Wednesday, 17 May 2017

ಸಂತೆಯಲ್ಲಿ ಗುನುಗಿದ ಹಾಡು : ರಾಧೆ ರಾಧೆ ಮನವನು ತಣಿಸಿದೆ ನೀ..




(@)(@)(@)



ಸಂತೆಯಲ್ಲಿ ಗುನುಗಿದ ಹಾಡು : ರಾಧೆ ರಾಧೆ ಮನವನು ತಣಿಸಿದೆ ನೀ..
*** *** ***
ರಾಧೆ ರಾಧೆ ಮನವನು ತಣಿಸಿದೆ ನೀ..
ರಾಧೆ ರಾಧೆ ಪ್ರೀತಿಯ ಉಣಿಸಿದೆ ನೀ..

ನಿನ್ನಯ ಪ್ರೀತಿಗೆ ಹೂಬನ ಅರಳಿದೆ..
ನಿನ್ನಯ ಸ್ನೇಹಕೆ ದುಂಬಿಯು ಹಾಡಿದೆ..
ಕೊಳಲಿನ ನಾದಕೆ ನೀ ಜೊತೆಯಾದೆ..
ಕಿರುಬೆರಳನು ಹಿಡಿಯುತ ನೀ ನಡೆದೆ..

 ರಾಧೆ ರಾಧೆ ಮನವನು ತಣಿಸಿದೆ ನೀ...

ಸೋಲಲಿ ನಿಂತು ಸಲಹೆಯ ನೀಡಿದೆ..
ನೋವಲಿ ನಿಂತು ಬೆಂಬಲ ನೀಡಿದೆ..
ಹೆಂಗಳೆಯರ ಮನ ಗೆದ್ದವ ನಾನು..
ನನ್ನೀ ಮನವ ಗೆದ್ದವಳು ನೀನು..

ರಾಧೆ ರಾಧೆ ಮನವನು ತಣಿಸಿದೆ ನೀ..

ನಮ್ಮಯ ಪ್ರೀತಿಯು ಜನರಿಗೆ ಮಾದರಿ
ನೋವನು ಮರೆಸುವ ಪ್ರೀತಿಯು ಸಿಗಲಿ
ನಮ್ಮಯ ನಡತೆಯು ಲೋಕಕೆ ಮಾದರಿ
ಸ್ವಾರ್ಥವು ಇಲ್ಲದೆ ಪ್ರೀತಿಯ ಮಾಡಲಿ

📝 ಸಿಂಧು ಭಾರ್ಗವ್ 🍁


Tuesday, 16 May 2017

ಕವನ: ಆರೋಗ್ಯದ ಕಡೆ ಗಮನ ನೀ ಕೊಡು

ಕವನ: ಆರೋಗ್ಯದ ಕಡೆ ಗಮನ ನೀ ಕೊಡು


*** *** ***
ನಾನಿನ್ನು ಹೊರಡುವೆ ಅಳದಿರು ಉಸಿರೆ..
ನಾನಿನ್ನು ಹೊರಡುವೆ ಕೊರಗದಿರು ಉಸಿರೇ..
ಈ ವಿರಹ ಅನಿವಾರ್ಯ, ಬೇಕಂತಲೇ ಅಲ್ಲ..
ನಮ್ಮ ಕನಸೊಂದು ಬರಲಿಕ್ಕಿದೆಯಲ್ಲ..

ಕಾಯಬೇಕು, ದೂರವಿರಲೇ ಬೇಕು..
ತವರು ಮನೆಯಲಿ ನಾಲ್ಕು ದಿನ ಕಳೆಯಲೇ ಬೇಕು..

ನಾನು ಮಾಡಿದ ಕೈರುಚಿ ನೆನಪಾಗಬಹುದೀಗ..
ನಾನಾಡಿದ ಜಗಳ ಕಾಡುವುದು ನಿನಗೀಗ..

ಸಾಮೀಪ್ಯ ಬಯಸಲಾಗೊಲ್ಲ,ಕೈಬಳೆ ಸದ್ದಿಲ್ಲ ..
ರೇಗಿಸಲು ನಾನಿಲ್ಲ, ಮುದ್ದಿಸಲೂ ಜೊತೆಗಿಲ್ಲ..

ನನ್ನ ಕೆಲಸಗಳೊಂದಿಷ್ಟು ಹೊರೆಯಾಗಬಹುದೀಗ
ಮನೆಯಲಿ ಖಾಲಿತನ ಕಾಡಬಹುದೀಗ..

ಹೊತ್ತೊತ್ತಿಗೆ ಊಟವ ನೀಮಾಡು
ರಾತ್ರಿಯ ನಿದಿರೆಯ ತಪ್ಪಿಸದಿರು

ಕೋಪವು ಬರುವುದು, ರೇಗುವೆ ನಿನ್ನ ಮೇಲೆ..
ಪ್ರೀತಿಯು ಕಡಿಮೆ ಆದಂತೆ ಅನಿಸಿದಾಗ ನನ್ನ ಮೇಲೆ..

ನಾಮಾಡಿದ ತಪ್ಪನು ನೀ‌ ಕ್ಷಮಿಸು ಮನವೇ....
ದುಡುಕಿಯಾಡಿದ ಮಾತನು ಮರೆತುಬಿಡು ಮನವೇ..

ನಾನಿನ್ನು ಹೊರಡುವೆ ಅಳದಿರು ಉಸಿರೆ..
ನಾನಿನ್ನು ಹೊರಡುವೆ ಕೊರಗದಿರು ಉಸಿರೇ..

- ಸಿಂಧು ಭಾರ್ಗವ್.

Monday, 15 May 2017

ಲೇಖನ : "ತವರುಮನೆ ದೀಪ ನಮ್ಮ ತಾಯಿಯ ರೂಪ"

ಲೇಖನ : "ತವರುಮನೆ ದೀಪ ನಮ್ಮ ತಾಯಿಯ ರೂಪ"

Some Photos Of My Family....






ಅಮ್ಮನ ಹಾಗೆ ಯಾರೂ ಇಲ್ಲ..ಅಮ್ಮನಂತೆ ಎಲ್ಲೂ ಇಲ್ಲ. ಮೊದಲಿಗೆ ಎಲ್ಲಾ ತಾಯಿಯಂದಿರಿಗೆ ಅಮ್ಮಂದಿರ ದಿಬಾಚರಣೆಯ ಶುಭಹಾರೈಕೆಗಳು.
ಮಗುವಿನ ಮೊದಲ ಅಳುವ ಆಸ್ವಾದಿಸುವ, ಜಗವ ತೋರಿಸುವ,ನಗುವ ತರಿಸುವ ನೋವ ಮರೆಸುವ "ಅಮ್ಮ".....
***
ಏನ ಹೇಳಲಿ ಅವಳ ಬಗ್ಗೆ. ತ್ಯಾಗವನ್ನೇ ಮೈಗಂಟಿಸಿಕೊಂಡವಳು
ವಯಸ್ಸೇನು ಮುದುಕಿಯದೇ..? ಎಲ್ಲಾ ಸುಖವ ಕಂಡವಳೇ? ಮಕ್ಕಳು ಮರಿಗಳನ್ನ ಎತ್ತಿ ಆಡಿಸಿದವಳೇ.? ಎಳೆವಯಸ್ಸಿನಲ್ಲಿಯೇ ಹೊಂದಿಕೊಳ್ಳುವ ಗುಣವ ಬೆಳೆಸಿಕೊಂಡವಳು.‌ ಕರಿಮಣಿ ಸರವ ಅಡವಿಡಲು ಕೊಟ್ಟು ಪತಿರಾಯ ಏನೋ ಹೊಸ ಜೀವನವ ಶುರುಮಾಡುವ ,ಹೊಸ ಉದ್ಯೋಗ ಮಾಡಲು ಹೊರಟಿರುವ ಎಂಬ ನಂಬಿಕೆ ಇಟ್ಟಿದ್ದವಳು. ರೇಶಿಮೆ ಸೀರೆಗೆ ಆಸೆ ಪಡದ, ಕಾಟನ್ ಸೀರೆಯ ಸೊಸೈಟಿಯಿಂದ ತಂದು ಉಡುತ್ತಿದ್ದಳು. ತವರಿನಲ್ಲಿ ಚಿನ್ನದ ಒಡವೆ ಎಲ್ಲೇ ? ಎಂದು ಕೇಳಬಾರದಲ್ಲ,ಹಾಗಾಗಿ ಉಮಾಗೋಲ್ಡ್ ಸರ ಮತ್ತು ಬಳೆಗಳನ್ನು ತೊಡುತ್ತಿದ್ದವಳು‌. ಸ್ವಲ್ಪವೂ ಗಂಡನ ಮೇಲೆ ಅಸಮಧಾನ ತೋರಿಸುತ್ತಿರಲಿಲ್ಲ. ಜಗಳ ಮಾಡುತ್ತಿರಲಿಲ್ಲ. ಗಂಡನನ್ನು ದೂರುತ್ತಿರಲಿಲ್ಲ. ಮಕ್ಕಳ ಹತ್ತಿರವೆಲ್ಲ ತಂದೆಯ ಬಗ್ಗೆ ದೂರು ಹೇಳುತ್ತಿರಲಿಲ್ಲ. ಕೈಹಾಕಿದ ಕೆಲಸವೆಲ್ಲ ಮಸಿಯಾಗುತ್ತಿದ್ದರೂ ಏನೋ ಒಂದು ನಂಬಿಕೆಯಿಂದ ಗಂಡನಿಗೂ ಸಮಾಧಾನ ಮಾಡಿ "ನಾಳೆಯ ಜೀವನ ನಮ್ಮದೇ..." ಎಂಬ ಆತ್ಮವಿಶ್ವಾಸ ತುಂಬುತ್ತಿದ್ದವಳು. ತನ್ನ ಗಂಡನನ್ನು ಯಾರ ಎದುರಿಗೂ ಹೆಚ್ಚಾಗಿ ತವರು ಮನೆಯಲ್ಲಿ ಅಕ್ಕ ತಂಗಿಯರ ಎದುರಿಗೆ ಕಡಿಮೆ ಎಂಬಂತೆ ಮಾತನಾಡುತ್ತಿರಲಿಲ್ಲ. ಅವರಿಗೂ ಮಾತನಾಡಲು ಬಿಡುತ್ತಿರಲಿಲ್ಲ.ಹಾಗೇನಾದರೂ ಹೇಳಿದರೆ ಜಗಳಕ್ಕೇ ನಿಲ್ಲುತ್ತಿದ್ದಳು.
***
ಅಮ್ಮ ಏನೆಲ್ಲ ನಮಗೆ ಕಲಿಯಲು ಬಿಟ್ಟಳು. ಮಕ್ಕಳ ಜೀವನಕ್ಕಿಂತ ಇನ್ನೊಬ್ಬರ ಸತಿಯಾಗಿ ಬಾಳಸಂಗಾತಿಯಾಗಿ ಹೇಗೆ ಬದುಕಬೇಕು ಎಂಬುದನ್ನೇ  ತೋರಿಸಿಕೊಟ್ಟವಳು. ಕಲಿಸಲಿಲ್ಲ‌. ಹತ್ತಿರ ಕುಳ್ಳಿರಿಸಿ ಏನೆನ್ನನ್ನೂ ಹೇಳಿಕೊಡಲಿಲ್ಲ‌ . ಅವಳು ನಡೆದುಕೊಂಡದ್ದೇ ಹಾಗೆ. ಕಷ್ಟದಲ್ಲಿ ಜೀವನ ನಡೆಸುವುದಿದೆಯಲ್ಲ, ಅದಕ್ಕೂ ಮೇಲಾಗಿ ಮಕ್ಕಳಿಗೆ ಗಂಡ-ಹೆಂಡಿರ ಹಣಕಾಸಿನ ಕಷ್ಟ ಗೊತ್ತಾಗದಂತೆ ಜೀವನ ನಡೆಸುವುದಿದೆಯಲ್ಲ  ನಿಜಕ್ಕೂ ಅಧ್ಬುತ. ಗಟ್ಟಿಗಿತ್ತಿ. ಧೈರ್ಯವಂತೆ. ಕೈಯಲ್ಲಿ ಹಣ ಬೇಕಾಗುವಷ್ಟು ಇಲ್ಲದಿದ್ದರೂ ಮಕ್ಕಳ ಬೇಕುಬೇಡಗಳನ್ನು ಪೂರೈಸುವುದು ನಿಜಕ್ಕೂ ಒಂದು ಸವಾಲು. ಒಂದು ಮೂವತ್ತು ವರುಷದ ಹಿಂದೆ ಹೆಚ್ಚಿನವರ ಜೀವನ ಹೀಗೆ ಇದ್ದಿರುತ್ತದೆ. ಅವರ ಮಕ್ಕಳು ಹೀಗೆ ಯೋಚಿಸುವವರಾಗಿರುತ್ತಾರೆ. ಬಡತನದ ,ಕಷ್ಟದ ಜೀವನವೇ ಆಗೆಲ್ಲ ಇದ್ದಿತ್ತು. ಅದೂ ಮೊದಲೆರಡು ಮಕ್ಕಳು ಜಾಸ್ತಿಯೇ ಜೀವನವನ್ನು ಬಹಳ ಹತ್ತಿರದಿಂದ ಅಪ್ಪ ಅಮ್ಮ ನಿಂದ ಕಲಿತಿರುತ್ತಾರೆ. ಅಂತವರಿಗೆ ಈಗ ಬದುಕು ಕಟ್ಟಿಕೊಳ್ಳಲು ಕಷ್ಟವೆನಿಸುವುದಿಲ್ಲ. ಹೊಂದಾಣಿಕೆ, ಅನ್ಯೋನ್ಯತೆ, ಪಾರಸ್ಪರಿಕ ಅರ್ಥಮಾಡಿಕೊಳ್ಳುವಿಕೆ, ನಂಬಿಕೆ, ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಗಂಡ ಎಂಬ ಪ್ರೀತಿ , ಅವ ನನ್ನವನು ಎಂಬ ಪ್ರೀತಿ ಬಾಳ ಪಯಣವನ್ನು ಇನ್ನಷ್ಟು ಸಂತೋಷದಿಂದ ನಡೆಸುತ್ತಿರುತ್ತದೆ.ಅಷ್ಟೆ ಬೇಕಾಗಿರುವುದು.
***
ಈಗಿನ ಜನರೇಷನ್ (ಕಾಲದ) ಮಕ್ಕಳಲ್ಲಿ ಪಾರಸ್ಪರಿಕ ನಂಬಿಕೆ ಎಂಬುದೇ ಇರುವುದಿಲ್ಲ. ಅದಕ್ಕಿಂತಲೂ ಜಾಸ್ತಿ ತಾನೂ ಓದಿದ್ದೇನೆ, ಉದ್ಯೋಗಸ್ಥೆ.ಒಂಟಿಯಾಗಿ ಜೀವಿಸಬಲ್ಲೆ, ನಾನು ಯಾರ ಸಹಾಯ ಇಲ್ಲದೆಯೂ ಬದುಕಬಲ್ಲೆ ಎಂಬ ಅಹಂ ತಲೆಯಲ್ಲಿ ಕುಣಿದಾಡುತ್ತಿರುತ್ತದೆ‌. ಹೊಂದಿಕೊಂಡು ಹೋಗಬೇಕು ಎಂಬ ಪದಕ್ಕೆ ಬೆಲೆ ಕೊಡುವುದಿಲ್ಲ. ಅರ್ಥವೂ ಗೊತ್ತಿರುವುದಿಲ್ಲ. ಚಿಕ್ಕಚಿಕ್ಕ ವಿಷಯಕ್ಕೂ ತಪ್ಪು ಕಂಡು ಹಿಡಿಯುವುದು, ಸಂಗಾತಿಯಿಂದ ಬಿಡುಗಡೆ ಪಡೆಯುವುದರ ಬಗ್ಗೆಯೇ ಯೋಚಿಸುತ್ತಾ ಇರುತ್ತಾರೆ. ಜೊತೆಗೆ ಕೂಡಿ ಬಾಳಬೇಕೆನ್ನುವ ಆಸೆ ಕನಸುಗಳು ಇರುವುದಿಲ್ಲ. ಅವರಿಗೆ ನಾವು ಏನೂ ಹೇಳಲೂ ಆಗುವುದಿಲ್ಲ. ಕೇಳಿದರೆ 'ಕಾಲ ಬದಲಾಗಿದೆ, ನಿಮ್ಮಹಾಗೆ 1947ನಲ್ಲೇ ಯಾರು ಇರಲು ಬಯಸೋದಿಲ್ಲ' ಎನ್ನುವರು.ಎಂತಹ ಹಾಸ್ಯಾಸ್ಪದ. ಕಾಲ ಬದಲಾಗಿಲ್ಲ. ಮನಸ್ಥಿತಿ ಬದಲಾಗಿದೆ. ಅಮ್ಮನ ಒಮ್ಮೆ ನೆನಪು ಮಾಡಿಕೊಂಡರೆ ಅವಳ ತ್ಯಾಗ ಅವಳು ಪಟ್ಟ ಕಷ್ಟ ಒಮ್ಮೆ ನೆನಪು ಮಾಡಿಕೊಂಡರೆ ಹೀಗೆ ಹೇಳಲು ಬರುವುದಿಲ್ಲ ಅನ್ನಿಸುತ್ತದೆ.

- ಸಿಂಧು ಭಾರ್ಗವ್.

Saturday, 13 May 2017

ಕವನ : ಬೋಳು ಭಾವನೆ

ಕವನ : ಬೋಳು ಭಾವನೆ



ಭಾವನೆಗಳನ್ನೆಲ್ಲ ಕಳಚಿಟ್ಟಿದ್ದೇನೆ..
ಕೆಲವನ್ನು ನೆಲದೊಳಗೆ,
ಹಲವನ್ನು ಮನದೊಳಗೆ
ಮುಚ್ಚಿಟ್ಟಿದ್ದೇನೆ..

ಮಳೆಯನ್ನೇ ಕಾಯುತಿರುವೆ
ಮೊಳಕೆಯೊಡೆಯ ಬಹುದು..
ಮನ ತಣಿಯುವುದ ನೋಡುತಿರುವೆ
ಕನಸು ಚಿಗುರಬಹುದು..

ಪ್ರೀತಿಯ ನಾಯಕನಾತ
ಮರೆತು ಹೋಗಿರುವ..
ಮನದ ನಾವಿಕನಾತ
ತೊರೆದು ಸಾಗಿರುವ..

ನನಗೀಗ ಅಲೆಗಳೇ ಗೆಳತಿಯರು..
ಭಾವನೆಗಳಿಗೆ ಜೊತೆಗಿಹರು..

ಕ್ಷಮಿಸುವುದ ಕಲಿಸುತ್ತಾ
ನೋವುಗಳ ಮರೆಸಿಹರು..
ಮತ್ತೊಂದು ಹೊಸ ಪರ್ವ
ಬರುವ ಭರವಸೆ ತುಂಬಿಹರು..

- ಸಿಂಧು ಭಾರ್ಗವ್.🍁

Thursday, 11 May 2017

ಕವನ: ಪರಮ ಸ್ವಾರ್ಥಿಯ ಕೊನೆಯೆಂದು??

ಸುಂದರ_ಪ್ರಕೃತಿಗೇ ಎಲ್ಲರೂ ಮಕ್ಕಳೇ..

ತಂಪಾಗಿ ಬೀಸುವ ಗಾಳಿ ಕೇಳಲಿಲ್ಲ ನೀನು ಯಾವ ಜಾತಿ?
ಬೆಳಕು ನೀಡುವ ರವಿಯು ಕೇಳಲಿಲ್ಲ ನಿನದು ಯಾವ ಮತ?

ಅಕ್ಕಿ ಬೆಳೆಯುವ ಮಣ್ಣಿಗೆ ಜಾತಿಮತದ ಹಂಗಿಲ್ಲ..
ನೀನು ಮೇಲ್ಜಾತಿ ನೀನು ಕೀಳು ಎಂದು ಹರಿವ ನೀರು ಇಂಗಿಲ್ಲ..

ನಮಗಾಗಿ ಎಲ್ಲವನೂ ನೀಡುವ ತ್ಯಾಗಮಯಿ ಪ್ರಕೃತಿ ಮಾತೆ,
ಆದರೆ ಮನುಜ ಅದೆಲ್ಲವೂ ನನದೇ ಎಂದು ಸ್ವಾಧೀನಕ್ಕೆ ತಂದುಕೊಂಡು ಕೊಡುಕೊಳ್ಳುವಿಕೆಯಲಿ ಜಾತಿಮತಧರ್ಮದ  ದುರ್ಗಂಧ ಬೀರುತ್ತಿದ್ದಾನೆ..

ಪರಮಸ್ವಾರ್ಥಿಯ ಕೊನೆಯೆಂದು?!? :

ಧರ್ಮ-ಕರ್ಮಗಳ ನಡುವೆ ನಮ್ಮ ಜೀವನ.

:: 😍😂😉😊😍😂😉
ಯೋಗರಾಜ್ ಭಟ್ರಿಂದ ಸ್ಪೂರ್ತಿ ಪಡೆದ ಸಿಂಧು. ವಿಷಯವಸ್ತು : ಧರ್ಮ-ಕರ್ಮಗಳ ನಡುವೆ ನಮ್ಮ ಜೀವನ..
😍😂😉😊😍😂😉 ::

೧) ಪರಿಶುದ್ಧ ಆತ್ಮವಿರುವವರಿಗೆ ಈ ಜಾತಿ-ಮತ-ಧರ್ಮದ ಯಾವುದೇ ಹಂಗಿರುವುದಿಲ್ಲ.

೨) ನಾವು ಮಾಡುವ ಕೆಲಸದಲ್ಲಿ ತೃಪ್ತಿಯ ಜೊತೆಗೆ ನಿಷ್ಠೆ ,ಪ್ರಾಮಾಣಿಕತೆ ಇರಲೇಬೇಕು. ಆಗಲೇ ಯಶಸ್ಸು ಸಿಗಲು ಸಾಧ್ಯ.

೩) ಜಗತ್ತಿನಲ್ಲಿ ಅನ್ಯಾಯ, ಅಧರ್ಮ, ಅಕ್ರಮ ತಾಂಡವವಾಡುತ್ತಿದೆ.
ಕಣ್ಣು, ಕಿವಿ, ಬಾಯಿಯನ್ನು
ಮುಚ್ಚಿಕೊಂಡ ಗಾಂಧೀಜಿಯ ಮೂರು ಮಂಗಗಳಿಗೆ ಕೈಸೋತು ಹೋಗುತ್ತಿದೆ.😢😯😐

೪)) ಭಾಷೆ ಬಗ್ಗೆಯಾಗಲಿ, ಧರ್ಮದ ಬಗ್ಗೆಯಾಗಲಿ ಅಂಧಾಭಿಮಾನ ಇರಕೂಡದು. ಅದು ಅದೆಷ್ಟೋ ಜನರ ಮಾನಹಾನಿಗೂ,ಪ್ರಾಣಹಾನಿಗೂ ಕಾರಣವಾಗುವುದು.
❌🙅✖

೫)) ಕಾಮ, ಕ್ರೋಧ, ಮೋಹ, ಮದ, ಮತ್ಸರ, ಲೋಭ,ಸಂಶಯ, ಮಮಕಾರ, ಅಹಂಕಾರ ಇವುಗಳು ಮನುಷ್ಯನ ಸಹಜವಾದ ಒಂಭತ್ತು ವೈರಿಗಳು. ಹಾಗೇ ಮನುಷ್ಯನಿಗೆ ಹುಟ್ಟುಗುಣಗಳಾಗಿ ಬಂದಿರುತ್ತವೆಯೇ ಹೊರತು ಯಾವುದೇ ಧರ್ಮಕ್ಕೆ ಅಂಟಿಕೊಂಡಿದ್ದಲ್ಲ.

ಆದರೆ, ಆದರೆ ಸ್ವಾರ್ಥಿಗಳು ತಮ್ಮ ಲಾಭಕ್ಕೋಸ್ಕರ ಒಬ್ಬ ವ್ಯಕ್ತಿ ಮಾಡಿದ ತಪ್ಪನ್ನು ಧರ್ಮದ ಹೆಸರಿನಲ್ಲಿ ಮುಚ್ಚಿಹಾಕಿಯೋ(ರಕ್ಷಿಸಲು) ಅಥವಾ ಅದೇ ಧರ್ಮದ ಹೆಸರಿನಲ್ಲಿ ಶಿಕ್ಷೆ ನೀಡಲು ಮುಂದಾಗುತ್ತಾರೆ..

(ಗೂಗಲ್ ಚಿತ್ರ)


🙏🌷 ಶುಭನುಡಿ🌷🙏

- ಸಿಂಧು ಭಾರ್ಗವ್ , ಬೆಂಗಳೂರು

ಜೀವನದ ಬಗ್ಗೆ ಒಂದು ಅವಲೋಕನ ಮಾವಿನ ವಾಟೆಯಂತೀ ಜೀವನ

ನಮ್ಮ ಜೀವನವೂ ಈ ಮಾವಿನ ವಾಟೆ ತರಹ. ಬರುವಾಗಲೂ ಬತ್ತಲೆ, ಹೋಗುವಾಗಲೂ ಬತ್ತಲೆ. ನಡುವೆ ಒಂದಷ್ಟು ದಿನ ಉಬ್ಬುವುದು ಕೊಬ್ಬುವುದು. ಮಾವಿನ ಹಾಗೆಯೇ ಮುರುಟಿಹೋದ ಮನಸ್ಸುಗಳು, ಕೊಳೆತುಹೋದ ಮನಸ್ಸುಗಳು, ಹೇಗೆ ಹೊರಗಿನಿಂದ ನೋಡಲು ಮಾವು ಸುಂದರವಾಗಿ ಕಾಣಿಸುತ್ತದೆಯೋ ಜನರೂ ಕೂಡ ಮುಖವಾಡ ಧರಿಸಿಕೊಂಡು ಸುಂದರವಾಗಿಯೇ ಮೋಸಮಾಡುವರು, ಮಾತನಾಡುವರು. ಆದರವರ ಮನಸ್ಸು ಸ್ವಾರ್ಥ, ಮತ್ಸರ, ದ್ವೇಷದ ಕೂಪವಾಗಿರುತ್ತದೆ.. ಅವರ ಸಂಗ ನಮಗೆ ಹುಳಿಮಾವು ತಿಂದ ಅನುಭವ ನೀಡುತ್ತದೆ.
**
ಪ್ರಾಯದಲ್ಲಿ ಹುಳಿ ತೋರಿಸುವುದು, (ಅಹಂ) ಬಿಸಿಲು-ಗಾಳಿ ,ಹಗಲು-ರಾತ್ರಿ ಎನ್ನದೇ ಮೈಯೊಡ್ಡಿ ನಿಂತು ಮಾವು ಹೇಗೆ ಮಾಗುವುದೋ ಮುಪ್ಪು ಬಂದಹಾಗೆ ದುಡಿತ, ಸವೆತದ ನಡುವೆ ನಮ್ಮ ಜೀವಿತದ ಅನುಭವದ ಸಿಹಿಯನ್ನು ಹಂಚಲಿಕ್ಕೆ ಶುರುಮಾಡುತ್ತೇವೆ.
**
ಆದರೆ ಎಲ್ಲಾ ಕಾಲದಲ್ಲಿಯೂ ,ಎಲ್ಲಾ ರುಚಿಯಲ್ಲಿಯೂ ಜನ ಮಾವನ್ನು ಇಷ್ಟ ಪಡುತ್ತಾರೆ.. ಹೇಗೆ ಉಪ್ಪು ಬೆರೆಸಿ , ಕಾರ ಬೆರೆಸಿ ತಿನ್ನುವರೋ ಹಾಗೆ ನಾವು ಜೀವನದಲ್ಲಿ ಸ್ನೇಹ-ಪ್ರೀತಿ ಬೆರೆಸಿ ಸೌಹಾರ್ದತೆಯಿಂದ ಬಾಳಬೇಕು..

- ಸಿಂಧು ಭಾರ್ಗವ್ 🍁

ಚುಟುಕು:: ನಾನು ಮತ್ತು ನನ್ನ ಕಡಲು




ನಾನು ಮತ್ತು ನನ್ನ _ಕಡಲು..

#ಶೃಂಗಾರ :
೧) ಕಡಲಿನಾಳದಲಿ ಚಿಪ್ಪೊಂದನ್ನು
ತಂದು ಕೊಡು ಇನಿಯಾ...
ಅದರಲ್ಲಿರುವ ಮುತ್ತಿನ ಜೊತೆಗೆ ನನ್ನ ನಾಲ್ಕು ಮುತ್ತನ್ನೂ ಸೇರಿಸಿ ನಿನಗೆ ಕೊಡುವೆ...😘
~
#ವೇದನೆ :
೨) ವಿರಹಿ ಅಲ್ಲ ನಾನು, ಕಡಲು ಜೊತೆಗಿಹುದು.‌..
ಅಲೆಗಳು ಒಂದೊಂದಾಗಿ ಬಂದು ಕಣ್ಣೀರೊರೆಸುವುವು...😢
~
#ಹಾಸ್ಯ :
೩) ನಾನು ಮತ್ತು ನನ್ನ ಕಡಲು,
ಸಂಜೆ ಅಮ್ಮ ಮಾಡಿದ ಬಂಗುಡೆ ಫ್ರೈಯಿಂದಲೇ ತುಂಬುವುದು ನನ್ನ ಒಡಲು.. 😝
~
#ವಾಸ್ತವ :
೪) ಸ್ತಬ್ಧವಾಗಿ ನಿಂತ ಬಂಡೆಗಳು,
ಸಾಲುಸಾಲು ತೆಂಗಿನ ಮರಗಳು,
ಜೊತೆಗೆ ಉಪ್ಪು ನೀರಿನಿಂದ ಕೂಡಿದ ಕಡಲು...
ಹಾಗೆ ನಮ್ಮ ಜೀವನವೂ,
ಆಗಾಗ ಬರುವ ಕಷ್ಟಗಳು,
ನಡುನಡುವೆ ಸುಖದ ಎಳನೀರು,
ನೊಂದಾಗ ಹೊರಹಾಕುವ ಉಪ್ಪು ಕಣ್ಣೀರು..🙏😍
~
#ಹಾಸ್ಯ :
೫) ದಿನವೂ ಸಂಜೆ ಕಡಲ ಅಲೆಗಳ ನೋಡುತ
ದೂರಾದ ಪ್ರಿಯತಮೆಯ ನೆನಪು ಮಾಡುತ ಬಾಟಲಿ ಏರಿಸುವೆ..
ಇಂದು ಸ್ವಲ್ಪ ಚೇಂಜ್ ಇರಲಿ ಅಂತ ಜ್ಯೂಸ್ ಕುಡಿತ ಇದ್ರೂ,
ನನ್ನ ಗೆಳೆಯ ಬಂದು
ಎಷ್ಟ್ ಕುಡಿತಿ ಮರಾಯ, ಸಾಕ್ ನಿಲ್ಸಾ.. ಅಬ್ಬಿ ಕರಿತಾ ಇದ್ಲ್ ಮನಿಗ್ ಹೋಪಾ ಬಾ.. ಅಂತಾನೆ.. 😇😝

- ಸಿಂಧು ಭಾರ್ಗವ್. 🍁

Wednesday, 10 May 2017

ಸಂತೆಯಲಿ ಗುನುಗಿದ ಹಾಡು : ಕಳೆದುಹೋದ ಹಾದಿಯಲ್ಲಿ

ಸಂತೆಯಲಿ ಗುನುಗಿದ ಹಾಡು : ಕಳೆದುಹೋದ ಹಾದಿಯಲ್ಲಿ

ಕಳೆದು ಹೋದ ಹಾದಿಯಲ್ಲಿ ಮತ್ತೆ ಹುಡುಕಬೇಕಿದೆ..
ತೊರೆದುಹೋದ ಇನಿಯನ ಮತ್ತೆ ಹುಡುಕಬೇಕಿದೆ..

ಆಡಿ ಹೋದ ಮಾತಿನಲ್ಲಿ
ಸರಿಯು ಕಾಣಬಹುದು ಈಗ..
ಮುನಿಸಿಕೊಂಡ ಮನಸಿನಲ್ಲಿ
ಕನಸು ಮೂಡಬಹುದು ಈಗ..

ನಿನ್ನ ಪ್ರೀತಿ ಪ್ರೇಮವೀಗ
ಕಾಡುತಿಹುದು ಬಿಡದೆ ಈಗ..
ನಿನ್ನ ನಡೆಯು ನುಡಿಯು ಈಗ
ಬೇಡುತಿಹುದು ಮತ್ತೆ ಈಗ..

ಒಮ್ಮೆ ಬಂದು ಎದುರು ನಿಂತು
ನಗುವ ಬೀರಿ ಹೋದರೂನು
ಮನಕೆ ಹೊಸತು ಹುರುಪು ಬಂದು
ಹಳೆಯ ನೋವ ಮರೆವೆ ನಾನು..

ಕಾಯುತಿರುವೆ ಎಂದಿನಂತೆ ನೀನು ಬರುವುದಾ...
ಕಾಯುತಿರುವೆ ಎಂದಿನಂತೆ ಅದೇ ಹಾದಿಯಾ...

- ಸಿಂಧು ಭಾರ್ಗವ್. 🍁

ಸಂತೆಯಲಿ ಗುನುಗಿದ ಹಾಡು : ನಗಲು ಬಾರದೇ ಮುಗುದೆ.

ಸಂತೆಯಲಿ ಗುನುಗಿದ ಹಾಡು : ನಗಲು ಬಾರದೇ ಮುಗುದೆ..

ಮುನಿಸು ಏತಕೆ ಮಗುವೆ, ನಗಲು ಬಾರದೇ,
ಮುತ್ತನೊಂದು ನಿನಗೆ ಕೊಡುವೆ ಸನಿಹ ಬಂದರೇ...
**
ಆಟ ಆಡಬೇಡ ಎಂದು ನಾನು ಹೇಳಬಾರದೀಗ
ಊಟಮಾಡು ಬಾರೆ ಎಂದು ನಾನು‌ ಕರೆಯಬಾರದೀಗ..

ಕಳ್ಳ ನೋಟ ಬೀರಬಹುದು ಎಂಬ ಭಯವು ನನಗೀಗ...
ನಿನ್ನ ಹೊರಗೆ ಬಿಟ್ಟು ನಾನು ಹೇಗೆ ಕೆಲಸಮಾಡಲೀಗ..
ಮುನಿಸು ಏತಕೆ ಮಗುವೆ, ನಗಲು ಬಾರದೇ..
**
ನಾನು ತೋರುವ ಕಾಳಜಿಯು ಬಿಗಿದ ಹಗ್ಗವಾಗಬಹುದು..
ನನ್ನ ಮಮತೆಯು ನಿನಗೆ ಕಟ್ಟಿಹಾಕಲೂ ಬಹುದು..

ಅನಿಸಬಹುದು ಈಗ ಮಗುವೆ
ವಯಸು ಹಾಗೆ ಅರಿಯದಾದೆ
ನೀನು ಮುಂದೆ ತಾಯಿಯಾಗು ಎಲ್ಲ ಅರಿಯುವೆ..
ನೀನು ಮುಂದೆ ತಾಯಿಯಾಗು ಎಲ್ಲ ಅರಿಯುವೆ..

- ಸಿಂಧು ಭಾರ್ಗವ್ 🍁