Thursday 16 May 2019

Article about Dr. Shivakumar swamiji and Tumkur mata

ಲೇಖನ : ಕಾರ್ಯಮುಗಿಸಿ ನಡೆದ ನಡೆದಾಡುವ ದೇವರು

      ದೇಹೀ ಎಂದು ಬಂದವರಿಗೆ ಅನ್ನ, ಅಕ್ಷರ, ಆಶ್ರಯ ಎಂಬ ಮೂರು ವಿಧದ  ದಾಸೋಹ ನಡೆಸಿ ದೀನರ  ಬಾಳಿಗೆ ಬೆಳಕಾದ ಶಿವಯೋಗಿಗಳು. ಭಕ್ತಮಾನಸದಲ್ಲಿ ನೆಲೆನಿಂತು ಅಂಧಕಾರವ ತೊಡೆದು ಹಾಕಿ ಸರ್ವಧರ್ಮ ಸಮಾನತೆಯ ಸಾರಿದ ಮಹಾತ್ಮರು. ಇವರು ಬಸವಣ್ಣನವರ ವಚನಗಳಿಗೆ ಬದ್ಧರಾಗಿ ಕಾರ್ಯನಿರ್ವಹಿಸಿದ ಧರ್ಮಯೋಗಿಗಳು. ತನ್ನ ಇಚ್ಚಾಶಕ್ತಿಯಿಂದ ಬದುಕಿ ಲಕ್ಷಾಂತರ ಮಕ್ಕಳ ಜೀವನಕ್ಕೆ ದಾರಿದೀಪವಾದ ಕರ್ಮಯೋಗಿಗಳು. ಕೊನೆಯುಸಿರಿರುವ ತನಕ ಶಿವ ಮೆಚ್ಚಿದ ಜೀವನ ನಡೆಸಿದ ಕಲ್ಪತರು ಶಿವಪ್ರಿಯ ಶ್ರೀ. ಶಿವಕುಮಾರ ಸ್ವಾಮೀಜಿಗಳು ೨೧-೦೧-೨೦೧೯ ಸೋಮವಾರದಂದು ಬೆಳಿಗ್ಗೆ ೧೧.೪೪ರ ಸಮಯಕ್ಕೆ  ಲಿಂಗೈಕ್ಯರಾದರು. ಅವರು ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಯಕೃತ್ತು , ಶ್ವಾಸಕೋಶ ಸಂಬಂಧಿ ಸಮಸ್ಯೆಗಳಿಂದ ಅವರ ದೇಹಸ್ಥಿತಿ ಕ್ಷೀಣಿಸುತ್ತಾ  ಕೊನೆಗೂ ವೈದ್ಯರಿಗೆ ಏನೂ ಮಾಡಲಾಗದೇ ಅಸಹಾಯಕರಾಗಿ ನಡೆದಾಡುವ ದೇವರನ್ನು ಆ ಪರಶಿವನೇ ಕೈಹಿಡಿದು ಕೈಲಾಸಕ್ಕೆ ಕರೆದುಕೊಂಡು ಹೋದರು.

      ಸಿದ್ಧಗಂಗಾ ಶೀಗಳು ನೂರ ಹನ್ನೊಂದು ವರುಷ ಬದುಕಿದವರು ಎಂಬ ಎಣಿಕೆಗಿಂತ ಬದುಕಿರುವ ಕೊನೆಯವರೆಗೂ ಶಿವನ ಒಲುಮೆಗೆ ಪಾತ್ರರಾಗಿ ಮಠದಲ್ಲಿ ವಾತ್ಸಲ್ಯಮಯೀಯಾಗಿ, ಗುರುಗಳಾಗಿ, ದಾರಿದೀಪವಾಗಿ ದೀನರಿಗಾಗಿಯೇ ಸೇವೆಮಾಡುತ್ತಿದ್ದರು. ಲಿಂಗಾಯತ ಧರ್ಮದ ಸಾಕಾರ ಮೂರ್ತಿ, ಕಲ್ಲುಂಬಂಡೆಯಂತಿದ್ದ ಕ್ಷೇತ್ರದಲ್ಲಿ ನಂದನವನವನ್ನು ಸೃಷ್ಟಿ ಮಾಡಿದ ಪೂಜ್ಯರಿವರು.
****

     ಕ್ಷೇತ್ರದ ಇತಿಹಾಸ:- ಸುಮಾರು ಆರುನೂರು ವರ್ಷಗಳ ಇತಿಹಾಸವಿರುವ ಸಿದ್ಧಗಂಗಾ ಕ್ಷೇತ್ರದ ಸಂಸ್ಥಾಪಕರು ಚಾಮರಾಜನಗರದ ಹರದನಹಳ್ಳಿಯಲ್ಲಿ ಸ್ಥಾಪಿಸಲ್ಪಟ್ಟ ಶೂನ್ಯಸಿಂಹಾಸನದ ಪ್ರಭುಗಳಾದ ಶ್ರೀಗೋಸಲ ಸಿದ್ಧೇಶ್ವರರು. ಅವರು ಮಹಾನ್ ತಪಸ್ವಿಗಳು. ಒಮ್ಮೆ ಅವರ ಜೊತೆಗೆ ಅನೇಕ ಸಮಕಾಲೀನ ಯತಿಗಳು ಬೆಟ್ಟದ ತುದಿಯಲ್ಲಿ ತಪಸ್ಸು ಮಾಡುತ್ತಿರುವಾಗ ಹಿರಿಯ ಯತಿಗಳಿಗೆ ಬಾಯಾರಿಕೆಯಾಯಿತಂತೆ. ಆಗ ಎಲ್ಲಿ ಹುಡುಕಿದರೂ ನೀರು ಸಿಗದಿದ್ದ ಕಾರಣ, ಶ್ರೀ ಗೋಸಲ ಸಿದ್ಧೇಶ್ವರರು ತಮ್ಮ ಪವಿತ್ರವಾದ ಹಸ್ತದಿಂದ ಬಂಡೆಯನ್ನು ಬಡಿದಾಗ ಅಲ್ಲಿ ಗಂಗೆ ಉದಯಿಸಿದಳಂತೆ. ಅವರ ತಪಸ್ಸಿನ ಸಿದ್ಧಿಯಿಂದ ಉದಯಿಸಿದ ಜೀವಜಲದಿಂದ ಆ ಕ್ಷೇತ್ರಕ್ಕೆ ಸಿದ್ಧಗಂಗಾ ಕ್ಷೇತ್ರ ಎಂಬ ಹೆಸರು ಬಂದಿತು.

ಶ್ರೀಗಳ ಕಿರುಪರಿಚಯ:- ೦೧-೦೪-೧೯೦೮ ರಲ್ಲಿ ಬೆಂಗಳೂರು ಜಿಲ್ಲೆಯ ಮಾಗಡಿ ತಾಲೂಕಿನ ವೀರಾಪುರ ಗ್ರಾಮದಲ್ಲಿ ಗಂಗಮ್ಮ ಮತ್ತು ಹೊನ್ನಪ್ಪ ದಂಪತಿಯ ೧೩ನೇ ಪುತ್ರನಾಗಿ ಹಾಗೂ ಕೊನೆಯ ಪುತ್ರನಾಗಿ ಜನಿಸಿದರು. ಜನಿಸಿದ ಹದಿಮೂರು ಮಕ್ಕಳು ಆಯುರ್-ಆರೋಗ್ಯವಂತರಾಗಿದ್ದುದು ಪರಶಿವನ ಕೃಪೆಯೇ ಸರಿ. ಆಗ ಅವರಿಗೆ ಪ್ರೀತಿಯಿಂದ ಶಿವಣ್ಣ ಎಂದು ಜನ್ಮನಾಮವಿಟ್ಟಿದ್ದರು. ೧೯೧೩ ರಿಂದ ಪ್ರಾಥಮಿಕ ಶಾಲಾ ವಿದ್ಯಾಭ್ಯಾಸ ಶುರುಮಾಡಿದರು. ಆಗಿನ ಕಾಲದಲ್ಲಿಯೇ ಅಂದರೆ ಸರಿಸುಮಾರು ೧೯೨೬ ರ ಇಸವಿಯಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ತದನಂತರ ೧೯೨೭-೩೦ ರ ವರೆಗೆ ಬೆಂಗಳೂರು, ತೋಟದಪ್ಪ ವಿದ್ಯಾರ್ಥಿ ನಿಲಯದಲ್ಲಿ ಆಶ್ರಯ ಪಡೆದು ತಮ್ಮ ಬಿ.ಎ ತರಗತಿಯನ್ನು ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಮುಗಿಸಿದರು.  ಅದಾದ ನಂತರವೇ ಅವರನ್ನು ೦೩-೦೩-೧೯೩೦ ರಲ್ಲಿ "ಸಿದ್ಧಗಂಗಾ ಕ್ಷೇತ್ರದ ಉತ್ತರಾಧಿಕಾರಿಯಾಗಿ ಆಯ್ಕೆಮಾಡಲಾಯಿತು. ನಂತರ ೧೧-೦೧-೧೯೪೧ ರಲ್ಲಿ ಶ್ರೀ ಉದ್ದಾನಸ್ವಾಮಿಗಳು ಲಿಂಗೈಕ್ಯರಾದ ಸಂದರ್ಭದಲ್ಲಿ ಶ್ರೀಸಿದ್ಧಗಂಗಾ ಮಠದ "ಅಧ್ಯಕ್ಷರಾಗಿ" ಇವರು ಅಧಿಕಾರ ಸ್ವೀಕರಿಸಿದರು. ಅಲ್ಲಿಂದ ಇಲ್ಲಿಯ ತನಕವೂ ತಮ್ಮ ದೂರದೃಷ್ಟಿ, ಇಚ್ಛಾಶಕ್ತಿಯಿಂದ, ಬಸವಣ್ಣನವರ ತತ್ವ ಸಿದ್ಧಾಂತಗಳ ಅನುಸರಣೆಯಿಂದ, ಧರ್ಮಮಾರ್ಗದಲ್ಲಿ ,ಸಂಪ್ರದಾಯಗಳ ಆಚರಣೆಯಿಂದ ಅವರ ಸೇವೆ ಆಧ್ಯಾತ್ಮಿಕವಾಗಿ, ಶೈಕ್ಷಣಿಕವಾಗಿ, ಸತ್ಕರ್ಮವಾಗಿ, ಸತ್ಸಂಗಪರವಾಗಿ ತುಮಕೂರಿನ ಶ್ರೀ ಸಿದ್ಧಗಂಗಾ ಮಠಕ್ಕೆ ನಡೆಯುತ್ತಲೇ ಬಂದಿದೆ. ಅವರಾಡುವ ಮಾತು, ಪಾಂಡಿತ್ಯ, ಅಧ್ಯಯನಶೀಲತೆ ಹಾಗೂ ಪ್ರಾಮಾಣಿಕ ಸೇವೆಯಿಂದಲೇ ಅವರು ನಡೆದಾಡುವ ದೇವರೆನಿಸಿಕೊಂಡರು.

ಮುಂಜಾನೆ ಮೂರಕ್ಕೆಲ್ಲ ಎದ್ದು ಸ್ನಾನ ಮಾಡಿ ಏಕಾಂತ ಪೂಜೆಗೆ ಕೂರುತ್ತಿದ್ದರು‌. ನಂತರ ೫.೩೦ರಿಂದ ೬ರ ತನಕ ಸಾಮೂಹಿಕ(ಶಿಷ್ಯರ ಜೊತೆಗೆ) ಲಿಂಗ ಪೂಜೆ ಮಾಡುತ್ತಿದ್ದರು. ಆದಾದ ನಂತರ ಬೆಳಿಗ್ಗಿನ ಪ್ರಸಾದ ಸ್ವೀಕಾರ, ಅದೂ ಕೂಡ ಒಂದೂವರೆ ಇಡ್ಲಿ, ಬೇಳೆಕಟ್ಟು ಸಾರು, ಒಂದು ಲೋಟವಾಗುವಷ್ಟು ಕಹಿಬೇವಿನ ತೊಗಟೆಯ ಕಷಾಯ, ಹಾಲು- ಹಣ್ಣುಗಳ ಸೇವನೆ ಮಾಡುತ್ತಿದ್ದರು. ನಂತರ ಯಂತ್ರಧಾರಣೆ ಮಾಡುತ್ತಿದ್ದರು. ೬.೩೦ಕ್ಕೆಲ್ಲ ಕಛೇರಿಗೆ ಬಂದು ದಿನಪತ್ರಿಕೆಯ ಓದುತಲಿ, ಕಡತಗಳ ವಿಲೇವಾರಿ ಮಾಡಿ, ಭಕ್ತರಿಗೆ ದರುಶನ ನೀಡಿ ,ಸಮಸ್ಯೆಯ ಆಲಿಸುತ್ತಿದ್ದರು.  ಮಧ್ಯಾಹ್ನ ಮತ್ತೆ ಸ್ನಾನ, ಪೂಜೆ, ಸ್ವಲ್ಪ ಆಹಾರ ಸೇವನೆ,  ಕಛೇರಿ ಭೇಟಿ,  ತಮ್ಮ ಕಾರ್ಯದಲ್ಲಿ ಮಗ್ನರಾಗುತ್ತಿದ್ದರು. ನಂತರ ಸಂಜೆ ಹೊಲ, ಜಮೀನು, ಗೋಶಾಲೆಗಳಿಗೆ ಭೇಟಿ ನೀಡಿ  ಆರುಗಂಟೆಗೆ ವಾಪಾಸ್ಸಾಗುತ್ತಿದ್ದರು.  ಆರಕ್ಕೆ ವಿದ್ಯಾರ್ಥಿಗಳ ಜೊತೆಗೆ  ಸಾಮೂಹಿಕ ಪ್ರಾರ್ಥನೆ ಯಲ್ಲಿ ಕುಳಿತು, ಆಶಿರ್ವಚನ ನೀಡಿ ೯ ಗಂಟೆಗೆ ಹಳೆ ಮಠಕ್ಕೆ ಆಗಮಿಸುತ್ತಿದ್ದರು. ರಾತ್ರಿ ಮತ್ತೊಮ್ಮೆ ಪೂಜೆ, ಪ್ರಸಾದ ಸ್ವೀಕಾರ ಮಾಡಿ ಸ್ವಲ್ಪ ಅಧ್ಯಯನ ನಡೆಸಿ ರಾತ್ರಿ ೧೧ ಗಂಟೆಗೆ ವಿಶ್ರಾಂತಿ ಪಡೆಯುತ್ತಿದ್ದರು. ಇದು ಕೇವಲ ಒಂದು ದಿನದ ದಿನಚರಿಯಲ್ಲ. ಅವರು ಅಧ್ಯಕ್ಷರಾಗಿ ಆಯ್ಕೆಯಾದ ಮೊದಲ ದಿನದಿಂದ ಕೊನೆಯುಸಿರು ಎಳೆಯುವ ತನಕವೂ ಸಾಗುತ್ತಲೇ ಬಂದಿತ್ತು. ವಿಪರೀತವಾಗಿ ಆರೋಗ್ಯ ಹದಗೆಟ್ಟ ಕಾರಣ ಹೊರಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಪೂಜೆ ಮಾಡುವುದು ನಿಲ್ಲಿಸಲಿಲ್ಲ. ನಿತ್ಯವೂ ತ್ರಿಕಾಲ ಪೂಜೆ, ಲಘು ಪ್ರಸಾದ ಸ್ವೀಕರಣೆ, ಯಂತ್ರಧಾರಣೆ, ಭಕ್ತರಿಗೆ ದರ್ಶನ,ಪಾದಪೂಜೇ, ಶಿವಪೂಜೆ, ಮಕ್ಕಳಬಗ್ಗೆ ಕೇಳುವುದು, ತೋಟ ಜಮೀನಿಗೆ ಭೇಟಿ ಕೊಡುವುದು.

ಶಿಕ್ಷಣದ ಮಹತ್ವ ಮೊದಲೇ ಅರಿತಿದ್ದ ಶ್ರೀಗಳು ಅಧಿಕಾರ ಸ್ವೀಕರಿಸಿ ಮೂರ್ನಾಲ್ಕು ವರುಷದಲ್ಲಿಯೇ ಸಿದ್ಧಗಂಗಾ ಪ್ರೌಢಶಾಲೆ ತುಮಕೂರು ನಗರದಲ್ಲಿ ಸ್ಥಾಪನೆ ಮಾಡಿದರು.ಹಾಗೆಯೇ ಸಂಸ್ಕೃತ ಭಾಷೆಯ ಅರಿವು ಪ್ರತಿಯೊಬ್ಬರಿಗೂ ಆಗಬೇಕು ಎನ್ನುವ ದೃಷ್ಟಿಯಿಂದ, ಜಾತಿ ಧರ್ಮದ ಬೇಧಭಾವವಿಲ್ಲದೇ ೧೯೫೬ ರಲ್ಲಿ ಸ್ವಕ್ಷೇತ್ರದಲ್ಲಿ ಸಂಸ್ಕೃತ ಕಾಲೇಜು ಕಟ್ಟಡದ ನಿರ್ಮಾಣ ಕಾರ್ಯ ನಡೆಸಲಾಯಿತು. ೧೯೬೦ ರಲ್ಲಿ ಜನರಿಗೆ ಆಶ್ರಯ ನೀಡುವ ನಿಟ್ಟಿನಲ್ಲಿ ಶ್ರೀಮಠದಲ್ಲಿ ಹಾಸ್ಟೆಲ್ ನಿರ್ಮಾಣವಾಯಿತು. ೧೯೬೩ ರಲ್ಲಿ ಉನ್ನತ ಮಟ್ಟದ ಶಿಕ್ಷಣಕ್ಕಾಗಿ ಇಂಜಿನಿಯರಿಂಗ್ ಕಾಲೇಜನ್ನು ಕೂಡ ಆರಂಭ ಮಾಡಲಾಯಿತು. ಅಷ್ಟೇ ಅಲ್ಲದೇ ನಂತರದ ವರುಷಗಳಲ್ಲಿ ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದ ಕಾಲೇಜುಗಳು, ನರ್ಸಿಂಗ್ ಕಾಲೇಜು, ಓದುವ ಮಕ್ಕಳಿಗೆ  ವಿದ್ಯಾರ್ಥಿ ನಿಲಯದ ಕಟ್ಟಡದ ಸ್ಥಾಪನೆ ಕೂಡ ಮಾಡಲಾಗಿದೆ. ಹಾಗೆಯೇ ಶ್ರೀಗಳಿಗೆ ಸುವರ್ಣ ಮಹೋತ್ಸವ, ವಜ್ರಹೋತ್ಸವ, ನೂರು ವರ್ಷಕ್ಕೆ ಕಾಲಿಟ್ಟ ಸಂಭ್ರಮ ದಲ್ಲಿ ರಾಜ್ಯ ಸರ್ಕಾರದಿಂದ "ಕರ್ನಾಟಕ ರತ್ನ" ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜೊತೆಗೆ ಕರ್ನಾಟಕ ವಿವಿ "ಗೌರವ ಡಾಕ್ಟರೇಟ್" ಪ್ರದಾನ, ರಾಜ್ಯ ಸರ್ಕಾರದಿಂದ "ರಾಷ್ಟ್ರೀಯ ಬಸವ ಪುರಸ್ಕಾರ" ಪ್ರದಾನ, ಭಾರತ ಸರ್ಕಾರದಿಂದ "ಪದ್ಮಭೂಷಣ" ಪ್ರಶಸ್ತಿ ಪ್ರದಾನ , ರಾಜ್ಯ ಸರ್ಕಾರದಿಂದ ಮಹಾವೀರ ವಿಶ್ವ ಶಾಂತಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗಿದೆ. ತಾನು ಮಾಡು ಕೆಲಸ ಪ್ರಶಸ್ತಿಗಾಗಿ ,ಮೆಚ್ಚುಗೆಗಾಗಿ ಅಲ್ಲ , ಬದಲಾಗಿ ಶಿವನ ಇಚ್ಛೆಯಂತೆ ಎಲ್ಲವೂ ನಡೆಯುತ್ತಲೇ ಇದೆ ಎಂದು  ಹೇಳುವ ಶ್ರೀಗಳು ತಮಗೆ ಬಂದ ಅನೇಕ ಪ್ರಶಸ್ತಿ ಸನ್ಮಾನಗಳನ್ನು ನಯವಾಗಿಯೇ ಪಕ್ಕಕ್ಕೆ ಸರಿಸಿದವರು‌. ಆದರೂ ಭಕ್ತರು ಕೇಳುವುದಿಲ್ಲ. ಅವರಿಗೆ ಸಮಾಧಾನವಾಗಲೆಂದು ಅನೇಕಾನೇಕ ಬಿರುಗಳನ್ನು ನೀಡಿ ಅದರಿಂದಲೇ ಕರೆದು ಹರುಷಗೊಳ್ಳುತ್ತಾ ಇದ್ದಾರೆ. ಅದರಲ್ಲಿ "ಶತಮಾನದ ಸಂತ, ನಡೆದಾಡುವ ದೇವರು, ಕಾಯಕ ಯೋಗಿ, ಅಭಿನವ ಬಸವಣ್ಣ, ತ್ರಿವಿಧ ದಾಸೋಹಿ, ವಿಶ್ವ ಚೇತನ ಪ್ರಮುಖವಾಗಿವೆ. ಎಲ್ಲಕ್ಕಿಂತ ಹೆಚ್ಚಾಗಿ ಭಕ್ತರು ಆತ್ಮೀಯವಾಗಿ, ಭಕ್ತಿ-ಗೌರವಾರ್ಥವಾಗಿ " ಬುದ್ಧಿ....ಬುದ್ಧಿ...." ಎಂದೇ ಕರೆಯುತ್ತಿದ್ದರು. ಶ್ರೀಗಳಿಗೂ ಅದು ಇಷ್ಟವಾಗುತ್ತಿತ್ತು.

ಶ್ರೀಮಠದಲ್ಲಿ ಊಟಕ್ಕೂ ಕೊರತೆಯಿದ್ದ ಕಾಲದಲ್ಲಿ ಪೀಠಕ್ಕೆ ಬಂದ ಶ್ರೀ ಗಳು ಇಂದು ಹತ್ತುಸಾವಿರ ಮಕ್ಕಳಿಗೆ ದಿನಂಪ್ರತಿ ಊಟ, ವಸತಿ, ಶಿಕ್ಷಣ ನೀಡುವಷ್ಟರ ಮಟ್ಟಿಗೆ ಮಠವನ್ನು ಮನ್ನಡೆಸಿಕೊಂಡು ಬಂದಿದ್ದಾರೆ. ನಾಳೆ ಹೀಗೆ ಮಾಡಬೇಕು ಎಂದು ಅವರ ಮನಸ್ಸಿನಲ್ಲಿ ಬಂದರೆ ಸಾಕು ಎಂತಹ ಅನಾರೋಗ್ಯವಿದ್ದರೂ ರಾತ್ರಿಯೇ ಆಪ್ತ ವೈದ್ಯರನ್ನು ಕರೆಸಿ ಔಷಧೋಪಚಾರ ಮಾಡಿಸಿಕೊಂಡು ಬೆಳಗಾಗುವುದರಲ್ಲಿ
ಸಿದ್ಧರಾಗುತ್ತಿದ್ದರಂತೆ. ಜಾತಿಬೇಧವಿಲ್ಲದ ಮಠದಲ್ಲಿ ಹಿಂದುಗಳಲ್ಲದೇ ಕ್ರಿಶ್ಚಿಯನ್, ಮುಸ್ಲಿಮ್ ಮಕ್ಕಳು ಆಶ್ರಯ ಪಡೆದಿರುವುದು ಹಾಗೆಯೇ ಸುಲಲಿತವಾಗಿ ಸಂಸ್ಕ್ರತ ಮಂತ್ರ ಸ್ತೋತ್ರ ಪಠಿಸುವುದು ನೋಡಿದರೆ  ಯಾರಿಗಾದರೂ ಅಚ್ಚರಿಯಾಗಲೇ ಬೇಕು. ಎಲ್ಲ ಧರ್ಮದ ಮಕ್ಕಳನ್ನು ತಮ್ಮ ಮಕ್ಕಳಂತೆ ನೋಡಿಕೊಂಡು ವಿದ್ಯೆಯ ಜೊತೆಗೆ ವಿನಯತೆ, ಶಿಸ್ತು, ಸಂಯಮ, ಕಲಿಸಿ ಪೋಷಣೆಮಾಡುತ್ತಿದ್ದಾರೆ. ಕೃಷಿ ಮತ್ತು ಶಿಕ್ಷಣದಿಂದಷ್ಟೇ ಸಮಾಜದ ಅಭಿವೃದ್ಧಿಯಾಗಲು ಸಾಧ್ಯ ಎಂದು ಸಾರಿ ಸಾರಿ ಹೇಳುತ್ತಿದ್ದರು. ಹಾಗಾಗಿ ಶ್ರೀಗಳು ಸಿದ್ಧಗಂಗಾ ಎಜುಕೇಶನ್ ಸೊಸೈಟಿ ಅಡಿಯಲ್ಲಿ ಈವರೆಗೆ ೧೨೫ ಶಾಲೆ-ಕಾಲೇಜುಗಳನ್ನು ಕಟ್ಟಿ ಬೆಳೆಸಿದ್ದಾರೆ. ಅದರಿಂದಲೇ ಅವರಿಗೆ ತ್ರಿವಿಧ ದಾಸೋಹಿ ಎಂಬ ಬಿರುದು ಬಂದಿರುವುದು. ಈ ಮಹಾಕ್ರಾಂತಿಯ ಹರಿಕಾರ ಶತಾಯುಷಿ ಶ್ರೀಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳು.

೧೯೬೪ರಲ್ಲಿ ಶ್ರೀಮಠದಲ್ಲಿ ಆರಂಭಿಸಿದ ಕೃಷಿ ಮತ್ತು ಕೈಗಾರಿಕೆ ವಸ್ತು ಪ್ರದರ್ಶನ ಈಗಲೂ ನಡೆಯುತ್ತಲೇ ಬಂದಿದೆ. ಅಲ್ಲಿ ಪ್ರಮುಖವಾಗಿ ರಾಸುಗಳ ಸಾಕಾಣಿಕೆಗೆ ಒತ್ತು ನೀಡಲೋಸುಗ ರಾಸುಗಳ ಸ್ಪರ್ಧೆ, ರಾಸುಗಳ ಪರಿಷೆ ಗೆದ್ದವರಿಗೆ ದೊಡ್ಡಮೊತ್ತದ ಬಹುಮಾನ ಪ್ರೋತ್ಸಾಹ ಧನ ನೀಡಿ ಗೌರವಿಸಲಾಗುತ್ತದೆ. ಇನ್ನೊಂದು ಗಮನಿಸಬೇಕಾದ ಸಂಗತಿ ಎಂದರೆ ಅವರ ಜೀವಿತದ ನೂರಹನ್ನೊಂದು ವರುಷದಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿಯಿಂದ ಹಿಡಿದು ಇಂದಿನ ಪ್ರಧಾನಿ ನರೇಂದ್ರ ಮೋದಿಯವರನ್ನೂ ನೋಡಿದ ಹೆಗ್ಗಳಿಗೆ ಅವರಿಗಿದೆ. ಅಲ್ಲದೇ ಪ್ರತಿಯೊಬ್ಬ ಪ್ರಧಾನಿಗಳು, ರಾಷ್ಟ್ರಪತಿಗಳು ,ಮುಖ್ಯಮಂತ್ರಿಗಳು , ಗಣ್ಯಾತಿಗಣ್ಯರು ಬಂದು ಶ್ರೀಗಳ ಆಶಿರ್ವಾದ ಪಡೆದು ಹೋಗುತ್ತಿದ್ದರು‌.
***

ಅವರಲ್ಲಿನ ಕೆಲವು ವಿಶೇಷತೆಗಳು:-
📌 ಶಿವಕುಮಾರ ಶ್ರೀಗಳು ಇಪ್ಪತೈದು ವರುಷ ತಮ್ಮ ಹುಟ್ಟೂರಿಗೆ ಹೋಗಲೇ ಇರಲಿಲ್ಲ. ಕಾರಣ ಅವರ ತಂದೆಗೆ ಮಗ ಸನ್ಯಾಸಿಯಾಗುವುದು ಇಷ್ಟವಿರಲಿಲ್ಲ. ಆದರೆ , ತನ್ನೊಂದು ಮನೆಯ ಸಂತೋಷಕ್ಕಿಂತ ಲಕ್ಷಾಂತರ ಮನೆಯ ಸಂತೋಷವೇ ನಮಗೆ ಮುಖ್ಯವೆಂದು ಭಾವಿಸಿದ ಗುರುಗಳು ಸನ್ಯಾಸ ಸ್ವೀಕಾರಮಾಡಿದ್ದರು‌.
📌 ಶ್ರೀಗಳು ಧರ್ಮಾಧಿಕಾರ ಸ್ವೀಕಾರ ಮಾಡುವಾಗ ಮಠದ ಆಸ್ತಿ ಕೇವಲ ಮುನ್ನೂರು ರೂಪಾಯಿ, ಹಾಗೂ ಹದಿನಾರು ಎಕರೆ ಜಾಗವಿತ್ತು. ಆದರೆ ಈಗ ತ್ರಿವಿಧ ದಾಸೋಹದ ಮೂಲಕ ಲಕ್ಷಾಂತರ ಮಕ್ಕಳ ಭವಿಷ್ಯ ಬರೆದು  ಜ್ಞಾನ ಪ್ರಸಾರದ ಮಹಾಕೇಂದ್ರವಾಗಿಸಿದವರು ಶಿವಕುಮಾರ ಸ್ವಾಮಿಗಳು.
📌 ಸಿದ್ಧಗಂಗಾ ಶ್ರೀಗಳು ಕೇವಲ ಮಠದಲ್ಲಿ ಕುಳಿತಿರದೇ ಜನರ ಯೋಗಕ್ಷೇಮ ವಿಚಾರಿಸುತ್ತಲೂ, ಹಳ್ಳಿ ಜನರು ತಂಟೆ ತಕರಾರು ಮಾಡಿಕೊಂಡು ಬಂದು ನ್ಯಾಯ ಒದಗಿಸಲು ಕೇಳಿಕೊಂಡಾಗ ನ್ಯಾಯವನ್ನೂ ನೀಡುತ್ತಿದ್ದರು. ಹಳ್ಳಿಜನರಲ್ಲಿನ ಮೌಢ್ಯತೆ ಕಳೆಯಲು ಅವರು ತುಂಬಾ ಶ್ರಮಿಸಿದ್ದರು. ಗ್ರಾಮಾಂತರ ಪ್ರದೇಶದ ಜನರ ಅನೇಕ ವ್ಯಾಜ್ಯಗಳು ಇಲ್ಲಿ ತೀರ್ಮಾನವಾಗುತ್ತಿದ್ದವು. ಅವರ ಗುರುಗಳಾದ ಉದ್ದಾನ ಶಿವಯೋಗಿಗಳ ವರ್ಚಸ್ಸು ನಿಷ್ಪಕ್ಷಪಾತವಾದ ಬುದ್ಧಿ, ನೇರ ನಿಷ್ಠುರತೆಯ ತೀರ್ಮಾನ ನೀಡಿ ಜಗಳ ಬಿಡಿಸಿ ಮನೆಗೆ ಕಳುಹಿಸಲು ಸುವಿಖ್ಯಾತರಾಗಿದ್ದರು. ಅಂತೆಯೇ ಸುತ್ತಮುತ್ತಲ ಜನರು ತಮ್ಮ ತಮ್ಮ ಸಮಸ್ಯೆ ವ್ಯಾಜ್ಯ ಪರಿಹಾರಕ್ಕೆ ಶ್ರೀಗಳ ಮೊರೆ ಹೋಗುತ್ತಿದ್ದರು. ಶ್ರೀಗಳು ಗೊತ್ತುಪಡಿಸಿದ ದಿನ ಎರಡೂ ಕಡೆಯವರು ಬಂದು ತಮ್ಮ ತಮ್ಮ ಅಹವಾಲುಗಳನ್ನು ಹೇಳಿದ ಮೇಲೆ ಸರಿಯಾಗಿ ಸತ್ಯಪರ ನಿಂತು ನ್ಯಾಯ ಒದಗುಸುವ ಕೆಲಸ ಶ್ರೀಗಳದ್ದಾಗಿತ್ತು. ಅದಕ್ಕೆ ಎರಡು ಮಾತನಾಡದೇ ಎರಡೂ ಕಡೆಯವರು ಒಪ್ಪುತ್ತಾ ಇದ್ದರು ಕೂಡ‌.
📌ಕುದುರೆ ಸವಾರಿ ಶ್ರೀಗಳು ಬಲ್ಲವರಾಗಿದ್ದರು. ಆಗಿನ ಕಾಲದಲ್ಲಿ ತಮ್ಮ ಕುದುರೆಯ ಮೇಲೆರಿ ಜನರ ಮನೆಮನೆಗೆ ತೆರಳಿ ಅಹವಾಲನ್ನು ಕೇಳುತ್ತಿದ್ದರು‌.
📌 ಅವರು ಉತ್ತಮ ಓದುಗಾರರೂ ಹೌದು. ದಿನಪತ್ರಿಕೆಯನ್ನು ಪ್ರತಿದಿನ ಓದಿ ವಿದೇಶದಲ್ಲಿ ನಡೆಯುವ ವಿದ್ಯಮಾನಗಳ ಬಗೆಗೂ ಮಾಹಿತಿ ಕಲೆಹಾಕುತ್ತಿದ್ದರು. ಇಳಿವಯಸ್ಸಿನಲ್ಲೂ ಕನ್ನಡಕ ಹಾಕಿಕೊಳ್ಳದೇ ದಿನಪತ್ರಿಕೆಯ ಓದುತ್ತಿದುದು ಅವರ ಉತ್ತಮ ಆರೋಗ್ಯಕ್ಕೆ ಹಿಡಿದ ಕನ್ನಡಿ. ಅದರ ಬಗ್ಗೆ ಎಲ್ಲರಿಗೂ ಅಚ್ಚರಿಯಾಗುತ್ತಿತ್ತು.
📌 ಅಸೌಖ್ಯಕ್ಕೆ ತುತ್ತಾಗುವ ಮೊದಲು ಶ್ರೀಗಳು ಪೂಜೆ, ಜಪತಪ, ಭಕ್ತರಿಗೆ ದರುಶನ, ಸೇರಿ ದಿನದ ೧೮ಗಂಟೆ ಚಟುವಟಿಕೆಯಿಂದ ಇರುತ್ತಿದ್ದರು.
📌 ಇವರು ಮತದಾನ ಮಾಡುವುದನ್ನು ಎಂದಿಗೂ ಮರೆಯುತ್ತಿರಲಿಲ್ಲ.
📌  ಸಿದ್ಧಗಂಗಾ ಶ್ರೀಗಳು ಉತ್ತಮ ಬರಹಗಾರರು ಹೌದು‌. ಇದಕ್ಕೆ ನಿದರ್ಶನವೆಂಬಂತೆ "ಸಿದ್ಧಗಂಗಾ" ಮಾಸಪತ್ರಿಕೆ, ಅವರ ಪ್ರವಚನಗಳನ್ನು ಒಳಗೊಂಡ "ಶ್ರೀವಾಣಿ" ಸಾಹಿತ್ಯ ಕೃತಿಯು, ಮೂರುಸಾವಿರ ಮಠದ ಬಗ್ಗೆ ಬರೆದ ಪುಸ್ತಕವನ್ನು ನಾವು ಕಾಣಬಹುದಾಗಿದೆ‌.
📌 ಲಕ್ಷಾಂತರ ಮಕ್ಕಳಿಗೆ ವಿದ್ಯಾದಾನ ಮಾಡಿದ ಇವರ ಶಿಷ್ಯರು ಈಗ ಉನ್ನತ ಹುದ್ದೆಗಳಲ್ಲಿ ಸೇವೆ ಮಾಡುತ್ತಾ ಶ್ರೀಗಳು ಹಾಕಿಕೊಟ್ಟ ಆದರ್ಶ ಮಾರ್ಗದಲ್ಲಿಯೇ ಜೀವನ ನಡೆಸುತ್ತಿರುವುದನ್ನು ನಾವು ಕಾಣಬಹುದಾಗಿದೆ.
📌 ನಮ್ಮಲ್ಲಿ ಒಂದೊಂದು ಜಾತಿಗೆ ಒಂದೊಂದು ಧರ್ಮಕ್ಕೆ ಗುರುಗಳನ್ನು ನಾವು ಕಾಣಬಹುದಾಗಿದೆ. ಆದರೆ ಇವರು ಜಾತಿ,ಧರ್ಮದ ಹಂಗು ತೊಡೆದುಹಾಕಿ, ಎಲ್ಲರನ್ನೂ ಒಟ್ಟುಗೂಡಿಸಿ, ಧರ್ಮಮಾರ್ಗವನ್ನೂ ನಮ್ಮ ಸಂಸ್ಕೃತಿಯನ್ನು ಬೆಳೆಸುವ ಕಾರ್ಯದಲ್ಲಿ ತೊಡಗಲು ಬಂದ ಅವತಾರಪುರುಷರು‌. ಹಾಗಾಗಿಯೇ ಇವರು ಧರ್ಮಯೋಗಿ, ಕರ್ಮಯೋಗಿ , ಅಭಿನವ ಬಸವಣ್ಣನೆಂದು ಸುವಿಖ್ಯಾತಿ ಪಡೆದವರು.
📌 ಶ್ರೀಗಳು ಉತ್ತಮ ವಾಗ್ಮಿಗಳು ಹೌದು. ಅವರ ಪ್ರವಚನ ಕೇಳಲು ಶಾಲೆಯ ಮಕ್ಕಳಲ್ಲದೇ ಸಾವಿರಾರು ಭಕ್ತಾದಿಗಳು ಸಂಜೆ ಸೇರುತ್ತಿದ್ದರು‌.
***


ಹಾಗಾಗಿ ಕೇವಲ ಮಠದಲ್ಲಿ ಕೂರದೇ ಜನಮಾನಸದಲ್ಲಿ ಬೇರೂರಲು ಸಾಧ್ಯವಾಯಿತು. ಕೇವಲ ಪರರಿಗಾಗಿಯೇ ಜನ್ಮ ಸವೆಸಿದ ,ಸೇವೆಮಾಡಿದ ಯೋಗಿಗಳು ಶ್ರೀ ಶಿವಕುಮಾರ ಸ್ವಾಮಿಗಳು. ಬದುಕಲು ಕೇವಲ ಹೊಟ್ಟೆಗೆ ಊಟವಿದ್ದರೆ ಸಾಲದು , ವಿದ್ಯೆಯೂ ಪ್ರತಿಯೊಬ್ಬ ಮನುಷ್ಯನಿಗೂ ಬೇಕು. ಜ್ಞಾನ ಸಂಪತ್ತು ಎಲ್ಲಕ್ಕಿಂತ ಶ್ರೇಷ್ಠವಾದುದು ಎಂಬ ಸತ್ಯ ಅರಿತಿರುವುದರಿಂದಲೇ, ಅವರ ನೇತೃತ್ವದಲ್ಲಿ ೧೨೫ ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಸ್ಥಾಪನೆಗೊಂಡವು. ಆದ್ದರಿಂದಲೇ ತುಮಕೂರಿನ ಸಿದ್ಧಗಂಗಾ ಮಠವನ್ನು ವಿಶ್ವವೇ ತಲೆ ಎತ್ತಿ ನೋಡುವಂತಾಯಿತು. ಇಂತಹ ಅವತಾರಪುರುಷನಿಗೆ "ಭಾರತ ರತ್ನ" ಪ್ರಶಸ್ತಿ ನೀಡಬೇಕೆಂದು ಸರ್ಕಾರಕ್ಕೆ ಸಾಕಷ್ಟು ಬೇಡಿಕೆ ಇಟ್ಟರೂ ಅವರು ಬದುಕಿರುವಾಗ ದೊರಕಲಿಲ್ಲ. ಇನ್ನಾದರೂ ಅದರ ಕಡೆಗೆ ಗಮನ ಹರಿಸಿದರೆ ಭಕ್ತಾದಿಗಳಿಗೆ ಮನಃತೋಷವಾಗುತ್ತದೆ.
***
ಕೊನೆಯದಾಗಿ:-
ಅವರು ಲಿಂಗೈಕ್ಯರಾದ ಕಹಿಸತ್ಯ ಜನಮಾನಸಕ್ಕೆ ಇನ್ನೂ ಅರಗಿಸಿಕೊಳ್ಳು ಸಾಧ್ಯವಾಗುತ್ತಲೇ ಇಲ್ಲ. ವಿಷಯ ಕಾಡ್ಗಿಚ್ಚಿನಂತೆ ಹರಿದಾಗ ಜನರು ತಮ್ಮ ಪ್ರೀತಿಯ ಬುದ್ಧಿಯನ್ನು ನೋಡಲು ಓಡೋಡಿ ಬರಲು ಪ್ರಾರಂಭಿಸಿದರು. ಬಿಕ್ಕುತಾ ಕಣ್ಣೀರು ಹಾಕಿ ಮಠದ ಕಡೆಗೆ ಓಡೋಡಿ ಬಂದರು. ಮಠದ ಆವರಣವು ೧೫ಲಕ್ಷ ಜನರಿಂದ ತುಂಬಿಹೋಗಿ ಜನಪ್ರವಾಹವಾಯಿತು. ಅವರ ಅಂತಿಮ ದರುಶನಕ್ಕಾಗಿ ವಿಶೇಷವಾಗಿ ರೈಲುಗಳು, ಬಸ್ಸುಗಳ ವ್ಯವಸ್ಥೆಯೂ ಮಾಡಲಾಯಿತು.ವಿವಿಧ ಕಡೆಯಿಂದ ಬರುವ ರೈಲುಗಳಿಗೂ ತುಮಕೂರಿನಲ್ಲಿ ನಿಲುಗಡೆಗೆ ಅವಕಾಶ ಕೊಡಲಾಯಿತು.  ಅವರು ಹಾಕಿಕೊಟ್ಟ ಆದರ್ಶ, ಅವರು ಮಾಡುತ್ತಿದ್ದ ಪ್ರವಚನಗಳು, ವಿದ್ಯಾಸಂಸ್ಥೆಗಳು, ಅಲ್ಲಿನ ಮಕ್ಕಳು ದೇಶವಿದೇಶದಲ್ಲಿ ಹೆಸರು ಕೀರ್ತಿ ತಂದು ಶ್ರೀಗಳನ್ನು ಅಮರರನ್ನಾಗಿಸುತ್ತಾರೆ ಎಂಬುದಕ್ಕೆ ಎರಡು ಮಾತಿಲ್ಲ. ಲಕ್ಷಾಂತರ ಜನರು ಜನಸಾಗರವಾಗಿ ಬಂದು ಶ್ರೀಗಳ ಪಾರ್ಥಿವ ಶರೀರವನ್ನು ಕೊನೆಯದಾಗಿ ಕಣ್ತುಂಬಿಕೊಳ್ಳಲು ಮುಗಿಬಿದ್ದಿದ್ದರು. ಅನೇಕಾನೇಕ ಗಣ್ಯರು ಆಗಮಿಸ ಅಂತಿಮ ನಮನ ಸಲ್ಲಿದ್ದರು. ಅದ್ಭುತವೆಂದರೆ, ತಮ್ಮ ಕೊನೆಯ ಉಸಿರಿರುವಾಗಲೂ , "ನಾನು ಯಾವಾಗಲಾದರೂ ತೆರಳಬಹುದು ಆದರೆ ಮಕ್ಕಳಿಗೆ ಮಧ್ಯಾಹ್ನದ ಅನ್ನದಾಸೋಹ ಆಗುವವರೆಗೂ ವಿಷಯ ಹೊರ ತಿಳಿಸಬೇಡಿ..." ಅಂದಿದ್ದರಂತೆ. ಅದಕ್ಕಿಂತ ಮೊದಲು ಚೆನೈನಲ್ಲಿ ವಿಶೇಷ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿದ್ದಾಗ "ನನಗೇನು ಆಗಲಿಲ್ಲ, ನನ್ನನ್ನು ವಾಪಾಸು ಹಳೆಯ ಮಠಕ್ಕೆ  ಕಳುಹಿಸಿ ಎಂದು ಮಕ್ಕಳಂತೆ ಹಠಹಿಡಿದಿದ್ದರಂತೆ..." ಡಿಸೆಂಬರ್ ನಿಂದ ಅವರಿಗೆ ಆರೋಗ್ಯ ಆಗಾಗ ಹದಗೆಡುತ್ತಲೆ ಇತ್ತು.  ಉತ್ತರಾಯಣ ಪುಣ್ಯಕಾಲದ ವೆರೆಗು ಕಾದು ಶಿವನಿಗೆ ಪ್ರಿಯವಾದ ಸೋಮವಾರದಂದು ಹುಣ್ಣಿಮೆಯ ದಿನ ಗ್ರಹಣದ ಮುಕ್ತಾಯವಾದ ಮೇಲೆ ತಮ್ಮ ಕೊನೆಯುಸಿರೆಳೆದರು ಇಚ್ಛಾಮರಣೀ ಶಿವಯೋಗಿ,  ಸಿದ್ಧಗಂಗಾ ಮಠದ ಪೀಠಾಧೀಶರಾದ ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳು. ಮಠದಲ್ಲಿಯೇ ನಿರ್ಮಿಸಲಾಗಿರುವ ಗದ್ದುಗೆಯೊಳಗೆ ಕುಳಿತ ಭಂಗಿಯಲ್ಲಿ ಶ್ರೀಗಳ ಕ್ರಿಯಾ ವಿಧಿವಿಧಾನಗಳು ಮಂಗಳವಾರ ಸಂಜೆ ೪.೩೦ ರ ಮೇಲೆ (೨೨-೦೧-೨೦೧೯) ಸಕಲ ಸರ್ಕಾರಿ ಗೌರವದೊಂದಿಗೆ ಶೈವ ಸಂಪ್ರದಾಯದಂತೆ ನಡೆಸಲಾಯಿತು. ಲಕ್ಷಾಂತರ ಜನರು , ಗಣ್ಯರು ಭಾವಪೂರ್ಣ ವಿದಾಯವನ್ನು ಹೇಳಿದರು. "ಓಂ ನಮಃ ಶಿವಾಯ" ಪಂಚಾಕ್ಷರಿ ಮಂತ್ರಘೋಷ ನೆರದಿದ್ದ ಭಕ್ತಾದಿಗಳಿಂದ ಮನದಿಂದ ಹೊಮ್ಮಿ ಆಗಸವ ತಲುಪಿತು. ಪವಿತ್ರಭೂಮಿ ತುಮಕೂರಿನ ಸಿದ್ಧಗಂಗಾ ಮಠವು ಇದೆಲ್ಲದಕ್ಕೂ ಮೂಕಸಾಕ್ಷಿಯಾಯಿತು.
***

ಇನ್ನು ಮುಂದೆ ಸಿದ್ಧಲಿಂಗ ಶ್ರೀಗಳ ಸಾರಥ್ಯ:-
ಶ್ರೀ ಶಿವಕುಮಾರ ಸ್ವಾಮೀಜಿಗಳು ತಮ್ಮ ಕಿರಿಯ ಶ್ರೀಗಳಾದ ಶ್ರೀ ಸಿದ್ಧಲಿಂಗಾ ಸ್ವಾಮೀಜಿಯವರಿಗೆ ೧೯೮೮ ರಲ್ಲಿ ಉತ್ತರಾಧಿಕಾರದ ಪಟ್ಟ ನೀಡಿದ್ದರು. ತದನಂತರ ತಮ್ಮ ಆರೋಗ್ಯ ಹದಗೆಡುತ್ತ ಬಂದ ಕಾರಣ ೨೦೧೧ ರಲ್ಲಿಯೇ ಶ್ರೀಗಳು ಸಂಪೂರ್ಣ ಅಧಿಕಾರವನ್ನು, ಅಧ್ಯಕ್ಷ ಸ್ಥಾನವನ್ನು ಹಸ್ತಾಂತರಿಸಿದ್ದರು.  ಅಲ್ಲದೇ ಶ್ರೀಗಳು ಜೊತೆಗೇ ನಿಂತು ಅವರ ಮಾಹಿತಿ-ಮಾರ್ಗದರ್ಶನದ ಮೇರೆಗೆ ಕಾರ್ಯಗಳೆಲ್ಲವೂ ಇಲ್ಲಿಯ ತನಕ ಸಾಗುತ್ತಾ ಬಂದಿದೆ. ಶಿವಕುಮಾರ ಸ್ವಾಮಿಗಳ ಅಂತಿಮ ಕ್ರಿಯಾ ವಿಧಿಯ ವೇಳೆ ಪೀಠಾಧಿಕಾರದ ಕುರುಹಾಗಿ ಪೇಟ ಹಸ್ತಾಂತರಿಸಲಾಯಿತು. ಇನ್ನು ಮುಂದೆಯೂ ಕೂಡ ಮಠದ ಸರ್ವತೋಮುಖ ಏಳಿಗೆಗೆ ಕಾಯಾ-ವಾಚಾ-ಮನಸಾ ಸೇವೆ ಮಾಡುವ ಪಣತೊಟ್ಟಿದ್ದಾರೆ‌. ಈಗಾಗಲೇ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

!! ಓಂ ನಮಃ ಶಿವಾಯ !!

ಲೇಖನ ಬರೆದವರು : ಸಿಂಧು ಭಾರ್ಗವ್.ಬೆಂಗಳೂರು

No comments:

Post a Comment