Tuesday, 30 August 2016

Yogaraaj Bhat ಯೋಗರಾಜ್ ಭಟ್ ರ ನೆನಪಲ್ಲಿ... "-ಗಳು"

ಫೇಸ್ ಬುಕ್ ಕರ್ಮಕಾಂಡ : ಯೋಗರಾಜ್ ಭಟ್ ರ ನೆನಪಲ್ಲಿ...


ಆಗಾಗ್ಗೆ ಮೂಡುವ
440Volts ಥಾಟ್ಸ್_ಗಳು..
ಗೋಡೆ ಮೇಲೆ
ಅಂಟಿಸುವ ಬರಹಗಳು..

ಸಾಲಲಿ ನಿಂತು
ಓದುವ ಜನಗಳು..
ಮೂರು ಲೈಕ್ ಗಳು
ಆರು ಕಮೆಂಟ್_ಗಳು..

ಬೇಡವೆಂದರೂ ಹೆಚ್ಚುವ
ಸ್ನೇಹಿತರ ಸಂಖ್ಯೆಗಳು..
ಇನ್ ಬಾಕ್ಸ್ ನಲ್ಲಿ
ನೂರಾರು 'ಹಾಯ್'ಗಳು..

ಉತ್ತರಿಸದಿದ್ದರೆ ಅವರಿಗೆ
ಆಗುವ ಬೇಸರಗಳು..
ನಮ್ಮಲ್ಲಿ ಮಾತನಾಡಲು
ಸಮಯದ ಅಭಾವಗಳು..

ಬೋರಾದಾಗೆಲ್ಲ ತೆರೆಮೇಲೆ
ಕುಣಿಯುವ ಸೆಲ್ಫೀಗಳು..
ಲೈಕ್ ಬರದಿದ್ದರೆ, ಮತ್ತೆ
ಡಲ್ ಆಗುವ ಮುಖಗಳು‌‌..

ಕಿರಿಕಿರಿ ,ರಗಳೆ ,ಜಗಳ,
ಕಾಲು ಎಳೆತಗಳು..
ಕೋಪದಲ್ಲಿ ಮಾಡುವ
ಬ್ಲಾಕ್ ಗಳು, ಅನ್ ಫ್ರೈಂಡ್ ಗಳು...

ಬೇಡವೆಂದರೂ
ತಳಕುಹಾಕಿಕೊಳ್ಳುವ ಗಾಸಿಪ್ ಗಳು..
ಕೊನೆಗೆ ನೆಮ್ಮದಿಗೆಂದು ತಾವಾಗೇ,
ಡಿ_ಅಕ್ಟಿವೇಟ್ ಆಗುವ ಜನಗಳು...!!


~ ಸಿಂಧುಭಾರ್ಗವ್ .ಬೆಂಗಳೂರು

ಹರೇ ಕೃಷ್ಣ. ಬಗ್ಗೆ ಭಕ್ತಿಭಾವ




ನಿಂದಕರು ಬೇಕಯ್ಯ ಮಂದೆಯೊಳಗೆ
ಮುಂದಡಿಯಿಡುವಾಗ ಹಿಂದಿಂದೆ ನಿಂದಿಸುತಾ
ಸರಿತಪ್ಪು ತಿಳಿಸುತಾ
ನಡೆವಾಗ ತಡೆಯಾಗುವ
ತಡೆದು ನಾವ್ ಮುಂದಡಿಯಿಡುವಾ...
ನಿಂದಕರು ಬೇಕಯ್ಯಾ ಮಂದೆಯೊಳಗೆ...
~
ಗುರಿಯ ಮುಟ್ಟಿದೊಡೆ
ಹಿಂತಿರುಗಿ ನೀನೋಡು ಒಮ್ಮೆ...
ನಿಂದಕರು ನಿಂತಲ್ಲೇ ಇಲ್ಲದಿರೆ ಕೇಳು ಒಮ್ಮೆ...
ನೊಂದುಕೊಳ್ಳದಿರು ಅವರ ಮಾತಿನಿಂದ
ಹಿಂದುಮುಂದು ಯೋಚಿಸುವ ಕೆಲಸ ಉಳಿಸುವರಯ್ಯ...
ನಿಂದಕರು ಬೇಕಯ್ಯ ಮಂದೆಯೊಳಗೆ....
!!...ಶ್ರೀ ಹರಿ ಕೃಷ್ಣಾರ್ಪಣ ಮಸ್ತು...!!
💐🙏💐🙏💐🙏💐🙏
ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು
💐🙏💐🙏💐🙏💐🙏
~ ಸಿಂಧುಭಾರ್ಗವ್ 

One of the romantic song which I never wrote before ( ಕವಿತೆ- ಮರೆತುಬಿಡಲೇನೋ ನನ್ನ...)

(@@@)
ಮರೆತುಬಿಡಲೇನೋ ನನ್ನ,
 ಸನಿಹದಲೇ ಕುಳಿತು ನಿನ್ನ..
ಮೈಮರೆತುಬಿಡಲೇನೋ ,
ನಿನ್ನ ಕಣ್ಗಳಲಿ ಬೆರೆತು ಚಿನ್ನ..
**
ಯಾವುದನ್ನು ಮುಚ್ಚಿಡಲಿ ಯಾವುದನ್ನು ಬಿಚ್ಚಿಡಲಿ
ನನ್ನ ಪ್ರೀತಿಯಂಗಳದಲ್ಲಿ...
ನಿನ್ನದೇ ಛಾಯೆ‌ ಮೂಡಿರುವುದು
ಈ ನನ್ನ ಕಂಗಳಲ್ಲಿ...
@
ನೀ ಸನಿಹವಿರುವೆ ಎಂಬ ನಂಬಿಕೆ ಎನಗೆ
ನೀ ದೂರಾದೂ ಚಿಂತಿಲ್ಲ ನೀನಿರುವೆ ನನ್ನೊಳಗೆ..
@
ಸಾಮಿಪ್ಯದ ನಲಿವು ಇಂದಿಲ್ಲ ಮನದಲ್ಲಿ
ನಿನ್ನ ವಿರಹದುರಿಯು ಸುಡುತಿಹುದು ತನುವಲ್ಲಿ..
@
ಜೀವವೇ ಬರುವುದು ನಿನ್ನೊಂದು ಮಾತಿಗೆ,
ಎನೆಂದು ಹೆಸರಿಡಲಿ ಈ ಭಾವಕೆ...
ಮಳೆಸುರಿಯುತಿದೆ ನಿನ್ನ‌ ಪ್ರೀತಿ ಅತಿಯಾಗಿ
ಮನಕರಗುತಿದೆ ಈಗ ಮರುಳಾಗಿ...
@
ನೀನೇ ಬೇಕು ಎಂದು ಮನ ಹಟಹಿಡಿಯುವ ಮುನ್ನ
ಸೇರಿಬಿಡು ಒಮ್ಮೆ ನನ್ನ ತೋಳನ್ನ..
ಬೇರೇನೂ ಬೇಕಿಲ್ಲ ನಿನ್ನ ವಿನಃ
ಸಿಗದಿದ್ದರೆ ಹುಟ್ಟಿ ಬರಬೇಕು ಪುನಃ
!!ಮರೆತುಬಿಡಲೇನೋ ನನ್ನ , ಸನಿಹದಲೇ‌ ಕುಳಿತು  ನಿನ್ನ..!!
@@@
~ ಸಿಂಧುಭಾರ್ಗವ್ .ಬೆಂಗಳೂರು

ಜೀವನದ ಸಂತೆಯಲಿ : ಮಂದವಾಗಿದೆ ಬೀದಿದೀಪ

ಜೀವನದ ಸಂತೆಯಲಿ : ಮಂದವಾಗಿದೆ ಬೀದಿದೀಪ

ಪ್ರತಿ ಸಂಜೆಯಾಯಿತೆಂದರೆ ಹಬ್ಬದ ವಾತಾವರಣವಿರುವ ಮಲ್ಲೇಶ್ವರಂ ಎಂಟನೇ ತಿರುವಿನಲ್ಲಿ ಸುತ್ತಾಡುವುದೇ ಕಣ್ಣಿಗೆ ಹಬ್ಬ... ಹದಿನೈದನೇ ತಿರುವಿನವರೆಗೂ ಸಣ್ಣಸಣ್ಣ  ವ್ಯಾಪಾರದಂಗಡಿಗಳು ರಸ್ತೆ ಬದಿಯಲ್ಲಿ ತುಂಬಾ ಕಾಣಸಿಗುತ್ತವೆ. ಹೂವಿನ ರಾಶಿ, ಹಣ್ಣು-ಹಂಪಲು, ಆಟಿಕೆಗಳು, ಬಟ್ಟೆ ವ್ಯಾಪಾರಿಗಳು, ಚಪ್ಪಲ್ ಅಂಗಡಿ, ಬ್ಯಾಂಗಲ್ಸ್ ,ಬ್ಯಾಗ್ ಗಳು, ತಿನ್ನಲು ಸ್ವೀಟ್ ಕಾರ್ನ್,‌ಕತ್ತರಿಸಿ ಅಲಂಕರಿಸಿಟ್ಟ ಮಾವು , ಚರುಮುರಿ, ಸಮೋಸ, ಕಚೋರಿ, ಕುಡಿಯಲು ಕಾಫಿ, ಟೀ, ಜ್ಯೂಸ್ ಏನಿದೆ ?ಏನಿಲ್ಲ ? ಕೇಳುವುದೇ‌ ಬೇಡ.‌ ಅಪರೂಪಕ್ಕಾದರೂ ಬೇಟಿ ನೀಡುವುದೆಂದರೆ ನಮಗೂ ಖುಷಿ. ತುಂಬಿದ ಜೇಬಿನೊಂದಿಗೆ ಹೋದರೆ‌ ಜೇಬು ಖಾಲಿಯಾಗಿ ಕೈತುಂಬಿಸಿಕೊಂಡು ಬರಬೇಕು..
**
ಮಳೆಗಾಲ ಬೇರೆ ಅಲ್ಲಿ ನೆಲದಲ್ಲಿ ವ್ಯಾಪಾರ ಮಾಡುವವರ ಕಷ್ಟ ಕೇಳುವುದೇ ಬೇಡ. ಜೋರಾಗಿ ಮಳೆ ಸುರಿಯಿತೆಂದರೆ, ಬಟ್ಟೆ-ಚೀಲದ ವ್ಯಾಪಾರಿಗಳು ಹೂವು ಮಾರುವ ಅಜ್ಜಿ ಎಲ್ಲರೂ ಗಡಿಬಿಡಿಯಲ್ಲಿ ಟಾರ್ಪಲ್ ಮುಚ್ಚುವುದರಲ್ಲೇ ಬಿಜಿ. ಜನರು ಮಳೆ ಬಂತು ಎಂದು ಓಡುತ್ತಾ ಸಿಕ್ಕ ಸಿಕ್ಕ ಅಂಗಡಿ ಎದುರಿನಲಿ ನಿಲ್ಲುತ್ತಿದ್ದರು.. ಒಂದಷ್ಟು ಸಮಯದ ನಂತರ ಮಳೆ ಬಿಟ್ಟಿತಾದರೂ ಮರದ ಕೊಂಬೆಯಿಂದ ಹನಿಯುತ್ತಿತ್ತು.. ಟಪ್ ಟಪ್ ತಲೆಗೆ ನೀರು ಬೀಳುತ್ತಿದ್ದರೂ ವ್ಯಾಪಾರ ನಿಲ್ಲಿಸಲಾಗದು. ಬ್ಯಾಂಗಲ್ ಅಂಗಡಿಯಾತ ಟೀ ಕುಡಿಯಲು ಹೋಗಿದ್ದ ನಾವು "ಬಳೆಗೆ ಎಷ್ಟು ?"ಎಂದು ಕೇಳಲು ಅವನಿರಲಿಲ್ಲ. ಅಲ್ಲೇ ಕೆಳಗೆ ಹೂ ಮಾರುತಲಿದ್ದ ಅಜ್ಜಿ "ಏನ್ ತಗೊಂಡ್ರು ನೂರು ರೂಪಾಯಿ" ಎಂದಳು.. ಇನ್ನೊಂದಷ್ಟು ಹೆಜ್ಜೆ ಮುಂದೆ ಹೋಗಿದ್ದೆವು ಪುಟ್ಟ ಮಗುವಿನ ಕೈಹಿಡಿದು ಅವನ ತಾಯಿಯನ್ನು ನಿಲ್ಲಿಸಿ ಕೈಗಡಿಯಾರದ ವ್ಯಾಪಾರಿ ಹಿಂದಿಯಲ್ಲಿ ಬೈಯುತಲಿದ್ದ.. ಯಾಕೆ ಕೇಳಿದರೆ ,ಆ ಮಗು ಯಾವಾಗಲು ಕದಿಯುವುದಂತೆ, ಆ ದಿನ ಕೈಗೆ ಸಿಕ್ಕಿದ. ನಾವಾಗೇ ಹೊಡೆಯುವುದು ಮಾಡಿದರೆ ದೊಡ್ಡ ಜಗಳವೇ ಆಗುತ್ತದೆ,ಜನರೆಲ್ಲ ಒಟ್ಟಾಗುವ ಹಾಗೆ ಮಗುವಿನ ತಾಯಿ ನಟಿಸುತ್ತಾಳೆ. ಅದಕ್ಕೆ ಅವನ ತಾಯಿಗೆ ಹೇಳಿದ್ದು. "ಇನ್ನೊಮ್ಮೆ ಈ ಬೀದಿಯಲ್ಲಿ ಕಾಣಿಸಿಕೊಂಡರೆ ಜಾಗೃತೆ"...ಎಂದು ಗದರಿಸಿದ. ಆ ಹುಡುಗ ವಾಚ್ ಎಳೆಯುವ ರಭಸದಲ್ಲಿ ಮೂರುನಾಲ್ಕು ವಾಚುಗಳು ಬಿದ್ದು‌ ಅದರ ಗ್ಲಾಸು ಒಡೆದುಹೋಗಿತ್ತು. ದಂಡ ತೆತ್ತುವವರ್ಯಾರು? ಅದೊಂದು ನಷ್ಟವೇ ತಾನೆ.
**
ಇನ್ನೊಂದು ಕಡೆ ಸೈಕಲ್ನಲ್ಲಿ ಸಮೋಸ ಮಾರುತ್ತಿದ್ದ ಹುಡುಗ " ಸ್ವೀಟ್ಕಾರ್ನ್ ಹುಡುಗನ ಹತ್ತಿರ ಹಣಕೊಟ್ಟು ಖರೀದಿಸಿ ತಿನ್ನುತ್ತಿದ್ದ, ಇವನು ಹಾಗೆ ಸಮೋಸವನ್ನು ಹಣ ಕೊಟ್ಟು ತಿಂದನು... ಅದನ್ನ ನೋಡಿ ನನಗೆ ಖುಷಿಯಾಗಿದ್ದು ಕಾರಣ, ವ್ಯಾಪಾರಕ್ಕೆ ವ್ಯಾಪಾರವೂ ಆಯಿತು, ಸ್ವಲ್ಪ ಹೊಟ್ಟೆಯೂ ತುಂಬಿತು... ತರಕಾರಿಗೆಲ್ಲ ನೀರುಬಿದ್ದು ಕೊಳೆಯಲು ಶುರುವಾಗಿದ್ದವು.. ಮಳೆಯಲ್ಲಿ ಶೀತಗಾಳಿಗೆ ಚರುಮುರಿ ಮುದ್ದೆಯಾಗಿತ್ತು. ಕೊಳ್ಳುವವರಿರಲಿಲ್ಲ. ಝಗಮಗಿಸುವ ಬೆಳಕಿನಲ್ಲಿ ಎ.ಸಿ.ಶೋರೂಂ ನಲ್ಲಿದ್ದ ಬಟ್ಟೆತೊಡಿಸಿದ ಗೊಂಬೆಗೆ ಚಳಿ ಶುರುವಾಗಿತ್ತು... ದುಪ್ಪಟ್ಟು ಕೊಟ್ಟಾದರೂ ಬ್ರ್ಯಾಂಡೆಡ್ ವಸ್ತುಗಳಿಗೆ ಮಾರುಹೋಗುವವರಿಗೇನು ಕಡಿಮೆಯಿಲ್ಲ..ಬೀದಿಯಲ್ಲಿದ್ದ ಬಟ್ಟೆಯೇ ಎ.ಸಿ ರೂಮಲ್ಲಿ ಮಾರಾಟ ಮಾಡಿದರೂ ಜನರಿಗೆ ತಿಳಿಯುವುದೇ ಇಲ್ಲ. ಕೆಲವೊಮ್ಮೆ ಕೊಳ್ಳುವವರಿಗೆ "ವ್ಯಾಪಾರಿಗಳ‌ ತಾಳ್ಮೆ ಪರೀಕ್ಷಿಸುವ ಕೆಟ್ಟ ಚಟ"..  ರಾತ್ರಿ ೮:೩೦ ಗಂಟೆಯಾದರೂ ಜನರೇನು ಕಡಿಮೆಯಾಗರು.  ಹಬ್ಬದ ವಾತಾವರಣವೂ ನಿಲ್ಲದು..ಆದರೂ, ಅವರಲ್ಲಿನ ಸ್ನೇಹ, ಪ್ರೀತಿ-ವಿಶ್ವಾಸ, ಸಾಮರಸ್ಯ ನೋಡಿದ ಸೂಕ್ಷ್ಮ ಮನಸ್ಸು ಅಲ್ಲೇ ಸುತ್ತುತ್ತಿದೆ.. ಅದರಲ್ಲೊಬ್ಬ ರಾತ್ರೆ ಹತ್ತಾದರೂ ಹೂವನ್ನು ಗುಡ್ಡೆಹಾಕಿಕೊಂಡು ಮಾರುತ್ತಿದ್ದ. ನೂರು ಗ್ರಾಮ್ಗೆ ಹತ್ತು ರೂಪಾಯಿ...ನೂರಕ್ಕೆ‌ ಹತ್ತು...ನೂರಕ್ಕೆ ಹತ್ತು...ಎಂದು. ಅವನ ಹೆಂಡತಿ ಮನೆ ಬಾಗಿಲಿಗೆ ಹತ್ತು ಸಲಿ ಬಂದು ಇಣುಕಿಹೋದಳು. ಒಲೆಯನ್ನು ಹಿಡಿಸಿ, ಮತ್ತೆ ಆರಿಸಿಹೋಗುತ್ತಿದ್ದಳು. ಪುಟ್ಟಮಗು ಅಪ್ಪ ತರುವ ಚಾಕಲೇಟಿಗೆ ಕಾಯುತ್ತಿತ್ತು.
ಕೊರೆಯುವ ಚಳಿ. ನಡುಗುತ್ತಲೇ ಬೊಬ್ಬೆಹಾಕುತ್ತಿದ್ದ. ಕೈಕಾಲು ತಂಡಿಗಟ್ಟಿತ್ತು. ಮಳೆರಾಯ ಬೇಕಂತಲೇ "ಧೋ..." ಎಂದು ಸುರಿಯುತ್ತ ಅವನ ಸಹನೆಯ ಜೊತೆ ಆಟವಾಡುತ್ತಿದ್ದ... ನೆನೆದ ಹೂವು ಕೆ.ಜಿ.ಗೆ ಲೆಕ್ಕ ಸಿಗದೆಂದು ಬೆಳಿಗ್ಗೆಯಿಂದ‌‌ ಯಾರು ಕೊಳ್ಳಲಿಲ್ಲ. ಆ ದಿನದ ವ್ಯಾಪಾರದಲ್ಲಿ ಹಾಲು , ಹಿಡಿಯಷ್ಟು ಅಕ್ಕಿ-ಬೇಳೆ, ನಾಲ್ಕು ತರಕಾರಿ , ಮೂರು ಮೊಟ್ಟೆ ತೆಗೆದುಕೊಂಡು ಹೋದರೆ ಮಧ್ಯರಾತ್ರೆ  ಒಂದು ಊಟಮಾಡಬಹುದು. ಈ ದಿನ ಹಣದ ಚೀಲ ತುಂಬಲಿಲ್ಲ. ಗಂಟೆಯೂ ಆಯ್ತು. ಎಲ್ಲ ಬ್ಯಾಗಿಗೆ ತುಂಬಿಸಿ ಭಾರವಾದ ಮನಸ್ಸಿನಿಂದ ಮನೆಗೆ ವಾಪಾಸ್ಸಾದ.
ಬಾಗಿಲಿನಲ್ಲಿಯೇ ಹೆಂಡತಿ ಅವನ ಕೈನೋಡಿದಳು. "ಐದು ಮೊಟ್ಟೆ ತೆಗೆದುಕೊಳ್ಳುವಷ್ಟು ವ್ಯಾಪಾರವಾಯ್ತು ಮಾರಾಯ್ತಿ.. ಇದನ್ನೆ ಆಮ್ಲೇಟ್ ಮಾಡಿ ತಿನ್ನುವ. ಬೇಸರಿಸಬೇಡ.."
"ಹ್ಮ.. ನಮಗೆ ಅಡ್ಡಿಲ್ಲ. ಮಗು..?!. ಅದು ಪದೆ ಪದೇ ಏಳುತ್ತದೆ. ಹಸಿವಾಗಿ ಹೊಟ್ಟೇಲಿ ಸಂಕಟವಾಗುತ್ತೆ. ಆಗ ನಾನೇನು ಕೊಡಲಿ.?!
ನಾನು ಕೆಲಸಕ್ಕೆ ಹೋಗುತ್ತಿದ್ದೆ. ನನ್ನಿಂದಲೇ ಇಷ್ಟೆಲ್ಲ ಕಷ್ಟ ನಿಮಗೆ.. ಕ್ಷಮಿಸಿ.."
" ಅಯ್ಯೋ... ಹುಚ್ಚಿ , ನೀ ಇಲ್ಲದಿದ್ದರೆ ನಾನು ಇಷ್ಟೂ ದುಡಿಯುತ್ತಿರಲಿಲ್ಲವೇನೋ.. ? ಈಗೊಂದು ಜವಾಬ್ದಾರಿ ಬಂದಿದೆ. ನೀನೇ ನನಗೆ ಸ್ಪೂರ್ತಿ. ನಮ್ಮ ಮನೆ ಲಕ್ಷ್ಮಿ ನೀನು... ಏನೇನೋ ಯೋಚಿಸಬೇಡ.." "ಮಗು ಒಂದಾದರೂ ಬೇಕೇ ಬೇಕು, ನಮ್ಮ ನೋವು ಮರೆಸಲು ಅವಳೇ ಪುಟ್ಟದೇವತೆಯಾಗಿ ಬಂದಿದ್ದಾಳೆ. ಎಂದು ಸಮಾಧಾನ ಮಾಡುತ್ತಿದ್ದ.. ಅಲ್ಲೇ ಹತ್ತಿರದಲ್ಲಿದ್ದ ಮಗು "ಅಪ್ಪಾ... ಚಾಕಲೇಟ್ ತರಲಿಲ್ವಾ.. ಬೇಡಬಿಡು ನಾಳೆ‌ ತಾ ಆಯ್ತಾ.." ಎಂದಾಗ ಗಂಡಹೆಂಡತಿರು ಮಗುವನ್ನು ಗಟ್ಟಿಯಾಗಿ ತಬ್ಬಿಕೊಂಡು ಅಳತೊಡಗಿದರು.
ಹಾಗೆ ಮಾಡಿದ ಆಮ್ಲೇಟನ್ನು ತಿಂದು‌ ಮಲಗಿದರು..
**
ಇಂತಹದ್ದು ಸಾವಿರಾರಿದೆ.‌ ಅಂದಂದಿನ  ದುಡಿಮೆಯಿಂದ‌ ಜೀವನ ಸಾಗಿಸುವಂತಹ ಜನರು. ಚೆನ್ನಾಗಿ ವ್ಯಾಪಾರವಾದರೆ ಹೊಟ್ಟೆತುಂಬಾ ಊಟ, ಇಲ್ಲದಿದ್ದರೆ ತಣ್ಣೀರು ಬಟ್ಟೆ. ಯಾರೂ ಗಮನಿಸಿರುವುದೇ ಇಲ್ಲ ನೋಡಿ.

ಸಿಂಧು ಭಾರ್ಗವ್.

ಕವಿತೆ- ಈಗೀಗ ನಿದಿರೆಯೂ ಇಲ್ಲ ನೀರು ಬೇಕಿಲ್ಲ


(@@@)
ಈಗೀಗ ನಿದಿರೆಯೂ ಇಲ್ಲ,
ನೀರು ಬೇಕಿಲ್ಲ,
ಹೂವನು ನೋಡಿ ನಗುತಿರುವೆ,
ರೆಕ್ಕೆಯ ಸಾಲವ ಪಡೆದಿರುವೆ,
ಅಬ್ಬಬ್ಬಾ ಈ ಸೆಳೆತವೂ ಹಿತವಾಗಿದೆ..
ಒಲವಾಗಿದೆ ಎಂಬ ಸೂಚನೆ ಇದೆ..!!
**
ಎದೆಬಡಿತ ಅತಿಯಾಗಿದೆ,
ಸನಿಹದಲಿ ಬಂದು ನಿಂತಿರಬಹುದು..
ರೆಪ್ಪೆಗಳು ಮಾತನಾಡುತಿವೆ,
ಅವನ ನೆರಳು ಸುಳಿದಿದೆ ಎಂದು...
*
ಕಾಲ್ಗಳಂತು ನಿಲ್ಲದಾಗಿದೆ,
ಓಡೋಡಿ ಅವನ ಸೇರಬೇಕೆಂದು...
ಗಾಳಿಯು ತಿಳಿಸಿಹೋಯಿತು
ಅವನು ಬರುವ ಸೂಚನೆಯೊಂದು...
*
ಕಾಯುತಲಿರುವೆ ನಿನಗಾಗಿ,
ಬರುವೆಯಾ ನೀ ನನಗಾಗಿ...
ಅದೇ ನೋಟ ಅದೇ ನಗುವು ಕಾಡುತಲಿದೆ ದಿನವು..
ಎಂದು ಬರುವುದೋ ನಿನ್ನ ಕಾಣುವ ಸುದಿನವು..
ಕಾಯುತಲಿರುವೆ ನಿನಗಾಗಿ,
ಬರುವೆಯಾ ನೀ ನನಗಾಗಿ...!!

~ ಸಿಂಧುಭಾರ್ಗವ್

ಕವಿತೆ- ನಿನ್ನ ಅರಸುತ್ತಾ

(@@@)

ಕವಿತೆ - ನಿನ್ನ ಅರಸುತ್ತಾ
********************
ನಿನ್ನ ಅರಸುತ್ತ ನೀ ತಿರುಗುತ್ತಿದ್ದ ಬೀದಿಗೊಮ್ಮೆ ಹೋಗಿದ್ದೆ...!
ಅಲ್ಲೆಲ್ಲ ಸಾವಿರಾರು ಹೆಜ್ಜೆಗುರುತುಗಳು ಅಚ್ಚಾಗಿದ್ದವೇ ಹೊರತು ನೀನೆಲ್ಲೂ ಕಾಣಿಸಲೇ ಇಲ್ಲ...!
ನಿನ್ನ ನಗು, ದನಿ ಪ್ರತಿಧ್ವನಿಸುತ್ತಲೇ ಇತ್ತು ಹೊರತು ನೀನೆಲ್ಲೂ ಕಾಣಿಸಲೇ ಇಲ್ಲ...!
ದಿನಪೂರ್ತಿ ಅಲೆದರೂ ದಣಿದೆನೇ ವಿನಃ ನೀನೆಲ್ಲೂ ಕಾಣಿಸಲೇ ಇಲ್ಲ...!

ಯಾರಿಗೂ ಕಾಣಿಸದ ನೀನು ನನ್ನ ನೆರಳಿನ ಜೊತೆ ನಡೆದುದಂತು ನಿಜ..!
ನೀನು ಸ್ಪರ್ಶಿಸಿದಂತಾಗಿ ಮೈಜುಮ್ ಎನಿಸಿದ್ದಂತು ನಿಜ..!
ನಿನ್ನ ಹೆಜ್ಜೆ ಮೇಲೆ ನಾನು ಹೆಜ್ಜೆ ಇಟ್ಟು ಮನದಲ್ಲೇ ಲಜ್ಜೆಪಟ್ಟದ್ದಂತು ನಿಜ...!
ಚಿಟಪಟ ಮಳೆಯಲಿ ನೆನೆಯುವಾಗ ನೀ ಕೊಡೆ ಹಿಡಿದಂತೆ ಭಾಸವಾದುದು ನಿಜ..!
ಪ್ರೀತಿಯ ಸವಿ ನೆನಪಿಗೆ ಆ ದಿನಪೂರ್ತಿ ಸಾಕ್ಷಿಯಾದದ್ದಂತೂ ನಿಜ..!

ಆದರೆ ನೀ ಎಲ್ಲೂ ಕಾಣಿಸಲೇ ಇಲ್ಲ...!!

 #ಪ್ಯಾರ್_ಮೆ_ಹಮ್_ಚಲ್ತೆ_ಚಲ್ತೆ.. 😊
😍#ಸಿಂಧು ಭಾರ್ಗವ್ 😍

ಅದ್ಭುತ ಸಾಲುಗಳ ಕೂಡಿಡಲೇ ಬೇಕು

ಅದ್ಭುತ #Photography,  ಯಾರಿಗೂ ಹೊಳೆಯದಂತಹ #Thoughts,  ಇದೆಲ್ಲದಕ್ಕಿಂತಲೂ ಮಿಗಿಲಾಗಿ ಶುದ್ಧ ಅಂತಃಕರಣ,, ನಿಮ್ಮ ಪ್ರತಿಭೆಗೆ ನನ್ನದೊಂದು ದೊಡ್ಡ ಸಲಾಮ್.
.
ಸಂಸಾರದೊಳಗಿನ ಎಲ್ಲಾ ಜಂಜಡಗಳ ನಡುವೆಯೂ #ಮಗುವಿನಂತೆ ಬದುಕಿಬಿಡುವುದೆಂದರೆ, ಅದೊಂಥರಾ  Capacity.  ಅದೇನೋ ಹಂಬಲ, ಹುಡುಕಾಟ, ನಿಮ್ಮ ಬರಹಗಳ ಎಡೆಯಲ್ಲಿ ಇಣುಕುತಿದೆಯಲ್ಲ, ಅದು ನಿಮ್ಮನ್ನು ಹುಡುಕಿಕೊಂಡು ಬೇಗ ಬರಲಿ. ಮತ್ತೆಂದು ನಿಮ್ಮನ್ನು ಬಿಟ್ಟು ತೆರಳದಂತೆ ಗಟ್ಟಿಯಾಗಿ ತಬ್ಬಿಕೊಂಡು ಬಿಡಲಿ. ನನ್ನ ಮೇಲಿಟ್ಟಿರುವ ಪ್ರೀತಿ ಕಾಳಜಿಗೆ ಆಭಾರಿ.

ಜನುಮ ದಿನದ ಭಾಷಣ (ಹಾಸ್ಯ ಲೇಖನ)

ಇಂದಿನ ಈ ಸುಸಂದರ್ಭದಲ್ಲಿ ಶಶಾಂಕ್ ರವರ ಒತ್ತಾಯದ‌ ಮೇರೆಗೆ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದೇನೆ. ಮಾತನಾಡಲೇಬೇಕು ಎಂಬ ಒತ್ತಾಯಕ್ಕೆ ಮಣಿದು ನೀವೆಲ್ಲ ಮುಖಕ್ಕೆ ಮೊಟ್ಟೆ ಎಸೆಯುವುದರೊಳಗೆ ಮೂರು ಮಾತನಾಡಿ ಮುಗಿಸಲಿದ್ದೇನೆ.. 😝
*
ಮೊದಲಿಗೆ ನಲ್ಮೆಯ ಸಹೋದರ(ರಿ)ಯರಿಗೂ ,ಸ್ನೇಹಿತ ವರ್ಗಕ್ಕೂ ಹೃತ್ಪೂರ್ವಕ ವಂದನೆಗಳು..👏 ಜನುಮ ದಿನವನ್ನು ಆಚರಿಸುವುದಿಲ್ಲ‌ ಎಂದು ಯೋಚಿಸಿದ್ದೆ. ಆದರೆ ನಿಮ್ಮೆಲ್ಲರ ಪ್ರೀತಿಯಿಂದ ಇವತ್ತು ಮನದಲ್ಲಿ ಒಂದು ರೀತಿಯ ಹಬ್ಬದ ವಾತಾವರಣ ಮೂಡಿದೆ..ಉತ್ಸವ ಮೂರ್ತಿ ತರಹ. ನಿಜ. ಮೇಲ್ಮನೆಯ ಅಕ್ಕನಿಂದ(ಮಾರ್ವಾಡಿ'ಸ್) ಬೆಳಿಗ್ಗೆ ಪಲಾವ್, ಎದುರುಮನೆ ಅಕ್ಕನಿಂದ( ಕೊಂಕಣೀಸ್ ) ಮಧ್ಯಾಹ್ನ ಊಟ, ಸಂಜೆಗೆ ಪಕ್ಕದ ಮನೆ ಅಕ್ಕನಿಂದ(ತಮಿಳಿಯನ್ನರು) ಕ್ಯಾರೇಟ್ ಹಲ್ವಾ..
ಅಬ್ಬಾ.. ಎಲ್ಲರ ಮನೆಮಗಳು ನಾನು. ಊರಿಗೆ ಹೋದರು ಹೀಗೆ ಎಲ್ಲರು ಪ್ರೀತಿಯಿಂದ ಪತ್ರೊಡೆ, ಸಿಹಿಕಡುಬು, ಅಮ್ಮ,  ಅಪ್ಪ ಹೀಗೆ ಎಲ್ಲರೂ ತಿನ್ನಸುವುದೇ..
ನಿಸ್ವಾರ್ಥ ಪ್ರೀತಿ ಸ್ನೇಹವನ್ನು ಹಂಚಿದಷ್ಟು ವಾಪಾಸ್ಸು ಬರುತ್ತದೆ ಎನ್ನುವುದು ಸಾಬೀತಾಯಿತು...
ಬಹುಮುಖ್ಯವಾಗಿ ನನ್ನ ಕಡೆಯಿಂದ ಪಾರ್ಟಿ ?! ಮನೆಗೆ ಕರೆಯುವ ಅಂತ ಇದ್ದೇ. ಆದರೆ, ನನಗೆ " #ಗಂಜಿ ಹುರುಳಿ_ಚಟ್ನಿ " ಬಿಟ್ಟರೆ ಬೇರೇನು ಮಾಡಲು ಬರದು. ನಿಮಗೆ ಇಷ್ಟ ಆಗುತ್ತೋ ಇಲ್ವೋ.. 😢😖😇
ಹೋಟೆಲ್ ಗೆ ಕರೆಯುವ ಅಂದ್ರೆ " ಹೊರಗಿನ ಫುಡ್ ಆರೋಗ್ಯ ಕೆಡಿಸುತ್ತದೆ " ಎಂದು ಡಾಕ್ಟರ್ ದಿನವೂ ಟಿ.ವಿ , ಪೇಪರ್ಲಿ ಹೇಳ್ತಾ ಇರ್ತಾರೆ. ನಿಮ್ಮ ಬಗ್ಗೆ ತುಂಬಾಆಆ... ಕಾಳಜಿ ಎನಗೆ. 😝 ಸೋ ಏನುಮಾಡಲಿ ಎಂಬುದೇ ಗೊಂದಲವಾಗಿದೆ..😝👏

ಕೊನೆಯದಾಗಿ,
ಎಲ್ಲರ ಹಾರೈಕೆಗಳಿಗೂ ಲೈಕ್ ಮಾಡುತ್ತೇನೆ ಸಮಯಬೇಕು.. ಇನ್ನು ಒಂದುವಾರ ಅದೇ ಕೆಲಸ ನನಗೆ. ನನ್ನಕಡೆಯಿಂದ ಯಾವ ಪೋಸ್ಟ್ ಬರುವುದಿಲ್ಲ..
ನಿಮ್ಮೆಲ್ಲರ ಪ್ರೀತಿ ಹೀಗೆ ಇರಲಿ.
ವಂದನೆಗಳೊಂದಿಗೆ,
😍 ಸಿಂಧು_ಭಾರ್ಗವ್.. 😍

I love my parents

ನಾನು ಒಂದು ಕತೆ ಹೇಳಲಾ?!?
~~~~~~~~~~~~~~
ರೈತಾಪಿ ಕುಟುಂಬದಲ್ಲಿದ್ದ ದಂಪತಿಗಳಿಗೆ ಕೃಷಿ ಬಿಟ್ಟರೆ ಬೇರೆ ಏನೂ ತಿಳಿದಿರಲಿಲ್ಲ..
ಗಂಡ ಹೆಂಡತಿ ನಾಲ್ಕು ವರುಷದ ಮಗು ಚಿಕ್ಕ ಸಂಸಾರವಾದರು ಬಡತನವೇ ಹೊದ್ದುಕೊಂಡಿದ್ದರು. ಹಸು, ಕೊಟ್ಟಿಗೆ, ಗದ್ದೆ ಮನೆ ಕೆಲಸವೇ ಜಾಸ್ತಿಯಾಗಿತ್ತು. ಚಿಕ್ಕ ಹೋಟೆಲ್ ಬೇರೆ ಇತ್ತು. ಆ ಪುಟ್ಟ ಮಗುವನ್ನು ಕಂಬಕ್ಕೆ ಕಟ್ಟಿಹಾಕಿ ಹಸುವಿಗೆ ಒಂದು ಬುಟ್ಟಿ ಹುಲ್ಲು ತರಲು ಹೋಗಿತ್ತಿದ್ದರು ತಾಯಿ. ತಂದೆಗೂ ಮೈತುಂಬಾ ಕೆಲಸ.. ಹಾಗೆ ಎರಡನೇ ಗರ್ಭಿಣಿ ಎಂಬ ಸುದ್ಧಿ ಬಂದಿತು. ಕೆಲಸವೇನೂ ಕಡಿಮೆಯಾಗಲಿಲ್ಲ. ಬಸುರಿ ಹೆಂಗಸು ಬೆನ್ನು ಬಾಗಿಸಿ ಕೆಲಸ ಮಾಡಿದಷ್ಟು ಒಳ್ಳೆಯದು , ಹೆರಿಗೆ ಸುಲಭವಾಗುತ್ತೇ...ಎಂಬುದು ಹಿರಿಯರ ಅಂಬೋಣ.. ಅವರಿಗೂ ಹೌದೇನೋ.
?! ಎಂದು ಕೆಲಸ ಮಾಡುತ್ತಲೇ ಇದ್ದರು. ಏಳು ತಿಂಗಳ ಗರ್ಬಿಣಿಯಾಕೆ. ಒಮ್ಮೆ #ಏತದಿಂದ ನೀರು ಸೇದಿ ನಾಲೆಗೆ ಹಾಯ ಬಿಡುತ್ತಿರುವಾಗ ವಿಪರೀತ ಹೊಟ್ಟೆನೋವು ಕಾಣಿಸುತ್ತದೆ . ಬೊಬ್ಬೆ ಹಾಕಲು ಶುರುಮಾಡಿದಳು. ಗಂಡನಿಗೆ ಕೈಕಾಲು ಆಡುತ್ತಿರಲಿಲ್ಲ. ಸರ್ಕಾರಿ ಹತ್ತಿರದ ಆಸ್ಪತ್ರೆ ಗೆ ಕರೆದುಕೊಂಡು ಹೋದರು.

ವೈಧ್ಯರು ಪರೀಕ್ಷಿಸಿ "ಏನು? ತಾಯಿ-ಮಗುವನ್ನು ಸಾಯಿಸಬೇಕು ಅಂತ ಇದ್ದೀರಾ..?! ಮೊದಲ ಮಗುವಾಗುವಾಗ ಇರುವ ಕಾಳಜಿ ಎರಡನೇ ಮಗುವಿಗೆ ಯಾಕಿಲ್ಲ..?! ಇವರನ್ನು ಮನೆಗೆ ಕಳುಹಿಸಲಾಗದು? ಮಗು ಇನ್ನು ಬೆಳವಣಿಗೆ ಹೊಂದಿಲ್ಲ, ಹೆರಿಗೆಯಾಗುವ ತನಕ ಬೆಡ್ರೆಸ್ಟ್ ನಲ್ಲೆ ಇರಬೇಕು. ಇಲ್ಲದಿದ್ದರೆ ಇಬ್ಬರೂ ಸಾಯಬಹುದು.. ಎಂದು ಗದರಿಸಿದರು.
ಗಂಡನಿಗೆ ಭಯವಾಯಿತು. ಮನೆಯಲ್ಲಿ ಮಗು ಚಿಕ್ಕದು, ರಾಶಿಬಿದ್ದ ಕೆಲಸಗಳು, ಕೈಲಿ ಕಾಸಿಲ್ಲ, ಹೋಟೆಲ್ ನಡೆಸುವುದಾ!? ಇವಳನ್ನು ನೋಡಿಕೊಳ್ಳುವುದಾ? ಆ ಮಗುವನ್ನು?! ಯಾರ ಸಹಾಯವೂ ಇಲ್ಲ. ಒಮ್ಮೆಗೆ ತಲೆ ಕೆಟ್ಟು ಹೋಗುತ್ತದೆ..
ಆಯ್ತು ಎಂದು ಒಪ್ಪಿದರು. ಮಗು ಹಡೆಯುವ ತನಕ ಆಸ್ಪತ್ರೆಯಲ್ಲೇ..
 ಮೂರು ಹೊತ್ತು ತಿಂಡಿ, ಊಟ, ಹಾಲು,ಹಣ್ಣುಹಂಪಲು, ಸ್ನೇಹಿತರ ಜೊತೆ ಮಾತುಕತೆ, ಕಷ್ಟಸುಖ ಹಂಚಿಕೊಳ್ಳುವುದು, ದೇವರ ದ್ಯಾನ, ಗಂಡನ ಕಷ್ಟ ನೋಡಿ ಒಳಗೊಳಗೆ ಅಳುವುದು, ಗಂಡನ ಮೇಲೆ ಇನ್ನೂ ಹೆಚ್ಚಾದ ಪ್ರೀತಿ.. ಹೀಗೆ ಗರ್ಭದೊಳಗಿದ್ದ ಮಗುವಿಗೆ ಎಲ್ಲವೂ ಎರಕವಾಯಿತು..
ಆರೋಗ್ಯಪೂರ್ಣ, ಗುಂಡಮ್ಮ ಹುಟ್ಟಿದಳು.
ಮೊದಲ ಬಾರಿ ನೋಡಿದ ತಾಯಿ " ಅಯ್ಯೋ ಮುಖ ಒಳ್ಳೆ ಗುಂಬಳಕಾಯಿ ತರ ಇದೆ. ನನಗೆ ಬೇಡ ಈ ಮಗು ಎಂದಿದ್ದರಂತೆ.
(@@@)
ಇದು ನನ್ನ ಹೆತ್ತವರ ಕತೆ.
ಅಂದರೆ ನನ್ನದೇ ಕತೆ.
#ಕತೆಯಲ್ಲ_ಇದು_ಜೀವನ.

ಅದಕ್ಕೇ ಹೇಳೊದು..
#ಮಗುವಿಗೆ_ಜನ್ಮ
#ತಾಯಿಗೆ_ಪುನರ್ಜನ್ಮ..

~ ಸಿಂಧುಭಾರ್ಗವ್ .‌ಬೆಂಗಳೂರು

ರಾಧಾಕೃಷ್ಣ ಮಾತುಕತೆ ಕವನ ಶ್ರೀಮತಿ ಸುರಭಿ ಅವರಿಂದ

(@@@)

ಗೋಕುಲದಲ್ಲಿ ಸಖಿಯರ ಸೇರುತಲಿ 
ನಗುತ ಹಾಡುತಲಿ , ಒಲವ ತೋರುತಲಿ 
ಕೃಷ್ಣ ನ ಜೊತೆ ಸರಸವಾಡಿರಲು 
ರಾಧೆಯ ಮನ ಸುಮ್ಮನಿರುವುದೇ 
ತನು ಮನ ಬೆಂಕಿಯಾಗದೇ
*
ಗೋಪಿಕೆಯರ ಜೊತೆ ಕೂಡಿದರೇನು 
ಕಂಡದ್ದೆಲ್ಲ ನಿಜವೇನು , ಅನುಮಾನವೇನು 
ಕೃಷ್ಣನ ಮನದಲ್ಲಿ ರಾಧೆಯೇ ತುಂಬಿರಲು 
ಸಖಿಯರಲ್ಲಿ ರಾಧೆಯನ್ನು ಕಂಡಿರಲು 
ನೊಂದಳೇ ರಾಧೆ , ಕೃಷ್ಣ ನ ಅರಿಯದೇ...?

ಸುತ್ತಿರಲು ಸಖಿಯರು ಅತ್ತ , ಇತ್ತ 
ರಾಧೆಯ ಮನವು ಕೃಷ್ಣನ ನೆನೆಯುತ್ತ 
ಮರೆವನೇನೋ ಎಂಬ ಭಯದಿ ,
ಕೂತಳು ರಾಧೆಯು ಚಿಂತಿಸುತ್ತ

ನಕ್ಷತ್ರ ಗಳ ನಡುವೆ ಚಂದ್ರ ನಂತೆ 
ಸಖಿಯರ ನಡುವೆ ರಾಧೆ ನೀನಂತೆ 
ಹಿಂದು , ಮುಂದು ಅರಿಯದೇ 
ಅಪವಾದಿಸಿದಳೇ ರಾಧೆ

ಗೋಪಿಯರು ಬಂದು ಹೋಗುವರು 
ರಾಧೆಯನ್ನು ಹೋಲುವರೇ ಅವರು? 
ಹಗಲೆನ್ನದೆ , ಇರುಳೆನ್ನದೆ ಕೃಷ್ಣ ನ 
ಎದೆಯ ಕನವರಿಕೆಗಳು ರಾಧೆಯದೆ

ಕೃಷ್ಣನ ಕಮಲದಂತ ಕಾಂತಿ 
ಕಸಿದುಕೊಳ್ಳುವರೆಂದು ಭೀತಿ 
ಸಖಿಯರ ಮೋಹಕ ಸೆಳೆತ 
ನಲ್ಲನ ಸೆರೆಮಾಡಿತೆಂದು 
ರಾಧೆಯ ಎದೆಯ ಮಿಡಿತ

ಗೋಪಿಕೆಯರ ಸಂಗದಲ್ಲಿ 
ನೆನಪು ಮರೆಯಾಗದಿರಲಿ 
ಬೇಡಿದಳು ರಾಧೆ , ಕೃಷ್ಣ ನಲ್ಲಿ 
ಕೃಷ್ಣ ನು ತಬ್ಬಿ ಬರವಸೆ ಇತ್ತನು 
ರಾಧೆಗೆ ಕಣ್ಣು ಗಳಲ್ಲಿ....
(@@@)