Wednesday 10 May 2017

ಜೀವನದ ಸಂತೆಯಲಿ - ಬದುಕುವ ಕಲೆ ಬೆಳೆಸಿಕೊಳ್ಳಿ

ಜೀವನದ ಸಂತೆಯಲಿ - ಬದುಕುವ ಕಲೆ ಬೆಳೆಸಿಕೊಳ್ಳಿ.

ಕೆಲ ಹೆಣ್ಣು ಮಕ್ಕಳಿಗೆ ತವರು ಮನೆಯಲ್ಲಿ ಏನೂ ಸಿರಿತನ ಇರುವುದಿಲ್ಲ. ಬಡನದಲ್ಲಿಯೇ ಜೀವನ ಕಳೆದಿರುತ್ತಾರೆ.
ಆದರೆ ಗಂಡನ ಮನೆಯಲ್ಲಿ ಬೇಕಾದಷ್ಟು ಆಸ್ತಿ-ಅಂತಸ್ತು ಹಣಕಾಸಿನಲ್ಲಿ ಉತ್ತಮರಾಗಿರುತ್ತಾರೆ.
ಕೆಲ ಹೆಣ್ಣು ಮಕ್ಕಳು ತವರು ಮನೆಯಲ್ಲಿ ಮಹಾರಾಣಿಯರಂತೆ ಬೆಳೆದಿರುತ್ತಾರೆ. ಎಲ್ಲದಕ್ಕೂ ಲೆಕ್ಕಚಾರ ಹಾಕುತ ಜೀವನ ನಡೆಸುವ ಸಂಗಾತಿ ಮತ್ತು ಅವರ ಮನೆಯವರು ಸಿಗುತ್ತಾರೆ.
ಕೆಲ ಹೆಣ್ಣು ಮಕ್ಕಳಿಗೆ ತವರು ಮನೆಯಲ್ಲಿಯೂ ಕಷ್ಟದ ಜೀವನ , ಗಂಡನ ಮನೆಯಲ್ಲಿಯೂ ಕಷ್ಟದ ಜೀವನವೇ.
ಇನ್ನು ಕೊನೆಯದಾಗಿ , ಕೆಲ ಹೆಣ್ಣು ಮಕ್ಕಳು ಹುಟ್ಟಿನಿಂದಲೇ ಸಿರಿತನದ ಸುಪ್ಪತ್ತಿಗೆಯಲ್ಲಿಯೇ ಬದುಕಿ ಅಭ್ಯಾಸ, ಎಲ್ಲದಕ್ಕೂ ಆಳು-ಕಾಳು ,ಕಷ್ಟ ಎಂದರೆ ಏನೂ ಅಂತಾನೇ ಗೊತ್ತಿರುವುದಿಲ್ಲ. ಹಾಗೆ ಸಿರಿವಂತನ ಅಳಿಯನನ್ನೇ ನೋಡಿ ಮದುವೆಯೂ ಮಾಡಿಸುತ್ತಾರೆ.
***
ಯಾಕೆ ಹಂಚಿಕೊಂಡೆನೆಂದರೆ ,  ಬಾಲ್ಯದ ಜೀವನವನ್ನು ಕಷ್ಟದಿಂದ ಕಳೆದವರು ಮುಂದೆ ಬರುವ ಎಂತಹುದೇ ಕಠಿಣ ಸಂದರ್ಭವನ್ನು ಎದುರಿಸಲು ಶಕ್ತರಾಗಿರುತ್ತಾರೆ. ಬಾಲ್ಯದಲ್ಲಿಯೇ ಹಣದ ಬೆಲೆ ತಿಳಿಯದೇ ಬೆಳೆದ ಮನುಷ್ಯ ಮುಂದೆ ಎದುರಾಗುವ ಕಷ್ಟಗಳಿಗೆ ಮೈಯೊಡ್ಡಲು ಸೋಲುತ್ತಾನೆ. ಆ ಸೋಲನ್ನು ಅವಮಾನವೆಂಬಂತೆ ಪರಿಗಣಿಸಿ ತುಂಬಾ ಖಿನ್ನತೆಗೊಳಗಾಗುತ್ತಾನೆ.

ಪ್ರತಿಯೊಬ್ಬರೂ ನಮ್ಮ ಜೀವನ 'ಹೀಗೆ' ಇರಬೇಕು ಎಂಬ ನೂರಾರು ಕನಸುಗಳನ್ನು ಕಟ್ಟಿಕೊಂಡಿರಬೇಕು. ಇಲ್ಲದಿದ್ದರೆ ಪ್ರಗತಿ ಕಾಣಲು ಸಾಧ್ಯವಿಲ್ಲ. ಬಡವನಾಗಿ ಹುಟ್ಟುವುದು ತಪ್ಪಲ್ಲ, ಬಡವನಾಗೇ ಸಾಯುವುದು ತಪ್ಪು ಎಂದು ಹಿರಿಯರ ಮಾತೇ ಇದೆ‌. ಹಾಗಾಗಿ ನಾವು ಒಂದು ಗಠ ಬೆಳೆಸಿಕೊಳ್ಳಬೇಕು, ನಾವು ಎಲ್ಲರಂತೆ ಸ್ಥಿತಿವಂತರಾಗಬೇಕು ಅದಕ್ಕೆ ಕಷ್ಟಪಟ್ಟು ದುಡಿಯಬೇಕು ಎಂದು. ಯಾವ ಅಭಿವೃದ್ಧಿಯೂ ಕಾಣದ ಜೀವನ ನಿಂತ ನೀರಿನಂತೆಯೇ ಸರಿ. ತಮ್ಮ ಮನೆಯವರಿಗಾಗಿಯೇ  ಜೀವನ ಸವೆಸುವವರೂ ಇರುತ್ತಾರೆ. ಕಷ್ಟಪಟ್ಟು ದುಡಿಯುವುದು, ತಮ್ಮ ಯವ್ವನವನ್ನೇ ತ್ಯಾಗಮಾಡುವುದು, ಮನೆಯವರ ಸಂತೋಷ-ಹಿತ ಕಾಯ್ದುಕೊಳ್ಳಲು ತೇಯ್ದ ಗಂಧದಂತೆ ಬದುಕುತ್ತಿರುತ್ತಾರೆ. ಇವರೂ ಕೂಡ ಒಂದು ರೀತಿಯ ತ್ಯಾಗಮೂರ್ತಿಗಳೇ. ಆಗೆಲ್ಲ ತನ್ನ ಕನಸುಗಳನ್ನೆಲ್ಲ ಸಾಯಿಸಿಕೊಂಡು ಬದುಕಬೇಕೆಂದೇನಿಲ್ಲ. ತನ್ನ ಜೀವನವನನ್ನು ಪ್ರೀತಿಸುತ್ತಾ ಬದುಕುವುದು ಕೂಡ ಒಂದು ಕಲೆ‌. ಪ್ರತಿಯೊಬ್ಬ ವ್ಯಕ್ತಿಗೂ ಕಷ್ಟಸುಖ ಎರಡರ ಅನುಭವವಿರಬೇಕು. ಜೀವನದಲ್ಲಿ ಇನ್ನೊಬ್ಬರಿಗೆ ಬಂದ ಸಮಸ್ಯೆಯೇ ನಮಗೂ ಬರಬೇಕೆಂದಿಲ್ಲ. ಅವರ ಸಮಸ್ಯೆ ನೋಡಿ ನಾವು ಎಚ್ಚೆತ್ತುಕೊಳ್ಳಬಹುದು. ದೂರದಿಂದಲೇ ಗುರುತಿಸಬಹುದು.  ಜೀವನದಲ್ಲಿ ಏಳು-ಬೀಳುಗಳಿದ್ದರೇನೆ ಚಂದ. ಸಹನೆ-ತಾಳ್ಮೆಯೊಂದಿಗೆ ಜೀವನ ನಡೆಸಬೇಕು. ನಾಳೆಯ ದಿನ ನಮ್ಮ ಕೈಲೇ ಇರುತ್ತದೆ. ಹಾಗಾಗ ಬೇಕಾದರೆ ಇಂದು ಚೆಂದವಾಗಿ ಬದುಕಬೇಕು.

- ಸಿಂಧು ಭಾರ್ಗವ್. 

No comments:

Post a Comment