Wednesday 10 May 2017

ಲೇಖನ : ಹಿಂದೇ ಇರುವ ಮುಖಪರಿಚಯ ಇಲ್ಲದ ಹಿಂಬಾಲಕರು

ಲೇಖನ : ಹಿಂದೇ ಇರುವ ಮುಖಪರಿಚಯ ಇಲ್ಲದ ಹಿಂಬಾಲಕರು

ಮೊದಲೆಲ್ಲಾ ಸಮಾಜದಲ್ಲಿನ ಉನ್ನತ ಸ್ಥಾನದಲ್ಲಿರುವ  ವ್ಯಕ್ತಿಗಳು ಜನರಿಗೆ ತಿಳಿಸಬೇಕಾದ ವಿಷಯವನ್ನು ತಲುಪಿಸಬೇಕಾದರೆ ಮಾಧ್ಯಮಗಳ ಸಭೆ ಕರೆಯುತ್ತಿದ್ದರು. ಹಳ್ಳಿಯಿಂದ ದಿಲ್ಲಿಯ ಜನರೂ ಕೂಡ ಬೆಳಗಾಯಿತೆಂದರೆ ರೇಡಿಯೋ ಕೇಳಿಕೊಂಡೆ ದೇಶವಿದೇಶದ ಆಗುಹೋಗುಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದರು.ನಿನ್ನೆ ನಡೆದ ಘಟನೆಗಳೋ, ಮಾಹಿತಿಗಳೋ ಪತ್ರಿಕೆಗಳ ಮೂಲಕ ಮರುದಿನ ಬೆಳಿಗ್ಗೆ ಕೈಸೇರುತ್ತಿತ್ತು‌ . ಆದರೀಗ ಖಾಸಗೀತನದ ಹಾವಳಿ ಹೆಚ್ಚಾಗಿ ಮಾದ್ಯಮಗಳು ನಾಯಿಕೊಡೆಯಂತೆ ತಲೆಯೆತ್ತಿವೆ. ಒಂದು ವಿಷಯವನ್ನು ತಮಗೆ ಬೇಕಾದ ಹಾಗೆ ಅರ್ಥೈಸಿಕೊಂಡು ,ತಿರುಚಿ ದಿನದ ೨೪ಗಂಟೆ ಬೇಕಾದರೂ ಸಂಬಂಧಪಡದ ನಾಲ್ಕು ಜನರನ್ನು ಕರೆದುಕೊಂಡು ಬಂದು ಚರ್ಚೆ ಮಾಡುತ್ತಿದ್ದೇವೆ ಎಂದು ಬೊಬ್ಬೆ ಹಾಕುತ್ತಾ  ಕುಳಿತುಕೊಳ್ಳುತ್ತಾರೆ. ಏನು ಮಾಡಬೇಕು ಎಂದು ಸಲಹೆ ಕೊಡುವುದ ಬಿಟ್ಟು ಅವರಿವರ ತಪ್ಪು ಹುಡುಕುತ್ತಾ ಕುಳಿತಿರುತ್ತಾರೆ. ಹಾಗೆಯೇ ಅಮಾಯಕರನ್ನು ವಂಚಿಸುತ್ತಾರೆ. ನೇರಪ್ರಸಾರದ ಶೋಕಿ ನಾವೇ ಮೊದಲು ವಿಷಯ ಬಿತ್ತರಿಸುತ್ತಿದ್ದೇವೆ ಎಂಬ ಎಕ್ಸಕ್ಲೂಸಿವ್ ನ್ಯೂಸ್ಗಳು ಹೆಚ್ಚಾಗತೊಡಗಿವೆ. ಇದರಿಂದಾಗಿ ಪ್ರತಿಕೀಯೆಗಳು ಕೂಡಲೇ ಬರತೊಡಗಿವೆ.
ಅನೇಕ ಸ್ವಯಂ ಸಂಘಟನೆಗಳು, ಅಭಿಮಾನಿಗಳು, ಸಂಘ ಸಂಸ್ಥೆಗಳು ಅಥವಾ ಹಾಗೆ ಕರೆಸಿಕೊಳ್ಳುವವರು ಬೀದಿಗಿಳಿದು ಕಂಡಕಂಡಲ್ಲಿ ಜಗಳ,ಮುಷ್ಕರ, ಹೊಡೆದಾಟಕ್ಕೆ ನಿಲ್ಲುತ್ತಾರೆ.  ವೈಮನಸ್ಸು ಅತಿಯಾಗಲು ಇವು ಕಾರಣವಾಗುತ್ತಿವೆ. ಅಲ್ಲಿಯೂ ಹಣದ ಹೊಳೆ ಹರಿಸಿ ಅನೇಕ ಕಾಣದ ಕೈಗಳು ಪರಿಸ್ಥಿಯನ್ನು ಅತಿರೇಕಕ್ಕೇರಲು ದಾರಿಮಾಡಿಕೊಡುತ್ತಾರೆ.
.
ಈಗ ಎಲ್ಲರ ಕೈಯಲ್ಲೂ ಮೊಬೈಲ್ ಬಂದಿದೆ. ಕುಂತರೂ ನಿಂತರೂ ಎಲ್ಲಿ ತಿರುಗಾಡಿದರೂ ಜನರಿಗೆ ಊರಲ್ಲಿರುವ ಹೆತ್ತವರಿಗೆ ಹೇಳಲು ಸಮಯವಿರುವುದಿಲ್ಲ. ವಾರಾಂತ್ಯಕ್ಕೆ ಕರೆ ಮಾಡಿ ತಿಳಿಸುತ್ತಾರೆ. ಆದರೆ ಸೆಲ್ಫೀ ಎಂಬ ಹೆಸರಿನಲ್ಲಿ ಫೇಸ್ಬುಕ್, ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿ ಇಡೀ ಜಗತ್ತಿಗೆ ಗೊತ್ತುಮಾಡುತ್ತಾರೆ. ನೆಂಟರಿಷ್ಟರಿಗೂ ಅದರ ಮುಖಾಂತರವೇ ತಿಳಿಯಬೇಕಾಗಿ ಬರುವುದು ವಿಷಾದದ ಸಂಗತಿ. ತಾನು ಮನಸ್ಸಿನಲ್ಲಿ ಗೊಣಗಿಕೊಳ್ಳುವುದನ್ನೂ ಟ್ವೀಟರ್ ನಲ್ಲಿ ಹಾಕಿ ಗಲಭೆ ಎಬ್ಬಿಸುತ್ತಾರೆ. ಅದರಲ್ಲಿಯೂ ಯಾವುದೇ ಜಾತಿ, ಧರ್ಮ, ಭಾಷೆ ನೆಲದ ವಿಚಾರವಾಗಿ ಯಾರೂ ವಿವಾದಾತ್ಮಕ ಹೇಳಿಕೆ ನೀಡಲು ಹೋಗಬಾರದು ಎಂಬ ಸಾಮಾನ್ಯ ಪ್ರಜ್ಞೆ ಯನ್ನು ಬೆಳೆಸಿಕೊಳ್ಳಬೇಕು. ಪ್ರತಿಯೊಂದು ಧರ್ಮದಲ್ಲಿಯೂ ಅವರದೇ ಆದ ನಂಬಿಕೆಗಳಿರುತ್ತವೆ‌ ಅದನ್ನು ವ್ಯಂಗ್ಯ ಮಾಡುವುದಾಗಲಿ, ಲೇವಡಿ ಮಾಡುವುದಾಗಲಿ, ಅಗೌರವ ತೋರುವುದಾಗಲಿ ಮಾಡಬಾರದು. ಇಷ್ಟವಿಲ್ಲದಿದ್ದರೆ ಬಿಟ್ಟುಬಿಡಬೇಕು. ಯಾರೂ ಒತ್ತಾಯ ಮಾಡುವುದಿಲ್ಲ‌ ಅದನ್ನು ಬಿಟ್ಟು ಸಮಾಜದ ಸ್ವಾಸ್ಥ್ಯ ಹಾಳು ಮಾಡುವಂತಹ ಪೋಸ್ಟ್ ಮಾಡುವುದಾದರೂ ಯಾಕೆ..? ಒಂದಷ್ಟು ಜಗಳಗಳಾದ ಮೇಲೆ ಕ್ಷಮೆ ಕೇಳುವುದಾದರೂ ಯಾಕೆ..? ವಿವೇಕವಿರುವವರಾದರೆ ಯೋಚಿಸಿ ಮಾತನಾಡುತ್ತಾರೆ. ಇಲ್ಲದಿದ್ದರೆ ಬಾಯಿಮುಚ್ಚಿಕೊಂಡಿರುತ್ತಾರೆ.  ಸಾಮಾಜಿಕ ಜಾಲತಾಣದಲ್ಲಿರುವ ಫಾಲೋವರ್ಸ್ ಯಾವತ್ತಿಗೂ ಜೊತೆಗಿರುವುದಿಲ್ಲ.  ಜೊತೆಗಿರುವುದು ಕಷ್ಟಕಾಲಕ್ಕೆ ಸಹಾಯ ಮಾಡುವುದು ತಮ್ಮ ಹೆತ್ತವರು, ಒಡಹುಟ್ಟಿದವರು, ಸ್ನೇಹಿತರ ವರ್ಗಮಾತ್ರವೇ. ಒಂದಷ್ಟು ಲೈಕ್ ಒಂದಷ್ಟು ಹಂಚಿಕೊಳ್ಳುವುಕೆ, ತಮಗುಷ್ಟವಾದ ಕಮೆಂಟ್ಗಳು ಬಂದ ತಕ್ಷಣ ಅವರೆಲ್ಲ ನಮ್ಮ ಬೆಂಬಲಕ್ಕಿದ್ದಾರೆ ಎಂದರ್ಥವಲ್ಲ. ಬದಲಾಗಿ ಸಮಾನ ಮನಸ್ಕರು ಎಂದು ಪರಿಗಣಿಸಬಹುದು. ಈಗೀಗ ಮನಸಿಗೆ ತೋಚಿದ್ದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡುವುದಕ್ಕೆ ಕಡಿವಾಣವೂ ಹಾಕುತ್ತಿದ್ದಾರೆ. ಯಾರ ತೇಜೋವಧೆ ಮಾಡುವಂತಹ ಮಾನನಷ್ಟ ಮಾಡುವಂತಹ ಪೋಸ್ಟ್ ಗಳನ್ನು ಪ್ರಕಟಿಸುವಂತಿಲ್ಲ. ಕಾನೂನಾತ್ಮಕವಾಗಿ ಕೇಸು ಹಾಕಿ ಅವರನ್ನು ಒಳಗೆಕಳುಹಿಸಬಹುದು ಇಲ್ಲವೇ ದಂಡವಿಧಿಸಬಹುದು. ಆಗ ಪರವಾಗಿ ಕಮೆಂಟಿಸಿದವರಾಗಲಿ ಹೊಗಳಿದವರಾಗಲಿ ಜೊತೆಗೆ ಬರುವುದಿಲ್ಲ. ಹತ್ತಿರವಿದ್ದ ಹೆತ್ತವರೋ, ಸ್ನೇಹಿತರೋ ಸಹಾಯಕ್ಕೆ ನಿಲ್ಲಬೇಕು.
.
ಈಗಿನ ಯುವಜನತೆ ಸಮಯವನ್ನು ವ್ಯರ್ಥಮಾಡುತ್ತಾ, ತಮ್ಮ ಕರ್ತವ್ಯವನ್ನು ಮರೆಯುತ್ತಾ ಮೊಬೈಲ್ ನ ವ್ಯಸನಿಗಳಾಗಿದ್ದಾರೆ.

- ಸಿಂಧು ಭಾರ್ಗವ್.

No comments:

Post a Comment