆ.. ಯಾಕೆ? ಏನು? ಹೇಗೆ ಕೇಳಬೇಡ..

ನೀ ನಡೆವ ಹಾದಿಯಲೇ ನಾನು ನಡೆಯಬೇಕೆ೦ದರೆ ಹೀಗೆ ಇರಬೇಕಿತ್ತೇನೋ..? ಇನ್ನಾದರೂ ಶುರುವಾಗಲಿ ನವಜೀವನದ ನವೀನಪಯಣ...

ನೀನು ನೂರ್ಕಾಲ ಬಾಳಲೇಬೇಕು ನನಗಾಗಿ,
ಬೇಡಿಕೊಳ್ಳುವುದು ಅದನ್ನೇ ದೇವರ ಬಳಿ...


ಲವ್ ಯೂ ಅಮ್ಮ.. ಮಿಸ್ ಯೂ.. ಯಾಕೋ ಅಳು ಉಕ್ಕಿಬರುತ್ತಿದೆ...

ನಿನ್ನಮಗಳು
ರಾಧಿಕಾ..


No comments:

Post a Comment