Monday 15 May 2017

ಲೇಖನ : "ತವರುಮನೆ ದೀಪ ನಮ್ಮ ತಾಯಿಯ ರೂಪ"

ಲೇಖನ : "ತವರುಮನೆ ದೀಪ ನಮ್ಮ ತಾಯಿಯ ರೂಪ"

Some Photos Of My Family....






ಅಮ್ಮನ ಹಾಗೆ ಯಾರೂ ಇಲ್ಲ..ಅಮ್ಮನಂತೆ ಎಲ್ಲೂ ಇಲ್ಲ. ಮೊದಲಿಗೆ ಎಲ್ಲಾ ತಾಯಿಯಂದಿರಿಗೆ ಅಮ್ಮಂದಿರ ದಿಬಾಚರಣೆಯ ಶುಭಹಾರೈಕೆಗಳು.
ಮಗುವಿನ ಮೊದಲ ಅಳುವ ಆಸ್ವಾದಿಸುವ, ಜಗವ ತೋರಿಸುವ,ನಗುವ ತರಿಸುವ ನೋವ ಮರೆಸುವ "ಅಮ್ಮ".....
***
ಏನ ಹೇಳಲಿ ಅವಳ ಬಗ್ಗೆ. ತ್ಯಾಗವನ್ನೇ ಮೈಗಂಟಿಸಿಕೊಂಡವಳು
ವಯಸ್ಸೇನು ಮುದುಕಿಯದೇ..? ಎಲ್ಲಾ ಸುಖವ ಕಂಡವಳೇ? ಮಕ್ಕಳು ಮರಿಗಳನ್ನ ಎತ್ತಿ ಆಡಿಸಿದವಳೇ.? ಎಳೆವಯಸ್ಸಿನಲ್ಲಿಯೇ ಹೊಂದಿಕೊಳ್ಳುವ ಗುಣವ ಬೆಳೆಸಿಕೊಂಡವಳು.‌ ಕರಿಮಣಿ ಸರವ ಅಡವಿಡಲು ಕೊಟ್ಟು ಪತಿರಾಯ ಏನೋ ಹೊಸ ಜೀವನವ ಶುರುಮಾಡುವ ,ಹೊಸ ಉದ್ಯೋಗ ಮಾಡಲು ಹೊರಟಿರುವ ಎಂಬ ನಂಬಿಕೆ ಇಟ್ಟಿದ್ದವಳು. ರೇಶಿಮೆ ಸೀರೆಗೆ ಆಸೆ ಪಡದ, ಕಾಟನ್ ಸೀರೆಯ ಸೊಸೈಟಿಯಿಂದ ತಂದು ಉಡುತ್ತಿದ್ದಳು. ತವರಿನಲ್ಲಿ ಚಿನ್ನದ ಒಡವೆ ಎಲ್ಲೇ ? ಎಂದು ಕೇಳಬಾರದಲ್ಲ,ಹಾಗಾಗಿ ಉಮಾಗೋಲ್ಡ್ ಸರ ಮತ್ತು ಬಳೆಗಳನ್ನು ತೊಡುತ್ತಿದ್ದವಳು‌. ಸ್ವಲ್ಪವೂ ಗಂಡನ ಮೇಲೆ ಅಸಮಧಾನ ತೋರಿಸುತ್ತಿರಲಿಲ್ಲ. ಜಗಳ ಮಾಡುತ್ತಿರಲಿಲ್ಲ. ಗಂಡನನ್ನು ದೂರುತ್ತಿರಲಿಲ್ಲ. ಮಕ್ಕಳ ಹತ್ತಿರವೆಲ್ಲ ತಂದೆಯ ಬಗ್ಗೆ ದೂರು ಹೇಳುತ್ತಿರಲಿಲ್ಲ. ಕೈಹಾಕಿದ ಕೆಲಸವೆಲ್ಲ ಮಸಿಯಾಗುತ್ತಿದ್ದರೂ ಏನೋ ಒಂದು ನಂಬಿಕೆಯಿಂದ ಗಂಡನಿಗೂ ಸಮಾಧಾನ ಮಾಡಿ "ನಾಳೆಯ ಜೀವನ ನಮ್ಮದೇ..." ಎಂಬ ಆತ್ಮವಿಶ್ವಾಸ ತುಂಬುತ್ತಿದ್ದವಳು. ತನ್ನ ಗಂಡನನ್ನು ಯಾರ ಎದುರಿಗೂ ಹೆಚ್ಚಾಗಿ ತವರು ಮನೆಯಲ್ಲಿ ಅಕ್ಕ ತಂಗಿಯರ ಎದುರಿಗೆ ಕಡಿಮೆ ಎಂಬಂತೆ ಮಾತನಾಡುತ್ತಿರಲಿಲ್ಲ. ಅವರಿಗೂ ಮಾತನಾಡಲು ಬಿಡುತ್ತಿರಲಿಲ್ಲ.ಹಾಗೇನಾದರೂ ಹೇಳಿದರೆ ಜಗಳಕ್ಕೇ ನಿಲ್ಲುತ್ತಿದ್ದಳು.
***
ಅಮ್ಮ ಏನೆಲ್ಲ ನಮಗೆ ಕಲಿಯಲು ಬಿಟ್ಟಳು. ಮಕ್ಕಳ ಜೀವನಕ್ಕಿಂತ ಇನ್ನೊಬ್ಬರ ಸತಿಯಾಗಿ ಬಾಳಸಂಗಾತಿಯಾಗಿ ಹೇಗೆ ಬದುಕಬೇಕು ಎಂಬುದನ್ನೇ  ತೋರಿಸಿಕೊಟ್ಟವಳು. ಕಲಿಸಲಿಲ್ಲ‌. ಹತ್ತಿರ ಕುಳ್ಳಿರಿಸಿ ಏನೆನ್ನನ್ನೂ ಹೇಳಿಕೊಡಲಿಲ್ಲ‌ . ಅವಳು ನಡೆದುಕೊಂಡದ್ದೇ ಹಾಗೆ. ಕಷ್ಟದಲ್ಲಿ ಜೀವನ ನಡೆಸುವುದಿದೆಯಲ್ಲ, ಅದಕ್ಕೂ ಮೇಲಾಗಿ ಮಕ್ಕಳಿಗೆ ಗಂಡ-ಹೆಂಡಿರ ಹಣಕಾಸಿನ ಕಷ್ಟ ಗೊತ್ತಾಗದಂತೆ ಜೀವನ ನಡೆಸುವುದಿದೆಯಲ್ಲ  ನಿಜಕ್ಕೂ ಅಧ್ಬುತ. ಗಟ್ಟಿಗಿತ್ತಿ. ಧೈರ್ಯವಂತೆ. ಕೈಯಲ್ಲಿ ಹಣ ಬೇಕಾಗುವಷ್ಟು ಇಲ್ಲದಿದ್ದರೂ ಮಕ್ಕಳ ಬೇಕುಬೇಡಗಳನ್ನು ಪೂರೈಸುವುದು ನಿಜಕ್ಕೂ ಒಂದು ಸವಾಲು. ಒಂದು ಮೂವತ್ತು ವರುಷದ ಹಿಂದೆ ಹೆಚ್ಚಿನವರ ಜೀವನ ಹೀಗೆ ಇದ್ದಿರುತ್ತದೆ. ಅವರ ಮಕ್ಕಳು ಹೀಗೆ ಯೋಚಿಸುವವರಾಗಿರುತ್ತಾರೆ. ಬಡತನದ ,ಕಷ್ಟದ ಜೀವನವೇ ಆಗೆಲ್ಲ ಇದ್ದಿತ್ತು. ಅದೂ ಮೊದಲೆರಡು ಮಕ್ಕಳು ಜಾಸ್ತಿಯೇ ಜೀವನವನ್ನು ಬಹಳ ಹತ್ತಿರದಿಂದ ಅಪ್ಪ ಅಮ್ಮ ನಿಂದ ಕಲಿತಿರುತ್ತಾರೆ. ಅಂತವರಿಗೆ ಈಗ ಬದುಕು ಕಟ್ಟಿಕೊಳ್ಳಲು ಕಷ್ಟವೆನಿಸುವುದಿಲ್ಲ. ಹೊಂದಾಣಿಕೆ, ಅನ್ಯೋನ್ಯತೆ, ಪಾರಸ್ಪರಿಕ ಅರ್ಥಮಾಡಿಕೊಳ್ಳುವಿಕೆ, ನಂಬಿಕೆ, ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಗಂಡ ಎಂಬ ಪ್ರೀತಿ , ಅವ ನನ್ನವನು ಎಂಬ ಪ್ರೀತಿ ಬಾಳ ಪಯಣವನ್ನು ಇನ್ನಷ್ಟು ಸಂತೋಷದಿಂದ ನಡೆಸುತ್ತಿರುತ್ತದೆ.ಅಷ್ಟೆ ಬೇಕಾಗಿರುವುದು.
***
ಈಗಿನ ಜನರೇಷನ್ (ಕಾಲದ) ಮಕ್ಕಳಲ್ಲಿ ಪಾರಸ್ಪರಿಕ ನಂಬಿಕೆ ಎಂಬುದೇ ಇರುವುದಿಲ್ಲ. ಅದಕ್ಕಿಂತಲೂ ಜಾಸ್ತಿ ತಾನೂ ಓದಿದ್ದೇನೆ, ಉದ್ಯೋಗಸ್ಥೆ.ಒಂಟಿಯಾಗಿ ಜೀವಿಸಬಲ್ಲೆ, ನಾನು ಯಾರ ಸಹಾಯ ಇಲ್ಲದೆಯೂ ಬದುಕಬಲ್ಲೆ ಎಂಬ ಅಹಂ ತಲೆಯಲ್ಲಿ ಕುಣಿದಾಡುತ್ತಿರುತ್ತದೆ‌. ಹೊಂದಿಕೊಂಡು ಹೋಗಬೇಕು ಎಂಬ ಪದಕ್ಕೆ ಬೆಲೆ ಕೊಡುವುದಿಲ್ಲ. ಅರ್ಥವೂ ಗೊತ್ತಿರುವುದಿಲ್ಲ. ಚಿಕ್ಕಚಿಕ್ಕ ವಿಷಯಕ್ಕೂ ತಪ್ಪು ಕಂಡು ಹಿಡಿಯುವುದು, ಸಂಗಾತಿಯಿಂದ ಬಿಡುಗಡೆ ಪಡೆಯುವುದರ ಬಗ್ಗೆಯೇ ಯೋಚಿಸುತ್ತಾ ಇರುತ್ತಾರೆ. ಜೊತೆಗೆ ಕೂಡಿ ಬಾಳಬೇಕೆನ್ನುವ ಆಸೆ ಕನಸುಗಳು ಇರುವುದಿಲ್ಲ. ಅವರಿಗೆ ನಾವು ಏನೂ ಹೇಳಲೂ ಆಗುವುದಿಲ್ಲ. ಕೇಳಿದರೆ 'ಕಾಲ ಬದಲಾಗಿದೆ, ನಿಮ್ಮಹಾಗೆ 1947ನಲ್ಲೇ ಯಾರು ಇರಲು ಬಯಸೋದಿಲ್ಲ' ಎನ್ನುವರು.ಎಂತಹ ಹಾಸ್ಯಾಸ್ಪದ. ಕಾಲ ಬದಲಾಗಿಲ್ಲ. ಮನಸ್ಥಿತಿ ಬದಲಾಗಿದೆ. ಅಮ್ಮನ ಒಮ್ಮೆ ನೆನಪು ಮಾಡಿಕೊಂಡರೆ ಅವಳ ತ್ಯಾಗ ಅವಳು ಪಟ್ಟ ಕಷ್ಟ ಒಮ್ಮೆ ನೆನಪು ಮಾಡಿಕೊಂಡರೆ ಹೀಗೆ ಹೇಳಲು ಬರುವುದಿಲ್ಲ ಅನ್ನಿಸುತ್ತದೆ.

- ಸಿಂಧು ಭಾರ್ಗವ್.

No comments:

Post a Comment