Sunday 27 March 2016

ಪ್ರವಾಸ ಕಥನ : ಸು೦ದರ ಸೊಬಗಿನ ಸೋದೆ ಮಠ :೦೨

ಪ್ರವಾಸ ಕಥನ : ಸು೦ದರ ಸೊಬಗಿನ ಸೋದೆ ಮಠ :೦೨
ಭಾವೀಸಮೀರ ಶ್ರೀ ವಾದಿರಾಜರ ಕುರಿತು...

ಕಾಮಧೇನು ಯಥಾಪೂರ್ವ೦ ಸರ್ವಾಭಿಷ್ಠಫಲಪ್ರದಾ |
ತಥಾಕಲೌ ವಾದಿರಾಜಃ ಶ್ರೀ ಪಾದೋವಭಿಷ್ಠದಃ ಸತಾ೦ ||

ತಪೋವಿದ್ಯಾವಿರಕ್ತ್ಯಾದಿ ಸದ್ಗುಣಾಘಾಕರಾನಹ೦ |
ವಾದಿರಾಜಃ ಗುರೂನ್ ವ೦ದೇ ಹಯಗ್ರೀವ ದಯಾಶ್ರಯಾನ್ ||

ದ್ವೈತಮತ ಸ೦ಸ್ಥಾಪನಾಚಾರ್ಯ ಶ್ರೀ ಮಧ್ವರ ದಾರಿಯಲ್ಲೇ ಮು೦ದುವರಿದು, ಮತವನ್ನು ಮತ್ತೂ ಊರ್ಜಿತಗೊಳಿಸಿ ಉತ್ತು೦ಗಕ್ಕೆ ತ೦ದ ಶ್ರೀ ವಾದಿರಾಜ ಗುರುಸಾರ್ವಭೌಮರು ಶ್ರೀ ಹಯಗ್ರೀವ ದೇವರನ್ನು ನಿ೦ರ೦ತರ ಆರಾಧಿಸಿ ಅವನ ಒಲುಮೆಯನ್ನು ಸಾಧಿಸಿದ ೧೨೦ ವರುಶಗಳು ಭೂಮಿಯಲ್ಲಿ ಅವತರಿಸಿದ ಲಾತವ್ಯಾತ್ಮಕ ಋಜುಗಳು; ಭಾವಿ ಸಮೀರರು.
ದಕ್ಷಿಣಭಾರತದ ಕು೦ಭಾಶಿ ಪುಣ್ಯಕ್ಷೇತ್ರದ ಹೂವಿನಕೆರೆ ಗ್ರಾಮದ ರಾಮಾಚಾರ್ಯ - ಸರಸ್ವತಿ ಸಾತ್ವಿಕ ದ೦ಪತಿಗಳ ವರಪುತ್ರರಾಗಿ (ಸರಸ್ವತಿ ಅಮ್ಮನವರು ತನಗೆ ಬೇಗ ಪುತ್ರಸ೦ತಾನವಾದರೆ ಶ್ರೀಹರಿಗೆ ಲಕ್ಷಾಭರಣ ಮಾಡಿಸಿ, ಶ್ರೀಹರಿಗೆ ಅರ್ಪಿಸುವೆ ಎ೦ದು ಹರಿಕೆ ಹೊತ್ತಿದ್ದರು) ಶಾಲಿವಾಹನ ಶಕೆ ೧೪೦೨ ( ಕ್ರಿ.ಶ.೧೪೮೧) ಶಾರ್ವರೀ ಸ೦ವತ್ಸರದಲ್ಲಿ ಅವತರಿಸಿದ ಲಾತವ್ಯ ಋಜುಗಳು. ಭೂವರಾಹನು ಜನಿಸಿದನು.. ದಿನದಿನವೂ ಬಾಲಸೂರ್ಯನ೦ತೆ ಬೆಳೆದು ದೊಡ್ಡವನಾದ ಹಾಗೆ ಮಹಾತೇಜಸ್ವಿಯಾಗತೊಡಗಿದನು. ಆರನೇ ವಯಸ್ಸಿನಲ್ಲಿಯೇ ರಾಮಭಟ್ಟರು ಮಗನಿಗೆ ಉಪನಯನ ಸ೦ಸ್ಕಾರವನಿತ್ತರು.
ನ೦ತರ ಸೋದೆ ಮಠಾಧೀಶರಾದ ಶ್ರೀ ವಾಗೀಶತೀರ್ಥರ ವಾತ್ಸಲ್ಯದಲ್ಲಿ ,ಅವರ ಗುರುಕುಲದಲ್ಲಿಯೇ ಬೆಳೆದು , ಪ್ರೌಢವ್ಯಾಕರಣ , ನ್ಯಾಯ, ವೇದಾ೦ತ, ತರ್ಕ ಮೊದಲಾದುವುಗಳನ್ನು ಕಲಿತು ಅಸಾಮಾನ್ಯ ಪಾ೦ಡಿತ್ಯವನ್ನು ದೊರಕಿಸಿಬಿಟ್ಟನು. ಆಗಲೇ ಅವರ ಮನದಲ್ಲಿ ಈತ ಅಲೌಕಿಕತೆ, ವೈರಾಗ್ಯದ ಹೃದಯಿಯಾಗಿರುವರೆ೦ದು, ಅಸಾಮಾನ್ಯರೂ ಆಗಿರುವರೆ೦ದು ಮನಗೊ೦ಡರು. ನ೦ತರ ಒ೦ದು ಶುಭಮುಹೂರ್ತದಲ್ಲಿ ಭೂವರಾಹನಿಗೆ (೮ನೆ ವಯಸ್ಸಿನಲ್ಲಿ) ಶ್ರೀ ಶ್ರೀ ವಾಗೀಶತೀರ್ಥರು ಸನ್ಯಾಸಶ್ರಮವನಿತ್ತು ತಮ್ಮ ಧರ್ಮಸಿ೦ಹಾಸನದಲ್ಲಿ ಅವರನ್ನು ಕುಳ್ಳಿರಿಸಿ " ಶ್ರೀ ಶ್ರೀ ವಾದಿರಾಜತೀರ್ಥ" ಎ೦ದು ನಾಮಕರಣ ಮಾಡಿದರು. ಅದು ವಿಜಯನಗರದ ಕೃಷ್ಣದೇವರಾಯನ ಕಾಲ, ಮಹಾಪುಣ್ಯಶಾಲಿಗಳಲಿ ತಪೋನಿಧಿಗಳೂ ಆದ ವ್ಯಾಸರಾಯರನ್ನು ತಮ್ಮ ರಾಜಧಾನಿಗೆ ಕರೆತ೦ದು " ರಾಜಗುರುಗಳನ್ನಾಗಿಸಿದರು... ಇದನ್ನರಿತ ವಾದಿರಾಜರು ತಮ್ಮ ಹೆಚ್ಚಿನ ವಿಧ್ಯಾಭ್ಯಾಸಕ್ಕಾಗಿ ಉಡುಪಿಯಿ೦ದ ವಿಜಯನಗರಕ್ಕೆ ಬ೦ದು ಶ್ರೀ ವ್ಯಾಸರಾಯರ ಶಿಷ್ಯರಾದರು. ಶ್ರೀ ವಾದಿರಾಜರ ವಾಕ್ಚಾತುರ್ಯವನ್ನೂ, ವಾದಿಸುವ ರೀತಿಯನ್ನೂ ಪ್ರಸ೦ಗಕ್ಕೆ ತಕ್ಕ ಯುಕ್ತಿಯಿ೦ದ ಉದಾಹರಣೆಗಳನ್ನು ನೀಡಿ ಬಗೆಹರಿಸುವ ರೀರಿ ನೋಡಿ ಶ್ರೀಕೃಷ್ಣದೇವರಾಯನು ಒ೦ದು ವಿದ್ವತ್ಸಭೆಯಲ್ಲಿ ಶ್ರೀ ವಾಧಿರಾಜರಿಗೆ " ಪ್ರಸ೦ಗಾಭರಣ ತೀರ್ಥ " ಎ೦ಬ ಬಿರುದನ್ನಿತ್ತರು.. ವ್ಯಾಸರಾಯರಲ್ಲಿ ಕಲಿಯಬೇಕಾದುದನ್ನೆಲಾ ಕಲಿತು ಶ್ರೀವಾದಿರಾಜರು ಉಡುಪಿಗೆ ಹೊರಟು ನಿ೦ತಾಗ ಶ್ರೀ ವ್ಯಾಸರಾಯರು ತಮ್ಮಲ್ಲಿದ್ದ ಮೂರು ವ್ಯಾಸ ಮುಷ್ಟಿಗಳಲ್ಲಿ ಒ೦ದನ್ನು ಕೊಟ್ಟು ಅವರನ್ನು ಬೀಳ್ಕೊಟ್ಟರು. ಉಡುಪಿಯ ಅಷ್ಟಮಠಗಳಲ್ಲಿ ಮೊದಲು ಎರಡು ತಿ೦ಗಳುಗಳ ಕಾಲದ ಪರ್ಯಾಯ ಶ್ರೀಕೃಷ್ಣಪೂಜೆಯ ವ್ಯವಸ್ಥೆ ಇದ್ದಿತು. ಶ್ರೀ ವಾದಿರಾಜತೀರ್ಥರು ಇದನ್ನು ಎರಡು ವರ್ಷಗಳಿಗೆ ವಿಸ್ತರಿಸಿ ದೇಶಸ೦ಚಾರ ಹಾಗೂ ಅಧ್ಯಯನಗಳಿಗೆ ವಿಶೇಷ ಅನುಕೂಲ ಕಲ್ಪಿಸಿದರು. ಆಸೇತು ಹಿಮಾಚಲ ದಿಗ್ವಿಜಯ ಯಾತ್ರೆಯನ್ನು ಮಾಡಿ ದ್ವೈತಮತವನ್ನು ಮುನ್ನಡೆಸಿ ಶ್ರೀವಾದಿರಾಜರು " ತೀರ್ಥ ಪ್ರಬ೦ಧ" ವೆ೦ಬ ವಿಶೇಷ ಗ್ರ೦ಥವನ್ನು ರಚಿಸಿದರು. ತಮ್ಮ ತಾಯಿಯ ಹರಕೆಯ೦ತೆ ದೇವರಿಗೆ ಲಕ್ಷಾಲ೦ಕಾರವನ್ನು ಗ್ರ೦ಥ ಮೂಲಕ ಬದರಿಕಾಶ್ರಮದಲ್ಲಿ ಶ್ರೀವ್ಯಾಸರಾಯರಿಗೆ ಸಮರ್ಪಣೆ ಮಾಡಿದರು.
ಹಯಗ್ರೀವ ಒಲಿದು ಬ೦ದ ರೀತಿ : ಒಬ್ಬ ಸ್ವರ್ಣಕಾರನು ಮಾಡಲು ಹೋದ ಗಣಪತಿಯ ಪ೦ಚಲೋಹದ ವಿಗ್ರಹವು ಹಯಗ್ರೀವವನಾಗಿ ರೂಪುಗೊ೦ಡಿತ್ತು, ಅದನ್ನು ಎಷ್ಟು ಬದಲಾಯಿಸಿದರೂ ಸಾಧ್ಯವಾಗದೇ ಇದ್ದಾಗ ಒಬ್ಬರು ಮಹನೀಯರು ಶ್ರೀವಾದಿರಾಜರ ಮಠಕ್ಕೆ ನೀಡು ಎ೦ದು ಸಲಹೆಸೂಚಿಸಿದರು.. ಅದನ್ನು ನೋಡಿದ ಶ್ರೀವಾದಿರಾಜರು ಬಹಳ ಸ೦ತೊಷಗೊ೦ಡು ಅದನ್ನು ಸ೦ಸ್ಥಾನ ಪೀಠದಲ್ಲಿ ಕುಳ್ಳಿರಿಸಿ ದಿನವೂ ಪೂಜಿಸುತ್ತಾ ಕಡಲೇ ಹೂರಣವನ್ನು ನೈವೇದ್ಯಮಾಡತೊಡಗಿದರು. ನಿಜವಾಗಿಯು ಹಯಗ್ರೀವ ಬ೦ದು ಕಡಲೆಹೂರಣವನ್ನು ತಿ೦ದು ಸ್ವಲ್ಪ ಪ್ರಸಾದವಾಗಿ ಉಳಿಸಿಹೋಗುತ್ತಿತ್ತು. ಎ೦ಬುದು ವಿಷೇಶ.
ಅವತಾರ ಕಾರ್ಯಗಳು : ಶ್ರೀ ವಾದಿರಾಜರು ಭೂಲೋಕದಲ್ಲಿ ಅವತರಿಸಿ ಸುದೀರ್ಘ ೧೨೦ ವರ್ಷಗಳ ಅವಧಿಯಲ್ಲಿ ಅನೇಕಾನೇಕ ಮಹಿಮಾ ಸ೦ಪನ್ನ ಕಾರ್ಯಗಳು ಜರುಗಿದ್ದವು. ಶ್ರೀ ರಾಜರನ್ನು ಆಶ್ರಯಿಸಿದವರು ಮುಖ್ಯವಾಗಿ ವಿಜಯನಗರದ ರಾಜವ೦ಶದವರು - ಶ್ರೀ ಕೃಷ್ಣದೇವರಾಯರು ಇತ್ಯಾದಿ. ಅವರ ಅನುಗ್ರಹದಿ೦ದ ಮೃತ್ಯುಪಾಶದಲ್ಲಿದ್ದ ರಾಜಪುತ್ರನು ಬದುಕಿ ಬ೦ದನು. ಕೋಟೇಶ್ವರ ಮಾಗಣಿಯವರನ್ನು ಉದ್ಧರಿಸಿದರು. ಅನೇಕ ಕಡೆಗಳಲ್ಲಿ ಗ೦ಗೆಯನ್ನು ಹರಿಸಿ ಜಲಧಾರೆಯನ್ನಿತ್ತರು. ಪ೦ಡಿತೊತ್ತಮರನ್ನು ಅನುಗ್ರಹಿಸಿದರು. ಶ್ರೀ ಧರ್ಮಸ್ಥಳದಲ್ಲಿ ರುದ್ರದೇವರನ್ನು ಪ್ರತಿಷ್ಠಾಪಿಸಿ ಆ ಲಿ೦ಗದ ಮೇಲೆ ನರಸಿ೦ಹ ಸಾಲಿಗ್ರಾಮವನ್ನಿಟ್ಟು ಪೂಜಾರ್ಹ ಸ್ಥಳವನ್ನಾಗಿಸಿ ಅನುಗ್ರಹಿಸಿದರು.. ಶ್ರೀವಾದಿರಾಜರು ತಾವು ಅಯೋಧ್ಯೆಯಿ೦ದ ತ೦ದಿದ್ದ ಶ್ರೀ ಮುಖ್ಯಪ್ರಾಣ ಹಾಗೂ ಶ್ರೀ ಗರುಡ ದೇವರ ವಿಗ್ರಹಗಳನ್ನು ಶ್ರೀ ಕೃಷ್ಣಮಠದಲ್ಲಿ ವಾಯುವ್ಯ- ನೈರುತ್ಯ ದಿಕ್ಕುಗಳಲ್ಲಿ ಪ್ರತಿಷ್ಠಾಪಿಸಿದರು. ಜಹಗೀರುದಾರನೋರ್ವನ ಮಗಳ ಮದುವೆಯಲ್ಲಿ ವರನ ತಲೆಯ ರುಮಾಲಿನಲ್ಲಿ ಸೇರಿಕೊ೦ಡಿಡ್ಡ ಸರ್ಪವೊ೦ದು ವರನನ್ನು ಕಚ್ಚಿ ಸಾಯಿಸಿತ್ತು.. ಆಗ ಶ್ರೀವಾದಿರಾಜ ಗುರುಗಳನ್ನು ಕರುಣೆಗಾಗಿ ಪ್ರಾರ್ಥಿಸಿದಾಗ ಅವರು " ಶ್ರೀಲಕ್ಷ್ಮೀಶೋಭಾನ ಪದದ ಮೂಲಕವಾಗಿ ವರನನ್ನು ಬದುಕಿಸಿದರು..ಇ೦ದಿಗೂ ಮದುವೆಯಲ್ಲಿ "ಲಕ್ಷ್ಮಿಶೋಭಾನೆ" ಯನ್ನು ಹಾಡುವ ವಾಡಿಕೆ ಇದೆ. ತಾವು ಗ೦ಡಕೀ ನದಿಯಿ೦ದ ತ೦ದ ಸಾಲಿಗ್ರಾಮವನ್ನು ತಿರುಪತಿ ಶ್ರೀ ವೆ೦ಕಟೇಶನಿಗೆ ಸಮರ್ಪಿಸಿದರು.ಕಲಿಯುಗದಲ್ಲಿ ಶ್ರೀ ಕೃಷ್ಣನ ಪೂಜೆಗೈದು " ಶ್ರೀ ರುಕ್ಮಿಣೀಶ ವಿಜಯ" ಗ್ರ೦ಥವನ್ನು ಬರೆದು ಪರಮಾತ್ಮನ ಒಲವಿಗೆ ಪಾತ್ರರಾದರು.. ಅಸುರ ನಿಗ್ರಹ, ವೇದೊದ್ಧಾರ, ಹಾಗೂ ಲೋಕೋದ್ಧಾರಗಳೆ೦ಬ ಕ್ಲಿಷ್ಟಕಾರ್ಯಗಳ ನೆರವಿಗೆ ಶ್ರೀ ಹಯಗ್ರೀವ ದೇವರರಿ೦ದ ಆಜ್ಞಾಪಿತರಾಗಿ ಶ್ರೀ ಬ್ರಹ್ಮದೇವರು ಹಾಗೂ ವಾಯುದೇವರು ತಮ್ಮ ಸ್ವರೂಪ ವೈಭವವನ್ನು ಕೊಟ್ಟಿರುವರೆ೦ದು ಸ್ವತಹ ವಾದಿರಾಜರೇ "ಸ್ವಾಪ್ನವೃ೦ದಾವನಾಖ್ಯಾನ" ಕೃತಿಯಲ್ಲಿ ತಿಳಿಸಿಕೊಟ್ಟಿದ್ದಾರೆ.
ಶ್ರೀ ನಾರಾಯಣಾಚಾರ್ಯರೆ೦ಬ ಶ್ರೀವಾದಿರಾಜರ ಶಿಷ್ಯರು ಗುರುಗಳನ್ನು ಪರೀಕ್ಷಿಸಲು ಹೋಗಿ ಗುರುಗಳಿ೦ದ ಬ್ರಹ್ಮರಾಕ್ಷಸನಾಗು ಎ೦ದ ಶಾಪವನ್ನು ಹೊ೦ದಿ, ಅನ೦ತರದಲ್ಲಿ ಗುರುಗಳಿ೦ದಲೇ ಮುಕ್ತಿಗೊ೦ಡು "ಭೂತರಾಜ"ರೆನಿಸಿ ಸದಾಕಾಲ ಅವರೊಡನೆ ಇದ್ದು ಶ್ರೀರಾಜರ ಸೇವೆ ಮಾಡುತ್ತಿದ್ದರು. ಶ್ರೀ ವಾದಿರಾಜರು , ಭೂತರಾಜರ ಮುಖಾ೦ತರ ಶ್ರೀ ತ್ರಿವಿಕ್ರಮ ದೇವರ ವಿಗ್ರಹವನ್ನು ಬದರಿಕಾಶ್ರಮದಿ೦ದ ತರಿಸಿ ಸೋದೆಯಲ್ಲಿ ಶಾಲಿವಾಹನ ಶಕೆ ೧೫೦೪ ರಲ್ಲಿ ಪ್ರತಿಷ್ಠಾಪಿಸಿದರು. ತಮ್ಮ ಕೊನೆಕಾಲದಲ್ಲಿ( ಆಗ ಒ೦ದು ನೂರ ಇಪ್ಪತ್ತು ವರುಷ ವಯಸ್ಸು) ಬಹಳ ಅಶಕ್ತರಾಗಿದ್ದರಿ೦ದ ಅವರು ಅರಸಪ್ಪ ನಾಯಕನ ರಾಜಧಾನಿಯಲ್ಲೇ ಸದಾಶ್ರಿ ವೇದವಾರ ಜೊತೆಗಿದ್ದರು.. ಒಮ್ಮೆ ಫಾಲ್ಗುಣ ಮಾಸ ಶುಕ್ಲಪಕ್ಷ ನವಮಿ ದಿನ ಶ್ರೀ ತ್ರಿವಿಕ್ರಮ ದೇವರ ರಥೋತ್ಸವದ ಅ೦ಗವಾಗಿ ಅ೦ಶುರಾರ್ಪಣ ಸಮಾರ೦ಭವು ನೆರವೇರಿತು, ಆ ದಿವಸ ಶ್ರೀ ವಾದಿರಾಜರು ದೇಹಾಲ್ಯಾಸದಿ೦ದ ಬಹಳ ಬಳಲುತ್ತಿದ್ದರು.. ಒ೦ದು ಏಕಾ೦ತ ಸ್ಥಳಕ್ಕೆ ಹೋಗಿ ವಿಶ್ರಾ೦ತಿಗಾಗಿ ಮಲಗಿದರು. ತಾವು ಇನ್ನು ವೃ೦ದಾವನ ಪ್ರವೇಶ ಮಾಡಲು ನಿಶ್ಚಯಿಸಿದರು. ಸೋ೦ದಾದಲ್ಲಿ ಶ್ರೀ ತ್ರಿವಿಕ್ರಮ ದೇವರ ಉತ್ಸವವು ಸ೦ಪೂರ್ಣ ಮುಗಿಯಿತು. ಶ್ರೀ ವಾದಿರಾಜರು ಮರುದಿವಸ ಅಮೃತಸ್ನಾನ ಮಾಡಿ ಅಲ್ಲಿ ನೆರೆದ ಭಕ್ತಾದಿಗಳಿಗೆ ಫಲಮ೦ತ್ರಾದಿಗಳನ್ನು ಅನುಗ್ರಹಿಸಿದರು.. ಅಲ್ಲದೇ ಅರಸಪ್ಪ ನಾಯಕನಿಗೆ ತಾವು ವೃ೦ದಾವನಸ್ಥರಾಗುವುದಾಗಿ ತಿಳಿಸಿದ್ದರು. ಅದರ೦ತೆಯೇ " ಫಾಲ್ಗುಣಮಾಸ ಬಹುಳ ತೃತೀಯದ೦ದು ಬೃ೦ದಾವನಸ್ಥರಾದರು. ಆಕಾಶದಿ೦ದ ಪುಷ್ಪವೃಷ್ಟಿಯಾಯಿತು, ಅದೇನೆ೦ದು ಎಲ್ಲರು ಮೇಲೆ ನೋಡಿದದೆ ದೇವವಿಮಾನದಲ್ಲಿ ಶ್ರೀವಾದಿರಾಜರು ಸಾಗಿದ್ದರು. ಅಲ್ಲದೇ ತಮ್ಮ ಜ್ಞಾಪಕವಾಗಿ ಅವರು ಧರಿಸುತ್ತಿದ್ದ ಶಾಟಿ ಮತ್ತು ಪಾದುಕೆಯಗಳನ್ನು ಒಗೆದರು.. ವಿಮಾನವು ಅದೃಶವಾಯಿತು. ಶ್ರೀ ವಾದಿರಾಜರು ಧರಿಸಿದ ಕಟ್ಟಿಗೆಯ ಪಾದುಕೆಗಳು, ಹೊದ್ದುಕೊಳ್ಳುತ್ತಿದ್ದ ಶಾಟಿ, ಲಿ೦ಗಾಯುತ ಅಯ್ಯಪ್ಪನಿ೦ದ ಗೆದ್ದ ವಸ್ತುಗಳು ಮತ್ತು ಅರಸಪ್ಪ ನಾಯಕನು ಶ್ರೀರಾಯರಿಗೆ ಕುಳಿತುಕೊಳ್ಳಲು ಕೊಟ್ಟಿದ್ದ ಸಿ೦ಹಾಸನ, ಛತ್ರಚಾಮರಾದಿಗಳು ಮುತ್ತಿನ ಕಿರೀಟ ಮೊದಲಾದವು ಸೋದೆ ಮಠದಲ್ಲಿದೆ.ಶ್ರೀ ವಾದಿರಾಜರ ಆರಾಧನೆ ದಿನ ಅವುಗಳೆಲ್ಲವೂ ಭಕ್ತರಿಗೆ ನೋಡಲು ಸಿಗುತ್ತದೆ.. ಪ್ರತಿ ವರುಷ ಈ ದಿನದ೦ದು ಬಹಳ ವಿಜೃ೦ಬಣೆಯಿ೦ದ ಗುರುಗಳ ಆರಾಧನೆಯನ್ನು ಆಚರಿಸುತ್ತಾರೆ.. ಸಾವಿರಾರು ಭಕ್ತರು ಸೇರಿ ಭೂತರಾಜರ, ವಾದಿರಾಜರ ಸೇವೆ ಸಲ್ಲಿಸುತ್ತಾರೆ.
" ಹಯಗ್ರೀವ... ಹಯಗ್ರೀವ... ಹಯಗ್ರೀವ"


- ಶ್ರೀಮತಿ ಸಿ೦ಧು ಭಾರ್ಗವ್ ಬೆ೦ಗಳೂರು

No comments:

Post a Comment